ಬೆಳಿಗ್ಗೆ ಮನೆಯಲ್ಲಿ ನಡೆದ ಘಟನೆ ಮತ್ತು ತನ್ನ ವರ್ತನೆಯನ್ನು ನೆನೆಸಿಕೊಂಡು ಸುಧೀರ್‍ಗೆ ತಲೆ ಕೆಟ್ಟು ಹೋಗಿತ್ತು. ಅಪ್ಪ ಮಹಾ ಕೇಳಿದ್ದೇನು ‘ತಮ್ಮ ಕನ್ನಡಕ ಒಡೆದಿದೆಯೆಂದು, ಬೇರೆ ತಂದುಕೊಡೆಂದು.’ಅದೂ ಕೂಡ ಅವರು ಒಡೆದದ್ದಲ್ಲ. ಆಕಸ್ಮಿಕವಾಗಿ ತಾನೇ ಒಡೆದಿದ್ದೆಂದು ತನ್ನವಳೆ ಬಂದು ಹೇಳಿದ್ದಳು.ಆದರೆ ತಾನು ಯಾವುದೊ ಚಿಂತೆಯಲ್ಲಿ ಇದ್ದುದ್ದರಿಂದ, “ಏನಪ್ಪಾ ಬೆಳಿಗ್ಗೆ ಬೆಳಿಗ್ಗೆ ತಲೆ ತಿಂತೀರಾ?” ಎಂದುಬಿಟ್ಟಿದ್ದ.ಅಪ್ಪ ಮುಖ ಚಿಕ್ಕದು ಮಾಡಿಕೊಂಡು ಮೌನವಾಗಿಬಿಟ್ಟಿದ್ದರು. ಆದರೆ ಅವರ ಕಣ್ಣಂಚಿನಲ್ಲಿದ್ದ ನೀರು ಕಂಡಾಗ ಸುಧೀರ್‍ಗೆ ಶಾಕ್ ಆಗಿಬಿಟ್ಟಿತ್ತು. ಏನು ಮಾಡುವುದೆಂದೇ ತೋಚದೆ ಹಾಗೆಯೇ ಬಂದುಬಿಟ್ಟಿದ್ದ. ಅಷ್ಟೆ ಅಲ್ಲದೆ ಮಗ ಅದನ್ನು ನೋಡಿದ್ದು, ಅವನಿಗೂ ಬೇಸರವಾಗಿತ್ತು. ಅವನು ತನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾನೋ ಎಂಬ ಚಿಂತೆಯಾಗಿತ್ತು.ಆಫೀಸಿಗೆ ಬಂದು ಕುಳಿತವನಿಗೆ ತಲೆಯೇ ಓಡದಂತಾಗಿತ್ತು. ಛೇಂಬರ್ ಒಳಗೆ ಬಂದ ಸ್ಟೆನೊ ಕವಿತಾ “ಸರ್, ಪ್ಲೀಸ್ ಮಧ್ಯಾಹ್ನ ರಜೆ ಕೊಡ್ತೀರಾ?” ಎಂದಳು. ಅವಳನ್ನು ಕಂಡರೆ ಮಗಳಷ್ಟೇ ವಾತ್ಸಲ್ಯ. “ಏಕಮ್ಮ” ಕೇಳಿದ ಸುಧೀರ್.“ಅಪ್ಪನಿಗೆ ಐಸ್‍ಕ್ರೀಮ್ ಕೊಡಿಸಬೇಕು ಸರ್” ಎಂದಳು.ಅವಳಿಗೂ ಸುಧೀರ್ ಜೊತೆ ಸ್ವಲ್ಪ ಸಲಿಗೆಯೇ!ಆಶ್ಚರ್ಯವಾಯಿತು ಸುಧೀರ್‍ಗೆ. “ಏನಮ್ಮ ಇದು, ಅಪ್ಪನಿಗೆ ಐಸ್‍ಕ್ರೀಮ್ ಕೊಡಿಸಲು ರಜೆ ಕೇಳ್ತಿದ್ದೀಯಾ?”“ಏನಿಲ್ಲಾ ಸರ್, ಬೆಳಿಗ್ಗೆ ಅಪ್ಪನ ಮೇಲೆ ರೇಗಿಬಿಟ್ಟೆ.”‘ಅರೆ ತನ್ನದೆ ಪರಿಸ್ಥಿತಿ’ ಎಂದುಕೊಂಡು “ಯಾಕಮ್ಮ” ಕೇಳಿದ.“ನಾನು ಆಫೀಸಿಗೆ ಬರುವ ಅರ್ಜೆಂಟಿನಲ್ಲಿದ್ದೆ. ಅಪ್ಪ ‘ಸಂಜೆ ಬೇಗ ಬರ್ತೀಯೇನಮ್ಮ, ಐಸ್‍ಕ್ರೀಮ್ ತಿನ್ನಲು ಹೋಗೋಣ’ಎಂದರು. ಕೋಪ ಬಂದು ರೇಗಿಬಿಟ್ಟೆ. ಅಪ್ಪ ಏನೂ ಮಾತನಾಡಲಿಲ್ಲ. ಮಂಕಾಗಿ ರೂಮಿಗೆ ಹೋಗಿಬಿಟ್ಟರು. ನನಗೆ ಗೊತ್ತು, ನಾನು ಮನೆಗೆ ಹೋಗುವವರೆಗೆ ಅಪ್ಪ ಏನೂ ತಿನ್ನುವುದಿಲ್ಲ ಎಂದು. ಅದಕ್ಕೆ ಮನೆಗೆ ಹೋಗಿ, ಅವರಿಗೆ ಮಸ್ಕಾ ಹೊಡೆದು ಊಟ ಮಾಡಿಸಿ, ಸಂಜೆ ಐಸ್‍ಕ್ರೀಮ್ ಕೊಡಿಸುತ್ತೇನೆ.”ಸುಧೀರ್‍ಗೆ ಏನು ಹೇಳುವುದೆಂದೆ ತೋಚಲಿಲ್ಲ.ಕವಿತಾ ಮಾತು ಮುಂದುವರೆಸಿದಳು. “ವಿಚಿತ್ರ ಎನಿಸುತ್ತೆ ಅಲ್ಲವೇ ಸರ್? ಆದ್ರೆ ನಿಮಗೆ ಗೊತ್ತಾ ಸರ್, ನಾನು ಚಿಕ್ಕವಳಿದ್ದಾಗ ಒಂದು ದಿನ ರಾತ್ರಿ 11 ಘಂಟೆಗೆ ಎದ್ದು ಐಸ್‍ಕ್ರೀಮ್ ಕೇಳಿದ್ದೆ. ಬೆಳಿಗ್ಗೆ ಕೊಡಿಸುತ್ತೇನೆ ಎಂದಾಗ ಅಳಲು ಶುರುಮಾಡಿದ್ದೆ. ಅಮ್ಮ ಎಷ್ಟು ಬೇಡ ಬೇಡವೆಂದರೂ ಅಪ್ಪ ಕೇಳದೆ ಹೊರಗೆ ಹೋಗಿ ಬಹಳಷ್ಟು ಕಡೆ ಸುತ್ತಾಡಿ ರಾತ್ರಿ 1 ಘಂಟೆಗೆ ಐಸ್‍ಕ್ರೀಮ್ ತೆಗೆದುಕೊಂಡು ಮನೆಗೆ ಬಂದಿದ್ದರು. ಇಂತಹದ್ದು ಎಷ್ಟೋ ಘಟನೆಗಳು ಸರ್. ನಮ್ಮಪ್ಪ ನನ್ನನ್ನು ಯಾವತ್ತೂ ಬೈದವರಲ್ಲ. ನನ್ನ ಕಣ್ಣಲ್ಲಿ ಒಂದು ತೊಟ್ಟು ನೀರು ಕಂಡರೂ ಸಹಿಸುತ್ತಿರಲಿಲ್ಲ. ನನಗಾಗಿ ಎಷ್ಟೆಲ್ಲ ಮಾಡಿದ್ದಾರೆ ಸರ್. ಹಾಗಂತ ನಮ್ಮಪ್ಪನಿಗೆ ತುಂಬಾ ಸಂಬಳವೇನೂ ಬರ್ತಿರಲಿಲ್ಲ. ಅವರಿಗೆ ಟೆನ್ಷ್‍ನ್ ಇರಲಿಲ್ಲವಾ ಸರ್. ಆದರೆ ಅವರೆಂದೂ ನನ್ನ ಮೇಲೆ ಕೋಪ ಮಾಡಿಕೊಂಡವರಲ್ಲ. ಮತ್ತೆ ನನಗೇನು ಹಕ್ಕಿದೆ ಸರ್. ನಾನವತ್ತು ಚಿಕ್ಕವಳಾಗಿದ್ದೆ. ಈಗ ಅವರು ನನಗೆ ಮಗು ತರಹ ಸರ್. ತುಂಬಾ ಮಾತಾಡಿಬಿಟ್ಟೆ ಅನಿಸುತ್ತೆ. ಎಲ್ಲಾ ಕೆಲಸ ಮುಗಿಸಿ ಹೋಗುತ್ತೇನೆ ಸರ್. ಪ್ಲೀಸ್ ರಜಾ ಇಲ್ಲವೆನ್ನಬೇಡಿ.”ಇಲ್ಲವೆನ್ನಲಾಗಲಿಲ್ಲ ಸುಧೀರ್‍ಗೆ. “ಸರಿ ಹೋಗಮ್ಮ” ಎಂದ.ಅವಳು ಹೋದ ಮೇಲೆ ಸುಧೀರ್‍ಗೆ ತನ್ನಪ್ಪನ ಬಗ್ಗೆ ನೆನಪಾಗತೊಡಗಿತು.ಅವನು 6ನೇ ತರಗತಿಯಲ್ಲಿರುವಾಗ ಎಲ್ಲರ ಹತ್ತಿರ ಸೈಕಲ್ ಇದೆ, ತನಗೂ ಬೇಕು, ಎಂದು ಹಠ ಹಿಡಿದಿದ್ದ. ಅಮ್ಮ ಗದರಿದ್ದರು. ಆದರೆ ಅಪ್ಪ ಏನೂ ಮಾತನಾಡಲಿಲ್ಲ. ಅದಾದ ಒಂದು ತಿಂಗಳು ಅಪ್ಪ 6 ಘಂಟೆಗೆ ಮನೆಗೆ ಬರುತ್ತಿದ್ದವರು 9 ಘಂಟೆಗೆ ಬರುತ್ತಿದ್ದರು. ಒಂದು ತಿಂಗಳ ನಂತರ ಮನೆಗೆ ಸೈಕಲ್ ಬಂದಿತ್ತು.ಅಪ್ಪ ಮತ್ತೆ 6 ಘಂಟೆಗೆ ಬರಲಾರಂಭಿಸಿದರು. ಆಗ ಅಪ್ಪ ಒಂದು ತಿಂಗಳು ಓಟಿ ಮಾಡಿದ್ದರು ಎಂದು ನಂತರ ಎಷ್ಟೋ ವರ್ಷಗಳ ಮೇಲೆ ಅಮ್ಮ ಯಾವುದೋ ಸಂದರ್ಭದಲ್ಲಿ ಹೇಳಿದ್ದರು. ತನ್ನ ಆಸೆಗಾಗಿ ಒಂದು ತಿಂಗಳು ಓಟಿ ಮಾಡಿದ ಅಪ್ಪ ಎಲ್ಲಿ, ಕೇವಲ 400-500 ರೂಪಾಯಿಗಳ ಕನ್ನಡಕಕ್ಕಾಗಿ ರೇಗಿದ ತಾನೆಲ್ಲಿ? ಅವನಿಗೆ ತನ್ನ ಬಗ್ಗೆಯೇ ಅಸಹ್ಯವೆನಿಸಿಬಿಟ್ಟಿತು.ಅಷ್ಟರಲ್ಲಿಯೇ ಒಳಗೆ ಬಂದ ಮ್ಯಾನೇಜರ್, “ಸರ್, ಈ ದಿನೇಶ್ ಜೊತೆ ಕೆಲಸ ಮಾಡುವುದೇ ಕಷ್ಟವಾಗಿಬಿಟ್ಟಿದೆ. ಅವನು ಕೆಲಸಕ್ಕೆ ಸೇರಿ ಕೇವಲ 6 ತಿಂಗಳಾಯಿತು. ಈಗಾಗಲೇ ಬಹಳಷ್ಟು ಬಾರಿ ಚಕ್ಕರ್ ಹಾಕಿದ್ದಾನೆ. ಈಗ ಬೆಳಿಗ್ಗೆ ಫೆÇೀನ್ ಮಾಡಿ ಸರ್, ನನಗೆ ಬೆಳಿಗ್ಗೆ ಕೆಲಸಕ್ಕೆ ಬರಲು ಸಾಧ್ಯವಿಲ್ಲ ಅಂತಾನೆ.”ಮನೆಯ ಟೆನ್ಷ್‍ನ್ ಜೊತೆ ಆಫೀಸ್ ಟೆನ್ಷ್‍ನ್ ಬೇರೆ ಎಂದುಕೊಂಡು, “ಸರಿ, ಮಧ್ಯಾಹ್ನ ಅವನು ಬಂದ ತಕ್ಷಣ ಅವನನ್ನು ನನ್ನ ಬಳಿ ಕಳಿಸಿ” ಎಂದ ಸುಧೀರ್.ಮಧ್ಯಾಹ್ನ ಮನೆಗೆ ಫೆÇೀನ್ ಮಾಡಿದಾಗ ಅಪ್ಪ ಊಟ ಮಾಡಿ ಮಲಗಿದ್ದಾರೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ಅಪ್ಪ ಸಾಮಾನ್ಯವಾಗಿ ಯಾರ ಮೇಲೂ ಮುನಿಸಿಕೊಂಡವರಲ್ಲ, ಊಟ ಬಿಟ್ಟವರಲ್ಲ. ಆದರೆ ಇಂದು ತನ್ನ ವರ್ತನೆಯಿಂದಾಗಿ ಅವರು ನೊಂದಿದ್ದು ಕಂಡು ಏನು ಮಾಡುತ್ತಾರೊ ಎಂಬ ಹೆದರಿಕೆ ಇತ್ತು. ಸಧ್ಯ ಹಾಗೇನೂ ಆಗಲಿಲ್ಲವಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟ. ಆದರೂ ಮನಸ್ಸಿನಲ್ಲಿ ಏನೋ ತಳಮಳ.ತಾನೂ ಊಟ ಮಾಡಿ ಫೈಲ್ಸ್ ನೋಡುತ್ತಿದ್ದಾಗ ಮ್ಯಾನೇಜರ್ ದಿನೇಶ್‍ನನ್ನು ಕರೆತಂದ. “ನಮಸ್ಕಾರ್ ಸರ್, ಅನಿವಾರ್ಯ ಕಾರಣದಿಂದ ಬೆಳಿಗ್ಗೆ ಬರಲಾಗಲಿಲ್ಲ. ದಯವಿಟ್ಟು ಕ್ಷಮಿಸಿ ಸರ್” ಎಂದ ದಿನೇಶ್.“ಏನಯ್ಯಾ ಹೀಗೆ ಮಾಡಿದರೆ? ಬೆಳಿಗ್ಗೆಯಿಂದ ಎಷ್ಟು ಕೆಲಸ ಪೆಂಡಿಂಗ್ ಇದೆ” ಕೇಳಿದ ಸುಧೀರ್.“ಇಲ್ಲ ಸರ್, ಹೆಚ್ಚು ಕೆಲಸವೇನು ಬಾಕಿ ಇಲ್ಲ. ನೆನ್ನೆ 8 ಘಂಟೆಯವರೆಗೂ ಇದ್ದು ಕೆಲಸ ಮಾಡಿ ಹೋಗಿದ್ದೆ.”ಮ್ಯಾನೇಜರ್ ಕಡೆ ತಿರುಗಿ ಸುಧೀರ್, “ಮತ್ತೀನ್ನೇನ್ರಿ ನಿಮ್ಮ ಪ್ರಾಬ್ಲಮ್. ಅವರ ಕೆಲಸ ಮಾಡಿ ಹೋಗಿದ್ದಾರಲ್ಲಾ?”“ಇಲ್ಲ ಸರ್, ಬಹಳ ಮುಖ್ಯವಾದ ಕೆಲಸವೇ ಆಗಿಲ್ಲ.” ದಿನೇಶ್ ಕಡೆ ನೋಡಿದರೆ ಮೌನವಾಗಿ ನಿಂತಿದ್ದ.“ಏನಪ್ಪಾ ಹೀಗೆ ಮಾಡಿದರೆ?”“ಸರ್ ನಾನು ಬೇಕಾಗಿ ಮಾಡಲಿಲ್ಲ. ಅನಿವಾರ್ಯ ಕಾರಣದಿಂದಾಗಿ...” ಮ್ಯಾನೇಜರ್ ಮಧ್ಯದಲ್ಲಿಯೇ ಬಾಯಿ ಹಾಕಿ, “ಹೌದ್ರಿ ನಿಮಗೆ ಪ್ರತಿ ವಾರದಲ್ಲಿ ನಾಲ್ಕು ಅನಿವಾರ್ಯ ಕಾರಣಗಳಿರುತ್ತೆ. ನಿಮ್ಮಂಥವರಿಗೆ ಕೆಲಸ ಕೊಟ್ಟಿದ್ದೆ ತಪ್ಪಾಯ್ತು. ಕಿತ್ತು ಬಿಸಾಕ್ತ ಇರಬೇಕು” ಎಂದರು.“ಆಯ್ತು ನಿಮಗೆ ಸಮಧಾನವಿಲ್ಲದಿದ್ದರೆ ಕಿತ್ತು ಬಿಸಾಕಿ ಸರ್. ಆದ್ರೆ ನನ್ನ ಜೀವನದಲ್ಲಿ ಮತ್ತೆ ಮತ್ತೆ ಇಂತಹ ಅನಿವಾರ್ಯ ಕಾರಣಗಳು ಬರುತ್ತಲೇ ಇರುತ್ತವೆ. ದುಡಿಯೋರಿಗೆ ಎಲ್ಲೋ ಒಂದು ಕಡೆ ಕೆಲಸ ಸಿಕ್ಕೇ ಸಿಗುತ್ತದೆ” ಕೋಪದಲ್ಲಿಯೇ ಉತ್ತರಿಸಿದ.“ನೋಡಿದ್ರಾ ಸರ್ ಅವನ ಉತ್ತರಾನಾ, ಎಷ್ಟು ಧಿಮಾಕು,” ರೇಗಿದ ಮ್ಯಾನೇಜರ್.ಆದರೆ ಸುಧೀರ್‍ಗೆ ಅದು ಧಿಮಾಕೆನಿಸಲಿಲ್ಲ. ಏನೋ ಬಲವಾದ ಕಾರಣವಿರಬೇಕೆನಿಸಿ, “ನೀವು ಹೋಗಿ, ನಾನು ವಿಚಾರಿಸುತ್ತೇನೆ” ಎಂದ. ಮ್ಯಾನೇಜರ್ ಗೊಣಗುತ್ತಲೇ ಹೊರಹೋದರು.“ದಿನೇಶ್, ನೀನು ತುಂಬಾ ಒಳ್ಳೆಯ ಕೆಲಸಗಾರ ಎಂದು ನನಗೆ ಗೊತ್ತು. ಏನಾಯ್ತು ಹೇಳು?” ಎಂದ.ತಕ್ಷಣವೇ ಶಾಂತನಾದ ಅವನು ಕಣ್ಣಲ್ಲಿ ನೀರು ತುಂಬಿಕೊಂಡು, “ಸರ್ ನನಗಿರೋದು ನಮ್ಮ ತಂದೆ ಒಬ್ಬರೆ. ಚಿಕ್ಕಂದಿನಲ್ಲಿಯೇ ಅಮ್ಮ ತೀರಿಕೊಂಡಾಗ ಅಪ್ಪ ಮತ್ತೊಂದು ಮದುವೆ ಮಾಡಿಕೊಳ್ಳಲಿಲ್ಲ. ಅವರೆ ಅಮ್ಮ ಅಪ್ಪ ಎರಡೂ ಆಗಿ ನನ್ನನ್ನು ನೋಡಿಕೊಂಡರು. ನನ್ನನ್ನು ಸುಖವಾಗಿ ಬೆಳೆಸಿ ಈ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಅವರಿಗೆ ಈಗ ಕ್ಯಾನ್ಸರ್. ಅವರಿಗೆ ಆಗಾಗ ಆರೋಗ್ಯ ಕೆಡುತ್ತಿರುತ್ತದೆ. ಅವರನ್ನು ನಾನೇ ನೋಡಿಕೊಳ್ಳಬೇಕು.”“ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬಹುದಲ್ಲಾ?”“ಸರ್, ನಿಮಗೆ ಗೊತ್ತಾ, ನಮ್ಮಪ್ಪ ಬಹಳ ದೊಡ್ಡ ಕೆಲಸದಲ್ಲಿದ್ದವರು. ಅವರು ಎಷ್ಟೆ ಕೆಲಸವಿದ್ದರೂ ನನ್ನನ್ನು ಶಾಲೆಗೆ ರೆಡಿ ಮಾಡಿ ಕಳಿಸುತ್ತಿದ್ದರು. ಅಪ್ಪನ ಕೈರುಚಿ ನನಗೆ ಬಹಳ ಇಷ್ಟ ಎಂದು ಅವರೇ ಅಡಿಗೆ ಮಾಡುತ್ತಿದ್ದರು. ಈಗಲೂ ಹುಷಾರಿದ್ದಾಗ ಅವರೇ ಅಡಿಗೆ ಮಾಡುತ್ತಾರೆ. ಡಾಕ್ಟರ್ ಅವರಿಗೆ ಸಂತೋಷವಾಗುವ ಕೆಲಸ ಮಾಡಲಿ ಎಂದಿದ್ದಕ್ಕೆ ನಾನು ಸುಮ್ಮನಿದ್ದೇನೆ. ಈಗ ಹೇಳಿ ಸರ್, ನಮ್ಮಪ್ಪನಿಗೆ ಹುಷಾರಿಲ್ಲದಾಗ ನಾನು ಸೇವೆ ಮಾಡಬೇಕೆ, ಬೇಡವೆ?”ಏಕೋ ಇವರೆಲ್ಲಾ ಬಹಳ ಎತ್ತರಕ್ಕೆ ಬೆಳೆದಿದ್ದಾರೆ, ತಾನು ಮಾತ್ರ ಕೆಳಕ್ಕೆ ಜಾರುತ್ತಿದ್ದೇನೆ ಎನಿಸಿತು ಸುಧೀರ್‍ಗೆ.“ಒಳ್ಳೆ ಕೆಲಸ ಮಾಡುತ್ತಿದ್ದೀಯಾ. ನಿನಗೆ ರಜೆ ಬೇಕಾದರೆ ಇನ್ನು ಮುಂದೆ ನನಗೆ ನೇರವಾಗಿ ಫೆÇೀನ್ ಮಾಡು” ಎಂದು ಹೇಳಿ ಕಳಿಸಿದ.ತುಂಬು ಕೃತಜ್ಞತೆಯಿಂದ ದಿನೇಶ್, “ಸರ್, ನಿಮ್ಮ ಮನಸ್ಸು ಬಹಳ ದೊಡ್ಡದು. ನಿಮ್ಮ ತಂದೆ ಬಹಳ ಅದೃಷ್ಟವಂತರು” ಎಂದ. ಅದನ್ನು ಕೇಳಿ ಸುಧೀರ್ ಮನಸ್ಸು ಕುಸಿದುಬಿಟ್ಟಿತು.ದಿನೇಶ್‍ನನ್ನು ಕಳಿಸಿದ ನಂತರ ‘ಕೆಲಸ ಮುಗಿಸಿಕೊಂಡು ಅಪ್ಪನಿಗೆ ಕನ್ನಡಕ ತೆಗೆದುಕೊಂಡು ಹೋಗಬೇಕು’ ಎಂದುಕೊಂಡು ಬೇಗ ಬೇಗ ಫೈಲ್ಸ್ ನೋಡಲಾರಂಭಿಸಿದ.4 ಘಂಟೆಗೆ ಫೆÇೀನ್ ರಿಂಗ್ ಆಯಿತು. ನೋಡಿದರೆ ಮಗನದ್ದು. ಆದರೆ ಧ್ವನಿ ಮಾತ್ರ ಅಪ್ಪನದ್ದು. “ಥ್ಯಾಂಕ್ಸ್ ಕಣೋ. ಕನ್ನಡಕ ಬಹಳ ಚೆನ್ನಾಗಿದೆ. ನಿನ್ನ ಆಯ್ಕೆ ಅಂದ್ರೆ ಕೇಳಬೇಕಾ? ಥ್ಯಾಂಕ್ಯೂ” ಎಂದರು.ಶಾಕ್ ಆಯಿತು ಸುಧೀರ್‍ಗೆ. ಮಗ ಫೆÇೀನ್ ತೆಗೆದುಕೊಂಡ ಮೇಲೆ, “ಏನೊ ಇದು?” ಕೇಳಿದರು.“ಒಂದ್ನಿಮಿಷ ಇರು” ಹೊರಗೆ ಬಂದ ಮಗ, “ಅಪ್ಪಾ, ಬೆಳಿಗ್ಗೆ ನಡೆದ ಘಟನೆ ನೋಡಿದೆ. ನೀವು ಯಾವತ್ತೂ ಆ ರೀತಿ ನಡೆದುಕೊಂಡವರಲ್ಲ. ಏನೋ ಆಫೀಸ್ ಟೆನ್ಷ್‍ನ್ ಇರಬೇಕೆಂದುಕೊಂಡು ನಾನೇ ಕನ್ನಡಕ ತಂದು ಅಪ್ಪ ತುಂಬಾ ಕೆಲಸ ಎಂದು ನನ್ನ ಕೈಯಲ್ಲಿ ಕಳಿಸಿದ್ದಾರೆ ಎಂದೆ, ತಾತ ಫುಲ್ ಖುಷ್” ಎಂದ.ಮನಸ್ಸಿನ ಭಾರವನ್ನು ಯಾರೋ ಇಳಿಸಿದಂತಾಯಿತು ಸುಧೀರ್‍ಗೆ. “ಥ್ಯಾಂಕ್ಸ್ ಮಗನೆ” ಎಂದ.“ತಾತ ಹೇಳಿದ ಡೈಲಾಗ್ ಇದು.”“ಇಲ್ಲ ಕಣೋ, ನೀನು ನನ್ನ ಎದೆಯ ಭಾರ ಇಳಿಸಿದೆ.”“ಏನಪ್ಪ ಇದು, ನೀವು ಇಷ್ಟೆಲ್ಲಾ ಹೇಳಬೇಕೇ. ನಿಮಗೆ ನಿಮ್ಮಪ್ಪನ ಬಗ್ಗೆ ಇರುವ ಜವಾಬ್ದಾರಿ ನನಗೆ ನನ್ನಪ್ಪನ ಬಗ್ಗೆಯೂ ಇರಬೇಕಲ್ಲವೇ. ಜೊತೆಗೆ ತಾತ ಏನೂ ನಿಮ್ಮ ಬಗ್ಗೆ ಬೇಜಾರು ಮಾಡಿಕೊಂಡಿಲ್ಲ. ‘ಪಾಪ ಅವನಿಗೆ ಬಹಳ ಕೆಲಸ. ನಾನು ಬೆಳಿಗ್ಗೆ ಕೇಳಬಾರದಾಗಿತ್ತು. ಅಷ್ಟು ಕೆಲಸ ಇದ್ದರೂ ನೆನಪಿಟ್ಟುಕೊಂಡು ಕಳಿಸಿದ್ದಾನಲ್ಲಾ, ನೋಡಮ್ಮ ನನ್ನ ಮಗ’ ಎಂದು ಅಮ್ಮನಿಗೆ ಹೇಳುತ್ತಿದ್ದರು.” ಹೃದಯ ತುಂಬಿ ಬಂದಂತಾಯಿತು ಸುಧೀರ್‍ಗೆ. “ಏನು ಹೇಳಬೇಕೊ ಗೊತ್ತಾಗ್ತಿಲ್ಲ ಕಣೋ. ನೀನು ನನ್ನ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.”“ಅಪ್ಪ, ಸಾಕು ಹೊಗಳಿಕೆ. ಸಂಜೆ ಬೇಗ ಬನ್ನಿ” ಹೇಳಿ ಫೋನಿಟ್ಟ.ಸುಧೀರ್‍ಗೆ ತನ್ನ ಮಗನ ಬಗ್ಗೆ ಹೆಮ್ಮೆ ಎನಿಸಿತು. ಆದರೆ ತಾನಿಷ್ಟು ಒಳ್ಳೆಯ ಅಪ್ಪನಾಗಲು ತನ್ನ ಅಪ್ಪನೇ ಕಾರಣ ಎಂಬುದು ಇಂದು ಅವನಿಗೆ ಸ್ಪಷ್ಟವಾಯಿತು. ಅಪ್ಪ, ಮಗ ಇಬ್ಬರೂ ಒಳ್ಳೆಯವರು, ತನ್ನನ್ನು ಅರ್ಥ ಮಾಡಿಕೊಳ್ಳುವವರು. ನಾನೆಷ್ಟು ಅದೃಷ್ಟಶಾಲಿ! ಎಂದುಕೊಂಡ.
- ಸುಧಾ ಜಿ
Pages
▼
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ