Pages

ಶಾಲಾ ಡೈರಿ


ಆತ್ಮೀಯ ಶಿಕ್ಷಕರೇ,

ನನ್ನ ಮಗಳನ್ನು ಅರ್ಥ ಮಾಡಿಕೊಳ್ಳುವುದು ನಿಮಗೆ ಕಷ್ಟಸಾಧ್ಯವಾಯಿತೆಂದೆನಿಸುತ್ತದೆ ಹಾಗೂ ಅವಳ ಜವಾಬ್ದಾರಿಯುತ ತಂದೆಯಾದ ನಾನು, ಬಹುಶಃ ಅವಳಲ್ಲಿರುವ ಲೋಪದೋಷಗಳನ್ನೂ ನ್ಯೂನತೆಗಳನ್ನೂ ಸ್ಪಷ್ಟವಾಗಿ ನೋಡಬಲ್ಲೆನಾದ್ದರಿಂದ ನೀವು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನ ಮಗಳಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ.
ನಾನು ಶುರುಮಾಡುವ ಮೊದಲು, ನನ್ನ ಮಗಳಿಗೆ ಬೇಜವಾಬ್ದಾರಿತನದ ಸಮಸ್ಯೆಗಳಿರಬಹುದು ಹಾಗೂ ನಿಮ್ಮ ಪ್ರೀತಿಪಾತ್ರ ಮಕ್ಕಳಿಗಿರುವಂತೆ ಗುರಿಸಾಧನೆಯ ಲಕ್ಷ್ಯವಿಲ್ಲದಿರಬಹುದು, ಆದರೆ ಪ್ರತಿಯೊಂದು ಮಗುವೂ ಅಪೂರ್ವವಾಗಿದ್ದು ತನ್ನದೇ ಆದ ಅಭಿರುಚಿ/ಆಸಕ್ತಿಗಳನ್ನು ಈ ಪ್ರಪಂಚಕ್ಕೆ ತೆಗೆದುಕೊಂಡು ಬರುತ್ತದೆ ಎಂಬುದನ್ನು ಜ್ಞಾಪಿಸಲು ಇಚ್ಛಿಸುತ್ತೇನೆ. ಆ ಮಗುವಿನಲ್ಲಿರುವ ಪ್ರತಿಭೆಯನ್ನು ಹೊರಸೂಸುವಂತೆ ಮಾಡುವುದು ಹಾಗೂ ಅವರು ತಮ್ಮದೇ ಸ್ವಂತಿಕೆಯನ್ನು ಬೆಳೆಸಿಕೊಳ್ಳುವಂತೆ ಅವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ನಾವು ಪ್ರತಿಬಾರಿಯೂ ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳಬೇಕಾಗಿಲ್ಲ, ಆದರೆ ನಾವು ಸ್ವಲ್ಪ ಕಾಳಜಿಯಿಂದ ಅವರನ್ನು ಅರ್ಥಮಾಡಿಕೊಂಡು ಅವರಿಗೆ ನೆರವು ನೀಡಿದರೆ ಬಹುಶಃ ಅವರು ತಮ್ಮ ವಿಚಾರಗಳನ್ನು ತಾವೇ ಶೋಧಿಸಿಕೊಳ್ಳಲು ಅವರಲ್ಲಿ ಆತ್ಮವಿಶ್ವಾಸ ತುಂಬಬಹುದೇನೋ. 
ನನ್ನ ಮಗಳು ಬಹಳ ನಗುತ್ತಾಳೆಂಬುದು ನಿಮ್ಮ ಸಮಸ್ಯೆಯಾಗಿತ್ತು. ಆದರೆ ಈಗ ಅವಳ ಹತಭಾಗ್ಯ ಅಪ್ಪ ಕಳೆದ ಕೆಲವು ತಿಂಗಳುಗಳಿಂದ ಅವಳ ಕಳೆದು ಹೋದ ಮುಗುಳ್ನಗೆಗಾಗಿ ಹುಡುಕುತ್ತಿದ್ದಾರೆಂದು ಇಲ್ಲಿ ಉಲ್ಲೇಖಿಸಲು ದಯವಿಟ್ಟು ನನಗೆ ಅನುಮತಿ ನೀಡಿ. ನನ್ನ ಮಗಳಿಂದಾಗಿ ನಿಮಗೆ ಯಾವುದಾದರೂ ರೀತಿಯಲ್ಲಿ ಅನಾನುಕೂಲವಾಗಿದ್ದಕ್ಕೆ ಕ್ಷಮಿಸಿ (ಅದು ತಮಗೆ ತೊಂದರೆ ಎಂದು ಅನಿಸಿರಬಹುದು), ಆದರೆ ನನಗೆ  ಅವಳು ಎಷ್ಟು ಬೇಕಾದವಳೆಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅವಳು ಖುಷಿಯಾಗಿದ್ದಾಗ ನಗಬೇಕು ಎಂದು ನಾನು ಅವಳಿಗೆ ಹೇಳಿಕೊಟ್ಟಿದ್ದೇನೆ, ಅವಳಿಗೆ ನೋವಾದಾಗ ಅವಳು ನಗಬೇಕು ಎಂದು ನಾನು ಅವಳಿಗೆ ಕಲಿಸಿದ್ದೇನೆ, ನಡೆಯಬೇಕಾದದ್ದು ತನಗೆ ಬೇಕಾದ ರೀತಿಯಲ್ಲಿ ನಡೆಯದಿದ್ದರೆ, ಹಾಗೂ ಅವಳು ಪ್ರತಿಬಾರಿಯೂ ತಪ್ಪು ಮಾಡಿದಾಗ ತನ್ನನ್ನು ನೋಡಿ ತಾನೇ ನಗಬೇಕೆಂದು ನಾನು ಅವಳಿಗೆ ಹೇಳಿಕೊಟ್ಟಿದ್ದೇನೆ.
ನನ್ನ ಮಗಳಿಗೆ ಜಿರಾಫೆ ಕಾಲುಗಳಿದ್ದಾವೆಂಬ ವಿಚಿತ್ರ ಸಂಶೋಧನೆಯನ್ನು ನೀವು ಮಾಡಿದ್ದೀರಿ. ಅವಳು ಅದೆಷ್ಟು ವೇಗವಾಗಿ ಬೆಳೆಯುತ್ತಿದ್ದಾಳೆಂದರೆ, ನನಗೆ ಒಮ್ಮೊಮ್ಮೆ ನನ್ನ ಮುದ್ದು ಮರಿ ಎಲ್ಲಿ ಹೋದಳು ಎಂದು ಸೋಜಿಗವೆನಿಸುತ್ತದೆ. ಅವಳು ದೃಢವಾಗಿ, ಆತ್ಮವಿಶ್ವಾಸದಿಂದ, ಹಾಗೂ ಯಾವುದೇ ಭಯವರಿಯದೆ ಎಲ್ಲರ ಮಧ್ಯೆ ಕಾಣುವಂತೆ ಎದ್ದು ನಿಲ್ಲಬೇಕೆಂದು ನಾನು ಅವಳಿಗೆ ಕಲಿಸಿಕೊಟ್ಟೆ. ಅವಳು ತನ್ನ ಕನಸುಗಳನ್ನು ನನಸಾಗಿಸಲು, ತನ್ನ ಗುರಿ ಸಾಧಿಸಲು ಇನ್ನೂ ಕೋಟಿ ಮೈಲುಗಳಷ್ಟು ನಡೆದು ಕ್ರಮಿಸಬೇಕು. ನೀವೇನಾದರೂ ಅವಳನ್ನು ಬೈದರೆ ಅವಳು ಸೀದಾ ಪ್ರಾಂಶುಪಾಲರ ಕೋಣೆಗೆ ಹೋಗುವಳೆಂದು ಇಡೀ ಶಿಕ್ಷಕ ಕೋಣೆಗೇ ಗೊತ್ತೆಂದು ನೀವು ಅವಳಿಗೆ ಹೇಳಿರುವಿರಿ.  ತನ್ನ ಹೃದಯದಲ್ಲಿ ದೇವರ ಪ್ರೀತಿ, ಮನಸ್ಸಿನಲ್ಲಿ ತನ್ನ ತಂದೆ ತಾಯಂದಿರ ಧೈರ್ಯ ಹಾಗೂ ನಿಮ್ಮ ಪ್ರಿನ್ಸಿಪಾಲರಂತಹ ಆದರ್ಶವಿರುವ ಅವಳಿಗೆ ಅವರ ಬಳಿ ತನ್ನ ಮನಸ್ಸನ್ನು ತೆರೆದುಕೊಳ್ಳುವುದು ಹಿತವೆನಿಸುತ್ತದೆ ಎಂಬ ವಾಸ್ತವ ನಿಮಗೆ ತಿಳಿದಿರಲಿ. ಹಾಗೆ ನೋಡಿದರೆ ಅವಳು ಒಂದು ಶಕ್ತಿಶಾಲಿ ಸಂತೋಷ ತುಂಬಿದ ಭಾರತವನ್ನು ಕಟ್ಟುವ ಮಿಲಿಯಾಂತರ ಮಕ್ಕಳಲ್ಲಿ ಒಬ್ಬಳಂತೆ ನನಗೆ ಕಾಣುತ್ತಾಳೆ. ಇಂದು ನಮಗೆ ತಮ್ಮ ಮನಸ್ಸಿನಲ್ಲಿರುವುದನ್ನು ಮಾತನಾಡುವ, ಕೇವಲ ನಾಯಕರ ಮಾತನ್ನು ಕೇಳದೆ ಅವರಿಗೆ ಪ್ರಶ್ನೆ ಕೇಳುವ, ಕಷ್ಟಕರ ಪ್ರಶ್ನೆ ಕೇಳುವ ಯುವಜನರು ಬೇಕಾಗಿದ್ದಾರೆ, ಆಗ ಅವರು ಇತರರಿಗೆ ಧೈರ್ಯ ಹಾಗೂ ಸಂತೋಷದ ಮೂಲವಾಗುತ್ತಾರೆ.
ಅವಳು ನಿಮಗೆ ಯಾವಾಗಲೂ ಅತ್ಯಂತ ಕೆಟ್ಟ ಅಕ್ಷರ ಬರೆಯುವ, ತರಗತಿಯ ಕೋಣೆಯಲ್ಲಿ ತನ್ನ ಪುಸ್ತಕ ಹಾಗೂ ಚೀಲಗಳ ಕುರಿತು ಹೆಚ್ಚು ಮುತುವರ್ಜಿ ವಹಿಸದ, ಯಾವಾಗಲೂ ಯಾವುದರ ಗೊಡವೆಯಿಲ್ಲದೆ  ಖುಷಿಯಾಗಿ ಇರುವ ಹುಡುಗಿಯಂತೆ ಕಾಣುತ್ತಾಳಂತೆ. ನೀವು ಹೇಳಿದ್ದನ್ನು ಇಲ್ಲಿ ನಾನು ಒಪ್ಪಿಕೊಳ್ಳಬಹುದೇನೋ. ಆದರೆ ಅವಳ ಕುರಿತು ತಮಾಷೆ ಮಾಡುತ್ತಾ ಅವಳ ಆಪ್ತ ಸ್ನೇಹಿತೆಗೆ ಹೇಳುವುದು ಶಿಕ್ಷಕರಾದ ನಿಮಗೆ ಒಪ್ಪುವುದಿಲ್ಲ ಹಾಗೂ ನಿಮ್ಮಿಂದ ಇಂತಹ ವರ್ತನೆ ಅನಾಯಾಚಿತ ಹಾಗೂ ಅನುಚಿತ. 
ಕಳೆದ ಶಿಕ್ಷಕ-ಪೋಷಕ ಸಭೆಯಲ್ಲಿ ನನ್ನ ಮಗಳು ಯಾವಾಗಲೂ ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಕಾಲೇಜಿನ ವಾರ್ಷಿಕ ಸಮಾರಂಭಗಳಲ್ಲಿ ಭಾಗವಹಿಸುವ ಆಸಕ್ತಿ ತೋರುತ್ತಾಳೆಂದು ಅವಳ ಕುರಿತು ದೂರಿದಿರಿ. ನನಗೆ ತಿಳಿದಿರುವ ಮಟ್ಟಿಗೆ ವಿದ್ಯಾರ್ಥಿಗಳು ಕ್ರೀಡೆ, ಚರ್ಚಾಸ್ಪರ್ಧೆ, ಚರ್ಚೆಗಳಲ್ಲಿ ಭಾಗವಹಿಸಬೇಕು, ಏಕೆಂದರೆ ಇವೆಲ್ಲಾ ಚಟುವಟಿಕೆಗಳಿಂದಾಗಿ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಈ 21 ನೇ ಶತಮಾನದಲ್ಲಿ ನೀವು ಇನ್ನೂ ಹಳೇ ಕಾಲದ ಫಾರ್ಮುಲಾ - ಹಿಂದಿಯಲ್ಲಿ ಹೇಳುವಂತೆ ‘ಖೆಲೋಗೆ, ಕೂದೋಗೆ ಹೋಗೆ ಖರಾಬ್’ – (ಆಟವಾಡಿದರೆ, ಜಿಗಿದಾಡಿದರೆ ನೀನು ಹಾಳಾಗುತ್ತೀ) ಎಂಬುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ.

ಒಂದು ಮಗುವಿನ ಮನಸ್ಸನ್ನು ನೋಯಿಸುವುದು ಅದಕ್ಕೆ ದೈಹಿಕವಾಗಿ ಶಿಕ್ಷೆ ಕೊಟ್ಟಷ್ಟೇ ಕೆಟ್ಟದ್ದು ಹಾಗೂ ಅಪಾಯಕಾರಿ. ಏಕೆಂದರೆ ಅದು ಅವಳ ಮಾನಸಿಕ ಬೆಳವಣಿಗೆ ಹಾಗೂ ವಿಕಾಸದ ಮೇಲೆ ಒಂದು ಅಲ್ಪವಿರಾಮ ಅಥವಾ ಬಹುಶಃ ಪೂರ್ಣ ವಿರಾಮವನ್ನೇ ಹಾಕಬಹುದು.
ಒಂದು ಮಗುವಿನಲ್ಲಿ ತಿದ್ದಬಹುದಾದ ದೋಷವನ್ನು ಅಪಾರ್ಥ ಮಾಡಿಕೊಂಡು ನಿಮ್ಮ ಕ್ರೂರ ಹಾಗೂ ಅಕಾರಣ ನಡವಳಿಕೆಯಿಂದಾಗಿ ನೀವು ಒಂದು ಮಗುವಿನ ಮಾನಸಿಕ ಬೆಳವಣಿಗೆಗೆ ಅಡ್ಡಿಯೊಡ್ಡುತ್ತಿದ್ದೀರಾ ಎಂಬುದು ನಿಮಗೆ ಅರ್ಥವಾಗುವುದಿಲ್ಲವೇ? ತರಗತಿಯಲ್ಲಿ ಒಂದು ವಿದ್ಯಾರ್ಥಿಯ ಬಗ್ಗೆ ಪದೇ ಪದೇ ತಮಾಷೆ ಮಾಡಿ ಅವಳನ್ನು ನಗೆಪಾಟಲು ಮಾಡುವುದು ಮಾನಸಿಕ ಹಿಂಸೆಯಷ್ಟೇ ಕೆಟ್ಟದು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರೆಂದು ನಾನು ನಂಬುತ್ತೇನೆ.  ಒಬ್ಬ ಶಿಕ್ಷಕರಿಂದ ಅಂತಹ ವರ್ತನೆ ಖಂಡನೀಯ ಹಾಗೂ ಅಂತಹ ಒಬ್ಬ ವ್ಯಕ್ತಿ ಶಿಕ್ಷಕರೆನಿಸಿಕೊಳ್ಳಲು ಲಾಯಕ್ಕಿಲ್ಲ. ಅಂತಹ ವರ್ತನೆಯಿಂದಾಗಿ ವಾಸ್ತವವಾಗಿ ನೀವು ಅವರು ಅರಳುವಂತೆ ಮಾಡುವುದು ಬಿಟ್ಟು ಅವರ  ಬೆಳವಣಿಗೆಯನ್ನು ಕುಂಠಿತಗೊಳಿಸುತ್ತಿದ್ದೀರಿ. ತಮ್ಮ ತಪ್ಪನ್ನು ತಿದ್ದಿಕೊಳ್ಳದೇ ಹೋಗುವ ಅಂತಹ ಶಿಕ್ಷಕರು ಇಲ್ಲದಿದ್ದರೆ ಆ ಶಾಲೆಗಾಗಲಿ, ಆ ಸಮಾಜವಾಗಲಿ ಇನ್ನು ಉತ್ತಮವಾಗುತ್ತದೇನೋ.
ಅಂತಿಮವಾಗಿ ನಾನು ಹೇಳಲು ಇಷ್ಟಪಡುವುದೇನೆಂದರೆ, ಮಕ್ಕಳನ್ನು ಅವರ ಸಹಪಾಠಿಗಳೆದುರು ಹೀಯಾಳಿಸುವ ಹಾಗೂ ಬೈಯುವ (ತನ್ಮೂಲಕ ಅವರ ಮಾನಸಿಕ ಬೆಳವಣಿಗೆಯನ್ನು ಕುಂಠಿತಗೊಳಿಸುವುದು) ಬದಲಾಗಿ ಮಕ್ಕಳ ಏಳಿಗೆಗಾಗಿ ದುಡಿಯಬೇಕು. ಅವರನ್ನು ತುಚ್ಛವಾಗಿ ಕಾಣುವ ಬದಲು, ಮಾನವ ಜೀವನ ಎಷ್ಟು ಸುಂದರ ಕೊಡುಗೆ, ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವಂತೆ, ಹಾಗೂ ಅವರಲ್ಲಿ ಸಾಮಾಜಿಕ, ನೈತಿಕ, ಮೌಲ್ಯಗಳು ಬೇರುಬಿಡುವಂತೆ, ಅವರು ತಮ್ಮ ಶಾಲಾ ಜೀವನದ, ಸಂಸಾರ, ಸಮಾಜ ಹಾಗೂ ದೇಶದಲ್ಲಿ ಎಲ್ಲರನ್ನೂ ಒಳಗೊಂಡ ಏಳ್ಗೆಗಾಗಿ ಸಕಾರಾತ್ಮಕವಾದ ಕ್ರಿಯೆಯಲ್ಲಿ ತೊಡಗುವಂತೆ ಮಾಡುವುದಕ್ಕೆ ಅವರಿಗೆ ಅರ್ಥವಾಗುವಂತೆ ಸಹಾಯ ಮಾಡಿ. 
ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಗವಹಿಸದ ಶಿಕ್ಷಕರಿಗೆ ಸಮಾಜದಲ್ಲಿ ಸ್ಥಾನವಿಲ್ಲ. ತಮ್ಮ ಶಾಲೆಯ ಪ್ರತಿಯೊಂದು ಮಗುವನ್ನು ಸಮಾನವಾಗಿ ಕಾಣುವ, ಅವರ ಕುರಿತು ಪ್ರೀತಿ, ಸಹಾನುಭೂತಿ, ಸಹೃದಯತೆ…ಹಾಗೂ ಮೃದು ಭಾವನೆ ಇರುವಂತಹ ಶಿಕ್ಷಕರು ಇಂದು ನಮ್ಮ ಸಮಾಜಕ್ಕೆ ಬೇಕಾಗಿದ್ದಾರೆಯೇ ಹೊರತು, ತರಗತಿಯಲ್ಲಿ ಎಲ್ಲರ ಮುಂದೆ ಮಕ್ಕಳನ್ನು ಕುಗ್ಗಿಸಿ ಆ ಮೂಲಕ ಅವರ ಆತ್ಮವಿಶ್ವಾಸವನ್ನೂ ಅವರ ಭವಿಷ್ಯವನ್ನೂ ನಾಶ ಮಾಡುವ ಶಿಕ್ಷಕರಲ್ಲ.
ಒಬ್ಬ ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಕುರಿತು ಪ್ರೀತಿ, ಸಹಾನುಭೂತಿಯಿರಬೇಕು ಹಾಗೂ ಅವರು ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಂಡು ಅವರ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಗಾಗಿ ಕೆಲಸ ಮಾಡಬೇಕು. 
ನಿಮಗೆ ನೆಮ್ಮದಿ ಸಿಗುವಂತೆ ನಾನು ನಿಮ್ಮ ಶಾಲೆಯಿಂದ ನನ್ನ ಮಗಳನ್ನು ಹಿಂತೆಗೆದುಕೊಳ್ಳುತ್ತಿದ್ದೇನೆಂದು ತಿಳಿಸಲಿಚ್ಛಿಸುತ್ತೇನೆ. ಹಾಗೂ ನನ್ನ ಪುಟ್ಟ ಖುಷಿ, ನನ್ನ ಮಗಳು ಮಾನಸಿಕ ಕೌನ್ಸೆಲರೊಂದಿಗೆ ಚೆನ್ನಾಗಿ ಸಹಕರಿಸುತ್ತಿದ್ದಾಳೆಂದೂ, ಗುಣವಾಗುತ್ತಿದ್ದಾಳೆಂದೂ ಹಾಗೂ ಅವಳು ತಿಂಗಳಿಗೊಮ್ಮೆ ತನ್ನ ಸ್ನೇಹಿತರನ್ನು ಕಾಣಲು ಹೋಗುವುದಕ್ಕೆ ಬಿಡುವುದಾದರೆ ನಿಮ್ಮ ಶಾಲೆಯನ್ನು ಬಿಡಲು ಒಪ್ಪಿದ್ದಾಳೆಂದೂ ನಿಮಗೆ ತಿಳಿಸಬಯಸುತ್ತೇನೆ. ನಿಮ್ಮ ಕುಹಕ ಮತ್ತೊಮ್ಮೆ ಗೆದ್ದಿತು ಹಾಗೂ ಇನ್ನೊಂದು ಬಡಪಾಯಿ ಮಗು ಸೋತಿತು ಎಂದು ಹೇಳಲು ನನಗೆ ದುಃಖವಾಗುತ್ತದೆ, ಆದರೆ ಬಹುಶಃ ಈ ಪತ್ರ ಓದಿದ ಮೇಲೆ ನೀವು ಇಂತಹ ಘಟನೆಗಳಿಗೆ ಒಂದು ಅಲ್ಪ ವಿರಾಮವಲ್ಲ, ಪೂರ್ಣ ವಿರಾಮ ಹಾಕುವ ಮನಸ್ಸು ಮಾಡುವಿರಿ ಎಂದು ನಂಬಿದ್ದೇನೆ.

(ರಾಹುಲ್ ವರ್ಮ ಅವರು  ಮಕ್ಕಳು, ಆರೋಗ್ಯ ಹಾಗೂ ಮಾನವ ಹಕ್ಕುಗಳಿಗೆ ಅರ್ಪಿತವಾದ ಕೆಳಸ್ಥರದ ಜನರಿಗಾಗಿ ಕೆಲಸ ಮಾಡುತ್ತಿರುವ ಲಾಭರಹಿತ 
ಉದಯ್ ಫೌಂಡೇಶನ್ ಎಂಬ ಸಂಸ್ಥೆಯ ಸ್ಥಾಪಕರು.)

ಅನುವಾದ: ಡಾ.ಸುಚೇತಾ ಪೈ 

ಕಥೆ - ರಸ್ತೆ ತಡೆ


ಹೇಮಾ ನನ್ನ ಆಪ್ತ ಗೆಳತಿ. ಅವಳ ಕರೆಯ ಮೇರೆಗೆ ರಜಾ ಹಾಕಿ ಮೈಸೂರಿಗೆ ಹೊರಟ್ಟಿದ್ದೆ. ಸಾಮಾನ್ಯವಾಗಿ ಬಸ್ ಹತ್ತಿದ ಮೇಲೆ ಟಿಕೆಟ್ ಕೊಂಡ ನಂತರ ನಾನು ಪುಸ್ತಕದಲ್ಲಿ ಮುಳುಗಿ ಹೋಗುತ್ತಿದ್ದೆ. ಆದರೆ, ಅಂದು ಆ ಕೆಲಸ ಮಾಡಲಾಗಲಿಲ್ಲ. ಆ ಡ್ರೈವರ್ ಸ್ವಲ್ಪ ವಿಚಿತ್ರದ ವ್ಯಕ್ತಿ, ಯದ್ವಾತದ್ವಾ ಗಾಡಿ ಓಡಿಸುತ್ತಿದ್ದ. ಎರಡು ಮೂರು ಬಾರಿ ಜೋರಾಗಿ ಬ್ರೇಕ್ ಹಾಕಿ ಜನರನ್ನು ಗಾಬರಿಪಡಿಸಿದ್ದ. ಒಮ್ಮೆಯಂತೂ ಇನ್ನೇನು ಎದುರಿಗೆ ಬರುತ್ತಿದ್ದ ಲಾರಿಯನ್ನು ಹೊಡೆದೇ ಬಿಡುತ್ತಾನೇನೋ ಎಂಬಂತೆ ಹೋದ. ಜನರೆಲ್ಲಾ ಬೈದ ಮೇಲೆ ನಿಧಾನವಾಗಿ ಹೋಗಲಾರಂಭಿಸಿದ. 
ಈ ಎಲ್ಲ ಗಲಾಟೆಯ ನಡುವೆ ಓದುವುದು ಹೇಗೆ? ನಿದ್ರೆ ಮಾಡಲು ಪ್ರಯತ್ನಿಸಿದೆ. ಜೋಂಪು ಹತ್ತಿತ್ತು. ಇದ್ದಕ್ಕಿದ್ದಂತೆ ಗಾಡಿ ನಿಂತಂತಾಯಿತು. ಮತ್ತೆ ‘ಏನಾಯ್ತಪ್ಪಾ ಇವನಿಗೆ’ ಎಂದುಕೊಂಡು ಕಣ್ಣು ಬಿಟ್ಟು ನೋಡಿದೆ. ಏನೂ ಗೊತ್ತಾಗಲಿಲ್ಲ. ಮುಂದೆ ಸಾಲಾಗಿ ವಾಹನಗಳು ನಿಂತಿದ್ದವು. ಡ್ರೈವರ್ ಕೆಳಗೆ ಇಳಿದು ಹೋದ. ‘ಏನಾಯ್ತು, ಏನಾಯ್ತು?’ ಎಲ್ಲಾ ಕಡೆಗಳಿಂದಲೂ ಪ್ರಶ್ನೆಗಳೇ. ಕೆಲವು ಪ್ರಯಾಣಿಕರು ಕೆಳಗಿಳಿದು ಹೋದರು.
ಸ್ವಲ್ಪ ಸಮಯದ ನಂತರ ಒಬ್ಬಾತ ಬಸ್ ಒಳಗೆ ಬಂದು, “ಏನೊ, ವಿದ್ಯಾರ್ಥಿಗಳ ಸ್ಟ್ರೈಕ್ ಅಂತೆ. ಅರ್ಧ ಘಂಟೆಯಿಂದಲೂ ರಸ್ತೆಯ ಮೇಲೆ ಕುಳಿತಿದ್ದಾರಂತೆ” ಎಂದ.
“ಏನಂತೆ ಸಮಾಚಾರ? ಎಷ್ಟೊತ್ತಾಗುತ್ತಂತೆ?” ಯಾರದೊ ಪ್ರಶ್ನೆ.
“ಈ ಹುಡುಗ್ರಿಗೆ ಮಾಡೋಕೆ ಬೇರೆ ಕೆಲಸವಿಲ್ಲ. ಮನೇಲಿ ಚೆನ್ನಾಗಿ ಹಾಕಿ ಕಳಿಸಿ ಬಿಡ್ತಾರೆ” ಮಧ್ಯ ವಯಸ್ಸಿನ ಮಹಿಳೆಯೊಬ್ಬಳ ಉವಾಚ.
“ಹೇಳೋರೊ ಕೇಳೋರು ಯಾರೂ ಇಲ್ಲ ಇವರಿಗೆ. ನಮ್ಮ ಕಾಲದಲ್ಲಿ ಹೇಗಿತ್ತು?” ಮುದುಕರೊಬ್ಬರ ದನಿ.
ಸುಮಾರು 60 ವರ್ಷದ ಮಹಿಳೆಯೊಬ್ಬರು, “ಅಯ್ಯೊ, ಇದಕ್ಕೆ ನಮ್ಮೆಜಮಾನ್ರು ಹೇಳಿದ್ದು ನೀನೊಬ್ಬಳೇ ಹೋಗಬೇಡಾಂತ. ದೇವ್ರೆ ಈಗೇನು ಮಾಡೋದು” ಆಕಾಶಾನೇ ಕಳಚಿಬಿದ್ದಂತೆ ಅಳಲಾರಂಭಿಸಿದರು.
ನಗುನಗುತ್ತಾ ಆಟವಾಡುತ್ತಿದ್ದ ಮಗುವನ್ನು ತೋರಿಸಿ, “ಇದು ಹಾಲು ಬೇಕೂಂತ ಹಠ ಮಾಡಿದ್ರೆ ಏನು ಮಾಡ್ಲಪ್ಪಾ?” ನಿಟ್ಟುಸಿರು ಇನ್ನೊಬ್ಬ ಮಹಿಳೆಯದು.
“ಇಂದು ಆಫೀಸಿಗೆ ಗೋವಿಂದಾ. ಇವಕ್ಕಂತು ಬೇರೆಯವರ ಕಷ್ಟ ಅರ್ಥವೇ ಆಗೋದಿಲ್ಲ. ಇವನ್ನಂದು ಏನು ಪ್ರಯೋಜನ? ಏನು ಅಪ್ಪ-ಅಮ್ಮಂದಿರೋ, ಮಕ್ಕಳಿಗೆ ಸರಿಯಾಗಿ ಬುದ್ಧಿ ಕಲಿಸಲಿಲ್ಲ” ಠಾಕುಠೀಕಾಗಿದ್ದ ವ್ಯಕ್ತಿಯೊಬ್ಬರ ಹೇಳಿಕೆ.
ಎಲ್ಲಾ ಕಡೆಗಳಿಂದಲೂ ಇಂತಹುದೆ ಮಾತುಗಳು, ಹಲವರ ಶಾಪಗಳು. ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ನನಗೆ ವಿದ್ಯಾರ್ಥಿಗಳ ಬಗ್ಗೆ ಅವರೆಲ್ಲ ಹೇಳುತ್ತಿದ್ದ ಮಾತುಗಳನ್ನು ಒಪ್ಪಿಕೊಳ್ಳಲು ಕಷ್ಟವಾಯಿತು. ಎಲ್ಲಾ ಸಮಯದಲ್ಲೂ, ವಿನಾಕಾರಣ ವಿದ್ಯಾರ್ಥಿಗಳು ಇತರರಿಗೆ ತೊಂದರೆ ಕೊಡುತ್ತಾರೆ ಎಂಬ ತೀರ್ಮಾನಕ್ಕಂತೂ ನಾನು ಬರಲು ಸಾಧ್ಯವಿರಲಿಲ್ಲ. ಏನೋ ಕಾರಣವಿರಲೇಬೇಕು. ಆದರೆ ಈಗಂತೂ ಅದರ ಬಗ್ಗೆ ಯಾರನ್ನು ಕೇಳುವುದು. ಹೋಗಲಿ ಕಾಲ ಕಳೆಯಲು ಪುಸ್ತಕವನ್ನಾದರೂ ಓದೋಣ ಎಂದುಕೊಂಡು ಪುಸ್ತಕ ತೆರೆದೆ.
ಇದ್ದಕ್ಕಿದ್ದಂತೆ ಬಸ್‍ನಲ್ಲಿ ಮೌನ ಆವರಿಸಿತು. ಇದ್ದಕ್ಕಿದ್ದಂತೆ ಏನಾಯ್ತಪ್ಪಾ ಎಂದುಕೊಂಡು ಪುಸ್ತಕದಿಂದ ತಲೆ ಎತ್ತಿದೆ. ಎಲ್ಲರೂ ಭಯಭೀತರಂತೆ ಕಾಣಿಸುತ್ತಿದ್ದರು.
“ಅಯ್ಯೋ ಆ ಹುಡುಗ್ರು ಈ ಕಡೆ ಬರ್ತಾ ಇದ್ದಾರೆ. ಕಲ್ಲೇನಾದ್ರೂ ತೂರ್ತಾರೇನೊ.” ಆ ಕಡೆ ತಿರುಗಿದೆ. ಸಮಾರು 7-8 ಹುಡುಗರು ಬರ್ತಿದ್ರು. ಅವರ ಜೊತೆಗೆ 7-8 ಹುಡುಗಿಯರು. ಬಸ್ ಹತ್ತಿ ಒಳಗೆ ಬಂದರು. ಎರಡು ಮೂರು ದಿನಗಳಿಂದ ಸರಿಯಾದ ನಿದ್ರಾಹಾರಗಳು ಇಲ್ಲದಂತೆ ಕಂಡಂತಹ ಓರ್ವ ವಿದ್ಯಾರ್ಥಿ ಮುಂದೆ ಬಂದ. ಉಳಿದವರೆಲ್ಲಾ ಅಲ್ಲಲ್ಲೇ ನಿಂತರು.
“ನಾಗರಿಕರೇ” ಒಡೆದ ಕಂಠದಿಂದ ಮಾತನಾಡಲಾರಂಭಿಸಿದ. ಅದೆಷ್ಟು ಜನರೊಂದಿಗೆ ಮಾತನಾಡಿದ್ದನೊ? “ನಾವು ಬಸ್ ತಡೆದಿರುವುದರಿಂದ ನಿಮಗೆಲ್ಲಾ ಬೇಸರವಾಗಿದೆ, ಕಷ್ಟವಾಗಿದೆ ಎಂಬುದು ನಮಗೆ ಗೊತ್ತು. ಆದರೆ ನಮಗೆ ಈ ದಾರಿ ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ.”
“ಈಗಾಗಲೇ ನಿಮ್ಮ ಈ ರೀತಿಯಿಂದ ನಮಗೆ ಬೇಸರವಾಗಿದೆ. ಈಗ ಮಾತನಾಡಿ ಬೋರ್ ಹೊಡೆಸಬೇಡಯ್ಯಾ.” ಯಾರೊ ಹಿಂದಿನಿಂದ ಕಿರುಚಿದರು.
“ನೋಡಿ” ಬೇಸರ ಮಾಡಿಕೊಳ್ಳದೆ ಆತ ಮುಂದುವರೆಸಿದ, “ನಮ್ಮ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕೇವಲ ಆರು ತಿಂಗಳ ಹಿಂದೆ ಮದುವೆಯಾಗಿದ್ದಳು.”
“ಅದಕ್ಕೆ ನಾವೇನು ಮಾಡಬೇಕಯ್ಯಾ?” ಯಾರದೋ ಅಣಕ.
“ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಳ್ತೀರಾ.” ಹಿಂದೆ ನಿಂತಿದ್ದ ವಿದ್ಯಾರ್ಥಿಯೊಬ್ಬನ ಗದರಿಕೆ. ಎಲ್ಲಾ ಗಪ್‍ಚಿಪ್.
ಆ ವಿದ್ಯಾರ್ಥಿ ಮಾತನ್ನು ಮುಂದುವರೆಸಿದ, “ಮೂರು ದಿನಗಳ ಹಿಂದೆ ಅವಳ ಗಂಡನ ಮನೆಯವರು ಅವಳನ್ನು ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ. ಆದ್ರೆ
ಪೋಲೀಸ್ನೋರು ಆ ಕೊಲೆಪಾತಕರನ್ನು ಅರೆಸ್ಟ್ ಮಾಡಿಲ್ಲ. ಅದಕ್ಕೆ ಈ ಮುಷ್ಕರ.”
“ಅವಳೇನು ನಿನ್ನ ತಂಗಿಯೇನಯ್ಯಾ?” ಆ ಘಳಿಗೆಯಲ್ಲೂ ಯಾರದೊ ಕುಹಕ.
“ಹೌದು ಸರ್, ಆದರೆ ಒಡಹುಟ್ಟಿದವಳಲ್ಲ” ಆ ವಿದ್ಯಾರ್ಥಿಯ ಶಾಂತ ಉತ್ತರ.
“ಈ ಘಟನೆ ಯಾರ ಮನೆಯಲ್ಲಿ ಬೇಕಾದರೂ ನಡೆಯಬಹುದು. ಮಾನವೀಯತೆ ಇರುವ ಯಾರೂ ಇಂತಹುದನ್ನು ಸಹಿಸಬಾರದು. ಅದಕ್ಕೆ ಈ ಪ್ರತಿಭಟನೆ. ದಯವಿಟ್ಟು ಇದನ್ನು ಅರಿತು ನಮ್ಮೊಂದಿಗೆ ಸಹಕರಿಸಿ” ಎನ್ನುತ್ತಾ ಆ ವಿದ್ಯಾರ್ಥಿ ಕೆಳಗಿಳಿದು ಹೋದ.
ಇತರರೂ ಆತನನ್ನು ಅನುಸರಿಸಿದರು.
ಎರಡು ಘಂಟೆಯಾದ ನಂತರ ಡ್ರೈವರ್ ಗಾಡಿ ಹತ್ತಿ ಸ್ಟಾರ್ಟ್ ಮಾಡಿದ.
“ಏನಾಯ್ತು?” ಯಾರೊ ಕೇಳಿದರು.
“ಎಂಎಲ್‍ಎ ಬಂದಿದ್ದ. ಪೋಲಿಸ್ನೋರು ಬಂದಿದ್ರು. ಅವರನ್ನು ಅರೆಸ್ಟ್ ಮಾಡ್ತೀವಿ ಎಂದ್ರು. ಆದರೆ ಆ ಹುಡುಗ್ರು ಭಾಳಾ ಗಟ್ಟಿಗರು. ಅರೆಸ್ಟ್ ಮಾಡೋವರೆಗೂ ಬಿಡಲಿಲ್ಲ. ಜೊತೆಗೆ ಇಲ್ಲಿ ಮಾತನಾಡಿದನಲ್ಲ ಆ ಹುಡ್ಗ, ಅವನೇ ನಾಯಕ ಇರಬಹುದು, ಅವನು ಈ ಹೋರಾಟ ಕೇಸ್ ಮುಗಿಯುವವರೆಗೂ ಮುಂದುವರೆಯಬೇಕು, ಮುಂದಿಟ್ಟ ಹೆಜ್ಜೆ ಹಿಂದಿಡಬಾರದು ಎಂದು ಹೇಳುತ್ತಿದ್ದ.” ಡ್ರೈವರ್ ವರ್ಣಿಸಿದ.
ತಮ್ಮ ಓದಿಗಾಗಿ, ತಮಗಾಗಿಯಲ್ಲದೆ ಇನ್ನಾರಿಗಾಗೊ ಬೀದಿಗಿಳಿದ ಆ ಹುಡುಗರನ್ನು ನೆನೆಸಿಕೊಂಡು ಹೃದಯ ತುಂಬಿ ಬಂತು.
“ನಿಮ್ಮ ಪೀಳಿಗೆ ಹೆಚ್ಚಾಗಲಿ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಪ್ಪ” ಹರಸಿದರು ಹಿರಿಯರೊಬ್ಬರು.
ಮೈಸೂರು ತಲುಪುವವರೆಗೂ ಡ್ರೈವರ್ ಆ ಹುಡುಗರನ್ನು ಹೊಗಳುತ್ತಾ ಬಾಯಿಗೆ ಒಂದು ಕ್ಷಣವೂ ಬಿಡುವು ಕೊಡದಂತೆ ಕೆಲಸ ಕೊಟ್ಟಿದ್ದ.

- ಸುಧಾ ಜಿ   

ಅನುವಾದಿತ ಕಥೆ - ರಷ್ಯನ್ ಗುಣ



ರಷ್ಯನ್ ಗುಣ! ಬಹುಶಃ ಅಷ್ಟೇನೂ ದೊಡ್ಡದಲ್ಲದ ಕಥೆಗೆ ತುಂಬಾ ದೊಡ್ಡ ಹೆಸರು. ಆದರೆ ನೋಡಿ, ನಾನು ಹೇಳಬೇಕೆಂದಿರುವ ರಷ್ಯನ್ ಗುಣ ಅಡಗಿರುವುದೇ ಅಲ್ಲಿ.
ಹೌದು, ರಷ್ಯನ್ ಗುಣ-ನಿಮಗೆ ಸಾಧ್ಯವಾದರೆ ವಿವರಿಸಿ ನೋಡೋಣ! ನಾನು ದೇಶಪ್ರೇಮಿ ಯುದ್ಧದಲ್ಲಿ, ಅಂದರೆ ಎರಡನೆ ವಿಶ್ವಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ರಷ್ಯನ್ನರ ಅನೇಕ ಸಾಹಸಕಾರ್ಯಗಳ ಬಗ್ಗೆ ಹೇಳಬಲ್ಲೆ; ಆದರೆ ಅವುಗಳು ಅದೆಷ್ಟಿವೆಯೆಂದರೆ, ಅದರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಅನ್ನುವುದರಲ್ಲಿ ಸೋತು ಹೋಗುತ್ತೇನೆ. ನನ್ನ ಅದೃಷ್ಟ. ನನ್ನ ಗೆಳೆಯ ನೆರವಿಗೆ ಬಂದ; ತನ್ನ ಸ್ವಂತ ಕಥೆಯೊಂದಿಗೆ. ಅವನ ಎದೆಯ ಮೇಲೆ ಚಿನ್ನದ ನಕ್ಷತ್ರ ಮತ್ತು ಪದಕಗಳ ಸರಮಾಲೆಯೇ ಇದ್ದರೂ ಸಹ ಅವನ ಮಹಾಸಾಹಸದ ಕೆಲಸಗಳ ಬಗ್ಗೆ ಹೇಳುವುದಿಲ್ಲ. ನಿಜ ಹೇಳಬೇಕೆಂದರೆ, ಅವನೊಬ್ಬ ಸರಳ, ಶಾಂತ ಸ್ವಭಾವದ ಸಾಮಾನ್ಯ ಮನುಷ್ಯ; ಸರತೊವ್ ಪ್ರದೇಶದ ವೋಲ್ಗಾ ನದಿದಂಡೆಯ ಮೇಲಿರುವ ಹಳ್ಳಿಯ ಸಾಮೂಹಿಕ ಕೃಷಿಕ್ಷೇತ್ರದ ರೈತ. ಆದರೆ ಆಜಾನುಬಾಹು ವ್ಯಕ್ತಿ ಮತ್ತು ನೋಡಲು ಸುಂದರ ಕೂಡ; ಹಾಗಾಗಿ ನಮ್ಮ ಜೊತೆ ಇದ್ದಾಗ ಎದ್ದುಕಾಣುತ್ತಿದ್ದನು. ಅವನು ಸೈನ್ಯದ ಟ್ಯಾಂಕ್‍ನ ಬುರುಜಿನಿಂದು ಇಳಿದು ಬರುವುದನ್ನು ನೋಡುವುದೇ ಚಂದ; ಅವನಿಂದ ಕಣ್ಣು ಕೀಳಲು ಸಾಧ್ಯವೇ ಇಲ್ಲ. ಅವನು ಟ್ಯಾಂಕಿನಿಂದ ನೆಲಕ್ಕೆ ಜಿಗಿದು, ಹೆಲ್ಮೆಟ್ ತೆಗೆದು ಬೆವರಿನಿಂದ ಒದ್ದೆಯಾದ ಕೂದಲನ್ನು ಸ್ವತಂತ್ರಗೊಳಿಸುತ್ತಾ, ಚಿಂದಿಬಟ್ಟೆ ತೆಗೆದುಕೊಂಡು ಮಸಿಯಾದ ಮುಖವನ್ನು ಒರೆಸುಕೊಳ್ಳುವನು; ಮತ್ತೆ, ಆತ ಯಾವಾಗಲೂ ಮಾಡುತ್ತಿದ್ದಂತೆ, ಕೇವಲ ಜೀವಂತವಾಗಿರುವ ಸಂತೋಷಕ್ಕೇ ನಗುತ್ತಿದ್ದನು.
ಯಾರೇ ಆಗಲಿ, ಯುದ್ಧದಲ್ಲಿರುವಾಗ, ಸದಾ ಸಾವನ್ನು ಎದುರಿಸುತ್ತಿರುವಾಗ ಸಾಧಾರಣ ವ್ಯಕ್ತಿತ್ವಕ್ಕಿಂತ ಮೇಲೇರುತ್ತಾನೆ. ಬಿಸಿಲಿಗೆ ಬೆಂದ ಚರ್ಮದಿಂದ ಒಣಚರ್ಮ ಉದುರಿಹೋಗುವಂತೆ, ಅವನಲ್ಲಿದ್ದ ಬೇಡವಾದದ್ದೆಲ್ಲಾ ಹೋಗಿ ತಿರುಳು ಮಾತ್ರ, ನಿಜವಾದ ಮನುಷ್ಯ ಮಾತ್ರ ಉಳಿಯುತ್ತಾನೆ.  ನಿಜ, ಆ ತಿರುಳು ಕೆಲವರಲ್ಲಿ ಇತರರಿಗಿಂತ ಹೆಚ್ಚು ಗಟ್ಟಿಯಾಗಿರುತ್ತದೆ; ಆದರೆ ಕೆಲವು ದೋಷಗಳಿಂದ ಕೂಡಿದ ವ್ಯಕ್ತಿಯೂ ಸಹ ಗಟ್ಟಿ ವ್ಯಕ್ತಿತ್ವ ಗಳಿಸಿಕೊಳ್ಳಲು ಕಷ್ಟಪಡುತ್ತಾನೆ; ಏಕೆಂದರೆ ಎಲ್ಲರಿಗೂ ತಾನೊಬ್ಬ ಒಳ್ಳೆಯ ಮತ್ತು ನಿಷ್ಠಾವಂತ ಕಾಮ್ರೇಡ್ ಆಗಬೇಕೆಂಬ ಬಯಕೆಯಿರುತ್ತದೆ. ಆದರೆ ನನ್ನ ಗೆಳೆಯ ಯೆಗೊರ್ ದ್ರೊಮೊವ್ ಯುದ್ಧಕ್ಕೆ ಮುಂಚಿನಿಂದಲೂ ತನ್ನ ನೀತಿ, ನಡೆಗಳಲ್ಲಿ ಬಹಳ ಕಟ್ಟುನಿಟ್ಟು; ಆತನಿಗೆ ತನ್ನ ತಾಯಿ ಮರಿಯಾ ಪೊಲಿಕರ್ಪೊವ್ನಾ ಮತ್ತು ತಂದೆ ಯೆಗೊರ್ ಯೆಗೊರೊವಿಚ್ ಬಗ್ಗೆ ಅಪಾರವಾದ ಗೌರವ. ಆತ ಯಾವಾಗಲೂ ಹೇಳುತ್ತಿದ್ದ, ‘ನನ್ನ ತಂದೆ ಬಹಳ  ಗೌರವಸ್ಥ. ಅವರನ್ನು ನೋಡಿದರೆ ನಿಮಗೆ ಮೊದಲು ಬರುವ ಅನಿಸಿಕೆಯೆಂದರೆ, ಅವರು ತುಂಬಾ ಸ್ವಾಭಿಮಾನಿ.’ ಯೆಗೊರ್‍ಗೆ ಅವರು ಹೇಳುತ್ತಿದ್ದರಂತೆ, ‘ನೋಡು ಮಗು, ನೀನು ಪ್ರಪಂಚದಲ್ಲಿ ಸಾಕಷ್ಟು ವಿಷಯಗಳನ್ನು ನೋಡುವೆ. ನೀನು ವಿದೇಶಕ್ಕೂ ಹೋಗಬಹುದು. ಆದರೆ ನೀನು ರಷ್ಯನ್ ಆಗಿರುವುದಕ್ಕೆ ಹೆಮ್ಮ ಪಡು, ಆ ಹೆಮ್ಮೆ ಸದಾ ನಿನ್ನಲ್ಲಿರಲಿ.’
ನಮ್ಮ ಯೆಗೊರ್ ವೊಲ್ಗಾ ನದಿದಂಡೆಯ ಮೇಲಿರುವ ಅದೇ ಹಳ್ಳಿಯ ಹುಡುಗಿಯನ್ನು ಮದುವೆಯಾಗಲಿದ್ದ. ನಮ್ಮ ಹುಡುಗರು ತಮ್ಮ ಹುಡುಗಿಯರ ಬಗ್ಗೆ, ಹೆಂಡತಿಯರ ಬಗ್ಗೆ ಮಾತನಾಡುತ್ತಿರುತ್ತಾರೆ; ಅದರಲ್ಲೂ ರಣರಂಗ ಶಾಂತವಾಗಿದ್ದಾಗ, ಚಳಿಯಿದ್ದು ಊಟ ಮಾಡಿದ ಮೇಲೆ ಬೆಂಕಿ ಕಾಯಿಸುತ್ತಾ ಕುಳಿತಿದ್ದಾಗ ಅಂತಹ ಮಾತುಕತೆ ನಡೆಯುತ್ತಿರುತ್ತದೆ. ಕೆಲವೊಮ್ಮೆ ಅವರಾಡುವ ಮಾತುಗಳು ನಿಮ್ಮ ಕಿವಿಗಳನ್ನು ಚುರುಕುಗೊಳಿಸುತ್ತವೆ. ಉದಾಹರಣೆಗೆ: ಅವರಲ್ಲೊಬ್ಬ ಶುರು ಮಾಡುತ್ತಾನೆ; “ಪ್ರೀತಿಯೆಂದರೇನು?” “ಪ್ರೀತಿಯೆನ್ನುವುದು ಗೌರವದಿಂದ ಹುಟ್ಟುವಂತಹುದು” ಎನ್ನುತ್ತಾನೆ ಇನ್ನೊಬ್ಬ. ಮತ್ತೊಬ್ಬನ ಮಾತು: “ಆ ಥರ ಏನೂ ಇಲ್ಲ. ಪ್ರೀತಿ ಅನ್ನೋದು ಒಂದು ಅಭ್ಯಾಸ, ಅಷ್ಟೆ. ಒಬ್ಬ ಮನುಷ್ಯ ತನ್ನ ಹೆಂಡತೀನ ಮಾತ್ರ ಪ್ರೀತಿ ಮಾಡಲ್ಲ. ತನ್ನ ತಂದೆ ತಾಯೀನೂ ಪ್ರೀತಿಸ್ತಾನೆ. ಪ್ರಾಣಿಗಳನ್ನೂ ಸಹ ಪ್ರೀತಿಸ್ತಾನೆ.” ಮೂರನೆಯವನು ಹೇಳುತ್ತಾನೆ: “ನಾನು ಹೇಳಿದ್ದು ಕೇಳಿ ಸಿಟ್ಟು ಬಂದರೆ, ಬೇಕಾದ್ರೆ ನನಗೆ ಒದ್ದುಬಿಡಿ, ನಾನೊಬ್ಬ ಮುಠ್ಠಾಳ. ನೋಡಿ, ಒಬ್ಬ ಮನುಷ್ಯ ಪ್ರೀತಿಯಲ್ಲಿ ಬಿದ್ದಾ ಅಂದ್ರೆ, ಅವನ ಎದೆ ಡವಡವ ಹೊಡೆದುಕೊಳ್ಳುತ್ತೆ. ಒಳ್ಳೆ ಕುಡಿದವರ ಥರ ಆಡ್ತಾನೆ.” ಅವರು ಒಂದೆರೆಡು ಗಂಟೆಗಳವರೆಗೂ ಅಥವಾ ಸಾರ್ಜೆಂಟ್ ಮೇಜರ್ ಬಂದು ತನ್ನ ಅಧಿಕಾರಯುತವಾದ ವಾಣಿಯಿಂದ ವಿಷಯಗಳ ಒಳಹೊಕ್ಕು ಚರ್ಚೆ ಮಾಡುವವರೆಗೂ ಮಾತುಕತೆಯನ್ನು ನಡೆಸುತ್ತಿರುತ್ತಾರೆ.
ಯೆಗೊರ್ ದ್ರೊಮೊವ್‍ಗೆ ಇಂತಹ ಮಾತುಕತೆಗಳಿಂದ ಇರುಸುಮುರುಸಾಗುತ್ತಿತ್ತು; ಅದಕ್ಕೇ ತನ್ನ ಹುಡುಗಿಯ ಬಗ್ಗೆ ಕೆಲವು ಸೂಚನೆಗಳನ್ನು ಮಾತ್ರ ನೀಡಿದ್ದನು. ‘ಅವಳು ತುಂಬಾ ಒಳ್ಳೆಯ ಹುಡುಗಿ; ಅವಳು ನನಗಾಗಿ ಕಾಯುತ್ತೇನೆ  ಎಂದರೆ, ನಾನು ಒಂಟಿ ಕಾಲಲ್ಲಿ ಬಂದರೂ ನನಗಾಗೇ ಕಾಯುತ್ತಿರುತ್ತೇನೆ ಎಂದರ್ಥ’ ಎಂದು ಹೇಳುತ್ತಿದ್ದನು.
ಅವನಿಗೆ ತನ್ನ ಯುದ್ಧ ಸಾಹಸಗಳ ಬಗ್ಗೆಯೂ ಮಾತನಾಡಲು ಅಷ್ಟೇನೂ ಆಸಕ್ತಿಯಿರಲಿಲ್ಲ. “ಅವುಗಳನ್ನು ನೆನಪಿಸಿಕೊಳ್ಳಲು ಇಷ್ಟವಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸುತ್ತಾ, ಸಿಗರೇಟನ್ನು ಜೋರಾಗಿ ಎಳೆಯುತ್ತಿದ್ದನು. ನಮಗೆ ಅವನ ಟ್ಯಾಂಕ್ ನಡೆಸಿದ ದಾಳಿಗಳ ಕಥೆಯನ್ನು ಅವನ ಪಡೆಯವರಿಂದ ಕೇಳಿ ತಿಳಿದುಕೊಂಡೆವು. ಟ್ಯಾಂಕ್ ಚಾಲಕ ಚುವಿಲೊವ್ ಅಂತೂ ಒಂದು ಹೃದಯಸ್ಪರ್ಶಿ ಕಥೆಯೊಂದನ್ನು ಹೇಳಿದನು.
“...ನಾವು ಆಗ ತಾನೇ ತಿರುಗುತ್ತಿದ್ದೆವು. ನಾನು ಬೆಟ್ಟದ ಮೇಲೆ ಕಂಡಿದ್ದೇನು... ‘ಕಾಮ್ರೇಡ್ ಲೆಫ್ಟಿನೆಂಟ್’, ನಾನು ಕೂಗಿಕೊಂಡೆ ‘ಟ್ಯಾಂಕ್’ ಬರುತ್ತಿದೆ.’ ‘ತಡೆಯಿರಿ’ ಎಂದು ಕೂಗಿ ಹೇಳಿದರು. ನಾನು ಫರ್ ಮರಗಳ ಮಧ್ಯೆ ಮರೆಯನ್ನು ಬಳಸಿಕೊಂಡು ನುಸುಳಿಕೊಂಡು ಓಡಿದೆ. ವೈರಿಯ ಟ್ಯಾಂಕ್ ಕುರುಡನಂತೆ ತಡಕಾಡುತ್ತಾ ಬಂದು ಗುಂಡು ಹಾರಿಸಿತು, ಆದರೆ ಗುರಿ ತಪ್ಪಿತು. ಆದರೆ ನಮ್ಮ ಲೆಫ್ಟಿನೆಂಟ್ ಗುಂಡು ಹಾರಿಸಿದರು, ಆಹಾ ಅದೆಂತಹ ಹೊಡೆತ! ಫಿರಂಗಿಯ ಗೋಪುರಕ್ಕೆ ಮತ್ತೊಂದು ಹೊಡೆತ ಬಿತ್ತು ನೋಡಿ, ಟ್ಯಾಂಕ್ ತನ್ನ ಮೂತಿಯನ್ನು ಆಕಾಶಕ್ಕೆ ತಿರುಗಿಸಿಕೊಂಡು ಕೆಳಗೆ ಬಿತ್ತು. ಮೂರನೇ ಹೊಡೆತಕ್ಕೆ ಎಲ್ಲಾ ಸಂದುಗಳಿಂದಲೂ ಹೊಗೆ ಬರುವುದಕ್ಕೆ ಶುರುವಾಯಿತು. ಆಮೇಲೆ ಸುಮಾರು ಬಹಳ ಎತ್ತರಕ್ಕೆ ಬೆಂಕಿಯ ಜ್ವಾಲೆ ಎಬ್ಬಿತು. ಒಳಗಡೆಯಿದ್ದ ಪಡೆಯವರು ತಪ್ಪಿಸಿಕೊಳ್ಳಲು ಹೊರಬಂದರು. ಅವರನ್ನೆಲ್ಲಾ ನಮ್ಮ ಇವಾನ್ ಲ್ಯಾಪ್‍ಶಿನ್‍ನ ಮೆಶೀನ್‍ಗನ್ ಹೊಡೆದುರುಳಿಸಿತು... ಸರಿ ಅದು ನಮ್ಮ ದಾರಿಯನ್ನು ಸುಗಮಗೊಳಿಸಿತು. ಐದೇ ನಿಮಿಷದಲ್ಲಿ ನಾಜಿಗಳಿದ್ದ ಹಳ್ಳಿಗೆ ನುಗ್ಗಿದೆವು. ಎಂಥಾ ತಮಾಷೆ! ಅಲ್ಲಿ ನಾಜಿಗಳೆಲ್ಲಾ ದಿಕ್ಕಾಪಾಲಾಗಿ ಓಡಿದರು. ಅಲ್ಲೆಲ್ಲಾ ಕೆಸರಿತ್ತು. ಅವರ ಬೂಟುಗಳು ಸಿಕ್ಕಿಕೊಂಡವು. ಅವರು ಬರಿ ಸಾಕ್ಸ್‍ನಲ್ಲಿ ಕುಂಟುತ್ತಾ ಕಣಜದ ಕಡೆಗೆ ಓಡಿದರು. ಮತ್ತೆ, ಕಾಮ್ರೇಡ್ ಲೆಫ್ಟಿನೆಂಟ್ ಆಜ್ಞೆ ನೀಡಿದರು: “ಕಣಜವನ್ನು ಉಡಾಯಿಸಿ.” ನಾವು ಗನ್‍ಗಳನ್ನು ತಿರುಗಿಸಿಕೊಂಡು ಅದರೊಳಗೆ ನುಗ್ಗಿದೆವು. ಗುರ್ರ್!  ಅಲ್ಲಿದ್ದ ತೊಲೆಗಳು, ಇಟ್ಟಿಗೆಗಳು, ಹಲಗೆಗಳು ನಮ್ಮ ಮೇಲೆ ಕುಸಿದು ಬೀಳುತ್ತಿದ್ದವು; ಜೊತೆಗೆ ಮಹಡಿಯೇರುತ್ತಿದ್ದ ನಾಜಿಗಳೂ ಸಹ. ನಾನು ಅಲ್ಲೆಲ್ಲಾ ಸುತ್ತಾಡಿಕೊಂಡು ಇಡೀ ಸ್ಥಳವನ್ನು ತೊಳೆಯಲು ಒಳಗಡೆ ಹೋದೆ. ಉಳಿದವರೆಲ್ಲಾ ಕೈಯನ್ನು ಮೇಲಕ್ಕೆತ್ತಿ ಕೂಗಿದರು, “ಹಿಟ್ಲರ್ ಸತ್ತ.”
ಲೆಫ್ಟಿನೆಂಟ್ ಯೆಗೊರ್ ದ್ರೊಮೊವ್ ಹೀಗೆಯೇ ಹೋರಾಡುತ್ತಿದ್ದುದು, ದುರದೃಷ್ಟದ ಹೊಡೆತ ಬೀಳುವವರೆಗೂ. ಸ್ವಲ್ಪ ಕಾಲವಾದ ಮೇಲೆ ಕಸ್ರ್ಕ್ ಯುದ್ಧದ ಸಮಯದಲ್ಲಿ, ಜರ್ಮನ್ನರನ್ನು ಮೂಲೆಗೆ ಒತ್ತರಿಸಲಾಗಿತ್ತು. ಅವರು ಹಿಂದೆ ಹಿಂದೆ ಸರಿಯುತ್ತಿದ್ದರು. ಆಗ ಗುಡ್ಡದ ಮೇಲೆ ನಿಲ್ಲಿಸಿದ್ದ ದ್ರೊಮೊವ್‍ನ ಟ್ಯಾಂಕ್‍ಗೆ ಶೆಲ್ ಬಡಿಯಿತು; ಇಬ್ಬರು ಸೈನಿಕರು ಸ್ಥಳದಲ್ಲೇ ಸತ್ತರು. ಇನ್ನೊಂದು ಶೆಲ್ ಬೆಂಕಿ ಹತ್ತಿಸಿತು. ಮುಂದಿನ ಸಂದಿಯಿಂದ ತಪ್ಪಿಸಿಕೊಂಡ ಡ್ರೈವರ್ ಚುವಿಲೊವ್, ತಕ್ಷಣವೇ ಟ್ಯಾಂಕ್ ಮೇಲುಗಡೆ ಹತ್ತಿ, ಲೆಫ್ಟಿನೆಂಟ್ ಅನ್ನು ಹೇಗೋ ಹೊರತರುವಲ್ಲಿ ಯಶಸ್ವಿಯಾದ. ಲೆಫ್ಟಿನೆಂಟ್‍ಗೆ ಜ್ಞಾನ ತಪ್ಪಿತ್ತು; ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಒಂದು ಸಿಡಿತ ಟ್ಯಾಂಕ್ ಅನ್ನು ನುಚ್ಚುನೂರಾಗಿಸಿತು ಮತ್ತು ಅದರ ಮೇಲ್ಭಾಗವನ್ನು ಸುಮಾರು ಐವತ್ತು ಅಡಿಗಳಷ್ಟು ದೂರ ಎಸೆದಿತ್ತು; ಅಷ್ಟರೊಳಗೆ ಚುವಿಲೊವ್ ಲೆಫ್ಟಿನೆಂಟ್ ಅನ್ನು ದೂರ ಎಳೆದುಕೊಂಡು ಬಂದಿದ್ದ. ಅವನ ಮುಖದ ಮೇಲೆ ಮಣ್ಣನ್ನು ಸುರಿದ ಮತ್ತು ಬಟ್ಟೆಯಿಂದ ಬೆಂಕಿಯನ್ನು ನಂದಿಸಿದ; ಪ್ರಥಮ ಚಿಕಿತ್ಸೆಯ ಕೇಂದ್ರ ಸಿಗುವವರೆಗೂ ಅವನನ್ನು ಎಳೆದುಕೊಂಡು ಹೋದ. ಆಮೇಲೆ ಚುವಿಲೊವ್ ಹೇಳುತ್ತಿದ್ದ: “ನಾನೇಕೆ ಹಾಗೆ ಮಾಡಿದೆ? ಬಹುಶಃ ಅವನ ಹೃದಯ ಬಡಿದುಕೊಳ್ಳುತ್ತಿದ್ದುದನ್ನು ಕೇಳಿದೆ ಅನ್ಸುತ್ತೆ.” 
ಯೆಗೊರ್ ದ್ರೊಮೊವ್ ಬದುಕಿಕೊಂಡನು; ಅವನ ಮುಖ ಅದೆಷ್ಟು ಕೆಟ್ಟದಾಗಿ ಬೆಂದುಹೋಗಿತ್ತೆಂದರೆ ಅಲ್ಲಲ್ಲಿ ಮೂಳೆಗಳು ಎದ್ದು ಕಾಣುತ್ತಿದ್ದವು. ಅದರೂ ದೃಷ್ಟಿ ಮಾತ್ರ ಹೋಗಿರಲಿಲ್ಲ. ಅವನು ಎಂಟು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದನು. ಪ್ಲಾಸ್ಟಿಕ್ ಸರ್ಜರಿಯಿಂದ ಅವನಿಗೆ ಮೂಗು, ತುಟಿಗಳು ಹುಬ್ಬು ಮತ್ತು ಕಿವಿಗಳು ಬಂದವು. ಎಂಟು ತಿಂಗಳು ಕಳೆದ ಮೇಲೆ ಬ್ಯಾಂಡೇಜುಗಳನ್ನು ತೆಗೆದಾಗ, ಅವನು ತನ್ನ ಮುಖವನ್ನು, ಈಗ ತನ್ನದಲ್ಲದ ಮುಖವನ್ನು ಕನ್ನಡಿಯಲ್ಲಿ ನೋಡಿದನು. ಅವನಿಗೆ ಕೈಗನ್ನಡಿಯನ್ನು ಕೊಟ್ಟ ನರ್ಸ್ ಮುಖ ತಿರುಗಿಸಿಕೊಂಡು ಅತ್ತಳು. ಅವನು ಕೈಗನ್ನಡಿಯನ್ನು ವಾಪಾಸ್ ಅವಳ ಕೈಗಿಟ್ಟು ಹೇಳಿದ:
“ನನಗೆ ಇದಕ್ಕಿಂತ ಘೋರವಾದದ್ದು ಗೊತ್ತಿದೆ. ಮುಂದೆ ಸರಿ ಹೋಗುತ್ತೆ.”
ಅದರೆ ಅವನು ಮತ್ತೆಂದೂ ನರ್ಸ್‍ನನ್ನು ಕೈಗನ್ನಡಿ ಕೊಡೆಂದು ಕೇಳಲಿಲ್ಲ. ಬದಲಿಗೆ, ತನ್ನ ಮುಖಕ್ಕೆ ಹೊಂದಿಕೊಳ್ಳುತ್ತಿರುವನೇನೋ ಎನ್ನುವಂತೆ, ಮುಖವನ್ನು ಪದೆಪದೆ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದ. ಆಸ್ಪತ್ರೆಯನ್ನು ಬಿಡುವಾಗ ಅವನು ಸೇನೆಗೆ ಹೊರತಾದ ಸೇವೆಗೆ ತಕ್ಕವನೆಂದು ಹೇಳಿದರು. ಅವನು ಸೀದಾ ಜನರಲ್ ಬಳಿಗೆ ಹೋಗಿ ರೆಜಿಮೆಂಟಿಗೆ ವಾಪಾಸ್ ಬರಲು ಅನುಮತಿ ಕೇಳಿದ. “ಆದರೆ ನಿನಗೆ ಸೈನ್ಯದ ಕೆಲಸ ಆಗಲ್ಲ” ಎಂದು ಜನರಲ್ ಹೇಳಿದರು. ಅದಕ್ಕೆ ಯೊಗೊರ್ ಕೊಟ್ಟ ಉತ್ತರ: “ಇಲ್ಲ, ನಾನು ಕೈಲಾದವನಲ್ಲ. ಕುರೂಪಿ ಆಗಿದ್ದೇನೆ ನಿಜ. ಅದೇನೂ ಸಮಸ್ಯೆಯಿಲ್ಲ. ಬಹಳ ಬೇಗ ಮೊದಲಿನಂತೆ ಯುದ್ಧ ಮಾಡೋದಿಕ್ಕೆ ಆಗುತ್ತೆ.” (ಈ ಮಾತುಕತೆಯ ಸಮಯದಲ್ಲಿ ಜನರಲ್ ಮುಖ ಕೊಟ್ಟು ಮಾತನಾಡುತ್ತಿಲ್ಲ ಎನ್ನುವುದನ್ನು ಯೆಗೊರ್ ಗಮನಿಸಿದ. ಅದರಿಂದ ಕೇವಲ ನೀಲಿ ಸೀಳಿನಂತಿದ್ದ ಅವನ ಬಾಯಿಯಿಂದ ಕ್ರೂರ ನಗೆಯೊಂದು ಮೂಡಿ ಮಾಯವಾಯಿತು) ಅವನಿಗೆ ಚೇತರಿಸಿಕೊಳ್ಳಲೆಂದು ಇಪ್ಪತ್ತು ದಿನಗಳ ರಜೆ ನೀಡಿದರು. ಅವನು ತಂದೆತಾಯಿಯನ್ನು ನೋಡಲೆಂದು ಊರಿಗೆ ಹೊರಟನು. ಅದು ಕಳೆದ ಮಾರ್ಚ್‍ನಲ್ಲಿ.
ಅವನು ಊರಿಗೆ ಬಂದಿಳಿದಾಗ ಸ್ಟೇಷನ್‍ನಲ್ಲಿ ಯಾವುದಾದರೂ ಬಂಡಿ ಸಿಗಬಹುದೆಂದು ಎಣಿಸಿದ್ದ. ಮಂಜು ನೆಲವನ್ನೆಲ್ಲಾ ಆವರಿಸಿತ್ತು. ವಾತಾವರಣದಲ್ಲಿ ತೇವಾಂಶವಿತ್ತು. ರಸ್ತೆಗಳು ನಿರ್ಜನವಾಗಿದ್ದವು. ತಣ್ಣಗೆ ಕೊರೆಯುವ ಚಳಿಗಾಳಿಯು ಅವನ ಕೋಟುಗಳ ಪಟ್ಟಿಯನ್ನು ಹಾರಿಸುತ್ತಿತ್ತು; ಗಾಳಿ ಕಿವಿಯಲ್ಲಿ ಸುಯ್ಯಲಿಡುತ್ತಿತ್ತು. ಅವನು ಊರನ್ನು ತಲುಪಿದಾಗ ಕತ್ತಲು ಕವಿಯುತ್ತಿತ್ತು. ಅಲ್ಲಿ ಗಾಳಿಯಲ್ಲಿ ತೂಗಾಡುತ್ತಿದ್ದ ರಾಟೆಯಿದ್ದ ಬಾವಿಯಿತ್ತು. ಆ ಬೀದಿಯ ಕೆಳಗೆ ಹೋದರೆ ಸಿಗುವ ಆರನೇ ಮನೆಯೇ ಅವನ ತಂದೆಯ ಮನೆ. ಅವನು ಮನೆಯ ಬಾಗಿಲಿಗೆ ಬರುತ್ತಿದ್ದಂತೆಯೇ ಚಕ್ಕನೆ ನಿಂತನು. ತನ್ನ ಕೈಗಳನ್ನು ಜೇಬಿನೊಳಗೆ ತೂರಿಸಿ ತಲೆಯಲ್ಲಾಡಿಸಿದನು. ಮುಂಬಾಲಿಗೆ ಹೋಗುವ ಬದಲು ಹಿತ್ತಲ ಕಡೆಗೆ ಬಂದನು. ಮಂಜಿನೊಳಗೆ ಮೊಣಕಾಲುದ್ದ ಹೂತುಕೊಂಡ ಕಾಲುಗಳನ್ನು ಎಳದುಕೊಂಡು ಮನೆಯ ಹಿಂದಿನ ಕಿಟಕಿಯಲ್ಲಿ ಬಗ್ಗೆ ನೋಡಿದನು. ಅಲ್ಲಿ ತಾಯಿ ಕಂಡಳು. ಎಣ್ಣೆದೀಪದ ಮಂಕು ಬೆಳಕಿನಲ್ಲಿ ರಾತ್ರಿಯೂಟಕ್ಕೆ ಅಣಿಗೊಳಿಸುತ್ತಿದ್ದಳು. ಆಕೆ ಇನ್ನೂ ಅದೇ ಕಡುಬಣ್ಣದ ಶಾಲನ್ನು ತಲೆಯ ಮೇಲೆ ಹೊದ್ದಿದ್ದಳು. ಎಂದಿನಂತೆಯೇ ಶಾಂತವಾಗಿದ್ದಳು, ಆತುರವಿರಲಿಲ್ಲ ಮತ್ತು ಕರುಣಾಮಯಿಯಾಗಿದ್ದಳು. ಆದರೆ ವಯಸ್ಸಾಗಿತ್ತು. ಭುಜಗಳು ತೆಳುವಾಗಿದ್ದವು. ಇದು ಮೊದಲೇ ಗೊತ್ತಿದ್ದರೆ, ಕೆಲವೇ ಪದಗಳಾಗಿದ್ದರೂ ಸಹ ಪ್ರತಿದಿನವೂ ಪತ್ರ ಬರೆಯುತ್ತಿದ್ದೆ ಎಂದುಕೊಂಡನು. ಅವಳು ತುಂಬಾ ಸರಳವಾದ ಊಟವನ್ನು ಸಿದ್ದಪಡಿಸಿದ್ದಳು - ಒಂದು ಬೌಲ್ ಹಾಲು, ಒಂದು ತುಂಡು ಬ್ರೆಡ್ಡು, ಎರಡು ಸ್ಪೂನು ಮತ್ತು ಉಪ್ಪು. ತನ್ನ ತೆಳುವಾದ ಕೈಗಳನ್ನು ಎದೆಯ ಕೆಳಗೆ ಮಡಚಿ ಟೇಬಲ್ಲಿಗೆ ಒರಗಿಕೊಂಡು ಯಾವುದೋ ಯೋಚನೆಯಲ್ಲಿ ಮಗ್ನಳಾಗಿದ್ದಂತೆ ಕಂಡಳು. ತನ್ನ ತಾಯಿಯನ್ನು ಕಿಟಕಿಯಿಂದ ನೋಡಿದ ಮೇಲೆ ಯೆಗೊರ್‍ಗೆ ತನ್ನ ಕುರೂಪಿ ಮುಖವನ್ನು ತಾಯಿಗೆ ತೋರಿಸಿ ಹೆದರಿಸಲು ಸಾಧ್ಯವಿಲ್ಲ ಎನಿಸಿತು. ಆಕೆಯ ಮುದ್ದುಮುಖದಲ್ಲಿ ಹತಾಶೆ ಮೂಡಬಾರದೆಂದು ಅರ್ಥವಾಯಿತು.
ಅವನು ಗೇಟನ್ನು ದಾಟಿ ಅಂಗಳಕ್ಕೆ ಹೋಗಿ ಬಾಗಿಲನ್ನು ಬಡಿದ. ‘ಯಾರು’ ಎಂದು ಕೇಳಿದ ತಾಯಿಯ ಧ್ವನಿಯನ್ನು ಗುರುತಿಸಿದ. “ಲೆಫ್ಟಿನೆಂಟ್ ಗ್ರೊಮೊವ್, ಸೋವಿಯತ್ ಯೂನಿಯನ್ ಧೀರ” ಎಂದು ಉತ್ತರ ಕೊಟ್ಟ.
ಅವನ ಹೃದಯ ಅದೆಷ್ಟು ವೇಗವಾಗಿ ಬಡಿದುಕೊಳ್ಳುತ್ತಿತ್ತೆಂದರೆ, ಅವನು ಗೋಡೆಗೆ ಒರಗಿಕೊಳ್ಳಬೇಕಾಯಿತು. ಇಲ್ಲ, ಅವನ ತಾಯಿಗೆ ಇವನ ಧ್ವನಿಯ ಗುರುತು ಸಿಕ್ಕಲಿಲ್ಲ. ಆಸ್ಪತ್ರೆಯಲ್ಲಿದ್ದಾಗ ನಡೆದ ಆಪರೇಷನ್‍ಗಳಿಂದ ಅವನ ಧ್ವನಿ ಅದೆಷ್ಟು ಬದಲಾಗಿತ್ತೆಂದರೆ, ಅವನಿಗೇ ತನ್ನ ಧ್ವನಿಯನ್ನು ಮೊದಲ ಸಲ ಕೇಳಿದ ಅನುಭವವಾಯಿತು. ಅದು ಅಷ್ಟು ಗಡಸು ಮತ್ತು ಕರ್ಕಶವಾಗಿತ್ತು.
“ಏನು ಮಗೂ, ಏನು ಬೇಕು?” ಎಂದು ಕೇಳಿದಳು.
“ಅಮ್ಮಾ, ನಿಮ್ಮ ಮಗ ಸೀನಿಯರ್ ಲೆಫ್ಟಿನೆಂಟ್ ದ್ರೊಮೊವ್ ನಿಮ್ಮನ್ನು ನೋಡಿಕೊಂಡು ಬರಲು ಹೇಳಿದ್ದಾನೆ.”
ಆಗ ಆಕೆ ಬಾಗಿಲು ತೆಗೆದು ಹೋರಗೋಡಿ ಆತನ ಕೈಗಳನ್ನು ಹಿಡಿದುಕೊಂಡಳು. 
“ಅವನು ನಿಜವಾಗಿಯೂ ಬದುಕಿದ್ದಾನ, ನನ್ನ ಮಗ ದ್ರೊಮೊವ್? ಎಲ್ಲವೂ ಸರಿಯಾಗಿದೆಯಾ? ಬಾ ಒಳಗೆ, ಬಾ.”
ಯೆಗೊರ್ ದ್ರೊಮೊವ್ ಟೇಬಲ್ ಬಳಿಯಿದ್ದ ಬೆಂಚಿನ ಮೇಲೆ ಕುಳಿತುಕೊಂಡ. ಅವನು ಚಿಕ್ಕವನಿದ್ದಾಗ ಅದೇ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಿದ್ದ. ಆಗ ಕಾಲು ನೆಲಕ್ಕೆ ಸೋಕುತ್ತಿರಲಿಲ್ಲ. ಯಾವಾಗಲಾದರೊಮ್ಮೆ ಅವನ ತಾಯಿ ಗುಂಗುರು ಕೂದಲಿನಲ್ಲಿ ಬೆರಳಾಡಿಸುತ್ತಾ, “ಗುಬ್ಬಿ ಮರಿ, ಬೇಗ ತಿನ್ನು” ಎನ್ನುತ್ತಿದ್ದಳು. ಅವನು ಆಕೆಯ ಮಗನ ಬಗ್ಗೆ, ಅಂದರೆ ತನ್ನ ಬಗ್ಗೆಯೇ ಹೇಳಲಾರಂಭಿಸಿದ. ತನ್ನ ತಾಯಿಗೆ ಮಗನು ಏನನ್ನು ತಿಂದ, ಕುಡಿದ, ಕಷ್ಟಗಳಿಲ್ಲದೆ ಅದೆಷ್ಟು ಸುಖವಾಗಿದ್ದ ಎಂದು ವಿವರವಾಗಿ ಹೇಳಿದ. ಆದರೆ ತನ್ನ ಟ್ಯಾಂಕ್ ಕದನಗಳ ಬಗ್ಗೆ ಬಹಳ ಸಂಕ್ಷಿಪ್ತವಾಗಿ ಹೇಳಿ ಮುಗಿಸಿದ.
ಆಕೆ ಮಧ್ಯದಲ್ಲಿ ತಡೆದು, “ನಿಜ ಹೇಳು, ಯುದ್ಧ ಭಯಾನಕ ಅಲ್ವಾ” ಎನ್ನುತ್ತಾ ಎತ್ತಲೋ ದೃಷ್ಟಿಯಿದ್ದ ಕಣ್ಣುಗಳಿಂದ ಅವನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದಳು.
“ಹೌದಮ್ಮ, ಅದೇನೋ ನಿಜ, ಯುದ್ಧ ಭಯಾನಕವೇ. ಆದರೆ ದಿನ ಕಳೆದಂತೆಲ್ಲಾÉ ಅಭ್ಯಾಸವಾಗಿ ಹೋಗುತ್ತೆ.”
ಅಷ್ಟರಲ್ಲಿ ಅವನ ತಂದೆ ಯೆಗೊರ್ ಯೆಗೊರೊವಿಚ್ ಬಂದರು. ಅವರಿಗೂ ವಯಸ್ಸಾಗಿತ್ತು. ಅವರ ಗಡ್ಡದ ಮೇಲೆ ಹಿಟ್ಟನ್ನು ಉದುರಿಸಿದ ಹಾಗಿತ್ತು. ಅವರು ಅತಿಥಿಯನ್ನು ನೋಡುತ್ತಾ ಜೀರ್ಣವಾಗಿದ್ದ ಫೆಲ್ಟ್ ಬೂಟನ್ನು ಹೊಸಲಿಗೆ ಒಡೆದು ಮಂಜನ್ನು ಉದುರಿಸಿದರು. ನಿಧಾನವಾಗಿ ಸ್ಕಾರ್ಫ್, ಓವರ್‍ಕೋಟ್ ತೆಗೆದು, ಟೇಬಲ್ ಬಳಿ ಬಂದು ದ್ರೊಮೊವ್‍ನ ಕೈಕುಲುಕಿದರು. ಆಹಾ! ಆ ವಿಶಾಲವಾದ, ತನ್ನ ತಂದೆಯದ್ದೇ ಆದ ಕೈಗಳನ್ನು ಎಷ್ಟು ಚೆನ್ನಾಗಿ ಬಲ್ಲ! ಅವರು ಯಾವ ಪ್ರಶ್ನೆಯನ್ನು ಕೇಳಿಲಿಲ್ಲ. ಏಕೆಂದರೆ ಪದಕಗಳ ಸಾಲನ್ನೇ ಧರಿಸಿದ ಈ ವ್ಯಕ್ತಿ ಇಲ್ಲಿಗೇಕೆ ಬಂದ ಎನ್ನುವ ಪ್ರಶ್ನೆ ಕೇಳದೆಯೇ ಸ್ಪಷ್ಟವಾಗಿತ್ತು; ಕಣ್ಣನ್ನು ಅರೆಮುಚ್ಚಿ ತಾಯಿ ಮಗನ ಮಾತುಗಳನ್ನು ಕೇಳತೊಡಗಿದರು.
ತನ್ನನ್ನು ಯಾರೆಂದು ಗುರುತಿಸದೆ ಕುಳಿತುಕೊಂಡು, ಬೇರೆಯವನ ಬಗ್ಗೆಯೇನೋ ಎನ್ನುವಂತೆ ತನ್ನ ಬಗ್ಗೆ ಮಾತನಾಡುವುದು ಹೆಚ್ಚಾದಂತೆ, ನಟನೆಯನ್ನು ಬಿಟ್ಟು ಎದ್ದು ನಿಂತು, “ಅಪ್ಪಾ, ಅಮ್ಮಾ, ನನ್ನ ಮುಖ ಕುರೂಪವಾಗಿರಬಹುದು, ಆದರೆ ನನ್ನ ಗುರುತು ಹಿಡಿಯಲು ಸಾಧ್ಯವಾಗಲಿಲ್ಲವೇ” ಎಂದು ಹೇಳುವುದು ಮತ್ತಷ್ಟು ಅಸಾಧ್ಯವಾಗತೊಡಗಿತು. ತನ್ನ ತಂದೆತಾಯಿಯ ಬಳಿ ಕುಳಿತುಕೊಂಡು, ಅವನು ಸಂತೋಷ ಹಾಗೂ ನೋವು ಎರಡನ್ನೂ ಅನುಭವಿಸಿದ.
“ತಾಯಿ ಊಟ ಮಾಡೋಣ. ನಮ್ಮ ಅತಿಥಿಗೆ ಏನಾದರೂ ತಗೊಂಡು ಬಾ” ಎನ್ನುತ್ತಾ ಯೆಗೊರ್ ಯೆಗೊರೊವಿಚ್ ಕಪಾಟಿನ ಬಾಗಿಲನ್ನು ತೆರೆದರು. ಹೌದು, ಕಡ್ಡಿಪೆಟ್ಟಿಗೆಗಳಲ್ಲಿ ತುಂಬಿದ್ದ ಮೀನು ಹಿಡಿಯುವ ಹುಕ್ಕುಗಳು ಅಲ್ಲೇ ಇದ್ದವು. ಹಾಗೇ ಹಿಡಿಮುರಿದ ಟೀಪಾಟ್ ಕೂಡ ಅಲ್ಲೇ ಇತ್ತು. ಕಪಾಟಿನಿಂದ ಬ್ರೆಡ್ಡಿನ ತುಂಡುಗಳ ಮತ್ತು ಸುಲಿದ ಈರುಳ್ಳಿಯ ವಾಸನೆ ಬರುತ್ತಿತ್ತು. ಯೆಗೊರ್ ಯೆಗೊರೊವಿಚ್ ವೋಡ್ಕಾ ಇದ್ದ ಸಣ್ಣ ಬಾಟಲನ್ನು ತೆಗೆದುಕೊಂಡರು. ಅದು ಎರಡು ಗ್ಲಾಸಿಗೆ ಮಾತ್ರ ಸಾಲುವಷ್ಟಿತ್ತು. ಅವರು ನಿಟ್ಟುಸಿರು ಬಿಟ್ಟರು. ಏಕೆಂದರೆ ಅವರಿಗೆ ಕೊಡಲು ಅದಕ್ಕಿಂತ ಹೆಚ್ಚು ಇರಲಿಲ್ಲ. ಅವರೆಲ್ಲರೂ ಹಿಂದಿನ ದಿನಗಳಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ರಾತ್ರಿಯೂಟಕ್ಕೆ ಕುಳಿತರು. ತಾಯಿ ಸ್ಪೂನು ಹಿಡಿದುಕೊಂಡ ತನ್ನ ಕೈಗಳ ಚಲನೆಯನ್ನೇ ಗಮನಿಸುತ್ತಿದ್ದಾಳೆಂದು ದ್ರೊಮೊವ್‍ಗೆ ಗೊತ್ತಾದದ್ದು ಸ್ವಲ್ಪ ಹೊತ್ತಾದ ಮೇಲೆಯೇ. ಅವನು ಸಣ್ಣಗೆ ನಕ್ಕ; ಅವನ ತಾಯಿ ಕಣ್ಣುಗಳನ್ನು ಮೆಲಕ್ಕೆತ್ತಿದಳು; ಮುಖ ನೋವಿನಿಂದ ಕಂಪಿಸುತ್ತಿತ್ತು.
ಅವರು ಒಂದಲ್ಲ ಒಂದು ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಮುಂದಿನ ವರ್ಷ ವಸಂತ ಹೇಗಿರುತ್ತೆ; ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಮಾಡಲು ಸಾಧ್ಯವೇ, ಹೀಗೆ. ಈ ಬೇಸಿಗೆಯೊಳಗೆ ಯುದ್ಧ ಮುಗಿಯಬಹುದೆಂದು ಯೆಗೊರ್ ಯೆಗೊರೊವಿಚ್ ತಮ್ಮ ಅಭಿಪ್ರಾಯ ತಿಳಿಸಿದರು.
“ಯೆಗೊರ್ ಯೆಗೊರೊವಿಚ್, ಈ ಬೇಸಿಗೆಯಲ್ಲೇ ಯುದ್ಧ ಮುಗಿಯಬಹುದೆಂದು ಹೇಗೆ ಹೇಳುತ್ತೀರಿ?”
“ಜನರಿಗೆ ತುಂಬಾ ರೇಗಿಹೋಗಿದೆ” ಯೆಗೊರ್ ಯೆಗೊರೊವಿಚ್ ಉತ್ತರ ಕೊಟ್ಟರು. “ಅವರು ಸಾವಿನ ಬಳಿ ಹೋಗಿ ಬಂದಿದ್ದಾರೆ. ಈಗ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಫ್ಯಾಸಿಸ್ಟರ ಕಥೆ ಮುಗಿಯಿತು.”
ಮಾರಿಯಾ ಪೊಲಿಕಾರ್ಪೊವ್ನಾ ಕೇಳಿದಳು: “ಅವನಿಗೆ ರಜೆ ಯಾವಾಗ ಕೊಡ್ತಾರೆ. ನಮ್ಮನ್ನ ನೋಡೋಕೆ ಯಾವಾಗ ಬರ್ತಾನೆ. ಇದರ ಬಗ್ಗೆ ನೀನು ಹೇಳಲೇ ಇಲ್ಲ. ಅವನನ್ನ ನೋಡಿ ಸುಮಾರು ವರ್ಷ ಆಯ್ತು. ಬಹುಶಃ ಈಗ ಅವನು ತುಂಬಾ ದೊಡ್ಡವನಾಗಿರಬೇಕು. ದಪ್ಪ ಮೀಸೆ ಬಂದಿರಬೇಕು. ಪ್ರತಿಕ್ಷಣವೂ ಸಾವಿನ ಹತ್ತಿರಾನೇ ಇದ್ದೂ ಇದ್ದು ಧ್ವನಿ ಗಡಸಾಗಿರಬೇಕು.”
“ಹೌದು. ಅವನೇನಾದರು ಬಂದರೆ, ನಿಮಗೆ ಅವನ ಗುರುತೇ ಸಿಗೊಲ್ಲ” ಎಂದು ಹೇಳಿದ ಲೆಫ್ಟಿನೆಂಟ್.
ಅವನಿಗೆ ಅಗ್ಗಷ್ಟಿಕೆ ಮೇಲಿನ ಅಟ್ಟಣಿಗೆಯಲ್ಲಿ ಹಾಸಿಗೆಯನ್ನು ಹಾಸಿದರು. ಅದರ ಒಂದೊಂದು ಇಟ್ಟಿಗೆ, ಮರದ ಗೋಡೆಯ ಪ್ರತಿಯೊಂದು ಬಿರುಕು, ಮೇಲ್ಚಾವಣಿಯ ಒಂದೊಂದು ಗಂಟೂ ಅವನಿಗೆ ಚಿರಪರಿಚಿತ. ಅಲ್ಲೇ ಕುರಿಚರ್ಮದ ಮತ್ತು ಬ್ರೆಡ್ಡಿನ ವಾಸನೆ ಮತ್ತು ಒಬ್ಬ ವ್ಯಕ್ತಿ ಸಾಯುವಾಗಲು ಮರೆಯದೇ ನೆನಪಿಸಿಕೊಳ್ಳುವ ಗೃಹಸೌಖ್ಯವಿತ್ತು. ಗಾಳಿಕಾಲದ ಗಾಳಿಯು ಶಿಳ್ಳೆ ಹೊಡೆಯುತ್ತಿತ್ತು; ಮತ್ತೆ ಸೂರಿನಡಿ ಮರ್ಮರ ಶಬ್ಧ ಮಾಡುತ್ತಿತ್ತು. ಮರದ ಗೋಡೆಯ ಆ ಕಡೆ ಅವನ ತಂದೆ ಮೆಲುವಾಗಿ ಗೊರಕೆ ಹೊಡೆಯುತ್ತಿದ್ದರು. ಆದರೆ ಅವನ ತಾಯಿ ಮಾತ್ರ ನಿಟ್ಟುಸಿರು ಬಿಡುತ್ತಿದ್ದಳು. ಹಾಸಿಗೆಯಲ್ಲಿ ಒದ್ದಾಡುತ್ತಿದ್ದಳು; ನಿದ್ದೆ ಬಂದಿರಲಿಲ್ಲ. ಲೆಫ್ಟಿನೆಂಟ್ ತನ್ನ ಮುಖವನ್ನು ಕೈಗಳಲ್ಲಿ ಹುದುಗಿಸಿಕೊಂಡು ಬಿದ್ದಿದ್ದನು. ‘ಇಲ್ಲ, ಅವಳು ಗುರುತು ಹಿಡೀಲಿಲ್ಲ, ಅವಳಿಗೆ ಗುರುತು ಸಿಕ್ಕಲಿಲ್ಲ’ ಎಂದು ಯೋಚಿಸುತ್ತಿದ್ದನು.
ಬೆಳಿಗ್ಗೆ ಉರಿಯುತ್ತಿದ್ದ ಸೌದೆಯ ಚಿಟಚಿಟ ಶಬ್ಧಕ್ಕೆ ಅವನಿಗೆ ಎಚ್ಚರವಾಯಿತು; ಅವನ ತಾಯಿ ನಿಶ್ಯಬ್ಧವಾಗಿ ಒಲೆ ಉರಿಸುತ್ತಿದ್ದಳು. ಅವಳು ಒಗೆದಿದ್ದ ಅವನ ಕಾಲ್ಚೀಲಗಳು ಗೋಡೆಯಿಂದ ಗೋಡೆಗೆ ಕಟ್ಟಿದ್ದ ದಾರದಲ್ಲಿ ನೇತಾಡುತ್ತಿದ್ದವು. ಸ್ವಚ್ಛಗೊಳಿಸಿದ ಬೂಟನ್ನು ಹೊಸಲಿಗೆ ಒರಗಿಸಲಾಗಿತ್ತು.
“ನಿನಗೆ ಪ್ಯಾನ್‍ಕೇಕ್ ಇಷ್ಟವಾಗುತ್ತಾ?” ತಾಯಿ ಕೇಳಿದಳು.
ಅವನು ಕೂಡಲೇ ಉತ್ತರಿಸಲಿಲ್ಲ. ಅವನು ಬೆಲ್ಟನ್ನು ಹಾಕಿಕೊಂಡು ಬೆಂಚಿನ ಮೇಲೆ ಬರಿಗಾಲಲ್ಲಿ ಕುಳಿತ.
“ನಿಮ್ಮೂರಿನಲ್ಲಿ ಕಾತ್ಯಾ ಮಾಲಿಶೆವಾ ಇದ್ದಾಳ? ಆಂದ್ರೆಯ್ ಮಾಲಿಶೆವಾ ಅವರ ಮಗಳು?”
“ಅವಳು ಹೋದ ವರ್ಷ ಓದು ಮುಗಿಸಿದಳು. ಈಗ ನಮ್ಮೂರ ಸ್ಕೂಲಿನಲ್ಲಿ ಟೀಚರ್ ಆಗಿದ್ದಾಳೆ. ಅವಳನ್ನ ನೋಡ್ಬೇಕಾ?”
“ಅವಳನ್ನು ಕಾಣಲೇಬೇಕೆಂದು ನಿಮ್ಮ ಮಗ ಹೇಳಿದ್ದಾನೆ.”
ಅವನ ತಾಯಿ ಪಕ್ಕದ ಮನೆಯ ಹುಡುಗಿಯನ್ನು ಕಳುಹಿಸಿದಳು. ಲೆಫ್ಟಿನೆಂಟ್‍ಗೆ ಬೂಟು ಹಾಕಿಕೊಳ್ಳುವಷ್ಟೂ ಸಮಯ ಸಿಗಲಿಲ್ಲ; ಅಷ್ಟರಲ್ಲಿ ಕಾತ್ಯಾ ಮಾಲಿಶೆವಾ ಅಲ್ಲಿದ್ದಳು. ಅವಳ ಕಂದುಬಣ್ಣದ ಕಣ್ಣುಗಳು ಹೊಳೆಯುತ್ತಿದ್ದವು; ಆಶ್ಚರ್ಯದಿಂದ ಹುಬ್ಬುಗಳು ಮೇಲಕ್ಕೆದ್ದಿದ್ದವು; ಸಂತಸ ತುಂಬಿದ ಕೆನ್ನೆಗಳು ಗುಲಾಬಿ ವರ್ಣಕ್ಕೆ ತಿರುಗಿದ್ದವು. ಅವಳು ಶಾಲನ್ನು ತನ್ನ ವಿಶಾಲವಾದ ಭುಜಗಳ ಮೇಲೆ ಎಳೆದುಕೊಂಡಾಗ ಲೆಫ್ಟಿನೆಂಟ್ ಸಣ್ಣಗೆ ನರಳಿದ. ಆ ಸುಂದರವಾದ, ಬೆಚ್ಚಗಿನ ಕೂದಲನ್ನು ಒಮ್ಮೆ ಚುಂಬಿಸುವಂತಿದ್ದರೆ! ಅವನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡ ಅವಳ ಚಿತ್ರವೇ ಅದು - ನಿರ್ಮಲ, ಕೋಮಲ, ಸೊಗಸು, ಮೃದು ಹೃದಯ, ಸುಂದರ ಹುಡುಗಿ – ಅದೆಷ್ಟು ಸುಂದರವೆಂದರೆ, ಅವಳು ಒಳಗೆ ಕಾಲಿಡುತ್ತಿದ್ದಂತೆಯೇ ಇಡೀ ಮನೆ ಬಂಗಾರದ ಬೆಳಕಿನಲ್ಲಿ ಬೆಳಗುವಂತಿತ್ತು.
“ಯೆಗೊರ್ ಏನಾದರೂ ಹೇಳಿದನಾ” (ಅವನು ಬೆಳಕಿಗೆ ಬೆನ್ನು ಹಾಕಿ ನಿಂತಿದ್ದರಿಂದ ಅವನ ಮುಖ ಸರಿಯಾಗಿ ಕಾಣಲಿಲ್ಲ. ಅವನಿಗೆ ಮಾತನಾಡಲು ಅಸಾಧ್ಯವಾಗಿ ಸುಮ್ಮನೆ ತಲೆಯಾಡಿಸಿದ). “ಅವನಿಗೋಸ್ಕರ ಹಗಲು, ರಾತ್ರಿ ಕಾಯ್ತಾ ಇದೀನಿ ಅಂತ ತಿಳಿಸಿ.”
ಅವಳು ಹತ್ತಿರ ಬಂದಳು. ಅವರಿಬ್ಬರ ಕಣ್ಣು ಸಂಧಿಸಿದವು. ಆಕೆಗೆ ಎದೆಗೆ ಏನೋ ನಾಟಿದಂತೆ ಸರಕ್ಕನೆ ಒಂದೆಜ್ಜೆ ಹಿಂದಕ್ಕೆ ಸರಿದಳು; ಬೆಚ್ಚಿಬಿದ್ದಳು. ಇದನ್ನು ನೋಡಿದ ಯೆಗೊರ್ ಇನ್ನೊಂದು ದಿನವೂ ಅಲ್ಲಿರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದ.
ಅವನ ತಾಯಿಯು ಹಾಲಿನಲ್ಲಿ ಕುದಿಸಿದ ಪ್ಯಾನ್‍ಕೇಕ್‍ಗಳನ್ನು ಮಾಡಿಕೊಟ್ಟಳು. ಅವನು ಮತ್ತೆ ಲೆಫ್ಟಿನೆಂಟ್ ದ್ರೊಮೊವ್ ಬಗ್ಗೆ ಮಾತನಾಡಿದ. ಈ ಬಾರಿ ಅವನ ಸಾಹಸಕಾರ್ಯಗಳ ಬಗ್ಗೆ. ಅವನು ಕರ್ಕಶವಾಗಿ ಮಾತನಾಡುತ್ತಿದ್ದ, ಅವಳ ಕಡೆ ನೋಡದೆಯೇ. ಏಕೆಂದರೆ ಅವಳ ಮುದ್ದುಮುಖದಲ್ಲಿ ಅವನ ಕುರೂಪಿ ಮುಖದ ಪ್ರತಿಬಿಂಬ ನೋಡಲು ಇಷ್ಟಪಡಲಿಲ್ಲ. ಯೆಗೊರ್ ಯೆಗೊರೊವಿಚ್‍ಗೆ ಸಾಮೂಹಿಕ ಕೃಷಿಕ್ಷೇತ್ರಕ್ಕೆ ಹೋಗಿ ಕುದುರೆಗಳನ್ನು ತರುವ ಆಸೆಯಿತ್ತು. ಆದರೆ ಲೆಫ್ಟಿನೆಂಟ್ ಅಲ್ಲಿಗೆ ಬಂದ ರೀತಿಯಲ್ಲೇ ಸ್ಟೇಷನ್‍ಗೆ ನಡೆದುಕೊಂಡ ಹೋದ. ಆದರೆ ಅಲ್ಲಿ ನಡೆದ ಘಟನೆಗಳಿಂದ ಅವನ ಚಿತ್ತ ಕದಡಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ನಿಲ್ಲುತ್ತಿದ್ದ. ಮುಖವನ್ನು ಕೈಗೊತ್ತಿಕೊಂಡು ಕರ್ಕಶವಾಗಿ ತನಗೆ ತಾನೇ ಹೇಳಿಕೊಳ್ಳುತ್ತಿದ್ದ:
“ನಾನೇನು ಮಾಡಲಿ, ಈಗ?”
ಅವನು ಬಲವರ್ಧನೆಗೆಂದು ರಣರಂಗದಿಂದ ಹಿಂದಕ್ಕೆ ಕರೆತಂದಿದ್ದ ರೆಜಿಮೆಂಟ್ ಅನ್ನು ಸೇರಿಕೊಂಡನು. ಅಲ್ಲಿ ಅವನಿಗೆ ಸ್ನೇಹಿತರಿಂದ ಅದೆಂತಹ ಸ್ವಾಗತ ದೊರಕಿತೆಂದರೆ, ಹೃದಯದ ಭಾರವೆಲ್ಲಾ ಇಳಿದುಹೋಯಿತು. ಅವನ ತಾಯಿಗೆ ಇನ್ನೂ ಸ್ವಲ್ಪ ದಿನ ಅವನ ದುರದೃಷ್ಟವನ್ನು ತಿಳಿಸಬಾರದೆಂದು ನಿರ್ಧರಿಸಿದ. ಇನ್ನು ಕಾತ್ಯಾಳ ವಿಷಯ – ಅದನ್ನು ಕಾಲಿಗೆ ಚುಚ್ಚಿದ ಮುಳ್ಳಿನಂತೆ ಕಿತ್ತು ಬಿಸಾಕಬಹುದು ಎಂದುಕೊಂಡ.
ಸುಮಾರು ಎರಡು ವಾರಗಳ ನಂತರ ಅವನ ತಾಯಿಯಿಂದ ಪತ್ರ ಬಂದಿತು:
“ನನ್ನ ಮುದ್ದು ಮಗನೆ! ನಿನಗೆ ಕಾಗದ ಬರೆಯೋದಿಕ್ಕೆ ಭಯವಾಗುತ್ತೆ. ನೀನು ಏನಾದ್ರೂ ತಿಳಿದುಕೊಳ್ತೀಯಾ ಅಂತ. ನೀನು ಕಳುಹಿಸಿದೆ ಅಂತ ಒಬ್ಬ ವ್ಯಕ್ತಿ ನಮ್ಮ ಮನೆಗೆ ಬಂದಿದ್ದ. ಅವನು ಬಹಳ ಒಳ್ಳೆಯ ಮನುಷ್ಯ. ಆದರೆ ಮುಖ ಮಾತ್ರ ವಿರೂಪವಾಗಿತ್ತು. ಅವನು ಸ್ವಲ್ಪ ದಿನ ನಮ್ಮ ಜೊತೆ ಇರ್ತಾನೆ ಅನಿಸಿತ್ತು. ಆದರೆ ಯಾಕೋ ಇದ್ದಕ್ಕಿದ್ದಂತೆ ಮನಸ್ಸು ಬದಲಾಯಿಸಿ ಚಕ್ಕಂತ ಹೊರಟುಹೋದ. ಮಗು, ಅಲ್ಲಿಂದಾಚೆಗೆ ನನಗೆ ಕಣ್ ರೆಪ್ಪೆ ಮುಚ್ಚೋದಕ್ಕೂ ಆಗಿಲ್ಲ. ಯಾಕೆಂದರೆ, ಆ ವ್ಯಕ್ತಿ ನೀನೆ ಅಂತ ನನಗನ್ನಿಸುತ್ತೆ. ಯೆಗೊರ್ ಯೆಗೊರೊವಿಚ್ ಬಯ್ತಾರೆ. ‘ನಿನಗೆಲ್ಲೋ ತಲೆ ಕೆಟ್ಟಿದೆ, ಮುದುಕಿ. ಅವನೇನಾದರೂ ನಮ್ಮ ಮಗನೇ ಆಗಿದ್ದರೆ ಅವನು ಹೇಳ್ತಾ ಇರಲಿಲ್ಲ ಅಂತೀಯಾ? ಅವನ್ಯಾಕೆ ನಾಟಕ ಮಾಡಬೇಕಿತ್ತು? ಅವನಿಗಿದ್ದಂಥ ಮುಖ ಇರೋದಿಕ್ಕೆ ಯಾರಿಗಾದರೂ ಹೆಮ್ಮೆ ಆಗಬೇಕು’ ಅಂತ. ನಿನ್ನ ತಂದೆ ಇನ್ನೂ ಬೇರೇನೇನೋ ಮಾತಾಡ್ತಾರೆ. ಆದರೆ ನನ್ನ ತಾಯಿ ಹೃದಯ ಬೇರೇನೆ ಹೇಳುತ್ತೆ. ಅದು ‘ನನ್ನ ಮಗನೇ, ನನ್ನ ಮಗನೇ’ ಎಂದು ಕೂಗುತ್ತೆ. ಆತ ನಮ್ಮ ಅಟ್ಟಣಿಗೆಯ ಮೇಲೆ ಮಲಗಿದ್ದ. ಅವನ ಓವರ್‍ಕೋಟನ್ನು ತೊಳೆಯಲೆಂದು ತೆಗೆದುಕೊಂಡಿದ್ದೆ. ಅದನ್ನು ಎದೆಗೆ ಒತ್ತಿಕೊಂಡು ಅತ್ತುಬಿಟ್ಟೆ. ಯಾಕೆಂದರೆ ಅವನು ನೀನೇ ಅಂತ ಗೊತ್ತಿತ್ತು. ಪ್ರೀತಿಯ ದ್ರೊಮೊವ್, ದೇವರಾಣೆ, ದಯವಿಟ್ಟು ನಿಜ ಹೇಳು. ಏನಾಯಿತು ಅಂತ ಎಲ್ಲಾನೂ ತಿಳಿಸು. ಇಲ್ಲಾಂದ್ರೆ, ನನಗೆ ನಿಜವಾಗ್ಲೂ ಹುಚ್ಚೇ ಹಿಡಿಯುತ್ತೆ.”
ಸರಿ, ಯೆಗೊರ್ ದ್ರೊಮೊವ್ ನನಗೆ, ಇವಾನ್ ಸುದರೆವ್‍ಗೆ ಪತ್ರವನ್ನು ತೋರಿಸಿದ. ಅವನ ಕಥೆ ಹೇಳುತ್ತಾ ತೋಳಿನಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದ. ಅವನಿಗೆ ಹೇಳಿದೆ: “ಇದು ನಿನ್ನೊಳಗೇ ನಡೆಯುತ್ತಿರುವ ವ್ಯಕ್ತಿತ್ವದ ಸಂಘರ್ಷ! ನಿನಂತೂ ಮೂರ್ಖ ಕಣಯ್ಯಾ, ಸತ್ಯವಾಗ್ಲೂ ಮೂರ್ಖ. ಮೊದಲು ನಿನ್ನ ತಾಯಿಗೆ ಕಾಗದ ಬರೆದು ತಪ್ಪಾಯ್ತು ಅಂತ ಹೇಳು. ಅವಳನ್ನ ಹುಚ್ಚಿಯನ್ನಾಗಿ ಮಾಡಬೇಡ. ನಿನ್ನ ರೂಪಕ್ಕೆ ತುಂಬಾ ಮರುಗ್ತಾಳೆ ಅಂದುಕೊಂಡಿದ್ದೀಯಾ! ನೀನು ಈಗಿರುವಂತೆಯೇ ಅವಳು ನಿನ್ನನ್ನು ಹೆಚ್ಚು ಪ್ರೀತಿಸ್ತಾಳೆ.”
ಅವನು ಆ ದಿನವೇ ಪತ್ರ ಬರೆದ. “ಪ್ರೀತಿಯ ಅಪ್ಪಾ, ಅಮ್ಮಾ, ನನ್ನ ಮೂರ್ಖತನಕ್ಕೆ ಕ್ಷಮಿಸಿ. ಹೌದು ನಿಮ್ಮನ್ನು ನೋಡಲು ಬಂದವನು ನಾನೇ... ನಿಮ್ಮ ಮಗ...” ಹೀಗೆ, ಸಣ್ಣ ಅಕ್ಷರದಲ್ಲಿ ನಾಲ್ಕು ಪುಟಗಳಷ್ಟು ಬರೆದ. ಅವನಿಗೇನಾದರೂ ಸಮಯ ಇದ್ದಿದ್ದರೆ ಇಪ್ಪತ್ತು ಪುಟಗಳನ್ನಾದರೂ ಬರೆಯುತ್ತಿದ್ದ.
ಕೆಲವು ವಾರಗಳು ಕಳೆದವು. ನಾವಿಬ್ಬರೂ ಪರೀಕ್ಷಾ ನೆಲೆಯಲ್ಲಿ ಕೆಲಸ ಮಾಡುತ್ತಿದ್ದೆವು. ಸೈನಿಕನೊಬ್ಬ ಓಡಿಬಂದು, “ಕ್ಯಾಪ್ಟನ್ ದ್ರೊಮೊವ್, ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ” ಎಂದು ಹೇಳಿದ. ಅವನು ಇನ್ನೂ ಅಟೆನ್ಷನ್ ಪೊಸಿಷನ್‍ನಲ್ಲೇ ನಿಂತುಕೊಂಡು ನಮ್ಮನ್ನು ನೋಡುತ್ತಿದ್ದ ರೀತಿ ಹೇಗಿತ್ತೆದೆಂದರೆ, ಅವನಿಗೆ ಪಾರಿತೋಷಕ ಕೊಡುತ್ತೇವೆಂದು ಕಾಯುತ್ತಿದ್ದಾನೇನೋ ಎನ್ನುವಂತಿತ್ತು. ದ್ರೊಮೊವ್ ಮತ್ತು ನಾನು ನಾವು ಉಳಿದುಕೊಂಡಿದ್ದ ಮನೆಯ ಕಡೆ ಹೋದೆವು. ಅವನು ತಳಮಳಗೊಂಡಿದ್ದು ಗೋಚರವಾಗುತ್ತಿತ್ತು – ಕೆಮ್ಮುತ್ತಾ ಗಂಟಲನ್ನು ಸರಿಪಡಿಸಿಕೊಳ್ಳುತ್ತಿದ್ದನು. ಅವನು ಟ್ಯಾಂಕ್ ನಡೆಸುವ ಸೈನಿಕನೇ ಆಗಿರಬಹುದು, ಆದರೆ ಅವನಿಗೂ ಭಾವನೆಗಳ ಏರಿಳಿತಗಳಿರುತ್ತವೆ. ಅವನು ನನಗೂ ಮುಂಚೆ ಮನೆಯೊಳಗೆ ಹೋದ. ಅಲ್ಲಿಂದಲೇ ಅವನ ಧ್ವನಿ ಕೇಳಿಸುತ್ತಿತ್ತು:
“ಅಮ್ಮಾ, ಹೇಗಿದ್ದೀಯಾ? ಅಮ್ಮಾ. ಅದು ನಾನೇ.” ನಾನು ಒಳಗೆ ಹೋದಾಗ, ವಯಸ್ಸಾದ ಹೆಂಗಸು ಅವನ ಎದೆಗೆ ಒರಗಿಕೊಂಡಿದ್ದನ್ನು ಕಂಡೆ. ನಾನು ಸುತ್ತಲೂ ಕಣ್ಣಾಯಿಸಿದಾಗ, ಇನ್ನೊಬ್ಬ ಹೆಣ್ಣುಮಗಳು ಇರುವುದನ್ನು ಗಮನಿಸಿದೆ. ಅವಳಿಗಿಂತ ಹೆಚ್ಚು ಸುಂದರವಾಗಿರುವ ಹೆಣ್ಣುಮಕ್ಕಳು ಇರಲೇಬೇಕು. ಅವಳೊಬ್ಬಳೇ ಚೆಲುವೆಯೇನಲ್ಲ. ಆದರೆ, ಅವಳಂತಹ ಇನ್ನೊಬ್ಬ ಹೆಣ್ಣುಮಗಳನ್ನು ನೋಡಿಲ್ಲ.
ಅವನು ತಾಯಿಯಿಂದ ಬಿಡಿಸಿಕೊಂಡು ಈ ಹೆಣ್ಣುಮಗಳತ್ತ ತಿರುಗಿದ. ನಾನು ಮೊದಲೇ ಹೇಳಿದಂತೆ, ಅವನ ಭವ್ಯವಾದ ಶರೀರವು ಅವನನ್ನು ಸಾಕ್ಷಾತ್ ಯುದ್ಧದೇವತೆಯನ್ನಾಗಿ ಮಾಡಿತ್ತು. “ಕಾತ್ಯಾ, ನೀನೇಕೆ ಬಂದೆ? ನೀನು ಕಾಯುತ್ತಿರುವೆನೆಂದು ಮಾತು ಕೊಟ್ಟಿದ್ದು ನನಗಲ್ಲ, ಬೇರೆಯನರಿಗೆ” ಎಂದು ಹೇಳಿದ.
ನಾನು ಹೊರಗಡೆ ಹೋಗುವಷ್ಟರಲ್ಲಿ ಅವಳ ಧ್ವನಿ ಕೇಳಿತು: “ಯೆಗೊರ್, ನಾನು ನಿನ್ನ ಜೊತೇನೇ ಇರೋದು. ಇನ್ನು ಯಾವತ್ತೂ ನಿನ್ನ ಜೊತೇನೇ ಜೀವನ ಮಾಡೋದು. ನಾನು ನಿಜವಾಗಿಯೂ ನಿನ್ನನ್ನು ಪ್ರೀತಿಸ್ತೀನಿ. ಹೃದಯಪೂರ್ವಕವಾಗಿ ಹೇಳ್ತಾ ಇದೀನಿ. ನನ್ನನ್ನು ವಾಪಾಸ್ ಕಳುಹಿಸಬೇಡ.”
ಹೌದು, ಇದೇ ರಷ್ಯನ್ ಗುಣ! ಒಬ್ಬ ವ್ಯಕ್ತಿ ಸಾಮಾನ್ಯವಾದ ಸಂದರ್ಭಗಳಲ್ಲಿ ಸಾಧಾರಣ ವ್ಯಕ್ತಿ ಎನಿಸಬಹುದು, ಆದರೆ ಕಷ್ಟಗಳು ಬಂದಾಗ ಅವನಿಗೆ ಮಹಾಶಕ್ತಿ – ಮಾನವ ಹೃದಯದ ಸೌಂದರ್ಯದ ಶಕ್ತಿ ದೊರಕುತ್ತದೆ.


ಮೂಲ ಕಥೆ: ಅಲೆಕ್ಸಿ ಟಾಲ್‍ಸ್ಟಾಯ್
ಅನುವಾದ: ಎಸ್.ಎನ್.ಸ್ವಾಮಿ



ಲೇಖನ - ಆರ್ಥಿಕ ಹಿಂಜರಿತ ಎಂದರೇನಪ್ಪ?



ಈ ಮಧ್ಯೆ ದಿನಪತ್ರಿಕೆಗಳ ‘ಆರ್ಥಿಕ ಹಿಂಜರಿತ’, ‘ಮಾರುಕಟ್ಟೆ ಭೀತಿ’ ಮುಂತಾಗಿ ಮುಖಪುಟಗಳಲ್ಲಿ ಮೂಡುತ್ತಿರುವ ಸುದ್ದಿ ಹಾಗೂ ಅದರೊಂದಿಗೆ ಏರಿಳಿತಗಳಿಂದ ಕೂಡಿದ ಸೂಚ್ಯಂಕಗಳ ನಕ್ಷೆಗಳು ನಮ್ಮ ಮಕ್ಕಳಿಗೆ ಸುಲಭವಾಗಿ ಅರ್ಥವಾಗಲಾರವು. ಅವರಿಗೆಲ್ಲಾ ಇದರ ಅರ್ಥ ಏನೆಂದು ಸರಳವಾಗಿ ಹೇಳಬೇಕೆಂದರೆ, ಅದನ್ನು ಈ ರೀತಿಯಾಗಿ ತಿಳಿಸಬಹುದು :

ಮಗು, ಇನ್ನು ಮುಂದೆ ಶಾಪಿಂಗ್‍ಗೆ ಮಾಲ್‍ಗಳಿಗೆ, ಜಾವಾಸಿಟಿಯಲ್ಲಿ ಕಾಫಿಗೆ, ಮಲ್ಟಿಪ್ಲೆಕ್‍ನಲ್ಲಿ ಸಿನಿಮಾಗೆ ಹೋಗುವುದೆಂದರೆ ಕನಸಿನ ಮಾತೆಂದೇ ತಿಳಿದುಕೋ. ಖಾಲಿ ಬಾಟಲಿ ತುಂಬಿಸಿಕೊಂಡು ಗತಕಾಲ ವೈಭವ ಮೆರೆಸುತ್ತಿರುವ ಮೂಲೆ ಅಂಗಡಿಯನ್ನು ಯಾವ ರಿಯಲ್ ಎಸ್ಟೇಟ್ ಏಜಂಟ್ ಕೂಡ ಕೊಂಡುಕೊಳ್ಳಲು ಉತ್ಸಾಹ ತೋರಿಸುತ್ತಿಲ್ಲ. ಆ ಜಾಗವನ್ನು ಆಕ್ರಮಿಸಿಕೊಂಡು ಮತ್ತೊಂದು ಮೊಬೈಲ್ ಶೋ ರೂಮೋ, ಬೈಕ್ ಕಾರುಗಳ ಮಾರಾಟ ಮಳಿಗೆಯೋ, ಚಿನ್ನದ ಮಳಿಗೆಯೋ ಎದ್ದು ನಿಲ್ಲುವುದಿಲ್ಲ. ಗಾಜಿನ ಹಿಂದೆ ಕಣ್ಣು ಕೋರೈಸುವಂತೆ ಸರಕುಗಳನ್ನು ಪ್ರದರ್ಶಿಸಿ ಗ್ರಾಹಕರನ್ನು ಆಕರ್ಷಿಸುವುದಿಲ್ಲ. ಬದಲಿಗೆ ಅದೇ ಧೂಳು ತುಂಬಿದ, ಹಳೇ ಡಬ್ಬಿ, ಗಾಜಿನ ಬಾಟಲಿ ತುಂಬಿದ ಅಂಗಡಿಯೇ ಅಲ್ಲಿ ನಿಂತಿರುತ್ತದೆ.

ಇದುವರೆಗೂ ನಿನ್ನ ಮೊಬೈಲಿಗೆ ಉಚಿತ ಎಸ್‍ಎಂಎಸ್‍ನಲ್ಲಿ ಬರುತ್ತಿದ್ದ ಜೋಕ್ಸ್ ಹಾಗೂ ಜಾಹೀರಾತು ಸಂದೇಶಗಳು ಬರುವುದು ಕಡಿಮೆಯಾಗುತ್ತವೆ ಅಥವಾ ಸಂಪೂರ್ಣ ನಿಂತುಹೋಗುತ್ತವೆ. ಇದೆಂತಹ ಸಪ್ಪೆ ಬದುಕು ಎಂದು ನಿನಗನ್ನಿಸಲಾರಂಭಿಸುತ್ತದೆ. ‘ಮಿಂಚು’ ಸೀರಿಯಲ್ಲಿನ ಜಗದೀಶನಂತಿದ್ದ ನಿನ್ನ ಬಾಸ್ ಇದ್ದಕ್ಕಿದ್ದಂತೆ ರಾಜೀವ್ ಶರ್ಮನಂತೆ ಕಾಣಲಾರಂಭಿಸುತ್ತಾನೆ. ‘ಮಿ. . . . ದಯವಿಟ್ಟು ನನ್ನ ಚೇಂಬರಿಗೆ ಬನ್ನಿ, ನಿಮ್ಮ ಬಳಿ ಸ್ವಲ್ಪ ಮಾತನಾಡುವುದಿದೆ’ ಎಂದು ಹೇಳಿ ಎಲ್ಲಿ ಸಾರಂಗಪಾಣಿಗಾದ ಗತಿ ನಿನಗೂ ಬರುತ್ತದೋ ಎಂಬ ಆತಂಕದಲ್ಲಿ ನಿನ್ನ ಎದೆ ಸದಾ ಡವಡವಗುಟ್ಟುತ್ತಿರುತ್ತದೆ.

ಟಿವಿಯಲ್ಲಿ, ಕ್ರಿಕೆಟ್, ಸೀರಿಯಲ್, ಸಿನಿಮಾಗಳ ಮಧ್ಯೆ ಕಿರಿಕಿರಿಯುಂಟುಮಾಡುತ್ತಿದ್ದ ‘ಈ ಕಾರ್ಯಕ್ರಮದ ಪ್ರಾಯೋಜಕರು’ ಇದ್ದಕ್ಕಿದ್ದಂತೆ ಮಾಯವಾಗಲಾರಂಭಿಸುತ್ತಾರೆ. ದಿನಪತ್ರಿಕೆಗಳ ಭಾರ ಕಡಿಮೆಯಾಗುತ್ತಾ ಹೋಗುತ್ತದೆ. ಮೊನ್ನೆವರೆಗೂ ‘ಫೆಂಗ್ ಶುಯಿಯಿಂದ ಮನೆಯನ್ನು ಅಲಂಕರಿಸುವ’ ತಿಳುವಳಿಕೆ ನೀಡುತ್ತಿದ್ದ ದೊಡ್ಡ ವರ್ಣರಂಜಿತ ಪುಟದ ಬದಲಿಗೆ ‘ಅಡುಗೆಯಲ್ಲಿ ಸೊಪ್ಪಿನ ಮಹತ್ವ’ದ ಕುರಿತು ಯಾರೋ ಕಿರಿಯ ಸಹಾಯಕ ಸಂಪಾದಕ  ಬರೆದ ಒಂದು ಸಣ್ಣ ಲೇಖನ ಕಂಡು ಬರುತ್ತದೆ.

ನಮ್ಮ ಬಳಿಯಿರುವ ಆಸ್ತಿ, ಅದರಲ್ಲೂ ಕಂತಿನಲ್ಲಿ ಕೊಂಡುಕೊಂಡ ಪ್ರತಿಯೊಂದು ವಸ್ತುವೂ ಹೊರೆ ಎನ್ನಿಸಲಾರಂಭಿಸುತ್ತದೆ. ಮನೆಯಲ್ಲಿ ‘ಸ್ವಲ್ಪ ದಿನದ ಮಟ್ಟಿಗೆ’ ಬಂದು ಉಳಿದುಕೊಳ್ಳುವವರ ಜನಸಂಖ್ಯೆ ಹಾಗೂ ಮನೆ ಖರ್ಚು ಎರಡೂ ಹೆಚ್ಚುತ್ತಾ ಹೋಗುತ್ತವೆ. ಮೊನ್ನೆವರೆಗೂ ಇವೆಂಟ್ ಮ್ಯಾನೇಜರ್ ಆಗಿ ಮೆರೆಯುತ್ತಿದ್ದ ನಿನ್ನ ಸ್ನೇಹಿತ ಇದ್ದಕ್ಕಿದ್ದಂತೆ ಶಾಲಾ ಮಾಸ್ತರನಾಗಬಯಸುತ್ತಾನೆ.

ನಿನ್ನ ಮತ್ತೊಬ್ಬ ಸ್ನೇಹಿತನ ತಂದೆ ಕೇವಲ ‘ಇಂಪೋರ್ಟಡ್’ ವಸ್ತುಗಳನ್ನೇ ಬಳಸಿ ಕಟ್ಟಿಸಿದ ತನ್ನ ಬಂಗಲೆಯ ಬಗ್ಗೆ ಎಲ್ಲರ ಮುಂದೆ ಕೊಚ್ಚಿಕೊಳ್ಳುವ ಉತ್ಸಾಹ ತೋರುವುದಿಲ್ಲ. ಅವರ ಮಗ ನಿನ್ನನ್ನು ಪಕ್ಕಕ್ಕೆ ಕರೆದು ಹೇಳುತ್ತಾನೆ ‘ಈಗ ಅದರ ಬೆಲೆಯೆಲ್ಲಾ ಪೂರ್ತಿ ಡೌನ್ ಆಗಿದೆಯೋ!’

ಆರ್ಥಿಕ ಹಿಂಜರಿಕೆಯಾದಾಗ ನಿನ್ನ ಸ್ನೇಹಿತರೂ ಕೂಡ ಬದಲಾಗುತ್ತಾರೆ. ಅವರೆಲ್ಲ ಇತ್ತೀಚೆಗೆ ಮಾರುಕಟ್ಟೆಗೆ ಬಂದ ಮೊಬೈಲ್, ಬೈಕ್, ಕಂಪ್ಯೂಟರ್, ಲ್ಯಾಪ್ ಟಾಪ್‍ಗಳ ಕುರಿತು ಮಾತನಾಡುವ ಬದಲಿಗೆ ಮನೆಯಲ್ಲೇ ಬೆಳೆಸಬಹುದಾದ ತರಕಾರಿಯ ಕುರಿತು ಮಾತನಾಡಲಿಚ್ಛಿಸುತ್ತಾರೆ. ತಂಗಳನ್ನದಿಂದ ಅಕ್ಕಿರೊಟ್ಟಿ ಮಾಡುವುದು ಹೇಗೆಂದೂ, ಹಳೇ ರುಬ್ಬುವ ಕಲ್ಲಿನ ಉಪಯೋಗ, ಮನೆಯಲ್ಲೇ ಮಿಕ್ಸಿ ರಿಪೇರಿ ಮುಂತಾದ ಕುರಿತು ಚರ್ಚೆಗಳು ಹೆಚ್ಚಾಗುತ್ತವೆ. ಅತ್ಯಂತ ದುಬಾರಿ ವಸ್ತುಗಳನ್ನು ಕೊಂಡುಕೊಂಡು ಬೀಗುತ್ತಿದ್ದವರಿಗಿಂತ ಮಿತವಾಗಿ ಖರ್ಚು ಮಾಡುವವರ ಬದುಕೇ ಹೆಚ್ಚು ಅರ್ಥಪೂರ್ಣ ಎನ್ನಿಸಲಾರಂಭಿಸುತ್ತದೆ.

ಟಿವಿ ಚಾನೆಲ್‍ಗಳಿಗೆ ಐಶ್ವರ್ಯ ರೈ ಇತ್ತೀಚಿನ ಸಿನಿಮಾದಲ್ಲಿ ತೊಟ್ಟ ದಿರಿಸಿನ ವಿನ್ಯಾಸಕಾರರು ಯಾರು ಎಂಬುದಕ್ಕಿಂತ ಚಾಗನೂರಿನ ರೈತರು ಕೃಷಿ ಭೂಮಿ ಕೊಡಲು ಏಕೆ ಒಪ್ಪುತ್ತಿಲ್ಲವೆಂದೂ, ಬೇಳೆಯ ಬೆಲೆ ಏರುವುದಕ್ಕೂ ಇಂತಹ ವಿಷಯಗಳಿಗೂ ಸಂಬಂಧವಿದೆಯೆಂದೂ ತಿಳಿದುಕೊಳ್ಳುವುದು ಹೆಚ್ಚು ಪ್ರಸ್ತುತವೆಂದೆನಿಸುತ್ತದೆ. ಮೇಧಾ ಪಾಟ್ಕರ್ ನೀರಿನ ಖಾಸಗೀಕರಣದ ಕುರಿತು ಮಾತನಾಡಬೇಕೆಂದು ಅವರನ್ನು ಸ್ಟುಡಿಯೋಗೆ ಕರೆಯುತ್ತಾರೆ.

ಆದರೆ, ಮಗು ಆರ್ಥಿಕತೆಯಲ್ಲಿ ಹಿಂಜರಿತ ಕಾಣಿಸಿಕೊಳ್ಳುವುದರಿಂದ ಜನರಿಗೆ ಸಾಹಿತ್ಯ, ಮಾನವೀಯತೆ, ಭಾವನೆಗಳು - ಇವೆಲ್ಲ ಜೀವನಾವಶ್ಯಕ ಮೌಲ್ಯಗಳೆನಿಸಲಾರಂಭಿಸುತ್ತದೆ. ಟಿವಿಯ ನೂರಾರು ಚಾನೆಲ್‍ಗಳಿಗಿಂತ ದಿನಪತ್ರಿಕೆಗಳಲ್ಲಿ ಬರುವ ಸುದ್ದಿಯೇ ಸಾಕೆನಿಸುತ್ತದೆ. ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡುವುದಕ್ಕಿಂತ ಮನೆಯಲ್ಲಿ ಕುಳಿತು ಪುಸ್ತಕ ಓದುವುದೇ ಹೆಚ್ಚು ಹಿತವೆನಿಸುತ್ತದೆ. ‘ಹಳೇ ಪಾತ್ರೆ, ಹಳೇ ಸಾಮಾನ್’ನ ಬೀಟ್ಸ್ಗಿಂತ ಲತಾ ಮಂಗೇಶ್ಕರ್, ರಫಿಯವರ ಹಳೇ ಹಾಡುಗಳೇ ಇಂಪೆನಿಸುತ್ತದೆ.

ಮಗು, ಭಯ ಪಡಬೇಡ. ನಿನ್ನ ಹೊಸ ಮೊಬೈಲ್, ಬೈಕು, ಕ್ರೆಡಿಟ್‍ಕಾರ್ಡುಗಳನ್ನು ಬಿಟ್ಟರೆ, ನೀನು ಕಳೆದುಕೊಳ್ಳುವುದೇನೂ ಇಲ್ಲ. ಬದಲಿಗೆ, ಆರ್ಥಿಕತೆಯ ಹಿಂಜರಿತ ಅಥವಾ ಅದರಲ್ಲಿ ಕುಸಿತವಾದಾಗ ನಿನಗಾಗುವ, ನಿನ್ನ ಸ್ನೇಹಿತರಿಗಾಗುವ ಲಾಭವೇ ಹೆಚ್ಚು.


(ಆಧಾರ : ದಿ ಗಾರ್ಡಿಯನ್ ಪತ್ರಿಕೆ)

- ಸುಚೇತಾ ಪೈ 

ನಾಟಕ ರೂಪಾಂತರ - ಕೊನೆ ಎಲೆ


ಓ ಹೆನ್ರಿಯವರ ಕಥೆ ‘ಕೊನೆ ಎಲೆ’ ಆಧಾರಿತ ನಾಟಕರೂಪ 

ಜಗದ್ವಿಖ್ಯಾತ ಸಣ್ಣಕಥೆಗಾರ ಓ ಹೆನ್ರಿಯವರ ‘ಕೊನೆ ಎಲೆ’ ಸಣ್ಣಕಥೆಯು ಅವರ ಅತ್ಯುತ್ತಮ ಕಥೆಗಳಲ್ಲಿ ಒಂದು. ಜೀವನದುತ್ಸಾಹ, ಕಲಾವಿದರ ಜೀವನ, ಕಲೆಯ ಸಾರ್ಥಕತೆ, ಹೀಗೆ ಹಲವು ಮೌಲ್ಯಪ್ರಜ್ಞೆಗಳನ್ನು ಒಟ್ಟಿಗೆ ತನ್ನೊಳಗೆ ತುಂಬಿಕೊಂಡಿರುವಂತಹ ಸಂಕೀರ್ಣ ಕಥೆ. ಇದು ಇಂದಿನ ನಮ್ಮ ಜನಜೀವನಕ್ಕೂ ಪ್ರಸ್ತುತವಾಗಿದೆ. ಈಗಾಗಲೇ ಇದನ್ನು ನಾಟಕರೂಪದಲ್ಲಿ ತಂದು ತುಮಕೂರಿನಲ್ಲಿ ಹಾಗೂ ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲೂ ಪ್ರದರ್ಶಿಸಲಾಗಿದೆ. ಈ ಕಥೆಯನ್ನು ನಾಟಕ ರೂಪಕ್ಕೆ ಇಳಿಸುವಾಗ ಅಗತ್ಯವಾದ ಸಣ್ಣಪುಟ್ಟ ಬದಲಾವಣೆಗಳನ್ನು ಮತ್ತು ಒಂದಷ್ಟು ಸಂಭಾಷಣೆಗಳನ್ನೂ ಸೇರಿಸಿಕೊಳ್ಳಲಾಗಿದೆ. ಇದು ಕೃತಿಯ ಮೂಲ ಆಶಯಕ್ಕೆ ಧಕ್ಕೆ ತಂದಿಲ್ಲವೆಂದು ನಂಬಿದ್ದೇನೆ. 


ದೃಶ್ಯ – ಒಂದು
(ರೈಲ್ವೆ ಸ್ಟೇಷನ್ ದೃಶ್ಯ. ಮೂರ್ನಾಲ್ಕು ಜನರ ಒಂದು ಗುಂಪು ಮಾತನಾಡುತ್ತಿದೆ. ಒಂದಿಬ್ಬರು ಬಂದು ಹೋಗುತ್ತಿದ್ದಾರೆ. ಒಂದಿಬ್ಬರು ಕುಳಿತುಕೊಂಡು ಯಾರಿಗೋ ಕಾಯುತ್ತಾ ಮೆಲುದನಿಯಲ್ಲಿ ಮಾತನಾಡುತ್ತಿದ್ದಾರೆ. ಗುಂಪಿನಲ್ಲಿ ಮಾತನಾಡುತ್ತಾ ನಿಂತಿದ್ದವರು ಇದ್ದಕ್ಕಿದ್ದಂತೆ ಜೋರಾಗಿ ಗಹಗಹಿಸಿ ನಗುತ್ತಾರೆ. ಮಾತನಾಡಿ ನಗುತ್ತಾರೆ. ನಗುತ್ತಾ ಮಾತನಾಡುತ್ತಾರೆ. ಅದೇ ಸಮಯದಲ್ಲಿ ಅವರನ್ನೆಲ್ಲಾ ಹಾದು ಹೋಗುತ್ತಿದ್ದ ಜೆನ್ನಿ ತಿರುಗುತ್ತಾಳೆ) 
ಜೇಮ್ಸ್ : ಹೊ ಜೆನ್ನಿ! ಬಾ ಇಲ್ಲಿ, ಬಾ ಇಲ್ಲಿ. (ಜೆನ್ನಿ ಹತ್ತಿರ ಬರುತ್ತಾಳೆ)
ಜೆನ್ನಿ : ಏನು ಜೇಮ್ಸ್? ಅಷ್ಟೊಂದು ನಗು.
ಟಾಮ್ : ನಿಮಗೆ.... ನಿಮ್ಮಂಥ ಕಲಾವಿದರಿಗೆ.... (ಮತ್ತೆ ಜೋರಾಗಿ ನಗುತ್ತಾನೆ)
ಜೆನ್ನಿ : ಏನದು? ನಮ್ಮಂಥ ಕಲಾವಿದರಿಗೆ?
ಟಾಮ್ : ಮ್ಯಾಕ್‍ವೆಲ್ ನನ್ನ ಕೈಲಿ ಆಗೋದಿಲ್ಲ. ನೀನೇ ಹೇಳು. (ನಗು)
ಮ್ಯಾಕ್‍ವೆಲ್ : ನೋಡು ಜೆನ್ನಿ, ಅದು ಹೀಗೆ. ಈ ಗ್ರೀನ್‍ವಿಚ್ ಹಳ್ಳಿ ಕಲಾವಿದರಿಗೆ ಎಷ್ಟು ಅನುಕೂಲ ಅನ್ನುವುದರ ಬಗ್ಗೆ ಮಾತಾಡ್ತಾ ಇದ್ವಿ. ಕಲಾವಿದರು ಬಣ್ಣ, ಬ್ರಷ್, ಕ್ಯಾನ್ವಾಸ್, ಏನೇನ್ ಬೇಕೊ ಎಲ್ಲಾನೂ ಸಾಲ ತಗೊಳ್ಳೋದು. ಈ ಹಳ್ಳಿಗೆ ಬನ್ನಿ ಕೊಡ್ತೀವಿ ಅಂತ ಹೇಳೋದು. ಅಂಗಡಿಯವನೇನಾದ್ರೂ ಅವನನ್ನ ಹುಡುಕಿಕೊಂಡು ಬಂದರೆ....
ಜೆನ್ನಿ : ಬಂದರೆ?
ಟಾಮ್ : ಬಂದಾಗ, ಈ ಚಕ್ರವ್ಯೂಹದ ರಸ್ತೆಗಳಲ್ಲಿ ಹುಡುಕಿಕೊಂಡು ಒಳಗೆ ಬರುತ್ತಾ ಇರ್ತಾನೆ. ಕೊನೇಲಿ ನೋಡಿದ್ರೆ ಊರ ಹೊರಗಡೆ ಹೊರಟೋಗಿರ್ತಾನೆ. (ಎಲ್ಲರೂ ನಗುತ್ತಾರೆ)
ಜೇಮ್ಸ್ : ಆಗ ನಮ್ಮ ಕಲಾವಿದರು ಆರಾಮವಾಗಿ ಚಿತ್ರ ಬಿಡಿಸ್ತಾ ಇರಬಹುದು. ಅಲ್ವಾ ಗೋವನ್?
ಗೋವನ್ : ಹೌದೌದು. ಅದಕ್ಕೇ ನಮ್ಮ ಬಹರ್ಮನ್ ಕೂಡ ಇಲ್ಲಿಗೇ ಬರ್ತಿದಾನೆ.
ಜೇಮ್ಸ್ : ಯಾರು ಆ ಮಹಾಕೃತಿ ಬಹರ್ಮನ್ನಾ?
ಗೋವನ್ : ಹೌದು.
ಜೇಮ್ಸ್ : (ವ್ಯಂಗ್ಯವಾಗಿ) ಎಲ್ಲಾ ಕಡೆ ಮಹಾಕೃತಿ ರಚಿಸಿದ್ದಾಯಿತು. ಈಗ ಇಲ್ಲಿಗೆ ಬರ್ತಿದಾನ?
ಟಾಮ್ : ಏನದು ಮಹಾಕೃತಿ?
ಜೇಮ್ಸ್ : ಅದೊಂದು ದೊಡ್ಡ ಕಥೆ ಟಾಮ್. ಈ ಬಹರ್ಮನ್ ಇದಾನಲ್ಲ, ಅವನು ಬಹಳ ಒಳ್ಳೇ ಕಲಾವಿದ. ಆದರೆ ಯಾವ ಕೃತಿನೂ ರಚಿಸ್ತಾ ಇಲ್ಲ. ಸುಮಾರು ವರ್ಷಗಳಿಂದ, ನಾನೊಂದು ಮಹಾಕೃತಿ ರಚಿಸ್ತೇನೆ ಅಂತಿದಾನೆ. ಕ್ಯಾನ್ವಾಸ್ ಅಂತೂ ಯಾವಾಗ್ಲೂ ರೆಡಿ ಇರುತ್ತೆ. ಬಣ್ಣ, ಬ್ರಷ್ ಜೊತೆಲಿದ್ರೂ ಮಹಾಕೃತಿ ಇರಲಿ, ಕ್ಯಾನ್ವಾಸ್ ಮೇಲೆ ಒಂದು ಗೆರೇನೂ ಬಿದ್ದಿಲ್ಲ. ಇಲ್ಲಾದ್ರೂ ಅವನ ಅದೃಷ್ಟ ಖುಲಾಯಿಸಬಹುದು.
ಜೆನ್ನಿ : ಪಾಪ, ನ್ಯುಮೋನಿಯಾದಿಂದ ನರಳಿ, ನರಳಿ ಒಣಗೋಗಿದಾನೆ. ಇಲ್ಲಿಗೆ ಬಂದು ಆರೋಗ್ಯ ಸುಧಾರಿಸಲೀ ಅಂತ ಹಾರೈಸೋಣ. ಹಾಂ! ಅವನು ಬರೋದ್ರಿಂದ ಇನ್ನೂ ಒಂದು ಅನುಕೂಲ ಇದೆ. ಅವನಿಗೆ ಸ್ವಲ್ಪ ಹಣ ಕೊಟ್ರೆ ಸಾಕು ಮಾಡೆಲ್ ಕೂತ್ಕೋತಾನೆ. ಇಲ್ಲಾಂದ್ರೆ ಅದಕ್ಕೊಂದಿಷ್ಟು ಹಣ ಸುರೀಬೇಕು. ಈಗಾಗಲೇ ಬಣ್ಣ, ಬ್ರಷ್ ತಗೊಂಡೇ ಬಡವರಾಗಿದೀವಿ.
ಜೇಮ್ಸ್ : ಅದೊ ಬಹರ್ಮನ್ ಬಂದ. ವೆಲ್‍ಕಮ್ ಟು ಆರ್ಟಿಸ್ಟ್ಸ್ ರಿಹ್ಯಾಬಿಲಿಟೇಶನ್ ಸೆಂಟರ್. (ಎಲ್ಲರೂ ನಗುತ್ತಾರೆ)
ಮ್ಯಾಕ್‍ವೆಲ್ : ಹೇಗಿದ್ದೀಯಾ ಬಹರ್ಮನ್?
ಬಹರ್ಮನ್ : ನಾನಾ, ಚೆನ್ನಾಗಿದ್ದೀನಿ. ನೀವೆಲ್ಲಾ ಹೇಗಿದ್ದೀರಾ?
ಎಲ್ಲರೂ : ಚೆನ್ನಾಗಿದೀವಿ. ಜೀವನ ನಡೀತಾ ಇದೆ. ಇದೀವಿ ಜೀವಂತವಾಗಿ.
ಜೆನ್ನಿ : ನೀನು ಬಂದಿದ್ದು ನಮಗೆಲ್ಲಾ ಸಂತೋಷ ಆಯ್ತು.
ಜೇಮ್ಸ್ : ಎಲ್ಲಿ ನಿನ್ನ ಮಹಾಕೃತಿ? ನಾವಂತೂ ಕಾಯ್ತಾ ಕಾಯ್ತಾ ಮುದುಕರಾದ್ವಿ. (ಎಲ್ಲರೂ ನಗುತ್ತಾರೆ)
ಬಹರ್ಮನ್ : ಬರುತ್ತೆ, ಬರುತ್ತೆ. ಯಾವುದೇ ಆದ್ರೂ, ಅದು ಬರಬೇಕಾದ ಗಳಿಗೆ ಬರಬೇಕು. ಆದ್ರೆ ಬಂದಾಗ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳಬಾರದು. ಸುಮ್ನೆ ಬಾ ಅಂದ್ರೆ ಬರಲ್ಲ. ಜೀವನದಲ್ಲಿ ಬರೋ ಒಳ್ಳೇ ಕಾಲಕ್ಕೆ ಕಾಯಬೇಕು. ಅದಕ್ಕೋಸ್ಕರ ಮನಸ್ಸು, ಪ್ರಯತ್ನ - ಎರಡೂ ಕೆಲಸ ಮಾಡ್ತಾ ಇರಬೇಕು. ಬರಲೇಬೇಕಾದ ಸಮಯ ಬಂದಾಗ ಅದೇ ಕಿತ್ಕೊಂಡು ಬರುತ್ತೆ. ಆಗ ನನ್ನ ಮಹಾಕೃತಿ ರಚನೆಯಾಗುತ್ತೆ.
ಜೆನ್ನಿ : ಅಂಥ ದಿನ ಬೇಗ ಬರಲಿ. ಹೋ! ಡಾಕ್ಟರ್ ಬಂದರು. (ಎಲ್ಲರೂ ಆ ಕಡೆ ತಿರುಗುತ್ತಾರೆ) ಸಾರ್.... (ಜೆನ್ನಿ ಡಾಕ್ಟರ್ ಕಡೆ ಹೋಗುತ್ತಾಳೆ. ಎಲ್ಲರೂ ಡಾಕ್ಟರ್ ನಡೆ ನಡೆಯುತ್ತಾರೆ)
ಬಹರ್ಮನ್ : ಯಾರು ಆ ಡಾಕ್ಟರ್?
ಗೋವನ್ : ಅವರು ಡಾ.ಹೆನ್ರಿ. ಜೆನ್ನಿ ಸ್ನೇಹಿತೆ ಜಾನ್ಸಿಗೆ ಹುಷಾರಿಲ್ಲ. ಅವರೇ ನೋಡ್ತಾ ಇರೋದು.
ಬಹರ್ಮನ್ : ಅವಳಿಗೆ ಏನಾಗಿದೆ?
ಗೋವನ್ : ಯಾರಿಗ್ಗೊತ್ತು. ದಿನೇದಿನೇ ಸೊರಗಿ ಹೋಗ್ತಿದಾಳೆ. ಈ ಡಾಕ್ಟರಿಗೂ ಏನೂ ಅರ್ಥ ಆಗ್ತಿಲ್ಲ. ಇವತ್ತೇನೋ ರಿಪೋರ್ಟ್ ಬರುತ್ತೆ ನೋಡಿ ಹೇಳ್ತೀನಿ ಅಂದಿದಾರೆ. ನಡಿ ಕೇಳೋಣ.
ಜೆನ್ನಿ : (ಆತಂಕದಿಂದ) ಡಾಕ್ಟರ್ ಏನಾಯ್ತು?
ಡಾಕ್ಟರ್ : ಕುದುರೇನ ನೀರಿನವರೆಗೂ ಕರೆದುಕೊಂಡು ಹೋಗಬಹುದು ಆದರೆ ನೀರು ಕುಡಿಸೋದಕ್ಕೆ ಆಗಲ್ಲ.
ಟಾಮ್ : ನೀವು ಪ್ರಿಸ್‍ಕ್ರಿಪ್ಷನ್ ಬರೆಯೋ ಥರ ಮಾತಾಡಿದ್ರೆ, ನಮಗೆ ಹೇಗೆ ಅರ್ಥ ಆಗುತ್ತೆ. ಸ್ವಲ್ಪ ವಿವರವಾಗಿ ಹೇಳಿ.
ಡಾಕ್ಟರ್ : ಏನನ್ನ ವಿವರವಾಗಿ ಹೇಳಬೇಕು?
ಮ್ಯಾಕ್‍ವೆಲ್ : ಅದೇ, ರಿಪೋರ್ಟ್ ಏನು ಹೇಳುತ್ತೆ ಅಂತ.
ಡಾಕ್ಟರ್ : (ವಿಷಾದದ ಧ್ವನಿಯಲ್ಲಿ) ರಿಪೋರ್ಟ್ ಏನು ಹೇಳುತ್ತೆ.
ಟಾಮ್ : ಅದು ನಮಗೆ ಗೊತ್ತಿದ್ದರೆ ನಿಮಗ್ಯಾಕೆ ಕೇಳ್ತಿದ್ವಿ.
ಜೆನ್ನಿ : ಡಾಕ್ಟರ್ ಪ್ಲೀಸ್, ಅದೇನೂಂತ ಹೇಳಿ.
ಡಾಕ್ಟರ್ : ನೋಡು ಜೆನ್ನಿ, ಯಾವಾಗ ರೋಗಿ ‘ನನ್ನ ಚಟ್ಟ ಹೋರೇಕೆ ಎಷ್ಟು ಜನ ಬರ್ತಾರೆ’ ಅನ್ನೋ ಲೆಕ್ಕ ಹಾಕ್ತಾನೋ, ಆಗ ಅವನು ಹುಷಾರಾಗೋದು ಅರ್ಧಕರ್ಧ ಹೋಯ್ತು.
ಜೆನ್ನಿ : ಅಂದ್ರೆ, ಅವಳು ಬದುಕೋದಿಲ್ವಾ?
ಡಾಕ್ಟರ್ : ಅದು ಅವಳು ನಿರ್ಧಾರ ಮಾಡಬೇಕು.
ಗೋವನ್ : ಯಾಕೆ ಡಾಕ್ಟರಾಗಿ ನಿಮಗೆ ಆಗೋಲ್ವಾ?
ಡಾಕ್ಟರ್ : ನಾನು ದೇಹಕ್ಕೆ ಔಷಧ ಕೊಡಬಹುದು, ಮನಸಿಗಲ್ಲ. ಮನಸ್ಸು ಬದಲಾಯಿಸೋ ಔಷಧೀನಾ ಇನ್ನೂ ಯಾರೂ ಕಂಡುಹಿಡಿದಿಲ್ಲ.
ಗೋವನ್ : ನಿಮಗೆ ಸಾಧ್ಯವಾಗಲ್ಲ ಅನ್ನೋದಾದ್ರೆ ಹೇಳಿ, ಬೇರೆ ಯಾರನ್ನಾದರೂ ನೋಡ್ತೀವಿ.
ಡಾಕ್ಟರ್ : ನೋಡು, ನೋಡು ಹೋಗು. ಯಾವ ಡಾಕ್ಟರ್ ಬಂದ್ರೂ ಅಷ್ಟೇನೇ. ಬದುಕಬೇಕು ಅನ್ನೋ ಮನಸು ಅವಳಲ್ಲಿ ಬರದೇ ಇದ್ರೆ, ಪ್ರಪಂಚದ ಯಾವ ಡಾಕ್ಟರ್ ಬಂದರೂ ಅವಳನ್ನು ಉಳಿಸೋಕ್ಕಾಗಲ್ಲ. ಬ್ರಹ್ಮನ ಕೈಲೂ ಸಾಧ್ಯ ಇಲ್ಲ. ಯಮನೇ ಬೇಡ ಅಂತ ವಾಪಸ್ ಹೋದ್ರು, ಇವಳೇ ಹಿಂದೆ ಓಡಿಹೋಗ್ತಾಳೆ.
ಜೇಮ್ಸ್ : ಹಾಗಾದರೆ ಇದು ಮಾನಸಿಕ ಖಾಯಿಲೆ.
ಮ್ಯಾಕ್‍ವೆಲ್ : ಸೈಕಿಯಾಟ್ರಿಸ್ಟ್‍ಗೆ ತೋರಿಸಿದ್ರೆ.
ಡಾಕ್ಟರ್ : ಉಪಯೋಗ ಇಲ್ಲ. ಅವರೂ ಕೂಡ ಅಷ್ಟೇ. ದೇಹದಲ್ಲಿ ಆಗೋ ವೈಪರೀತ್ಯದಿಂದ ಬರೋ ಮಾನಸಿಕ ಖಾಯಿಲೆಗೆ ಔಷಧಿ ಕೊಡ್ತಾರೆ. ಮನಸ್ಸನ್ನು ತಹಬಂದಿಗೆ ತಂದುಕೊಳ್ಳೋದಿಕ್ಕೆ ಕೌನ್ಸಿಲಿಂಗ್ ಮೂಲಕ ಸಹಾಯ ಮಾಡ್ತಾರೆ. ತಾನು ಚೆನ್ನಾಗಿರಬೇಕು, ಬಾಳಬೇಕು, ಬದುಕಬೇಕು ಅನ್ನೋ ಆಶಾಭಾವನೆ ಇರೋ ವ್ಯಕ್ತಿಗೆ ಚಿಕಿತ್ಸೆ ಕೊಡಬಹುದು. ಆದ್ರೆ ಸಾಯೋ ದಿನಗಳನ್ನು ಎಣಿಸ್ತಾ ಕುಳಿತಿರೋವರಿಗಲ್ಲ.
ಜೆನ್ನಿ : ಹಾಗಂದ್ರೆ ಏನು ಡಾಕ್ಟರ್? ಅವಳಿಗೆ ಬದುಕೋ ಆಸೇನೇ ಇಲ್ವಾ?
ಡಾಕ್ಟರ್ : ಇಲ್ಲಾ ಜೆನ್ನಿ. ಬಹಳ ಬೇಸರವಾಗುತ್ತೆ. ಅವಳಿನ್ನೂ ಬದುಕಬೇಕಾದವಳು. ಜೀವನವನ್ನು ಅನುಭವಿಸಬೇಕಾದವಳು ಅದ್ಯಾಕೆ ಸ್ಮಶಾನದ ಕಡೆ ಮುಖ ಹಾಕಿ ಕುಳಿತಿದಾಳೋ ಅರ್ಥಾನೇ ಆಗ್ತಿಲ್ಲ.
ಜೆನ್ನಿ : ಅವಳ್ಯಾಕೆ ಹೀಗಾದ್ಲು? ನಾನು ಹೋಗಿ ನೋಡ್ತೀನಿ. 
(ಜೆನ್ನಿ ಹೊರಟುಹೋಗುತ್ತಾಳೆ. ಬಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಹೋಗುತ್ತಾರೆ)

ದೃಶ್ಯ – ಎರಡು
(ಒಂದು ಸಣ್ಣ ರೂಮು. ಮೂಲೆಯಲ್ಲಿ ಮಂಚವಿದೆ. ಮಂಚದ ಮೇಲೆ ಮಲಗಿಕೊಂಡರೆ ಎದುರಿಗೆ ಕಾಣುವಂತೆ ಕಿಟಕಿಯಿದೆ. ಮೂಲೆಯಲ್ಲಿ ಈಸಲ್ ನಿಂತಿದೆ. ಒಂದೆರೆಡು ಕಲಾಕೃತಿಗಳು ಗೋಡೆಗಳನ್ನು ಅಲಂಕರಿಸಿದೆ. ಟೇಬಲ್ ಮೇಲೆ ಬ್ರಷ್, ಬಣ್ಣ, ಪೇಪರ್‍ಗಳು ಅಸ್ತವ್ಯಸ್ತವಾಗಿ ಬಿದ್ದಿವೆ. ಟೇಬಲ್ ಮೇಲೆ ಗೋಡೆಗೆ ಕನ್ನಡಿ ತೂಗುಹಾಕಲಾಗಿದೆ. ಜಾನ್ಸಿ ಕಿಟಕಿಗೆ ಒರಗಿಕೊಂಡು ಎಣಿಸ್ತಾ ನಿಂತಿದಾಳೆ) 
ಜಾನ್ಸಿ : ಐವತ್ತು. (ನಿಟ್ಟುಸಿರು ಬಿಡುತ್ತಾಳೆ) ನೋಡಿದವರನ್ನೆಲ್ಲಾ ತನ್ನ ಕಡೆಗೆ ಸೆಳೆಯುತ್ತಿದ್ದ ಬಳ್ಳಿ, ಲತೆ! ಈ ಲತೆಗಳನ್ನೆಲ್ಲಾ ಕಳೆದುಕೊಳ್ಳುತ್ತಾ ಇದೆ. ಬೋಳಾಗ್ತಾ ಇದೆ. ಎಲೆಗಳೆನ್ನೆಲ್ಲಾ ಕಳೆದುಕೊಂಡ ಮೇಲೆ ಕೇವಲ ನೆನಪಷ್ಟೇ ಉಳಿಯುತ್ತೆ. ಅದೂ ಮಾಸಿ ಹೋಗಬಹುದು. ಯಾವುದು ಶಾಶ್ವತ. ಎಲ್ಲವೂ ಹೋಗೋದೇನೆ. (ಭಾರವಾದ ಹೆಜ್ಜೆಯಿಡುತ್ತಾ ಕನ್ನಡಿ ಬಳಿ ಬರುತ್ತಾಳೆ) ಲತೆ! (ಒಮ್ಮೆ ಕನ್ನಡಿ, ಮತ್ತೊಮ್ಮೆ ಕಿಟಕಿ ನೋಡುತ್ತಾ) ಲತೆ! ಆ ಲತೆ ಎಲೆಗಳನ್ನು ಕಳಚಿಕೊಂಡು ಅಂತ್ಯದ ಕಡೆಗೆ ಹೋಗ್ತಾ ಇದೆ. ನಾನೂ ಕೂಡ ಅಷ್ಟೇ. ಜೀವನದ ಶಕ್ತಿಯ ಎಲೆಗಳನ್ನು ಕಳಚಿಕೊಂಡು ಸಾವಿನ ಸುಖದತ್ತ ಹೋಗ್ತಾ ಇದೀನಿ. (ಮತ್ತೆ ಕಿಟಕಿಯತ್ತ ಹೋಗುತ್ತಾಳೆ) ಎಷ್ಟು ಜೋರು ಗಾಳಿ. (ಶಾಲನ್ನು ಹೊದ್ದುಕೊಂಡು) ಈ ಗಾಳಿಗೆ ಇನ್ನೊಂದಷ್ಟು ಎಲೆಗಳು ಉದುರಿಹೋಗಿವೆ. ನನಗೆ ನಿಲ್ಲೋದಕ್ಕೂ ಕಷ್ಟವಾಗ್ತಿದೆ. (ಕಾಲನ್ನು ಎಳೆದುಕೊಂಡು ಹೋಗಿ ಮಂಚದ ಮೇಲೆ ಕುಳಿತುಕೊಳ್ಳುತ್ತಾಳೆ. ದಿಂಬನ್ನು ಸರಿಪಡಿಸಿಕೊಂಡು ಕಿಟಕಿ ಕಾಣುವಂತೆ ಒರಗಿಕೊಂಡು ಕುಳಿತುಕೊಳ್ಳುತ್ತಾಳೆ. ಮತ್ತೆ ಎಣಿಕೆ ಆರಂಭವಾಗುತ್ತದೆ) ಮಳೆ ಬೇರೆ ಬರೋ ಹಾಗಿದೆ. ಈ ಗಾಳಿ ಹೊಡೆತಕ್ಕೆ ಮತ್ತಷ್ಟು ಎಲೆಗಳು ಉದುರಿಹೋಗ್ತಿವೆ. (ಆಗ ಜೆನ್ನಿ ಬರುತ್ತಾಳೆ)
ಜೆನ್ನಿ : ಜಾನ್ಸಿ, ಜಾನ್ಸಿ ಈಗ ಹೇಗಿದ್ದೀಯಾ? ಡಾಕ್ಟರ್ ಹೇಳಿದ್ರು, ನೀನು ಬೇಗ ಹುಷಾರಾಗ್ತೀಯಂತೆ.
ಜಾನ್ಸಿ : (ತಣ್ಣಗೆ) ಸುಮ್ಮನೆ ಸುಳ್ಳು ಹೇಳೋದು ಯಾಕೆ ಜೆನ್ನಿ? ಯಾವ ಡಾಕ್ಟರ್ ಔಷಧಾನೂ ನನ್ನನ್ನ ಗುಣಪಡಿಸೋಲ್ಲ.
ಜೆನ್ನಿ : ಒಳ್ಳೆ ಮುದುಕಿ ಥರ ಮಾತಾಡ್ತೀಯಲ್ಲ.
ಜಾನ್ಸಿ : (ಕಿಟಕಿಯನ್ನೇ ನೋಡುತ್ತಾ) ಸೋಲು, ನೋವುಗಳ ಜೊತೆ ಜೀವನಾನ ಎಳೆದಾಡಿಕೊಂಡು ಹೋಗೋದಕ್ಕಿಂತ, ಸಾವಿನ ಕತ್ತಲೆಯಲ್ಲಿ ನೆಮ್ಮದಿಯಾಗಿ  ಇರೋದೇ ಉತ್ತಮ.
ಜೆನ್ನಿ : ಏನ್ ಮಾತಾಡ್ತೀಯ ಜಾನ್ಸಿ, ನೀನೊಬ್ಬ ಮೂರ್ಖಳು. ಸೋಲು, ನೋವುಗಳಿಲ್ಲದ ಜೀವನಾನೇ ಇಲ್ಲ. ಮಹಾನ್ ಕಲಾವಿದರನ್ನೇ ತಗೋ. ಅವರು ಅದ್ಭುತವಾದದ್ದನ್ನು ಸೃಷ್ಟಿ ಮಾಡೋದಕ್ಕೆ ಮುಂಚೆ, ಅದೆಷ್ಟು ಪೈಟಿಂಗ್‍ಗಳನ್ನು ಕಸದಬುಟ್ಟಿಗೆ ಹಾಕಿಲ್ಲ. ವಿಫಲರಾದಾಗ ಅದೆಷ್ಟು ನೋವು ಅನುಭವಿಸಿಲ್ಲ. ಸೋಲೇ ಇಲ್ಲದ ಜಯವಿಲ್ಲ. ನೋವೇ ಇಲ್ಲದ ನೆಮ್ಮದಿಯಿಲ್ಲ.
ಜಾನ್ಸಿ : (ತನ್ನ ಪಾಡಿಗೆ ತಾನು) ಇನ್ನು ಹತ್ತೇ ಹತ್ತು.
ಜೆನ್ನಿ : ಏನದು, ಹತ್ತೇ ಹತ್ತು?
ಜಾನ್ಸಿ : ಎಲೆಗಳು ಉದುರ್ತಾ ಇವೆ.
ಜೆನ್ನಿ : (ಅಸಹನೆಯಿಂದ) ಏನು ಎಲೆಗಳು?
ಜಾನ್ಸಿ : ಕಿಟಕಿಯಿಂದಾಚೆ ನೋಡು. ಎದುರುಗಡೆ ಗೋಡೆ ಮೇಲೆ ಬೆಳೆದ ಬಳ್ಳಿ, ನಾವು ಬಂದಾಗ ಮೈದುಂಬಿ ನಿಂತಿತ್ತು. ನನ್ನ ಹಾಗೇನೇ. ಈಗ ಎಲೆಗಳೆಲ್ಲಾ ಉದುರ್ತಾ ಇವೆ. ಅದೂ ನನ್ನ ಹಾಗೇನೆ.
ಜೆನ್ನಿ : ಹುಚ್ಚುಚ್ಚಾಗಿ ಏನೇನೋ ಮಾತಾಡ್ತಾ ಇದೀಯ. ಬಳ್ಳಿಯಂತೆ, ಎಲೆಗಳಂತೆ, ಉದುರ್ತಾ ಇವೆಯಂತೆ, ನನ್ನ ಹಾಗೇನೇ ಅಂತೆ. ಅದಕ್ಕೇನಾದರೂ ಅರ್ಥ ಇದೆಯಾ?
ಜಾನ್ಸಿ : ಹೌದು ತುಂಬಾ ಅರ್ಥ ಇದೆ. ಎಲೆಗಳು ಉದುರ್ತಾ ಹೋದ ಹಾಗೆ, ಕೊನೆ ಎಲೆ ಬಿದ್ದಾಗ, ಅದು ಬಳ್ಳಿಯ ಅಂತ್ಯ.
ಜೆನ್ನಿ : ಅದರಲ್ಲೇನಿದೆ ಮಹಾರಹಸ್ಯ. ಎಲೆಗಳು ಬೀಳ್ತಾ ಇವೆ ಅಂದ್ರೆ, ಬಳ್ಳಿ ಒಣಗ್ತಾ ಇದೆ ಅಂತ ಅರ್ಥ. ಅದು ಸಹಜ.
ಜಾನ್ಸಿ : ಹಾಗೆನೇ, ನನ್ನ ಜೀವದ ಶಕ್ತಿಯ ಎಲೆಗಳೂ ಅದರ ಜೊತೇನೇ ಬೀಳ್ತಾ ಇವೆ. ಕೊನೆ ಎಲೆ ಬಿದ್ದಾಗ....
ಜೆನ್ನಿ : ನಿನಗೆಲ್ಲೋ ತಲೆ ಕೆಟ್ಟಿದೆ ಅಷ್ಟೇ. ದೇಹದಲ್ಲಿ ಶಕ್ತಿ ಕಡಿಮೆಯಾದರೆ, ಕೆಲವರಿಗೆ ಹುಚ್ಚು ಕೆರಳುತ್ತೆ ಅಂತ ಕೇಳಿದ್ದೆ. ನಿನಗೂ ಹಾಗೇ ಅನ್ಸುತ್ತೆ. ಸ್ವಲ್ಪ ಹೊರಗೆ ಬಂದು ಒಳ್ಳೇ ಗಾಳಿ ಕುಡಿದ್ರೆ, ಜನರ ಜೊತೆ ಮಾತಾಡಿದ್ರೆ, ದೇಹಕ್ಕೂ, ಮೆದುಳಿಗೂ ಶಕ್ತಿ ಬರುತ್ತೆ. ಬಾ ಹೊರಗಡೆ ಹೋಗಿ ಬರೋಣ.
ಜಾನ್ಸಿ : ಇಲ್ಲ ಜೆನ್ನಿ. ನನಗೆ ಎದ್ದು ಓಡಾಡೋ ಅಷ್ಟೂ ಶಕ್ತಿಯಿಲ್ಲ.
ಜೆನ್ನಿ : (ಹತ್ತಿರ ಹೋಗಿ) ಸುಮ್ಮನೆ ಬಾ ಅಂದ್ರೆ ಬಾ.
ಜಾನ್ಸಿ : (ಸಿಟ್ಟಿನಿಂದ) ಬೇಡ ಜೆನ್ನಿ, ನನಗೆ ಆಗಲ್ಲ ಅಂದ್ರೆ ಆಗಲ್ಲ. ಒಂದು ಹೆಜ್ಜೆ ಇಡೋದಿಕ್ಕೂ ಆಗಲ್ಲ. ನೀನು ಎಲ್ಲಿಗೆ ಬೇಕಾದ್ರೂ ಹೋಗಿ ಬಾ. ಜೆನ್ನಿ ಅವಳ ಮಾತು ಕೇಳದೆ ಕೈ ಹಿಡಿದು ಎಳೆಯುತ್ತಾಳೆ. ಜಾನ್ಸಿ ನೆಲಕ್ಕೆ ಬೀಳುತ್ತಾಳೆ)
ಜಾನ್ಸಿ : ಹೇಳೆದಷ್ಟು ಕೇಳು. ನನ್ನನ್ನ ಮಂಚದ ಮೇಲೆ ಮಲಗ್ಸು.
ಜೆನ್ನಿ : ಸಾರಿ ಜಾನ್ಸಿ. (ಮಂಚದ ಮೇಲೆ ಮಲಗಿಸುತ್ತಾಳೆ) ಅವಳನ್ನು ಸಮಾಧಾನ ಪಡಿಸುತ್ತಾ) ಜಾನ್ಸಿ ಸ್ವಲ್ಪ ಸೂಪ್ ತರ್ತೀನಿ. (ಸೂಪ್ ತರಲು ಹೋಗುತ್ತಾಳೆ)
ಜಾನ್ಸಿ : ನನಗೇನೂ ಬೇಡ. ಯಾವುದೂ ಬೇಕಾಗಿಲ್ಲ.
ಜೆನ್ನಿ : (ಸೂಪ್ ಹಿಡಿದುಕೊಂಡು ಬಂದು) ಸ್ವಲ್ಪ ಸೂಪ್ ಕುಡಿದ್ರೆ ಜೀವ ಬಂದ ಹಾಗೆ ಆಗುತ್ತೆ. ಸ್ವಲ್ಪ ಕುಡಿ ಜಾನ್ಸಿ.
ಜಾನ್ಸಿ : (ಕಿಟಕಿಯತ್ತ ನೋಡುತ್ತಾ) ಜೆನ್ನಿ ಒಂದು ಕೆಲಸ ಮಾಡು. ಒಳ್ಳೆ ಗೊಬ್ಬರ ತಂದು ಬಳ್ಳಿಗೆ ಹಾಕು.
ಜೆನ್ನಿ : ಯಾಕೆ?
ಜಾನ್ಸಿ : ನಾಳೆ ಬಳ್ಳಿ ಚಿಗುರುತ್ತೆ. ಆಗ ನಾನೂ ಚಿಗುರ್ತೀನಿ. ಸಾಯೋ ಗಿಡಕ್ಕೆ ಎಷ್ಟು ಗೊಬ್ಬರ, ನೀರು ಹಾಕಿದ್ರೂ ಅಷ್ಟೇನೆ. (ಚಳಿಗೆ ಮೈ ಮುದುಡಿಕೊಂಡು) ಇನ್ನೊಂಎರೆಡು ಎಲೆ ಇದೆ.
ಜೆನ್ನಿ : ಈಗ ಸ್ವಲ್ಪ ಮಲಕ್ಕೋ, ಆಮೇಲೆ ಎಣಿಸುವಂತೆ. ಇಷ್ಟೊಂದು ಚಳಿ ಒಳ್ಳೇದಲ್ಲ.
ಜಾನ್ಸಿ : ಇರಲಿ ಬಿಡು.
ಜೆನ್ನಿ : ನೋಡು ಎಲ್ಲದಕ್ಕೂ ಹಠ ಮಾಡ್ಬೇಡ. ಶೀತಗಾಳಿ ಜೋರಾಗಿ ಬೀಸ್ತಾ ಇದೆ. ಮಳೆ ಸಣ್ಣಗೆ ಸುರೀತಿದೆ. ಕಿಟಕಿ ಮುಚ್ತೀನಿ.
ಜಾನ್ಸಿ : ಬೇಡ ಜೆನ್ನಿ, ಹಾಗೇ ಇರಲಿ. ಎಲೆ ಉದುರೋದನ್ನ ನೋಡ್ಬೇಕು.
ಜೆನ್ನಿ : (ಕಿಟಕಿಯನ್ನು ಮುಚ್ಚುತ್ತಾ) ನೋಡು ಸ್ವಲ್ಪ ನಿದ್ದೆ ಮಾಡು. ನಾನು ಗಣಿ ಕಾರ್ಮಿಕನ ಪೈಂಟಿಂಗ್ ಮಾಡ್ಬೇಕು. ಬಹರ್ಮನ್ ಮಾಡೆಲ್ ಆಗೋದಿಕ್ಕೆ ಕರೀಬೇಕು. ಸ್ವಲ್ಪ ನಿದ್ದೆ ಮಾಡಿ ಏಳು. ಆಮೇಲೆ ಎಣಿಸೋವಂತೆ. (ಜೆನ್ನಿ ಹೊರಡುತ್ತಾಳೆ)
ಜಾನ್ಸಿ : (ಜೆನ್ನಿ ಕೈ ಹಿಡಿದುಕೊಂಡು) ನಿನಗೆ ನನ್ನ ಮೇಲೆ ಎಷ್ಟೊಂದು ಪ್ರೀತಿ ಇದೆ. ಆದರೆ ನಾನೇನ್ ಮಾಡಲಿ, ನಾನು ಅಸಹಾಯಕಳು. ಹೋಗೋದಿಕ್ಕೆ ಮುಂಚೆ ಒಂದು ಸಲ ಕಿಟಕಿ ತೆಗೆ. (ಜೆನ್ನಿ ಕಿಟಕಿ ತೆರೆಯುತ್ತಾಳೆ. ಜಾನ್ಸಿ ಒಂದು ರೀತಿಯ ಉದ್ರೇಕ, ಅವ್ಯಕ್ತ ಸಂತೋಷದಿಂದ) ಒಂದೇ ಒಂದು ಎಲೆ ಉಳಿದುಕೊಂಡಿದೆ. (ಜೆನ್ನಿ ಬೇಸರ, ದುಃಖದಿಂದ ಕಿಟಕಿಯನ್ನು ಮುಚ್ಚಿ ಬಿರುಸಾಗಿ ಹೊರಗಡೆ ಹೋಗುತ್ತಾಳೆ) ಒಂದೇ ಒಂದು ಎಲೆ, ಕೊನೆ ಎಲೆ. ಅಲ್ಲಿಗೆ ಎಲ್ಲವೂ ಕೊನೆ. ಒಂದೇ ಎಲೆ, ಕೊನೆ ಎಲೆ.

ದೃಶ್ಯ - ಮೂರು

(ಜೆನ್ನಿ ಬಹರ್ಮನ್ ರೂಮಿಗೆ ಬರುತ್ತಾಳೆ. ಅಲ್ಲೊಂದು ಖಾಲಿ ಕ್ಯಾನ್ವಾಸ್ ಬಿದ್ದಿದೆ. ಬಹರ್ಮನ್ ಪೈಪ್ ಹಿಡಿದುಕೊಂಡು ಏನನ್ನೋ ಯೋಚಿಸುತ್ತಾ ಕುಳಿತಿದ್ದಾನೆ. ಸಣ್ಣಗೆ ಕೆಮ್ಮುತ್ತಿದ್ದಾನೆ. ಜೆನ್ನಿ ಪ್ರವೇಶ) 

ಜೆನ್ನಿ : ಬಹರ್ಮನ್, ನಾನು ಗಣಿ ಕಾರ್ಮಿಕರ ಬಗ್ಗೆ ಪೈಂಟಿಂಗ್ ಮಾಡಬೇಕು. ಮಾಡೆಲ್ ಕುಳಿತುಕೊಳ್ತೀಯಾ?
ಬಹರ್ಮನ್ : ಹುಂ. ನನಗೆ ಅದನ್ನು ಬಿಟ್ಟರೆ ಬೇರೆ ಕೆಲಸವೇನಿದೆ? ಅಂದ ಹಾಗೆ ನಿನ್ನ ಸ್ನೇಹಿತೆ, ಆಕೆ ಹೆಸರೇನೂ.... ಜ...
ಜೆನ್ನಿ : ಜಾನ್ಸಿ.
ಬಹರ್ಮನ್ : ಹಾಂ, ಜಾನ್ಸಿ, ಹೇಗಿದಾಳೆ?
ಜೆನ್ನಿ : ಅವಳ ಬಗ್ಗೆ ಎನು ಹೇಳಲಿ? ಬದುವುದರ ಬಗ್ಗೆ ಯೋಚನೆ ಬಿಟ್ಟು ಸಾಐಉವ ಸುಖಕ್ಕೆ ಕಾಯ್ತಾ ಇದಾಳೆ. ಬಹರ್ಮನ್, ಅವಳು ಅದೆಷ್ಟು ವಿಚಿತ್ರವಾಗಿ ಆಡ್ತಾ ಇದಾಳೆ ಗೊತ್ತಾ. ನಮ್ಮ ರೂಮಿನ ಕಿಟಕಿ ಎದುರಗಡೆ ಗೋಡೆ ಇದೆ. ಅಲ್ಲೊಂದು ಬಳ್ಳಿ ಇದೆ. ಅದರ ಎಲೆಗಳು ಉದುರ್ತಾ ಇವೆ. ಜಾನ್ಸಿ, ಆ ಬಳ್ಳಿ ಜೊತೆ ತನ್ನ ಜೀವನಾನೂ ಸುತ್ತಿಕೊಂಡಿದಾಳೆ. ಅದರಲ್ಲಿ ಈಗ ಒಂದೇ ಒಂದು ಎಲೆ ಉಳಿದಿದೆ. ಆ ಕೊನೆ ಎಲೆ ಬಿದ್ದಾಗ ತಾನೂ ಸತ್ಹೋಗ್ತೀನಿ ಅಂತ ಹೇಳ್ತಿದಾಳೆ.
ಬಹರ್ಮನ್ : ನಮ್ಮ ಜನ ಚಿಕ್ಕ ವಯಸ್ಸಿಗೇ ಮುದುಕರಾಗ್ತಾ ಇದಾರೆ. ನೋಡು, ಜೀವನದಲ್ಲಿ ಉತ್ಸಾಹ ಕಾಣದೆ ಇರೋನು ಕಲಾವಿದ ಆಗೋಲ್ಲ. ಒಳ್ಳೆಯ ಕಲಾವಿದನಾಗಿ ಬೆಳೆಯೋದಂತೂ ಅಸಾಧ್ಯ. ಹೊಸ ಹೊಸ ಸವಾಲು ಗಳನ್ನು ನಗ್ತಾ ಸ್ವೀಕರಿಸಬೇಕು. ಹೊಸದನ್ನು ಸೃಷ್ಟಿ ಮಾಡ್ತಾ ಇರ್ಬೇಕು. ಅವಳೆಂಥಾ ಕಲಾವಿದೆ? ಜೆನ್ನಿ, ಅವಳಿಗೆ ಜೀವನದಲ್ಲಿ ಏನನ್ನಾದರೂ ಮಾಡ್ಬೇಕು ಅನ್ನೋ ಆಸೇನೆ ಇಲ್ವಾ? ಏನಾದರು ಅದ್ಭುತವಾದದ್ದನ್ನ ಸಾಧಿಸೋದು. ಅದು ಮನುಷ್ಯನಲ್ಲಿ ಜೀವಂತಿಕೆ ತುಂಬುತ್ತೆ. ಮನುಷ್ಯನಿಗೆ ಒಂದು ಧ್ಯೇಯ ಇರ್ಬೇಕು. ಉದಾತ್ತವಾದ ಧ್ಯೇಯ.
ಜೆನ್ನಿ : ಅವಳಿಗೆ ನೇಪಲ್ಸ್‍ನ ಕಡಲ ತೀರವನ್ನು ಚಿತ್ರಿಸ್ಬೇಕು ಅಂತ ಆಸೆ ಇತ್ತು.
ಬಹರ್ಮನ್ : ಅವಳೇನಾದರೂ ನೇಪಲ್ಸ್ ಕಡಲತೀರದ ಪೈಂಟಿಂಗ್ ಮಾಡಿದ್ರೆ, ನೋಡಿದವರು ನೇರವಾಗಿ ಹೋಗಿ ಆತ್ಮಹತ್ಯೆ ಮಾಡ್ಕೋತಾರೆ.
ಜೆನ್ನಿ : ಯಾಕೆ?
ಬಹರ್ಮನ್ : ನೇಪಲ್ಸ್ ಕಡಲತೀರ ಬಹಳ ಮನೋಹರವಾದದ್ದು. ಕಣ್ಣು ಹಾಯಿಸಿದಷ್ಟು ಅಂತ್ಯವೇ ಕಾಣದ ಸಮುದ್ರದ ತೀರ. ಜೀವನದ ಅನಂತ ಸಾಧ್ಯತೆಗಳ ಪ್ರತೀಕ. ಜೀವನದ ಸೌಂದರ್ಯವನ್ನು ಸವಿಯಬೇಕು ಅನ್ನೋ ರಸಿಕತೆಯ ಸಂಕೇತವಾದ ನೀಲಿ ಬಣ್ಣ. ಎತ್ತರೆತ್ತೆ ಬೆಳೆದು ನಿಂತ ಕಲ್ಲುಬಂಡೆಗಳನ್ನೂ ಮೀರಿ ಚಿಮ್ಮುವ ಬೃಹದಾಕಾರದ ಅಲೆಗಳ ರುದ್ರಮನೋಹರ ನೆಗೆತ ಅದು ಒಂದು ಅದ್ಭುತ ದೃಶ್ಯ. ಅದೇನಾದ್ರೂ ನಿನ್ನ ಜಾನ್ಸಿ ಕೈಗೆ ಸಿಕ್ಕಿದ್ರೆ....
ಜೆನ್ನಿ : ಸಿಕ್ಕಿದ್ರೆ ಏನಾಗುತ್ತೆ?
ಬಹರ್ಮನ್ : ಇನ್ನೇನಾಗುತ್ತೆ. ಕಡಲ ನೀರಿಗೆಲ್ಲಾ ಕಪ್ಪು ಬಳೀತಾಳೆ. ಮರಳಿನ ಮೇಲೆ ಕುಳಿತಿರೋ ವ್ಯಕ್ತಿಗಳು ಶವಗಳ ರೀತಿ ಇರ್ತಾರೆ. ಕಪ್ಪು ಅಲೆಗಳು ಜನಗಳನ್ನು ತನ್ನ ಮಡಿಲಿಗೆ ಎಳೆದುಕೊಳ್ಳೋ ದೆವ್ವಗಳ ಥರ ಇರ್ತವೆ.
ಜೆನ್ನಿ : ಕಲಾವಿದರು ತಮ್ಮ ಮನಸ್ಸಿಗೆ ಏನು ಬರುತ್ತೋ ಅದನ್ನು ಚಿತ್ರಿಸ್ತಾರೆ.
ಬಹರ್ಮನ್ : ಅದೇನೋ ನಿಜ. ಒಂದು ವಸ್ತು ತನಗೆ ಹೇಗೆ ಕಾಣ್ಸುತ್ತೋ ಅದೇ ರೀತಿ ಕಲಾವಿದ ಚಿತ್ರಿಸ್ತಾನೆ. ಆದರೆ ಒಂದು ವಿಷಯ ನೆನಪಿಟ್ಕೊ. ಕಲಾವಿದ ಎಲ್ಲದಕ್ಕಿಂತ ಮೊದಲು ಜೀವನಾವ ಆಳವಾಗಿ ಅರ್ಥ ಮಾಡ್ಕೋಬೇಕು. ಜೀವನಕಿಂತ ದೊಡ್ಡದಾದ ಕಲೆ ಇಲ್ಲ. ನಮ್ಮ ಸುತ್ತಮುತ್ತ ಇರೋ ಸೌಂದರ್ಯ, ಕುರೂಪ - ಒಳ್ಳೆಯದು, ಕೆಟ್ಟದ್ದು - ನೋವು, ನಲಿವು, ಎಲ್ಲದರ ಬಗ್ಗೆ ತಿಳ್ಕೋಬೇಕು. ಜೀವನದಲ್ಲಿರೋ ಸೌಂದರ್ಯ, ಸಾಧ್ಯತೆ, ಭರವಸೆ, ಭವಿಷ್ಯಗಳ ಬಗ್ಗೆ ಚಿತ್ರಿಸ್ಬೇಕು. ಒಂದು ಪೈಂಟಿಂಗ್ ನೋಡಿದ ವ್ಯಕ್ತಿಯಲ್ಲಿ ಉತ್ಸಾಹ ಬರಬೇಕು. ಜೀವನ ಸುಂದರವಾಗಿದೆ ಅನಿಸಬೇಕು. ಇಲ್ಲಾಂದ್ರೆ ಸುಂದರಗೊಳಿಸಬೇಕು ಅನ್ನಿಸ್ಬೇಕು.
ಜೆನ್ನಿ : ಆದ್ರೆ ಅಂಥ ಪೈಂಟಿಂಗ್‍ನ ಯಾರು ತಗೋಳ್ತಾರೆ ಬಹರ್ಮನ್?
ಬಹರ್ಮನ್ : ಪೈಂಟಿಂಗ್‍ನ ಮಾರಲೇಬೇಕು ಅನ್ನೋದಾದ್ರೆ ಪೈಂಟಿಂಗ್ ಯಾಕೆ ಮಾಡ್ತೀರ. ಬೇರೆ ಏನಾದ್ರೂ ಕೆಲಸ ಮಾಡಬಹುದಲ್ಲ. ಬೇರೆ ಏನಾದ್ರೂ ಕೆಲಸ ಮಾಡಬಹುದಲ್ಲ. ಮಾರುವುದಕ್ಕೋಸ್ಕರ ಪೈಂಟಿಂಗ್ ಮಾಡೋರು ಕಲಾವಿದರಲ್ಲ, ಕೆಲಸಗಾರರು.
ಜೆನ್ನಿ : ಕಲಾವಿದ ಜೀವನ ಮಾಡೋದು ಬೇಡ್ವಾ? ಹಸಿವಿನಿಂದ ಸಾಯ್ಬೇಕಾ?
ಬಹರ್ಮನ್ : ಸರಿ, ಕಲಾವಿದರು ಹಸಿವಿನಿಂದ ನರಳೋದಕ್ಕೋಸ್ಕರಾನೆ ಬ್ರಷ್ ಹಿಡಿಯಲ್ಲ. ಅವರು ಮಾಡಿದ ಪೈಂಟಿಂಗ್‍ನಿಂದ ಹಣ ಬಂದರೆ ಒಳ್ಳೆಯದೆ. ಆದ್ರೆ ಅದೇ ಉದೇಶ ಆಗಬಾರದು.
ಜೆನ್ನಿ : ಅಂಥ ಪೈಂಟಿಂಗ್‍ನಿಂದ ಹಸಿವು ಹಿಂಗೋದಿಲ್ಲಾ?
ಬಹರ್ಮನ್ : ಅದೇ ವಿಪರ್ಯಾಸ. ಈ ಹಸಿವು ಅನ್ನೋದು ಕಲಾವಿದನ ಕಲ್ಪನೆ, ಸೃಷ್ಟಿ, ಸೃಜನಶೀಲತೆ, ಎಲ್ಲವನ್ನೂ ನುಂಗಿಬಿಡುತ್ತೆ. ಆದರೆ ಕಲಾವಿದ ಪರಿಸ್ಥಿತಿಯ ಗುಲಾಮನಾಗಬಾರದು. ಅದನ್ನೂ ಮೀರಿ ನಿಲ್ಲಬೇಕು. ಜೆನ್ನಿ ಭವಿಷ್ಯದ ಬದುಕಿನ ಬಗ್ಗೆ ಭರವಸೆ ಮೂಡಿಸೋದು, ಜನರ ಮನಸ್ಸನ್ನು ಅದಕ್ಕೆ ಸೆಳೆಯೋದು - ಅದೇ ಕಲೆಯ ಗುರಿ. ಅಂಥದೊಂದು ಕೃತಿಗೋಸ್ಕರ, ಬೇರೆಯವರ ಬದುಕಿಗೆ ಜೀವ ತುಂಬುವ ಕೃತಿಯ ರಚನೆಗೋಸ್ಕರ ಕಲಾವಿದ ಎಲ್ಲದಕ್ಕೂ ತಯಾರಾಗಿರಬೇಕು.
ಜೆನ್ನಿ : ನೀನು ಹೇಳೋದು ಸರಿ ಅನ್ಸುತ್ತೆ. ಆದ್ರೆ ಜೀವನದಲ್ಲಿ ಪಾಲಿಸೋದು ಭಾರಿ ಕಷ್ಟ. ನಡಿ, ಇನ್ನು ತುಂಬಾ ಲೇಟಾಗುತ್ತೆ.
ಬಹರ್ಮನ್ : ನಿಮ್ಮಂಥ ಕಲಾವಿದರಿಗೆ ನಾನು ಮಾಡೆಲ್ ಆಗಿ ಕುಳಿತುಕೊಳ್ಳಬೇಕು.
ಜೆನ್ನಿ : ನೋಡು ಬಹರ್ಮನ್, ನಿನಗೆ ಇಷ್ಟ ಇದ್ದರೆ ಬಾ, ಇಲ್ಲದಿದ್ದರೆ ಬಿಡು.
ಬಹರ್ಮನ್ : (ಹೋಗುತ್ತಿದ್ದವಳನ್ನು ತಡೆದು) ಅಯ್ಯೊ ಜೆನ್ನಿ, ನಿಲ್ಲು! ಸಿಗೊ ಸ್ವಲ್ಪ ಬ್ರೆಡ್ಡಿಗೂ ಯಾಕೆ ಕಲ್ಲು ಹಾಕ್ತೀಯಾ?

ದೃಶ್ಯ - ನಾಲ್ಕು

(ಜೆನ್ನಿ ಮತ್ತು ಬಹರ್ಮನ್ ಒಳಗೆ ಬರುತ್ತಾರೆ) 

ಜೆನ್ನಿ : ಬಾ, ಬಹರ್ಮನ್, ಒಳಗಡೆ ಬಾ.
ಬಹರ್ಮನ್ : (ಜಾನ್ಸಿಯತ್ತ ನೋಡುತ್ತಾ) ಇವಳೇನಾ ಜಾನ್ಸಿ?
ಜೆನ್ನಿ : ಹೌದು. ಸಧ್ಯ ನಿದ್ರೆ ಮಾಡ್ತಿದಾಳೆ. ನಿದ್ರೆ ಮಾಡಿದ ಮೇಲಾದ್ರೂ ಸಮಾಧಾನ ಆಗಬಹುದು.
ಬಹರ್ಮನ್ : (ನಿಟ್ಟುಸಿರು ಬಿಟ್ಟು) ಪ್ರಪಂಚವನ್ನೇ ಜಯಿಸ್ತೀನಿ ಅನ್ನೋ ವಯಸ್ಸು. ಒಂದು ಕಾಲದಲ್ಲಿ ಈ ಮುಖ ಕಾಂತಿಯಿಂದ ಹೊಳೀತಾ ಇತ್ತು ಅನ್ಸುತ್ತೆ. ಮನಸ್ಸಿಗೆ ಮುಪ್ಪಾದರೆ ದೇಹ ಬೇಗ ಶಿಥಿಲ ಆಗುತ್ತೆ.
ಜೆನ್ನಿ : ಎಷ್ಟು ಲವಲವಿಕೆಯಿಂದ ಇದ್ಲು. ನೋಡೋದಿಕ್ಕೆ ಸಂತೋಷವಾಗೋದು.
ಬಹರ್ಮನ್ : ಜಾನ್ಸಿ, ಮೊಗ್ಗು ಹೂವಾಗಿ ಅರಳಿದಾಗ, ಅದರ ಸುಗಂಧ ಎಲ್ಲಾ ಕಡೆ ಹರಡುತ್ತೆ. ಎಲ್ಲರ ಮನಸ್ಸನ್ನೂ ಮುದಗೊಳಿಸುತ್ತೆ. ಅದೇ ಬಳ್ಳಿಯ ಸೌಂದರ್ಯ, ಸಾರ್ಥಕತೆ ಎಲ್ಲಾ. ಮನುಷ್ಯನ ಜೀವನಾ ಕೂಡ ಹಾಗೇನೇ. ಅಂದ ಹಾಗೆ ಬಳ್ಳಿ ಎಲ್ಲಿ?
ಜೆನ್ನಿ : (ಕಿಟಕಿಯತ್ತ ಹೋಗಿ) ಬಾ. (ಕಿಟಕಿ ತೆಗೆಯುತ್ತಾಳೆ. ಜೋರಾಗಿ ಬೀಸಿದ ಗಾಳಿಗೆ ಮುಖ ಹಿಂದಕ್ಕೆಳೆದುಕೊಳ್ಳುತ್ತಾಳೆ) ಏನು ಗಾಳಿ. ಮಳೇ ಬೇರೆ ಸುರೀತಾ ಇದೆ. (ಬಹರ್ಮನ್ ಕಿಟಕಿಯ ಹತ್ತಿರ ಹೋಗುತ್ತಾನೆ) ಅಲ್ಲಿ ನೋಡು ಗೋಡೆಗೆ ಅಂಟಿಕೊಂಡು ನಿಂತಿದೆಯಲ್ಲ ಬಳ್ಳಿ.... 
(ಜೆನ್ನಿ ಮತ್ತು ಬಹರ್ಮನ್ ಪರಸ್ಪರ ಮುಖ ನೋಡಿಕೊಳ್ಳುತ್ತಾರೆ. ಬಹರ್ಮನ್ ಕಿಟಕಿಯ ಹೊರಗೆ ತಲೆಹಾಕಿ ನೋಡುತ್ತಾನೆ)
ಬಹರ್ಮನ್ : ಕೆಳಗಡೆ ಅಡುಗೆ ಮನೆ ಹಿಂದೆ ಇರುವ ಓಣಿಯಲ್ವಾ. (ಜೆನ್ನಿ ತಲೆಯಾಡಿಸುತ್ತಾಳೆ. ಕಿಟಕಿಯನ್ನು ಮುಚ್ಚುತ್ತಾ) ಹುಂ ನಡಿ. ಎಲ್ಲಿ ಕುಳಿತುಕೊಳ್ಳಲಿ. 
(ಜೆನ್ನಿ ಒಂದು ಸ್ಟೂಲನ್ನು ಮಧ್ಯದಲ್ಲಿಡುತ್ತಾಳೆ. ಈಸಲ್‍ನನ್ನು ತನ್ನ ಮುಂದೆ ಇಟ್ಟುಕೊಂಡು ಚಿತ್ರರಚನೆಗೆ ತೊಡಗುತ್ತಾಳೆ. ಒಂದೆರೆಡು ಗೆರೆ ಎಳೆಯುತ್ತಾಳೆ. ಜಾನ್ಸಿಯತ್ತ ನೋಡುತ್ತಾಳೆ. ಮತ್ತೆ ಚಿತ್ರರಚನೆಗೆ ಪ್ರಯತ್ನಪಡುತ್ತಾಳೆ. ಮತ್ತೆ ಜಾನ್ಸಿಯತ್ತ ನೋಡುತ್ತಾಳೆ)
ಜೆನ್ನಿ : ಇಲ್ಲ ಬಹರ್ಮನ್. ನನ್ನ ಕೈಲಿ ಆಗೋದಿಲ್ಲ. ನಾಳೆ ನೋಡೋಣ.
(ಜೆನ್ನಿ ಈಸಲ್ ಮೇಲೆ ತಲೆಯಿಟ್ಟು ಬಿಕ್ಕುತ್ತಾಳೆ. ರಂಗದ ಮೇಲೆ ಕತ್ತಲೆ)

ದೃಶ್ಯ – ಐದು

(ಬೆಳಿಗ್ಗೆ ತುಂಬಾ ಹೊತ್ತಾಗಿದೆ. ಜೆನ್ನಿ ಮಲಗಿದ್ದಾಳೆ. ಜಾನ್ಸಿ ಚಡಪಡಿಸುತ್ತಾ ಒದ್ದಾಡುತ್ತಿದ್ದಾಳೆ) 

ಜಾನ್ಸಿ : ಜೆನ್ನಿ. (ಸ್ವಲ್ಪ ಜೋರಾಗಿ) ಜೆನ್ನಿ, ತುಂಬಾ ಹೊತ್ತಾಗಿದ. ಎದ್ದೇಳು.
ಜೆನ್ನಿ : (ಎದ್ದೇಳುತ್ತಾ) ಏನು ಜಾನ್ಸಿ.
ಜಾನ್ಸಿ : ಎಷ್ಟೊತ್ತಿಂದ ಕಾಯ್ತಾ ಇದೀನಿ. ಕಿಟಕಿ ತೆಗಿ.
ಜೆನ್ನಿ : (ಯಾಂತ್ರಿಕವಾಗಿ ಕಿಟಕಿಯ ಬಳಿ ಹೋಗಿ ತಟ್ಟನೆ ನಿಲ್ಲುತ್ತಾಳೆ) ಇರಲಿ ಬಿಡು ಜಾನ್ಸಿ. ಚಳಿಯಿದೆ. ಆಮೇಲೆ ತೆಗೆದರಾಯ್ತು.
ಜಾನ್ಸಿ : (ಆತುರದಿಂದ) ಇಲ್ಲ ಜೆನ್ನಿ. ಈಗ್ಲೇ ತೆಗಿ. ನಾನು ಬೇಗ ನೋಡಬೇಕು.
ಜೆನ್ನಿ : (ಗಾಬರಿಯಿಂದ) ಬೇಡ ಜಾನ್ಸಿ ಬೇಡ. ಸುಮ್ಮನೆ ಹಠ ಹಿಡಿಬೇಡ. ಇನೂ ಸ್ವಲ್ಪ ಹೊತ್ತು ಆರಾಮವಾಗಿ ಮಲಗಿರು.
ಜಾನ್ಸಿ : ಹಠ ಹಡಿದಿರೋದು ನೀನು. ಸುಮ್ಮನೆ ಕಿಟಕಿ ತೆಗಿ.
ಜೆನ್ನಿ : ನಿನಗಂತೂ ಬುದ್ಧಿ ಬರಲ್ಲ. ಏನಾದ್ರೂ ಮಾಡ್ಕೊ.
(ಜೆನ್ನಿ ಕಿಟಕಿ ಬಾಗಿಲು ತೆಗೆದು, ತಲೆತಗ್ಗಿಸಿಕೊಂಡು ಹಿಂದೆ ಬರುತ್ತಾಳೆ. ಜಾನ್ಸಿ ಕಿಟಕಿಯ ಕಡೆ ಬಿರುಗಣ್ಣಿನಿಂದ ನೋಡುತ್ತಾಳೆ. ಮುಖದಲ್ಲಿ ಆಶ್ಚರ್ಯ)
ಜಾನ್ಸಿ : ಕೊನೆ ಎಲೆ ಬಿದ್ದೇ ಇಲ್ಲ. (ಮಂಚದ ಮೇಲೆ ಕುಳಿತುಕೊಳ್ಳುತ್ತಾಳೆ) ಜೆನ್ನಿ, ಜೆನ್ನಿ, ಅಲ್ಲಿ ನೋಡು, ಆ ಎಲೆ ಬಿದ್ದೇ ಇಲ್ಲ. (ಜೆನ್ನಿ ಕಿಟಕಿಯ ಕಡೆ ಆಶ್ಚರ್ಯದಿಂದ ನೋಡುತ್ತಾಳೆ) ಜೆನ್ನಿ, ಸ್ವಲ್ಪ ಕೈ ಹಿಡ್ಕೊ. (ಕಿಟಕಿಯ ಹತ್ತಿರ ಹೋಗುತ್ತಾಳೆ) ರಾತ್ರಿ ಗಾಳಿ ಜೋರಾಗಿ ಬೀಸ್ತಾ ಇತ್ತು. ಮಳೇನೂ ಸುರೀತಾ ಇತ್ತು. ಆದ್ರೂ ಆ ಕೊನೆ ಎಲೆ ಗೋಡೆಗೆ ಗಟ್ಟಿಯಾಗಿ ಅಂಟಿಕೊಂಡಿದೆ. ಜೆನ್ನಿ, ಯಾವ್ದೂ ಬೇಗ ಸಾಯೋದಿಕ್ಕೆ ಇಷ್ಟಪಡಲ್ವಾ?
ಜೆನ್ನಿ : ಸಣ್ಣ ಹುಳ ಕೂಡ ಬದುಕೋ ಪ್ರಯತ್ನ ಮಾಡುತ್ತೆ.
ಜಾನ್ಸಿ : ಗಾಳಿ, ಮಳೆ - ಸೋಲು, ದುಃಖ, ಇವುಗಳ ನಡುವೆ, ಅಲ್ಲ ಅವುಗಳನ್ನು ಮೀರಿ ಭದ್ರವಾಗಿ ನಿಲ್ಲಬೇಕು. ಆದ್ರೆ ಯಾಕೆ ನಿಲ್ಲಬೇಕು. ಜೀವಂತವಾಗಿ ಇರೋದಿಕ್ಕೆ ಬಯಸೋದೇನೆ ಅದರ ಗುಣ ಇರ್ಬೇಕು.
ಜೆನ್ನಿ : ಬಹರ್ಮನ್ ಹೇಳ್ತಿದ್ದ ಹಾಗೆ ಸೋಲಿಗೆ ಶರಣಾದ್ರೆ ಜಯ ಪಡೆಯೋದು ಅಸಾಧ್ಯ. ಸಾವನ್ನು ಇಷ್ಟಪಟ್ಟರೆ ಬದುಕೋದು ಅಸಾಧ್ಯ.
ಜಾನ್ಸಿ : ನಾನು ಬದುಕೋದ್ರಿಂದ ಏನಾದರೂ ಉಪಯೋಗ ಇದೆಯಾ?
ಜೆನ್ನಿ : ಏನು ಮಾತಾಡ್ತೀಯ ಜಾನ್ಸಿ. ಸರಿಯಾದ ರೀತಿಯಲ್ಲಿ ಬದುಕಿದ್ರೆ, ಪ್ರತಿಯೊಬ್ಬರ ಬದುಕು ಉಪಯೋಗಾನೆ; ಒಬ್ಬರಲ್ಲ, ಇನ್ನೊಬ್ಬರಿಗೆ. ಒಂದು ರೀತಿಯಲ್ಲದಿದ್ದರೆ ಇನ್ನೊಂದು ರೀತೀಲಿ. ಜಾನ್ಸಿ ನೀನು ನನಗೆ ಬೇಕು... ನಮ್ಮೆಲ್ಲರಿಗೂ ಬೇಕು. ನಿನ್ನನ್ನು ಒಳ್ಳೆಯ ಕಲಾವಿದೆಯಾಗಿ ನೋಡೋಕೆ ಎಲ್ಲರೂ ಇಷ್ಟಪಡ್ತಾರೆ.
ಜಾನ್ಸಿ : ಒಳ್ಳೆಯ ಕಲಾವಿದೆಯಾಗಿ ನೋಡೋದಿಕ್ಕೆ ಇಷ್ಟ ಪಡ್ತಾರೆ. ಶವವಾಗಿ ನೋಡೋದಿಕ್ಕೆ...
ಜೆನ್ನಿ : ಕಷ್ಟ ಪಡ್ತಾರೆ. ಹೆಚ್ಚು ದಿನ ಆದ್ರೆ ಮೂಗು ಮುಚ್ಕೋತಾರೆ.
ಜಾನ್ಸಿ : (ನಗುತ್ತಾ) ಹೌದು. ಹೌದು. ಜೆನ್ನಿ, ರಾತ್ರಿ ಸೂಪ್ ಕೊಡ್ತೀನಂತ ಹೇಳಿದ್ದೆಯಲ್ಲ ಈಗ ಕೊಡ್ತೀಯಾ. (ಜೆನ್ನಿ ತುಂಬಿದ ಕಣ್ಣುಗಳಿಂದ ತಲೆಯಾಡಿಸುತ್ತಾ ಹೋಗುತ್ತಾಳೆ) ನನ್ನ ಬದುಕಿಗೂ ಒಂದು ಅರ್ಥ ಇದೆ. ನಾನೂ ಬದುಕಬೇಕು. (ಕನಸಿನಲ್ಲಿರುವವಳಂತೆ) ನೇಪಲ್ಸ್‍ನ ಕಡಲತೀರ... ಮೈದುಂಬಿ ನಲಿಯತ್ತಾ, ಮುಗಿಲೆತ್ತರಕ್ಕೆ ಹಾರುವ ಅಲೆಗಳು. ಉದಯದ ಸೂರ್ಯನ ಹೊಂಗಿರಣಗಳನ್ನು ಮೈತುಂಬಾ ಹೊದ್ದು ಮಿಂಚುವ ಸಾಗರದ ನೀರು. ಅದನ್ನು ನೋಡುತ್ತಾ ಹೊಸ ಚೈತನ್ಯ ತುಂಬಿಕೊಳ್ಳುವ ಜನ. ಇದನ್ನೆಲ್ಲಾ ಚಿತ್ರಿಸ್ಬೇಕು.
(ಜಾನ್ಸಿ ಹಾಗೆ ನಿಂತಿರುತ್ತಾಳೆ. ಡಾಕ್ಟರ್ ಹೆನ್ರಿ ಒಳಗೆ ಬರುತ್ತಾರೆ. ಜಾನ್ಸಿಯನ್ನು ನೋಡಿ ದಿಗ್ಭ್ರಾಂತರಾಗಿ ನಿಲ್ಲುತ್ತಾರೆ)
ಡಾಕ್ಟರ್ : (ಆಶ್ಚರ್ಯದಿಂದ) ಜಾನ್ಸಿ!!
ಜಾನ್ಸಿ : (ಬೆಚ್ಚಿದವಳಂತೆ) ಹಾಂ! ಹೊ ಡಾಕ್ಞರ್, ಬನ್ನಿ. ಡಾಕ್ಟರ್, ನನಗೆ ಮೆಡಿಸನ್ ಕೊಡಿ. ಬೇಗ ಹುಷಾರಾಗ್ಬೇಕು. ನೇಪಲ್ಸ್ ಕಡಲತೀರದ ಪೈಂಟಿಂಗ್ ಮಾಡಬೇಕು.
ಡಾಕ್ಟರ್ : ನೀನು ಈಗಾಗಲೇ ಅರ್ಧ ಹುಷಾರಾಗಿದ್ದೀಯ. ಒಂದಷ್ಟು ಒಳ್ಳೆ ಆಹಾರ ತಗೊಂಡ್ರೆ ಪೂರ್ತಿ ಗುಣವಾಗ್ತೀಯ. (ಜೆನ್ನಿ ಬರುತ್ತಾಳೆ)
ಜೆನ್ನಿ : ಹಲೋ ಡಾಕ್ಟರ್.
ಡಾಕ್ಟರ್ : ಹಲೋ ಜೆನ್ನಿ. ಜಾನ್ಸಿಗೆ ಚೆನ್ನಾಗಿ ತಿನ್ನೋದಿಕ್ಕೆ ಕೊಡು. ಇನ್ನು ಸ್ವಲ್ಪ ದಿನದಲ್ಲೇ ರನ್ನಿಂಗ್ ರೇಸ್‍ಗೆ ಕಳುಹಿಸಬಹುದು. (ಅಲ್ಲಿ ಪೈಪ್ ಬಿದ್ದಿದ್ದನ್ನು ನೋಡಿ) ಹೋ! ಇದೇನಿದು ಪೈಪ್? ಇದನ್ಯಾವಾಗ ಶುರು ಮಾಡ್ದೆ.
ಜೆನ್ನಿ : ಇಲ್ಲ, ಇಲ್ಲ, ನನ್ನದಲ್ಲ. ನಿನ್ನೆ ಬಹರ್ಮನೆ ಮಾಡೆಲ್ ಆಗಿದ್ದ. ಮರೆತು ಬಿಟ್ಟು ಹೋಗಿರಬೇಕು.
ಡಾಕ್ಟರ್ : ಅಂದ ಹಾಗೆ, ಬಹರ್ಮನ್ ತುಂಬಾ ಹುಷಾರಿಲ್ಲ.
ಜೆನ್ನಿ : ಏನಾಯ್ತು?
ಡಾಕ್ಟರ್ : ನ್ಯೂಮೋನಿಯಾ ತುಂಬಾ ಹೆಚ್ಚಾಗಿದೆ. ಬೆಳಿಗ್ಗೆ ತುಂಬಾ ನರಳ್ತಾ ಇದಾನೆ ಅಂತ ಆಸ್ಪತ್ರೆಗೆ ಕರೆದುಕೊಂಡು ಬಂದ್ರು. ರೋಗ ತುಂಬಾ ಹೆಚ್ಚಾಗಿದೆ.
ಜೆನ್ನಿ : ಅಯ್ಯೋ, ಎಂಥ ಕೆಲಸ ಆಯ್ತಲ್ಲ.
(ಅಷ್ಟರಲ್ಲಿ ಟಾಮ್, ಜೇಮ್ಸ್, ಮ್ಯಾಕ್‍ವೆಲ್, ಗೋವನ್ ಬರುತ್ತಾರೆ)
ಜೇಮ್ಸ್ : ಜೆನ್ನಿ, ವಿಷಯ ಗೊತ್ತಾಯ್ತು ಅನ್ಸುತ್ತೆ.
ಜೆನ್ನಿ : ಏನು, ಬಹರ್ಮನ್ ವಿಷಯನಾ? ಈಗ ತಾನೆ ಡಾಕ್ಟರ್ ಹೇಳ್ತಾ ಇದ್ರು. ಬಹರ್ಮನ್‍ಗೆ ತುಂಬಾ ಹುಷಾರಿಲ್ಲಾಂತ.
ಜೇಮ್ಸ್ : ಅವನು ಉಳೀಲಿಲ್ಲ. (ತಲೆ ತಗ್ಗಿಸುತ್ತಾನೆ. ಹ್ಯಾಟ್ ತೆಗೆಯುತ್ತಾನೆ)
ಗೋವನ್ : ಬಹರ್ಮನ್ ನಮ್ಮನ್ನೆಲ್ಲಾ ತೊರೆದು ಹೋದ.
ಟಾಮ್ : ಇನ್ನೆಲ್ಲಿ ಆ ಬಹರ್ಮನ್!
ಜೆನ್ನಿ : (ಅಳುವ ಧ್ವನಿಯಲ್ಲಿ) ರಾತ್ರಿ ತಾನೇ ಮಾಡೆಲ್ ಆಗೋದಿಕ್ಕೆ ನಿಮ್ಮ ರೂಮಿಗೆ ಬಂದಿದ್ದೆ. ಆದ್ರೆ ಪರ್ವಾಗಿಲ್ಲ, ಚೆನ್ನಾಗೇ ಇದ್ದ.
ಗೋವನ್ : ಬೆಳಿಗ್ಗೆ ಅಷ್ಟೊತ್ತಿಗೆ ಎಚ್ಚರ ಆಯ್ತು. ಟೀ ಕುಡಿಯೋಣ ಅಂದುಕೊಂಡು ಹೊರಗೆ ಬಂದೆ. ಬಹರ್ಮನ್ ರೂಮಿನಲ್ಲಿ ತುಂಬಾ ನರಳೋ ಶಬ್ಧ ಬಂತು. ಬಾಗಿಲು ತೆಗೆದೇ ಇತ್ತು. ರೂಮೆಲ್ಲಾ ಕೆಸರಾಗಿತ್ತು.
ಜೆನ್ನಿ : ರೂಮೇಕೆ ಕೆಸರಾಗಿತ್ತು?
ಜೆಮ್ಸ್ : ಕೆಸರಿನ ಗುರುತು ಅಡುಗೆಮನೆ ಕಡೆಯಿಂದ ಬಂದಿತ್ತು. ಅಲ್ಲಿಗೇಕೆ ಹೋದ ಅಂತ ನೋಡ್ತಾ ಹೋದೆ. ಹಿಂದೆ ಓಣಿಯಲ್ಲಿ ಏಣಿ ಬಿದ್ದಿತ್ತು. ಹತ್ತಿರ ಹೋದಾಗ ಗೊತ್ತಾಯ್ತು. ರಾತ್ರಿ ಚಳಿಯಲ್ಲಿ ನಡುಗ್ತಾ, ಮಳೇಲಿ ನೆನೆಯುತ್ತಾ, ಎಲೆಗಳೆಲ್ಲಾ ಉದುರಿ ಹೋದ ಬಳ್ಳಿಗೆ ಒಂದು ಎಲೆ ಬಿಡಿಸಿದ್ದ.


ಮೂಲ ಕಥೆ : ಓ ಹೆನ್ರಿ (last leaf)
ನಾಟಕ ರೂಪಾಂತರ : ಎಸ್.ಎನ್.ಸ್ವಾಮಿ 




ಕವನ - ಕೋರ್ಟಿನಲಿ ತಾಯಿ ಕೊಟ್ಟ ತೀರ್ಪು


ನಾ ಹಡೆದಾಗ ನನ್ನ ಮಗನ ಮುಖದಲ್ಲಿ ಮಂದಹಾಸವಿತ್ತು
ಇವನ ಮುಖದಲ್ಲಿನ ಕ್ರೌರ್ಯವನು ನೋಡಿದರೆ
ಇವನು ನನ್ನ ಮಗನಲ್ಲ ಎನಿಸುತ್ತಿದೆ

ಮೊಲೆಯನುಣಿಸುವಾಗ ನನ್ನ ಮಗನ ಮುಖದಲ್ಲಿ ಮೃದುತ್ವವಿತ್ತು 
ಇವನ ಮುಖದಲ್ಲಿನ ಕಠೋರತೆಯನ್ನು ನೋಡಿದರೆ 
ಇವನು ನನ್ನ ಮಗನಲ್ಲ ಎನಿಸುತ್ತಿದೆ

ತೊದಲು ನುಡಿವಾಗ ನನ್ನ ಮಗನ ತುಟಿಗಳಲ್ಲಿ ಮುಗ್ಧತೆಯಿತ್ತು
ಇವನ ತುಟಿಗಳಲ್ಲಿನ ಬಿರುಸುತನವನ್ನು ನೋಡಿದರೆ
ಇವನು ನನ್ನ ಮಗನಲ್ಲ ಎನಿಸುತ್ತಿದೆ

ಅಂಬೆಗಾಲಿಡುವಾಗ ಬಿದ್ದು ಎದ್ದು ನನ್ನನ್ನಪ್ಪಿದ ಕೈಗಳವು
ಹಸುಳೆಯನು ಕಾಮತೃಷೆಗೆ ಅಪ್ಪಿಕೊಂಡ ಕೈಗಳನು ನೋಡಿದರೆ 
ಇವನು ನನ್ನ ಮಗನಲ್ಲ ಎನಿಸುತ್ತಿದೆ 

ನನ್ನ ಮಗನಿಗೆ ಹೆಣ್ಣನ್ನು ಗೌರವದಿಂದ ನೋಡಬೇಕೆಂದು ಕಲಿಸಿದ್ದೆ
ನಿರ್ಭಯಳ ಜೊತೆ ನಿರ್ಲಜ್ಜೆಯಿಂದ ವರ್ತಿಸಿದ ದಿನವೇ ಸತ್ತ
ಇವನು ನನ್ನ ಮಗನಲ್ಲ ಮಹಾಸ್ವಾಮಿ!!

ನನ್ನ ಮಗನನ್ನು ಉಳಿಸಿಕೊಳ್ಳಲು ನನ್ನಿಂದಾಗಲಿಲ್ಲ
ಅಶ್ಲೀಲತೆಯ ಪ್ರಚಾರವನ್ನು ನಿಷೇಧಿಸಿ
ಇತರೆ ತಾಯಂದಿರ ಮಕ್ಕಳನ್ನು ರಕ್ಷಿಸಿ
ಸುಸಂಸ್ಕೃತರು ಸುಮ್ಮನಿರಲಾರರು
ಲಾಠಿ, ಜಲಫಿರಂಗಿ, ಸಿಡಿಗುಂಡುಗಳಿಗೆ ಹೆದರಲಾರರು
ನಾನೂ ಅವರೊಡನಿರುತ್ತೇನೆ ಸಾಯುವವರೆಗೆ

ಈ ಅತ್ಯಾಚಾರಿಯನು ಗಲ್ಲಿಗೇರಿಸಿ!
ಇವನು ನನ್ನ ಮಗನಲ್ಲವೇ ಅಲ್ಲ !!
  - ನರಸಿಂಹರಾಜು 

ಮೇರುವ್ಯಕ್ತಿಗಳ ಜೀವನದ ನಿದರ್ಶನೀಯ ಘಟನೆಗಳು



ವ್ಯಕ್ತಿಗಳು ಮೇರುವ್ಯಕ್ತಿಗಳಾಗುವುದು, ಮಹಾನತೆ ಗಳಿಸಿಕೊಳ್ಳುವುದು, ಅವರು ತಮ್ಮ ಜೀವನದ ನಡೆಯಿಂದ ಮತ್ತು ನಡತೆಯಿಂದ. ತಮ್ಮ ಜೀವನವನ್ನು ನಿದರ್ಶನೀಯವಾಗಿ ನಡೆಸಿದವರು ಆದರ್ಶನೀಯರಾಗಿದ್ದಾರೆ. ಅಂತಹ ಮೇರು ಚೇತನಗಳ ವ್ಯಕ್ತಿತ್ವವನ್ನು ಅವರ ಜೀವನದ ಹಲವಾರು ಘಟನೆಗಳಲ್ಲಿ ಕಾಣಬಹುದು. ಕೆಲವು ಹಾಸ್ಯದಿಂದ ಕೂಡಿರಬಹುದು, ಮತ್ತಷ್ಟು ನೋವುಂಟು ಮಾಡಬಹುದು, ಹಾಗೆಯೇ ಕೆಲವು ಗಂಭೀರವಾಗಿರಬಹುದು. ಆದರೆ ಅದರಲ್ಲಿ ಉದಾತ್ತತೆಯನ್ನು ಕಾಣಬಹುದು. ಅಂತಹ ಕೆಲವರ ಜೀವನದ ಕೆಲವು ದೃಷ್ಟಾಂತಗಳನ್ನು ಓದುಗರ ಮುಂದಿಡುವ ಪ್ರಯತ್ನ ಇದು.

ದ.ರಾ.ಬೇಂದ್ರೆ:
ಧಾರವಾಡದಿಂದ ಪಶ್ಚಿಮಕ್ಕೆ ಐದಾರು ಮೈಲಿ ದೂರದ ಮುಗದ ಎಂಬ ಊರಿನಲ್ಲಿದ್ದ ಮಣ ್ಣನ ಮನೆಯ ಜಗಲಿಯ ಮೇಲೆ ಬೇಂದ್ರೆ ಕುಳಿತಿದ್ದಾರೆ. ಊರ ಹಿರಿಯರೊಬ್ಬರು ಮಧ್ಯಾಹ್ನದ ಹೊತ್ತಿಗೆ ಅವರಿದ್ದಲ್ಲಿಗೆ ಬಂದು:
“ಮಾಸ್ತರ, ನಮ್ಮ ಮನ್ಯಾಗ ರೊಟ್ಟಿ ಕೊಟ್ಟು ಬಾ ಅಂದ್ರಿ. ತಗೋರಿ” ಎಂದರು. “ಛೆ, ಛೆ ನೀವ್ಯಾಕ ತ್ರಾಸ ತಗೋತೀರಿ. ನಮ್ಮ ಒಬ್ಬ ಮಿತ್ರ ದಿನಾ ರೊಟ್ಟಿ ಬುತ್ತಿ ಕೊಟ್ಟು ಹೋಗ್ತಾನ” ಎಂದರು ಬೇಂದ್ರೆ. 
ಅದಕ್ಕೆ ಆ ಹಿರಿಯರು, “ಈಗ ಬಿಸಿ ರೊಟ್ಟಿ ತಗೋರಿ. ನಿಮ್ಮ ಗೆಳ್ಯಾ ತಂದದ್ದು ಚಂಜಿ ಕಡಸೇಕ್ಕ ಆಕ್ಕೈತಿ. ಅದರಾಗ ನೀವು ಮಾಸ್ತರ ಇದ್ದೀರಿ ಅಂತ ಕೇಳಿದ ಮ್ಯಾಗಂತೂ ಜೀವ ಹಾತೊರಿತಿರಿ, ತಮ್ಮನ್ನ ಕಾಣಬೇಕು ಅಂತ. ನಾನೂ ಇದ ಮುಗದದ ಕನ್ನಡ ಸಾಲ್ಯಾಗ ನನ್ನ ನೌಕರಿ ಮುಗಿಸೀನ್ರೀ” ಎಂದರು.
“ನಾನೂ ನನ್ನ ಮಾಸ್ತರಿಕೀ ಮುಗಿಸೇ ಈ ಮುಗದದಕ್ಕೆ ಬಂದೀನಿ. ಬರ್ರೀ ಕೂಡ್ರಿ” ಎಂದರು ಬೇಂದ್ರೆ.
ಆಗ ಆ ಹಿರಿಯರು ಬಹಳ ಸಂಕೋಚದಿಂದ, “ಮತ್ತ ನಮ್ಮ ಕೈಯಾಗಿನ ರೊಟ್ಟಿ ತಿನ್ನಾಕ ಶೀಲಾ ಏನೂ ಮಾಡೋದಿಲ್ಲ ಹೌದಲ್ರಿ?” ಎಂದು ಕೇಳಿದರು.
ಅದಕ್ಕೆ ಬೇಂದ್ರೆಯವರು ಉತ್ತರ ಕೊಟ್ಟಿದ್ದು ಹೀಗೆ: “ಸುಶೀಲರಿದ್ದವರ ಜೊತೆಗೆ ಮತ್ತೆಂಥಾ ಶೀಲಾ? ಶೀಲಾ-ಕುಲಾ ಅಂತದರಾಗ ನನಗ ನಂಬಿಗಿ ಇಲ್ಲಾ. ನೀವು ಬಂದಿರಿ, ಹಸಿದವಗ ರೊಟ್ಟಿ ತಂದ್ರಿ. ಇದ ಖರೇ ಮಾನವೀಯ ಶೀಲಾ.”
ಕನ್ನಡ ನವೋದಯದ ನಾದಬ್ರಹ್ಮ ಕವಿ ಬೇಂದ್ರೆಯವರ ಜೀವನದಲ್ಲಿ ನಡೆದ ಈ ಘಟನೆಯು ಎರಡು ರೀತಿಯಲ್ಲಿ ಬಹಳ ಮಹತ್ವವಿದೆ. ಒಂದು ಅವರಲ್ಲಿದ್ದ ಮಾನವೀಯ ಭಾವನೆ. ಇನ್ನೊಂದು, ಆ ಊರಿಗೆ ಬಂದ ಕಾರಣ. ಅವರು ‘ನನ್ನ ಮಾಸ್ತರಿಕಿ ಮುಗಿಸೇ ಬಂದೀನಿ’ ಎಂದ ಮಾತಿನ ಗೂಡಾರ್ಥ ಬೇರೆ ಇದೆ. ಬೇಂದ್ರೆಯವರು ಬರೆದ ‘ನರಬಲಿ’ ಕವನವು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದಂಗೆಯೇಳಲು, ಬಲಿದಾನ ಮಾಡಲು ಪ್ರೇರೇಪಣೆ ನೀಡುವಂತಿತ್ತು. ಸಹಜವಾಗಿಯೇ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಕೆಂಗಣ ್ಣಗೆ ಗುರಿಯಾದ ಬೇಂದ್ರೆ ತಮ್ಮ ಮಾಸ್ತರಿಕಿಯನ್ನು ಕಳೆದುಕೊಳ್ಳಬೇಕಾಯಿತು.  ಮೊದಲೇ ಸಂಸಾರ ಬಡತನದಲ್ಲಿ ಬೇಯುತ್ತಿದ್ದೆ; ಅಂತಹುದರಲ್ಲಿ ಬಹಳ ಪ್ರಯಾಸದಿಂದ ಪಡೆದಿದ್ದ ಮಾಸ್ತರಿಕಿ, ಸಂಸಾರದ ಊರುಗೋಲು ಹೋಗುತ್ತಿದೆ – ಆದರೆ ಇದ್ಯಾವುದೂ ಬೇಂದ್ರೆಯನ್ನು ಬ್ರಿಟಿಷರಲ್ಲಿ ಕ್ಷಮಾಪಣೆ ಕೇಳುವುದಕ್ಕಾಗಲೀ, ವಿನಾಯಿತಿ ಪಡೆಯುವುದಕ್ಕಾಗಲೀ ತಳ್ಳಲಿಲ್ಲ. ಬದಲಿಗೆ ಕೆಲಸವನ್ನೂ ಕಳೆದುಕೊಂಡರು, ಬಂಧೀಖಾನೆಯ ಶಿಕ್ಷೆಯನ್ನೂ ಅನುಭವಿಸಿದರು. ಬಡತನದ ಕಾರಣದಿಂದಾಗಿಯೇ ಮಗುವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಾಗಲೂ ಬೇಂದ್ರೆ ಪಶ್ಚಾತ್ತಾಪಪಡಲಿಲ್ಲ. ತಮ್ಮ ನೋವು, ಸಂಕಟ, ನಲಿವುಗಳನ್ನು ಕಾವ್ಯದಲ್ಲಿ ಸಾರ್ವತ್ರಿಕಗೊಳಿಸುತ್ತಾ, ಸಮಾಜದ ನೋವು, ನಲಿವುಗಳ ಒಂದು ಭಾಗವನ್ನಾಗಿ ಮಾಡಿದರು. ಅದಕ್ಕೆ ‘ಬೆಂದರೆ ಬೇಂದ್ರೆ’ಯಾಗಬಹುದು ಎಂಬ ಮಾತು ಜನಜನಿತವಾಗಿದೆ.

ಗಳಗನಾಥ ಮಾಸ್ತರರು:
ಕನ್ನಡ ಸಾಹಿತ್ಯದ ನವೋದಯಕ್ಕೂ ಮುನ್ನ ಅರುಣೋದಯವೂ ಇತ್ತು. ಅಂದರೆ, ನವೋದಯ ಸಾಹಿತ್ಯದ ಮಹಾದ್ವಾರ ತೆಗೆಯಲು ನಡೆಸಿದ ತಯಾರಿಯ ಘಟ್ಟ ಅದು. ಬಿಎಂಶ್ರೀಯವರು 1911ರಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಭಾಷಣದಲ್ಲಿ ಆಧುನಿಕ ಸಾಹಿತ್ಯದ ಮುಂದಿರುವ ದಾರಿ, ಸವಾಲುಗಳು, ಸಾಧ್ಯತೆಗಳು – ಇವುಗಳ ಬಗ್ಗೆ ಮುನ್ನೋಟವನ್ನು ನೀಡಿದರು. ‘ಇಂಗ್ಲಿಷ್ ಗೀತೆಗಳು’ ಕವನ ಸಂಕಲನದಲ್ಲಿ ಹೊಸ ಮೌಲ್ಯಪ್ರಜ್ಞೆ, ಅಂದರೆ ನವೋದಯದ ಆಶಯಗಳನ್ನು ಪ್ರತಿಬಿಂಬಿಸುವ ಹಾಗೂ ಆಧುನಿಕ ಶೈಲಿಯ ಸಾಹಿತ್ಯಕ್ಕೆ ಉದಾಹರಣೆ ಮತ್ತು ಅಡಿಪಾಯ ನೀಡಿದರು. ಕರ್ನಾಟಕದ ಏಕೀಕರಣಕ್ಕೆ ಅಹರ್ನಿಶಿ ದುಡಿದರು. ಇದು ನವೋದಯ ಚಳುವಳಿಯ ಸಮಗ್ರತೆ.
ಇದಕ್ಕೂ ಮುನ್ನ ಪಂಜೆಯವರು, ಗೋವಿಂದ ಪೈ, ಮುಂತಾದವರು ಆಧುನಿಕ ಕನ್ನಡದ ಕಾವ್ಯದ ಆರಂಭವನ್ನು ಮಾಡಿದ್ದರು. ಇನ್ನು ಕೆಲವರು ಕಾದಂಬರಿಯಲ್ಲಿ ಪ್ರಯತ್ನ ನಡೆಸಿದ್ದರೆ, ಕನ್ನಡ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತವರು ಹಲವರು. ಆಗ ಕನ್ನಡ ಸಾಹಿತ್ಯದ ಸೃಷ್ಟಿಯಷ್ಟೇ ಮುಖ್ಯವಾಗಿದ್ದದ್ದು ಎಂದರೆ, ಕನ್ನಡ ಸಾಹಿತ್ಯದ ಓದುಗರನ್ನು ಸೃಷ್ಟಿ ಮಾಡುವುದು. ಅಂತಹ ಕಾರ್ಯವನ್ನು ಹೆಗಲ ಮೇಲೆ ಹೊತ್ತವರಲ್ಲಿ ಗಳಗನಾಥರಲ್ಲಿ ವೈಶಿಷ್ಟ್ಯವಿದೆ.
ಅವರು ಮರಾಠಿ ಕಾದಂಬರಿಗಳನ್ನು ಅನುವಾದಿಸಿದರು ಹಾಗೂ ಮುದ್ರಿಸಿದರು. ಜೊತೆಗೆ ಸ್ವತಃ ಕೆಲವು ಕಾದಂಬರಿಗಳನ್ನೂ ಬರೆದರು. ಅವರು ಹೆಚ್ಚುಕಡಿಮೆ ತಮ್ಮ ಜೀವನವನ್ನು ಕನ್ನಡದ ಪುಸ್ತಕಗಳನ್ನು ಮುದ್ರಿಸುವುದು,  ಮಾರುವುದರಲ್ಲೇ ಕಳೆದರು. ತಾವು ಮುದ್ರಿಸಿದ ಪುಸ್ತಕಗಳನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಊರೂರು ಅಲೆಯುತ್ತಾ, ಮನೆಮನೆಗೆ ಹೋಗುತ್ತಾ, ಪುಸ್ತಕಗಳನ್ನು ಮಾರಿದರು. ಅವರಿಗೆ ಕೆಲವು ಕನ್ನಡಾಸಕ್ತರು ನೆರವು ನೀಡಿದರೂ ಸಹ, ಕನ್ನಡ ಪುಸ್ತಕಗಳ ಮುದ್ರಣ, ಮಾರಾಟ ಎಂದೂ ಸುಲಭವಾಗಿರಲಿಲ್ಲ. ಸಾಕಷ್ಟು ಸಾಲ ಮಾಡಿಕೊಂಡದ್ದೂ ಇದೆ. ಏಕೆಂದರೆ, ಜನರನ್ನು ಓದಲು ಪ್ರೇರೇಪಿಸಬೇಕು ಮತ್ತು ಕನ್ನಡ ಪುಸ್ತಕಗಳನ್ನು ಓದಲು ಪುಸಲಾಯಿಸಬೇಕು. ಅವರು ಒಂದು ರೀತಿಯ ಸಾಹಿತ್ಯ ಜೋಗಿಯಾಗಿದ್ದರು. ತಮ್ಮ ಎಡೆಬಿಡದ ಈ ಕಾಯಕದಲ್ಲಿ ಗೌರವ ಮತ್ತು ಅಪಮಾನಗಳೆರಡನ್ನೂ ಅನುಭವಿಸಿದರು.  ಅದಕ್ಕೆ ಕೆಳಗಿನ ಘಟನೆ ಉತ್ತಮ ನಿದರ್ಶನ.
ಬೀಚಿಯವರು ಹರಪನಗಳ್ಳಿಯ ಸಂಸ್ಕøತ ಶಾಸ್ತ್ರಿಗಳೊಬ್ಬರ ವ್ಯಕ್ತಿ ಚಿತ್ರದಲ್ಲಿ ಕೊಟ್ಟ ಘಟನೆಯಿದು. ಈ ಶಾಸ್ತ್ರಿಗಳು ಧರ್ಮಾರ್ಥ ಚಿಕಿತ್ಸಾಲಯವನ್ನೂ ನಡೆಸುತ್ತಿದ್ದರು. ಅದರ ಮುಂದು ಮಾಮೂಲಿನಂತೆ ಜನಜಾತ್ರೆ:
“ಅಳುವ ಮಕ್ಕಳು, ಸಂತೈಸುವ ತಾಯಂದಿರು, ಅವರನ್ನು ಗದರಿಸುವಂತಿಲ್ಲ.  ಇತ್ತ ಶಾಸ್ತ್ರಿಗಳಿಗೆ ಒಂದೇ ಅವಸರ - ಪಾಠಶಾಲೆಗೆ ತಡವಾಗಿದೆಯೆಂದು. ಈ ಗಡಿಬಿಡಿಯಲ್ಲಿ ಅದಾವನೋ ಮುದುಕ - ಹರಕಲು ಗಡ್ಡ, ಕೆಂಬಣ್ಣದ ಪಂಚೆ ಉಟ್ಟಿದ್ದಾನೆ. ಭುಜಕ್ಕೊಂದು ನೇತಾಡುವ ಹಸಿಬೆ. ನಿಂತಲ್ಲಿಂದಲೇ ಕೂಗಿ ಕೇಳಿದ - ಪುಸ್ತಕ ನೋಡ್ತೀರೇನು? ‘ಹೋಗಪಾ ಮಾರಾಯ. ನಿನ್ನ ಪುಸ್ತಕ ಬ್ಯಾಡಾ, ಏನೂ ಸುಡುಗಾಡೂ ಬ್ಯಾಡ.’ – ಕಿವಿ ಮುಚ್ಚಿಕೊಂಡು ಗದರಿಸಿಬಿಟ್ಟರು ಶಾಸ್ತ್ರಿಗಳು. ಬಜ್ಜೆಯಾದ ಹಸಿಬೆ ಹೊತ್ತು ನಡೆದ ಮುದುಕ.
ಆಸ್ಪತ್ರೆ ಮುಗಿಯಿತು. ಹಿಂಬದಿಗೇ ಮನೆಗೆ ಬಂದು, ಶಾಸ್ತ್ರಿಗಳು ಸ್ನಾನಕ್ಕಿಳಿದರು. ಶಿವಪೂಜೆ ಆಗಬೇಕು. ಮಣೆಹಾಕಿ ವಿಭೂತಿ ಇಟ್ಟು ಎಲ್ಲವನ್ನೂ ಅಣ ಮಾಡಿತ್ತು - ಪುಟ್ಟಮಗಳು. ಆಚೆ ಮನೆಯವರೊಬ್ಬರು ಒಳಬಂದು ಕೇಳಿದರು – ‘ಬುಕ್ಕಾ ಕೊಣುಕೊಂಡ್ರೇನು? ಗಳಗನಾಥ ಬಂದಿದ್ನಲ್ಲಾ. ಹಸಿಬೀ ಹೊತುಗೊಂಡು ಬರಲಿಲ್ಲೇ ಮುದುಕಾ? ನಾನೇ ನಿಮ್ಮ ಮನೆಗೆ ಕಳಿಸಿದ್ದೆ’ – ಎಂದರು. ‘ಶಿವಶಿವಾ’ ಎಂದು ತಲೆಗೆ ಕೈಯಿಟ್ಟರು ಶಾಸ್ತ್ರಿಗಳು. ‘ಎಂಥಾ ಮೂರ್ಖನಪಾ ನಾನು. ಬಾಗಿಲಿಗೆ ಬಂದ ಗಳಗನಾಥರನ್ನು ಗದರಿಸಿ ಕಳಿಸಿಬಿಟ್ಟೆ. ಸರಸ್ವತಮ್ಮನಿಗೇ ಅವಮಾನ – ಅದೂ ನನ್ನ ಮನಿಯಾಗೇ.’
ಕೂಡಲೇ ಗಳಗನಾಥರನ್ನು ಹುಡುಕಿ, ‘ನನ್ನಿಂದ ಅಪರಾಧವಾಗಿದೆ ಸ್ವಾಮೀ, ಕ್ಷಮಿಸಬೇಕು’ ಎಂದು ಕೇಳಿಕೊಂಡು, ಕೈಹಿಡಿದು ಮನೆಗೆ ಕರೆತಂದರು. ಅವರಿಗೆ ಊಟಕ್ಕೆ ಹಾಕಿ, ಪುಸ್ತಕಗಳನ್ನು ಕೊಂಡು ಕಳಿಸಿಕೊಟ್ಟರು.

ಕೈಲಾಸಂ:
ಆಧುನಿಕ ಕನ್ನಡ ರಂಗಭೂಮಿಯ ಪಿತಾಮಹ ಕೈಲಾಸಂ. ಕಂಪ್ನಿ ನಾಟಕಗಳು, ಪೌರಾಣ ಕ ಹಾಗೂ  ಮೆಲೋಡ್ರಾಮದ ಸಾಮಾಜಿಕ ನಾಟಕಗಳು ತುಂಬಿದ್ದ ಸಂದರ್ಭದಲ್ಲಿ,  ಆಧುನಿಕ ವಸ್ತು ಹಾಗೂ ವಾಸ್ತವಿಕತೆಯ ಶೈಲಿಯ ಆಧುನಿಕ ನಾಟಕಗಳನ್ನು ಬರೆದರು. ಜಾತೀಯತೆ, ವಿಧವೆಯರ ದುಸ್ಥಿತಿ, ಶಿಕ್ಷಣದ ಮೌಲ್ಯಹೀನತೆ, ಸಂಪ್ರದಾಯದ ಸಂಕೋಲೆಗಳ ವಿರುದ್ಧ ಲೇಖನಿಯೆತ್ತಿ ಹೋರಾಡಿದವರು. ಮೊತ್ತಮೊದಲಿಗೆ ರಂಗವೇದಿಕೆಯ ಮೇಲೆ ಸಾತು, ಪಾತುಗಳಂತಹ ನಮ್ಮ ಸುತ್ತಮುತ್ತಲಿನ ಪಾತ್ರಗಳು ಬಂದವು.
ಕೈಲಾಸಂ ಒಂದು ರೀತಿಯಲ್ಲಿ ರಂಗಜಂಗಮರಂತೆ ಜೀವಿಸಿದವರು. ತಮಗೆ ಒಗ್ಗದ ಒಳ್ಳೆ ಸಂಬಳದ ಕೆಲಸ ಬಿಟ್ಟು ಸಾಹಿತ್ಯ, ಅದರಲ್ಲೂ ರಂಗಸಾಹಿತ್ಯಕ್ಕೆ ಪೂರ್ಣವಾಗಿ ಅರ್ಪಿಸಿಕೊಂಡವರು. ಕೈಲಾಸಂ ಹಲವಾರು ವಿಷಯಗಳನ್ನು ಬಗ್ಗೆ ಆಳವಾಗಿ ತಿಳಿದುಕೊಂಡಿದ್ದ ಜ್ಞಾನದ ಕಣಜ. ಆಡು ಮುಟ್ಟದ ಸೊಪ್ಪಿಲ್ಲ, ಕೈಲಾಸಂ ಮಾತನಾಡದ ವಿಷಯವಿಲ್ಲ. ಅವರು ನಿಂತಲ್ಲಿ ಸಂತೆಯಾಗುತ್ತಿತ್ತು; ಕುಳಿತಲ್ಲಿ ವಿಚಾರಗೋಷ್ಠಿಯಾಗುತ್ತಿತ್ತು. ತಮ್ಮ ಜ್ಞಾನಸಂಪತ್ತಿನೊಂದಿಗೆ ಹಾಸ್ಯಸಂಪತ್ತನ್ನೂ ಸೇರಿಸಿ ಎಲ್ಲರನ್ನೂ ನಗೆಗಡಲಲ್ಲಿ ಮುಳುಗಿಸುತ್ತಿದ್ದರು. ಅವರ ನಿರ್ಮಲ ಮನಸ್ಸಿನ ಹಾಸ್ಯ ಹಿರಿಯರನ್ನೂ ಬಿಡುತ್ತಿರಲಿಲ್ಲ. ಟಿ.ಎಸ್.ವೆಂಕಣ್ಣಯ್ಯನವರು ಬಹಳ ಎತ್ತರವಾಗಿದ್ದರು. ಕೈಲಾಸಂ ಸ್ವಲ್ಪ ಕುಳ್ಳು. ಅವರೊಮ್ಮೆ ದಾರಿಯಲ್ಲಿ ಸಿಕ್ಕಾಗ, “ವೆಂಕಣ್ಣಯ್ಯನವರೇ, ಹಾಗೇ ಸ್ವಲ್ಪ ತಲೆ ಎತ್ತಿ ನೋಡಿ. ಸ್ವರ್ಗದಲ್ಲಿ ನಮ್ಮ ಹಿರಿಯರು ಸುಖವಾಗಿದ್ದಾರೆಯೇ ಅಂತ.” ಹಾಗೆಂದು ಅವರು ತಮ್ಮನ್ನೂ ಬಿಡುತ್ತಿರುಲಿಲ್ಲ: “ನಮ್ಮ ಮನೆ ವೈಟ್‍ಹೌಸೂ (ಶ್ವೇತಭವನ), ನಾನು ಬ್ಲ್ಯಾಕ್ ಸ್ಪಾಟೂ (ಕಪ್ಪುಚುಕ್ಕೆ).”
ತಮ್ಮ ಜೀವನದಲ್ಲಿ ಎದುರಾದ ಎಲ್ಲಾ ಸಂಕಷ್ಟಗಳನ್ನೂ ನಗುನಗುತ್ತಲೇ ಎದುರಿಸಿ ಜೈಸಿದ ಕೈಲಾಸಂ ಹೃದಯ ಬಹಳ ಮೃದು. ಅದಕ್ಕೇ ತಿರುವಲೆ ರಾಜಮ್ಮನವರು ಅವರನ್ನು ‘ಕುಸುಮ ಹೃದಯಿ’ ಎಂದು ಕರೆದರು. ಪರರ ನೋವು ಅವರ ಹೃದಯವನ್ನು ಹಿಂಡುತ್ತಿತ್ತು. ಅವರು ತಮ್ಮ ಕಡೆಯ ದಿನಗಳಲ್ಲಿ ಬೊಂಬಾಯಿದಲ್ಲಿದ್ದಾಗ ನಡೆದ ಅಂತಹದೊಂದು ಘಟನೆ ಅವರ ಜೀವಕ್ಕೇ ಮುಳುವಾಯಿತು ಎನ್ನುತ್ತಾರೆ. ಅದನ್ನು ಮೈಸೂರಿನ ನಾರಾಯಣಾಚಾರ್ ಹೀಗೆ ವಿವರಿಸುತ್ತಾರೆ:
“1946, ಅಕ್ಟೋಬರ್ ಸಮಯ. ಆಗ ಬೊಂಬಾಯಿಯಲ್ಲಿ ತೀವ್ರವಾದ ಹಿಂದೂ ಮುಸ್ಲಿಂ ಗಲಾಟೆ. ಎರಡೂ ಕಡೆಯೂ ಹೊಡೆದಾಟ, ಕಡಿದಾಟ. ಆ ಸಮಯದಲ್ಲಿ ಒಂದು ದಿನ ಕೈಲಾಸಂ ಮಾತುಂಗದ ‘ಜೆ’ ಬಸ್‍ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ಎದುರಿಗೆ ಒಬ್ಬ ವೃದ್ಧ ಎಳನೀರು ಕುಡಿಯುತ್ತಾ ನಿಂತಿದ್ದ. ಇದ್ದಕ್ಕಿದ್ದಂತೆ ಒಂದು ಗುಂಪಿನವರು ಗಲಾಟೆ ಮಾಡುತ್ತಾ ಅಡ್ಡಲಾದವರ ಮೇಲೆ ಹಲ್ಲೆ ಮಾಡುತ್ತಾ ಓಡಿಬಂದು, ಎಳನೀರು ಮಾರುತ್ತಿದ್ದವನಿಂದ ಮಚ್ಚನ್ನು ಕಸಿದುಕೊಂಡು, ಎಳನೀರು ಕುಡಿಯುತ್ತಾ ನಿಂತಿದ್ದ ಆ ವೃದ್ಧನ ಕುತ್ತಿಗೆಯನ್ನು ಮಚ್ಚಿನಿಂದ ಬಲವಾಗಿ  ಕೊಚ್ಚಿದರು. ಆ ವೃದ್ಧನ ತಲೆಬುರುಡೆ ಒಂದು ಪಕ್ಕಕ್ಕೂ, ಮತ್ತೆ ಅವನು ಹಿಡಿದಿದ್ದ ಎಳನೀರು ಬುರುಡೆ ಇನ್ನೊಂದು ಪಕ್ಕಕ್ಕೂ ಉರುಳಿಕೊಂಡು ಬಿದ್ದವು. ಕತ್ತರಿಸಿದ ತಲೆಬುರುಡೆಯಿಂದ ಚೆಲ್ಲಾಡುತ್ತಿದ್ದ ರಕ್ತವನ್ನೂ, ಉರುಳುತ್ತಿದ್ದ ಎಳನೀರು ಬುರುಡೆಯಿಂದ ಚಿಮ್ಮುತ್ತಿದ್ದ ಎಳನೀರುನ್ನೂ, ರುಂಡ ಕಳೆದುಕೊಂಡ ಆ ವೃದ್ಧನ ದೇಹ ವಿಲವಿಲಿ ಒದ್ದಾಡುತ್ತಿರುವುದನ್ನೂ ಒಮ್ಮೆಲೇ ಎದುರಿಗೆ ಕಂಡ ಕೈಲಾಸಂಗೆ ಕಣ್ಣುಕಪ್ಪಿಟ್ಟು ತತ್ತರಿಸುತ್ತಾ ನಿಂತಲ್ಲೇ ಕುಸಿದುಬಿದ್ದರು. ನಂತರ ಮತ್ತವರು ಎದ್ದು ಕಣ್ಣು ಬಿಟ್ಟಾಗ ಅಕ್ಕಪಕ್ಕದಲ್ಲಿದ್ದ ಯಾರನ್ನೂ ಗುರುತಿಸಲು ಸಾಧ್ಯವಾಗಲಿಲ್ಲ.”
ನಂತರ ಅವರು ಬೆಂಗಳೂರಿಗೆ ಹೇಗೋ ಬಂದು ತಲುಪಿದರು. ಆದರೆ ಕೈಲಾಸಂ ಮತ್ತೆ ಸುಧಾರಿಸಿಕೊಳ್ಳಲಿಲ್ಲ ಎಂದು ಹೇಳುತ್ತಾರೆ.

ಡಿವಿಜಿ:
ಸಾಮಾನ್ಯವಾಗಿ ಡಿ.ವಿ.ಗುಂಡಪ್ಪನವರು ಎಂದಾಗ ಮಂಕುತಿಮ್ಮನ ಕಗ್ಗ, ಕಾವ್ಯ, ವಿಮರ್ಶೆಗಳು ನೆನಪಿಗೆ ಬರುತ್ತವೆ. ಆದರೆ ಅವರು ಪತ್ರಿಕೋದ್ಯಮದಲ್ಲೂ ಸಾಕಷ್ಟು ಪರಿಶ್ರಮ ಹಾಕಿದವರು. ಅದರ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಡಿವಿಜಿಯವರು ಸತ್ಯನಿಷ್ಟರು ಹಾಗೂ ನಿಷ್ಠುರರೂ ಹೌದು. ಹಾಗಾಗಿ ಅವರಿಗೆ ಕಿರಿಯರಷ್ಟೇ ಅಲ್ಲದೆ, ಹಿರಿಯರಿಂದಲೂ ಗೌರವ ದೊರಕುತ್ತಿತ್ತು. ಅವರು ಬೆಂಗಳೂರಿನಲ್ಲಿ ನಡೆದ ಕೋಮುಗಲಭೆಗೆ ಸುತ್ತುವರಿದಂತೆ, ಅಂದಿನ ದಿವಾನರು ಅದನ್ನು ಬಗೆಹರಿಸಿದ ರೀತಿಯ ಬಗ್ಗೆ ಟೀಕಿಸಿ ಬರೆದಿದ್ದರು. ಅದಕ್ಕೆ ಸ್ವತಃ ದಿವಾನರೇ ಸಮಜಾಯಿಸಿ ನೀಡಿದ್ದರು.
ವಿಶ್ವೇಶ್ವರಯ್ಯನರು ಡಿವಿಜಿಯವರಿಂದ ಹಲವು ಕಾರ್ಯಗಳಲ್ಲಿ ಸಹಾಯ ತೆಗೆದುಕೊಂಡಿದ್ದರು. ಅವರ ಕಾರ್ಯಕ್ಷಮತೆ, ಪ್ರಾಮಾಣ ಕತೆಗಳನ್ನು ಗುರುತಿಸಿ, ಬೆಂಗಳೂರಿನಲ್ಲಿ ಪುರಸಭೆ ರಚನೆ ಮಾಡಿದಾಗ ಡಿವಿಜಿಯವರನ್ನು ಸದಸ್ಯರನ್ನಾಗಿ ಮಾಡಿದ್ದರು –ಡಿವಿಜಿಯವರ ವಿರೋಧದ ನಡುವೆಯೂ. ಹಾಗೆಯೇ ವಿವಿಧ ಯೋಜನೆಗಳ ಬಗ್ಗೆ ಅವರಿಂದ ಸಲಹೆ, ಸಹಾಯಗಳನ್ನು ಪಡೆದಿದ್ದರು. ಹೀಗೆಲ್ಲಾ ಕೆಲಸ ಮಾಡಿಸಿಕೊಂಡಾಗ ಅವರು ಖಾಲಿ  ಚೆಕ್ಕುಗಳನ್ನು ಡಿವಿಜಿಯವರಿಗೆ ಕೊಡುತ್ತಿದ್ದರಂತೆ.
ಒಮ್ಮೆ ಡಿವಿಜಿಯವರ ಮೊಮ್ಮಗಳು ಅವರ ಪುಸ್ತಕಗಳನ್ನು ನೋಡುತ್ತಿದ್ದಾಗ, ಪುಸ್ತಕಗಳ ಮಧ್ಯೆ ಖಾಲಿ ಚೆಕ್ಕುಗಳು ‘ಬುಕ್ ಮಾರ್ಕರ್’ ರೀತಿಯಲ್ಲಿ ಇದ್ದವಂತೆ. ಮೊಮ್ಮಗಳಿಗೆ ಬಹಳ ಆಶ್ಚರ್ಯವಾಗಿ, ‘ಯಾಕೆ ತಾತ ಖಾಲಿ ಚೆಕ್ಕುಗಳಿವೆ’ ಎಂದು ಕೇಳಿದಾಗ, ‘ನಾನು ಮಾಡಿದ ಕೆಲಸಕ್ಕೆ ಸಂಭಾವನೆಯೆಂದು ನೀಡಿದ್ದರು’ ಎಂದು ಡಿವಿಜಿ ಉತ್ತರಿಸಿದರು. ಆಗ ಮೊಮ್ಮಗಳು ‘ಮತ್ತೆ ಯಾಕೆ ಹಾಗೇ ಇಟ್ಟಿದ್ದೀಯಾ’ ಎಂದು ಕೇಳಿದಾಗ, ‘ಖಾಲಿ ಚೆಕ್ಕುಗಳು ಸ್ಮರಣ ಕೆಗಳಿದ್ದಂತೆ. ಅವುಗಳನ್ನು ಮಾರಿಕೊಳ್ಳಬಾರದು’ ಎಂದು ಉತ್ತರ ನೀಡಿದರು. ವಿಶ್ವೇಶ್ವರಯ್ಯನವರು ಡಿವಿಜಿ ಬೆಲೆ ಕಟ್ಟಲಿಲ್ಲ, ಡಿವಿಜಿಯವರೂ ತಮ್ಮ ಬೆಲೆಯನ್ನು ನಿರ್ಧರಿಸಿಕೊಳ್ಳಲಿಲ್ಲ. ಅವರಲ್ಲಿದ್ದ ಪತ್ರಿಕೋದ್ಯಮದ ನೈತಿಕತೆ ಅಂತಹ ಮಟ್ಟದ್ದು.

ಎ.ಎನ್.ಮೂರ್ತಿರಾವ್:
ಕನ್ನಡ ಸಾಹಿತ್ಯದಲ್ಲಿ ‘ವಿಚಾರ ಸಾಹಿತ್ಯ’ ಪ್ರಕಾರವನ್ನು ಬೆಳೆಸಿದವರಲ್ಲಿ ಮೂರ್ತಿರಾಯರು ಪ್ರಮುಖರು. ಅವರು ತರ್ಕ, ವಾಸ್ತವಿಕತೆಗಳ ಆಧಾರದ ಮೇಲೆ ಬರೆದ ವಿಮರ್ಶೆಗಳು, ಲೇಖನಗಳು ಕನ್ನಡ ಸಾಹಿತ್ಯದ ವೈಚಾರಿಕತೆಯನ್ನು ಸಂಪದ್ಭರಿತಗೊಳಿಸಿದರು. ಮೂರ್ತಿರಾಯರು ಪ್ರಜಾತಾಂತ್ರಿಕ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿದ್ದವರು ಮತ್ತು ಅದನ್ನು ಜೀವನದಲ್ಲಿ ಪಾಲಿಸಿದವರು. ಕನ್ನಡದ ನವೋದಯ ಸಾಹಿತ್ಯಕಾರರಲ್ಲಿದ್ದ ಅತ್ಯುತ್ತಮ ಗುಣವೆಂದರೆ ತಾವು ನಂಬಿದ್ದನ್ನು ಜೀವನದಲ್ಲಿ ಪಾಲಿಸುವುದು. ಅವರು ಬೇರೆಯವರಿಗೆ ವಿನಾಯಿತಿ ತೋರಿಸುತ್ತಿದ್ದರೇ ಹೊರತು ತಮ್ಮ ಬಗ್ಗೆಯಲ್ಲ. ಮೂರ್ತಿರಾಯರ ಜೀವನದಲ್ಲಿ ನಡೆದ ಘಟನೆ ಇದಕ್ಕೆ ಪುಷ್ಠಿ ಕೊಡುತ್ತದೆ.
ಸುಮಾರು 1960ರ ಸಮಯದಲ್ಲಿ ಮೂರ್ತಿರಾಯರ ಮಗ ನಾಗರಾಜರಾವ್ ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿದ್ದರು. ಒಂದು ದಿನ ಬೆಳಿಗ್ಗೆ ಮೂರ್ತಿರಾಯರಿಗೆ ಅಪರಿಚಿತರಾದ ಅಮೆರಿಕಾದ ಲಿಂಕನ್ ದಂಪತಿಗಳು ತಂತಿಯನ್ನು ಕಳುಹಿಸಿದ್ದರು: “ನಮ್ಮ ಮಗಳು ನ್ಯಾನ್ಸಿ ಮತ್ತು ನಿಮ್ಮ ಮಗ ನಾಗರಾಜ್ ಮದುವೆಯಾಗಬೇಕೆಂದಿದ್ದಾರೆ. ಮತ, ಸಂಸ್ಕøತಿ, ಜನಾಂಗ – ಎಲ್ಲ ದೃಷ್ಟಿಯಿಂದಲೂ ನಾವು ಈ ಮದುವೆಗೆ ವಿರೋಧಿಗಳು. ನೀವು ನಿಮ್ಮ ಮಗನಿಗೆ ಬುದ್ಧಿ ಹೇಳಿ ಮದುವೆಯನ್ನು ತಪ್ಪಿಸುತ್ತೀರಿ ಎಂದು ನಂಬಿದ್ದೇವೆ.”
ಮೂರ್ತಿರಾಯರಿಗೂ ಆರಂಭದಲ್ಲಿ ವಿದ್ಯುತ್ ಶಾಕ್ ಬಡಿದಂತಾಯಿತು. ‘ಶಾಸ್ತ್ರ ಸಂಪ್ರದಾಯಗಳಿಗಾಗಲಿ ಜಾತಿ ಮತ ಜನಾಂಗಗಳಿಗಾಗಲಿ ಬೆಲೆ ಕೊಡದ ನನಗೆ ಬಂದ ಭಾವನೆ! ಮೊದಮೊದಲು ಇತರರೊಂದಿಗೆ ಚರ್ಚಿಸಲು ಹಿಂಜರಿಕೆಯಾಯಿತು’ ಎಂದಿದ್ದಾರೆ ಮೂರ್ತಿರಾಯರು. ಆನಂತರ ಶಾಕ್‍ನಿಂದ ಹೊರಬಂದ ಮೇಲೆ ಎಲ್ಲರೊಡನೆ ಮಾತನಾಡಲು ಸಂಕೋಚದಿಂದ ಹೊರಬಂದರು. ಆದರೆ ಮದುವೆಗಿನ್ನೂ ಒಪ್ಪದ ಅವರ ಮನಸ್ಸು, ಲಿಂಕನ್ ದಂಪತಿಗಳಿಗೆ ಉತ್ತರ ಬರೆಯುವಾಗ ಮಾತ್ರ ಅದೆಷ್ಟು ಪ್ರಜಾತಾಂತ್ರಿಕವಾಗಿತ್ತು! ಉತ್ತರ ನೋಡಿದರೆ ಗೊತ್ತಾಗುತ್ತದೆ: “ನಿಮ್ಮಂತೆ ನಾನೂ ಈ ಮದುವೆಗೆ ವಿರೋಧಿ. ಅದರ ವಿಷಯ ನಾನು ಹೇಳಬಹುದಾದ್ದಲ್ಲ ನನ್ನ ಮಗನಿಗೆ ಬರೆದ ಕಾಗದದಲ್ಲಿ ಹೇಳಿದ್ದೇನೆ. ನಿಮ್ಮ ಅವಗಾಹನೆಗಾಗಿ ಅದರ ಪ್ರತಿ ಕಳಿಸಿದ್ದೇನೆ. ಮದುವೆಯನ್ನು ನಿಷೇಧಿಸುವುದು ನನ್ನಿಂದ ಸಾಧ್ಯವಲ್ಲ. ಸಾಧ್ಯವಾದರೂ ನಾನು ಹಾಗೆ ಮಾಡುವವನಲ್ಲ. ಇತರರ – ಇತರರು ನಮ್ಮ ಮಕ್ಕಳೇ ಆದರೂ - ಬದುಕನ್ನು ಎಡಿಟ್ ಮಾಡುವ ಜವಾಬ್ದಾರಿಯನ್ನು ನಾನು ಹೊರಲಾರೆ; ಅದು ನ್ಯಾಯವಲ್ಲ ಎಂದು ನಾನು ದೃಢವಾಗಿ ನಂಬಿದ್ದೇನೆ.”
ಕೊನೆಯಲ್ಲಿ, ನಾಗರಾಜರಾವ್ ಹಾಗೂ ನ್ಯಾನ್ಸಿಯವರ ಮದುವೆ ಸಾಂಗವಾಗಿ ನೆರವೇರಿತು. ಮೂರ್ತಿರಾಯರೂ ಅದರಲ್ಲಿ ಸಂತೋಷವಾಗಿ ಭಾಗವಹಿಸಿದರು ಮತ್ತು ಮುಂದೆ ಅನ್ಯೋನ್ಯವಾಗಿ ಬಾಳಿದರು.

ಶರತ್‍ಚಂದ್ರ ಚಟರ್ಜಿ:
ಶರತ್‍ಚಂದ್ರರನ್ನು ಒಂದು ಸಭೆಯಲ್ಲಿ ಭೇಟಿ ಮಾಡಿದ ಯುವತಿಯೊಬ್ಬಳು ಅವರೊಡನೆ ಮಾತನಾಡುತ್ತಾ ಹೇಳಿದಳು: “ನನ್ನ ಜೀವನ ಹಾಳಾಗುವುದನ್ನು ನೀವು ತಪ್ಪಿಸಿದಿರಿ. ನಿಮಗೆ ವಂದನೆಗಳು.” ಶರತ್‍ಚಂದ್ರರಿಗೆ ಆಶ್ಚರ್ಯವಾಯಿತು. “ನಾನು ಇದುವರೆಗೂ ನಿನ್ನನ್ನು ಭೇಟಿಯಾದ ನೆನಪೂ ಇಲ್ಲ. ನಾನೇಗೆ ನಿನಗೆ ಸಹಾಯ ಮಾಡಿದೆ” ಎಂದು ಕೇಳಿದರು. ಆಗ ಯುವತಿ ಉತ್ತರಿಸಿದಳು:
“ನಾನು ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದೆ. ಆದರೆ ನಮ್ಮ ಮದುವೆಗೆ ಮನೆಯಲ್ಲಿ ವಿರೋಧವಿತ್ತು. ನಾವಿಬ್ಬರೂ ಓಡಿಹೋಗಬೇಕೆಂದು ನಿರ್ಧಾರ ಮಾಡಿದ್ದೆವು. ಅರ್ಧರಾತ್ರಿಯಲ್ಲಿ  ಬಂದು ಶಬ್ಧ ಮಾಡಬೇಕು, ನಾನು ಮನೆಬಿಟ್ಟು ಬರಬೇಕೆಂದು ಒಂದು ದಿನ ನಿರ್ಧಾರ ಮಾಡಿಕೊಂಡೆವು. ಆದರೆ ಅರ್ಧರಾತ್ರಿಯವರೆಗೂ ಎಚ್ಚರವಾಗಿರಲು ಏನು ಮಾಡಬೇಕೆಂದು ತಿಳಿಯದೆ ನನ್ನ ತಮ್ಮನಿಗೆ ಓದಲು ಯಾವುದಾದರೂ ಪುಸ್ತಕ ತರಲು ಹೇಳಿದೆ. ಆತ ಗ್ರಂಥಾಲಯದಿಂದ ನಿಮ್ಮ ‘ಚರಿತ್ರಹೀನ’ ಪುಸ್ತಕವನ್ನು ತಂದುಕೊಟ್ಟ. ಆತ ಬರುವ ವೇಳೆಗೆ ಪುಸ್ತಕ ಮುಗಿದಿತ್ತು. ಅರ್ಧರಾತ್ರಿಯಲ್ಲಿ ಆತನ ಶಬ್ಧವೂ ಕೇಳಿತು. ಆದರೆ ಮನೆಬಿಟ್ಟು ಹೋಗಲಿಲ್ಲ.”
ಶರತ್‍ಚಂದ್ರ ‘ಚರಿತ್ರಹೀನ’ ಕಾದಂಬರಿಯಲ್ಲಿ ಕಿರಣ್ಮಯಿ ಎಂಬ ಅದ್ಭುತ ಪಾತ್ರವಿದೆ. ಆಕೆ ವೈಚಾರಿಕತೆಯಲ್ಲಿ ತನ್ನ ಕಾಲಕ್ಕಿಂತಲೂ ಮುಂದೆ ಬೆಳೆದಿದ್ದಳು. ಆಕೆಯ ಮೃತ ಗಂಡನ ಗೆಳೆಯ ಉಪೇಂದ್ರ ತನ್ನ ತಮ್ಮ ದಿವಾಕರನನ್ನು ಇವಳೊಡನೆ ಓದಲೆಂದು ಬಿಟ್ಟಿರುತ್ತಾನೆ. ಆತ ಕಿರಣ್ಮಯಿಯ ಅತ್ತೆಯ ಮಾತನ್ನು ಕೇಳಿಕೊಂಡು ಕಿರಣ್ಮಯಿ ಮತ್ತು ದಿವಾಕರನ ನಡುವಿನ ಸಂಬಂಧದ ಬಗ್ಗೆ ಅನುಮಾನಪಡುತ್ತಾನೆ. ದಿವಾಕರನನ್ನು ತನ್ನ ತಮ್ಮನಂತೆ ನೋಡುತ್ತಿದ್ದ ಕಿರಣ್ಮಯಿಗೆ ಈ ಆಪಾದನೆಯಿಂದ ಬಹಳ ನೋವಾಗುತ್ತದೆ ಮತ್ತು ರೊಚ್ಚಿಗೆದ್ದುಬಿಡುತ್ತಾಳೆ. ಉಪೇಂದ್ರನ ಬಗ್ಗೆ ಬಹಳ ವಿಶ್ವಾಸವಿಟ್ಟುಕೊಂಡಿದ್ದ ಕಿರಣ್ಮಯಿ ಅವನಿಗೆ ಪಾಠ ಕಲಿಸಲೆಂದು ದಿವಾಕರನನ್ನು ಓಡಿಸಿಕೊಂಡು ಮನೆಬಿಟ್ಟು ಹೋಗುತ್ತಾಳೆ. ಆದರೆ ವಯಸ್ಸಿನಲ್ಲಿ, ಎಲ್ಲದರಲ್ಲೂ ತನಗಿಂತ ಕಿರಿಯನಾದ ದಿವಾಕರನ ಜೊತೆಯಲ್ಲಿ ಇರಲಾಗದೆ ಪರಿತಪಿಸುತ್ತಾಳೆ. ಸೇಡಿನ ಭಾವನೆಯಿಂದ ತಾನು ಮಾಡಿದ ತಪ್ಪಿನಿಂದ ನೊಂದು ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆ ಯುವತಿಯೂ ಸಹ ತನಗೆ ಅಥವಾ ಸಮಾಜಕ್ಕೆ ಒಪ್ಪಿಗೆಯಾಗದ ಸಂಬಂಧದಿಂದ ಯಾವ ಸಮಸ್ಯೆ ಬರುವುದೆಂದು ತಿಳಿದು ಮನೆಬಿಟ್ಟು ಹೋಗುವುದಿಲ್ಲ. ಈ ಕಾರಣದಿಂದಲೇ ಆಕೆ ಶರತ್‍ಚಂದ್ರರಿಗೆ ಕೃತಜ್ಞಳಾಗಿದ್ದಳು.

ಚಾರ್ಲಿ ಚಾಪ್ಲಿನ್:
ಸಿನಿಮಾ ಜಗತ್ತಿನ ಮಹಾನ್ ಕಲಾವಿದ ಚಾರ್ಲಿ ಚಾಲ್ಪಿನ್; ಸಿನಿಮಾ ನಿರ್ಮಾಣದಲ್ಲಿ  ಅವರದ್ದು ವಿಶಿಷ್ಟ ಶೈಲಿ. ಹಾಸ್ಯದ ಮೂಲಕ ಅತ್ಯಂತ ಗಂಭೀರ ವಿಷಯಗಳನ್ನು ಪ್ರೇಕ್ಷಕನ ಹೃದಯಕ್ಕೆ ತಲುಪಿಸಬಲ್ಲ ಅಗಾಧ ಶಕ್ತಿ ಅವರ ಸಿನಿಮಾಗಳಿಗಿದೆ. ಜಗತ್ತಿನ ಸಂಕಟ, ನೋವು, ದುಃಖಗಳನ್ನು ಹಾಸ್ಯ ಪ್ರಸಂಗಗಳ ಮೂಲಕ ಅಭಿವ್ಯಕ್ತಿಗೊಳಿಸುತ್ತಿದ್ದರು. ‘ದಿ ಗ್ರೇಟ್ ಡಿಕ್ಟೇಟರ್’ ಸಿನಿಮಾದಲ್ಲಿ ಹಿಟ್ಲರ್‍ನ ಪಾಶವೀ ಕೃತ್ಯಗಳು, ಕ್ರೌರ್ಯ, ವಿಕೃತ ಮನಸ್ಸು, ತಪ್ಪು ಸಿದ್ಧಾಂತ – ಎಲ್ಲವನ್ನೂ ಹಾಸ್ಯ ಮಾಧ್ಯಮವನ್ನು ಉಪಯೋಗಿಸಿಕೊಂಡು ಅದ್ಭುತವಾಗಿ ಚಿತ್ರಿಸಿದ್ದಾರೆ. ಅವರ ಹಾಸ್ಯದ ಹಿಂದೆ ಕಣ ್ಣರಿರುತ್ತಿತ್ತು. ಅದೇ ಅವರ ವಿಶಿಷ್ಟ ಶೈಲಿ. ಚಾರ್ಲಿ ಚಾಪ್ಲಿನ್ ಈ ಶೈಲಿಯನ್ನು ಅನುಸಿರಿಸಿದ್ದು ಏಕೆ ಮತ್ತು ಹೇಗೆ?
ಚಾಪ್ಲಿನ್ ನಟನೆಯ ಆರಂಭದ ದಿನಗಳಲ್ಲಿ ಒಂದೆರೆಡು ರೀಲುಗಳ ಸಿನಿಮಾಗಳು ತಯಾರಾಗುತ್ತಿದ್ದವು. ಒಂದು ಕಥೆಯ ಎಳೆಯನ್ನು ಹಿಡಿದುಕೊಂಡು ನಿರ್ದೇಶಕ ಸಿನಿಮಾವನ್ನು ತಯಾರಿಸುತ್ತಿದ್ದ. ಸ್ವತಃ ನಟರೇ ಮೇಕಪ್ ಮಾಡಿಕೊಂಡು, ತಮ್ಮದೇ ರೀತಿಯಲ್ಲಿ ನಟನೆ ಮಾಡಿ ತೋರಿಸಬೇಕಿತ್ತು. ಅದನ್ನು ಉತ್ತಮಪಡಿಸಿಕೊಂಡು ಸಿನಿಮಾಗಳು ಸಿದ್ಧವಾಗುತ್ತಿದ್ದವು. ಕಲಾವಿದ ಚಾಪ್ಲಿನ್‍ರಲ್ಲಿ ಕೇವಲ ಹೊಟ್ಟೆಹೊರೆಯಲು ನಟನೆ ಮಾಡದೆ, ಬೆಳ್ಳಿಪರದೆಯ ಮೂಲಕ ತನ್ನ ಜೀವಾನುಭವವನ್ನು ಮತ್ತು ಅದರ ಮೂಲಕ ಉದಾತ್ತ ಭಾವನೆಗಳು, ಮೌಲ್ಯಗಳನ್ನು ತೋರಿಸಬೇಕೆಂಬ ಹಂಬಲ ಹುಟ್ಟಿತ್ತು. ಅದನ್ನು ಅಭಿವ್ಯಕ್ತಿಗೊಳಿಸುವ ವಿಧಾನಕ್ಕೆ ಮನದೊಳಗೇ ಹುಡುಕಾಟವೂ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ನಡೆದ ಒಂದು ಘಟನೆ ಅವರ ಸಿನಿಮಾ ಶೈಲಿ ಹುಟ್ಟಿಕೊಳ್ಳಲು ಒಂದು ಕಾರಣ ಎನ್ನಬಹುದು. ಅದನ್ನು ಅವರು ತಮ್ಮ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ:
“ನನ್ನ ಸಿನಿಮಾಗಳಲ್ಲಿ ಹಾಸ್ಯದ ಜೊತೆಗೆ ಮತ್ತೊಂದು ಆಯಾಮವನ್ನು ಸೇರಿಸಲು ಮೊದಲು ಹೊಳೆದದ್ದು ಎಲ್ಲಿ ಎಂದು ಹುಡುಕಿ  ಹೇಳಬಲ್ಲೆ. ನಾನು ‘ದಿ ನ್ಯೂಯಾರ್ಕ್ ಜೆನಿಟರ್’ ಸಿನಿಮಾದಲ್ಲಿ ಮ್ಯಾನೇಜರ್ ನನ್ನನ್ನು ಕೆಲಸದಿಂದ ತೆಗೆದುಹಾಕಿರುವ ದೃಶ್ಯದಲ್ಲಿ ಅಭಿನಯಿಸುತ್ತಿದ್ದೆ. ನನ್ನ ಮೇಲೆ ಕರುಣೆ ತೋರಿಸಿ, ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಕೇಳಿಕೊಳ್ಳಲು, ನನಗೆ ಸಣ್ಣಮಕ್ಕಳಿದ್ದಾರೆ, ದೊಡ್ಡ ಕುಟುಂಬವಿದೆ ಎಂದು ಮೂಕಾಭಿನಯ ಮಾಡುತ್ತಿದ್ದೆ. ಇದು ಸುಮ್ಮನೆ ಭಾವುಕ ಅಭಿನಯವಾಗಿದ್ದರೂ ಸಹ, ಸೈಡ್ ವಿಂಗ್‍ನಲ್ಲಿ ರಿಹರ್ಸಲ್ ನೋಡುತ್ತಿದ್ದ ನಟಿ ದೊರೊತಿ ಡೆವೆನ್‍ಪೋರ್ಟ್ ಅಳುತ್ತಿದ್ದಳು; ಇದನ್ನು ನೋಡಿ ಬಹಳ ಆಶ್ಚರ್ಯವಾಯಿತು. ಆಕೆ ಹೇಳಿದಳು: ‘ಇದು ತಮಾಷೆಯ ವಿಷಯ ಅಂತ ಗೊತ್ತು. ಆದರೆ ಅಳು ತಡೆಯಲಾಗಲಿಲ್ಲ.’ ಆಕೆ ನನ್ನ ಅನಿಸಿಕೆಯನ್ನು ದೃಢಪಡಿಸಿದಳು - ನಾನು ನಗುವಿನ ಜೊತೆಗೆ ಅಳುವನ್ನೂ ತರಬಲ್ಲೆ.”
- ಸಂಗ್ರಹ ಮತ್ತು ಬರಹ: ಎಸ್.ಎನ್. ಸ್ವಾಮಿ

ಆಧಾರಗಳು:
ಧಾರವಾಡದ ದತ್ತೂ ಮಾಸ್ತರ – ಎನ್ಕೆ
ಗಳಗನಾಥ ಮಾಸ್ತರ - ಶ್ರೀನಿವಾಸ ಹಾವನೂರು
ಸಂಜೆಗಣ ್ಣನ ಹಿನ್ನೋಟ – ಎ.ಎನ್.ಮೂರ್ತಿರಾವ್
ಆತ್ಮಕಥೆ – ಚಾರ್ಲಿ ಚಾಪ್ಲಿನ್
ಅಲೆಮಾರಿ ಪ್ರವಾದಿ - ವಿಷ್ಣು ಪ್ರಭಾಕರ್