Pages

ಕಥೆ - ಅಪ್ಪ


ಬೆಳಿಗ್ಗೆ ಮನೆಯಲ್ಲಿ ನಡೆದ ಘಟನೆ ಮತ್ತು ತನ್ನ ವರ್ತನೆಯನ್ನು ನೆನೆಸಿಕೊಂಡು ಸುಧೀರ್‍ಗೆ ತಲೆ ಕೆಟ್ಟು ಹೋಗಿತ್ತು. ಅಪ್ಪ ಮಹಾ ಕೇಳಿದ್ದೇನು ತಮ್ಮ ಕನ್ನಡಕ ಒಡೆದಿದೆಯೆಂದು, ಬೇರೆ ತಂದುಕೊಡೆಂದು.ಅದೂ ಕೂಡ ಅವರು ಒಡೆದದ್ದಲ್ಲ. ಆಕಸ್ಮಿಕವಾಗಿ ತಾನೇ ಒಡೆದಿದ್ದೆಂದು ತನ್ನವಳೆ ಬಂದು ಹೇಳಿದ್ದಳು.ಆದರೆ ತಾನು ಯಾವುದೊ ಚಿಂತೆಯಲ್ಲಿ ಇದ್ದುದ್ದರಿಂದ, ಏನಪ್ಪಾ ಬೆಳಿಗ್ಗೆ ಬೆಳಿಗ್ಗೆ ತಲೆ ತಿಂತೀರಾ? ಎಂದುಬಿಟ್ಟಿದ್ದ.ಅಪ್ಪ ಮುಖ ಚಿಕ್ಕದು ಮಾಡಿಕೊಂಡು ಮೌನವಾಗಿಬಿಟ್ಟಿದ್ದರು. ಆದರೆ ಅವರ ಕಣ್ಣಂಚಿನಲ್ಲಿದ್ದ ನೀರು ಕಂಡಾಗ ಸುಧೀರ್‍ಗೆ ಶಾಕ್ ಆಗಿಬಿಟ್ಟಿತ್ತು. ಏನು ಮಾಡುವುದೆಂದೇ ತೋಚದೆ ಹಾಗೆಯೇ ಬಂದುಬಿಟ್ಟಿದ್ದ. ಅಷ್ಟೆ ಅಲ್ಲದೆ ಮಗ ಅದನ್ನು ನೋಡಿದ್ದು, ಅವನಿಗೂ ಬೇಸರವಾಗಿತ್ತು. ಅವನು ತನ್ನ ಬಗ್ಗೆ ಏನು ತಿಳಿದುಕೊಳ್ಳುತ್ತಾನೋ ಎಂಬ ಚಿಂತೆಯಾಗಿತ್ತು.ಆಫೀಸಿಗೆ ಬಂದು ಕುಳಿತವನಿಗೆ ತಲೆಯೇ ಓಡದಂತಾಗಿತ್ತು. ಛೇಂಬರ್ ಒಳಗೆ ಬಂದ ಸ್ಟೆನೊ ಕವಿತಾ ಸರ್, ಪ್ಲೀಸ್ ಮಧ್ಯಾಹ್ನ ರಜೆ ಕೊಡ್ತೀರಾ? ಎಂದಳು. ಅವಳನ್ನು ಕಂಡರೆ ಮಗಳಷ್ಟೇ ವಾತ್ಸಲ್ಯ. ಏಕಮ್ಮ ಕೇಳಿದ ಸುಧೀರ್.ಅಪ್ಪನಿಗೆ ಐಸ್‍ಕ್ರೀಮ್ ಕೊಡಿಸಬೇಕು ಸರ್ ಎಂದಳು.ಅವಳಿಗೂ ಸುಧೀರ್ ಜೊತೆ ಸ್ವಲ್ಪ ಸಲಿಗೆಯೇ!ಆಶ್ಚರ್ಯವಾಯಿತು ಸುಧೀರ್‍ಗೆ. ಏನಮ್ಮ ಇದು, ಅಪ್ಪನಿಗೆ ಐಸ್‍ಕ್ರೀಮ್ ಕೊಡಿಸಲು ರಜೆ ಕೇಳ್ತಿದ್ದೀಯಾ?ಏನಿಲ್ಲಾ ಸರ್, ಬೆಳಿಗ್ಗೆ ಅಪ್ಪನ ಮೇಲೆ ರೇಗಿಬಿಟ್ಟೆ.ಅರೆ ತನ್ನದೆ ಪರಿಸ್ಥಿತಿ ಎಂದುಕೊಂಡು ಯಾಕಮ್ಮ ಕೇಳಿದ.ನಾನು ಆಫೀಸಿಗೆ ಬರುವ ಅರ್ಜೆಂಟಿನಲ್ಲಿದ್ದೆ. ಅಪ್ಪ ಸಂಜೆ ಬೇಗ ಬರ್ತೀಯೇನಮ್ಮ, ಐಸ್‍ಕ್ರೀಮ್ ತಿನ್ನಲು ಹೋಗೋಣಎಂದರು. ಕೋಪ ಬಂದು ರೇಗಿಬಿಟ್ಟೆ. ಅಪ್ಪ ಏನೂ ಮಾತನಾಡಲಿಲ್ಲ. ಮಂಕಾಗಿ ರೂಮಿಗೆ ಹೋಗಿಬಿಟ್ಟರು. ನನಗೆ ಗೊತ್ತು, ನಾನು ಮನೆಗೆ ಹೋಗುವವರೆಗೆ ಅಪ್ಪ ಏನೂ ತಿನ್ನುವುದಿಲ್ಲ ಎಂದು. ಅದಕ್ಕೆ ಮನೆಗೆ ಹೋಗಿ, ಅವರಿಗೆ ಮಸ್ಕಾ ಹೊಡೆದು ಊಟ ಮಾಡಿಸಿ, ಸಂಜೆ ಐಸ್‍ಕ್ರೀಮ್ ಕೊಡಿಸುತ್ತೇನೆ.ಸುಧೀರ್‍ಗೆ ಏನು ಹೇಳುವುದೆಂದೆ ತೋಚಲಿಲ್ಲ.ಕವಿತಾ ಮಾತು ಮುಂದುವರೆಸಿದಳು. ವಿಚಿತ್ರ ಎನಿಸುತ್ತೆ ಅಲ್ಲವೇ ಸರ್? ಆದ್ರೆ ನಿಮಗೆ ಗೊತ್ತಾ ಸರ್, ನಾನು ಚಿಕ್ಕವಳಿದ್ದಾಗ ಒಂದು ದಿನ ರಾತ್ರಿ 11 ಘಂಟೆಗೆ ಎದ್ದು ಐಸ್‍ಕ್ರೀಮ್ ಕೇಳಿದ್ದೆ. ಬೆಳಿಗ್ಗೆ ಕೊಡಿಸುತ್ತೇನೆ ಎಂದಾಗ ಅಳಲು ಶುರುಮಾಡಿದ್ದೆ. ಅಮ್ಮ ಎಷ್ಟು ಬೇಡ ಬೇಡವೆಂದರೂ ಅಪ್ಪ ಕೇಳದೆ ಹೊರಗೆ ಹೋಗಿ ಬಹಳಷ್ಟು ಕಡೆ ಸುತ್ತಾಡಿ ರಾತ್ರಿ 1 ಘಂಟೆಗೆ ಐಸ್‍ಕ್ರೀಮ್ ತೆಗೆದುಕೊಂಡು ಮನೆಗೆ ಬಂದಿದ್ದರು. ಇಂತಹದ್ದು ಎಷ್ಟೋ ಘಟನೆಗಳು ಸರ್. ನಮ್ಮಪ್ಪ ನನ್ನನ್ನು ಯಾವತ್ತೂ ಬೈದವರಲ್ಲ. ನನ್ನ ಕಣ್ಣಲ್ಲಿ ಒಂದು ತೊಟ್ಟು ನೀರು ಕಂಡರೂ ಸಹಿಸುತ್ತಿರಲಿಲ್ಲ. ನನಗಾಗಿ ಎಷ್ಟೆಲ್ಲ ಮಾಡಿದ್ದಾರೆ ಸರ್. ಹಾಗಂತ ನಮ್ಮಪ್ಪನಿಗೆ ತುಂಬಾ ಸಂಬಳವೇನೂ ಬರ್ತಿರಲಿಲ್ಲ. ಅವರಿಗೆ ಟೆನ್ಷ್‍ನ್ ಇರಲಿಲ್ಲವಾ ಸರ್. ಆದರೆ ಅವರೆಂದೂ ನನ್ನ ಮೇಲೆ ಕೋಪ ಮಾಡಿಕೊಂಡವರಲ್ಲ. ಮತ್ತೆ ನನಗೇನು ಹಕ್ಕಿದೆ ಸರ್. ನಾನವತ್ತು ಚಿಕ್ಕವಳಾಗಿದ್ದೆ. ಈಗ ಅವರು ನನಗೆ ಮಗು ತರಹ ಸರ್. ತುಂಬಾ ಮಾತಾಡಿಬಿಟ್ಟೆ ಅನಿಸುತ್ತೆ. ಎಲ್ಲಾ ಕೆಲಸ ಮುಗಿಸಿ ಹೋಗುತ್ತೇನೆ ಸರ್. ಪ್ಲೀಸ್ ರಜಾ ಇಲ್ಲವೆನ್ನಬೇಡಿ.ಇಲ್ಲವೆನ್ನಲಾಗಲಿಲ್ಲ ಸುಧೀರ್‍ಗೆ. ಸರಿ ಹೋಗಮ್ಮ ಎಂದ.ಅವಳು ಹೋದ ಮೇಲೆ ಸುಧೀರ್‍ಗೆ ತನ್ನಪ್ಪನ ಬಗ್ಗೆ ನೆನಪಾಗತೊಡಗಿತು.ಅವನು 6ನೇ ತರಗತಿಯಲ್ಲಿರುವಾಗ ಎಲ್ಲರ ಹತ್ತಿರ ಸೈಕಲ್ ಇದೆ, ತನಗೂ ಬೇಕು, ಎಂದು ಹಠ ಹಿಡಿದಿದ್ದ. ಅಮ್ಮ ಗದರಿದ್ದರು. ಆದರೆ ಅಪ್ಪ ಏನೂ ಮಾತನಾಡಲಿಲ್ಲ. ಅದಾದ ಒಂದು ತಿಂಗಳು ಅಪ್ಪ 6 ಘಂಟೆಗೆ ಮನೆಗೆ ಬರುತ್ತಿದ್ದವರು 9 ಘಂಟೆಗೆ ಬರುತ್ತಿದ್ದರು. ಒಂದು ತಿಂಗಳ ನಂತರ ಮನೆಗೆ ಸೈಕಲ್ ಬಂದಿತ್ತು.ಅಪ್ಪ ಮತ್ತೆ 6 ಘಂಟೆಗೆ ಬರಲಾರಂಭಿಸಿದರು. ಆಗ ಅಪ್ಪ ಒಂದು ತಿಂಗಳು ಓಟಿ ಮಾಡಿದ್ದರು ಎಂದು ನಂತರ ಎಷ್ಟೋ ವರ್ಷಗಳ ಮೇಲೆ ಅಮ್ಮ ಯಾವುದೋ ಸಂದರ್ಭದಲ್ಲಿ ಹೇಳಿದ್ದರು. ತನ್ನ ಆಸೆಗಾಗಿ ಒಂದು ತಿಂಗಳು ಓಟಿ ಮಾಡಿದ ಅಪ್ಪ ಎಲ್ಲಿ, ಕೇವಲ 400-500 ರೂಪಾಯಿಗಳ ಕನ್ನಡಕಕ್ಕಾಗಿ ರೇಗಿದ ತಾನೆಲ್ಲಿ? ಅವನಿಗೆ ತನ್ನ ಬಗ್ಗೆಯೇ ಅಸಹ್ಯವೆನಿಸಿಬಿಟ್ಟಿತು.ಅಷ್ಟರಲ್ಲಿಯೇ ಒಳಗೆ ಬಂದ ಮ್ಯಾನೇಜರ್, ಸರ್, ಈ ದಿನೇಶ್ ಜೊತೆ ಕೆಲಸ ಮಾಡುವುದೇ ಕಷ್ಟವಾಗಿಬಿಟ್ಟಿದೆ. ಅವನು ಕೆಲಸಕ್ಕೆ ಸೇರಿ ಕೇವಲ 6 ತಿಂಗಳಾಯಿತು. ಈಗಾಗಲೇ ಬಹಳಷ್ಟು ಬಾರಿ ಚಕ್ಕರ್ ಹಾಕಿದ್ದಾನೆ. ಈಗ ಬೆಳಿಗ್ಗೆ ಫೆÇೀನ್ ಮಾಡಿ ಸರ್, ನನಗೆ ಬೆಳಿಗ್ಗೆ ಕೆಲಸಕ್ಕೆ ಬರಲು ಸಾಧ್ಯವಿಲ್ಲ ಅಂತಾನೆ.ಮನೆಯ ಟೆನ್ಷ್‍ನ್ ಜೊತೆ ಆಫೀಸ್ ಟೆನ್ಷ್‍ನ್ ಬೇರೆ ಎಂದುಕೊಂಡು, ಸರಿ, ಮಧ್ಯಾಹ್ನ ಅವನು ಬಂದ ತಕ್ಷಣ ಅವನನ್ನು ನನ್ನ ಬಳಿ ಕಳಿಸಿ ಎಂದ ಸುಧೀರ್.ಮಧ್ಯಾಹ್ನ ಮನೆಗೆ ಫೆÇೀನ್ ಮಾಡಿದಾಗ ಅಪ್ಪ ಊಟ ಮಾಡಿ ಮಲಗಿದ್ದಾರೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ಅಪ್ಪ ಸಾಮಾನ್ಯವಾಗಿ ಯಾರ ಮೇಲೂ ಮುನಿಸಿಕೊಂಡವರಲ್ಲ, ಊಟ ಬಿಟ್ಟವರಲ್ಲ. ಆದರೆ ಇಂದು ತನ್ನ ವರ್ತನೆಯಿಂದಾಗಿ ಅವರು ನೊಂದಿದ್ದು ಕಂಡು ಏನು ಮಾಡುತ್ತಾರೊ ಎಂಬ ಹೆದರಿಕೆ ಇತ್ತು. ಸಧ್ಯ ಹಾಗೇನೂ ಆಗಲಿಲ್ಲವಲ್ಲ ಎಂದು ಸಮಾಧಾನದ ನಿಟ್ಟುಸಿರಿಟ್ಟ. ಆದರೂ ಮನಸ್ಸಿನಲ್ಲಿ ಏನೋ ತಳಮಳ.ತಾನೂ ಊಟ ಮಾಡಿ ಫೈಲ್ಸ್ ನೋಡುತ್ತಿದ್ದಾಗ ಮ್ಯಾನೇಜರ್ ದಿನೇಶ್‍ನನ್ನು ಕರೆತಂದ. ನಮಸ್ಕಾರ್ ಸರ್, ಅನಿವಾರ್ಯ ಕಾರಣದಿಂದ ಬೆಳಿಗ್ಗೆ ಬರಲಾಗಲಿಲ್ಲ. ದಯವಿಟ್ಟು ಕ್ಷಮಿಸಿ ಸರ್ ಎಂದ ದಿನೇಶ್.ಏನಯ್ಯಾ ಹೀಗೆ ಮಾಡಿದರೆ? ಬೆಳಿಗ್ಗೆಯಿಂದ ಎಷ್ಟು ಕೆಲಸ ಪೆಂಡಿಂಗ್ ಇದೆ ಕೇಳಿದ ಸುಧೀರ್.ಇಲ್ಲ ಸರ್, ಹೆಚ್ಚು ಕೆಲಸವೇನು ಬಾಕಿ ಇಲ್ಲ. ನೆನ್ನೆ 8 ಘಂಟೆಯವರೆಗೂ ಇದ್ದು ಕೆಲಸ ಮಾಡಿ ಹೋಗಿದ್ದೆ.ಮ್ಯಾನೇಜರ್ ಕಡೆ ತಿರುಗಿ ಸುಧೀರ್, ಮತ್ತೀನ್ನೇನ್ರಿ ನಿಮ್ಮ ಪ್ರಾಬ್ಲಮ್. ಅವರ ಕೆಲಸ ಮಾಡಿ ಹೋಗಿದ್ದಾರಲ್ಲಾ?ಇಲ್ಲ ಸರ್, ಬಹಳ ಮುಖ್ಯವಾದ ಕೆಲಸವೇ ಆಗಿಲ್ಲ. ದಿನೇಶ್ ಕಡೆ ನೋಡಿದರೆ ಮೌನವಾಗಿ ನಿಂತಿದ್ದ.ಏನಪ್ಪಾ ಹೀಗೆ ಮಾಡಿದರೆ?ಸರ್ ನಾನು ಬೇಕಾಗಿ ಮಾಡಲಿಲ್ಲ. ಅನಿವಾರ್ಯ ಕಾರಣದಿಂದಾಗಿ... ಮ್ಯಾನೇಜರ್ ಮಧ್ಯದಲ್ಲಿಯೇ ಬಾಯಿ ಹಾಕಿ, ಹೌದ್ರಿ ನಿಮಗೆ ಪ್ರತಿ ವಾರದಲ್ಲಿ ನಾಲ್ಕು ಅನಿವಾರ್ಯ ಕಾರಣಗಳಿರುತ್ತೆ. ನಿಮ್ಮಂಥವರಿಗೆ ಕೆಲಸ ಕೊಟ್ಟಿದ್ದೆ ತಪ್ಪಾಯ್ತು. ಕಿತ್ತು ಬಿಸಾಕ್ತ ಇರಬೇಕು ಎಂದರು.ಆಯ್ತು ನಿಮಗೆ ಸಮಧಾನವಿಲ್ಲದಿದ್ದರೆ ಕಿತ್ತು ಬಿಸಾಕಿ ಸರ್. ಆದ್ರೆ ನನ್ನ ಜೀವನದಲ್ಲಿ ಮತ್ತೆ ಮತ್ತೆ ಇಂತಹ ಅನಿವಾರ್ಯ ಕಾರಣಗಳು ಬರುತ್ತಲೇ ಇರುತ್ತವೆ. ದುಡಿಯೋರಿಗೆ ಎಲ್ಲೋ ಒಂದು ಕಡೆ ಕೆಲಸ ಸಿಕ್ಕೇ ಸಿಗುತ್ತದೆ ಕೋಪದಲ್ಲಿಯೇ ಉತ್ತರಿಸಿದ.ನೋಡಿದ್ರಾ ಸರ್ ಅವನ ಉತ್ತರಾನಾ, ಎಷ್ಟು ಧಿಮಾಕು, ರೇಗಿದ ಮ್ಯಾನೇಜರ್.ಆದರೆ ಸುಧೀರ್‍ಗೆ ಅದು ಧಿಮಾಕೆನಿಸಲಿಲ್ಲ. ಏನೋ ಬಲವಾದ ಕಾರಣವಿರಬೇಕೆನಿಸಿ, ನೀವು ಹೋಗಿ, ನಾನು ವಿಚಾರಿಸುತ್ತೇನೆ ಎಂದ. ಮ್ಯಾನೇಜರ್ ಗೊಣಗುತ್ತಲೇ ಹೊರಹೋದರು.ದಿನೇಶ್, ನೀನು ತುಂಬಾ ಒಳ್ಳೆಯ ಕೆಲಸಗಾರ ಎಂದು ನನಗೆ ಗೊತ್ತು. ಏನಾಯ್ತು ಹೇಳು? ಎಂದ.ತಕ್ಷಣವೇ ಶಾಂತನಾದ ಅವನು ಕಣ್ಣಲ್ಲಿ ನೀರು ತುಂಬಿಕೊಂಡು, ಸರ್ ನನಗಿರೋದು ನಮ್ಮ ತಂದೆ ಒಬ್ಬರೆ. ಚಿಕ್ಕಂದಿನಲ್ಲಿಯೇ ಅಮ್ಮ ತೀರಿಕೊಂಡಾಗ ಅಪ್ಪ ಮತ್ತೊಂದು ಮದುವೆ ಮಾಡಿಕೊಳ್ಳಲಿಲ್ಲ. ಅವರೆ ಅಮ್ಮ ಅಪ್ಪ ಎರಡೂ ಆಗಿ ನನ್ನನ್ನು ನೋಡಿಕೊಂಡರು. ನನ್ನನ್ನು ಸುಖವಾಗಿ ಬೆಳೆಸಿ ಈ ಸ್ಥಾನ ದೊರಕಿಸಿಕೊಟ್ಟಿದ್ದಾರೆ. ಅವರಿಗೆ ಈಗ ಕ್ಯಾನ್ಸರ್. ಅವರಿಗೆ ಆಗಾಗ ಆರೋಗ್ಯ ಕೆಡುತ್ತಿರುತ್ತದೆ. ಅವರನ್ನು ನಾನೇ ನೋಡಿಕೊಳ್ಳಬೇಕು.ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬಹುದಲ್ಲಾ?ಸರ್, ನಿಮಗೆ ಗೊತ್ತಾ, ನಮ್ಮಪ್ಪ ಬಹಳ ದೊಡ್ಡ ಕೆಲಸದಲ್ಲಿದ್ದವರು. ಅವರು ಎಷ್ಟೆ ಕೆಲಸವಿದ್ದರೂ ನನ್ನನ್ನು ಶಾಲೆಗೆ ರೆಡಿ ಮಾಡಿ ಕಳಿಸುತ್ತಿದ್ದರು. ಅಪ್ಪನ ಕೈರುಚಿ ನನಗೆ ಬಹಳ ಇಷ್ಟ ಎಂದು ಅವರೇ ಅಡಿಗೆ ಮಾಡುತ್ತಿದ್ದರು. ಈಗಲೂ ಹುಷಾರಿದ್ದಾಗ ಅವರೇ ಅಡಿಗೆ ಮಾಡುತ್ತಾರೆ. ಡಾಕ್ಟರ್ ಅವರಿಗೆ ಸಂತೋಷವಾಗುವ ಕೆಲಸ ಮಾಡಲಿ ಎಂದಿದ್ದಕ್ಕೆ ನಾನು ಸುಮ್ಮನಿದ್ದೇನೆ. ಈಗ ಹೇಳಿ ಸರ್, ನಮ್ಮಪ್ಪನಿಗೆ ಹುಷಾರಿಲ್ಲದಾಗ ನಾನು ಸೇವೆ ಮಾಡಬೇಕೆ, ಬೇಡವೆ?ಏಕೋ ಇವರೆಲ್ಲಾ ಬಹಳ ಎತ್ತರಕ್ಕೆ ಬೆಳೆದಿದ್ದಾರೆ, ತಾನು ಮಾತ್ರ ಕೆಳಕ್ಕೆ ಜಾರುತ್ತಿದ್ದೇನೆ ಎನಿಸಿತು ಸುಧೀರ್‍ಗೆ.ಒಳ್ಳೆ ಕೆಲಸ ಮಾಡುತ್ತಿದ್ದೀಯಾ. ನಿನಗೆ ರಜೆ ಬೇಕಾದರೆ ಇನ್ನು ಮುಂದೆ ನನಗೆ ನೇರವಾಗಿ ಫೆÇೀನ್ ಮಾಡು ಎಂದು ಹೇಳಿ ಕಳಿಸಿದ.ತುಂಬು ಕೃತಜ್ಞತೆಯಿಂದ ದಿನೇಶ್, ಸರ್, ನಿಮ್ಮ ಮನಸ್ಸು ಬಹಳ ದೊಡ್ಡದು. ನಿಮ್ಮ ತಂದೆ ಬಹಳ ಅದೃಷ್ಟವಂತರು ಎಂದ. ಅದನ್ನು ಕೇಳಿ ಸುಧೀರ್ ಮನಸ್ಸು ಕುಸಿದುಬಿಟ್ಟಿತು.ದಿನೇಶ್‍ನನ್ನು ಕಳಿಸಿದ ನಂತರ ಕೆಲಸ ಮುಗಿಸಿಕೊಂಡು ಅಪ್ಪನಿಗೆ ಕನ್ನಡಕ ತೆಗೆದುಕೊಂಡು ಹೋಗಬೇಕು ಎಂದುಕೊಂಡು ಬೇಗ ಬೇಗ ಫೈಲ್ಸ್ ನೋಡಲಾರಂಭಿಸಿದ.4 ಘಂಟೆಗೆ ಫೆÇೀನ್ ರಿಂಗ್ ಆಯಿತು. ನೋಡಿದರೆ ಮಗನದ್ದು. ಆದರೆ ಧ್ವನಿ ಮಾತ್ರ ಅಪ್ಪನದ್ದು. ಥ್ಯಾಂಕ್ಸ್ ಕಣೋ. ಕನ್ನಡಕ ಬಹಳ ಚೆನ್ನಾಗಿದೆ. ನಿನ್ನ ಆಯ್ಕೆ ಅಂದ್ರೆ ಕೇಳಬೇಕಾ? ಥ್ಯಾಂಕ್ಯೂ ಎಂದರು.ಶಾಕ್ ಆಯಿತು ಸುಧೀರ್‍ಗೆ. ಮಗ ಫೆÇೀನ್ ತೆಗೆದುಕೊಂಡ ಮೇಲೆ, ಏನೊ ಇದು? ಕೇಳಿದರು.ಒಂದ್ನಿಮಿಷ ಇರು ಹೊರಗೆ ಬಂದ ಮಗ, ಅಪ್ಪಾ, ಬೆಳಿಗ್ಗೆ ನಡೆದ ಘಟನೆ ನೋಡಿದೆ. ನೀವು ಯಾವತ್ತೂ ಆ ರೀತಿ ನಡೆದುಕೊಂಡವರಲ್ಲ. ಏನೋ ಆಫೀಸ್ ಟೆನ್ಷ್‍ನ್ ಇರಬೇಕೆಂದುಕೊಂಡು ನಾನೇ ಕನ್ನಡಕ ತಂದು ಅಪ್ಪ ತುಂಬಾ ಕೆಲಸ ಎಂದು ನನ್ನ ಕೈಯಲ್ಲಿ ಕಳಿಸಿದ್ದಾರೆ ಎಂದೆ, ತಾತ ಫುಲ್ ಖುಷ್ ಎಂದ.ಮನಸ್ಸಿನ ಭಾರವನ್ನು ಯಾರೋ ಇಳಿಸಿದಂತಾಯಿತು ಸುಧೀರ್‍ಗೆ. ಥ್ಯಾಂಕ್ಸ್ ಮಗನೆ ಎಂದ.ತಾತ ಹೇಳಿದ ಡೈಲಾಗ್ ಇದು.ಇಲ್ಲ ಕಣೋ, ನೀನು ನನ್ನ ಎದೆಯ ಭಾರ ಇಳಿಸಿದೆ.ಏನಪ್ಪ ಇದು, ನೀವು ಇಷ್ಟೆಲ್ಲಾ ಹೇಳಬೇಕೇ. ನಿಮಗೆ ನಿಮ್ಮಪ್ಪನ ಬಗ್ಗೆ ಇರುವ ಜವಾಬ್ದಾರಿ ನನಗೆ ನನ್ನಪ್ಪನ ಬಗ್ಗೆಯೂ ಇರಬೇಕಲ್ಲವೇ. ಜೊತೆಗೆ ತಾತ ಏನೂ ನಿಮ್ಮ ಬಗ್ಗೆ ಬೇಜಾರು ಮಾಡಿಕೊಂಡಿಲ್ಲ. ಪಾಪ ಅವನಿಗೆ ಬಹಳ ಕೆಲಸ. ನಾನು ಬೆಳಿಗ್ಗೆ ಕೇಳಬಾರದಾಗಿತ್ತು. ಅಷ್ಟು ಕೆಲಸ ಇದ್ದರೂ ನೆನಪಿಟ್ಟುಕೊಂಡು ಕಳಿಸಿದ್ದಾನಲ್ಲಾ, ನೋಡಮ್ಮ ನನ್ನ ಮಗ ಎಂದು ಅಮ್ಮನಿಗೆ ಹೇಳುತ್ತಿದ್ದರು. ಹೃದಯ ತುಂಬಿ ಬಂದಂತಾಯಿತು ಸುಧೀರ್‍ಗೆ. ಏನು ಹೇಳಬೇಕೊ ಗೊತ್ತಾಗ್ತಿಲ್ಲ ಕಣೋ. ನೀನು ನನ್ನ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ.ಅಪ್ಪ, ಸಾಕು ಹೊಗಳಿಕೆ. ಸಂಜೆ ಬೇಗ ಬನ್ನಿ ಹೇಳಿ ಫೋನಿಟ್ಟ.ಸುಧೀರ್‍ಗೆ ತನ್ನ ಮಗನ ಬಗ್ಗೆ ಹೆಮ್ಮೆ ಎನಿಸಿತು. ಆದರೆ ತಾನಿಷ್ಟು ಒಳ್ಳೆಯ ಅಪ್ಪನಾಗಲು ತನ್ನ ಅಪ್ಪನೇ ಕಾರಣ ಎಂಬುದು ಇಂದು ಅವನಿಗೆ ಸ್ಪಷ್ಟವಾಯಿತು. ಅಪ್ಪ, ಮಗ ಇಬ್ಬರೂ ಒಳ್ಳೆಯವರು, ತನ್ನನ್ನು ಅರ್ಥ ಮಾಡಿಕೊಳ್ಳುವವರು. ನಾನೆಷ್ಟು ಅದೃಷ್ಟಶಾಲಿ! ಎಂದುಕೊಂಡ. 

- ಸುಧಾ ಜಿ 



ಅನುವಾದಿತ ನಾಟಕ - ಕಲ್ಲಿದ್ದಲ ಗಣಿ ಕಾರ್ಮಿಕರು



ಪಾತ್ರಗಳು
ವೀರಣ್ಣ – ಮಧ್ಯ ವಯಸ್ಸಿನ ಗಣಿ ಕಾರ್ಮಿಕ
ಕಿಟ್ಟಿ – 15 ವರ್ಷದ ಹುಡುಗ
ಸೀನಣ್ಣ – 50 ವರ್ಷದ ಸಹಾಯಕ
ಕಾಳಣ್ಣ – ಮಧ್ಯ ವಯಸ್ಸಿನ ಗಣಿ ಕಾರ್ಮಿಕ
ಸುಬ್ಬಣ್ಣ – 50 ವರ್ಷದ ತಂಡದ ಮೇಲ್ವಿಚಾರಕ

ದೃಶ್ಯ:  ಕಲ್ಲಿದ್ದಲ ಗಣಿಯ ಒಳಭಾಗ. ಬಹಳ ಇಕ್ಕಟ್ಟಿನ ಸ್ಥಳ. 5 ಳಿ ಅಡಿ ಎತ್ತರದ ಬಂಡೆಯಿಂದ ಕೊರೆದ ಸ್ಥಳ. ಹಿಂದಿನ ಗೋಡೆಯುದ್ದಕ್ಕೂ ಕಲ್ಲಿದ್ದಲ ಸಣ್ಣ ಸಾಲನ್ನೇ ಕಾಣಬಹುದು. ಹಿಂದೆ ಕೆಲವು ಮರದ ಬೊಂಬುಗಳನ್ನು ಗೋಡೆ ಮತ್ತು ಛಾವಣಿಗೆ ಬೆಂಬಲವಾಗಿ ನಿಲ್ಲಿಸಲಾಗಿದೆ. ಗೋಡೆಯ ಮೇಲಿನ ಮೊಳೆಯೊಂದರಲ್ಲಿ ಜಾಕೆಟ್ ಒಂದು ತೂಗಾಡುತ್ತಿದೆ. 
ಅದಕ್ಕೆ ದಾರಿ ಇರುವುದು ಬಲ [ವೀಕ್ಷಕರ] ಗೋಡೆಯಲ್ಲಿ. 4 ಅಡಿ ಎತ್ತರದ, 3 ಳಿ ಅಡಿ ಅಗಲದ ಬಾಗಿಲಿದೆ. ಪ್ರತಿಯೊಂದು ಕಡೆಯೂ ಬೊಂಬುಗಳನ್ನು ನಿಲ್ಲಿಸಲಾಗಿದೆ. ಇದರ ಮೇಲೆ ಒಂದು ಒರಟಾದ ಮತ್ತು ಕೊಳೆಯಾದ ಕ್ಯಾನ್ ವಾಸ್ ‘ಪರದೆ’ ಇದೆ. ಉತ್ತಮ ಗಾಳಿಗಾಗಿ ಭೂಮಿಯಾಳದಲ್ಲಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆ. ಗಣಿಯಲ್ಲಿನ ಹಳಿಗಳ ಬೆಂಬಲಕ್ಕೆ ನೀಡುವ ಮರದ ತುಂಡುಗಳು, ಬೊಂಬುಗಳು ಅಲ್ಲಲ್ಲಿ ಬಿದ್ದಿವೆ. ಕಾರ್ಮಿದರು ಊಟ ಮಾಡುವಾಗ ಅದರ ಮೇಲೆಯೇ ಕುಳಿತು ಮಾಡುತ್ತಾರೆ. 
ಪರದೆ ಸರಿಸಿದಾಗ ಕಿಟ್ಟಿ ಮಧ್ಯದಲ್ಲಿ ಕುಳಿತು ತನ್ನ ಡಬ್ಬಿಯಿಂದ ರೊಟ್ಟಿ ಮತ್ತು ಚಟ್ನಿ ತಿನ್ನುತ್ತಾ ಟೀ ಕುಡಿಯುತ್ತಿದ್ದಾನೆ. ಅವನ ಪಕ್ಕದಲ್ಲಿ ದೊಡ್ಡದಾದ ನೀರಿನ ಕ್ಯಾನ್ ಇದೆ. ಬಲಗಡೆಯಲ್ಲಿ ವೀರಣ್ಣ ಕುಳಿತು ತನ್ನ ಊಟವನ್ನು ತಿನ್ನುತ್ತಿದ್ದಾನೆ. ಅವರು ಪಿಟ್ ನ ಒಳಗೆ 3 ಗಂಟೆಗಳಿದ್ದುದ್ದರಿಂದ ಮುಖಗಳು ಕಪ್ಪಾಗಿವೆ. ಇಬ್ಬರೂ ತಮ್ಮ ಕೋಟ್ ಗಳನ್ನು ಹಾಕಿಕೊಂಡಿದ್ದಾರೆ. ಅದು ಅಲ್ಲಿನ ರೂಢಿ, ಊಟ ಮಾಡುವಾಗ ಕೋಟ್ ಧರಿಸುವುದು. ಅವರ ರಕ್ಷಣಾ ದೀಪಗಳು ಅವರ ಪಕ್ಕದಲ್ಲಿಯೇ ಇವೆ. ಆದರೆ ರಂಗದ ಉದ್ದೇಶಕ್ಕಾಗಿ ಮಂದ ನೀಲಿ ಬೆಳದು ಅವಶ್ಯಕ.
ವೀರಣ್ಣ – [ಬಾಯುಂಬ ತುಂಬಿಕೊಂಡು ತನ್ನ ಡಬ್ಬಿಯನ್ನು ಜೋರಾಗಿ ಸದ್ದು ಮಾಡುತ್ತಾ ಮುಚ್ಚುತ್ತಾನೆ. ‘ಮುಗಿಯಿತು’ ಎಂಬಂತೆ ಅದನ್ನು ತನ್ನ ಜೇಬಿನೊಳಗೆ ಹಾಕಿಕೊಳ್ಳುತ್ತಾನೆ. ವೀರಣ್ಣ ಇನ್ನೂ ಊಟವನ್ನು ಮಾಡುತ್ತಾ ಕಿಟ್ಟಿಯತ್ತ ನೋಡುತ್ತಾನೆ.]
ವೀರಣ್ಣ – ಆಗಲೇ ಊಟವನ್ನು ಮುಗಿಸಿಬಿಟ್ಟೆಯಾ ಕಿಟ್ಟಿ?
ಕಿಟ್ಟಿ – [ಅಗಿಯುತ್ತಲೇ] ಹೂಂ!
ವೀರಣ್ಣ – ಮಗೂ ಅಷ್ಟು ಬೇಗ ಬೇಗನೆ ತಿನ್ನಬಾರದಪ್ಪ. ಅದು ಹೊಟ್ಟೆಗೆ ಒಳ್ಲೆಯದಲ್ಲ.
ಕಿಟ್ಟಿ – ಮೊಳೆಗಳನ್ನೂ ಅರಗಿಸಿಕೊಳ್ಳಬಲ್ಲ ಶಕ್ತಿಯಿದೆ ನನಗೆ... ಸೀನಣ್ಣ ಇಂದು ಬಹಳ ತಡ ಮಾಡುತ್ತಿದ್ದಾನೆ.
ವೀರಣ್ಣ – ಕೆಳಗಡೆ ಆ ಟ್ರಕ್ ಗಳು ಒಂದಕ್ಕೊಂದು ಡಿಕ್ಕಿ ಹೊಡಿದಿವೆ. ಗೊತ್ತಿಲ್ಲವೇ ನಿನಗೆ?
ಕಿಟ್ಟಿ – ಓಹ್, ಅದಕ್ಕೆ ಸಮಯಕ್ಕೆ ಮುಂಚೆಯೇ ಕಲ್ಲಿದ್ದಲ್ಲನ್ನು ತುಂಬುವುದು ನಿಂತುಹೋಯಿತು. 
ವೀರಣ್ಣ - ಹೌದು. ಸೀನಣ್ಣ ಈಗ ಶಾಪ ಹಾಕುತ್ತಿರುತ್ತಾನೆ. ಅವನಿಗೆ ಬೆವರು ಸುರಿಸುವುದು ಇಷ್ಟವೇ ಇಲ್ಲ. ಸೋಮಾರಿ.......
[ಕಿಟ್ಟಿ ಇನ್ನೂ ಹುಡುಗ ಎಂಬುವುದರಿಂದ ಅವನು ಸಂಪೂರ್ಣವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ]
ಕಿಟ್ಟಿ – [ವೀರಣ್ಣನ ಡಬ್ಬಿಯನ್ನು ನೋಡುತ್ತಿದ್ದು] ನಿನ್ನ ಹತ್ತಿರ ಇರುವುದು ಚಪಾತಿಯೇ?
ವೀರಣ್ಣ - ಹೌದು [ಮುಗುಳ್ನಗುತ್ತಾ] ಸ್ವಲ್ಪ ಬೇಕಾ?
[ಬಿಲ್ಲಿಗೆ ಎರಡನೇ ಬಾರಿ ಕೇಳುವುದೇ ಬೇಕಿಲ್ಲ. ತಕ್ಷಣ ಆತ ವೀರಣ್ಣನ ಪಕ್ಕದಲ್ಲಿರುವನು. ವೀರಣ್ಣ ಇನ್ನೂ ಮುಗುಳ್ನಗುತ್ತಲೇ ಅವನಿಗೆ ಒಂದು ಭಾಗವನ್ನು ಕೊಡುತ್ತಾನೆ. ಕಿಟ್ಟಿ ಅದನ್ನು ತಿನ್ನುತ್ತಾನೆ.]
ಕಿಟ್ಟಿ – ವಂದನೆಗಳು ವೀರಣ್ಣ - ಲಕ್ಷ ವಂದನೆಗಳು!
[ಅದನ್ನು ತೃಪ್ತಿಕರವಾಗಿ ತಿನ್ನುತ್ತಾ ತನ್ನ ಜಾಗಕ್ಕೆ ಹಿಂತಿರುಗುತ್ತಾನೆ]
ವೀರಣ್ಣ - ಕಿಟ್ಟಿ, ನಿನಗೆ ಚಪಾತಿ ಎಂದರೆ ಬಹಳ ಇಷ್ಟವೆನಿಸುತ್ತದೆ?
ಕಿಟ್ಟಿ - ಹೊಟ್ಟೆ ಬಿರಿಯುವಷ್ಟು ತಿನ್ನುತ್ತಿದ್ದೆ. ಆದರೆ ವೀರಣ್ಣ, ನಮ್ಮಮ್ಮ ತೀರಿಹೋಗಿದ್ದಾರೆ. [ನಿಟ್ಟುಸಿರಿಟ್ಟು] ಅವಳಿದ್ದಾಗ ಪ್ರತಿದಿನವೂ ಚಪಾತಿ ಮಾಡುತ್ತಿದ್ದಳು. 
ವೀರಣ್ಣ - ನಿನ್ನ ಅಕ್ಕ ಮಾಡುವುದಿಲ್ಲವೇ?
ಬಲ್ಲಿ – [ತಿರಸ್ಕಾರದಿಂದ] ಅವಳಾ! ಅವಳಿಗೆ ಅಷ್ಟೆಲ್ಲ ಸವಯವೆಲ್ಲಿ. ಅವಳ ಮುಖಕ್ಕೆ ಪೌಡರ್ ಹಾಕಲು, ತಲೆ ಬಾಚಲು ಸಮಯವೆಲ್ಲಾ ಕಳೆದುಹೋಗುತ್ತದೆ. ಸಿನಿಮಾ, ನೃತ್ಯ ಎರಡರ ಬಗ್ಗೆ ಮಾತ್ರ ಆಕೆ ಯೋಚನೆ ಮಾಡಬಲ್ಲಳು. ಯಾರಾದರೂ ಒಬ್ಬ ವ್ಯಕ್ತಿಯನ್ನು ಹಿಡಿಯಬೇಕೆಂದೇ ಅವಳ ಪ್ರಯತ್ನವೆಲ್ಲಾ ವೀರಣ್ಣ. ಆದರೆ ಅವನು ಸಿಕ್ಕಾಗ ಖಂಡಿತ ಅವಳು ಅವನಿಗೆ ವಿಷ ಹಾಕುವಳು. ಅವಳಿಗೊಂದು ಹೊಸ ಗೆಸರು ಇಟ್ಟಿದ್ದೇನೆ.
ವೀರಣ್ಣ – ಓಹ್! ಏನೆಂದು ಕಿಟ್ಟಿ?
ಕಿಟ್ಟಿ _ [ಬಹಳ ತೃಪ್ತಿಯಿಂದ] ಅಲಂಕಾರದ ಗೊಂಬೆ. ಅವಳು ಅದರಲ್ಲಿ ಬಹಳ ಚತುರಳು. 
ವೀರಣ್ಣ – [ಅಚ್ಚರಿಯಿಂದ] ಅವಳು ಬಹಳ ಒಳ್ಳೆಯ ನೃತ್ಯಗಾತಿ ಎಂದು ಕೇಳಿದ್ದೀನೆ.
ಕಿಟ್ಟಿ - ನೃತ್ಯಪಟು, ಹೌದು ಆದರೆ ರೊಟ್ಟಿ ವಾಡುವಲ್ಲಿ ಅಲ್ಲ[ತಡೆಯುತ್ತಾ] ವೀರಣ್ಣ, ಈ ಚಪಾತಿ ಬಹಳ ಚೆನ್ನಾಗಿದೆ. ನಿನ್ನ ಹೆಂಡತಿಯ ಬಗ್ಗೆ ನಿನಗೆ ಹೆಮ್ಮೆ ಅಲ್ಲವೇ?
ವೀರಣ್ಣ – [ಇದ್ದಕ್ಕಿದ್ದಂತೆ ಯೋಚಿಸುತ್ತಾ] ಬಹುಶಃ ನಾನೆಷ್ಟು ಹೆಮ್ಮೆ ಪಡಬೇಕಿತ್ತೊ ಅಷ್ಟಿಲ್ಲವೆನಿಸುತ್ತದೆ. ಕಿಟ್ಟಿ, ಗಣಿ ಕಾರ್ಮಿಕ ಒಂದು ರೀತಿಯ ವಿಚಾರಹೀನ ವ್ಯಕ್ತಿ. ಸಂಬಳದ ದಿನ, 40 ಶಿಲ್ಲಿಂಗ್ಸ್ ತೆಗೆದುಕೊಂಡು ಹೋಗಿ ದೊಡ್ಡ ಹೀರೋನಂತೆ ಹೆಂಡತಿಯ ಕೈಗೆ ಕೊಡುತ್ತಾನೆ. ಆದರೆ ಒಬ್ಬ ಮನುಷ್ಯ, ಅವನ ಹೆಂಡತಿ ಮತ್ತು 5 ಮಕ್ಕಳಿಗೆ ಊಟ-ಬಟ್ಟೆ ಕೊಡಬೇಕಾದರೆ ಆ ಹಣಕಾಸಿನ ಮಂತ್ರಿ ಸಹ ಒದ್ದಾಡಿಬಿಡುತ್ತಾನೆ. ಆದರೆ ಅವರು ಹೇಗೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎನ್ನುವುದು ನನಗೇಗಲೂ ಅರ್ಥವಾಗುವುದಿಲ್ಲ. ಇಷ್ಟರ ಮಧ್ಯೆಯೂ ಅವರಿಗೆ ನಗುವ, ಹಾಡುವ ಎದೆಗಾರಿಕೆ ಇದೆ.
ಕಿಟ್ಟಿ - ನಮ್ಮಮ್ಮ ಕೂಡ ಯಾವಾಗಲೂ ಹಾಡುತ್ತಿದ್ದಳು. ವೀರಣ್ಣ , ಯಾವಾಗಲೂ [ಕಣ್ಣುಗಳನ್ನು ಕೆಳಗೆ ಮಾಡುತ್ತಾ] ನಿಜಕ್ಕೂ ಅವಳನ್ನು ಕಳೆದುಕೊಂಡಿದ್ದೇನೆ.
ವೀರಣ್ಣ - ನಿಮ್ಮ ತಂದೆ ಈಗ ಹುಷಾರಾಗಿದ್ದಾರಾ?
ಕಿಟ್ಟಿ – [ನಿರಾಶನಾಗಿ] ಕೆಲವು ದಿನ ಪರವಾಗಿಲ್ಲ. ಇನ್ನು ಕೆಲವು ದಿನ ಪೂರ್ತಿ ಹುಷಾರು ತಪ್ಪುತ್ತಾರೆ. ಅವರು ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ನನಗನಿಸುವುದಿಲ್ಲ.
ವೀರಣ್ಣ - ಬಹಳ ಕಷ್ಟದ ಕಾಲದಲ್ಲಿದ್ದೀಯಾ, ಕಿಟ್ಟಿ.
ಕಿಟ್ಟಿ – ಅಪ್ಪಾ ಹೇಳ್ತಾರೆ, ‘ನೀನು ದುಡಿತಿರೋದರಿಂದ ವಾಸಿ. ಅದರಿಂದ ಜೀವನ ಹೇಗೋ ನಡೀತಿದೆ’ ಅಂತ. ಅದಕ್ಕೆ ನಾನು ಹೇಗಾದರೂ ಈ ಕೆಲಸ ಉಳಿಸಿಕೊಳ್ಳಲೇಬೇಕು, ವೀರಣ್ಣ.
ವೀರಣ್ಣ – [ಯೋಚಿಸುತ್ತಾ] ಕೆಲಸ!...... ಇಡೀ ಪ್ರಪಂಚ ಈ ಕೆಲಸದ ಹಿಂದೆ ಸಿತ್ತುತ್ತಿದೆ ಇನಿಸುತ್ತೆ ....... ಕೆಲಸವಿಲ್ಲ ಅಂದ್ರೆ ಊಟ ಇಲ್ಲ- ಊಟ ಇಲ್ಲ ಅಂದ್ರೆ ನಗು ಇಲ್ಲ. [ನಿಟ್ಟುಸಿರಿಡುತ್ತಾನೆ] ನನಗನ್ನಿಸುತ್ತೆ, ಇದೊಂದು ವಿಚಿತ್ರ ರೀತಿ ಅಂತ.
[ಸ್ವಲ್ಪ ಕಾಲ ಮೌನ. ಹೊರಗಡೆ ಕುದುರೆ ಮರಿಯೊಂದು ಕೆನೆಯುವುದು ಕೇಳುತ್ತದೆ. ಕಿಟ್ಟಿ ವೀರಣ್ಣ ನತ್ತ ಬೇಸರದಿಂದ ನೋಡುತ್ತಾ]
ಕಿಟ್ಟಿ – ಅದು ಡ್ಯಾನಿ....... ಅದಕ್ಕೆ ಬ್ರೆಡ್ ಇಡಲು ಮರೆತೆಬಿಟ್ಟೆ.
ವೀರಣ್ಣ – [ಹಗುರವಾಗಿ] ಕಿಟ್ಟಿ, ಅದಕ್ಕೆ ಸಾಕಷ್ಟು ಇದೆ.
ಕಿಟ್ಟಿ – ಇತ್ತೀಚೆಗೆ ಅದು ನನ್ನ ಬ್ರೆಡ್ ಮತ್ತು ಟೀಗೆ ಕಾಯುತ್ತಿರುತ್ತದೆ. [ಪುನಃ ಕುದುರೆಮರಿ ಕೆನೆಯುತ್ತದೆ] ವೀರಣ್ಣ, ನಾನು ಅವನು ಒಳ್ಳೆಯ ಸ್ನೇಹಿತರು. ನನಗೇನಾದರೂ ಲಾಟರಿ ಹೊಡೆದರೆ ಅದನ್ನೂ ಕೊಂಡುಕೊಂಡು ಹುಲ್ಲುಗಾವಲಿಗೆ ಕರೆದುಕೊಂಡು ಹೋಗುತ್ತೇನೆ. [ಒಂದು ರೀತಿಯಾಗಿ ಕ್ಷಮಾಪಣಾಭಾವದಿಂದ] ಡ್ಯಾನಿಯ ಬಗ್ಗೆ ಯೋಚಿಸದೆ ಎಲ್ಲವನ್ನೂ ನಾನೇ ತಿಂದದ್ದು ಹೊಟ್ಟೆಬಾಕತನವಲ್ಲವೇ ವೀರಣ್ಣ?
[ವೀರಣ್ಣ ಕೊನೆಯಲ್ಲಿ ಉಳಿದ ಚಪಾತಿಯನ್ನು ಅವನ ಮುಂದೆ ಹಿಡಿಯುತ್ತಾ]
ವೀರಣ್ಣ - ಕಿಟ್ಟಿ, ಇದನ್ನು ಕೊಡು ಹೋಗು. 
[ಕಿಟ್ಟಿ ತಕ್ಷಣ ಅದನ್ನು ತೆಗೆದುಕೊಳ್ಳಲು ಏಳುವನು]
ಕಿಟ್ಟಿ – [ತೆಗೆದುಕೊಳ್ಳುತ್ತಾ] ವೀರಣ್ಣ, ನೀನು ಪಬ್ಲಿಕ್ ಹೀರೋ ನಂಬರ್ ಒನ್. [ಬಾಗಿಲಿನತ್ತ ಹೋಗುತ್ತಾನೆ].
ವೀರಣ್ಣ – ಆ ಪರದೆ ಮೇಲೆತ್ತು ಕಿಟ್ಟಿ, ಸ್ವಲ್ಪ ಗಾಳಿ ಬರಲಿ. ಇಲ್ಲಿ ಹಿಂಸೆಯಾಗುತ್ತಿದೆ.
[ಕಿಟ್ಟಿ ಪರದೆ ಎತ್ತುತ್ತಿರುವಾಗ ಕುದುರೆಮರಿ ಪುನಃ ಕೆನೆಯುತ್ತದೆ]
ಕಿಟ್ಟಿ - ಬಂದೆ ಡ್ಯಾನಿ, ಬಂದೆ. [ಕಿಟ್ಟಿ ಹೊರಹೋಗುತ್ತನೆ. ವೀರಣ್ಣ ಹಣೆಯ ಮೇಲಿನ ಬೆವರನ್ನು ಬೆರಳಿನಿಂದ ತೆಗೆಯುತ್ತಾನೆ. ಜೋರಾಗಿ ಉಸಿರೆಳೆದುಕೊಳ್ಳುತ್ತಾ ಒಳಗೆ ಬರುತ್ತಿರುವ ಗಾಳಿಯನ್ನು ಸೇವಿಸುತ್ತಿರುವಂತಿದೆ. ಡಬ್ಬಿ ಮತ್ತು ಟೀ ಪ್ಲಾಸ್ಕ್ ಮುಚ್ಚುತ್ತಾ ಜಾಕೆಟ್‍ನ ಜೇಬಿನೊಳಗೆ ಹಾಕಿಕೊಳ್ಳುತ್ತಾನೆ. ಸೀನಣ್ಣ ಒಳಗೆ ಬರುತ್ತಾನೆ. ಶರ್ಟ್ ತೋಳುಗಳನ್ನು ಮಡಿಚಿ ಕೆಂಪು ಬಿಳಿಯ ಕರ್ಚೀಫ್ ನಲ್ಲಿ ಬೆವರನ್ನು ಒರೆಸಿಕೊಳ್ಳುತ್ತಿದ್ದಾನೆ. ವೀರಣ್ಣನಿಗೆ ಅವನ ಬರವು ಕಂಡರೂ ಅದರ ಬಗ್ಗೆ ಗಮನ ಕೊಡುವುದಿಲ್ಲ. ಸೀನಣ್ಣ ಒಳಬರುತ್ತಾ ತನ್ನ ಜಾಕೆಟ್ ನ ಬಳಿ ಹೋಗುತ್ತಾಮಾತನಾಡಲಾರಂಭಿಸುತ್ತಾನೆ. ತೋಳುಗಳನ್ನು ಬಿಗಿಸಿ ವೀರಣ್ಣ ನ ದಿಕ್ಕಿನತ್ತ ಮಾತನಾಡಲಾರಂಭಿಸುತ್ತನೆ. 
ಸೀನಣ್ಣ – ಈ ಪಿಟ್ ನಲ್ಲಿ ಆಗುವುದೆಲ್ಲಾ ಸಂತನ ಹೃದಯವನ್ನೂ ಮುರಿದುಬಿಡುತ್ತದೆ. 
[ಜೇಬಿನಿಂದ ಪ್ಲಾಸ್ಕ್ ಮತ್ತು ಡಬ್ಬಿ ಹೊರತೆಗೆಯುತ್ತಾನೆ]
ವೀರಣ್ಣ – [ಅಸಮಾಧಾನದಿಂದ ನೋಡುತ್ತ] ಏನು ಸಮಾಚಾರ?
ಸೀನಣ್ಣ – ಕೆಳಗಡೆ ಆ 4 ಟ್ರಕ್ ಗಳು ಬ್ರೇಕ್ ಹಾಳಾಗಿ ಒಂದಕ್ಕೊಂದು ಹೊಡೆದುಕೊಂಡು ಚಾವಣಿಗೆ ಹೊಡೆದಿವೆ...... ಆ ಹುಡುಗ ಎಲ್ಲಿ?
ವೀರಣ್ಣ – ಅವನಿಂದ ನಿನಗೆ ಏನಾಗಬೇಕು?
ಸೀನಣ್ಣ – ತಂಡದ ನಾಯಕ ಅವನ ಹತ್ತಿರ ಮಾತನಾಡಬೇಕಂತೆ. ಆ ಟ್ರಕ್ ಗಳ ಬ್ರೇಕ್ ಹಾಳಾಗಲು ಅವನೇ ಕಾರಣ. ಅವನು ಕೆಲಸ ಕಳೆದುಕೊಂಡರೂ ಆಶ್ಚರ್ಯವೇನಿಲ್ಲ. ರಾಬರ್ಟ್ ಬಹಳ ಸಿಟ್ಟಾಗಿದ್ದಾನೆ.
ವೀರಣ್ಣ – ರಾಬರ್ಟ್ ಗೆ ಹೇಗೆ ಗೊತ್ತಾಯ್ತು?
ಸೀನಣ್ಣ - ನಾನೇ ಹೇಳಿದೆ.
ವೀರಣ್ಣ – [ಕೋಪಿಸಿಕೊಂಡು] ನಿನಗೆ ಹೇಗೆ ಗೊತ್ತಾಯ್ತು?
ಸೀನಣ್ಣ - ಹೇಗೆ ಅಂದ್ರೆ? ಅದೊಂದೇ ರೀತಿಯಲ್ಲಿ ಬ್ರೇಕ್ ಹಾಳಾಗಲು ಸಾಧ್ಯ.
[ಊಟಕ್ಕೆ ಎಡಗಡೆ ಕುಳಿತುಕೊಳ್ಳುತ್ತಾನೆ]
ವೀರಣ್ಣ – [ಕೋಪದಿಂದ] ಆ ಮೇಲ್ವಿಚಾರಕನಿಗೆ ಇಂತಹ ವಿಷಯ ಹೇಳಲು ಕಾಯುತ್ತಿರುತ್ತೀಯ? ಇದಕ್ಕಾಗಿ ಅವನು ನಿನ್ನನ್ನು ಪ್ರೀತಿಸುತ್ತಾನೆ ಎಂದುಕೊಂಡಿದ್ದೀಯಾ?
ಸೀನಣ್ಣ – ಯಾರ ಮೇಲೆ ಕೂಗಾಡುತ್ತಿದ್ದೀಯಾ?
ವೀರಣ್ಣ - ನಿನ್ನ ಮೇಲೆ. ಆ ಹುಡುಗ ಬೇಕಾಗಿ ಆ ಬ್ರೇಕ್ ಹಾಳಾಗುವಂತಹ ಕೆಲಸ ಮಾಡುತ್ತನೇನು? ತಪ್ಪುಗಳು ಆಗುತ್ತಿರುತ್ತವೆ. ನೀನ್ಯಾವತ್ತೂ ನಿನ್ನ ಜೀವನದಲ್ಲಿ ತಪ್ಪೇ ಮಾಡಿಲ್ಲವೇ?
ಸೀನಣ್ಣ - ನಾನು ಅಲ್ಲಿ ಕ್ಲೀನ್ ಮಾಡಿ ಬಂದದ್ದನ್ನು ನೋಡಿದ್ದರೆ ನೀನು ಈ ಮಾತು ಆಡುತ್ತಿರಲಿಲ್ಲ. 
ವೀರಣ್ಣ - ನಿನ್ನ ಕೆಲಸವೇ ಅದನ್ನೆಲ್ಲಾ ಕ್ಲೀನ್ ಮಾಡುವಂತಹುದ್ದು. ನನ್ನನ್ನು ಕೇಳಿದರೆ ನೀನು ಆ ಕೆಲಸಕ್ಕೇ ಲಾಯಕ್ಕು. ನಾನೇಳಿದ್ದು ಅರ್ಥವಾಯ್ತೇ?
ಸೀನಣ್ಣ - ನೋಡು ವೀರಣ್ಣ! ಊಟದ ಸಮಯದಲ್ಲಿ ಇದೇ ಮಾತು ಮುಂದುವರೆದರೆ ನಾನು ನಾಯಕನ ಹತ್ತಿರ ಮಾತನಾಡುತ್ತೇನೆ. ನಿನ್ನಿಂದ ಅವಮಾನ ಸಹಿಸುವುದಿಲ್ಲ ನಾನು.
ವೀರಣ್ಣ - ಕಿಟ್ಟಿ ಏನಾದರೂ ಕೆಲಸ ಕಳೆದುಕೊಂಡರೆ ಇದಕ್ಕಿಂತ ಹೆಚ್ಚಿನದನ್ನು ಅನುಭವಿಸಬೇಕಾಗುತ್ತದೆ. ನಿನ್ನ ಕುತ್ತಿಗೆ ಮುರಿಯುತ್ತೇನೆ. 
ಸೀನಣ್ಣ – ಈ ವಿಷಯ ನಿನಗೆ ಸೇರಿದ್ದಲ್ಲ.
ವೀರಣ್ಣ – ಆದರೆ ನಾನೇ ಈ ವಿಷಯ ನನಗೂ ಸೇರುವಂತೆ ಮಾಡಿಕೊಳ್ಳುತ್ತಿದ್ದೇನೆ. ಆ ಹುಡುಗ ಕೆಲಸ ಕಳೆದುಕೊಳ್ಳುವಂತಿಲ್ಲ. ಅವನ ಕುಟುಂಬಕ್ಕೂ ಉಪವಾಸಕ್ಕೂ ನಡುವೆ ಈ ಕೆಲಸವಿದೆ. ನೀನ್ಯಾಕೆ ರಾಬರ್ಟ್ ಗೆ ಅವನ ಮೇಲೆ ಹೇಳಿದೆ?
ಸೀನಣ್ಣ – ಅವನ ಮೇಲೆ ಹೇಳದಿದ್ದರೆ ಅದು ನನ್ನ ತಲೆಯ ಮೇಲೆ ಬರ್ತಿತ್ತು.
ವೀರಣ್ಣ - ಹೌದು. ಅದಾದರೆ ದುರಂತವಾಗುತ್ತಿತ್ತು ಅಲ್ಲವೇ? ನೀನು, ನಿನ್ನ ಹ್ಯಾಮ್ ಮತ್ತು ಮೊಟ್ಟೆ – ಥೂ ಸ್ವಾರ್ಥಿ!
ಸೀನಣ್ಣ – ಈ ಗಣಿಯೊಳಗೆ ನಮ್ಮನ್ನು ನಾವು ನೋಡಿಕೊಳ್ಳದಿದ್ರೆ ಇನ್ಯಾರೂ ನೋಡಿಕೊಳ್ಳಲ್ಲ.
ವೀರಣ್ಣ – [ತಿರಸ್ಕಾರದಿಂದ] ಅದು ನಿನ್ನ ಜೀವನದ ಧೋರಣೆಯೇ?
ಸೀನಣ್ಣ - ಹೌದು.
ವೀರಣ್ಣ – ಮುಂದೊಂದು ದಿನ ನೀನೂ ಇತರರ ಸಹಾಯ ಕೇಳಬಹುದು. ಆಗ ಏನು ಮಾಡುವೆ?
ಸೀನಣ್ಣ – ಆ ದಿನ ಎಂದೂ ಬರುವುದಿಲ್ಲ. ನೀನೇನು ಯೋಚನೆ ಮಾಡಬೇಡ.
ವೀರಣ್ಣ - ನಿನಗಿಂತ ಉತ್ತಮರಾದ ವ್ಯಕ್ತಿಗಳಿಗೂ ಸಹ ಸಹಾಯದ ಅವಶ್ಯಕತೆ ಬಂದಿತ್ತು. ಅವರು ಸಹಾಯವನ್ನು ಸಂತೋಷವಾಗಿ ಸೀನಣ್ಣ ತೆಗೆದುಕೊಂಡರು. 
ಸೀನಣ್ಣ – ವೀರಣ್ಣ, ಒಂದು ವಿಷಯವಂತೂ ಖಂಡಿತ. ನಿನ್ನ ಹತ್ತಿರ ಸಹಾಯ ಕೇಳುವಂತಹ ದಿನ ನನಗೆ ಕೆಟ್ಟ ದಿನವಾಗಿರುತ್ತದೆ.
ವೀರಣ್ಣ – ಜಂಬ ಕೊಚ್ಚಿಕೊಳ್ಳಬೇಡ ಸೀನಣ್ಣ. ಇದು ವಿಚಿತ್ರ ಪ್ರಪಂಚ ನೆನಪಿಡು. ವಿಚಿತ್ರ ಸಂಗತಿಗಳು ನಡೆಯುತ್ತವೆ.
ಸೀನಣ್ಣ – ಅದೊಂದು ಎಂದಿಗೂ ನಡೆಯುವುದಿಲ್ಲ. [ಕಿಟ್ಟಿ ಹಿಂತಿರುಗುತ್ತಾನೆ. ಊಟ ಮಾಡುವುದರಲ್ಲಿ ಮಗ್ನನಾಗಿರುವ ಸೀನಣ್ಣನತ್ತ ನೋಡುತ್ತಾನೆ]
ಕಿಟ್ಟಿ – ಇಲ್ಲಿ ಹ್ಯಾಮ್ ಮತ್ತು ಮೊಟ್ಟೆಯ ಆಹ್ಲಾದಕರ ವಾಸನೆಯಿದೆ.
ವೀರಣ್ಣ – ವಾರದಲ್ಲಿ ಹತ್ತು ಶಿಫ್ಟ್ ಗಳು ಮತ್ತು ಮಕ್ಕಳಿಲ್ಲ. ವ್ಯತ್ಯಾಸವಿದೆ ಕಿಟ್ಟಿ.
[ಸೀನಣ್ಣ ವೀರಣ್ಣ ನತ್ತ ನೋಡಿ ನಂತರ ಕಿಟ್ಟಿಯತ್ತ ನೋಡುತ್ತಾನೆ]
ಸೀನಣ್ಣ- [ಕಿಟ್ಟಿಗೆ] ಹೊರಗಡೆ ಮೇಲ್ವಿಚಾರಕನನ್ನು ನೋಡಿದೆಯಾ?
ಕಿಟ್ಟಿ – [ಅನುಮಾನದಿಂದ] ಇಲ್ಲ...... ಏಕೆ? ಅವರಿಗೇನು ಬೇಕಿತ್ತು ನನ್ನಿಂದ?
ವೀರಣ್ಣ – ಆ ಟ್ರಕ್ ಅಪಘಾತದ ಆಪಾದನೆ ನಿನ್ನ ಮೇಲೆ ಬಂದಿದೆ.
ಕಿಟ್ಟಿ - ನಾನಾ? ಹೇಗೆ?
ಸೀನಣ್ಣ - ನೀನು
[ಕಿಟ್ಟಿ ಚಿಂತಾಕ್ರಾಂತನಾಗಿದ್ದಾನೆ]
ಕಿಟ್ಟಿ- [ವೀರಣ್ಣನಿಗೆ] ಅಂದರೆ ನನ್ನನ್ನು ಕೆಲಸದಿಂದ ಹೊರಗೆ ಹಾಕುತ್ತಾರಾ?
ವೀರಣ್ಣ – ಇಂದು ಗಣಿಯಿಂದ ನೀನು ಹೊರಗೆ ಹೋಗಬೇಕಾಗಿ ಬಂದರೆ, ಅದು ನೀನೊಬ್ಬನೇ ಆಗಿರುವುದಿಲ್ಲ.
ಕಿಟ್ಟಿ - ಹಾಗೆಂದರೆ ಏನು ವೀರಣ್ಣ ?
ವೀರಣ್ಣ – ಈಗ ಅದರ ವಿಷಯ ಬಿಡು........ ಕಾಳಣ್ಣನಿಗೆ ಕೆಲಸ ನಿಲ್ಲಿಸುವ ಸಮಯ ಎಂದು ಗೊತ್ತಿಲ್ಲವೇ?
ಕಿಟ್ಟಿ – ಅವರು ಇಂದು ಇಲ್ಲಿ ಊಟ ಮಾಡುತ್ತಿಲ್ಲ.
ವೀರಣ್ಣ – ಏಕೆ?
ಕಿಟ್ಟಿ - ನನಗೆ ಗೊತ್ತಿಲ್ಲ. ಬೆಳಿಗ್ಗೆ ಸಹ ಅವರು ಊಟವನ್ನು ಅಲ್ಲಿಗೆ ತೆಗೆದುಕೊಂಡು ಹೋದರು.
ವೀರಣ್ಣ - ಹೋಗು ಅವನನ್ನು ಕರೆ. ಅವನು ಹುಷಾರಾಗಿದ್ದಾನಾ ಖಚಿತಪಡಿಸಿಕೊ.
[ಕಿಟ್ಟಿ ಹೊರಹೋಗುತ್ತಾನೆ. ಸೀನಣ್ಣ ತನ್ನ ಕೆಟ್ಟ ನೋಟ ಬೀರುತ್ತಾನೆ]
ವೀರಣ್ಣ – ಕಿಟ್ಟಿಯ ತಂದೆಗೆ ಹುಷಾರಿಲ್ಲ. ನಿನಗೆ ಗೊತ್ತ?
ಸೀನಣ್ಣ - ಹಾ!
ವೀರಣ್ಣ – ಕಿಟ್ಟಿಯ ಸಂಬಳದ ಮೇಲೆ ಬದುಕಿದ್ದಾರೆ.
ಸೀನಣ್ಣ – ಅದಕ್ಕೂ ನನಗೂ ಏನು ಸಂಬಂಧ?
ವೀರಣ್ಣ - ನೀನು ಆ ಗಫರ್ ಗೆ ಹೇಳಬಹುದು. ಇಳಿಜಾರಿನಲ್ಲಿ ಹಳಿಗಳ ಕೊಂಡಿ ಮುರಿದುಹೋಗಿತ್ತು ಎಂದು.
ಸೀನಣ್ಣ – ಅವನಿಗೇನಾದರೂ ನಾನು ಸುಳ್ಳು ಹೇಳ್ತಾ ಇದ್ದೀನಿ ಅಂತಾ ಗೊತ್ತಾದರೆ ನನ್ನನ್ನೂ ಹೊರಹಾಕ್ತಾನೆ.
ವೀರಣ್ಣ – ಇದರಿಂದಾಗಿ ಕಿಟ್ಟಿಯನ್ನು ಕೆಲಸದಿಂದ ಕಿತ್ತುಹಾಕಿದ್ರೆ ನಾನು ..........
[ಸುಬ್ಬಣ್ಣ ಬರುತ್ತಾನೆ. ಎತ್ತರದ ಮನುಷ್ಯ, ಲ್ಯಾಂಪ್ ಬೆಲ್ಟ್ ಗೆ ಹಾಕಿಕೊಂಡಿದ್ದಾನೆ.]
ಸುಬ್ಬಣ್ಣ – [ಸೀನಣ್ಣನಿಗೆ] ಆ ಎತ್ತುವ ಹಗ್ಗದಲ್ಲಿ ಸಣ್ಣ ಎಳೆಯಿದೆ. ನಿನ್ನ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅದನ್ನೂ ಸರಿಮಾಡು.
[ಸೀನಣ್ಣ ತಕ್ಷಣ ಡಬ್ಬಿ ಮುಚ್ಚಿ ಓಡುತ್ತಾನೆ]
ಸೀನಣ್ಣ – ಒಂದು ನಿಮಿಷದಲ್ಲಿ ಸರಿಪಡಿಸಿ ಬಂದುಬಿಡುತ್ತೇನೆ ರಾಬರ್ಟ್. ಒಂದೇ ನಿಮಿಷ. [ಹೊರಹೋಗುತ್ತನೆ. ಸುಬ್ಬಣ್ಣ ನೋಟ್ ಬುಕ್, ಪೆನ್ಸಿಲ್ ತೆಗೆದು ಏನನ್ನೋ ಬರೆಯುತ್ತಾ ಕುಳಿತಿದ್ದಾನೆ]
ಸುಬ್ಬಣ್ಣ – ಒಂದಲ್ಲಾ  ಒಂದು ಸಮಸ್ಯೆ. ಈ ಬೆಳಗ್ಗೆ ಅರ್ಧ ಘಂಟೆ ಹಾಳಾಯ್ತು.
ವೀರಣ್ಣ – ಕಲ್ಲಿದ್ದಲ ಗಣಿ ಕೆಲಸ ಬಿಸ್ಕತ್ ಕೆಲಸವಲ್ಲ ಸುಬ್ಬಣ್ಣ, ಎಲ್ಲವೂ ಹಾಡಿನಂತೆ ಸುಗಮವಾಗಿ ಸಾಗಲು.
ಸುಬ್ಬಣ್ಣ - ಬಹಳಷ್ಟು ಅಜಾಗರೂಕತೆಯಿದೆ. ಇಂದು ಒಂದು ಉದಾಹರಣೆ ತೋರಿಸಬೇಕೆಂದಿದ್ದೇನೆ. ಎಲ್ಲಿ ಆ ಕುದುರೆಮರಿ ಓಡಿಸುವವನು?
ವೀರಣ್ಣ – ಕಾಳಣ್ಣ ಮಾರ್ಷಲ್ ಗೆ ಊಟ ಮಾಡುವಂತೆ ಕೂಗಲು ಹೋಗಿದ್ದಾನೆ.
ಸುಬ್ಬಣ್ಣ - ನಾನು ಮಾತನಾಡುವವರೆಗೂ ಅವನಿಗೆ ಕೆಲಸ ಆರಂಭಿಸಬಾರದೆಂದು ಹೇಳು. 
ವೀರಣ್ಣ – ಕೆಲಸದಿಂದ ಹೊರಹಾಕಬೇಕೆಂದು ಯೋಚಿಸುತ್ತಿರುವೆಯಾ?
ಸುಬ್ಬಣ್ಣ – ಆ ಟ್ರಕ್ ಅಪಘಾತ ಆಗಿದ್ದು ಅವನ ತಪ್ಪಿನಿಂದ. ಅದಕ್ಕಾಗಿ ಅವನು ದಂಡ ತೆರಲೇಬೇಕು.
ವೀರಣ್ಣ - ಸುಬ್ಬಣ್ಣ ಎಲ್ಲರೂ ತಪ್ಪು ಮಾಡುತ್ತರೆ
ಸುಬ್ಬಣ್ಣ – ಆದರೆ ಅದು ನಮ್ಮ ಹತ್ತಿರ ಆಗುವುದನ್ನು ನಾವು ನೋಡಲಾರೆವು.
ವೀರಣ್ಣ – [ಆಶ್ಚರ್ಯಚಕಿತನಾಗಿ] ನಾವು! ಇಂಪೀರಿಯಲ್ ಕೋಲ್ ಕಂಪನಿಯಲ್ಲಿ ನಿನಗ್ಯಾವಾಗ ಶೇರ್ ಸಿಕ್ಕಿತು ಸುಬ್ಬಣ್ಣ ?
ಸುಬ್ಬಣ್ಣ – ಏನು ಹಾಗೆಂದರೆ?
ವೀರಣ್ಣ - ನೀನು ‘ನಾವು’ ಎಂದು ಹೇಳಿದೆ. ಕೇವಲ ನಿರ್ದೇಶಕರು ಮಾತ್ರ ಬಹುವಚನದಲ್ಲಿ ಮಾತನಾಡುತ್ತಾರೆ.
ಸುಬ್ಬಣ್ಣ – ಓಹ್! ವ್ಯಂಗ್ಯವಾಗಿ ಹೇಳುತ್ತಿದ್ದೀಯಾ? ಅದೆಲ್ಲಾ ಬಿಟ್ಟುಬಿಡು ವೀರಣ್ಣ . ಬಹುಶಃ ನಿನ್ನ ಆರೋಗ್ಯಕ್ಕೆ ಬೇಕಾದ್ದಕ್ಕಿಂತ ಹೆಚ್ಚಿನ ಒಳ್ಳೆ ಗಾಳಿ ಕುಡಿಯುತ್ತಿದ್ದೀಯಾ ಎನಿಸುತ್ತೆ.
ವೀರಣ್ಣ - ಹಾಗಾದ್ರೆ ನಿನಗೆ ಒಳ್ಳೆ ಗಾಳಿ ಅಂದ್ರೆ ಏನು ಅಂತಾ ಗೊತ್ತಾ?
ಸುಬ್ಬಣ್ಣ – ಆ?
ವೀರಣ್ಣ – ಇಲ್ಲೇ ಕೆಳಗಡೆ ಬಹಳಷ್ಟರ ಜೊತೆ ಕೆಲಸ ಮಾಡುತ್ತಿದ್ದೇವೆ.
ಸುಬ್ಬಣ್ಣ – [ಪರದೆ ಮೇಲೇರಿಸಿರುವುದು ನೋಡಿ] ಬಹುಶಃ ನೀನು ನೋಡಬಹುದಾದ್ದಕ್ಕಿಂತ ಹೆಚ್ಚಿನದು ಕಾಣಿಸುತ್ತಿದೆ ಎಂದರ್ಥ. [ಬಾಗಿಲಿನತ್ತ ಹೋಗಿ ಸಿಟ್ಟಿನಿಂದ ಪರದೆಯನ್ನು ಕೆಳಗೆ ಬಿಡುತ್ತಾನೆ].
ವೀರಣ್ಣ – [ಮುಗುಳ್ನಗುತ್ತ] ಸುಬ್ಬಣ್ಣ ಇದರಂತೆ ಈ ಪಿಟ್ ನಲ್ಲಿರುವುದನ್ನೆಲ್ಲಾ ಸರಿಪಡಿಸಲು ಸಾಧ್ಯವಿದ್ದರೆ ಚೆನ್ನಾಗಿತ್ತು.
ಸುಬ್ಬಣ್ಣ – ಏನು ನಿನ್ನ ಮಾತಿನರ್ಥ?
ವೀರಣ್ಣ – ಮುಖ್ಯ ಗಾಳಿ ಬರುವ ಕಡೆ ಕೆಳಗೆ ಬಿದ್ದದ್ದನ್ನೆಲ್ಲಾ ತೆಗೆಸಿಹಾಕಿದ್ದೀಯಾ?
ಸುಬ್ಬಣ್ಣ – ಅದಕ್ಕೂ ನಿನಗು ಏನು ಸಂಬಂಧ?
ವೀರಣ್ಣ – ಕೇವಲ ವಿಷಯ ತಿಳಿದುಕೊಳ್ಳುವ ಯತ್ನ.
ಸುಬ್ಬಣ್ಣ – ಅದನ್ನು ತೆಗೆಸಿಹಾಕದಿದ್ರೆ ನನಗೇನಾಗುತ್ತೆ?
ವೀರಣ್ಣ - ನಿನಗೇನಾಗುತ್ತೆ ಅಂತಲ್ಲ, ಅದು ನಮಗೆಲ್ಲರಿಗೂ ಆಗುವಂತಹುದು. [ಮುಖ್ಯವಾದುದನ್ನು ಹೇಳುವಂತೆ] ಇಲ್ಲಿ ಗ್ಯಾಸ್ ಗೇನೂ ಕಡಿಮೆ ಇಲ್ಲ  ಅಲ್ಲವೇ? ನೆನಪಿದೆಯಾ?
ಸುಬ್ಬಣ್ಣ – [ವ್ಯಂಗ್ಯ ನಗೆಯೊಂದಿಗೆ] ಹೌದಾ?
ವೀರಣ್ಣ - ಬೆಂಬಲ ನೀಡುವ ಬೊಂಬುಗಳು ಕಡಿಮೆಯಿವೆ. ಗಾಳಿ ಸಾಕಷ್ಟಿಲ್ಲ. ಆದರೆ ಗ್ಯಾಸ್ ಗೇನೂ ಅಭಾವವಿಲ್ಲ.
ಸುಬ್ಬಣ್ಣ – [ಯೋಚಿಸುತ್ತಾ] ಓಹ್! ಹೌದಾ...... ಪಿಟ್ ಕೆಲಸ ಮುಗಿಸಿದ ನಂತರ ನನ್ನ ಕಛೇರಿಗೆ ಸುಬ್ಬಣ್ಣ. ನಿನ್ನೊಂದಿಗೆ ಗಂಭೀರವಾದ ಮಾತುಕತೆ ಆಗಬೇಕು.
[ಸೀನಣ್ಣ ತನ್ನ ಸಾಮಾನುಗಳೊಂದಿಗೆ ಹಿಂತಿರುಗುತ್ತಾನೆ]
ಸೀನಣ್ಣ - ನಾನು ಸಿದ್ಧ ರಾಬರ್ಟ್. 
[ಸುಬ್ಬಣ್ಣ ಹೊರಗೆ ಹೋಗಿ ನಂತರ ವೀರಣ್ಣ ನನ್ನು ನೋಡುತ್ತಾನೆ]
ಸುಬ್ಬಣ್ಣ - ಪಿಟ್ ನೊಳಗೆ ಗ್ಯಾಸ್ ಇದೆಯಾ? ಮುಖ್ಯ ಗಾಳಿಹಾದಿ ಬಿದ್ದರೆ, ಓಹ್ ಸರ್ಕಾರಿ ಇನ್ಸ್‍ಪೆಕ್ಟರ್ ಇದನ್ನು ತಿಳಿಯಬೇಕಲ್ಲವೇ? ವೀರಣ್ಣ ನಿನ್ನಂತಹವರನ್ನು ಹೇಗೆ ನೋಡಿಕೊಳ್ಳಬೇಕು ಎಂದು ಗೊತ್ತು, ಮನಸ್ಸಿನಲ್ಲಿರಲಿ
[ಸುಬ್ಬಣ್ಣ ಹೋಗುತ್ತಾನೆ. ಸೀನಣ್ಣ ನಾಯಿಯಂತೆ ಹಿಂದೆ ಹೋಗುತ್ತಾನೆ. ವೀರಣ್ಣ ಮುಗುಳ್ನಗುತ್ತಾನೆ. ಆದರೆ ಅದು ಸಮಸ್ಯೆಯ ನಗು. ಕಿಟ್ಟಿ ಬರುತ್ತಾನೆ.]
ಕಿಟ್ಟಿ - ನನ್ನನ್ನು ಹೊರಹಾಕುತ್ತಾರಾ ವೀರಣ್ಣ ?
ವೀರಣ್ಣ – ಅದನ್ನೂ ನನಗೆ ಬಿಡು ಕಿಟ್ಟಿ....... ಕಾಳಣ್ಣ ಬರ್ತಾ ಇದ್ದಾನೆಯೇ?
ಕಿಟ್ಟಿ - ಹೌದು. ಆದರೆ ವೀರಣ್ಣ, ಅವನು ಈಗಾಗಲೇ ಊಟ ಮಾಡಿದ್ದಾನೆ. ಅದನ್ನವನು ಅಲ್ಲಿಗೇ ತೆಗೆದುಕೊಂಡು ಹೋದನಂತೆ.
ವೀರಣ್ಣ – ಅವನು ಯಾವತ್ತೂ ಈ ರೀತಿ ಮಾಡಿಲ್ಲವಲ್ಲ.
ಕಿಟ್ಟಿ – ಅವನಿಗೆ ಬಹಳ ಹಸಿವಾಗಿತ್ತಂತೆ. ಹಾಗಾಗಿ ಮಧ್ಯದಲ್ಲಿಯೇ....... [ಕುಳಿತುಕೊಳ್ಳುತ್ತಾ] ವೀರಣ್ಣ, ನನ್ನನ್ನು ಹೊರಹಾಕಿದರೆ ಮನೆಗೆ ಹೇಗೆ ಹೋಗೋದು?
ವೀರಣ್ಣ – ಕಿಟ್ಟಿ ನಿನ್ನನ್ನೇನಾದರೂ ಹೊರಹಾಕಿದ್ರೆ, ಈ ರಕ್ತಸಿಕ್ತ ಪಿಟ್ ಅನ್ನು ಚಳುವಳಿಯ ಹಾದಿಗಿಳಿಸುತ್ತೇನೆ. ಆಗ ಕಂಪನಿ ಅದರ ಬಗ್ಗೆ ಏನಾದ್ರೂ ಹೇಳಲೇಬೇಕು.
[ಕಾಳಣ್ಣ ಬರುತ್ತಾನೆ. ಎಲ್ಲರನ್ನೂ ಸ್ಪಷ್ಟವಾಗಿ ನೋಡೋದಿಲ್ಲ. ಅವನಿಗೆ ತೀವ್ರ ಕೆಮ್ಮಿದೆ.]
ವೀರಣ್ಣ – ಕಾಳಣ್ಣ ನಿನ್ನ ಆ ಕೆಮ್ಮು ಇನ್ನಷ್ಟು ಉಲ್ಬಣವಾಗಿದೆ.
ಕಾಳಣ್ಣ – [ಉಸಿರಾಡಲು ಕಷ್ಟಪಡುತ್ತಾ] ಅಲ್ಲಿನ ಆ ಗಾಳಿ ನನಗೆ ಉಸಿರು ಕಟ್ಟಿಸುತ್ತಿದೆ. ವೀರಣ್ಣ ನನಗೆ ಉಸಿರು ಕಟ್ಟಿಸುತ್ತಿದೆ.
ವೀರಣ್ಣ – ಅಲ್ಲೇಕೆ ಕೆಲಸ ಮಾಡಲು ಹೋದೆ?
ಕಾಳಣ್ಣ - ನನಗೆ ಅಲ್ಲಿಂದ ಹೊರಬರಲಾಗಿದ್ದರೆ, ಅಲ್ಯಾರು ಕೆಲಸ ಮಾಡುತ್ತಿದ್ದರು? ಅವನಿಗೂ ಗೊತ್ತು. ಬೇರೆ ಕೆಲಸ ಕೊಡೋಲ್ಲ. ದೇವ್ರೆ....... ನಾನು ನಿಜಕ್ಕೂ ಮದುವೆ ಆಗಬಾರದಾಗಿತ್ತು, ವೀರಣ್ಣ ಆಗಿನಿಂದಲೂ ನರಕವೇ........ ಇಲ್ಲಿ ಸಂಕೋಲೆಯಲ್ಲಿರುವುದು.
ವೀರಣ್ಣ – [ಕಾಳಣ್ಣ ಸೀನಣ್ಣ ಕುಳಿತಿದ್ದ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ.] ನೀನೇಕೆ ನಮ್ಮ ಜೊತೆ ತಿಂಡಿ ತಿನ್ನಲಿಲ್ಲ.
ಕಾಳಣ್ಣ-[ತಪ್ಪು ಮಾಡಿದವನಂತೆ] ನಾನು...... ಬೇಗ ತಿಂದೆ.
ವೀರಣ್ಣ – ಏಕೆ?
ಕಾಳಣ್ಣ- [ಸನ್ನಿ ಹಿಡಿದವನಂತೆ] ವೀರಣ್ಣ........ ನನಗೆ ಅಲ್ಲಿ ಕೆಲಸ ಮಾಡಲು ಭಯವೆನಿಸುತ್ತದೆ...... ಅದು ಯಾವುದೋ ಒಂದು ದಿನ ಕೆಳಗೆ ಬೀಳುತ್ತದೆ ಮತ್ತು ನನ್ನನ್ನು ನಾಶ ಮಾಡುತ್ತದೆ.
[ಅವನ ಈ ರೀತಿಯನ್ನು ನೋಡಿ ವೀರಣ್ಣ ಚಕಿತನಾಗುತ್ತಾನೆ. ಕಿಟ್ಟಿ ಆಶ್ಚರ್ಯಚಕಿತನಾಗಿ ಕಾಳಣ್ಣನತ್ತ ನೋಡುತ್ತಿದ್ದಾನೆ. ವೀರಣ್ಣ ಕಾಳಣ್ಣನ ಬಳಿಗೆ ಹೋಗುತ್ತಾನೆ.]
ವೀರಣ್ಣ- ಕಾಳಣ್ಣ, ಧೈರ್ಯ ತಂದುಕೊ, ತಮ್ಮಾ, ಸ್ಥೈರ್ಯ ಕಳೆದುಕೊಳ್ಳಬೇಡ.
ಕಾಳಣ್ಣ – ಆದರೆ ನಾನೇನು ಮಾಡಲಿ...... ಒಂದಲ್ಲ ಒಂದು ದಿನ ಅದು ನನ್ನ ಮೇಲೆ ಬೀಳುತ್ತದೆ ಎಂದು ನನಗೆ ಗೊತ್ತು. 
ವೀರಣ್ಣ- ಕಾಳಣ್ಣ, ಇಂದು ಬೆಳಗ್ಗೆ ಏನಾಯ್ತು ಎಂದು ನನಗೆ ಗೊತ್ತಿದೆ. ಇದು ಹಸಿವಿನಿಂದಾಗಿ. ಇಂದು ಬೆಳಿಗ್ಗೆ ನೀನು ತಿಂಡಿಯನ್ನು ತರಲಿಲ್ಲ. ಏಕೆ?
ಕಾಳಣ್ಣ - ಇಲ್ಲ ವೀರಣ್ಣ. ನಾನು, ನಾನು..........
ವೀರಣ್ಣ - ಪರವಾಗಿಲ್ಲ ಕಾಳಣ್ಣ. ನೀನೇನು ಅದರ ಬಗ್ಗೆ ಅವಮಾನ ಪಟ್ಟುಕೊಳ್ಳಬೇಕೆಲ್ಲ. ಹೆಂಡತಿ ಮತ್ತು ಮಕ್ಕಳು ಇರುವಾಗ ಅವರನ್ನು ಬಿಟ್ಟು ತಿಂಡಿ ತರದಿರುವುದು ಅಪರಾಧವೇನೂ ಅಲ್ಲ. [ವೀರಣ್ಣ ಕಿಟ್ಟಿಯತ್ತ ನೋಡುತ್ತಾನೆ] [ಕಿಟ್ಟಿಗೆ] - ಸೀನಣ್ಣ ಆ ಕುದುರೆಮರಿಗೆ ಸ್ವಲ್ಪ ಬ್ರೆಡ್ ಬಿಟ್ಟಿದ್ದಾನಲ್ಲವೇ?

ಕಿಟ್ಟಿ – [ಆಶ್ಚರ್ಯಚಕಿತನಾಗಿ] ಏನು, ಬಿಟ್ಟಿದ್ದಾನೆಯೇ?
ವೀರಣ್ಣ- [ಕಿಟ್ಟಿಗೆ ಸುಮ್ಮನಿರುವಂತೆ ಸನ್ಹೆ ಮಾಡಿ] ನೀನು ಹೊರಗಡೆ ಹೋಗಿದ್ದೆ. ಅದಕ್ಕೆ ಅವನು ಹೇಳಿದ್ದು ನಿನಗೆ ಕೇಳಿಸಲಿಲ್ಲ. ಡ್ಯಾನಿಗೆ ಸಾಕಷ್ಟು ಓಟ್ಸ್ ಇದೆ.
[ವೀರಣ್ಣ ಸೀನಣ್ಣನ ಡಬ್ಬಿ ತೆಗೆದು, ಬ್ರೆಡ್ ಅನ್ನು ತೆಗೆದು, ಕಾಳಣ್ಣನ ಕೈಯಲ್ಲಿ ತುರುಕುತ್ತಾನೆ. ಕಾಳಣ್ಣ ಸಂಕೋಚ ಪಟ್ಟುಕೊಳ್ಳುತ್ತಾನೆ]
ಕಾಳಣ್ಣ - ಬೇಡ!...... ಸೀನಣ್ಣ ಎಲ್ಲರಿಗೂ ಹೇಳಿಕೊಂಡು ಬರುತ್ತಾನೆ.
ವೀರಣ್ಣ- [ಬಲವಂತವಾಗಿ ತುರುಕುತ್ತಾ] ತೆಗೆದುಕೊ. ಮೂರ್ಖನಂತೆ ಆಡಬೇಡ. ಸೀನಣ್ಣಗೆ ನಾನು ಹೇಳುತ್ತೇನೆ. [ಕಾಳಣ್ಣ ತೆಗೆದುಕೊಳ್ಳುತ್ತಾನೆ. ಬೇಕೊ ಬೇಡವೊ ಎಂಬಂತೆ ಮತ್ತು ಅವಮಾನ ಪಟ್ಟುಕೊಳ್ಳುತ್ತಾನೆ] ನಿನಗೆ ಇಲ್ಲಿ ತಿನ್ನಬಾರದು ಎನಿಸಿದರೆ ನಿನ್ನ ಸ್ಥಳಕ್ಕೆ ತೆಗೆದುಕೊಂಡು ಹೋಗಿ ತಿನ್ನು. [ಕಾಳಣ್ಣ ನಿರಾಶನಾಗಿ ವೀರಣ್ಣನತ್ತ ನೋಡುತ್ತಾನೆ]
ಕಾಳಣ್ಣ - ವೀರಣ್ಣ ನನಗೆ ಸಾಕಾಗಿದೆ. ಇಲ್ಲಿ ಕೆಲಸ ಮಾಡಲು ನನ್ನಲ್ಲಿ ಶಕ್ತಿಯಿಲ್ಲ. ಆದರೆ ವಿಧಿಯಿಲ್ಲ. ಆ ಮೇಲ್ಛಾವಣಿ ಕುಸಿದು ಬಿದ್ದು ನಾನು ಹೋದರೆ, ಮೇರಿಗೆ ಪರಿಹಾರವಾದರೂ ಸಿಗುತ್ತದೆ. ಅವಳ ಸಮಸ್ಯೆಗಳು ಕೊನೆಯಾಗುತ್ತವೆ.
ವೀರಣ್ಣ - ಕಾಳಣ್ಣ! ಆ ವಿಚಾರವನ್ನು ತಲೆಯಿಂದ ಹೊರಗೆ ಹಾಕು. ಅದು ಹೇಡಿಗಳ ಲಕ್ಷಣ ....... ಹೋಗು ಬ್ರೆಡ್ ತಿನ್ನು ಹೋಗು. ಸರಿಹೋಗುತ್ತೀಯಾ. [ಕಾಳಣ್ಣ ಎದ್ದು ನಿಧಾನವಾಗಿ ಹೊರಹೋಗುತ್ತಾನೆ. ಅವನು ಅಲ್ಲಿಂದ ಹೋದ ಮೇಲೆ ಕೆಮ್ಮುವುದು ಕೇಳಿಸುತ್ತದೆ] ಕಾಳಣ್ಣ ಸಾಕಷ್ಟು ಸುಸ್ತಾಗಿದ್ದಾನೆ ಅನಿಸುತ್ತೆ.
ಕಿಟ್ಟಿ- ಸೀನಣ್ಣ ತನ್ನ ಬ್ರೆಡ್ ಕಾಣದಿದ್ದಾಗ ಸಿಟ್ಟಿನಿಂದ ಹುಚ್ಚನಾಗುತ್ತನೆ.
ವೀರಣ್ಣ- [ಮುಗುಳ್ನಗುತ್ತಾ] ಇಲಿಗಳ ಮೇಲೆ ಹಾಕೋಣ ಕಿಟ್ಟಿ. ಅವನ ಹತ್ತಿರ ಇನ್ನೂ ಸಾಕಷ್ಟು ಹ್ಯಾಮ್ ಮತ್ತು ಮೊಟ್ಟೆ ಇದೆ. ಅದೂ ಇಲ್ಲದಿದ್ದರೆ ಒಂದು ದಿನ ಹಸಿವಿನಿಂದ ಇರುವುದು ಅವನಿಗೆ ಒಳ್ಳೆಯದೇ.
[ಸೀನಣ್ಣ ಆತುರದಿಂದ ಹಿಂತಿರುಗುತ್ತಾನೆ ಮತ್ತು ಕೋಪದಲ್ಲಿಯೇ ಇದ್ದಾನೆ]
ಸೀನಣ್ಣ- [ಪ್ರವೇಶಿಸುತ್ತಾ] ನನ್ನ ಊಟ ನನಗೇನೂ ಒಳ್ಳೆಯದು ಮಾಡುವುದಿಲ್ಲ ಎನ್ನುವುದು ಇದಕ್ಕೇ. ಒಂದು ಕಡೆ ಶಾಂತಿಯುತವಾಗಿ ಕುಳಿತು ತಿನ್ನಲು ಅವಕಾಶವೇ ಇರುವುದಿಲ್ಲ. ಯಾವಾಗಲು ಏನಾದರೂ ತಪ್ಪಾಗುತ್ತಿರುತ್ತದೆ. [ಹಿಂದಿನ ರೀತಿಯಲ್ಲಿಯೇ ಕುಳಿತು ಡಬ್ಬಿ ತೆಗೆದುಕೊಳ್ಳುತ್ತಾನೆ. ಅದರ ಭಾರ ಕಡಿಮೆಯಾಗಿರುವುದರಿಂದ ಶಾಕ್ ಆಗುತ್ತಾನೆ. ಸಂದೇಹದಿಂದ ವೀರಣ್ಣ ನತ್ತ ನೋಡುತ್ತಾನೆ. ನಂತರ ಡಬ್ಬಿ ತೆರೆಯುತ್ತಾನೆ.] ಏ ನನ್ನ ಬ್ರೆಡ್ ಎಲ್ಲಿ?
ವೀರಣ್ಣ - ಕೆಲವು ಇಲಿಗಳು ಬಂದು ತೆಗೆದುಕೊಂಡು ಹೋಗಿಬಿಟ್ಟವು ಸೀನಣ್ಣ.
ಸೀನಣ್ಣ- [ವ್ಯಂಗ್ಯದಿಂದ] ಓಹ್! ಇಲಿಗಳೇ? ಮುಚ್ಚಳ ತೆಗೆದು ಮತ್ತೆ ಮುಚ್ಚಿ ಬಿಟ್ಟವಲ್ಲವೇ?
ವೀರಣ್ಣ - ಹೌದು. ಇತ್ತೀಚೆಗೆ ಅವೂ ಮಾನವನ ಸ್ವಭಾವ ಕಲಿಯುತ್ತಿವೆ. [ಸೀನಣ್ಣ ಹೆದರಿಸುವನಂತೆ ಎದ್ದೇಳುತ್ತಾನೆ]
ಸೀನಣ್ಣ- ನನ್ನ ಬ್ರೆಡ್ ಎಲ್ಲಿ?
ವೀರಣ್ಣ –[ಕಿಟ್ಟಿಗೆ] ಇತ್ತೀಚೆಗೆ ನನ್ನ ಮಾತನ್ನೇ ನಂಬುತ್ತಿಲ್ಲ, ಕಿಟ್ಟಿ.
ಸೀನಣ್ಣ- ನೋಡು, ನನಗೆ ನನ್ನ ಬ್ರೆಡ್ ಬೇಕು.
ವೀರಣ್ಣ- ಬಹಳ ತಡವಾಯಿತು. ಸೀನಣ್ಣ, ಅದು ಟಾಟಾ ಹೇಳಿ ಹೊರಟುಹೋಯಿತು.
ಸೀನಣ್ಣ- ಎಲ್ಲಿ ಹೋಯಿತು?
ವೀರಣ್ಣ- ನೋಡು, ಕಾಳಣ್ಣ ಮಾರ್ಷಲ್ ಇಲ್ಲಿಗೆ ಬಂದಿದ್ದ. ಅವನು ಏನನ್ನೂ ತಂದಿರಲಿಲ್ಲ. ಆದ್ದರಿಂದ ನೀನು ಬಿಟ್ಟದ್ದನ್ನು ಅವನಿಗೆ ಕೊಟ್ಟರೆ ನೀನೇನು ತಪ್ಪು ತಿಳಿಯುವುದಿಲ್ಲ ಎಂದು ಭಾವಿಸಿದೆ.
ಸೀನಣ್ಣ- ಏನು? ನನ್ನ ಬ್ರೆಡ್ ಅನ್ನು ಅವನಿಗೆ ಕೊಟ್ಟುಬಿಟ್ಟೆಯಾ? ಈಗ ನಾನೇನು ತಿನ್ನಲಿ?
ವೀರಣ್ಣ- ನೀನು ಸಾಕಷ್ಟು ತಿಂದಿರಬೇಕಲ್ಲವೇ? 
[ಸೀನಣ್ಣ ತನ್ನ ಡಬ್ಬಿಯನ್ನು ಹುಚ್ಚನಂತೆ ಎತ್ತುತ್ತಾ ವೀರಣ್ಣನ ಕಡೆ ಗುರಿಯಿಡುತ್ತಾನೆ]
ಸೀನಣ್ಣ- ನಿನ್ನ ತಲೆ ಒಡೆದು ಹಾಕುತ್ತೇನೆ. ನೀನು....................
[ವೀರಣ್ಣ ತನ್ನನ್ನು ರಕ್ಷಸಿಕೊಳ್ಳುತ್ತಾನೆ. ಕಿಟ್ಟಿ ಅಲ್ಲಿ ನೆಗೆಯುತ್ತಾನೆ. ರಾಬರ್ಟ್ ಒಳಬರುತ್ತಾನೆ]
ಸುಬ್ಬಣ್ಣ-ಏನು ವಿಷಯ? ಏನು ನಡೆಯುತ್ತಿದೆ?
ಸೀನಣ್ಣ- [ಕರುಣಾಜನಕವಾಗಿ ಸುಬ್ಬಣ್ಣ ಕಡೆ ನೋಡುತ್ತಾ, ] ರಾಬರ್ಟ್ ನಾನು ಹೊರ ಹೋಗಿದ್ದಾಗ ಅವನು ನನ್ನ ಬ್ರೆಡ್ ಕದ್ದು ಕೊಟ್ಟು ಬಿಟ್ಟಿದ್ದಾನೆ.
ಸುಬ್ಬಣ್ಣ- [ಆಶ್ಚರ್ಯಚಕಿತನಾಗಿ] ನಿನ್ನ ಬ್ರೆಡ್ ಕದ್ದನೇ?
ಸೀನಣ್ಣ - ಹಾ, ಕದ್ದು ಕಾಳಣ್ಣನಿಗೆ ಕೊಟ್ಟುಬಿಟ್ಟಿದ್ದಾನೆ.
ಸುಬ್ಬಣ್ಣ- [ವೀರಣ್ಣನಿಗೆ] ನಿಜವೇ?
ವೀರಣ್ಣ- ಕಾಳಣ್ಣ ಇಲ್ಲಿಗೆ ಬಂದಾಗ ಹಸಿವಿನಿಂದ ಸುಸ್ತಾಗಿದ್ದ. ನಾನು, ನನ್ನ ಕೆಲಸದಿಂದ ಕನಿಷ್ಟ ಪಕ್ಷ ಜೀವನದಲ್ಲಿ ಒಮ್ಮೆಯಾದರೂ ಜೊತೆಗಾರರಿಗೆ ಸಹಾಯಮಾಡಲು ಅವಕಾಶ ಸಿಕ್ಕಿತೆಂದು ಸೀನಣ್ಣ ಸಂತೋಷಪಡುತ್ತಾನೆ ಎಂದುಕೊಂಡೆ. 
ಸೀನಣ್ಣ- [ಇನ್ನೂ ಸಿಟ್ಟಿನಿಂದಲೇ] ಅವನು ನನ್ನ ಅನುಮತಿಯನ್ನೂ ಕೇಳಲಿಲ್ಲ. ರಾಬರ್ಟ್........... ಈಗ ನೋಡು, ನನಗೆ ಏನು ಇಲ್ಲ.
ಸುಬ್ಬಣ್ಣ - ವೀರಣ್ಣ, ನಿನ್ನ ಸಾಮಾನು ತೆಗೆದುಕೊಂಡು ಇಲ್ಲಿಂದ ಹೊರಡು. [ಕಿಟ್ಟಿಗೆ] ನೀನೂ ಅಷ್ಟೇ.
ವೀರಣ್ಣ - ಸರಿ, ಆದರೆ ನಾನು ಇಲ್ಲಿಂದ ಹೊರಡುವ ಮುನ್ನ ಈ ದುರಾಸೆಯ ಹಂದಿಯ ತಲೆ ಒಡೆದೇ ಹೋಗುತ್ತೇನೆ.
[ವೀರಣ್ಣ ಕೋಪದಿಂದ ತನ್ನ ಜಾಕೆಟ್ ತೆಗೆಯುತ್ತಾನೆ. ಸುಬ್ಬಣ್ಣ ಅವರಿಬ್ಬರ ನಡುವೆ ಬರುತ್ತಾನೆ. ಸೀನಣ್ಣ ಮೂಲೆಗೆ ಹೋಗುತ್ತಾನೆ]
ಸುಬ್ಬಣ್ಣ – [ವೀರಣ್ಣನಿಗೆ] ಇಲ್ಲಿ ಒಬ್ಬನನ್ನು ಹೊಡೆದರೆ ಏನಾಗುತ್ತೆ ಎಂದು ಗೊತ್ತು ತಾನೆ?
ವೀರಣ್ಣ – [ಸುಬ್ಬಣ್ಣ ನನ್ನು ದಾಟಿ ಸೀನಣ್ಣನತ್ತ ಹೋಗಲು ಪ್ರಯತ್ನಿಸುತ್ತಾ] ನಾನೇನು ಅದರ ಬಗ್ಗೆ ಯೋಚಿಸೋಲ್ಲ. ಕಾಳಣ್ಣ ಹಸಿದಿದ್ದ ಮತ್ತು ..........
[ಗುಡುಗಿನಂಥ ಭಯಂಕರ ಶಬ್ದ ಕೇಳಿಬರುತ್ತದೆ. ತಕ್ಷಣವೇ ಜಗಳ ಮರೆತುಹೋಗುತ್ತದೆ. ಬಲೆಯಲ್ಲಿ ಸಿಕ್ಕ ಪ್ರಾಣಿಗಳಂತೆ ತಕ್ಷಣವೇ ಎಲ್ಲರೂ ಒಂದೆಡೆ ಸೇರುತ್ತಾ ಎಡ ಗೋಡೆಯತ್ತ ಧಾವಿಸುತ್ತಾರೆ. ಕಿಟ್ಟಿ ವೀರಣ್ಣನ ಆಶ್ರಯದತ್ತ ಧಾವಿಸುತ್ತಾನೆ. ಶಬ್ಧ ಹೆಚ್ಚುತ್ತಿದೆ ಮತ್ತು ಭಯಂಕರವೆನಿಸುತ್ತಿದೆ. ಸ್ವಲ್ಪ ಕಾಲದ ನಂತರ ಕಾಳಣ್ಣ ಕಾಲೆಳೆದುಕೊಂಡು ಒಳಗೆ ಬಂದು ಕೆಳಗೆ ಬೀಳುತ್ತಾನೆ. ತೆವಳುತ್ತಾ ತನ್ನ ಜೊತೆಗಾರರನ್ನು ಸೇರಿಕೊಳ್ಳುತ್ತಾನೆ.]
ಕಾಳಣ್ಣ- ನಾವು ಸಿಕ್ಕಿಹಾಕಿಕೊಂಡಿದ್ದೇವೆ, ಸಿಕ್ಕಿಹಾಕಿಕೊಂಡಿದ್ದೇವೆ. 
[ಧ್ವನಿ ಈಗ ಹೆಚ್ಚುತ್ತಿದೆ. ಮಣ್ಣು ಸುರಿಯುತ್ತಿರುವ ಶಬ್ದ ಕೇಳಿಬರುತ್ತಿದೆ. ಧೂಳಿನಿಂದ ಕೂಡಿದ ಕಲ್ಲೊಂದು ರಂಗದ ಮೇಲೆ ಬೀಳುತ್ತದೆ. ಬಾಗಿಲಿನಲ್ಲಿ ಜೋರಾದ ಶಬ್ಧ ಕೇಳಿ ಬರುತ್ತದೆ]
[ಕ್ರಮೇಣ ಧ್ವನಿ ಕಡಿಮೆಯಾಗುತ್ತಾ ಬೆಟ್ಟಗಳ ನಡುವೆ ಗುಡುಗಿನಂತೆ, ನಂತರ ಸದ್ದಡಗುತ್ತದೆ. ಸುತ್ತಲೂ ಮಣ್ಣು ಬೀಳುತ್ತಿರುವ ಶಬ್ಧ ಮಾತ್ರ ಕೇಳಿಬರುತ್ತಿದೆ.]
[ವೀರಣ್ಣ ಹುಷಾರಾಗಿ ಬಾಗಿಲಿನತ್ತ ಹೋಗುತ್ತಾನೆ. ಪರದೆಯನ್ನು ಎತ್ತುತ್ತಾನೆ. ಎಲ್ಲರೂ ಕೂಗಿಕೊಳ್ಳುತ್ತಾರೆ. ಕಲ್ಲಿನಿಂದ ಬಾಗಿಲು ಮುಚ್ಚಿಹೋಗಿದೆ. ವೀರಣ್ಣ ತಿರುಗಿ ಭಯಗ್ರಸ್ಥರಾದ ಜೊತೆಗಾರರನ್ನು ನೋಡುತ್ತಾನೆ]
ವೀರಣ್ಣ – ದೇವರೇ........ ನಾವು ಗೋರಿಯೊಳಗೆ ಇದ್ದೇವೆ.

(ಮುಂದುವರೆಯುತ್ತದೆ) 
- ಸುಧಾ ಜಿ 

ಪುಟ್ಕಥೆಗಳು

ಪುಟ್ಕಥೆ - ೧

ದೈಹಿಕ ಶ್ರಮ ಹೆಚ್ಚೋ ಮಾನಸಿಕ ಶ್ರಮ ಹೆಚ್ಚೋ ಎಂಬುದರ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿತ್ತು. ಅಲ್ಲಿಯೇ ಹಪ್ಪಳ ಮಾಡುತ್ತಿದ್ದ ಅನಕ್ಷರಸ್ಥ ಅಕ್ಕ ಹೇಳಿದಳು "ಬರೀ ಓದಿದರೆ, ಮಾತನಾಡಿದರೆ ಊಟ ಎಲ್ಲಿಂದ ಸಿಗುತ್ತದೆ?" ಕೇಳಿದಳು. ಇವಳಿಗೇನು ಮಹಾ ಗೊತ್ತು ಎಂದುಕೊಂಡು ಉತ್ತರಿಸಲು ಬಾಯಿ ತೆಗೆಯುವಷ್ಟರಲ್ಲಿ ತನ್ನ ಮಾತು ಮುಂದುವರೆಸಿದಳು, "ಆದರೆ ಓದಿಲ್ಲದೆ, ಮಾತಿಲ್ಲದೆ ಇದ್ದರೆ ಬರೀ ಕಾಯಕ ಮಾಡುವುದು ಜೀತ ಮಾಡಿದ ಹಾಗೆ. ಎರಡೂ ಇದ್ದರೆ ಅಗೋ ಅವರಂತಾಗಬಹುದು!" ಅಲ್ಲಿ ವಿಶ್ವೇಶ್ವರಯ್ಯ, ಬಸವಣ್ಣ, ಸಾವಿತ್ರಿಬಾಯಿ, ಜ್ಯೋತಿಭಾರವರ ಫೋಟೊಗಳು ಕಂಡವು!!

ಪುಟ್ಕಥೆ - ೨
"ಮದುವೆಯಾಗಿ ಇನ್ನೂ ಮೂರು ತಿಂಗಳಾಗಿಲ್ಲ, ಆಗಲೇ ವಿಚ್ಛೇದನವೇ?" ಅಪ್ಪ ಅಪ್ಪ ಕೂಗಾಡಿದರು.
ಅವಳ ಮೈಮೇಲೆ ರಕ್ತ ಹೆಪ್ಪುಗಟ್ಟದಿರುವ ಒಂದಿಂಚು ಜಾಗವೂ ಕಾಣಿಸದಾಗ ಅವಳನ್ನು ಅಪ್ಪಿ, ಅತ್ತುಕೊಂಡೇ ಅವಳ ನಿರ್ಧಾರದ ಜೊತೆ ನಿಲ್ಲಲು ನಿರ್ಧರಿಸಿದರು!!

ಪುಟ್ಕಥೆ - ೩
ಸಾಯಳಾಕೆ ಫಿನಾಯಿಲ್ ಬಾಟಲ್ ಕೈಗೆತ್ತಿಕೊಂಡಳು.
"ನನ್ನಮ್ಮ ಇರುವವರೆಗೂ ನನಗೆ ಯಾವ ಕಷ್ಟವೂ ಇಲ್ಲ" ಮಗಳ ಮಾತನ್ನು ಕೇಳಿ ಅವಳ ಕೈಯಿಂದ ಬಾಟಲ್ ಜಾರಿ ಕೆಳಗೆ ಬಿದ್ದು ಛಿದ್ರವಾಯಿತು, ಹಾಗೆಯೇ ಅವಳ ನಿರ್ಧಾರವೂ ಸಹ!!

ಪುಟ್ಕಥೆ - ೪
"ಅಷ್ಟೊಂದು ಗೆಳತಿಯರಲ್ಲಿ ಅವಳಿಗೆ ಮಾತ್ರ ಏಕಷ್ಟು ಪ್ರಾಮುಖ್ಯತೆ?"
"ಕಾರ್ಗತ್ತಲಿನಲ್ಲಿ ಹಣತೆ ಹಿಡಿದವರು ತಾನೇ ಮಾನ್ಯರು!!"

ಪುಟ್ಕಥೆ - ೫
"ಅಲ್ಲಮ್ಮ ನನಗಿಂತ ಹೆಚ್ಚಾಗಿ ಅವಳನ್ನು ನೋಡಿಕೊಳ್ಳುತ್ತಿದ್ದೀಯಲ್ಲ?" ಪ್ರಶ್ನಿಸಿದಳು ಮಗಳು.
"ನನ್ನಂತೆ ನಿನ್ನನ್ನು ಪ್ರೀತಿಸಬಲ್ಲ ವ್ಯಕ್ತಿ ನನ್ನ ನಂತರವೂ ನಿನ್ನ ಬಗ್ಗೆ ಕಾಳಜಿ ವಹಿಸಬಲ್ಲ ವ್ಯಕ್ತಿಯ ಬಗ್ಗೆ ನಾನು ಕಾಳಜಿ ವಹಿಸಬಾರದೇ?"

ಪುಟ್ಕಥೆ - ೬
"ಇತರಿಗಾಗಿ ಅಷ್ಟು ತಲೆ ಕೆಡಿಸಿಕೊಳ್ಳುವುದು ಅವಶ್ಯವೇ? ಬೇರೆಯವರೆಲ್ಲ ಕಣ್ಣು ಮುಚ್ಚಿ ಕುಳಿತಿಲ್ಲವೇ?"
"ಹೊರಗಿನ ಕಣ್ಣನ್ನು ಮುಚ್ಚಿಕೊಳ್ಳಬಹುದು, ಆದರೆ ಒಳಗಿನ ಕಣ್ಣನ್ನು ಹೇಗೆ ಮುಚ್ಚಿಕೊಳ್ಳಲಿ?"

ಪುಟ್ಕಥೆ - ೭
"ಸಾಯಬೇಕೆಂದು ಹೇಗೂ ನಿರ್ಧರಿಸಿದ್ದೀಯ. ಹತ್ತು ನಿಮಿಷ ಯೋಚನೆ ಮಾಡು - ಸತ್ತು ನೋವನ್ನು ಹರಡುತ್ತೀಯೊ, ಬದುಕಿ ಖುಷಿಯನ್ನು ಹರಡುತ್ತೀಯೊ,  ನಿರ್ಧರಿಸಿ, ಅದರಂತೇ ಮಾಡು" ಹೇಳಿದಳಾಕೆ ಗೆಳತಿಗೆ!!

ಪುಟ್ಕಥೆ - ೮

"ನೀನು ಯಾವುದಕ್ಕೂ ಕ್ಷಮೆ ಕೇಳಬೇಕಿಲ್ಲ. ನಿನ್ನಿಂದ ಚಿಕ್ಕಂದಿನಲ್ಲಿ ಅಮ್ಮನಿಂದ ತುಂಬಾ ಏಟು ತಿಂದಿದ್ದೇನೆ ನಿಜ. ಆದರೆ ನಾನು ಹೊಳೆಯಲ್ಲಿ ಮುಳುಗಿ ಹೋಗುತ್ತಿದ್ದಾಗ ನಿನಗೆ ಪೂರ್ತಿ ಈಜು ಬಾರದಿದ್ದರೂ ನನ್ನನ್ನು ಉಳಿಸಲು ನೀರಿಗೆ ಹಾರಿದ್ದೂ ಸಹ ನಿಜವಲ್ಲವೇ? ಮೊದಲನೆಯದನ್ನು ನೆನೆಸಿಕೊಂಡಾಗ ನಗು ಬರುತ್ತೆ, ಆದರೆ ಎರಡನೆಯದನ್ನು ನೆನೆಸಿಕೊಂಡಾಗ....." ಅಕ್ಕ ಭಾವುಕಳಾಗಿ ಅಳುವುದನ್ನು ಕಂಡಳು ತಂಗಿ!!

ಪುಟ್ಕಥೆ - ೯
"ಬಹಳ ಸಾಹಸ ಮಾಡುತ್ತಿದ್ದೀಯ ಎನಿಸುತ್ತೆ, ಮತ್ತೊಮ್ಮೆ ಯೋಚಿಸು, ಆ ಕೆಲಸ ಮಾಡಬೇಕೆ ಬೇಡವೇ ಎಂದು" ಗೆಳತಿ ಹೇಳಿದಳು.
"ಎಲ್ಲವನ್ನು ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿರುವುದು. ಒಂದು ವೇಳೆ ನಾನು ಸಾಧಿಸಿದರೆ  ಬೇರೆ ಸೋತಟಟರೆ ನನಗೇ ಒಂದು ಪಾಠವಾಗುತ್ತೆ!"

ಪುಟ್ಕಥೆ - ೧೦
"ಅಮ್ಮ ಇರುವುದೇ ಒಂದು ಜೀವನ, ಇಷ್ಟೆಲ್ಲಾ ಚಿಂತಿಸಿ ಆರೋಗ್ಯ, ನೆಮ್ಮದಿ ಹಾಳುಮಾಡಿಕೊಳ್ಳಬೇಕೆ? ಯೋಚಿಸಿ ಪರಿಹಾರ ಹುಡುಕೋಣ ಬಾ"  ಮಗಳು ಸಮಾಧಾನಪಡಿಸಿದಾಗ, ಆ ತಾಯಿಗೆ ಮಗಳಿಗೆ  ಕೊಡಿಸಿದ್ದು ಸಾರ್ಥಕವೆನಿಸಿತು!!

ಸುಧಾ.ಜಿ   


ಉತ್ತರವೇನು? -1


[ಈ ಅಂಕಣದಲ್ಲಿ ಹೆಣ್ಣುಮಕ್ಕಳ ಹಲವಾರು ಸಮಸ್ಯೆಗಳನ್ನು ತರುತ್ತಿದ್ದೇವೆ. ಇದನ್ನು ಬರಹಗಾರರು ತಮ್ಮ ಕಣ್ಣುಮುಂದೆ ಕಂಡ ಬೇರೆ ಬೇರೆ ಸಮಸ್ಯೆಗಳನ್ನು ಓದುಗರ ಮುಂದಿಡುತ್ತಿದ್ದಾರೆ. ಇದರ ಬಗ್ಗೆ ಬೇರೆಬೇರೆ ಕಡೆಗಳಲ್ಲಿ ಚರ್ಚೆಯಾಗಲಿ ಎನ್ನುವುದೇ 
ನಮ್ಮ ಆಶಯ] 
ಜೀವನ ಒಂದು ನಾಟಕ ರಂಗ, ನಾ ಪಾತ್ರಧಾರಿ, ಅವ ಸೂತ್ರಧಾರ, ಅವನಿಚ್ಛೆಯೇ ಅಂತಿಮ. ಏನಾದರಾಗಲೀ ನಾ ಸಂಪೂರ್ಣ ಸೋತು ಶರಣಾದೆ ಬದುಕಿನ ಬವಣೆಗಳಿಗೆ!!! ಕ್ಷಮಿಸಿ, ಕೇವಲ ಮನದ ತಳಮಳ, ಬೇಗೆಯನ್ನ ನನ್ನೊಳಗೆ ನಾನೇ ನುಂಗಿಕೊಳ್ಳೋದ್ರಿಂದ ಏನು ಪ್ರಯೋಜನವಿಲ್ಲ. ಬಹುಶಃ ನನ್ನ ಜೀವನದ ಸಂಕಷ್ಟಗಳ ಸರಮಾಲೆಯನ್ನ ನಿಮ್ಮ ಮುಂದೆ ಬಚ್ಚಿಡೋದಕ್ಕಿಂತ ಬಿಚ್ಚಿಟ್ರೆ, ಮುಂದಿನ ಕೆಲವು ದಿನಗಳಾದ್ರೂ ಜೀವನದ ಜೊತೆ ಹೋರಾಟ ನಡೆಸಿ ಬದುಕಬಹುದೇನೋ? 
ಅಂದ ಹಾಗೆ, ನಾನು ಶಿವಾನಿ, ಓದಿದ್ದು 8 ನೇ ತರಗತಿ. ಬಡ ಹಳ್ಳಿ ಕುಟುಂಬ, ಸೇರಿದ್ದು, ಅತ್ತೆ, ಮಾವ, ನಾದಿನಿ, ಭಾವ, ಓರಗಿತ್ತಿ ಇರೋ ಮನೆಗೆ. ಅಲ್ಲಿ ನನಗೆ ಸಿಕ್ಕಿದ್ದು ಕಿರುಕುಳ, ಗುಲಾಮಗಿರಿಯ ಕೆಲಸ, ಹೀಗಾಗಿ ನೊಂದು, ಗಂಡನೊಂದಿಗೆ ಮನೆ ಬಿಟ್ಟು, ಬೆಂಗಳೂರಿನ ಮಹಾನಗರಕ್ಕೆ ಬಂದು, ಬದುಕಿ ಸಾಧಿಸಬೇಕೆಂಬ ಛಲದಿಂದ ಇದ್ದ ಅಲ್ಪ ಸ್ವಲ್ಪ ಒಡವೆ ಮಾರಿ ಬಂದ ಹಣದಿಂದ ಸಣ್ಣ ಅಂಗಡಿ ಹಾಕಿಕೊಂಡೆವು. ಅದೃಷ್ಟವಶಾತ್ ನಾವು ತುಂಬಾ ಹಣ ಸಂಪಾದಿಸಿ, ಒಳ್ಳೆಯ ಸ್ಥಾನಕ್ಕೆ ಬಂದೆವು. ನನಗೆ ಅಷ್ಟೊತ್ತಿಗೆ ಎರಡು ಸುಂದರ ಮಕ್ಕಳು. 
ಹೀಗೆ ಕಾಲಚಕ್ರ ಉರುಳುತ್ತಾ ನನ್ನ ಗಂಡ ಪರಸ್ತ್ರೀ ಸಹವಾಸ ಮಾಡಿದ, ಹಣದ ಮೋಹ, ದುರಹಂಕಾರದಿಂದ. ಆಕೆಯನ್ನು ಮನೆಗೆ ತಂದು ಇಟ್ಕೊಂಡು, ನನ್ನನ್ನು ಮಕ್ಕಳ ಸಮೇತ ಹೊರಗೆ ಹಾಕಿಯೇಬಿಟ್ಟ! ಅವನ ಕ್ರೂರತೆಗೆ ನನ್ನ ಹೃದಯ ಛಿದ್ರವಾಯಿತು.
ಇದೇ ಛಲದಿಂದ, ಗಟ್ಟಿ ನಿರ್ಧಾರ ಮಾಡಿ ಕೂಡಿಟ್ಟ ಅಲ್ಪಸ್ವಲ್ಪ ಹಣದಿಂದ ಬೇರೆ ಅಂಗಡಿ ಹಾಕಿಕೊಂಡೆ. ಆದರೆ ನನ್ನ ಗಂಡನ ಕೆಂಗಣ್ಣು ನನ್ನ ಬದುಕನ್ನೇ ನಿರ್ನಾಮಗೊಳಿಸಿತು. ಎಲ್ಲಿ ಹೋದ್ರೂ ಬಂದು ಕಿರುಕುಳ ಕೊಡುತ್ತಿದ್ದ, ಅಂಗಡಿ ಸಾಮಾನೆಲ್ಲಾ ಸುಟ್ಟು ಹಾಕಿದ. ಅವನಿಂದ ತುಂಬಾ ದೂರ ಹೋಗಿ, ಅಲ್ಲಿ ಬಾಡಿಗೆ ಮನೆ ತೆಗೆದುಕೊಂಡು, ಸಣ್ಣದಾಗಿ ವ್ಯಾಪಾರ ಶುರುಮಾಡಿದೆ. ಒಂಟಿ ಹೆಣ್ಣೆಂದು ಅರಿತ ರೌಡಿಗಳು ಛೇಡಿಸಲಾರಂಭಿಸಿ, ಕಿರುಕುಳ ಕೊಡಲಾರಂಭಿಸಿದರು.
ತವರಿಗೆ ಹೋಗೋಣ ಅಂದರೆ, ನನ್ನ ತಾಯಿ ತಂದೆ ತೀರಿಹೋಗಿದ್ದಾರೆ, ಅಣ್ಣನ ಮದುವೆಯಾಗಿದೆ. ಪರಿಸ್ಥಿತಿ ಹೀಗಿರುವಾಗ, ಸ್ವತಂತ್ರವಾಗಿ ಬದುಕುವ ಛಲ ಇದ್ದರೂ, ನನ್ನ ಗಂಡನಂತಹ ಘಾತಕರಿಂದ, ಒಂಟಿ ಹೆಣ್ಣನ್ನು ಸಮಾಜ ನೋಡುತ್ತಿರುವ ರೀತಿ, ಈ ಎರಡರ ನಡುವೆ ನನಗೆ ಹಾಗೂ ಮಕ್ಕಳಿಗೆ ಸಾವೊಂದೇ ಪರಿಹಾರ ಅನ್ನೋದು ನನ್ನ ಮನಸ್ಸಿಗೆ ಬಂದಿರುವ ಏಕೈಕ ನಿರ್ಧಾರ. 
ಹೇಳಿ, ನಾನು ಶಿವಾನಿ, ಬದುಕನ್ನು ಎದುರಿಸಲೋ ಅಥವಾ ಅತ್ಮಹತ್ಯೆ ಮಾಡಿಕೊಳ್ಳಲೊ? ನಿಮ್ಮ ಉತ್ತರವೇನು????????
ಪ್ರಸ್ತುತ ಪಡಿಸಿರುವವರು - ವಿ ಜಮುನಾ
ಕೃಪೆ : ಅಪೂರ್ವ ಕಣ್ಮಣಿ ಮಾಸಪತ್ರಿಕೆ 

ಪುಸ್ತಕಪ್ರೀತಿ - ರಂಗಣ್ಣನ ಕನಸಿನ ದಿನಗಳು


       


ಎಂ. ಆರ್ ಶ್ರೀನಿವಾಸಮೂರ್ತಿಯವರ ‘ರಂಗಣ್ಣನ ಕನಸಿನ ದಿನಗಳು’- ಹಾಸ್ಯಪ್ರಂಗಗಳನ್ನು ಒಳಗೊಂಡ ಪುಸ್ತಕ ಮೊದಲ ಮುದ್ರಣವಾದದ್ದು ೧೯೪೯ರಲ್ಲಿ. ಅಂದಿನ ಪರಿಸ್ಥಿತಿಗಳಿಗನುಗುಣವಾಗಿ ಕಥೆ ಸಾಗುತ್ತದೆ. ಹಾಗಾಗಿ ಪುಸ್ತಕ ನಮ್ಮನ್ನು ೬೦ ದಶಕಗಳ ಹಿಂದೆ ಕೊಂಡೊಯ್ಯುತ್ತದೆ. ಅಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಥಿತಿಗತಿಗಳನ್ನು ಕೆಲ ಹಾಸ್ಯ ಪ್ರಸಂಗಗಳ ಮೂಲಕ ನಮ್ಮ ಮುಂದೆ ತೆರೆದಿಟ್ಟಿದ್ದಾರೆ. 
     ರಂಗಣ್ಣನೇ ಕಥಾನಾಯಕ. ರಂಗಣ್ಣನಿಗೆ ಪ್ರಾಥಮಿಕ ಶಾಲಾ ಶಿಕ್ಷಕನ ಹುದ್ದೆಯಿಂದ ಇನ್ಸ್‍ಪೆಕ್ಟರ್ ಹುದ್ದೆಯ ಬಡ್ತಿಯೊಂದಿಗೆ ಜನಾರ್ದನಪುರಕ್ಕೆ ವರ್ಗವಾಗುತ್ತದೆ. ತನ್ನ ರೇಂಜಿಗೆ ಬರುವ ಎಲ್ಲ ಹಳ್ಳಿಯ ಶಾಲೆಗಳನ್ನು -ಶಿಕ್ಷಕರನ್ನು ಸುವ್ಯವಸ್ಥಿತವಾಗಿ ರೂಪಿಸಬೇಕೆಂಬುದೇ ರಂಗಣ್ಣನ ಕನಸು. ತನ್ನ ಈ ಕನಸನ್ನು ನನಸಾಗಿಸಲು ರಂಗಣ್ಣ ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತಾನೆ. ರೇಂಜಿನಲ್ಲಿರುವ ಪ್ರತಿಯೊಂದು ಹಳ್ಳಿಯ ಶಾಲೆಗಳಿಗೆ ಭೇಟಿ ನೀಡಿ ಶಾಲೆಯ ಹಾಗೂ ಶಿಕ್ಷಕರ ಕುಂದುಕೊರತೆಗಳನ್ನು ವಿಚಾರಿಸಿ ಬಗೆಹರಿಸುತ್ತಿರುತ್ತಾನೆ. ಹೀಗೆ ತಾನು ಭೇಟಿ ನೀಡಿದ ಹಳ್ಳಿಗಳ ಶಾಲೆಗಳಲ್ಲಿ ತನಗಾದ ಅನುಭವಗಳನ್ನು ರಂಗಣ್ಣನೇ ನಮಗೆ ಹೇಳುವಂತೆ ಲೇಖಕರು ಚಿತ್ರಿಸಿದ್ದಾರೆ. 
     ನೂರಾರು ಕನಸುಗಳನ್ನು ಹೊತ್ತು ಇನ್ಸ್ಪೆಕ್ಟರ್‍ಗಿರಿಗೆ ಬಂದ ರಂಗಣ್ಣ ಮೊದಲು ಭೇಟಿ ನೀಡಿದ್ದು ಕಂಬದಹಳ್ಳಿಗೆ. ಬೈಸಿಕಲ್ ಏರಿ ಅತಿ ಉತ್ಸಾಹದಿಂದ ರಂಗಣ್ಣ ಹಳ್ಳಿಯ ರಸ್ತೆಯ ದುರವಸ್ಥೆಯಿಂದಾಗಿ ಎದ್ದು ಬಿದ್ದು ಶಾಲೆಗೆ ತಲುಪಿದನು. ಆದರೆ ಅಲ್ಲಿ ಮಕ್ಕಳಿದ್ದರೂ ಶಿಕ್ಷಕರ ಗೈರುಹಾಜರಿಯಿಂದಾಗಿ ಪೆಚ್ಚುಮೋರೆ ಹಾಕಿಕೊಂಡು ತನ್ನ ಉತ್ಸಾಹ ಕಳೆದುಕೊಳ್ಳುತ್ತಾನೆ. ಆದರೂ ಧೃತಿಗೆಡದೆ ತಾನು ಕಂಡ ಕನಸನ್ನು ನನಸಾಗಿಸಲು ಮುಂದೆ ಹೆಜ್ಜೆ ಹಾಕುತ್ತಾನೆ. ಹೀಗೆ ಇನ್ಸ್‍ಪೆಕ್ಟರ್ ರಂಗಣ್ಣ 4 ತಿಂಗಳಲ್ಲಿ ಭೇಟಿ ನೀಡಿದ ಶಾಲೆಗಳಿಗೆ ಪ್ರತ್ಯೇಕ ಕಟ್ಟಡಗಳು ಇರುವುದಿಲ್ಲ. ಬಹುತೇಕವಾಗಿ ಹರಕಲು ಗುಡಿಸಲುಗಳಲ್ಲಿ, ಮರದ ಕೆಳಗೆ, ಗುಡಿಗಳಲ್ಲಿ ನಡೆಯುತಿತ್ತು. ಇದು ನಮ್ಮ ನಾಡಿನಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ‘ಮಹತ್ವ’ವನ್ನು ಎತ್ತಿ ತೋರಿಸುವಂತಿದೆ. ಇದು ಶಾಲೆಗಳ ಕಥೆಯಾದರೆ, ಇನ್ನು ಶಿಕ್ಷಕರ ಕಥೆ ಹೇಳತೀರದು. ಆಗಸ ಎಂಬ ಪದವನ್ನು ಅಗಸ ಎಂದು ಮಕ್ಕಳಿಗೆ ಬೋಧನೆ ಮಾಡುವ ಮೇಷ್ಟ್ರು ರಂಗಪ್ಪನಂತಹವರು ಒಂದು ಕಡೆಯಾದರೆ, ಮತ್ತೊಂದು ಕಡೆ ತಮ್ಮ ಅತ್ಯುತ್ತಮ ಜ್ಞಾನವನ್ನು ಮಕ್ಕಳಿಗೆ ಧಾರೆಯೆರೆಯುವ ಶಿಕ್ಷಕರು. 
     ಸರ್ಕಾರ ಶಿಕ್ಷಕರಿಗೆ ನೀಡುತ್ತಿದ್ದ ಸಂಬಳ ಎಷ್ಟಿತ್ತೆಂದರೆ ಜನ ಮೇಷ್ಟ್ರುಗಳನ್ನು ‘ಬಡ ಮೇಷ್ಟ್ರು’ ಎಂದೇ ಕರೆಯುತ್ತಿದ್ದರು. ಕೆಲ ಮೇಷ್ಟ್ರುಗಳಂತೂ ತಮ್ಮ ತಮ್ಮ ಕುಲಕಸುಬುಗಳನ್ನು ರೂಢಿಸಿಕೊಂಡು ಸಂಸಾರವನ್ನು ತೂಗಿಸುತ್ತಿದ್ದರು. ಮೇಷ್ಟ್ರು ಮುನಿಸ್ವಾಮಿಯೆಂಬಾತ ಸಂಬಳ ಸಾಲದೆ ಶಾಲಾ ಕಟ್ಟಡದ ಒಂದು ಮೂಲೆಯಲ್ಲಿ ಕ್ಷೌರಿಕನ ವೃತ್ತಿಯನ್ನು ನಡೆಸುತ್ತಿರುತ್ತಾನೆ. ಇದನ್ನು ಕಂಡು ಹೌಹಾರುತ್ತಾನೆ ರಂಗಣ್ಣ. ಮೇಷ್ಟ್ರು ಮುನಿಸ್ವಾಮಿಯ ಕಷ್ಟಕಾರ್ಪಣ್ಯಗಳನ್ನು ಕೇಳಿ, ಜೊತೆಗೆ ಶಿಕ್ಷಕ ವೃತ್ತಿಗೆ ದ್ರೋಹ ಮಾಡದೆ ತನ್ನ ಕ್ಷೌರಿಕ ವೃತ್ತಿಯನ್ನು ನಡೆಸುತ್ತಿದ್ದುದ್ದರಿಂದ ಆತನನ್ನು ಕ್ಷಮಿಸುತ್ತಾನೆ. ಅಂತಃಕರಣವುಳ್ಳ ರಂಗಣ್ಣ ತಾನೂ ಕ್ಷೌರ ಮಾಡಿಸಿಕೊಂಡು ಹಣವನ್ನು ಕೊಟ್ಟು, ಅಲ್ಲಿಂದ ಹೊರಡುತ್ತಾನೆ. ಆದರೆ ಶಾಲೆಯ ಕಟ್ಟಡದಲ್ಲಾಗಲಿ, ಶಾಲಾ ಅವಧಿಯಲ್ಲಾಗಲೀ ಅಲ್ಲದೆ ಬೇರೆ ಕಡೆ ತನ್ನ ವೃತ್ತಿಯನ್ನು ಮುಂದುವರೆಸುವಂತೆ ಸಲಹೆ ನೀಡುತ್ತಾನೆ. ಈ ಸನ್ನಿವೇಶವನ್ನು ಓದುವಾಗ ತುಸು ಹಾಸ್ಯವೆನಿಸಿದರೂ ಲೇಖಕರು ಆಗಿನ ಬಡ ಶಿಕ್ಷಕರ ವಾಸ್ತವದ ಬದುಕನ್ನು ತೆರೆದಿಟ್ಟಿದ್ದಾರೆ. ಇದೊಂದೇ ಅಲ್ಲ ವ್ಯವಸಾಯದ ಜೊತೆಗೆ ಶಿಕ್ಷಕ ವೃತ್ತಿಯನ್ನು ನಿಭಾಯಿಸುತ್ತಿದ್ದ ಮೇಷ್ಟ್ರು ವೆಂಕಟಸುಬ್ಬಯ್ಯ - ಹೀಗೆ ಕೆಲವು ಘಟನೆಗಳು ಹಾಸ್ಯದ ಹೊನಲನ್ನೇ ಹರಿಸುತ್ತವೆ. ಆದರೆ ಹಾಸ್ಯವನ್ನು ಪಕ್ಕಕ್ಕಿಟ್ಟು ಕ್ಷಣ ಹೊತ್ತು ಯೋಚಿಸಿದಾಗ ಅದರ ಗಾಂಭೀರ್ಯ ಅರ್ಥವಾಗಿ ಹೃದಯಸ್ಪರ್ಶಿಯಾಗುತ್ತವೆ. 
     ಒಮ್ಮೆ ಸುದ್ದೇನಹಳ್ಳಿಗೆ ಭೇm ಇತ್ತಾಗ ಅಲ್ಲಿನ ಕೆಂಚಪ್ಪ ಮೇಷ್ಟ್ರು ಬೋರ್ಡ್ ಒರೆಸುವ ಬಟ್ಟೆಯನ್ನು ಇಟ್ಟಿರುವುದಿಲ್ಲ. ತನ್ನ ರುಮಾಲನ್ನೇ ತೆಗೆದು ಬೋರ್ಡ್ ಒರೆಸುವುದನ್ನು ನೋಡಿ ರಂಗಣ್ಣನಿಗೆ ತೀರಾ ಬೇಸರವಾಗುತ್ತದೆ. ಶಾಲೆಗೆ ನೀಡುವ ಕಡಿಮೆ ಅನುದಾನದಿಂದ ಏನು ತಾನೇ ಮಾಡಲು ಸಾಧ್ಯವೆಂದು ಶಾಲಾ ಖರ್ಚುವೆಚ್ಚದ ಪುಸ್ತಕವನ್ನು ನೋಡುತ್ತಾನೆ. ಅದರಲ್ಲಿ ಬೋರ್ಡ್ ಒರೆಸುವ ಬಟ್ಟೆಗಾಗಿ ಹಣ ಖರ್ಚಾಗಿರುವುದನ್ನು ನೋಡಿ ಕೋಪದಿಂದ ರಂಗಣ್ಣ ಮೇಷ್ಟ್ರನ್ನು ಪ್ರಶ್ನಿಸುತ್ತಾನೆ. ಕೆಂಚಪ್ಪ ಮೇಜಿನ ಮೇಲಿನ ರುಮಾಲನ್ನು ಎತ್ತಿಕೊಂಡು ಇದೇ ಸ್ವಾಮಿ ಆ ಬಟ್ಟೆ ಎನ್ನುತ್ತಾನೆ. ಪ್ರಾಮಾಣಿಕನಾದ ಕೆಂಚಪ್ಪ ‘ಬರುವ ಅತಿ ಕಡಿಮೆ ಸಂಬಳದಿಂದಾಗಿ, ರುಮಾಲನ್ನು ಕೊಂಡುಕೊಳ್ಳಲಾಗದೆ ಬೋರ್ಡ್ ಒರೆಸುವ ಬಟ್ಟೆಯನ್ನೇ ರುಮಾಲಾಗಿ ಬಳಸುತ್ತಿದ್ದೇನೆ, ತಪ್ಪು ಲೆಕ್ಕ ನೀಡಿಲ್ಲ ಸ್ವಾಮಿ’ ಎನ್ನುತ್ತಾನೆ. ರುಮಾಲಿಲ್ಲದೆ ಇದ್ದರೆ ಮೇಷ್ಟ್ರುಗಳಿಗೆ ದಂಡ ವಿಧಿಸುವ ಪದ್ಧತಿ ಇದ್ದುದ್ದರಿಂದ ರಂಗಣ್ಣ ‘ಏನ್ರಿ, ಈಗ ರುಮಾಲಿಲ್ಲದೆ ನಿಂತಿದ್ದೀರಲ್ಲ’ ಎಂದ ತಕ್ಷಣವೇ ಕೆಂಚಪ್ಪ ಆ ಸುಣ್ಣ ಬಳಿದ ಬಟ್ಟೆಯನ್ನೇ ತಲೆಗೆ ಸೊಟ್ಟಸೊಟ್ಟಾಗಿ ಸುತ್ತಿಕೊಂಡು, ರುಮಾಲಿನ ಒಂದು ಕೊನೆ ಸಡಿಲವಾಗಿ ಬಿಚ್ಚಿಕೊಂಡಿದ್ದನ್ನೂ ಗಮನಿಸದೆ ಕೈಮುಗಿದು ನಿಲ್ಲುತ್ತಾನೆ. ರಂಗಣ್ಣನಿಗೆ ದುಃಖವಾಗುತ್ತದೆ, ತನ್ನ ಶಿಕ್ಷಕರ ಬಡತನ ಎಂದಿಗೆ ದೂರವಾಗುತ್ತದೋ ಎಂದು ಚಿಂತಿಸುತ್ತಾನೆ. ಇದುವರೆಗೂ ತನ್ನ ಅನುಭವಗಳನ್ನು ಹೇಳಿಕೊಂಡು ನಗಿಸುತ್ತಿದ್ದ ರಂಗಣ್ಣ ಈ ಘಟನೆಯಲ್ಲಿ ತಾನೂ ಅತ್ತು ನಮ್ಮ ಕಣ್ಣುಗಳನ್ನೂ ತೇವಗೊಳಿಸುತ್ತಾನೆ.
     ಶಾಲೆಗಳ ಅಭಿವೃದ್ಧಿಯಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲ, ಹಳ್ಳಿಯವರ ಪಾತ್ರ ಎಷ್ಟರ ಮಟ್ಟಿಗೆ ಇರಬೇಕೆಂಬುದನ್ನೂ ಸಹ ಲೇಖಕರು ತಿಳಿಸಿದ್ದಾರೆ. ಇನ್ಸ್‍ಪೆಕ್ಟರ್ ರಂಗಣ್ಣನ ನೇತೃತ್ವದಲ್ಲಿ ಪ್ರತಿ ತಿಂಗಳು ಹಳ್ಳಿಯವರ ಆಹ್ವಾನದ ಮೇರೆಗೆ ಶಿಕ್ಷಕರ ಸಭೆ ನಡೆಯುತ್ತಿತ್ತು. ಹಳ್ಳಿಯ ಮುಖಂಡರೂ ಸಹ ಈ ಸಭೆಯಲ್ಲಿ ಭಾಗವಹಿಸಿ ಶಾಲೆಯ ಅಭಿವೃದ್ಧಿಗೆ ತಮ್ಮಿಂದಾಗುವ ಸಹಾಯ-ಸಹಕಾರ ನೀಡುತ್ತಿದ್ದರು. ಹಳ್ಳಿಯ ಜನ ಶಿಕ್ಷಕರ ನಡುವೆ ಒಳ್ಳೆಯ ಸ್ನೇಹ ಸಂಬಂಧ ಇದ್ದಾಗ ಮಾತ್ರ ಶಾಲೆ ಹಾಗೂ ಮಕ್ಕಳು ಎಲ್ಲ ರೀತಿಯಲ್ಲೂ ಮುಂದುವರೆಯಲು ಸಾಧ್ಯ ಎಂದು ರಂಗಣ್ಣ ಸಲಹೆ ಸೂಚನೆಗಳನ್ನು ನೀಡುತ್ತಿದ್ದನು. 
     ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಮುಖಂಡರ ಪ್ರವೇಶ ಹಾಗೂ ಕುಮ್ಮಕ್ಕಿನಿಂದಾಗಿ ಕೆಲ ಶಿಕ್ಷಕರು ಗೂಂಡಾಗಳಂತೆ ವರ್ತಿಸುತ್ತಿದ್ದುದ್ದನ್ನು, ಅಂತಹವರಿಗೆ ನಮ್ಮ ರಂಗಣ್ಣ ಸರಿಯಾದ ಪಾಠ ಕಲಿಸಿ, ಒಳ್ಳೆಯ ದಾರಿಗೆ ತರುವ ಸನ್ನಿವೇಶ ಗಳು, ಹೀಗೆ ಶಿಕ್ಷಣ, ಹಳ್ಳಿಯ ಜನ, ರಾಜಕೀಂiÀi ಮುಖಂಡರು, ಗೂಂಡಾಗಿರಿ, ಬಡ ಶಿಕ್ಷಕರ ವಾಸ್ತವ ಬದುಕಿನ ತೊಳಲಾಟ, ಊಟದ ಮಧ್ಯೆ ಉಪ್ಪಿನಕಾಯಿ ಇದ್ದಂತೆ ರಂಗಣ್ಣನ ಸಾಂಸಾರಿಕ ಜೀವನದ ಚಿತ್ರಣ - ಹೀಗೆ ಎಲ್ಲವೂ ಈ ಪುಸ್ತಕದಲ್ಲಿ ಅಡಗಿದೆ. 
     ಇನ್ನು ನಮ್ಮ ರಂಗಣ್ಣನ ಬಗ್ಗೆ ಹೇಳುವುದಾದರೆ, ಬಹಳ ಪ್ರಾಮಾಣಿಕ ಶಿಕ್ಷಕ ಹಾಗೂ ಅಧಿಕಾರಿ. ತನ್ನ ಕೈಕೆಳಗಿನ ಶಿಕ್ಷಕರು ಎಷ್ಟೇ ತಪ್ಪು ಮಾಡಿದರೂ ಅವರ ಮೇಲೆ ರೇಗಾಡದೆ, ಕೋಪಿಸಿಕೊಂಡು ನೋಟಿಸ್ ಕೊಡದೆ, ದಂಡ ಹಾಕದೆ ಸ್ನೇಹಪರತೆಯಿಂದ ಅವರ ತಪ್ಪುಗಳನ್ನು ಮನ್ನಿಸಿ, ತಿದ್ದಿ, ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡುತ್ತಿರುತ್ತಾನೆ.
     ಅಂತೂ ರಂಗಣ್ಣ ತನ್ನ ಕನಸಿನಂತೆ ಎಲ್ಲಾ ಶಾಲೆಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಪರಿಹರಿಸಿ ಮಾದರಿ ಇನ್ಸ್‍ಪೆಕ್ಟರ್ ಎನಿಸಿಕೊಂಡು ನಮ್ಮೆಲ್ಲರ ಶಹಬಾಶ್ ಗಿರಿ ಗಿಟ್ಟಿಸಿಕೊಳ್ಳುತ್ತಾನೆ. ಕಥೆಯ ಹಾಸ್ಯ ಪ್ರಸಂಗಗಳಲ್ಲಿ ಕೆಲವು ಕಡೆ ಆಡಳಿತ ಭಾಷೆಯಲ್ಲಿ ಬಳಸುವ ಪದಗಳು ಸೇರ್ಪಡೆಯಾಗಿದ್ದರೂ, ಹಳ್ಳಿಯ ಸೊಗಡಿನ ಪದಗಳು, ಜನರ ಆಡುಭಾಷೆಯ ಪದಗಳೂ ಇರುವುದರಿಂದ ಎಲ್ಲೂ ಬೇಸರವಾಗದೆ ಕಥೆ ಓದಿಸಿಕೊಂಡು ಹೋಗುತ್ತದೆ. ಪ್ರಾಥಾಮಿಕ ಶಾಲಾ ಶಿಕ್ಷಕರ ಸ್ಥಿತಿಗತಿಗಳನ್ನು ಚಿತ್ರಿಸುವಲ್ಲಿ ಲೇಖಕರು ನಿಜಕ್ಕೂ ಯಶಸ್ವಿಯಾಗಿದ್ದಾರೆ. ಮತ್ತಿನ್ನೇಕೆ ತಡ. ಈಗಲೇ ಹತ್ತಿರದ ಪುಸ್ತಕ ಭಂಡಾರಕ್ಕೆ ಭೇಟಿ ನೀಡಿ ಪುಸ್ತಕವನ್ನು ಕೊಂಡು ತನ್ನಿ ಅಥವಾ ಗ್ರಂಥಾಲಯದಿಂದ ತಂದು ಓದಿ ನೀವೂ ಅದರ ರುಚಿಯನ್ನು ಆಸ್ವಾದಿಸಿ. 
ಎಂ ಆರ್ ಶ್ರೀನಿವಾಸಮೂರ್ತಿ 

     ಇಂದಿನ ದಿನಗಳಲ್ಲಿ ಶಿಕ್ಷಕರ ಪರಿಸ್ಥಿತಿ ಬದಲಾಗಿದೆ, ಅವರಿಗೆ ಒಳ್ಳೆಯ ಸಂಬಳ ಬರುತ್ತಿದೆ. ಆದರೆ ರಂಗಣ್ಣ ಕಂಡ ಕನಸು ಮಾತ್ರ ನನಸಾಗಿಲ್ಲ. ಶಾಲೆಗಳಿಗೆ ಉತ್ತಮ ಕಟ್ಟಡಗಳೇನೋ ಇವೆ ಆದರೆ ಶಿಕ್ಷಣ ಮಾತ್ರ ಇನ್ನೂ ಸುಧಾರಿಸಿಲ್ಲ. ಮುಖ್ಯವಾಗಿ ಪ್ರತಿಯೊಬ್ಬ ಶಿಕ್ಷಕ/ಶಿಕ್ಷಕಿ ಓದಲೇಬೇಕಾದ ಪುಸ್ತಕವಿದು. ಪ್ರತಿಯೊಬ್ಬ ಶಿಕ್ಷಕ ರಂಗಣ್ಣನಂತಾದರೇ ಭಾರತದ ಶಿಕ್ಷಣ ಅತ್ಯುನ್ನತ ಸ್ಥಿತಿಯನ್ನು ತಲುಪುವುದರಲ್ಲಿ ಯಾವುದೇ ಸಂಶಯವಿಲ್ಲ. 
- ದೀಪಶ್ರೀ ಜೆ