Pages

ಮಾರ್ಚ್ ಆವೃತ್ತಿ


ಮಾರ್ಚ್ ತಿಂಗಳು ವಿಶ್ವದ ಮತ್ತು ಭಾರತದ ಇತಿಹಾಸದಲ್ಲಿ ಪ್ರಮುಖವಾದ ತಿಂಗಳು.
ಮಾರ್ಚ್ 8 – ಅಂತರರಾಷ್ಟ್ರೀಯ ಮಹಿಳಾ ದಿನ. ಮಹಿಳಾ ಹೋರಾಟ ಆರಂಭವಾಗಿ ಸುಮಾರು 150 ವರ್ಷಗಳು ದಾಟಿದ್ದರೂ ಸಹ, ಅಂತರರಾಷ್ಟ್ರೀಯ ಮಹಿಳಾ ದಿನ ಆರಂಭವಾಗಿ 115 ವರ್ಷಗಳು ಕಳೆದಿದ್ದರೂ, ಮಹಿಳೆಯರ ಹೋರಾಟವಿನ್ನೂ ಪೂರ್ಣಗೊಂಡಿಲ್ಲ, ಇನ್ನೂ ವಿಮೋಚನೆ ದೊರೆತಿಲ್ಲ. 8 ಘಂಟೆಗಳ ದುಡಿಯುವ ಹಕ್ಕಿಗಾಗಿ ಪ್ರಾರಂಭವಾದ ಹೋರಾಟ, ಇನ್ನೂ ಅದನ್ನು ಪಡೆಯುವುದರಲ್ಲಿ ಯಶಸ್ವಿಯಾಗಿಲ್ಲ. ಮತ ಚಲಾಯಿಸುವ ಹಕ್ಕು ದೊರೆತಿದ್ದರೂ, ಅದು ಔಪಚಾರಿಕವಾಗಿಯೇ ಉಳಿದಿದ್ದು, ನಿಜಕ್ಕೂ ಮಹಿಳೆಯರು ನಿರ್ಧಾರಗಳನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ಪಡೆದಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಗಗನಕುಸುಮವಾಗಿಯೇ ಉಳಿದಿದೆ. ಹಳೆಯ ಸಮಸ್ಯೆಗಳೊಂದಿಗೆ ಹೊಸ ಸಮಸ್ಯೆಗಳು ಸೇರಿಕೊಂಡಿವೆ. ಲೈಂಗಿಕ ದೌರ್ಜನ್ಯಗಳು, ಕೌಟುಂಬಿಕ ಹಿಂಸೆಗಳು, ಸಮಾನತೆ - ಸ್ವಾತಂತ್ರ್ಯರಹಿತತೆ, ದೇಹ ವ್ಯಾಪಾರ - ಹೀಗೆ ಹತ್ತು ಹಲವಾರು ಸಮಸ್ಯೆಗಳು ಮಹಿಳೆಯರನ್ನು ಜರ್ಜರಿತಗೊಳಿಸುತ್ತಿವೆ. ಒಂದೆಡೆ ಈ ರೀತಿಯ ಕತ್ತಲು ಕವಿದಿದೆ. ನಿಜವಾದ ಸ್ತ್ರೀ ಸಬಲೀಕರಣ ಇನ್ನೂ ದೂರದ ಮಾತಾಗಿ ಉಳಿದಿದೆ.
ಆದರೆ ಹತಾಶರಾಗಬೇಕಾದ ಅವಶ್ಯಕತೆಯೇನಿಲ್ಲ. ವಿಶ್ವದಾದ್ಯಂತ ಮಹಿಳಾ ಹೋರಾಟಗಳು ನಿರಂತರವಾಗಿ ಬೆಳೆಯುತ್ತಾ, ಸಾಗುತ್ತಿವೆ. ವಿಶ್ವಸಂಸ್ಥೆಯ ಈ ಬಾರಿಯ ಘೋಷಣೆ “ಸಮಾನತೆಗಾಗಿ ಕಂಕಣ” ಎಲ್ಲಾ ದೇಶಗಳ ಮಹಿಳೆಯರ ಬೆಂಬಲವನ್ನು ಪಡೆದಿದೆ. ಸ್ತ್ರೀಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಇರುವಿಕೆಯನ್ನು ಸ್ಥಾಪಿಸಲು ಹೋರಾಟ ನಡೆಸಿದ್ದಾರೆ. ಅಕ್ಷರಸ್ಥ, ಅನಕ್ಷರಸ್ಥ – ಎರಡೂ ರೀತಿಯ ಮಹಿಳೆಯರಲ್ಲಿ ಅರಿವು ಮೂಡುತ್ತಿದೆ. ಈ ಹೋರಾಟಗಳ ಸಾರವನ್ನು ಎಲ್ಲರ ಮುಂದಿಡಬೇಕು. ಈ ದಿನ ಕೇವಲ ಸಡಗರ, ಸಂಭ್ರಮದ ಒಂದು ದಿನವಾಗಿ ಉಳಿಯದಂತೆ ನೋಡಿಕೊಳ್ಳಬೇಕು. ಎಲ್ಲಾ ಮಹಿಳೆಯರನ್ನೂ ಎರಡು ರೀತಿಯ ಹೋರಾಟಗಳಿಗೆ ಸಜ್ಜುಗೊಳಿಸಬೇಕು.ಒಂದು, ತನ್ನ ಹಕ್ಕುಗಳಿಗಾಗಿ ಹೋರಾಟ, ತನ್ನ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ. ಇನ್ನೊಂದೆಡೆ, ಜನಸಾಮಾನ್ಯರು ಎದುರಿಸುತ್ತಿರುವ ಬೆಲೆಏರಿಕೆ, ಬಡತನ, ನಿರುದ್ಯೋಗದ ವಿರುದ್ಧ, ಕೋಮುವಾದಿ, ಜಾತಿವಾದಿ, ಭಾಷಾವಾದಿ ಗಲಭೆಗಳನ್ನೆದುರಿಸಿ, ಮೂಲಭೂತ ಅವಶ್ಯಕತೆಗಳಿಗಾಗಿ ಇತರ ಸಂಘಗಳೊಡಗೂಡಿ ಹೋರಾಟ ನಡೆಸಬೇಕಾಗಿದೆ. ಆಗ ಮಾತ್ರವೇ ಮಾರ್ಚ್ 8ರ ಆಚರಣೆ ಅರ್ಥಪೂರ್ಣವಾಗುತ್ತದೆ.

ಮುಕ್ತಿಯ ಮಂದಿರ ಸೋಪಾನದಿ
ಬಲಿಯಾದ ಜೀವಗಳೆನಿತೊ
ಬರೆದಿದೆ ಕಣ್ಣೀರಲಿ! (ಕಾಜಿ ನಜ್ರುಲ್ ಇಸ್ಲಾಂ)
ಮಾರ್ಚ್ 23 – ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್ ಸಿಂಗ್, ಸುಖದೇವ್, ರಾಜಗುರುರವರನ್ನು ಬ್ರಿಟಿಷರು ಗಲ್ಲಿಗೇರಿಸಿದ ದಿನ. ಕೇವಲ 21-22 ವರ್ಷದ ಯುವಕರು ಅಮೂಲ್ಯ ಗುರಿಯೊಂದನ್ನಿಟ್ಟುಕೊಂಡು, ಎಲ್ಲವನ್ನೂ - ಶಿಕ್ಷಣ, ಕುಟುಂಬ, ಪ್ರೀತಿ, ಪ್ರೇಮ ಎಲ್ಲವನ್ನೂ – ತ್ಯಜಿಸಿ, ಕೊನೆಗೆ ತಮ್ಮ ಜೀವವು ಸಹ ಸ್ವಾತಂತ್ರ್ಯದಂತಹ ಉದಾತ್ತ ಧ್ಯೇಯದೆದುರಿನಲ್ಲಿ ಕ್ಷುಲ್ಲಕ ಎಂಬಂತೆ ಬಲಿ ಕೊಡಲು ಹೊರಟಿದ್ದು ನಮ್ಮ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಚರಿತೆ. 1931ರ ಮಾರ್ಚ್ 31ರಂದು ಗಲ್ಲಿಗೇರಿಸಿದ ನಂತರ ಈ ಮೂವರು ಹುತಾತ್ಮರ ಹೆಸರುಗಳು ಮನೆಮಾತಾಯಿತು. ನಮ್ಮ ದೇಶದ ಜನಮನಗಳಲ್ಲಿ ಭದ್ರವಾಗಿ ಸ್ಥಾಪಿಸಲ್ಪಟ್ಟಿತು. ಅದಾದ ನಂತರ ಲಕ್ಷಾಂತರ ಯುವಜನರು ಸ್ವಾತಂತ್ರ್ಯ ಸಂಗ್ರಾಮದಲಿ ಧುಮುಕಿದರು. 
ಇಂದು ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಉಗ್ರಗಾಮಿಗಳೆಂದು ಕರೆಯುತ್ತಾ, ಅವರ ನೆನಪನ್ನು ಅಳಿಸಿಹಾಕಲೆತ್ನಿಸುತ್ತಿವೆ. ಅವರ ವಿಚಾರಧಾರೆಯನ್ನು ಪಕ್ಕಕ್ಕೆ ಸರಿಸಲೆತ್ನಿಸುತ್ತಿವೆ. ಆದರೆ ಈ ದೇಶದ ಜನತೆ ಅವರನ್ನು ಮರೆಯಬಾರದು. ಒಂದು ದಿನ ಅವರ ಫೋಟೋಗೆ ಹಾರವನ್ನು ಹಾಕಿ, ಮಂಗಳಾರತಿ ಮಾಡಿ ಮರೆಯುವಂತಾಗಬಾರದು. ಅವರ ಹೋರಾಟಗಳು, ವಿಚಾರಗಳು ಜನತೆ ಮುಂದೆ ಬರಬೇಕು. ಅವರ ನೆನಪುಗಳು ನಮ್ಮ ಸ್ಮೃತಿಪಟಲದಿಂದ ಮರೆಯುವಂತಾಗಬಾರದು. ಅವರ ಉದಾತ್ತ ಭಾರತದ ಕನಸುಗಳನ್ನು ನನಸಾಗಿಸಬೇಕು. ಎಲ್ಲರೂ ಅದರ ಬಗ್ಗೆ ಗಂಭೀರ ಅಧ್ಯಯನ ಮಾಡಿ, ಆ ಹೋರಾಟಗಳನ್ನು ಮುಂದುವರೆಸಬೇಕು. ಅದಕ್ಕೆ ನಾವು ಕಂಕಣಬದ್ಧರಾಗಬೇಕು. 

ನಮ್ಮ "ಬಳಪ"ದ ಮಾರ್ಚ್ ಆವೃತ್ತಿಯನ್ನು ಈ ಪ್ರಾಮುಖ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಹೊರತರಲಾಗಿದೆ.



ಮಾರ್ಚ್  ಆವೃತ್ತಿಯ ವಿಷಯ ಸೂಚಿ -



ಮಹಿಳಾ ದಿನ ವಿಶೇಷ: "ಕ್ಲಾರಾ ಜೆಟ್ಕಿನ್"

-ಕೋಮಲ ಬಿ


ಸ್ವಾತಂತ್ರ್ಯ ಸಂಗ್ರಾಮ: "ಭಗತ್ ಸಿಂಗ್ ರ ಪತ್ರಗಳು"

- ಡಾ|| ಸುಧಾ ಜಿ


ಕವನ: "ಅದಮ್ಯ ಚೇತನಕ್ಕೆ ನಮನ"

- ಉಷಾಗಂಗೆ ವಿ


ಪ್ರಚಲಿತ: "ಕನಸುಗಳ ಶಿಲೆ ಬಲಿಯಾದಾಗ"

- ಶೀಬಾ


ವ್ಯಕ್ತಿ ಪರಿಚಯ: "ಆನಂದಿಬಾಯಿ ಜೋಷಿ"

- ಡಾ|| ಸುಧಾ ಜಿ


ಪುಸ್ತಕ ಪ್ರೀತಿ: "ಪ್ರವಾದಿ"

- ಮಂಜುನಾಥ್ ಎ ಎನ್


ವಿನೋದ: "ಮದುವೆ ಸಿದ್ಧತೆ"

- ಡಾ|| ಸುಧಾ ಜಿ


ಅನುವಾದ: "ಅಶಾಕಿರಣ"

- ರೂಪಶ್ರೀ


ಪ್ರವಾಸ ಕಥನ: "ವಯನಾಡ್ ಪ್ರವಾಸ"

- ನಿಶಾ ಕೆೆ ಎನ್


ನಾ ಕಂಡಂತೆ: "ಮುದ್ದಿಸೋ ದೈವವೇ ಅಳುವಾಗ...."

- ಮಂಜುನಾಥ್ ಎ ಎನ್

ಕಾಮೆಂಟ್‌ಗಳಿಲ್ಲ: