Anandibaai Joshi (ಎಡ - ಭಾರತ) Kei Okami (ಮಧ್ಯೆ - ಜಪಾನ್) and Tabat Islambooly (ಬಲ - ಸಿರಿಯಾ) ಎಲ್ಲರೂ ತಮ್ಮ ತಮ್ಮ ದೇಶದಿಂದ ಪಾಶ್ಚಾತ್ಯ ವೈದ್ಯಶಾಸ್ತ್ರದಲ್ಲಿ ಪ್ರಥಮ ಮಹಿಳಾ ಪದವಿದರರು |
ಇಂದು ಅನೇಕ ಸೌಲಭ್ಯ, ಕಾಯ್ದೆ, ತಿದ್ದುಪಡಿಗಳಿಂದ ಮಹಿಳೆ ಸಮಾಜದ ಅನೇಕ ರಂಗಗಳಲ್ಲಿ ತನ್ನ ಪ್ರಭಾವ ಬೀರುತ್ತಿದ್ದಾಳೆ. ಆದರೆ ಸ್ವಾತಂತ್ರ್ಯಕ್ಕೆ ಮುಂಚೆ, ಈ ಯಾವುದೇ ಸೌಲಭ್ಯಗಳಿಲ್ಲದೆಯೂ, ಪುರುಷಪ್ರಧಾನ ಸಮಾಜಕ್ಕೆ ವಿರುದ್ಧವಾಗಿ ನಿಂತು ಒಬ್ಬ ಮಹಿಳೆ ಸಾಧನೆಯನ್ನು ಮಾಡಿ, ಭಾರತದಲ್ಲಿಯೇ ಪ್ರಥಮ ಮಹಿಳಾ ವ್ಶೆದ್ಯೆ ಎಂಬ ಕೀರ್ತಿಗೆ ಪಾತ್ರರಾದರೆಂಬುದು ಸಾಮಾನ್ಯ ವಿಷಯವಲ್ಲ.
ಆನಂದಿಬಾಯಿ ಜೋಷಿ 1865ರ ಮಾರ್ಚ್ 21 ರಂದು ಮುಂಬೈನ ಥಾಣೆ ಎಂಬಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಯಮುನಾ ಜೋಷಿ. ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಇವರಿಗಿಂತ 20 ವರ್ಷ ದೊಡ್ಡವರಾದ, ವಿಧುರರಾದ, ಅಂಚೆ ಗುಮಾಸ್ತರಾಗಿದ್ದ ಗೋಪಾಲ್ ಜೋಷಿಯವರೊಂದಿಗೆ ವಿವಾಹವಾಯಿತು. ಮಹಾರಾಷ್ರದ ಸಂಪ್ರದಾಯದಂತೆ ಯಮುನಾ ಜೋಷಿ ಆನಂದಿಬಾಯಿ ಜೋಷಿಯಾದರು. ಗೋಪಾಲ್ ಜೋಷಿಯವರು ಪ್ರಗತಿಪರ ವಿಚಾರಗಳನ್ನು ಹೊಂದಿದ್ದರಿಂದ ತಮ್ಮ ಪತ್ನಿಯ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಿದರು.
ಆನಂದಿಯವರು 14 ವರ್ಷದವರಾಗಿದ್ದಾಗ ಅವರಿಗೆ ಮಗುವೊಂದು ಜನಿಸಿತು. ಆದರೆ ಉತ್ತಮ ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಆ ಮಗು ತೀರಿಕೊಂಡಿತು. ಈ ಘಟನೆ ಆನಂದಿಬಾಯಿಯವರಿಗೆ ಆಘಾತವನ್ನುಂಟುಮಾಡಿತು. ಜೊತೆಗೆ ವೈದ್ಯಕೀಯ ಶಿಕ್ಷಣ ಮಾಡುವಂತೆ ಪ್ರೇರೇಪಿಸಿತು. ಇಷ್ಟರಲ್ಲಿ ಆಕೆಯ ಪತಿಗೆ ಕಲ್ಕತ್ತಾಗೆ ವರ್ಗವಾಯಿತು. ಅವರ ಬಯಕೆಯನ್ನು ಈಡೇರಿಸಲು ಪತಿ ಪತ್ರಿಕೆಗಳಲ್ಲಿ, ಆಕೆಯ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಕೋರಿದರು. ಇದನ್ನು ಓದಿದ ಸಹೃದಯಿ ಥಿಯೋಡೇಶಿಯಾ ಕಾರ್ಪೆಂಟರ್‍ರವರು ನ್ಯೂಜರ್ಸಿಯ ತಮ್ಮ ಮನೆಯಲ್ಲಿ ಆನಂದಿಯವರಿಗೆ ಆಶ್ರಯ ನೀಡಲು ಮುಂದಾದರು.
ಆದರೆ ಆನಂದಿಬಾಯಿಯವರ ಇಚ್ಛೆಗೆ ಪುರುಷಪ್ರಧಾನ ಭಾರತೀಯ ಸಮಾಜ ಪ್ರೋತ್ಸಾಹಿಸಲಿಲ್ಲ. ಬದಲಿಗೆ ಅವರೊಂದಿಗೆ ಕಟುವಾಗಿ ವರ್ತಿಸಿತು, ಕಲ್ಲುತೂರಾಟವೂ ಆಯಿತು. ಆ ಸಮಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಅವರನ್ನು ಉಳಿಸಿದರು. ಇದಾವುದಕ್ಕೂ ಆನಂದಿಯವರು ಹಿಂಜರಿಯಲಿಲ್ಲ. ಕಲ್ಕತ್ತಾದ ಸೆರಾಂಪುರ್ ಕಾಲೇಜಿನಲ್ಲಿ ಅವರಿಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು, ಅದನ್ನೇ ವೇದಿಕೆಯಾಗಿ ಮಾಡಿಕೊಂಡು ತಾನೊಬ್ಬ ವ್ಶೆದ್ಯೆಯಾಗಿ ಜನಸೇವೆ ಮಾಡಬೇಕೆಂಬ ತಮ್ಮ ನಿರ್ಧಾರವನ್ನು ತಿಳಿಸಿದರು. ಅವರ ನಿರ್ಧಾರಕ್ಕೆ ಬೆಂಬಲವಾಗಿ ಅಂದಿನ ವೈಸ್‍ರಾಯ್ 200 ರೂ ಸಂಗ್ರಹಿಸಿ ಆನಂದಿಯವರಿಗೆ ನೀಡಿದರು. ಅದರ ಜೊತೆ ಆನಂದಿಯವರು ತಮ್ಮ ಬಳೆಗಳನ್ನು ಮಾರಿ 1833ರಲ್ಲಿ ನ್ಯೂಜರ್ಸಿಗೆ ತೆರಳಿದರು.
ಅವರು ತಮ್ಮ 19 ನೇ ವಯಸ್ಸಿನಲ್ಲಿ ವೈದ್ಯಕೀಯ ಪದವಿ ಪ್ರವೇಶಿಸಿದರು. ಆದರೆ ಕೆಲವೇ ದಿನಗಳಲ್ಲಿ ಕ್ಷಯ ರೋಗಕ್ಕೆ ತುತ್ತಾದರು. ಅವರ ಸ್ನೇಹಿತರು ಅವರಿಗೆ ಬಹಳಷ್ಟು ಸಹಾಯ ಮಾಡಿ ಅವರ ಆರೋಗ್ಯ ಸುಧಾರಿಸುವಂತೆ ಮಾಡಿದರು. ನಂತರ ಅವರನ್ನು ನೋಡಿಕೊಳ್ಳುತ್ತಿದ್ದ ವ್ಶೆದ್ಯ ದಂಪತಿಗಳಾದ ಡಾ|| ಟಾರ್ಬನ್ ಮತ್ತು ಅವರ ಪತ್ನಿಯ ಮಾತಿನ ಮೇರೆಗೆ ಪೆನ್‍ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿಗೆ ಸೇರಿ 1886ರ ಮಾರ್ಚ್ 11ರಂದು ವೈದ್ಯಕೀಯ ಪದವಿ ಪಡೆದುಕೊಂಡರು.
ಅವರ ಆರೋಗ್ಯದ ದೃಷ್ಟಿಯಿಂದ ಅವರ ಪತಿ ಮತ್ತು ಸ್ನೇಹಿತರು ಅವರನ್ನು ಅಲ್ಲಿಯೇ ಉಳಿಯುವಂತೆ ಹೇಳಿದರು. ಆದರೆ ಆನಂದಿಬಾಯಿಯವರು ತಾವು ವೈದ್ಯಕೀಯ ಪದವಿ ಪಡೆದದ್ದು ವೈದ್ಯಕೀಯ ಸೌಲಭ್ಯ ವಂಚಿತರಾದ ತನ್ನ ದೇಶದವರ ಸೇವೆಗೆ, ಆದ್ದರಿಂದ ತಾವು ಭಾರತಕ್ಕೆ ಹಿಂತಿರುಗುತ್ತೇವೆಂದು ಹೇಳಿದರು. ಹಿಂತಿರುಗಿದ ಮೇಲೆ ಕೊಲ್ಲಾಪುರದ ರಾಜಸಂಸ್ಥಾನದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ 7 ತಿಂಗಳುಗಳ ಕಾಲ ಸೇವೆ ಸಲ್ಲಿಸಿದರು. ಆದರೆ ಅವರನ್ನು ಹಿಂದೆ ಕಾಡಿದ್ದ ಕ್ಷಯ ರೋಗ ಪುನಃ ಅವರನ್ನು ಕಾಡಿತು. ಅವರು 1886ರ ಅಕ್ಟೋಬರ್ 9ರಂದು ನಿಧನರಾದರು. ಆದರೆ ಅವರ ಓದುವ ಛಲ, ಸೇವಾ ಮನೋಭಾವ, ದೇಶಪ್ರೇಮ ಹಲವರಿಗೆ ಸ್ಫ್ಫೂರ್ತಿಯಾಯಿತು. ಇಂದೂ ಸಹ ಅವರ ಹೆಸರು ಹೆಣ್ಣುಮಕ್ಕಳಿಗೆ ಸಾಧನೆ ಮಾಡುವ ದಾರಿಯನ್ನು ತೋರಿಸುವ ದೀಪವಾಗಿದೆ.
- ಡಾ।। ಸುಧಾ.ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ