Pages

ಸ್ವಾತಂತ್ರ್ಯ ಸಂಗ್ರಾಮ: "ಭಗತ್‍ಸಿಂಗ್ ರವರ ಬಾಲ್ಯದ ಘಟನೆಗಳು"


ದೃಶ್ಯ - 1
ಅದೊಂದು ಹಳ್ಳಿಯ ಮನೆ. ಓರ್ವ ಯುವತಿ ಅಳುತಿದ್ದಾಳೆ. ಅಲ್ಲಿಗೆ ಬಂದ ಬಾಲಕ ಆ ಯುವತಿಯ ತೊಡೆಯನ್ನೇರಿ, ಕಣ್ಣೊರೆಸುತ್ತಾ “ಅಳಬೇಡ ಚಿಕ್ಕಮ್ಮಾ, ನಾನು ಚಿಕ್ಕಪ್ಪನನ್ನು ಕರೆತರುತ್ತೇನೆ. ಈ ಬ್ರಿಟಿಷರನ್ನು ಇಲ್ಲಿಂದ ಓಡಿಸಿ ಚಿಕ್ಕಪ್ಪನನ್ನು ನಿನ್ನ ಬಳಿಗೆ ಕರೆತರುತ್ತೇನೆ. ಅಳಬೇಡ ಚಿಕ್ಕಮ್ಮಾ”, ಎನ್ನುತ್ತಾನೆ. ಬಾಲಕನ ಮುಗ್ಧತೆಯನ್ನು ಕಂಡು ಆಕೆ ಕಣ್ಣೊರೆಸಿಕೊಂಡು ನಗುತ್ತಾಳೆ.
ದೃಶ್ಯ-2
ಶಾಲೆಯಿಂದ ಬಂದ ತಕ್ಷಣವೇ ಆ ಬಾಲಕ ತನ್ನ ಹೊಲಕ್ಕೆ ಹೋಗುತ್ತಾನೆ. ಅಲ್ಲಿ ಕಡ್ಡಿಗಳನ್ನು ನೆಡುತ್ತಿದ್ದಾನೆ. “ಏನು ಮಾಡುತ್ತಿದ್ದೀಯಪ್ಪಾ”, ಎಂದು ತಂದೆಯ ಸ್ನೇಹಿತರು ಕೇಳಿದರೆ, “ಬಂದೂಕುಗಳನ್ನು ಕೊಡುವ ಮರ ಬೆಳೆಸುತ್ತಿದ್ದೇನೆ” ಎನ್ನುತ್ತಾನೆ. “ನಿನಗೇಕಯ್ಯಾ ಬಂದೂಕುಗಳು” ಪ್ರಶ್ನಿಸುತ್ತಾರೆ. “ಬ್ರಿಟಿಷರನ್ನು ಓಡಿಸಲು ಬಂದೂಕು ಬೇಡವೇ?” ಮರು ಪ್ರಶ್ನಿಸುತ್ತಾನೆ ಆ ಬಾಲಕ. ಪ್ರಶ್ನಿಸುತ್ತಿದ್ದವರು ಅವಾಕ್ಕಾಗಿ ನಿಲ್ಲುತ್ತಾರೆ.
ದೃಶ್ಯ-3
ಆ ಬಾಲಕ ಅಂದು ಮನೆಗೆ ತಡವಾಗಿ ಬರುತ್ತಾನೆ. ಊಟ ಮಾಡು ಬಾ ಎಂದರೆ ‘ಒಲ್ಲೆ’ ಎನ್ನುತ್ತಾನೆ. ತಂಗಿಯನ್ನು ಕರೆದು ತನ್ನ ಬ್ಯಾಗಿನಿಂದ ಒಂದು ಡಬ್ಬಿಯನ್ನು ತೆಗೆದು ತೋರಿಸುತ್ತಾನೆ. ಅದರಲ್ಲಿ ಕೆಂಪಾದ ಮಣ್ಣಿರುತ್ತದೆ. “ಏನಣ್ಣಾ, ಇದು”, ಕೇಳಿದಳು ಆಕೆ. “ಇದು ನಮ್ಮ ಜನರ ರಕ್ತದಿಂದ ತೋಯ್ದ ಮಣ್ಣು. ಜಲಿಯನ್‍ವಾಲಾಬಾಗ್‍ನಲ್ಲಿ ಬ್ರಿಟಿಷ್ ಅಧಿಕಾರಿಯ ಗುಂಡುಗಳಿಗೆ ಸಿಕ್ಕು ಸತ್ತ ನಮ್ಮ ಜನರ ರಕ್ತ ಬಿದ್ದಂತಹ ಮಣ್ಣು. ನಾನಲ್ಲಿಗೆ ಹೋಗಿದ್ದೆ. ಇದನ್ನು ಕಣ್ಣಿಗೊತ್ತಿಕೊ,” ಎಂದೆನ್ನುತ್ತಾ ತಾನೂ ಸಹ ಭಕ್ತಿಭಾವದಿಂದ ಕಣ್ಣಿಗೊತ್ತಿಕೊಳ್ಳುತ್ತಾನೆ.
ಈ ಮೂರು ದೃಶ್ಯಗಳಲ್ಲಿ ನಮಗೆ ಕಾಣಿಸಿದ ಬಾಲಕ ತನ್ನ 24ನೇ ವಯಸ್ಸಿನಲ್ಲಿಯೇ  ದೇಶಕ್ಕಾಗಿ ನಗುನಗುತ್ತಾ ಪ್ರಾಣಾರ್ಪಣೆ ಮಾಡಿದ. ಆತನ ಹೆಸರು “ಭಗತ್‍ಸಿಂಗ್”. 
 --- ಸುಧಾ ಜಿ 

ಕವನ: "ಅಪ್ಪನಿಗೊಂದು ಪತ್ರ"



ನೀನಂದು ನೀಡಿದ ಪ್ರೀತಿಯ
ನನಗೆ ಕೊಟ್ಟ ಬಾಳಜ್ಯೋತಿಯ
ಮರೆಯನೆಂದೂ ನಾನು
ಜೀವನ ನೊಗದ ಕೈ ಹಿಡಿದು
ನಮ್ಮ ಹಿತರಕ್ಷಣೆಗಾಗಿ ದುಡಿದು
ಮರೆಯಾಗಿರುವ ನೀನು
ಇಂದು ನಮಗೆ ನೆನಪು ಮಾತ್ರ

ಜೀವನದಿ ಸೋಲು ಗೆಲುವು
ಬಾಳಿನಲಿ ಸುಖದುಃಖ
ಸಮನಾಗಿ ಸ್ವೀಕರಿಸಿದ 
ಸ್ಪೂರ್ತಿಯ ಚಿಲುಮೆಯಾದ
ಸಂಕಷ್ಟಗಳನು ಹೆಗಲ ಮೇಲೆ ಹೊತ್ತಕೊಂಡ
ಖುಷಿಯನ್ನೇ ನಮಗೆ ಹೊತ್ತುತಂದ
ಕರುಣಾಮಯಿ ನೀನು
ಇಂದು ನಮಗೆ ನೆನಪು ಮಾತ್ರ

ನೀ ನಮ್ಮ ಹಿತ ಬಯಸಿದೆ
ನೋವು ನಲಿವಲ್ಲಿ ಭಾಗಿಯಾದೆ
ಬದುಕಿನ ಪಾಠ ನೀನಂದು ಕಲಿಸಿದೆ 
ಕಾಣಿರಿ ಎಲ್ಲರ ಸಮನಾಗಿ ಎಂದೆ
ಸತ್ಯದ ಪರ ಸದಾ ನಿಲ್ಲುವ
ಅನ್ಯಾಯದ ವಿರುದ್ಧ ದನಿಯೆತ್ತುವ
ದಮನಿತರಿಗೆ ನೆರವು ನೀಡುವ 
ಸಂತೋಷವನೆಲ್ಲರಿಗೂ ಹಂಚುವ
ದುಃಖವನ್ನು ನಾವೇ ಸಹಿಸುವ 
ಪಾಠಗಳನು ಮರೆಯಲು ಸಾದ್ಯವೇ?
ಅದ ಮರೆತರೆ ನಿನ್ನ ಮರೆತಂತಲ್ಲವೇ?

---  ಕೆ ಎಸ್ ಗಿರಿಜಾ 

ಕವನ: "ಕೈ ಬಿಡದ ಗೆಳತಿ"



ಕೈಬಿಡದ ಗೆಳತಿಯೆ, ನಾನಂದು ಮೊದಮೊದಲು
ಬಾಯ್ಬಿದದೆ ಮರುಳಾಗಿ ನುಡಿಯುತ್ತ ತೊದತೊದಲು
ನಿನ್ನ ನಾ ಬಯಸಿದೆ, ನನ್ನ ನೀನೆಳದಿದೆ
ಮನದೊಳಗೆ ನಿನ್ನ ಬಾಳೆಬೆಳಕ ಬಿತ್ತಿದೆ ||   1

ನಿನ್ನ ಕಂಡರೆ ನಾನು ಹೆದರಿದ್ದೆ ಬಾಲ್ಯದಲಿ
ಎನ್ನ ಮೊಗವೇ ನಿನ್ನ ನೋಟ ನೋಡಿದರಲ್ಲಿ
ತಲೆ ತಿರುಗಿ ಜುಮ್ಮೆಂದು ನಡುಗುವೆಡೆಯಲ್ಲಿ
ನನ್ನನೀನಾದರಿಸಿ ಅಪ್ಪಿದೆಯ ನೇಹದಲಿ?  2

ಅಂದಿನಿಂದಲು ನಾನು ನಿನ್ನಲಿ ಮನವೂರಿ
ಹೃದಯದಾ ರಸವನ್ನು ಹೀರಿದೇ ಮಿತಿಮೀರಿ
ಅನವರತ ಸಂಗವನು ಬಯಸಿದಾ ಮುಕುದನನು
ಚಿಂಇಸಿದೆ ಆದರದಿ ಈ ಬಲ್ಯ ಗೆಳೆಯನನು||  3

ಕರೆದೊಯ್ದು ಕೈಬಿಡದೆ ಎಡೆಗೊಟ್ಟು ಹತ್ತಿಸಿದೆ;
ಗಿರಿಶಿಖರದಾಳವನು ಧೃತಿಗೆಡದೆ ತೋರಿಸಿದೆ;
ಕಣಿವೆ ಇಕ್ಕೆಲದಲ್ಲಿ ಸೊಬಗನ್ನು ಸವಿಯಿಸಿದೆ
ಚಂದ್ರ ತಾರೆಯೊಳು ಮನವನ್ನು ಹರಿಯಿಸಿದೆ||    4

ಜಲದಲೆಯ ನಡುವಿನೊಳು ನಾಕೈಯ ಬಿಟ್ಟಾಗ
ಝಲ್ಲೆಂದು ಭರದಿಂದ ಭಯಭೀತನಾದಾಗ
ಅಭಯಹಸ್ತವ ನೀಡಿ ಈಸುವುದ ಕಲಿಯಿಸಿದೆ
ಮೈಮನಕೆ ಹಾಯಿಸಿದೆ ಸಾಗರವ ತೋರುತಲಿ||   5

ಉಲ್ಲಾಸವೆಡರುಗಳ ನೀನಂದು ಬೋಧಿಸಿದೆ
ಬಲವಿನಿಂ ಮರ್ಮಗಳ ನಾನಂದು ಬೇಧಿಸಿದೆ
ಎನ್ಮನವು ನಿನ್ನೊಳಗೆ ರಸಸ್ವಾದ ಬಯಸುತಿದೆ
ಕೈಬಿಡದ ಸರಸ್ವತಿಯೆ ಬಯಕೆಯನು ಸಲಿಸುವೆಯಾ||   6

--  ಜಿ ಗಂಗಾಧರಯ್ಯ

ವಿನೋದ: "ಕಳ್ಳರಿದ್ದಾರೆ ಜಾಗ್ರತೆ!"


- ಮೂಲ: ಚಲಂ 
(ತೆಲುಗಿನಿಂದ ಅನುವಾದ)

(ಸಮಯದ ಅಭಾವದ ಕಾರಣದಿಂದಾಗಿ ಆಕೆ ಮಗನ ಜೊತೆ ಪುರುಷರ ಬೋಗಿಯಲ್ಲಿ ಹತ್ತಿದಳು. ಮಕ್ಕಳ ಶಿಕ್ಷಣದ ಮೇಲೆ ಪುಸ್ತಕಗಳನ್ನು ಓದಿ ತಂದೆ-ತಾಯಿ ಮಗನ ಪ್ರಶ್ನೆಗಳಿಗೆ ತಣ್ಣೀರೆರಚದೆ ಬೆಳೆಸಿದ್ದರು. ಅವನು ವಾಕ್ಯಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾನೆ. ಆವತ್ತಿನ ದಿನ ಬೋಗಿಯ ತುಂಬ ಜನರಿದ್ದರು.)
ಹುಡುಗ: (ಮೇಲೆ ನೋಡಿ) ಕ... ಲ. . . .. .. ..
ತಾಯಿ: (ಗಾಬರಿಯಿಂದ) ಸರಿಯಾಗಿ ನೋಡು. ಅದು ಲ ಅಲ್ಲ ಳ್ಳ.
ಹು: ಹೌದು. . . . .ಕ . .ಳ್ಳ . .ರಿ .. .. ಆಮೇಲೆ ಏನಮ್ಮ?
ತಾಯಿ: ದ್ದಾರೆ. . . .
ಹುಡುಗ:  ಕಳ್ಳರಿದ್ದಾರೆ ಜಾಗ್ರತೆ. ಅಮ್ಮ . .. .. . ಎಲ್ಲಿ ಕಳ್ಳರು? (ಸುತ್ತಲೂ ನೋಡುತ್ತಿದ್ದಾನೆ)
ತಾಯಿ:  ಇಲ್ಲ.
ಹುಡುಗ: ಮತ್ತೆ ಇದ್ದಾರೆ ಎಂದು ಬರೆದಿದ್ದಾರೆ.
ತಾಯಿ:  ಅಂದರೆ ಇದಾರೇನೋ ಅಂತಾ.
ಹುಡುಗ: ಬರೆದಿರುವವರಿಗೆ ತಿಳಿಯದಾ?
ತಾಯಿ:  ಗೊತ್ತಿಲ್ಲ.
ಹುಡುಗ: ಮತ್ತೆ ಯಾಕೆ ಬರೆದಿದ್ದಾರೆ?
(ಬರೆಯುವವರೆಲ್ಲ ಗೊತ್ತಿದ್ದೇ ಬರೆಯುತ್ತಿದ್ದಾರೆ ಎಂದುಕೊಳ್ಳುತ್ತಿದ್ದಾನೆ ಹುಡುಗ. ಇನ್ನೂ ದಿನಪತ್ರಿಕೆಗಳನ್ನು ಓದಲಿಲ್ಲ!)
ತಾಯಿ:  ಇದ್ದರೆ ಜಾಗ್ರತೆಯಾಗಿರಿ ಅಂತಾ.
ಹುಡುಗ: ಅವರು ನಮಗೇಕೆ ಹೇಳಬೇಕು. ನಮಗೇ ಕಾಣಿಸಲ್ವಾ?
ತಾಯಿ:  ಹೇಗೆ ಕಾಣಿಸ್ತಾರೆ?
ಹುಡುಗ: ನೋಡಿದ್ರೆ.
ತಾಯಿ:  ಅವ್ರು ಎಲ್ರ ತರಾನೇ ಇರ್ತಾರೆ.
(ಹುಡುಗ ಆಲೋಚಿಸತೊಡಗಿದ. ಬುದ್ಧಿವಂತನಾದ್ದರಿಂದ ಕಪ್ಪಗೆ, ಬಟ್ಟೆಯಿಲ್ಲದೆ, ------, ಗಡ್ಡ ಬಿಟ್ಟುಕೊಂಡು ಸಿನಿಮಾದಲ್ಲಿ ಕಾಣಿಸುವ ಮಹಾ ಋಷಿಗಳ ತರಹ ಇರುವುದಿಲ್ಲವೆಂದು ಅರಿತುಕೊಂಡ)
ಹುಡುಗ: ಕಳ್ಳರು ಷರ್ಟು-ಕೋಟು ಹಾಕ್ಕೊಂಡಿರ್ತಾರಾ?
(ಪಕ್ಕದಲ್ಲಿ ಕುಳಿತ ಅಧಿಕಾರಿಯನ್ನು ಅನುಮಾನದಿಂದ ನೋಡುತ್ತಿದ್ದಾನೆ, ಕಳ್ಳನೇನೋ ಎಂಬಂತೆ. ಅವನ ದೊರೆತನವನ್ನು ಪ್ರಶ್ನಿಸುವವನಂತೆ)
ತಾಯಿ: ಆ
ಹುಡುಗ: ಮತ್ತೆ ಅಪ್ಪ ಕೂಡ ಕಳ್ಳ ಆಗಬಹುದು.
ತಾಯಿ:  ಕಳ್ಳತನ ಮಾಡುವವರೇ ಕಳ್ಳರು.
ಹುಡುಗ: ಕಳ್ಳತನ ಮಾಡ್ತಾರೆ ಅಂತಾ ಹೇಗೆ ಗೊತ್ತಾಗುತ್ತೆ?
ತಾಯಿ:  ತಿಳಿದುಕೊಳ್ತಾರೆ.
ಹುಡುಗ: ಓ, ಅಂದರೆ ಸಿಕ್ಕಿಹಾಕಿಕೊಳ್ಳುವವರು ಕಳ್ಳರಾ?
(ತಾಯಿ ಆಲೋಚಿಸುತ್ತಾ ಕೂರುತ್ತಾಳೆ. ಆಕೆ ಮಾತ್ರ ಅಲ್ಲ, ಎಲ್ಲರೂ ಆಲೋಚಿಸಬೇಕು.)
ಹುಡುಗ: ಯಾಕಮ್ಮ ಕಳ್ಳತನ ಮಾಡ್ತಾರೆ?
ತಾಯಿ:  ಅವರಿಗೆ . . . . ಇಲ್ಲದೆ.
ಹುಡುಗ: ಯಾಕಿಲ್ಲ?
ತಾಯಿ:  ಅವರು ಸಂಪಾದಿಸುವುದಿಲ್ಲ.
ಹುಡುಗ: ನೀನು ಆ ಒಡವೆ ಸಂಪಾದಿಸಿದೆಯಾ?
ತಾಯಿ:  ತಾತ ಕೊಟ್ಟರು.
ಹುಡುಗ: ಹಾಗಿದ್ರೆ ಕಳ್ಳರಿಗೂ ಯಾರೋ ಕೊಡಬಾರದಾ?
ತಾಯಿ:  ಕೊಟ್ಟರೂ ಹಾಳು ಮಾಡಿಕೊಳ್ತಾರೆ.
ಹುಡುಗ: ನಾವು ಭದ್ರವಾಗಿ ಇಟ್ಟಿಕೊಳ್ತೇವೆ. ಅವರು ಖರ್ಚು ಮಾಡ್ತಾರೆ. ಇಟ್ಟುಕೊಳ್ಳಲ್ಲಿಕ್ಕೆ ಏನೂ ಮಿಗುವುದಿಲ್ಲ ಅನಿಸುತ್ತೆ. ಮತ್ತೆ ನಮಗೆ ಇಷ್ಟೊಂದು ದುಡ್ಡು ಎಲ್ಲಿಂದ?
ತಾಯಿ:  ಕಷ್ಟ ಪಟ್ಟು ಸಂಪಾದಿಸಿಕೊಳ್ತೇವೆ.
ಹುಡುಗ: ಕಳ್ಳರೂ ಕಷ್ಟಪಟ್ಟು ಸಂಪಾದಿಸಿಕೊಳ್ತಾರಲ್ಲಾ?
ತಾಯಿ: ಏನು ಕಷ್ಟ, ಇನ್ನೊಬ್ಬರದ್ದನ್ನ ತೆಗೆದುಕೊಳ್ತಾರೆ.
ಹುಡುಗ: ನಮಗೆ ಇನ್ನೊಬ್ಬರಿಂದಲೇ ತಾನೇ ಬರೋದು?
ತಾಯಿ: ನಾವು ಕೇಳದೆ ತೆಗೆದುಕೊಳ್ತೀವಾ?
ಹುಡುಗ: ಅಪ್ಪ ನನ್ನ ಪೆನ್ಸಿಲ್ ಹೇಳದೆ ತೆಗೆದುಕೊಂಡರು?
ತಾಯಿ: ಮತ್ತೆ ಕೊಡಲಿಲ್ವಾ?
ಹುಡುಗ: ನಾನು ಕಂಡು ಹಿಡಿದು ಕೇಳಿದ್ರೆ ಕೊಟ್ಟರು.
ತಾಯಿ: ಚಿಕ್ಕವನು ಅಂತಾ, ತನ್ನ ಮಗ ಅಂತಾ.
ಹುಡುಗ: ಮತ್ತೆ ನಾನು ನಮ್ಮಪ್ಪ ಅಂತ ಜೇಬಿನಲ್ಲಿ ದುಡ್ಡು ತೆಗೆದ್ರೆ ಹೊಡೆದರು?
ತಾಯಿ: ನೀನು ಚಿಕ್ಕವ ಅಂತಾ.
ಹುಡುಗ: ಚಿಕ್ಕವರು ದೊಡ್ಡವರದ್ದನ್ನು ತೆಗೆದುಕೊಂಡ್ರೆ ತಪ್ಪು. . . . ಆದರೆ ದೊಡ್ಡವರು ಚಿಕ್ಕವರದ್ದನ್ನು ತೆಗೆದುಕೊಂಡರೆ ತಪ್ಪಿಲ್ಲ.   (ಅಲೋಚಿಸುತ್ತಾ)  ಹಾಗೇನೆ ಬಡವರು ಶ್ರೀಮಂತರದ್ದನ್ನು ತೆಗೆದುಕೊಂಡ್ರೆ ತಪ್ಪು ಆದರೆ ಶ್ರೀಮಂತರು ಬೀದಿಯವರದ್ದನ್ನು ತೆಗೆದುಕೊಂಡರೆ ತಪ್ಪಿಲ್ಲ.
ತಾಯಿ: ಕಳ್ಳರು ಕೇಳಿದರೂ ಮತ್ತೆ ಕೊಡುವುದಿಲ್ಲ.
ಹುಡುಗ: ವಿಶಾಲಮ್ಮನನ್ನು ನೀನು ‘ಕಳ್ಳೀ, ಅಪ್ಪನ್ನ ಎತ್ತಿಕೊಂಡು ಹೋಗಿಬಿಟ್ಳು’ ಅಂದೆ. ಮತ್ತೆ ಅಪ್ಪನನ್ನು ನಮ್ಮನೇಲೆ ಬಿಟ್ಟುಬಿಟ್ಳಲ್ಲಾ?
ತಾಯಿ: ಛೀ, ಸುಮ್ನೆ ಇರು.

ಕವನ: "ಎಚ್ಚರಿಸಿದ ಸ್ವಪ್ನ"



ಅದು ಬಹು ನೈಜವಾಗಿತ್ತು
ಅವಳ ಕೂಗು, ಅವಳ ಆರ್ತನಾದ
ಆ ಪುರುಷರು, ಆ ಜನರು
ನನ್ನ ಮಾತುಗಳು-ಕರೆಗಳು
ಅವರ ಹೊಡೆತಬಡೆತಗಳು
ಪ್ರತಿ ಘಳಿಗೆ ಹಸಿಯಾಗಿದೆ ಮನದಿ
ಪ್ರತಿ ಮಾತು ನೆನಪಿದೆ ಕ್ಲುಪ್ತವಾಗಿ
ಪ್ರತಿ ಕೂಗು ಕೇಳಿಸಿದೆ ಸರಿಯಾಗಿ
ಪ್ರತಿ ನಡೆ ಕಾಣಿಸಿದೆ ಸ್ಪಷ್ಟವಾಗಿ
ನಿಜವೆಂದು ಬರೀ ಕಾಣಿಸಿದ್ದಲ್ಲ
ನೈಜವೆಂದು ಅನಿಸಿತ್ತು, ನಿಜ,
ಆದರದು, ನಿಜವಾಗಿಯೂ ನಿಜವಾಗಿರಲಿಲ್ಲ!
ಅವಳಿಗೆ ಹಾನಿಯಾಯಿತು 
ಆದರೆ ನಮ್ಮನ್ನು ಹಿಡಿದಿಡಲಾಗಿತ್ತು
ಹಿಡಿದದ್ದು ಯಾವುದು ನಮ್ಮನ್ನು?
ಗೊತ್ತಿಲ್ಲ ಯಾರಿಗೂ ಏನೂ
ನೋಡಿದೆವು ನಾವು, ಬರಿದೇ ನೋಡಿದೆವು
ಅಯ್ಯೊ ಎಂದೆವು, ಮಾತಿನ ಮರುಕ ತೋರಿದೆವು
ನೊಂದಿದ್ದಳು ಅವಳು, ಆ ನೋವು ನಮಗಾಗಬೇಕಿತ್ತು
ಒಂಟಿಯಾಗಿದ್ದಳವಳು, ಹಾಗಿರಬೇಕಿರಲಿಲ್ಲ ಅವಳು
ಕಿರುಚಿದಳವಳು, ದಿಟ್ಟಿಸಿದೆವು ನಾವು
ಹೊಡೆದರವರು, ನೋಡಿದೆವು ನಾವು
ಹಾಗೆ ನೋಡಲ್ಹೇಗೆ ಸಾಧ್ಯ ನನಗೆ? 
ಹೇಗೆ ಸಾಧ್ಯ ನಿನಗೆ? ಹೇಗೆ ಸಾಧ್ಯ ನಮಗೆ?
ತಂಗಿಯಾಗಿದ್ದರೆ ನಮಗೆ
ತಾಯಿಯಾಗಿದ್ದರೆ ನಮಗೆ
ಗೆಳತಿಯಾಗಿದ್ದರೆ ನಮಗೆ
ಬಾಳಸಂಗಾತಿಯಾಗಿದ್ದರೆ ನಿನಗೆ
ಸುಮ್ಮನಿರುತ್ತಿದ್ದೆವೆ ನಾವು?
ಕೈಕಟ್ಟಿ ಕೂರುತ್ತಿದ್ದೆವೆ ನಾವು?
ಅದು ಕನಸಾಗಿದ್ದರೂ ಸಹ
ಮನಕಲಕುವ ಕನಸಾಗಿತ್ತು
ಪ್ರಶ್ನಿಸುವ ಸ್ವಪ್ನವಾಗಿತ್ತು
ಆದರೀಗ ಕಾಡುತ್ತಿರುವುದೆಂದರೆ ನನ್ನನ್ನು,
ವಾಸ್ತವತೆಯಲ್ಲಿ ಈ ರೀತಿ ನಡೆಯುತ್ತದೆಂದುಕೊಂಡರೂ
ಕನಸಿನಲ್ಲಿಯೂ ಸಹ ಜನ ನಿಷ್ಕ್ರಿಯರಾಗಿದ್ದರಲ್ಲ; ಹೇಗೆ?!!

- ನಿಲೀನಾ ಥಾಮಸ್

ವ್ಯಕ್ತಿ ಪರಿಚಯ: "ಹೆಲೆನ್ ಕೆಲ್ಲರ್"



ಹೆಲೆನ್ ಕೆಲ್ಲರ್ ತಮ್ಮ ಶಿಕ್ಷಕಿ ಆನ್ ಸುಲಿವನ್ ರವರೊಂದಿಗೆ 



“ಪ್ರತಿ ದೃಷ್ಟಿಹೀನ ಮಗುವೂ ಸಹ ಶಿಕ್ಷಣ ಪಡೆಯುವ ಅವಕಾಶವನ್ನು ದಬೇಕು; ಪ್ರತಿ ವಯಸ್ಕ ದೃಷ್ಟಿಹೀನ ವ್ಯಕ್ತಿಗೆ ತರಬೇತಿ ಪಡೆಯುವ ಮತ್ತು ಉಪಯುಕ್ತ ಉದ್ಯೋಗ ಪಡೆಯುವ ಅವಕಾಶವಿರಬೇಕು” - 

ಹೀಗೆಂದು ಆಶಿಸಿದವರು ಹೆಲೆನ್ ಕೆಲ್ಲರ್. 

ತಾವೇ ದೃಷ್ಟಿಹೀನರಾಗಿದ್ದರೂ, ಮೂಕರಾಗಿದ್ದರೂ ಕಿವುಡರಾಗಿದ್ದರೂ ಸಹ ಅದೆಲ್ಲವನ್ನು ಮೀರಿ ಓದುವುದನ್ನು, ಬರೆಯುವುದನ್ನು, ಮಾತನಾಡುವುದನ್ನು ಕಲಿತರು. ಅಷ್ಟು ಮಾತ್ರವಲ್ಲದೆ ಮೇಲೆ ಹೇಳಿದ ಅವರ ಜೀವನದ ಮಹಾತ್ಕಾಂಕ್ಷೆಗಾಗಿ ತಮ್ಮ ಜೀವನ್ನವನ್ನಿಡೀ ಮುಡಿಪಾಗಿಟ್ಟರು.

ಹೆಲೆನ್ ಕೆಲ್ಲರ್ ಅಲಬಾಮದ ಟಸ್ಕುಂಬಿಯಾ ಎಂಬಲ್ಲಿ 1880ರ ಜೂನ್ 27ರಂದು ಜನಿಸಿದರು. ಅವರು ಒಂದೂವರೆ ವರ್ಷದ ಮಗುವಾಗಿದ್ದಾಗ, ಜ್ವರಪೀಡಿತರಾಗಿ, ತಮ್ಮ ದೃಷ್ಟಿ, ಹಾಗೂ ಕೇಳುವ ಶಕ್ತಿಗಳೆರಡನ್ನೂ ಕಳೆದುಕೊಂಡರು, ಸಹಜವಾಗಿಯೇ ಕೇಳಲಾಗದ ಅವರು ಮೂಕರೂ ಆದರು. ಕಲಿಯಬೇಕೆನ್ನುವ ಆಕಾಂಕ್ಷೆಯಿದ್ದ ಮಗು ತನ್ನ ಅಸಹಾಯಕತೆಯಿಂದಾಗಿ ಹಠಮಾರಿಯಾಯಿತು. ಮಗುವನ್ನು ನೋಡಿಕೊಳ್ಳಲು ಬಂದ ಯಾರೂ ಹೆಚ್ಚು ದಿನ ಅಲ್ಲಿ ಉಳಿಯಲಿಲ್ಲ. ಆದರೆ, ಅವರನ್ನು ನೋಡಿಕೊಳ್ಳಲು ‘ದೃಷ್ಟಿಹೀನರಿಗಾಗಿನ ಪರ್ಕಿನ್ಸ್ ಶಾಲೆ’ಯಿಂದ ಬಂದ ಶಿಕ್ಷಕಿ ಆನ್ ಸುಲಿವನ್ರ ತಾಳ್ಮೆ ಮತ್ತು ನಿರಂತರ ಪ್ರಯತ್ನದಿಂದಾಗಿ ಆಕೆ ಮತ್ತೆ ಶಾಂತಳಾದಳು ಮತ್ತು ಕಲಿಯಲಾರಂಭಿಸಿದಳು. ಆನ್ರವರು ಸ್ವತಃ ಪಾರ್ಶ್ವ ದೃಷ್ಟಿಯನ್ನು ಹೊಂದಿದ್ದರೂ ಸಹ, ತಮ್ಮ ಶಿಷ್ಯೆಗೆ ಕಲಿಸಲು ಎಲ್ಲಾ ರೀತಿಯ ಪ್ರಯೋಗಗಳನ್ನು ನಡೆಸಿದರು. ಕೊನೆಗೂ ಅವರು ತಮ್ಮ ಪ್ರಯತ್ನದಲ್ಲಿ ಸಫಲರಾದರು. 

ಆನ್ರವರು ಸ್ಪರ್ಶಜ್ಞಾನದ ಮೂಲಕ, ಹೆಲೆನ್ಗೆ ಜಗತ್ತಿನ ಬಗ್ಗೆ ಅರಿವು ಮೂಡಿಸಲಾರಂಭಿಸಿದರು. ಕಲಿಕೆಯಲ್ಲಿ ಆಸಕ್ತಿಯಿದ್ದ ಹೆಲೆನ್ ಕೆಲ್ಲರ್ ಬಹುಬೇಗ ಕಲಿತುಕೊಳ್ಳಲಾರಂಭಿಸಿದರು. ಬಹಳ ವೇಗದಲ್ಲಿಯೇ ಗುರುಶಿಷ್ಯೆಯರ ನಡುವೆ ಗಾಢ ಸಂಬಂಧ ಬೆಳೆಯಿತು. ಆ ಸಂಬಂಧದ ತೀವ್ರತೆ ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಜೀವನದುದ್ದಕ್ಕೂ ಇಬ್ಬರು ಒಟ್ಟಿಗಿರುವಂತೆ ಮಾಡಿತು, ಒಂದಾಗಿ ತಮ್ಮ ಜೀವನದ ಮಹದೇಚ್ಛೆಯನ್ನು ಪೂರೈಸಲು ಪ್ರಯತ್ನಿಸುವಂತೆ ಮಾಡಿತು. ಗುರುಶಿಷ್ಯರಿಬ್ಬರ ಪ್ರಯತ್ನದ ಫಲಿತವಾಗಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿದ ಹೆಲೆನ್ರವರು, ಕಾಲೇಜಿಗೆ ಹೋಗಲಿಚ್ಛಿಸಿದರು. ಕಾಲೇಜಿಗೆ ಸೇರಿ 1904ರಲ್ಲಿ ಪದವೀಧರೆಯಾದರು. ಇಡೀ ಜಗತ್ತಿನ ಮೊದಲ ಕಿವುಡ-ಕುರುಡ ಪದವೀಧರೆ ಆಕೆ. ಅಷ್ಟೂ ವರ್ಷಗಳ ಕಾಲ ಆನ್ ಸುಲಿವನ್ ತಮ್ಮ ವಿದ್ಯಾರ್ಥಿಯ ಕೈಮೇಲೆ ಪುಸ್ತಕಗಳಲ್ಲಿದ್ದದ್ದನ್ನು ಬರೆದು ಸ್ಪರ್ಶಜ್ಞಾನದ ಮೂಲಕ ತಿಳಿಯಪಡಿಸಿದರು. 

ಕಾಲೇಜಿನಲ್ಲಿರುವಾಗ ಹೆಲೆನ್ ಬರೆಯಲಾರಂಭಿಸಿದರು. “ನನ್ನ ಜೀವನದ ಕಥೆ” ಎಂಬ ಅವರ ಆತ್ಮಕತೆಯ ಜೊತೆಗೆ ಅವರು 11 ಪುಸ್ತಕಗಳನ್ನು ಬರೆದರು. ತಮಗೆ ಎದುರಾದ ಎಲ್ಲಾ ಅಡೆತಡೆಗಳನ್ನು ದಾಟಿ ಪ್ರಖ್ಯಾತ ಬರಹಗಾರರು ಹಾಗೂ ಮಾತುಗಾರರಾದರು. ಹಲವಾರು ಭಾಷೆಗಳನ್ನು ಓದುವುದನ್ನು, ಬರೆಯುವುದನ್ನು ಮಾತನಾಡುವುದನ್ನುಕಲಿತರು. ಅಷ್ಟೇ ಅಲ್ಲದೆ, ಕುರುಡುತನ, ಕಿವುಡುತನ, ಸಾಮಾಜಿಕ ವಿಷಯಗಳು ಮತ್ತು ಮಹಿಳೆಯರ ಹಕ್ಕುಗಳ ಬಗ್ಗೆ ಹಲವಾರು ಲೇಖನಗಳನ್ನು ಬರೆದರು. ಅವರ ಕೃತಿಗಳು ಮುಂದಿನ ಜನಾಂಗಗಳಿಗೆ ಆಕೆಯ ಧೈರ್ಯ ಮತ್ತು ಬುದ್ಧಿಮತ್ತೆಯ ಬಗ್ಗೆ ಅರಿವನ್ನು ಬೆಳೆಸಲು ಸಹಾಯಕವಾಗುತ್ತವೆ.

ತಮ್ಮೆಲ್ಲಾ ಹಿತಾಸಕ್ತಿಗಳ ಮಧ್ಯೆಯೂ ಅವರು ದೃಷ್ಟಿಹೀನರ ಮತ್ತು ಕಿವುಡ-ಮೂಕರ ಅವಶ್ಯಕತೆಗಳ ಬಗ್ಗೆ ಗಮನ ಹರಿಸುವುದನ್ನು ಬಿಡಲಿಲ್ಲ. “ದೃಷ್ಟಿಹೀನ ವ್ಯಕ್ತಿ ಮೇಧಾವಿಯೂ ಅಲ್ಲ ಅಥವಾ ಮೂರ್ಖನೂ ಅಲ್ಲ. ಆದರೆ ಆ ವ್ಯಕ್ತಿಗೂ ಸಹ ಶಿಕ್ಷಣ ಪಡೆಯಬೇಕೆನ್ನುವ ಮನಸ್ಸಿದೆಯೆಂದೂ, ತರಬೇತಿ ಪಡೆಯಬೇಕೆನ್ನುವ ಕೈಗಳಿವೆಯೆಂದೂ, ಸಾಧನೆಗೈವ ಆಕಾಂಕ್ಷೆಗಳಿವೆ ಎಂದು ಜನತೆ ಅರಿತುಕೊಳ್ಳಬೇಕು. ಆ ವ್ಯಕ್ತಿ ಅತ್ಯುತ್ತಮವಾದದ್ದನ್ನು ಸಾಧಿಸಲು ಮತ್ತು ತನ್ನ ಕೆಲಸದ ಮೂಲಕ ಬೆಳಕನ್ನು ಜಯಿಸುವಂತಾಗಲು ಜನತೆ ಸಹಾಯ ಮಾಡಬೇಕಿರುವುದು ಅವರ ಕರ್ತವ್ಯ.” ಈ ರೀತಿ ಹೇಳಿದ ಅವರು ಕೈಕಟ್ಟಿ ಕೂರಲಿಲ್ಲ. ಕಿವುಡ-ಕುರುಡು ಯುವಜನ ಮತ್ತು ವಯಸ್ಕರಿಗಾಗಿನ ‘ಹೆಲೆನ್ ಕೆಲ್ಲರ್ ರಾಷ್ಟ್ರೀಯ ಕೇಂದ್ರ’ದ ಸ್ಥಾಪನೆಗೆ ಕಾರಣರಾದರು. ಅದರ ಮೂಲಕ ಅವರು ಎಲ್ಲಾ ಕಿವುಡರ, ದೃಷ್ಟಿಹೀನರ ಶಿಕ್ಷಣ, ತರಬೇತಿ, ಉದ್ಯೋಗಕ್ಕಾಗಿ ಶ್ರಮಿಸಿದರು.

ಅವರ ಈ ಧೈರ್ಯ, ಇತರರ ಬಗೆಗಿನ ಕಾಳಜಿಯ ಕಾರಣದಿಂದಾಗಿಯೇ ಅಲಬಾಮದಲ್ಲ್ಲಿರುವ ಪ್ರಖ್ಯಾತ ಮಹಿಳೆಯರ ಹಾಲ್ನಲ್ಲಿ (ಸಾಧನೆಗೈದ ಮಹಿಳೆಯರ ಹೆಸರನ್ನು, ಅವರ ಬದುಕು-ಹೋರಾಟಗಳನ್ನು ಈ ಹಾಲ್ನಲ್ಲಿ ಪಟ್ಟಿಮಾಡಲಾಗುವುದು) ಅವರ ಹೆಸರು, ಮೊದಲ ಹೆಸರಾಗಿ ಸೇರಿಸಲ್ಪಟ್ಟಿತು. ಜೊತೆಗೆ, ಅಮೇರಿಕಾದಲ್ಲಿ ಅತ್ಯುನ್ನತ ಗೌರವವಾದ ‘ಸ್ವಾತಂತ್ರ್ಯದ ರಾಷ್ಟ್ರೀಯ ಪದಕ’ವನ್ನು ಅವರಿಗೆ ನೀಡಲಾಯಿತು. “ಅಮೇರಿಕಾದ ಪ್ರಥಮ ಸಾಹಸಿ ಮಹಿಳೆ” ಎಂದು ಹೊಗಳಿ ಅಮೆರಿಕಾದ ಕಾಂಗ್ರೆಸ್ನಲ್ಲಿ ಮಂಡಿಸಿದ ಪತ್ರದಲ್ಲಿ ಈ ರೀತಿ ಹೇಳಲಾಗಿದೆ: “ಕತ್ತಲೆ ಮತ್ತು ಹತಾಶೆಯ ವಿರುದ್ಧದ ಮಿಸ್ ಕೆಲ್ಲರ್ರವರ ವೈಯಕ್ತಿಕ ವಿಜಯ, ಅವರ ಜೀವನವನ್ನು ಇತರರ ಸೇವೆಗಾಗಿ ಮುಡಿಪಾಗಿಡುವಂತೆ ಮಾಡಿದೆ. ಅಸೀಮಿತ ಶಕ್ತಿಯೊಂದಿಗೆ ಆಕೆ ತಮ್ಮ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಿದ್ದಾರೆ. ದೃಷ್ಟಿಹೀನರಿಗೆ ಮತ್ತು ಕಿವುಡರಿಗೆ ಸಹಾಯ ಮಾಡಲು ಎಲ್ಲಾ ರೀತಿಯಿಂದಲೂ ಶ್ರಮಿಸಿದ್ದಾರೆ. ತಮಗೆ ದೃಷ್ಟಿಯ ಬೆಳಕಿರದಿದ್ದರೂ ಹೆಲೆನ್ ಕೆಲ್ಲರ್ ಈ ಭೂಮಿಯ ಮೇಲೆ ಯಾವುದೇ ವ್ಯಕ್ತಿಗಿಂತ ಹೆಚ್ಚಾಗಿ ಬೆಳಕನ್ನು ಹರಡಿದ್ದಾರೆ.”

1936ರಲ್ಲಿ ಕನೆಕ್ಟಿಕಟ್ನಲ್ಲಿ ನೆಲೆಸಿದ ಹೆಲೆನ್ರವರು ತಮ್ಮ ಮರಣದವರೆಗೂ, ಅಂದರೆ ಜೂನ್ 1, 1968ರವರೆಗೆ ತಮ್ಮ ಜೀವನದ ಮಹತ್ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅವರ ಅಂತ್ಯಕ್ರಿಯೆಯ ಸಮಯದಲ್ಲಿ ಅಮೇರಿಕಾದ ಸೆನೆಟರ್ ಲಿಸ್ಟರ್ ಹಿಲ್ ಈ ರೀತಿ ಹೇಳಿದ್ದಾರೆ. : “ಮಾನವ ಸಮಾಜ ಇರುವವರೆಗೂ ಆಕೆ 
ಜೀವಿಸುತ್ತಾಳೆ. ಬೆರಳೆಣಿಕೆಯಷ್ಟು ಚಿರಂಜೀವಿಗಳಲ್ಲಿ ಆಕೆಯೂ ಇದ್ದಾರೆ. ಧೈರ್ಯ ಮತ್ತು ನಂಬಿಕೆಗೆ ಯಾವುದೇ ಮಿತಿಯಿಲ್ಲವೆಂದು ತೋರಿಸಿದ ಮಹಿಳೆ ಆಕೆ. ಎಲ್ಲಿಯವರೆಗೂ ಮನುಷ್ಯ ಓದುತ್ತ್ತಾನೋ, ಕಥೆಗಳನ್ನು ಹೇಳುತ್ತ್ತಾನೋ ಅಲ್ಲಿಯವರೆಗೂ ಆಕೆಯ ಕಥೆ ಮತ್ತೆ ಮತ್ತೆ ಹೇಳಲ್ಪಡುತ್ತದೆ, ಆಕೆಯ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿ ಉಳಿಯುತ್ತದೆ.”
ದೈಹಿಕ ವಿಕಲಾಂಗತೆ ಮನುಷ್ಯನ ಬೆಳವಣಿಗೆಗೆ, ಅಭಿವೃದ್ಧಿಗೆ ಅಡ್ಡಿಯನ್ನುಂಟು ಮಾಡುವುದಿಲ್ಲ ಎಂಬುದನ್ನು ಆಕೆಯ ಜೀವನದ ಹೋರಾಟ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಅವರ ಬದುಕು ಮತ್ತು ಹೋರಾಟ ವಿಕಲಾಂಗರಲ್ಲಿ ಮಾತ್ರವಲ್ಲ ಎಲ್ಲಾ ಜನರಲ್ಲೂ ಉತ್ಸಾಹವನ್ನು ತುಂಬುತ್ತದೆ. ಮನುಷ್ಯ ತನ್ನ ಜೀವನದಲ್ಲಿ ಹತಾಶೆಗೆ ಜಾಗವನ್ನೇ ಕೊಡಬಾರದು, ಆ ರೀತಿ ಹತಾಶೆಗೊಳ್ಳದೆ ದೃಢತೆಯಿಂದ ಸಾಧಿಸ ಹೊರಟರೆ ಸಾಧಿಸಲಾಗದ್ದು ಏನೋ ಇಲ್ಲ ಎಂಬುದನ್ನು ಆಕೆಯ ಜೀವನ ನಮಗೆ ತೋರಿಸಿಕೊಟ್ಟಿದೆ. 
      -   ಸುಧಾ ಜಿ

ಕವನ: "ಕಾರಣಕ್ಷಾಮದಿ ನಿಂತಿಹನೇನೋ ಕಲ್ಲಾಗಿ ಬಾಹುಬಲಿ?"


ಮೂಲ ಚಿತ್ರ ಕೃಪೆ: www.pixelshooter.net


ಸರ್ವದಿಗ್ವಿಜಯಿ ಅಗ್ರಜ ಭರತ
ವಿಶ್ವಮಾನ್ಯನೂ, ಕೀರ್ತಿವಂತನೂ.
ಜಗವೆಲ್ಲ ಪಾದದಡಿ ತಲೆಬಾಗಲು
ಪಾದಕ್ಕೆರಗುವ ಔಚಿತ್ಯ ಪ್ರಶ್ನಿಸಿದ
ಕಾರಣಕರಣಿ ಬಾಹುಬಲಿ!

ಮಲ್ಲಯುದ್ಧ, ದೃಷ್ಟಿಯುದ್ಧ
ಹೆಸರಿಸಿದೆಲ್ಲ ಯುದ್ಧಗಳಲ್ಲೂ
ಪರಾಕ್ರಮಿ, ವಿಜಯ ವಿಕ್ರಮ
ವಿಜಯದ ಪರಿಭಾಷೆ ವಿಶ್ಲೇಷಿಸಿದ
ಸ್ವಾನುಭವಿ ಬಾಹುಬಲಿ!

ರಾಜಾಧಿರಾಜ ಮಹಾರಾಜರೊಳು
ವಿರಾಜಿಸದೆ ತನ್ನೆಡೆಗೆ ಸನ್ನದ್ದ
'ಭಟಖಡ್ಗಮಂಡಲೋತ್ಫಲ ಭ್ರಮರಿ
ರಾಜ್ಯಲಕ್ಷ್ಮಿ'ಯ ನಶ್ವರತೆ ವ್ಯಾಖ್ಯಾನಿಸಿದ
ಧೀಯೋಗಿ ಬಾಹುಬಲಿ!

ತನ್ನದೇ ಇಹುದೆಲ್ಲ ಎಂಬಂತಿರಲು
ಇಹುದೆಲ್ಲವನ್ನೂ ತನ್ನದಲ್ಲವೇ ಅಲ್ಲ
ಎಂದು ಅಚಲ ಸ್ಥಿತಪ್ರಜ್ಞೆಯಿಂದ
ನಿರಾಕರಿಸಿ ಹೊರಟ ಸರ್ವಪರಿತ್ಯಾಗಿ
ಬೈರಾಗಿ ಬಾಹುಬಲಿ!

ತ್ಯಾಗ-ವಿವೇಚನ-ವಿಶ್ಲೇಷಣ ದುರ್ಲಭ, 
ಅಂಧಾನುಕರಣ - ಭೋಗಧಿಕ ಆಚರಣ, 
ನಿತ್ಯ ಅಭ್ಯಂಜನ, ಸಹಿಸಿ ಮೂಕ ವೇದನ,
ಇಂದಿನ ಕಾರಣಕ್ಷಾಮದಿ ನಿಂತಿಹನೇನೋ
ಕಲ್ಲಾಗಿ ಬಾಹುಬಲಿ?


- ಮಂಜುನಾಥ್ ಎ ಎನ್

ಪರಿಸರ ಪ್ರೀತಿ - ಹಿಮಾಚಲ ಪ್ರದೇಶದ ಮಾಣಿಕ್ಯ ಕಿಂಕ್ರಿದೇವಿ





ಹಿಮಾಚಲ ಪ್ರದೇಶದ ರತ್ನವೆಂದೇ ಪರಿಗಣಿಸಲ್ಪಟ್ಟಿರುವ ಕಿಂಕ್ರಿದೇವಿಯವರು ಭಾರತದ ಪ್ರಖ್ಯಾತ ಪರಿಸರವಾದಿಗಳಲ್ಲೊಬ್ಬರು. ತಮ್ಮ ರಾಜ್ಯವಾದ ಹಿಮಾಚಲಪ್ರದೇಶದಲ್ಲಿ ಪರಿಸರವನ್ನು ಹಾಳು ಮಾಡುತ್ತಿರುವ ಕಾನೂನುಬಾಹಿರ ಗಣಿಗಾರಿಕೆಯ ವಿರುದ್ಧ ಸಮರ ಸಾರಿದ್ದ ದಿಟ್ಟ ಮಹಿಳೆ. ಓದು ಬರಹವನ್ನೇ ಕಲಿಯದ ಆಕೆ ಪರಿಸರದ ಬಗ್ಗೆ ಅಪಾರ ಜ್ಞಾನವನ್ನು ಪಡೆದಿದ್ದರು ಮತ್ತು ಅದರ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಂತರು (ಸಾಯುವ ಕೆಲವೇ ವರ್ಷಗಳ ಮುಂಚೆ ಸಹಿ ಮಾಡುವುದನ್ನು ಕಲಿತರು)

೧೯೨೫ರಲ್ಲಿ ಕಿಂಕ್ರಿದೇವಿಯವರು ಹಿಮಾಚಲ ಪ್ರದೇಶದ ಸಿರ್ಮಾರ್ ಜಿಲ್ಲೆಯ ಘಾಟೋನ್ ಎಂಬ ಹಳ್ಳಿಯಲ್ಲಿ ಜನಿಸಿದರು. ತಂದೆ ದಲಿತ ಸಮುದಾಯಕ್ಕೆ ಸೇರಿದ ಒಬ್ಬ ಸಣ್ಣ ರೈತ. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮನೆ ಕೆಲಸದಾಳಾಗಿ ಕೆಲಸ ಮಾಡಲಾರಂಭಿಸಿದ ಕಿಂಕ್ರಿದೇವಿ ೧೪ ವಯಸ್ಸಿಗೆ ಜೀತದಾಳಾಗಿದ್ದ ಶಾಮು ರಾಮ್ ಎನ್ನುವಾತನನ್ನು ಮದುವೆಯಾದರು. ಆದರೆ ಆಕೆಗೆ ೨೨ ವರ್ಷವಾಗಿದ್ದಾಗ ಆತ ಜ್ವರದಿಂದ ಮೃತಪಟ್ಟರು. 

ನಂತರ ಜೀವನ ಸಾಗಿಸಲು ಜಾಡಮಾಲಿ ಕೆಲಸ ಮಾಡುತ್ತಿದ್ದ ಕಿಂಕ್ರಿದೇವಿಯವರು ಹಿಮಾಚಲಪ್ರದೇಶದ ಬೆಟ್ಟಗಳ ಕೆಲವು ಭಾಗಗಳಲ್ಲಿ ಭಾರಿ ಗಣಿಗಾರಿಕೆ ನಡೆಯುತ್ತಿರುವುದನ್ನು ಗಮನಿಸಿದರು. ಗಣಿಗಾರಿಕೆ ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿತ್ತು ಮತ್ತು ಸರಬರಾಜಿಗೆ ತೊಂದರೆಯನ್ನು ಉಂಟುಮಾಡುತ್ತಿತ್ತು. ಜೊತೆಗೆ ಭತ್ತದ ಹೊಲಗಳ ಮತ್ತು ಕಾಡಿನ ನಾಶಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ಪರಿಸರ ಸಂರಕ್ಷಣಾ ಕಾರ್ಯವನ್ನು ಕಿಂಕ್ರಿದೇವಿ ತಮ್ಮ ಹೆಗಲಿನ ಮೇಲೆ ಹೊತ್ತರು. ಮೊದಲಿಗೆ ಸ್ಥಳೀಯ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದರು. ಸುತ್ತಮುತ್ತಲ ಹಳ್ಳಿಗಳ ಜನರೊಂದಿಗೆ ಆ ಬಗ್ಗೆ ಮಾತನಾಡಲಾರಂಭಿಸಿದರು. ನಂತರ ಆಕೆ ೪೮ ಗಣಿ ಮಾಲೀಕರ ವಿರುದ್ಧ ಶಿಮ್ಲಾ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿದರು. “ಪೀಪಲ್ಸ್ ಆಕ್ಷನ್ ಫಾರ್ ಪೀಪಲ್ ಇನ್ ನೀಡ” ಎಂಬ ಸ್ಥಳೀಯ ಸ್ವಯಂಸೇವಾ ಸಂಘಟನೆ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡಿತು. ಆದರೆ ಗಣಿ ಮಾಲೀಕರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಕಿಂಕ್ರಿದೇವಿ ತಮ್ಮನ್ನು ಬೆದರಿಸಿ ಹಣ ವಸೂಲಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪ ಹೊರಿಸಿದರು. ಕಿಂಕ್ರಿದೇವಿಯವರು ಇದಾವುದರಿಂದಲೂ ಧೃತಿಗೆಡಲಿಲ್ಲ. ಅವರು ತಮ್ಮ ಕೇಸ್ ಹಿಂದೆಗೆದುಕೊಳ್ಳಲಿಲ್ಲ. ಆದರೆ, ಅವರಿಗೆ ಕೋರ್ಟ್ ನಿಂದ ಯಾವುದೇ ರೀತಿ ಪ್ರತಿಕ್ರಿಯೆ ಸಿಗದಾಗ, ಅವರು ೧೯ ದಿನ ಶಿಮ್ಲಾದಲ್ಲಿ ಹೈಕೋರ್ಟ್ ಹೊರಗಡೆ ಉಪವಾಸ ಸತ್ಯಾಗ್ರಹ ನಡೆಸಿದರು. ಆಗ, ಕೋರ್ಟ್ ಈ ಬಗ್ಗೆ ವಿಚಾರಣೆ ನಡೆಸಲು ಒಪ್ಪಿತು. ಇಡೀ ಜಗತ್ತು ಅವರೆಡೆ ನೋಡುವಂತಾಯಿತು. ೧೯೮೭ರಲ್ಲಿ ಹೈಕೋರ್ಟ್ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿತು.

ಗಣಿ ಮಾಲೀಕರು ಸರ್ವೋಚ್ಛ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿ ತಮ್ಮ ಹೋರಾಟವನ್ನು ಮುಂದುವರೆಸದಂತೆ ಕಿಂಕ್ರಿದೇವಿಯವರಿಗೆ ಜೀವಬೆದರಿಕೆಯನ್ನೊಡ್ಡಿದರು. ಆದರೆ ಕಿಂಕ್ರಿದೇವಿಯವರು ತಮ್ಮ ಹೋರಾಟವನ್ನು ಹಿಂದೆಗೆದುಕೊಳ್ಳಲಿಲ್ಲ. ೧೯೯೫ರಲ್ಲಿ ಸರ್ವೋಚ್ಛ ನ್ಯಾಯಾಲಯಗಣಿ ಮಾಲೀಕರ ಮನವಿಯನ್ನು ತಿರಸ್ಕರಿಸಿತು. ಕಿಂಕ್ರಿದೇವಿಯವರ ಹೋರಾಟವನ್ನು ಗಮನಿಸಿದ ಅಮೇರಿಕಾದ ಹಿಲರಿ ಕ್ಲಿಂಟನ್ ಅವರನ್ನು ಅದೇ ವರ್ಷ ಬೀಜಿಂಗ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನಕ್ಕೆ ಆಹ್ವಾನಿಸಿದರು. ಆಗಲೂ ಜಾಡಮಾಲಿ ಕೆಲಸ ಮಾಡುತ್ತಿದ್ದ ಕಿಂಕ್ರಿದೇವಿಯವರು ಸಮ್ಮೇಳನದಲ್ಲಿ ದೀಪ ಬೆಳಗಿಸುವುದರೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ತಮ್ಮ ಹೋರಾಟದ ಬಗ್ಗೆ ಮಾತನಾಡಿದ ಅವರು, ಸಾಮಾನ್ಯ ಜನರೂ ಸಹ ಹೇಗೆ ಸಮಾಜದ ಮೇಲೆ ಪರಿಣಾಮ ಬೀರಬಹುದೆಂಬುದನ್ನು ಸಭೆಯಲ್ಲಿ ತಿಳಿಸಿಕೊಟ್ಟರು.

ಪರಿಸರ ಸಂರಕ್ಷಣೆಗಾಗಿಯೇ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಅವರಿಗೆ ಹಿಮಾಚಲಪ್ರದೇಶದ ಸರ್ಕಾರ ಯಾವುದೇ ರೀತಿಯ ಬೆಂಬಲವನ್ನು, ಹಣಕಾಸಿನ ನೆರವನ್ನು ನೀಡಲಿಲ್ಲ. ೧೯೯೯ರಲ್ಲಿ ಝಾನ್ಸಿ ಕಿ ರಾಣಿ ಲಕ್ಷ್ಮಿಬಾಯಿ ಸ್ತ್ರೀಶಕ್ತಿ ಪುರಸ್ಕಾರವನ್ನು ನೀಡಲಾಯಿತು. ಕಿಂಕ್ರಿದೇವಿಯವರು ತಾವು ನೆಲೆಸಿದ್ದ ಸಂಗ್ರಾಹ್ ನಲ್ಲಿ ಹೆಣ್ಣುಮಕ್ಕಳ ಸಾಕ್ಷರತೆಗಾಗಿ ಶ್ರಮಿಸಿದರು. “ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡದೆ ಯಾವ ದೇಶವಾಗಲೀ ಸಮಾಜವಾಗಲೀ ಅಭಿವೃದ್ಧಿಯಾಗಲು ಸಾಧ್ಯವಿಲ್ಲ” ಎಂಬುದು ಅವರ ವಿಚಾರವಾಗಿತ್ತು. ತಮ್ಮ ಹಳ್ಳಿ ಸಂಗ್ರಾಹ್ ನಲ್ಲಿ ಪದವಿ ಕಾಲೇಜನ್ನು ಆರಂಭಿಸಬೇಕೆಂದು ಆಗ್ರಹಿಸಿದರು. ಅವರ ಹೋರಾಟದ ಫಲವಾಗಿ, ೨೦೦೬ರಲ್ಲಿ ಅಲ್ಲಿ ಕಾಲೇಜು ಆರಂಭವಾಯಿತು. “ನನಗೆ ಓದಲಾಗಲಿಲ್ಲ ನಿಜ. ಆದರೆ
ನನ್ನಂತೆ ಇತರರು ಶಿಕ್ಷಣವಿಲ್ಲದೆ ಸಮಸ್ಯೆಗೆ ಎದುರಾಗಬಾರದು” ಎಂಬುದು ಅವರ ಅಭಿಪ್ರಾಯವಾಗಿತ್ತು.

ಜೀವನದುದ್ದಕ್ಕೂ ಸಾಮಾಜಿಕ ಕಳಕಳಿಯನ್ನು ಹೊಂದಿದ, ಹೋರಾಟವನ್ನು ಮಾಡುತ್ತಲೇ ಜೀವನ ಸವೆಸಿದ ಅವರು ತಮ್ಮ ಕಡೆಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾದರು. ಆ ಸಮಯದಲ್ಲಿಯೂ ಸಹ ಯಾವ ಸರ್ಕಾರಗಳೂ ಅವರ ನೆರವಿಗೆ ಬರಲಿಲ್ಲ. ಅವರ ಪರಿಸ್ಥಿತಿಯನ್ನರಿತ ಕೆಲವು ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರಿಯೇತರ ಸಂಸ್ಥೆಗಳು ಅವರ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಿ ಕೊಟ್ಟರು. ಕಿಂಕ್ರಿದೇವಿಯವರು ೨೦೦೭ರ ಡಿಸೆಂಬರ್ ೩೦ ರಂದು ಚಂಡಿಗಡ್ ನಲ್ಲಿ ಮರಣ ಹೊಂದಿದರು.

ಅವರ ಘೋಷಣೆ “ಜಲ, ಕಾಡು, ಬೆಟ್ಟಗಳನ್ನು ಸಂರಕ್ಷಿಸಿ” ಎಂಬುದು ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುತ್ತದೆ. ಅವರನ್ನು ಕೇವಲ ಸಂಗ್ರಾಹ್ ನ ಸ್ಥಳೀಯರು ಮಾತ್ರವಲ್ಲ, ಭಾರತದ ಉತ್ತರ ಪ್ರಾಂತ್ಯದವರು ಮಾತ್ರವಲ್ಲ, ಇಡೀ ದೇಶವೇ ನೆನಪಿಸಿಕೊಳ್ಳಬೇಕು, ಅವರ ಪರಿಸರ ಸಂರಕ್ಷಣಾ ಚಳುವಳಿಯನ್ನು ಮುಂದುವರೆಸಬೇಕು. ಅದು ನಾವು ಆ ಪರಿಸರ ಹೋರಾಟಗಾರ್ತಿಗೆ ಸಲ್ಲಿಸುವ ನಿಜ ನಮನವಾಗುತ್ತದೆ.


- ಡಾ।। ಸುಧಾ.ಜಿ

ಅನುವಾದ: "ಸುಲ್ತಾನಾಳ ಕನಸು"

 ಮೂಲ: ರೊಕೆಯಾ ಶೆಕಾವತ್ ಹೊಸೆನ್
(ಈ ಕಥೆ ಮೊದಲು ೧೯೦೫ರಲ್ಲಿ ಮದ್ರಾಸ್ನ “ದಿ ಇಂಡಿಯನ್ ಲೇಡಿಸ್ ಮ್ಯಾಗಜೈನ್”ನಲ್ಲಿ ಇಂಗ್ಲಿಷ್ ನಲ್ಲಿ ಪ್ರಕಟವಾಯಿತು. ಶಾಲೆಗೆ ಹೋಗದ ರೊಕೆಯಾರವರು ತಮ್ಮ ಅಣ್ಣನಿಂದ ಬಂಗಾಳಿ ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿತರು. ನಂತರ ಪತಿ ಶೆಕಾವತ್ ಹೊಸೆನ್ ಸಹ ಅವರ ಚಟುವಟಿಕೆಗಳಿಗೆ ನೆರವಾದರು. ಸಮಾಜ ಸುಧಾರಣೆಯಲ್ಲಿ, ಸ್ತ್ರೀ ಶಿಕ್ಷಣದಲ್ಲಿ, ಸ್ತ್ರೀ ಹಕ್ಕುಗಳ ವಿಷಯದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು. ಹೆಣ್ಣುಮಕ್ಕಳಿಗಾಗಿ ಶಾಲೆಯನ್ನು ತೆರೆದರು. ಅದು ಇಂದಿಗೂ ಸಹ ಕಲ್ಕತ್ತಾದಲ್ಲಿ ನಡೆಯುತ್ತಿದೆ. ಶಾಲೆಗೆ ಹೋಗದ ರೊಕೆಯಾರವರು ಈ ಕಥೆಯಲ್ಲಿ ವಿಜ್ಞಾನದ ಬಹಳ ಅಂಶಗಳನ್ನು ತಮ್ಮ ಕಲ್ಪನೆಯೊಂದಿಗೆ ಬೆರೆಸಿದ್ದಾರೆ.. ಸ್ತ್ರೀವಾದಿ ಧೋರಣೆಯಿಂದ ಈ ಕಥೆಯನ್ನು ಬರೆದಿರುವ ರೊಕೆಯಾರವರು ಜೆನಾನಾದಲ್ಲಿ ಹೆಣ್ಣುಮಕ್ಕಳನ್ನು ಇಟ್ಟಿರುವುದನ್ನು ವಿರೋಧಿಸಿ ಈ ಕಥೆಯನ್ನು ಬರೆದಿದ್ದಾರೆ. ಈ ಕಥೆ ವಿಶ್ವದ ಬಹಳಷ್ಟು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಸ್ತುವಾಗಿದೆ, ಚರ್ಚೆಗೆ ಒಳಗಾಗಿದೆ.)



ಒಂದು ದಿನ ಸಂಜೆ, ನಾನು ನನ್ನ ಮಲಗುವ ಕೋಣೆಯಲ್ಲಿ ಆರಾಮಕುರ್ಚಿಯಲ್ಲಿ ಕುಳಿತು ಭಾರತದ ಸ್ತ್ರೀಯರ ಪರಿಸ್ಥಿತಿಯ ಬಗ್ಗೆ ಆಲೋಚಿಸುತ್ತಿದ್ದೆ. ನಾನು ಹಾಗೆಯೇ ನಿದ್ರೆ ಹೋದೆನಾ ಅಥವಾ ಏನೆಂದು ನನಗೆ ಗೊತ್ತಿಲ್ಲ. ಆದರೆ ನನಗೆ ನೆನಪಿರುವಷ್ಟರ ಮಟ್ಟಿಗೆ, ನಾನು ಎಚ್ಚರವಾಗಿಯೇ ಇದ್ದೆ. ಆಕಾಶದಲ್ಲಿ ಹುಣ್ಣಿಮೆ ಚಂದ್ರನೊಂದಿಗೆ, ಸಾವಿರಾರು ವಜ್ರದಂತಹ ನಕ್ಷತ್ರಗಳು ಸ್ಪಷ್ಟವಾಗಿ ಹೊಳೆಯುತ್ತಿದ್ದುದ್ದನ್ನು ನಾನು ಕಂಡೆ.
ಇದ್ದಕ್ಕಿದ್ದಂತೆ ಓರ್ವ ಮಹಿಳೆ ನನ್ನೆದುರಿಗೆ ನಿಂತರು; ಅವರು ಹೇಗೆ ಅಲ್ಲಿಗೆ ಬಂದರೋ ನನಗೆ ಗೊತ್ತಿಲ್ಲ. ಅವರನ್ನು ನಾನು ನನ್ನ ಗೆಳತಿ ಸಿಸ್ಟರ್ ಸಾರಾ ಎಂದುಕೊಂಡೆ.
“ಶುಭೋದಯ” ಹೇಳಿದರು ಸಿಸ್ಟರ ಸಾರಾ. ನಾನು ನನ್ನೊಳಗೇ ನಕ್ಕೆ, ಏಕೆಂದರೆ ಅದು ಬೆಳಿಗ್ಗೆಯಲ್ಲವೆಂದು ಆದರೆ ನಕ್ಷತ್ರಭರಿತ ರಾತ್ರಿಯೆಂದು ನನಗೆ ಗೊತ್ತಿತ್ತು. “ಹೇಗಿದ್ದೀರಿ”? ಪ್ರಶ್ನಿಸಿದೆ.
“ನಾನು ಚೆನ್ನಾಗಿದ್ದೇನೆ. ವಂದನೆಗಳು. ನನ್ನೊಂದಿಗೆ ಹೊರಗೆ ಬಂದು ನಮ್ಮ ತೋಟವನ್ನು ನೋಡುತ್ತೀಯಾ?”
ನಾನು ಮತ್ತೆ ತೆರೆದ ಕಿಟಕಿಯ ಮೂಲಕ ಚಂದ್ರನನ್ನು ನೋಡಿದೆ. ಆ ವೇಳೆಯಲ್ಲಿ ಹೊರಗೆ ಹೋಗುವುದರಲ್ಲಿ ಏನೂ ತೊಂದರೆಯಿಲ್ಲ ಎಂದು ಭಾವಿಸಿದೆ. ಆಗಷ್ಟೇ ಮನೆಯಲ್ಲಿದ್ದ ಪುರುಷ ಸೇವಕರು ಮಲಗಲು ತೆರಳಿದ್ದರು, ಸಿಸ್ಟರ್ ಸಾರಾ ಜೊತೆ ಆರಾಮವಾಗಿ ವಾಕ್ ಮಾಡಬಹುದು ಎಂದುಕೊಂಡೆ.
ನಾವು ಡಾರ್ಜಲಿಂಗ್ ನಲ್ಲಿದ್ದಾಗ ಆಗಾಗ ಸಿಸ್ಟರ್ ಸಾರಾರವರೊಂದಿಗೆ ಹಲವಾರು ಬಾರಿ ನಡೆದಾಡಿದ್ದೇನೆ. ಹಲವಾರು ಬಾರಿ ನಾವು ಕೈಕೈ ಹಿಡಿದು, ಅಲ್ಲಿದ್ದ ಸಸ್ಯವನಗಳಲ್ಲಿ ಮಾತನಾಡುತ್ತಾ ನಡೆದಾಡಿದ್ದೇವೆ. ನನಗನಿಸಿತು, ಸಿಸ್ಟರ್ ಸಾರಾ ಬಹುಶಃ ನನ್ನನ್ನು ಅಂತಹುದೇ ಯಾವುದೋ ವನಕ್ಕೆ ಕರೆದುಕೊಂಡು ಹೋಗಲು ಬಂದಿದ್ದಾರೆ ಎಂದು ಊಹಿಸಿದೆ. ನಾನು ಖುಷಿಯಿಂದಲೇ ಅವರ ಆಹ್ವಾನವನ್ನು ಒಪ್ಪಿ, ಅವರೊಂದಿಗೆ ಹೊರಹೋದೆ.
ಹೊರಗೆ ನಡೆಯುತ್ತಿದ್ದಾಗ, ಅದು ಬೆಳಿಗ್ಗೆಯೆಂಬುದನ್ನು ಕಂಡು ನನಗೆ ಆಶ್ಚರ್ಯವಾಯಿತು. ನಗರವು ಸಂಪೂರ್ಣವಾಗಿ ಎದ್ದಿತ್ತು ಮತ್ತು ರಸ್ತೆಗಳಲ್ಲಿ ಜನರು ತಮ್ಮ ಚಟುವಟಿಕೆಗಳಲ್ಲಿ ಮಗ್ನರಾಗಿದ್ದದ್ದು ಕಂಡುಬಂದಿತು. ನಾನು ಬೆಳಗಿನ ಸಮಯದಲ್ಲಿ ರಸ್ತೆಯಲ್ಲಿ ನಡೆಯುತ್ತಿದ್ದೇನೆ ಎಂದು ನನಗೆ ಸಂಕೋಚವೆನಿಸುತಿತ್ತು,.  ಆದರೆ ದಾರಿಯಲ್ಲಿ ಒಬ್ಬ ಪುರುಷನೂ ಕಂಡುಬರಲಿಲ್ಲ.
ಕೆಲವು ದಾರಿಹೋಕರು ನನ್ನನ್ನು ನೋಡಿ ತಮಾಷೆ ಮಾಡಿದರು. ನನಗೆ ಅವರ ಭಾಷೆ ಅರ್ಥವಾಗದಿದ್ದರೂ ಅವರು ತಮಾಷೆ ಮಾಡುತ್ತಿದ್ದಾರೆ ಎಂದು ಖಚಿತವಾಗಿತ್ತು. ನಾನು ನನ್ನ ಗೆಳತಿಯನ್ನು ಕೇಳಿದೆ, “ಅವರು ಏನು ಹೇಳಿದರು?”
“ಆ ಮಹಿಳೆಯರು ಹೇಳುತ್ತಿದ್ದಾರೆ ನೀನು ಪುರುಷನಂತೆ ಇದ್ದೀಯಾ ಎಂದು.”
“ಪುರುಷನಂತೆ?” ನಾನು ಕೇಳಿದೆ “ಏನು ಹಾಗೆಂದರೆ?”
“ನೀನು ಪುರುಷರಂತೆ ಸಂಕೋಚ ಸ್ವಭಾವದವಳು ಮತ್ತು ಭಯಸ್ಥಳು ಎಂದು.”
“ಪುರುಷರಂತೆ ಸಂಕೋಚ ಸ್ವಭಾವದವಳು ಮತ್ತು ಭಯಸ್ಥಳು?” ಅದು ನಿಜವಾಗಲೂ ಒಂದು ಜೋಕ್ ಎನಿಸಿತು. ನನಗೆ ನನ್ನ ಜೊತೆಗಾತಿ ಸಿಸ್ಟರ್ ಸಾರಾ ಅಲ್ಲ ಯಾರೋ ಅಪರಿಚಿತೆ ಎಂದು ತಿಳಿದು ಅಳುಕುಂಟಾಯಿತು. “ಓಹ್, ಈ ವ್ಯಕ್ತಿಯನ್ನು ನಾನು ನನ್ನ ಹಳೆಯ ಪ್ರೀತಿಯ ಗೆಳತಿ ಸಿಸ್ಟರ್ ಸಾರಾ ಎಂದು ಭಾವಿಸುವ ತಪ್ಪನ್ನು ಮಾಡಿದೆನಲ್ಲ ಮೂರ್ಖಳಂತೆ.”
ಆಕೆಗೆ ನನ್ನ ಕೈ ಬೆರಳುಗಳು ನಡುಗುತ್ತಿದ್ದದ್ದು ತಿಳಿಯಿತು, ಏಕೆಂದರೆ ನಾವು ಕೈಹಿಡಿದು ನಡೆಯುತ್ತಿದ್ದೆವು.
“ಏನಾಯಿತು ಗೆಳತಿ?” ಪ್ರೀತಿಯಿಂದ ಕೇಳಿದಳಾಕೆ.
“ನನಗೆ ವಿಚಿತ್ರವೆನಿಸುತ್ತಿದೆ, ಏಕೆಂದರೆ ನಾನು ಪರ್ದಾ ಹಾಕಿಕೊಳ್ಳುವ ಮಹಿಳೆ, ಈ ರೀತಿ ಪರ್ದಾ ಇಲ್ಲದೆ ಹೊರಗಡೆ ನಡೆಯುವುದು ನನಗೆ ಅಭ್ಯಾಸವಿಲ್ಲ,” ಕ್ಷಮಾಪಣೆ ಕೋರಿದೆ.
“ಪುರುಷ ಅಡ್ಡಬರುತ್ತನೆಂದು ನೀನೇನೂ ಗಾಬರಿಯಾಗಬೇಕಿಲ್ಲ. ಇದು ಸ್ತ್ರೀನಾಡು. ಪಾಪ ಮತ್ತು ಹಾನಿಯಿಂದ ಮುಕ್ತವಾದ ನಾಡು. ಸದ್ಗುಣವೇ ಆಳ್ವಿಕೆ ನಡೆಸುತ್ತಿರುವ ನಾಡು.”
ಮಾತಿನ ನಡುವೆ ನಾನು ಸುತ್ತಮುತ್ತಲಿನ ನೋಟಗಳನ್ನು ಆಸ್ವಾದಿಸುತ್ತಿದ್ದೆ. ಬಹಳ ಅದ್ಭುತವಾಗಿತ್ತು. ಅಲ್ಲಿದ್ದ ಹಸಿರು ಹುಲ್ಲಿನ ಹಾಸನ್ನು ನಾನು ವೆಲ್ವೆಟ್ ಕುಷನ್ ಎಂದುಕೊಂಡೆ. ನಾನೇನೋ ಮೃದುವಾದ ಕಾರ್ಪೆಟ್ ಮೇಲೆ ನಡೆಯುವಂತೆ ಕೆಳಗೆ ನೋಡಿದೆ ಮತ್ತು ಹಾದಿಯುದ್ದಕ್ಕೂ ಅದು ಹೂಗಳಿಂದ ಆವೃತವಾಗಿದ್ದದ್ದನ್ನು ಕಂಡೆ.
“ಎಷ್ಟೊಂದು ಸುಂದರವಾಗಿದೆ” ಎಂದೆ ನಾನು.
“ನಿನಗಿಷ್ಟವಾಯಿತೆ?” ಕೇಳಿದರು ಸಿಸ್ಟರ್ ಸಾರಾ (ನಾನು ಅವರನ್ನು ಅದೇ ರೀತಿಯೇ ಕರೆಯಲು ಮುಂದುವರೆಸಿದೆ, ಆಕೆ ನನ್ನನ್ನು ನನ್ನ ಹೆಸರಿಟ್ಟು ಕರೆಯುತ್ತಿದ್ದರು)
“ಹೌದು, ಬಹಳ. ಆದರೆ ನನಗೆ ಈ ಸೂಕ್ಷ್ಮ, ಸುಂದರ ಹೂಗಳ ಮೇಲೆ ನಡೆಯಲು ಮನಸ್ಸಿಲ್ಲ.”
“ಪರವಾಗಿಲ್ಲ, ಪ್ರೀತಿಯ ಸುಲ್ತಾನಾ. ನಿನ್ನ ನಡಿಗೆ ಅವುಗಳಿಗೆ ಹಾನಿ ಮಾಡುವುದಿಲ್ಲ, ಅವು ಬೀದಿ ಹೂಗಳು.”
“ಈ ಇಡೀ ಜಾಗ ತೋಟದಂತೆ ಕಾಣಿಸುತ್ತದೆ” ಹೇಳಿದೆ ನಾನು ಹೊಗಳುತ್ತಾ, “ನೀವು ಪ್ರತಿಯೊಂದು ಗಿಡವನ್ನೂ ಬಹಳ ಕೌಶಲ್ಯದಿಂದ ಜೋಡಿಸಿದ್ದೀರಿ.”
“ನಿಮ್ಮ ದೇಶವಾಸಿಗಳು ಇಚ್ಛಿಸಿದಲ್ಲಿ, ನಿಮ್ಮ ಕಲ್ಕತ್ತಾ ಸಹ ಇದಕ್ಕಿಂತ ಸುಂದರವಾದ ತೋಟವಾಗುತ್ತದೆ.”
“ಅವರಿಗೆ ಮಾಡಲು ಬೇರೆಯ ಕೆಲಸಗಳೂ ಬೇಕಾದಷ್ಟಿರುವಾಗ, ತೋಟಗಾರಿಕೆಯ ಬಗ್ಗೆ ಇಷ್ಟು ಗಮನ ಕೊಡುವುದು ಅನುಪಯುಕ್ತ ಎಂದು ಅವರು ಭಾವಿಸುತ್ತಾರೆ,.”
“ಅವರಿಗೆ ಅದಕ್ಕಿಂತ ಉತ್ತಮವಾದ ನೆಪ ಕೊಡಲು ಸಾಧ್ಯವಿರಲಿಲ್ಲ” ನಗುತ್ತಾ ಹೇಳಿದರಾಕೆ.
ನನಗೆ ಪುರುಷರು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ತೀವ್ರವಾಯಿತು. ನಾನು ನಡೆಯುವಾಗ ನೂರಕ್ಕೂ ಹೆಚ್ಚು ಮಹಿಳೆಯರನ್ನು ಭೇಟಿ ಮಾಡಿದೆ. ಆದರೆ ಒಬ್ಬನೇ ಒಬ್ಬ ಪುರುಷನೂ ಕಾಣಿಸಲಿಲ್ಲ.
“ಪುರುಷರೆಲ್ಲಿ?” ನಾನು ಆಕೆಯನ್ನು ಕೇಳಿದೆ.
“ಅವರ ಸರಿಯಾದ ಜಾಗದಲ್ಲಿ, ಎಲ್ಲಿರಬೇಕೋ ಅಲ್ಲಿ.”
“ಅವರ ಸೂಕ್ತ ಸ್ಥಳಗಳಲ್ಲಿ, ಅಂದರೇನು?”
“ಓ, ನನಗೆ ನನ್ನ ತಪ್ಪಿನ ಅರಿವಾಯಿತು. ನಿನಗೆ ನಮ್ಮ ರೀತಿನೀತಿಗಳು ಗೊತ್ತಿಲ್ಲ, ಏಕೆಂದರೆ ಮೊದಲೆಂದೂ ನೀನು ಇಲ್ಲಿಗೆ ಬಂದಿರಲಿಲ್ಲ. ನಾವು ನಮ್ಮ ಪುರುಷರನ್ನು ಮನೆಯ ಒಳಗಡೆ ಇಟ್ಟಿದ್ದೇವೆ.”
“ನಮ್ಮನ್ನು ಜೆನಾನಾದಲ್ಲಿಟ್ಟಂತೆ?”
“ಹೌದು, ಅದೇ ರೀತಿ.”
“ಎಷ್ಟು ಹಾಸ್ಯಾಸ್ಪದ!” ನಾನು ನಗಲಾರಂಭಿಸಿದೆ. ಸಿಸ್ಟರ್ ಲಾರಾ ಸಹ ನಗಲಾರಂಭಿಸಿದರು.
“ನನ್ನ ಪ್ರೀತಿಯ ಸುಲ್ತಾನಾ, ಹಾನಿರಹಿತ ಮಹಿಳೆಯರನ್ನು ಮನೆಯ ಒಳಗಿಟ್ಟು, ಪುರುಷರನ್ನು ಹೊರಗಡೆ ಬಿಡುವುದು ಎಷ್ಟು ಅನ್ಯಾಯ?”
“ಏಕೆ? ನಾವು ಜೆನಾನಾದಿಂದ ಹೊರಗೆ ಬರುವುದು ನಮಗೆ ಒಳ್ಳೆಯದಲ್ಲ, ಏಕೆಂದರೆ ನಾವು ಸಹಜವಾಗಿಯೇ ಬಲಹೀನರು.”
“ಹೌದು, ಪುರುಷರು ಬೀದಿಯಲ್ಲಿರುವವರೆಗೆ ನಾವು ಹೊರಗಿರುವುದು ಸುರಕ್ಷತೆಯಲ್ಲ, ಅಥವಾ ಮಾರುಕಟ್ಟೆಗೆ ಕಾಡುಮೃಗ ಬಂದರೂ ಅಷ್ಟೇ.”
“ಹೌದು ಖಂಡಿತವಾಗಿಯೂ.”
“ಒಂದುವೇಳೆ, ಕೆಲವು ಹುಚ್ಚರು ಹುಚ್ಚಾಸ್ಪತ್ರೆಯಿಂದ ಹೊರಗೆ ಬಂದು ಪುರುಷರಿಗೆ, ಕುದುರೆಗಳಿಗೆ ಮತ್ತು ಇತರ ಜೀವಿಗಳಿಗೆ ಹಾನಿ ಮಾಡಲು ಯತ್ನಿಸಿದರೆ, ಆಗ ನಿಮ್ಮ ದೇಶವಾಸಿಗಳು ಏನು ಮಾಡುತ್ತಾರೆ?”
“ಅವರನ್ನು ಬಂಧಿಸಲು ಪ್ರಯತ್ನಿಸಿ, ಅವರನ್ನು ಮತ್ತೆ ಹುಚ್ಚಾಸ್ಪತ್ರೆಯಲ್ಲಿ ಬಿಡುತ್ತಾರೆ.”
“ಧನ್ಯವಾದಗಳು. ಬುದ್ಧಿ ಸರಿಯಿರುವವರನ್ನು ಒಳಗಿಟ್ಟು, ಹುಚ್ಚರನ್ನು ಹೊರಗೆ ಬಿಡಬೇಕೆಂದು ನೀನು ಭಾವಿಸುವುದಿಲ್ಲ ಅಲ್ಲವೇ?”
“ಖಂಡಿತವಾಗಿಯೂ ಇಲ್ಲ” ನಗುತ್ತಾ ಹೇಳಿದೆ.
“ವಾಸ್ತವವಾಗಿ, ನಿಮ್ಮ ದೇಶದಲ್ಲಿ ಇದೇ ನಡೆಯುತ್ತಿರುವುದು. ಎಲ್ಲ ರೀತಿಯ ತಪ್ಪುಗಳನ್ನು, ಹಾನಿಯನ್ನು ಮಾಡುವ ಅಥವಾ ಮಾಡಲು ಸಮರ್ಥರಾಗಿರುವ ಪುರುಷರನ್ನು ಹೊರಗಡೆ ಬಿಟ್ಟು, ಮುಗ್ಧ ಹೆಣ್ಣುಮಕ್ಕಳನ್ನು ಜೆನಾನದಲ್ಲಿಡಲಾಗಿದೆ. ತರಬೇತಿಯಿಲ್ಲದ ಆ ಪುರುಷರನ್ನು ಹೊರಗಡೆ ಹೇಗೆ ನಂಬುವುದು?”
“ನಮ್ಮ ಸಾಮಾಜಿಕ ವಿಷಯಗಳ ನಿರ್ವಹಣೆಯಲ್ಲಿ ನಮಗೆ ದನಿಯೆತ್ತುವ, ಮಧ್ಯಪ್ರವೇಶಿಸುವ ಅಧಿಕಾರವಿಲ್ಲ. ಭಾರತದಲ್ಲಿ ಪುರುಷ ಒಡೆಯ, ದೇವರು. ಅವನು ಎಲ್ಲಾ ಅಧಿಕಾರಗಳನ್ನು, ಸವಲತ್ತುಗಳನ್ನು ತನ್ನದಾಗಿಸಿಕೊಂಡಿದ್ದಾನೆ ಮತ್ತು ಮಹಿಳೆಯರನ್ನು ಜೆನಾನದಲ್ಲಿ ಕೂಡಿಹಾಕಿದ್ದಾನೆ. ನೀವು ಏಕೆ ಒಳಗೆ ಬಂಧಿತರಾಗಲು ಅವಕಾಶ ಕೊಟ್ಟಿದ್ದೀರಿ?”
“ಏಕೆಂದರೆ, ಇನ್ನೇನೂ ಮಾಡಲು ಸಾಧ್ಯವಿಲ್ಲ, ಅವರು ಮಹಿಳೆಯರಿಗಿಂತ ಬಲಿಷ್ಟರು.”
“ಸಿಂಹ ಮನುಷ್ಯನಿಗಿಂತ ಶಕ್ತಿಶಾಲಿ. ಆದರೆ ಹಾಗಂದ ಮಾತ್ರಕ್ಕೆ ಅದು ಮಾನವ ಕುಲವನ್ನು ದಬ್ಬಾಳಿಕೆ ಮಾಡುವ ಅಧಿಕಾರ ಹೊಂದಿಲ್ಲ. ನಿಮಗೆ ನೀವು ಮಾಡಿಕೊಳ್ಳಬೇಕಾದ ಕರ್ತವ್ಯಗಳನ್ನು ನಿರ್ಲಕ್ಷಿಸಿದ್ದೀರಿ ಮತ್ತು ನಿಮ್ಮ ಸ್ವಂತ ಹಿತಾಸಕ್ತಿಗಳ ಬಗ್ಗೆ ಕುರುಡರಾಗಿ ನಿಮ್ಮ ಸಹಜ ಹಕ್ಕುಗಳನ್ನು ಕಳೆದುಕೊಂಡಿದ್ದೀರಿ.”
“ಆದರೆ ಪ್ರೀತಿಯ ಸಿಸ್ಟರ್ ಸಾರಾ, ನಾವೇ ಎಲ್ಲವನ್ನೂ ಮಾಡಿದರೆ, ಪುರುಷರೇನು ಮಾಡುವರು?”
“ಅವರು ಏನೂ ಮಾಡಬೇಕಿಲ್ಲ, ಕ್ಷಮಿಸು, ಆದರೆ ಅವರು ಏನೂ ಮಾಡಲು ಲಾಯಕ್ಕಿಲ್ಲ. ಆದ್ದರಿಂದ ಅವರನ್ನು ಹಿಡಿದು ಜೆನಾನದಲ್ಲಿ ಹಾಕಬೇಕು.”
“ಆದರೆ ಅವರನ್ನು ಹಿಡಿದು ನಾಲ್ಕು ಗೋಡೆಗಳ ಮಧ್ಯದಲ್ಲಿ ಹಾಕುವುದು ಅಷ್ಟು ಸುಲಭವೇ?” ಕೇಳಿದೆ ನಾನು. “ಅದನ್ನು ಮಾಡಿದರೂ ಸಹ ಅವರ ಎಲ್ಲಾ ರಾಜಕೀಯ ಮತ್ತು ವ್ಯಾವಹಾರಿಕ ವ್ಯವಹಾರಗಳು ಅವರೊಂದಿಗೆ ಜೆನಾನಾಗೆ ಹೊಗುವುದಿಲ್ಲವೇ?”
ಸಿಸ್ಟರ್ ಸಾರಾ ಏನೂ ಉತ್ತರ ನೀಡಲಿಲ್ಲ. ಅವರು ಕೇವಲ ಮುಗುಳ್ನಕ್ಕರು. ಬಹುಶಃ ಆಕೆಗೆ ಕೂಪಮಂಡೂಕದೊಂದಿಗೆ ವಾದ ಮಾಡುವುದು ಅನುಪಯುಕ್ತ ಎನಿಸಿತೇನೋ.
ಅಷ್ಟರಲ್ಲಿ ನಾವು ಸಿಸ್ಟರ್ ಸಾರಾರವರ ಮನೆ ತಲುಪಿದೆವು. ಅದು ಹೃದಯಾಕಾರದಲ್ಲಿದ್ದ ತೋಟದ ಮಧ್ಯದಲ್ಲಿತ್ತು. ಅದೊಂದು ಬಂಗ್ಲೆ, ಅದಕ್ಕೆ ಕಬ್ಬಿಣದ ಸೂರಿತ್ತು. ನಮ್ಮ ಯಾವುದೇ ಶ್ರೀಮಂತ ಕಟ್ಟಡಗಳಿಗಿಂತ ಅದು ಹೆಚ್ಚು ತಂಪಾಗಿತ್ತು ಮತ್ತು ಚೆನ್ನಾಗಿತ್ತು. ಅದೆಷ್ಟು ವ್ಯವಸ್ಥಿತವಾಗಿತ್ತು, ಎಷ್ಟು ಚೆನ್ನಾಗಿ ವಸ್ತುಗಳನ್ನು ಜೋಡಿಸಲಾಗಿತ್ತು ಮತ್ತು ಸುಂದರವಾಗಿ ಅಲಂಕರಿಸಲಾಗಿತ್ತು ಎನ್ನುವುದನ್ನು ನಾನು ವಿವರಿಸಲಾರೆ.
ನಾವು ಪಕ್ಕಪಕ್ಕದಲ್ಲಿ ಕೂತೆವು. ಅವರು ತಮ್ಮ ಕೊಠಡಿಯಿಂದ ಕಸೂತಿಯೊಂದನ್ನು ಹೊರತೆಗೆದು ಹೊಸ ವಿನ್ಯಾಸ ಮೂಡಿಸಲಾರಂಭಿಸಿದರು.
“ನಿಮಗೆ ನಿಟ್ಟಿಂಗ್ ಮತ್ತು ಹೊಲಿಗೆ ಕೆಲಸ ಗೊತ್ತೆ?” ಕೇಳಿದರು.
“ಹೌದು, ನಮಗೆ ಜೆನಾನದಲ್ಲಿ ಇನ್ನೇನೂ ಮಾಡಲು ಕೆಲಸವಿಲ್ಲವಲ್ಲ.”
“ಆದರೆ ನಾವು ನಮ್ಮ ಜೆನಾನಾ ಸದಸ್ಯರನ್ನು ಕಸೂತಿ ಕೆಲಸದಲ್ಲಿ ಸಹ ನಂಬುವುದಿಲ್ಲ,” ನಗುತ್ತಾ ಹೇಳಿದರಾಕೆ, “ಯಾವ ಪುರುಷನಿಗೂ ಸೂಜಿಯ ತೂತಿನಲ್ಲಿ ದಾರವನ್ನು ಹಾಕುವ ತಾಳ್ಮೆಯಿಲ್ಲ.”
“ಇದೆಲ್ಲ ಕೆಲಸವನ್ನು ನೀವೇ ಮಾಡಿದಿರಾ?” ಕೇಳಿದೆ ನಾನಾಕೆಯನ್ನು ಟೀಪಾಯ್ ಗಳ ಮೇಲಿದ್ದ ಹಾಸುಗಳ ಮೇಲಿನ ವಿವಿಧ ವಿನ್ಯಾಸಗಳನ್ನು ತೋರಿಸಿ.
“ಹೌದು.”
“ನಿಮಗೆ ಇದೆಲ್ಲದಕ್ಕೂ ಸಮಯವೆಲ್ಲಿ ಸಿಗುತ್ತದೆ? ನೀವು ಕಛೇರಿ ಕೆಲಸವನ್ನೂ ಮಾಡಬೇಕು? ಅಲ್ಲವೇ?”
“ನಾನು ನನ್ನ ಪ್ರಯೋಗಾಲಯದಲ್ಲಿ ಇಡೀ ದಿನ ಇರುವುದಿಲ್ಲ. ನನ್ನ ಕೆಲಸವನ್ನು ೨ ಘಂಟೆಗಳಲ್ಲಿ ಮುಗಿಸುತ್ತೇನೆ.”
“೨ ಘಂಟೆಗಳಲ್ಲಿ? ಹೇಗೆ ನಿರ್ವಹಿಸುತ್ತೀರಿ? ನಮ್ಮ ನಾಡಿನಲ್ಲಿ ಅಧಿಕಾರಿಗಳು, ಮ್ಯಾಜಿಸ್ಟ್ರೇಟರು – ಎಲ್ಲರೂ ೭ ಘಂಟೆಗಳ ಕಾಲ ಕೆಲಸ ಮಾಡುತ್ತಾರೆ.
“ನಾನು ಕೆಲವರು ಕೆಲಸ ಮಾಡುವುದನ್ನು ನೋಡಿದ್ದೇನೆ. ಅವರು ಆ ಎಲ್ಲಾ ೭ ಘಂಟೆಗಳ ಕಾಲ ಕೆಲಸ ಮಾಡುತ್ತೀರೆಂದು ನೀನು ಭಾವಿಸುತ್ತೀಯಾ?
“ಖಂಡಿತವಾಗಿಯೂ ಮಾಡುತ್ತಾರೆ.”
“ಖಚಿತವಾಗಿಯೂ ಇಲ್ಲ, ಸುಲ್ತಾನ, ಮಾಡುವುದಿಲ್ಲ. ಅವರು ತಮ್ಮ ಸಮಯವನ್ನು ಸಿಗರೇಟು ಸೇದುವುದರಲ್ಲಿ ಕಳೆಯುತ್ತಾರೆ. ಕೆಲವರು ಆಫೀಸ್ ವೇಳೆಯಲ್ಲಿ ೨-೩ ಚುಟ್ಟಾಗಳನ್ನು ಸೇದುತ್ತಾರೆ. ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಆದರೆ ಬಹಳ ಕಡಿಮೆ ಕೆಲಸ ಮಾಡುತ್ತಾರೆ. ಒಂದು ವೇಳೆ ಒಂದು ಚುಟ್ಟಾ ಸುಡಲು ೧/೨ ಘಂಟೆ ಬೇಕಾದರೆ, ಒಬ್ಬ ವ್ಯಕ್ತಿ ೧೨ ಚುಟ್ಟಾಗಳನ್ನು ಸೇದಿದರೆ, ಆಗ ೬ ಘಂಟೇಗಳು ಅವನಿಗೆ ಅದಕ್ಕೆ ಬೇಕಾಗುತ್ತದೆ.”
ನಾವು ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಿದೆವು. ಅವರು ಯಾವುದೇ ಸಾಂಕ್ರಾಮಿಕ ರೋಗಕ್ಕೆ ಒಳಗಾಗಿಲ್ಲ, ಅಥವಾ ನಮ್ಮಂತೆ ಸೊಳ್ಳೆ ಕಡಿತಕ್ಕೆ ಒಳಗಾಗಿಲ್ಲ ಎಂದು ತಿಳಿಯಿತು. ಆ ಸ್ತ್ರೀನಾಡಿನಲ್ಲಿ ಅಪರೂಪದ ಅಪಘಾತ ಬಿಟ್ಟರೆ ಯಾರೂ ಸಹ ತಮ್ಮ ಯೌವನದಲ್ಲಿ ಮರಣಹೊಂದುವುದಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು.
“ನಮ್ಮ ಅಡಿಗೆ ಮನೆ ನೊಡುತ್ತೀಯಾ?” ಕೇಳಿದರಾಕೆ.
“ಹೌದು, ಖುಷಿಯಿಂದ” ಎಂದೇ ನಾನು. ಅಲ್ಲಿ ನೋಡಲು ಹೋದೆವು. ನಾನು ಹೋಗುವಷ್ಟರಲ್ಲಿ ಅಲ್ಲಿದ್ದ ಪುರುಷರಿಗೆ ಅಲ್ಲಿಂದ ತೆರಳಲು ಹೇಳಲಾಗಿತ್ತು. ಅಡಿಗೆ ಮನೆಯೂ ಸಹ ಸುಂದರವಾದ ತರಕಾರಿ ತೋಟದಲ್ಲಿತ್ತು. ಪ್ರತಿಯೊಂದು ಬಳ್ಳಿ, ಪ್ರತಿಯೊಂದು ಟೊಮೆಟೊ ಗಿಡವೂ ಸಹ ಅಲಂಕಾರಿಕವಾಗಿತ್ತು. ಅಲ್ಲಿ ನನಗೆ ಹೊಗೆಯಾಗಲಿ, ಚಿಮಣಿಯಾಗಲಿ ಕಾಣಿಸಲಿಲ್ಲ. ಅದು ಸ್ವಚ್ಛವಾಗಿತ್ತು ಮತ್ತು ಹೊಳೆಯುತ್ತಿತ್ತು. ಕಿಟಕಿಗಳನ್ನು ಹೂತೋಟಗಳಿಂದ ಅಲಂಕರಿಸಲಾಗಿತ್ತು. ಅಲ್ಲೆಲ್ಲೂ ಕಲ್ಲಿದ್ದಲಾಗಲಿ ಅಥವಾ ಬೆಂಕಿಯಾಗಲಿ ಕಾಣಿಸಲಿಲ್ಲ.
“ನೀವು ಅಡಿಗೆ ಹೇಗೆ ಮಾಡುವಿರಿ, ಕೇಳಿದೆ ನಾನು.
“ಸೌರಶಕ್ತಿಯಿಂದ” ನನಗೊಂದು ಪೈಪ್ ತೋರಿಸುತ್ತಾ, “ಅದರಿಂದ ಕೇಂದ್ರೀಕೃತ ಸೂರ್ಯಕಿರಣ ಮತ್ತು ಶಾಖ ಬರುತ್ತದೆ” ಎಂದು ಅದನ್ನು ತೋರಿಸಿದರು.
“ನೀವು ಸೂರ್ಯನ ಶಾಖವನ್ನು ಹಿಡಿದಿಡಲು ಹೇಗೆ ಸಾಧ್ಯವಾಯಿತು?” ಆಶ್ಚರ್ಯದಿಂದ ಕೇಳಿದೆ ನಾನು.
“ಹಾಗಿದ್ದರೆ, ನಾನು ನಿನಗೆ ಸ್ವಲ್ಪ ಇತಿಹಾಸವನ್ನು ಹೇಳಬೇಕು. ೩೦ ವರ್ಷಗಳ ಹಿಂದೆ ನಮ್ಮ ಇಂದಿನ ರಾಣಿ ೧೩ ವರ್ಷದವರಿದ್ದಾಗ ಸಿಂಹಾಸನ ಅವರಿಗೆ ದೊರೆಯಿತು. ಆದರೆ ಅದು ಹೆಸರಿಗೆ ಮಾತ್ರ. ಪ್ರಧಾನಮಂತ್ರಿ ನಿಜಾವಾಗಲೂ ದೇಶವನ್ನು ಆಳುತ್ತಿದ್ದನು.”
“ನಮ್ಮ ರಾಣಿಗೆ ವಿಜ್ಞಾನ ಬಹಳ ಇಷ್ಟವಿತ್ತು. ತನ್ನ ದೇಶದಲ್ಲಿ ಎಲ್ಲ ಹೆಣ್ಣುಮಕ್ಕಳು ಓದಬೇಕೆಂದು ಸುತ್ತೋಲೆ ಕಳಿಸಿದರು. ಅದರಂತೆಯೇ ಸಾಕಷ್ಟು ಹೆಣ್ಣುಮಕ್ಕಳ ಶಾಲೆಗಳನ್ನು ತೆರೆಯಲಾಯಿತು ಮತ್ತು ಅವೆಲ್ಲವೂ ಸರ್ಕಾರದಿಂದ ಬೆಂಬಲಿಸಲ್ಪಟ್ಟವು. ಎಲ್ಲರಿಗೂ ಶಿಕ್ಷಣವನ್ನು ನೀಡಲಾಯಿತು. ಬಾಲ್ಯ ವಿವಾಹವನ್ನು ನಿಲ್ಲಿಸಲಾಯಿತು. ೨೧ ವರ್ಷದವರೆಗೆ ಯಾವ ಹೆಣ್ಣು ಮಗಳೂ ಮದುವೆ ಮಾಡಿಕೊಳ್ಳುವಂತಿರಲಿಲ್ಲ. ಅದಕ್ಕೂ ಮೊದಲು ನಮ್ಮನ್ನು ಬಿಗಿ ಪರ್ದಾ ವ್ಯವಸ್ಥೆಯಲ್ಲಿಡಲಾಗಿತ್ತು.”
“ಹೇಗೆ ವ್ಯವಸ್ಥೆ ಬದಲಾಗಿಬಿಟ್ಟಿದೆ” ನಾನು ಮಧ್ಯಪ್ರವೇಶಿಸಿದೆ ನಗುತ್ತಾ.
“ಆದರೆ ಬೇರೆ ಬೇರೆ ಎನ್ನುವುದು ಮಾತ್ರ ಹಾಗೆಯೇ ಉಳಿದುಕೊಂಡಿದೆ. ಕೆಲವೇ ವರ್ಷಗಳಲ್ಲಿ ನಮಗೇ ಬೇರೆಯ ವಿಶ್ವವಿದ್ಯಾನಿಲಯಗಳಿದ್ದವು, ಪುರುಷರಿಗೆ ಅಲ್ಲಿ ಅವಕಾಶವಿರಲಿಲ್ಲ.”
“ರಾಣೀ ವಾಸಿಸುವ ರಾಜಧಾನಿಯಲ್ಲಿ ಎರಡು ವಿಶ್ವವಿದ್ಯಾನಿಲಯಗಳಿವೆ. ಅದರಲ್ಲೊಂದು ಅದ್ಭುತವಾದ ಬಲೂನ್ ಕಂಡುಹಿಡಿಯಿತು, ಅದಕ್ಕೆ ಹಲವಾರು ಪೈಪ್ ಗಳನ್ನು ಜೋಡಿಸಬಹುದಿತ್ತು. ಈ ಬಲೂನ್ ಮೂಲಕ ಅವರು ಮೋಡಗಳ ಮಧ್ಯೆ ಚಲಿಸಿ, ತಮಗೆ ಇಷ್ಟ ಬಂದಷ್ಟು ನೀರನ್ನು ಸಂಗ್ರಹಿಸಬಹುದಿತ್ತು. ಇದನ್ನು ನಿರಂತರವಾಗಿ ಅವರು ಮಾಡುತ್ತಿದ್ದುದ್ದರಿಂದ ಅಲ್ಲಿ ಮೋಡಗಳೇ ಇರುತ್ತಿರಲಿಲ್ಲ, ಮಳೆ ಪ್ರವಾಹವೂ ನಿಂತುಹೋಯಿತು. ಅಲ್ಲಿನ ಮಹಿಳಾ ಪ್ರಾಂಶುಪಾಲೆಯಿಂದ.”
“ನಿಜವಾಗಿಯೂ? ಈಗ ನನಗೆ ಅರ್ಥವಾಯಿತು, ಇಲ್ಲಿ ಮಣ್ಣು ಏಕಿಲ್ಲ ಎಂದು” ಎಂದೆ ನಾನು. “ಆದರೆ ಪೈಪ್ ಗಳ ಮೂಲಕ ನೀರನ್ನು ಹೇಗೆ ಸಂಗ್ರಹಿಸಬಹುದು ಎಂಬುದು ನನಗೆ ಅರ್ಥವಾಗಿಲ್ಲ?” ಅವರು ನನಗೆ ವಿವರಿಸಿದರು. ಆದರೆ ನನಗೆ ಅರ್ಥವಾಗಲಿಲ್ಲ ಏಕೆಂದರೆ ನನ್ನ ವೈಜ್ಞಾನಿಕ ಜ್ಞಾನ ಮಿತವಾಗಿತ್ತು. ಆದರೆ ಅವರು ಮುಂದುವರೆಸಿದರು. “ಇದರ ಬಗ್ಗೆ ಇನ್ನೊಂದು ವಿಶ್ವವಿದ್ಯಾನಿಲಯಕ್ಕೆ ಗೊತ್ತಾದಾಗ, ಅವರು ಇದಕ್ಕಿಂತ ಅದ್ಭುತವಾದದ್ದನ್ನು ಮಾಡಲು ಹೊರಟರು. ಅವರೊಂದು ಸಾಧನವನ್ನು ಕಂಡುಹಿಡಿದರು. ಅದರಲ್ಲಿ ತಮಗಿಷ್ಟ ಬಂದಷ್ಟು ಸೂರ್ಯಶಾಖವನ್ನು ಹಿಡಿದಿಟ್ಟುಕೊಳ್ಳಬಹುದಿತ್ತು. ಯಾರಿಗೆ ಯಾವಾಗ ಬೇಕಾದರೂ ಅದನ್ನು ಹಂಚುತ್ತಿದ್ದರು.”
“ಸ್ತ್ರೀಯರು ಹೀಗೆ ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವಾಗ, ಈ ದೇಶದ ಪುರುಷರು ತಮ್ಮ ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳಲು ಶ್ರಮಿಸುತ್ತಿದ್ದರು. ಅವರಿಗೆ ಮಹಿಳಾ ವಿವಿಗಳು ಈ ರೀತಿ ಮಾಡುತ್ತಿದ್ದಾರೆ ಎಂದಾಗ, ನಕ್ಕುಬಿಟ್ಟು ಇಡೀ ವಿಷಯವನ್ನು ಭಾವನಾತ್ಮಕವಾದ ಭಯಾನಕ ಕನಸುಗಳು ಎಂದರು.
“ನಿಮ್ಮ ಸಾಧನೆಗಳು ನಿಜಕ್ಕೂ ಅದ್ಭುತವಾಗಿವೆ. ಆದರೆ ನಿಮ್ಮ ದೇಶದ ಪುರುಷರನ್ನು ಜೆನಾನಾದಲ್ಲಿ ಹಾಕಲು ಹೇಗೆ ಸಾಧ್ಯವಾಯಿತು, ಅದನ್ನು ಹೇಳಿ, ಮೊದಲು ಅವರನ್ನು ಬಂಧಿಸಿದಿರೇ?”
“ಇಲ್ಲ.”
“ಅವರು ತಮ್ಮಷ್ಟಕ್ಕೆ ಶರಣಾಗತರಾಗಿ, ತಮ್ಮ ಮುಕ್ತ ಜೀವನವನ್ನು ಬಿಟ್ಟುಕೊಟ್ಟು ಬಂಧಿತರಾಗಲು, ಜೆನಾನದ ನಾಲ್ಕುಗೋಡೆಗಳ ಮಧ್ಯೆಯಲ್ಲಿ ಇರಲು ಸಾಧ್ಯವಿಲ್ಲ. ಅವರನ್ನು ನೀವು ಬಲದಿಂದ ಬಂಧಿಸಿರಬೇಕು.”
“ಹೌದು, ಹಾಗೆಯೇ ನಡೆದದ್ದು.”
“ಹೌದೇ ಯಾರಿಂದ, ಸ್ತ್ರೀ ಯೋಧರಿಂದ?”
“ಇಲ್ಲ, ಶಸ್ತ್ರಾಸ್ತ್ರಗಳಿಂದಲ್ಲ.”
 “ಹೌದು, ಏಕೆಂದರೆ ಅವರ ಶಸ್ತ್ರಾಸ್ತ್ರಗಳು ಮಹಿಳೆಯರದ್ದಕ್ಕಿಂತ ಬಲಿಷ್ಟವಾಗಿವೆ, ಮತ್ತೆ?”
“ಬುದ್ಧಿಶಕ್ತಿಯಿಂದ.”
“ಆದರೆ ಅವರ ಮೆದುಳು ಮಹಿಳೆಯರದ್ದಕ್ಕಿಂತ ಹೆಚ್ಚು ದೊಡ್ಡದಾಗಿ, ತೂಕದ್ದಾಗಿದೆ. ಅಲ್ಲವೇ?”
“ಹೌದು. ಆದರೆ ಅದರಿಂದೇನು? ಆನೆಗೂ ಸಹ ಮನುಷ್ಯನದ್ದಕ್ಕಿಂತ ತೂಕವಾದ ಮೆದುಳಿದೆ. ಆದರೆ ಪುರುಷ ಆ ಆನೆಗಳನ್ನು ಸಂಕೋಲೆಗಳಿಂದ ಬಂಧಿಸಿ, ತನ್ನಿಚ್ಛೆಯ ಪ್ರಕಾರ ಉಪಯೋಗಿಸಬಲ್ಲ.”
“ಸರಿಯಾಗಿ ಹೇಳಿದಿರಿ, ಆದರೆ ದಯಮಾಡಿ ಇದನ್ನು ಹೇಳಿ. ಇದೆಲ್ಲ ಹೇಗೆ ಸಾಧ್ಯವಾಯಿತು. ನನಗೆ ಕುತೂಹಲವನ್ನು ತಡೆಯಲಾಗುತ್ತಿಲ್ಲ.”
“ಸ್ತ್ರೀಯರ ಮೆದುಳು ಪುರುಷರಿಗಿಂತ ಚುರುಕಾಗಿದೆ. ಹತ್ತು ವರ್ಷಗಳ ಹಿಂದೆ ಮಿಲಿಟರಿ ಅಧಿಕಾರಿಗಳೂ ನಮ್ಮ ಆವಿಷ್ಕಾರಗಳನ್ನು ಭಾವನಾತ್ಮಕವಾದ ಭಯಾನಕ ಕನಸುಗಳು ಎಂದು ಕರೆದಾಗ, ನಮ್ಮ ಕೆಲವು ಯುವತಿಯರು ಅದಕ್ಕೆ ಪ್ರತಿಯಾಗಿ ಮಾತನಾಡಬೇಕೆಂದಿದ್ದರು. ಆದರೆ ಇಬ್ಬರೂ ಮಹಿಳಾ ಪ್ರಾಂಶುಪಾಲರು ಅವರನ್ನು ತಡೆದು ಹೇಳಿದರು, ‘ನಿಮಗೆ ಅವಕಾಶ ಸಿಕ್ಕಿದಾಗ ಮಾತಿನಿಂದಲ್ಲದೆ ಕೃತಿಯಿಂದ ಉತ್ತರ ಹೇಳಿ’ ಎಂದಿದ್ದರು.”
“ಅದ್ಭುತ” ನಾನು ನನ್ನ ಎರಡು ಕೈಗಳಿಂದ ಚಪ್ಪಾಳೆ ಹೊಡೆದೆ. “ಈಗ ಆ ಅಹಂಕಾರಿ ಪುರುಷರು ತಾವೇ ಭಾವನಾತ್ಮಕವಾದ ಭಯಾನಕ ಕನಸುಗಳನ್ನು ಕಾಣುತ್ತಿದ್ದಾರೆ.”
“ಇದಾದ ನಂತರ ನೆರೆ ರಾಷ್ಟ್ರದಿಂದ ಕೆಲವು ವ್ಯಕ್ತಿಗಳು ಬಂದು ನಮ್ಮಲ್ಲಿ ಆಶ್ರಯ ಪಡೆದರು. ಏನೋ ರಾಜಕೀಯ ಅಪರಾಧ ಮಾಡಿ ಸಂಕಷ್ಟದಲ್ಲಿದ್ದರು. ಉತ್ತಮ ಸರ್ಕಾರಕ್ಕಿಂತ ಅಧಿಕಾರಕ್ಕೆ ಹೆಚ್ಚು ಒತ್ತು ಕೊಟ್ಟ ಆ ರಾಜ, , ನಮ್ಮ ಕರುಣಾಳು ರಾಣಿಯನ್ನು ಅವನ ಅಧಿಕಾರಿಗಳನ್ನು ಒಪ್ಪಿಸುವಂತೆ ಕೇಳಿದ. ಆದರೆ ಆಕೆ ತಿರಸ್ಕರಿಸಿದರು. ಏಕೆಂದರೆ ಆಶ್ರಯ ಕೇಳಿಕೊಂಡು ಬಂದವರನ್ನು ಹಿಂದಿರುಗಿಸುವುದು ಆಕೆಯ ತತ್ವಕ್ಕೆ ವಿರುದ್ಧವಾಗಿತ್ತು. ಈ ತಿರಸ್ಕಾರದಿಂದ ಆ ರಾಜ ನಮ್ಮ ದೇಶದ ಮೇಲೆ ಯುದ್ಧ ಸಾರಿದ.”
“ನಮ್ಮ ಮಿಲಿಟರಿ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆಗೆ ಇಳಿದು, ಶತ್ರುವಿನ ವಿರುದ್ಧ ದಂಡೆತ್ತಿ ಹೋದರು. ಆದರೆ ಶತ್ರು ತುಂಬ ಬಲಿಷ್ಟವಾಗಿದ್ದ. ನಮ್ಮ ಸೈನಿಕರು ದಿಟ್ಟತನದಿಂದ ಹೋರಾಡಿದರು, ನಿಜ. ಆದರೆ ಅದೆಲ್ಲ ಸಾಹಸದ ನಡುವೆಯೂ ವಿದೇಶಿ ಸೈನ್ಯ ನಮ್ಮ ದೇಶವನ್ನು ಆಕ್ರಮಿಸುತ್ತಾ ಸಾಗಿತು.”
“ಬಹುತೇಕ ಎಲ್ಲ ಪುರುಷರು ಹೋರಾಡಲು ಹೋಗಿದ್ದರು. 16 ವರ್ಷದ ಹುಡುಗನನ್ನೂ ಸಹ ಮನೆಯಲ್ಲಿ ಬಿಟ್ಟಿರಲಿಲ್ಲ. ನಮ್ಮ ಬಹುತೇಕ ಯೋಧರನ್ನು ಕೊಲ್ಲಲಾಯಿತು, ಉಳಿದವರನ್ನು ಹಿಂದಕ್ಕೆ ಓಡಿಸಲಾಯಿತು. ಶತ್ರು ನಮ್ಮ ರಾಜಧಾನಿಗೆ 25 ಕಿ.ಮೀ ಹತ್ತಿರ ಬಂದುಬಿಟ್ಟ.”
“ದೇಶವನ್ನು ಉಳಿಸಲು ಏನು ಮಾಡಬಹುದೆಂಬುದರ ಬಗ್ಗೆ ಸಲಹೆ ನೀಡಲು, ರಾಣಿಯ ಅರಮನೆಯಲ್ಲಿ ಸಾಕಷ್ಟು ವಿವೇಕಿ ಮಹಿಳೆಯರ ಸಭೆ ನಡೆಯಿತು. ಕೆಲವರು ತಾವೂ ಯೋಧರಂತೆ ಹೋರಾಡುತ್ತೇವೆ ಎಂದರು. ಆದರೆ ಉಳಿದವರು ಅದನ್ನು ವಿರೋಧಿಸಿದರು. ಏಕೆಂದರೆ ಹೆಣ್ಣುಮಕ್ಕಳಿಗೆ ಯುದ್ಧದಲ್ಲಿ ಹೋರಾಡುವ ಅಭ್ಯಾಸವಿರಲಿಲ್ಲ, ಅಥವಾ ಕತ್ತಿ, ಬಂದೂಕುಗಳನ್ನು ಬಳಸುವ ತರಬೇತಿ ನೀಡಿರಲಿಲ್ಲ. ಇನ್ನೊಂದು ಗುಂಪು ತಾವು ಬಲಹೀನ ಗುಂಪೆಂದು ಅಂಗೀಕರಿಸಿತು.” “ದೈಹಿಕ ಶಕ್ತಿಯ ಕಾರಣದಿಂದ ನಾವು ನಮ್ಮ ದೇಶವನ್ನು ಉಳಿಸಲಾಗದಿದ್ದರೆ, ಮೆದುಳಿನ ಶಕ್ತಿಯಿಂದಲಾದರೂ ಪ್ರಯತ್ನಿಸಿ ಎಂದರು ಮಹಾರಾಣಿ.
“ಕೆಲವು ನಿಮಿಷಗಳ ಕಾಲ ಮೌನ ಆವರಿಸಿತು. ಮತ್ತೆ ಮಹಾರಾಣಿ ಹೇಳಿದರು, “ನನ್ನ ನೆಲ ಮತ್ತು ಗೌರವ ಕಳೆದುಹೋದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ” ಎಂದರು.
“ಅಲ್ಲಿಯವರೆಗೆ ಮೌನವಾಗಿ ಆಲೋಚಿಸುತ್ತಿದ್ದ ಎರಡನೆಯ ವಿವಿಯ ಪ್ರಾಂಶುಪಾಲೆ ಎದ್ದುನಿಂತು (ಸೂರ್ಯಶಾಖ ಸಂಗ್ರಹಿಸಿದ್ದವರು) ಹೇಳಿದರು, ‘ಹೌದು ಎಲ್ಲವೂ ಕಳೆದುಹೋಗಿದೆ, ಆದರೆ ಇನ್ನೂ ಸ್ವಲ್ಪ ಆಶಾಕಿರಣವಿದೆ. ಒಂದು ಯೋಜನೆಯನ್ನು ಪ್ರಯತ್ನಿಸುತ್ತೇನೆ. ಅದು ನನ್ನ ಮೊದಲ ಮತ್ತು ಕಡೆಯ ಪ್ರಯತ್ನವಾಗಿರುತ್ತದೆ. ಅದರಲ್ಲಿ ವಿಫಲವಾದರೆ ಆತ್ಮಹತ್ಯೆಯನ್ನುಳಿದು ಇನ್ನೇನೂ ದಾರಿಯಿರುವುದಿಲ್ಲ’ ಎಂದರು. ಏನೇ ಆದರೂ ತಾವುಗಳ್ಯಾರೂ ಗುಲಾಮರಾಗುವುದಿಲ್ಲವೆಂದು ಪ್ರತಿಜ್ಞೆ ಕೈಗೊಂಡರು.”
“ರಾಣಿ ಎಲ್ಲರಿಗೂ ಮನಃಪೂರ್ವಕವಾಗಿ ವಂದನೆಗಳನ್ನು ತಿಳಿಸಿ, ಪ್ರಾಂಶುಪಾಲೆಗೆ ತಮ್ಮ ಯೋಜನೆಯನ್ನು ಜಾರಿಗೊಳಿಸಲು ಹೇಳಿದರು. ಪ್ರಾಂಶುಪಾಲೆ ಎದ್ದು ನಿಂತು ಹೇಳಿದರು: ‘ನಾವು ಹೊರಹೋಗುವ ಮುನ್ನ ಪುರುಷರು ಜೆನಾನಗಳನ್ನು ಪ್ರವೇಶಿಸಬೇಕು. ಪರ್ದಾ ವ್ಯವಸ್ಥೆಯ ಕಾರಣದಿಂದ ನಾನು ಇದನ್ನು ಕೋರುತ್ತಿದ್ದೇನೆ’ ಎಂದರು. “ಹೌದು ಖಂಡಿತವಾಗಿ” ಎಂದರು ಮಹಾರಾಣಿಯವರು.”
“ಮರುದಿನ ರಾಣಿ ಎಲ್ಲಾ ಪುರುಷರನ್ನು ಕರೆದು, ದೇಶದ ಗೌರವ ಮತ್ತು ಸ್ವಾತಂತ್ರ್ಯಕ್ಕಾಗಿ ಅವರೆಲ್ಲ ಜೆನಾನಗಳಿಗೆ ಹೋಗಬೇಕೆಂದು ಹೇಳಿದರು. ಗಾಯಗೊಂಡು, ಸುಸ್ತಾದ ಅವರೆಲ್ಲ ಈ ಆದೇಶವನ್ನು ವರವೆಂಬಂತೆ ಪರಿಗಣಿಸಿದರು. ತಲೆಬಾಗಿಸಿ, ಏನೂ ಪ್ರತಿಭಟನೆಯಿಲ್ಲದೆ ಜೆನಾನಾಗಳನ್ನು ಪ್ರವೇಶಿಸಿದರು. ಈ ದೇಶಕ್ಕೆ ಇನ್ನೇನೂ ಭರವಸೆ ಇಲ್ಲವೆಂಬುದು ಅವರೆಲ್ಲರ ನಂಬಿಕೆಯಾಗಿತ್ತು.”
“ನಂತರ ಆ ಪ್ರಾಂಶುಪಾಲೆ ತಮ್ಮ 2000 ವಿದ್ಯಾರ್ಥಿನಿಯರೊಂದಿಗೆ ರಣರಂಗಕ್ಕೆ ತೆರಳಿದರು ಮತ್ತು ಅಲ್ಲಿ ಹೋದ ಮೇಲೆ ಎಲ್ಲಾ ಸೂರ್ಯಕಿರಣಗಳನ್ನು ಒಂದೆಡೆ ಕ್ರೋಢಿಕರಿಸಿ, ಆ ಸೂರ್ಯಕಿರಣದ ಶಾಖ ಶತ್ರುಗಳ ಮೇಲೆ ಬೀಳುವಂತೆ ಮಾಡಿದರು. ಬಿಸಿ ಮತ್ತು ಬೆಳಕು ತೀಕ್ಷ್ಣವಾಗಿತ್ತು, ಶತ್ರುಗಳಿಗೆ ತಡೆಯಲು ಸಾಧ್ಯವಾಗದಷ್ಟು. ಅವರಿಗೆ ಇದನ್ನು ಹೇಗೆ ಎದುರಿಸಬೇಕೆಂದು ಅರ್ಥವೇ ಆಗಲಿಲ್ಲ. ಭಯಭೀತರಾಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಅಲ್ಲೆ ಬಿಟ್ಟು ಎಲ್ಲರೂ ದಿಕ್ಕಾಪಾಲಾಗಿ ಓಡಿದರು. ಆ ಶಸ್ತ್ರಾಸ್ತ್ರಗಳನ್ನು ಅದೇ ಶಾಖದಿಂದಲೇ ಸುಡಲಾಯಿತು. ಅದಾದ ನಂತರ ಬೇರೆ ಯಾರೂ ನಮ್ಮ ದೇಶದ ಮೇಲೆ ದಾಳಿ ನಡೆಸಲು ಪ್ರಯತ್ನಿಸಿಲ್ಲ.”
“ಅದಾದ ನಂತರ ನಿಮ್ಮ ದೇಶದ ಪುರುಷರು ಜೆನಾನಾದಿಂದ ಹೊರಬರಲು ಪ್ರಯತ್ನಿಸಿಲ್ಲವೇ?”
“ಹೌದು, ಅವರಿಗೆ ಸ್ವತಂತ್ರರಾಗಬೇಕಿತ್ತು. ಕೆಲವು 
ಪೊಲೀಸ್ ಕಮಿಷನರ್‍ಗಳು, ಜಿಲ್ಲಾ ಮ್ಯಾಜಿಸ್ಟ್ರೇಟ್‍ಗಳು ರಾಣಿಗೆ ಹೇಳಿಕಳಿಸಿದರು. ಮಿಲಿಟರಿ ಅಧಿಕಾರಿಗಳನ್ನು ಅವರ ವಿಫಲತೆಗೆ ಖಂಡಿತವಾಗಿ ಬಂಧಿಸಬೇಕು, ಆದರೆ ಅವರು ತಮ್ಮ ಕರ್ತವ್ಯವನ್ನು ನಿರ್ಲಕ್ಷಿಸಿಲ್ಲ, ಆದ್ದರಿಂದ ಅವರನ್ನು ಶಿಕ್ಷಿಸಬಾರದು ಮತ್ತು ಅವರ ಅಧಿಕಾರಗಳನ್ನು ಪುನಃ ನೀಡಬೇಕೆಂದು.”
“ಮಹಾರಾಣಿಯವರು, ಒಂದು ಸುತ್ತೋಲೆಯನ್ನು ಕಳಿಸಿದರು. ಅವರ ಸೇವೆಗಳು ಬೇಕಾದಾಗ ಪುನಃ ಅವರನ್ನು ಕರೆಸಿಕೊಳ್ಳುತ್ತೇವೆ, ಅಲ್ಲಿಯವರೆಗೆ ಅವರು ಎಲ್ಲಿದ್ದಾರೋ ಅಲ್ಲಿಯೇ ಇರಬೇಕೆಂದು. ಈಗ ಅವರು ಪರ್ದಾ ವ್ಯವಸ್ಥೆಗೆ ಒಗ್ಗಿಹೋಗಿದ್ದಾರೆ ಮತ್ತು ಬೇರ್ಪಡಿಸಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುವುದನ್ನು ಬಿಟ್ಟಿದ್ದಾರೆ. ನಾವು ಈ ವ್ಯವಸ್ಥೆಯನ್ನು ಜೆನಾನಾ ಎನ್ನುವ ಬದಲು ಮರ್ದಾನಾ ಎನ್ನುತ್ತೇವೆ.”
“ಆದರೆ ಕಳ್ಳತನ ಮತ್ತು ಕೊಲೆಯಂತಹ ಸಮಯದಲ್ಲಿ 
ಪೊಲೀಸ್ ಮತ್ತು ಮ್ಯಾಜಿಸ್ಟ್ರೇಟ್ ಇಲ್ಲದೆ ನೀವು ಹೇಗೆ ನಿಭಾಯಿಸುವಿರಿ?” ಕೇಳಿದೆ ಸಿಸ್ಟರ್ ಸಾರಾರವರನ್ನು. “ಮರ್ದಾನಾ ವ್ಯವಸ್ಥೆ ಸ್ಥಾಪಿಸಿದ ನಂತರ ಇಲ್ಲಿ ಅಪರಾಧಗಳಿಲ್ಲ. ಆದ್ದರಿಂದ ನಮಗೆ ಅಪರಾಧಿ ಯಾರೆಂದು ಹುಡುಕಲು ಪೊಲೀಸ್ ಬೇಕಿಲ್ಲ, ಅದರ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟ್ ಬೇಕಿಲ್ಲ.”
“ಅದು ನಿಜಕ್ಕೂ ಒಳ್ಳೆಯದು. ಯಾರಾದರೂ ಅಪ್ರಮಾಣಿಕ ವ್ಯಕ್ತಿಯಿದ್ದರೆ, ನೀವು ಆಕೆಯನ್ನು ಸುಲಭವಾಗಿ ಶಿಕ್ಷಿಸಬಹುದು. ನೀವು ಒಂದು ಬಿಂದು ರಕ್ತವನ್ನೂ ಹರಿಸದೆ ನಿರ್ಣಾಯಕ ಜಯ ಗಳಿಸಿರುವುದರಿಂದ, ನೀವು ಅಪರಾಧ ಮತ್ತು ಅಪರಾಧಿಗಳನ್ನೂ ಸಹ ಹೆಚ್ಚು ಶ್ರಮವಿಲ್ಲದೆ ಓಡಿಸಲು ಸಾಧ್ಯವಾಗಿದೆ.”
“ಈಗ ಪ್ರೀತಿಯ ಸುಲ್ತಾನಾ, ಇಲ್ಲೇ ಕುಳಿತಿರುವಿರೋ ಅಥವಾ ನನ್ನ ಪಾರ್ಲರ್ ಗೆ ಬರುವಿರೋ?” ನನ್ನನ್ನು ಕೇಳಿದರು.
“ನಿಮ್ಮ ಅಡಿಗೆ ಮನೆ ರಾಣಿಯದ್ದಕ್ಕಿಂತ ಏನೂ ಕಡಿಮೆಯಿಲ್ಲ” ಹೇಳಿದೆ ನಾನು ನಸುನಗುತ್ತಾ, “ಆದರೆ ಈಗ ಇದನ್ನು ಬಿಡೋಣ, ಏಕೆಂದರೆ ಪುರುಷರು ತಮ್ಮ ಕೆಲಸಗಳಿಗೆ ನಾವು ಅಡ್ಡಬಂದಿದ್ದೇವೆ ಎಂದು ಶಪಿಸುತ್ತಿರುತ್ತಾರೆ.” ನಾವಿಬ್ಬರೂ ಮನಸಾರೆ ನಕ್ಕೆವು.
“ಊರಿನಲ್ಲಿ, ನಾನು ಹಿಂತಿರುಗಿ ಹೋಗಿ ಅವರಿಗೆ ನಾನು ದೂರದ ಸ್ತ್ರೀ ನಾಡಿಗೆ ಹೋಗಿದ್ದೆ, ಅಲ್ಲಿ ದೇಶವನ್ನು ಸ್ತ್ರೀಯರೇ ಆಳುತ್ತಾರೆ ಮತ್ತು ಎಲ್ಲಾ ಸಾಮಾಜಿಕ ವಿಷಯಗಳನ್ನು ನಿಯಂತ್ರಿಸುತ್ತಾರೆ ಎಂದು, ಪುರುಷರು ಮರ್ದಾನಾದಲ್ಲಿದ್ದಾರೆ, ಮಕ್ಕಳನ್ನು ನೋಡಿಕೊಳ್ಳುತ್ತಾರೆ, ಅಡಿಗೆ ಮತ್ತಿತರ ಗೃಹಕೃತ್ಯಗಳನ್ನು ಮಾಡುತ್ತಾರೆ ಮತ್ತು ಅಡಿಗೆ ಎಷ್ಟು ಸುಲಭವೆಂದರೆ ಅಡಿಗೆ ಮಾಡುವುದೇ ಒಂದು ಖುಷಿ ಎಂದರೆ ನನ್ನ ಗೆಳತಿಯರು  ಆಶ್ಚರ್ಯಚಕಿತರಾಗುತ್ತಾರೆ.”
“ಹೌದು, ಇಲ್ಲಿ ನೋಡಿರುವುದನ್ನೆಲ್ಲ ಅಲ್ಲಿ ಹೇಳು.”
“ನೀವು ಕೃಷಿಯನ್ನು ಹೇಗೆ ನಿಭಾಯಿಸುವಿರಿ ಮತ್ತು ಉಳುವಿರಿ ಮತ್ತು ಕಷ್ಟಕರ ದೈಹಿಕ ಶ್ರಮವನ್ನು ಹೇಗೆ ನಿಭಾಯಿಸುವಿರಿ?”
“ನಮ್ಮ ಹೊಲಗಳನ್ನು ವಿದ್ಯುತ್ ಮೂಲಕ ಉಳಲಾಗುತ್ತದೆ. ಅದು ಉಳಿದ ಕೆಲಸಗಳಿಗೂ ಅದೇ ಶಕ್ತಿ ಒದಗಿಸುತ್ತದೆ. ಅದನ್ನು ನಾವು ನಮ್ಮ ಆಕಾಶಸಂಚಾರಕ್ಕೂ ಬಳಸಿಕೊಳ್ಳುತ್ತೇವೆ. ನಮ್ಮಲ್ಲಿ ರೇಲ್ ರೋಡ್ ಅಥವಾ ರಸ್ತೆಗಳಿಲ್ಲ.”
“ಆದ್ದರಿಂದ ರಸ್ತೆ ಅಥವಾ ರೈಲು ಅಪಘಾತಗಳಿಲ್ಲ. ನೀವು ಮಳೆನೀರಿಗಾಗಿ ಎಂದೂ ಸಮಸ್ಯೆ ಎದುರಿಸಿಲ್ಲವೇ?”
“ಇಲ್ಲ, ವಾಟರ್ ಬಲೂನ್ ಆವಿಷ್ಕಾರವಾದ ನಂತರ ಇಲ್ಲ. ಅಲ್ಲಿ ಒಂದು ದೊಡ್ಡ ಬಲೂನ್ ಇದೆ ನೋಡಿ ಪೈಪ್ ಗಳೊಂದಿಗೆ. ಅವುಗಳ ಸಹಾಯದಿಂದ ನಾವು ನಮಗೆ ಬೇಕಾದಷ್ಟು ಮಳೆನೀರನ್ನು ಸಂಗ್ರಹಿಸುತ್ತೇವೆ. ಅದರಿಂದ ನಾವು ಪ್ರವಾಹ ಅಥವಾ ಚಂಡಮಾರುತದಿಂದ ತೊಂದರೆಗೊಳಗಾಗುವುದಿಲ್ಲ. ನಾವೆಲ್ಲರೂ ಪ್ರಕೃತಿ ಎಷ್ಟು ನಮಗೆ ಕೊಡಲು ಸಾಧ್ಯವೋ ಅಷ್ಟನ್ನು ಪಡೆಯಲು ಯತ್ನಿಸುತ್ತಿದ್ದೇವೆ. ನಾವು ಸೋಮಾರಿಗಳಾಗಿ ಕುಳಿತುಕೊಳ್ಳದೇ ಇರುವುದರಿಂದ ನಮಗ್ಯಾರಿಗೂ ಒಬ್ಬರ ಜೊತೆ ಒಬ್ಬರಿಗೆ ಜಗಳವಾಡಲು ಸಮಯವಿರುವುದಿಲ್ಲ ನಮ್ಮ ಮಹಾರಾಣಿ ಸಸ್ಯಶಾಸ್ತ್ರ ಪ್ರೇಮಿ. ಇಡೀ ದೇಶವನ್ನು ಒಂದು ಭವ್ಯ ತೋಟವನ್ನಾಗಿ ಪರಿವರ್ತಿಸುವುದು ಅವರ ಗುರಿ.”
“ಈ ವಿಚಾರ ಅದ್ಭುತವಾಗಿದೆ. ನಿಮ್ಮ ಮುಖ್ಯ ಆಹಾರವೇನು?”
“ಹಣ್ಣುಗಳು.”
“ಬೇಸಿಗೆ ಕಾಲದಲ್ಲಿ ನೀವು ನಿಮ್ಮ ದೇಶವನ್ನು ತಂಪಾಗಿ ಹೇಗೆ ಇಡುವಿರಿ. ನಾವು ಬೇಸಿಗೆಯಲ್ಲಿ ಮಳೆ ಸ್ವರ್ಗದ ವರದಾನ ಎಂದುಕೊಳ್ಳುಕೊಳ್ಳುತ್ತೇವೆ.”
“ಬಿಸಿಯನ್ನು ತಡೆಯಲಾಗದಿದ್ದರೆ, ನಾವು ಕೃತಕ ಕಾರಂಜಿಯಿಂದ ನೆಲದ ಮೇಲೆ ನೀರನ್ನು ಪ್ರೋಕ್ಷಿಸುತ್ತೇವೆ. ಚಳಿಗಾಲದಲ್ಲಿ ನಮ್ಮ ಕೋಣೆಗಳನ್ನು ಸೂರ್ಯನ ಶಾಖದಿಂದ ಬೆಚ್ಚಗಿಟ್ಟುಕೊಳ್ಳುತ್ತೇವೆ.”
ಅವರು ಅವರ ಸ್ನಾನದ ಕೋಣೆಯನ್ನು ತೋರಿಸಿದರು. ಅದರ ಮೇಲ್ಭಾಗವನ್ನು ತೆಗೆಯುವಂತಿತ್ತು. ಅವರಿಗೆ ಬೇಕೆನಿಸಿದಾಗ ಚಾವಣಿಯನ್ನು ತೆಗೆದು, ಶವರ್ ಪೈಪ್‍ನ ನಲ್ಲಿಯನ್ನು ತಿರುಗಿಸುವುದರ ಮೂಲಕ ಶವರ್ ಬಾತ್ ಮಾಡಬಹುದಿತ್ತು.
“ನೀವು ನಿಜಕ್ಕೂ ಅದೃಷ್ಟವಂತರು” ಉದ್ಘರಿಸಿದೆ ನಾನು. “ನಿಮಗೆ ಬೇಕು ಎಂದರೆ ಏನು ಎಂದು ಗೊತ್ತಿಲ್ಲ. ನಿಮ್ಮ ಧರ್ಮ ಯಾವುದು?”
“ನಮ್ಮ ಧರ್ಮ ಪ್ರೀತಿ ಮತ್ತು ಸತ್ಯದ ಆಧಾರಿತವಾಗಿದೆ. ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಸತ್ಯವಂತರಾಗಿರುವುದು ನಮ್ಮ ಧಾರ್ಮಿಕ ಕರ್ತವ್ಯ. ಯಾರಾದರೂ ಸುಳ್ಳು ಹೇಳಿದರೆ ಅವಳು ಅಥವಾ ಅವನನ್ನು . . .”
“ಸಾಯಿಸುತ್ತೀರಾ?”
“ಇಲ್ಲ, ಸಾವಿನ ಶಿಕ್ಷೆ ನೀಡುವುದಿಲ್ಲ. ದೇವರ ಸೃಷ್ಟಿಯ ಯಾವುದೇ ಜೀವಿಯನ್ನು ನಾವು ಕೊಲ್ಲುವುದರಲ್ಲಿ ಖುಷಿ ಪಡುವುದಿಲ್ಲ, ಮುಖ್ಯವಾಗಿ ಮಾನವ ಜೀವಿಯನ್ನು. ಸುಳ್ಳುಗಾರರಿಗೆ ಈ ದೇಶವನ್ನು ಬಿಟ್ಟುಹೋಗುವ, ಮತ್ತೆಂದೂ ಈ ಕಡೆ ಬಾರದಿರುವ ಶಿಕ್ಷೆ ವಿಧಿಸಲಾಗುತ್ತದೆ.”
“ತಪ್ಪಿತಸ್ಥನನ್ನು ಕ್ಷಮಿಸುವುದೇ ಇಲ್ಲವೇ?”
“ಕ್ಷಮಿಸುತ್ತೇವೆ, ಆದರೆ ಆ ವ್ಯಕ್ತಿ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟರೆ ಮಾತ್ರ.”
“ನೀವು ನಿಮ್ಮ ಸಂಬಂಧಿಕರನ್ನು ಬಿಟ್ಟರೆ ಬೇರೆ ಯಾವ ಪುರುಷರನ್ನು ನೋಡಲು ಅವಕಾಶವಿಲ್ಲವೇ?”
“ಹೌದು, ಪವಿತ್ರ ಸಂಬಂಧಗಳನ್ನು ಹೊರತುಪಡಿಸಿ.”
“ನಮ್ಮ ಪವಿತ್ರ ಸಂಬಂಧ ಬಹಳ ಸೀಮಿತವಾಗಿದೆ. ನಮ್ಮಲ್ಲಿ ದೊಡ್ಡಪ್ಪ, ಚಿಕ್ಕಪ್ಪನ ಮಕ್ಕಳ ಸಂಬಂಧವೂ ಸಹ ಪವಿತ್ರವಲ್ಲ.”
“ನಮ್ಮದು ಬಹಳ ವಿಶಾಲ, ದೂರದ ಸಂಬಂಧಿಕರೂ ಸಹ ನಮಗೆ ನಮ್ಮ ಸೋದರರಷ್ಟೇ ಪವಿತ್ರ.”
“ಅದು ಬಹಳ ಒಳ್ಳೆಯದು. ನಿಮ್ಮ ನೆಲದಲ್ಲಿ ಪವಿತ್ರತೆ ತಾಂಡವವಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಈ ಎಲ್ಲಾ ನಿಯಮಗಳನ್ನು ಮಾಡಿರುವ, ವಿವೇಕಿಯೂ, ದೂರದೃಷ್ಟಿಯುಳ್ಳವರೂ ಆದ ನಿಮ್ಮ ಒಳ್ಳೆಯ ಮಹಾರಾಣಿಯನ್ನು ನೋಡಬೇಕು.”
“ಸರಿ” ಎಂದರು ಸಾರಾ.
ನಂತರ ಅವರು ಒಂದಷ್ಟು ಸೀಟುಗಳನ್ನು ಹಲಗೆಯೊಂದರ ಮೇಲೆ ಸ್ಕ್ರೂನೊಂದಿಗೆ ಜೋಡಿಸಿದರು. ಅದಕ್ಕೆ ಎರಡು ಬಾಲ್ ಗಳನ್ನು ಜೋಡಿಸಿದರು. ಅದು ಏತಕ್ಕಾಗಿ ಎಂದು ಕೇಳಿದಾಗ ಅದು ಜಲಜನಕದ ಬಾಲ್‍ಗಳೆಂದು, ಅದು ಗುರುತ್ವಾಕರ್ಷಣ ಶಕ್ತಿಯನ್ನು ಮೀರಲು ಎಂದರು. ವಿಭಿನ್ನ ಸಾಮರ್ಥ್ಯಗಳುಳ್ಳ ಬಾಲ್‍ಗಳಿದ್ದವು. ಅದನ್ನು ಏರ್‍ಕಾರ್‍ಗೆ ಜೋಡಿಸಿದರು. ಅದಕ್ಕೆ 2 ಬ್ಲೇಡ್‍ಗಳಿದ್ದವು. ಅದು ವಿದ್ಯುತ್‍ನಿಂದ ನಡೆಯುತ್ತದೆ ಎಂದರು. ನಾವು ಆರಾಮವಾಗಿ ಕುಳಿತ ನಂತರ ಅವರು ನಾಬ್ ಮುಟ್ಟಿದರು. ಬ್ಲೇಡ್‍ಗಳು ತಿರುಗಲಾರಂಭಿಸಿದವು, ವೇಗವಾಗಿ. ನಾವು ಮೊದಲು 6-7 ಅಡಿ ಎತ್ತರದಲ್ಲಿದ್ದೆವು, ಆದರೆ ನಂತರ ನಾವು ಮೇಲಕ್ಕೆ ಹೋಗಿ ಮುಂದೆ ಹೋಗುತ್ತಿದ್ದೇವೆ ಎಂದು ತಿಳಿದದ್ದು ರಾಣಿಯ ತೋಟವನ್ನು ತಲುಪಿದಾಗ.
ನನ್ನ ಸ್ನೇಹಿತೆ ಏರ್‍ಕಾರ್‍ಅನ್ನು ಕೆಳಗಿಳಿಸಿದರು, ನಾವು ಕೆಳಗಿಳಿದೆವು.
ಅಲ್ಲಿಂದಲೇ ನಾನು ಮಹಾರಾಣಿ ತಮ್ಮ ತೋಟದ ಮಧ್ಯದಲ್ಲಿ ತಮ್ಮ ಪುಟ್ಟ ಮಗಳೊಂದಿಗೆ (4 ವರ್ಷ) ಮತ್ತು ತಮ್ಮ ಸಖಿಯರೊಂದಿಗೆ ನಡೆದಾಡುತ್ತಿದ್ದುದ್ದನ್ನು ಕಂಡೆ.
“ಹಲೋ, ನೀನಿಲ್ಲಿ” ರಾಣಿ ಹೇಳಿದರು ಸಾರಾರವರನ್ನುದ್ದೇಶಿಸಿ. ನನ್ನನ್ನು ಪರಿಚಯಿಸಲಾಯಿತು, ಅವರು ಪ್ರೀತಿಯಿಂದ ನನ್ನನ್ನು ಸ್ವಾಗತಿಸಿದರು.
ಅವರ ಪರಿಚಯ ಮಾಡಿಕೊಳ್ಳಲು ನನಗೆ ಬಹಳ ಖುಷಿಯಾಯಿತು. ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ, ಅವರು ಹೇಳಿದ್ದು : ನಮ್ಮ ಪ್ರಜೆಗಳು ಇತರರೊಂದಿಗೆ ವ್ಯಾಪಾರ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ, ಮಹಿಳೆಯರನ್ನು ಜೆನಾನದಲ್ಲಿಟ್ಟಿರುವ, ಆ ಮಹಿಳೆಯರು ಹೊರಬಂದು ನಮ್ಮ ಜೊತೆ ವ್ಯಾಪಾರ ಮಾಡಲಾಗದ ಯಾವುದೇ ದೇಶಗಳೊಂದಿಗೆ ವ್ಯಾಪಾರ ಸಾಧ್ಯವಿಲ್ಲ. ಪುರುಷರು ಕಡಿಮೆ ನೈತಿಕತೆಯನ್ನು ಹೊಂದಿದ್ದಾರೆ, ಆದ್ದರಿಂದ ನಮಗೆ ಅವರೊಂದಿಗೆ ವ್ಯವಹಾರ ಇಷ್ಟವಿಲ್ಲ. ನಾವು ಇತರರ ನೆಲವನ್ನು ಆಶಿಸುವುದಿಲ್ಲ, ಕೊಹಿನೂರ್‍ಗಿಂತ ಸಾವಿರಪಟ್ಟು ಪ್ರಕಾಶಮಾನದ್ದಾದರೂ ನಾವು ವಜ್ರದ ಚೂರಿಗಾಗಿ ಜಗಳವಾಡುವುದಿಲ್ಲ, ಅಥವಾ ಯಾರೋ ರಾಜನ ಬಳಿ ಮಯೂರ ಸಿಂಹಾಸನವಿದೆ ಎಂದು ಅಸೂ
ಯೆ ಪಡುವುದಿಲ್ಲ. ನಾವು ಜ್ಞಾನ ಆಳವಾದ ಸಮುದ್ರದಲ್ಲಿ ಮುಳುಗುತ್ತೇವೆ ಮತ್ತು ಪ್ರಕೃತಿ ನಮಗಾಗಿ ಕಾಯ್ದಿರಿಸಿರುವ ಅಮೂಲ್ಯವಾದ ರತ್ನಗಳನ್ನು ಪಡೆಯಲು ಪ್ರಯತ್ನಿಸುತ್ತೇವೆ. ನಮಗೆ ಸಾಧ್ಯವಾದಷ್ಟು ನಾವು ಪ್ರಕೃತಿಯ ಕೊಡುಗೆಗಳನ್ನು ಅನುಭವಿಸುತ್ತೇವೆ.”
ಅವರಿಂದ ಬೀಳ್ಕೊಂಡು, ನಾನು ಖ್ಯಾತ ವಿಶ್ವವಿದ್ಯಾನಿಲಯಗಳನ್ನು ನೋಡಿದೆ. ಅವರು ತಮ್ಮ ಉತ್ಪಾದಕ ಕೇಂದ್ರಗಳನ್ನು, ಪ್ರಯೋಗಾಲಯ, ವೀಕ್ಷಣಾಲಯಗಳನ್ನು ತೋರಿಸಿದರು.
ಎಲ್ಲಾ ಸ್ಥಳಗಳನ್ನು, ಆಸಕ್ತಿದಾಯಕವಾಗಿ ನೋಡಿದ ನಂತರ ನಾವು ಮತ್ತೆ ಏರ್‍ಕಾರ್‍ನಲ್ಲಿ ಕುಳಿತೆವು. ಆದರೆ ಅದು ಚಲಿಸಲಾರಂಭಿಸಿದ ತಕ್ಷಣ ನಾನು ಹೇಗೋ ಅದರಿಂದ ಜಾರಿಬಿಟ್ಟೆ, ಅದು ನನ್ನನ್ನು ನನ್ನ ಕನಸಿನಿಂದ ಎಬ್ಬಿಸಿಬಿಟ್ಟಿತು. ಕಣ್ತೆರೆದು ನೋಡಿದಾಗ, ನಾನು ನನ್ನ ಮಲಗುವ ಕೋಣಿಯಲ್ಲಿ ಈಸಿ ಚೇರಿನ ಮೇಲೆ ಕುಳಿತಿದ್ದೆನೆಂಬುದು ನನ್ನ ಅರಿವಿಗೆ ಬಂದಿತು!!
- ಡಾ।। ಸುಧಾ.ಜಿ

ನಾ ಕಂಡಂತೆ: "ಸರಿ ತಪ್ಪುಗಳ ನಡುವೆ"

ಚಿತ್ರ ಕೃಪೆ:

ಸರಿ ಹಾಗು ತಪ್ಪು ಎಂಬ ಪದಗಳು ಸರಿಯಾದ ವಿರುದ್ದಾರ್ಥಕ ಪದಗಳು. ನಾನು ಸರಿಯಾಗಿಯೇ ನಡೆದುಕೊಂಡಿದ್ದೇನೆ ಎಂದು ಅರಿತುಕೊಳ್ಳುವ ಮೊದಲೇ ಬೇರೆಯವರು ಅದು ತಪ್ಪೆಂದು ನಮಗೆ ಹೇಳಿರುತ್ತಾರೆ . ಆ ಸಂದರ್ಭದಲ್ಲಿ ಸಹಜವಾಗಿ ಇದು ಸರಿಯಾ? ತಪ್ಪಾ? ಎಂಬ ಗೊಂದಲದಲ್ಲಿ ಬೀಳುತ್ತೀವಿ.

ಎಷ್ಟೋ ವಿಷಯಗಳು ಒಂದು ಜನಾಂಗದ ಪರವಾಗಿದ್ದರೆ, ಕೆಲವೊಂದು ವಿರುದ್ದವಾಗಿರುತ್ತವೆ. ಕೆಲವೊಂದು ದೇಶಗಳಲ್ಲಿರುವ ಜನರು ತಮ್ಮ ಸಂತೋಷಗಳಿಗಾಗಿ ಬದುಕುತ್ತಾರೆ . ಆದರೆ, ಭಾರತದಲ್ಲಿರುವ ಎಷ್ಟೋ ಮಂದಿ ತಮ್ಮ ಇಷ್ಟಗಳನ್ನು ಬೇರೆಯವರ ಬಲವಂತಕ್ಕೆ ಮಣಿದು ಅಥವಾ ಸಮಾಜಕ್ಕೆ ಹೆದರಿ ತ್ಯಜಿಸುತ್ತಾರೆ. ಏಕೆಂದರೆ, ನಮ್ಮ ಸಂಸ್ಕೃತಿ ಕೆಲವೊಂದು ಕಟ್ಟು ಪಾಡುಗಳನ್ನು ಪಾಲಿಸಿಕೊಂಡು ಬಂದಿದೆ . ಕೆಲವೊಂದು ವಿಷಯಗಳಿಗೆ ವೈಜ್ಞಾನಿಕ ಕಾರಣವೂ ಇದೆ.

ಮನುಷ್ಯನ ಪರಿಸರ ಅವನ ಸರಿ – ತಪ್ಪುಗಳ ಕಂಡುಕೊಳ್ಳುವಿಕೆ ಮೇಲೆ ತುಂಬ ಪರಿಣಾಮಕಾರಿಯಾಗಿದೆ. ಯಾವುದೇ ವಿಷಯವನ್ನು ಮನುಷ್ಯನ ಮನಸ್ಸು ಇದು ಸರಿ ಅಥವಾ ತಪ್ಪು ಎಂದು ನಿರ್ಧರಿಸುವುದು, ಅವನು ಸೃಷ್ಟಿಕೊಂಡಿರುವ ರೀತಿ ನಿಯಮಗಳು ಹಾಗು ಬೆಳೆದು ಬಂದಿರುವ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ .

ನಮ್ಮ ಭಾರತದಲ್ಲಿ ಬಲಗೈಗಿರುವ ಮಹತ್ವ ಎಡಗೈಗೆ ಇಲ್ಲ. ಎಡಗೈಗೆ ಕೆಲವೊಂದು ಸಂಧರ್ಭಗಳಲ್ಲಿ ಬಳಸುವುದು ತಪ್ಪು ಎಂಬ ಕಲ್ಪನೆ ಇದೆ . ಆದರೆ ವಿದೇಶಗಳಲ್ಲಿ ಎರಡು ಕೈಗಳಿಗೆ ಸಮನಾದ ಮಹತ್ವವಿದೆ. ಕೈಗಳಲ್ಲಿ ಹೇಗೆ ಅಸಮಾನತೆ ತೋರಿಸುತ್ತೇವೋ ಹಾಗೆಯೇ ಭಾರತದಲ್ಲಿ ಲಿಂಗ ಅಸಮಾನತೆಯೂ ಇದೆ . ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಓದುವುದು ತಪ್ಪು ಎಂದು ಭಾವಿಸಲಾಗಿತ್ತು. ಆದರೆ ಈಗಿನ ವ್ಯವಸ್ಥೆಗೆ ಅದು ಹೋಲಿಕೆ ಮಾಡಿ ನೋಡಿದಾಗ ಹೆಣ್ಣು ಮಕ್ಕಳನ್ನು ಓದಿಸುವುದು ಸರಿಯೆಂದು ಬದಲಾವಣೆಯಾಗಿದೆ. ಇಲ್ಲಿ ಒಂದು ಗಮನಿಸಬೇಕಾದ ಅಂಶ ಏನೆಂದರೆ ಹೆಣ್ಣು ಮಕ್ಕಳು ಓದಿನ ವಿಷಯ ‘’ತಪ್ಪಿನಿಂದ ಸರಿಯೆಂದು’’ಬದಲಾವಣೆ ಆಗಲು ಅದರ ಹಿಂದೆ ಎಷ್ಟೋ ಜನರ ಪರಿಶ್ರಮವಿದೆ.

ಧರ್ಮಗಳ ಸರಿ ತಪ್ಪುಗಳು;
ಮುಸ್ಲಿಂ ಧರ್ಮದಲ್ಲಿ, ವಿಗ್ರಹ ಪೂಜೆ ತಪ್ಪು ಹಿಂದೂ ಧರ್ಮದಲ್ಲಿ ಅದು ಸರಿ . ಬೇರೆ ಧರ್ಮಗಳಲ್ಲಿ ಗೋಮಾಂಸ ತಿನ್ನುವುದು ಸರಿ, ಆದರೆ ಹಿಂದೂ ಧರ್ಮದಲ್ಲಿ ಅದು ತಪ್ಪು. ಗೋವನ್ನು ದೇವರಂತೆ ಪೂಜಿಸುವರು. ‘’ಒಂದು ವೇಳೆ ಮನುಷ್ಯ ತನ್ನನ್ನು ತಾನು ಇವೆಲ್ಲ ಧರ್ಮಗಳಿಂದ ಬಿಡಿಸಿಕೊಂಡು ಹೊರಗೆ ನಿಂತು ನೋಡಿದಾಗ ಯಾವುದು ತಪ್ಪು ಯಾವುದು ಸರಿ?’’.


ಕೆಲವೊಂದು ದೇಶಗಳು ಸರಿ ತಪ್ಪುಗಳನ್ನು ಪಾಲಿಸುತ್ತವೆ -

• ಹೋಟೆಲ್ ಗೆ ಹೋದಾಗ ನಮಗೆ ಬೇಕಾದ್ದೆಲ್ಲಾ ತಂದು ಕೊಟ್ಟು ನಮ್ಮ ಟೇಬಲ್ ಮೇಲೆ ಇಡುವ ವೈಟರ್ಗೆ ಟಿಪ್ಸ್ ಕೊಡುವುದು ಸರಿ ಎಂದು ನಾವು ತಿಳಿದುಕೊಂಡಿದ್ದರೆ, ಜಪಾನಿನಲ್ಲಿ ಅದು ತಪ್ಪು ಟಿಪ್ಸ್ ಕೊಡುವುದು ವೈಟರ್ನನ್ನು ಕೆಳ ಸ್ಥರದಲ್ಲಿ ನೋಡಿದಂತಾಗುತ್ತದೆ.

• ಆಹಾರವನ್ನು ಉಳಿಸಿ ಹಾಳು ಮಾಡದೆ ಎಲ್ಲವನ್ನು ತಿನ್ನುವುದು ಸರಿ ಎಂದು ನಾವು ತಿಳಿದುಕೊಂಡಿದ್ದರೆ,ಚೀನಾ ದೇಶದಲ್ಲಿ ಅದು ತಪ್ಪು ಸ್ವಲ್ಪವಾದರೂ ಆಹಾರವನ್ನು ತಮ್ಮ ತಟ್ಟೆಯಲ್ಲಿ ಉಳಿಸುವುದರಿಂದ ಅಡುಗೆ ಮಾಡಿದವನಿಗೆ ಕೃತಜ್ಞತೆ ಸಲ್ಲುಸುವುದೆಂದು ಭಾವಿಸಿದ್ದಾರೆ .

ಹೀಗೆ ಕೆಲವೊಂದು ದೇಶಗಳು ಸಮುದಾಯಗಳು ಕುಟುಂಬಗಳು ತಮ್ಮದೇ ಆದ ಸರಿ ತಪ್ಪುಗಳು ಎಂಬ ಹಣೆಪಟ್ಟಿಗಳನ್ನು ಅಂಟಿಸಿಕೊಂಡಿರುತ್ತಾರೆ. ಆದರೆ ಮನುಷ್ಯನಾದವನು ಕಾಲಕ್ಕೆ ತಕ್ಕ ಹಾಗೆ ತನ್ನ ಸರಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಯಾವುದೇ ಒಂದು ಸಮುದಾಯದ ಅಥವಾ ದೇಶಗಳ ಸರಿ ತಪ್ಪುಗಳ ಅಂಟುಪಟ್ಟಿಯನ್ನು ಅಂಟಿಸಿಕೊಳ್ಳದೆ, ಬೇರೆಯವರಿಗೆ ತನ್ನ ನಡತೆಯಿಂದ ಹಾನಿಯುಂಟು ಮಾಡದೆ ಬದುಕುವುದು ನನಗೆ ಸರಿಯೆನಿಸುತ್ತದೆ. ನಾನು ಹೇಳುತ್ತಿರುವುದು ಸರಿಯೋ ತಪ್ಪೋ ಎಂಬುದನ್ನು ದಯವಿಟ್ಟು ತಿಳಿಸಿ.

- ಲಕ್ಷ್ಮಿ ನವ್ಯ

ನಾನು ಕ್ರಿಶ್ಚಿಯನ್ ಅಲ್ಲವೇ?




ಮತ್ತೆ ಕ್ರಿಸ್‍ಮಸ್ ಬಂದಿತು.  ಎಲ್ಲಾ ಹಬ್ಬಗಳಲ್ಲಿ ಅದು ಅತ್ಯುತ್ತಮ ಹಬ್ಬವೆನಿಸುತ್ತದೆ. ಏಕೆಂದರೆ ಇಡೀ ಪ್ರಪಂಚ ಅದನ್ನು ಆಚರಿಸುತ್ತದೆ. ಕಾಲೇಜಿನಲ್ಲಿ . . . ಎಂದಿನಂತೆಯೇ, ನನ್ನನ್ನು ಕೇಳಿದರು “ಈ ಕ್ರಿಸ್ಮಸ್‍ಗೂ ನೀನು ಚರ್ಚ್‍ಗೆ ಹೋಗುವುದಿಲ್ಲವೇ???” ನನ್ನ ಜೀವನದಲ್ಲಿ ಇಲ್ಲಿಯವರೆಗೂ ಹೇಳಿಕೊಂಡು ಬಂದಂತೆ, ನಾನು ವಿನೀತಳಾಗಿ ಉತ್ತರಿಸಿದೆ, “ಇಲ್ಲ ಹೋಗುವುದಿಲ್ಲ.” ತಕ್ಷಣವೇ ಮತ್ತೊಂದು ಕಾಮೆಂಟ್ ಕೇಳಿ ಬಂತು, “ಅದೆಂತಹ ಕ್ರಿಶ್ಚಿಯನ್ ನೀನು.” ನಾನು ಕೇವಲ ನಕ್ಕೆ.
ಈ ಬಾರಿ ಸ್ವಲ್ಪ ಭಿನ್ನವಾಗಿತ್ತು. ನಾನು ಸೇಂಟ್ ಥಾಮಸ್ ಚರ್ಚ್‍ಗೆ ಹೋದೆ. ಹೋಗಬೇಕೆನ್ನುವ ಭಾವನೆಯೊಂದಿಗೆ. “ನಾನು ನಿನ್ನ ಮುಂದೆ ಮಂಡಿಯೂರಿ ಕುಳಿತು, ತಲೆ ಬಾಗಿಸಿದಾಗ ನಾನು ಮಾತನಾಡಿದ್ದು ಯಾರೊಂದಿಗೆ? 
ನನಗೆ ಗೊತ್ತು ನೀನು ಸ್ವರ್ಗದಲ್ಲಿ ಅಥವಾ ಮೋಡಗಳ ಹಿಂದೆಯಿಲ್ಲವೆಂದು. ಆದರೂ ಯಾರೋ ನನ್ನ ಮಾತನ್ನು ಕೇಳುತ್ತಿರುವರೆಂದು ಭಾಸವಾಯಿತು. ಯಾರದು? ನಾನು ನಿನಗೆ ಪ್ರಾರ್ಥನೆ ಮಾಡುವಾಗ ನಾನು ಇಷ್ಟನ್ನು ಹೇಳುವಷ್ಟು ನಿರ್ಭೀತಳು - ನನಗೆ ಗೊತ್ತು ನೀನು ಅಸ್ತಿತ್ವದಲ್ಲಿಲ್ಲವೆಂದು. ಆದರೆ ನನಗೆ ಇದನ್ನು ಮಾಡಲು ಸಹಾಯ ಮಾಡು. ಅದರ ಬದಲಿಗೆ ನಾನು ಸಮಾಜಕ್ಕೆ ಏನನ್ನದರೂ ಒಳ್ಳೆಯದನ್ನು ಮಾಡುವ ಭರವಸೆ ನೀಡುತ್ತೇನೆಂದು. 
ಇದನ್ನು ನಾನು ಯಾರೊಂದಿಗೆ ಹೇಳಿಕೊಳ್ಳುತ್ತಿದೆ? 
ಹೊರಗೆ ಬಂದಾಗ ನನ್ನ ಮನಸ್ಸಿನಲ್ಲೊಂದು ನೆಮ್ಮದಿ ಮೂಡಿತ್ತಲ್ಲ ಏಕೆ? 
ಎಲ್ಲೊ ಒಂದು ಕಡೆ ನೀ ನನ್ನನ್ನು ಇಷ್ಟಪಡುವೆ ಎಂದು ನನಗನಿಸುತ್ತದೆ, ನಾನು ನಿನಗೆ ತುಂಬಾ ಹತ್ತಿರ ಎಂದು ಭಾವಿಸುತ್ತೇನೆ. ಆದರೆ ಹಾಗೇಕೆ? ನೀನು ಎಲ್ಲಿರುವೆ? 
ಚರ್ಚ್ ಫಾದರ್‍ಗಳೊಂದಿಗೆ ತಮ್ಮ ಪಾಪಗಳನ್ನು ನಿವೇದಿಸಿಕೊಂಡ ನಂತರ ಜನಕ್ಕೆ ಹೀಗೆಯೇ ಅನಿಸುತ್ತದೆಯೇ? 
ಅವರು ನಿನಗೆ ಏಕೆ ನಿವೇದಿಸಿಕೊಳ್ಳಲಾರರು? ನಾನು ಮಾಡುವಂತೆ. 
ನೀನು ನನ್ನ ಒಳಗೇ ಇರುವೆಯಾ? ನನ್ನ ಸುಪ್ತ ಪ್ರಜ್ಞೆಯಲ್ಲಿರುವೆಯಾ? ನೀನು ಎಲ್ಲರಲ್ಲಿಯೂ ಇರುವೆಯಾ?
ಅಥವಾ ಕೆಲವರು ಅದನ್ನು ಗುರುತಿಸುತ್ತಾರೆ, ಕೆಲವರು ಗುರುತಿಸಲಾರರೆಂದೇ.
ನೀನು ಯಾವಾಗಲೂ ನನ್ನನ್ನು ಕ್ಷಮಿಸುವೆ ಎಂದು ನನಗನಿಸುತ್ತದೆ ಅಥವಾ ಅದು ನನ್ನ ಭಾವನೆ ಮಾತ್ರವೇ?
ನನಗೆ ಇದು ಅರಿವಾಗುವುದಿಲ್ಲ
ನಾನು ನನ್ನೊಂದಿಗೇ ಮಾತನಾಡಿಕೊಳ್ಳುತ್ತಿದ್ದೇನೆಯೇ?
ನನಗೆ ಬ್ಯಾಪ್ಟಿಸಂ ಆಗಿಲ್ಲ
ನಾನು ಕ್ಯಾಟಿಕಿಸಂಗೆ ಹೋಗಿಲ್ಲ
ನನ್ನ ಹೋಲಿ ಕಮ್ಯೂನಿಯನ್ ಮುಗಿದಿಲ್ಲ
ಆದರೆ ನಾನು ಯಾವಾಗಲೂ ಕೆಟ್ಟದ್ದನ್ನು ಆಲೋಚಿಸುವುದಿಲ್ಲ
ಎಂದಿಗೂ ಇತರರ ಒಳಿತನ್ನೇ ಬಯಸುತ್ತೇನೆ
ಸಮಾಜ ಸೇವೆ ಮಾಡಲಿಚ್ಛಿಸುತ್ತೇನೆ
ಬಡವರಿಗೆ ನೆರವು ನೀಡಬಯಸುತ್ತೇನೆ
ನನ್ನ ಭಾಗದೊಂದು ಭಾಗವನ್ನು ಅವಶ್ಯಕತೆಯಿರುವವರೊಂದಿಗೆ ಹಂಚಿಕೊಳ್ಳಲು ಸಮಸ್ಯೆಯೇನೂ ಇಲ್ಲ
ನಾನು ಚರ್ಚ್‍ಅನ್ನು ಅನುಸರಿಸದಿರಬಹುದು
ಆದರೆ ಕ್ರಿಸ್ತನನ್ನು ಅನುಸರಿಸುತ್ತಿಲ್ಲವೇ?
ಅಷ್ಟು ಸಾಲದೇ? 
ನಾನು ಕ್ರಿಶ್ಚಿಯನ್ ಅಲ್ಲವೇ????

- ನಿಲೀನಾ ಥಾಮಸ್ 

ಸಿನಿಮಾ ವಿಮರ್ಶೆ: ಸತ್ಯಜಿತ್ ರೇರವರ "ಗಣಶತ್ರು"


   


ಆರು ಹಾಡುಗಳು ಮೂರು ಫೈಟುಗಳು ಸ್ವಲ್ಪ ಮಸಾಲೆ ಕೈಲಾಗದ ಸುಂದರ (ಒಬ್ಬರಲ್ಲ ಕನಿಷ್ಟ ಮೂರು) ನಾಯಕಿಯರು, ಅವರ ರಕ್ಷಿಸುವ  ನಾಯಕನ ಅಸಾಮಾನ್ಯ ತಾಕತ್ತು ಮತ್ತವನ ಹುಚ್ಚು ಆರಾಧನೆ.....ಅಶ್ಲೀಲ ಹಾಸ್ಯ ,ಮನ ಘಾಸಿಗೊಳಿಸುವ ಕ್ರೌರ್ಯ, ಇವಿಲ್ಲದೆ ನಮ್ಮ  ಸಿನಿಮಾಗಳನ್ನ ಊಹಿಸಲೂ ಸಾಧ್ಯವಿಲ್ಲವೇನೊ.....ಇದ್ದಲ್ಲಿ ಅಂಥವು ನೆಲಕಚ್ಚುವುದು ಗ್ಯಾರಂಟಿ....ಎಂಬ ಅಭಿಪ್ರಾಯವನ್ನು ನೂರಕ್ಕೆ ನೂರರಷ್ಟು ತಪ್ಪೆಂದು ತೋರಿಸಿದ ಅನೇಕ ಗಟ್ಟಿ ನಿರ್ದೇಶಕರಲ್ಲಿ
ಬಂಗಾಲಿ ಸಿನಿಮಾಂತ್ರಿಕ .... ದಂತಕಥೆ.... ಸತ್ಯಜಿತ್ ರೇರವರು ಮುಂಚೂಣಿಯಲ್ಲಿರುತ್ತಾರೆ. ಸಮಾಜದೆಡೆಗೆ ಸಂವೇದನೆ ಮತ್ತು ಸೂಕ್ಷ್ಮ ಗಮನ ಹೊತ್ತ ರೇ' ರವರು ಅದರ ತೊಡಕುಗಳನ್ನು ತಮ್ಮ ವಿಶಿಷ್ಟ ಪ್ರತಿಭೆಯಿಂದ ಸರಳವಾಗಿ ಚಿತ್ರಿಸಿ ಮನಕೆ ದೂಡುವಲ್ಲಿ ಅವರದು ಎತ್ತಿದ ಕೈ
ರೇ ರವರ 26 ನೇ ಸಿನಿಮಾ 'ಗಣಶತೃ'. ಇದು ಹಲವು ಮೊದಲುಗಳಿಗೆ ಹೆಸರು ಪಡೆದಿದೆ.
ರೇ' ಹೃದಯಾಘಾತಕ್ಕೊಳಗಾದಾಗ ಹೊರಾಂಗಣ ಚಿತ್ರೀಕರಣಕ್ಕೆ ವೈದ್ಯರು ಅಡ್ಡಿಪಡಿಸಿದಾಗ ಅವರ ಕ್ರಿಯಾಶೀಲ ಮನಸಿಗೆ ತೋಚಿದ್ದು....ನಾರ್ವೆಯ ಪ್ರಸಿದ್ಧ ನಾಟಕಕಾರ ಹೆನ್ರಿಕ್ ಇಬ್ಸನ್ Enemy of the People ಆಧಾರಿತ ಸಿನಿಮಾ ನಿರ್ಮಾಣ. ಇದು ಅವರ ಮೊದಲ  ಸಂಪೂರ್ಣ ಸ್ಟುಡಿಯೋದಲ್ಲಿಯೇ ಚಿತ್ರೀಕರಿಸಿದ ಸಿನಿಮಾ. ಏಕೆಂದರೆ ಅವರ ಸಿನಿಮಾಗಳಲ್ಲಿ ಹೊರದೃಷ್ಯಗಳನ್ನು ಪ್ರಕೃತಿಯನ್ನು ಬಳಸಿಕೊಂಡು ಸನ್ನಿವೇಶ, ಪಾತ್ರಗಳ ಮನಸ್ಥಿತಿಗೆ ತಕ್ಕಂತೆ ಸೆರೆಹಿಡಿದು ಪರಿಣಾಮಕಾರಿ ರೀತಿಯಲ್ಲಿ ಪ್ರಸ್ತುತಪಡಿಸುವ ಅಂಶಗಳು ಇದ್ದೇ ಇರುತ್ತವೆ.

ಜೊತೆಗೆ ಅನಾರೋಗ್ಯದ ಕಾರಣ ಮೊದಲ ಬಾರಿಗೆ (ಅವರ ಸಿನಿಮಾಗಳಿಗೆ ಅವರೇ ಛಾಯಾಗ್ರಾಹಕರು) ಮಗ ಮತ್ತು ಸಹಾಯಕ ಛಾಯಾಗ್ರಾಹಕರಿಂದ ಸಿನಿಮಾ ಚಿತ್ರೀಕರಣ ನಡೆಯಿತು.

ಗಣಶತೃ' ....ಒಬ್ಬ ಪ್ರಾಮಾಣಿಕ ಆದರ್ಶ ವೈದ್ಯನು ಜನರ ಒಳಿತಿಗಾಗಿ ಶ್ರಮಿಸಿ ಶತೃ ಎನಿಸಿಕೊಂಡ ಒಂದು ದುರಂತ ಕಥೆ ಎನಿಸಿದರೂ ಅಂತ್ಯದಲ್ಲಿ ಆಶಾಭಾವನೆ ಮೂಡಿಸುವ, ಸ್ಪೂರ್ತಿ ನೀಡುವ ಕೃತಿಯಾಗಿದೆ

ಚಾಂದೀಪುರದ ಮುಖ್ಯ ವೈದ್ಯಾಧಿಕಾರಿ ಅಶೋಕ್ ಗುಪ್ತ (ಸೌಮಿತ್ರ ಚಟರ್ಜಿ ಪ್ರಸಿದ್ಧ ಬಂಗಾಲಿ ನಟ) ಪಟ್ಟಣದಲ್ಲಿ ಹರಡುತಿದ್ದ ಜಾಂಡೀಸ್ ಮತ್ತು ಹೆಪಟೈಟಿಸ್ ಖಾಯಿಲೆಗಳಿಗೆ ಕಾರಣ ಶಂಕಿಸಿ ಪರೀಕ್ಷಿಸಿದಾಗ ಲ್ಯಾಬಿಂದ ಬಂದ ರಿಪೋರ್ಟ್ ಅದನ್ನು ನಿಜವೆಂದು ಸಾಬೀತುಗೊಳಿಸುತ್ತದೆ. ಸೋಂಕು ಹರಡುವ ಮೂಲ ಪಟ್ಟಣದ ಮುಖ್ಯ ಹಿಂದೂ ದೇವಾಲಯ ಪವಿತ್ರ ಜಲವೆಂದು ಸಾಬೀತಾಗುತ್ತದೆ (ಮೂಲ ಕಥೆಯಲ್ಲಿ ಡಾ|| ಸ್ಟಾಕ್ಮನ್ ನಗರದ ಕಲುಷಿತ ಸ್ಪಾಗಳು ಕಾರಣವೆಂದು ಕಂಡು ಹಿಡಿಯುತ್ತಾನೆ). ಕಲುಷಿತಗೊಂಡ ಜಲವನ್ನು ಜನರು ಪವಿತ್ರವೆಂದು ಸೇವಿಸುವುದನ್ನು ಕಂಡ ವೈದ್ಯನ ಮನಸು ಮರುಗಿ ಎಚ್ಚರಿಸಲು ನಿರ್ಧರಿಸುತ್ತಾನೆ. ಪತ್ರಿಕಾ ಮಿತ್ರರೂ ಸಹ ಇದರ ಕುರಿತ ಲೇಖನ ಪ್ರಕಟಿಸಲು ಸಜ್ಜಾಗುತ್ತಾರೆ. ಆದರೆ ನಾಯಕನ ನಿರ್ಧಾರ ಅರಿತ ನಿತೀಷ್ (ದೃತಿಮನ್ ಚಟರ್ಜಿವೈದ್ಯನ ಅಣ್ಣ, ಪಟ್ಟಣದ ಮುಖ್ಯಾಧಿಕಾರಿ ಮತ್ತು ದೇವಾಲಯದ ಪ್ರಧಾನಾಧಿಕಾರಿ ವಿರೋಧಿಸುತ್ತಾರೆ. ಕಾರಣ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿ ಆದಾಯ ನಿಲ್ಲುತ್ತದೆಂದು. ಪತ್ರಕರ್ತರೂ ಸಹ ಜನ ತರ್ಕ ಒಪ್ಪರೆಂದು ಇದರಿಂದ ಪ್ರಯೋಜನವಿಲ್ಲೆಂದು ಕೈ ಬಿಡುತ್ತಾರೆ. ಆದರೂ ಎದೆಗುಂದದ ನಾಯಕ ಮತ್ತವನ ಕುಟುಂಬ  ಪಟ್ಟಣ ನಿವಾಸಿಗಳೊಂದಿಗೆ ನೇರ ಸಂಭಾಷಿಸಲು ವೇದಿಕೆ ಏರ್ಪಡಿಸಿದಾಗ ಸಂದರ್ಭದಲ್ಲೂ ಕೃತ್ರಿಮ ಶತೃಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡಿ ವೈದ್ಯನ ವಿರುದ್ಧ ಜನರನ್ನು ಎತ್ತಿ ಕಟ್ಟುವಲ್ಲಿ ಯಶಸ್ವಿಯಾಗುತ್ತಾರೆ. ಇದರಿಂದ ವೈದ್ಯನು ಮತ್ತವನ ಕುಟುಂಬ ಪಟ್ಟ ಪಾಡು ಅಷ್ಟಿಷ್ಟಲ್ಲ. ಮೂಲಕಥೆಯಲ್ಲಿ ನಗರವೇ ಒಂದಾದರೆ ನಾಯಕ ಮಾತ್ರ ಒಂಟಿಯಾಗಿ ನಿಲ್ಲುತ್ತಾನೆ. ಆದರೆ ರೇ ಇಲ್ಲಿ ಇನ್ನಷ್ಟು ಆಶಾದಾಯಕ ಭಾವನೆ ಸೃಷ್ಟಿಸಿದ್ದಾರೆ .....ಕೊನೆಗೂ ಸತ್ಯಕ್ಕೆ ಜಯ ದೊರೆತು ಜನರು ನಾಯಕನಿಗೆ ಜೈಕಾರ ಹಾಕುವ ಕೂಗಿನೊಂದಿಗೆ ಸಿನಿಮಾ ಮುಕ್ತಾಯವಾಗುತ್ತದೆ.

ಹೀಗೆ ಗಣಶತೃ ಧರ್ಮ ರಾಜಕೀಯ ವಿಜ್ಞಾನ ನಡುವಿನ ಹೋರಾಟದ ಕಥೆಯಾಗಿದೆ.
ಇನ್ನು ವೈದ್ಯನ ಮಡದಿಯಾಗಿ ರುಮಾ ಗುಹ ತಕೃತ, ಮಗಳ ಪಾತ್ರದಲ್ಲಿ ಮಮತಾ ಶಂಕರ್ ಉಳಿದ ಪಾತ್ರಗಳಲ್ಲಿ ದೀಪನ್ಕರ್ ದೇ ಸುಬೇಂದು ಚಟರ್ಜಿ ಭೀಷ್ಮ ಗುಹತಕುರ್ತ ಮನೋಜ್ ಮಿತ್ರ ಮುಂತಾದವರು ಜೀವ ತುಂಬಿದ್ದಾರೆ.

ಪ್ರೇಕ್ಷಕ ಮತ್ತು ವಿಮರ್ಶಕರ ಮನ ಗೆದ್ದ ಸಿನಿಮಾ ಎಲ್ಲ ಕಾಲಕ್ಕೂ ನಿಲ್ಲುವಂಥ ಕ್ಲಾಸಿಕ್ ಎನಿಸಿಕೊಂಡಿದೆ.
ಉಷಾಗಂಗೆ