Pages

ಅನುಭವ - ಅಣ್ಣ, ನಾನು ಕಂಡಂತೆ......

[ಇತ್ತೀಚೆಗೆ ನಿಧನರಾದ ಕನ್ನಡದ ಪ್ರಸಿದ್ಧ ವಿಜ್ಞಾನ ಲೇಖಕರಾದ, ಪ್ರಗತಿಪರ ಚಿಂತಕರಾದ ಪ್ರೊ. ಜೆ ಆರ್ ಲಕ್ಷಣ್ ರಾವ್ ರವರ ಬಗ್ಗೆ ಅವರ ಮಗಳ ಅನುಭವ ]


೧೯೫೦ ರ ದಶಕದ ಕೊನೆ. ಅಣ್ಣ ಆಗ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಕೆಮಿಸ್ಟ್ರಿ ಅಧ್ಯಾಪಕರಾಗಿದ್ದರು. ಕಾಲೇಜೆನಿಂದ ಮನೆಗೆ ಬಂದು ರಾತ್ರಿಯ ಊಟದ ನಂತರ ಅಣ್ಣ ನಮಗೆ ಕತೆಗಳು ಹೇಳುತ್ತಿದ್ದರು. ರಾಜ ರಾಣಿ, ರಾಕ್ಷಸ, ಕಾಗೆ ಗುಬ್ಬಿಗಳ ಕತೆಗಳಲ್ಲ. ವಿಜ್ಞಾನಿಗಳ ಬಗೆಗಿನ ಕತೆಗಳು. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ, ಅವರ ಸಾಧನೆ, ಆವಿಷ್ಕಾರಗಳನ್ನು ಕುರಿತ ಕತೆಗಳು.  ಐದರಿಂದ ಹತ್ತು ವರ್ಷ ವಯಸ್ಸಿನ ನಮಗೆ ಅದೆಷ್ಟು ಅರ್ಥವಾಗುತ್ತಿತ್ತೋ ನೆನಪಿಲ್ಲ. ಆದರೆ ಆ ಕ್ಷಣಕ್ಕೆ ಕಾತರರಾಗಿ ಕಾಯುತ್ತಿದ್ದುದಂತು ನೆನಪಿದೆ. ಇದು ಅಣ್ಣನ ಬಗ್ಗೆ ನನ್ನ ನೆನಪುಗಳಲ್ಲಿ ಮೊತ್ತ ಮೊದಲನೆಯದೆನ್ನಬಹುದು. 

ಇದರೊಡನೆ ನೆನಪಾಗುವುದು ಅಣ್ಣ ನಮಗೆಲ್ಲ ತಂದು ಕೊಟ್ಟಿದ್ದ ಜಿ.ಪಿ.ರಾಜರತ್ನಂ ಅವರ ಪುಸ್ತಕ ‘ಮಕ್ಕಳ ಪದ್ಯಗಳು’,  ರಷ್ಯ ಹಾಗೂ ಚೀನಾ ದೇಶದ ಪ್ರಕಟಣೆಯ ಮಕ್ಕಳ ಕತೆ ಪುಸ್ತಕಗಳು. ಇವಲ್ಲದೆ ವಿಜ್ಞಾನ, ಸಾಹಿತ್ಯ, ಕಲೆಗಳಿಗೆ ಸಂಬಂಧಪಟ್ಟ ಪುಸ್ತಕಗಳು, ಸಾಮಾಜಿಕ ಮೌಲ್ಯಗಳನ್ನೊಳಗೊಂಡ ಪುಸ್ತಕಗಳು, ಬಗೆಬಗೆಯ ವಿಶ್ವಕೋಶಗಳು, ಹಾಗೂ ಹಲವಾರು ವೈಜ್ಞಾನಿಕ ಹಾಗೂ ವೈಚಾರಿಕ ನಿಯತಕಾಲಿಕಗಳನ್ನೊಳಗೊಂಡ ಗ್ರಂಥಭಂಡಾರ ಪುಟ್ಟ ಮನೆಯ ಪುಟ್ಟ ಕೋಣೆಯಲ್ಲಿ ಆಗಲೇ ಸ್ಥಾಪನೆಯಾಗಿತ್ತು.  ಅದೇ ಅವರ ದೊಡ್ಡ ಆಸ್ತಿ. ಅಂತೆಯೇ ಅಣ್ಣ ನಮಗೆ ನೀಡಿದ ಅತ್ಯಮೂಲ್ಯ ಉಡುಗೊರೆಯೆಂದರೆ ಗ್ರಂಥ ಭಂಡಾರ ಮತ್ತು ಹಲವಾರು ಸಾಮಾಜಿಕ ಮೌಲ್ಯಗಳು. 

ಇದೇ ಸಮಯದಲ್ಲಿ, ಅಂದರೆ ನನಗೆ ಏಳು ಎಂಟು ವರ್ಷವಾಗಿದ್ದಾಗ ನಾನು ಸಂಗೀತ ಕಲಿಯಬೇಕೆಂಬ ಆಸೆ ವ್ಯಕ್ತ ಪಡಿಸಿದಾಗ ಅಣ್ಣ ಅದಕ್ಕೆ ಕೂಡಲೇ ಏರ್ಪಾಡು ಮಾಡಿದರು. ಅಲ್ಲದೆ ಬೆಂಗಳೂರಿನಿಂದ ಒಳ್ಳೆಯ ತಂಬೂರಿ ತರಿಸಿಕೊಟ್ಟರು. ನನಗೆ ನೆನಪಿರುವಂತೆ ಅದಕ್ಕೆ ಆಗ ೧೩೦ ರೂಪಾಯಿಗಳಿದ್ದಿರಬೇಕು. ಅದು ಆಗಿನ ಕಾಲಕ್ಕೆ ಬಹಳ ದೊಡ್ಡ ಮೊತ್ತ. ಮುಂದೆ ಅಣ್ಣನಿಗೆ ವರ್ಗವಾಗಿ ನಾವೆಲ್ಲ ಮೈಸೂರಿಗೆ ಬಂದ ನಂತರವೂ ತಮ್ಮ ನಾಲ್ಕು ಮಕ್ಕಳಿಗೂ ಸಂಗೀತ ಕಲಿಸಲು ಏರ್ಪಾಡು ಮಾಡಿದರು. ಆಗಿನ ಕಾಲದಲ್ಲಿ ಕಾಲೇಜು ಅಧ್ಯಾಪಕರಿಗೆ  ಸಿಗುತ್ತಿದ್ದ ವೇತನ ಅತಿ ಕಡಿಮೆ. ಆದರೆ ಮಕ್ಕಳ ಏಳಿಗೆಗಾಗಿ ಖರ್ಚು ಮಾಡಲು ಅಣ್ಣ ಹಿಂದು ಮುಂದು ನೋಡಲಿಲ್ಲ. ನಮ್ಮ ಮನೆಯಲ್ಲಿ ಬಟ್ಟೆ, ಒಡವೆಗಳಿಗೆ ಎಂದೂ ಪ್ರಾಶಸ್ತ್ಯವಿರಲಿಲ್ಲ. ನಮಗೆ ಎಂದೂ ಅದರ ಕೊರತೆ ಕಾಣಲೇ ಇಲ್ಲ.

ಮೈಸೂರಿನಲ್ಲಿ ನಡೆಯುವ ಸಂಗೀತ, ನೃತ್ಯ, ನಾಟಕಗಳು, ಸಾಹಿತ್ಯ ಚರ್ಚೆ, ಉಪನ್ಯಾಸಗಳು ಎಲ್ಲವಕ್ಕೂ ಅಣ್ಣ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು.  ಸಂಜೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಾಗಲೂ ಸಹ ಸಾಹಿತ್ಯ, ವಿಜ್ಞಾನಗಳನ್ನು ಕುರಿತ ಕ್ವಿಜ಼್ ನಡೆಯುತ್ತಿದ್ದವು. 

ಅಣ್ಣನಿಗಿದ್ದ ವಿವಿಧ ಆಸಕ್ತಿ ಹಾಗೂ ಉತ್ತಮ ಮೌಲ್ಯಗಳಿಂದಾಗಿ ಅವರಿಗಿದ್ದ ಸ್ನೇಹಿತರು, ಒಡನಾಡಿಗಳು ಸಾಮಾನ್ಯರಲ್ಲ. ಹೀಗಾಗಿ ನಮಗೆ ಚಿಕ್ಕಂದಿನಿಂದಲೂ ಪರಿಚಯವಾದವರೆಂದರೆ ಪ್ರೊ. ಸತೀಶ್ ಧವನ್, ಅಮೂಲ್ಯ ರೆಡ್ದಿ, ಕುವೆಂಪು, ಪುತಿನ, ಎ.ಎನ್.ಮೂರ್ತಿರಾವ್, ಶಿವರಾಮ ಕಾರಂತರು, ವೀಣಾ ದೊರೆಸ್ವಾಮಿ ಅಯ್ಯಂಗಾರ್ಯರು ಇಂತಹ ಮಹಾನುಭಾವರೇ! ಇಂತಹ ಶ್ರೀಮಂತ ವಾತಾವರಣದಲ್ಲಿ ಬೆಳೆದ ಅದೃಷ್ಟ ನಮ್ಮದು. 

ಒಳ್ಳೆಯದು ಕೆಟ್ಟದು ಎಂಬುದರ ಬಗ್ಗೆ ಅಣ್ಣ ನಮಗೆ ನೀತಿ ಕತೆಗಳನ್ನು ಎಂದೂ ಹೇಳಲಿಲ್ಲ. ಆದರೆ ವಿದ್ಯೆ, ಗುಣ, ನಡೆವಳಿಕೆಗಳಲ್ಲಿ ಶ್ರೀಮಂತಿಕೆಯನ್ನು ಮೆರೆದ ವ್ಯಕ್ತಿಗಳ ಬಗ್ಗೆ ಸಂತೋಷದಿಂದ ವಿವರಿಸುವುದರ ಮೂಲಕ, ಯಾವುದೇ ರೀತಿಯಲ್ಲಿ ಕೀಳಾಗಿ ನಡೆದುಕೊಂಡವರ ಬಗ್ಗೆ  ಅಸಮಾಧಾನ ವ್ಯಕ್ತ ಪಡಿಸಿದ್ದನ್ನು ಕೇಳುವ ಮೂಲಕ ಹಾಗೂ ಕೆಲವು ಕಷ್ಟದ ಸಂದರ್ಭಗಳನ್ನು ಅಣ್ಣ ಹೇಗೆ ಎದುರಿಸಿದರು ಎಂಬುದನ್ನು ನಾವೇ ಗಮನಿಸುವ ಮೂಲಕ ಒಳ್ಳೆಯದು ಕೆಟ್ಟದ್ದು ಎಂಬ ಬಗ್ಗೆ ನಮಗೆ ತಾನಾಗಿಯೇ ಅರಿವು ಉಂಟಾಯಿತು.

ಜಾತಿ ಮತ ಭೇದ ಅಣ್ಣನಿಗೆ ಕಿಂಚಿತ್ತೂ ಇರಲಿಲ್ಲ. ಅವೆಲ್ಲ ಕೇವಲ ಮಾನವನ ಸೃಷ್ಟಿ, ಜನಿಸಿದ ಮೇಲೆ ಪ್ರಪಂಚದಲ್ಲಿ ಎಲ್ಲರೂ ಸಮಾನರು ಎಂದು ಅವರು ತಮ್ಮ ಕಿರಿಯ ವಯಸ್ಸಿನಲ್ಲೇ ಕಂಡುಕೊಂಡಿದ್ದರು. ಅಂತೆಯೇ ಎಲ್ಲ ಬಗೆಯ ಜನರೊಡನೆಯೂ ಅಣ್ಣನ ಒಡನಾಟವಿತ್ತು.  ಅಣ್ಣನ ಈ ಭಾವನೆಗಳಿಗೆ ಅಮ್ಮನೂ ಒತ್ತು ನೀಡಿದ್ದರಿಂದ ನಮ್ಮ ಮನೆಯ ವಾತಾವರಣದಲ್ಲಿ ಜಾತಿ ಎಂಬ ಪದವನ್ನೇ ನಾವು ಕೇಳಿರಲಿಲ್ಲ. ನಾನು ಪ್ರೈಮರಿ ತರಗತಿಯಲ್ಲಿದ್ದಾಗ ಒಮ್ಮೆ ಶಾಲೆಯಿಂದ ಬಂದು, ‘ಅಣ್ಣ ನಾವು ಯಾವ ಜಾತಿ?’ ಎಂದು ಕೇಳಿದಾಗ ಅಣ್ಣನಿಗಾದ ಆಘಾತ ನನಗಿನ್ನೂ ನೆನಪಿದೆ. ಶಾಲೆಯಲ್ಲಿ ಯಾವುದೋ ದಾಖಲೆಗಾಗಿ ಕೇಳಿದ್ದರೆಂದು ತೋರುತ್ತದೆ, ಅದನ್ನು ನಾನು ಮುಗ್ಧಳಾಗಿ ಬಂದು ಕೇಳಿದ್ದೆ. ಹೀಗಾಗಿ ಜಾತಿ ಎಂಬುದೇನಿದ್ದರೂ ನಮಗೆ  ಹೊರಗಿನಿಂದ ಪರಿಚಯವಾದ ಪದ.   

ಇತರ ಜಾತಿ ಮತಗಳ, ವರ್ಗಗಳ ಅಥವಾ ಪ್ರಾಂತ್ಯಗಳ ಜನರ ಬಗ್ಗೆ ಸಾಮಾನ್ಯೀಕರಿಸಿ ಅವರು ಹಾಗೆ ಇವರು ಹೀಗೆ ಎಂದು ಹೀನಾಯವಾಗಿ ಮಾತನಾಡುವುದನ್ನು, ಯಾರದೇ ಬಗ್ಗೆ ಪೂರ್ವಗ್ರಹಗಳನ್ನಿಟ್ಟುಕೊಂಡು ಅವರನ್ನು ಕಡೆಗಾಣುವುದನ್ನು ಅಣ್ಣ ಸ್ವಲ್ಪವೂ ಸಹಿಸುತ್ತಿರಲಿಲ್ಲ. 

ವಿಚಾರವಾದದಲ್ಲಿ ಸಂಪೂರ್ಣ ವಿಶ್ವಾಸ, ಭರವಸೆಗಳನ್ನಿಟ್ಟುಕೊಂಡಿದ್ದ ಅಣ್ಣ ಯಾವಾಗಲೂ ಹೇಳುತ್ತಿದ್ದುದೆಂದರೆ,  ಕಿವಿಗೆ ಬೀಳುವ ಯಾವುದೇ ವಿಷಯವನ್ನು ತಾರ್ಕಿಕವಾಗಿ ಚಿಂತಿಸಿ ಸರಿಯೇ ತಪ್ಪೇ ಎಂಬ ಬಗ್ಗೆ ನೀವೇ ತೀರ್ಮಾನಕ್ಕೆ ಬರಬೇಕೇ ಹೊರತು ಅದನ್ನು ಕುರುಡು ಕುರುಡಾಗಿ ನಂಬಬಾರದು ಎಂದು. 

ವೈಜ್ಞಾನಿಕ ಮನೋಭಾವದಿಂದಲೇ ಸಮಾಜ ಉದ್ಧಾರ ಸಾಧ್ಯ ಎಂದು ಬಲವಾಗಿ ನಂಬಿದ್ದ ಅಣ್ಣ ಅದರ ಬೆಳೆವಣಿಗೆಗಾಗಿ ಬಹಳ ಶ್ರಮಿಸಿದರು. 

ಅಣ್ಣ ಸ್ವತಃ ನಾಸ್ತಿಕರಾಗಿದ್ದರು. ಮೂಢಾಚರಣೆ, ಕಂದಚಾರಗಳನ್ನು  ಸಹಿಸುತ್ತಿರಲಿಲ್ಲ. ಇವುಗಳಿಂದ ಮುಗ್ಧ ಜನ ಅನಾವಶ್ಯಕ ಕಷ್ಟಕ್ಕೊಳಗಾಗುತ್ತಾರೆಂದು ಬಗ್ಗೆ ಅದರ ವಿರುದ್ಧ ಪ್ರಚಾರ ಮಾಡಿದರು. ಆದರೆ ಇತರರ ಭಾವನೆಗಳಿಗೆ ನೋವು ಉಂಟು ಮಾಡಬಾರದೆಂಬ ಮನೋಭಾವದಿಂದ  ಅವರ  ತಾಯಿ ಮತ್ತು ಅಕ್ಕಂದಿರ ಭಾವನೆಗಳನ್ನು ಗೌರವಿಸಿ ಕೆಲವು ಪೂಜೆಗಳನ್ನು ಅಣ್ಣ ಪಾಂಗತವಾಗಿ ಮಾಡಿದ್ದುಂಟು. ಅಕ್ಕಂದಿರು ಬದುಕಿರುವವರೆಗೂ ಅವರ ಸಮಾಧಾನಕ್ಕಾಗಿ ತಂದೆ ತಾಯಿಯರ ಶ್ರಾದ್ಧವನ್ನೂ ಮಾಡುತ್ತಿದ್ದರು.  ತಮ್ಮ ನಂಬಿಕೆಯನ್ನು ಅವರು ಇತರರ ಮೇಲೆ ಹೇರಲಿಲ್ಲ. ನಂಬಿಕೆಯುಳ್ಳವರನ್ನು ಅನಾದರ ಮಾಡಲಿಲ್ಲ. 

ಮಾರ್ಕ್ಸ್ ವಾದ ಹಾಗೂ ಎಡಪಂಥೀಯ ಕಲ್ಪನೆಗಳತ್ತ ಒಲವಿದ್ದ ಅಣ್ಣ ಸಮಾಜದಲ್ಲಿ  ಯಾವುದೇ ರೀತಿಯ ಮೇಲುಕೀಳುಗಳಿರುವುದು ಜೀವನದ ಅನ್ಯಾಯ ಎಂದು ನಂಬಿದ್ದರು. ಹಣ ಎಂಬುದು ಜೀವನದಲ್ಲಿ ‘ಅವಶ್ಯಕ ಪಿಡುಗು’ ಎಂಬುದು ಅವರ ಸ್ಪಷ್ಟ ನಿಲುವು. ದೊಡ್ಡಸ್ತಿಕೆ, ಶ್ರೀಮಂತಿಕೆಯ ಪ್ರದರ್ಶನ ಅಣ್ಣನಿಗೆ ಬಹಳ ಕಸಿವಿಸಿ ಉಂಟು ಮಾಡುತ್ತಿತ್ತು. ಅಂತೆಯೇ ತಾವೂ ನಿರಾಡಂಬರ ಜೀವನ ನಡೆಸಿದರು. 

ಇತ್ತೀಚೆಗೆ ಬ್ಯಾಂಕ್ ವ್ಯವಹಾರವನ್ನು ಅಮ್ಮನೇ ನಡೆಸುತ್ತಿದ್ದರು. ಈಗ ಎರಡು ಮೂರು ತಿಂಗಳ ಹಿಂದೆ ಪಾಸ್ ಬುಕ್ ಅಣ್ಣನ ಕೈಗೆ ಸಿಕ್ಕು ಅದನ್ನು ನೋಡುತ್ತಿದ್ದಂತೆ ಅಮ್ಮನನ್ನು ಕುರಿತು ‘ಶಾಂತ, ಇದೇನು ಇಷ್ಟೊಂದು ದುಡ್ಡು ಸೇರಿಕೊಂಡುಬಿಟ್ಟಿದೆ! ಇದರಲ್ಲಿ ಮೂರನೆ ಒಂದು ಭಾಗ charityಗೆ ಕೊಟ್ಟುಬಿಡೋಣ’ ಎಂದು ಉದ್ಗರಿಸಿದ್ದು ನೋಡಿದರೆ ಅವರಿಗೆ ಆ ವಯಸ್ಸಿನಲ್ಲಿಯೂ ಇದ್ದ presence of mind, ಅಸಹಾಯಕರ ಬಗ್ಗೆ ಮೊದಲಿನಿಂದಲೂ ಇದ್ದ ಕಾಳಜಿ ಎಷ್ಟೆಂದು ತಿಳಿಯುತ್ತದೆ.  

ಹತ್ತು ವರ್ಷ ವಯಸ್ಸಿನಲ್ಲೇ ಬಾಲ ವಿಧವೆಯಾದ ತಮ್ಮ ದೊಡ್ಡಮ್ಮ ತಮ್ಮದೇ ಆದ ವೈಯಕ್ತಿಕ ಜೀವನವೊಂದಿದೆ ಎಂಬುದನ್ನೂ ಅರಿಯದೆ ಕುಟುಂಬದ  ಎಲ್ಲರ ಸೇವೆಗಾಗಿಯೇ ತಮ್ಮ ಜೀವ ತೇಯ್ದು, ಮತ್ತೊಬ್ಬರ ಹಂಗಿನಲ್ಲೇ ಜೀವನ ನಡೆಸಿದ್ದನ್ನು ಕಂಡು ಕರುಳು ಮಿಡಿದ ಅಣ್ಣ, ಯಾವುದೇ ಪರಿಸ್ಥಿತಿಯಲ್ಲಿ ಹೆಣ್ಣು ಮಗಳೊಬ್ಬಳು ಹೀಗೆ ವಂಚಿತಳಾಗಬಾರದೆಂದೂ, ಅವಳು ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕೆಂದೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಒತ್ತು ನೀಡಿದರು. ಐದಾರು ದಶಕಳಷ್ಟು ಹಿಂದಿನಿಂದಲೂ ಹಲವಾರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿ ಅವರು ಜೀವನದಲ್ಲಿ ಮುಂದೆ ಬರುವಲ್ಲಿ ನೆರವಾದರು. ಹೆಣ್ಣುಮಕ್ಕಳನ್ನು ಅಣ್ಣ ಬಹಳ ಗೌರವದಿಂದ ಕಾಣುತ್ತಿದ್ದರು. ಅವರೊಡನೆ ಮಾತನಾಡುವಾಗ, ‘ಅಮ್ಮ’ ಎಂದು ಸೇರಿಸಿಯೇ ಸಂಬೋಧಿಸುತ್ತಿದ್ದುದು.  

ಅಮ್ಮ ಅಣ್ಣನಿಗೆ ನಾವು ಮೂವರು ಹೆಣ್ಣು ಮಕ್ಕಳು, ಒಬ್ಬನೇ ಗಂಡು ಮಗ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಗಂಡು ಮಕ್ಕಳಿಗೇ ಹೆಚ್ಚು ಪ್ರಾಶಸ್ತ್ಯವಷ್ಟೆ? ಆದರೂ ಒಮ್ಮೆಯಾದರೂ ಅಮ್ಮ ಅಣ್ಣನಲ್ಲಿ ಈ ಭಾವನೆಯನ್ನು ನಾವು ಕಾಣಲಿಲ್ಲ. ನಾಲ್ಕೂ ಮಕ್ಕಳನ್ನು ಸರಿ ಸಮಾನರಾಗಿ ಕಂಡರು.

ಜೀವನದಲ್ಲಿ ಏರುಪೇರುಗಳಿದ್ದೇ ಇರುತ್ತವೆ. ಕಷ್ಟ ಏನೇ ಬರಲಿ ಬಂದದ್ದನ್ನು  ಬಂದಂತೆ ಎದುರಿಸಬೇಕು ಎಂಬುದು ಅಣ್ಣನ ನಿಲುವು.  ತಾವು ಅದನ್ನು ಅಕ್ಷರಶಃ ಪಾಲಿಸಿದರು ಕೂಡ. ಎಂತಹ ಕಷ್ಟ ಪರಿಸ್ಥಿತಿ ಎದುರಾದರೂ ಆಶಾಭಾವ ಕಳೆದುಕೊಳ್ಳದಿರುವ ಗುಣ ಅಣ್ಣನ ನಾಲ್ಕು ಮಕ್ಕಳಿಗೂ ಬಂದಿರುವುದು ಅಣ್ಣನಿಂದಲೇ ಎಂಬ ಬಗ್ಗೆ ಎರಡು ಮಾತಿಲ್ಲ. ಎಂದೂ ಯಾವುದೇ ವಿಷಯಕ್ಕೆ ಅಣ್ಣ ಗೊಣಗಿದ್ದಿಲ್ಲ.

ನನ್ನ ೬೭ ವರ್ಷದ ಒಡನಾಟದಲ್ಲಿ ಅಣ್ಣ ಒಂದೇ ದಿನವಾದರೂ ಅಮ್ಮನ ಮೇಲೆ, ಮಕ್ಕಳ ಮೇಲೆ ರೇಗಿದ್ದು, ಗೊಣಗಿದ್ದು, ಸಹನೆ ಕಳೆದುಕೊಂಡಿದ್ದು ನಾನು ನೋಡಿಲ್ಲ. ನಾವು ಮಾಡಿದ್ದರಲ್ಲಿ ಏನಾದರೂ ಸರಿಯಿಲ್ಲವೆನಿಸಿದರೆ ಅದರ ಬಗ್ಗೆ ಚರ್ಚಿಸಿ ತೀರ್ಮಾನ ನಮಗೇ ಬಿಡುತ್ತಿದ್ದರೇ ಹೊರತು ತಮ್ಮ ಅಭಿಪ್ರಾಯವನ್ನು ಹೇರುತ್ತಿರಲಿಲ್ಲ. ತಮ್ಮೊಡನೆ ಭಿನ್ನಾಭಿಪ್ರಾಯ ಇರುವಂತಹವರನ್ನೂ ಸಹ ಅಣ್ಣ ಕಡೆಗಾಣಲಿಲ್ಲ. ಅವರಲ್ಲಿರುವ ಒಳಿತನ್ನು ಕಂಡರು.

ಅಣ್ಣ ಮೊದಲಿನಿಂದಲೂ ಬಹಳ ಶಿಸ್ತಿನ, ಅಚ್ಚುಕಟ್ಟಿನ, ಸುವ್ಯವಸ್ಥಿತ ವ್ಯಕ್ತಿ.   ಅವರ ಕೈಬರಹ ಅವರ ಚಿಂತನೆಯಂತೆಯೇ  ಬಲು ಸ್ಪಷ್ಟ. ಪುಸ್ತಕ ಬರೆಯುವಾಗಲೂ ಅತಿಯಾಗಿ ಗೀಚಿ ಹಾಕಿದ್ದಿಲ್ಲ. ಅಮ್ಮನ ಕೈ ಬರಹ ಬಹಳ ಸುಂದರವಾಗಿರುವುದರಿಂದ ಮುದ್ರಣಾಲಯಕ್ಕೆ ಕಳುಹಿಸುವುದಕ್ಕಾಗಿ ಅಮ್ಮ ಅದರ ಉತ್ತಮ ಪ್ರತಿ ಬರೆದುಕೊಟ್ಟಿದ್ದುಂಟು. ತಮ್ಮ ಸಂಗ್ರಹದ ‘ಸೈಂಟಿಫ಼ಿಕ್ ಅಮೆರಿಕನ್’ ಮುಂತಾದ ನಿಯತಕಾಲಿಗಳನ್ನು ಬೈಂಡ್ ಮಾಡಿಸಿ ಜೋಡಿಸಿಟ್ಟಿರುತ್ತಿದ್ದರು. ಇವುಗಳಲ್ಲಿಯಾಗಲೀ, ತಮ್ಮ ಸಂಗ್ರಹದ ಇತರ ಪುಸ್ತಕಗಳಲ್ಲಾಲೀ, ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಲೇಖನ ಯಾವ ಸಂಚಿಕೆಯಲ್ಲಿದೆ, ಯಾವ ಪುಟದಲ್ಲಿದೆ  ಎಂಬುದನ್ನು ತಮ್ಮ ನೆನಪಿನ ಶಕ್ತಿಯೆಂದಲೇ ತೆಗೆದು ತೋರಿಸುತ್ತಿದ್ದರು. ಈ ಅಚ್ಚುಕಟ್ಟುತನ ಎಲ್ಲೆಡೆಯೂ ಎದ್ದು ಕಾಣಿಸುತ್ತಿತ್ತು. ಸುಮಾರು ತಮ್ಮ ೮೫ ವರ್ಷ ವಯಸ್ಸಿನವರೆಗೂ ತಮ್ಮ ಬಟ್ಟೆಗಳನ್ನು ತಾವೇ ಒಗೆದು ಅಚ್ಚುಕಟ್ಟಾಗಿ ಒಣಹಾಕಿ, ಮಡಿಚಿಟ್ಟುಕೊಳ್ಳುತ್ತಿದ್ದರು.

ನಿಸ್ವಾರ್ಥ ಸೇವೆ ಸಲ್ಲಿಸಿದ ಅಣ್ಣ ಬಿರುದು ಪ್ರಶಸ್ತಿಗಳಿಗಾಗಿ ಎಂದೂ ಹಂಬಲಿಸಲಿಲ್ಲ. ಅವು ತಮ್ಮನ್ನು ಅರಸಿಕೊಂಡು ಬಂದಾಗ ಬೀಗಲಿಲ್ಲ. ಅಣ್ಣನ ಜೊತೆ ಗಹನವಾಗಿ ಚರ್ಚಿಸಲು, ಹಲವಾರು ವಿಷಯಗಳನ್ನು ಕುರಿತಂತೆ ಸಲಹೆ ಕೇಳಲು ಅನೇಕ ಜನ ಬರುತ್ತಿದ್ದರು. ಯಾರೇ ಬರಲಿ ಅವರೊಡನೆ ಕುಳಿತು ಅಣ್ಣ ಸಹನೆಯಿಂದ ಚರ್ಚಿಸುತ್ತಿದ್ದರು. ಅನೇಕರಿಗೆ ಅನೇಕ ರೀತಿಯಲ್ಲಿ ನೆರವಾಗಿದ್ದರು.  ಅಣ್ಣನ ಒಡನಾಟದಿಂದ ತಮ್ಮ ಜೀವನ ಹೇಗೆ ಅರ್ಥಪೂರ್ಣವಾಯಿತೆಂದು ಹೇಳುವವರು ಎಷ್ಟು ಮಂದಿಯೋ! ಯಾವ ರೀತಿಯ ಪ್ರತಿಫಲಾಪೇಕ್ಷೆಯೂ ಅಣ್ಣನಿಗಿರಲಿಲ್ಲ.

ಪ್ರಗತಿಪರ ಚಿಂತನೆ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿ, ಮಹಿಳಾಪರ ಚಿಂತನೆ, ದೂರ ದೃಷ್ಟಿ,  ವ್ಯಾಪಕ ಓದು, ಸ್ಪಷ್ಟ ಚಿಂತನೆ, ವೈಚಾರಿಕತೆ, ವಿಶ್ಲೇಷಣಾ ಚಾತುರ್ಯ, ವಿವಿಧ ವಿಷಯಗಳಲ್ಲಿ ಆಸಕ್ತಿ, ಸಂಸ್ಥಾಪನ ಶಕ್ತಿ, ವೈಜ್ಞಾನಿಕ ದೃಷ್ಟಿಕೋನ.... ಇತ್ಯಾದಿ  ಗುಣಗಳು  ಏಕೈಕ ವ್ಯಕ್ತಿಯಲ್ಲಿ ಇರಲು ಸಾಧ್ಯವೇ?  ಇವೆಲ್ಲ ಅಣ್ಣನಲ್ಲಿ ಕಂಡುಬಂದ ಗುಣಗಳೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. 

ತಮ್ಮ ಮೌಲ್ಯಗಳಲ್ಲಿ ಅಣ್ಣನಿಗೆ ವಿಶ್ವಾಸವಿತ್ತು. ತಮ್ಮ ನಂಬಿಕೆಗಳಲ್ಲಿ ದೃಢತೆ ಇತ್ತು. ತಮ್ಮ ಸಾವಿನ ನಂತರ ಯಾವ ವಿಧಿಗಳನ್ನೂ ಮಾಡಬಾರದೆಂದು ಬರೆದಿಟ್ಟಿದ್ದರು. ಅವರ ಇಚ್ಛೆ ನೆರವೇರಿತು. ಅಣ್ಣ ನುಡಿದಂತೆ ನಡೆದರು, ನಡೆದಂತೆ ನುಡಿದರು. ಅವರ ಗರಡಿಯಲ್ಲಿ ಬೆಳೆದರೂ ನಾವು ಕಲಿಯಬೇಕಾದ್ದು ಇನ್ನೂ ಬೇಕಾದಷ್ಟಿದೆ.
                                                                                                                                                                                -  ಬೃಂದಾ. ಎನ್. ರಾವ್


ಕವನ - ದೇಹ ಬಯಸಿದವರು


ರಕ್ತಸಿಕ್ತ ಹೃದಯವಿದು
ಹರಿವುದು ನಿರಂತರ.
ಜೊಲೊ ಎನುವ
ಮಳೆಯ ನಡುವೆ
ಕೋಟಿ ಜೀವ
ಒಲವಧಾರೆ.
ಖಂಡವಿದೆಕೊ ಮಾಂಸವಿದೆಕೊ
ನಿಲ್ಲದು ನಿನ್ನ
ವಿಷದ ಪಂಜು
ಮನವ ತುಂಬಿ
ತನುವ ಬಳಸಿತು
ದೇಹ ಬಯಸಿದವರಲ್ಲವೆ
ಪ್ರಾಣಿ‌ಯ ಹಸಿವು
ಪ್ರಾಣ ತಿಂದಿತು
ದೇಹ ನುಂಗಿನೀರ ಕುಡಿಯಿತು
ಕೊಂದರೇನು? 

ಹರಿಯಲಿಲ್ಲವೆ ನೀನು?
ಜಗದ ಹೃದಯ ವೀಣೆ
ಮಿಡಿದವಳಲ್ಲವೆ ?.
ಅಳುವ ಕಂದಮ್ಮಗಳ
ಪಾಲಿಗೆ ಮಡಿಲಾಗಿ
ಕಾಡು ಅಲೆವ
ಜೀವಗಳಿಗೆ ಕಣ್ಣಾಗಿ
ಬದುಕ ಹನಿಸಿದವಳೆ
ಘಾಸಿಗೊಳಿಸಿದರಲ್ಲೇ
ಅರ್ಧ ಚಲನೆಯಲ್ಲೇ
ಮಂಕು ಕವಿದ
ಬುದ್ದಿ ಮನಸು
ಕಣ್ಣ ನೀರ ಹನಿಸಿತು
ನಿಲ್ಲದ ಹನಿ
ಗೌರಿ ಗೋರಾ ಎಂದಿತು.
ನಾನು ನೀನು ನಾನು
ಜಗದ ದನಿಯೆ ಆಯಿತು.
ಕಾಯಲಿಲ್ಲ ಭ್ರಮರೆಯ,
ಅವನು, ಇವನು
ಅವಳು ಇವಳು
ಎಲ್ಲ ಭ್ರಮೆ.
ತಾಯಿ ತಂಗಿಗೆ
ಗೆಳೆಯ ಸಖಳಿಗೆ
ದೈವ ಕಟುಕರಿಗೆ
ಹೋಯಿತಯ್ಯೋ
ನೊಂದವರು ಹೆತ್ತಕೂಸು,
ಆಡಿ ಪಾಡಿ ಬೆಳೆದಕೂಸು
ಮಣ್ಣುಪಾಲೆ ಆಯಿತೊ
ಹಾಲುಹರಿಸಿ ಇಂದಿಗೆ ಸುಮ್ಮನಾಯಿತೊ


ಜಗದ ಜಾಣೆ ಜಾಣರೆ
ನಿಮಗಿದು ಕರೆ
ಜ್ವಾಲೆಯಾಗಿ
ಜರಡಿಯಾಡಿ
ಗರಡಿಹಾಕಿ
ಪಟ್ಟುಬಿಡದೆ
ಎದೆಎದೆಗಳ
ನಡುಗಿಸಿ
ಕೋಮು,ಜಾತಿ,
ಬಂಡವಾಳಶಾಹಿ ಹಿಡಿದು
ಬಡಿದು ಸುಡುವ ಶಕ್ತಿಯಾಗಿ,
ಶ್ರೀಯಲ್ಲ, ಸ್ತ್ರೀಯಾಗಿ ಮನದ ಕಿಚ್ಚು
ಕೆಚ್ಚು ನಂದದಿರಲಿ
ಗುಪ್ತಗಾಮಿನಿಯಾಗಲಿ.
ಹೋರಾಟದ ಹಾದಿಗೆ
ಜೀವಸೆಲೆಯಾಗಲಿ.

- ಸಂಧ್ಯಾ  ಪಿ ಎಸ್ 

ಅನುವಾದಿತ ಕೃತಿ - 1 - ಲೆನಿನ್ ಮತ್ತು ರಷ್ಯಾ ಕ್ರಾಂತಿ ಕುರಿತ ಕಥೆಗಳು




 ಕ್ರಾಂತಿಯನ್ನು ಮುನ್ನಡೆಸುತ್ತಿರುವ ಲೆನಿನ್ 


ಜಾರ್ ಎಂದರೆ ಯಾರು

ಇದು ಬಹಳ ಹಿಂದಿನ ಕಥೆ. ಆ ದಿನಗಳಲ್ಲಿ ರಷ್ಯಾದ ಜೀವನ ಬಹಳ ವಿಭಿನ್ನವಾಗಿತ್ತು. ಶ್ರೀಮಂತರಾಗಿದ್ದವರ ಬಳಿ ಅವರಿಷ್ಟಪಟ್ಟಿದ್ದೆಲ್ಲವೂ ಇತ್ತು. ಆದರೆ ರಷ್ಯಾದ ಕಾರ್ಮಿಕರು ಮತ್ತು ರೈತರು ಬಡತನದಲ್ಲಿ ಬದುಕುತ್ತಿದ್ದರು. ಕೆಲವು ಶ್ರೀಮಂತರು ದೊಡ್ಡ ದೊಡ್ಡ ಎಸ್ಟೇಟ್‍ಗಳನ್ನು ಹೊಂದಿದ್ದರು, ಅವರು ಜಮೀನ್ದಾರರು ಅಥವಾ ಭೂಮಾಲೀಕರಾಗಿದ್ದರು. ಇತರರು ಗಿರಣಿಗಳನ್ನು ಮತ್ತು ಕೈಗಾರಿಕೆಗಳನ್ನು ಹೊಂದಿದ್ದರು. ಅವರನ್ನು ಬಂಡವಾಳಶಾಹಿಗಳೆಂದು ಕರೆಯುತ್ತಿದ್ದರು.
ಕಾರ್ಮಿಕರಿಗೆ ದುಡಿಯಲು ತಮ್ಮ ಎರಡು ಕೈಗಳ ವಿನಹ ಬೇರೇನೂ ಇರಲಿಲ್ಲ. ಅವರಿಗೆ ಮತ್ತು ಅವರ ಮಕ್ಕಳಿಗೆ ಆಹಾರ, ಬಟ್ಟೆ ಮತ್ತು ಇರಲು ಒಂದು ಜಾಗದ ಅವಶ್ಯಕತೆಯಿತ್ತು. ಆದ್ದರಿಂದಲೆ ಅವರು ಫ್ಯಾಕ್ಟರಿ ಮತ್ತು ಗಣಿ ಧಣಿಗಳಿಗೆ ತಮ್ಮ ಶ್ರಮವನ್ನು ಮಾರಿಕೊಳ್ಳುತ್ತಿದ್ದರು. ಅವರು ಆಳವಾದ ಗಣಿಗಳಲ್ಲಿ ಕಲ್ಲಿದ್ದಲು ಮತ್ತು ಅದಿರನ್ನು ತೆಗೆಯುತ್ತಿದ್ದರು. ಅವರು ಕಬ್ಬಿಣ ಮತ್ತು ಉಕ್ಕನ್ನು ಸಂಸ್ಕರಿಸಿ ಯಂತ್ರಗಳನ್ನು ತಯಾರಿಸುತ್ತಿದ್ದರು. ಇದರಿಂದ ಫ್ಯಾಕ್ಟರಿ ಮತ್ತು ಗಿರಣಿಯ ಮಾಲೀಕರು ಇನ್ನಷ್ಟು ಶ್ರೀಮಂತರಾಗುತ್ತಿದ್ದರು. ಕಾರ್ಮಿಕರ ದುಡಿಮೆಗೆ ಎಷ್ಟು ಕಡಿಮೆ ಸಂಬಳ ಕೊಡುತ್ತಿದ್ದರೆಂದರೆ ಅದು ಅವರ ಊಟಕ್ಕೂ ಸಹ ಸಾಕಾಗುತ್ತಿರಲಿಲ್ಲ. 
ರೈತರು ಚಿಕ್ಕ ಚಿಕ್ಕ ಜಮೀನನ್ನು ಹೊಂದಿದ್ದರು. ಆದ್ದರಿಂದ ಅವರ ಬೆಳೆದ ಫಸಲು ಸಹ ಸಣ್ಣ ಪ್ರಮಾಣದಲ್ಲಿರುತ್ತಿತ್ತು. ಬಹಳಷ್ಟು ಬಾರಿ ಅವರಿಗೆ ತಮ್ಮ ಕುಟುಂಬಗಳನ್ನು ಪೋಷಿಸುವಷ್ಟು ಫಸಲನ್ನೂ ಸಹ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಬಹಳಷ್ಟು ರೈತರು ಭೂಮಾಲೀಕರ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲಿ ಭೂಮಾಲೀಕರ ಹೊಲಗಳಲ್ಲಿ ಉತ್ತು ಬಿತ್ತು ಫಸಲನ್ನು ತೆಗೆಯುತ್ತಿದ್ದರು. ಬಹಳಷ್ಟು ರೈತರು ನಗರಗಳಿಗೆ ತೆರಳಿ, ಅಲ್ಲಿ ಕಾರ್ಖಾನೆಗಳಲ್ಲಿ ಮತ್ತು ಗಿರಣಿಗಳಲ್ಲಿ ಕೆಲಸಗಳನ್ನು ಹುಡುಕುತ್ತಿದ್ದರು.
ರಷ್ಯಾದ ಜಾರ್ ದೊರೆ ಇವರೆಲ್ಲರ ಪೈಕಿ ಅತ್ಯಂತ ಶ್ರೀಮಂತ ಭೂಮಾಲೀಕನಾಗಿದ್ದ. ಅವನು ರಾಜ್ಯದ ಮುಖ್ಯಸ್ಥನಾಗಿದ್ದ. ಎಲ್ಲಾ ಭೂಮಾಲೀಕರು ಮತ್ತು ಕೈಗಾರಿಕೆಯ ಮಾಲೀಕರು ಅವನ ಪ್ರಜೆಗಳಾಗಿದ್ದರು. ಜಾರ್ ದೇಶವನ್ನು ಆಳುತ್ತಿದ್ದ ಮತ್ತು ಅದಕ್ಕಾಗಿ ಕಾನೂನುಗಳನ್ನು ರಚಿಸುತ್ತಿದ್ದ. ಈ ಕಾನೂನುಗಳ ಪ್ರಕಾರ ಕಾರ್ಮಿಕರು ಮತ್ತು ರೈತರು ಜಾರ್, ಭೂಮಾಲೀಕರಿಗೆ ಮತ್ತು ಬಂಡವಾಳಶಾಹಿಗಳಿಗೆ ವಿಧೇಯರಾಗಬೇಕಿತ್ತು. ಪೊಲೀಸ್, ಸೈನ್ಯ ಮತ್ತು ಬಹಳಷ್ಟು ಅಧಿಕಾರಿಗಳು ಜಾರ್ಮತ್ತು ಶ್ರೀಮಂತರ ಆಳ್ವಿಕೆಯನ್ನು ರಕ್ಷಿಸುತ್ತಿದ್ದರು. ಜಾರ್ನು ಶ್ರೀಮಂತರ ರಕ್ಷಕನು ಮತ್ತು ಕಾರ್ಮಿಕರ-ರೈತರು ದಮನಕನು ಹಾಗೂ ಕೊಲೆಗಾರನೂ ಆಗಿದ್ದನು.
ನಿಜವಾದ ಅರ್ಥದಲ್ಲಿ ಜಾರ್ ದೊರೆಯು ಹೀಗಿದ್ದನು.

ಜಾರ್ ಆಳ್ವಿಕೆಯಲ್ಲಿ ರೈತರು ಬದುಕು ಹೇಗೆ
ಒಂದು ಹಳ್ಳಿಯಲ್ಲಿ ಇವಾನ್ ಎಂಬ ರೈತನು, ಅವನ ಹೆಂಡತಿ ಮರಿಯಾ ಮತ್ತು ಅವರ ಮಗ ಮಿತ್ಯಾ ವಾಸಿಸುತ್ತಿದ್ದರು. ಇವಾನ್ ಬಳಿ ಒಂದು ತುಂಡು ಜಮೀನಿತ್ತು. ಅದನ್ನು ಅವನು ಮರದ ನೇಗಿಲಿನಿಂದ ಉಳುತ್ತಿದ್ದನು. ಒಂದು ಬಡಕಲು ಕುದುರೆಯು ಆ ನೇಗಿಲನ್ನು ಎಳೆಯುತ್ತಿತ್ತು. ಅವನು ಬೆಳೆಯುತ್ತಿದ್ದ ಬೆಳೆ ಮುಂದಿನ ಫಸಲಿನ ಕಾಲದ ವರೆಗೂ ಸಾಕಾಗುತ್ತಲೇ ಇರಲಿಲ್ಲ.
ಒಂದು ದಿನ ಹಳ್ಳಿಯ ಪೊಲೀಸನು ಇವಾನ್ ಮನೆಗೆ ಬಂದು ಕೇಳಿದನು, “ನೀನು ಜಾರ್ನಿಗೆ ಕೊಡಬೇಕಾದ ತೆರಿಗೆ ಹಣವೆಲ್ಲಿ?”
ಇವಾನ್ ಬಳಿ ಹಣವಿಲ್ಲದಿದ್ದರಿಂದ ಅವನು ಪೊಲೀಸನಿಗೆ ಸ್ವಲ್ಪ ಕಾಲಾವಕಾಶ ಕೊಡಲು ಕೇಳಿದನು.
“ನೀನೀಗ ಕೊಡದೇ ಹೋದರೆ ನಾವು ನಿನ್ನ ಹಸುವನ್ನು ಮಾರಿ ತೆರಿಗೆಯ ಹಣವನ್ನು ತೆಗೆದುಕೊಳ್ಳುತ್ತೇವೆ” ಪೊಲೀಸನು ಕಿರುಚಿದನು.
“ದಯವಿಟ್ಟು, ನಮ್ಮ ಹಸುವನ್ನು ತೆಗೆದುಕೊಂಡು ಹೋ|ಗಬೇಡಿ. ನೀವು ಆ ರೀತಿ ಮಾಡಿದರೆ ನಮ್ಮ ಹುಡುಗನಿಗೆ ಏನೂ ಆಹಾರವಿರುವುದಿಲ್ಲ” ಇವಾನ್ ಬೇಡಿಕೊಂಡನು.
“ನೀನಾಗಿಯೇ ನೀನು ಕೊಟ್ಟರೆ ಸರಿ, ಇಲ್ಲದಿದ್ದರೆ ನಾವು ಬಲವಂತವಾಗಿ ಅದನ್ನು ಎಳೆದೊಯ್ಯುತ್ತೇವೆ ಮತ್ತು ನಿನ್ನನ್ನು ಸಹ ಜೈಲಿಗೆ ಹಾಕುತ್ತೇವೆ” ಪೊಲೀಸನು ಉತ್ತರಿಸಿ ಹಸುವನ್ನು ಹಿಡಿದುಕೊಂಡು ಬರಲು ಹೋದನು.
ಮರಿಯಾ ಅಳಲಾರಂಭಿಸಿದಳು. ಅವಳ ಮಗನಿಗೆ ಹಾಲು ಸಿಗುವುದಿಲ್ಲವೆಂದು ಅರ್ಥವಾಯಿತು. ಮಿತ್ಯಾನಿಗೆ ಭಯವಾಯಿತು. ಪೊಲೀಸನು ಹಸುವನ್ನು ಎಳೆದುಕೊಂಡು ಹೋಗುವಾಗ, ಅವನು ತಾಯಿಯ ಹಿಂದೆ ಬಚ್ಚಿಟ್ಟುಕೊಂಡನು. ತೆರಿಗೆ ಹಣವನ್ನು ಕೊಡಲಾಗದ ಇತರೆ ರೈತ ಕುಟುಂಬಗಳೂ ಸಹ ತೆರಿಗೆ ಸಂಗ್ರಹಕಾರನಿಗೆ ಕುರಿ ಅಥವಾ ಕೋಳಿಗಳನ್ನು ಕೊಡಬೇಕಾಯಿತು.
ಮಿತ್ಯಾ ಸ್ವಲ್ಪ ದೊಡ್ಡವನಾಗುತ್ತಿದ್ದಂತೆಯೇ ತಂದೆ ಹೇಳಿದನು. “ನಾನು ನಿನ್ನನ್ನು ನೋಡಿಕೊಳ್ಳಲಾರೆ. ನೀನೊಂದು ಕೆಲಸವನ್ನು ಹುಡುಕಿಕೊಳ್ಳಬೇಕು.”
ಮಿತ್ಯಾ ಭೂಮಾಲೀಕನೊಬ್ಬನ ಕುರಿ ಕಾಯುವವನಾದನು. ಅವನಿಗೆ ಶಾಲೆಗೆ ಹೋಗಲು ಸಮಯವಿರಲಿಲ್ಲ. ಆದ್ದರಿಂದ ಅವನಿಗೆ ಓದಲು, ಬರೆಯಲು ಬರುತ್ತಿರಲಿಲ್ಲ. ಅಂದಿನ ದಿನಗಳಲ್ಲಿ ಬಹುತೇಕ ರೈತರ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ., ಏಕೆಂದರೆ ಅವರು ಬಹಳ ಚಿಕ್ಕ ವಯಸ್ಸಿನಲ್ಲಿಯೇ ದುಡಿಯಲಾರಂಭಿಸುತ್ತಿದ್ದರು ಮತ್ತು ಹಳ್ಳಿಯಲ್ಲಿ ಶಾಲೆಗಳಿದ್ದುದು ಬಹಳ ಕಡಿಮೆ.

ಭೂಮಾಲೀಕರು ಬದುಕು ಹೇಗೆ
ಇವಾನ್ ಮತ್ತು ಅವನ ಕುಟುಂಬ ವಾಸಿಸುತ್ತಿದ್ದ ಹಳ್ಳಿಗೆ ಹತ್ತಿರವಾಗಿ ಒಂದು ದೊಡ್ಡ ಎಸ್ಟೇಟ್ ಇತ್ತು. ಅಲ್ಲಿ ಒಂದು ದೊಡ್ಡ ಬಿಳಿ ಬಂಗಲೆಯಿತ್ತು. ಸುತ್ತಲೂ ಎತ್ತರದ ಕಲ್ಲುಗಳ ಬೇಲಿ ಇತ್ತು, ಇದರಿಂದಾಗಿ ರೈತರಿಗೆ ಒಳಗಡೆ ಏನೂ ಕಾಣಿಸುತ್ತಿರಲಿಲ್ಲ. ಪ್ರತಿವರ್ಷ ಭೂಮಾಲೀಕ ಮತ್ತು ಅವನ ಕುಟುಂಬ ಅಲ್ಲಿಗೆ ಬೇಸಿಗೆಯನ್ನು ಕಳೆಯಲು ಬರುತ್ತಿದ್ದರು. ಏಕೆಂದರೆ ಭೂಮಿ ಮತ್ತು ಬಂಗಲೆ ಅವನಿಗೆ ಸೇರಿತ್ತು. ಸುತ್ತಲೂ ಇದ್ದ ಕಾಡು, ಊರು, ಹುಲ್ಲುಗಾವಲು ಎಲ್ಲವೂ ಅವನಿಗೆ ಸೇರಿತ್ತು. ಅವನು ಆ ಎಲ್ಲಾ ಭೂಮಿಯ ಮಾಲೀಕನಾಗಿದ್ದ. ಅವನ ಹೆಂಡತಿ ಸುಂದರವಾಗಿ ಬಟ್ಟೆ ಧರಿಸಿದ್ದರೂ ಸಹ ಬಹಳ ನಿಷ್ಠುರ ವ್ಯಕ್ತಿಯಾಗಿದ್ದಳು. ಆ ಭೂಮಾಲೀಕನಿಗೆ ಮಿಷಾ ಎಂಬ ಮಗನಿದ್ದ. 
ಮಿಷಾ ಬಳಿ ಒಂದು ಮಗು ಕನಸು ಕಾಣಬಹುದಾದ ಎಲ್ಲಾ ವಸ್ತುಗಳಿದ್ದವು. ಚಳಿಗಾಲದಲ್ಲಿ ಮಿಷಾ ಪಟ್ಟಣದಲ್ಲಿದ್ದು ಶಾಲೆಗೆ ಹೋಗುತ್ತಿದ್ದ. ಕಾರ್ಮಿಕರ, ರೈತರ ಮಕ್ಕಳನ್ನು ಈ ಶಾಲೆಗೆ ಎಂದಿಗೂ ಸೇರಿಸುತ್ತಿರಲಿಲ್ಲ.
ಮಿಷಾನನ್ನು ಹಳ್ಳಿಯ ಮಕ್ಕಳೊಂದಿಗೆ ಆಟವಾಡಲು ಬಿಡುತ್ತಿರಲಿಲ್ಲ. ಏಕೆಂದರೆ ಅವರು ಅಶಿಕ್ಷಿತರಾಗಿದ್ದರು ಮತ್ತು ಸರಿಯಾದ ಬಟ್ಟೆ ಹಾಕಿಕೊಳ್ಳುತ್ತಿರಲಿಲ್ಲ. ಮಿಷಾನ ತಂದೆ ತಾಯಿಗಳು ಅವನಿಗೆ ನೀನು ಉತ್ತಮ ವಂಶದಲ್ಲಿ ಜನಿಸಿದ್ದೀಯಾ, ಆದರೆ ಆ ರೈತರ ಮಕ್ಕಳು ಸಾಮಾನ್ಯ ಜನರು, ಗಲೀಜು ಜನರು ಮತ್ತು ಚಿಂದಿಯನ್ನುಡುವವರು ಎಂದು ಹೇಳುತ್ತಿದ್ದರು. ರಷ್ಯಾದ ಭೂಮಾಲೀಕ ಮತ್ತು ಅವನ ಕುಟುಂಬಕ್ಕೆ ಜೀವನದಲ್ಲಿ ಎಲ್ಲವೂ ಸಿಗುತ್ತಿತ್ತು, ಆ ದಿನಗಳಲ್ಲಿ ಎಲ್ಲಾ ಭೂಮಾಲೀಕರಿಗೂ ಸಹ ಉತ್ತಮ ಜೀವನವಿತ್ತು.

ಕಾರ್ಮಿಕರ ಬದುಕು ಹೇಗಿತ್ತು
ಇವಾನನ ಅಣ್ಣ ವ್ಯಾಸಿಲಿ ಪಟ್ಟಣದಲ್ಲಿ ಬದುಕುತ್ತಿದ್ದ. ಅವನೊಂದು ಶಸ್ತ್ರಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಹೆಂಡತಿ ಆನ್ನಾ ಗಿರಣಿಯೊಂದರಲ್ಲಿ ನೇಕಾರಳಾಗಿದ್ದಳು. ಅವರಿಗೆ ಮಾಷಾ ಎಂಬ ಒಬ್ಬ ಮಗಳಿದ್ದಳು. ಪ್ರತಿ ಮುಂಜಾನೆ ಮಾಷಾ ಇನ್ನೂ ಮಲಗಿದ್ದಾಗಲೇ ವ್ಯಾಸಿಲಿ ಮತ್ತು ಆನ್ನಾ ದುಡಿಯಲು ಹೋಗಿಬಿಡುತ್ತಿದ್ದರು ಮತ್ತು ಕತ್ತಲಾದ ಮೇಲೆ ನಿತ್ರಾಣರಾಗಿ ಮನೆಗೆ ಬರುತ್ತಿದ್ದರು.
ಚಳಿಗಾಲ ಪೂರ್ತಿ ಮಾಷಾ ಮನೆಯೊಳಗೆಯೇ ಇರುತ್ತಿದ್ದಳು. ಏಕೆಂದರೆ ಅವಳಿಗೆ ಹೊರಗಡೆ ಹೋಗಲು ಬೆಚ್ಚನೆಯ ಬಟ್ಟೆಗಳಾಗಲೀ, ಶೂಗಳಾಗಲೀ ಇರುತ್ತಿರಲಿಲ್ಲ. ಆ ಬಾಡಿಗೆಯ ಕತ್ತಲೆ ಕೋಣೆಯೂ ಸಹ ತೇವವಾಗಿರುತ್ತಿತ್ತು. ಬೇಸಿಗೆಯ ಕಾಲದಲ್ಲಿ ಅವಳು ಹೊರಗಡೆ ಗಲೀಜಾದ ಅಂಗಳದಲ್ಲಿ ಆಡಿಕೊಳ್ಳುತ್ತಿದ್ದಳು.
ವ್ಯಾಸಿಲಿಯ ಕಾರ್ಖಾನೆಯ ಎಲ್ಲಾ ಕೆಲಸಗಾರರು ಮತ್ತು ಆನ್ನಾ ಕೆಲಸ ಮಾಡುತ್ತಿದ್ದ ಗಿರಣಿಯಲ್ಲಿದ್ದ ಎಲ್ಲಾ ಮಹಿಳಾ ಕೆಲಸಗಾರರು ಇವರಷ್ಟೇ ಬಡವರಾಗಿದ್ದರು. ದೇಶದ ಎಲ್ಲಾ ಕಾರ್ಮಿಕರ ಬದುಕು ಇವರಂತೆಯೇ ಇತ್ತು. 
ಅಂದಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಕೆಲಸವೇ ಇರಲಿಲ್ಲ. ಕೆಲಸ ಇಲ್ಲದಿರುವುದೆಂದರೆ ಹಸಿವಿನಿಂದ ಸಾಯುವುದು ಎಂದರ್ಥ. ಆದ್ದರಿಂದಲೇ ಶ್ರೀಮಂತರು ನಿರುದ್ಯೋಗಿ ಯುವಕ-ಯುವತಿಯರನ್ನು ಬಹಳ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ತೆಗೆದುಕೊಳ್ಳಬಹುದಿತ್ತು.

ಕಾರ್ಖಾನೆ ಮತ್ತು ಗಿರಣಿ ಮಾಲೀಕರು
ನಗರದ ಅತ್ಯಂತ ಸೊಗಸಾದ ರಸ್ತೆಯಲ್ಲಿ ದೊಡ್ಡದಾದ ಬಂಗಲೆಯಿತ್ತು. ಆ ಬಂಗಲೆಯ ಹಿಂದೆ ಒಂದು ದೊಡ್ಡ ತೋಟ ಮತ್ತು ಆ ಕುಟುಂಬದ ಉತ್ತಮ ತಳಿಯ ಕುದುರೆಗಳು ಮತ್ತು ದುಬಾರಿ ಕುದುರೆಗಾಡಿಗಳೂ ಇದ್ದವು. ವ್ಯಾಸಿಲಿ ಕೆಲಸ ಮಾಡುತ್ತಿದ್ದ ಶಸ್ತ್ರಗಳನ್ನು ತಯಾರಿಸುವ ಕಾರ್ಖಾನೆಯ ಮಾಲೀಕ ಈ ಮನೆಯಲ್ಲಿ ವಾಸಿಸುತ್ತಿದ್ದನು.
ಅವನಿಗೊಬ್ಬ ಮಗ ಮತ್ತು ಮಗಳಿದ್ದರು. ಭೂಮಾಲೀಕನ ಮಗನಂತೆಯೇ ಅವರಿಗೂ ಸಹ ಅವರು ಆಶಿಸುತ್ತಿದ್ದೆಲ್ಲವೂ ದೊರೆಯುತ್ತಿತ್ತು. ಒಳ್ಳೆಯ ಆಹಾರ, ಅತ್ಯಂತ ದುಬಾರಿ ಆಟದ ಸಾಮಾನುಗಳು ದೊರೆಯುತ್ತಿತ್ತು. ಅವರಿಗೆ ಆರಂಭದಲ್ಲಿ ಮನೆಯಲ್ಲಿಯೇ ಖಾಸಗಿ ಟ್ಯೂಷನ್ ನೀಡಿ, ನಂತರ ಶ್ರೀಮಂತರ ಶಾಲೆಗಳಿಗೆ ಓದಲು ಕಳುಹಿಸುತ್ತಿದ್ದರು.

ಭೂಮಾಲೀಕರು ರೈತರನ್ನು ಹೇಗೆ ಹತೋಟಿಯಲ್ಲಿಡುತ್ತಿದ್ದರು
ಒಂದು ವರ್ಷ ಅಥವಾ ಆ ವರ್ಷ ಫಸಲು ಬಹಳ ಕಡಿಮೆಯಿತ್ತು. ಹಳ್ಳಿಯ ರೈತರಿಗೆ ಧವಸ ಧಾನ್ಯವಿರಲಿಲ್ಲ. ಅವರು ಹಸಿವಿನಿಂದ ನರಳುತ್ತಿದ್ದರು. ಆದರೆ ಹತ್ತಿರದಲ್ಲಿಯೇ ಇದ್ದ ಭೂಮಾಲೀಕರ ಕಣಜಗಳು ತುಂಬಿ ತುಳುಕುತ್ತಿದ್ದವು. ರೈತರು ಧಾನ್ಯವನ್ನು ಕೇಳಲು ಭೂಮಾಲೀಕನ ಬಳಿ ಹೋದರು. ಅವನ ಮನೆ ಮುಂದೆ ಮೆಟ್ಟಿಲುಗಳ ಮೇಲೆ ತಮ್ಮ ಕ್ಯಾಪುಗಳನ್ನು ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದ್ದರು. ಆದರೆ ಭೂಮಾಲೀಕನಿಗೆ ಅವರ ಮಾತನ್ನು ಕೇಳುವಷ್ಟು ತಾಳ್ಮೆಯಿರಲಿಲ್ಲ.
“ಎಲ್ಲರೂ ಇಲ್ಲಿಂದ ತೊಲಗಿ., ನಾನು ನಿಮಗೆ ಏನನ್ನೂ ಕೊಡುವುದಿಲ್ಲ” ಎಂದು ಅರಚಿದನು.
ಇವಾನ್ ಮುಂದೆ ಬಂದು ಹೇಳಿದನು. “ನಾವು ದುಡಿದ್ದದ್ದನ್ನೇ ನಿಮ್ಮನ್ನು ಕೇಳುತ್ತಿದ್ದೇವೆ. ನೀವು ಉತ್ತಲಿಲ್ಲ, ಬಿತ್ತಲಿಲ್ಲ. ಅಥವಾ ಬೆಳೆಯನ್ನು ಬೆಳೆಯಲಿಲ್ಲ. ನಿಮಗಾಗಿ ಆ ಕೆಲಸಗಳನ್ನು ಮಾಡಿದ್ದು ನಾವೆ.”
“ಅದು ನಿಜ!” ರೈತನೊಬ್ಬ ಕೂಗಿದನು.
“ಅವನು ಸತ್ಯವನ್ನೇ ಹೇಳುತ್ತಿದ್ದಾನೆ” ಇನ್ನೊಬ್ಬ ಹೇಳಿದ.
“ಹೊ, ಹಾಗಾದರೆ ನೀವು ಬಂಡಾಯವೇಳಲು ಬಯಸುತ್ತೀರಾ? ಇದರ ಪರಿಣಾಮ ಚೆನ್ನಾಗಿರುವುದಿಲ್ಲ” ಭೂಮಾಲೀಕ ಸಿಟ್ಟಿಗೆದ್ದು ಇವಾನನ್ನು ಹಿಡಿಯುವಂತೆ ತನ್ನ ಸೇವಕರಿಗೆ ಹೇಳಿದನು. ನಂತರ ಇವಾನನ್ನು ನಗರದಲ್ಲಿ ಜೈಲಿಗೆ ಹಾಕಿದರು. ಇತರ ರೈತರನ್ನು ಚಾಟಿಯಿಂದ ಹೊಡೆದರು.

ಕಾರ್ಮಿಕರನ್ನು ಏಕೆ ಬಂಧಿಸಲಾಯಿತು
ಶಸ್ತ್ರ ತಯಾರಿಸುವ ಕಾರ್ಖಾನೆಯ ಮಾಲೀಕನು ಇನ್ನಷ್ಟು ಶ್ರೀಮಂತನಾಗ ಬಯಸಿದ. ಆದ್ದರಿಂದ ಅವನು ಕಾರ್ಮಿಕರಿಗೆ ಹೆಚ್ಚು ವೇಗವಾಗಿ ಕೆಲಸ ಮಾಡಲು ಆದೇಶಿಸಿದ. 
“ಇದಕ್ಕೆ ಒಪ್ಪಬೇಡಿ” ವ್ಯಾಸಿಲಿ ತನ್ನ ಸಂಗಾತಿಗಳಿಗೆ ಹೇಳಿದ. “ನಾವೆಲ್ಲರೂ ಒಂದೇ ಸಾರಿಗೆ ಕೆಲಸ ಮಾಡುವುದನ್ನು ನಿಲ್ಲಿಸೋಣ. ನಾವು ಆ ರೀತಿ ಮಾಡಿದರೆ ಎಲ್ಲಾ ಯಂತ್ರಗಳು ನಿಂತು ಹೋಗುತ್ತವೆ. ಆಗ ಮಾಲೀಕ ಹಣವನ್ನು ಕಳೆದುಕೊಳ್ಳುತ್ತಾನೆ. ಆಗ ಅವನು ನಮ್ಮ ಬೇಡಿಕೆಗಳನ್ನು ಈಡೇರಿಸಲೇ ಬೇಕಾಗುತ್ತದೆ.”
ಕಾರ್ಮಿಕರು ಕೆಲಸ ಮಾಡುವುದನ್ನು ನಿಲ್ಲಿಸಿದರು. ಯಂತ್ರಗಳು ಸ್ತಬ್ಧವಾದವು. ಕಾರ್ಮಿಕರು ಮುಷ್ಕರವನ್ನು ಹೂಡಿದರು. ಅವರು ಕಾರ್ಖಾನೆಯಿಂದ ಒಂದಲ್ಲ ಎರಡಲ್ಲ ಮೂರು ದಿನಗಳ ಕಾಲ ಹೊರಗುಳಿದರು.
ಕಾರ್ಖಾನೆಯ ಮಾಲೀಕ ಪೊಲೀಸರನ್ನು ಕರೆದನು. ಆ ರಾತ್ರಿ ಪೊಲೀಸರು ವ್ಯಾಸಿಲಿಯ ಕೋಣೆಗೆ ನುಗ್ಗಿ ಅವನನ್ನು ಬಂಧಿಸಿದರು. ಅವನನ್ನು ಜೈಲಿಗೆ ಕಳಿಸುತ್ತಾ ಹೇಳಿದರು, “ನೀನೆ ಈ ಮುಷ್ಕರದ ನಾಯಕ, ನೀನೇ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಮುಷ್ಕರ ಮಾಡಿ ಎಂದು ಹೇಳಿದ್ದು.”
ಮುಷ್ಕರ ಹೂಡಿದ್ದ ಇತರ ಕಾರ್ಮಿಕರನ್ನೂ ಸಹ ಜೈಲಿಗೆ ಕಳುಹಿಸಿದರು.
ಈ ರೀತಿ ಕಾರ್ಖಾನೆ ಮಾಲೀಕರು ಕಾರ್ಮಿಕರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿದ್ದರು.

ಜಾರ್ನ ವಿರುದ್ಧ ಹೋರಾಡಿದ ಧೀರರು
ಬಹಳ ವರ್ಷಗಳ ಹಿಂದೆ ಲೆನಿನ್‍ಗ್ರಾದ್ ನಗರವನ್ನು ಸೈಂಟ್ ಪೀಟರ್ಸ್‍ಬರ್ಗ್ ಎಂದು ಕರೆಯುತ್ತಿದ್ದರು. ಅಲ್ಲಿ ರಷ್ಯಾದ ಜಾರ್ನ ಅರಮನೆಯಿತ್ತು. ಆಗ ದ್ವಿತೀಯ ಅಲೆಗ್ಸಾಂಡರ್ ಜಾರ್ ದೊರೆಯಾಗಿದ್ದ. ಭೂಮಾಲೀಕರು ಮತ್ತು ಬಂಡವಾಳಶಾಹಿಗಳು ರೈತರು ಮತ್ತು ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡಲು ಅವನು ಸಹಾಯ ಮಾಡಿದ.
ಆ ಸಮಯದಲ್ಲಿಯೇ ದುಡಿಯುವ ಜನತೆಗೆ ಸಹಾಯ ಮಾಡಲು ಧೀರ ಯುವಕ-ಯುವತಿಯರ ಗುಂಪೊಂದು ಮುಂದೆ ಬಂದಿತು. ಅವರು ಜಾರ್ ದೊರೆಯ ಆಳ್ವಿಕೆಯಿಂದ ಮುಕ್ತರಾಗಲು ಇಚ್ಛಿಸಿದರು. ಅವರು ಹೇಳಿದರು, “ನಾವು ಜಾರ್ನನ್ನು ಕೊಲ್ಲಬೇಕು. ಏಕೆಂದರೆ ಅವನು ಭೂಮಾಲೀಕರನ್ನು ಮತ್ತು ಕಾರ್ಖಾನೆ ಮಾಲೀಕರನ್ನು ಬೆಂಬಲಿಸುತ್ತಾನೆ. ಅವನನ್ನು ಕೊಂದರೆ ಜನರಿಗೆ ಉತ್ತಮ ಜೀವನ ಸಿಗುತ್ತದೆ.”
ಸ್ಟೀಫನ್ ಖಾಲ್‍ಟುರಿನ್ ಎಂಬ ಕಾರ್ಮಿಕನೊಬ್ಬ ಅರಮನೆಯೊಳಗೆ ಡೈನಮೈಟ್ ಅನ್ನು ಗುಪ್ರವಾಗಿ ಸಾಗಿಸಿದ. ಅರಮನೆಯಲ್ಲಿ ಸ್ಫೋಟವಾಯಿತು, ಆದರೆ ಜಾರ್ ತಪ್ಪಿಸಿಕೊಂಡ. ನಂತರ ಸೈಂಟ್ ಪೀಟರ್ಸ್‍ಬರ್ಗ್ ರಸ್ತೆಯಲ್ಲಿ ಜಾರ್ ಕುದುರೆಗಾಡಿಯಲ್ಲಿ ಹೋಗುತ್ತಿದ್ದಾಗ, ಕೆಲವು ಧೀರರು ಬಾಂಬನ್ನು ಎಸೆದು ಜಾರ್ನನ್ನು ಸಾಯಿಸಿದರು. ಆ ಹೋರಾಟಗಾರರನ್ನೆಲ್ಲಾ ಬಂಧಿಸಿ ಗಲ್ಲಿಗೇರಿಸಲಾಯಿತು. 
ಸತ್ತ ಜಾರ್ ಮಗ ತೃತೀಯ ಅಲೆಗ್ಸಾಂಡರ್ ಸಿಂಹಾಸನವನ್ನು ಏರಿದನು. ರಷ್ಯಾಗೆ ಹೊಸ ಜಾರ್ ದೊರೆ ಬಂದನು. ಆದರೆ ಇನ್ನೇನೂ ಬದಲಾವಣೆಯಾಗಲಿಲ್ಲ. ಕಾರ್ಮಿಕರು ಮತ್ತು ರೈತರ ಪರಿಸ್ಥಿತಿ ಒಂದಿಂಚೂ ಸುಧಾರಿಸಲಿಲ್ಲ.

ಮೂಲ -  ಎ ಕ್ರಾವ್ ಚೆಂಕೊ     
ಅನುವಾದ - ಸುಧಾ ಜಿ ಮತ್ತು ಎಸ್.ಎನ್.ಸ್ವಾಮಿ 

ಅನುವಾದಿತ ಕವಿತೆ - ಸಾವಿಗೆ ನೋವಾಗುವುದಿಲ್ಲ


ಸಾವಿಗೆ ನೋವಾಗುವುದಿಲ್ಲ
ನಾವು ನಮ್ಮ ಊರಿನಿಂದ, ನಮ್ಮವರಿಂದ, ನಮ್ಮಿಂದ 
ದೂರ ಪಯಣಿಸದಿದ್ದರೆ
ಆಕಾಶದೆತ್ತರಕ್ಕೆ ಹಾರದಿದ್ದರೆ, ಸಮುದ್ರದ ಆಳಕ್ಕೆ ಇಳಿಯದಿದ್ದರೆ

ಸಾವಿಗೆ ನೋವಾಗುವುದಿಲ್ಲ
ನಾವು ಓದದಿದ್ದರೆ, 
ಪದಗಳಲ್ಲಡಗಿರುವ ಮಾಂತ್ರಿಕ ಜಗತ್ತನ್ನು ಹೊಕ್ಕು ಖುಷಿ ಪಡದಿದ್ದರೆ, 
ಆಡದಿದ್ದರೆ, ಓಡದಿದ್ದರೆ, ನಿರಾಸೆಗಳನ್ನು ಒದೆಯದಿದ್ದರೆ

ಸಾವಿಗೆ ನೋವಾಗುವುದಿಲ್ಲ
ನಮ್ಮ ನೆತ್ತರು ಬಿಸಿಯಾಗದಿದ್ದರೆ, 
ಎದೆ ಸೆಟೆಯದಿದ್ದರೆ, 
ತುಟಿ ಬಿರಿಯದಿದ್ದರೆ, 
ತೊಯ್ದ ಕಂಗಳಿಂದ ಕೆನ್ನೆಗಳಿಗೆ ಬಿಸಿ ಹನಿಯ ಸ್ಪರ್ಶವಾಗದಿದ್ದರೆ 

ಸಾವಿಗೆ ನೋವಾಗುವುದಿಲ್ಲ
ನಾವು ದುಃಖದ ಕಡಲಿನಲ್ಲಿ ತೇಲುತ್ತಿರುವಾಗ
ನಡುನೀರಿನಲ್ಲಿ ಮುಳುಗದಂತೆ ದೋಣಿ ತಂದವರನ್ನು 
ದೂರ ತಳ್ಳಿದರೆ 

ಸಾವಿಗೆ ನೋವಾಗುವುದಿಲ್ಲ
ನಾವು ನಿನ್ನೆವರೆಗೂ ನಡೆದ ದಾರಿಯಲ್ಲೇ ಸಾಗುತ್ತಿದ್ದು 
ಸುತ್ತಲ್ಲೆಲ್ಲಾ ಹುಲ್ಲು ಬೆಳೆದು ಇನ್ನಾವ ದಾರಿಯೂ ಕಾಣದಂತಾದರೆ

ಸಾವಿಗೆ ನೋವಾಗುವುದಿಲ್ಲ
ದಿನದಿನವೂ ಒಂದೇ ನೋಟ ನೋಡುತ್ತಿದ್ದರೆ,
ಒಂದೇ ಬಣ್ಣ ಉಡುತ್ತಿದ್ದರೆ, ಒಂದೇ ಹಾಡು ಕೇಳುತ್ತಿದ್ದರೆ
ಏಕತಾನದಲ್ಲೇ ಬದುಕು ಸಾಗಿಸುತ್ತಿದ್ದರೆ

ಸಾವಿಗೆ ನೋವಾಗುವುದಿಲ್ಲ
ಪರ ಊರಿನ ಕೊರೆವ ಚಳಿಗೆ ನಡುಗದಿದ್ದರೆ,
ಎಂದೂ ಕಾಣದ ಬಿಸಿಲಿಗೆ ಮೈ ಕಾಯಿಸಿಕೊಳ್ಳದಿದ್ದರೆ
ಹೊಸ ಮಳೆಗೆ ತೊಯ್ಯದಿದ್ದರೆ

ಸಾವಿಗೆ ನೋವಾಗುವುದಿಲ್ಲ
ಅದೇ ಭಾಷೆ, ಅದೇ ಜನ, ಅದೇ ಪರಿಚಿತ ಜಗತ್ತಿನಲ್ಲುಳಿದು
ಹೊಸ ಜನಕ್ಕೆ, ಹೊಸ ಜಗಕ್ಕೆ, ಹೊಸ ರಾಗಕ್ಕೆ ಹೆದರುತ್ತಿದ್ದರೆ

ಸಾವಿಗೆ ನೋವಾಗುವುದಿಲ್ಲ
ಹರೆಯದಲ್ಲಿ ನಾಳೆಗಳ ನುಂಗುವ ಇಂಗದ ದಾಹವಿಲ್ಲದಿದ್ದರೆ 
ಹೊಸತನಕ್ಕಾಗಿ ಹಂಬಲಿಸದಿದ್ದರೆ 
ಒಂದು ಕನಸಿನ ಬೆನ್ನು ಹತ್ತಿ ಹೋಗದಿದ್ದರೆ

ಸಾವಿಗೆ ನೋವಾಗುವುದಿಲ್ಲ
ನಿನ್ನೆಯ ನೆನಪುಗಳ ಹೊದಿಕೆಯ ಮಡಿಕೆಗಳ ನಡುವೆ
ಬೆಚ್ಚಗೆ ಮುದುಡಿ ಮಲಗಿಕೊಂಡರೆ, ಅರಿಯದ ನಾಳಿನ 
ಭಯದ ರೋಮಾಂಚನವರಿಯದಿದ್ದರೆ

ಸಾವಿಗೆ ನೋವಾಗುವುದಿಲ್ಲ
ನಾವು ಎಲ್ಲರಿಗೂ ಕಿವಿಗೊಡುತ್ತಾ, ತಲೆದೂಗುತ್ತಾ
ತಾನೇ ಯೋಚಿಸುವುದನ್ನು ಮರೆತರೆ
ನಾವು ನಾವಾಗಿರದಿದ್ದರೆ, 
ನಿನ್ನಿನ ಆಳಾಗಿ, ಕತ್ತಲಿನ ಪಾಲಾಗಿ
ನಾಳಿನ ಬೆಳಕು ಕಾಣದಾಗಿ
ನೀರಸ ಬದುಕಿನೊಂದಿಗೆ ವಿರಸವಿಲ್ಲದೆ
ಸಾಹಸದೊಂದಿಗೆ ಸರಸವಿಲ್ಲದೆ
ಬದುಕು ಸಾಗಿಸುತ್ತಿದ್ದರೆ

ಅದು ನಮ್ಮನ್ನು ನೋಡಿ, ನಗುತ್ತಾ ನಿಂತಿರುತ್ತದೆ
ನಾವೇ ಸೋಲುತ್ತೇವೆ, ನಡೆಯುತ್ತೇವೆ ಅದರತ್ತ.

- ಡಾ. ಸುಚೇತಾ ಪೈ 
(ಪ್ರೇರಣೆ- ಪಾಬ್ಲೋ ನೆರುಡಾ ಅವರು ಬರೆದದ್ದು ಎಂದು ಹೇಳಲಾಗಿರುವ 
You start dying slowly ಕವನದ ಅನುವಾದ )





ಕವನ - ವಿವೇಕಾನಂದರಿಗೊಂದು ಪ್ರಶ್ನೆ



ಅರಿತುಕೊಂಡಿರುವೆವೆ
ನಿಮ್ಮ ಮನದ ಮಾತನ್ನು
ನಿಜವಾಗಿ ನಾವು?
ಆಚರಿಸುತ್ತಿರುವೆವೆ
ನಿಮ್ಮ ಜಯಂತಿಯನ್ನು
ಸರಿಯಾಗಿ ನಾವು?

ಯುವಜನತೆಗೆ ಸಾರಿದಿರಿ
ಉಕ್ಕಿನ ನರಗಳು
ಕಬ್ಬಿಣದ ಸ್ನಾಯುಗಳು
ನಿಮ್ಮದಾಗಲೆಂದು
ಅದಕಾಗಿಯೇ ಹೋಗಿರಿ
ಫುಟ್ ಬಾಲ್ ಮೈದಾನಕೆಂದು.

ಬ್ರಿಟಿಷರ ದೌರ್ಜನ್ಯಗಳ
ಮೆಟ್ಟಿನಿಲ್ಲಬಹುದೆಂದು
ಪರಾಧೀನತೆಯಿಂದ
ಮುಕ್ತರಾಗಬಹುದೆಂದು
ರೂಪಿಸಿದಿರಿ ನೂರಾರು
ಕ್ರಾಂತಿಕಾರಿಗಳ ನೀವಂದು.

ರಾರಾಜಿಸುತ್ತಿವೆ ಎಲ್ಲೆಡೆ
ನಿಮ್ಮ ಫೋಟೊಗಳಿಂದು
ಬಟ್ಟೆಕಾರ್ ಗಳ ಮೇಲೆ
ಹಾಕಿಕೊಂಡು ಯುವಕರಿಂದು
ದೇಹಶಕ್ತಿ ನಶಿಸಿಕೊಂಡು
ಹೋಗುತಿಹರು ಬಾರ್ ಗೆಂದು.

ನೀವಂದು ಧಿಕ್ಕರಿಸಿದಿರಿ
ಹಸಿದ ಹೊಟ್ಟೆಗೆ ಅನ್ನ
ನೀಡದ ಧರ್ಮ ಬೇಡೆಂದು. 
ಧರ್ಮಸಂಕೇತವಾಗಿಸಿ ನಿಮ್ಮನ್ನು
ಆಟವಾಡುತಿಹರು ರಾಜಕಾರಣಿಗಳು ಇಂದು.

ಅಂದು ನೀವ್ ಸಾರಿದಿರಿ
ಎಲ್ಲ ಧರ್ಮಗಳ ತಿರುಳು
ಮಾನವತೆಯ ಉದ್ಧಾರ
ಧರ್ಮಗಳ ನಡುವೆ
ಹೊಡೆದಾಟ ಬೇಡೆಂದು
ಜನರ ಐಕ್ಯತೆಗಾಗಿ
ದುಡಿದಿರಿ ನೀವಂದು.

ಮಾಡುತ್ತ ನಿಮ್ಮದೇ
ನಾಮಸ್ಮರಣೆಯನು
ಜನಗಳ ವಿಂಗಡಿಸುತಿಹರು
ಕೋಮುಗಳಾಗಿ ಇಂದು.
ಉದ್ರೇಕಿಸುತಿಹರು
ಬಡಿದಾಡಿಕೊಳಿರೆಂದು.

ನಿಮ್ಮ ನೆನಪಿನಲಿಂದು
ಎಲ್ಲೆಲ್ಲೂ ಫೋಟೋಗಳು
ಹಾರಗಳ ಹಾಕಿ
ಭಾಷಣದಲಿ ಮುಳುಗಿ
ದೇಶದ ಜನತೆಯ
ಹಾದಿ ತಪ್ಪಿಸುತಿಹರಿಂದು.

ದೇಶದೆಲ್ಲೆಡೆ ತುಂಬಿದೆ
ನೂರಾರು ಸಮಸ್ಯೆಗಳು
ಕೋಮುಗಲಭೆ,  ಜಾತೀಯತೆ
ನಿರುದ್ಯೋಗ,  ಅನಕ್ಷರತೆ,
ದೌರ್ಜನ್ಯಬಡತನ
ಸ್ತ್ರೀಯರಿಗೆ ಅಪಮಾನ.

ಇದೇ ಏನು ನೀವು
ಕನಸು ಕಂಡ ಭಾರತ?
ಇಂತಹ ದೇಶಕೇನು
ಶ್ರಮಿಸಿದಿರಿ ಸಂತತ?
ಇದಕ್ಕಾಗಿಯೇ ಏನು
ದುಡಿದಿರಿ ಅನವರತ?

 - ಸುಧಾ ಜಿ

ಸರಣಿ ಲೇಖನ - 3 - ನಾನೇಕೆ ನಾಸ್ತಿಕ


(ಕಳೆದ ಸಂಚಿಕೆಯಿಂದ ಮುಂದುವರೆದಿದೆ)

[ಭಗತ್ ಸಿಂಗ್ ರವರ "ನಾನೇಕೆ ನಾಸ್ತಿಕ" ಪುಸ್ತಕದ ಅನುವಾದವಿದು]


[1930-31ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಬಾ ರಣಧೀರ್ ಸಿಂಗ್‍ರವರು ಲಾಹೋರ್ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು ದೇವರಲ್ಲಿ ನಂಬಿಕೆಯಿದ್ದ ಧರ್ಮನಿಷ್ಠ ವ್ಯಕ್ತಿ. ಭಗತ್‍ಸಿಂಗ್ ನಾಸ್ತಿಕರು ಎಂದು ತಿಳಿದಾಗ ಅವರಿಗೆ ತುಂಬಾ ನೋವಾಯಿತು. ಅವರು ಮರಣದಂಡನೆಯ ಸೆಲ್ (condemned cell) ನಲ್ಲಿ ಹೇಗೋ ಭಗತ್‍ಸಿಂಗ್‍ರನ್ನು ಭೇಟಿ ಮಾಡುವುದರಲ್ಲಿ ಯಶಸ್ವಿಯಾದರು. ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ತರಲು ಪ್ರಯತ್ನಿಸಿ ವಿಫಲರಾದರು. ಬಾಬಾ ರಣಧೀರ್ ಸಿಂಗ್ ಕೋಪವನ್ನು ತಡೆದುಕೊಳ್ಳಲಾಗದೆ ಮೂದಲಿಸುತ್ತಾ ಹೇಳಿದರು: “ನಿಮಗೆ ಖ್ಯಾತಿಯಿಂದ ತಲೆ ತಿರುಗಿದೆ., ಅಹಂಕಾರ ಬಂದಿದೆ; ಅದು ನಿಮ್ಮ ಮತ್ತು ದೇವರ ನಡುವೆ ಕಪ್ಪು ತೆರೆಯನ್ನು ಎಳೆದಿದೆ.” ಆ ಮಾತಿಗೆ ಉತ್ತರಿಸುತ್ತಾ ಭಗತ್‍ಸಿಂಗ್ ಈ ಉತ್ತರವನ್ನು ಬರೆದರು.]

ನೀವು ಪ್ರಚಲಿತ ನಂಬಿಕೆಯನ್ನು ವಿರೋಧಿಸಲು ಹೋಗಿ, ಒಬ್ಬ ನಾಯಕನನ್ನು, ಸಾಮಾನ್ಯವಾಗಿ ಯಾರನ್ನು ವಿಮರ್ಶಾತೀತರೆಂದು ನಂಬುತ್ತಾರೋ – ಏಕೆಂದರೆ ಅವರು ಪತನಾತೀತರೆಂದು ತಿಳಿಯಲಾಗಿದೆ – ಆ ಮಹಾನಾಯಕನನ್ನು ಟೀಕಿಸಲು ಹೋಗಿ, ಆಗ ನಿಮ್ಮ ವಾದದ ಬಲವು, ಜನಸ್ತೋಮವು ನಿಮ್ಮನ್ನು ಜಂಬಗಾರನೆಂದು ಹೀಗಳೆಯುವಂತೆ ಮಾಡುತ್ತದೆ. ಇದು ಮಾನಸಿಕ ಜಡತೆಯಿಂದ ಬರುತ್ತದೆ. ವಿಮರ್ಶೆ ಮತ್ತು ಸ್ವತಂತ್ರ ವಿಚಾರಗಳು – ಇವೆರೆಡೂ ಕ್ರಾಂತಿಕಾರಿಯು ಪರಭಾರೆ ಮಾಡಲಾಗದ ಗುಣಗಳು. ಮಹಾತ್ಮಾಜೀ ಮಹಾನರಾದುದರಿಂದ ಯಾರೂ ಅವರನ್ನು ಟೀಕಿಸಬಾರದು. ಅವರು ಎತ್ತರಕ್ಕೇರಿರುವ ಕಾರಣ, ಅವರು ಹೇಳಿದುದೆಲ್ಲವೂ ಸರಿ – ಅದು ರಾಜಕೀಯ ಅಥವಾ ಧರ್ಮ, ಆರ್ಥಿಕತೆ ಅಥವಾ ನೈತಿಕತೆ, ಯಾವುದೇ ಕ್ಷೇತ್ರವಾಗಿರಬಹುದು. “ಹೌದು, ಅದೇ ಸರಿ” ಎನ್ನುವ ಮನೋಭಾವವು ಪ್ರಗತಿಯೆಡೆಗೆ ಕೊಂಡೊಯ್ಯಲಾರದು, ಬದಲಿಗೆ ಅದು ಖಡಾಖಂಡಿತವಾಗಿ ಪ್ರತಿಗಾಮಿ.
ನಮ್ಮ ಪೂರ್ವಜರು ಅತಿ ಮಾನುಷ ಶಕ್ತಿಗಳಲ್ಲಿ, ಸರ್ವಶಕ್ತ ದೇವರ ಬಗ್ಗೆ ನಮ್ಮಲ್ಲಿ ನಂಬಿಕೆಯನ್ನು ಬೆಳೆಸಿರುವ ಕಾರಣ, ಯಾರಾದರೂ ಆ ನಂಬಿಕೆಯ ಸತ್ಯಾಸತ್ಯತೆಯನ್ನು ಅಥವಾ ಆ ಸರ್ವಶಕ್ತನ ಅಸ್ತಿತ್ವವನ್ನೇ ಪ್ರಶ್ನಿಸುವ ದೈರ್ಯ ಮಾಡಿದರೆ, ಆತನನ್ನು ಮತಭ್ರಷ್ಟನೆಂದೋ ಅಥವಾ ತತ್ವಭ್ರಷ್ಟನೆಂದೋ ಕರೆಯಲಾಗುತ್ತದೆ. ಆತನ ವಾದಗಳು ಎದುರು ವಾದಗಳಿಂದ ಸೋಲಿಸಲಾಗದಷ್ಟು ಗಟ್ಟಿಯಾಗಿದ್ದರೆ, ಆತನ ಉತ್ಸಾಹವು ಸರ್ವಶಕ್ತನ ಕೋಪದಿಂದಾಗುವ ದುರಾದೃಷ್ಟಗಳ ಭಯದಿಂದ ಕುಗ್ಗಲಾಗದಷ್ಟು ಬಲವಾಗಿದ್ದರೆ, ಆತನನ್ನು ಜಂಬಗಾರನೆಂದು  ಬಣ್ಣಿಸುತ್ತಾರೆ. ಹಾಗಾದರೆ, ಈ ವ್ಯರ್ಥ ಚರ್ಚೆಗೋಸ್ಕರ ಸಮಯವನ್ನು ಹಾಳು ಮಾಡುವುದೇಕೆ? ಇಡೀ ವಿಷಯದ ಬಗ್ಗೆ ವಾದಿಸುವ ಪ್ರಯತ್ನವೇಕೆ? ಈ ಪ್ರಶ್ನೆ ಜನತೆಯ ಮುಂದೆ ಪ್ರಥಮ ಬಾರಿಗೆ ಬರುತ್ತಿದೆ ಮತ್ತು ಇದನ್ನು ಈ ಯಥಾರ್ಥ ಸಂಗತಿಯ ಶೈಲಿಯಲ್ಲಿ ಪ್ರಥಮ ಬಾರಿಗೆ ಚರ್ಚಿಸಲಾಗುತ್ತಿದೆ, ಆದುದರಿಂದಲೇ ಈ ಸುದೀರ್ಘ ಚರ್ಚೆ.
ಮೊದಲನೆ ಪ್ರಶ್ನೆಗೆ ಸಂಬಂಧಿಸಿದಂತೆ, ನನ್ನನ್ನು ನಾಸ್ತಿಕತೆಗೆ ಕೊಂಡೊಯ್ದಿರುವುದು ಜಂಬವಲ್ಲವೆಂಬುದನ್ನು ಸ್ಪಷ್ಟಪಡಿಸಿದ್ದೇನೆಂದು ನನ್ನ ಭಾವನೆ. ನನ್ನ ವಾದದ ಶೈಲಿಯು ಮನವರಿಕೆಯಾಗುವಂತಿದೆಯೋ ಅಥವಾ ಇಲ್ಲವೋ ಎಂಬುದನ್ನು ತೀರ್ಮಾನಿಸುವುದು ಓದುಗರು, ನಾನಲ್ಲ. ಪ್ರಸ್ತುತ ಸಂದರ್ಭದಲ್ಲಿ ದೇವರಲ್ಲಿನ ನನ್ನ ನಂಬಿಕೆಯು ನನ್ನ ಜೀವನವನ್ನು ಸುಲಭಗೊಳಿಸಬಹುದಿತ್ತು. ನನ್ನ ಭಾರವನ್ನು ಹಗುರಗೊಳಿಸಬಹುದಿತ್ತು ಮತ್ತು ದೇವರಲ್ಲಿನ ನನ್ನ ಅಪನಂಬಿಕೆಯು ಇಡೀ ವಾತಾವರಣವನ್ನು ನಿಸ್ಸಾರಗೊಳಿಸಿದೆ; ಮತ್ತು ಪರಿಸ್ಥಿತಿಯು ಇನ್ನೂ ಭೀಕರ ರೂಪವನ್ನು ಪಡೆಯಬಹುದೆಂದು ನನಗೆ ಗೊತ್ತು. ಸ್ವಲ್ಪ ಆಧ್ಯಾತ್ಮಿಕತೆಯು ಅದನ್ನು ಕಾವ್ಯಮಯಗೊಳಿಸಬಹುದು. ಆದರೆ ನನ್ನ ಭವಿಷ್ಯನ್ನು ಎದುರಿಸಲು ನನಗೆ ಯಾವ ಉತ್ತೇಜಕದ ಸಹಾಯವೂ ಬೇಡ. ನಾನೊಬ್ಬ ವಾಸ್ತವವಾದಿ. ವೈಚಾರಿಕತೆಯ ಸಹಾಯದಿಂದ ನನ್ನಲ್ಲಿರುವ ಸಹಜ ಪ್ರವೃತ್ತಿಯ ಮೇಲೆ ಹತೋಟಿ ಸಾಧಿಸಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಈ ಗುರಿಯನ್ನು ಮುಟ್ಟುವಲ್ಲಿ ನಾನು ಪ್ರತಿಸಲವೂ ಸಫಲನಾಗಿಲ್ಲ. ಆದರೆ ಪ್ರಯತ್ನಿಸುವುದು ಮತ್ತು ಹೋರಾಡುವುದು ಮನುಷ್ಯನ ಕರ್ತವ್ಯ. ಯಶಸ್ಸು ನಿಂತಿರುವುದು ಅವಕಾಶ ಮತ್ತು ಪರಿಸ್ಥಿತಿಯ ಮೇಲೆ.
ಎರಡನೇ ಪ್ರಶ್ನೆಯ ಬಗ್ಗೆ: ದೇವರ ಅಸ್ತಿತ್ವದ ಹಿಂದೆಯಿದ್ದ ಮತ್ತು ಈಗಲೂ ಪ್ರಚಲಿತವಿರುವ ನಂಬಿಕೆಗಳ ಬಗ್ಗೆ ಅಪನಂಬಿಕೆಯಿರಲು ಜಂಬವಲ್ಲದಿದ್ದರೆ, ಬೇರಾವುದಾದರೂ ಕಾರಣವಿರಲೇಬೇಕು. ಈಗ ಅದೇ ವಿಷಯಕ್ಕೆ ಬರುತ್ತೇನೆ. ಅದಕ್ಕೆ ಕಾರಣವಿದೆ. ನನ್ನ ಪ್ರಕಾರ, ಸ್ವಲ್ಪ ವಿಚಾರಶಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ತನ್ನ ಸುತ್ತಮುತ್ತಲಿನ ಪರಿಸ್ಥಿತಿಯ ಬಗ್ಗೆ ವಿಚಾರ ಮಾಡಲು ಪ್ರಯತ್ನಿಸುತ್ತಾನೆ. ಎಲ್ಲಿ ನೇರವಾದ ಸಾಕ್ಷಿ-ಪ್ರಮಾಣಗಳು ದೊರಕುವುದಿಲ್ಲವೋ, ಅಲ್ಲಿ ತತ್ವಶಾಸ್ತ್ರವು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ನಾನು ಹಿಂದೆಯೇ ತಿಳಿಸಿದ ಹಾಗೆ, ತತ್ವಶಾಸ್ತ್ರವು ಮಾನವ ದೌರ್ಬಲ್ಯದ ಪ್ರತಿಫಲವೆಂದು ಕ್ರಾಂತಿಕಾರಿ ಸ್ನೇಹಿತರೊಬ್ಬರು ಹೇಳುತ್ತಿದ್ದರು. ಈ ಪ್ರಪಂಚದ ರಹಸ್ಯ, ಅದರ ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್, ಅದರ ‘ಏಕೆ’ ಮತ್ತು ‘ಏತಕ್ಕಾಗಿ’ ಎಂಬ ಪ್ರಶ್ನೆಗಳು, ಇವುಗಳನ್ನು ಬಗೆಹರಿಸಲು ಪ್ರಯತ್ನಿಸುವುದಕ್ಕೆ ನಮ್ಮ ಪೂರ್ವಜರಿಗೆ ಸಾಕಷ್ಟು ವಿರಾಮವಿದ್ದಾಗ, ಅವರಿಗೆ ನೇರ ಸಾಕ್ಷ್ಯಗಳ ಭಯಂಕರ ಕೊರತೆಯಿದ್ದುದರಿಂದ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರು. ಅದರಿಂದಾಗಿಯೇ ಕೆಲವೊಮ್ಮೆ ವೈರುಧ್ಯದ ಮತ್ತು ಘರ್ಷಣೆಯ ರೂಪಗಳನ್ನು ಪಡೆಯುವಂತಹ ವಿವಿಧ ಧಾರ್ಮಿಕ ಪಂಥಗಳ ಮೂಲತತ್ವಗಳಲ್ಲೇ ಅಗಾಧ ವ್ಯತ್ಯಾಸಗಳನ್ನು ಕಾಣಬಹುದು. ಕೇವಲ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರಗಳಷ್ಟೇ ಭಿನ್ನವಾದುದಲ್ಲ. ಪ್ರತಿಯೊಂದು ಭೂಖಂಡದಲ್ಲೂ ವಿವಿಧ ಚಿಂತನಾ ಪಂಥಗಳಲ್ಲೂ (School of Thoughts) ಸಹ ಭಿನ್ನತೆಗಳಿವೆ. ಪೌರ್ವಾತ್ಯ ಧರ್ಮಗಳನ್ನು ತೆಗೆದುಕೊಂಡರೆ,  ಮುಸಲ್ಮಾನರ ನಂಬಿಕೆಯು ಹಿಂದೂಗಳ ನಂಬಿಕೆಗೆ ಸರಿಹೊಂದುವುದಿಲ್ಲ. ಭಾರತ ಒಂದರಲ್ಲೇ ಬೌದ್ಧ ಧರ್ಮ ಮತ್ತು ಜೈನ ಧರ್ಮಗಳು ವೈದಿಕ ಧರ್ಮಕ್ಕಿಂತ (Brahminism) ಸಾಕಷ್ಟು ಬೇರೆಯದೇ ಆಗಿವೆ; ಮತ್ತೆ ವೈದಿಕ ಧರ್ಮದಲ್ಲೂ ಆರ್ಯಸಮಾಜ ಮತ್ತು ಸನಾತನ ಧರ್ಮಗಳಂತಹ ವೈರುಧ್ಯದ ನಂಬಿಕೆಗಳಿವೆ. ಚಾರ್ವಾಕ ಪ್ರಾಚೀನ ಕಾಲದ ಮತ್ತೊಬ್ಬ ಸ್ವತಂತ್ರ ಚಿಂತಕ. ಹಿಂದಿನ ಕಾಲದಲ್ಲಿಯೇ ಅವನು ದೇವರ ಅಧಿಕಾರತ್ವವನ್ನು (ಅಥಾರಿಟಿಯನ್ನು) ಪ್ರಶ್ನಿಸಿದರು. ಮೂಲತತ್ವದ ಪ್ರಶ್ನೆಗಳಲ್ಲಿ ಈ ಎಲ್ಲಾ ಪಂಥಗಳೂ ವಿಭಿನ್ನವಾಗಿವೆ; ಮತ್ತೆ ಎಲ್ಲರೂ ತಾವೇ ಸರಿದಾರಿಯಲ್ಲಿದ್ದೇವೆಂದು ಭಾವಿಸುತ್ತಾರೆ. ಇಲ್ಲೇ ದುರದೃಷ್ಟವಿರುವುದು. ಪ್ರಾಚೀನ ವಿದ್ವಾಂಸರ ಮತ್ತು ಚಿಂತಕರ ಪ್ರಯೋಗಗಳನ್ನು ಹಾಗೂ ಅಭಿವ್ಯಕ್ತಿಗಳನ್ನು ಅಜ್ಞಾನದ ವಿರುದ್ಧದ, ನಮ್ಮ ಭವಿಷ್ಯದ ಹೋರಾಟಕ್ಕೆ ಮತ್ತು ಈ ನಿಗೂಢ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯುವುದಕ್ಕೆ ಅಡಿಪಾಯವಾಗಿ ಉಪಯೋಗಿಸಿಕೊಳ್ಳುವ ಬದಲಿಗೆ, ಈಗಾಗಲೇ ಸಾಬೀತಾಗಿರುವಂತೆ, ನಾವು ಸೋಮಾರಿತನದಿಂದ ಅವರ ಹೇಳಿಕೆಗಳ ಬಗ್ಗೆ ಹಿಂಜರಿಕೆಯಿಲ್ಲದ, ಅವಿಚಲಿತ ನಂಬಿಕೆಯ ಬಗ್ಗೆ ಹುಯಿಲೆಬ್ಬಿಸುತ್ತೇವೆ. ಈ ರೀತಿಯಲ್ಲಿ ಮಾನವನ ಪ್ರಗತಿಯಲ್ಲಿ ಜಡತೆಗೆ ಕಾರಣಕರ್ತರಾಗಿದ್ದೇವೆ.
ಪ್ರಗತಿಯ ಪರವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯೂ ಹಳೆಯ ನಂಬಿಕೆಯ ಪ್ರತಿಯೊಂದು ಅಂಶವನ್ನೂ ಟೀಕಿಸಬೇಕು, ಸುಮ್ಮನೆ ನಂಬಬಾರದು ಮತ್ತು ಪ್ರಶ್ನಿಸಬೇಕು. ಪ್ರಚಲಿತ ನಂಬಿಕೆಯ ಆಳ ಅಗಲಗಳನ್ನು ಹೊಕ್ಕು, ಒಂದೊಂದು ಅಂಶವನ್ನೂ ವಿಚಾರಪರತೆಯಿಂದ ನೋಡಬೇಕು. ಬಹಳ ಗಣನೀಯವಾದ ವಿಚಾರ ಮಂಥನದ ನಂತರ ಯಾರಾದರೂ ಯಾವುದೇ ಸಿದ್ಧಾಂತ ಅಥವಾ ತತ್ವಶಾಸ್ತ್ರದಲ್ಲಿ ನಂಬಿಕೆಯಿಡುವಂತಾದರೆ, ಆತನ ನಂಬಿಕೆಯು ಸ್ವಾಗತಾರ್ಹ. ಆತನ ವಿವೇಚನೆಯು ತಪ್ಪುಗ್ರಹಿಕೆಯಾಗಿರಬಹುದು, ತಪ್ಪಾಗಿರಬಹುದು, ತಪ್ಪು ದಾರಿಗೆ ಎಳೆಯಬಹುದು ಅಥವಾ ದೋಷಪೂರಿತವಾಗಿರಬಹುದು. ಆದರೆ ಆತ ಅದನ್ನು ತಿದ್ದಿಕೊಳ್ಳಬಹುದು; ಏಕೆಂದರೆ ವೈಚಾರಿಕತೆಯು ಅವನ ಜೀವನದ ಮಾರ್ಗದರ್ಶಕ ಬೆಳಕು. ಆದರೆ ಬರಿಯ ನಂಬಿಕೆ ಮತ್ತು ಕುರುಡು ನಂಬಿಕೆ ಅಪಾಯಕಾರಿ. ಅದು ಮೆದುಳನ್ನು ಮಂಕಾಗಿಸುತ್ತದೆ ಮತ್ತು ಮನುಷ್ಯನನ್ನು ಪ್ರತಿಗಾಮಿಯನ್ನಾಗಿ ಮಾಡುತ್ತದೆ. ತನ್ನನ್ನು ವಾಸ್ತವವಾದಿಯೆಂದು ಕರೆದುಕೊಳ್ಳುವವನು, ಪ್ರಾಚೀನ ನಂಬಿಕೆಯ ಸರ್ವಸ್ವವನ್ನೂ ಪ್ರಶ್ನಿಸಬೇಕು. ಅದಕ್ಕೆ ವೈಚಾರಿಕತೆಯ ದಾಳಿಯನ್ನು ಎದುರಿಸಲಾಗದಿದ್ದರೆ, ಅದು ಕುಸಿದು ಬೀಳುತ್ತದೆ. ಆಗ ಆತನ ಮೊದಲ ಕೆಲಸವೆಂದರೆ, ಎಲ್ಲವನ್ನೂ ಕಿತ್ತು ಬಿಸಾಕಿ, ಹೊಸ ತತ್ವಶಾಸ್ತ್ರ ನಿರ್ಮಾಣಕ್ಕೆ ಸ್ಥಳವನ್ನು ತೆರವು ಮಾಡಿಕೊಡಬೇಕು. ಇದು ನಕಾರಾತ್ಮಕ ಮುಖ. ಇದಾದ ನಂತರ ಕ್ರಿಯಾತ್ಮಕ ಕೆಲಸ ಆರಂಭವಾಗುತ್ತದೆ; ಅದರಲ್ಲಿ ಮರುನಿರ್ಮಾಣದ ಉದ್ದೇಶಕ್ಕಾಗಿ ಕೆಲವೊಮ್ಮೆ ಕೆಲವು ಹಳೆಯ ನಂಬಿಕೆಯ ವಸ್ತುಗಳನ್ನು ಉಪಯೋಗಿಸಬಹುದು. ನನ್ನ ವಿಷಯದಲ್ಲಾದರೆ, ಮೊದಲಿಗೆ ಈ ವಿಷಯದ ಬಗ್ಗೆ ನಾನು ಹೆಚ್ಚು ಅಧ್ಯಯನ ಮಾಡಿಲ್ಲವೆಂದು ಒಪ್ಪಿಕೊಳ್ಳುತ್ತೇನೆ. 

ನನಗೆ ಪೌರ್ವಾತ್ಯ ತತ್ವಶಾಸ್ತ್ರವನ್ನು ಅಧ್ಯಯನ ಮಾಡಬೇಕೆಂದು ಆಸೆಯಿತ್ತು; ಆದರೆ ಅದಕ್ಕೆ ಸಂದರ್ಭ ಅಥವಾ ಅವಕಾಶಗಳೇ ಸಿಗಲಿಲ್ಲ. ಆದರೆ ಚರ್ಚೆಯಲ್ಲಿ ನಕಾರಾತ್ಮಕ ಅಧ್ಯಯನವಿರುವವರೆಗೂ, ಹಳೆಯ ನಂಬಿಕೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸುವಷ್ಟರ ಮಟ್ಟಿಗೆ ನನಗೆ ಮನವರಿಕೆಯಾಗಿದೆ ಎಂದು ನನಗನ್ನಿಸುತ್ತದೆ. ಪ್ರಕೃತಿಯ ಚಲನವಲನಗಳನ್ನು ನಿಯಂತ್ರಿಸುವ ಮತ್ತು ನಿರ್ದೇಶಿಸುವ ಪ್ರಜ್ಞಾವಂತ ಸರ್ವಶಕ್ತನ ಅಸ್ತಿತ್ವವಿಲ್ಲದಿರುವುದು ನನಗೆ ಮನವರಿಕೆಯಾಗಿದೆ. ನಾವು ಪ್ರಕೃತಿಯಲ್ಲಿ ನಂಬಿಕೆಯಿಟ್ಟಿದ್ದೇವೆ ಮತ್ತು ಇಡೀ ಪ್ರಗತಿಪರ ಚಳುವಳಿಯು ಮಾನವನು ತನ್ನ ಸೇವೆಗಾಗಿ ಪ್ರಕೃತಿಯ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಅದನ್ನು ನಿರ್ದೇಶಿಸಲು ಅದರ ಹಿಂದೆ ಪ್ರಜ್ಞಾವಂತ ಶಕ್ತಿಯಿಲ್ಲ. ಇದೇ ನಮ್ಮ ತತ್ವಶಾಸ್ತ್ರ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)


- ಎಸ್.ಎನ್.ಸ್ವಾಮಿ

ಅನುವಾದಿತ ಆತ್ಮಚರಿತ್ರೆ - ಕೆಲವು ನೆನಪುಗಳು - ಪ್ರೀತಿಲತಾ ವದ್ದೇದಾರ್


(ಪ್ರೀತಿಲತಾ ವದ್ದೇದಾರ್ - ಅಗ್ನಿಯುಗದ ಪ್ರಥಮ ಮಹಿಳಾ ಹುತಾತ್ಮಳ 
ಕಡೆಯ ಸಂದೇಶದ ಆಯ್ದ ಭಾಗಗಳನ್ನು ಕೆಳಗೆ ನೀಡಲಾಗಿದೆ)

ಅಂದು 1930, ಏಪ್ರಿಲ್ 19ರ ಬೆಳಿಗ್ಗೆ ... ನಾನು ಚಿತ್ತಗಾಂಗ್ ಧೀರ ಚೇತನಗಳ ಅಮೋಘ ಕೆಲಸಗಳನ್ನು (ಅದರ ಹಿಂದಿನ ರಾತ್ರಿ) ಕೇಳಿದ ದಿನ. ಈ ಮಹಾಚೇತನಗಳ ಬಗ್ಗೆ ನನ್ನ ಹೃದಯದ ತುಂಬಾ ಮೆಚ್ಚುಗೆಯು ತುಂಬಿತು. ... ಜಲಾಲಾಬಾದ್‍ನ ಹುತಾತ್ಮರ ನೆನಪು ನನ್ನ ಹೃದಯದಾಳವನ್ನು ಕಲಕಿತು. ... ಸ್ವಾತಂತ್ರ್ಯದ ಬಲಿಪೀಠದಲ್ಲಿ ಬಲಿದಾನಗೈದ ತಮ್ಮ ಮುದ್ದಿನ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಕಣ್ಣೀರನ್ನು ಕಂಡೆ.
ರಾಮಕೃಷ್ಣಣ್ಣನು ಅಲಿಪುರ ಕೇಂದ್ರ ಕಾರಾಗೃಹದಲ್ಲಿ ... ಪ್ರತ್ಯೇಕ ಬಂಧಿಖಾನೆಯಲ್ಲಿ ಉಗ್ರ ಶಿಕ್ಷೆಗಾಗಿ ಕಾಯುತ್ತಿದ್ದಾನೆ. ಆತನನ್ನು ನೇಣಿಗೇರಿಸುವ ಮುನ್ನವೇ ಹಲವಾರು ಸಲ ಭೇಟಿಯಾಗಿದ್ದೆ...(1) 
ಆತನ ಘನತೆವೆತ್ತ ಮುಖ, ಮುಕ್ತ ಮಾತುಕತೆ, ಸಾವಿಗೆ ಶಾಂತವಾಗಿ ಶರಣಾಗುವುದು ... ಇದೆಲ್ಲವೂ ನನ್ನ ಮೇಲೆ ಛಾಪನ್ನು ಒತ್ತಿತ್ತು ಮತ್ತು ನಾನು ಈಗಿನಕ್ಕಿಂತ ಹತ್ತು ಪಟ್ಟು ಹೆಚ್ಚು ಮುಂದೆ ಹೋಗಬಲ್ಲವಳಾಗಿದ್ದೆ. ಸಾವಿನ ಬಳಿ ಹೋಗುತ್ತಿರುವ ಈ ದೇಶಪ್ರೇಮಿಯ ಸಹವಾಸವು ನನ್ನ ಜೀವನವನ್ನು ಪರಿಪೂರ್ಣದೆಡೆಗೆ ಕೊಂಡೊಯ್ಯಲು ತುಂಬಾ ಸಹಾಯ ಮಾಡಿತು.
1932 ರಲ್ಲಿ ನನ್ನ ಪರೀಕ್ಷೆಗಳು ಮುಗಿದ ನಂತರ (2) ಹೇಗಾದರೂ ಮಾಸ್ತರ್‍ದಾ (ಸೂರ್ಯ ಸೆನ್) ಭೇಟಿ ಮಾಡಬೇಕೆಂದು ಗಟ್ಟಿ ನಿರ್ಧಾರ ಮಾಡಿಕೊಂಡೆ. ಕೆಲವೇ ದಿನಗಳಲ್ಲಿ ನನ್ನ ಬಹುಕಾಲದ ಬಯಕೆಯು ಪೂರೈಸಿತು; ನಾನು ಪ್ರಸಿದ್ಧ ಚಿತ್ತಗಾಂಗ್ ಕ್ರಾಂತಿಕಾರಿ ಪಕ್ಷದ ಇಬ್ಬರು ಮಹಾಚೇತನಗಳಾದ ಮಾಸ್ತರ್‍ದಾ ಮತ್ತು ನಿರ್ಮಲಣ್ಣರ ಮುಂದೆ ನಿಂತಿದ್ದೆ...
ನಿರ್ಮಲಣ್ಣನ ದುರಂತದ ಅಂತ್ಯದಿಂದ (3) ನನಗೆ ಬಹಳ ಆಘಾತವಾಯಿತು; ನಾನು ಹೆಚ್ಚು ಹೆಚ್ಚು ಹತಾಶಳಾದೆ... ಅದಾದ ಕೆಲವೇ ದಿನಗಳಲ್ಲಿ ನಾನು ನನ್ನ ಪ್ರೀತಿಯ ಮನೆಬಿಟ್ಟು ತನು ಮನಗಳನ್ನು ಅರ್ಪಿಸಿ ಕ್ರಾಂತಿಕಾರಿ ಸಿದ್ಧತೆಗಳಲ್ಲಿ ಮುಳುಗಿದೆ.
ನಾವು ಸ್ವಾತಂತ್ರ್ಯ ಸಂಗ್ರಾಮವನ್ನು ನಡೆಸುತ್ತಿದ್ದೇವೆ.  ಆ ಎಡೆಬಿಡದ ಹೋರಾಟದ ಒಂದು ಭಾಗವೇ ಇಂದಿನ ಕಾರ್ಯಾಚರಣೆ. ಬ್ರಿಟಿಷರು ... ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ; ರಕ್ತ ಹೀರಿದ್ದಾರೆ ಮತ್ತು ಭಾರತದ ಕೋಟ್ಯಾಂತರ ಜನರ, ಕೋಟ್ಯಾಂತರ ಪುರುಷರ ಮತ್ತು ಮಹಿಳೆಯರ ಜೀವನವನ್ನು ಧೂಳಿಪಟ ಮಾಡಿದ್ದಾರೆ. ನಮ್ಮ ಸಂಪೂರ್ಣ ವಿನಾಶಕ್ಕೆ - ನೈತಿಕ, ದೈಹಿಕ, ರಾಜಕೀಯ ಮತ್ತು ಆರ್ಥಿಕ ವಿನಾಶಕ್ಕೆ ಅವರೇ ಸಂಪೂರ್ಣ ಕಾರಣಕರ್ತರು; ಹೀಗೆ ಅವರು ನಮ್ಮ ದೇಶದ ಹೀನ ಶತ್ರುವೆಂದು ಸಾಬೀತು ಮಾಡಿದ್ದಾರೆ ಮತ್ತು ನಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವ ಹಾದಿಯಲ್ಲಿ ದೊಡ್ಡ ಅಡೆತಡೆಯಾಗಿದ್ದಾರೆ ... ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ನಡೆಯುವ ಹೋರಾಟದ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಹೇಗಾದರೂ ಮಾಡಿ ಕಿತ್ತೆಸೆಯಲು ನಾವು ಸಿದ್ದರಿರಬೇಕು.
ಬಹುಶಃ ನನ್ನ ದೇಶ ಬಾಂಧವರಿಗೆ ಸ್ವಲ್ಪ ವಿವರಣೆ ಕೊಡಬೇಕೇನೊ. ಇನ್ನೂ ನಮ್ಮ ದೇಶದ ಎಷ್ಟೋ ಜನರು ಭಾರತೀಯ ನಾರಿಯ ಅತ್ಯುತ್ತಮ ಸಂಪ್ರದಾಯವಿರುವ ಕುಟುಂಬದಿಂದ ಬಂದ ಹೆಣ್ಣುಮಗಳೊಬ್ಬಳು ಮಾನವ ಜೀವಗಳನ್ನು ಹತಗೈಯುವಂತಹ ಕೆಲಸವನ್ನು ಹೇಗೆ ಮಾಡಲು ಸಾಧ್ಯವೆಂದು ದಿಗ್ಮೂಢರಾಗಬಹುದು, ಅದೇ ದೊಡ್ಡ ದುರಂತ. ದೇಶಕ್ಕಾಗಿ ಹೋರಾಡುವಾಗ ಗಂಡು ಹೆಣ್ಣೆಂಬ ಭೇದ ಏಕಿರಬೇಕೋ, ನನಗಂತೂ ಅರ್ಥವಾಗುವುದಿಲ್ಲ ... ಸಶಸ್ತ್ರ ಬಂಡಾಯಕ್ಕೆ ... ಸಂಬಂಧಪಟ್ಟಂತೆ ಹೇಳುವುದಾದರೆ ... ಅದೊಂದು ವಿನೂತನ ವಿಧಾನ. ಅದನ್ನು ಹಲವಾರು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ ಮತ್ತು ಅದರಲ್ಲಿ ನೂರಾರು ಹೆಣ್ಣುಮಕ್ಕಳು ಭಾಗವಹಿಸಿದ್ದಾರೆ ... ಇನ್ನು ಸಾಮಥ್ರ್ಯದ ವಿಷಯಕ್ಕೆ ಬಂದರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಕಡಿಮೆ ಸಮರ್ಥರು ಹಾಗೂ ಅಬಲೆಯರೆಂದೇ ಯೋಚಿಸುವುದು ಎಷ್ಟು ಅನ್ಯಾಯವಲ್ಲವೇ? ಈ ತಪ್ಪು ತಿಳುವಳಿಕೆ ಹೋಗುವ ಸಮಯ ಬಂದಿದೆ...
ತಾವು ಇನ್ನು ಮುಂದೆ ಹಿಂದೆ ಬೀಳುವುದಿಲ್ಲ; ಎಲ್ಲಾ ಕಾರ್ಯಗಳಲ್ಲೂ, ಅದು ಎಷ್ಟೇ ಅಪಾಯಕಾರಿಯಾಗಿರಲಿ, ಕಷ್ಟಕರವಾಗಿರಲಿ ತಮ್ಮ ಸೋದರರ ಜೊತೆಜೊತೆಯಲ್ಲೇ ನಿಲ್ಲುತ್ತೇವೆಂದು ಹೆಣ್ಣುಮಕ್ಕಳು ನಿರ್ಧರಿಸಿದ್ದಾರೆ. ನನ್ನ ಸೋದರಿಯರು, ತಾವು ಅಬಲೆಯರಲ್ಲ ಮತ್ತು ಎಲ್ಲಾ ಅಪಾಯಗಳನ್ನು, ಕಷ್ಟಗಳನ್ನು ಎದುರಿಸಿ ನಿಲ್ಲಲು ತಯಾರಾಗುತ್ತಾರೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಕ್ರಾಂತಿಕಾರಿ ಚಳುವಳಿಗೆ ಸೇರಿಕೊಳ್ಳುತ್ತಾರೆ ಎಂದು ಮನಃಪೂರ್ವಕವಾಗಿ ಆಶಿಸುತ್ತೇನೆ.
* * * * *

1 ಕಾಮ್ರೇಡ್ ಕಾಲಿಪದ ಚಕ್ರವರ್ತಿ ಜೊತೆ ಸೇರಿಕೊಂಡು ರಾಮಕೃಷ್ಣ ಬಿಶ್ವಾಸ್, ಐಜಿಪಿ ಕ್ರೆಗ್ ಎಂದು ತಪ್ಪಾರ್ಥ ಮಾಡಿಕೊಂಡು ಪೊಲೀಸ್ ಇನ್ಸ್‍ಪೆಕ್ಟರ್ ತಾರಿಣಿ ಚರಣ ಮುಖರ್ಜಿಯನ್ನು ಕೊಂದರು; ಅವರನ್ನು ಬಂಧಿಸಿ, ವಿಚಾರಣೆ ನಡೆಸಿ ನೇಣು ಶಿಕ್ಷೆ ವಿಧಿಸಲಾಯಿತು. ರಾಮಕೃಷ್ಣ ಬಿಶ್ವಾಸ್ ಅಲಿಪುರ ಸೆಂಟ್ರಲ್ ಜೈಲಿನಲ್ಲಿ ಶಿಕ್ಷಿತರ ಸೆಲ್‍ನಲ್ಲಿದ್ದಾಗ ಪ್ರೀತಿಲತಾ ರಾಮಕೃಷ್ಣರ ಸೋದರ ಸಂಬಂಧಿಯೆಂದು ಹೇಳಿಕೊಂಡು ಆಗಾಗ ಭೇಟಿ ಮಾಡುತ್ತಿದ್ದರು. ಅವರ ನಿದರ್ಶನೀಯ ಜೀವನದಿಂದ ಪ್ರೀತಿಲತಾ ಬಹಳ ಸ್ಫೂರ್ತಿ ಪಡೆದಿದ್ದರು.
2 ಪ್ರೀತಿಲತಾ ಬಿ.ಎ. ಕೋರ್ಸನ್ನು ಮುಗಿಸಿದ್ದರು.
3 1932ರ ಜನವರಿ 13ರಂದು ನಡೆದ ಧಲ್‍ಘಾಟ್ ಕದನದಲ್ಲಿ ಗುಂಡಿನೇಟಿನಿಂದ ಜೀವಬಿಟ್ಟರು; ಅದರಲ್ಲಿ ಮಾಸ್ತರ್‍ದಾ (ಸೂರ್ಯ ಸೇನ್) ಮತ್ತು ಪ್ರೀತಿಲತಾ ತಪ್ಪಿಸಿಕೊಂಡರು. ಅಪೂರ್ವ ಸೇನ್ (ಭೋಲಾ) ಕೂಡ ಆ ಕದನದಲ್ಲಿ ಹುತಾತ್ಮರಾದರು.
ಮೂಲ: ಪ್ರೀತಿಲತಾ ವದ್ದೇದಾರ್
ಅನುವಾದ: ಎಸ್.ಎನ್.ಸ್ವಾಮಿ 


ಯುರೋಪಿಯನ್ ಕ್ಲಬ್ ಮೇಲೆ ದಾಳಿ
(ಪ್ರೀತಿಲತಾಳ ದಿನಚರಿಯಿಂದ ಆರಿಸಿಕೊಂಡಿದ್ದು)

ಅಂದು 1932, ಸೆಪ್ಟೆಂಬರ್ 24: ನಮ್ಮ ಕ್ರಾಂತಿಕಾರಿ ನಾಯಕ ಸೂರ್ಯ ಸೆನ್ ಚಿತ್ತಗಾಂಗ್ ಪಟ್ಟಣದ ಹೊರವಲಯದ ಗುಪ್ತಸ್ಥಳದಲ್ಲಿದ್ದರು. ಪಹರ್ತಲಿಯಲ್ಲಿರುವ ಯುರೋಪಿಯನ್ ಕ್ಲಬ್ ಮೇಲೆ ರಾತ್ರಿ ಹೊತ್ತು ದಾಳಿ ಮಾಡಲು ಎಲ್ಲವನ್ನೂ ಸಜ್ಜುಗೊಳಿಸಲಾಗಿತ್ತು. ಈ ಉದ್ದೇಶಕ್ಕಾಗಿಯೇ ಪಕ್ಷದ ಕೆಲವು ಧೈರ್ಯಸ್ಥ ಹಾಗೂ ನಂಬಿಕಸ್ಥ ಸದಸ್ಯರನ್ನು ಆರಿಸಿಕೊಂಡು ತಂಡವನ್ನು ರಚಿಸಲಾಗಿತ್ತು. ಆ ದಿನದ ಎಲ್ಲಾ ಕಾರ್ಯಗಳಿಗೂ ನಾನು ತಂಡದ ನಾಯಕಿಯಾಗಿದ್ದೆ.
ನಾನು ಮಾಸ್ತರ್‍ದಾಗೆ ಹೇಳಿದೆ:
“ಮಾಸ್ತರ್‍ದಾ ಈ ಪ್ರಶಸ್ತವಾದ ದಿನಕ್ಕಾಗಿ ನಾನು ದಿನಗಳನ್ನು, ಗಂಟೆಗಳನ್ನು ಎಣಿಸುತ್ತಿದ್ದೆ. ನೀವು ನನ್ನ ಜೀವನದಲ್ಲಿ ಸುಂದರ ಬೆಳಗನ್ನು ಮೂಡಿಸಿದ್ದೀರಿ; ಅದರಿಂದಾಗಿ ನಿಮ್ಮ ಬಗ್ಗೆ ನನ್ನ ಮನದಲ್ಲಿ ಯಾವಾಗಲೂ ಹೆಚ್ಚುತ್ತಿರುವ ಗೌರವ, ಸದ್ಭಾವನೆ ಮತ್ತು ಕೃತಜ್ಞತೆಗಳನ್ನು ತೆಗೆಯಲು ತಣ್ಣಗಿನ ಸಾವಿನ ಸ್ಪರ್ಶಕ್ಕೂ ಸಹ ಸಾಧ್ಯವಿಲ್ಲ. ಒಬ್ಬ ಅನುಯಾಯಿ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಇಷ್ಟಪಡುವವಳು ನಾನು. ಆದರೆ ನನಗೇಕೆ ನಾಯಕ ಪಟ್ಟ ಕೊಟ್ಟಿದ್ದೀರಿ?”
ಮಾಸ್ತರ್‍ದಾ ಭಾವತುಂಬಿ ಕಂಪಿಸುವ ಆದರೆ ದೃಢವಾದ ಧ್ವನಿಯಲ್ಲಿ ಹೇಳಿದರು:
“ಈವತ್ತು ಬಂಗಾಳದ ಮನೆಗಳಲ್ಲಿ ಧೈರ್ಯಸ್ಥ ಯುವಕರಿಗೆ ಕೊರತೆಯೇನಿಲ್ಲ. ನಮ್ಮ ಯುವಕರು ಬಲಸೊರ್‍ನಿಂದ (1) ಕಲರ್ಪೊಲ್‍ವರೆಗೆ (2) ನಡೆದ ಎಲ್ಲಾ ಧೀರ ಕದನಗಳಲ್ಲಿ ತಮ್ಮ ರಕ್ತದಿಂದ ಈ ನಾಡಿನ ಮಣ್ಣನ್ನು ತೋಯಿಸಿದ್ದಾರೆ. ಬಂಗಾಳಿ ಮನೆಗಳಲ್ಲಿ ತಾಯಂದಿರ ಸಂತತಿಯೆಂದೇ ನೋಡುವ ಮಹಿಳೆಯರೂ ಸಹ ಪರಾಕ್ರಮವನ್ನು ತೋರಿಸಿದ್ದಾರೆ; ಆ ಇತಿಹಾಸವಿನ್ನೂ ದಾಖಲಾಗಬೇಕು. ಆ ಅಧ್ಯಾಯವು ನಿನ್ನ ಯಶಸ್ಸಿನಿಂದ ಅಥವಾ ಆತ್ಮಾಹುತಿಯಿಂದ ರಚಿತವಾಗಲಿ. ನಾನು ಇದನ್ನೇ ಎದುರು ನೋಡುತ್ತಿದ್ದೇನೆ. ನಮ್ಮ ದೇಶದ ಮಹಿಳೆಯರು ಹಿಂದೆ ಬಿದ್ದಿಲ್ಲವೆನ್ನುವುದನ್ನು ಬ್ರಿಟಿಷರು ನೋಡಿ ಕಲಿಯಲಿ, ಜಗತ್ತು ನೋಡಲಿ.”
ಮಾಸ್ತರ್‍ದಾ ಕಿಟಕಿಯಿಂದಾಚೆ ದೂರದ ಕಾಲುದಾರಿಯನ್ನು ಆಗಾಗ್ಗೆ ನೋಡುತ್ತಲೇ ಇದ್ದರು. “ಮಾಸ್ತರ್‍ದಾ, ಯಾರಿಗಾದರೂ ಕಾಯುತ್ತಿರುವಿರಾ?” ಹೊರಗೆ ನೋಡಿಕೊಂಡೇ ಹೇಳಿದರು, “ಹೌದು, ನಿನ್ನ ಕೆಲಸದಲ್ಲಿ ನಿನ್ನ ಜೊತೆ ಹೋಗಬೇಕಾದವರಿಗಾಗಿ ಕಾಯುತ್ತಿದ್ದೇನೆ.”


1. ಆ ಕದನದಲ್ಲಿ ಜತಿನ್ ಮುಖರ್ಜಿ ಹಾಗೂ ಅವನ ಸಂಗಾತಿಗಳು ಪೊಲೀಸರೊಂದಿಗೆ ಕೊನೆಯವರೆಗೂ ಹೋರಾಡಿ ಜೀವ ತೆತ್ತರು.
2.  ಅದರಲ್ಲಿ ಸ್ವದೇಶ್ ರಾಯ್, ಮನೋರಂಜನ್, ದೇಬು ಮತ್ತು ರಜತ್ ಬ್ರಿಟಿಷ್ ಪೊಲೀಸರೊಂದಿಗೆ ನಡೆದ ಭಾರಿ ಕಾಳಗದಲ್ಲಿ ಕೆಳಗುರುಳಿದರು.
* * * * *

ಮೂಲ: ಪ್ರೀತಿಲತಾ ವದ್ದೇದಾರ್
ಅನುವಾದ: ಎಸ್.ಎನ್.ಸ್ವಾಮಿ 

ಪುಸ್ತಕ ಪ್ರೀತಿ - ಟೊಳ್ಳುಗಟ್ಟಿ


[ಟಿ ಪಿ  ಕೈಲಾಸಂರವರ  ನಾಟಕ  "ಟೊಳ್ಳುಗಟ್ಟಿ" ಅಥವಾ 

"ಮಕ್ಕಳಿಸ್ಕೂಲ್ ಮನೇಲಲ್ವೇ"]



"ನನ್ನ ಮಟ್ಟಿಗೆ ನನಗೆ ಹಾಸ್ಯದ ಮುಖವಾಡವೇ ಬೇಕು ಎನಿಸುತ್ತದೆ. ನನಗೆ ಅದು ಸಹಜ ನನಗೊಂದು ವಕ್ರದೃಷ್ಟಿಯಿದೆ ಐರಾವತಕ್ಕೂ ಅಡಿಜಾರುತ್ತೇ...ಹಾಸ್ಯದೃಷ್ಟಿಯ ಭೂತಕನ್ನಡಿಯಲ್ಲಿ ಜನರು ನಿಸ್ಸಂಕೋಚವಾಗಿ ತಮ್ಮನ್ನು ತಾವೇ ನೋಡಿಕೊಳ್ಳಲು ಬಹಳ ಸುಲಭ. ತಮ್ಮನ್ನು ನೋಡಿ ತಾವೇ ನಗುತ್ತಾರೆ. ಹಾಸ್ಯದ ಗಮ್ಯ ಉಲ್ಲಾಸ, ರೋಗಿಗೆ ಪಥ್ಯವಿದ್ದಂತೆ. ಜನಕ್ಕೆ ಮನಸ್ಸು ಕುಗ್ಗಿದಾಗ ಹಾಸ್ಯ ಅದನ್ನು ಅರಳಿಸುತ್ತದೆ. ಲೋಕ ಜಡವಾದಾಗ ಹಾಸ್ಯ ಅದನ್ನು ಚೇತರಿಸುತ್ತದೆ.... ಹಾಸ್ಯ ನಿರ್ಮಲವಾಗದಿದ್ದರೆ ಹಾಸ್ಯ ಅಪಹಾಸ್ಯವಾಗಿ ವಿಘಾತವಾಗಿ ಪರಿಣಮಿಸುತ್ತದೆ. ಶಸ್ತ್ರವೈದ್ಯನ ಶಸ್ತ್ರದಂತೆ ಹಾಸ್ಯ ಅನನ್ಯ ಚಿತ್ರವಾಗಿರಬೇಕು." ಹೀಗೆಂದವರು ಪ್ರಸಿದ್ಧ "ಪ್ರಹಸನ ಪಿತಾಮಹ" ಟಿ.ಪಿ.ಕೈಲಾಸಂ ರವರು. ಇವರು ಅಂದಿನ ಸಮಾಜದ ರೀತಿನೀತಿಗಳನ್ನು ತಿಳಿಸಲೋಸಗ ಹೊಸ ಪ್ರಯತ್ನವನ್ನು ಮಾಡಿದರು.ಅದುವೇ ಇಂಗ್ಲಿಷ್ ಭಾಷೆ ಮಿಶ್ರಿತ ವಿಶಿಷ್ಟ ಶೈಲಿಯ ನಾಟಕಗಳು. ಅವುಗಳಲ್ಲಿ " ಟೊಳ್ಳುಗಟ್ಟಿ "ಎನ್ನುವ ನಾಟಕವನ್ನು ನಿಮಗೆ ಪರಿಚಯಿಸುತ್ತೇನೆ.

  ಇದರಲ್ಲಿ ಒಬ್ಬೊಬ್ಬರ ಮೂಲಕ ಒಂದೊಂದು ಸಂದೇಶವನ್ನು ನೀಡಿದ್ದಾರೆ. ತಂದೆ ಹಿರಿಯಣ್ಣ.  ತಾಯಿ ಭಾಗೀರಥಮ್ಮ, ಹಿರಿಮಗ ಪುಟ್ಟು ಜಾಣ ಓದಿನಲ್ಲಿ ಮುಂದು,ಇನ್ನೊಬ್ಬ ಮಾಧವ ಓದಿನಲ್ಲಿ ಹಿಂದಾದರೂ ಎಲ್ಲರಿಗೂ ಸಹಾಯಹಸ್ತ ನೀಡುತ್ತಿದ್ದ.  ತಂಗಿ ನಾಗಮ್ಮ ವಿಧವೆ. ಇಬ್ಬರು ಸೊಸೆಯಂದಿರು ಪಾತು ಮತ್ತು ಸಾತು.
ಹಿರಿಯಣ್ಣಯ್ಯ ತನ್ನ ಮಕ್ಕಳ ಬಗ್ಗೆ  ಗುಮಾಸ್ತ ಶಾಸ್ತ್ರಿಯೊಂದಿಗೆ ಮಾತನಾಡುತ್ತಾ "ನನ್ನ ಹಿರಿ ಮಗ ಪುಟ್ಟು ಪ್ಯಾಸ್ಗೀಸ್ಮಾಡಿ ಮುಂದಕ್ಬಂದ್ರೆ ಆಗ ನನ್ನೊಟ್ಟೆ ಉರಿ ತಣ್ಣಗಾದೀತು ... ದೇವರು...ನನ್ನೆಷ್ಟು ಕಷ್ಟ ಪಡಿಸಿದ್ರೂನೂ ಒಬ್ಬೊಳ್ಳೆ ಮಗನ್ನಾದ್ರೂ ಕೊಟ್ಟಿದ್ದಾನಲ್ಲ!" ಎಂದನು.
ಶಾಸ್ತ್ರಿ "ಅದ್ಯಾಕ್ಸಾಮಿ ಗುಡಿ ಬಾವಿಯಲ್ಲಿ ಬಿದ್ದ ಮಗುವನ್ನು  ಮೇಲೆತ್ತಿದ ಮಗನನ್ನು  ಮರೆತಿರಾ, 'ಇಂಥ ಧೈರ್ಯಶಾಲಿಯಾದ ಪುತ್ರರತ್ನಕ್ಕಿಂತಲೂ ಒಬ್ಬ ತಂದೆಗೆ ಶ್ರೇಷ್ಠತರವಾದ ಆಭರಣವೇ ಇಲ್ಲ' ಎನಿಸಿಕೊಂಡ ಮಗನನ್ನೇ ಮರೆತಿರಲ್ಲ?" ಎಂದನು.
ಹಿರಿಯಣ್ಣಯ್ಯ ಉದಾಸೀನದಿಂದ "ಅಂತಹ ಹೊಗಳಿಕೆಯಿಂದ ನನಗೇನು ಲಾಭ?" ಎನ್ನುತ್ತಾನೆ. 
ಮಕ್ಕಳ ರಿಸಲ್ಟ್ ಬಂದಿತು. ಎಂದಿನಂತೆ ಪುಟ್ಟು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದ. ಮಾಧವ ಅನುತ್ತೀರ್ಣನಾಗಿದ್ದನು. ಇದರಿಂದ ಕೋಪಗೊಂಡ ಅಪ್ಪ ಮಾಧವನಿಗೆ ಊಟದಲ್ಲಿ ತುಪ್ಪ, 

ಸಾರು, ಮಲಗಲು ತಲೆಗೆ ದಿಂಬು
 ಮತ್ತು ಧಾವಳಿಯನ್ನ ಕೊಡಬೇಡವೆಂದು ತಂಗಿಗೆ
ಹೇಳಿದನು. ಪುಟ್ಟುವಿನೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ಮುಂದೆ ಓದು ಎಂದನು. "ಹಣವನ್ನು ಹೇಗೆ ಹೊಂದಿಸುತ್ತೀರ" ಪುಟ್ಟು ಕೇಳಿದಾಗ "ಮಾಧವನ ಮಾವ ಕೊಟ್ಟಿರುವ ಆಭರಣವನ್ನು ಮಾರಿ ನಿನ್ನನ್ನು ಓದಿಸುತ್ತೇನೆ" ಎಂದನು. ಹೀಗೆ ಸ್ವತಃ ತಂದೆಯೇ ತನ್ನ ಇಬ್ಬರು ಮಕ್ಕಳಲ್ಲಿ ತಾರತಮ್ಯ ತೋರಿ ಮಾನವೀಯತೆಯನ್ನು ಮರೆಯುತ್ತಾನೆ. 
ಮಾವನ ಈ ನಡತೆಯಿಂದ ನೊಂದ ಮಾಧವನ ಪತ್ನಿ ಸಾತು "ಪ್ಯಾಸಾದ್ರೇನು ಸ್ವರ್ಗಸಾಧನವೇ? ಫೇಲಾದ್ರೇನು ನರಕಪ್ರಾಪ್ತಿಯೇ? ಹೀಗೆ ಅನ್ನಾ ನೀರಿಲ್ದೆ ಚಿತ್ರಹಿಂಸೆ ಮಾಡೋದೇ ? ಮನುಷ್ಯನಿಗೆ ಗುಣ ಮುಖ್ಯವಲ್ಲವೇ? ಬರೀ ಹಣ ಅಂತಸ್ತುಗಳೇ ಮುಖ್ಯಾನಾ?" ಎಂದು ನೊಂದು ಹೇಳುವುದರ ಮೂಲಕ ಸಮಾಜದ ಅಂದಿನ ಚಿತ್ರಣವನ್ನು  ನೀಡಿದ್ದಾರೆ.
ಇನ್ನೊಬ್ಬ ಸೊಸೆ ಪಾತು ಶ್ರೀಮಂತ ಮನೆಯ ಮಗಳು. ಇಂಗ್ಲಿಷ್, ಪಿಟೀಲು, ಹಾರ್ಮೋನಿಯಂ ಎಲ್ಲವನ್ನೂ ಕಲಿತ ಧೈರ್ಯವಂತಳು. ಮನೆಯಲ್ಲಿ ಹೆಣ್ಣುಮಕ್ಕಳು ಬರೆಯಬಾರದು, ಸಾಬೂನು ಉಪಯೋಗಿಸಬಾರದು ಎನ್ನುವುದನ್ನೆಲ್ಲಾ ವಿರೋಧಿಸುತ್ತಿದ್ದಳು. ನಾಗಮ್ಮ ತನ್ನ ವೈಧವ್ಯಕ್ಕೆ ಹಾಗೂ ಮಾಧವನು ಫೇಲಾದುದಕ್ಕೆ ಸಾತುವಿನ ಕಾಲ್ಗುಣವೇ ಕಾರಣ ಎಂದು ಸಾತುವನ್ನು ಬೈಯ್ದಾಗ "ಅವರ ಸ್ಥಿತಿಗೆ ನೀ ಹೇಗೆ ಕಾರಣ?" ಅಳಬೇಡ ಎಂದು ಸಮಾಧಾನ ಹೇಳುತ್ತಿದ್ದಳು. ಇಲ್ಲಿ ನಾಗಮ್ಮನ ಮೂಢನಂಬಿಕೆ ಹಾಗೂ ಪಾತುವಿನ ಮೂಲಕ ಅದು ತಪ್ಪು ಎಂದು ತಿಳಿಸಿದ್ದಾರೆ. 
ತಾಯಿ ಜ್ವರದಿಂದ ಮಲಗಿ ನರಳುತ್ತಿದ್ದರು ಹಾಗೂ ಪುಟ್ಟಮಗು ಹಸಿವಿನಿಂದ ಹಾಲಿಲ್ಲದೆ ಆಳುತ್ತಿದ್ದರು ಯಾವುದನ್ನು ಗಮನಿಸದೇ ತನ್ನಷ್ಟಕ್ಕೆ ತಾನೇ ಓದುತ್ತಿದ್ದನು ಪುಟ್ಟ. ಹೊರಗೆ ಔಷಧ ತರಲು ಹೋಗಿದ್ದ ಮಾಧವ ಬಂದು ತಾಯಿಗೆ ಔಷಧಿ ಕೊಟ್ಟುನು.  ಮನೆಯಲ್ಲಿ ಹಾಲಿಲ್ಲ ಎಂದಾಗ ಮತ್ತೊಮ್ಮೆ ಹೊರಹೋಗಿ ಹಾಲು ತರುವುದನ್ನು ನೋಡಿದ ಪುಟ್ಟು "ನೀನು ಈ ಪ್ಯೂನ್ ಕೆಲಸಕ್ಕೆ ಫಿಟ್ಟು ಈ ಕೆಲಸಗಳನ್ನು ಮಾಡ್ತಾಯಿದ್ದರೆ ಫ್ಯೂಚರ್ ಕೆರಿಯರ್ ಎಲ್ಲಿಂದ ಬರುತ್ತೆ?" ಎಂದು ಹೇಳುತ್ತಿದ್ದನು. ತಾಯಿಯ ನರಳಾಟ ಮಗುವಿನ ಅಳುವಿನಿಂದ "ನನಗೆ ಓದಲು ಆಗ್ತಾಯಿಲ್ಲ" ಎಂದ ಪುಟ್ಟವಿನ ಮಾತಿನಿಂದ ಕೋಪಗೊಂಡ ಮಾಧವ "ನಿನಗೆ ಓದೇ ಹೆಚ್ಚಾ, 'ನಾವು ಈ ಭೂಮಿಯಲ್ಲಿ ವಾಸಿಸೋಕೆ ದೇವರಿಗೆ ಕೊಡಬೇಕಾದ ಬಾಡ್ಗೆ ಏನೆಂದರೆ ನಮ್ಮ ಸುತ್ತಮುತ್ತಲೂ ವಾಸಿಸುವ ಜನರಿಗೆ ಉಪಯೋಗವಾಗಿರುವುದು' ಎಂದು ಅಮ್ಮ ಹೇಳಿದ ಮಾತುಗಳು ನಿನಗೆ ನೆನಪಿಲ್ಲವೇ?" ಎಂದು ಕೇಳಿದನು. ಇದರಿಂದ ಮನೆಯಲ್ಲಿ ತಾಯಿ ಮಕ್ಕಳಿಗೆ ವಿದ್ಯೆಯ ಜೊತೆ ಸಂಸ್ಕೃತಿಯ ಅರಿವನ್ನು ಮೂಡಿಸಿದ್ದರು ಎಂಬುದನ್ನು ತೋರಿಸಿದ್ದಾರೆ. 
ಒಮ್ಮೆ ಮನೆಯ ಹಿಂಭಾಗಕ್ಕೆ ಬೆಂಕಿ ಬಿದ್ದಿತು. ಎಚ್ಚರಗೊಂಡ ಪುಟ್ಟು ತನ್ನ ಪುಸ್ತಕಗಳನ್ನೆಲ್ಲಾ ಹೊರಗೆ ತೆಗೆದುಕೊಂಡು ತಾನು ಮನೆಯ ಹೊರ ಬಂದು ಕೂರುತ್ತಾನೆ. ಆದರೆ ಎಚ್ಚರಗೊಂಡ ಮಾಧವ ಮೊದಲು ತಾಯಿ ಮಗುವನ್ನು ಹೊರಗೆ ಕರೆದುಕೊಂಡು ಬರುತ್ತಾನೆ. ಹಿಂದೆ ತಂದೆ ಮಲಗಿರುವುದನ್ನು ತಿಳಿದು ಬೆಂಕಿಯನ್ನು ಲೆಕ್ಕಿಸದೆ ಒಳ ನುಗ್ಗಿ ತಂದೆಯನ್ನು ಹೊರ ತರುತ್ತಾನೆ. ಪುಟ್ಟುವನ್ನು ಕಾಣದೆ ತಾಯಿ ಪುಟ್ಟು ಒಳಗಿರಬಹುದು ಎಂದಳು. ಪುನಃ ಒಳ ನುಗ್ಗಿ ಪುಟ್ಟುವನ್ನು ಹುಡುಕುತ್ತಿರಬೇಕಾದರೆ ಹೊರ ಬಂದ ತಾಯಿ ಪುಟ್ಟುವನ್ನು ಕಂಡು " ಮಾಧು ಪುಟ್ಟು ಇಲ್ಲೇ ಇದ್ದಾನೆ ನೀನು ಹೊರಗೆ ಬಾ" ಎಂದು ಕೂಗಿದಳು. ಅಷ್ಟರಲ್ಲಿ ಗದ್ದಲದಿಂದ ಅಕ್ಕಪಕ್ಕದವರು ಹೊರ ಬಂದು ಮೂರ್ಛಿತನಾಗಿದ್ದ ಮಾಧವನನ್ನು ಹೊರ ತಂದು ಉಪಚರಿಸಿದರು. 
  ಶಾಸ್ತ್ರಿ "ನೋಡಿ ನಿಮ್ಹುಡುಗನ ಧೈರ್ಯ, ಅವನೊಬ್ಬನಿಲ್ಲದಿದ್ದರೆ ನಿಮ್ಮ ಕುಟುಂಬ ನಾಶವಾಗುತ್ತಿತ್ತು. ಆದ್ದರಿಂದಲೇ ಸ್ವಾಮಿ 'ಟೊಳ್ಳು ಟೊಳ್ಳೇ, ಗಟ್ಟಿ ಗಟ್ಟಿನೇ' ಎಂದು ಈಗಲಾದರೂ ತಿಳಿಯಿತಾ?" ಎಂದರು.
ಒಟ್ಟಾರೆ ಓದು ವಿದ್ಯೆಯೇ ಮುಖ್ಯವಲ್ಲ ಮನುಜರಲ್ಲಿ ಮಾನವೀಯತೆ, ಸಹಾಯ ಮಾಡುವ ಗುಣವಿರಬೇಕು. ಒಂದೇ ಮನೆಯಲ್ಲಿ ಹಿರಿಯಣ್ಣಯ್ಯನಿಂದ ಕಲಿತ ಪುಟ್ಟುವಿನ ಹಾಗು ಭಾಗೀರಥಮ್ಮ ಬೆಳೆಸಿದ ಮಾಧವನ ಸ್ವಭಾವದಲ್ಲಿ  ಎಷ್ಟು ವ್ಯತ್ಯಾಸವಿದೆ. ಸ್ವಾರ್ಥಿಯಾದ ಪುಟ್ಟು ಬೆಂಕಿಯ ಘಟನೆಯಲ್ಲಿ ತನ್ನೊಬ್ಬನನ್ನೇ ರಕ್ಷಿಸಿಕೊಂಡನು. ಆದರೆ ಮಾಧು ತನ್ನ ಕುಟುಂಬವನ್ನು  ಉಳಿಸಿಕೊಂಡನು. ಹೀಗೆ "ಮನೆಯೇ ಮೊದಲ ಪಾಠಶಾಲೆ ಜನನಿಯೇ ಮೊದಲ ಗುರು" ಎಂಬಂತೆ ಅಮ್ಮನಿಂದ ಕಲಿತ ಮಾಧು ನಿಸ್ವಾರ್ಥಿಯಾಗಿ ಮಾನವೀಯತೆ ಮೊದಲಾದ ಜೀವನಮೌಲ್ಯಗಳನ್ನು ಕಲಿತನು. ಹೀಗೆ ಭಾಗೀರಥಮ್ಮನಂತೆ ಶಾಲೆಗಳಲ್ಲೂ ಸಹ ಕೇವಲ ಅಂಕಗಳಿಗೋಸ್ಕರ ಮಕ್ಕಳಿಗೆ ಶಿಕ್ಷಣ ನೀಡದೆ ಅವರಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಸರ್ವಾಂಗೀಣ ಅಭಿವೃದ್ಧಿಯ ಕಡೆ ಗಮನ ಹರಿಸಿದರೆ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂಬ ಸಂದೇಶವನ್ನು "ಟೊಳ್ಳು ಗಟ್ಟಿ  ಅಥವಾ ಮಕ್ಕಳಿಸ್ಕೂಲ್ ಮನೇಲಲ್ವೇ" ಎಂಬ ಈ ನಾಟಕದ ಮೂಲಕ ನೀಡಿದ್ದಾರೆ ಟಿ.ಪಿ.ಕೈಲಾಸಂರವರು.
- ಎಂ.ಎಸ್.ವಿಜಯಲಕ್ಷ್ಮಿ 

ಕಥೆ - ನಮ್ಮನ್ನು ಬದುಕಲು ಬಿಡಿ





ಹುಷಾರಾಗಿ ಹೋಗಿ ಬಾ. ಹೋದ ತಕ್ಷಣ ಫೋನ್ ಮಾಡು. ನಿನ್ನ ಆರೋಗ್ಯದ ಕಡೆ ಗಮನವಿರಲಿ. ಇಲ್ಲಿ ಅಪ್ಪ-ಅಮ್ಮನ ಬಗ್ಗೆ ಯೋಚನೆ ಮಾಡಬೇಡ. ನಾನೆಲ್ಲಾ ನೋಡ್ಕೋತೀನಿ. ನಿನಗೆ ರಜಾ ಬೇಕೆನಿಸಿದರೆ ಫೋನ್ ಮಾಡು. ನಾನು ನಿಮ್ಮ ಬಾಸ್‍ಗೆ ಹೇಳ್ತೀನಿ ರೈಲ್ವೆ ಪ್ಲಾಟ್‍ಫಾರಂನಲ್ಲಿ ಉಷಾಳ ಮಾತು ಸಾಗಿತ್ತು. ಅದೇಕೋಏನೋ ಟ್ರೈನ್‍ನಲ್ಲಿ ಕುಳಿತಿದ್ದ ಹುಡುಗಿ ಕೇವಲ ಹೂಂ, ಉಹೂಂ, ಎಂದು ಉತ್ತರಿಸುತ್ತಿದಳು. ಆಕೆಯ ಮುಖದಲ್ಲಿ ಗೆಲುವಿರಲಿಲ್ಲ. ಒಂದು ರೀತಿ ದುಃಖದ ಛಾಯೆ ಆವರಿಸಿತ್ತು.

ನಾನೇನೋ, ಹೋಗುತ್ತಿದ್ದೇನೆ. ಅಮ್ಮಾ-ಅಪ್ಪಾ ಈ ವಯಸ್ಸಿನಲ್ಲಿ... ಮಧ್ಯದಲ್ಲಿ ಅವಳನ್ನು ತಡೆದ ಉಷಾ, ಸುಮಾ, ನಾನಿದ್ದೀನಲ್ಲ. ಅವರಿಗೀಗ ಉಮಾಳನ್ನು ಕಳೆದುಕೊಂಡದ್ದಕ್ಕಿಂತ, ನಿನ್ನನ್ನು ಈ ಸ್ಥಿತಿಯಲ್ಲಿ ನೋಡುವುದೇ ಕಷ್ಟವಾಗಿದೆ. ನೆನ್ನೆ ಚಿಕ್ಕಮ್ಮ ಏನು ಹೇಳಿದರು ಗೊತ್ತಾ? ಇರುವ ಒಬ್ಬಳನ್ನಾದರೂ ನೋಡಿಕೊಂಡು ಬದುಕಿರೋಣವೆಂದುಕೊಂಡರೆ, ಅವಳೂ ಈ ರೀತಿ ಅನ್ನಾಹಾರ, ನಿದ್ರೆ ಬಿಟ್ಟರೆ ಏನು ಮಾಡೋಣಎಂದು ಕೇಳಿದರು. ನೀನು ಸಂಧ್ಯಾಳ ಮನೆಯಿಂದ ಸಂತೋಷವಾಗಿ ಹಿಂತಿರುಗಿದರೆ ಸಾಕು. ಸುಮಾಳ ಕಣ್ಣಿಂದ ಕಂಬನಿ ಜಾರತೊಡಗಿತು.

ಉಷಾ, ಅಕ್ಕ ನಮ್ಮ ಜೊತೆಗಿಲ್ಲ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ನಾನೇನು ಮಾಡಲಿ?

ಸಮಾಧಾನ ಮಾಡ್ಕೊ. ಚೀಯರ್‍ಅಪ್. ಅಷ್ಟರಲ್ಲಿ ಮೊದಲ ವಿಷಲ್ ಕೇಳಿಸಿತು.

ಎಲ್ಲಾ ಸರಿಯಾಗಿ ಇಟ್ಕೊಂಡಿದೀಯ ತಾನೇ?”  ತಕ್ಷಣ ಉಷಾಳಿಗೆ ಊಟದ ಡಬ್ಬಿ ಸ್ಕೂಟರ್‍ನಲ್ಲಿ ಬಿಟ್ಟು ಬಂದದ್ದು ನೆನಪಾಯಿತು.

ಒಂದ್ನಿಮಿಷ ಊಟದ ಪ್ಯಾಕೆಟ್ ತರ್ತೀನಿ ಎಂದವಳನ್ನು ತಡೆದು, ಬೇಡ ನೀನು ಬರುವಷ್ಟರಲ್ಲಿ ಟ್ರೈನ್ ಬಹಳ ದೂರ ಹೋಗಿರುತ್ತೆ. ಎಂದಳು.

ಮತ್ತೆ, ಈಗ ಏನು ಮಾಡೋದು ಅಲ್ಲೇ ಬಿಸ್ಕತ್ತು, ಹಣ್ಣು ತೆಗೆದುಕೊಟ್ಟರೂ, ತನ್ನ ಮರೆವಿಗೆ ಬೇಸರಿಸಿಕೊಂಡಳು.

ಹೋಗ್ಲಿ ಬಿಡು, ಇಷ್ಟು ಚಿಕ್ಕ ವಿಷಯಕ್ಕೆ ಅಷ್ಟೊಂದು ಬೇಜಾರು ಮಾಡಿಕೋಬೇಡ. ದಾರಿಯಲ್ಲಿ ಏನಾದರೂ ಕೊಂಡ್ಕೊತೀನಿ.

ಹಾಗೆ ಮಾಡು. ಟ್ರೈನ್‍ನಿಂದ ಇಳೀಬೇಕಾದರೆ ಹುಷಾರು. . . . . ಮಾತು ಮುಂದುವರೆಸಲು ಬಿಡೆನೆಂಬಂತೆ ಗಾಡಿ ಚಲಿಸಲಾರಂಭಿಸಿತು. ಉಷಾ ಮರೆಯಾಗುವವರೆಗೂ ಅವಳಿಗೆ ಕೈ ಬೀಸಿ ಸುಮಾ ಹಾಗೆ ಸೀಟಿಗೊರಗಿ ಕುಳಿತಳು. ಕೆಲವೇ ನಿಮಿಷಗಳಲ್ಲಿ ಅವಳು ತನ್ನಿರುವನ್ನು ಮರೆತು ಯಾವುದೋ ಲೋಕಕ್ಕೆ ಹೋದಳು. ಹಳೆಯ ನೆನಪುಗಳು, ಹಳೆಯ ಚಿತ್ರಗಳು.

ಶಾಲೆಗೆ ಹೋಗುವಾಗ ತನ್ನ ಕೈ ಹಿಡಿದು ಕರೆದೊಯ್ಯುತ್ತಿದ್ದ ಅಕ್ಕ, ಪಾಠ ಹೇಳಿಕೊಡುತ್ತಿದ್ದ ಅಕ್ಕ, ತನ್ನ ತುಂಟತನ ತಡೆಯಲಾರದೆ ಕಿವಿ ಹಿಂಡುತ್ತಿದ್ದ ಅಕ್ಕ, ನೋವು ತಾಳಲಾರದೆ ಅತ್ತರೆ ತಬ್ಬಿ ಸಂತೈಸುತ್ತಿದ್ದ ಅಕ್ಕ, ತನ್ನ ಬಾಳಿನುದ್ದಕ್ಕೂ ಜೊತೆಯಾಗಿ ಇರುವಳೆಂದುಕೊಂಡಿದ್ದ ಅಕ್ಕ ಈಗ. . . . .

ಹದಿನೈದು ದಿನಗಳ ಹಿಂದೆ ಸಣ್ಣ ಜ್ವರವೆಂದು ಹಾಸಿಗೆ ಹಿಡಿದವಳು ತನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟೇ ಹೋದಳು. ಅವಳಿಲ್ಲದೆ ತಾನು ಹೇಗೆ ಇರಬಲ್ಲೆ ಎಂಬ ಯೋಚನೆ ಅವಳಿಗೆ ಬರಲಿಲ್ಲವೆ? ಮುಂದೆ ಹೇಗೆ?  ಏನೇನೋ ಹುಚ್ಚು ಆಲೋಚನೆಗಳು.

ರಾತ್ರಿಯಾಯ್ತು, ಮಲಗುವ ಸಮಯ. ಏಳ್ತೀಯಾಮ್ಮಯಾರೋ ಕರೆದಾಗಲೇ ಸುಮಾ ಈ ಲೋಕಕ್ಕೆ ಬಂದದ್ದು. ಸ್ಟೇಷನ್ ಬಂದಿದೆ ಏನಾದರೂ ಕೊಂಡುಕೊಳ್ಳುವುದಿದ್ದರೆ ಕೊಂಡುಕೊ. ಸುಮಾ ಎದ್ದು ದುಡ್ಡು ತೆಗೆದುಕೊಂಡು ಹೊರಡುವಷ್ಟರಲ್ಲಿ ಗಾಡಿ ಚಲಿಸಲಾರಂಭಿಸಿತು.  ತಿನ್ನೊ ತಂಟೆ ತಪ್ಪಿತು ಎಂದುಕೊಂಡು ಮತ್ತೆ ಕುಳಿತುಕೊಂಡಳು.

ಇದನ್ನು ತಗೊಮ್ಮ ಎಲೆಯಲ್ಲಿ ಊಟವನ್ನು ಕೊಟ್ಟರು ಎದುರು ಸೀಟಿನಲ್ಲಿ ಕುಳಿತಾಕೆ. ಆಗಲೇ ಅವಳು ತನ್ನ ಎದುರಿನಲ್ಲಿದ್ದಾಕೆಯನ್ನು ಗಮನಿಸಿದ್ದು. ಸುಮಾರು 30-35 ರ ವಯಸ್ಸಿನ ಹೆಂಗಸು.

ನೋಡಿದ ತಕ್ಷಣ ಗೌರವ ಮೂಡುವಂತಿತ್ತು. ಆಕೆಯ ಜೊತೆಗೆ 7-8 ವರ್ಷದ ಹೆಣ್ಣು ಮಗುವಿತ್ತು.

ಬೇಡ ಬಿಡಿ, ನನಗೇನೂ ಹಸಿವಿಲ್ಲ.

ತಗೊಳಮ್ಮ, ನಾಳೆ ಬೆಳಿಗ್ಗೆಯವರೆಗೂ ಏನೂ ಸಿಗುವುದಿಲ್ಲ.

ಮತ್ತೆ ನಿಮಗೆ. . . .

ಹೆಚ್ಚಾಗಿಯೇ ತಂದಿದ್ದೆ. ತಗೊಮ್ಮ ಆಕೆಯ ಒತ್ತಾಯಕ್ಕೆ ಮಣಿಯಲೇಬೇಕಾಯಿತು.

ಊಟವಾದ ನಂತರ ಎಲ್ಲರೂ ಮಲಗಿದರೂ ಸುಮಾಳಿಗೆ ನಿದ್ರೆ ಬರಲಿಲ್ಲ. ಯೋಚನೆಗಳ ಮಧ್ಯದಲ್ಲಿ ಯಾವಾಗ ನಿದ್ರೆ ಬಂದಿತೊ. ಎಚ್ಚರವಾದದ್ದು ಎದುರು ಸೀಟಿನಾಕೆಯ ದನಿ ಕೇಳಿದಾಗಲೇ.

ಕಾಫಿ ಬಂದಿದೆ ತಗೋತೀಯೇನಮ್ಮ? ಕೆಳಗಿಳಿದು ಮುಖ ತೊಳೆದುಕೊಂಡು ಬಂದು ಕಾಫಿ ಕಪ್ಪನ್ನಿಡಿದಳು. ಹಾಗೆ ಮಾತುಕತೆ ಶುರುವಾಯಿತು. ಆಕೆಯ ಆತ್ಮೀಯತೆಗೆ ಸೋತು ತನ್ನ ಬಗ್ಗೆ, ತನ್ನಕ್ಕನ ಸಾವಿನ ಬಗ್ಗೆ, ಈಗ ಹೋಗುತ್ತಿರುವ ಗೆಳತಿಯ ಬಗ್ಗೆ ಹೇಳಿದಳು. ಅವರಿಗೆ ತಾವಿಬ್ಬರೂ ಹೋಗುತ್ತಿರುವ ಸ್ಥಳ ಒಂದೇ ಎಂಬುದು ತಿಳಿಯಿತು.

ಸುಮಾಳಿಗೆ ಆಕೆಯ ಬಗ್ಗೆ ಮಾತ್ರ ಸಂಪೂರ್ಣವಾಗಿ ತಿಳಿಯಲಾಗಲಿಲ್ಲ. ಆಕೆ ಹೇಳಿದ್ದಿಷ್ಟೆ. ತಾನು ಸ್ವಂತವಾಗಿ ಯಾವುದೋ ಉದ್ಯೋಗ ಮಾಡುತ್ತಿರುವುದಾಗಿ, ಕೆಲಸದ ಕಾರಣದಿಂದಾಗಿ ಹೀಗೆ ಓಡಾಡುತ್ತಿರಬೇಕೆಂದು ತಿಳಿಸಿದರು. ಆ ಮಗುವಿನ ತಂದೆಯ ಬಗ್ಗೆ ಕೇಳಿದಾಗ ಆತನಿಲ್ಲಎಂದಷ್ಟೇ ಹೇಳಿದರು. ಅದರ ಅರ್ಥವೇನೋ? ಸುಮಾ ಮತ್ತೇನೂ ಕೇಳಲೂ ಇಲ್ಲ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಇಲ್ಲ.

ತನ್ನ ಯೋಚನೆಗಳಲ್ಲೇ ಮುಳುಗಿರುತ್ತಿದ್ದ ಸುಮಾಗೆ ಲಕ್ಷ್ಮಿ ತನ್ನ ಮಗುವಿನ ಬಗ್ಗೆ ವಹಿಸುತ್ತಿದ್ದ ಕಾಳಜಿಯನ್ನು ಕಂಡು ತನ್ನಕ್ಕನ ನೆನಪೇ ಆಗುತ್ತಿತ್ತು. ಲಕ್ಷ್ಮಿ ಸುಮಾಳೊಡನೆ ಮಾತನಾಡುವಾಗಲೂ ಅದೇ ವಾತ್ಸಲ್ಯ ಕಂಡುಬರುತ್ತಿತ್ತು. ಬಹಳ ಬೇಗ ಸುಮಾ ಲಕ್ಷ್ಮಿಯೊಡನೆ ಹೊಂದಿಕೊಂಡುಬಿಟ್ಟಳು, ಬಹುಶಃ ಲಕ್ಷ್ಮಿಯಲ್ಲಿ ತನ್ನಕ್ಕನನ್ನೇ ಕಂಡಳೋ ಏನೋ!

ಮಧ್ಯಾಹ್ನ ಮಲಗಿ ಎದ್ದಾಗ ಮೈ ಬಿಸಿಯಾಗಿದೆ ಎನಿಸಿತು ಸುಮಾಗೆ. ಅವಳ ಕಣ್ಣು ಕೆಂಪಗಿರುವುದನ್ನು ಗಮನಿಸಿ ಲಕ್ಷ್ಮಿ ಅವಳ ಹಣೆಯ ಮೇಲೆ ಕೈ ಇಟ್ಟು, ಅಯ್ಯೋ, ಜ್ವರ ಬಂದಿದೆಯಲ್ಲಾ ಎಂದು ಎಲ್ಲಾ ಕಡೆ ಮಾತ್ರೆಗಾಗಿ ಹುಡುಕಾಡಿ ಬಂದರು. ಕೊನೆಗೆ 2-3 ಸ್ಟೇಷನ್‍ಗಳಾದ ನಂತರ ಮಾತ್ರೆ ದೊರಕಿದ ಮೇಲೆ0iÉುೀ ಅವರಿಗೆ ತೃಪ್ತಿ.

ಸಂಜೆ ಸುಮಾ ಮುಖ ತೊಳೆದುಕೊಂಡು ಬರಲು ಹೋದಾಗ ಪಕ್ಕದ ಕೂಪೆಯಲ್ಲಿದ್ದವರು ಕರೆದರು. ಆಕೆ ನಿನಗೇನಾಗಬೇಕಮ್ಮಾ?

ಹೀಗೆ ಟ್ರೈನಿನಲ್ಲಿ ಪರಿಚಿತರಾದರು.

ಹಾಗಿದ್ದರೆ ಹುಷಾರಮ್ಮಾ. ಅವಳಿಂದ ದೂರವಿರು.

ಏಕೆ?

ಅಯ್ಯೋ ಅವಳು ಅದೆಲ್ಲೋ ಇದ್ದು ಬಂದವಳಂತಮ್ಮ. ನೀನು ಮರ್ಯಾದಸ್ಥರ ಮನೆಯವಳಂತೆ ಕಾಣ್ತೀಯಾ. ಅದಕ್ಕೇ, ಹೇಳ್ತಿದ್ದೀನಿ.

ಸುಮಾಗೆ ಎಲ್ಲಾ ಅಯೋಮಯವಾಗಿ ಕಂಡಿತು. ನೀನು ಬಹಳ ಅಮಾಯಕಳಂತೆ ಕಾಣ್ತೀಯಾ. ಅವಳು ನನಗೆ ಚೆನ್ನಾಗಿ ಗೊತ್ತು. ನಮ್ಮ ಊರೇ ಅವಳದು. ಬೊಂಬಾಯಲ್ಲಿ ಅದೇನೋ ರೆಡ್ ಲೈಟ್ ಏರಿಯ ಅಂತಾರಲ್ಲ ಅಲ್ಲಿದ್ದು ಬಂದಿರೋಳು. ಹೋಗ್ಲಿ ಬಿಡು. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತಾ ನಮಗ್ಯಾಕೆ? ಆದ್ರೂ ನೀನು ಹುಷಾರಮ್ಮ.

ಆಘಾತವಾಯಿತು ಸುಮಾಗೆ. "ಛೇ, ಈಕೆಯನ್ನೇ ತಾನು ತನ್ನ ಅಕ್ಕನೆಂದು ಪರಿಗಣಿಸಿದ್ದು” ಅಸಹ್ಯವೆನಿಸಿತು. ಸೀಟಿನಲ್ಲಿ ಹೋಗಿ ಕೂರಲು ಇಷ್ಟವಾಗದೆ ಬಾಗಿಲ ಬಳಿ ನಿಂತುಕೊಂಡಳು.

ಎಂತೆಂಥವರು ಇರ್ತಾರೆ. ಎಷ್ಟು ಹುಷಾರಾಗಿ ಇದ್ದರೂ ಸಾಲದು. ಬಹುಶಃ ಇದಕ್ಕೇ ಏನೋ ಆಕೆ ಆ ಮಗುವಿನ ತಂದೆಯ ಬಗ್ಗೆ ಹಾರಿಕೆ ಉತ್ತರ ಕೊಟ್ಟಿದ್ದು ಎಂದಿತು ಒಂದು ಮನಸ್ಸು. ಆದರೆ ಇನ್ನೊಂದು ಮನಸ್ಸು, ಏನು ಕಷ್ಟವಿತ್ತೋ ಏನೋ, ಯಾವ ಹೆಣ್ಣೂ ಸಹ ತಾನಾಗೇ ಆ ನರಕಕ್ಕೆ ಹೋಗಲಾರಳು ಎಂದಿತು. ಏನೇ ಆಗಲಿ, ನೀನು ದೂರವಿರು ಎಂದಿತು ಮತ್ತೊಂದು ಮನಸ್ಸು. ಈ ದ್ವಂದ್ವದಲ್ಲಿ ಅದೆಷ್ಟು ಸಮಯ ಕಳೆಯಿತೋ.

ಲಕ್ಷ್ಮಿಯ ದನಿ ಕೇಳಿದಾಗಲೇ ಸುಮಾ ಈ ಲೋಕಕ್ಕೆ ಬಂದದ್ದು. ಜ್ವರ ಇದೆ ಗಾಳಿಗೆ ನಿಂತಿದ್ದೀಯಲ್ಲಮ್ಮಾ?

ಸ್ವಲ್ಪ ಸಮಯದ ಮುಂಚೆ ಮಧುರವೆನಿಸಿದ್ದ ಆ ಸ್ವರ ಈಗ ಕರ್ಕಶವೆನಿಸಿತು. ನೀವು ಹೋಗಿ, ಆಮೇಲೆ ಬರ್ತೀನಿ ಎಂದಷ್ಟೇ ಹೇಳಿದಳು.

ಸ್ವಲ್ಪ ಸಮಯದ ನಂತರ ಸುಮಾ ತನ್ನ ಕೂಪೆಗೆ ಹೋದಳು. ತಗೋಮ್ಮಾ, ಊಟ ಮಾಡು. ಈ ಮಾತ್ರೆ ತೆಗೆದುಕೊ

ನನಗೆ ಬೇಡ ಎಷ್ಟೇ ಮೃದುವಾಗಿ ಉತ್ತರ ನೀಡಬೇಕು ಎಂದುಕೊಂಡರೂ ಅವಳಿಗೆ ಅದು ಸಾಧ್ಯವಾಗಲಿಲ್ಲ.

ಲಕ್ಷ್ಮಿ ಸೂಕ್ಷ್ಮ ಸ್ವಭಾವದವರು. ಏನಮ್ಮಾ? ಏಕೆ ಹೀಗಿದ್ದೀಯಾ?””

ಏನು ಮಾಡುವುದೆಂದು ತಿಳಿಯದೆ ಪಕ್ಕದ ಕೂಪೆಯಾಕೆ ಹೇಳಿದ್ದನ್ನು ಹೇಳಿದಳು. ಮನದ ಮೂಲೆಯಲ್ಲಿ ಆಕೆ ಇದನ್ನು ಸುಳ್ಳೆಂದು ಹೇಳಲಿ ಎಂಬ ಭಾವನೆಯಿತ್ತು. ಆದರೆ ಲಕ್ಷ್ಮಿಯ ಉತ್ತರ ಕೇಳಿ ದಂಗಾದಳು ಸುಮಾ.

ಹೌದಮ್ಮಾ, ಆಕೆ ಹೇಳಿದ್ದು ನಿಜ. ಆದರೆ ಕಾರಣ ಏನೆಂದರೆ. . . .. . . .”“ಸಾಕು ನಿಲ್ಲಿಸಿ ಪ್ಲೀಸ್. ಸುಮಾ ಏನನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇವಳ ಪರಿಸ್ಥಿತಿ ಕಂಡು ಲಕ್ಷ್ಮಿ ಮೌನವಹಿಸಿದಳು.

ಸುಮಾಳ ಮನಸ್ಸು ಕಠಿಣವಾಗಿ ಬಿಟ್ಟಿತ್ತು. ಛೇ, ಇಷ್ಟು ಬಹಿರಂಗವಾಗಿ ಒಪ್ಪಿಕೊಳ್ಳುವ ಈಕೆ ಎಂತಹ ಹೆಣ್ಣು?

ಆ ರಾತ್ರಿ ಸುಮಾ ಲಕ್ಷ್ಮಿಯಿಂದ ಊಟವನ್ನು ತೆಗೆದುಕೊಳ್ಳಲಿಲ್ಲ. ಎಷ್ಟೇ ಒತ್ತಾಯ ಮಾಡಿದರೂ ಔಷಧಿ ತೆಗೆದುಕೊಳ್ಳಲಿಲ್ಲ. ಸುಮಾ ಲಕ್ಷ್ಮಿಯ ಎಲ್ಲ ನೆರವನ್ನು ತಿರಸ್ಕರಿಸಿದ್ದಳು.

ಆಕೆ ಕಂಬನಿ ತುಂಬಿದ ಕಣ್ಣುಗಳಿಂದಲೇ ಸುಮಾಳನ್ನು ನೋಡುತ್ತಾಸುಮಾ, ದಯವಿಟ್ಟು ಈ ಔಷಧಿ ತೆಗೆದುಕೊ, ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದರು.

ಏನೇ ಆದರೂ ನಿಮ್ಮ ಸಹಾಯ ಬೇಡ. ನಿಮ್ಮ ಕೈನಿಂದ ಏನೇ ತೆಗೆದುಕೊಂಡರೂ ಅದು ವಿಷವೇ. ಚಾಟಿ ಏಟು ತಿಂದವರಂತೆ ಲಕ್ಷ್ಮಿ ಕುಳಿತುಬಿಟ್ಟರು. ಮುಂದೇನೂ ಮಾತಾಡಲಿಲ್ಲ.

ಸ್ಟೇಷನ್ ತಲುಪುವುದರಲ್ಲಿ ಸುಮಾ ಏರಿದ್ದ ಜ್ವರದಿಂದಾಗಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಳು. ಪೂರ್ಣ ಎಚ್ಚರವಾದಾಗ ಸಂಧ್ಯಾಳ ಮನೆಯಲ್ಲಿದ್ದಳು.

ಸಂಧ್ಯಾ, ನಿನ್ನನ್ನು ಸ್ಟೇಷನ್ನಿಗೆ ಬರಬೇಡವೆಂದಿದ್ದೆ. ಮತ್ತೆ ನಾನೇ ಇಲ್ಲಿಗೆ ಹೇಗೆ ಬಂದೆ?

ಅಬ್ಬಾ, ಈಗ ಬದುಕಿದೆ.  ಈ ಹಾಲು ಕುಡಿದು ಮಾತ್ರೆ ತೆಗೆದುಕೊ. ನಿನ್ನನ್ನು ಇಲ್ಲಿಗೆ ಲಕ್ಷ್ಮಿ ಎಂಬುವವರು ಬಿಟ್ಟು ಹೋದರು.

ಓಹ್ ಆಕೆನಾ?

ಬಹಳ ವಿಚಿತ್ರ ವ್ಯಕ್ತಿ. ನೆನ್ನೆಯಿಂದ ಸುಮಾರು ಹತ್ತು ಬಾರಿಯಾದರೂ ಫೋನ್ ಮಾಡಿದ್ದರು.ಈಗ ಸ್ವಲ್ಪ ಹೊತ್ತಿನ ಮುಂಚೆ ಕೂಡ ಫೋನ್  ಮಾಡಿದ್ದರು. ಯಾರವರು?

ಟ್ರೈನಿನಲ್ಲಿ ಜೊತೆಗೆ ಬಂದವರು.

ಆದರೆ ಅವರ ಕಾಳಜಿ ನೋಡಿದರೆ ಕೇವಲ ಪರಿಚಯದವರು ಅನಿಸಲ್ಲ. ಹಾ! ಮರೆತಿದ್ದೆ, ನಿನಗೊಂದು ಪತ್ರ ಕೊಟ್ಟು ಹೋಗಿದ್ದಾರೆ.

ಪತ್ರ ಓದದಿದ್ದರೆ ಇನ್ನು ಸಂಧ್ಯಾಗೆ ಉತ್ತರ ಕೊಡಬೇಕಲ್ಲ ಎಂದುಕೊಂಡು ಪತ್ರ ಓದಲಾರಂಭಿಸಿದಳು.

ಪ್ರೀತಿಯ ತಂಗಿ, ತಂಗಿ ಎಂದರೆ ನಿನಗೆ ಬೇಸರ ಬರಬಹುದೇನೊ! ಆದರೆ ನನಗೆ ನೀನು ತಂಗಿಯೇ. ಪೂರ್ತಿ ವಿಷಯ ತಿಳಿದುಕೊಳ್ಳದೆ ನೀನು ಆತುರದಲ್ಲಿ ನಿರ್ಧಾರ ತೆಗೆದುಕೊಂಡಿದ್ದೀಯ. ದಯವಿಟ್ಟು ಈ ಪತ್ರವನ್ನು ಪೂರ್ತಿ ಓದಿ ನಂತರವೇ ನಿರ್ಧರಿಸು. ನೀನು ಪ್ರಶ್ನೆ ಕೇಳಿದಾಗ ನಾನು ಸುಳ್ಳು ಹೇಳಬಹುದಿತ್ತು. ಆದರೆ ನಾನು ಕೇಳದೆಯೇ ನೀನು ನನ್ನನ್ನು ಅಕ್ಕಾ ಎಂದು ಕರೆದೆ. ಅದಕ್ಕೆ ಕಟ್ಟುಬಿದ್ದು ನಿನ್ನ ಬಳಿ ಸತ್ಯ ಹೇಳಲು ಹೊರಟೆ.

ಪದವಿ ಮುಗಿಸಿದ ನಂತರ ಹಿರಿಯ ಮಗಳಾದ ನಾನು, ಸಂಸಾರದ ಹೊಣೆ ಹೊತ್ತು ಕೆಲಸ ಹುಡುಕಿಕೊಂಡು ಹೋದಾಗ ಈ ಜಾಲದಲ್ಲಿ ಸಿಲುಕಿ ಬಿದ್ದೆ. ಹೊರಗೆ ಬರಲೆತ್ನಿಸಿದೆ. ಯಾರಿಗಾದರೂ ಬಾಳಬೇಕೆಂಬ ಆಸೆ ಇರುತ್ತದಲ್ಲವೇ? ಆದರೆ ಸೋತೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ.

ಆದರೆ ನನ್ನಂತೆ ಈ ಜಾಲದಲ್ಲಿ ಸಿಕ್ಕುಬಿದ್ದ ಹೆಣ್ಣುಮಗಳೊಬ್ಬಳು ಮಗುವೊಂದಕ್ಕೆ ಜನ್ಮ ನೀಡಿ ಸಾವನ್ನಪ್ಪಿದಳು. ಸಾಯುವ ಮುನ್ನ ಆ ಮಗುವನ್ನು ನನಗೊಪ್ಪಿಸಿದಳು. ನಾನೇನು ಮಾಡಲಿ? ನನಗೇನೊ ನನ್ನ ಜೀವ ಕಳೆದುಕೊಳ್ಳುವ ಅಧಿಕಾರವಿತ್ತು. ಆದರೆ ಆ ಮಗುವಿನ ಜೀವ. . . ..  ಅದಕ್ಕಾಗಿ ದಿನಾ ಸಾಯುತ್ತಾ ಬದುಕುಳಿದೆ."

ಒಂದು ದಿನ ರೈಡ್ ನಡೆಯಿತು. ನಮ್ಮನ್ನು ಹಿಡಿದ ಇನ್ಸ್ಪೆಕ್ಟರ್ ಬಹಳ ಒಳ್ಳೆಯವರು. ನನ್ನ ಕಥೆ ಕೇಳಿ ಆ ಪುಣ್ಯಾತ್ಮ ನನ್ನನ್ನು ಆ ನರಕದಿಂದ ಬಿಡಿಸಿ ಬದುಕಲೊಂದು ದಾರಿ ಮಾಡಿಕೊಟ್ಟರು.

ನೀವು ಬೆಳಕಿನಲ್ಲಿರುವವರು. ನಿಮಗೆ ಕತ್ತಲ ಬಗ್ಗೆ ತಿಳಿಯದು. ನಮ್ಮಂತಹರಿಗೆ ನಿಮ್ಮ ಮಧ್ಯೆ ಇರಲು ಅವಕಾಶ ಕೊಡದಿದ್ದರೂ ಪರವಾಗಿಲ್ಲ, ಅಸಹ್ಯ ಪಡಬೇಡಿ. ಪ್ರತಿ ಜೀವಿಗೂ ಗೌರವಯುತವಾಗಿ ಬದುಕುವ ಆಸೆ ಇರುತ್ತದೆ ಎಂಬುದನ್ನು ಮಾತ್ರ ಯಾವಾಗಲೂ ನೆನಪಿನಲ್ಲಿಟ್ಟುಕೊ. ನೀನು ಎಲ್ಲೇ ಇದ್ದರೂ ನಿನಗೆ ಶುಭವನ್ನೇ ಕೋರುವೆ - ಲಕ್ಷ್ಮಿ.

ಶಾಕ್‍ಗೆ ಒಳಗಾದವಳಂತೆ ಕುಳಿತುಬಿಟ್ಟಳು ಸುಮಾ. ಇನ್ನೊಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣ ತಿಳಿಯದೆ ಅವರ ಬಗ್ಗೆ ತೀರ್ಪು ಕೊಡುವ ನೈತಿಕ ಹಕ್ಕಿದೆಯೇ?- ಪ್ರಶ್ನೆ ಸುಮಾಳ ಮನಸ್ಸಿನಲ್ಲಿ ಮತ್ತೆ ಮತ್ತೆ ಕಾಡತೊಡಗಿತು.

ಒಂದು ಘಂಟೆಯಾದ ನಂತರ ಸಂಧ್ಯಾ ಅಲ್ಲಿಗೆ ಬಂದಾಗಲೂ ಸುಮಾ ಗರಬಡಿದವಳಂತೆ ಹಾಗೆಯೇ ಕುಳಿತಿದ್ದಳು. , ಸುಮಾ, ಏನಾಯ್ತು. ಅಲುಗಾಡಿಸಿದಳು.

ಬೆಚ್ಚಿಬಿದ್ದವಳಂತೆ ಎದ್ದು, ಸಂಧ್ಯಾ, ಈ ಬಾರಿ ಫೋನ್ ಬಂದರೆ ನನಗೇ ಕೊಡು ಎಂದಳು.

ಅಷ್ಟರಲ್ಲಿಯೇ ಹೊರಗಡೆ ಹಾಲ್‍ನಲ್ಲಿ ಫೋನ್ ಗಂಟೆ ಮೊಳಗಿತು. ಸುಮಾ, ಇರು ನಾನೇ ತಂದುಕೊಡ್ತೀನಿ” ಸಂಧ್ಯಾ ಕೂಗುತ್ತಿದ್ದರೂ ಕೇಳಿಸಿಕೊಳ್ಳದೆ ಹಾಲ್‍ನತ್ತ ಓಡಿದಳು ಸುಮಾ.
 - ಸುಧಾ ಜಿ