ಅಂದಿನ ಪ್ರೀತಿಯನ್ನರಸದಿರು, ಪ್ರಿಯತಮೆ, ಇಂದು ನನ್ನಿಂದ |
ನೀನಿರಲು ಸನಿಹ ಬಾಳು ಬೆಳಗುವುದು ಎನಿಸಿತ್ತು, ನನಗೆ,
ನಿನ್ನ ನೋವಿರಲು ಜಗದ ನೋವಿನ ಗೊಡವೆಯೇಕೆ.
ವಸಂತದ ಚೆಲುವು ಸ್ಥಿರವಾಗಿಹುದು ನಿನ್ನ ರೂಪಿನಲಿ,
ನಿನ್ನ ನಯನಗಳ ಹೊರತು ಜಗದಲ್ಲೇನಿಹುದು ಎನಿಸಿತ್ತು ||
ಇಲ್ಲ, ದುಃಖಗಳಿವೆ ಹಲವು ಜಗದೊಳು ವಿರಹದ ಹೊರತು;
ಸಂತಸಗಳಿವೆ ಅನುಭವಿಸಲು ಪ್ರೇಮಿಗಳ ಮಿಲನದ ಹೊರತು.
ಯುಗಯುಗಗಳಲ್ಲೂ ಹೆಣೆದ ಕರಾಳ ಕತ್ತಲೆಗಳ ಜಾಲವಿದೆ;
ಬಜಾರಿನಲಿ, ಬೀದಿಯಲಿ ಬಿಕರಿಗಿವೆ ಮನುಷ್ಯ ದೇಹಗಳು ||
ಧೂಳು, ರಕ್ತದಲಿ ಅದ್ದಿ ತೆಗೆದ ದೇಹಗಳಿವೆ,
ಮಾಗದ ಗಾಯಗಳ ರೋಗಿಷ್ಠ ದೇಹಗಳಿವೆ.
ಕಣ್ಣು ಕೀಳಲಾರೆನಲ್ಲಿಂದ ಸಾಧ್ಯವಿಲ್ಲ ನನ್ನಿಂದ
ನಿಜ, ನಿನ್ನ ಚೆಲುವು ಬಲು ಸೊಗಸು ಅಂದಿನಂತೆ; ||
ಆದರೂ ಪ್ರೇಮಿಗಳ ವಿರಹದ ಹೊರತು
ನೂರೆಂಟು ನೋವಿಹುದು ಈ ಜಗದಲಿ
ಸಂತಸಗಳಿವೆ ಸಾವಿರ ಅನುಭವಿಸಲು
ಪ್ರೇಮಿಗಳ ಮಿಲನದ ಹೊರತೂ ||
ಅಂದಿನ ಪ್ರೀತಿಯನ್ನರಸದಿರು, ಪ್ರಿಯತಮೆ, ಇಂದು ನನ್ನಿಂದ ||
- ಎಸ್.ಎನ್.ಸ್ವಾಮಿ
ಮೂಲ: ಫೈಜ್ ಅಹಮದ್ ಫೈಜ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ