Pages

ಅನುವಾದಿತ ಆತ್ಮಚರಿತ್ರೆ - ಕೆಲವು ನೆನಪುಗಳು - ಪ್ರೀತಿಲತಾ ವದ್ದೇದಾರ್


(ಪ್ರೀತಿಲತಾ ವದ್ದೇದಾರ್ - ಅಗ್ನಿಯುಗದ ಪ್ರಥಮ ಮಹಿಳಾ ಹುತಾತ್ಮಳ 
ಕಡೆಯ ಸಂದೇಶದ ಆಯ್ದ ಭಾಗಗಳನ್ನು ಕೆಳಗೆ ನೀಡಲಾಗಿದೆ)

ಅಂದು 1930, ಏಪ್ರಿಲ್ 19ರ ಬೆಳಿಗ್ಗೆ ... ನಾನು ಚಿತ್ತಗಾಂಗ್ ಧೀರ ಚೇತನಗಳ ಅಮೋಘ ಕೆಲಸಗಳನ್ನು (ಅದರ ಹಿಂದಿನ ರಾತ್ರಿ) ಕೇಳಿದ ದಿನ. ಈ ಮಹಾಚೇತನಗಳ ಬಗ್ಗೆ ನನ್ನ ಹೃದಯದ ತುಂಬಾ ಮೆಚ್ಚುಗೆಯು ತುಂಬಿತು. ... ಜಲಾಲಾಬಾದ್‍ನ ಹುತಾತ್ಮರ ನೆನಪು ನನ್ನ ಹೃದಯದಾಳವನ್ನು ಕಲಕಿತು. ... ಸ್ವಾತಂತ್ರ್ಯದ ಬಲಿಪೀಠದಲ್ಲಿ ಬಲಿದಾನಗೈದ ತಮ್ಮ ಮುದ್ದಿನ ಮಕ್ಕಳನ್ನು ಕಳೆದುಕೊಂಡ ತಾಯಂದಿರ ಕಣ್ಣೀರನ್ನು ಕಂಡೆ.
ರಾಮಕೃಷ್ಣಣ್ಣನು ಅಲಿಪುರ ಕೇಂದ್ರ ಕಾರಾಗೃಹದಲ್ಲಿ ... ಪ್ರತ್ಯೇಕ ಬಂಧಿಖಾನೆಯಲ್ಲಿ ಉಗ್ರ ಶಿಕ್ಷೆಗಾಗಿ ಕಾಯುತ್ತಿದ್ದಾನೆ. ಆತನನ್ನು ನೇಣಿಗೇರಿಸುವ ಮುನ್ನವೇ ಹಲವಾರು ಸಲ ಭೇಟಿಯಾಗಿದ್ದೆ...(1) 
ಆತನ ಘನತೆವೆತ್ತ ಮುಖ, ಮುಕ್ತ ಮಾತುಕತೆ, ಸಾವಿಗೆ ಶಾಂತವಾಗಿ ಶರಣಾಗುವುದು ... ಇದೆಲ್ಲವೂ ನನ್ನ ಮೇಲೆ ಛಾಪನ್ನು ಒತ್ತಿತ್ತು ಮತ್ತು ನಾನು ಈಗಿನಕ್ಕಿಂತ ಹತ್ತು ಪಟ್ಟು ಹೆಚ್ಚು ಮುಂದೆ ಹೋಗಬಲ್ಲವಳಾಗಿದ್ದೆ. ಸಾವಿನ ಬಳಿ ಹೋಗುತ್ತಿರುವ ಈ ದೇಶಪ್ರೇಮಿಯ ಸಹವಾಸವು ನನ್ನ ಜೀವನವನ್ನು ಪರಿಪೂರ್ಣದೆಡೆಗೆ ಕೊಂಡೊಯ್ಯಲು ತುಂಬಾ ಸಹಾಯ ಮಾಡಿತು.
1932 ರಲ್ಲಿ ನನ್ನ ಪರೀಕ್ಷೆಗಳು ಮುಗಿದ ನಂತರ (2) ಹೇಗಾದರೂ ಮಾಸ್ತರ್‍ದಾ (ಸೂರ್ಯ ಸೆನ್) ಭೇಟಿ ಮಾಡಬೇಕೆಂದು ಗಟ್ಟಿ ನಿರ್ಧಾರ ಮಾಡಿಕೊಂಡೆ. ಕೆಲವೇ ದಿನಗಳಲ್ಲಿ ನನ್ನ ಬಹುಕಾಲದ ಬಯಕೆಯು ಪೂರೈಸಿತು; ನಾನು ಪ್ರಸಿದ್ಧ ಚಿತ್ತಗಾಂಗ್ ಕ್ರಾಂತಿಕಾರಿ ಪಕ್ಷದ ಇಬ್ಬರು ಮಹಾಚೇತನಗಳಾದ ಮಾಸ್ತರ್‍ದಾ ಮತ್ತು ನಿರ್ಮಲಣ್ಣರ ಮುಂದೆ ನಿಂತಿದ್ದೆ...
ನಿರ್ಮಲಣ್ಣನ ದುರಂತದ ಅಂತ್ಯದಿಂದ (3) ನನಗೆ ಬಹಳ ಆಘಾತವಾಯಿತು; ನಾನು ಹೆಚ್ಚು ಹೆಚ್ಚು ಹತಾಶಳಾದೆ... ಅದಾದ ಕೆಲವೇ ದಿನಗಳಲ್ಲಿ ನಾನು ನನ್ನ ಪ್ರೀತಿಯ ಮನೆಬಿಟ್ಟು ತನು ಮನಗಳನ್ನು ಅರ್ಪಿಸಿ ಕ್ರಾಂತಿಕಾರಿ ಸಿದ್ಧತೆಗಳಲ್ಲಿ ಮುಳುಗಿದೆ.
ನಾವು ಸ್ವಾತಂತ್ರ್ಯ ಸಂಗ್ರಾಮವನ್ನು ನಡೆಸುತ್ತಿದ್ದೇವೆ.  ಆ ಎಡೆಬಿಡದ ಹೋರಾಟದ ಒಂದು ಭಾಗವೇ ಇಂದಿನ ಕಾರ್ಯಾಚರಣೆ. ಬ್ರಿಟಿಷರು ... ನಮ್ಮ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದಾರೆ; ರಕ್ತ ಹೀರಿದ್ದಾರೆ ಮತ್ತು ಭಾರತದ ಕೋಟ್ಯಾಂತರ ಜನರ, ಕೋಟ್ಯಾಂತರ ಪುರುಷರ ಮತ್ತು ಮಹಿಳೆಯರ ಜೀವನವನ್ನು ಧೂಳಿಪಟ ಮಾಡಿದ್ದಾರೆ. ನಮ್ಮ ಸಂಪೂರ್ಣ ವಿನಾಶಕ್ಕೆ - ನೈತಿಕ, ದೈಹಿಕ, ರಾಜಕೀಯ ಮತ್ತು ಆರ್ಥಿಕ ವಿನಾಶಕ್ಕೆ ಅವರೇ ಸಂಪೂರ್ಣ ಕಾರಣಕರ್ತರು; ಹೀಗೆ ಅವರು ನಮ್ಮ ದೇಶದ ಹೀನ ಶತ್ರುವೆಂದು ಸಾಬೀತು ಮಾಡಿದ್ದಾರೆ ಮತ್ತು ನಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವ ಹಾದಿಯಲ್ಲಿ ದೊಡ್ಡ ಅಡೆತಡೆಯಾಗಿದ್ದಾರೆ ... ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ನಡೆಯುವ ಹೋರಾಟದ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನು ಹೇಗಾದರೂ ಮಾಡಿ ಕಿತ್ತೆಸೆಯಲು ನಾವು ಸಿದ್ದರಿರಬೇಕು.
ಬಹುಶಃ ನನ್ನ ದೇಶ ಬಾಂಧವರಿಗೆ ಸ್ವಲ್ಪ ವಿವರಣೆ ಕೊಡಬೇಕೇನೊ. ಇನ್ನೂ ನಮ್ಮ ದೇಶದ ಎಷ್ಟೋ ಜನರು ಭಾರತೀಯ ನಾರಿಯ ಅತ್ಯುತ್ತಮ ಸಂಪ್ರದಾಯವಿರುವ ಕುಟುಂಬದಿಂದ ಬಂದ ಹೆಣ್ಣುಮಗಳೊಬ್ಬಳು ಮಾನವ ಜೀವಗಳನ್ನು ಹತಗೈಯುವಂತಹ ಕೆಲಸವನ್ನು ಹೇಗೆ ಮಾಡಲು ಸಾಧ್ಯವೆಂದು ದಿಗ್ಮೂಢರಾಗಬಹುದು, ಅದೇ ದೊಡ್ಡ ದುರಂತ. ದೇಶಕ್ಕಾಗಿ ಹೋರಾಡುವಾಗ ಗಂಡು ಹೆಣ್ಣೆಂಬ ಭೇದ ಏಕಿರಬೇಕೋ, ನನಗಂತೂ ಅರ್ಥವಾಗುವುದಿಲ್ಲ ... ಸಶಸ್ತ್ರ ಬಂಡಾಯಕ್ಕೆ ... ಸಂಬಂಧಪಟ್ಟಂತೆ ಹೇಳುವುದಾದರೆ ... ಅದೊಂದು ವಿನೂತನ ವಿಧಾನ. ಅದನ್ನು ಹಲವಾರು ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಳಲಾಗಿದೆ ಮತ್ತು ಅದರಲ್ಲಿ ನೂರಾರು ಹೆಣ್ಣುಮಕ್ಕಳು ಭಾಗವಹಿಸಿದ್ದಾರೆ ... ಇನ್ನು ಸಾಮಥ್ರ್ಯದ ವಿಷಯಕ್ಕೆ ಬಂದರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಕಡಿಮೆ ಸಮರ್ಥರು ಹಾಗೂ ಅಬಲೆಯರೆಂದೇ ಯೋಚಿಸುವುದು ಎಷ್ಟು ಅನ್ಯಾಯವಲ್ಲವೇ? ಈ ತಪ್ಪು ತಿಳುವಳಿಕೆ ಹೋಗುವ ಸಮಯ ಬಂದಿದೆ...
ತಾವು ಇನ್ನು ಮುಂದೆ ಹಿಂದೆ ಬೀಳುವುದಿಲ್ಲ; ಎಲ್ಲಾ ಕಾರ್ಯಗಳಲ್ಲೂ, ಅದು ಎಷ್ಟೇ ಅಪಾಯಕಾರಿಯಾಗಿರಲಿ, ಕಷ್ಟಕರವಾಗಿರಲಿ ತಮ್ಮ ಸೋದರರ ಜೊತೆಜೊತೆಯಲ್ಲೇ ನಿಲ್ಲುತ್ತೇವೆಂದು ಹೆಣ್ಣುಮಕ್ಕಳು ನಿರ್ಧರಿಸಿದ್ದಾರೆ. ನನ್ನ ಸೋದರಿಯರು, ತಾವು ಅಬಲೆಯರಲ್ಲ ಮತ್ತು ಎಲ್ಲಾ ಅಪಾಯಗಳನ್ನು, ಕಷ್ಟಗಳನ್ನು ಎದುರಿಸಿ ನಿಲ್ಲಲು ತಯಾರಾಗುತ್ತಾರೆ ಮತ್ತು ಸಾವಿರಾರು ಸಂಖ್ಯೆಯಲ್ಲಿ ಕ್ರಾಂತಿಕಾರಿ ಚಳುವಳಿಗೆ ಸೇರಿಕೊಳ್ಳುತ್ತಾರೆ ಎಂದು ಮನಃಪೂರ್ವಕವಾಗಿ ಆಶಿಸುತ್ತೇನೆ.
* * * * *

1 ಕಾಮ್ರೇಡ್ ಕಾಲಿಪದ ಚಕ್ರವರ್ತಿ ಜೊತೆ ಸೇರಿಕೊಂಡು ರಾಮಕೃಷ್ಣ ಬಿಶ್ವಾಸ್, ಐಜಿಪಿ ಕ್ರೆಗ್ ಎಂದು ತಪ್ಪಾರ್ಥ ಮಾಡಿಕೊಂಡು ಪೊಲೀಸ್ ಇನ್ಸ್‍ಪೆಕ್ಟರ್ ತಾರಿಣಿ ಚರಣ ಮುಖರ್ಜಿಯನ್ನು ಕೊಂದರು; ಅವರನ್ನು ಬಂಧಿಸಿ, ವಿಚಾರಣೆ ನಡೆಸಿ ನೇಣು ಶಿಕ್ಷೆ ವಿಧಿಸಲಾಯಿತು. ರಾಮಕೃಷ್ಣ ಬಿಶ್ವಾಸ್ ಅಲಿಪುರ ಸೆಂಟ್ರಲ್ ಜೈಲಿನಲ್ಲಿ ಶಿಕ್ಷಿತರ ಸೆಲ್‍ನಲ್ಲಿದ್ದಾಗ ಪ್ರೀತಿಲತಾ ರಾಮಕೃಷ್ಣರ ಸೋದರ ಸಂಬಂಧಿಯೆಂದು ಹೇಳಿಕೊಂಡು ಆಗಾಗ ಭೇಟಿ ಮಾಡುತ್ತಿದ್ದರು. ಅವರ ನಿದರ್ಶನೀಯ ಜೀವನದಿಂದ ಪ್ರೀತಿಲತಾ ಬಹಳ ಸ್ಫೂರ್ತಿ ಪಡೆದಿದ್ದರು.
2 ಪ್ರೀತಿಲತಾ ಬಿ.ಎ. ಕೋರ್ಸನ್ನು ಮುಗಿಸಿದ್ದರು.
3 1932ರ ಜನವರಿ 13ರಂದು ನಡೆದ ಧಲ್‍ಘಾಟ್ ಕದನದಲ್ಲಿ ಗುಂಡಿನೇಟಿನಿಂದ ಜೀವಬಿಟ್ಟರು; ಅದರಲ್ಲಿ ಮಾಸ್ತರ್‍ದಾ (ಸೂರ್ಯ ಸೇನ್) ಮತ್ತು ಪ್ರೀತಿಲತಾ ತಪ್ಪಿಸಿಕೊಂಡರು. ಅಪೂರ್ವ ಸೇನ್ (ಭೋಲಾ) ಕೂಡ ಆ ಕದನದಲ್ಲಿ ಹುತಾತ್ಮರಾದರು.
ಮೂಲ: ಪ್ರೀತಿಲತಾ ವದ್ದೇದಾರ್
ಅನುವಾದ: ಎಸ್.ಎನ್.ಸ್ವಾಮಿ 


ಯುರೋಪಿಯನ್ ಕ್ಲಬ್ ಮೇಲೆ ದಾಳಿ
(ಪ್ರೀತಿಲತಾಳ ದಿನಚರಿಯಿಂದ ಆರಿಸಿಕೊಂಡಿದ್ದು)

ಅಂದು 1932, ಸೆಪ್ಟೆಂಬರ್ 24: ನಮ್ಮ ಕ್ರಾಂತಿಕಾರಿ ನಾಯಕ ಸೂರ್ಯ ಸೆನ್ ಚಿತ್ತಗಾಂಗ್ ಪಟ್ಟಣದ ಹೊರವಲಯದ ಗುಪ್ತಸ್ಥಳದಲ್ಲಿದ್ದರು. ಪಹರ್ತಲಿಯಲ್ಲಿರುವ ಯುರೋಪಿಯನ್ ಕ್ಲಬ್ ಮೇಲೆ ರಾತ್ರಿ ಹೊತ್ತು ದಾಳಿ ಮಾಡಲು ಎಲ್ಲವನ್ನೂ ಸಜ್ಜುಗೊಳಿಸಲಾಗಿತ್ತು. ಈ ಉದ್ದೇಶಕ್ಕಾಗಿಯೇ ಪಕ್ಷದ ಕೆಲವು ಧೈರ್ಯಸ್ಥ ಹಾಗೂ ನಂಬಿಕಸ್ಥ ಸದಸ್ಯರನ್ನು ಆರಿಸಿಕೊಂಡು ತಂಡವನ್ನು ರಚಿಸಲಾಗಿತ್ತು. ಆ ದಿನದ ಎಲ್ಲಾ ಕಾರ್ಯಗಳಿಗೂ ನಾನು ತಂಡದ ನಾಯಕಿಯಾಗಿದ್ದೆ.
ನಾನು ಮಾಸ್ತರ್‍ದಾಗೆ ಹೇಳಿದೆ:
“ಮಾಸ್ತರ್‍ದಾ ಈ ಪ್ರಶಸ್ತವಾದ ದಿನಕ್ಕಾಗಿ ನಾನು ದಿನಗಳನ್ನು, ಗಂಟೆಗಳನ್ನು ಎಣಿಸುತ್ತಿದ್ದೆ. ನೀವು ನನ್ನ ಜೀವನದಲ್ಲಿ ಸುಂದರ ಬೆಳಗನ್ನು ಮೂಡಿಸಿದ್ದೀರಿ; ಅದರಿಂದಾಗಿ ನಿಮ್ಮ ಬಗ್ಗೆ ನನ್ನ ಮನದಲ್ಲಿ ಯಾವಾಗಲೂ ಹೆಚ್ಚುತ್ತಿರುವ ಗೌರವ, ಸದ್ಭಾವನೆ ಮತ್ತು ಕೃತಜ್ಞತೆಗಳನ್ನು ತೆಗೆಯಲು ತಣ್ಣಗಿನ ಸಾವಿನ ಸ್ಪರ್ಶಕ್ಕೂ ಸಹ ಸಾಧ್ಯವಿಲ್ಲ. ಒಬ್ಬ ಅನುಯಾಯಿ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಇಷ್ಟಪಡುವವಳು ನಾನು. ಆದರೆ ನನಗೇಕೆ ನಾಯಕ ಪಟ್ಟ ಕೊಟ್ಟಿದ್ದೀರಿ?”
ಮಾಸ್ತರ್‍ದಾ ಭಾವತುಂಬಿ ಕಂಪಿಸುವ ಆದರೆ ದೃಢವಾದ ಧ್ವನಿಯಲ್ಲಿ ಹೇಳಿದರು:
“ಈವತ್ತು ಬಂಗಾಳದ ಮನೆಗಳಲ್ಲಿ ಧೈರ್ಯಸ್ಥ ಯುವಕರಿಗೆ ಕೊರತೆಯೇನಿಲ್ಲ. ನಮ್ಮ ಯುವಕರು ಬಲಸೊರ್‍ನಿಂದ (1) ಕಲರ್ಪೊಲ್‍ವರೆಗೆ (2) ನಡೆದ ಎಲ್ಲಾ ಧೀರ ಕದನಗಳಲ್ಲಿ ತಮ್ಮ ರಕ್ತದಿಂದ ಈ ನಾಡಿನ ಮಣ್ಣನ್ನು ತೋಯಿಸಿದ್ದಾರೆ. ಬಂಗಾಳಿ ಮನೆಗಳಲ್ಲಿ ತಾಯಂದಿರ ಸಂತತಿಯೆಂದೇ ನೋಡುವ ಮಹಿಳೆಯರೂ ಸಹ ಪರಾಕ್ರಮವನ್ನು ತೋರಿಸಿದ್ದಾರೆ; ಆ ಇತಿಹಾಸವಿನ್ನೂ ದಾಖಲಾಗಬೇಕು. ಆ ಅಧ್ಯಾಯವು ನಿನ್ನ ಯಶಸ್ಸಿನಿಂದ ಅಥವಾ ಆತ್ಮಾಹುತಿಯಿಂದ ರಚಿತವಾಗಲಿ. ನಾನು ಇದನ್ನೇ ಎದುರು ನೋಡುತ್ತಿದ್ದೇನೆ. ನಮ್ಮ ದೇಶದ ಮಹಿಳೆಯರು ಹಿಂದೆ ಬಿದ್ದಿಲ್ಲವೆನ್ನುವುದನ್ನು ಬ್ರಿಟಿಷರು ನೋಡಿ ಕಲಿಯಲಿ, ಜಗತ್ತು ನೋಡಲಿ.”
ಮಾಸ್ತರ್‍ದಾ ಕಿಟಕಿಯಿಂದಾಚೆ ದೂರದ ಕಾಲುದಾರಿಯನ್ನು ಆಗಾಗ್ಗೆ ನೋಡುತ್ತಲೇ ಇದ್ದರು. “ಮಾಸ್ತರ್‍ದಾ, ಯಾರಿಗಾದರೂ ಕಾಯುತ್ತಿರುವಿರಾ?” ಹೊರಗೆ ನೋಡಿಕೊಂಡೇ ಹೇಳಿದರು, “ಹೌದು, ನಿನ್ನ ಕೆಲಸದಲ್ಲಿ ನಿನ್ನ ಜೊತೆ ಹೋಗಬೇಕಾದವರಿಗಾಗಿ ಕಾಯುತ್ತಿದ್ದೇನೆ.”


1. ಆ ಕದನದಲ್ಲಿ ಜತಿನ್ ಮುಖರ್ಜಿ ಹಾಗೂ ಅವನ ಸಂಗಾತಿಗಳು ಪೊಲೀಸರೊಂದಿಗೆ ಕೊನೆಯವರೆಗೂ ಹೋರಾಡಿ ಜೀವ ತೆತ್ತರು.
2.  ಅದರಲ್ಲಿ ಸ್ವದೇಶ್ ರಾಯ್, ಮನೋರಂಜನ್, ದೇಬು ಮತ್ತು ರಜತ್ ಬ್ರಿಟಿಷ್ ಪೊಲೀಸರೊಂದಿಗೆ ನಡೆದ ಭಾರಿ ಕಾಳಗದಲ್ಲಿ ಕೆಳಗುರುಳಿದರು.
* * * * *

ಮೂಲ: ಪ್ರೀತಿಲತಾ ವದ್ದೇದಾರ್
ಅನುವಾದ: ಎಸ್.ಎನ್.ಸ್ವಾಮಿ 

ಕಾಮೆಂಟ್‌ಗಳಿಲ್ಲ: