Pages

ಅನುವಾದ - ಪ್ರಾರ್ಥಿಸುತ್ತಿರುವ ಕೈಗಳು


     
15ನೇ ಶತಮಾನದಲ್ಲಿ, ಜರ್ಮನಿಯ ನ್ಯೂರೆಂಬರ್ಗ್ ಬಳಿಯ ಪುಟ್ಟ ಹಳ್ಳಿ ಒಂದರಲ್ಲಿ 18 ಮಕ್ಕಳಿರುವ ಕುಟುಂಬ ಒಂದಿತ್ತು.  ಈ ದೊಡ್ಡ ಸಂಸಾರದ ಉದರ ಪೋಷಣೆಗಾಗಿ ಈ ಡ್ಯೂರರ್  ಕುಟುಂಬದ ಯಜಮಾನನಾದ ತಂದೆ, ವೃತ್ತಿಯಲ್ಲಿ ಚಿನಿವಾರನಾಗಿದ್ದ, ಪ್ರತಿದಿನ 18 ಗಂಟೆ ದುಡಿಯುತ್ತಿದ್ದ.  ಜೊತೆಗೆ ಅಲ್ಲಿ ಇಲ್ಲಿ ಇತರ ಕೆಲಸಗಳನ್ನೂ ಮಾಡುತ್ತಿದ್ದ.  ಇಂತಹ ದುರ್ಭರ ಪರಿಸ್ಧಿತಿಯಲ್ಲೂ ಆತನ ಆಲ್‍ಬ್ರೆಕ್ಟ್ಟ್ ಡ್ಯೂರರ್ ಮತ್ತು ಆಲ್‍ಬರ್ಟ್ ಡ್ಯೂರರ್ ಎಂಬ ಇಬ್ಬರು ಮಕ್ಕಳಿಗೂ ಒಂದು ಕನಸಿತ್ತು.  ಅವರಿಬ್ಬರಿಗೂ ತಮಗೆ ಕಲೆಯಲ್ಲಿರುವ ಪ್ರತಿಭೆಯನ್ನು ಮುಂದುವರೆಸಿಕೊಂಡು ಹೋಗುವ ಹಂಬಲವಿತ್ತು. ಆದರೆ ನ್ಯೂರೆಂಬರ್ಗ್‍ನಲ್ಲಿರುವ ಅಕಾಡೆಮಿಗೆ ತಮ್ಮಲ್ಲಿ ಯಾರನ್ನೂ ಕಳುಹಿಸುವ ಆರ್ಥಿಕ ಶಕ್ತಿ ತಂದೆಯಲ್ಲಿ ಇಲ್ಲ ಎಂಬುದನ್ನು ಇಬ್ಬರೂ ಚೆನ್ನಾಗಿಯೇ ಅರಿತಿದ್ದರು.
  ತಮ್ಮ ಸೋದರ-ಸೋದರಿಯರಿಂದ ತುಂಬಿದ ಹಾಸಿಗೆಯಲ್ಲಿ ಹಲವಾರು ರಾತ್ರಿಗಳ ಸುದೀರ್ಘ ಚರ್ಚೆಗಳ ಬಳಿಕ ಈರ್ವ ಹುಡುಗರೂ ಒಂದು ಒಪ್ಪಂದಕ್ಕೆ ಬಂದರು.  ಅವರೊಂದು ನಾಣ್ಯವನ್ನು ಎತ್ತಿ ಎಸೆದು ಅದೃಷ್ಟ ಪರೀಕ್ಷಿಸುವುದು, ಸೋತವ ಹತ್ತಿರವಿರುವ ಗಣಿಗಳಲ್ಲಿ ದುಡಿಯಬೇಕು, ತನ್ನ ಸಂಪಾದನೆಯಿಂದ ತನ್ನ ಸೋದರನ ಅಕಾಡೆಮಿ ಶಿಕ್ಷಣಕ್ಕೆ ನೆರವಾಗಬೇಕು.  ನಂತರ, ಗೆದ್ದ ಸೋದರ ತನ್ನ ನಾಲ್ಕು ವರ್ಷದ ಶಿಕ್ಷಣದ ಬಳಿಕ ತನ್ನ ಕಲಾಕೃತಿಗಳನ್ನು ಮಾರಿಯೋ ಅಥವಾ ಗಣಿಗಳಲ್ಲಿ ದುಡಿದೋ ಈ ಸೋದರನ ಅಕಾಡೆಮಿ ಶಿಕ್ಷಣಕ್ಕೆ ನೆರವಾಗಬೇಕು.  ಒಂದು ಭಾನುವಾರ ಚರ್ಚ್‍ಗೆ ಹೋಗಿ ಬಂದ ನಂತರ ಅವರು ನಾಣ್ಯ ಎಸೆದು ಅದೃಷ್ಟ ಪರೀಕ್ಷ್ಷಿಸಿದರು.  ಆಲ್‍ಬ್ರೆಕ್ಟ್ಟ್ ಡ್ಯೂರರ್ ಗೆದ್ದು ನ್ಯೂರೆಂಬರ್ಗ್‍ಗೆ ತೆರಳಿದ.
  ಸೋತ ಆಲ್‍ಬರ್ಟ್ ಅಪಾಯಕಾರಿ ಗಣಿಗಳಿಗೆ ತೆರಳಿ ಅಲ್ಲಿ ದುಡಿದು ಮುಂದಿನ 4 ವರ್ಷ ಸೋದರನಿಗೆ ಆರ್ಥಿಕ ನೆರವು ನೀಡಿದ.  ಆಲ್‍ಬ್ರೆಕ್ಟ್ ಅಕಾಡೆಮಿಯಲ್ಲಿ ಬಹಳ ಹೆಸರು ಮಾಡಿದ.  ಅವನ ಕಲಾಕೃತಿಗಳು ಅವನ ಎಷ್ಟೋ ಪ್ರಾಧ್ಯಾಪಕರುಗಳ ಕೃತಿಗಳಿಗಿಂತ ಉತ್ತಮವಾಗಿದ್ದವು.  ಅವನು ಪದವಿ ಪಡೆಯುವ ವೇಳೆಗೆ ಎಷ್ಟೋ ಜನರಿಗೆ ಕಲಾಕೃತಿಗಳನ್ನು ಮಾಡಿಕೊಟ್ಟು ಚೆನ್ನಾಗಿಯೇ ಸಂಪಾದಿಸಲು ಪ್ರಾರಂಭಿಸಿದ್ದ.  ಈ ಯುವ ಕಲಾಕಾರ ತನ್ನ ಹಳ್ಳಿಗೆ ಮರಳಿದಾಗ ಅವನ ವಿಜಯೋತ್ಸವದ ಆಚರಣೆಗಾಗಿ ಇಡೀ ಡ್ಯೂರರ್ ಕುಟುಂಬ ಔತಣಕ್ಕಾಗಿ ಒಗ್ಗೂಡಿತು.  ಸಂಗೀತ-ನಗು ತುಂಬಿ ತುಳುಕಾಡಿದ ಒಂದು ಸುದೀರ್ಘ ಹಾಗೂ ಅವಿಸ್ಮರಣೀಯ ಔತಣದ ಬಳಿಕ ಆಲ್‍ಬ್ರೆಕ್ಟ್ ತನ್ನ ಆಕಾಂಕ್ಷೆಯನ್ನು ಪೂರೈಸಲು ವರ್ಷಗಟ್ಟಲೆ ತ್ಯಾಗ ಮಾಡಿದ ತನ್ನ ಪ್ರಿಯ ಸೋದರನಿಗೆ ಗೌರವ ಸೂಚಿಸಿದ.  ನಂತರ “ಓ ನನ್ನ ಪ್ರಿಯ ಸೋದರ ಆಲ್‍ಬರ್ಟ್, ಇದೀಗ ನಿನ್ನ ಸರದಿ.  ನೀನು ನಿನ್ನ ಕನಸಿನ ಸಾಕಾರಕ್ಕಾಗಿ ನ್ಯೂರೆಂಬರ್ಗ್‍ಗೆ ಹೋಗು.  ನಿನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು” ಎಂದು ನುಡಿದ.  ಆಲ್‍ಬರ್ಟ್ ಕುಳಿತೆಡೆ ಎಲ್ಲರ ಕಣ್ಣುಗಳು ಕಾತರದಿಂದ ನೋಡಿದವು.  ಆದರೆ ಅವನ ಬಿಳುಪೇರಿದ ಮುಖದಲ್ಲಿ ಕಂಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು.  ಅವನು ತನ್ನ ಬಗ್ಗಿಸಿದ ತಲೆಯನ್ನು ಅಲುಗಾಡಿಸುತ್ತಾ, ಬಿಕ್ಕುತ್ತಾ ಮತ್ತೆ ಮತ್ತೆ ಉಚ್ಚರಿಸಿದ “ಇಲ್ಲ, ಇಲ್ಲ, ಇಲ್ಲ”.
  ಕೊನೆಗೆ ಆಲ್‍ಬರ್ಟ್ ಎದ್ದು ಕಣ್ಣೀರನ್ನು ಒರೆಸಿಕೊಂಡ.  ತನ್ನ ಪ್ರಿಯ ಬಂಧುಗಳೆಡೆಗೆ ನೋಡುತ್ತಾ ಮೆಲ್ಲಗೆ ನುಡಿದ “ಇಲ್ಲ ಸೋದರ, ನಾನು ನ್ಯೂರೆಂಬರ್ಗ್‍ಗೆ ಹೋಗಲಾರೆ.  ನನ್ನ ಕಾಲ ಮುಗಿದಿದೆ.  ನೋಡು... ನೋಡು..., ಗಣಿಗಳಲ್ಲಿನ ನಾಲ್ಕು ವರ್ಷಗಳು ನನ್ನ ಕೈಗಳಿಗೆ ಏನು ಮಾಡಿವೆ ನೋಡು! ಪ್ರತಿ ಬೆರಳಿನ ಮೂಳೆಗಳು ಒಮ್ಮೆಯಾದರೂ ಜಜ್ಜಿಹೋಗಿವೆ.  ಇತ್ತೀಚೆಗಂತೂ ನನಗೆ ಕೀಲುರೋಗ ಎಷ್ಟೊಂದು ಬಾಧಿಸುತ್ತಿದೆ ಎಂದರೆ ನನ್ನ ಬಲಗೈಯಿಂದ ನಾನು ಬಟ್ಟೆ ಅಥವಾ ಕಾಗದದ ಮೇಲೆ ಲೇಖನಿ ಅಥವಾ ಬ್ರಷ್‍ನಿಂದ ನವಿರಾದ ಗೆರೆಯನ್ನೆಳೆಯುವುದಿರಲಿ, ನಿನಗೆ ಶುಭಕೋರಲು ಒಂದು ಲೋಟ ವೈನ್ ಅನ್ನು ಸಹ ಹಿಡಿಯಲಾರೆ.  ಇಲ್ಲ ಸೋದರ, ನನ್ನ ಮಟ್ಟಿಗೆ ಇದು ತುಂಬಾ ತಡವಾಗಿದೆ”.
  ಇದು ನಡೆದು ಈಗ 450 ವರ್ಷಗಳಿಗಿಂತ ಹೆಚ್ಚಿನ ಕಾಲ ಸಂದಿದೆ.  ಆಲ್‍ಬ್ರೆಕ್ಟ್ ಡ್ಯೂರರ್‍ರವರ ನೂರಾರು ಅತ್ಯದ್ಭುತ ಚಿತ್ರಗಳು, ರೇಖಾ ಚಿತ್ರಗಳು, ಕಲಾಕೃತಿಗಳು ವಿಶ್ವದ ಎಲ್ಲಾ ಪ್ರಮುಖ ವಸ್ತು ಸಂಗ್ರಹಾಲಯಗಳಲ್ಲಿ ರಾರಾಜಿಸುತ್ತಿವೆ.  ಆದರೆ ಹೆಚ್ಚಿನವರಿಗೆ ಪರಿಚಯವಿರುವುದು ಅವರ ಒಂದೇ ಒಂದು ಕಲಾಕೃತಿ ಮಾತ್ರ.
  ಒಂದು ದಿನ ಆಲ್‍ಬ್ರೆಕ್ಟ್ ಡ್ಯೂರರ್ ರವರು ಆಲ್‍ಬರ್ಟ್‍ರವರ ತ್ಯಾಗಕ್ಕೆ ಅಭಿನಂದನೆಯಾಗಿ, ಅವರ ಗಾಯಗೊಂಡ, ಜಜ್ಜಿಹೋದ ಹಸ್ತಗಳನ್ನು ಒಗ್ಗೂಡಿಸಿ ಬೆರಳುಗಳು ಮೇಲ್ಮುಖವಾಗಿ ಇರುವಂತೆ, ಬಹಳ ಶ್ರಮವಹಿಸಿ ಒಂದು ಚಿತ್ರ ಬರೆದರು.  ಅದನ್ನವರು ಸರಳವಾಗಿ ‘ಕೈಗಳು’ ಎಂದು ಕರೆದರು.  ಆದರೆ ಇಡೀ ವಿಶ್ವ ಈ ಉತ್ಕøಷ್ಟ ಕಲಾಕೃತಿಗೆ ತಲೆದೂಗಿ ಅವರ ಪ್ರೀತಿಯ ಈ ಅಭಿನಂದನೆಗೆ ‘ಪ್ರಾರ್ಥಿಸುತ್ತಿರುವ ಕೈಗಳು’ ಎಂದು ಕರೆಯಿತು.
  ಎಂದಾದರೂ, ನೀವು ಯಾರಾದರೂ ಈ ಹೃದಯಸ್ಪರ್ಶಿ ಸೃಷ್ಟಿಯನ್ನು ನೋಡಿದರೆ ಮತ್ತೊಮ್ಮೆ ಅದನ್ನು ಅವಲೋಕಿಸಿ.  ಯಾರೂ ಸಹ, ಯಾರೂ ಸಹ ಒಬ್ಬರೇ ಏನನ್ನೂ ಮಾಡಲಾರರು ಎಂಬುದನ್ನು ನಿಮಗದು ನೆನಪಿಸುತ್ತಿರಲಿ.   
[ಅಂತರಜಾಲದಲ್ಲಿನ ಒಂದು ಲೇಖನದ ಅನುವಾದ]


                -   ಡಾ. ಸುಧಾ ಕಾಮತ್      

ಸಮಾಜ ಸುಧಾರಕರು - ‘ಮಹಾತ್ಮ’ ಜ್ಯೋತಿಭಾ ಫುಲೆ




ಭಾರತೀಯ ಹಿಂದೂ ಪಾರಂಪರಿಕ ಧರ್ಮ ಇಂದೂ ಸಹ ಹೆಣ್ಣು ಗಂಡು ಎಂಬ ತಾರತಮ್ಯ ಹೊಂದಿರುವುದು ಎಲ್ಲರಿಗೂ ತಿಳಿದ ವಿಷಯವೇ. ಪರಿಸ್ಥಿತಿ 21ನೇ ಶತಮಾನದಲ್ಲೂ ಹೀಗಿರುವಾಗ 19ನೇ ಶತಮಾನದಲ್ಲಿ ಹೆಣ್ಣಿನ ಬಗ್ಗೆ ಸಮಾಜದ ಭಾವನೆ ಏನಿತ್ತು ಎಂಬುದನ್ನು ತಿಳಿಯುವುದೇನೂ ಕಷ್ಟವಲ್ಲ. ಸಮಾಜದಲ್ಲಿ ಪುರುಷರಿಗೆ ಹೆಚ್ಚು ಒತ್ತುಕೊಡಲಾಗಿತ್ತು. ಇದಕ್ಕೆ ಒತ್ತಾಸೆಯಾಗಿ ಪುರಾತನ ಧರ್ಮಗ್ರಂಥಗಳೂ ಅದನ್ನೇ ಸಾರಿ ಹೇಳುತ್ತಿದ್ದವು. ಸಮಾಜದಲ್ಲಿ ಲಿಂಗಭೇದ ಜಾತಿಬೇದ. ಹೀಗೆ ಹತ್ತಾರು ಸಾಮಾಜಿಕ ಜಾಡ್ಯಗಳಿಂದ ತುಂಬಿಹೋಗಿತ್ತು. ಇದಕ್ಕೆ ಅಂತ್ಯ ಹಾಡಿ ಕ್ರಾಂತಿ ಮಾಡುವ ವ್ಯಕ್ತಿಗಳು ಆ ನಿಟ್ಟಿನಲ್ಲಿ ತಮ್ಮದೇ ಕ್ರಾಂತಿಕಾರಿ ಮನೋಧರ್ಮದಿಂದ ಸಮಾಜದ ಅನಿಷ್ಟ ಪದ್ಧತಿಗಳಿಗೆ ಪೂರ್ಣ ವಿರಾಮವನ್ನಿಟ್ಟು, ಹೆಣ್ಣುಮಕ್ಕಳ ಸಮಾನತೆ, ಶಿಕ್ಷಣಕ್ಕಾಗಿ ಹೋರಾಡಿದರು. 
ಅವರಲ್ಲಿ ಮಹಾತ್ಮ ಜ್ಯೋತಿಭಾ ಫುಲೆಯವರು ಮುಂಚೂಣಿಯಲ್ಲಿದ್ದಾರೆ. ಅವರು ಚಿಂತಕರು, ಸಮಾಜ ಸುಧಾರಕರು, ಕ್ರಿಯಾಶೀಲರು ಮತ್ತು ಕ್ರಾಂತಿಕಾರಿಗಳಾಗಿದ್ದರು. ಅವರ ಹೋರಾಟ ಎಲ್ಲಾ ಕ್ಷೇತ್ರಗಳಲ್ಲೂ ಹರಡಿತ್ತು, ಮುಖ್ಯವಾಗಿ ಶಿಕ್ಷಣ, ಕೃಷಿ, ಜಾತಿ ವ್ಯವಸ್ಥೆಯ ನಾಶ, ಸ್ತ್ರೀ ಮತ್ತು ವಿಧವೆಯರ ಏಳಿಗೆ ಮತ್ತು ಅಸ್ಪೃಶ್ಯತೆಯ ನಿರ್ಮೂಲನೆ.
ತಾವೂ ಕೂಡ ಶೂದ್ರ ಮನೆತನದಲ್ಲಿ ಹುಟ್ಟಿ ಮೇಲ್ವರ್ಗದವರಿಂದ ಅವಮಾನಿತಗೊಂಡರೂ, ಕೊನೆಗೊಂದು ದಿನ ಆ ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದವರಲ್ಲಿ ಮೊದಲಿಗರು. ಇವರು ಏಪ್ರಿಲ್ 11, 1827 ರಲ್ಲಿ, ಪುಣೆಯಲ್ಲಿ ಗೋವಿಂದ್ ರಾವ್ ಮತ್ತು ಚಿಮಣ್‍ಬಾಯಿಯವರ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ತಮ್ಮ ಜಾತಿಯ ಕಾರಣದಿಂದ ತುಂಬಾ ನೋವುಂಡರೂ, ಸಮಜದಲ್ಲಿ ಹೊಸ ಚೈತನ್ಯ ಚಿಲುಮೆಯನ್ನು ಉಂಟು ಮಾಡಲು ಶಿಕ್ಷಣ ಅತಿ ಅಮೂಲ್ಯ ಸಾಧನ ಎಂಬುದನ್ನು ಅರಿತು ಅದನ್ನು ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಹಂಚಿದವರಿವರು. 
ಥಾಮಸ್ ಪೇನ್‍ರವರ “ಮನುಷ್ಯನ ಹಕ್ಕುಗಳು” ಪುಸ್ತಕದಿಂದ ಪ್ರೇರಿತರಾದ ಅವರು ಸಾಮಾಜಿಕ ನ್ಯಾಯದ ಬಗ್ಗೆ ತೀವ್ರ ಕಳಕಳಿಯನ್ನು ಬೆಳೆಸಿಕೊಂಡರು ಮತ್ತು ಭಾರತೀಯ ವರ್ಣ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಸಾಮಾಜಿಕ ಅಸಮಾನತೆಗಳನ್ನು ತೊಡೆದು ಹಾಕುವಲ್ಲಿ ಮಹಿಳೆಯರಿಗೆ ಮತ್ತು ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡುವುದು ಅತ್ಯಂತ ಜರೂರಾದ ಕಾರ್ಯ ಎಂದು ಪರಿಗಣಿಸಿ, ಅದನ್ನು ಸಾಧಿಸಲು ಹೆಜ್ಜೆ ಹಾಕಿದರು.
ಸ್ತ್ರೀಯರ ಸ್ಥಾನಮಾನವನ್ನು ಗಮನಿಸಿದ ಅವರು ಹೆಣ್ಣುಮಕ್ಕಳ ಶಿಕ್ಷಣದ ಹರಡುವಿಕೆಗೆ ಶ್ರಮಿಸಿದರು. ಹೆಣ್ಣುಮಕ್ಕಳ ಶಿಕ್ಷಣ ವ್ಯಾಪಕವಾಗಿ ಹರಡಬೇಕೆಂದರೆ ಮಹಿಳಾ ಶಿಕ್ಷಕರು ಅವಶ್ಯಕ ಎಂಬುದನ್ನು ಮನಗಂಡರು. ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಶಿಕ್ಷಣ ನೀಡಿ ಅವರನ್ನು ಶಿಕ್ಷಕಿಯನ್ನಾಗಿ ಮಾಡಿದರು. 

ಆರಂಭದಲ್ಲಿ ಅವರ ಪ್ರಯತ್ನಗಳಿಗೆ ಹಲವಾರು ವಿಘ್ನಗಳು ಬಂದೊದಗಿದರು, ಅಂತಿಮವಾಗಿ ಜನರಿಗೆ ಹೆಣ್ಣುಮಕ್ಕಳ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾದರು. 1848ರಲ್ಲಿ ತಮ್ಮ ಪತ್ನಿಯ ಜೊತೆಗೂಡಿ ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸಿ, ಸ್ತ್ರೀ ಶಿಕ್ಷಣದ ಇತಿಹಾಸಕ್ಕೆ ಮುನ್ನುಡಿಯನ್ನು ಬರೆದರು. ಇದಕ್ಕಾಗಿ ಅವರು ತಮ್ಮ ಮನೆಯನ್ನು ಬಿಡಬೇಕಾಗಿ ಬಂತು. ಬೇರೆ ಬೇರೆ ವ್ಯಕ್ತಿಗಳಿಂದ ಹಣ ಸಂಗ್ರಹಿಸಿದರು. ನಂತರದ ದಿನಗಳಲ್ಲಿ 18 ಶಾಲೆಗಳನ್ನು ತೆರೆದರು. 
ಇಷ್ಟೆ ಅಲ್ಲದೆ ಸ್ತ್ರೀಯರ ಮೇಲೆ ಅನೇಕ ಕಠೋರ ನಿಬಂದನೆಗಳನ್ನು ಹೇರಲಾಗಿತ್ತು. ವಿಧವೆಯರು ಮರುವಿವಾಹ ಆಗುವಂತಿರಲಿಲ್ಲ. ಅವರು ತಲೆ ಬೋಳಿಸಿಕೊಂಡು ಮನೆಯ ಒಂದು ಮೂಲೆಯಲ್ಲಿರಬೇಕಿತ್ತು. ಇದನ್ನು ವಿರೋಧಿಸಿದ ಫುಲೆಯವರು ಕ್ಷೌರಿಕರನ್ನು ಸಂಘಟಿಸಿ ತಲೆ ಬೋಳಿಸುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದರು. ಜೊತೆಗೆ ವಿಧವಾ ವಿವಾಹಕ್ಕೆ ಒತ್ತು ನೀಡಿ, 1854ರಲ್ಲಿ ವಿಧವಾ ವಿವಾಹ ಮಾಡಿಸಿ ಹೊಸ ದಾಖಲೆ ನಿರ್ಮಿಸಿದರು. 
ಅಂದಿನ ದಿನಗಳಲ್ಲಿ ವಿಧವೆಯರು, ಮುಖ್ಯವಾಗಿ ಬಾಲವಿಧವೆಯರು ತಮ್ಮ ಮನೆಯವರ ಅತ್ಯಾಚಾರಕ್ಕೆ ಬಲಿಯಾಗಿ ಗರ್ಭಿಣಿಯರಾದಾಗ ಅವರನ್ನು ಮನೆಯಿಂದ ಹೊರ ತಳ್ಳಲಾಗುತ್ತಿತ್ತು. ಅವರು ಇದಕ್ಕೆ ಪ್ರತಿಯಾಗಿ “ಬಾಲಹತ್ಯಾ ಪ್ರತಿಬಂಧಕ ಸಂಸ್ಥೆಯನ್ನ್ನು ಸ್ಥಾಪಿಸಿ, ಆ ಬಾಲವಿಧವೆಯರಿಗೆ ಆಶ್ರಯ ನೀಡಿ ಮೇಲ್ವರ್ಗದ ಜನರ ದ್ವೇಷವನ್ನು ಕಟ್ಟಿಕೊಂಡರು. ಬಾಲ್ಯವಿವಾಹದ ವಿರುದ್ಧವಾಗಿಯೂ ಹೋರಾಡಿದರು. ಬಹುಪತ್ನಿತ್ವವನ್ನು ವಿರೋಧಿಸಿದರು. 
ಜಾತಿಪದ್ಧತಿಯ ಪಿಡುಗನ್ನು, ಅಸ್ಪೃಷ್ಯತೆಯನ್ನು ನಿರ್ಮೂಲನ ಮಾಡಲು ಕಂಕಣಬದ್ಧರಾಗಿ 1873ರ ಸೆಪ್ಟೆಂಬರ್ 23ರಂದು “ಸತ್ಯಶೋಧಕ ಸಮಾಜ”ವನ್ನು ಕಟ್ಟಿದರು. ಜಾತಿಪದ್ಧತಿಯ ಪಿಡುಗನ್ನು, ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡಲು ಕಂಕಣಬದ್ಧರಾಗಿ 1873ರ ಸೆಪ್ಟೆಂಬರ್ 23ರಂದು “ಸತ್ಯಶೋಧಕ ಸಮಾಜ”ವನ್ನು ಕಟ್ಟಿದರು. ಅದರ ಮುಖ್ಯ ಉದ್ದೇಶವಿದ್ದದ್ದು ಮೇಲ್ವರ್ಗದ ಜನರಿಂದ ಶೂದ್ರ ಮತ್ತು ಅತಿ-ಶೂದ್ರರ ವಿಮೋಚನೆಯಾಗಿತ್ತು. ಅವರ ಈ ಎಲ್ಲಾ ಹೋರಾಟಗಳಿಗೆ ಮನ್ನಣೆ ನೀಡಿ ಮಹಾರಾಷ್ಟ್ರದ ಜನತೆ ಅವರಿಗೆ 1888ರ ಮೇ 11 ರಂದು “ಮಹಾತ್ಮ” ಎಂಬ ಬಿರುದನ್ನು ನೀಡಿದರು. 

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಮಾನವ ಘನತೆ, ಆರ್ಥಿಕ ನ್ಯಾಯ ಮತ್ತು ಶೋಷಣಾರಹಿತ ಸಮಾಜವನ್ನು ಸ್ಥಾಪಿಸಬೇಕಾದರೆ ಹಳೆಯ, ಅಸಮಾನ, ಶೋಷಾಣಾಯುಕ್ತ ಸಾಮಾಜಿಕ ವ್ಯವಸ್ಥೆಯನ್ನು ಕಿತ್ತೊಗೆಯಬೇಕೆಂದು ಅವರು ದೃಢವಾಗಿ ನಂಬಿದ್ದರು ಮತ್ತು ಅದಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟರು.
ಉಷಾಗಂಗೆ

ಕವನ - ನನ್ನಜ್ಜಿ ಬಲು ಖಿಲಾಡಿ


(ತನ್ನ ಅಜ್ಜಿ ಗಂಗಮ್ಮನಿಗೆ  ಮೊಮ್ಮಗಳು ನಮನ)

ನನ್ನಜ್ಜಿ ಬಲು ಖಿಲಾಡಿ
ಎಂಬತ್ತರಲ್ಲೂ ಎತ್ತಿನ ಗಾಡಿ

ಒಂದೆಡೆ ಸುಮ್ಮನೆ ಕೂರಳು
ಕಾಲುಗಳಾ ಅವು ಗಾಲಿಗಳು

ಈಗಲೂ ಗಟ್ಟಿ ಹಲ್ಲಿನಕಟ್ಟು
ಇರಲೇಬೇಕು ಚಕ್ಲಿ ನಿಪ್ಪಟ್ಟು

ಕೆಲಸವಿರದಿರೆ ಟಿವಿ ಹಚ್ಚು
ತೆಲಗು ಮಹೇಶನೇ ಬಲು ಮೆಚ್ಚು

ಸೆಲ್ಫೋನ್ ಲ್ಯಾಪ್ಟಾಪ್ ಯಾವುದೆ ಇಕ್ಕು
ಒಲ್ಲೆ ಎನ್ನಳು ಭಲೆ ಭಲೆ ಟೆಕ್ಕು

ಈಗಲೂ ಸೂಜಿಗೆ ದಾರ ಹಚ್ಚುವಳು
ಬಿಂದಿಗೆ ನೀರನು ಹೊತ್ತು ತರುವಳು

ಮಾಡದಿರೆಂದರೆ ಮುಖ ಹನುಮಂತ
ಮಾಡುವುದೊಂದೆ ನಿತ್ಯದ ಮಂತ್ರ

ಏನೆ ಅಂದರೂ ನಗುವೇ ಉತ್ತರ
ಕೆಡುಮಾತುಗಳು ಸುಳಿಯದು ಹತ್ತಿರ

ಬಯಕೆಯೊ ಅವಳದು ಮನೆಯಲಿ ಸಂತಸ
ನಾವುಗಳೆಂದರೆ ಪಂಚಾಮೃತ ರಸ

ಕಷ್ಟಗಳಿಂದಲೇ ಇಲ್ಲಿಗೆ ಪಯಣ
ನಿತ್ಯವಿತ್ತು ಕಣ್ಣೀರ ಆಭರಣ

ಎಲ್ಲವ ಮರೆತು ಎಲ್ಲರ ಕ್ಷಮಿಸಿ
ಒಳಿತನೆ ಕೋರ್ವಳು ದೈವಕೆ ನಮಿಸಿ

ನೋಡೆನು ಅಂಥ ಅಪರೂಪದ ಅಜ್ಜಿಗೆ
ಬೆರಗಾಗಿ ನಮಿಸುವೆ ಆ ಅಕಾಶಗಂಗೆಗೆ
 ಉಷಾಗಂಗೆ    
             
                                  

ಸಿನಿಮಾ ವಿಮರ್ಶೆ - ‘ದಿಸ್ ಲ್ಯಾಂಡ್ ಈಸ್ ಮೈನ್’



[‘ದಿಸ್ ಲ್ಯಾಂಡ್ ಈಸ್ ಮೈನ್’ ಇಂಗ್ಲಿಷ್ ಸಿನಿಮಾದಲ್ಲಿ ಫ್ಯಾಸಿಸಂ ಪ್ರತಿರೋಧದ ಅದ್ಭುತ ಚಿತ್ರಣ]


ಮೊದಲನೆ ಮಹಾಯುದ್ಧದ ಕರಾಳ ನೆನಪುಗಳು ಮಾಸುವ ಮುನ್ನವೇ ಮೂರು ದಶಕಗಳ ನಂತರ ಯುರೋಪಿನ ಮೇಲೆ ಎರಡನೆ ವಿಶ್ವಯುದ್ಧದ ಕರಿನೆರಳು ಕವಿಯಿತು. ಹತ್ತೊಂಬತ್ತನೇ ಶತಮಾನದ ನಲವತ್ತರ ದಶಕದಲ್ಲಿ ಮಿಲಿಯಾಂತರ ಜನರನ್ನು ಬಲಿ ತೆಗೆದುಕೊಂಡು, ಅದಕ್ಕಿಂತ ಹೆಚ್ಚು ಪಟ್ಟು ಜನರನ್ನು ಅಂಗಹೀನರನ್ನಾಗಿ ಮಾಡಿ, ಮನೆ-ಸಂಸಾರಗಳನು ನಾಶ ಮಾಡಿದ ಎರಡನೆ ವಿಶ್ವಯುದ್ಧವನ್ನು ಆರಂಭಿಸಿದ್ದು ಜರ್ಮನಿ. ಆದರೆ ವಿಶ್ವಯುದ್ಧಕ್ಕೂ ಮುನ್ನ ಜರ್ಮನಿಯಲ್ಲಿ ಅದಿಕಾರಕ್ಕೇರಿದ ಹಿಟ್ಲರ್, ಆರ್ಯ ಜನಾಂಗದ ಶ್ರೇಷ್ಟತೆ, ಇತರ ಜನಾಂಗಗಳ ಕನಿಷ್ಟತೆ ಹಾಗೂ ಪರಧರ್ಮದ್ವೇಷಗಳನ್ನು ಹರಡಿ, ಜನಾಂಗೀಯ ದ್ವೇಷದ ಕಟ್ಟುಕಥೆಗಳನ್ನು, ಸುಳ್ಳುಪ್ರಚಾರಗಳನ್ನು ಬಂಡವಾಳ ಮಾಡಿಕೊಂಡು ಅಧಿಕಾರಕ್ಕೇರಿದನು. ತನ್ನ ಅಸತ್ಯದ ಗದ್ದುಗೆಯನ್ನು ಭದ್ರಪಡಿಸಿಕೊಳ್ಳಲು ಕ್ರೌರ್ಯದ ಪರಮಾವಧಿಯನ್ನು ಮುಟ್ಟಿದನು. 
ತನ್ನನ್ನು ವಿರೋಧಿಸಿದ ಜನರ ಮೇಲೆ ‘ಯಾತನಾ ಶಿಬಿರ’ದಲ್ಲಿ ನಡೆಸಿದ ಹಿಂಸೆ, ಹೊರೆಗೆ ನಡೆಸಿದ ಕೊಲೆ, ಸುಲಿಗೆ, ಅತ್ಯಾಚಾರ, ಮನುಷ್ಯಹೀನ ನಡವಳಿಕೆಗಳು, ಇತಿಹಾಸದಲ್ಲಿ ಕ್ರೌರ್ಯದ ಹೊಸ ಅಧ್ಯಾಯಗಳನ್ನೇ ತೆರೆದವು. ಅದೆಲ್ಲವನ್ನೂ ಒಂದೇ ಪದದಲ್ಲಿ ಹೇಳುವುದಾದರೆ, ಫ್ಯಾಸಿಸಂ. ಹಿಟ್ಲರ್ ಮಾನವೀಯತೆ, ಸೂಕ್ಷ್ಮ ಸಂವೇದನೆ, ಸ್ವಾತಂತ್ರ್ಯ, ಸೋದರತೆ, ಸ್ವತಂತ್ರ ಅಭಿವ್ಯಕ್ತಿ - ಪ್ರಜಾತಂತ್ರದ ಎಲ್ಲಾ ಆಶಯಗಳನ್ನು ಬೂಟುಕಾಲಿನಡಿ ಹೊಸಕಿ ಹಾಕಿದನು. ಪ್ರಪಂಚವನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿಯಲು ಪ್ರಯತ್ನಿಸಿದನು. ಇದೆಲ್ಲವನ್ನೂ ಮಾಡಿದ್ದು ಜರ್ಮನಿಯ ಕೈಗಾರಿಕೆ ಮನೆತನದವರಿಗೆ ಮಾರುಕಟ್ಟ ಒದಗಿಸಲು. ಅವರ ಸರಕುಗಳನ್ನು ಮಾರಲು ವಸಾಹತುಗಳನ್ನು ಸೃಷ್ಟಿಸಲು.
ಎಲ್ಲಿ ದಬ್ಬಾಳಿಕೆ, ಅನ್ಯಾಯ ಇರುತ್ತದೆಯೋ ಅಲ್ಲಿ ಪ್ರತಿರೋಧವೂ ಇರುತ್ತದೆ. ಹಾಗಾಗಿ, ಹಿಟ್ಲರ್‍ನ ಕುಕೃತ್ಯಗಳು ವಿರೋಧ ಕಾಣದೆ ಹೋಗಲಿಲ್ಲ. ಸ್ವಾತಂತ್ರ್ಯ ಪ್ರೇಮಿ, ಮನುಕುಲ ಪ್ರೇಮಿ ಜನರು ಪ್ರತಿರೋಧ ವ್ಯಕ್ತಪಡಿಸಿದರು. ಜೀವನದ ಹಂಗು ತೊರೆದು ಹೋರಾಡಿದರು. ದಮನಿತ ಜನರ ಸ್ವಾತಂತ್ರ್ಯ ಗೀತೆಯನ್ನು ಹಾಡಿದರು. ಹುತಾತ್ಮರಾದರು. ನಿಜವಾದ ಧೈರ್ಯದ ಸಂಕೇತವಾದರು. ಅವರಲ್ಲಿ ಸಾಮಾನ್ಯ ಜನರು, ಕವಿಗಳು ಗಾಯಕರು, ಕಲಾವಿದರು, ಎಲ್ಲಾ ಜನರೂ ಇದ್ದರು. ನಿರಂಕುಶ ಪ್ರಭುತ್ವದ ವಿರೋಧ ಅವರೆಲ್ಲರ ಸ್ನೇಹವನ್ನು ಬೆಸೆದಿತ್ತು. 
ಕಲಾವಿದರು ಸಮಾಜಕ್ಕೆ ಅತೀತವಲ್ಲ. ಆ ಕಾರಣದಿಂದಲೇ ಅವರೂ ತಮ್ಮ ಪ್ರತಿರೋಧದ ಧ್ವನಿಯನ್ನು ಕಲೆಯಲ್ಲಿ ಅಭಿವ್ಯಕ್ತಿಸಿದರು. ಕೇವಲ ತನ್ನಾನಂದ, ತನ್ನೊಳಗಿನ ತಾಕಲಾಟ, ವ್ಯಕ್ತಿಗತ ಭಾವನೆ, ಸಂಕುಚಿತ ನೆಲೆಗಟ್ಟುಗಳನ್ನು ಮೀರಿ ಸಮುದಾಯದ ತಲ್ಲಣಗಳನ್ನು, ನೋವು-ನಲಿವುಗಳನ್ನು ತಮ್ಮ ವಸ್ತುಗಳನ್ನಾಗಿ ಮಾಡಿಕೊಂಡರು. ಹಾಡುಗಳನ್ನು ಕಟ್ಟಿದರು. ಕಥೆಗಳನ್ನು ಬರೆದರು. ನಾಟಕಗಳನ್ನು ಆಡಿದರು. ಚಿತ್ರಗಳನ್ನು ಬಿಡಿಸಿದರು. ನೃತ್ಯಗಳನ್ನು ಸಂಯೋಜಿಸಿದರು. ಪ್ರತಿರೋಧದ ಉತ್ಸಾಹಕ್ಕೆ ಪುಷ್ಟಿ ನೀಡಿದರು. ಇದರೊಂದಿಗೆ ಸೇರುವುದರಲ್ಲಿ ಸರ್ವಕಲೆಗಳ ಸಮನ್ವಯ - ಸಿನಿಮಾ ರಂಗವೇನೂ ಹಿಂದೆ ಬೀಳಲಿಲ್ಲ. ವಿವಿಧ ಆಯಾಮಗಳಲ್ಲಿ, ವಿವಿಧ ಸ್ತರಗಳಲ್ಲಿ, ವಿವಿಧ ಭಾವಗಳಲ್ಲಿ ಫ್ಯಾಸಿವಾದದ ಕರಾಳ ಮುಖಗಳನ್ನು ಚಲನಚಿತ್ರ ತೆರೆದಿಟ್ಟಿತು.
‘ದಿಸ್ ಲ್ಯಾಂಡ್ ಈಸ್ ಮೈನ್’ ಚಲನಚಿತ್ರವು ನಾಜಿ ವಿರೋಧಿ ಸಿನಿಮಾಗಳ ಅಗ್ರಪಟ್ಟಿಯಲ್ಲಿ ಸ್ಥಾನ ಪಡೆಯುತ್ತದೆ. ಇದರಲ್ಲಿ ನಾಜಿóಗಳ ಕ್ರೌರ್ಯದ ಹಸಿಹಸಿ ಚಿತ್ರಣವಿಲ್ಲ. ಆದರೂ ಮನಸಿಗೆ ಆಳವಾದ ನೋವನ್ನುಂಟು ಮಾಡುತ್ತದೆ. ಶೌರ್ಯ, ಧೀರತ್ವದ ಅತಿರಂಜಕ ವ್ಯಕ್ತಿಗಳಿಲ್ಲ. ಆದರೂ ಅಸಾಧಾರಣ ಸಾಹಸದ ಪರಿಚಯವಾಗುತ್ತದೆ. ಸಂದರ್ಭಗಳು ಬಂದಾಗ ಮನದಾಳದೊಳಗೆ ನೊಂದವರ ಕುರಿತು ಪ್ರೀತಿಯಿದ್ದರೆ, ಸಾಮಾನ್ಯರೂ ಸಹ ಅಸಾಮಾನ್ಯರಾಗುತ್ತಾರೆ. ಏಕೆಂದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಳ್ಳುವುದು, ಪ್ರಕಟವಾಗುವುದು, ಗಟ್ಟಿಯಾಗುವುದು, ಅವುಗಳನ್ನು ಪರೀಕ್ಷಿಸುವ ಸಮಯ ಬಂದಾಗ. ಅಂಥದೊಂದು ಚಿತ್ರಣವನ್ನು ನಿರ್ದೇಶಕ ಜಾನ್ ರೆನಾಯ್ ಪರಿಣಾಮಕಾರಿಯಾಗಿ ಬಿಂಬಿಸಿದ್ದಾರೆ.
ಈ ಸಿನಿಮಾದ ಕಥಾವಸ್ತು ಒಂದು ಆಕ್ರಮಿತ ಪ್ರದೇಶದ ಸಂಕಷ್ಟದ ಹಾಗೂ ಪ್ರತಿಭಟನೆಯ ವಿಷಯ. ಅದು ಯಾವ ದೇಶದ್ದಾದರೂ ಆಗಬಹುದು, ಯಾವ ಪ್ರಭುತ್ವ ಹಾಗೂ ಜನರದ್ದಾದರೂ ಆಗಬಹುದು. ಈ ಸಾರ್ವತ್ರಿಕತೆಯನು ತಿಳಿಸಲೆಂದೇ ಜಾನ್ ರೆನಾಯ್ ಕಥಾಸ್ಥಳವನ್ನು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಿಲ್ಲ. ಅವರು ತಮ್ಮ ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಹಿಟ್ಲರ್ ಬೇರೆ ಬೇರೆ ದೇಶಗಳನ್ನು ಆಕ್ರಮಣ ಮಾಡಿ ವಶಪಡಿಸಿಕೊಳ್ಳುತ್ತಿದ್ದರಿಂದ, ಸಿನಿಮಾದ ಸ್ಥಳವನ್ನು ಯುರೋಪಿನ ಯಾವುದೋ ಒಂದು ಪ್ರದೇಶವೆಂದು ಆರಂಭದಲ್ಲಿ ಶೀರ್ಷಿಕೆಯಲ್ಲೇ ಸ್ಪಷ್ಟಪಡಿಸುತ್ತಾರೆ. ಅದು ಯುರೋಪೇ ಏಕಾಯಿತೆಂದರೆ, ನಾಜಿóಗಳ ಕುಕೃತ್ಯದ, ಎರಡನೇ ವಿಶ್ವಯುದ್ಧದ ಯಾತನಾ ಕೇಂದ್ರ ಅದಾಗಿತ್ತು. ಜೊತೆಗೆ ಪ್ರಥಮ ದೃಶ್ಯವೇ ಬಹಳ ಮಾರ್ಮಿಕವಾಗಿ ತೆರೆದುಕೊಳ್ಳುತ್ತದೆ. ಒಂದನೇ ವಿಶ್ವಯುದ್ಧದಲ್ಲಿ ಜೀವಕೊಟ್ಟ ಧೀರ ಯೋಧರ ನೆನಪಿನಲ್ಲಿ ಸ್ಥಾಪಿಸಿದ ಪ್ರತಿಮೆಯ ಹಿನ್ನೆಲೆಯಲ್ಲಿ ನಾಜಿ ಸೈನಿಕರು ನಗರವನ್ನು ಆಕ್ರಮಿಸಿಕೊಂಡು, ತಮ್ಮ ಆಳ್ವಿಕೆಯನ್ನು ಸ್ಥಾಪಿಸುತ್ತಾರೆ.
ಇಡೀ ಸಿನಿಮಾ ನಾಜಿ ಅಥವಾ ಫ್ಯಾಸಿವಾದದ ಅಸತ್ಯಗಳನ್ನು, ಮುಖವಾಡಗಳನ್ನು ಸಮರ್ಥವಾಗಿ ಬಯಲುಪಡಿಸುತ್ತಾ ಸಾಗುತ್ತದೆ. ‘ಶಾಲೆಗಳು, ಪೊಲೀಸ್, ನ್ಯಾಯಾಲಯಗಳು ಸ್ವತಂತ್ರವಾಗಿರುತ್ತವೆ. ವಿಚಾರಣೆ ಮುಕ್ತವಾಗಿರುತ್ತದೆ’ ಎಂದು ಮೇಯರ್ ಹೆನ್ರಿ ಮೆಲ್‍ವೆಲೆ ಹೆಸರಿನಲ್ಲಿ ಘೋಷಿಸುತ್ತಲೇ, ಹಂತ ಹಂತವಾಗಿ ತಮಗೆ ಬರುವ ವಿರೋಧವನ್ನು ಹತ್ತಿಕ್ಕುತ್ತಾ ಹೋಗುತ್ತದೆ. ಫ್ಯಾಸಿವಾದಿಗಳು ಯಾವತ್ತೂ ಮೊದಲು ಕೈ ಹಾಕುವುದೇ ಬೌದ್ಧಿಕ ಕ್ಷೇತ್ರಕ್ಕೆ. ಜನರನ್ನು ಬೌದ್ಧಿಕವಾಗಿ ದಿವಾಳಿ ಮಾಡಿದರೆ, ಭ್ರಷ್ಟರನ್ನಾಗಿ ಮಾಡಿದರೆ, ಫ್ಯಾಸಿವಾದದ ನಿರಂಕುಶ ಆಳ್ವಿಕೆ ತಕರಾರಿಲ್ಲದೆ ನಡೆಯುತ್ತದೆ. ಅದರಿಂದಾಗಿಯೇ ನಾಜಿ ಅಧಿಕಾರಿ ಮೇಜರ್ ವಾನ್ ಕೆಲ್ಲರ್ ಅಲ್ಲಿನ ಶಾಲೆಯ ಪುಸ್ತಕಗಳಲ್ಲಿ ಪ್ರಜಾತಂತ್ರದ ಚೈತನ್ಯವಿರುವ ಹಾಳೆಗಳನ್ನು ಹರಿಯಲು, ಪ್ಲೆಟೊ ಹಾಗೂ ಅರಿಸ್ಟಾಟಲನ ಪುಸ್ತಕಗಳನ್ನು ಸುಡುವ ನಾಜಿ ಸಹಭಾಗಿಯಾದ ನಗರದ ಮೇಯರ್ ಹೆನ್ರಿ ಮ್ಯಾನ್‍ವಿಲೆ ಮೂಲಕ ಆಜ್ಞಾಪಿಸುತ್ತಾನೆ.
ಆ ಶಾಲೆಯ ಮುಖ್ಯಸ್ಥರಾದ ಪ್ರೊ.ಸೊರೆನ್ ಪ್ರಜಾತಂತ್ರ ಪ್ರೇಮಿ. ಸ್ವಾತಂತ್ರ್ಯದ ಪಕ್ಷಪಾತಿ ಹಾಗೂ ನ್ಯಾಯನಿಷ್ಠ. ಆದ್ದರಿಂದಲೇ ಅವನ ಪ್ರಭಾವವನ್ನು ಶಾಲೆಯ ಶಿಕ್ಷಕರಲ್ಲೂ ಕಾಣಬಹುದು. ಲೂಯಿ ಮಾರ್ಟಿನ್ ಎನ್ನುವ ಶಿಕ್ಷಕಿ ತಲೆಬಾಗದವಳು. ಅವಳಲ್ಲೂ ಪರಾಧೀನತೆಯ ವಿರೋಧಿ ಭಾವ ಪುಟಿಯುತ್ತಿರುತ್ತದೆ. ಆದ್ದರಿಂದಲೇ ಅವಳಿಗೆ ನಿಷೇಧಿತ ಹಾಳೆಗಳನ್ನು ಹರಿಯಲು ಮನಸ್ಸಿಲ್ಲ. ಅಕಸ್ಮಾತ್ ಹರಿದರೂ ಅದನ್ನು ಜೋಪಾನವಾಗಿಟ್ಟುಕೊಂಡು ಮತ್ತೆ ಅಂಟಿಸುವ ಬಯಕೆ ಹೊಂದಿದವಳು. ಆದರೆ ಆಕೆಯ ಸಹೋದ್ಯೋಗಿ ಶಿಕ್ಷಕ, ಆಲ್ಬರ್ಟ್ ಲೂರಿ ಅಂಜುವ ಸ್ವಭಾವದ ವ್ಯಕ್ತಿ. ಅದಕ್ಕೆ ಆತನ ತಾಯಿ ಎಮ್ಮಾ ಲೂರಿಯೂ ಕಾರಣ. ಮಗನನ್ನು ವಿಪರೀತ ಹಚ್ಚಿಕೊಂಡು, ಆತನನ್ನು ಚಿಕ್ಕ ಮಗುವಿನಂತೇ ನೋಡುವ ಕುರುಡು ವ್ಯಾವೋಹದ ತಾಯಿ. ಆದರೆ ಲೂರಿಗೆ ಪ್ರೊ.ಸೊರೆನ್ ಮೇಲೆ ಅಗಾಧ ಗೌರವವಿದೆ. ತನ್ನ ಅಂಜಿಕೆಯ ಸ್ವಭಾವದ ಕುರಿತು ಬೇಸರವಿದೆ. ಅದು ಎರಡು ಘಟನೆಗಳಲ್ಲಿ ಕಾಣಿಸುತ್ತದೆ.
ಲೂಯಿ ಮಾರ್ಟಿನ್ ಕಷ್ಟವಾದ ಹಾಳೆಗಳನ್ನು ಹರಿಯುವ ಕೆಲಸವನ್ನು ಲೂರಿ ಮಾಡಿಬಿಡುತ್ತಾನೆ. ಅಥವಾ ಬಾಂಬ್ ದಾಳಿಯ ಸೂಚನೆ ಬಂದಾಗ, ಅತ್ಯಂತ ಭಯವಿಹ್ವಲನಾಗಿ, ಮನೆಯಲ್ಲಿದ್ದ ತಾಯಿಯನ್ನೂ ಕರೆದುಕೊಂಡು, ಮಕ್ಕಳತ್ತ ಗಮನವೀಯದೆ ಹೆದರಿಕೋಂಡು ನೆಲಮಾಳಿಗೆಯಲ್ಲಿ ಕುಳಿತಿರುತ್ತಾನೆ. ಶಿಕ್ಷಕಿ ಲೂಯಿ ಮಾತ್ರ ಮಕ್ಕಳಿಗೆ ಧೈರ್ಯ ತುಂಬುತ್ತಾ, ಲೂರಿಯನ್ನೂ ಸಮಾಧಾನಪಡಿಸುತ್ತಾ ಪ್ರೊ.ಸೊರೆನ್ ಸಹಾಯದಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಾಳೆ. ಇಷ್ಟೆಲ್ಲಾ ಆದರೂ ಆಕೆ ಲೂಯಿಯನ್ನು ಸಹಾನುಭೂತಿಯಿಂದಲೇ ನೋಡುತ್ತಾಳೆ. ಲೂರಿಗೆ ತನ್ನ ಹೆದರಿಕೆಯ ಮನಸ್ಥಿತಿಯ ಬಗ್ಗೆ ಬೇಸರವಾಗಿ ‘ತಾನು ಹೇಡಿ’ಯೆಂದು ಪ್ರೊ.ಸೊರೆನ್ ಜೊತೆ ಅತ್ತುಬಿಡುತ್ತಾನೆ. ಈ ಅಂಜಿಕೆಯ ಸ್ವಭಾವದಿಂದಲೇ ತಾನು ಲೂಯಿಯನ್ನು ಪ್ರೀತಿಸುತ್ತಿರುವುದನ್ನು ಹೇಳದೆ ಗುಪ್ತವಾಗಿಟ್ಟುಕೊಳ್ಳುತ್ತಾನೆ.
ಒಂದು ಆಕ್ರಮಿತ ಪ್ರದೇಶ ಎಲ್ಲಿಯವರೆಗೆ ದಬ್ಬಾಳಿಕೆಯನ್ನು ಸಹಿಸುತ್ತದೆ! ಅದರ ಸಹನಾ ಶಕ್ತಿ ಮೀರಿದಾಗ, ಧೈರ್ಯದ ಕಿಡಿಗಳು ಹಾರಿದಾಗ ಪ್ರತಿರೋಧ ಬರುತ್ತದೆ. ಅದು ಲೂಯಿ ಮಾರ್ಟಿನ್ನಳ ತಮ್ಮ ಪಾಲ್ ಮಾರ್ಟಿನ್‍ನಿಂದ ಆರಂಭವಾಗುತ್ತದೆ. ಅವನು ಮೇಜರ್ ವಾನ್ ಕೆಲ್ಲರ್ ನೇತೃತ್ವದಲ್ಲಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಬಾಂಬ್ ಸ್ಫೋಟಿಸುತ್ತಾನೆ. ನಾಜಿಗಳಿಗೆ ಅವನನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ತನಿಖೆ ಆರಂಭವಾಗುತ್ತದೆ. ಆದರೆ ಫ್ಯಾಸಿವಾದಿಗಳ ತನಿಖೆಯ ರೀತಿಯೇ ಬೇರೆ. ಅದು ಪ್ರಜಾತಂತ್ರದಲ್ಲಿ ನಡೆಯುವ ವೈಜ್ಞಾನಿಕ ತನಿಖೆಯಲ್ಲ, ಹಿಂಸಾತ್ಮಕ ತನಿಖೆ.
ಆಕ್ರಮಿತ ನಾಜಿಗಳ ವಿರುದ್ಧ ಬಂಡೇಳಲು ಪ್ರೇರಿಸುವಂತಹ ಲೇಖನಗಳನ್ನು ‘ಲಿಬರ್ಟಿ’ ಪತ್ರಿಕೆಯು ಪ್ರಕಟಿಸುತ್ತಿರುತ್ತದೆ. ಅದರ ಬರಹಗಾರನ ಮೇಲೆ ಮೇಜರ್ ವಾನ್ ಕೆಲ್ಲರ್‍ನ ಕಣ್ಣಿರುತ್ತದೆ. ಅದರ ಭಾಷಾ ಶೈಲಿ, ಪ್ರಬುದ್ಧ ಬರವಣಿಗೆಗಳನ್ನು ನೋಡಿ, ಮೇರುಕೃತಿ ಸಾಹಿತ್ಯಗಳನ್ನು ಓದುವ ಹವ್ಯಾಸವಿದ್ದ ಪ್ರೊ.ಸೊರೆನ್ ಎಂಬುದು ಅವನಿಗೆ ಖಚಿತವಾಗಿರುತ್ತದೆ. ಬಾಂಬಿನ ಘಟನೆಯನ್ನು ನೆಪ ಮಾಡಿಕೊಂಡು ಪ್ರೊ.ಸೊರೆನ್ ಸೇರಿದಂತೆ ಹತ್ತು ಜನರನ್ನು ಒತ್ತೆಯಾಳಾಗಿಟ್ಟುಕೊಂಡು, ಬಾಂಬ್ ಹಾಕಿದವನ ಹೆಸರನ್ನು ಬಹಿರಂಗಪಡಿಸಲು ಜನರನ್ನು ಒತ್ತಾಯಿಸುತ್ತಾನೆ. ಇಲ್ಲದಿದ್ದರೆ ಎಲ್ಲರನ್ನು ಸಾಯಿಸುವ ಬೆದರಿಕೆಯನ್ನೂ ಹಾಕುತ್ತಾನೆ. ಪ್ರೊ.ಸೊರೆನ್‍ರವರ ಬಂಧನದ ಸಮಯದಲ್ಲಿ ಶಿಕ್ಷಕ ಲೂರಿ ತನ್ನ ಅಂಜಿಕೆಯನ್ನು ಮರೆತು, ಒಂದು ಸಣ್ಣ ಪ್ರತಿಭಟನೆ ವ್ಯಕ್ತಪಡಿಸುತ್ತಾನೆ. ಏಕೆಂದರೆ ನಾಜಿóಗಳು ಅವನ ಆದರ್ಶವ್ಯಕ್ತಿಯನ್ನು ಬಂಧಿಸುತ್ತಿದ್ದರು.
ನಾಜಿóಗಳು ಇತರೆ ದೇಶಗಳಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಲು, ನಿರಾತಂಕವಾಗಿ ಮುಂದುವರೆಸಲು ಹೂಡುತ್ತಿದ್ದ ತಂತ್ರಗಳಲ್ಲಿ ಅಲ್ಲಿಯವರನ್ನೇ ತಮ್ಮ ಸಹಭಾಗಿಗಳನ್ನಾಗಿ ಮಡಿಕೊಳ್ಳುತ್ತಾರೆ. ಸ್ಥಳೀಯ ಅವಕಾಶವಾದಿಗಳು ನಾಜಿóಗಳ ಜೊತೆ ಕೈ ಸೇರಿಸಿ, ತಾವು ಉದ್ಧಾರವಾಗುತ್ತಾರೆ, ತಮ್ಮ ಜನರನ್ನು ನಾಶ ಮಾಡುತ್ತಾರೆ. ಈ ಅಂಶವನ್ನು ‘ದಿಸ್ ಲ್ಯಾಂಡ್ ಈಸ್ ಮೈನ್’ ಪರಿಣಾಮಕಾರಿಯಾಗಿ ಚಿತ್ರಿಸಿದೆ.
ಆ ನಗರದ ಮೇಯರ್, ರೈಲ್ವೆ ಸೂಪರಿಂಟೆಂಡ್ ಜಾರ್ಜ್ ಲ್ಯಾಂಬೆರ್ಟ್, ಮಾಂಸದಂಗಡಿಯ ನೋಬಲ್, ಇನ್ನಿತರರು ಅಂತಹ ಸಹಭಾಗಿಗಳಾಗಿರುತ್ತಾರೆ; ತಮ್ಮ ವ್ಯಾಪಾರ, ಆಸ್ತಿ, ಸ್ಥಾನಮಾನಗಳಿಗಾಗಿ. ಮೇಜರ್ ವಾನ್ ಕೆಲ್ಲರ್ ಇವರ ಮೇಲೆ ಒತ್ತಡ ಹೇರಿ ಬಾಂಬ್ ದಾಳಿಯ ಹಿಂದಿದ್ದವನನ್ನು ಹುಡುಕುವ ಯತ್ನ ಮಾಡುತ್ತಾನೆ. ಮೇಯರ್ ಮತ್ತು ನೋಬಲ್ ಸಂಪೂರ್ಣವಾಗಿ ಶರಣಾಗಿದ್ದರೆ, ಲ್ಯಾಂಬರ್ಟ್ ಸ್ವಲ್ಪ ತೊಳಲಾಡುತ್ತಿರುತ್ತಾನೆ. ಅವನು ಮತ್ತು ಲೂಯಿ ಮಾರ್ಟಿನ್ ಪ್ರೀತಿಸುತ್ತಿರುತ್ತಾರೆ. ಲ್ಯಾಂಬರ್ಟ್ ತನ್ನೊಳಗಿನ ಸಂಘರ್ಷದಲ್ಲಿ ನರಳುತ್ತಿರುತ್ತಾನೆ. ಅವನಿಗೆ ನಾಜಿóಗಳೊಂದಿಗೆ ಮುಖಾಮುಖಿಯಾಗುವ ಧೈರ್ಯವಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರೂ ಯಾವ ಪಕ್ಷ ವಹಿಸುತ್ತಾರೆನ್ನುವ ಸ್ಪಷ್ಟ ನಿಲುವನ್ನು ಪ್ರಕಟಿಸಲೇಬೇಕಾದ ಸಂದರ್ಭ ಬರುತ್ತದೆ.
ಪಾಲ್, ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿ ತಪ್ಪಿಸಿಕೊಂಡು ಅಕ್ಕ ಲೂಯಿಯ ಮನೆಗೆ ಯಾರಿಗೂ ತಿಳಿಯದಂತೆ ಬರುತ್ತಾನೆ. ದುರದೃಷ್ಟಕ್ಕೆ ಲೂರಿಯ ತಾಯಿ ನೋಡಿಬಿಡುತ್ತಾಳೆ. ಆ ದಿನ ಲೂಯಿ ಮನೆಗೆ ಲೂರಿಯು ರಾತ್ರಿಯೂಟಕ್ಕೆ ಬಂದಿರುತ್ತಾನೆ. ಅವನಿಗೆ ಬಾಂಬ್ ಸ್ಫೋಟ, ಅದರ ಹಿಂದಿನಿಂದಲೇ ಪಾಲ್‍ನ ಆಗಮನದಿಂದ ಭಯ ಉಂಟಾಗುತ್ತದೆ. ಉರಿಯುವ ಗಾಯಕ್ಕೆ ಉಪ್ಪು ಸವರಿದಂತೆ ನಾಜಿó ಸೈನಿಕರು ತಲಾಷ್ ಮಾಡಲು ಮನೆಗೆ ಬಂದಾಗ ಭಯಭೀತನಾಗುತ್ತಾನೆ. ಅವನು ಮಾತನಾಡುವುದನ್ನು ತಪ್ಪಿಸಲೆಂದೇ ಪಾಲ್ ಅಭ್ಯಾಸವಿಲ್ಲದ ಲೂರಿಗೆ ಸಿಗರೇಟ್ ಹತ್ತಿಸುತ್ತಾನೆ. ಅವನಿಗೆ ಸಿಗರೇಟಿನ ಘಾಟಿನಿಂದ ಉಂಟಾದ ಕೆಮ್ಮಿನಿಂದಾಗಿ ಸೈನಿಕರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಲಾಗುವುದಿಲ್ಲ. ಸೈನಿಕರು ಅಲ್ಲಿಗೆ ಬಂದ ಲೂರಿಯ ತಾಯಿಯ ಗಲಾಟೆಯಿಂದಾಗಿ ವಾಪಸ್ ಹೋದರೂ, ಅನುಮಾನ ಉಳಿದಿರುತ್ತದೆ. ಮರುದಿನ ಲೂರಿಯನ್ನು ಬಂಧಿಸುತ್ತಾರೆ. ಅಲ್ಲಿ ಎಮ್ಮಾಳ ಯಾವ ಬೆದರಿಕೆ, ಕೂಗಾಟ, ಗಲಾಟೆಗಳು ಸಹಾಯಕ್ಕೆ ಬರುವುದಿಲ್ಲ. ತನ್ನ ಮಗನನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಕುರುಡು ವ್ಯಾಮೋಹದಿಂದ ಲ್ಯಾಂಬರ್ಟ್‍ಗೆ ಪಾಲ್ ಬಗ್ಗೆ ತಿಳಿಸುತ್ತಾಳೆ. ಲ್ಯಾಂಬರ್ಟ್ ಮೇಯರ್ ಜೊತೆ ಮಾತನಾಡಿಕೊಂಡು ಮೇಜರ್ ವಾನ್ ಕೆಲ್ಲರ್‍ಗೆ ತಿಳಿಸುತ್ತಾನೆ. ಅವನು ಅಪರಾಧಿ ಮನೋಭಾವದಿಂದ ನರಳಿ ಪಾಲ್‍ಗೆ ಸೂಚನೆ ಕೊಟ್ಟರೂ ಸಹ ಅದು ಉಪಯೋಗವಾಗುವುದಿಲ್ಲ. ಅವರು ಪಾಲ್‍ನನ್ನು ಕೊಲ್ಲುತ್ತಾರೆ.
ಜೈಲಿನಿಂದ ಸ್ವತಂತ್ರನಾಗಿ ಬಂದ ಲೂರಿ, ತಾಯಿಯ ತಡೆಯನ್ನೂ ಲೆಕ್ಕಿಸದೆ, ಲೂಯಿಯನ್ನು ನೋಡಲು ಮನೆಗೆ ಬರುತ್ತಾನೆ. ಅಲ್ಲಿ ಲೂಯಿ ಮತ್ತು ಪಾಲ್ ಪ್ರಿಯತಮೆ ಜೂಲಿ ಗ್ರಾಂಟ್ ಪಾಲ್‍ನ ಸಾವಿಗಾಗಿ ಅಳುತ್ತಿರುತ್ತಾರೆ. ಆದರೆ ಲೂಯಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆಂದರೆ, ಲೂಯಿಯೇ ಪಾಲ್ ಬಗ್ಗೆ ಹೇಳಿರಬೇಕೆಂದು ತಪ್ಪಾರ್ಥ ಮಾಡಿಕೊಂಡ ಲೂರಿ ಲೂಯಿಯನ್ನು ಮನೆಯಿಂದ ಹೊರದಬ್ಬುತ್ತಾಳೆ. ಇದರಿಂದ ದಿಗ್ಭ್ರಾಂತನಾದ ವಿಷಯ ತಿಳಿದುಕೊಳ್ಳಲು ಯತ್ನಿಸುತ್ತಿದ್ದ ಲೂರಿಗೆ, ಸ್ವತಃ ತಾಯಿಯೇ ಸತ್ಯ ತಿಳಿಸಿದಾಗ ಆಘಾತವಾಗುತ್ತದೆ. ಇಲ್ಲಿ ರೆನಾಯ್ ಸೂಕ್ಷ್ಮವಾದ ಅಂಶವನ್ನು ತೋರಿಸುತ್ತಾರೆ. ಮಕ್ಕಳ ಮೇಲೆ ಅಥವಾ ಯಾರ ಮೇಲಾದರೂ ತೀವ್ರವಾದ ಪ್ರೀತಿಯಿರಬೆಕು, ಅದರೆ ವ್ಯಾಮೋಹವಿರಬಾರದು. ಅದು ಕಣ್ಣನ್ನು ಕುರುಡು ಮಾಡುತ್ತದೆ. ಹೃದಯವನ್ನು ಸಂಕುಚಿತಗೊಳಿಸುತ್ತದೆ; ಸಮುದಾಯಕ್ಕೆ ವಿಪತ್ಕಾರಿಯಾಗುತ್ತದೆ. ವ್ಯಕ್ತಿ ಒಳ್ಳೆಯವನಾದರೂ ಸ್ವಾರ್ಥಪರನನ್ನಾಗಿ ಮಾಡಿಬಿಡುತ್ತದೆ. ಅದಕ್ಕೇ ತಾಯಿ ಎಮ್ಮಾ ತನ್ನ ಮಗನ ಸುಖಕ್ಕಾಗಿ ದೇಶದ ಹಿತವನ್ನು ಬಲಿ ಕೊಟ್ಟಳು. ಇದೇ ವ್ಯಾಮೋಹ ಅಪಾಯ.
ಪಾಲ್‍ನ ಸಾವಿಗೆ ಕಾರಣನಾದ ಜಾರ್ಜ್ ಲ್ಯಾಂಬರ್ಟ್‍ನನ್ನು ಕೊಲ್ಲಲು ಲೂರಿ ಅವನ ಆಫೀಸಿಗೆ ನುಗ್ಗುತ್ತಾನೆ. ಆದರೆ ಅಷ್ಟರೊಳಗೆ ತನ್ನೊಳಗಿನ ದ್ವಂದ್ವವನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಲ್ಯಾಂಬರ್ಟ್ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ದುರದೃಷ್ಟವಶಾತ್, ಸಾಂದರ್ಭಿಕವಾಗಿ ಲೂರಿಯೇ ಕೊಲೆಗಾರನೆಂದು ಬಂಧನಕ್ಕೆ ಒಳಗಾಗುತ್ತಾನೆ. ವಿಚಾರಣೆ ಆರಂಭವಾಗುತ್ತದೆ. ಈ ವಿಚಾರಣೆಯನ್ನು ರೆನಾಯ್, ಪ್ರತಿರೋಧದ ಮಹತ್ವ, ಫ್ಯಾಸಿವಾದದ ಕರಾಳ ಮುಖ, ಧೈರ್ಯ, ಆಳ್ವಿಕರ ಸಹಭಾಗಿಗಳ ರಾಜಿ, ನಾಜಿó ತಂತ್ರಗಳು – ಇವೆಲ್ಲವನ್ನೂ ಚರ್ಚೆಗೆ ತರಲೆಂದೇ ನ್ಯಾಯಾಲಯದಲ್ಲಿ ಮುಕ್ತ ವಿಚಾರಣೆಯಿರುತ್ತದೆ ಎಂಬ ಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಹಾಗಿಲ್ಲದಿರಬಹುದು. ಯಥಾವತ್ ಚಿತ್ರಣದಿಂದ ಉದ್ದೇಶ ಪೂರೈಕೆಯಾಗದಿದ್ದಾಗ, ಇಂತಹ ವಾಸ್ತವ ಎನಿಸುವಂತಹ ಕಲ್ಪನೆಗಳನ್ನು ಸೃಷ್ಟಿಸಿಕೊಳ್ಳಬಹುದು. ಅದೇ ಕಲೆ. ಮತ್ತೆ ಕೆಲವೊಮ್ಮೆ ನಾಜಿಗಳು ತೋರಿಕೆಗೆ, ತಮಗೆ ಅಪಾಯ ಎನಿಸದಿರುವವರೆಗೂ ಇಂತಹ ಸಡಿಲತೆಗಳನ್ನು ಹೊಂದಿರುತ್ತಾರೆ. ಅವರು ತಮಗೆ ಬೇಕೆನಿಸಿದಾಗ ಯಾವ ಬದಲಾವಣೆಯನ್ನಾದರೂ ಮಾಡಬಹುದಲ್ಲ.
ಪುಕ್ಕಲು ಸ್ವಭಾವದ, ನಾಚಿಕೆಯ ವ್ಯಕ್ತಿತ್ವವಿರುವ ಲೂರಿಯು ವಿಚಾರಣೆಯ ಸಂದರ್ಭದಲ್ಲಿ ಕೋರ್ಟಿನಲ್ಲಿ ನೀಂತು ಮಾತನಾಡಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಅವನು ಆರೋಪಿಯ ಕಡೆಯ ಭಾಷಣದಲ್ಲಿ ಸ್ವಲ್ಪ ಧೈರ್ಯದಿಂದ ಮಾತನಾಡುತ್ತಾನೆ. “ನಾನು ಲಾಯರ್ ಸಹಾಯ ಬೇಡವೆಂದೆ, ಕಾರಣ ನನ್ನ ರಕ್ಷಣೆಗಿರುವುದು ಸತ್ಯ. ಅದು ಗೊತ್ತಿರುವುದು ನನಗೊಬ್ಬಿಗೇ” ಎಂದು ಆರಂಭಿಸಿ, ‘ತಾನು ಅಂಜಿಕೆಯವನು ಹೊರಗೆ, ಉಳಿದವರು ಹೊರಗೆ ಧೈರ್ಯಸ್ಥರಂತೆ ಕಂಡರೂ, ಒಳಗೆ ಅಂಜುಬುರುಕರು” ಎನ್ನುತ್ತಾ ನಾಜಿಗಳೊಂದಿಗೆ ಕೈ ಸೇರಿಸಿದವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುತ್ತಾನೆ. ಲೂರಿಯು ತನ್ನ ನಿರೀಕ್ಷೆಗೂ ಮೀರಿ ಮಾತನಾಡುತ್ತಿರುವುದನ್ನು ಕಂಡು, ಅದರ ಅಪಾಯವನ್ನು ಗ್ರಹಿಸಿದ ಪ್ರಾಸಿಕ್ಯೂಟರ್ ಮತ್ತೊಂದು ಸಾಕ್ಷಿಯಿದೆ ಎನ್ನುತ್ತಾ ಆರೋಪಿ ಕಡೆ ಭಾಷಣಕ್ಕೆ ಕತ್ತರಿ ಹಾಕಿ, ವಿಚಾರಣೆಯನ್ನು ಮುಂದೂಡಿಸುತ್ತಾನೆ. ಲೂಯಿಯ ಬಾಯಿಯನ್ನು ಮುಚ್ಚಿಸಲು ಮೇಜರ್ ವಾನ್ ಕೆಲ್ಲರ್ ಬೇರೆ ತಂತ್ರವನ್ನು ಹೂಡುತ್ತಾನೆ. ಅದು ಎಲ್ಲಾ ದೇಶಗಳಲ್ಲೂ, ಎಲ್ಲಾ ಫ್ಯಾಸಿವಾದಿಗಳೂ ಹೂಡುವ ಕುತಂತ್ರ. ತಮ್ಮ ಆಳ್ವಿಕೆಯ ಕುರಿತು ಸುಳ್ಳು ಕನಸುಗಳನ್ನು ಬಿತ್ತುವುದು. ಸುಳ್ಳು ಭವಿಷ್ಯವನ್ನು ಮುಂದಿಡುವುದು. ಮೇಜರ್ ವಾನ್ ಕೆಲ್ಲರ್ ಮಾಡುವುದೂ ಅದನ್ನೇ.
ಲೂರಿ ವಾಸ್ತವದಲ್ಲಿ ಧೈರ್ಯವಂತನೆಂದು ಹೊಗಳುತ್ತಾ, ನಾಜಿ ಆಳ್ವಿಕೆಯ ಭ್ರಮೆಯ ಬೀಜವನ್ನು ಲೂರಿಯ ತಲೆಯೊಳಗೆ ಬಿತ್ತುತ್ತಾನೆ. “ನಾವು ಜರ್ಮನರು ನ್ಯಾಯಾಲಯವನ್ನು ವಶಕ್ಕೆ ತೆಗೆದುಕೊಳ್ಳಬಹುದಿತ್ತು. ಆದರೆ ಅದು ನಮಗೆ ಬೇಡ. ನಾವು ನಿರಂಕುಶ ಪ್ರಭುಗಳಲ್ಲ. ಯುದ್ಧದಲ್ಲಿ ಸೋತ ರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಡುವುದು ನಮ್ಮ ಆದ್ಯತೆ. ...ನಾವು ಭವಿಷ್ಯದಲ್ಲಿ ಪ್ರಪಂಚಕ್ಕೆ ಸಂತೋಷ ತರಲು ತ್ಯಾಗಗಳನ್ನು ಮಾಡುತ್ತಿದ್ದೇವೆ” ಎಂದು ಹೇಳುತ್ತಾ ಭ್ರಮೆಯನ್ನು ಸೃಷ್ಟಿಸುತ್ತಾನೆ. ಇಲ್ಲಿ ಮತ್ತು ವಿಚಾರಣೆಯ ಸಂದರ್ಭಗಳಲ್ಲಿ ಸಂಭಾಷಣೆಗಳು ಅಮೋಘವಾಗಿವೆ. ಕಥೆ ಮತ್ತು ಸಂಭಾಷಣೆಗಳನ್ನು ಬರೆದು ಡೂಡ್ಲಿ ನಿಕೊಲಾಸ್ ಮತ್ತು ಜಾನ್ ರೆನಾಯ್ ನಾಜಿóಗಳ, ಆ ಮೂಲಕ ಎಲ್ಲಾ ಫ್ಯಾಸಿವಾದಿಗಳ ಮುಖವಾಡವನ್ನು ಕಿತ್ತೊಗೆದಿದ್ದಾರೆ. ಮೇಜರ್ ವಾನ್ ಕೆಲ್ಲರ್, “ಮೇಯರ್, ಮುಂತಾದವರು ತಮ್ಮ ಸ್ವಂತ ಹಿತಕ್ಕಾಗಿ ನಮ್ಮೊಡನೆ ಸೇರಿದರು. ಅಂತಹವರು ನಮಗೆ ಬೇಕು. ಅವರಂಥ ಜನ ಪ್ರಪಂಚದೆಲ್ಲೆಡೆ ಇದ್ದಾರೆ. ಜರ್ಮನಿಯಲ್ಲೂ ಇದ್ದಾರೆ. ಅವರ ಸಹಾಯದಿಂದಲೇ ನಮ್ಮ ಪಕ್ಷ ಮೇಲೆ ಬಂದಿದ್ದು” ಎಂದು ಹೇಳುವುದರೊಂದಿಗೆ ಇತಿಹಾಸದಲ್ಲಿ ನಾಜಿó ಪಕ್ಷದ ಉದಯದ ಹಿಂದಿನ ಕರಾಳ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಆ ಕ್ಷಣದಲ್ಲಿ ಇದನ್ನೆಲ್ಲಾ ಲೂರಿಯು ನಂಬುತ್ತಾನೆ. ಎಲ್ಲಾ ಸಮಯಗಳಲ್ಲು ಲೂರಿಯಂಥ ಮುಗ್ಧ ಜನ ಈ ಹಸಿ ಸುಳ್ಳುಗಳನ್ನೆಲ್ಲಾ ಸುಮ್ಮನೆ ನಂಬಿಬಿಡುತ್ತಾರೆ. ಆದರೆ ಅವನಿಗೆ ಭ್ರಮನಿರಸನವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. 
ಮರುದಿನ ಬೆಳಿಗ್ಗೆ, ಲೂರಿಯು ವಿಚಾರಣೆಗೆಂದು ತಯಾರಾಗುತ್ತಿದ್ದಾಗ, ತನ್ನ ಜೈಲಿನ ಸರಳುಗಳ ಮೂಲಕ, ಪ್ರೊ.ಸೊರೆನ್ ಸೇರಿದಂತೆ ಹತ್ತು ಜನ ಒತ್ತೆಯಾಳುಗಳನ್ನು ಗುಂಡಿಕ್ಕಿ ಕೊಲ್ಲುವುದನ್ನು ನೋಡುತ್ತಾನೆ. ‘ಪ್ರೊ.ಸೊರೆನ್’ ಎಂಬ ಲೂರಿಯ ಆರ್ತನಾದಕ್ಕೆ ಅವರು ಸಾಯುವ ಮುನ್ನ ಕೈ ಬೀಸುತ್ತಾರೆ. ವಿಚಾರಣೆಯ ಸಂದರ್ಭದಲ್ಲಿ ಮಾಡುವ ಕೊನೆ ಭಾಷಣದಲ್ಲಿ ಇದನ್ನೇ ನೆನಪಿಸಿ, ತನ್ನ ಕೆಲಸವೇನೆಂದು ತಿಳಿಯಿತೆಂದು ಹೇಳುತ್ತಾನೆ. ನಂತರ ಲೂರಿ ಮಾಡುವ ಭಾಷಣ ಅದ್ಭುತ. ಅದು ಚಾರ್ಲಿ ಚಾಪ್ಲಿನ್ ‘ದಿ ಗ್ರೇಟ್ ಡಿಕ್ಟೇಟರ್’ನಲ್ಲಿ ಮಾಡುವ ಕೊನೆ ಭಾಷಣದ ನಂತರದ ಸಾಲಿನಲ್ಲಿ ಬರುವ ಉತ್ತಮ ಭಾಷಣ.
“ನಮ್ಮಂಥ ನಿಮ್ಮಂಥ ಜನರಿಗೆ ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎನ್ನುವುದನ್ನು ತಿಳಿದುಕೊಳ್ಳೋದೆ ಕಷ್ಟ. ದುಡಿಯುವ ಜನರಿಗೆ ಶತ್ರುವನ್ನು ಗುರುತಿಸೋದು ಬಹಳ ಸುಲಭ. ಏಕೆಂದರೆ ಈ ರೀತಿಯ ಆಕ್ರಮಣಗಳ ಉದ್ದೇಶಾನೇ ಅವರನ್ನ ಗುಲಾಮರನ್ನಾಗಿ ಮಾಡೋದು.” ಇದು ದುಡಿಯುವ ವರ್ಗದ ಜನತೆಯ ಸಹಜ ಪ್ರತಿಕ್ರಿಯೆಯ ಸತ್ಯವನ್ನು ತೋರಿಸುತ್ತದೆ. ಆಕ್ರಮಣಗಳ ನೇರ ಪರಿಣಾಮ ಶ್ರಮಜೀವಿಗಳಿಗೆ ತಟ್ಟುತ್ತದೆ. ಹಾಗಾಗಿಯೇ ಅವರಲ್ಲಿ ಯಾವುದೇ ಸೈದ್ಧಾಂತಿಕ ಗೊಂದಲಗಳು ಬರುವುದಿಲ್ಲ. ಆದರೆ ಮಧ್ಯಮವರ್ಗದ ಸ್ಥಿತಿ ಅದಲ್ಲ. ಮಧ್ಯಮ ವರ್ಗ ಸದಾ ಹೇಗಾದರೂ ಮೇಲೆಕ್ಕೋಗುವ ಯತ್ನದಲ್ಲಿರುವುದರಿಂದ ತನಗೆ ಅನ್ಯಾಯವಾಗದ ಹೊರತು, ಅನ್ಯಾಯಕ್ಕೆ ಮುಖಾಮುಖಿಯಾಗುವುದೇ ಇಲ್ಲ. ಅವರಿಗೆ ಫ್ಯಾಸಿವಾದಿಗಳ “ಜಯದಿಂದ ಅಂಥದ್ದೇನೂ ಕೆಟ್ಟದ್ದಾಗಲ್ಲ ಎಂದು ಸುಲಭವಾಗಿ ನಂಬಿಕೆ ಬರುತ್ತದೆ.”
ಒಂದು ಆಕ್ರಮಿತ ದೇಶಕ್ಕೆ ಪ್ರತಿರೋಧ ಬಹಳ ಮುಖ್ಯ. ಪ್ರತಿಭಟನಾಕಾರರು ಆರಂಭದಲ್ಲಿ ವ್ಯಕ್ತಿಗತ ಸಾಹಸಗಳಿಗೇ ಕೈ ಹಾಕುತ್ತಾರೆ. ಅದೊಂದು ಸಾಮುದಾಯಿಕ ಹೋರಾಟವಾಗುವ ತನಕ. ಆದ್ದರಿಂದಲೇ “ಸೋತುಹೋದ ಜನರಿಗೆ ಉಳಿದಿರೋ ಒಂದೇ ಅಸ್ತ್ರ ಅಂದ್ರೆ, ವಿನಾಶಕಾರಿ ಕೆಲಸಗಳೇ... ಎಲ್ಲಿಯವರೆಗೆ ವಿನಾಶಕಾರಿ ಕೆಲಸ ಮಾಡುವವರು ಇರ್ತಾರೋ, ಅಲ್ಲಿಯವರೆಗೂ ಬೇರೆ ಕಡೆ ಹೋರಾಡ್ತಾ ಇರೋ ಜನರಿಗೆ ನಾವಿನ್ನೂ ಸೋತಿಲ್ಲ ಅನ್ನೋದು ಗೊತ್ತಾಗುತ್ತೆ... ನಾವು ಸಾಯಿಸಿದ ಪ್ರತಿಯೊಬ್ಬ ಜರ್ಮನ್‍ಗೆ ಬದಲಾಗಿ, ನಮ್ಮ ಮುಗ್ಧ ಜನರು ನೇಣಿಗೆ ಹೋಗ್ತಾರೆ. ಆದರೆ ಅವರ ಸಾಹಸ ಕಾರ್ಯ ಬೇಗನೆ ಎಲ್ಲೆಡೆ ಹರಡುತ್ತೆ. ನಮ್ಮ ಪ್ರತಿರೋಧ  ಬೆಳೆಯುತ್ತೆ.” ಪ್ರತಿರೋಧವು “ನಾವು ಕಷ್ಟ ಅನುಭವಿಸುವಂತೆ, ಹಸಿವಿನಿಂದ ನರಳುವಂತೆ, ಸಾಯುವಂತೆ ಮಾಡುತ್ತೆ, ಅದು ನಮ್ಮ ಸಂಕಷ್ಟಗಳನ್ನು  ಹೆಚ್ಚಿಸುತ್ತೆ. ಆದರೆ ಗುಲಾಮಗಿರಿಯ ಅವಧಿಯನ್ನು ಕಡಿಮೆ ಮಾಡುತ್ತೆ.” ಲೂರಿ ಕಡೆಯಲ್ಲಿ, ನಾಜಿóಗಳ ಜೊಗೆ ಸೇರಿಕೊಂಡು ವ್ಯಾಪಾರದಿಂದ ಲಾಭ ಮಾಡಿಕೊಂಡವರನ್ನು ಬಯಲಿಗೆಳೆಯುತ್ತಾ, ಅವರೊಳಗಿನ ನ್ಯೂನತೆಗಳನ್ನು ತೋರಿಸಿಕೊಡುತ್ತಾನೆ. ಲೋರಿಯ ಕಡೆಯ ಮಾತುಗಳು ಫ್ಯಾಸಿವಾದಿಗಳಿಂದ ಆಕ್ರಮಿತ ಅಥವಾ ಫ್ಯಾಸಿವಾದಿಗಳಿರುವ ರಾಷ್ಟ್ರಗಳಿಗೆ ಸರಿಯಾಗಿ ಹೊಂದುತ್ತದೆ: “ನಾನು ಸತ್ಯ ಹೇಳೋದಿಕ್ಕೆ ಪ್ರಯತ್ನಪಟ್ಟೆ. ಅದಕ್ಕೇ ನನಗೆ ಮರಣದಂಡನೆ. ಒಂದು ಆಕ್ರಮಿತ ಪ್ರದೇಶದಲ್ಲಿ ಸತ್ಯವನ್ನು ಜೀವಂತವಾಗಿ ಇಡೋದಿಕ್ಕೆ ಸಾಧ್ಯವಿಲ್ಲ. ಅದು ಅಪಾಯಕಾರಿ. ಏಕೆಂದರೆ ಆಕ್ರಮಣಗಳು ಸುಳ್ಳಿನ ಮೇಲೆ ನಿಂತಿರುತ್ತವೆ. ಅದನ್ನೇ ಹೊಸ ವ್ಯವಸ್ಥೆಯೆಂದು ಕರೆಯುತ್ತಾರೆ.”
ಕಡೆಯಲ್ಲಿ ಲೂರಿಯನ್ನು ನಿರಪರಾಧಿಯೆಂದು ಬಿಟ್ಟರೂ ಸಹ, ಅವನು ಮತ್ತೆ ಶಾಲೆಗೆ ಬಂದ ಕೂಡಲೇ ಬಂಧನಕ್ಕೊಳಗಾಗುತ್ತಾನೆ. ಅದಕ್ಕೂ ಮುನ್ನ ತನ್ನ ವಿದ್ಯಾರ್ಥಿಗಳಿಗೆ ಪ್ರೊ.ಸೊರೆನ್ ಅವರಿಂದ ಕಲಿತ ಪಾಠವನ್ನು ಕಡೆಯ ಪಾಠವಾಗಿ ಹೇಳುತ್ತಾನೆ. ಫ್ಯಾಸಿವಾದಿಗಳು ಪುಸ್ತಕಗಳನ್ನು ಸುಡಬಹುದು, ಆದರೆ ಎಲ್ಲರ ಮೆದುಳುಗಳನ್ನಲ್ಲ. ಆದ್ದರಿಂದಲೇ, ಮಕ್ಕಳಿಗೆ ಪ್ರಜಾತಂತ್ರವನ್ನು ಪ್ರತಿಪಾದಿಸುವ ‘ಮಾನವನ ಹಕ್ಕುಗಳು’ ಪಾಠವನ್ನು ಕಂಠಪಾಠ ಮಾಡಿಸುತ್ತಾನೆ. ಅವನನ್ನು ನಾಜಿó ಸೈನಿಕರು ಕರೆದುಕೊಂಡು ಹೋಗುವಾಗ, ಅವನು ನ್ಯಾಯಾಲಯದಲ್ಲಿ ಲೂರಿಯನ್ನು ಗುಟ್ಟಾಗಿ ಪ್ರೀತಿಸಿದ್ದನ್ನು ಹೇಳಿದ್ದನ್ನು ಕೇಳಿದ್ದ ಲೂರಿ, ಈಗ ನಿಜವಾಗಿಯೂ ಮನುಷ್ಯನಾದ ಲೂರಿಗೆ ಇಷ್ಟಪಟ್ಟು ಮುತ್ತನಿಡುತ್ತಾಳೆ. ಈ ಸಿನಿಮಾದಲ್ಲಿ ಕೇವಲ ನಾಜಿóಗಳ ವಿರುದ್ಧ ಧೀರೋದಾತ್ತ ಹೋರಾಟವನ್ನಷ್ಟೇ ಅಲ್ಲದೆ, ಸೂಕ್ಷ ಅಂಶಗಳಾದ ಪ್ರೀತಿಯ ಅರ್ಥವನ್ನು ವ್ಯಾಖ್ಯಾನಿಸುತ್ತಾ ಹೋಗಿದ್ದಾರೆ. ಪ್ರೀತಿಯ ತಳಹದಿಯು ಎಲ್ಲಾ ಸಂದರ್ಭಗಳಲ್ಲೂ, ಎಲ್ಲಾ ಪ್ರದೇಶಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಅದು ಕೇವಲ ಮದುವೆಯ ಬಂಧನಕ್ಕಾಗಿಯೂ ಅಲ್ಲ. ಪ್ರೀತಿ ಮನುಷ್ಯರ ಜೀವನದ ಉದ್ದೇಶವನ್ನು ಉದಾತ್ತಗೊಳಿಸಬೇಕು, ಉತ್ತಮ ಜೀವನವನ್ನು ಕಟ್ಟಲು ಪ್ರೇರಣೆಯಾಗಿ ನಿಲ್ಲಬೇಕು.
ಪಾಲ್‍ನನ್ನು ಪ್ರೀತಿಸಿದ ಲೂರಿ ಗ್ರಾಂಟ್, ಆತನ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ, ಅವನು ಜರ್ಮನರೊಂದಿಗೆ ಇದ್ದಾನೆಂದು ತಿಳಿದು ಅವನ ಪ್ರೀತಿಯನ್ನೇ ತಿರಸ್ಕರಿಸುತ್ತಾಳೆ. ಅಲ್ಲಿ ಪಾಲ್ ಒಬ್ಬ ವ್ಯಕ್ತಿಯಷ್ಟೇ ಅಲ್ಲ. ಅವನ ವಿಚಾರಗಳೂ ಅವಳಿಗೆ ಮುಖ್ಯ. ಹಾಗಾಗಿಯೇ ತನ್ನ ದೇಶವನ್ನು ಪ್ರೀತಿಸದ ವ್ಯಕ್ತಿಯನ್ನು ಪ್ರೀತಿಸುವುದಾದರೂ ಹೇಗೆ? ಪಾಲ್ ಕೂಡ ಅಷ್ಟೆ. ತನ್ನ ಪ್ರಿಯತಮೆ ದೂರವಾದರೂ ಕೂಡ, ನಾಜಿó ವಿರುದ್ಧ ಬಂಡೇಳಲು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಸತ್ಯ ಹೇಳುವುದಿಲ್ಲ. ಇದು ನಿಜವಾದ ಪ್ರೀತಿ. ಲೂಯಿಯ ವಿಷಯದಲ್ಲೂ ಅಷ್ಟೆ. ಅವಳು ಜಾಜ್ ಲ್ಯಾಂಬರ್ಟ್ ಅನ್ನು ಪ್ರೀತಿಸಿದ್ದಳು. ತಾನು ಮಾನಸಿಕವಾಗಿ ಜರ್ಜರಿತಳಾಗಿದ್ದಾಗ, ಲ್ಯಾಂಬರ್ಟ್‍ನ ಸಾಮೀಪ್ಯ, ಬೆಂಬಲ ಬಯಸಿ ಹೋಗುತ್ತಾಳೆ. ಆದರೆ ಲ್ಯಾಂಬರ್ಟ್ ನಾಜಿóಗಳೊಂದಿಗೆ ಸಂಧಾನಪರದ ಮಾತುಗಳನ್ನಾಡಿದಾಗ, ಪ್ರತಿರೋಧವನ್ನು ಸೂಕ್ಷ್ಮವಾಗಿ ವಿರೋಧಿಸಿದಾಗ, ಲೂಯಿ ಲ್ಯಾಂಬರ್ಟ್‍ನನ್ನು ತೊರೆಯುತ್ತಾಳೆ. ತಾನು ಮುಂಚೆ ಪ್ರೀತಿಸಿರದ, ಹೊರಗಿನ ಜನರಿಗೆ ಸಾಮಾನ್ಯನಂತೆ ಕಂಡಿದ್ದ, ಸ್ವಲ್ಪ ತನಗಿಂತ ವಯಸ್ಸಾಗಿದ್ದ, ಆದರೆ ಸಂದರ್ಭ ಬಂದಾಗ ಸ್ವಾತಂತ್ರ್ಯಕ್ಕಾಗಿ ಜೀವ ಕೊಡಲು ಸಿದ್ಧನಾದ ಲೂರಿಯನ್ನು ಪ್ರೀತಿಸುತ್ತಾಳೆ. ಇದು ಆದರ್ಶ ಪ್ರೀತಿ.
ಇಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿ ನಟಿಸಿದ್ದಾರೆ. ಒಬ್ಬ ಮುಗ್ಧ, ಅಂಜುಬುರುಕ ಶಿಕ್ಷಕನಾಗಿದ್ದವನು, ಕಡೆಯಲ್ಲಿ ಅನ್ಯಾಯವನ್ನು ಪ್ರತಿಭಟಿಸಿ, ಧೈರ್ಯ ಪ್ರದರ್ಶಿಸಿದ ಲೂಯಿ ಪಾತ್ರವನ್ನು ಚಾಲ್ರ್ಸ್ ಲಾಟನ್ ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಆ ಪಾತ್ರದಲ್ಲಾಗುವ ಬದಲಾವಣೆಯನ್ನು ಯಾವುದೇ ಅತಿಶಯವಿಲ್ಲದೆ, ರಮ್ಯ ಪಾತ್ರವಾಗಿಸದೆ, ಸಹಜವಾಗಿ ಅಭಿನಯಿಸಿದ್ದಾರೆ. ನಾಜಿ ಅಧಿಕಾರಿಯಾಗಿ ವಾಲ್ಟರ್ ಸ್ಲೆಜಾಕ್ ನಾಜಿಗಳ ಕ್ರೌರ್ಯ, ವಂಚನೆ, ನರಿಬುದ್ಧಿಗಳನ್ನು ಸುಂದರವಾಗಿ ನಟನೆಯ ಮೂಲಕ ವೀಕ್ಷಕನಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೂಯಿ ಮಾರ್ಟಿನ್ ಪಾತ್ರದಲ್ಲಿ ಮೌರಿನ್ ಓ ಹರಾ, ತಾಯಿಯಾಗಿ ಊನಾ ಓ ಕೊನಾರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. 
- ಎಸ್.ಎನ್.ಸ್ವಾಮಿ 

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ – 8

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)


ಪ್ರೈವಿ ಕೌನ್ಸಿಲ್ ಗೆ ಮೇಲ್ಮನವಿ- ಲಂಡನ್ನಿನಲ್ಲಿಯೂ ಸುದ್ದಿ
ಬ್ರಿಟನ್‍ನಲ್ಲಿದ್ದ ಪ್ರೈವೀ ಕೌನ್ಸಿಲ್‍ಗೆ ಮೇಲ್ಮನವಿಯನ್ನು ಸಲ್ಲಿಸುವಂತೆ ಎಲ್ಲರೂ ಭಗತ್‍ಸಿಂಗ್‍ರನ್ನು ಒತ್ತಾಯಿಸಿದರು. ಭಗತ್‍ರಿಗೆ ಆ ಬಗ್ಗೆ ನಂಬಿಕೆ ಇರದಿದ್ದರೂ, ಲಂಡನ್‍ನಲ್ಲಿ ತಮ್ಮ ಸಂಘಟನೆಯ ಬಗ್ಗೆ ಇನ್ನಷ್ಟು ಪ್ರಚಾರವಾಗುತ್ತದೆಂಬ ಏಕೈಕ ಆಕಾಂಕ್ಷೆಯೊಂದಿಗೆ ಒಪ್ಪಿಕೊಂಡರು. ಆದರೆ ಪೈವೀ ಕೌನ್ಸಿಲ್ ಟ್ರಿಬ್ಯುನಲ್‍ನ ತೀರ್ಪನ್ನು ಸರಿ ಎಂದಿತು. ನ್ಯಾಯದ ಅಪಹಾಸ್ಯವನ್ನು ಮಾಡಿದ್ದ ಬ್ರಿಟಿಷ್ ಸರ್ಕಾರದ ಒಂದು ಭಾಗವಾಗಿದ್ದ ಪ್ರೈವೀ ಕೌನ್ಸಿಲ್ ಇನ್ನೇನು ತಾನೇ ತೀರ್ಮಾನ ಕೊಡಲು ಸಾಧ್ಯವಿದ್ದಿತು!

ಗಾಂಧಿಯವರಲ್ಲಿ ಜನತೆಯ ಮನವಿ
ಜನತೆಗೆ ಕೊನೆಗೆ ಉಳಿದ ಒಂದೇ ಒಂದು ದಾರಿ ಎಂದರೆ ಗಾಂಧೀಜಿಯವರನ್ನು ಮಧ್ಯಪ್ರವೇಶ ಮಾಡುವಂತೆ ಕೇಳಿಕೊಳ್ಳುವುದಾಗಿತ್ತು. ದೇಶದ ಎಲ್ಲಾ ಕಡೆಗಳಿಂದಲೂ ಗಾಂಧೀಜಿಯವರಿಗೆ ಈ ಬಗ್ಗೆ ಬೇಡಿಕೆಯನ್ನು ಸಲ್ಲಿಸಲಾಯಿತು. ಜೈಲಿನಲ್ಲಿದ್ದ ಇತರೆ ಕ್ರಾಂತಿಕಾರಿಗಳೂ ಸಹ ಭಗತ್‍ಸಿಂಗ್, ಸುಖದೇವ್, ರಾಜಗುರುರವರ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿಯಾದರೂ ಪರಿವರ್ತಿಸಬೇಕೆಂದು ಕೇಳಿಕೊಂಡರು. ನೇತಾಜಿಯವರೂ ಸಹ ಗಾಂಧೀಜಿಯರಿಗೆ “ಭಗತ್‍ಸಿಂಗ್, ರಾಜಗುರು, ಸುಖದೇವ್‍ರ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿದರೆ ಮಾತ್ರ ಇರ್ವಿನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಅಂಗೀಕರಿಸಿ, ಇಲ್ಲದಿದ್ದರೆ ಒಪ್ಪಂದವನ್ನು ಮುರಿದುಬಿಡಿ” ಎಂದು ಕೇಳಿಕೊಂಡಿದ್ದರು. ಬ್ರಿಟಿಷರ ಜೊತೆ ಸಹಕರಿಸಲು ಒಪ್ಪಿ, ಗಾಂಧೀಜಿ ಒಪ್ಪಂದಕ್ಕೆ ಸಹಿ ಹಾಕಿದರು. ಕಾಂಗೆಸ್ಸಿಗರನ್ನೆಲ್ಲಾ ಬಿಡುಗಡೆ ಮಾಡುವಂತೆ ಮಾಡಿದರು. ಆದರೆ ಭಗತ್‍ಸಿಂಗ್ ಮತ್ತು ಅವರ ಸಂಗಾತಿಗಳ ಬಿಡುಗಡೆಯ ಬಗ್ಗೆ ಇರ್ವಿನ್‍ನನ್ನು ಆಗ್ರಹಿಸಲಿಲ್ಲ. ಅಷ್ಟೇ ಏಕೆ ಜೈಲಿನಲ್ಲಿ ಹತ್ತಾರು ವರ್ಷಗಳಿಂದ ಬಂಧಿತರಾಗಿದ್ದ ರಾಜಕೀಯ ಖೈದಿಗಳನ್ನೂ ಸಹ ಬಿಡುಗಡೆ ಮಾಡುವಂತೆ ಕೇಳಿಕೊಳ್ಳಲಿಲ್ಲ. ಗಾಂಧೀಜಿಯವರ ವಿಧಾನಗಳು ಕ್ರಾಂತಿಕಾರಿಗಳ ವಿಧಾನಗಳಿಗಿಂತ ಭಿನ್ನವಾಗಿತ್ತೆಂಬುದು ನಿಜ. ಆದರೂ ಕ್ರಾಂತಿಕಾರಿಗಳಿಗೆ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿತ್ತು. ಆದರೆ ಗಾಂಧೀಜಿಯವರಿಗೆ ಕ್ರಾಂತಿಕಾರಿಗಳ ವಿಧಾನಗಳ ಬಗ್ಗೆ ಮಾತ್ರವಲ್ಲದೆ, ಕ್ರಾಂತಿಕಾರಿಗಳ ಬಗ್ಗೆಯೂ ತೀವ್ರವಾದ ಅಸಮಾಧಾನವಿತ್ತೆಂಬುದು ಇದರಿಂದ ಸುಸ್ಪಷ್ಟ. ಕಾಂಗ್ರೆಸ್ಸಿಗರು ಕ್ರಾಂತಿಕಾರಿಗಳಂತೆ ಜೀವತ್ಯಾಗ ಮಾಡದಿದ್ದರು, ಸ್ವಾರ್ಥದ ಲವಲೇಶವಿಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಸಂಕಷ್ಟಗಳನ್ನು ಎದುರಿಸಿದ ಕ್ರಾಂತಿಕಾರಿಗಳ ಬಗ್ಗೆ ಸ್ವಲ್ಪವಾದರೂ ಪ್ರೀತಿ ಬೆಳೆಯದೇ ಇದ್ದದ್ದು ನಿಜಕ್ಕೂ ಆಶ್ಚರ್ಯವೇ. 
ಇಡೀ ದೇಶ ಗಾಂಧೀಜಿಯವರನ್ನು ತೀವ್ರವಾಗಿ ಖಂಡಿಸುತ್ತಿದ್ದರೂ, ಭಗತ್‍ಸಿಂಗ್, ರಾಜಗುರು ಸುಖದೇವ್, ಅವರನ್ನು ಟೀಕಿಸಲಿಲ್ಲ. ಇದು ಕ್ರಾಂತಿಕಾರಿಗಳ ಮಹಾನತೆಗೆ ಹಿಡಿದ ಕನ್ನಡಿಯಾಗಿದೆ. ಸುಖದೇವ್ ಗಾಂಧೀಜಿಯವರಿಗೆ ಪತ್ರ ಬರೆದರೂ ಅದು ತಮ್ಮನ್ನು ಉಳಿಸುವಂತೆ ಕೇಳಿಕೊಳ್ಳಲು ಅಲ್ಲ. ಬದಲಿಗೆ ಗಾಂಧೀಜಿಯವರ ವಿಧಾನಗಳು ಸ್ವಾತಂತ್ರ್ಯವನ್ನು ಗಳಿಸಲು ಅಸಮರ್ಥವಾಗಿವೆ ಮತ್ತು ಕ್ರಾಂತಿಕಾರಿಗಳ ವಿಧಾನಗಳು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಹೊಡೆದೋಡಿಸುವಲ್ಲಿ ಮಾತ್ರವಲ್ಲದೆ ಕ್ರಾಂತಿಯನ್ನು ಸ್ಥಾಪಿಸುವಲ್ಲಿ ಅಸಮರ್ಥವಾಗಿವೆ ಎಂಬುದನ್ನು ತೋರಿಸಲು. 

ಗಾಂಧಿಯವರ ವಿರುದ್ಧ ಜನತೆಯ ಕೂಗು
ಎಲ್ಲೆಡೆ ಗಾಂಧೀಜಿಯವರ ವಿರುದ್ಧ ಧಿಕ್ಕಾರದ ದನಿ ಎದ್ದಿತು. ಕಾಂಗ್ರೆಸ್ಸಿನ ಯುವ ಸಮುದಾಯ ಸಹ ಗಾಂಧೀಜಿಯ ವಿರುದ್ಧ ಬಂಡೆದ್ದಿತು. ಅದು ಎಷ್ಟರ ಮಟ್ಟಿಗೆ ತೀವ್ರವಾಗಿತ್ತೆಂದರೆ, ಗಾಂಧೀಜಿ ಕರಾಚಿ ಅಧಿವೇಶನಕ್ಕೆ ರೈಲಿನಲ್ಲಿ ಹೋಗುತ್ತಿದ್ದಾಗ, ಪ್ರತಿ ನಿಲ್ದಾಣದಲ್ಲಿಯೂ ಗಾಂಧೀಜಿಯ ವಿರುದ್ಧ ಘೋಷಣೆಯನ್ನು ಕೂಗಲಾಯಿತು, ಕಪ್ಪುಬಾವುಟ ಪ್ರದರ್ಶಿಸಲಾಯಿತು. “ಗಾಂಧೀಜಿ ಹಿಂದಿರುಗಿ”, “ಗಾಂಧಿವಾದಕ್ಕೆ ಧಿಕ್ಕಾರ” ಎನ್ನುವ ಕೂಗು ಗಾಂಧೀ ವಿರೋಧಿಗಳಿಂದ ಮಾತ್ರ ಬಂದದ್ದಲ್ಲ, ಗಾಂಧಿಯವರನ್ನು ಪ್ರೀತಿಸುವರಿಂದಲೇ ಬಂದದ್ದು. ಅಂದರೆ ಭಗತ್‍ಸಿಂಗ್ ಬಗ್ಗೆ ಜನತೆಗೆ ಎಷ್ಟು ಪ್ರೀತಿ ಬೆಳೆದಿತ್ತೆಂಬುದನ್ನು ಊಹಿಸಬಹುದು. ಕಾಂಗ್ರೆಸ್‍ನ ಕರಾಚಿ ಅಧಿವೇಶನದಲ್ಲಿ ಭಗತ್‍ಸಿಂಗ್ ಮತ್ತವರ ಸಂಗಾತಿಗಳ ಸಾಹಸವನ್ನು ಹೊಗಳಿ ಗೊತ್ತುವಳಿಯನ್ನು ಅಂಗೀಕರಿಸಲು ಗಾಂಧೀಜಿಯವರು ಒಪ್ಪಬೇಕಾಯಿತು. 

ಗಾಂಧೀಜಿಯವರಿಗೊಂದು ಪತ್ರ - "ಶಾಂತಿ ಎಲ್ಲಿ?"
ಗಾಂಧೀಜಿಯವರು ಮಾರ್ಚ್ 7 ರಂದು ದೆಹಲಿಯಲ್ಲಿ ಸಾರ್ವಜನಿಕ ಸಭೆಯೊಂದಕ್ಕೆ ಆಗಮಿಸಿದಾಗ ಒಂದು ಕರಪತ್ರವನ್ನು ಹಂಚಲಾಗಿತ್ತು - “ನೀವು ಶಾಂತಿ , ಶಾಂತಿ ಎನ್ನುವಿರಿ ಆದರೆ ಇಂದು ಶಾಂತಿ ಎಲ್ಲಿದೆ? ಶಾಂತಿಯನ್ನು ಹುಡುಕುವುದಾದರೆ, ಬ್ರಿಟಿಷರ ಬಂದೂಕಿನ ಗುಂಡಿಗೆ ಬಲಿಯಾದ ಅಥವಾ ಗಲ್ಲುಗಂಬಕ್ಕೆ ಏರಲು ಸಜ್ಜಾಗಿರುವ ಮಕ್ಕಳ ಮಾತೆಯರಲ್ಲಿ ಹುಡುಕಿ, ಜೈಲಿನ ಕತ್ತಲಿನ ಕೋಣೆಯಲ್ಲಿ ಕೊಳೆಯುತ್ತಿರುವ ಕ್ರಾಂತಿಕಾರಿಗಳ ಪತ್ನಿಯರನ್ನು ಕೇಳಿ ಅಥವಾ ದೇಶಕ್ಕಾಗಿ ಗಂಡನನ್ನು ಕಳೆದುಕೊಂಡ ವಿಧವೆಯನ್ನು ಕೇಳಿ. ಹುತಾತ್ಮರಿಗೆ ನೀವು ಮಾಡಬೇಕಾದ ಕರ್ತವ್ಯದ ಬಗ್ಗೆ ನಿಮಗೆ ನೆನಪಿದೆಯೇ? ಗಾಂಧಿ-ಇರ್ವಿನ್ ಒಪ್ಪಂದದಂತಹ ಅವಮಾನಕರ ಒಪ್ಪಂದಕ್ಕೆ ನೀವು ಭಾಗಿಯಾಗುವಿರಾ?” ಗಾಂಧೀಜಿಯವರು ಈ ಬಗ್ಗೆ ಏನೂ ಪ್ರತಿಕ್ರಿಯಿಸಲಿಲ್ಲ. ಮಾರ್ಚ್ 4 ರಂದು ಗಾಂಧಿ – ಇರ್ವಿನ್ ಒಪ್ಪಂದಕ್ಕೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಹಿ ಹಾಕಿದಾಗ ಇಡೀ ದೇಶದಲ್ಲಿ ಕಾಂಗ್ರೆಸ್‍ನ ನಾಯಕರ ವಿರುದ್ಧ ಕೂಗೆದ್ದಿತು. ಪ್ರಗತಿಪರ ವ್ಯಕ್ತಿಗಳೆಲ್ಲರೂ ಇದನ್ನು ದ್ರೋಹ ಎಂದು ಕರೆದರು. 

ದಯಾಭಿಕ್ಷೆಯ ತಿರಸ್ಕಾರ - ತಂದೆಗೊಂದು ಭಾವುಕ ಪತ್ರ
ಭಗತ್‍ರಿಗೆ ಎಲ್ಲರೂ ದಯಾಭಿಕ್ಷೆಯನ್ನು ಕೇಳಿ ಎಂದು ಹೇಳಿದ್ದರು. ಆದರೆ ಭಗತ್‍ರು ಅದಕ್ಕೆ ಒಪ್ಪುವ ಮಾತೇ ಇರಲಿಲ್ಲ. ಬ್ರಿಟಿಷರಲ್ಲಿ ದಯಾಭಿಕ್ಷೆಯೇ? ಭಗತ್ ಕನಸಿನಲ್ಲಿಯೂ ಊಹಿಸಲಾಗದ ವಿಚಾರವದು. ಆದರೆ ಜೈಲಿನಲ್ಲಿದ್ದ ಭಗತ್‍ಸಿಂಗ್, ಸುಖದೇವ್‍ರಿಗೆ ತಮ್ಮ ಬಂಧುಗಳು ತಮಗಾಗಿ ದಯಾಭಿಕ್ಷೆಯ ಮನವಿ ಮಾಡಿಕೊಂಡಿದ್ದರೆಂದು ತಿಳಿದು ಆಘಾತವಾಯಿತು. 

ಭಗತ್ ತಮ್ಮ ತಂದೆಗೆ ತೀಕ್ಷ್ಣವಾದ, ಸ್ವಲ್ಪ ಕಠೋರವೇ ಎನಿಸಬಹುದಾದ ಮಾತುಗಳಲ್ಲಿ ಪತ್ರವೊಂದನ್ನು ಬರೆದರು. “ಅಪ್ಪಾ, ನನ್ನನ್ನು ರಕ್ಷಿಸಲು ನೀವು ಟ್ರಿಬ್ಯುನಲ್‍ನ ಸದಸ್ಯರಿಗೆ ಮನವಿಯನ್ನು ಸಲ್ಲಿಸಿದ್ದೀರಿ ಎಂಬುದನ್ನು ಕೇಳಿ ನನಗೆ ತೀವ್ರವಾದ ಆಘಾತವಾಗಿದೆ. ಇದು ನನ್ನ ಮನಸ್ಸಿನ ಇಡೀ ಸಮತೋಲನವನ್ನೇ ಕಲಕಿದೆ. ಇಂತಹ ಸನ್ನಿವೇಶದಲ್ಲಿ ಅಂತಹ ಮನವಿಯನ್ನು ಸಲ್ಲಿಸುವುದು ಸರಿ ಎಂದು ನೀವು ಹೇಗೆ ಭಾವಿಸಿದಿರಿ? ತಂದೆಯಾಗಿ ನಿಮಗೆ ಎಷ್ಟೇ ಸೂಕ್ಷ್ಮ ಭಾವನೆ ಮತ್ತು ಭಾವುಕತೆಗಳಿದ್ದರೂ ಸಹ ನನ್ನನ್ನು ಕೇಳದೆಯೇ ನನ್ನ ಪರವಾಗಿ ಇಂತಹ ಕಾರ್ಯ ಕೈಗೊಳ್ಳಲು ನಿಮಗೆ ಯಾವುದೇ ಹಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯ ರಂಗದಲ್ಲಿ ನನ್ನ ವಿಚಾರಗಳು ನಿಮ್ಮ ವಿಚಾರಗಳಿಗಿಂತ ಭಿನ್ನವಾಗಿತ್ತೆಂಬುದು ನಿಮಗೆ ತಿಳಿದಿದೆ. . . ನೀವು ಬಹುಶಃ ಭಾವಿಸುವಂತೆ ನನ್ನ ಜೀವವೇನು—ಕಡೆಯ ಪಕ್ಷ ನನ್ನ ಪಾಲಿಗೆ-ಅಮೂಲ್ಯವಲ್ಲ. ನನ್ನ ಆದರ್ಶಗಳನ್ನು ಮಾರಾಟ ಮಾಡಿ ಅದನ್ನು ಗಳಿಸಿಕೊಳ್ಳುವ ಅಗತ್ಯವಿಲ್ಲ.  ನನ್ನ ಮೇಲೆ ಹೂಡಿರುವ ದಾವೆಯಷ್ಟೇ ನನ್ನ ಇತರ ಸಂಗಾತಿಗಳ ದಾವೆಗಳೂ ಗಂಭೀರವಾಗಿವೆ. ನಾವು ಒಂದು ಸಮಾನ ನೀತಿಯನ್ನು ಅನುಸರಿಸುತ್ತಿದ್ದೇವೆ ಮತ್ತು ಜೊತೆಜೊತೆಗೆ ಎಲ್ಲವನ್ನೂ ಎದುರಿಸಿದ್ದೇವೆ. ಆದ್ದರಿಂದ ವೈಯಕ್ತಿಕವಾಗಿ ಎಷ್ಟೇ ಕಷ್ಟವನ್ನು ಅನುಭವಿಸಿದರೂ ಸಹ ಕೊನೆಯವರೆಗೂ ನಾವು ಒಂದಾಗಿಯೇ ನಿಲ್ಲುತ್ತೇವೆ. ನಿಜಕ್ಕೂ ನಾನು ವಿಸ್ಮಯಾಘಾತಕ್ಕೆ ಒಳಗಾಗಿದ್ದೇನೆ. ನಿಮ್ಮ ಈ ನಡೆಯನ್ನು ಖಂಡಿಸುವಾಗ ಮರ್ಯಾದೆಯ ಸಾಮಾನ್ಯ ನಿಯಮಗಳನ್ನು ಗಮನಿಸದೇ ಇರಬಹುದು, ನನ್ನ ಭಾಷೆ ಸ್ವಲ್ಪ ಕಠಿಣವಾಗಿರಬಹುದು ಎಂಬ ಹೆದರಿಕೆ ನನಗಿದೆ. ಮುಚ್ಚುಮರೆಯಿಲ್ಲದೆ ಹೇಳಬೇಕೆಂದರೆ, ನನಗೆ ಬೆನ್ನಲ್ಲಿ ಚೂರಿ ಹಾಕಿದಂತೆನಿಸುತ್ತಿದೆ.”

ದೇಶಬಾಂಧವರಿಗೊಂದು ಸಂದೇಶ
1931ರ ಮಾರ್ಚ್ ಮೂರರಂದು ಅವರ ತಂದೆ ತಾಯಿ, ತಮ್ಮ ಕುಲ್ತಾರ್ ಸಿಂಗ್ ಸೇರಿದಂತೆ ಕುಟುಂಬದವರೆಲ್ಲಾ ಅವರನ್ನು ಭೇಟಿಯಾಗಲು ಬಂದಿದ್ದರು. ಭಗತ್‍ಸಿಂಗ್ ತಮ್ಮ ಎಂದಿನ ಶೈಲಿಯಲ್ಲಿಯೇ ಕ್ರಾಂತಿಕಾರಿ ಸ್ಫೂರ್ತಿ ಹಾಗೂ ಲವಲವಿಕೆಯೊಂದಿಗೆ ಮಾತನಾಡಿದರು. ಮುಂಬರಲಿದ್ದ ಮರಣ ಅವರ ಮಾನಸಿಕ ಸಮತೋಲನವನ್ನು ಯಾವುದೇ ರೀತಿಯಲ್ಲಿ ಹರಣಗೊಳಿಸಿರಲಿಲ್ಲ. ಕುಟುಂಬದವರಿಗೆ ಕಣ್ಣೀರಿಡದಂತೆ, ತಮ್ಮನ್ನು ನಗುನಗುತ್ತಾ ಕಳಿಸಿಕೊಡುವಂತೆ ಕೇಳಿಕೊಂಡರು. ಆದರೆ ಅವರ ತಮ್ಮ ಕುಲ್ತಾರ್‍ಸಿಂಗ್‍ರಿಗೆ ದುಃಖವನ್ನು ತಡೆದುಕೊಳ್ಳಲಾಗದೆ ಕಣ್ತುಂಬಿ ಬಂತು. ಇದನ್ನು ಕಂಡು ಭಗತ್ ಸಹ ಭಾವ ಪರವಶರಾದರು. ಅವರೆಲ್ಲರೂ ಜೈಲಿನಿಂದ ಹಿಂತಿರುಗಿದ ನಂತರ ಕುಲ್ತಾರರಿಗೆ ಭಗತ್ ಒಂದು ಪತ್ರ ಬರೆದರು. ಆ ಪತ್ರ ಅಣ್ಣ ತಮ್ಮನ ನಡುವಿನ ಬಾಂಧವ್ಯದ ಸಂಕೇತ ಮಾತ್ರವಾಗಿರದೆ, ಒಬ್ಬ ಕ್ರಾಂತಿಕಾರಿ ಸಾವನ್ನು ಹೇಗೆ ಸ್ವೀಕರಿಸಬೇಕೆಂಬುದಕ್ಕೆ ಉಜ್ವಲ ಸಾಕ್ಷಿಯ ದಾಖಲೆಯಾಗಿದೆ. ಆ ಪತ್ರದ ಮೂಲಕ ಅವರು ತಮ್ಮ ದೇಶಬಾಂಧವರಿಗೂ ಸಂದೇಶವನ್ನು ನೀಡಿದ್ದರು. ಅವರು ಆ ಪತ್ರದಲ್ಲಿ ಬರೆದದ್ದು, “ಇಂದು ನಿನ್ನ ಕಣ್ಣೀರನ್ನು ಕಂಡು ನನಗೆ ಬಹಳ ನೋವಾಯಿತು. ನಿನ್ನ ದನಿಯಲ್ಲಿ ದುಃಖವಿತ್ತು. ನಿನ್ನ ಕಣ್ಣೀರನ್ನು ನೋಡಲು ಸಾಧ್ಯವಿಲ್ಲ. ತಮ್ಮಾ, ಧೈರ್ಯವಾಗಿ ಓದನ್ನು ಮುಂದುವರೆಸು, ನಿನ್ನ ಬಗ್ಗೆ ಗಮನವಿರಲಿ. ಹತಾಶನಾಗಬೇಡ... ಇನ್ನೇನು ಬರೆಯಲಿ? ಇನ್ನೇನು ತಾನೆ ನಾನು ಹೇಳಬಲ್ಲೆ, ಕೇಳು. . .
ಮರ್ದನದ ಹೊಸ ವಿಧಾನಗಳನ್ನವರು ಹುಡುಕುತ್ತಲೇ ಇದ್ದಾರೆ
ಎಷ್ಟು ದೂರ ಸಾಗಿಯಾರೆಂದು ನಾವು ಕಾತರದಿಂದ ಕಾಯುತ್ತಿದ್ದೇವೆ. 
ಜೀವನದ ಕುರಿತಾಗಿ ನಾವು ಕೋಪಗೊಳ್ಳುವುದೇಕೆ?
ನಮ್ಮದೊಂದು ವಿಭಿನ್ನ ಜಗತ್ತು, ಅದಕ್ಕಾಗಿ ನಾವು ಸಮರವನ್ನೇ ಸೆಣಸೋಣ.
ಓ ಪಕ್ಷದ ಬಂಧುವೇ - ಎನಗುಳಿದಿರುವುದು ಇನ್ನೊಂದೆರಡು ಘಳಿಗೆ ಮಾತ್ರ, 
ಮುಂಜಾವಿನ ದೀಪ ನಾನು, ಇನ್ನೇನು ಆರಿಹೋಗಲಿದ್ದೇನೆ;
ಎನ್ನ ದೇಶದ ಬಂಧುಗಳೆ ಸಂತಸದಿ ಉಳಿಯಿರಿ, ಇನ್ನು ನಮ್ಮ ಕಥೆ,
ನಾವಿನ್ನು ಹೊರಟೆವು.
ವಿದಾಯ! ವಿದಾಯ ನಿಮಗೆ!
ಧೀರರಾಗಿರಿ ಎಂದೂ!
(ಮುಂದುವರೆಯುತ್ತದೆ)

ಶಾಲಾ ಡೈರಿ - ಭರವಸೆಯ ಬೆಳಕಿನಲ್ಲಿ.....


ಕನಸಿದ ವೃತ್ತಿಯೇ ಕೈಗೆಟುಕಿದಾಗಿನಿಂದ ಅದೇ ಕನಸು. ಕಲಿಸಿದ ಮಕ್ಕಳು ಶ್ರೇಷ್ಠ ನಾಯಕರಾಗದೇ ಹೋದರೂ ತನ್ನ ಮನೆಯ,ತನ್ನೂರಿನ ಖಳನಾಯಕರಾಗದಿರಲೆಂದು! ನಾನು ಕಲಿತ ಪುಣ್ಯಕೋಟಿಯ ಹಾಡುಮೇಷ್ಟ್ರು, ಮೇಡಂಗಳು ಅಕ್ಷರದ ಜೊತೆಗೆ ಅನ್ನವನ್ನೂ ತಂದುಕೊಟ್ಟ ಅಂತಃಕರಣದ ಅರಿವನ್ನೇ ನಾನು ಕಲಿಸಿದ/ಕಲಿಸುವ ಮಕ್ಕಳಿಗೂ ದಾಟಿಸುವ ಪ್ರಯತ್ನ.

  ಬೆಳೆದಂತೆಲ್ಲಾ ಮಕ್ಕಳು ಏಕೆ ಬದಲಾಗುತ್ತಾರೆಕಲಿಸಿದ ಗುರುಗಳಂತಿರಲಿಹಡೆದ ತಾಯ್ತಂದೆಯರನ್ನು ಅಲಕ್ಷ್ಯದಿಂದ ನೋಡುವಷ್ಟು ಅವರೇಕೆ ಬದಲಾಗುತ್ತಾರೆ!?

ಇಂಗ್ಲೀಷ್ ಅಕ್ಷರಗಳನ್ನು ಕಲಿಯಲೇ ಅದೆಷ್ಟು ಪೆಟ್ಟು ತಿಂದಿದ್ದನೋ ಆ ಹುಡುಗಮೊನ್ನೆ ಮೊನ್ನೆ ತನ್ನ ತಾಯಿಯನ್ನು ನೆಲಕ್ಕೆ ಕೆಡವಿ 'ಸಿಚುಯೇಷನ್ ಅರ್ಥವಾಗಲ್ವ ನಿಂಗೆ' ಅಂತ ಬಡಿಯುವಾಗ ನಾನು ಬೆದರಿಬಿಟ್ಟೆ! 'ನಿಮ್ಮ ಪಾಠ ಸ್ಕೂಲಿನಲ್ಲಿ ಮೇಡಂ' ಅಂದಾಗಅವತ್ತು ನೆಲಕ್ಕೆ ಬಿದ್ದು ಹೊರಳಾಡುವಂತೆ ಬಡಿದ್ದದ್ದು ಇವನಿಗೇನಾ?ಅನ್ನಿಸಿತು.
ಅಪ್ಪಅಮ್ಮ ಇಬ್ಬರೂ ಶಿಕ್ಷಕರೆ. ಅವರೀಗ ಕ್ಷಣ ಕ್ಷಣ ಇನ್ನೂ ಇಪ್ಪತ್ತು ದಾಟದ ಮಗನಿಗೆ ಹೆದರಿ ನಡುಗುತ್ತಾರೆ! ಅವನ ಬೇಡಿಕೆಗಳಿಗೆ ಇಲ್ಲವೆನ್ನದೆ ಪೂರೈಸುತ್ತಾರೆ. ಅದೇ ಶಾಲೆಯಲ್ಲಿ ಕಲಿತಈಗ ಎಂಜಿನಿಯರಿಂಗ್ ಕೋರ್ಸ್ ಮುಗಿಸಿರುವ ಅವರ ಮಗಳು ಅಪ್ಪಅಮ್ಮರಿಗೆ ಬೇಸರ ಕೊಡದಂತೆ ಚಂದಗೆ ಬದುಕುತ್ತಿದ್ದಾಳೆ!
ಬಿಡಲೇಅವನೇನು/ಅವಳೇನು ಕಲಿಸಿದ್ದು ಅಂತ ಉದ್ಧಟತನದ ಮಾತಾಡುವಷ್ಟು ಅಹಮಿಕೆ ಇವರಿಗೆಲ್ಲ ಎಲ್ಲಿಂದ ಬರುತ್ತದೆ!?
ಅಥವಾ ನಾವು ಕಲಿಸುವಲ್ಲಿಯೇ ದೋಷವಿದೆಯಾ?ಪುಣ್ಯಕೋಟಿಯ ಹಾಡು ಕೇಳಿ ಕಣ್ಣೀರಾಗುತ್ತಿದ್ದ ನಾವುಇವತ್ತಿನ ಮಕ್ಕಳಲ್ಲಿ ಅದನ್ನು ನಿರೀಕ್ಷಿಸಬಾರದು. ನಿಜಆದರೆ ಬದುಕಿಗೆ  ಅಗತ್ಯವಾದದ್ದನ್ನು ಪ್ರಾಮಾಣಿಕವಾಗಿ ಕಲಿಸುವ ಪ್ರಯತ್ನವನ್ನು ಅಸಂಖ್ಯ ಶಿಕ್ಷಕರು ಮಾಡುತ್ತಿದ್ದಾರೆ. ಫಲಿತಾಂಶ ಮಾತ್ರ ನಿರಾಶಾದಾಯಕ‌.

  ಉನ್ನತ ಹುದ್ದೆಗಳಲ್ಲಿದ್ದು ಎದುರು ಸಿಕ್ಕಾಗ ವಿನೀತವಾಗಿ ನಡೆದುಕೊಳ್ಳುವಸಣ್ಣ ಸಂಬಳದಲ್ಲಿಯೂ ಹೆತ್ತವರಿಗೆ ಹೊರೆಯಾಗದಂತೆ ಬದುಕುವಸಾಮಾಜಿಕವಾಗಿಯೂ ತುಡಿಯುವ ಕೆಲಮಕ್ಕಳು ತೀವ್ರ ನಿರಾಸೆಯ ಅಪಾಯದಿಂದ ತಪ್ಪಿಸುತ್ತಾರೆ. ಕಲಿತ ಒಳಿತನ್ನು ಇತರರಿಗೂ ಹಂಚಿ ಕನಸನ್ನು ಕಾಪಿಡುತ್ತಾರೆ. ಇಂತವರ ಸಂತತಿ ಸಾವಿರವಾಗಲೆಂದೇ ನನ್ನಂಥವರ ಆಶಯ.


     ~ರಂಗಮ್ಮ ಹೊದೇಕಲ್

ವ್ಯಕ್ತಿ ಪರಿಚಯ - ಆರ್. ಕಲ್ಯಾಣಮ್ಮ


ಮೂಲತಃ ತಮಿಳಿನವರಾದ ಕಲ್ಯಾಣಮ್ಮನವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾರೆ.  ಇವರು ಸಾಹಿತ್ಯ ಸೇವೆಯೊಂದಿಗೆ ಸಮಾಜ ಸೇವೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿದರು.
ಮಧ್ಯಮ ವರ್ಗದ ಕುಟುಂಬದಲ್ಲಿ ರಾಮಸ್ವಾಮಿ  ಅಯ್ಯಂಗಾರ್  ಮತ್ತು ಜಾನಕಮ್ಮನವರ ಮಗಳಾಗಿ  ಕಲ್ಯಾಣಮ್ಮ1892 ರಲ್ಲಿ ಜನಿಸಿದರು. ನಂತರ ಇವರನ್ನು  ಆರ್ಯ ಬಾಲಿಕಾ ಶಾಲೆಗೆ ಸೇರಿಸಿದರು. ಇವರು ಕಡಿಮೆ ಮಾತನಾಡುತ್ತಿದ್ದರೂ ಕಲಿಯುವುದರಲ್ಲಿ ಹೆಚ್ಚಿನ  ಆಸಕ್ತಿಯನ್ನು ತೋರುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದುವ ಹವ್ಯಾಸದೊಂದಿಗೆ ಪತ್ರಿಕೆಗಳಿಗೂ ಬರೆಯುತ್ತಿದ್ದರು.
ಅಂದಿನ ಬಹು ದೊಡ್ಡ ಸಮಸ್ಯೆ ಎಂದರೆ  ಬಾಲ್ಯವಿವಾಹ, ಅದರಂತೆ ಇವರಿಗೂ ಸಹ ಆಡುವ ವಯಸ್ಸಿನಲ್ಲಿಯೇ ಅಂದರೆ 9 ವರ್ಷವಿದ್ದಾಗಲೇ ಮದುವೆಯಾಯಿತು.  ಇದರಿಂದ ವಿದ್ಯಾಭ್ಯಾಸವೂ ಕೊನೆಗೊಂಡಿತು. ಮದುವೆ, ಗಂಡ ಎಂದರೆ ಏನು ಎಂದು ತಿಳಿಯದ ಇವರು ಮದುವೆಯಾದ 45 ದಿನಗಳಲ್ಲೇ ವಿಧವೆಯಾದರು.
ಅಂದಿನ ಸಂಪ್ರದಾಯಸ್ಥ ಸಮಾಜವು ಕಲ್ಯಾಣಿಯನ್ನು ವಿಧವೆಯೆಂದು ನಾಲ್ಕು ಗೋಡೆಗಳ ನಡುವೆ ಇರುವುದನ್ನು ತಪ್ಪಿಸಿದುದು ಅವರ  ಚಿಕ್ಕಪ್ಪ ಕೃಷ್ಣಯ್ಯಂಗಾರ್. ಪ್ರಾಧ್ಯಾಪಕರಾಗಿದ್ದ ಇವರು ಶಿಕ್ಷಣದ ಬಗ್ಗೆ  ತಿಳಿದಿದ್ದು "ಹೆಣ್ಣು ಮಕ್ಕಳಿಗೆ  ಶಿಕ್ಷಣ ಅವಶ್ಯಕವಾದದ್ದು"  ಇವಳು ಸೂಕ್ಷ್ಮಮತಿ, ಓದನ್ನು ಮುಂದುವರಿಸಲು ಅವಕಾಶ ಮಾಡಿಕೊಡಿ ಎಂದು ಅಣ್ಣನಿಗೆ  ಹೇಳಿಕಲ್ಯಾಣಿಯನ್ನು ಓದಲು ಪ್ರೋತ್ಸಾಹಿಸಿ ಲೋಯರ್ ಸೆಕೆಂಡರಿ ಪರೀಕ್ಷೆಯನ್ನು  ತೆಗೆದುಕೊಂಡು ಉತ್ತೀರ್ಣರಾಗಲು ಕಾರಣರಾದರು. ಹೀಗೆ ಚಿಕ್ಕಪ್ಪನ ಒಂದು ಸಲಹೆ ಇವರ ಜೀವನದ ಪಥವನ್ನೇ ತಿರುಗಿಸಿತು. 
ಮುಂದೆ ಓದುವ ಆಸೆಯಿದ್ದರೂ ಅನುಕೂಲತೆಗಳಿರದಿದ್ದರಿಂದ ಅವರ ಓದು ಅಷ್ಟಕ್ಕೇ ಮುಗಿಯಿತು. ನಂತರ ಮನೆಯಲ್ಲಿಯೇ ಇದ್ದ ಪ್ರಾಚೀನ ತಮಿಳು ಮತ್ತು ಕನ್ನಡ ಗ್ರಂಥಗಳನ್ನು ಮತ್ತು ಚಿಕ್ಕಪ್ಪ ಕಳುಹಿಸಿಕೊಡುತ್ತಿದ್ದ ಪುಸ್ತಕಗಳನ್ನು ಓದುತ್ತಿದ್ದರಿಂದ ಇವರ ಬೌದ್ಧಿಕ ಜ್ಞಾನ ಬೆಳೆದು ಹೊರ ಪ್ರಪಂಚದ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು.  
ಇದರ ಫಲವಾಗಿ ಇವರು ತಾವು ಓದಿದ ಮತ್ತು ತಿಳಿದುಕೊಂಡ ವಿಷಯಗಳನ್ನು ಕುರಿತು ಕಥೆಗಳು, ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು.  ಅವುಗಳು "ಸಾಧ್ವಿ, ಕಂಠೀರವ, ವಿದ್ಯಾದಾಯಿನಿ" ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಇವರ ಬರವಣಿಗೆಯಲ್ಲಿ ಸಾಮಾಜಿಕ ಸಮಸ್ಯೆಗಳು ಪ್ರಮುಖ ವಿಷಯಗಳಾಗಿದ್ದವು.
ಇವರು ತಮಗೆ ಬಂದ ವಿಧವಾಪಟ್ಟದಿಂದ ವಿಚಲಿತರಾಗದೆ ತಮ್ಮನ್ನು  ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತಮ್ಮಂತಹ ಇತರೆ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದರು. ಇದಕ್ಕಾಗಿ"ಶ್ರೀ ಶಾರದ ಸ್ತ್ರೀ  ಸಮಾಜ"ವನ್ನು 1913 ಏಪ್ರಿಲ್ 26 ರಲ್ಲಿ ಸ್ಥಾಪಿಸಿದರು.ಮೊದಲಿಗೆ ಸರ್ಕಾರಿ ಬಾಲಿಕಾ ಪಾಠಶಾಲೆಯಲ್ಲಿ ಪ್ರಾರಂಭವಾದ
ಈ ಸಮಾಜದಲ್ಲಿ ಎಲ್ಲಾ ವರ್ಗದ ಮಹಿಳೆಯರಿಗೂ ಆಧ್ಯತೆ ನೀಡಲಾಗಿತ್ತು. ಮಹಿಳೆಯರು ಸ್ವತಂತ್ರವಾಗಿ  ಜೀವನ ನಿರ್ವಹಿಸಲು  ಬೇಕಾಗುವಂತಹ ತರಬೇತಿಗಳನ್ನು ನೀಡಲಾಗುತ್ತಿತ್ತು  ಮತ್ತು ಪ್ರಮುಖ ಸ್ತ್ರೀ ಮತ್ತು ಪುರುಷರ ಜೀವನ ಮೊದಲಾದವುಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು. ಒಟ್ಟಾರೆ ಮಧ್ಯಮ ಮತ್ತು ಬಡ ವರ್ಗದ ಮಹಿಳೆಯರಿಗೆ ಈ ವೇದಿಕೆಯು ತುಂಬಾ ಅನುಕೂಲಗಳನ್ನು ಒದಗಿಸಿಕೊಟ್ಟಿತ್ತು.
ಇದನ್ನೆಲ್ಲಾ ಗಮನಿಸಿದ ಸರ್ಕಾರ ಈ ಸಮಾಜಕ್ಕೆ 1919 ರಲ್ಲಿ ಉಚಿತವಾಗಿ ಸ್ಥಳವನ್ನು ನೀಡಿತು. ನಂತರ ಸಾರ್ವಜನಿಕ ವಂತಿಗೆಯನ್ನು ಸಂಗ್ರಹಿಸಿ ಗ್ರಂಥಾಲಯಉಪನ್ಯಾಸ ಮಂದಿರ, ಆಟದ ಮೈದಾನ,ಕುಶಲ ಕೈಗಾರಿಕೆ  ಮೊದಲಾದ ಸೌಕರ್ಯ ಗಳನ್ನೊಳಗೊಂಡ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಎಷ್ಟೇ ನಿಸ್ವಾರ್ಥ ಸೇವೆಯನ್ನು ಮಾಡಿದರೂ ಇವರು ಹಣದ ದುರುಪಯೋಗದ ಆರೋಪವನ್ನು ಎದುರಿಸ ಬೇಕಾಯಿತು. ಇದನ್ನು ಸಹಿಸದ ಇವರು 1926 ರಲ್ಲಿ ಸಮಾಜದಿಂದ ಹೊರ ಬಂದರು.
ನಂತರ ಈ ಮೊದಲೆ ಸ್ಥಾಪಿತವಾಗಿ ನಿಂತುಹೋಗಿದ್ದ "ಸರಸ್ವತಿ"ಪತ್ರಿಕೆಯನ್ನು 1917 ರಲ್ಲಿ ಮತ್ತೆ  ಹೊರ ತರುವುದರ ಮೂಲಕ ಸಮಾಜದಿಂದ ದೂರವಾದ ನೋವನ್ನು ಮರೆತರು. ಆಗ ತಿರುಮಲಾಂಬರವರ "ಕರ್ನಾಟಕ ನಂದಿನಿ" ಮತ್ತು ಶ್ಯಾಮಲಾ ಬೆಳಗಾಂವಕರ್ ರವರ "ಜಯಕರ್ನಾಟಕ"ಪತ್ರಿಕೆಗಳಿದ್ದರೂ ಇವರ ಸರಸ್ವತಿ ಪತ್ರಿಕೆ "ಮಹಿಳೆಯರ ಸಹಾಯದಿಂದ ಮಹಿಳೆಯರಿಗಾಗಿ ಪ್ರಕಟಿಸಲ್ಪಡುವ ಮಾಸಪತ್ರಿಕೆ"ಎಂಬ ಹೆಗ್ಗಳಿಕೆಯನ್ನು ಪಡೆಯಿತು. ಈಪತ್ರಿಕೆಯಲ್ಲಿ ಯರಲ್ಲದೆ 
ಟಿ.ಪಿ.ಕೈಲಾಸಂಜಿ.ಪಿ.ರಾಜರತ್ನಂಡಿ.ವಿ.ಜಿ. ಮೊದಲಾದವರ ಲೇಖನಗಳು ಪ್ರಕಟವಾಗುತ್ತಿದ್ದವು. ಈ ಪತ್ರಿಕೆಯಲ್ಲಿ ನಾಟಕಗಳನ್ನು ಪ್ರಕಟಿಸುತ್ತಿದ್ದರು. ಹಾಗು ಸಂಗೀತಕ್ಕೂ ಪ್ರೋತ್ಸಾಹ ನೀಡಿ ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಕಟಿಸುತ್ತಿದ್ದರು. ಮಹಿಳೆಯರಿಗೆ ಹೊರ ಜಗತ್ತಿನ ವಿಷಯಗಳ ಬಗ್ಗೆ  ತಿಳುವಳಿಕೆ ನೀಡುವಂತಹ ವಿಚಾರ,ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ವಿಭಾಗಆಹಾರಆರೋಗ್ಯಅಡುಗೆ ಹೀಗೆ ಎಲ್ಲಾ ವಿಷಯಗಳು ಈ ಪತ್ರಿಕೆಯಲ್ಲಿರುತ್ತಿದ್ದವು.ಮಹಿಳೆಯರಲ್ಲಿ ಸ್ಪೂರ್ತಿ ತರುವ ಉದ್ದೇಶದಿಂದ ವಿಶೇಷವಾಗಿ ಸಾಧನೆ  ಮಾಡಿದ ಮಹಿಳೆಯರ ಚಿತ್ರಗಳನ್ನು  ಪ್ರಕಟಿಸುತ್ತಿದ್ದರು. ಬೇರೆ ಭಾಷೆಗಳಿಂದ ಅನುವಾದಿಸಿದ ಸಾಧನೆ ಮಾಡಿದ ಮಹಿಳೆಯರ ಜೀವನ ಕಥೆಗಳನ್ನು ಬರೆಯುತ್ತಿದ್ದರು. ಇದರಿಂದ ಭಾಷೆ ಅರಿವಿಲ್ಲದಿದ್ದರೂ  ವಿದೇಶಿ ಮಹಿಳೆಯರ ಬಗ್ಗೆಯೂ  ತಿಳಿಯುವಂತಾಯಿತು.
ಈ ಪತ್ರಿಕೆಯ ಜನಪ್ರಿಯತೆ ಎಷ್ಟಿತ್ತೆಂದರೆ  ಅಂಚೆ ಮೂಲಕ ಪ್ರತಿಗಳನ್ನು ತರಿಸಿಕೊಂಡು ಓದುತ್ತಿದ್ದರು. ಒಮ್ಮೆ ಹೀಗೆ ತರಿಸಿಕೊಳ್ಳುತ್ತಿದ್ದವರ ಮನೆಗೆ ಸ್ವತಃ ಕಲ್ಯಾಣಮ್ಮನವರೇ ಹೋಗಿ ಪತ್ರಿಕೆಯನ್ನು ಕೊಟ್ಟು ಅವರನ್ನು ಪ್ರೋತ್ಸಾಹಿಸಿ, ಮಾರ್ಗದರ್ಶನ ನೀಡಿದ್ದರ ಫಲವಾಗಿ ಮುಂದೆ ಅವರೆ ಆ ಪತ್ರಿಕೆಗೆ ಲೇಖನಗಳನ್ನು ಬರೆಯುವಂತಾದರು.
ಇನ್ನೊಮ್ಮೆ ಓದುವ ಆಸಕ್ತಿಯಿದ್ದು ಆರ್ಥಿಕ ಅನಾನುಕೂಲದಿಂದ ಪತ್ರಿಕೆಯನ್ನು ತೆಗೆದು ಕೊಳ್ಳಲಾಗುತ್ತಿಲ್ಲ ,ನೀವೆ ಉಚಿತವಾಗಿ ಕಳುಹಿಸಿಕೊಡಿ ಎಂದು ಉಡುಪಿಯಿಂದ ಓದುಗರೊಬ್ಬರು ಕಾಗದವನ್ನು ಬರೆದಿದ್ದ ವಿಷಯವನ್ನು ತಿಳಿಸುತ್ತಾ "ನಮ್ಮ ಈ ಅಲ್ಪ ಸೇವೆಯನ್ನು ಸ್ವೀಕರಿಸಲು ಈ ನಮ್ಮ ಸೋದರಿಯು ಮುಂದೆ ಬಂದಿರುವುದು ಸಂತೋಷದ ಸಂಗತಿ " ಎಂದು ಆ ಮಹಿಳೆಯ ಧೈರ್ಯವನ್ನು ಹೊಗಳಿದ್ದಾರೆ. ಈ ಎರಡು ಸಂಗತಿಗಳನ್ನು ನೋಡಿದರೆ ಪತ್ರಿಕೆಯ ಎಷ್ಟು  ಜನಪ್ರಿಯತೆಯನ್ನು ಪಡೆದಿತ್ತು ಎಂಬುದು ತಿಳಿಯುತ್ತದೆ. ಹಾಗೆ ಇವರ ಈ ಪತ್ರಿಕೆಯಲ್ಲಿ  ಜನಪ್ರಿಯವಾಗಿದ್ದ ಇನ್ನೊಂದು  ವಿಭಾಗವೆಂದರೆ " ಮಕ್ಕಳ ಬಾವುಟ" ಎಂಬ ಮಕ್ಕಳ ವಿಭಾಗ.ಇವರು ಮಕ್ಕಳನ್ನು ಪ್ರೋತ್ಸಾಹಿಸಲು ಮಕ್ಕಳಿಗೆ ಸಂಪಾದಕತ್ವವನ್ನು ನೀಡಿ,ಮಕ್ಕಳೇ ಶಿಶುಗೀತೆಗಳು ಮತ್ತು ನೀತಿಕಥೆಗಳನ್ನು ಬರೆಯುವಂತೆ ಉತ್ತೇಜನವನ್ನು ನೀಡುತ್ತಿದ್ದರು.
ಮಕ್ಕಳ ಬಗ್ಗೆ  ಇವರಿಗೆ ಅಪಾರವಾದ ಪ್ರೀತಿ. ಮಹಿಳೆಯರ ಜೊತೆ ಜೊತೆಯಲ್ಲಿಯೇ ಮಕ್ಕಳ ಅಭಿವೃದ್ಧಿಯ ಬಗ್ಗೆಯೂ ಚಿಂತಿಸಿ ತಾವು ಪ್ರಾರಂಭಿಸಿದ ಸಮಾಜದಲ್ಲಿ ಬಾಲವಾಡಿಯನ್ನು ತೆರೆದಿದ್ದರು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ,ಅವರ ಸೃಜನಶೀಲ ಬೆಳವಣಿಗೆಗಾಗಿ ಅವಕಾಶವನ್ನು ನೀಡಲು ಎಲ್ಲಾ ಮಕ್ಕಳನ್ನು ಒಂದೆಡೆ ಸೇರಿಸಿ1938 ರಲ್ಲಿ" ಅಖಿಲ ಕರ್ನಾಟಕ ಮಕ್ಕಳ ಕೂಟ"ವನ್ನು ಪ್ರಾರಂಭಿಸಿದರು. ಅಲ್ಲಿ ಮಕ್ಕಳಿಗಾಗಿ ಕಂಠಪಾಠ, ಕಸೂತಿ,ಕವನ,ಕಥೆ, ಚರ್ಚೆ, ಚಿತ್ರ ಬರೆಯುವುದು ಮೊದಲಾದ ಸ್ಪರ್ಧೆಗಳನ್ನು ನಡೆಸುತ್ತಿದ್ದರು. ಮಕ್ಕಳಿಗಾಗಿ ಉಪಯುಕ್ತ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಹಲವಾರು ಕಡೆಗಳಲ್ಲಿ ಮಕ್ಕಳ ಸಮ್ಮೇಳನಗಳನ್ನು ನಡೆಸುತ್ತಿದ್ದರು. ಈ ಸಮ್ಮೇಳನಗಳಲ್ಲಿ ಮಕ್ಕಳನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಿದ್ದರು. ಹೀಗೆ ಎಲ್ಲಾ ಮಕ್ಕಳನ್ನು ತಮ್ಮದೇ ಎಂದು ತಿಳಿದು ಮಾತೃವಾತ್ಸಲ್ಯವನ್ನು ನೀಡುತ್ತಿದ್ದರು.
ಸಮಾಜ ಸೇವೆಯೇ  ದೇಶಸೇವೆಯೆಂದು ತಿಳಿದ ಇವರು  " ದೇಶ ಸ್ವತಂತ್ರಗೊಂಡರೆ ಸಾಲದು ಪ್ರಜೆಗಳು ಅಭಿವೃದ್ಧಿ  ಹೊಂದಬೇಕು" ಇಂದಿನ ಮಕ್ಕಳು ನಾಳಿನ ಪ್ರಜೆಗಳು ಹಾಗಾಗಿ ಮಕ್ಕಳು ಮತ್ತು ಮಕ್ಕಳನ್ನು ಬೆಳೆಸುವ ಮಹಿಳೆಯರ ಅಭಿವೃದ್ಧಿಗೆ ಒತ್ತು ಕೊಟ್ಟು  ಶ್ರಮಿಸಿದರು .
ಇವರ ನಿಸ್ವಾರ್ಥ ಸೇವೆ ಮತ್ತು ಶ್ರಮದ ಫಲವಾಗಿ ಹಲವಾರು ಗೌರವ ಹುದ್ದೆ ಗಳು,ಬಿರುದುಗಳಿಗೆ ಭಾಜನರಾದರು.
ಇವರ ಬರವಣಿಗೆಯು ಓದುಗರೊಂದಿಗೆ ಹಿರಿಯ ಸಾಹಿತಿಗಳ ಮೆಚ್ಚುಗೆಯನ್ನು  ಪಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಅಂದಿನ ಅಧ್ಯಕ್ಷರು ಬಿ.ಎಂ.ಶ್ರೀ ಯವರು ಕಲ್ಯಾಣಮ್ಮನವರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಮಹಿಳಾ ಸದಸ್ಯೆಯಾಗಿ ಆಯ್ಕೆ ಮಾಡಿದರು. ಇದರಿಂದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹಲವಾರು ಸಂಘ ಸಂಸ್ಥೆಗಳು ಇವರನ್ನು ಭಾಷಣಕಾರರಾಗಿ ಆಹ್ವಾನ ನೀಡಿದವು. ಕಲ್ಯಾಣಮ್ಮನವರು ತಮ್ಮ ಎಲ್ಲಾ ಭಾಷಣಗಳಲ್ಲಿ ಶಿಕ್ಷಣ ಮತ್ತು ಮಹಿಳೆಯರನ್ನು ಕುರಿತು  ವಿಚಾರಗಳನ್ನು ಮಂಡಿಸುತ್ತಿದ್ದರು. ಇದನ್ನು ಗಮನಿಸಿದ ಸರ್ಕಾರ 1921-22 ರ ಅವಧಿಗೆ ಕನ್ನಡ ಲೊಯರ್ ಸೆಕೆಂಡರಿ ಪರೀಕ್ಷೆಗೆ ಪರಿವೀಕ್ಷಕರನ್ನಾಗಿ ನೇಮಿಸಿತು.
1926
ರಲ್ಲಿ ನ್ಯಾಷನಲ್ ಕಾಲೇಜಿನ "ಬಾಲ ಕರ್ನಾಟಕ ಸಂಘ" ದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇದರ ವಿದ್ಯಾಪ್ರಚಾರದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
1932
ರಲ್ಲಿ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
1933
ರಲ್ಲಿ ಸರ್ಕಾರದಿಂದ ಬೆಂಚ್ ಮ್ಯಾಜಿಸ್ಟ್ರೇಟ್  ಅಥವಾ ಗೌರವ ನ್ಯಾಯಾಧೀಶರಾಗಿ ಆಯ್ಕೆಗೊಳ್ಳುವ ಮೂಲಕ ಈ ಪದವಿಯನ್ನು  ಪಡೆದ ಮೊದಲ ಮಹಿಳೆ ಎನಿಸಿಕೊಂಡರು.
1937
ರಲ್ಲಿ ನಗರಸಭಾ ಶಾಲಾ ಮಂಡಳಿಯ ಸದಸ್ಯೆಯಾಗಿ ನೇಮಕಗೊಂಡರು.
1937
ರಲ್ಲಿ ಮುಸ್ಲಿಂ  ಶಿಕ್ಷಣ ಸಮಿತಿಗೆ  ಸದಸ್ಯರನ್ನಾಗಿ ಆರಿಸಲಾಯಿತು.
1938
ರಲ್ಲಿ ಪುರಸಭಾ ಸದಸ್ಯರಾಗಿ ಆಯ್ಕೆಗೊಂಡರು. ನಂತರ ಉಪಾಧ್ಯಕ್ಷೆಯೂ ಆಗುವ ಮೂಲಕ ಮೊದಲ ಬಾರಿಗೆ ಉನ್ನತ ಸ್ಥಾನದಲ್ಲಿ ಮಹಿಳೆಯೆಂಬ ಹೆಗ್ಗಳಿಕೆಗೆ ಪಾತ್ರರಾದರು.
1938
ರಲ್ಲಿ ಲಾಂಗರ್ ಖಾನೆ ಸಮಿತಿಗೆ ಸದಸ್ಯರಾಗಿ ನೇಮಕ ಮಾಡಲಾಯಿತು.
1940
ರಲ್ಲಿ ಕನ್ನಡ ವೃತ್ತಪತ್ರಿಕಾಗೋಷ್ಠಿ,24 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
ಪುರಸಭಾ ಆರೋಗ್ಯ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಇದಲ್ಲದೆ ಇವರು ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿದ್ದರು 
ಮೈಸೂರು ರಾಜ್ಯ ಜೀವವಿಮಾ ಕಂಪನಿಯ ನಿರ್ದೇಶಕರಾಗಿದ್ದರು.
1938
ರಲ್ಲಿ ಮೈಸೂರಿನ ಕೃಷ್ಣರಾಜ ಒಡೆಯರ್ ಅವರಿಂದ ಸಾರ್ವಜನಿಕ ಸೇವಾ ಸ್ವರ್ಣ ಪದಕವನ್ನು ಪಡೆದಿದ್ದರು.
1919
ರಲ್ಲಿ ಬಂಗಾಲದ ಆರ್ಯ ಸಾಹಿತ್ಯ ಪರಿಷತ್ತು ವಿದ್ಯಾ ವಿನೋದಿನಿ ಬಿರುದನ್ನು ನೀಡಿತು.
ಇವರು ಬರೆದ ಸಣ್ಣ ಕಥೆಗಳಲ್ಲಿ ಪ್ರಮುಖವಾದವುಗಳೆಂದರೆ ಅಂಜುಬುರುಕಿ, ಗ್ರಹಣ,ಒಲ್ಲದ ಹೆಂಡತಿ, ನಿರ್ಭಾಗ್ಯ ನಳಿನಿ, ಮಾರ್ಜಾಲ,ದೈವೇಚ್ಛೆ.
1918
ರಲ್ಲಿಇವರ ಮೊದಲ ಕೃತಿ ಪ್ರಿಯಂವದೆ ಪ್ರಕಟಗೊಂಡಿತು. ಇದರಲ್ಲಿ ವರದಕ್ಷಿಣೆಯಿಂದಾಗುವ ಸಮಸ್ಯೆಗಳನ್ನು ಕುರಿತು ಬರೆದಿದ್ದಾರೆ.
1921
ರಲ್ಲಿ ಇಂದಿರೆ ಅಥವಾ ನಿರ್ಭಾಗ್ಯ ವನಿತೆ ಕಾದಂಬರಿಯನ್ನು ಬರೆದಿದ್ದಾರೆ.ಇದರಲ್ಲಿ ವಿಧವೆಯರ ಜೀವನದ ಬಗ್ಗೆ ಬರೆದಿದ್ದಾರೆ.
1927
ರಲ್ಲಿ ಬರೆದ. ಸುಖಲತಾ ಕಾದಂಬರಿಯಲ್ಲಿ ವೃದ್ಧರ ಮರುಮದುವೆಯ ಬಗ್ಗೆ ಚಿತ್ರಿಸಿದ್ದಾರೆ.
1950
ರಲ್ಲಿ ಭಕ್ತೆ ಮೀರ ಕಾದಂಬರಿಯನ್ನು ಬರೆದರು.
ಮಾಧವಿ ಎಂಬುವುದು ಇವರ ಕೊನೆಯ ಕಾದಂಬರಿಯಾಗಿದೆ.
ಇವರು ಸುಮಾರು 21 ನಾಟಕಗಳನ್ನು ಬರೆದಿದ್ದಾರೆ. 
ಪ್ರಮುಖವಾದವುಗಳೆಂದರೆ
ಸ್ನೇಹ ಲತೆ, ಹಿಂದೂ ಭಾಗ್ಯೋದಯ, ಬ್ಯಾರಿಸ್ಟರ್  ರಾಮಚಂದ್ರನ್, ನಿರ್ಮಲೆ, ಇಪ್ಪತ್ತನೆಯ ಶತಮಾನದ ಅಳಿಯ,ಹುಡುಗರು ಮತ್ತು ಹುಡುಗಿಯರುಶೂರ್ಪನಖಾಭಂಗ, ಸತೀ ಪದ್ಮಿನಿ. 
ಇವಲ್ಲದೆ ಮಕ್ಕಳಿಗಾಗಿ ಕಿಟ್ಟು ಕಂಡ ಗಾಂಧಿ, ಗಾಂಧೀಜಿ  ಮತ್ತು ಮಕ್ಕಳು, ಸ್ವಾಮಿ ವಿವೇಕಾನಂದ,ಶ್ರೀ ಮಹದೇವ ಗೋವಿಂದ ರಾನಡೆ,ಮೊದಲಾದ ಮಹನೀಯರ ವ್ಯಕ್ತಿ ಚಿತ್ರಗಳನ್ನು ಬರೆದಿದ್ದಾರೆ. ರಾಣಿ ದುರ್ಗಾವತಿ,ಮಹಾರಾಣಿ ಸ್ವರ್ಣಮಯಿ, ಮೊದಲಾದ ವ್ಯಕ್ತಿಚಿತ್ರಗಳು ಹಾಗೂ ಕವಯತ್ರಿ ಪದ್ಮಾವತಿ ದೇವಿ,ವಿಜಯಲಕ್ಷ್ಮಿ ಪಂಡಿತ, ಶಾರದಾದೇವಿ,ಪಂಡಿತ ರಮಾಬಾಯಿ ಕೇಳ್ಕರ್ ಮೊದಲಾದ ಮಹಿಳೆಯರ ಜೀವನ ವಿವರಗಳನ್ನು ಪ್ರಕಟಿಸಿದ್ದಾರೆ.
ಸುಮಾರು 400 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ.
1960
ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಅಂದಿನ ಅಮೆರಿಕದ ಅಧ್ಯಕ್ಷ ಜಾನ್ ಎಫ್.ಕೆನಡಿಗೆ ಕಲ್ಯಾಣಮ್ಮನವರನ್ನು ಪರಿಚಯಿಸಿದಾಗ ಇವರ ಕಾರ್ಯವೈಖರಿಯನ್ನು ಮೆಚ್ಚಿ ಅಮೇರಿಕೆಗೆ ಬರುವಂತೆ ಆಹ್ವಾನ ನೀಡಿದ್ದರು.
ಈ ರೀತಿ ಕನ್ನಡ ಸಾಹಿತ್ಯ
ಕ್ಷೇತ್ರಕ್ಕೆ  ಅಪಾರವಾದ ಕೊಡುಗೆಯನ್ನು ನೀಡಿದ ಕಲ್ಯಾಣಮ್ಮನವರು 1965 ಫೆಬ್ರವರಿ 16 ರಂದು ಅಸು ನೀಗಿದರು. ತಮ್ಮ ಅಪ್ರಕಟಿತ ಕೃತಿಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸಬೇಕು ಎನ್ನುವುದು  ಇವರ ಕೊನೆಯ ಆಸೆಯಾಗಿತ್ತು.
ಇವರ ಕಾಲಾನಂತರ ನೆನಪಿಗಾಗಿ ಚಾಮರಾಜಪೇಟೆಯ ಸಾರ್ವಜನಿಕ ಉದ್ಯಾನವನಕ್ಕೆ "ಆರ್.ಕಲ್ಯಾಣಮ್ಮನವರ ಮಕ್ಕಳ ಆಡದ ಮೈದಾನ" ಎಂದು ಹೆಸರಿಡಲಾಯಿತು ಮತ್ತು ಅಖಿಲ ಕರ್ನಾಟಕ ಮಕ್ಕಳ ಕೂಟವು ಇವರ ಹೆಸರಿನಲ್ಲಿ ಸ್ಮಾರಕ ನಿಧಿಯನ್ನು ಸ್ಥಾಪಿಸಿತು. ಸರ್ಕಾರವು ಇವರ ಹೆಸರಿನಲ್ಲಿ ಸ್ಮಾರಕ ನಿಧಿಯನ್ನು ಸ್ಥಾಪಿಸಿ  ಅದರಿಂದ ಬರುವ ಬಡ್ಡಿ ಹಣದಿಂದ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿತು.
ಸಂಪ್ರದಾಯ. ಕುಟುಂಬದಲ್ಲಿ ಹುಟ್ಟಿ, ಬಾಲವಿಧವೆಯಾದರೂ ಎದೆಗುಂದದೆ  ಸಮಾಜದ ಒಳಿತಿಗಾಗಿ ಶ್ರಮಿಸಿದ ಕಲ್ಯಾಣಮ್ಮನವರು ಇಂದಿನ ಜನತೆಗೆ ಮಾದರಿ ಮಹಿಳೆಯಾಗಿದ್ದಾರೆ.
-      ವಿಜಯಲಕ್ಷ್ಮಿ  ಎಂ ಎಸ್