15ನೇ ಶತಮಾನದಲ್ಲಿ, ಜರ್ಮನಿಯ ನ್ಯೂರೆಂಬರ್ಗ್ ಬಳಿಯ ಪುಟ್ಟ ಹಳ್ಳಿ ಒಂದರಲ್ಲಿ 18 ಮಕ್ಕಳಿರುವ ಕುಟುಂಬ ಒಂದಿತ್ತು. ಈ ದೊಡ್ಡ ಸಂಸಾರದ ಉದರ ಪೋಷಣೆಗಾಗಿ ಈ ಡ್ಯೂರರ್ ಕುಟುಂಬದ ಯಜಮಾನನಾದ ತಂದೆ, ವೃತ್ತಿಯಲ್ಲಿ ಚಿನಿವಾರನಾಗಿದ್ದ, ಪ್ರತಿದಿನ 18 ಗಂಟೆ ದುಡಿಯುತ್ತಿದ್ದ. ಜೊತೆಗೆ ಅಲ್ಲಿ ಇಲ್ಲಿ ಇತರ ಕೆಲಸಗಳನ್ನೂ ಮಾಡುತ್ತಿದ್ದ. ಇಂತಹ ದುರ್ಭರ ಪರಿಸ್ಧಿತಿಯಲ್ಲೂ ಆತನ ಆಲ್‍ಬ್ರೆಕ್ಟ್ಟ್ ಡ್ಯೂರರ್ ಮತ್ತು ಆಲ್‍ಬರ್ಟ್ ಡ್ಯೂರರ್ ಎಂಬ ಇಬ್ಬರು ಮಕ್ಕಳಿಗೂ ಒಂದು ಕನಸಿತ್ತು. ಅವರಿಬ್ಬರಿಗೂ ತಮಗೆ ಕಲೆಯಲ್ಲಿರುವ ಪ್ರತಿಭೆಯನ್ನು ಮುಂದುವರೆಸಿಕೊಂಡು ಹೋಗುವ ಹಂಬಲವಿತ್ತು. ಆದರೆ ನ್ಯೂರೆಂಬರ್ಗ್‍ನಲ್ಲಿರುವ ಅಕಾಡೆಮಿಗೆ ತಮ್ಮಲ್ಲಿ ಯಾರನ್ನೂ ಕಳುಹಿಸುವ ಆರ್ಥಿಕ ಶಕ್ತಿ ತಂದೆಯಲ್ಲಿ ಇಲ್ಲ ಎಂಬುದನ್ನು ಇಬ್ಬರೂ ಚೆನ್ನಾಗಿಯೇ ಅರಿತಿದ್ದರು.
ತಮ್ಮ ಸೋದರ-ಸೋದರಿಯರಿಂದ ತುಂಬಿದ ಹಾಸಿಗೆಯಲ್ಲಿ ಹಲವಾರು ರಾತ್ರಿಗಳ ಸುದೀರ್ಘ ಚರ್ಚೆಗಳ ಬಳಿಕ ಈರ್ವ ಹುಡುಗರೂ ಒಂದು ಒಪ್ಪಂದಕ್ಕೆ ಬಂದರು. ಅವರೊಂದು ನಾಣ್ಯವನ್ನು ಎತ್ತಿ ಎಸೆದು ಅದೃಷ್ಟ ಪರೀಕ್ಷಿಸುವುದು, ಸೋತವ ಹತ್ತಿರವಿರುವ ಗಣಿಗಳಲ್ಲಿ ದುಡಿಯಬೇಕು, ತನ್ನ ಸಂಪಾದನೆಯಿಂದ ತನ್ನ ಸೋದರನ ಅಕಾಡೆಮಿ ಶಿಕ್ಷಣಕ್ಕೆ ನೆರವಾಗಬೇಕು. ನಂತರ, ಗೆದ್ದ ಸೋದರ ತನ್ನ ನಾಲ್ಕು ವರ್ಷದ ಶಿಕ್ಷಣದ ಬಳಿಕ ತನ್ನ ಕಲಾಕೃತಿಗಳನ್ನು ಮಾರಿಯೋ ಅಥವಾ ಗಣಿಗಳಲ್ಲಿ ದುಡಿದೋ ಈ ಸೋದರನ ಅಕಾಡೆಮಿ ಶಿಕ್ಷಣಕ್ಕೆ ನೆರವಾಗಬೇಕು. ಒಂದು ಭಾನುವಾರ ಚರ್ಚ್‍ಗೆ ಹೋಗಿ ಬಂದ ನಂತರ ಅವರು ನಾಣ್ಯ ಎಸೆದು ಅದೃಷ್ಟ ಪರೀಕ್ಷ್ಷಿಸಿದರು. ಆಲ್‍ಬ್ರೆಕ್ಟ್ಟ್ ಡ್ಯೂರರ್ ಗೆದ್ದು ನ್ಯೂರೆಂಬರ್ಗ್‍ಗೆ ತೆರಳಿದ.
ಸೋತ ಆಲ್‍ಬರ್ಟ್ ಅಪಾಯಕಾರಿ ಗಣಿಗಳಿಗೆ ತೆರಳಿ ಅಲ್ಲಿ ದುಡಿದು ಮುಂದಿನ 4 ವರ್ಷ ಸೋದರನಿಗೆ ಆರ್ಥಿಕ ನೆರವು ನೀಡಿದ. ಆಲ್‍ಬ್ರೆಕ್ಟ್ ಅಕಾಡೆಮಿಯಲ್ಲಿ ಬಹಳ ಹೆಸರು ಮಾಡಿದ. ಅವನ ಕಲಾಕೃತಿಗಳು ಅವನ ಎಷ್ಟೋ ಪ್ರಾಧ್ಯಾಪಕರುಗಳ ಕೃತಿಗಳಿಗಿಂತ ಉತ್ತಮವಾಗಿದ್ದವು. ಅವನು ಪದವಿ ಪಡೆಯುವ ವೇಳೆಗೆ ಎಷ್ಟೋ ಜನರಿಗೆ ಕಲಾಕೃತಿಗಳನ್ನು ಮಾಡಿಕೊಟ್ಟು ಚೆನ್ನಾಗಿಯೇ ಸಂಪಾದಿಸಲು ಪ್ರಾರಂಭಿಸಿದ್ದ. ಈ ಯುವ ಕಲಾಕಾರ ತನ್ನ ಹಳ್ಳಿಗೆ ಮರಳಿದಾಗ ಅವನ ವಿಜಯೋತ್ಸವದ ಆಚರಣೆಗಾಗಿ ಇಡೀ ಡ್ಯೂರರ್ ಕುಟುಂಬ ಔತಣಕ್ಕಾಗಿ ಒಗ್ಗೂಡಿತು. ಸಂಗೀತ-ನಗು ತುಂಬಿ ತುಳುಕಾಡಿದ ಒಂದು ಸುದೀರ್ಘ ಹಾಗೂ ಅವಿಸ್ಮರಣೀಯ ಔತಣದ ಬಳಿಕ ಆಲ್‍ಬ್ರೆಕ್ಟ್ ತನ್ನ ಆಕಾಂಕ್ಷೆಯನ್ನು ಪೂರೈಸಲು ವರ್ಷಗಟ್ಟಲೆ ತ್ಯಾಗ ಮಾಡಿದ ತನ್ನ ಪ್ರಿಯ ಸೋದರನಿಗೆ ಗೌರವ ಸೂಚಿಸಿದ. ನಂತರ “ಓ ನನ್ನ ಪ್ರಿಯ ಸೋದರ ಆಲ್‍ಬರ್ಟ್, ಇದೀಗ ನಿನ್ನ ಸರದಿ. ನೀನು ನಿನ್ನ ಕನಸಿನ ಸಾಕಾರಕ್ಕಾಗಿ ನ್ಯೂರೆಂಬರ್ಗ್‍ಗೆ ಹೋಗು. ನಿನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು” ಎಂದು ನುಡಿದ. ಆಲ್‍ಬರ್ಟ್ ಕುಳಿತೆಡೆ ಎಲ್ಲರ ಕಣ್ಣುಗಳು ಕಾತರದಿಂದ ನೋಡಿದವು. ಆದರೆ ಅವನ ಬಿಳುಪೇರಿದ ಮುಖದಲ್ಲಿ ಕಂಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಅವನು ತನ್ನ ಬಗ್ಗಿಸಿದ ತಲೆಯನ್ನು ಅಲುಗಾಡಿಸುತ್ತಾ, ಬಿಕ್ಕುತ್ತಾ ಮತ್ತೆ ಮತ್ತೆ ಉಚ್ಚರಿಸಿದ “ಇಲ್ಲ, ಇಲ್ಲ, ಇಲ್ಲ”.
ಕೊನೆಗೆ ಆಲ್‍ಬರ್ಟ್ ಎದ್ದು ಕಣ್ಣೀರನ್ನು ಒರೆಸಿಕೊಂಡ. ತನ್ನ ಪ್ರಿಯ ಬಂಧುಗಳೆಡೆಗೆ ನೋಡುತ್ತಾ ಮೆಲ್ಲಗೆ ನುಡಿದ “ಇಲ್ಲ ಸೋದರ, ನಾನು ನ್ಯೂರೆಂಬರ್ಗ್‍ಗೆ ಹೋಗಲಾರೆ. ನನ್ನ ಕಾಲ ಮುಗಿದಿದೆ. ನೋಡು... ನೋಡು..., ಗಣಿಗಳಲ್ಲಿನ ನಾಲ್ಕು ವರ್ಷಗಳು ನನ್ನ ಕೈಗಳಿಗೆ ಏನು ಮಾಡಿವೆ ನೋಡು! ಪ್ರತಿ ಬೆರಳಿನ ಮೂಳೆಗಳು ಒಮ್ಮೆಯಾದರೂ ಜಜ್ಜಿಹೋಗಿವೆ. ಇತ್ತೀಚೆಗಂತೂ ನನಗೆ ಕೀಲುರೋಗ ಎಷ್ಟೊಂದು ಬಾಧಿಸುತ್ತಿದೆ ಎಂದರೆ ನನ್ನ ಬಲಗೈಯಿಂದ ನಾನು ಬಟ್ಟೆ ಅಥವಾ ಕಾಗದದ ಮೇಲೆ ಲೇಖನಿ ಅಥವಾ ಬ್ರಷ್‍ನಿಂದ ನವಿರಾದ ಗೆರೆಯನ್ನೆಳೆಯುವುದಿರಲಿ, ನಿನಗೆ ಶುಭಕೋರಲು ಒಂದು ಲೋಟ ವೈನ್ ಅನ್ನು ಸಹ ಹಿಡಿಯಲಾರೆ. ಇಲ್ಲ ಸೋದರ, ನನ್ನ ಮಟ್ಟಿಗೆ ಇದು ತುಂಬಾ ತಡವಾಗಿದೆ”.
ಇದು ನಡೆದು ಈಗ 450 ವರ್ಷಗಳಿಗಿಂತ ಹೆಚ್ಚಿನ ಕಾಲ ಸಂದಿದೆ. ಆಲ್‍ಬ್ರೆಕ್ಟ್ ಡ್ಯೂರರ್‍ರವರ ನೂರಾರು ಅತ್ಯದ್ಭುತ ಚಿತ್ರಗಳು, ರೇಖಾ ಚಿತ್ರಗಳು, ಕಲಾಕೃತಿಗಳು ವಿಶ್ವದ ಎಲ್ಲಾ ಪ್ರಮುಖ ವಸ್ತು ಸಂಗ್ರಹಾಲಯಗಳಲ್ಲಿ ರಾರಾಜಿಸುತ್ತಿವೆ. ಆದರೆ ಹೆಚ್ಚಿನವರಿಗೆ ಪರಿಚಯವಿರುವುದು ಅವರ ಒಂದೇ ಒಂದು ಕಲಾಕೃತಿ ಮಾತ್ರ.
ಒಂದು ದಿನ ಆಲ್‍ಬ್ರೆಕ್ಟ್ ಡ್ಯೂರರ್ ರವರು ಆಲ್‍ಬರ್ಟ್‍ರವರ ತ್ಯಾಗಕ್ಕೆ ಅಭಿನಂದನೆಯಾಗಿ, ಅವರ ಗಾಯಗೊಂಡ, ಜಜ್ಜಿಹೋದ ಹಸ್ತಗಳನ್ನು ಒಗ್ಗೂಡಿಸಿ ಬೆರಳುಗಳು ಮೇಲ್ಮುಖವಾಗಿ ಇರುವಂತೆ, ಬಹಳ ಶ್ರಮವಹಿಸಿ ಒಂದು ಚಿತ್ರ ಬರೆದರು. ಅದನ್ನವರು ಸರಳವಾಗಿ ‘ಕೈಗಳು’ ಎಂದು ಕರೆದರು. ಆದರೆ ಇಡೀ ವಿಶ್ವ ಈ ಉತ್ಕøಷ್ಟ ಕಲಾಕೃತಿಗೆ ತಲೆದೂಗಿ ಅವರ ಪ್ರೀತಿಯ ಈ ಅಭಿನಂದನೆಗೆ ‘ಪ್ರಾರ್ಥಿಸುತ್ತಿರುವ ಕೈಗಳು’ ಎಂದು ಕರೆಯಿತು.
ಎಂದಾದರೂ, ನೀವು ಯಾರಾದರೂ ಈ ಹೃದಯಸ್ಪರ್ಶಿ ಸೃಷ್ಟಿಯನ್ನು ನೋಡಿದರೆ ಮತ್ತೊಮ್ಮೆ ಅದನ್ನು ಅವಲೋಕಿಸಿ. ಯಾರೂ ಸಹ, ಯಾರೂ ಸಹ ಒಬ್ಬರೇ ಏನನ್ನೂ ಮಾಡಲಾರರು ಎಂಬುದನ್ನು ನಿಮಗದು ನೆನಪಿಸುತ್ತಿರಲಿ.
[ಅಂತರಜಾಲದಲ್ಲಿನ ಒಂದು ಲೇಖನದ ಅನುವಾದ]
- ಡಾ. ಸುಧಾ ಕಾಮತ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ