Pages

ಅನುವಾದಿತ ಕಥೆ - ಒಂದು ಗಿಣಿಯ ತರಬೇತಿ


[ಗುರೂಜಿ ರವೀಂದ್ರನಾಥ ಟಾಗೋರ್ ರವರ ಕಥೆಯ ಅನುವಾದ]
ಒಂದಾನೊಂದು ಕಾಲದಲ್ಲಿ ಒಂದು ಪಕ್ಷಿಯಿತ್ತು. ಅದು ಅಜ್ಞಾನಿಯಾಗಿತ್ತು. ಅದು ಹಾಡುತಿತ್ತು, ಆದರೆ ಧರ್ಮಗ್ರಂಥಗಳನ್ನು ಪಠಿಸುತ್ತಿರಲಿಲ್ಲ. ಅದು ಬಹಳಷ್ಟು ಸಾರಿ ನೆಗೆಯುತಿತ್ತು, ಆದರೆ ಸರಿಯಾದ ವರ್ತನೆ ಕಲಿತಿರಲಿಲ್ಲ.
ರಾಜ ತನ್ನಷ್ಟಕ್ಕೆ ತಾನೆ ಹೇಳಿಕೊಂಡ: “ದೀರ್ಘಕಾಲದಲ್ಲಿ ಅಜ್ಞಾನವು ದುಬಾರಿಯಾಗುತ್ತದೆ. ಏಕೆಂದರೆ ಮೂರ್ಖರು ಇತರರಷ್ಟೇ ತಿನ್ನುತ್ತಾರೆ ಆದರೆ ಸಮಾಜಕ್ಕೆ ಏನನ್ನು ಹಿಂದಿರುಗಿಸಿ ನೀಡುವುದಿಲ್ಲ.”
ಅವನು ತನ್ನ ಸೋದರಳಿಯಂದಿರನ್ನು ಕರೆದು ಪಕ್ಷಿಗೆ ಸರಿಯಾದ ಶಿಕ್ಷಣವನ್ನು ನೀಡುವಂತೆ ಹೇಳಿದ.
ಪಂಡಿತರಿಗೆ ಹೇಳಿಕಳಿಸಲಾಯಿತು, ಅವರಿಗೆ ವಿಷಯವನ್ನು ತಿಳಿಸಲಾಯಿತು. ಪಕ್ಷಿಗಳು ತಮ್ಮ ಬಡ ಗೂಡಿನಲ್ಲಿ ಬದುಕುವುದರಿಂದ ಅವುಗಳಲ್ಲಿ ಅಜ್ಞಾನವಿದೆ ಎಂದು ಆ ಪಂಡಿತರು ನಿರ್ಧರಿಸಿದರು. ಆದ್ದರಿಂದ ಆ ಪಂಡಿತರ ಪ್ರಕಾರ ಪಕ್ಷಿಯ ಶಿಕ್ಷಣಕ್ಕೆ ಮೊದಲು ಅವಶ್ಯಕತೆಯೆಂದರೆ ಸೂಕ್ತವಾದ ಪಂಜರವಾಗಿತ್ತು. 
ಈ ವಿಷಯ ತಿಳಿಸಿದ ಪಂಡಿತರಿಗೆ ಬಹುಮಾನ ದೊರೆಯಿತು, ಅವರದನ್ನು ತೆಗೆದುಕೊಂಡು ಸಂತೋಷದಿಂದ ಮನೆಗೆ ತೆರಳಿದರು.
ಸಕಲಾಡಂಬರಗಳೊಂದಿಗೆ ಒಂದು ಚಿನ್ನದ ಪಂಜರವÀನ್ನು ನಿರ್ಮಿಸಲಾಯಿತು. ಅದನ್ನು ನೋಡಲು ಪ್ರಪಂಚದ ಎಲ್ಲಾ ಭಾಗಗಳಿಂದ ಜನ ಗುಂಪುಗುಂಪಾಗಿ ಬಂದರು. 
“ಸಂಸ್ಕೃತಿಯನ್ನು ಸೆರೆಹಿಡಿಯಲಾಗಿದೆ ಮತ್ತು ಬಂಧಿಸಲಾಗಿದೆ” ಕೆಲವರು ಉಧ್ಘರಿಸಿದರು ಮತ್ತು ಆನಂದಭಾಷ್ಪವನ್ನೂ ಸಹ ಸುರಿಸಿದರು.
ಇತರರು ಹೇಳಿದರು: “ಸಂಸ್ಕೃತಿ ಕಳೆದು ಹೋದರೂ ಪಂಜರ ಮಾತ್ರ ಉಳಿಯುತ್ತದೆ. ಪಕ್ಷಿ ಎಷ್ಟು ಅದೃಷ್ಟಶಾಲಿ.”
ಅಕ್ಕಸಾಲಿಗ ಚೀಲದ ತುಂಬ ಹಣ ಪಡೆದು ಮನೆಯತ್ತ ಸಾಗಿದ. 
ಪಂಡಿತ ಪಕ್ಷಿಗೆ ಶಿಕ್ಷಣ ನೀಡಲು ಆರಂಭಿಸಿದ. ತನ್ನ ನಶ್ಯದ ಡಬ್ಬಿಯಿಂದ ಒಂದು ಚೂರು ನಶ್ಯ ಏರಿಸುತ್ತಾ “ನಮ್ಮ ಉದ್ದೇಶಕ್ಕೆ ಎಷ್ಟು ಪಠ್ಯ ಪುಸ್ತಕಗಳಿದ್ದರೂ ಸಾಲದು” ಎಂದ. 
   ರಾಜನ ಸೋದರಳಿಯಂದಿರು ಬಹಳಷ್ಟು ಜನ ಬರಹಗಾರರನ್ನು ಕರೆದುಕೊಂಡು ಬಂದರು. ಅವರು ಪುಸ್ತಕಗಳಿಂದ ನಕಲು ಮಾಡಿದರು, ಅದರಿಂದ ಮತ್ತೆ ಪ್ರತಿಗಳನ್ನು ಮಾಡಿದರು, ಕೈಗೆಟುಕಲಾರದಷ್ಟು ಎತ್ತರಕ್ಕೆ ಪುಸ್ತಕಗಳು ರಾಶಿಯಾಗುವಷ್ಟು ಪ್ರತಿಗಳನ್ನು ಮಾಡಿದರು. ಜನ ಆಶ್ಚರ್ಯದಿಂದ ಹೇಳಿದರು, “ಓಹ್, ಸಂಸ್ಕೃತಿಯ ಶಿಖರ ಎಷ್ಟು ಎತ್ತರವಿದೆ. ಅದರ ಕೊನೆ ಮೋಡದಲ್ಲಿ ಮರೆಯಾಗಿ ಹೋಗಿದೆ.
   ಬರಹಗಾರರು, ಹಗುರವಾದ ಹೃದಯಗಳೊಂದಿಗೆ, ಭಾರವಾದ ಜೇಬಿನೊಂದಿಗೆ ಮನೆಗೆ ಹಿಂದಿರುಗಿದರು. ರಾಜನ ಸೋದರಳಿಯಂದಿರು ಪಂಜರವನ್ನು ಸರಿಯಾಗಿ ಇಡಲು ಬಹಳಷ್ಟು ಶ್ರಮಪಟ್ಟರು. ಅವರ ನಿರಂತರ ಸ್ವಚ್ಛಗೊಳಿಸುವ ಕಾರ್ಯದಿಂದ ಸಂತುಷ್ಟರಾದ ಜನ: “ಇದು ನಿಜಕ್ಕೂ ಪ್ರಗತಿ” ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಲಾಯಿತು. ಇವರೆಲ್ಲಾ ತಮ್ಮ ದೂರದ ಸಂಬಂಧಿಗಳೊಂದಿಗೆ ತಮಗಾಗಿ ಒಂದು ಭವನವನ್ನು ಕಟ್ಟಿಕೊಂಡು ಸಂತೋಷದಿಂದ ಬದುಕಲಾರಂಭಿಸಿದರು.
ಜಗತ್ತಿನಲ್ಲಿ ಬೇರೆ ಏನೇ ಕೊರತೆ ಇದ್ದರೂ, ತಪ್ಪು ಹುಡುಕುವವರ ಕೊರತೆ ಇರುವುದಿಲ್ಲ. ಆ ಟೀಕಾಚಾರ್ಯರು ‘ಪಂಜರಕ್ಕೆ ಸಂಬಂಧಪಟ್ಟ ಎಲ್ಲರೂ ಅಭಿವೃದ್ಡಿ ಹೊಂದುತ್ತಿದ್ದಾರೆ. ಪಕ್ಷಿಯೊಂದನ್ನೂ ಬಿಟ್ಟು” ಎಂದು ಪ್ರತಿಕ್ರಿಯಿಸಿದರು. 
ರಾಜನ ಕಿವಿಗೆ ಈ ವಿಷಯ ಮುಟ್ಟಿದಾಗ, “ನನ್ನ ಪ್ರೀತಿಯ ಮಕ್ಕಳೇ, ನಾನು ಕೇಳುತ್ತಿರುವುದೇನು?” ಕೇಳಿದ.
ಅವರು ಅದಕ್ಕೆ ಈ ರೀತಿ ಉತ್ತರಿಸಿದರು: “ಮಹಾರಾಜ, ಸತ್ಯ ತಿಳಿಯಬೇಕೆಂದರೆ ಅಕ್ಕಸಾಲಿಗರು, ಪಂಡಿತರು, ಬರಹಗಾರರು ಮೇಲ್ವಿಚಾರಕರು ಇವರೆಲ್ಲರ ಮಾತನ್ನು ಕೇಳಿ. ಈ ಟೀಕಾಚಾರ್ಯರಿಗೆ ಆಹಾರ ಕಡಿಮೆಯಾಗಿದೆ, ಅದಕ್ಕೇ ಅವರ ನಾಲಗೆಗಳು ತೀಕ್ಷ್ಣವಾಗಿವೆ,” ಎಂದರು. ಈ ವಿವರಣೆ ಎಷ್ಟು ಸಮರ್ಪಕವಾಗಿತ್ತೆಂದರೆ ರಾe ಸಂತುಷ್ಟನಾಗಿ ಪ್ರತಿಯೊಬ್ಬರಿಗೂ ತನ್ನಲ್ಲಿದ್ದ ಅಮೂಲ್ಯ ರತ್ನಗಳನ್ನು ನೀಡಿದ. 
ಒಂದು ದಿನ ರಾಜಾ ತನ್ನ ಶಿಕ್ಷಣ ಇಲಾಖೆ ಪಕ್ಷಿಗೆ ಹೇಗೆ ಶಿಕ್ಷಣ ನೀಡುತ್ತಿದೆ ಎಂಬುದನ್ನು ನೋಡಲು ಇಚ್ಛಿಸಿ, ತಾನೇ ಕಲಿಕೆಯ ಸ್ಥಳಕ್ಕೆ ತೆರಳಿದ. ಗೇಟಿನ ಹತ್ತಿರದಿಂದಲೇ ಕಹಳೆ, ಶಂಖವಾದ್ಯಗಳು ಕೇಳಿಬಂದವು. ಪಂಡಿತರು ಉಚ್ಛ ಕಂಠದಲ್ಲಿ ಮಂತ್ರಗಳನ್ನು ಪಠಿಸಲಾರಂಭಿಸಿದರು ಮತ್ತು ಅವರ ಸಂಬಂಧಿಕರು ಜೋರಾಗಿ ಚಪ್ಪಾಳೆ ತಟ್ಟಿದರು. 
ರಾಜನ ಸೋದರಳಿಯಂದಿರು ಖುಷಿಯಾದರು. ರಾಜ ಇನ್ನೇನು ಆನೆಯನ್ನು ಹತ್ತಬೇಕೆನ್ನುವಷ್ಟರಲ್ಲಿ ತಪ್ಪನ್ನು ಕಂಡುಹಿಡಿಯುವವನೊಬ್ಬ ಪೆÇದೆಯ ಹಿಂದಿನಿಂದ ಕೂಗಿದ, “ಮಹಾರಾಜಾ, ಪಕ್ಷಿಯನ್ನು ನೋಡಿದಿರಾ?”
“ಅಯ್ಯೋ, ಪಕ್ಷಿಯ ಬಗ್ಗೆ ಸಂಪೂರ್ಣವಾಗಿ ಮರೆತುಬಿಟ್ಟೆನಲ್ಲಾ” ಎಂದ ಹಿಂದಿರುಗಿ ಬಂದು ಪಂಡಿತರನ್ನು ಪಕ್ಷಿಗೆ ಶಿಕ್ಷಣ ನೀಡುತ್ತಿರುವ ವಿಧಾನದ ಬಗ್ಗೆ ಕೇಳಿದ. ರಾಜನಿಗೆ ಆ ವಿಧಾನದ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ಆ ವಿಧಾನ ಎಷ್ಟು ಅದ್ಭುತವಾಗಿತ್ತೆಂದರೆ ಅದಕ್ಕೆ ಹೋಲಿಸಿ ನೋಡಿದಾಗ ಪಕ್ಷಿ ಮುಖ್ಯವಲ್ಲವೇ ಅಲ್ಲ ಎನಿಸಿತು.
ಯಾವುದೇ ತಪ್ಪಿಲ್ಲವೆಂದು ರಾಜನಿಗೆ ಮನವರಿಕೆಯಾಯಿತು. ಪಕ್ಷಿಯಿಂದಲೇ ಏನಾದರೂ ದೂರು ಇದೆಯೇನೋ ಎಂದು ಪ್ರಶ್ನಿಸುವಂತೆಯೇ ಇರಲಿಲ್ಲ. ಪುಸ್ತಕದ ಹಾಳೆಗಳಿಂದ ಅದರ ಕಂಠ ಎಷ್ಟು ಬಿಗಿದಿತ್ತೆಂದರೆ ಅದು ಶಿಳ್ಳೆ ಹೊಡೆಯುವುದಾಗಲೀ ಪಿಸುಮಾತನಾಡಲಾಗಲೀ ಸಾಧ್ಯವಾಗಲಿಲ್ಲ. ಇಡೀ ಪ್ರಕ್ರಿಯೆಯನ್ನು ನೋಡುವವರಿಗೆ ಅದು ರೋಮಾಂಚನಗೊಳಿಸುವಂತಿತ್ತು. 
ರಾಜ ಈ ಬಾರಿ ಆನೆಯನ್ನೇರುವಾಗ ಆ ಟೀಕಾಕಾರರನ್ನು ಹಿಡಿದು ಶಿಕ್ಷಿಸಬೇಕೆಂದು ತನ್ನ ಸೈನಿಕರಿಗೆ ಹೇಳಿದ.
ಪಕ್ಷಿ ಅದೇ ರೀತಿ ಶಿಕ್ಷಣ ಪಡೆಯುತ್ತಾ ಸಾಗಿತು, ಹುಚ್ಚಾಗುವಷ್ಟು ಮಟ್ಟಿಗೆ. ಆದರೂ ಆಗಾಗ ಪ್ರಕೃತಿ ತರಬೇತಿಯನ್ನು ಮೀರಿಸಿತು. ಬೆಳಗಿನ ಕಿರಣ ಪಂಜರದೊಳಗೆ ಇಣುಕಿ ನೋಡಿದಾಗ ಪಕ್ಷಿ ಕೆಲವೊಮ್ಮೆ ತನ ರೆಕ್ಕೆಗಳನ್ನು ಬಡಿಯುತಿತ್ತು. ತನ್ನ ಕೊಕ್ಕಿನಿಂದ ಸರಳನ್ನು ಕುಕ್ಕುತಿತ್ತು. 
“ಏನು ಅಹಂಕಾರ” ಎಂದ ಕೊತ್ವಾಲ. ಕಮ್ಮಾರ ತನ್ನ ಸಾಮಾನುಗಳೊಂದಿಗೆ ರಾಜನ ಶಿಕ್ಷಣ ಇಲಾಖೆ ಸೇರಿದ. ಆಹಾ! ಏನು ಶಬ್ದ! ಬಹಳ ಬೇಗ ಕಬ್ಬಿಣದ ಸರಳು ಸಿದ್ಧವಾಯಿತು, ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಲಾಯಿತು. ರಾಜನ ಸೋದರಳಿಯಂದಿರು ಪಕ್ಷಿಯ ಪ್ರಯತ್ನವನ್ನು ನೋಡಿ, “ಈ ಪಕ್ಷಿಗಳಿಗೆ ಒಳ್ಳೆಯ ಬುದ್ಧಿ ಇರುವುದಿರಲಿ, ಕೃತಜ್ಞತೆಯೂ ಇಲ್ಲ” ಎಂದರು.
ಕೊತ್ವಾಲನ ಜಾಗರೂಕತೆಗೆ ಮತ್ತು ಕಮ್ಮಾರನ ಕೌಶಲ್ಯಕ್ಕೆ ಮೆಚ್ಚಿ, ಅವರನ್ನೂ ಸನ್ಮಾನಿಸಲಾಯಿತು.
ಪುಸ್ತಕ ಹಿಡಿದು ಪಂಡಿತರು ಬಡ ಪಕ್ಷಿಗೆ ಪಾಠಗಳನ್ನು ಹೇಳಿದರು!!!!
        ಪಕ್ಷಿ ಸತ್ತು ಹೋಯಿತು!!            
- (ಅನುವಾದ - ಸುಧಾ ಜಿ)   

ಕಾಮೆಂಟ್‌ಗಳಿಲ್ಲ: