Pages

ಪ್ರಚಲಿತ: "ಕನಸುಗಳ ಶಿಲೆ ಬಲಿಯಾದಾಗ"


'ರಾಹುಲ್ ವೆಮುಲಾ'ನ ಆತ್ಮಹತ್ಯೆಗೆ ತಾಯಿ ಹೃದಯವೊಂದು ಸ್ಪಂದಿಸಿದ್ದು ಹೀಗೆ -

ಎಲ್ಲಾ ತಂದೆ ತಾಯಿ ಥರಾನೆ 
ನಾನೂ ಕನಸುಗಳ ಶಿಲೆಯನ್ನು ಕೆತ್ತಿದೆ. 

ಓದುವ ಮಕ್ಕಳ ಶ್ರೇಣಿಯಲ್ಲಿ 
ನಿನ್ನ ಹೆಸರು ಇತ್ತು. 
ಬಾಲ್ಯ, ಹದಿಹರೆಯ, ಯೌವನ 
ನಿನ್ನಲ್ಲಿ ಬಂದು ಹೋಗುವಾಗ 
ನೀ ಬುದ್ಧಿವಂತಿಕೆಯಿಂದ ಮಾತ್ರವಲ್ಲ,
ನಿನ್ನ ವ್ಯಕ್ತಿತ್ವದಿಂದ ಮಿಂಚುತ್ತಿದ್ದೆ. 

ನಿನ್ನಿಂದ ಈ ಸಮಾಜಕ್ಕೆ 
ಒಂದು ಬದಲಾವಣೆ ಬರಬೇಕೆಂದು 
ನಾನು ಆಸೆ ಪಟ್ಟೆ. 

ಮುಂದೆ ನೀ ಸಂಶೋಧನಾ ವಿದ್ಯಾಭ್ಯಾಸಕ್ಕೆ 
ಹೋಗಿ ಒಂದೊಂದು ಸಲ ಮನೆಗೆ
 ಬರುವಾಗಲೂ ಧೈರ್ಯದ 
ನಗುವಿಂದ ನಿನ್ನನ್ನು ಸ್ವೀಕರಿಸಿದೆ......
ಗಟ್ಟಿತನದಲ್ಲಿ ಕಳಿಸಿಕೊಟ್ಟೆ ನಿನ್ನನ್ನು. 

ಅಮ್ಮನ ಪ್ರೀತಿ ಅಂದ್ರೆ ಅದು 
ಮನೋಧೈರ್ಯ ಎಂದು ನಾನು 
ನಿನಗೆ ತೋರಿಸಿಕೊಟ್ಟೆ...
ಆ ಒಂದು ಪ್ರೀತಿ ನಿನ್ನ ಕಣ್ಣಲ್ಲಿ ಕಂಡೆ. 

ಆದ್ರೂ ಕಂದ.....
ಯಾವ ಬಿರುಗಾಳಿಗೂ 
ಯಾವ ಅಲೆಗಳಿಗೂ 
ನಿನ್ನನ್ನು ನಾಶ ಮಾಡೋಕೆ ಆಗೋಲ್ಲ 
ಎಂಬ ನನ್ನ ನಂಬಿಕೆಯನ್ನು ನೀ 
ಎಷ್ಟು ಸುಲಭವಾಗಿ ಅಳಿಸಿಬಿಟ್ಟೆ.

ಯಾರಿಗೋಸ್ಕರ ನೀ ಬಲಿಯಾದೆ? 
ಯಾತಕೋಸ್ಕರ ನೀ ಹೀಗೆ ಮಾಡಿದೆ? 
ನಿನ್ನದಲ್ಲದೆ ಇರುವ ವಿಷಯಕ್ಕೆ ಯಾಕೆ, 
ನೀ ಯಾಕೆ ಬಲಿಯಾದೆ ಕಂದ? 

ಜಾತಿ, ಅದು ನಮ್ಮ ಹಣೆಬರಹ ...
ಅದು ಕಾಲಕಾಲದಿಂದಲೂ 
ನಮ್ಮ ವಂಶದ ಹಳೆಯ ಸಂಸ್ಕಾರ. 

ಕೊಲ್ಲುತ್ತಿರುವ ಈ ಪಂಗಡಗಳಿಗೆ....
ದಲಿತ... ಬ್ರಾಹ್ಮಣ....
ಮುಸ್ಲಿಮ.... ಕ್ರಿಶ್ಚಿಯನ್ ...
ಎನ್ನುವ ಎಲ್ಲಾ ಗೆರೆಗಳನ್ನು 
ನಾವು ತಾನೆ ನಿಮಗೆ ಕೊಟ್ಟಿದ್ದು? 
ಹಾಗಾದರೆ 
ನಮ್ಮನ್ನಲ್ಲವಾ ನೀವು ಬಲಿ ಕೊಡಬೇಕಾದದ್ದು? 
ಬದಲು ನೀ ಯಾಕೋ ಬಲಿಯಾದೆ? 

ಪ್ರಪಂಚದ ಎಲ್ಲಾ ಮೂಲೆಗಳನ್ನೂ 
ನೀ ನೋಡು ಎಂದು ನಾ ಆಗ್ರಹಿಸಿದೆ....
ಆದ್ರೆ, ಈ ಕೊಳೆತಿರುವ ಸಮಾಜವನ್ನು 
ನಿನಗೆ ಮೀರಿಸೋಕೆ ಆಗದೆ ಹೋಯಿತೇ?  

ನಾನು ತಿನ್ನಿಸಿದ ಒಂದೊಂದು ತುತ್ತಿನಲ್ಲೂ, 
ಮನೋಬಲವ ಬೆರೆಸಿ ಉಂಡೆ ಮಾಡಿ ತಿನಿಸಿದೆ 
ಆದ್ರೆ ನೀ ಬರೀ ಹೇಡಿ ಥರ ಹಿಂದೆಯೇ ಹೋದೆ. 
ನನ್ನ ಎದೆಯಿಂದ ಕೊನೆ ತೊಟ್ಟು ಕುಡಿದಿದ್ದು 
ಬರೀ ನೀರು ಎಂದು ನನಗನಿಸುತ್ತೆ. 

ಮಗನೇ...
ಅದರಿಂದ, ಹಾಗೇ ನೆನೆಸಿಕೊಳ್ಳುವಾಗ 
ನನಗೆ ನನ್ನ ಮೇಲೆಯೇ ನಾಚಿಕೆ ಆಗುತ್ತೆ!!!!

                                                     - ಶೀಬಾ 

ಪುಸ್ತಕ ಪ್ರೀತಿ: "ಪ್ರವಾದಿ"


       ಖಲೀಲ್ ಗಿಬ್ರಾನ್ ಒಬ್ಬ ಶಬ್ದ ಗಾರುಡಿಗ. ಸರಳ ಪದ-ಪುಂಜಗಳ ಸೂಕ್ತ ಬಳಕೆಯಿಂದ ಸೂಕ್ಷ್ಮಾರ್ಥವ ಸೃಜಿಸಿದ ಮಾಂತ್ರಿಕ. ಇಂಗ್ಲೀಷ್ ಸಾಹಿತ್ಯದಲ್ಲಿ ತನ್ನ ಗದ್ಯಕಾವ್ಯಗಳಿಂದ ಓದುಗರ ಆತ್ಮವನ್ನು ಸಾಂತ್ವನಗೊಳಿಸಿ, ನಮ್ಮ ಅನುಭವ ಹಾಗು ಗ್ರಹಿಕೆಯ ಸಂಕುಚಿತತೆಯನ್ನು ತನ್ನದೇ ಆದ ಶೈಲಿಯಲ್ಲಿ ಮನ ಕಲುಕಿ ಮನದಟ್ಟು ಮಾಡಿಸಿದ ಮಾಂತ್ರಿಕ. ಶೇಕ್ಸ್ ಪಿಯರ್  ಹಾಗು ಲಾವುತ್ಸೇ ಅವರುಗಳ ನಂತರ ಅತಿ ಹೆಚ್ಚು ಮಾರಾಟವಾಗಿರುವುದು ಈತನ ಕವಿತೆಗಳೇ.  

      ೬ ಜನವರಿ ೧೮೮೩, ಲೆಬೆನಾನಿನ ಬ್ರಾಷೆರಿ ಗ್ರಾಮದ ಮ್ಯಾರೋನೈಟ್(ಸಿರಿಯಾ ಕ್ರೈಸ್ತ) ಕುಟುಂಬದಲ್ಲಿ ಜನಸಿದ ಗಿಬ್ರಾನ್ ೧೮೯೫ ರಲ್ಲಿ ಅಮೆರಿಕಾದ ಬೋಸ್ಟನ್‌ಗೆ ವಲಸೆ ಬಂದು ದರ್ಜಿವೃತ್ತಿ ಕಟ್ಟಿಕೊಂಡ ಅಮ್ಮನ ನೆರಳಿನಲ್ಲಿ ಬೆಳೆಯುತ್ತಾನೆ. ಚಿತ್ರಕಲೆಯ ಪರಿಣಿತಿಯ ಜೊತೆಗೆ ಸಾಹಿತ್ಯ, ಅರಬ್ ಸಂಸ್ಕೃತಿ, ಸೂಫಿ ಚಿಂತನೆಗಳ ಕುರಿತು ಆಸಕ್ತಿ ಬೆಳೆಸಿಕೊಂಡ ಗಿಬ್ರಾನ್ ಅಮೆರಿಕಾದಲ್ಲಿ ಇದ್ದೇ ಟರ್ಕಿಯ ಆಕ್ರಮಣದ ವಿರುದ್ಧ ಲೆಬೆನಾನಿಗರ ಬಂಡಾಯವನ್ನು ಬೆಂಬಲಿಸಿ ಬರೆಯುತ್ತಾನೆ. ಆದರೆ ಆತನ ಕೃತಿಗಳು ಜೀವನ ಸತ್ಯದ ನವಿರಾದ ನಿರೂಪಣೆಗೇ ಪ್ರಸಿದ್ಧ.  ೧೯೨೩ರಲ್ಲಿ ಪ್ರಕಟವಾಗುವ 'ಪ್ರವಾದಿ' (The Prophet) ಗಿಬ್ರಾನ್ ನ ಅತ್ಯಂತ ಪ್ರಮುಖ ಕೃತಿ. ೪೦ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡ ಕೃತಿಯಿದು. 

        ಹನ್ನೆರಡು ವರುಷಗಳನ್ನು ಓರ್ಫಲೀಸ್ ನಲ್ಲಿ ಕಳೆದ ಅಲ್-ಮುಸ್ತಫಾ ತನ್ನನ್ನು ತವರಿಗೆ ಕೊಂಡೊಯ್ಯುವ ಹಡುಗು ಬರುವುದನ್ನು ಬೆಟ್ಟದ ಮೇಲಿನಿಂದ ಕಂಡು ಪುಳಕಿತನಾಗುತ್ತನೆ. ಹುಟ್ಟೂರಿಗೆ ತೆರಳುವ ಉತ್ಸಾಹ ಅವನಲ್ಲಿ ಆಹ್ಲಾದ ಉಂಟುಮಾಡುತ್ತದೆ. ಆದರೆ ಬೆಟ್ಟ ಇಳಿಯುತ್ತಾ ಈ ಊರನ್ನು ಬಿಟ್ಟು ಹೋಗಬೇಕಲ್ಲವೇ ಎಂಬ ಸತ್ಯ ಗ್ರಹಿಕೆಗೆ ಬರಲು ಒಂದು ಬಗೆಯ ದುಮ್ಮಾನ ಎದೆಯಲ್ಲಿ! "ಈ ಊರಿನ ಗೋಡೆಗಳ ನಡುವೆ ಕಳೆದ ನೋವಿನ ದಿನಗಳು ದೀರ್ಘ, ಒಂಟಿತನದ ಇರುಳುಗಳು ದೀರ್ಘ; ತನ್ನ ನೋವು ಮತ್ತು ತನ್ನ ಒಂಟಿತನದಿಂದ ಯಾರು ತಾನೇ ಮರುಗಿಲ್ಲದೆ ತೆರಳಲು ಸಾಧ್ಯ?" ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಮೂಲಕ ರಂಗೇರುವ ಗದ್ಯಕಾವ್ಯವು ಪ್ರಶ್ನೋತ್ತರಗಳ ಸರಪಳಿ, ಜೀವನ ಪರಾಮರ್ಶೆಯ ಸ್ಫಟಿಕ ಮಾಲೆ! 


       ಊರಿನ ಜನ ಬಂದು ಸೇರಿ ಅಲ್-ಮುಸ್ತಫಾ ಹೊರಡುವ ಗಳಿಗೆಗೆ ಜನಸ್ತೋಮ ಬೀಳ್ಕೊಡುಗೆಗೆ ಬಂದಂತಾಗಲು "ಮೌನಗಳ ಅನ್ವೇಷಿ ನಾನು, ಮೌನಗಳೊಳು ಅದ್ಯಾವ ನಿಧಿ-ಕಣಜ ಕಂಡಿಹೆನು ಉಮೇದಿನಿಂದ ಇವರೊಳು ಹಂಚಲು?" ಎಂದುಕೊಂಡೇ ಜನರು ಕೇಳಿದ ವಿಷಯಗಳ ಕುರಿತು ಹೇಳಲಾರಂಭಿಸುತ್ತಾನೆ. ಮುಂದಿನದ್ದು  ಸೂಕ್ಷ್ಮವಿಶ್ವದೃಷ್ಟಿಯುಳ್ಳ ವಿಶಾಲ ವಿಚಾರವಂತಿಕೆಯ ಅನುಭವದ ಅಮೃತ ಸಿಂಚನ. 



ತರ್ಕ ಹಾಗು ಉತ್ಸಾಹ ಕುರಿತು - 

"ಅನೇಕವೇಳೆ ನಿನ್ನಾತ್ಮವೊಂದು ಕದನ ಭೂಮಿ, ನಿನ್ನ ತರ್ಕ ಹಾಗು ತೀರ್ಪುಗಳು ನಿನ್ನ ಉತ್ಸಾಹ ಹಾಗು ಹಸಿವುಗಳೊಡನೆ ಹೋರಾಡುವ ಕಲಹ ಕ್ಷೇತ್ರ" 


ಪ್ರೀತಿಯ ಕುರಿತು -

"ನಿನಗೆ ಕಿರೀಟ ತೊಡಿಸುತ್ತಲೇ ಪ್ರೀತಿಯು ನಿನ್ನನ್ನು ಶಿಲುಬೆಗೇರಿಸುತ್ತದೆ. ನಿನ್ನ ಬೆಳವಣಿಗೆಗೆ ಕಾರಣವಾದಂತೆ ನಿನ್ನ ಸಮರುವಿಕೆಗೂ ಕಾರಣವಾಗುತ್ತದೆ....... 
ನೀನು ಪ್ರೀತಿಸಿದಲ್ಲಿ, ಆಸೆ ಪಡಲೇಬೇಕಾದರೆ, ನಿನ್ನಾಸೆ ಇಂತಿರಲಿ -
ಪ್ರೀತಿಯ ಕುರಿತಾದಾ ನಿನ್ನ ಗ್ರಹಿಕೆಯಿಂದಲೇ ಗಾಯಗೊಳ್ಳುವ ಬಯಕೆ."


ವಿವಾಹದ ಕುರಿತು -

"ನಿಮ್ಮ ಒಗ್ಗೂಡಿರುವಿಕೆಯಲ್ಲಿ ವೈಯಕ್ತಿಕ ಎಡೆಯಿರಲಿ,
ಸ್ವರ್ಗದ ತಂಗಾಳಿ ನಿಮ್ಮ ನಡುವೆ ನರ್ತಿಸುವಂತಿರಲಿ. 
ಒಬ್ಬರನ್ನೊಬ್ಬರು ಪ್ರೀತಿಸಿ, ಆದರೆ ಪ್ರೀತಿ ಸಂಕೋಲೆಯಾಗದಿರಲಿ. 
ನಿಮ್ಮಾತ್ಮಗಳ ತೀರಗಳ ನಡುವೆ ಪ್ರೀತಿ ಹರಿವ ಸಾಗರವಾಗಲಿ."


ಮಕ್ಕಳ ಕುರಿತು -

"ನಿನ್ನ ಮಕ್ಕಳು ನಿನ್ನ ಮಕ್ಕಳಲ್ಲ,
ಜೀವನಕ್ಕೆ ಜೀವನದ್ದೇ ಕುರಿತಾದ ಬಯಕೆಯ ಸಂತಾನ ಸ್ವರೂಪಗಳು. 
ನಿನ್ನ ಮೂಲಕ ಬರುವವೇ ಹೊರತು ನಿನ್ನಂದ ಬಂದವಲ್ಲ,
ನಿನ್ನೊಡನಿದ್ದರೂ ನಿನಗೆ ಸೇರಿದವಲ್ಲ. .... 
ಜೀವಂತ ಶರಧಿಯಂತೆ ಅವರು ಮುಂದೊಡಲು ಬಿಲ್ಮಾತ್ರ ನೀನು."


ಕೆಲಸ ಹಾಗು ದುಡಿಮೆಯ ಕುರಿತು - 

"ಕೆಲಸವು ಪ್ರೀತಿಯ ಸ್ಫುರದ್ರೂಪ. .......  
ದುಡಿಮೆಯ ಮೂಲಕ ಜೀವನವ ಪ್ರೀತಿಸುದೆಂದರೆ ಜೀವನದ ಅತ್ಯಂತ ಆಂತರಿಕ ರಹಸ್ಯದೊಂದಿಗೆ ಆತ್ಮೀಯವಾಗಿರುವುದು."


ಅಪರಾಧ ಹಾಗು ಶಿಕ್ಷೆಯ ಕುರಿತು  -

"ಮರದ ಮೌನ ಅರಿವಿಗೆ ಬಾರದೆ ಎಲೆಯೊಂದು ಹೇಗೆ ಹಳದಿಯಾಗದೊ
ಹಾಗೆ ನಿಮ್ಮಿಲ್ಲರ ಅಗೋಚರ ಸಮ್ಮತಿಯಿಲ್ಲದೆ ಅಪರಾಧಿ ಅಪರಾಧಗೈಯೆಲ್ಲಾರ."


ಸುಖ-ದುಃಖದ ಕುರಿತು - 

"ನಿನ್ನ ಖುಷಿಯು ನಿನ್ನ ಬೇಸರಗಳ ಮುಖವಾಡ ಕಳಚಿದ ರೂಪ,
ನಗು ಉದ್ಭವಿಸುವ ಅದೇ ಬಾವಿ ಒಮ್ಮೆ ಅಳುವಿನಿಂದ ತುಂಬಿತ್ತು."



        ಹೀಗೆ ಪ್ರೀತಿ, ವಿವಾಹ, ಮಕ್ಕಳು, ಸಂಸಾರ, ದುಡಿಮೆ, ವ್ಯಾಪಾರ, ಸ್ವಾತಂತ್ರ್ಯ, ಕಾನೂನು, ಸುಖ-ದುಃಖ, ಸಾವು -  ಹಲವು ವಿಷಯಗಳ ಕುರಿತು ಮುಸ್ತಫಾ ತನ್ನ ಅರಿವು-ಗ್ರಹಿಕೆ ವಿವರಿಸಲು ನಿಜ ಅರ್ಥದಲ್ಲಿ ಅತ ಸರ್ವಕಾಲಕ್ಕೂ ಪ್ರಸ್ತುತ ಒಬ್ಬ ಜಾತ್ಯತೀತ ಮಾನವೀಯ ಪ್ರವಾದಿಯಾಗಿ ಕಾಣುತ್ತಾನೆ. 






(ಉಲ್ಲೇಖಿತ ಗದ್ಯಕಾವ್ಯ ಭಾಗಗಳು ಇಂಗ್ಲೀಷ್ ಮೂಲದಿಂದ ಮಾಡಿರುವ ಸ್ವತಂತ್ರ ಅನುವಾದಗಳು. 

"The Prophet"ನ ಸಂಪೂರ್ಣ ಗದ್ಯ -  http://www-personal.umich.edu/~jrcole/gibran/prophet/prophet.htm)

ವಿನೋದ: "ಮದುವೆ ಸಿದ್ಧತೆ"



ಮದುವೆ ಸಿದ್ಧತೆ

(ತಾಯಿ ತಯಾರಾಗುತ್ತಾ ಕನ್ನಡಿಯ ಮುಂದೆ ನಿಂತಿದ್ದಾಗ ಮಗಳು ಬಂದು ನೋಡುತ್ತಾಳೆ. ತಾನು ನೋಡಿಕೊಳ್ಳೋಣ ಎಂದರೆ ಕಾಣಿಸುವುದಿಲ್ಲ. ತಾಯಿ ಅದನ್ನು ನೋಡುತ್ತಾಳೆ)
ತಾಯಿ : ಇನ್ನೂ ಪಿಂಜಾರಿಯ ತರಹ ಹಾಗೆ ಇದ್ದೀಯಾ. ನಡಿ. . . .
ಮಗಳು : ಪಿಂಜಾರಿ ಎಂದರೆ ಏನಮ್ಮ?
ತಾಯಿ : ಪಿಂಜಾರಿ ಅಂದ್ರೆ ನಿನ್ನ ತರಹ ದರಿದ್ರ ಮುಖ ಅಂತಾ. ಹೋಗು, ಮುಖ ತೊಳೆದುಕೊ.
ಮಗಳು : ತೊಳಕೋತೀನಿ, ಎಲ್ಲರೂ ನನ್ನ ಮುಖ ನಿನ್ನ ತರಹ . . .
ತಾಯಿ : ಹೀಗೆ ಮಾತನಾಡುತ್ತಾ ತಡ ಮಾಡ್ತೀಯಾ?
ಮಗಳು : ಮದುವೆ ಯಾವಾಗ ಅಮ್ಮ?
ತಾಯಿ : ಈಗಲೇ ಶುರು ಮಾಡ್ತಾ ಇರ್ತಾರೆ.
ಮಗಳು : ಈಗಲೇ ಅಂತಾ ನಿನಗೆ ಹೇಗೆ ಗೊತ್ತು?
ತಾಯಿ : ಅವರು ಕರೆಯಲಿಲ್ಲವಾ ಒಂಬತ್ತು ಘಂಟೆಗೆ ಅಂತಾ.
ಮಗಳು : ಒಂಬತ್ತಾಗಿದೆ ಅಂತಾ ಹೇಗೆ ಗೊತ್ತಾಗುತ್ತೆ? ಓ ಗಡಿಯಾರದಲ್ಲಾ? (ಆಲೋಚಿಸುತ್ತಾ) ಗಡಿಯಾರಕ್ಕೆ ಹೇಗೆ ಗೊತ್ತಾಗುತ್ತೆ? (ತಾಯಿ ಮಾತನಾಡುವುದಿ¯್ಲ) ಹೋಗಲಿ ಹತ್ತು ಘಂಟೆಗೆ ಮಾಡಿದರೇನು ಮದುವೆ?
ತಾಯಿ : ಮುಹೂರ್ತ ದಾಟಿ ಹೋಗುತ್ತಲ್ಲಾ?
ಮಗಳು : ಎಲ್ಲಿಗೆ ದಾಟಿ ಹೋಗುತ್ತೆ? ಮುಹೂರ್ತ ಎಲ್ಲಿರುತ್ತೆ? 
ತಾಯಿ : (ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡಬೇಕೆಂದು ಬರೆಯುವ ಚಲಂ ಮುಂತಾದವರನ್ನು ಬೈದುಕೊಳ್ಳುತ್ತಾ) ಮುಹೂರ್ತ ಅಂದರೆ ಒಳ್ಳೆಯ ಸಮಯ.
ಮಗಳು : ಯಾವುದಕ್ಕೆ ಒಳ್ಳೆಯ ಸಮಯ. ಓಹ್ ಮದುವೆಗಾ? ಮದುವೆಗೇನಾ, ಎಲ್ಲದಕ್ಕೂ ಇರುತ್ತದಾ?
ತಾಯಿ : ಒಳ್ಳೆಯ ಕಾರ್ಯಗಳಿಗೆ ಇರುತ್ತದೆ ( ಶುಭ ಕಾರ್ಯ ಅಂದರೆ ಏನು ಎಂದು ಕೇಳುತ್ತಾಳೆ ಎಂದುಕೊಳ್ಳುತ್ತಾಳೆ)
ಮಗಳು : ಒಳ್ಳೆಯ ಸಮಯ ಅಂತಾ ಹೇಗೆ ಗೊತ್ತಾಗುತ್ತೆ? ಯಾರಾದ್ರೂ ಲೆಕ್ಕ ಹಾಕ್ತಾರಾ? ಆ ಸಮಯದಲ್ಲಿಯೇ ಒಳ್ಳೆಯದಿರುತ್ತಾ?
ತಾಯಿ : ಆ ಸಮಯದಲ್ಲಿ ಮದುವೆ ಮಾಡಿದರೆ ಅದು ಸರಿಯಾಗಿ ನಡೆಯುತ್ತದೆ.
ಮಗಳು : ಯಾರಾದರೂ ಕೆಟ್ಟ ಸಮಯದಲ್ಲಿ ಮಾಡಿದ್ದಾರಾ?
ತಾಯಿ : ಯಾಕೆ ಮಾಡ್ತಾರೆ?
ಮಗಳು : ಹಾಗಿದ್ದರೆ ಸರಿಯಾಗಿ ನಡೆಯುವುದಿಲ್ಲ ಅಂತಾ ಹೇಗೆ ಗೊತ್ತು?  . . . . ನಿನಗೂ ಗೊತ್ತಿಲ್ಲವಾ? ಮತ್ತೆ ಒಳ್ಳೆಯ ಸಮಯದಲ್ಲೆ ಮಾಡಿದರೆ ವಲ್ಲಿ ಮನೆಯವರು ಮದುವೆಯಲ್ಲಿ ಹೊಡೆದಾಡಿಕೊಂಡರಲ್ಲಾ?
ತಾಯಿ : ಅದು ಅವರ ಕರ್ಮ.
ಮಗಳು : ಮತ್ತೆ ಮುಹೂರ್ತ ಇಡುವುದೇಕೆ?
ತಾಯಿ : ಏನೋ, ಆ ಮುಹೂರ್ತ ಇಡುವ ಬ್ರಾಹ್ಮಣರನ್ನು ಕೇಳಬೇಕು.
ಮಗಳು : ನಾವು ಬ್ರಾಹ್ಮಣರಲ್ವಾ?
ತಾಯಿ : ಬ್ರಾಹ್ಮಣರೆಂದರೆ ಬೇರೆ.
ಮಗಳು : ಅವರು ಹೇಗೆ ಇರ್ತಾರೆ? ನಮ್ಮ ತರಹ ಇರುವುದಿಲ್ವಾ?
ತಾಯಿ : ಅದು ಅವರ ಕೆಲಸ.
ಮಗಳು : ಅಸಲು ಬ್ರಾಹ್ಮಣರು ಅಂತಾ ಹೇಗೆ ಗೊತ್ತಾಗುತ್ತಮ್ಮಾ?
ತಾಯಿ : ಕೇಳಿದರೆ ಹೇಳ್ತಾರೆ.
ಮಗಳು : ಪ್ರತಿಯೊಬ್ಬರನ್ನೂ ಕೇಳಬೇಕಾ? ಎಲ್ಲರೂ ಬ್ರಾಹ್ಮಣರೆಂದರೆ?
ತಾಯಿ : ಅನ್ನಲಿ ಬಿಡೆ.
ಮಗಳು : ಆಗ ಏನು ಮಾಡ್ತೀವಿ?
ತಾಯಿ : ನಾನೇನು ಮಾಡ್ತೀನಿ.
ಮಗಳು : ಅಸಲು ಬ್ರಾಹ್ಮಣರೆಂದರೆ ಏನು?
ತಾಯಿ : ಅದೊಂದು ಜಾತಿ.
ಮಗಳು : ಜಾತಿ ಅಂದರೆ…
ತಾಯಿ : ಜಾತಿ ಅಂದರೇನಾ? ನನಗೆ ಗೊತ್ತಿಲ್ಲ.
ಮಗಳು : ನಿನಗೂ ಜಾತಿ ಇದೆಯಲ್ಲಾ?
ತಾಯಿ : ಇದ್ದರೆ?
ಮಗಳು : ಮತ್ತೆ ಗೊತ್ತಿಲ್ಲಾ ಅಂತೀಯಾ? ಜಾತಿ ಅಂದರೆ ಎಲ್ಲಿರುತ್ತೆ?
ತಾಯಿ : ಎಲ್ಲಿರುತ್ತೆ ಅಂದ್ರೇನೇ? ಜಾತಿ, ನಾವು ಒಂದು ಜಾತಿಯಲ್ಲಿ ಹುಟ್ತೀವಿ.
ಮಗಳು : ಯಾವ ಜಾತಿಯಲ್ಲಿ?
ತಾಯಿ : ಯಾವುದೋ ಒಂದು ಜಾತಿಯಲ್ಲಿ.
ಮಗಳು : ಎಷ್ಟು ಜಾತಿಗಳಿವೆ?
ತಾಯಿ : ನನಗೆ ಗೊತ್ತಿಲ್ಲವೆ.
ಮಗಳು : ಏನು ಕೇಳಿದರೂ ಗೊತ್ತಿಲ್ಲ ಅಂತೀರಾ. ಮಕ್ಕಳಿಗೆ ಏನು ಗೊತ್ತಿಲ್ಲ. ನಿಮಗೆ ಎಲ್ಲಾ ಗೊತ್ತಿರುವಂತೆ ನಮ್ಮನ್ನು ಬೈತೀರಾ? ನಿಮಗೆ ಗೊತ್ತಿಲ್ಲದಿದ್ದರೆ, ನಮಗೆ ಹೇಳೋದೇನು? ಮತ್ತೆ ಗೊತ್ತಿಲ್ಲದಿರುವುದನ್ನು ಯಾಕೆ ಮಾತನಾಡ್ತೀರಾ?
ತಾಯಿ : ಮದುವೆಗೆ ಹೋಗ್ತಾ ಇದೇನು ಗೋಳೆ?
ಮಗಳು : ಮದುವೆ ಅಂದ್ರೆ ಏನಮ್ಮ?
ತಾಯಿ : (ತಾಯಿ ಆಘಾತಕ್ಕೊಳಗಾಗುತ್ತಾಳೆ. ಆದರೆ ತಕ್ಷಣ ಸುಧಾರಿಸಿಕೊಂಡು) ನೋಡ್ತೀಯಲ್ಲಾ. (ಹೌದು, ಅಲ್ಲಿಯೇ ಪ್ರಶ್ನೆ ಕೇಳಬಹುದೆಂದು ಮಗಳು ಸುಮ್ಮನಾಗುತ್ತಾಳೆ)
ತಾಯಿ : ಇನ್ನೂ ಹಾಗೇನೆ ಇದ್ದೀಯಲ್ಲಾ. ನಿನ್ನ ಪ್ರಶ್ನೆಗಳೂ, ನೀನೂ. ಪಿಂಜಾರಿ ತರಹ ಇದೇ ಬಟ್ಟೆಯಲ್ಲಿಯೇ ಬರ್ತೀಯಾ?
ಮಗಳು : ಮದುವೆಯಲ್ಲಿ ನಮ್ಮ ಹತ್ತಿರ ಇರುವ ಬಟ್ಟೆ, ಒಡವೆ ಎಲ್ಲರಿಗೂ ತೋರಿಸಿಕೊಳ್ಳೋಕಾ ಮದುವೆ?
ತಾಯಿ : ತೋರಿಸಿಲಿಕ್ಕಾ? ಅಂದಕ್ಕಲ್ಲವೇ?
ಮಗಳು: ಮತ್ತೆ ಅವತ್ತು ಅನಸೂಯ ಮುಖಕ್ಕೆ ಬಣ್ಣ ಹಾಕಿಕೊಂಡ್ರೆ ಮತ್ತೆ ಶೋಕಿ ಮಾಡ್ತಾಳೆ, ಇದೇನು ಹೋಗೋ ಕಾಲ ಅಂದೆ.
ತಾಯಿ : ಬಣ್ಣ ಹಚ್ಚಿಕೊಳ್ಳೋದು, ಸೀರೆ ಉಟ್ಟುಕೊಳ್ಳೋದು ಒಂದೇ ಏನು?
ಮಗಳು : ಕಾಂತಾ ಜಾಕೆಟ್ಟು, ಸೀರೆ ಉಟ್ಟುಕೊಂಡಳು ಅಂತಾ ಬೈದೆ.
ತಾಯಿ : ಅದು ಮರ್ಯಾದಸ್ಥರು ಉಟ್ಟುಕೊಳ್ಳುವುದಿಲ್ಲ.
ಮಗಳು : ನಾವು ಮರ್ಯಾದಸ್ಥರಾ ಅಮ್ಮ? ಏನು ಮಾಡಿದರೆ ಮರ್ಯಾದಸ್ಥರು?
ತಾಯಿ : (ಚಲಂರವರನ್ನು ಮರೆತು) ಏನೋ ಒಂದು , ಬಾಯಿ ಮುಚ್ಚು.
ಮಗಳು : ಮರ್ಯಾದಸ್ಥರು ಮದುವೆಗೆ ರೇಷ್ಮೆ ಸೀರೆ ಉಟ್ಟುಕೊಂಡು ಹೋಗುತ್ತಾರಾ?
ತಾಯಿ : ಮಾಮೂಲು ಸೀರೆ ಉಟ್ಟುಕೊಂಡು ಹೋದರೆ ಬೀದಿಹೋಕರು ಅಂದುಕೊಳ್ಳುತ್ತಾರೆ. (ತನ್ನ ತಪ್ಪನ್ನು ತಕ್ಷಣ ಗ್ರಹಿಸಿಕೊಳ್ಳುತ್ತಾಳೆ)
ಮಗಳು : ಬೀದಿಯಲ್ಲಿರುವವರು ಮರ್ಯಾದಸ್ಥರಲ್ಲವಾ? ಅವರಿಗೆ ರೇಷ್ಮೆ ಸೀರೆ ಇರುವುದಿಲ್ಲವಲ್ಲ. ಅವರನ್ನು ಮದುವೆಗೆ ಬರಲು ಬಿಡುವುದಿಲ್ಲವಲ್ಲ.
ತಾಯಿ : ಬಂಧುಗಳನ್ನು ಕರೆಯುತ್ತಾರೆ, ಸ್ನೇಹಿತರನ್ನೂ ಕೂಡ
ಮಗಳು : ಬೀದಿಯವರ ಹತ್ತಿರ ಸ್ನೇಹ ಮಾಡಬಾರದಾ?
ತಾಯಿ : ಮಾಡಿಕೊಳ್ಳುವುದಿಲ್ಲ. ಬೀದಿಯವರು ಕೆಟ್ಟವರು, ದುರ್ಮಾರ್ಗಿಗಳು.
ಮಗಳು : ಯಾಕೆ? ದುರ್ಮಾರ್ಗಿಗಳ ಜೊತೆ ಸ್ನೇಹ ಮಾಡಿಕೊಳ್ಳಬಾರದಾ? (ತಾಯಿ ಲಾಜಿಕ್ ಓದಿರಲಿಲ್ಲ)
ತಾಯಿ : ಅದಲ್ಲವೇ... ..
ಮಗಳು : ಮತ್ತೆ ನನ್ನನ್ನು ಖಾಸಿಂ ಜೊತೆ ಆಡಿಕೊಳ್ಳಲು ಏಕೆ ಬಿಡುವುದಿಲ್ಲಾ?
ತಾಯಿ : ಅಂತಹವರಿಗೆ ಕೆಟ್ಟ ಅಭ್ಯಾಸ ಇರುತ್ತವೆ.
ಮಗಳು : ಎಂತಹವರಿಗೆ?
ತಾಯಿ : ಖಾಸಿಂನಂತಹವರಿಗೆ.
ಮಗಳು : ಸಾಹೇಬರಿಗಾ?
ತಾಯಿ : ಅಲ್ಲ.
ಮಗಳು : ಬೀದಿಯವರಿಗಾ?
ತಾಯಿ : (ವಿಧಿಯಿಲ್ಲದೆ) ಹೂಂ.
ಮಗಳು : ನಾವು ಬೀದಿಯವರಾದ್ರೆ ನಮಗೂ ಕೆಟ್ಟ ಅಭ್ಯಾಸಗಳು ಬರುತ್ತವಾ? ಅವು ಎಲ್ಲಿರುತ್ತವೆ? ಕೆಟ್ಟ ಅಭ್ಯಾಸಗಳು ಅಂದ್ರೆ ಏನಮ್ಮ?
ತಾಯಿ : ಕೆಟ್ಟ ಮಾತುಗಳು (ನಾಲಿಗೆ ಕಚ್ಚಿಕೊಳ್ಳುತ್ತಾಳೆ)
ಮಗಳು : ಕೆಟ್ಟ ಮಾತುಗಳು ಅಂದ್ರೆ
ತಾಯಿ : ಹೋಗು ಮುಖ ತೊಳೆದುಕೊಂಡು ಬಾ. ಪ್ರಶ್ನೆಗಳು ಸಾಕು.
ಮಗಳು : (ಹೋಗದೆ) ಕೆಟ್ಟ ಮಾತುಗಳು ಅಂದ್ರೆ ಏನಮ್ಮ? 
ತಾಯಿ : ನನಗೆ ಗೊತ್ತಿಲ್ಲ.
ಮಗಳು : ಮತ್ತೆ ಅವರು ಕೆಟ್ಟ ಮಾತನಾಡುತ್ತಾರೆ ಅಂತಾ ನಿನಗೆ ಹೇಗೆ ಗೊತ್ತಾಗುತ್ತೆ?
ತಾಯಿ : ಮಾತನಾಡಿದಾಗ ಗೊತ್ತಾಗುತ್ತೆ.
ಮಗಳು : ಆ ಚಲಂ ಎಲ್ಲಾ ಕೆಟ್ಟ ಮಾತುಗಳನ್ನು ಬರೆಯುತ್ತಾನೆ ಅಂತೀಯಲ್ಲಾ, ರಾಜೇಶ್ವರಮ್ಮನವರ ಹತ್ತಿರ, ಏನು ಬರೀತಾನಮ್ಮ?
ತಾಯಿ : ಚಿಕ್ಕ ಹುಡುಗಿ ನಿನಗೇಕೆ, ಹೋಗು.
ಮಗಳು : ಮತ್ತೆ ಕಲಿತುಕೋಬೇಡ ಅಂತೀಯ.
ತಾಯಿ : ನೀನು ಚಿಕ್ಕ ಹುಡುಗಿ ಕಲಿತುಕೋಬೇಡ ಅಂದೆ.
ಮಗಳು : ಮತ್ತೆ ಅದನ್ನು ದೊಡ್ಡವರೇ ಕಲಿತುಕೋಬೇಕಾ? ನಾನು ಯಾವಾಗ ದೊಡ್ಡವಳಾಗ್ತೀನಿ? (ದೊಡ್ಡ ಅಪಾಯ ಕಾಣಿಸಿತು ತಾಯಿಗೆ)
ತಾಯಿ : ನೀನು ಹೀಗೆ ನಿಂತುಕೊಂಡ್ರೆ ನಿನ್ನನ್ನು ಕರೆದುಕೊಂಡು ಹೋಗುವುದಿಲ್ಲ, ನಾನೇ ಹೋಗ್ತೀನಿ.


 (ತೆಲುಗು ಮೂಲ - ಚಲಂ)
ಅನುವಾದ - ಸುಧಾ ಜಿ

ಸ್ವಾತಂತ್ರ್ಯ ಸಂಗ್ರಾಮ: "ಭಗತ್ ಸಿಂಗ್ ರ ಪತ್ರಗಳು"


ಭಗತ್ ಸಿಂಗ್ ರವರಿಂದ  ದೇಶಬಾಂಧವರಿಗೊಂದು ಸಂದೇಶ
1931ರ ಮಾರ್ಚ್ ಮೂರರಂದು ಅವರ ತಂದೆ ತಾಯಿ, ತಮ್ಮ ಕುಲ್ತಾರ್ ಸಿಂಗ್ ಸೇರಿದಂತೆ ಕುಟುಂಬದವರೆಲ್ಲಾ ಅವರನ್ನು ಭೇಟಿಯಾಗಲು ಬಂದಿದ್ದರು. ಭಗತ್‍ಸಿಂಗ್ ತಮ್ಮ ಎಂದಿನ ಶೈಲಿಯಲ್ಲಿಯೇ ಕ್ರಾಂತಿಕಾರಿ ಸ್ಫೂರ್ತಿ ಹಾಗೂ ಲವಲವಿಕೆಯೊಂದಿಗೆ ಮಾತನಾಡಿದರು. ಮುಂಬರಲಿದ್ದ ಮರಣ ಅವರ ಮಾನಸಿಕ ಸಮತೋಲನವನ್ನು ಯಾವುದೇ ರೀತಿಯಲ್ಲಿ ಹರಣಗೊಳಿಸಿರಲಿಲ್ಲ. ಕುಟುಂಬದವರಿಗೆ ಕಣ್ಣೀರಿಡದಂತೆ, ತಮ್ಮನ್ನು ನಗುನಗುತ್ತಾ ಕಳಿಸಿಕೊಡುವಂತೆ ಕೇಳಿಕೊಂಡರು. ಆದರೆ ಅವರ ತಮ್ಮ ಕುಲ್ತಾರ್‍ಸಿಂಗ್‍ರಿಗೆ ದುಃಖವನ್ನು ತಡೆದುಕೊಳ್ಳಲಾಗದೆ ಕಣ್ತುಂಬಿ ಬಂತು. ಇದನ್ನು ಕಂಡು ಭಗತ್ ಸಹ ಭಾವ ಪರವಶರಾದರು. ಅವರೆಲ್ಲರೂ ಜೈಲಿನಿಂದ ಹಿಂತಿರುಗಿದ ನಂತರ ಕುಲ್ತಾರರಿಗೆ ಭಗತ್ ಒಂದು ಪತ್ರ ಬರೆದರು. ಆ ಪತ್ರ ಅಣ್ಣ ತಮ್ಮನ ನಡುವಿನ ಬಾಂಧವ್ಯದ ಸಂಕೇತ ಮಾತ್ರವಾಗಿರದೆ, ಒಬ್ಬ ಕ್ರಾಂತಿಕಾರಿ ಸಾವನ್ನು ಹೇಗೆ ಸ್ವೀಕರಿಸಬೇಕೆಂಬುದಕ್ಕೆ ಉಜ್ವಲ ಸಾಕ್ಷಿಯ ದಾಖಲೆಯಾಗಿದೆ. ಆ ಪತ್ರದ ಮೂಲಕ ಅವರು ತಮ್ಮ ದೇಶಬಾಂಧವರಿಗೂ ಸಂದೇಶವನ್ನು ನೀಡಿದ್ದರು. ಅವರು ಆ ಪತ್ರದಲ್ಲಿ ಬರೆದದ್ದು, “ಇಂದು ನಿನ್ನ ಕಣ್ಣೀರನ್ನು ಕಂಡು ನನಗೆ ಬಹಳ ನೋವಾಯಿತು. ನಿನ್ನ ದನಿಯಲ್ಲಿ ದುಃಖವಿತ್ತು. ನಿನ್ನ ಕಣ್ಣೀರನ್ನು ನೋಡಲು ಸಾಧ್ಯವಿಲ್ಲ. ತಮ್ಮಾ, ಹತಾಶನಾಗಬೇಡ. ನನ್ನ ಮರಣಾನಂತರ ದೇಶದ ಮತ್ತು ಜನತೆಯ ಸೇವೆಯನ್ನು ಕೈಬಿಡಬೇಡ. ... ಇನ್ನೇನು ಬರೆಯಲಿ? ಇನ್ನೇನು ತಾನೆ ನಾನು ಹೇಳಬಲ್ಲೆ, ಕೇಳು. . .
ದಮನದ ಹೊಸ ವಿಧಾನಗಳನ್ನು ಹುಡುಕುತ್ತಿದ್ದಾರೆ ಅವರು.
ದೂರವೆಷ್ಟು ಸಾಗಿಯಾರೆಂದು ನೋಡಲು ಕಾತರರಾಗಿರುವೆವು ನಾವು. 
ಜಗದ ಬಗ್ಗೆ ನಾವೇಕೆ ಕೋಪಿಸಿಕೊಳ್ಳೋಣ?
ಆಗಸವ ನಾವೇಕೆ ಶಪಿಸೋಣ?
ನಮ್ಮದೊಂದು ವಿಭಿನ್ನ ಪ್ರಪಂಚ,
ಅದಕಾಗಿ ಹೋರಾಡೋಣ.
ಓ ಪಕ್ಷದ ಬಂಧುವೇ - ನನಗಿನ್ನಿರುವುದು ಕೆಲವು ಘಳಿಗೆಗಳು ಮಾತ್ರ, 
ಬೆಳಗಿನ ದೀಪದಂತೆ ನಾ, ಇನ್ನೇನು ಆರಿಹೋಗಲಿದ್ದೇನೆ;
ಸಂತಸದಿಂದಿರಿ ದೇಶವಾಸಿಗಳೇ,
ಇನ್ನು ನಮ್ಮ ಬಗ್ಗೆ- ಹೊರಟೆವು ನಾವಿನ್ನು,
ವಿದಾಯ! 
ಧೀರರಾಗಿರಿ !

ದಯಾಭಿಕ್ಷೆಯ ತಿರಸ್ಕಾರ - ತಂದೆಗೊಂದು ಭಾವುಕ ಪತ್ರ
    ಭಗತ್‍ರಿಗೆ ಎಲ್ಲರೂ ದಯಾಭಿಕ್ಷೆಯನ್ನು ಕೇಳಿ ಎಂದು ಹೇಳಿದ್ದರು. ಆದರೆ ಭಗತ್‍ರು ಅದಕ್ಕೆ ಒಪ್ಪುವ ಮಾತೇ ಇರಲಿಲ್ಲ. ಬ್ರಿಟಿಷರಲ್ಲಿ ದಯಾಭಿಕ್ಷೆಯೇ? ಭಗತ್ ಕನಸಿನಲ್ಲಿಯೂ ಊಹಿಸಲಾಗದ ವಿಚಾರವದು. ಆದರೆ ಜೈಲಿನಲ್ಲಿದ್ದ ಭಗತ್‍ಸಿಂಗ್, ಸುಖದೇವ್‍ರಿಗೆ ತಮ್ಮ ಬಂಧುಗಳು ತಮಗಾಗಿ ದಯಾಭಿಕ್ಷೆಯ ಮನವಿ ಮಾಡಿಕೊಂಡಿದ್ದರೆಂದು ತಿಳಿದು ಆಘಾತವಾಯಿತು. 

ಭಗತ್ ತಮ್ಮ ತಂದೆಗೆ ತೀಕ್ಷ್ಣವಾದ, ಸ್ವಲ್ಪ ಕಠೋರವೇ ಎನಿಸಬಹುದಾದ ಮಾತುಗಳಲ್ಲಿ ಪತ್ರವೊಂದನ್ನು ಬರೆದರು. “ಅಪ್ಪಾ, ನನ್ನನ್ನು ರಕ್ಷಿಸಲು ನೀವು ಟ್ರಿಬ್ಯುನಲ್‍ನ ಸದಸ್ಯರಿಗೆ ಮನವಿಯನ್ನು ಸಲ್ಲಿಸಿದ್ದೀರಿ ಎಂಬುದನ್ನು ಕೇಳಿ ನನಗೆ ತೀವ್ರವಾದ ಆಘಾತವಾಗಿದೆ. ಇದು ನನ್ನ ಮನಸ್ಸಿನ ಇಡೀ ಸಮತೋಲನವನ್ನೇ ಕಲಕಿದೆ. ಇಂತಹ ಸನ್ನಿವೇಶದಲ್ಲಿ ಅಂತಹ ಮನವಿಯನ್ನು ಸಲ್ಲಿಸುವುದು ಸರಿಯೆಂದು ನೀವು ಹೇಗೆ ಭಾವಿಸಿದಿರಿ? ತಂದೆಯಾಗಿ ನಿಮಗೆ ಎಷ್ಟೇ ಸೂಕ್ಷ್ಮ ಭಾವನೆ ಮತ್ತು ಭಾವುಕತೆಗಳಿದ್ದರೂ ಸಹ ನನ್ನನ್ನು ಕೇಳದೆಯೇ ನನ್ನ ಪರವಾಗಿ ಇಂತಹ ಕಾರ್ಯ ಕೈಗೊಳ್ಳಲು ನಿಮಗೆ ಯಾವುದೇ ಹಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯ ರಂಗದಲ್ಲಿ ನನ್ನ ವಿಚಾರಗಳು ನಿಮ್ಮ ವಿಚಾರಗಳಿಗಿಂತ ಭಿನ್ನವಾಗಿತ್ತೆಂಬುದು ನಿಮಗೆ ತಿಳಿದಿದೆ. . . ನೀವು ಬಹುಶಃ ಭಾವಿಸುವಂತೆ ನನ್ನ ಜೀವವೇನು—ಕಡೆಯ ಪಕ್ಷ ನನ್ನ ಪಾಲಿಗೆ-ಅಮೂಲ್ಯವಲ್ಲ. ನನ್ನ ಆದರ್ಶಗಳನ್ನು ಮಾರಾಟ ಮಾಡಿ ಅದನ್ನು ಗಳಿಸಿಕೊಳ್ಳುವ ಅಗತ್ಯವಿಲ್ಲ.  ನನ್ನ ಮೇಲೆ ಹೂಡಿರುವ ದಾವೆಯಷ್ಟೇ ನನ್ನ ಇತರ ಸಂಗಾತಿಗಳ ದಾವೆಗಳೂ ಗಂಭೀರವಾಗಿವೆ. ನಾವು ಒಂದು ಸಮಾನ ನೀತಿಯನ್ನು ಅನುಸರಿಸುತ್ತಿದ್ದೇವೆ ಮತ್ತು ಜೊತೆಜೊತೆಗೆ ಎಲ್ಲವನ್ನೂ ಎದುರಿಸಿದ್ದೇವೆ. ಆದ್ದರಿಂದ ವೈಯಕ್ತಿಕವಾಗಿ ಎಷ್ಟೇ ಕಷ್ಟವನ್ನು ಅನುಭವಿಸಿದರೂ ಸಹ ಕೊನೆಯವರೆಗೂ ನಾವು ಒಂದಾಗಿಯೇ ನಿಲ್ಲುತ್ತೇವೆ. ನಿಜಕ್ಕೂ ನಾನು ವಿಸ್ಮಯಾಘಾತಕ್ಕೆ ಒಳಗಾಗಿದ್ದೇನೆ. ನಿಮ್ಮ ಈ ನಡೆಯನ್ನು ಖಂಡಿಸುವಾಗ ಮರ್ಯಾದೆಯ ಸಾಮಾನ್ಯ ನಿಯಮಗಳನ್ನು ಗಮನಿಸದೇ ಇರಬಹುದು, ನನ್ನ ಭಾಷೆ ಸ್ವಲ್ಪ ಕಠಿಣವಾಗಿರಬಹುದು ಎಂಬ ಹೆದರಿಕೆ ನನಗಿದೆ. ಮುಚ್ಚುಮರೆಯಿಲ್ಲದೆ ಹೇಳಬೇಕೆಂದರೆ, ನನಗೆ ಬೆನ್ನಲ್ಲಿ ಚೂರಿ ಹಾಕಿದಂತೆನಿಸುತ್ತಿದೆ.”


ಕವನ: "ಅದಮ್ಯ ಚೇತನಕ್ಕೆ ನಮನ"



ನೀನೆಂದರೆ
ಬಿಸಿ ನೆತ್ತರ ಧಗೆಯು
ನೀನಲ್ಲವೆ
ಬಿರುಗಾಳಿಯ ವೇಗವು
ನೀನಾದೆ
ಬ್ರಿಟಿಷರಿಗೆ ಸಿಂಹಸ್ವಪ್ನವು
ನೀನೇ
ಯುವಬಲದ ಮೂಲಾರ್ಥವು.

ಕಡೆಗಣಿಸಿ ನಿನ್ನವರ
ಧುಮುಕಿದೆ ಸ್ವಾತಂತ್ರ್ಯವನ್ನರಸಿ
ಕ್ಷಣಕ್ಷಣವು ಪರಿತಪಿಸಿದೆ
ದೌರ್ಜನ್ಯವ ನೆನೆಸಿ
ದಬ್ಬಾಳಿಕೆಯೆದುರು ಅಬ್ಬರಿಸಿ
ಹೆಬ್ಬುಲಿಯಾದೆ
ಯುವಶಕ್ತಿಯನೆಚ್ಚರಿಸಿ
ನೀ ಅಮರನಾದೆ.

ಅರ್ಥಪೂರ್ಣ
ನೀನು ಬದುಕಿದ ರೀತಿ,
ಅಮೂಲ್ಯ
ನಿನ್ನ ದೇಶಪ್ರೀತಿ,
ಅಮೋಘ
ನಿನ್ನ ಸಾಹಸವೃತ್ತಿ,
ಅಪರೂಪ
ನಿನ್ನ ಮಾನವಪ್ರೀತಿ.

ಆದರೆ,
ಮರೆತೇಹೋಗಿದೆ
ಮರೆಯಾಗಿಯೇ ಹೋಗಿದೆ
ಆ ಬಲಿದಾನ,
ಅಳಿಸಿ ಹೋಗಿದೆ
ಅರಿವಿನಲ್ಲಿರದಾಗಿದೆ
ಆ ರಕ್ತದಾನ,
ಮತ್ತಿನಲ್ಲಿದೆ
ಮಾದಕತೆಯಲ್ಲಿ ಮುಳುಗಿದೆ
ಈ ಯುವಜನ.

ಜಡವ ತೊಲಗಿಸಲಿ
ಜನರಲ್ಲಿ ನಿನ್ನ ನೆನಪು
ಭಯವೇ ಬೆದರೋಡಲಿ
ನೆನೆದಾಗ ನಿನ್ನ ಬದುಕು
ಉತ್ಸಾಹವನುಕ್ಕಿಸಲಿ
ನಿನ್ನ ಉಕ್ಕಿನೋಕ್ತಿಗಳು
ಆವೇಶವನ್ನೆಬ್ಬಿಸಲಿ
ನಿನ್ನ ಘೋಷಗಳು.

                                                   -     ಉಷಾಗಂಗೆ.ವಿ

ಅನುವಾದ: "ಅಶಾಕಿರಣ"

ಚಿತ್ರ ಕೃಪೆ: www.zoonar.com

      ಇದು ಐದು ಮೋಂಬತ್ತಿಗಳ ಕಥೆ. ಓರ್ವ ವ್ಯಕ್ತಿಯ ಕೋಣೆಯಲ್ಲಿ ಐದು ಮೋಂಬತ್ತಿಗಳಿದ್ದವು. ಅವು ನಿಧಾನವಾಗಿ ಉರಿಯುತ್ತಿದ್ದವು. ಆ ವ್ಯಕ್ತಿಗೆ ಮೋಂಬತ್ತಿಗಳು ಮಾತನಾಡುವುದು ಕೇಳಿಸುವಷ್ಟು ನೀರವತೆಯಿತ್ತು.

    ಮೊದಲ ಮೋಂಬತ್ತಿ ಹೇಳಿತು, “ನಾನು ಸಂತೋಷ! ಆದರೆ ನನ್ನ ಸುತ್ತಲೂ ಎಷ್ಟೊಂದು ಕಷ್ಟಗಳಿವೆ, ಆದ್ದರಿಂದ ನಾನು ಹೋಗುತ್ತಿದ್ದೇನೆ.” ಸ್ವಲ್ಪ ಸಮಯದಲ್ಲಿಯೇ ಅದರ ಉರಿ ಕಡಿಮೆಯಾಗುತ್ತಾ ಬಂದು ಅದು ಆರಿಹೋಯಿತು.

     ಎರಡನೆಯ ಮೋಂಬತ್ತಿ ಹೇಳಿತು, “ನಾನು ಯಶಸ್ಸು! ಎಲ್ಲೆಡೆ ತೀವ್ರವಾದ ಸ್ಪರ್ಧೆಯಿದೆ. ನಾನು ಬಹಳ ಕಾಲ ಇರುವೆನೆಂದು ನನಗನಿಸುತ್ತಿಲ್ಲ.” ಅದು ಮಾತನಾಡುತ್ತಿರುವಂತೆಯೇ ಮಂದ ಗಾಳಿ ಬೀಸಿತು ಮತ್ತು ಮೋಂಬತ್ತಿಯನ್ನು ಆರಿಸಿತು.

    ದುಃಖದಿಂದ ಮೂರನೆಯ ಮೋಂಬತ್ತಿ ಹೇಳಿತು, “ನಾನು ಉತ್ಸಾಹ! ಸಂತೋಷವೂ ಹೋದಾಗ, ಯಶಸ್ಸೂ ಹೋದಾಗ, ಜೊತೆಗೆ ಎಲ್ಲೆಡೆಯೂ ಎಲ್ಲರಿಂದ ನಿರುತ್ಸಾಹದಾಯಕ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವಾಗ ನಾನು ಹೇಗೆ ಉರಿಯುತ್ತಿರಲಿ?” ಉತ್ತರಕ್ಕೂ ಕಾಯದಂತೆ, ಅದೂ ಸಹ ಆರಿಹೋಯಿತು.

     ನಂತರ ನಾಲ್ಕನೆಯ ಮೋಂಬತ್ತಿ ಭಾರವಾದ ಮನಸ್ಸಿನಿಂದ ಹೇಳಿತು, “ನಾನು ನಂಬಿಕೆ! ಸಂತೋಷವೂ ಹೋದಾಗ, ಯಶಸ್ಸೂ ಹೋದಾಗ, ಉತ್ಸಾಹವೂ ಹೋದಾಗ, ಇನ್ನು ಜೀವನದಲ್ಲಿ ಉಳಿಯುವುದೇನು? ಈಗ ಹೋಗುವ ಸರದಿ ನನ್ನದು.” ನಿಟ್ಟುಸಿರಿನೊಂದಿಗೆ ನಾಲ್ಕನೆಯ ಮೋಂಬತ್ತಿ ಸಹ ಆರಿಹೋಯಿತು.

      ಕೋಣೆಯಲ್ಲಿದ್ದ ವ್ಯಕ್ತಿ ನಾಲ್ಕೂ ಮೋಂಬತ್ತಿಗಳು ಒಂದೊಂದಾಗಿ ಆರಿಹೋಗುವುದನ್ನು ಕಂಡ. ತನಗೆ ತಾನೆ ಈ ರೀತಿ ಹೇಳಿಕೊಂಡ: “ಓಹ್! ಈಗ ನನ್ನ ಜೀವನದಲ್ಲಿ ಏನು ಉಳಿದಿದೆ? ಸಂಪೂರ್ಣ ಕತ್ತಲೆ ಆವರಿಸಲಿದೆ, ಅಷ್ಟೇ!” ಇಷ್ಟನ್ನು ಹೇಳಿ ಅಳಲಾರಂಭಿಸಿದ.

      ಅವನ ಅಳುವನ್ನು ಕಂಡು ಐದನೆಯ ಮೋಂಬತ್ತಿ ಹೇಳಿತು, “ಹೇ! ಅಳಬೇಡ! ಚಿಂತಿಸಬೇಡ! ಹೆದರಿಕೊಳ್ಳಬೇಡ. ನಾನು ಜೀವಂತವಾಗಿರುವವರೆಗೆ ಸಂಪೂರ್ಣ ಕತ್ತಲೆ ಆವರಿಸಲು ಸಾಧ್ಯವಿಲ್ಲ. ನನ್ನ ಸಹಾಯದಿಂದ ನೀನು ಇತರ ಮೋಂಬತ್ತಿಗಳನ್ನು ಹೊತ್ತಿಸಬಹದು. ನಾನು ಭರವಸೆ!

    ಹೊಳೆವ ಕಂಗಳೊಂದಿಗೆ ಆ ವ್ಯಕ್ತಿ ಮೇಲಕ್ಕೆದ್ದು, ಭರವಸೆಯ ಮೋಂಬತ್ತಿಯೊಂದಿಗೆ ಉಳಿದ ಎಲ್ಲಾ ಮೋಂಬತ್ತಿಗಳನ್ನು ಹೊತ್ತಿಸಿದ. ಮತೊಮ್ಮೆ, ಆತನ ಜೀವನ ಉಜ್ವಲವಾಯಿತು.

     ಭರವಸೆಯ ಸಹಾಯದೊಂದಿಗೆ ಆ ವ್ಯಕ್ತಿ ತನ್ನ ಜೀವನದಲ್ಲಿ ನಂಬಿಕೆ, ಉತ್ಸಾಹ, ಯಶಸ್ಸು, ಮತ್ತು ಸಂತೋಷವನ್ನು ಗಳಿಸಿಕೊಂಡ.

         ಬಹಳಷ್ಟು ಬಾರಿ ಒಂದು ಆಶಾಕಿರಣದೊಂದಿಗೆ ನಮ್ಮ ಇಡೀ ಜೀವನವನ್ನು ಬೆಳಗಿಸಿಕೊಳ್ಳಬಹುದು.

ಮೂಲ: Ray of Hope ( ಶಮ್ಮಿ ಸುಖ್)
ಕನ್ನಡ ಅನುವಾದ - ರೂಪಶ್ರೀ.ವಿ.ಬಿ

ನಾ ಕಂಡಂತೆ: "ಮುದ್ದಿಸೋ ದೈವವೇ ಅಳುವಾಗ...."

  
ಚಿತ್ರ ಕೃಪೆ: ಮಂಜುನಾಥ್ ಎ ಎನ್ 

     ಇಂದು ಮುಂಜಾನೆ ಎಂದಿನಂತೆ ತರಾತುರಿಯಲ್ಲಿ ಕಾಲೇಜಿಗೆ ತಯಾರಾಗಿ, ತಪ್ಪಿಹೋಗುತ್ತಿದ್ದ ಬಸ್ಸನ್ನು ಹಿಡಿದು, ಸೂರ್ಯನ ಸುಡುಬಿಸಿಲಿನಿಂದ ಅವಿತು ಯಾವ ಮೂಲೆಯಲ್ಲಿ ಕೂರಬಹುದೆಂದು ಕಣ್ಣಾಡಿಸುತ್ತಿದ್ದಾಗ ಹಸುಗೂಸೊಂದನ್ನು ಮಡಿಲಲ್ಲಿ ಮಲಗಿಸಿಕೊಂಡು, ಕಣ್ತುಂಬ ಕಾಣದ ಕಂಬನಿ ತುಂಬಿಕೊಂಡು, ಅಸ್ಪಷ್ಟ ಅನಿರ್ದಿಷ್ಟ ಪ್ರಶ್ನೆಗಳಿಗೆ ಅಗೋಚರ ಉತ್ತರಗಳನ್ನು ಹುಡುಕುತ್ತಿದ್ದಳೇನೋ ಎಂಬಂತಹ ಮುಖಚರ್ಯೆ ಹೊತ್ತಿಕೊಂಡ ಎಳೆ ವಯಸ್ಸಿನ ತಾಯೊಬ್ಬಳು ಕುಳಿತಿದದ್ದು ಕಂಡಿತು. ಕಿಟಕಿಯ ಬಳಿ ಕೂರಲು ಜಾಗವಿದ್ದರೂ ಸೂರ್ಯನ ಕೆಂಗೋಪಕ್ಕಂಜಿ ಆ ಸೀಟುಗಳ ನಡುವೆಯೇ ನಿಂತೆ. ಮನದಾಳದ ಮೂಕವೇದನೆ ಮುಖದ ಮೇಲೆ ಮೂಡುವುದು ನಿಜವೇ ಆದರೆ, ಅದರ ಸತ್ಯಾಸತ್ಯತೆ ನನ್ನ ಗ್ರಹಿಕೆ ಹಾಗು ಕಲ್ಪನೆಗಳಿಗೆ ಹೋಲುವುದೇ ಆದರೆ ಆ ಹೆಂಗರುಳಿನ ಪ್ರಶಾಂತ ಕಡಲು ಭಾವಾವೇಶದ ಸುನಾಮಿಯೊಂದಕ್ಕೆ ಸಿಲುಕಿ ತತ್ತರಿಸಿಹೋಗಿತ್ತು. ಜೀವನೋತ್ಸಾಹದ ಹಡುಗು ಬೀಭತ್ಸ ಭಯಂಕರ ಬಿರುಗಾಳಿಗೆ ಸಿಲುಕಿ ಜರ್ಜರಿತವಾಗಿತ್ತು. ಆ ಸುನಾಮಿ ಯಾವುದೋ, ಆ ಬಿರುಗಾಳಿ ಯಾವುದೋ ನಾನರಿಯೆ. ಆದರೆ ಅದರ ತೀವ್ರತೆ ಅವಳ ಕಣ್ಗಳ ನೀರವ ಮೌನದಲ್ಲಿ ಪ್ರಫಲನಗೊಂಡಂತೆ ಕಂಡಿದ್ದು ಮಾತ್ರ ಸುಳ್ಳಲ್ಲ.

       ಇನ್ನೂ ಕನಿಷ್ಠ ಇಪ್ಪತ್ತು ವಸಂತಗಳನ್ನೂ ಕಂಡಿರದ ಎಳೆ ವಯಸ್ಸು, ಆದರೆ ಎದೆಯಾಳದ ನೋವಿಗೆ ವಯಸ್ಸಿನ ಕಿರಿತನದ ಬಗ್ಗೆ ಕರುಣೆ, ಅನುಕಂಪಗಳು ಎಲ್ಲಿನವು? ಜಿಗಿದೋಡುವ, ಪುಟಿದೇಳುವ ಉಲ್ಲಾಸದ ಚಿಲುಮೆಯಂತಿರುವ ಯೌವನದಲ್ಲಿ ಈ ತಾಯಿಯ ಮೂಕವೇದನೆ ಅದೇಕೊ ಮನವ ಬಾಧಿಸುತಿತ್ತು. ಜೀವನದ ಕಹಿಸತ್ಯಗಳ ಸೈರಿಸಿ, ನೂವ್ನಲಿವುಗಳ ಅನುಭವಿಸಿಯೇ ತೀರಬೇಕೆನ್ನುವ ಬಾಳನಿಯಮವ ಆಕೆಗೆ ಸಂತೈಸಿ ತಿಳಿದು ಹೇಳಬಲ್ಲ ಆ ಧೀಶಕ್ತಿ ಕಾಲಗರ್ಭದಿ ಎಲ್ಲಿಹುದೋ? ಹೆಣ್ಹೆಗಲಿಗೆ ಎಳೆವಯಸ್ಸಿನಲ್ಲೇ ಪ್ರಕೃತಿ ಕಟ್ಟಿದ ಋಣಭಾರವ ಕಂಡು ಸೃಷ್ಟಿಯ ಸಮ್ಯಕ್ ನ್ಯಾಯವದೆಲ್ಲಿ ಎಂಬ ಪ್ರಶ್ನೆ ಕಾಡುತ್ತಿತ್ತು. "ಸರಿಯೋ ಕಾಲದ ಜೊತೆಗೆ, ವ್ಯಸನ ನಡೆವುದು ಹೊರಗೆ" ಎಂಬಂತೆ ಕಾಲಚಕ್ರ ಉರುಳುತ್ತಾ ಈಕೆಯೂ ಸಮಾಧಾನಗೊಳ್ವಳು, ಅಲ್ಲಿಯವರೆಗೆ ಈ ಭಾವಬೇನೆಯ ಸರಪಳಿ ಇನ್ನಷ್ಟು ಬಾಧಿಸುವುದು. ಇದೇ ಏನು ಪ್ರಕೃತಿಯ ಕಾಲಾತೀತ ನ್ಯಾಯಕ್ರಮ!?

      ಎಲುಬಿಲ್ಲದ ನಾಲಗೆ ವಟಗುಟ್ಟುವಂತೆ ಎಡೆಯಿಲ್ಲದ ಆಲೋಚನೆಗಳು ಓಡುತ್ತಿರಲು ನನ್ನ ಪ್ರಶ್ನೆಗಳಿಗೆ ಪ್ರಕೃತಿ ಉತ್ತರಿಸಬಯಸಿದಂತೆ, ಆಕೆಯ ಹಸುಗೂಸು ಅಳಲಾರಂಭಿಸಿತು. ತನ್ನ ಮುದ್ದಿಸೋ ದೈವವೇ ಅಳುವಾಗ, ಕಂದನು ತಾನು ಕೈಸೋತು ಕೂರುವುದು ಹೇಗೆ ಎಂಬಂತೆ, ಅಮ್ಮನ ನೂರ್ನೋವುಗಳನ್ನೂ ತಾನೇ ನೀಗಿಸಲು ಪಣತೊಟ್ಟಂತೆ ಮಗುವದು ಚೀರಾಡಲು ಭಾವಾವೇಶದ ಹಲವು ಕಡಲ್ಗಳನು ದಾಟಿ, ಮನಸಿನುದ್ವೇಗದ ಶಿಖರ ಶೃಂಗಗಳನ್ನಿಳಿದು ತಾಯಿ ತನ್ನ ಮಗುವ ಸಂತೈಸಲು ತೊಡಗಿದಳು. ಮಗುವೊಡನೆ ಮಗುವಾಗಿ ತಾಯಿಯು ಅಳುವ ಕಂದನನ್ನು ಸಮಾಧಾನಗೊಳಿಸುತ್ತಿದ್ದಳೊ ಅಥವಾ ಕಂದನು ಅಳುವ ನೆಪದಿ ತಾಯಿಯ ಎದೆಯಾಳದ ಆಕ್ರಂದನವ ಕ್ಷಣಮಾತ್ರದಿ ಅಳಿಸಿ ಅವಳನ್ನು ತನ್ನದೇ ರೀತಿಯಲ್ಲಿ ಸಮಾಧಾನಗೊಳಿಸುತಿತ್ತೋ ನಾನರಿಯೆ. ತಾಯಿಯ ಅನಂತ ಮನೋವೇದನೆಗಳು ಮಗುವಿನ ಆ ಸಣ್ಣ ಅಳುವಿನೆದುರು-ನಗುವಿನೆದುರು ಶೂನ್ಯವಾಗುವ ಸೃಷ್ಟಿಯ ಈ ಸಮೀಕರಣಕ್ಕೆ ಸಾಟಿಯೇನಾದರೂ ಇದೆಯೇನು?

ಮಹಿಳಾ ದಿನ ವಿಶೇಷ: "ಕ್ಲಾರಾ ಜೆಟ್ಕಿನ್"


ಅಂತರರಾಷ್ಟ್ರೀಯ ಮಹಿಳಾ ದಿನದ ಆರಂಭಕರ್ತೆ – ಕ್ಲಾರಾ ಜೆಟ್ಕಿನ್





     ಮಹಿಳಾ  ದಿನವನ್ನು ಮಾರ್ಚ್ ತಿಂಗಳಲ್ಲಿ ಆಚರಿಸುತ್ತೇವೆ. ಆದರೆ ಇದರ ಹುಟ್ಟು ಹೇಗಾಯಿತೆಂದು ನಮ್ಮಲ್ಲನೇಕರಿಗೆ ತಿಳಿದೇ ಇಲ್ಲ. ಮಹಿಳಾ  ದಿನ ಬಂತೆಂದರೆ ಎಲ್ಲಾ ಕಡೆಯಲ್ಲೂ ಸಂಭ್ರಮಾಚರಣೆ - ಕಾರ್ಖಾನೆಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಆಫೀಸುಗಳಲ್ಲಿ ಬಗೆಬಗೆಯ ಆಟಗಳನ್ನು ಆಡಿಸಿ ಮಹಿಳೆಯರ ಬಗ್ಗೆ ಒಂದೆರಡು ಮಾತುಗಳನ್ನಾಡಿ ಸಿಹಿ ಹಂಚಿ ಆ ದಿನ ಖುಷಿಪಟ್ಟು ರಾಜ್ಯೋತ್ಸವ, ಸ್ವಾತಂತ್ರ್ಯ ದಿನೋತ್ಸವದಂತೆ ಮರೆತುಬಿಡುತ್ತೇವೆ. ಆದರೆ ಮಹಿಳೆಯರ ಮೇಲಿನ ಶೋಷಣೆ, ಕಿರುಕುಳ, ದಬ್ಬಾಳಿಕೆ ಮುಂತಾದವುಗಳ ವಿರುದ್ಧ ನಿರಂತರವಾಗಿ ಹೋರಾಟಮಾಡಬೇಕೆಂಬುದೇ ಗೌಣವಾಗುತ್ತದೆ.

    ಮತ್ತೊಂದು ಮಹಿಳಾ ದಿನ ಕಳೆದುಹೋಯಿತು. ಅಂತರರಾಷ್ಟ್ರೀಯ ಮಹಿಳಾ ದಿನ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣಕರ್ತರಾದ ಕ್ಲಾರಾ ಜೆಟ್ಕಿನ್ ಅವರನ್ನು ನೆನಪು ಮಾಡಿಕೊಳ್ಳುವ ಸಮಯವಾಗಿದೆ. ಬಹುಶಃ ಇವರ ಹೆಸರು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ!

         ಜರ್ಮನಿಯ ಮಾರ್ಕ್ಸ್ವಾದಿ ಸಿದ್ಧಾಂತಿಯಾದ ಕ್ಲಾರಾ ಜನಿಸಿದ್ದು ಜುಲೈ 5 ರ 1857 ರಲ್ಲಿ. ತಂದೆ ಗಾಟ್‌ಫ್ರಿಡ್ ಐಸೆನರ್, ತಾಯಿ ಜೋಸೆಫಿನ್ ವಿಟೇಲ್.  ಮೂವರು ಮಕ್ಕಳಲ್ಲಿ ಕ್ಲಾರಾ ಅವರೇ ದೊಡ್ಡವರಾಗಿದ್ದರು. ಇವರ ತಂದೆ ಶಾಲಾ ಶಿಕ್ಷಕರಾಗಿದ್ದರು. ತಾಯಿ ವಿದ್ಯಾವಂತೆಯಾಗಿದ್ದರು. ಕ್ಲಾರಾ ಶಿಕ್ಷಕಿಯಾಗಿರುವಾಗಿರುವಾಗಲೇ 1874 ರವರೆಗೆ ಮಹಿಳಾ ಚಳುವಳಿಗಳಲ್ಲಿ ಮತ್ತು ಕಾರ್ಮಿಕ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು.

      ಮಹಿಳಾ ಹೋರಾಟಗಾರ್ತಿಯಾಗಿ, ಸಮಾಜವಾದಿ ಚಿಂತಕಿಯಾಗಿ, “ಮಹಿಳೆಯರ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಮೂಲ ಕಾರಣ, ಮಹಿಳಾ ವಿಮೋಚನೆ ಕಾರ್ಮಿಕ ವರ್ಗದ ವಿಮೋಚನೆಯೊಂದಿಗೆ ಬೆಸೆದುಕೊಂಡಿದೆ” ಎಂದರಿತು ಅವರು 1878 ರಲ್ಲಿ "ಸಾಮಾಜಿಕ ಕಾರ್ಮಿಕ ಪಕ್ಷವನ್ನು " ಸೇರಿಕೊಂಡರು.
1878 ರಲ್ಲಿ  ಆಡಳಿತಗಾರ ಬಿಸ್ಮಾರ್ಕ್, ಜರ್ಮನಿಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಿಷೇಧಗೊಳಿಸಿದ್ದರಿಂದ, ಅಂತಹ ಚಟುವಟಿಕೆಗಳನ್ನು ಸಂಘಟಿಸಿದರೆಂದು ಕ್ಲಾರಾ ಅವರನ್ನು ಪ್ಯಾರಿಸ್‍ಗೆ ಗಡೀಪಾರು ಮಾಡಲಾಯಿತು. ಈ ಸಮಯದಲ್ಲಿಯೇ ಅವರು ರಷ್ಯಾದ ಆಸಿಫ್ ಜೆಟ್ಕಿನ್ ಅವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಇಬ್ಬರು ಮಕ್ಕಳು ಕಾನ್ಸ್ಟೆಂಟಿನ್ ಮತ್ತು ಮ್ಯಾಕ್ಸಿಮ್. ಆಸಿಫ್ ಜೆಟ್ಕಿನ್ 1889ರಲ್ಲಿ ಮರಣ ಹೊಂದಿದರು. 

        ಪ್ಯಾರಿಸ್‍ನಲ್ಲಿ ಇದ್ದಂಥ ಸಮಯದಲ್ಲಿ ಅಂತರರಾಷ್ಟ್ರೀಯ ಸಮಾಜವಾದಿ ಗುಂಪನ್ನು ಕಟ್ಟಲು ಬಹುಮುಖ್ಯ ಪಾತ್ರ ವಹಿಸಿದರು.  ಈ ಸಮಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹೆಣ್ಣು ಗಂಡು ಎಂಬ ಭೇದಭಾವದಿಂದಲೇ ಅವರಿಗೆ ಕೆಲಸಗಳು  ಸಿಗುವಂತಹ ಪರಿಸ್ಥಿತಿ ಇದ್ದವು. ಹತ್ತಿ ಗಿರಣಿ, ಗೃಹ ಕೆಲಸದ ಸೇವೆಗಳು ಮುಂತಾದ ಕಡೆಗಳಲ್ಲಿ ದುಡಿಯುವ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು. ಮಹಿಳೆಯರಿಗೆ ಕೊಡುತ್ತಿದ್ದ ಕೂಲಿಯಂತೂ ಅತೀ ಕಡಿಮೆಯಾಗಿತ್ತು.

      ಆಗ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು, ರಾಜಕೀಯವಾಗಿ ಸಂಘಟಿಸಲು, ಸಮಾನ ಅವಕಾಶ ಮತ್ತು ಮುಖ್ಯವಾಗಿ ಮಹಿಳಾ ಮತದಾನದ ಸಲುವಾಗಿ ಹೋರಾಟದ ಕಾವು ತೀವ್ರ ಸ್ವರೂಪ ಪಡೆಯುವಲ್ಲಿ ಜೆಟ್ಕಿನ್ ಪ್ರಮುಖ ಪಾತ್ರ ವಹಿಸಿದ್ದರು. 1907 ರಲ್ಲಿ ಸಾಮಾಜಿಕ ಪ್ರಜಾಸತ್ತಾತ್ಮಕ ಪಕ್ಷದಲ್ಲಿ ಸ್ಥಾಪನೆಯಾದ ಮಹಿಳಾ ಕಛೇರಿಗೆ ನಾಯಕಿಯಾದರು.

       ಈ ನಡುವೆ 1908 ರ ಫೆಬ್ರವರಿ ಕೊನೆಯ ಭಾನುವಾರ ಅಮೆರಿಕದಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದವು. 1909 ರಲ್ಲಿ  ಸಿದ್ಧ ಉಡುಪುಗಳ ಕಾರ್ಖಾನೆಯಲ್ಲಿ ದುಡಿಯುವ 20 ರಿಂದ 30 ಸಾವಿರದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಚಳುವಳಿ ನಡೆಸಿದರು. ಅವರನ್ನು ಬಂಧಿಸಲಾಯಿತು. ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್ ಅವರಿಗೆ ಜಾಮೀನು ನೀಡಿ ಬಂಧಿತ ಮಹಿಳೆಯರನ್ನು ಬಿಡಿಸಿಕೊಂಡಿತು.  

    ಅಮೇರಿಕಾದಲ್ಲಿ ನಡೆದ ಪ್ರತಿಭಟನೆಯಿಂದ ಸ್ಪೂರ್ತಿಗೊಂಡ ಕ್ಲಾರಾ 1910 ರ ಆಗಸ್ಟ್‌ನಲ್ಲಿ ಕೋಪನ್‍ಹೇಗ್ ನಲ್ಲಿ ಚರಿತ್ರಾರ್ಹ 2 ನೇ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ಮಹಿಳಾ ದಿನವಾಗಿ ಒಂದು ದಿನವನ್ನು ನಿಗದಿಪಡಿಸಲು ಪ್ರಸ್ತಾಪಿಸಿದರು. 17 ದೇಶದ 100 ಪ್ರತಿನಿಧಿಗಳು, ಸರ್ವಾನುಮತದ ಸಮ್ಮತಿಯನ್ನು ನೀಡಿದರು. ಆ ದಿನದಂದು, ಮಹಿಳೆಯರು ಸಾರ್ವತ್ರಿಕ ಮತದಾನದ ಹಕ್ಕು,  ಹೆರಿಗೆಯ ಭತ್ಯೆ ಮತ್ತು ಇತರೆ ಬೇಡಿಕೆಗಳಿಗಾಗಿ ಒತ್ತಾಯಿಸಲು, ಹೋರಾಟಕ್ಕೆ ಕಂಕಣಬದ್ಧರಾಗಲು ಸಿದ್ಧರಾಗುವ ದಿನವನ್ನಾಗಿ ಬಳಸಬೇಕು ಎಂದು ಕರೆಯಿತ್ತರು.  ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದರು.
     
      ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು. 1911 ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. 

      1891 ರಿಂದ 1917 ರವರೆಗೆ ಮಹಿಳಾ ದಿನಪತ್ರಿಕೆ "equality " ಯಲ್ಲಿ ಸಂಪಾದಕಿಯಾಗಿ ಕೆಲಸ ಮಾಡಿದರು.  ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಕ್ಲಾರಾ, ಕಾರ್ಲ್ ಲೆಬ್ನೆಕ್ಟ್, ರೋಸಾ ಲಕ್ಸೆಂಬರ್ಗ್ ಮತ್ತು ಇತರ ಪ್ರಮುಖ ರಾಜಕೀಯ ವ್ಯಕ್ತಿಗಳ ಜೊತೆಗೂಡಿ ಪಕ್ಷದ ಸಿದ್ಧಾಂತಗಳನ್ನು ತಿರಸ್ಕರಿಸಿ ಅಂತರರಾಷ್ಟ್ರೀಯ ಸಾಮಾಜಿಕ ಮಹಿಳೆಯರ ಯುದ್ಧ ವಿರೋಧಿ ಸಮ್ಮೇಳನವನ್ನು 1915 ರಲ್ಲಿ ಬರ್ಲಿನ್ ನಲ್ಲಿ ಸಂಘಟಿಸಿದರು. ಯುದ್ದದ ಸಮಯದಲ್ಲಿ ಕ್ಲಾರಾ ಅವರ ಯುದ್ಧ ವಿರೋಧಿ ಅಭಿಪ್ರಾಯಗಳಿಂದಾಗಿ ಹಲವಾರು ಬಾರಿ ಅವರನ್ನು ಬಂಧಿಸಲಾಯಿತು ಮತ್ತು 1916 ರಲ್ಲಿ ಅವರನ್ನು "ರಕ್ಷಣಾ ಬಂಧನ"ದಲ್ಲಿ ಇರಿಸಲಾಯಿತು. ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಬಂಧಮುಕ್ತಗೊಳಿಸಲಾಯಿತು.

        1920 ರಿಂದ 1933 ರ ವರೆಗೆ  ರೀಚ್ ಸ್ಟಾಗ್  ನ ಪ್ರತಿನಿಧಿಯಾಗಿದ್ದರು. 1920 ರಲ್ಲಿ "ಮಹಿಳೆಯರ ಪ್ರಶ್ನೆ" (The women's question) ಎಂಬ ವಿಷಯದ ಮೇಲೆ ಲೆನಿನ್ ಅವರೊಂದಿಗೆ ಚರ್ಚೆ ಮಾಡಿದರು. ಕ್ಲಾರಾ ಅವರ ಒಂದು ಮಾತು ಹೀಗಿದೆ: "ಮಹಿಳೆಯರ ಹಕ್ಕುಗಳು ಕಾರ್ಮಿಕವರ್ಗದ ವಿಮುಕ್ತಿಯೊಂದಿಗೆ  ಅವಿಭಾಜ್ಯವಾಗಿ ಬೆಸೆದುಕೊಂಡಿದೆ. ವಿಮೋಚನಾ ಹೋರಾಟದಲ್ಲಿ ದುಡಿಯುವ ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಕಾರ್ಮಿಕವರ್ಗ ಸಹ ತನ್ನ ಸ್ವಾತಂತ್ರವನ್ನು ಗಳಿಸಲು ಸಾಧ್ಯವಿಲ್ಲ.  ಮಹಿಳೆ ತನ್ನ ಸ್ವಾತಂತ್ರ್ಯ ಉಳಿಸಿಕೊಳ್ಳಲು ನಿರಂತರ ಹೋರಾಟ,  ಒಗ್ಗೂಡುವಿಕೆ, ಭಾಗವಹಿಸುವಿಕೆ ಅತಿಮುಖ್ಯವಾಗಿದೆ.” 

    ವಿಶ್ವ ಮಹಿಳಾ ದಿನಾಚರಣೆಯ ಪರಿಕಲ್ಪನೆಯನ್ನು ರೂಪಿಸಿ ಅದರ ಅನುಷ್ಠಾನಕ್ಕೆ ಒತ್ತಾಯಿಸಿ ಮಹಿಳಾ ದಿನಾಚರಣೆಯ ಹುಟ್ಟಿಗೆ ಕಾರಣರಾದ ಕ್ಲಾರಾ ಜೆಟ್ಕಿನ್ ಅವರನ್ನು ಆಡಾಲ್ಪ್ ಹಿಟ್ಲರ್ ಮತ್ತು ನಾಜಿ ಪಕ್ಷದವರು ಅಧಿಕಾರ ಹಿಡಿದ ನಂತರ ಸಮತಾವಾದಿ ಪಕ್ಷವನ್ನು ನಿಷೇಧಿಸಲಾಯಿತು. 1933 ರಲ್ಲಿ ಅಲ್ಲಿನ ಸಂಸತ್ತು – ರೀಚ್ಸ್ಟಾಗ್ ನಲ್ಲಿ ಬೆಂಕಿ ಅಪಘಾತವಾಯಿತು (Reichstag fire). ಜೆಟ್ಕಿನ್ ಅವರನ್ನು ಗಡೀಪಾರು ಮಾಡಲಾಯಿತು. ಸೋವಿಯತ್ ಯೂನಿಯನ್ ಗೆ ತೆರಳಿದ ಅವರು 1933 ರಲ್ಲಿ ಮಾಸ್ಕೋದಲ್ಲಿ ತಮ್ಮ 76 ನೇ ವರ್ಷದಲ್ಲಿ ಕೊನೆಯುಸಿರೆಳೆದರು. ಅವರನ್ನು "grandmother of communism", ( ಸಮತಾವಾದದ ಅಜ್ಜಿ) ಎಂದು ಗೌರವಿಸಲಾಗಿದೆ. 

     ಕ್ಲಾರಾ ಜೆಟ್ಕಿನ್ ಅವರಂತೆ ನಾವೂ ಸಹ ಮಹಿಳೆಯರ ಆರ್ಥಿಕ- ರಾಜಕೀಯ ಸಮಾನತೆಗಾಗಿ ಹೋರಾಡಿದಾಗ ಮಾತ್ರ ಅವರಿಗೆ ನಿಜಗೌರವ ಸಲ್ಲಿಸಿದಂತಾಗುತ್ತದೆ.



                                                                                             - ಕೋಮಲ ಬಿ 

ವ್ಯಕ್ತಿ ಪರಿಚಯ: "ಆನಂದಿಬಾಯಿ ಜೋಷಿ"

    
Anandibaai Joshi (ಎಡ - ಭಾರತ) Kei Okami (ಮಧ್ಯೆ - ಜಪಾನ್) and Tabat Islambooly (ಬಲ - ಸಿರಿಯಾ)
ಎಲ್ಲರೂ ತಮ್ಮ ತಮ್ಮ ದೇಶದಿಂದ ಪಾಶ್ಚಾತ್ಯ ವೈದ್ಯಶಾಸ್ತ್ರದಲ್ಲಿ ಪ್ರಥಮ ಮಹಿಳಾ ಪದವಿದರರು 

   ಇಂದು ಅನೇಕ ಸೌಲಭ್ಯ, ಕಾಯ್ದೆ, ತಿದ್ದುಪಡಿಗಳಿಂದ ಮಹಿಳೆ ಸಮಾಜದ ಅನೇಕ ರಂಗಗಳಲ್ಲಿ ತನ್ನ ಪ್ರಭಾವ ಬೀರುತ್ತಿದ್ದಾಳೆ. ಆದರೆ ಸ್ವಾತಂತ್ರ್ಯಕ್ಕೆ ಮುಂಚೆ, ಈ ಯಾವುದೇ ಸೌಲಭ್ಯಗಳಿಲ್ಲದೆಯೂ, ಪುರುಷಪ್ರಧಾನ ಸಮಾಜಕ್ಕೆ ವಿರುದ್ಧವಾಗಿ ನಿಂತು ಒಬ್ಬ ಮಹಿಳೆ ಸಾಧನೆಯನ್ನು ಮಾಡಿ, ಭಾರತದಲ್ಲಿಯೇ ಪ್ರಥಮ ಮಹಿಳಾ ವ್ಶೆದ್ಯೆ ಎಂಬ ಕೀರ್ತಿಗೆ ಪಾತ್ರರಾದರೆಂಬುದು ಸಾಮಾನ್ಯ ವಿಷಯವಲ್ಲ.

 ಆನಂದಿಬಾಯಿ ಜೋಷಿ 1865ರ ಮಾರ್ಚ್ 21 ರಂದು ಮುಂಬೈನ ಥಾಣೆ ಎಂಬಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಯಮುನಾ ಜೋಷಿ. ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಇವರಿಗಿಂತ 20 ವರ್ಷ ದೊಡ್ಡವರಾದ, ವಿಧುರರಾದ, ಅಂಚೆ ಗುಮಾಸ್ತರಾಗಿದ್ದ ಗೋಪಾಲ್ ಜೋಷಿಯವರೊಂದಿಗೆ ವಿವಾಹವಾಯಿತು. ಮಹಾರಾಷ್ರದ ಸಂಪ್ರದಾಯದಂತೆ ಯಮುನಾ ಜೋಷಿ ಆನಂದಿಬಾಯಿ ಜೋಷಿಯಾದರು. ಗೋಪಾಲ್ ಜೋಷಿಯವರು ಪ್ರಗತಿಪರ ವಿಚಾರಗಳನ್ನು ಹೊಂದಿದ್ದರಿಂದ ತಮ್ಮ ಪತ್ನಿಯ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಿದರು.

 ಆನಂದಿಯವರು 14 ವರ್ಷದವರಾಗಿದ್ದಾಗ ಅವರಿಗೆ ಮಗುವೊಂದು ಜನಿಸಿತು. ಆದರೆ ಉತ್ತಮ ವೈದ್ಯಕೀಯ ಸೌಲಭ್ಯದ ಕೊರತೆಯಿಂದಾಗಿ ಆ ಮಗು ತೀರಿಕೊಂಡಿತು. ಈ ಘಟನೆ ಆನಂದಿಬಾಯಿಯವರಿಗೆ ಆಘಾತವನ್ನುಂಟುಮಾಡಿತು. ಜೊತೆಗೆ ವೈದ್ಯಕೀಯ ಶಿಕ್ಷಣ ಮಾಡುವಂತೆ ಪ್ರೇರೇಪಿಸಿತು. ಇಷ್ಟರಲ್ಲಿ ಆಕೆಯ ಪತಿಗೆ ಕಲ್ಕತ್ತಾಗೆ ವರ್ಗವಾಯಿತು. ಅವರ ಬಯಕೆಯನ್ನು ಈಡೇರಿಸಲು ಪತಿ ಪತ್ರಿಕೆಗಳಲ್ಲಿ, ಆಕೆಯ ಶಿಕ್ಷಣಕ್ಕೆ ಸಹಾಯ ಮಾಡುವಂತೆ ಕೋರಿದರು. ಇದನ್ನು ಓದಿದ  ಸಹೃದಯಿ ಥಿಯೋಡೇಶಿಯಾ ಕಾರ್ಪೆಂಟರ್‍ರವರು ನ್ಯೂಜರ್ಸಿಯ ತಮ್ಮ ಮನೆಯಲ್ಲಿ ಆನಂದಿಯವರಿಗೆ ಆಶ್ರಯ ನೀಡಲು ಮುಂದಾದರು.

 ಆದರೆ ಆನಂದಿಬಾಯಿಯವರ ಇಚ್ಛೆಗೆ ಪುರುಷಪ್ರಧಾನ ಭಾರತೀಯ ಸಮಾಜ ಪ್ರೋತ್ಸಾಹಿಸಲಿಲ್ಲ. ಬದಲಿಗೆ ಅವರೊಂದಿಗೆ ಕಟುವಾಗಿ ವರ್ತಿಸಿತು, ಕಲ್ಲುತೂರಾಟವೂ ಆಯಿತು. ಆ ಸಮಯದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಅವರನ್ನು ಉಳಿಸಿದರು. ಇದಾವುದಕ್ಕೂ ಆನಂದಿಯವರು ಹಿಂಜರಿಯಲಿಲ್ಲ. ಕಲ್ಕತ್ತಾದ ಸೆರಾಂಪುರ್ ಕಾಲೇಜಿನಲ್ಲಿ ಅವರಿಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು, ಅದನ್ನೇ ವೇದಿಕೆಯಾಗಿ ಮಾಡಿಕೊಂಡು ತಾನೊಬ್ಬ ವ್ಶೆದ್ಯೆಯಾಗಿ ಜನಸೇವೆ ಮಾಡಬೇಕೆಂಬ ತಮ್ಮ ನಿರ್ಧಾರವನ್ನು ತಿಳಿಸಿದರು. ಅವರ ನಿರ್ಧಾರಕ್ಕೆ ಬೆಂಬಲವಾಗಿ ಅಂದಿನ ವೈಸ್‍ರಾಯ್ 200 ರೂ ಸಂಗ್ರಹಿಸಿ ಆನಂದಿಯವರಿಗೆ ನೀಡಿದರು. ಅದರ ಜೊತೆ ಆನಂದಿಯವರು ತಮ್ಮ ಬಳೆಗಳನ್ನು ಮಾರಿ 1833ರಲ್ಲಿ ನ್ಯೂಜರ್ಸಿಗೆ ತೆರಳಿದರು.

  ಅವರು ತಮ್ಮ 19 ನೇ ವಯಸ್ಸಿನಲ್ಲಿ ವೈದ್ಯಕೀಯ ಪದವಿ ಪ್ರವೇಶಿಸಿದರು. ಆದರೆ ಕೆಲವೇ ದಿನಗಳಲ್ಲಿ ಕ್ಷಯ ರೋಗಕ್ಕೆ ತುತ್ತಾದರು. ಅವರ ಸ್ನೇಹಿತರು ಅವರಿಗೆ ಬಹಳಷ್ಟು ಸಹಾಯ ಮಾಡಿ ಅವರ ಆರೋಗ್ಯ ಸುಧಾರಿಸುವಂತೆ ಮಾಡಿದರು. ನಂತರ ಅವರನ್ನು ನೋಡಿಕೊಳ್ಳುತ್ತಿದ್ದ ವ್ಶೆದ್ಯ ದಂಪತಿಗಳಾದ ಡಾ|| ಟಾರ್ಬನ್ ಮತ್ತು ಅವರ ಪತ್ನಿಯ ಮಾತಿನ ಮೇರೆಗೆ ಪೆನ್‍ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿಗೆ ಸೇರಿ 1886ರ ಮಾರ್ಚ್ 11ರಂದು ವೈದ್ಯಕೀಯ ಪದವಿ ಪಡೆದುಕೊಂಡರು.

 ಅವರ ಆರೋಗ್ಯದ ದೃಷ್ಟಿಯಿಂದ ಅವರ ಪತಿ ಮತ್ತು ಸ್ನೇಹಿತರು ಅವರನ್ನು ಅಲ್ಲಿಯೇ ಉಳಿಯುವಂತೆ ಹೇಳಿದರು. ಆದರೆ ಆನಂದಿಬಾಯಿಯವರು ತಾವು ವೈದ್ಯಕೀಯ ಪದವಿ ಪಡೆದದ್ದು ವೈದ್ಯಕೀಯ ಸೌಲಭ್ಯ ವಂಚಿತರಾದ ತನ್ನ ದೇಶದವರ ಸೇವೆಗೆ, ಆದ್ದರಿಂದ ತಾವು ಭಾರತಕ್ಕೆ ಹಿಂತಿರುಗುತ್ತೇವೆಂದು ಹೇಳಿದರು. ಹಿಂತಿರುಗಿದ ಮೇಲೆ ಕೊಲ್ಲಾಪುರದ ರಾಜಸಂಸ್ಥಾನದ ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಯಲ್ಲಿ 7 ತಿಂಗಳುಗಳ ಕಾಲ ಸೇವೆ ಸಲ್ಲಿಸಿದರು. ಆದರೆ ಅವರನ್ನು ಹಿಂದೆ ಕಾಡಿದ್ದ ಕ್ಷಯ ರೋಗ ಪುನಃ ಅವರನ್ನು ಕಾಡಿತು. ಅವರು 1886ರ ಅಕ್ಟೋಬರ್ 9ರಂದು ನಿಧನರಾದರು. ಆದರೆ ಅವರ ಓದುವ ಛಲ, ಸೇವಾ ಮನೋಭಾವ, ದೇಶಪ್ರೇಮ ಹಲವರಿಗೆ ಸ್ಫ್ಫೂರ್ತಿಯಾಯಿತು. ಇಂದೂ ಸಹ ಅವರ ಹೆಸರು ಹೆಣ್ಣುಮಕ್ಕಳಿಗೆ ಸಾಧನೆ ಮಾಡುವ ದಾರಿಯನ್ನು ತೋರಿಸುವ ದೀಪವಾಗಿದೆ. 

                                                                      -   ಡಾ।। ಸುಧಾ.ಜಿ

ಪ್ರವಾಸ ಕಥನ: "ವಯನಾಡ್ ಪ್ರವಾಸ"


ಚಾಮರಾಜನಗರದಲ್ಲಿ ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ, 2013ರ ಮಾರ್ಚ್ ತಿಂಗಳಲ್ಲಿ, ಒಂದು ದಿನದ ಪ್ರವಾಸ ಹೋಗಬೇಕೆಂದು ಎಲ್ಲಾ ವಿದ್ಯಾರ್ಥಿನಿಯರು ಆಸೆಪಟ್ಟರು. ಎಲ್ಲರೂ ಚರ್ಚೆ ಮಾಡಿ ಕೇರಳದ ವಯನಾಡಿಗೆ ಹೋಗಲು ನಿರ್ಧರಿಸಿ, ಅಧ್ಯಾಪಕರಿಗೆ ತಿಳಿಸಿದೆವು. ಅವರು ಸರಿ ಎಂದು ತಲಾ 500 ರೂಪಾಯಿಗಳನ್ನು ನಿಗದಿಪಡಿಸಿದರು. ಎಲ್ಲರ ಮನೆಯಲ್ಲೂ ಒಪ್ಪಿಸಿ ಹಣವನ್ನು ತಂದು ಅಧ್ಯಾಪಕರ ಕೈಗೊಪ್ಪಿಸಿದರು. ಅಧ್ಯಾಪಕರು ಬಸ್ಸಿಗೆ ಹಣ ಕಟ್ಟಿಯೇ ಬಿಟ್ಟರು. ಎಲ್ಲಾ ವಿದ್ಯಾರ್ಥಿನಿಯರಿಗೂ ಖುಷಿಯೊ ಖುಷಿ. 
ವಯನಾಡ್ ಕೇರಳದ ಒಂದು ಜಿಲ್ಲೆ. 1980ರಲ್ಲಿ ಕೇರಳದ 12ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿತು. ಪಶ್ಚಿಮ ಘಟ್ಟದ ಒಂದು ಭಾಗ ಈ ಜಿಲ್ಲೆಯಲ್ಲಿದೆ. ಅತ್ಯಂತ ಹಿಂದಿನ ದಾಖಲೆಗಳಲ್ಲಿ ಈ ಪ್ರಾಂತ್ಯವನ್ನು ಮಾಯಕ್ಷೇತ್ರ ಎಂದು ಕರೆಯಲಾಗಿತ್ತು. ಕ್ರಮೇಣ ಅದು ಮಾಯಾನಾಡ್ ಆಗಿ, ಕೊನೆಗೆ ವಯನಾಡ್ ಆಯಿತು. ಜನಪದದ ಪ್ರಕಾರ ವಯಲ್ (ಭತ್ತದ ಗದ್ದೆ) ಮತ್ತು ನಾಡ್ (ನೆಲ) ಎರಡೂ ಸೇರಿ “ಭತ್ತದ ಗದ್ದೆಗಳ ನಾಡಾಗಿದೆ. ಈ ಪ್ರಾಂತ್ಯದಲ್ಲಿ ಬಹಳಷ್ಟು ಬುಡಕಟ್ಟು ಜನಾಂಗದವರಿದ್ದಾರೆ. ಇದು ಕೇರಳದ ಅತ್ಯಂತ ಕಡಿಮೆ ಜನಸಂಖ್ಯೆಯಿರುವ ಜಿಲ್ಲೆಯಾಗಿದೆ. ಮೂರು ತಾಲ್ಲೂಕುಗಳನ್ನು ಒಳಗೊಂಡ ಈ ಜಿಲ್ಲೆಯ ಜನಸಂಖ್ಯೆ 8,16,558 (2011 ಜನಗಣತಿ). ಗಂಡು ಹೆಣ್ಣಿನ ಪ್ರಮಾಣ 1035 ಹೆಣ್ಣು: 1000 ಗಂಡು. ಸಾಕ್ಷರತಾ ಪ್ರಮಾಣ – 89.32%. ಕಬಿನಿ, ಪನಮಾರಮ್, ಮಾನಂತವಾಡಿ, ಕಲಿಂದಿ ಮುಖ್ಯನದಿಗಳು. ಕೃಷಿ ಮುಖ್ಯವಾಗಿದೆ. ಕಾಫಿ, ಟೀ, ಕೋಕೋ, ಬಾಳೆಹಣ್ಣು ಮತ್ತು ವೆನಿಲ್ಲಾ ಇಲ್ಲಿನ ಪ್ರಮುಖ ಬೆಳೆಗಳು. ಜೊತೆಗೆ ಭತ್ತ ಬಹಳ ಮುಖ್ಯ ಬೆಳೆಯಾಗಿದೆ. ಪ್ರವಾಸೋದ್ಯಮದ ಮೂಲಕ ಜಿಲ್ಲೆಗೆ ಆದಾಯ ಬರುತ್ತದೆ. ಪಶ್ಚಿಮ ಘಟ್ಟಗಳ ಗಿರಿಸಾಲು, ಜೊತೆಗೆ ಹಲವಾರು ನದಿಗಳು ಮತ್ತು ವನ್ಯಜೀವಿಗಳು ಮುಖ್ಯ ಆಕರ್ಷಣೆಯಾಗಿವೆ. ವಯನಾಡ್‍ಗೆ ಹೋಗಲು ಬಂಡಿಪುರ ರಾಷ್ಟ್ರೀಯವನದ ಮೂಲಕ ಹೋಗಬೇಕು ಇಲ್ಲವೇ ಮೈಸೂರು, ಹುಣಸೂರು, ಗೋಣಿಕೊಪ್ಪಲು, ಕುಟ್ಟ, ಮಾನಂತವಾಡಿಯ ಮೂಲಕ ಅಲ್ಲಿಗೆ ಹೋಗಬಹುದು.
ಅಂದು ಶನಿವಾರ ಮುಂಜಾನೆ 5-30 ಕ್ಕೆ ಎಲ್ಲರಿಗೂ ಕಾಲೇಜು ಬಳಿ ಬರಲು ಹೇಳಿದ್ದರು. ಎಲ್ಲಾ ವಿದ್ಯಾರ್ಥಿನಿಯರು ಒಟ್ಟಿಗೆ ಸೇರಿ ಹೊರಡಲು 6 ಘಂಟೆ ಆಗಿಯೇ ಹೋಯಿತು. ನಾವೆಲ್ಲರೂ ಬಸ್ ಹತ್ತಿದೆವು. ನಮಗೆ ಇಷ್ಟವೆನಿಸಿದ ಸೀಟು ಹಿಡಿದು ಕುಳಿತೆವು. ಬಸ್ ಹೊರಟ ಸ್ವಲ್ಪ ಹೊತ್ತಿಗೆ ಶುರುವಾಯಿತು ಹಾಡು, ನೃತ್ಯ, ಆಟ ಇತ್ಯಾದಿಗಳು. 
9 ಘಂಟೆಗೆ ಎಲ್ಲರಿಗೂ ದಣಿವಾಗಿ ಹಸಿವಿನಿಂದ ಕುಸಿದೆವು. ನಂತರ ಅಧ್ಯಾಪಕರು ಬಸ್‍ಅನ್ನು ಒಂದು ಟೀ ಎಸ್ಟೇಟ್ ಬಳಿ ನಿಲ್ಲಿಸಲು ಹೇಳಿದರು. ಎಲ್ಲರ ಮುಖದಲ್ಲಿ ಸಂತಸ ಕಾಣಿಸಿತು. ಏಕೆಂದರೆ ಬಾಳೆ, ತೆಂಗು, ಅಡಿಕೆ ತೋಟವನ್ನೇ ನೋಡುತ್ತಿದ್ದ ನಮಗೆ ಟೀ ಎಸ್ಟೇಟ್ ನೋಡಿ ಖುಷಿಯಾಯಿತು. ನಂತರ ಅಲ್ಲಿ ಉಪಹಾರವನ್ನು ಮುಗಿಸಿ, ಮುಂದೆ ಹೋದೆವು.

Image result for edakkal caves   


ಮೊದಲನೆ ಸ್ಥಳ ಎಡಕಲ್ಲು ಗುಹೆ. ಎಡಕ್ಕಲ್ ಗುಹೆಗಳು ಸಹಜವಾಗಿ ನಿರ್ಮಾಣಗೊಂಡಿರುವ ಗುಹೆಗಳು. ಅಂಬುಕುಟ್ಟಿ ಮಾಲಾದ ಮೇಲೆ, ಸಮುದ್ರಮಟ್ಟದಿಂದ 1200 ಮೀಟರ್ ಮೇಲಿದೆ. ನಿಯೋಲಿಥಿಕ್ ಮಾನವನದ್ದು ಎನಲಾದ ಸುಮಾರು ಕ್ರಿ.ಪೂ 6000 ವರ್ಷದ ಚಿತ್ರಗಳಿವೆ. ಈ ಪ್ರಾಂತ್ಯದಲ್ಲಿ ಐತಿಹಾಸಿಕ ಪೂರ್ವ ನಾಗರೀಕತೆ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಶಿಲಾಯುಗದ ಈ ಕೆತ್ತನೆಗಳು ಬಹಳ ಅಪರೂಪವಾದದ್ದು ಮತ್ತು ದಕ್ಷಿಣ ಭಾರತದಲ್ಲಿರುವ ಏಕೈಕ ಉದಾಹರಣೆಯಾಗಿದೆ. ಮನುಷ್ಯರ, ಪ್ರಾಣಿಗಳ, ಮನುಷ್ಯರು ಉಪಯೋಗಿಸುತ್ತಿದ್ದ ಸಾಧನಗಳ ಮತ್ತು ಚಿಹ್ನೆಗಳ ಕೆತ್ತನೆಗಳಿವೆ. 1890ರಲ್ಲಿ ಈ ಗುಹೆಗಳನ್ನು ಅನ್ವೇಷಿಸಿದ್ದು ಬ್ರಿಟಿಷ್ ಪೋಲಿಸ್ ಅಧಿಕಾರಿಯಾದ ಫ್ರಾಯಿಡ್ ಫಾಸೆಟ್. ಅಲ್ಲಿರುವ ಕ್ರಿಪೂ 1000 ಇಸವಿಯ ಕೆತ್ತನೆಗಳಿಗೆ ಸಿಂಧು ನದಿ ನಾಗರೀಕತೆಯ ಸಂಬಂಧವಿರಬಹುದೆಂದು ಭಾವಿಸಲಾಗಿದೆ.
ಬಸ್ ನಿಲ್ಲಿಸಿದ ನಂತರ ಗುಹೆ ತಲುಪಲು ಸುಮಾರು ಒಂದು ಕಿಮೀ ದೂರ ನಡೆದೆವು. ಸಹಪಾಠಿಗಳ ಜೊತೆ ನಡೆದಾಗ ಯಾರಿಗೂ ಸಮಯದ ಅರಿವಾಗಲಿಲ್ಲ. ಹೋಗುವ ದಾರಿಯಲ್ಲಿ ಇಕ್ಕೆಲಗಳಲ್ಲಿ ಕಂಡ ಹಸಿರು ಕಣ್ಣುಗಳಿಗೆ ಆನಂದವನ್ನು ನೀಡಿತು. ಹಾಗೆ ಸಾಗುತ್ತಾ ಗುಹೆಯನ್ನು ಪ್ರವೇಶಿಸಿದೆವು. ನೋಡಲು ಭಯಂಕರ ಮತ್ತು ರೋಮಾಂಚಕವಾಗಿತ್ತು. ಸುತ್ತಲೂ ಬಂಡೆ, ಬಂಡೆಯ ಮೇಲೆ ಲಿಪಿಗಳು, ಮೇಲೆ ನೋಡಿದರೆ ಬಂಡೆ ನಮ್ಮ ಮೇಲೆಯೇ ಬೀಳುತ್ತದೇನೋ ಎಂಬಂತೆ ಭಾಸವಾಗುತ್ತಿತ್ತು. ಸುಮಾರು 1000 ಮೆಟ್ಟಿಲುಗಳಿವೆ. ಎಲ್ಲರಿಗೂ ಪೂರ್ತಿ ಹತ್ತಿದ ಮೇಲೆ, ಹತ್ತಿದ್ದಕ್ಕೂ ಸಾರ್ಥಕವೆನಿಸಿತು. ಮತ್ತೆ ಅಲ್ಲಿಂದ ಹಿಂತಿರುಗುತ್ತಾ ಅಂಗಡಿಸಾಲುಗಳನ್ನು ನೋಡಿದೆವು. ಕರಕುಶಲ ವಸ್ತುಗಳ ಅಂಗಡಿಗಳನ್ನು ನೋಡಲು ಸೊಗಸಾಗಿತ್ತು. ಮತ್ತೆ ಬಸ್ ಹತ್ತಿ ಕುಳಿತೆವು.
Image result for soochipara falls

 ಮುಂದೆ ಸೂಚಿಪುರ ಜಲಾಶಯಕ್ಕೆ ಹೋದೆವು. ಅದು ಕೂಡ ದೂರದ ಹಾದಿ. ಸೂಚಿಪರ ಜಲಪಾತ (ಸೆಂಟಿನೆಲ್ ರಾಕ್ ಜಲಪಾತ) ಅದು ವೆಲ್ಲರಿಮಾಲದಲ್ಲಿರುವ ಮೂರು ಹಂತಗಳ ಜಲಪಾತ. ಸುತ್ತಲೂ ಡೆಸಿಡ್ಯುಯಸ್, ಎವರ್ಗ್ರೀನ್ ಮತ್ತು ಮಾಂಟೇನ್ ಕಾಡುಗಳಿವೆ. ಸೂಚಿ ಎಂದರೆ ಸೂಜಿ, ಪರ ಎಂದರೆ ಕಲ್ಲು ಎಂದರ್ಥ. 656 ಅಡಿಗಳ (200 ಮೀಟರ್) ಎತ್ತರವಿರುವ ಈ ಜಲಪಾತದ ನೀರು ಚೂಲಿಕಾ ನದಿಯನ್ನು ಸೇರುತ್ತದೆ. 
ಬಸ್‍ನಿಂದ ಇಳಿದು ಜಲಾಶಯ ತಲುಪಲು ಒಂದು ಕಿಮೀ ನಡೆದೆವು. ಅಲ್ಲಿಯೂ ಕೂಡ ಮಳಿಗೆಗಳ ಸಾಲು ನೋಡುತ್ತಾ ಸಾಗಿದೆವು. ಹಾಗೆ ಹೋಗುತ್ತಾ ದೂರದಲ್ಲಿಯೇ ಜುಳುಜುಳುನಾದ ಕೇಳಿ ಎಲ್ಲರೂ ಓಡಲು ಶುರುಮಾಡಿದೆವು. ಅಧ್ಯಾಪಕರ ಮಾತು ಕೇಳದೆ ತಪ್ಪು ದಾರಿಯಲ್ಲಿ ನೀರಿಗಿಳಿದು ತುಂಬಾ ವಿದ್ಯಾರ್ಥಿನಿಯರು ಜಾರಿಜಾರಿ ಬಿದ್ದರು. ಮತ್ತೆ ಎತ್ತರದ ಜಲಾಶಯದಿಂದ ಬೀಳುತ್ತಿದ್ದ ನೀರಿಗೆ ಎಲ್ಲರೂ ಮೈಯೊಡ್ಡಿದರು. ನಮ್ಮೊಂದಿಗೆ ಅಧ್ಯಾಪಕರನ್ನೂ ನೀರಿಗಿಳಿಸಿ ಕುಣಿದಾಡಿದೆವು. ಹೀಗೆ ಸಮಯ ಉರುಳಿ ಊಟದ ಸಮಯ ಮೀರಿತು.
ಎಲ್ಲರನ್ನೂ ಅಧ್ಯಾಪಕರು ಕರೆದರು. ಮನಸ್ಸಿಲ್ಲದ ಮನಸ್ಸಿಂದ ನಾವೆಲ್ಲರೂ ಅಲ್ಲಿಂದ ಎದ್ದು ಬಂದೆವು. ಅಲ್ಲಿಂದ ಹೊರಟು ಅಲ್ಲಿದ್ದ ಮಳಿಗೆಗಳಲ್ಲಿ ಬೇಕಾದ್ದನ್ನು ಕೊಂಡು, ಬಸ್‍ನ ಬಳಿ ತಲುಪಿದೆವು. ಅಲ್ಲಿ ಊಟ ಮುಗಿಸಿದೆವು. ಮುಂದೆ ನಾವು ತಲುಪಿದ್ದು ಪೂಕಾಟ್ ಸರೋವರ.
Image result for pookot lake
ಪೂಕಾಟ್ ಸರೋವರ ಶುದ್ಧ ನೀರಿನ ಸರೋವರವಾಗಿದೆ. ಸಮುದ್ರಮಟ್ಟದಿಂದ 770 ಮೀಟರ್ ಎತ್ತರದಲ್ಲಿದೆ. ಪನಮಾರಮ್ ಉಪನದಿ, ಪೂಕಾಟ್ ಸರೋವರದಿಂದ ಆರಂಭವಾಗಿ ಕಬಿನಿ ನದಿಯನ್ನು ಸೇರುತ್ತದೆ. 8.5 ಎಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಸರೋವರದ ಗರಿಷ್ಟ ಆಳ 6.5 ಮೀಟರ್. ಈ ಸರೋವರದ ವಿಶೇಷವೆಂದರೆ ಇದು ಭಾರತದ ನಕ್ಷೆಯ ಆಕಾರವನ್ನು ಹೊಂದಿದೆ. ಎಲ್ಲಾ ಕಾಲದಲ್ಲೂ ನೀರು ಹರಿಯುತ್ತದೆ. ಸುತ್ತಲೂ ಕಾಡು, ವನ್ಯಮೃಗ, ಪಕ್ಷಿಗಳಿವೆ. ಸರೋವರದಲ್ಲಿ ನೀಲಿ ಕಮಲಗಳಿವೆ. ಬೋಟಿಂಗ್, ಮಕ್ಕಳ ವನ, ಮತ್ಸ್ಯಾಗಾರವಿದೆ.
ಆ ಸ್ಥಳವು ಕಣ್ಣಿಗೆ, ಮನಸ್ಸಿಗೆ ಮುದ ನೀಡಿತು. ಅಲ್ಲಿ ಶಾಂತ ವಾತಾವರಣವಿತ್ತು. ದೋಣಿ ವಿಹಾರ ಸೊಗಸಾಗಿತ್ತು. ಸಮಯ 4-30 ಆಯಿತು. ಮಳೆರಾಯನ ಆರ್ಭಟ ಶುರುವಾಗಿತ್ತು. ಅಲ್ಲಿಂದ ಎಲ್ಲರೂ ಹೊರಟೆವು. ದಿನಪೂರ್ತಿ ನೋಡಿದ ಸ್ಥಳಗಳ ಮೆಲುಕು ಹಾಕುತ್ತಾ ಮತ್ತೆ ಆಟ, ಹಾಡು, ನೃತ್ಯ ಮಾಡುತ್ತಾ ರಾತ್ರಿ 10 ಘಂಟೆಗೆ ಕಾಲೇಜು ತಲುಪಿದೆವು. ಎಲ್ಲರೂ ಅವರವರ ಪೋಷಕರೊಂದಿಗೆ ತಮ್ಮ ಮನೆಗಳನ್ನು ಸೇರಿಕೊಂಡರು.
ವಯನಾಡ್‍ಗೆ ಹೋಗಲು ಪ್ರಶಸ್ತ ಸಮಯವೆಂದರೆ ಅಕ್ಟೋಬರ್‍ನಿಂದ ಫೆಬ್ರವರಿಯವರೆಗೆ. ಮೇಲೆ ಹೇಳಿದ ಸ್ಥಳಗಳೊಂದಿಗೆ ನೋಡಲಿರುವ ಇತರ ಸ್ಥಳಗಳೆಂದರೆ ಚೆಂಬ್ರಾ ಶೃಂಗ, ಮೀನ್ಮುಟ್ಟಿ ಜಲಪಾತ, ಬನಸುರ ಆಣೆಕಟ್ಟು, ನೀಲಿಮಾಲ ವ್ಯೂ ಪಾಯಿಂಟ್, ಫ್ಯಾಂಟಮ್ ರಾಕ್, ಮುತುಂಗಾದ ಬಿದಿರು ವನ, ಸುಲ್ತಾನ್ ಬತೇರಿ, ವಯನಾಡ್ ವನ್ಯಜೀವಿವನ, ಲಕ್ಕಿಡಿ ವ್ಯೂ ಪಾಯಿಂಟ್, ಕುರುವ ದ್ವೀಪ, ಪಕ್ಷಿಪಾತಾಳಂ ಪಕ್ಷಿಧಾಮ, ಉರವದಲ್ಲಿರುವ ಬಿದಿರು ಫ್ಯಾಕ್ಟರಿ.
                                       
                                                               
                                                                            -- ನಿಶಾ ಕೆ ಎನ್