ಅಂತರರಾಷ್ಟ್ರೀಯ ಮಹಿಳಾ ದಿನದ ಆರಂಭಕರ್ತೆ – ಕ್ಲಾರಾ ಜೆಟ್ಕಿನ್
ಮಹಿಳಾ ದಿನವನ್ನು ಮಾರ್ಚ್ ತಿಂಗಳಲ್ಲಿ ಆಚರಿಸುತ್ತೇವೆ. ಆದರೆ ಇದರ ಹುಟ್ಟು ಹೇಗಾಯಿತೆಂದು ನಮ್ಮಲ್ಲನೇಕರಿಗೆ ತಿಳಿದೇ ಇಲ್ಲ. ಮಹಿಳಾ ದಿನ ಬಂತೆಂದರೆ ಎಲ್ಲಾ ಕಡೆಯಲ್ಲೂ ಸಂಭ್ರಮಾಚರಣೆ - ಕಾರ್ಖಾನೆಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಆಫೀಸುಗಳಲ್ಲಿ ಬಗೆಬಗೆಯ ಆಟಗಳನ್ನು ಆಡಿಸಿ ಮಹಿಳೆಯರ ಬಗ್ಗೆ ಒಂದೆರಡು ಮಾತುಗಳನ್ನಾಡಿ ಸಿಹಿ ಹಂಚಿ ಆ ದಿನ ಖುಷಿಪಟ್ಟು ರಾಜ್ಯೋತ್ಸವ, ಸ್ವಾತಂತ್ರ್ಯ ದಿನೋತ್ಸವದಂತೆ ಮರೆತುಬಿಡುತ್ತೇವೆ. ಆದರೆ ಮಹಿಳೆಯರ ಮೇಲಿನ ಶೋಷಣೆ, ಕಿರುಕುಳ, ದಬ್ಬಾಳಿಕೆ ಮುಂತಾದವುಗಳ ವಿರುದ್ಧ ನಿರಂತರವಾಗಿ ಹೋರಾಟಮಾಡಬೇಕೆಂಬುದೇ ಗೌಣವಾಗುತ್ತದೆ.
ಮತ್ತೊಂದು ಮಹಿಳಾ ದಿನ ಕಳೆದುಹೋಯಿತು. ಅಂತರರಾಷ್ಟ್ರೀಯ ಮಹಿಳಾ ದಿನ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣಕರ್ತರಾದ ಕ್ಲಾರಾ ಜೆಟ್ಕಿನ್ ಅವರನ್ನು ನೆನಪು ಮಾಡಿಕೊಳ್ಳುವ ಸಮಯವಾಗಿದೆ. ಬಹುಶಃ ಇವರ ಹೆಸರು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ!
ಜರ್ಮನಿಯ ಮಾರ್ಕ್ಸ್ವಾದಿ ಸಿದ್ಧಾಂತಿಯಾದ ಕ್ಲಾರಾ ಜನಿಸಿದ್ದು ಜುಲೈ 5 ರ 1857 ರಲ್ಲಿ. ತಂದೆ ಗಾಟ್‌ಫ್ರಿಡ್ ಐಸೆನರ್, ತಾಯಿ ಜೋಸೆಫಿನ್ ವಿಟೇಲ್. ಮೂವರು ಮಕ್ಕಳಲ್ಲಿ ಕ್ಲಾರಾ ಅವರೇ ದೊಡ್ಡವರಾಗಿದ್ದರು. ಇವರ ತಂದೆ ಶಾಲಾ ಶಿಕ್ಷಕರಾಗಿದ್ದರು. ತಾಯಿ ವಿದ್ಯಾವಂತೆಯಾಗಿದ್ದರು. ಕ್ಲಾರಾ ಶಿಕ್ಷಕಿಯಾಗಿರುವಾಗಿರುವಾಗಲೇ 1874 ರವರೆಗೆ ಮಹಿಳಾ ಚಳುವಳಿಗಳಲ್ಲಿ ಮತ್ತು ಕಾರ್ಮಿಕ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು.
ಮಹಿಳಾ ಹೋರಾಟಗಾರ್ತಿಯಾಗಿ, ಸಮಾಜವಾದಿ ಚಿಂತಕಿಯಾಗಿ, “ಮಹಿಳೆಯರ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಮೂಲ ಕಾರಣ, ಮಹಿಳಾ ವಿಮೋಚನೆ ಕಾರ್ಮಿಕ ವರ್ಗದ ವಿಮೋಚನೆಯೊಂದಿಗೆ ಬೆಸೆದುಕೊಂಡಿದೆ” ಎಂದರಿತು ಅವರು 1878 ರಲ್ಲಿ "ಸಾಮಾಜಿಕ ಕಾರ್ಮಿಕ ಪಕ್ಷವನ್ನು " ಸೇರಿಕೊಂಡರು.
1878 ರಲ್ಲಿ ಆಡಳಿತಗಾರ ಬಿಸ್ಮಾರ್ಕ್, ಜರ್ಮನಿಯಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ನಿಷೇಧಗೊಳಿಸಿದ್ದರಿಂದ, ಅಂತಹ ಚಟುವಟಿಕೆಗಳನ್ನು ಸಂಘಟಿಸಿದರೆಂದು ಕ್ಲಾರಾ ಅವರನ್ನು ಪ್ಯಾರಿಸ್‍ಗೆ ಗಡೀಪಾರು ಮಾಡಲಾಯಿತು. ಈ ಸಮಯದಲ್ಲಿಯೇ ಅವರು ರಷ್ಯಾದ ಆಸಿಫ್ ಜೆಟ್ಕಿನ್ ಅವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಇಬ್ಬರು ಮಕ್ಕಳು ಕಾನ್ಸ್ಟೆಂಟಿನ್ ಮತ್ತು ಮ್ಯಾಕ್ಸಿಮ್. ಆಸಿಫ್ ಜೆಟ್ಕಿನ್ 1889ರಲ್ಲಿ ಮರಣ ಹೊಂದಿದರು.
ಪ್ಯಾರಿಸ್‍ನಲ್ಲಿ ಇದ್ದಂಥ ಸಮಯದಲ್ಲಿ ಅಂತರರಾಷ್ಟ್ರೀಯ ಸಮಾಜವಾದಿ ಗುಂಪನ್ನು ಕಟ್ಟಲು ಬಹುಮುಖ್ಯ ಪಾತ್ರ ವಹಿಸಿದರು. ಈ ಸಮಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಹೆಣ್ಣು ಗಂಡು ಎಂಬ ಭೇದಭಾವದಿಂದಲೇ ಅವರಿಗೆ ಕೆಲಸಗಳು ಸಿಗುವಂತಹ ಪರಿಸ್ಥಿತಿ ಇದ್ದವು. ಹತ್ತಿ ಗಿರಣಿ, ಗೃಹ ಕೆಲಸದ ಸೇವೆಗಳು ಮುಂತಾದ ಕಡೆಗಳಲ್ಲಿ ದುಡಿಯುವ ಮಹಿಳೆಯರ ಸ್ಥಿತಿ ಶೋಚನೀಯವಾಗಿತ್ತು. ಮಹಿಳೆಯರಿಗೆ ಕೊಡುತ್ತಿದ್ದ ಕೂಲಿಯಂತೂ ಅತೀ ಕಡಿಮೆಯಾಗಿತ್ತು.
ಆಗ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು, ರಾಜಕೀಯವಾಗಿ ಸಂಘಟಿಸಲು, ಸಮಾನ ಅವಕಾಶ ಮತ್ತು ಮುಖ್ಯವಾಗಿ ಮಹಿಳಾ ಮತದಾನದ ಸಲುವಾಗಿ ಹೋರಾಟದ ಕಾವು ತೀವ್ರ ಸ್ವರೂಪ ಪಡೆಯುವಲ್ಲಿ ಜೆಟ್ಕಿನ್ ಪ್ರಮುಖ ಪಾತ್ರ ವಹಿಸಿದ್ದರು. 1907 ರಲ್ಲಿ ಸಾಮಾಜಿಕ ಪ್ರಜಾಸತ್ತಾತ್ಮಕ ಪಕ್ಷದಲ್ಲಿ ಸ್ಥಾಪನೆಯಾದ ಮಹಿಳಾ ಕಛೇರಿಗೆ ನಾಯಕಿಯಾದರು.
ಈ ನಡುವೆ 1908 ರ ಫೆಬ್ರವರಿ ಕೊನೆಯ ಭಾನುವಾರ ಅಮೆರಿಕದಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದವು. 1909 ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಯಲ್ಲಿ ದುಡಿಯುವ 20 ರಿಂದ 30 ಸಾವಿರದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಚಳುವಳಿ ನಡೆಸಿದರು. ಅವರನ್ನು ಬಂಧಿಸಲಾಯಿತು. ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್ ಅವರಿಗೆ ಜಾಮೀನು ನೀಡಿ ಬಂಧಿತ ಮಹಿಳೆಯರನ್ನು ಬಿಡಿಸಿಕೊಂಡಿತು.
ಅಮೇರಿಕಾದಲ್ಲಿ ನಡೆದ ಪ್ರತಿಭಟನೆಯಿಂದ ಸ್ಪೂರ್ತಿಗೊಂಡ ಕ್ಲಾರಾ 1910 ರ ಆಗಸ್ಟ್‌ನಲ್ಲಿ ಕೋಪನ್‍ಹೇಗ್ ನಲ್ಲಿ ಚರಿತ್ರಾರ್ಹ 2 ನೇ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ಮಹಿಳಾ ದಿನವಾಗಿ ಒಂದು ದಿನವನ್ನು ನಿಗದಿಪಡಿಸಲು ಪ್ರಸ್ತಾಪಿಸಿದರು. 17 ದೇಶದ 100 ಪ್ರತಿನಿಧಿಗಳು, ಸರ್ವಾನುಮತದ ಸಮ್ಮತಿಯನ್ನು ನೀಡಿದರು. ಆ ದಿನದಂದು, ಮಹಿಳೆಯರು ಸಾರ್ವತ್ರಿಕ ಮತದಾನದ ಹಕ್ಕು, ಹೆರಿಗೆಯ ಭತ್ಯೆ ಮತ್ತು ಇತರೆ ಬೇಡಿಕೆಗಳಿಗಾಗಿ ಒತ್ತಾಯಿಸಲು, ಹೋರಾಟಕ್ಕೆ ಕಂಕಣಬದ್ಧರಾಗಲು ಸಿದ್ಧರಾಗುವ ದಿನವನ್ನಾಗಿ ಬಳಸಬೇಕು ಎಂದು ಕರೆಯಿತ್ತರು. ಅದನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದರು.
ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು. 1911 ರಲ್ಲಿ ಮತದಾನದ ಹಕ್ಕನ್ನು ಬೇಡಿಕೆಯಾಗಿಟ್ಟುಕೊಂಡು ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
1891 ರಿಂದ 1917 ರವರೆಗೆ ಮಹಿಳಾ ದಿನಪತ್ರಿಕೆ "equality " ಯಲ್ಲಿ ಸಂಪಾದಕಿಯಾಗಿ ಕೆಲಸ ಮಾಡಿದರು. ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಕ್ಲಾರಾ, ಕಾರ್ಲ್ ಲೆಬ್ನೆಕ್ಟ್, ರೋಸಾ ಲಕ್ಸೆಂಬರ್ಗ್ ಮತ್ತು ಇತರ ಪ್ರಮುಖ ರಾಜಕೀಯ ವ್ಯಕ್ತಿಗಳ ಜೊತೆಗೂಡಿ ಪಕ್ಷದ ಸಿದ್ಧಾಂತಗಳನ್ನು ತಿರಸ್ಕರಿಸಿ ಅಂತರರಾಷ್ಟ್ರೀಯ ಸಾಮಾಜಿಕ ಮಹಿಳೆಯರ ಯುದ್ಧ ವಿರೋಧಿ ಸಮ್ಮೇಳನವನ್ನು 1915 ರಲ್ಲಿ ಬರ್ಲಿನ್ ನಲ್ಲಿ ಸಂಘಟಿಸಿದರು. ಯುದ್ದದ ಸಮಯದಲ್ಲಿ ಕ್ಲಾರಾ ಅವರ ಯುದ್ಧ ವಿರೋಧಿ ಅಭಿಪ್ರಾಯಗಳಿಂದಾಗಿ ಹಲವಾರು ಬಾರಿ ಅವರನ್ನು ಬಂಧಿಸಲಾಯಿತು ಮತ್ತು 1916 ರಲ್ಲಿ ಅವರನ್ನು "ರಕ್ಷಣಾ ಬಂಧನ"ದಲ್ಲಿ ಇರಿಸಲಾಯಿತು. ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರನ್ನು ಬಂಧಮುಕ್ತಗೊಳಿಸಲಾಯಿತು.
1920 ರಿಂದ 1933 ರ ವರೆಗೆ ರೀಚ್ ಸ್ಟಾಗ್ ನ ಪ್ರತಿನಿಧಿಯಾಗಿದ್ದರು. 1920 ರಲ್ಲಿ "ಮಹಿಳೆಯರ ಪ್ರಶ್ನೆ" (The women's question) ಎಂಬ ವಿಷಯದ ಮೇಲೆ ಲೆನಿನ್ ಅವರೊಂದಿಗೆ ಚರ್ಚೆ ಮಾಡಿದರು. ಕ್ಲಾರಾ ಅವರ ಒಂದು ಮಾತು ಹೀಗಿದೆ: "ಮಹಿಳೆಯರ ಹಕ್ಕುಗಳು ಕಾರ್ಮಿಕವರ್ಗದ ವಿಮುಕ್ತಿಯೊಂದಿಗೆ ಅವಿಭಾಜ್ಯವಾಗಿ ಬೆಸೆದುಕೊಂಡಿದೆ. ವಿಮೋಚನಾ ಹೋರಾಟದಲ್ಲಿ ದುಡಿಯುವ ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ಕಾರ್ಮಿಕವರ್ಗ ಸಹ ತನ್ನ ಸ್ವಾತಂತ್ರವನ್ನು ಗಳಿಸಲು ಸಾಧ್ಯವಿಲ್ಲ. ಮಹಿಳೆ ತನ್ನ ಸ್ವಾತಂತ್ರ್ಯ ಉಳಿಸಿಕೊಳ್ಳಲು ನಿರಂತರ ಹೋರಾಟ, ಒಗ್ಗೂಡುವಿಕೆ, ಭಾಗವಹಿಸುವಿಕೆ ಅತಿಮುಖ್ಯವಾಗಿದೆ.”
ವಿಶ್ವ ಮಹಿಳಾ ದಿನಾಚರಣೆಯ ಪರಿಕಲ್ಪನೆಯನ್ನು ರೂಪಿಸಿ ಅದರ ಅನುಷ್ಠಾನಕ್ಕೆ ಒತ್ತಾಯಿಸಿ ಮಹಿಳಾ ದಿನಾಚರಣೆಯ ಹುಟ್ಟಿಗೆ ಕಾರಣರಾದ ಕ್ಲಾರಾ ಜೆಟ್ಕಿನ್ ಅವರನ್ನು ಆಡಾಲ್ಪ್ ಹಿಟ್ಲರ್ ಮತ್ತು ನಾಜಿ ಪಕ್ಷದವರು ಅಧಿಕಾರ ಹಿಡಿದ ನಂತರ ಸಮತಾವಾದಿ ಪಕ್ಷವನ್ನು ನಿಷೇಧಿಸಲಾಯಿತು. 1933 ರಲ್ಲಿ ಅಲ್ಲಿನ ಸಂಸತ್ತು – ರೀಚ್ಸ್ಟಾಗ್ ನಲ್ಲಿ ಬೆಂಕಿ ಅಪಘಾತವಾಯಿತು (Reichstag fire). ಜೆಟ್ಕಿನ್ ಅವರನ್ನು ಗಡೀಪಾರು ಮಾಡಲಾಯಿತು. ಸೋವಿಯತ್ ಯೂನಿಯನ್ ಗೆ ತೆರಳಿದ ಅವರು 1933 ರಲ್ಲಿ ಮಾಸ್ಕೋದಲ್ಲಿ ತಮ್ಮ 76 ನೇ ವರ್ಷದಲ್ಲಿ ಕೊನೆಯುಸಿರೆಳೆದರು. ಅವರನ್ನು "grandmother of communism", ( ಸಮತಾವಾದದ ಅಜ್ಜಿ) ಎಂದು ಗೌರವಿಸಲಾಗಿದೆ.
ಕ್ಲಾರಾ ಜೆಟ್ಕಿನ್ ಅವರಂತೆ ನಾವೂ ಸಹ ಮಹಿಳೆಯರ ಆರ್ಥಿಕ- ರಾಜಕೀಯ ಸಮಾನತೆಗಾಗಿ ಹೋರಾಡಿದಾಗ ಮಾತ್ರ ಅವರಿಗೆ ನಿಜಗೌರವ ಸಲ್ಲಿಸಿದಂತಾಗುತ್ತದೆ.
- ಕೋಮಲ ಬಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ