ಭಗತ್ ಸಿಂಗ್ ರವರಿಂದ ದೇಶಬಾಂಧವರಿಗೊಂದು ಸಂದೇಶ
1931ರ ಮಾರ್ಚ್ ಮೂರರಂದು ಅವರ ತಂದೆ ತಾಯಿ, ತಮ್ಮ ಕುಲ್ತಾರ್ ಸಿಂಗ್ ಸೇರಿದಂತೆ ಕುಟುಂಬದವರೆಲ್ಲಾ ಅವರನ್ನು ಭೇಟಿಯಾಗಲು ಬಂದಿದ್ದರು. ಭಗತ್‍ಸಿಂಗ್ ತಮ್ಮ ಎಂದಿನ ಶೈಲಿಯಲ್ಲಿಯೇ ಕ್ರಾಂತಿಕಾರಿ ಸ್ಫೂರ್ತಿ ಹಾಗೂ ಲವಲವಿಕೆಯೊಂದಿಗೆ ಮಾತನಾಡಿದರು. ಮುಂಬರಲಿದ್ದ ಮರಣ ಅವರ ಮಾನಸಿಕ ಸಮತೋಲನವನ್ನು ಯಾವುದೇ ರೀತಿಯಲ್ಲಿ ಹರಣಗೊಳಿಸಿರಲಿಲ್ಲ. ಕುಟುಂಬದವರಿಗೆ ಕಣ್ಣೀರಿಡದಂತೆ, ತಮ್ಮನ್ನು ನಗುನಗುತ್ತಾ ಕಳಿಸಿಕೊಡುವಂತೆ ಕೇಳಿಕೊಂಡರು. ಆದರೆ ಅವರ ತಮ್ಮ ಕುಲ್ತಾರ್‍ಸಿಂಗ್‍ರಿಗೆ ದುಃಖವನ್ನು ತಡೆದುಕೊಳ್ಳಲಾಗದೆ ಕಣ್ತುಂಬಿ ಬಂತು. ಇದನ್ನು ಕಂಡು ಭಗತ್ ಸಹ ಭಾವ ಪರವಶರಾದರು. ಅವರೆಲ್ಲರೂ ಜೈಲಿನಿಂದ ಹಿಂತಿರುಗಿದ ನಂತರ ಕುಲ್ತಾರರಿಗೆ ಭಗತ್ ಒಂದು ಪತ್ರ ಬರೆದರು. ಆ ಪತ್ರ ಅಣ್ಣ ತಮ್ಮನ ನಡುವಿನ ಬಾಂಧವ್ಯದ ಸಂಕೇತ ಮಾತ್ರವಾಗಿರದೆ, ಒಬ್ಬ ಕ್ರಾಂತಿಕಾರಿ ಸಾವನ್ನು ಹೇಗೆ ಸ್ವೀಕರಿಸಬೇಕೆಂಬುದಕ್ಕೆ ಉಜ್ವಲ ಸಾಕ್ಷಿಯ ದಾಖಲೆಯಾಗಿದೆ. ಆ ಪತ್ರದ ಮೂಲಕ ಅವರು ತಮ್ಮ ದೇಶಬಾಂಧವರಿಗೂ ಸಂದೇಶವನ್ನು ನೀಡಿದ್ದರು. ಅವರು ಆ ಪತ್ರದಲ್ಲಿ ಬರೆದದ್ದು, “ಇಂದು ನಿನ್ನ ಕಣ್ಣೀರನ್ನು ಕಂಡು ನನಗೆ ಬಹಳ ನೋವಾಯಿತು. ನಿನ್ನ ದನಿಯಲ್ಲಿ ದುಃಖವಿತ್ತು. ನಿನ್ನ ಕಣ್ಣೀರನ್ನು ನೋಡಲು ಸಾಧ್ಯವಿಲ್ಲ. ತಮ್ಮಾ, ಹತಾಶನಾಗಬೇಡ. ನನ್ನ ಮರಣಾನಂತರ ದೇಶದ ಮತ್ತು ಜನತೆಯ ಸೇವೆಯನ್ನು ಕೈಬಿಡಬೇಡ. ... ಇನ್ನೇನು ಬರೆಯಲಿ? ಇನ್ನೇನು ತಾನೆ ನಾನು ಹೇಳಬಲ್ಲೆ, ಕೇಳು. . .
ದಮನದ ಹೊಸ ವಿಧಾನಗಳನ್ನು ಹುಡುಕುತ್ತಿದ್ದಾರೆ ಅವರು.
ದೂರವೆಷ್ಟು ಸಾಗಿಯಾರೆಂದು ನೋಡಲು ಕಾತರರಾಗಿರುವೆವು ನಾವು.
ಜಗದ ಬಗ್ಗೆ ನಾವೇಕೆ ಕೋಪಿಸಿಕೊಳ್ಳೋಣ?
ಆಗಸವ ನಾವೇಕೆ ಶಪಿಸೋಣ?
ನಮ್ಮದೊಂದು ವಿಭಿನ್ನ ಪ್ರಪಂಚ,
ಅದಕಾಗಿ ಹೋರಾಡೋಣ.
ಓ ಪಕ್ಷದ ಬಂಧುವೇ - ನನಗಿನ್ನಿರುವುದು ಕೆಲವು ಘಳಿಗೆಗಳು ಮಾತ್ರ,
ಬೆಳಗಿನ ದೀಪದಂತೆ ನಾ, ಇನ್ನೇನು ಆರಿಹೋಗಲಿದ್ದೇನೆ;
ಸಂತಸದಿಂದಿರಿ ದೇಶವಾಸಿಗಳೇ,
ಇನ್ನು ನಮ್ಮ ಬಗ್ಗೆ- ಹೊರಟೆವು ನಾವಿನ್ನು,
ವಿದಾಯ!
ಧೀರರಾಗಿರಿ !
ದಯಾಭಿಕ್ಷೆಯ ತಿರಸ್ಕಾರ - ತಂದೆಗೊಂದು ಭಾವುಕ ಪತ್ರ
ಭಗತ್‍ರಿಗೆ ಎಲ್ಲರೂ ದಯಾಭಿಕ್ಷೆಯನ್ನು ಕೇಳಿ ಎಂದು ಹೇಳಿದ್ದರು. ಆದರೆ ಭಗತ್‍ರು ಅದಕ್ಕೆ ಒಪ್ಪುವ ಮಾತೇ ಇರಲಿಲ್ಲ. ಬ್ರಿಟಿಷರಲ್ಲಿ ದಯಾಭಿಕ್ಷೆಯೇ? ಭಗತ್ ಕನಸಿನಲ್ಲಿಯೂ ಊಹಿಸಲಾಗದ ವಿಚಾರವದು. ಆದರೆ ಜೈಲಿನಲ್ಲಿದ್ದ ಭಗತ್‍ಸಿಂಗ್, ಸುಖದೇವ್‍ರಿಗೆ ತಮ್ಮ ಬಂಧುಗಳು ತಮಗಾಗಿ ದಯಾಭಿಕ್ಷೆಯ ಮನವಿ ಮಾಡಿಕೊಂಡಿದ್ದರೆಂದು ತಿಳಿದು ಆಘಾತವಾಯಿತು.
ಭಗತ್ ತಮ್ಮ ತಂದೆಗೆ ತೀಕ್ಷ್ಣವಾದ, ಸ್ವಲ್ಪ ಕಠೋರವೇ ಎನಿಸಬಹುದಾದ ಮಾತುಗಳಲ್ಲಿ ಪತ್ರವೊಂದನ್ನು ಬರೆದರು. “ಅಪ್ಪಾ, ನನ್ನನ್ನು ರಕ್ಷಿಸಲು ನೀವು ಟ್ರಿಬ್ಯುನಲ್‍ನ ಸದಸ್ಯರಿಗೆ ಮನವಿಯನ್ನು ಸಲ್ಲಿಸಿದ್ದೀರಿ ಎಂಬುದನ್ನು ಕೇಳಿ ನನಗೆ ತೀವ್ರವಾದ ಆಘಾತವಾಗಿದೆ. ಇದು ನನ್ನ ಮನಸ್ಸಿನ ಇಡೀ ಸಮತೋಲನವನ್ನೇ ಕಲಕಿದೆ. ಇಂತಹ ಸನ್ನಿವೇಶದಲ್ಲಿ ಅಂತಹ ಮನವಿಯನ್ನು ಸಲ್ಲಿಸುವುದು ಸರಿಯೆಂದು ನೀವು ಹೇಗೆ ಭಾವಿಸಿದಿರಿ? ತಂದೆಯಾಗಿ ನಿಮಗೆ ಎಷ್ಟೇ ಸೂಕ್ಷ್ಮ ಭಾವನೆ ಮತ್ತು ಭಾವುಕತೆಗಳಿದ್ದರೂ ಸಹ ನನ್ನನ್ನು ಕೇಳದೆಯೇ ನನ್ನ ಪರವಾಗಿ ಇಂತಹ ಕಾರ್ಯ ಕೈಗೊಳ್ಳಲು ನಿಮಗೆ ಯಾವುದೇ ಹಕ್ಕಿದೆ ಎಂದು ನಾನು ಭಾವಿಸುವುದಿಲ್ಲ. ರಾಜಕೀಯ ರಂಗದಲ್ಲಿ ನನ್ನ ವಿಚಾರಗಳು ನಿಮ್ಮ ವಿಚಾರಗಳಿಗಿಂತ ಭಿನ್ನವಾಗಿತ್ತೆಂಬುದು ನಿಮಗೆ ತಿಳಿದಿದೆ. . . ನೀವು ಬಹುಶಃ ಭಾವಿಸುವಂತೆ ನನ್ನ ಜೀವವೇನು—ಕಡೆಯ ಪಕ್ಷ ನನ್ನ ಪಾಲಿಗೆ-ಅಮೂಲ್ಯವಲ್ಲ. ನನ್ನ ಆದರ್ಶಗಳನ್ನು ಮಾರಾಟ ಮಾಡಿ ಅದನ್ನು ಗಳಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ಮೇಲೆ ಹೂಡಿರುವ ದಾವೆಯಷ್ಟೇ ನನ್ನ ಇತರ ಸಂಗಾತಿಗಳ ದಾವೆಗಳೂ ಗಂಭೀರವಾಗಿವೆ. ನಾವು ಒಂದು ಸಮಾನ ನೀತಿಯನ್ನು ಅನುಸರಿಸುತ್ತಿದ್ದೇವೆ ಮತ್ತು ಜೊತೆಜೊತೆಗೆ ಎಲ್ಲವನ್ನೂ ಎದುರಿಸಿದ್ದೇವೆ. ಆದ್ದರಿಂದ ವೈಯಕ್ತಿಕವಾಗಿ ಎಷ್ಟೇ ಕಷ್ಟವನ್ನು ಅನುಭವಿಸಿದರೂ ಸಹ ಕೊನೆಯವರೆಗೂ ನಾವು ಒಂದಾಗಿಯೇ ನಿಲ್ಲುತ್ತೇವೆ. ನಿಜಕ್ಕೂ ನಾನು ವಿಸ್ಮಯಾಘಾತಕ್ಕೆ ಒಳಗಾಗಿದ್ದೇನೆ. ನಿಮ್ಮ ಈ ನಡೆಯನ್ನು ಖಂಡಿಸುವಾಗ ಮರ್ಯಾದೆಯ ಸಾಮಾನ್ಯ ನಿಯಮಗಳನ್ನು ಗಮನಿಸದೇ ಇರಬಹುದು, ನನ್ನ ಭಾಷೆ ಸ್ವಲ್ಪ ಕಠಿಣವಾಗಿರಬಹುದು ಎಂಬ ಹೆದರಿಕೆ ನನಗಿದೆ. ಮುಚ್ಚುಮರೆಯಿಲ್ಲದೆ ಹೇಳಬೇಕೆಂದರೆ, ನನಗೆ ಬೆನ್ನಲ್ಲಿ ಚೂರಿ ಹಾಕಿದಂತೆನಿಸುತ್ತಿದೆ.”
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ