Pages

ಕವನ - ಅಂತರರಾಷ್ಟ್ರೀಯ ಮಹಿಳಾ ದಿನ


ಬಂದಿದೆ ಮಾರ್ಚ್ ಎಂಟು ಮತ್ತೆ
ನೆನಪಿಸಲು ನಮ್ಮೆಲ್ಲರಿಗೆ
ನಮ್ಮ ಹೋರಾಟದಿತಿಹಾಸವ
ನಂನಮ್ಮ ಹೊಣೆಗಾರಿಕೆಯ

ಕಳೆದವೆರಡು ಶತಮಾನಗಳು
ಆರಂಭವಾಗಿ ಚಳುವಳಿ
ಬೀದಿಗಿಳಿದರು ಸ್ತ್ರೀಯರಂದು
ತಮ್ಮ ಹಕ್ಕು ಸ್ವಾತಂತ್ರ್ಯಗಳಿಗಾಗಿ


ಹಲವು ಖಂಡ, ದೇಶಗಳಲಿ
ನಡೆದವು ಹೋರಾಟಗಳು
ಮತದ ಹಕ್ಕು, ದುಡಿವ ಹಕ್ಕು
ನಾನು ನಾನಾಗಿ ಬಾಳೊ ಹಕ್ಕು


ಎಲ್ಲ ಮಹಿಳೆಯರ ಕೂಡಿಸಲು 
ವಿಶ್ವ ಒಕ್ಕೂಟವನ್ನು ಸ್ಥಾಪಿಸಲು
ಹೊತ್ತರು ಹೊಣೆಗಾರಿಕೆಯನು
ರೋಸಾ, ಕ್ಲಾರಾ ಎಂಬಿಬ್ಬರು


100 ಜನರ ಸಭೆ ಸೇರಿತು
ಗೊತ್ತುವಳಿಯ ಅಂಗೀಕರಿಸಿತು
ಮಾರ್ಚ್ 8 – ಮಹಿಳಾ ದಿನವಾಯಿತು
1911ರಿಂದ ಆಚರಣೆ ಶುರುವಾಯಿತು

ಘೋಷಣೆಗಳು ಬೇಕಾದಷ್ಟು
ಹೋರಾಟಗಳು ಬಹಳಷ್ಟು
ಮತಚಲಾಯಿಸುವ ಹಕ್ಕು ಬೇಕು
8 ಘಂಟೆ ಮಾತ್ರ ದುಡೀಬೇಕು

ದೊರೆತವು ಹಲವು, ಪಡೆದೆವು ಕೆಲವು
ಸ್ವಾತಂತ್ರ್ಯ , ಸಮಾನತೆ ಸಿಕ್ಕವು
ಆದರಿನ್ನೂ ಹೋರಾಟ ಬಾಕಿಯಿದೆ
ಸಾಧಿಸಬೇಕಾದದ್ದು ಅಪಾರವಿದೆ

ಎಲ್ಲರಿಗೂ ಶಿಕ್ಷಣ, ಉದ್ಯೋಗ ಬೇಕು
ಕೌಟುಂಬಿಕ ದೇಹ ಸ್ವಾತಂತ್ರ್ಯ ಬೇಕು
ಅತ್ಯಾಚಾರ ದೌರ್ಜನ್ಯಗಳ ವಿರುದ್ಧದ ಹಕ್ಕು
ಆತ್ಮಗೌರವಕ್ಕೆ ಚ್ಯುತಿ ಬಾರದ ಹಕ್ಕು

ಒಂಟಿ ಹೋರಾಟಕದು ಸಾಧ್ಯವಿಲ್ಲ
ಒಟ್ಟಿಗೆ ಸೇರದಿರೆ ಬದುಕಿಲ್ಲ
ಕೈಗೆ ಕೈ ಕೂಡಿಸಿದಿರೆ ಉಳಿಗಾಲವಿಲ್ಲ
ಜೊತೆಯಾಗದಿದ್ದರೆ ದಡ ಸೇರೋಲ್ಲ

ಬನ್ನಿರೆಲ್ಲಿ ಗೆಳತಿಯರೇ 
ಕಟ್ಟೋಣ ಹೋರಾಟ
ನಾವೆಲ್ಲರೂ ನೊಂದವರು 
ದನಿಗೂಡಿಸಿ ಹೆಜ್ಜೆ ಹಾಕೋಣ

ಸಂಕಲೆಗಳ ಮುರಿಯುವ ಹೋರಾಟ
ವಿಮುಕ್ತಿ ಪಯಣದ ಕಾದಾಟ
ಒಂಟಿಯಾಗಿ ಸಾಧಿಸಲು ಸಾಧ್ಯವಿಲ್ಲ
ಒಟ್ಟುಗೂಡಿಸೆಲ್ಲರ ಮುಂದೆ ಸಾಗಲೇಬೇಕಲ್ಲ
ಸುಧಾ ಜಿ  

ವ್ಯಕ್ತಿ ಪರಿಚಯ - ನನ್ನ ಪ್ರೀತಿಯ ಗುರು ವಿಜಯ ದಬ್ಬೆ



              
' ಗುರಿ ' ತೋರಿಸಿ 'ಗುರಿ ' ಮುಟ್ಟಲು ಮಾರ್ಗದರ್ಶನ ಮಾಡಿದ ನನ್ನ ಪ್ರೀತಿಯ ಗುರು ವಿಜಯ ದಬ್ಬೆ ನನಗೆ  ಮಾತ್ರವಲ್ಲ, ಅನೇಕರಿಗೆ ಗುರಿ ತೋರಿದವರು. ಅವರು ಅಧ್ಯಾಪಕಿ, ಸಾಹಿತಿ, ಅಸಮಾನತೆಯ ವಿರುದ್ಧ ಹೋರಾಡುವ 'ಸಮತಾವಾದಿ', ವಿಮರ್ಶಕಿ, ಸಂಘಟನಾಕಾರ್ತಿ - ಹೀಗೆ ಅವರನ್ನು  ಅನೇಕ ಬಗೆಯಲ್ಲಿ  ಗುರುತಿಸಬಹುದು. ಆದರೆ ಅವೆಲ್ಲಕ್ಕೂ  ಮಿಗಿಲಾಗಿ ಅವರೊಬ್ಬ ಅತ್ಯಂತ ಸಹೃದಯ ಮನಸ್ಸಿನ ಸ್ನೇಹಜೀವಿ. 
ಇದೆಲ್ಲಾ ವಿವರಣೆ ಕೊಡುವಾಗ ಬಿ.ಟಿ ಲಲಿತಾನಾಯಕ್ ರವರು ವಿಜಯ ಬಗ್ಗೆ ಹೇಳಿರುವ ಮಾತುಗಳು ನೆನಪಾಗುತ್ತದೆ. "ಡಾ. ವಿಜಯಾ ದಬ್ಬೆಯವರ ವ್ಯಕ್ತಿತ್ವಕ್ಕೆ ಸಾಟಿಯಾಗಬಲ್ಲ ವ್ಯಕ್ತಿಯನ್ನು ನಾನಿನ್ನೂ ಹುಡುಕುತ್ತಲೇ ಇದ್ದೇನೆ. ವಿಜಯಾ ದಬ್ಬೆ ಎಂಬ ಹೆಸರೇ ಮಹಿಳೆಯರಲ್ಲಿ ಆತ್ಮಾಭಿಮಾನ, ಧೈರ್ಯ ತುಂಬುವಂಥದ್ದು. ಪ್ರಜ್ಞಾವಂತರಿಗೆ ರೋಮಾಂಚನವನ್ನು ಉಂಟು ಮಾಡುವ ಶಕ್ತಿಯನ್ನು  ಪಡೆದಿರುವಂತದ್ದು." (ವಿಜಯಾನ್ವೇಷಣೆ)
ವಿಜಯಾರವರ ಜೀವನದ ಕೆಲ ಸಮಯದಲ್ಲಿ ನನಗೆ  ಅವರ ಒಡನಾಟ ದೊರೆತದ್ದು  ನನ್ನ ಸೌಭಾಗ್ಯ.  1976 ರಲ್ಲಿ  ಎಂ.ಎ. ಪದವಿಗೆ ಕನ್ನಡ ಅಧ್ಯಯನ ಸಂಸ್ಥೆಯ ಮೆಟ್ಟಿಲನ್ನೇರುತ್ತಿದ್ದಾಗ ಆ ಮೊದಲ ದಿನವೇ ನನಗೆ ವಿಜಯಾರವರ ದರ್ಶನವಾಯಿತು. ಅವರು ಮೆಟ್ಟಿಲೇರುತ್ತಿದ್ದರು. ಬಹಳ ತೆಳುವಾಗಿ ಹೆಚ್ಚು ಎತ್ತರವಿಲ್ಲದ ಅವರನ್ನು ನೋಡಿ ಅವರೂ ವಿದ್ಯಾರ್ಥಿ ಎಂದೇ ಭಾವಿಸಿದೆ. ನೋಡಿ ನಕ್ಕೆ, ಅವರೂ ನಕ್ಕು ಮುಂದೆ ಹೋದರು. ಅದೇ ದಿನ ಮಧ್ಯಾಹ್ನ ನಮ್ಮ ತರಗತಿಗೆ ಬಂದು ಪಾಠ ಆರಂಭಿಸಿದರು. ಅವರ ಬೋಧನಾ ವೈಖರಿಗೆ ಅಂದೇ ಅಲ್ಲೇ ನಾನು ಅವರ ಅಭಿಮಾನಿಯಾದೆ.  ಇಷ್ಟು ಚಿಕ್ಕವರು ಅವರನ್ನು ನಾನು ವಿದ್ಯಾರ್ಥಿ ಎಂದೇ ಭಾವಿಸಿದ್ದೆ. ಅವರು ನಮ್ಮ ಅಧ್ಯಾಪಕರು, ಸದ್ಯ ಏನೇನೋ ಮಾತನಾಡಲಿಲ್ಲ ಎಂದು ನೆಮ್ಮದಿಯ ಉಸಿರು ಬಿಟ್ಟೆ. ಅಂದಿನಿಂದಲೇ ಅವರ ತರಗತಿ ಎಂದರೆ ನನಗೆ ಅಚ್ಚುಮೆಚ್ಚು. ಹೇಗಾದರೂ ಅವರ ಸ್ನೇಹ ಗಳಿಸಬೇಕೆನ್ನಿಸಿತು. ಆದರೆ ಅವರನ್ನು ಅವರ ಕೊಠಡಿಯಲ್ಲಿ ಭೇಟಿಯಾಗುವ ಅವಕಾಶ ದೊರೆತದ್ದು ಎರಡು ತಿಂಗಳ ನಂತರ. ಅಂತು ಇಂತೂ ಅವರ ಸ್ನೇಹ ಗಳಿಸಲು ಸಫಲಳಾದೆ. ಅಂದಿನಿಂದ ಕೊನೆಯವರೆಗೂ ಅವರ ಒಡನಾಟವನ್ನು ಬಿಡಲಿಲ್ಲ.
  1978 - 79ರಲ್ಲಿ ವಿಜಯರವರು ಒಂದು  ಅಧ್ಯಯನದ ಗುಂಪನ್ನು ಆರಂಭಿಸಿದರು. ಅದರಲ್ಲಿ  ವಿಜಯಾರವರ ಕೆಲವು ಗೆಳತಿಯರು ರತಿರಾವ್, ಸುಸನ್ ಮುಂತಾದವರು ಹಾಗೂ ಅವರ ಶಿಷ್ಯೆಯರ ಗುಂಪೇ ಹೆಚ್ಚಾಗಿತ್ತು. ನಾನು, ಇಂದುಬಾಯಿ, ಕುಮುದ, ಶೈಲಜ, ಭವಾನಿ, ಚಂದ್ರಮತಿ ಹೀಗೆ... ಆ ಗುಂಪಿನಲ್ಲಿ ವಾರಕ್ಕೊಮ್ಮೆ ಗಂಗೋತ್ರಿಯ ಗಾಂಧಿಭವನದಲ್ಲಿ ಸೇರಿ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ  ಚರ್ಚಿಸುತ್ತಿದ್ದೆವು.
ಅವರ ಬರಹಗಳನ್ನು ಓದಿ ಚರ್ಚಿಸುವುದು ದೆಹಲಿಯಿಂದ ಮಧುಕೀಶ್ವರ್ ರವರ ಸಂಪಾದಕತ್ವದಲ್ಲಿ ಹೊತ್ತು ಬರುತ್ತಿದ್ದ "ಮಾನುಷಿ" ಮಾಸಪತ್ರಿಕೆಯನ್ನು  ಓದಿ ವಿಮರ್ಶಿಸುತ್ತಿದ್ದೆವು. ಎಲ್ಲಾ ಅಸಮಾನತೆಯ ವಿರುದ್ಧ ಹೋರಾಡಲು ಒಂದು ಸಂಘಟನೆ ಅಗತ್ಯವೆಂದು "ಸಮತಾವೇದಿಕೆ"ಯನ್ನು ಆರಂಭಿಸಿದರು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಬೇಕಾದರೆ ಅವರೇ ಸಧೃಢರಾಗಬೇಕು, ಅದಕ್ಕೆ  ವಿದ್ಯಾಭ್ಯಾಸ ಬಹಳ ಅಗತ್ಯವೆಂದು ಕೆಳವರ್ಗದ ಮನೆಗಳ ಹೆಂಗಸರಿಗೆ ವಾರಕ್ಕೊಮ್ಮೆ ಅಕ್ಷರಾಭ್ಯಾಸ ಮಾಡಿಸಲು ಆರಂಭಿಸಿದೆವು. ಆ ಮೂಲಕ ಅವರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡಿದೆವು. ಸಮತಾವೇದಿಕೆಯಿಂದ ಹಲವು ವಿಚಾರಸಂಕಿರಣಗಳನ್ನು, ಮಹಿಳೆಗೆ ಕಾನೂನಿನ ಅರಿವು ಮೂಡಿಸುವ ವಿಷಯಗಳನ್ನು ಒಳಗೊಂಡಂತೆ ಹತ್ತಾರು ಸಂಗತಿಗಳನ್ನು ಕುರಿತು ವಿಚಾರಸಂಕಿರಣ, ಕಮ್ಮಟ ಇತ್ಯಾದಿಗಳನ್ನು  ಮಾಡಿದೆವು.
ಬನುಮಯ್ಯ ಕಾಲೇಜಿನಲ್ಲಿ ಸಮತಾವೇದಿಕೆಯಿಂದ ಮೊದಲ ವಿಚಾರಸಂಕಿರಣ ನಡೆಸಿದೆವು. ಗೃಹಿಣಿಯ ಕೆಲಸಕ್ಕೆ ಇಂದಿಗೂ ಬೆಲೆಯಿಲ್ಲ.  ಅದನ್ನು  ಖಂಡಿಸಿ "ಬೆಲೆ ದೊರೆಯದ ಉದ್ಯೋಗ"ಎಂಬ ಲೇಖನವನ್ನು  ನಾನು ಮಂಡಿಸಿದೆ. ' ಮಹಿಳೆ ಮತ್ತು  ಕಾನೂನು' ಇತ್ಯಾದಿ ವಿಷಯಗಳನ್ನು ಕುರಿತ ಪ್ರಬಂಧಗಳು ನಮ್ಮಅಂದಿನ ವಿಚಾರ ಸಂಕಿರಣದಲ್ಲಿತ್ತು. ಅಲ್ಲದೆ ಮಹಿಳೆಯರಿಗೆ ಅರಿವು ಮೂಡಿಸಲು ಸಣ್ಣ ಸಣ್ಣ ನಾಟಕಗಳ ಪ್ರದರ್ಶನಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಿದೆವು. ಇವೆಲ್ಲಾ ವಿಜಯಾರವರ ನೇತೃತ್ವದಲ್ಲಿ ನಡೆಯುತ್ತಿತ್ತು.
"ವಿವೋಚನೆಯೆಡೆಗೆ" ಪುಸ್ತಕವನ್ನು ಸಹ ಅಂದು ಬಿಡುಗಡೆ ಮಾಡಿದೆವು. ಈ ಎಲ್ಲಾ ಕಾರ್ಯಕ್ರಮಗಳಿಗೆ ಹಣವನ್ನು ಸದಸ್ಯರೇ ಹೆಚ್ಚಾಗಿ ಭರಿಸುತ್ತಿದ್ದೆವು. ಅಂತಾ ವೇದಿಕೆಯಿಂದ ಅನಿಯತಕಾಲಿಕ ' ಸಮತಾ' ವಾರ್ತಾ ಪತ್ರಿಕೆಯನ್ನು ತಂದೆವು. ಅನ್ಯಾಯಕ್ಕೊಳಗಾದ ಮಹಿಳೆಯರ ಕಥೆ,  ದೇಶದ ವಿವಿಧೆಡೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಅದಕ್ಕೆ ಅವರು ನಡೆಸಿದ ಹೋರಾಟದ ವಿವರಗಳನ್ನು ಬದಲಾವಣೆ ತರುವ ನಿಟ್ಟಿನಲ್ಲಿ ಅಗತ್ಯವಾಗುವವರ ಬಗ್ಗೆಯೂ ಲೇಖನಗಳಿರುತ್ತಿದ್ದೆವು. ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಪಠ್ಯಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿ ಅದರಲ್ಲಿ ಯಾವ ರೀತಿ ಮಹಿಳೆ ಕಡೆಗಣಿಸಲ್ಪಟ್ಟಿದ್ದಾಳೆ ಎಂಬ ಬಗ್ಗೆ  ಆತ್ಮವಿಶ್ವಾಸ ಬೆಳೆಸುವ ಪಠ್ಯ ಬೇಕಾಗಿದೆ ಎಂಬ ಶೀರ್ಷಿಕೆಯಲ್ಲಿ ನಾನು ಒಂದು ಲೇಖನವನ್ನು  "ಸಮತಾ "ವಾರ್ತಾ ಪತ್ರಿಕೆಯಲ್ಲಿ  ಪ್ರಕಟಿಸಿದ್ದೆ.
ವಿಜಯಾ ದಬ್ಬೆಯವರು ಸಮತಾಗಾಗಿ "ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ, ಜೀವ ಕೊಡುವ ಜೀವವಿದು ಕಡಿಮೆ ಯಾರಿಗೇ ಕಡಿಮೆ ಯಾರಿಗೇ" ಎಂಬ ಗೀತೆಯನ್ನು ರಚಿಸಿದರು. ಇದು ಈಗ ಎಲ್ಲೆಲ್ಲಿ  ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಾರೋ ಅಲ್ಲೆಲ್ಲಾ ಈ ಗೀತೆಯನ್ನು ಹಾಡುತ್ತಾರೆ.
ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ಬ.... 
ಬೆಳಕಿಗೊಮ್ಮೆ ಈಚೆ ಬಾ ಕಂಡಿತು ಜೀವನಾಧಾರ ಕಂಡಿತು ಜೀವನಾ
ನಾಚಬೇಡಿ ಹೆಣ್ತನಕ್ಕೆ ತಲೆ ಎತ್ತಿ ನಿಲ್ಲಿರಿ 
ನಾಚಬೇಕು ತುಳಿದವರು, ಮನು ಜಾತಿಗೆ ಸೇರಿದವರು
ನಾನು ನೀನು ಅವಳು ಇವಳು
ಹೆಣ್ಣಾಗಿ ನೊಂದವರು
ಕೈಗೆ ಕೈ ಜೋಡಿಸವ್ವ
ಹೊಸ ಜಗತ್ತು ನಮ್ಮದು
ಎಂಬ ಗೀತೆಯನ್ನು ರಚಿಸಿ ಮಹಿಳೆಯರನ್ನು ಹೊಸ ಜಗತ್ತಿನೆಡೆಗೆ ಕರೆದೊಯ್ಯುವ ಕೆಲಸವನ್ನು ಮಾಡಿದ್ದಾರೆ.
ಹಲವಾರು ಇತರ ಕಾರಣಕ್ಕಾಗಿ  1991ರಲ್ಲಿ "ಸಮತಾ ಅಧ್ಯಯನ ಕೇಂದ್ರ" ಸ್ಥಾಪನೆ  ಮಾಡಿದರು. ಅದರಲ್ಲೂ  ಮಾಡುತ್ತಿದ್ದುದು ಇವೇ ಕಾರ್ಯಕ್ರಮಗಳು. ಹಳೆಗನ್ನಡದ ಕವಿ ಸಾಹಿತಿಗಳಿಂದ ಆಧುನಿಕ ಯುಗದವರೆವಿಗೂ ಕವಿಗಳು ಮಹಿಳೆಯರನ್ನು  ಕಂಡ ರೀತಿಯ ಬಗ್ಗೆ ಚರ್ಚೆ ವಿಮರ್ಶೆಗಳು ನಡೆದವು. ಮಹಿಳೆಯರಿಗೆ ಕಾನೂನಿನ ಅರಿವನ್ನು ಮೂಡಿಸುವ ಶಿಕ್ಷಣದ ಅಗತ್ಯ .....
ಸಮತಾದ ಚಟುವಟಿಕೆಗಳು ಆರಂಭವಾದ ನಂತರ ಮಹಿಳೆಯರಿಗಾಗಿ ಒಂದು ತಾತ್ಕಾಲಿಕ ತಂಗುದಾಣದ ಅಗತ್ಯದ ಕನಸ್ಸನ್ನು ಕಂಡ ವಿಜಯಾ ಆ ಬಗ್ಗೆ  ಪ್ರಯತ್ನಿಸಿದುದರ ಫಲ ಇಂದು ಮೈಸೂರಿನಲ್ಲಿ "ಶಕ್ತಿಧಾಮ"ನೆಲೆ ನಿಂತಿದೆ ಎಂದರೆ ತಪ್ಪಾಗಲಾರದು. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಕೃಷಿಯನ್ನು ಮುಂದುವರಿಸೇ ಇದ್ದರು. ಅವರ ಆಕೃತಿ ಚಿಕ್ಕದಾದರೂ ಅವರ ಕತೃತ್ವ ಅಗಾಧವಾದದ್ದು. "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ಮಾತು ದಬ್ಬೆಯವರಿಗೆ ಅಕ್ಷರಶಃ ಅನ್ವಯಿಸುತ್ತದೆ. 
ಸಾಹಿತ್ಯ ಕ್ಷೇತ್ರದಲ್ಲೂ ಅವರನ್ನು ಹೆಚ್ಚಾಗಿ ಕಾಡಿದ್ದು ಮಹಿಳೆಯರೇ. ಕಾರಣಾಂತರದಿಂದ ಲೇಖಕಿಯರನ್ನು ಬದುಕಿರುವಾಗಲೇ ದಿವಂಗತ ಪಟ್ಟಿಗೆ ತಳಲ್ಪಟ್ಟ, ಕಡೆಗಣಿಸಲ್ಪಟ್ಟ ಲೇಖಕಿಯರನ್ನು ಗುರುತಿಸಿ ಅವರ ಬದುಕಿನ ಹೋರಾಟ ಹಾಗೂ ಸಾಹಿತ್ಯದ ಬಗ್ಗೆ ಹೊಸ ದೃಷ್ಟಿಕೋನದಿಂದ ಅಭ್ಯಸಿಸಿ ವಾಚಿಕೆಗಳ ರೂಪದಲ್ಲಿ ಹೊರ ತರುವ ಕೆಲಸವನ್ನು ಮಾಡಿದರು. ಆಧುನಿಕ ಕನ್ನಡ ಸಾಹಿತ್ಯದ ಮೊದಲ ಲೇಖಕಿ ಎಂದು ಗುರುತಿಸಲ್ಪಡುವ ತಿರುಮಲಾಂಬರವರು ಬದುಕಿರುವಾಗಲೇ ದಿವಂಗತರ ಪಟ್ಟಿಗೆ ಸೇರಿಸಲ್ಪಟ್ಟಿದ್ದವರು. ಅವರನ್ನು  ಹುಡುಕಿ ಹೊರ ತಂದು ' ಹಿತೈಷಿಣಿಯ ಹೆಜ್ಜೆ  ಗುರುತುಗಳು ' ಎಂಬ ವಾಚಿಕೆಯನ್ನು ತಂದರು. 
ಶಾಮಲಾದೇವಿರವರ ಸಾಹಿತ್ಯಗಳನ್ನು ಕುರಿತ ಶಾಮಲಾ ಸಂಚಯ, ಅನುಪಮಾ ನಿರಂಜನ ಮೊದಲಾದ ಲೇಖಕಿಯ ವಾಚಿಕೆಗಳನ್ನು ತಂದರು. ಅವರು ಆ ದಿಕ್ಕಿನಲ್ಲಿ  ನಡೆದುದಲ್ಲದೆ ನಮ್ಮನ್ನು ಅಂದರೆ ಅವರ ಶಿಷ್ಯ ವರ್ಗಕ್ಕೂ ಪ್ರೇರಣೆ ನೀಡಿದರು. ಅಂತಾ ವೇದಿಕೆಯ ವತಿಯಿಂದ ನಡೆದ "ಸ್ವಾತಂತ್ರ್ಯಪೂರ್ವ ಲೇಕಿಯರು" ವಿಚಾರ ಸಂಕಿರಣ ಫಲವಾಗಿ ನಾನು ನನ್ನ ಗುರು ವಿಜಯಾರವರ ಹಾದಿಯಲ್ಲೇ ನಡೆಯುವ ಅವಕಾಶ ದೊರೆತು ದಿವಂಗತರ ಪಟ್ಟಿಗೆ ಸೇರಿದ್ದ 'ಗಿರಿಬಾಲೆ' ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಸ್ವಾತಂತ್ರ್ಯಪೂರ್ವದ ಲೇಖಕಿ ಸರಸ್ವತಿ ರಾಜವಾಡೆಯವರನ್ನು 1987 ರಲ್ಲಿ ಹೊರಜಗತ್ತಿಗೆ ಪರಿಚಯಿಸಿ ಅವರ ಸಾಹಿತ್ಯ ಜೀವನ ಕುರಿತು ಅಧ್ಯಯನ ನಡೆಸಿ ವಿಜಯಾರವರ ಮಾರ್ಗದರ್ಶನದಲ್ಲೇ ಪಿ.ಎಚ್.ಡಿ ಪದವಿ ಪಡೆಯುವ ಭಾಗ್ಯ ನನ್ನದಾಯಿತು ಎಂದು ಹೇಳಲು ಬಹಳ ಹೆಮ್ಮೆ ಎನಿಸುತ್ತದೆ. ಡಾ. ಶಶಿಕಲಾರವರು ಕಲ್ಯಾಣಮ್ಮನವರನ್ನು ಅಧ್ಯಯನ ಮಾಡಿದರು.
ಇಷ್ಟೇ  ಅಲ್ಲದೆ ವಿಜಯಾರವರು ನಾರಿದಾರಿ ದಿಗಂತ, ಮಹಿಳೆ ಸಾಹಿತ್ಯ ಸಮಾಜ ಮುಂತಾದ ಪ್ರಬಂಧ ಸಂಕಲನಗಳನ್ನು ಉರಿಯ ಸಿಡಿಲಿನ ಉತ್ಕಲೆ ಎಂಬ ಪ್ರವಾಸ ಕಥನವನ್ನು, ನೀರು ಲೋಹದ ಚಿಂತೆ, ತಿರುಗಿ ನಿಂತ ಪ್ರಶ್ನೆಗಳು ಕವನ ಸಂಕಲನಗಳನ್ನು ಹೊರ ತಂದರು. ಹಲವಾರು ಆಯಾಮಗಳಲ್ಲಿ ಅವರು ಶ್ರಮಿಸುತ್ತಲೇಯಿದ್ದರು. ಭಾಷಣಗಳು, ಕಮ್ಮಟಗಳು ನಿರಂತರವಾಗಿ ನಡೆಯುತ್ತಲೇ ಇದ್ದವು.  
ಈ ರೀತಿ ಬಿಡುವಿಲ್ಲದ. ಬೇಸರಿಸದ ಉತ್ಸಾಹದ ಚಿಲುಮೆಯಂತೆ ಕಾರ್ಯ ನಿರ್ವಹಿಸುತ್ತಿದ್ದ ಅವರಿಗೆ 1999 ರ ಜನವರಿ 6 ರಂದು ದೊಡ್ಡ ಅಪಘಾತ ಸಂಭವಿಸಿತು. ಮೂರು ತಿಂಗಳ ಕಾಲ ತೀವ್ರ ಘಟಕದಲ್ಲಿ ಕೋಮಾದಲ್ಲಿಯೇ ಇದ್ದರು. ಅಲ್ಲಿದ್ದರೂ ಅವರ ಬಳಿ ಒಬ್ಬರನ್ನು ಇರಲು ಅನುಮತಿ ಕೊಟ್ಟಿದ್ದರು. ಅದು ವಿಜಯಾರವರಿಗೆ ಮಾತ್ರ ಕೊಟ್ಟ ಅವಕಾಶ. ಅವರ ಸಹೋದರಿಯರು, ಸಮತಾ ಅಧ್ಯಯನ ಕೇಂದ್ರದ ಶಿಷ್ಯೆಯರು, ಗೆಳತಿಯರು, ಸರದಿಯಂತೆ ಅವರ ಬಳಿ ಇರುತ್ತಿದ್ದೆವು. ಬೆಳಗಿನ 6 ರಿಂದ 8 ರವರೆಗೆ ನನ್ನ ಸರದಿ. ನಾನು ಅವರ ಕೈ ಕಾಲುಗಳಿಗೆ ಎಣ್ಣೆ ಉಜ್ಜುವುದು ಇತ್ಯಾದಿಗಳನ್ನು ಮಾಡುತ್ತಿದ್ದೆ. ಅದೇ ಸಂದರ್ಭದಲ್ಲಿ "ಗೋವಿಂದ ಪೈ ಪತ್ರವನ್ನು" ಎಂಬ ನನ್ನ ಪುಸ್ತಕ ಬಿಡುಗಡೆಯಾಯಿತು. ಅದನ್ನು ವಿಜಯಾರವರಿಗೆ ತೋರಿಸಿದೆ. ಆಗ ಅವರ ಮುಖದಲ್ಲಾದ ಬದಲಾವಣೆ  ನನ್ನನ್ನು  ದಂಗು ಬಡಿಸಿತು. ಪುಸ್ತಕವನ್ನು ಕೈಯಲ್ಲಿ  ಸವರಿ ನನ್ನ ಕೆನ್ನೆ ಸವರಿ ತಲೆಯ ಮೇಲೆ ಕೈ ತಂದು ಆಶೀರ್ವದಿಸಿದರು. ವಿಜಯ ಮತ್ತೆ ಬರುತ್ತಾರೆ ಎಂಬ ಬಲವಾದ ನಂಬಿಕೆ ನನಗೆ  ಅಂದು ಹುಟ್ಟಿತು. ಅವರಿಗಿದ್ದ ಸಾಹಿತ್ಯಪ್ರೇಮ, ಸಮಾಜಮುಖಿ ಧೋರಣೆ ಯಾವುದೂ ಮರೆಯಾಗಿರಲಿಲ್ಲ. ಆದರೆ ವ್ಯಕ್ತ ಪಡಿಸಲು ಬೇಕಾದ ಬಾಷಾ ಸಂಪತ್ತು ಅವರ ಕೈ ಬಿಟ್ಟಿತ್ತು.
ಕೋಮಾದಿಂದ ಹೊರ ಬಂದು ಮನೆಗೆ ಬಂದ ನಂತರ ಸಹೋದರಿ, ಸಹೋದರರು ಅವರಿಗೆ ಪ್ರತಿಯೊಂದನ್ನೂ ಆಗ ತಾನೇ ಹುಟ್ಟಿದ ಮಗುವಿಗೆ ಕಲಿಸುವಂತೆ ಹೇಳಿ ಕೊಡುತ್ತಿದ್ದರು. ನಾನೂ ದಿನ ಬಿಟ್ಟು ದಿನ ಹೀಗೆ ಅಕ್ಷರಾಭ್ಯಾಸ ಮಾಡಿಸುವ ಕಾಯಕ ಕೈಗೊಂಡೆ. ಹೀಗೆ ಇತರರೂ ಮಾಡಿದ್ದಾರೆ. ಬರೆದರು ಬರೆದರು ಬರೆದೇ ಬರೆದರು. ಅಂತೂ ಇಂತೂ ಅವರಿಗೆ ಅವರ ಜಾಡು ಸ್ವಲ್ಪ ಮಟ್ಟಕ್ಕೆ ದೊರೆಯಿತು. ಪ್ರತಿನಿತ್ಯ ಡೈರಿ ಬರೆಯುವುದು, ಪ್ರತಿಯೊಂದು ಪದಾರ್ಥಗಳನ್ನು ಬರೆದು ಗುರುತಿಸುವ ಕೆಲಸ ಮಾಡುತ್ತಿದ್ದರು. ನಂತರ ಕೆಲವು ಸಣ್ಣ ಪುಟ್ಟ ಘಟನೆಗಳನ್ನು ಗದ್ಯರೂಪದಲ್ಲಿ ದಾಖಲಿಸುತ್ತಿದ್ದರು. ಹಲವು ಕವನಗಳನ್ನು ರಚಿಸಲಾರಂಭಿಸಿದರು. ದಬ್ಬೆಯಿಂದ ಮೈಸೂರಿಗೆ ಬಂದಾಗ ನಮ್ಮ ಮನೆಯಲ್ಲಿ ಒಂದೆರಡು ದಿನಗಳಿರುತ್ತಿದ್ದರು. ಆಗೆಲ್ಲಾ ಅವರು ಬರೆದುದನ್ನು  ತೋರಿಸುತ್ತಿದ್ದರು. ಅದರ ಬಗ್ಗೆ ಮಾತನಾಡುತ್ತಿದ್ದೆವು. ಊಟ ತಿಂಡಿ ಮುಗಿಸಿ ನಾವು ಇಡೀ ದಿನ ಇದೇ ಕೆಲಸ ಮಾಡುತ್ತಿದ್ದೆವು. ಅವರು ಮೊದಲು ಬರೆದ ಪುಸ್ತಕಗಳನ್ನು ಓದುವುದು, ಹೊಸದನ್ನು ಓದುವುದು ಈ ರೀತಿ  ನಡೆಯುತ್ತಿತ್ತು. ಆಗೆಲ್ಲಾ ನನಗೆ ಆಸ್ಪತ್ರೆಯಲ್ಲಿ ಹುಟ್ಟಿದ ಭರವಸೆ ಗಟ್ಟಿಗೊಳ್ಳುತ್ತಾ ನಡೆಯಿತು.
ಜಯಾ ಮೇಡಂರವರನ್ನು ಆಸ್ಪತ್ರೆಯಿಂದ ಮನೆಗೆ ಕರೆ ತಂದ ಸಂದರ್ಭದಲ್ಲಿ ಮನೆಯವರನ್ನೆಲ್ಲಾ ಕೂಡಿಸಿಕೊಂಡು "ನಾವು ಜೀವವನ್ನೇನೋ ಉಳಿಸಿದ್ದೇವೆ ಆದರೆ ನೀವೆಲ್ಲಾ ತಾಳ್ಮೆಯಿಂದ ಕಷ್ಟಪಟ್ಟು ನೋಡಿಕೊಳ್ಳಬೇಕಾಗುತ್ತದೆ. ಅವರು ಎಷ್ಟರ ಮಟ್ಟಿಗೆ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಹೇಳಲಾಗುವುದಿಲ್ಲ" ಎಂದಿದ್ದ ಡಾಕ್ಟರ್ ಅವರಲ್ಲಾದ ಪ್ರಗತಿಯನ್ನು ನೋಡಿ "ಇದು ನಮ್ಮ ವೈದ್ಯಕೀಯ ವಿಜ್ಞಾನಕ್ಕೇ ಒಂದು ಅಚ್ಚರಿ" ಎಂದು ಉದ್ಗರಿಸಿದ್ದರಂತೆ. ಈ ವಿಷಯವನ್ನು ಅವರ ತಂಗಿ ಛಾಯ ಹೇಳಿದರು.

ವಿಜಯಾರವರಿಗೆ ಆದ ಅಪಘಾತ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಮಾತ್ರವಲ್ಲ, ಇಡೀ ಸಾಹಿತ್ಯಕ್ಕೆ ಹಾಗೂ ಮಹಿಳಾ ಸಂಘಟನೆಗೆ ಆದ ದೊಡ್ಡ ನಷ್ಟ. ಅಪಘಾತವಾದ ಸುಮಾರು ಒಂದೆರೆಡು ವರ್ಷ ಅವರ ಆರೋಗ್ಯದಲ್ಲಿ ಅಷ್ಟೇನೂ ಸುಧಾರಣೆ ಕಾಣಲಿಲ್ಲ. ಆದರೆ ಅವರ ಪ್ರಯತ್ನ ನಿರಂತರವಾಗಿ ಹಂತ ಹಂತವಾಗಿ ನಡೆಯುತ್ತಲೇ ಇತ್ತು. ಆದರೆ ನಂತರ ಅವರು ಮತ್ತೆ ತಮ್ಮ ಬರವಣಿಗೆಯನ್ನು ಆರಂಭಿಸಿದರು ಮೆಲ್ಲಮೆಲ್ಲನೆ. ಇತ್ತೀಚಿನ ದಿನಗಳಲ್ಲಿ ಅವರು ಮೊದಲಿನ ವಿಜಯಾರಾಗಿ ಹೊರ ಬರುತ್ತಾರೆ ಎಂಬ ಭರವಸೆ ಮೂಡಿಸಿದ್ದರು. ಸುಮಾರು 150 ಕವನಗಳನ್ನು  ರಚಿಸಿದ್ದಾರೆ. ಅದರಲ್ಲಿ ಎರಡು ಕವನಗಳನ್ನು ಇಲ್ಲಿ  ದಾಖಲಿಸುತ್ತೇನೆ.

       ಜನವರಿ
ವರ್ಷ ವರ್ಷಗಳೇ
ನೀವು ಹೇಳದೆ
ಮುಂದಕ್ಕೆ  ಮುಂದಕ್ಕೆ
ಹೋಗುತ್ತೀರಲ್ಲ
ಅವು ಮಲಗುವುದಿಲ್ಲ.
ವರ್ಷಗಳು ಹಾಗೇ
ಅವು ಸಮಾನ
ಜನವರಿ ನಕ್ಕವು.
ನಾನೇ ಅಲ್ಲ ನನ್ನಿಂದ ಮುಂದಕ್ಕೂ ಸದಾ
ಇದ್ದು ಹೋಗುವುದು ಸದಾ
ಇವೆಲ್ಲಾ ಸ್ಪಷ್ಟಾನು ಸ್ಪಷ್ಟ
ಅವಕ್ಕೆ  ಯಾರಿಗೆ ಏನಾದರೂ
ಇದ್ದರೂ ಅತ್ತರೂ ಸತ್ತರೂ ಹಾಗೆ
ಓಹೋ ತಿಳಿಯಿತು ತಿಳಿಯಿತೀಗ.
ಹೋಗಲಾರದೆ ಇದ್ದರೆ ಹೇಗೆ
ಬಂದು ಇದ್ದು ಹೋಗುವಿಕೆ

ವಿಶಿಷ್ಟ ಪ್ರಪಂಚ

ಎಚ್ಚರವೆಂದಿತೇ ಸ್ಟೌವ್
ನಾನೇ ಹಿರಿಯನೆಂದಿತೇ ಅದು
ಬೇಡವೆಂದವರು ಯಾರೂ ಇಲ್ಲ
ಎಲ್ಲಿ ಎಲ್ಲದಕ್ಕೂ ಭಾವವುಂಟು.
ಅದಿಲ್ಲವೆಂಬುದು ಹಿರಿಯರ ಮಾತು
ಬೆಳಗಿನ ಕಾಫಿಯಿಂದ ಮಲಗುವ ಕಷಾಯದವರೆಗೂ
ನೀನೆ ನೀನು ನಿನ್ನ ತೀರ್ಮಾನ
ನಮ್ಮ ಭಯ, ನಿನ್ನ ಅಪಾಯ
ನಿನ್ನನ್ನು ನೋಡಿದರೆ ಚಿಕ್ಕವನು
ಆದರೆ ನೀನೇ ಅತಿ ಮುಖ್ಯ
ನಿನ್ನ ನೆನಪಿಲ್ಲದಿದ್ದರೆ
ಬದುಕಲು ಅಸಾಧ್ಯ
ಮನೆಯಲ್ಲಿ ನಿನ್ನ ಹಿರಿತನ
ಸ್ಟೌವ್ ನಿನಗೆ ಜನಕ್ಕೆ ಭಯ 
ಎಲ್ಲರಿಗೂ ನೆನಪಿಸಿದ್ದೀಯೆ
ಪುನಃ ಪುನಃ  ಮೌನವೇ?
ನೆನಪುಂಟು ನೆನಪುಂಟು.
2-2-18 ರಂದು ಡಾ.ಸುಬ್ರಹ್ಮಣ್ಯಂರವರ ಮನೆಯಲ್ಲಿ ವಿಜಯಾರವರ ಕವಿಗೋಷ್ಠಿಯೊಂದನ್ನು ಆಯೋಜಿಸಿದರು. ನಾವು ಗೆಳೆಯ, ಗೆಳತಿಯರು ಇಪ್ಪತ್ತು ಜನ ಸೇರಿದ್ದೆವು. ಆ ದಿನ ಎಲ್ಲರ ಮುಖದಲ್ಲೂ ಭರವಸೆಯ ಬೆಳಕು ಮೂಡಿತು. ಇನ್ನೇನು ನಮ್ಮ ವಿಜಯಾ ದಬ್ಬೆಯವರು ಮೊದಲಿನಂತೆಯೇ ಮರಳುತ್ತಾರೆ ಎಂಬ ಭಾವನೆ ಹುಟ್ಟಿ ಮನಸ್ಸು ಖುಷಿಯಿಂದ ಕುಣಿಯಿತು. ಆದರೆ ಈ ನಮ್ಮ ಖುಷಿ ಹೆಚ್ಚು ದಿನಗಳು ಉಳಿಯಲಿಲ್ಲ. ಮತ್ತೆ ನಮಗೆ ಮೋಸವಾಯಿತು. 23-2-18 ರಂದು ವಿಜಯಾರವರು ನಮ್ಮನ್ನೆಲ್ಲಾ ಬಿಟ್ಟು ನಡೆದೇ ಬಿಟ್ಟರು. ನಮ್ಮ ವಿಜಯಾ ಹೊರಟೇ ಬಿಟ್ಟರಲ್ಲ ಎಂದು ಬಹಳ ಮರುಗಿತು ಮನಸ್ಸು
ವಿಜಯಾ ಎಲ್ಲಿ ಹೋದಿರಿ ನೀವು ಎಲ್ಲಿ  ಹೋದಿರಿ?
ನಾನೆಲ್ಲಿ ಹೋದೆ ಇಲ್ಲೇ ಇರುವೆನಲ್ಲಾ
ನಿನ್ನಲ್ಲಿ, ಅವಳಲ್ಲಿ, ಇವಳಲ್ಲಿ
ನಾನಿಲ್ಲೇ ಇರುವೆನೆಲ್ಲಾ ನಿಮ್ಮೊಟ್ಟಿಗೆ.
ಎಂದು ವಿಜಯಾ ನುಡಿದಂತಾಯಿತು. ಹೌದು ನಮ್ಮೆಲ್ಲರಲ್ಲಿ ನಮ್ಮೊಟ್ಟಿಗೆ ಇದ್ದಾರೆ ಎಂಬ ಸಮಾಧಾನದಲ್ಲಿ ನಾವು ಮುಂದೆ ಸಾಗಬೇಕಾಗಿದೆ.

- ಡಾ. ಶ್ರೀವಳ್ಳಿ

     




ಜಾಗೃತಿ ಗೀತೆ


(ಹಿಂದಿ ಚಿತ್ರ  ಕೋಮಲ್ ನ ಗೀತೆಯೊಂದರ ಅನುವಾದ)

ಕೋಮಲೆಯೇ ನೀನಲ್ಲ ಅಬಲೆ
ಶಕ್ತಿಯ ರೂಪವು ನಿನ್ನಲ್ಲೇ
ಜಗಕೆ ಜೀವವ ನೀಡುವ ಹೆಣ್ಣೆ
ಮೃತ್ಯುವನೆ ನೀ ಜಯಿಸಿರುವೆ

ಸತಿಸಹಗಮನದಿ ನಿನ್ನಾ ದಹನ
ಮೀರಾ ಹೆಸರಲಿ ವಿಷಪ್ರಾಶಾನ
ಸೀತೆಗೆ ನೀಡಿದ ಅಗ್ನಿಪರೀಕ್ಷೆ
ಇಂದಿಗೂ ನಿನಗದು ತಪ್ಪದ ಶಿಕ್ಷೆ

ಕಲೆಸಾಹಿತ್ಯದಿ ಮಮತೆ ಮತಿಯಲಿ
ಸಕಲ ಕ್ಷೇತ್ರದಲಿ ಮುಂದಿರುವೆ
ಪುರುಷರೆ ಎಲ್ಲೆಡೆ ತುಂಬಿರಲಿ
ನೀ ನಾಯಕಿಯಾಗು ಎಲ್ಲರಲೀ

ಇನ್ನಾದರೂ ನೀ ಸಹಿಸದಿರು
ಬದಲಿಸು ನೀ ಇತಿಹಾಸವನು
ಸಂಕಲೆಯನು ಧಿಕ್ಕರಿಸಿಂದು
ದೃಢನಿಶ್ಚಯದಿ ನೀ ನಡೆ ಮುಂದು

(ಅನುವಾದ - ಉಷಾಗಂಗೆ )

ಕವನ - ಮೇಲೇಳು ಮಹಿಳೆ

ಎಲ್ಲರ ಬಯಕೆಯೂ 
ಹರಕೆಯೂ ಅದೇ
ಗಂಡು ಮಗುವಾಗಲಿ
ಗಂಡು ಮಗುವಾಗಲಿ
ತನ್ನವರು ಬಂಧುಗಳು
ಪರಿಚಿತರು ಇತರರು
ಅರೆ ಒಬ್ಬರ ಬಾಯಲ್ಲೂ
ಹೆಣ್ಣಾಗಲಿ ಎಂಬಮಾತೆ ಬರದಲ್ಲ?
ಆಗುವುದೋ ಬಿಡುವುದೋ
ಮೊದಲು ಗಂಡಾದರೆ ಚೆನ್ನ
ಆನಂತರ ಬೇಕಾದರೆ ಹೆಣ್ಣಾಗಲಿ

ಹೆಣ್ಣಿಗೆ ದ್ವಿತೀಯ ಆದ್ಯತೆ
ಹೆಣ್ಣೆ ತನ್ನತನಕೆ ಜನುಮ ನೀಡಲು
ಹಿಂಜರಿಯುತ್ತಿದ್ದಾಳೆ ಇನ್ನು.
ಈ ನವಯುಗದಲೂ ಅವಳು
ಸಿದ್ಧಳಿಲ್ಲ ಮಗಳನ್ನು ಹೆರಲು.
ತನ್ನ ಅಸ್ತಿತ್ವಕೆ ಬೆಲೆಯಿಲ್ಲವೆಂದು ಒಪ್ಪಿಸಿಬಿಟ್ಟಿದ್ದಾಳೆ ....ತನ್ನನ್ನು.

ಅವಳ ಉಗಮವನೆ ತಿರಸ್ಕರಿಸುವ
ಅವಳ ಏಳಿಗೆಯನೆ ಸಹಿಸದಿರುವ
ಅವಳ ಸ್ಪರ್ಧೆಗೆ ಹೆದರಿರುವ
ಅವಳ ಸಾತ್ವಿಕ ಶಕ್ತಿಯ ಒಪ್ಪದಿರುವ
ಅವಳ ಬಂಧಿಸಿ ಅಡಿಯಾಳಾಗಿಸುವ
ಕೀಳರಿಮೆಯ ಗಂಡುಸಮಾಜಕೆ
ಸವಾಲೊಡ್ಡುತ ಮೇಲೇಳು ಮಹಿಳೆ
ಇಂದು ಈ ಕ್ಷಣದಂದು

- ಉಷಾಗಂಗೆ 

ಕಥೆ - ಜ್ಞಾನೋದಯ

                               
ಬೀರಮ್ಮ ಹೊತ್ತಾರೆ ಎದ್ದು ಎಲ್ಲಾ ಕೆಲಸ ಮುಗಿಸಿ ಕೂಲಿಗೆ ಹೊರಟಳು. ನಿಂಗವ್ವ ಇನ್ನೂ ಹಟ್ಟಿಯ ಬಾಗಿಲನ್ನೇ ತೆರೆಯದಿರುವುದನ್ನು ಕಂಡು ಇವಳಿಗೇನಾಯಿತೆಂದು “ನಿಂಗಿ, ನಿಂಗಿ” ಎಂದು ಬಾಗಿಲನ್ನು ಕುಟ್ಟಿದಳು.
ಒಳಗೆ ಕೆಟ್ಟ ಕನಸಿನಿಂದ ನರಳುತ್ತಿದ್ದ ನಿಂಗವ್ವ ದಢಾರನೆ ಎದ್ದು ಕುಳಿತಳು. ವಾಸ್ತವಕ್ಕೆ ಬಂದ ತಕ್ಷಣ ‘ಇಷ್ಟೊತ್ತು ಕಂಡಿದ್ದು ಕನಸಾ?’ ಎಂದು ಸಮಾಧಾನಗೊಂಡಳು. ಎದ್ದು ಬಾಗಿಲನ್ನು ತೆರೆದಳು.
“ಯಾಕಮ್ಮಿ ಇನ್ನು ಬೆಳಗಾಗಿಲ್ವೆ ನಿಂಗೆ, ಇವತ್ತು ದೊಡ್ಡಮನೆಯವರ ಕಳ್ಳೆಕಾಯಿ ಬಿಡಿಸಕ್ಕೆ ಹೋಗ್ಬೇಕು. ಮರೆತು ಹೋಯ್ತಾ?” ಎಂದು ರಾಗ ತೆಗೆದಳು ಬೀರಮ್ಮ.
“ಇಲ್ಲ ಬೀರಮ್ಮ, ಯಾಕೋ ಚೆನ್ನಿ ಶ್ಯಾನೆ ಕನ್ಸಲ್ಲಿ ಬರ್ತಾವ್ಳೆ. ಪೇಟೇಲಿ ಕೂಸು ಏನ್ ಪಾಡು ಪಡ್ತಾವ್ಳೋ ಏನೋ. ಹೋಗಿ ನೋಡ್ಕಂಡು ಬತ್ತೀನಿ” ಕುಗ್ಗಿದ ದನಿಯಲ್ಲಿ ಹೇಳಿದಳು ನಿಂಗವ್ವ.
“ಏನಾರ ಹೇಳೆ, ನೀ ಬಲು ಕಟುಕಿ, ಇರಾ ಒಂದು ಮಗೀನಾ ಪ್ಯಾಟೀಗ್ ಕಳ್ಸಿ ಅದೇನ್ ಜೀವ್ನ ಮಾಡ್ತಿದ್ದೀ” ಎಂದು ಕಟಕಿಯಾಡಿ ಹೊರಟುಹೋದಳು. ಬೀರಮ್ಮನ ಮಾತು ನಿಂಗಿಗೆ ನೇರ ಎದೆಗೆ ಚುಚ್ಚಿದಂತಾಯಿತು. ಅವಳ ಕಣ್ಣಲ್ಲಿ ನೀರು ತನ್ನಂತಾನೇ ಚಿಮ್ಮಿತು. ಅಲ್ಲೇ ಬಾಗಿಲ ಬಳಿ ಕುಸಿದು ಕುಳಿತಳು.
ನಿಂಗವ್ವನ ಗಂಡ ತೀರಿಕೊಂಡು ಒಂದು ವರ್ಷವಾಗಿತ್ತು. 10 ವರ್ಷದ ಚೆನ್ನಮ್ಮ ನಿಂಗಮ್ಮನ ಮಗಳು. ತನ್ನ ಕೂಲಿಯಿಂದ ಬರುವ ಅಷ್ಟಿಷ್ಟು ಹಣದಿಂದ ಮಗಳನ್ನು ಓದಿಸಲಾಗುವುದಿಲ್ಲವೆಂದು, ದೂರದ ಸಂಬಂಧಿಕರೊಬ್ಬರ ಮನೆಗೆ ಕಳಿಸಿದ್ದಳು. ಶ್ರೀಮಂತರಾದ ಅವರು ‘ಚೆನ್ನಿಯನ್ನು ನಾವೇ ಸಾಕಿಕೊಳ್ಳುತ್ತೇವೆ, ಶಾಲೆಗೂ ಸೇರಿಸುತ್ತೇವೆ, ನಮ್ಮ ಮನೆಯಲ್ಲಿ ಚೆನ್ನಿ ಅಲ್ಪಸ್ವಲ್ಪ ಕೆಲಸ ಮಾಡಿಕೊಂಡಿದ್ದರೆ ಸಾಕು’ ಎಂದು ಹೇಳಿ ಕರೆದುಕೊಂಡು ಹೋಗಿದ್ದರು.
ಹಳ್ಳಿಯಲ್ಲೆ ಇದ್ದರೆ ಒಪ್ಪೊತ್ತು ಊಟ, ಹರಕಲು ಬಟ್ಟೆ, ಸುಡುಬಿಸಿಲಲ್ಲಿ ಕುರಿ ಕಾಯುವುದು ಅವಳ ಪಾಲಿಗೆ ಕಟ್ಟಿಟ್ಟ ಬುತ್ತಿ. ಅಲ್ಲಿಗೆ ಹೋದರೆ ಶಾಲೆಗೆ ಹೋಗಬಹುದು, ಹೊಟ್ಟೆ ತುಂಬ ಊಟ, ಹಾಕಿಕೊಳ್ಳಲು ಬಟ್ಟೆ ಸಿಗುತ್ತದೆ ಎಂಬ ಆಸೆಯಿಂದ ಮಗಳು ಹೋಗುವುದಿಲ್ಲವೆಂದರೂ ನಿಂಗಿ ಅವಳನ್ನು ಕಳಿಸಿದ್ದಳು. ಮಗಳ ಮೇಲಿನ ಮಮತೆಯನ್ನು ಬದಿಗೊತ್ತಿ, ಅವಳ ಬಾಳು ಚೆನ್ನಾಗಿರಲೆಂದು ಬಯಸಿ ಪೇಟೆಗೆ ಕಳಿಸಿ, ತಾನೊಬ್ಬಳೇ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದಳು.
ಮಗಳು ಅಲ್ಲಿ ಸುಖವಾಗಿ ತಿಂದುಂಡು ಶಾಲೆಗೆ ಹೋಗುತ್ತಿದ್ದಾಳಲ್ಲಾ ಎಂದು ನೆನೆಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡು, ನಿಂಗವ್ವ ಎದ್ದು ಹೊರಡಲು ತಯಾರಿ ನಡೆಸಿದಳು. ಚೆನ್ನಿಗೆ ಈರುಳ್ಳಿ ಹಾಕಿದ ರಾಗಿ ರೊಟ್ಟಿಯೆಂದರೆ ಪಂಚಪ್ರಾಣ. ಅದನ್ನೇ ಮಾಡಲು ಅಣಿಯಾದಳು. ಆದರೆ ಈರುಳ್ಳಿ ಇಲ್ಲವಲ್ಲ ಎಂದು ಚಡಪಡಿಸಿ, ಪಕ್ಕದ ಮನೆಯ ಅಮ್ಮಣ್ಣಿಯನ್ನು ಕೇಳಲು ಹೋದಳು.
ಅಮ್ಮಣ್ಣಿ ಮನೆ ಹೊರಗಡೆ ಕುಳಿತಿದ್ದಳು. ನಿಂಗವ್ವನನ್ನು ಕಂಡು ಮುಗುಳ್ನಕ್ಕು, ಏನೆಂದು ವಿಚಾರಿಸಿ ಈರುಳ್ಳಿ ತರಲೆಂದು ಒಳನಡೆದಳು. ಬಾಗಿಲಲ್ಲೇ ನಿಂತಿದ್ದ ನಿಂಗವ್ವ ಮನೆಯೊಳಗೆ ಬಗ್ಗಿ ನೋಡತೊಡಗಿದಳು. ಟಿ.ವಿ ನೋಡುತ್ತಿದ್ದ ಸುಬ್ಬಯ್ಯ ಶಾಸ್ತ್ರಿಗಳು ನಿಂಗವ್ವನನ್ನು ಕಂಡು ತಕ್ಷಣ ಬೇಸರದ ದನಿಯಲ್ಲಿ “ನೋಡು ನಿಂಗವ್ವ ಮಗೀಗೆ ಎಂಥಾ ಕೆಲಸ ಕೊಟ್ಟವ್ರೆ, ಪಾಪಿ ಜನಗಳು” ಎಂದರು.
ಏನೊಂದು ಅರ್ಥವಾಗದೆ ನಿಂಗವ್ವ “ಏನಾಗೈತೆ ಸಾಮಿ” ಎಂದಳು.
“ಮಗೂನ ಸಾಕ್ತೀವಿ ಕೊಡಿ ಎಂದು ಕರೆದುಕೊಂಡು ಹೋಗಿ, ಸರಿಯಾಗಿ ಊಟ ಹಾಕದೆ, ಕೆಲಸ ಮಾಡಿಸಿಕೊಂಡು, ಹೊಡೆದೂ, ಬಡಿದೂ ಕೊನೆಗೆ ಆಸ್ಪತ್ರೆಗೆ ತಗೊಂಡು ಹೋಗಿ ಹಾಕಿದ್ದಾರೆ. ಆ ಮಗೂ ಮತ್ತು ಅದರ ತಾಯಿಯ ಗೋಳು ನೋಡೋಕಾಗಲ್ಲ”.


ಟಿ.ವಿಯಲ್ಲಿ ತೋರಿಸುತ್ತಿದ್ದ ಆ ಮುಗುವಿನ ಮುಖ ಕಂಡು ನಿಂಗವ್ವನ ಕರುಳು ಚುರುಕ್ಕೆಂದಿತು. ತನ್ನ ಚೆನ್ನಿಯೇ ಅಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾಳೆ ಎಂದು ಭಾವಿಸಿಕೊಂಡು ಹಾಗೆಯೇ ಕುಸಿದು ಬಿದ್ದಳು.
ಮುಖದ ಮೇಲೆ ಬಿದ್ದ ನೀರಿನಿಂದ ನಿಂಗವ್ವ ಕಣ್ಣುಬಿಟ್ಟಳು. ಅಮ್ಮಣ್ಣಿ ತಂದುಕೊಟ್ಟ ನೀರು ಕುಡಿದಳು. “ಯಾಕೆ ನಿಂಗವ್ವ ಮೈಯಲ್ಲಿ ಹುಷಾರಿಲ್ಲವಾ?” ಕೇಳಿದರು.
“ಇಲ್ಲಮ್ಮಣ್ಣಿ, ಬೆಳಗಿನಿಂದ ಏನೂ ತಿಂದಿಲ್ಲ, ಅದಕ್ಕೆ” ಎನ್ನುತ್ತಾ ಈರುಳ್ಳಿಯನ್ನೂ ಪಡೆಯದೆ ನೇರ ಊರ ಗೇಟಿಗೆ ಹೊರಟಳು. ‘ಇನ್ನು ಮುಂದೆ ಏನೇ ಆಗಲಿ ಚೆನ್ನಿ ನನ್ನ ಬಳಿಯೇ ಇರುವಳು. ಎಷ್ಟೇ ಕಷ್ಟ ಆದರೂ ಅವಳನ್ನು ಇಲ್ಲಿಯೇ ಶಾಲೆಗೆ ಹಾಕಿ ಓದಿಸಬೇಕು. ಯಾರ ಮನೆಯಲ್ಲಿಯೋ ನನ್ನ ಮಗಳು ಯಾಕೆ ಕಷ್ಟ ಪಡಬೇಕು’ ಎಂದುಕೊಂಡು ಅವಳನ್ನು ಕರೆದುಕೊಂಡು ಬರಲು ನಿರ್ಧರಿಸಿ ಪೇಟೆಯ ಬಸ್ ಹತ್ತಿದಳು.


    -   ಉಷಾಗಂಗೆ    

ಪುಸ್ತಕ ಪ್ರೀತಿ - ತ್ರಿವೇಣಿಯವರ ಕಥಾಸಂಕಲನ "ಸಮಸ್ಯೆಯ ಮಗು"



ಸಮಸ್ಯೆಯ ಮಗು       
ಮನಸ್ಸು ಪ್ರೀತಿ, ಮಮತೆಗಳಿಗೆ ಕಾತರಿಸುವಾಗ ಅದು ಸಿಗದಿದ್ದರೆ ಯಾವ ರೀತಿ ದ್ವೇಷದ ಕಡೆಗೆ ಜಾರುತ್ತದೆ ಎಂಬುದನ್ನು "ಸಮಸ್ಯೆಯ ಮಗು" ಕಥೆಯಿಂದ ತಿಳಿಯಬಹುದು. ಗೋಪಾಲರಾಯರು ಮತ್ತು ಜಾನಕಮ್ಮ ದಂಪತಿಗಳಿಗೆ ತುಂಬಾ ದಿನಗಳ ಮೇಲೆ ಮಗುವಾಯಿತು. ಅವರು ತಮ್ಮ ಪ್ರೀತಿ, ವಾತ್ಸಲ್ಯಗಳನ್ನು ಧಾರೆಯೆರೆದು ಬಹಳ ಮುದ್ದಿನಿಂದ ಆ ಮಗುವಿಗೆ ನಾಗೇಂದ್ರ ಎಂದು ನಾಮಕರಣ ಮಾಡಿದರು. ನಂತರ ಇವರಿಗೆ ಇನ್ನೊಂದು ಮಗುವಾಯಿತು.  ಆ ಎರಡನೇ ಮಗುವಿಗೆ ಅವರು  ಹೆಚ್ಚಿನ ಗಮನ ಕೊಡುತ್ತಿದ್ದರು. ಇದರಿಂದ ತನ್ನನ್ನು ಕಡೆಗಣಿಸಿ ತಮ್ಮನನ್ನು ಹೆಚ್ಚು  ಪ್ರೀತಿಸುತ್ತಾರೆ ಎಂದುಕೊಂಡ  ನಾಗೇಂದ್ರ ತಮ್ಮನನ್ನು ದ್ವೇಷಿಸಲು ಪ್ರಾರಂಭಿಸಿದನು. ತಂದೆ ತಾಯಿಯ ಗಮನ ಸೆಳೆಯಲು ತನ್ನನ್ನು ತಾನೇ ದಂಡಿಸಿಕೊಳ್ಳುತ್ತಿದ್ದನು ಇಲ್ಲದಿದ್ದರೆ ಮಗುವಿಗೆ ತೊಂದರೆ ಕೊಡುತ್ತಿದ್ದನು ಅಥವಾ ಮನೆ ಬಿಟ್ಟು ಹೊರಟು ಹೋಗುತ್ತಿದ್ದನು. ಒಮ್ಮೆ ಹೀಗೆ ಮನೆ ಬಿಟ್ಟು ಹೋಗಿದ್ದನು. ದಾರಿಯಲ್ಲಿ ಹೋಗುತ್ತಿದ್ದ ಅವನನ್ನು ನೋಡಿದ ಅಪರಿಚಿತರೊಬ್ಬರು ಅವನನ್ನು ಯಾರು ನೀನು? ಎಂದು ಕೇಳಿದರೂ ಉತ್ತರ ಕೊಡದೆ ಹಾಗೆ ಹೋಗುತ್ತಿದ್ದ ಅವನನ್ನು ಕಂಡು ಮನೆ ಬಿಟ್ಟು ಬಂದಿರಬಹುದು ಸಂಶಯ ಬಂದಿತು. ಕೊನೆಗೆ ಪೊಲೀಸ್ ರ ಹೆಸರು ಹೇಳಲು ಭಯಗೊಂಡ ನಾಗೇಂದ್ರ ಮನೆ ಬಿಟ್ಟು ಬಂದಿರುವುದಾಗಿ ಒಪ್ಪಿಕೊಂಡನು. "ನೀನು ಮಾಡುತ್ತಿರುವುದು ತಪ್ಪಲ್ಲವೇ? ನಿನ್ನ ತಂದೆ ತಾಯಿಗೆ ಗಾಭರಿಯಾಗಲ್ಲವೇ?" ಎಂದರು. "ಹೌದು, ನನ್ನನ್ನು ಹುಡುಕಲಿ ಎಂದೇ ಮನೆ ಬಿಟ್ಟು ಬಂದಿರುವೆ." 
ನಂತರ ಜೋರು ಮಾಡಿ ಮನೆಗೆ ಕರೆದು ಕೊಂಡು ಬಂದರು. ಹಿಂತಿರುಗಿ ಬಂದ ಮಗನನ್ನು ತಾಯಿ ಪ್ರೀತಿಯಿಂದ ಮಾತನಾಡಿಸಿದರು. ತಂದೆ ಅವನಿಗೆ ಸ್ವಲ್ಪ ಹುಚ್ಚು ಎಂದರು. ಆದರೆ ಇದನ್ನು ಒಪ್ಪದ ಆ ಅಪರಿಚಿತರು ನಾಗೇಂದ್ರನನ್ನು ಗಮನಿಸಿ ಸಮಸ್ಯೆ ಇರುವುದು ಅವನಲ್ಲಲ್ಲ, ನಿಮ್ಮಲ್ಲಿ. ನಿಮಗೆ ಎರಡನೇ ಮಗುವಾದ ಮೇಲೆ ಎರಡು ಮಕ್ಕಳ ಮೇಲೂ ಒಂದೇ ರೀತಿ ಪ್ರೀತಿ ತೋರಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಇನ್ನು ಮುಂದೆ ಇಬ್ಬರಲ್ಲೂ  ಒಂದೇ ತೆರನಾಗಿ  ಪ್ರೀತಿ ತೋರಿಸಿ ಎಲ್ಲಾ ಸರಿಯಾಗುತ್ತದೆ" ಎಂದು ಆ ದಂಪತಿಗಳಲ್ಲಿ ಅರಿವು ಮೂಡಿಸಿದರು.

ಕೆಸರಿನ ಕಮಲ

ರಾತ್ರಿಯಿಡೀ ಒಂದೇ ಸಮನೆ ಮಗು ಚೀರಿ ಅಳುತ್ತಿದ್ದ ದ್ವನಿ ಆಸ್ಪತ್ರೆಯಲ್ಲಿ ಮಗುವಿಗಾಗಿ ಹಂಬಲಿಸಿ, ಮಗುವನ್ನು ಕಳೆದುಕೊಂಡ ಅವಳ ಎದೆಯನ್ನು ಇರಿಯುತ್ತಿತ್ತು. ಮಾರನೇ ದಿನ ನರ್ಸ್ ಳನ್ನ ಕೇಳಲು ಆ ಮಗು "ಮದುವೆಯಾಗದ ಹುಡುಗಿಯೊಬ್ಬಳು ಹಡೆದ  ಮಗುವದು, ಮಗುವನ್ನು ಇಲ್ಲೇ ಬಿಟ್ಟು ಹೋಗಿದ್ದಾಳೆ" ಎಂದು ಆ ಮಗುವನ್ನು ತಂದು ತೋರಿಸಲು ಇವಳು ಮಡಿವಂತಿಕೆಯಿಂದ "ಛೀ, ದೂರ ಸರಿಸಿ" ಅಸಹ್ಯಿಸಿಕೊಂಡಳು. ಆದರೂ ನರ್ಸ್ "ನಾಳೆಯಿಂದ ಈ ಮಗುವಿಗೆ ಹಾಲು ಕುಡಿಸುವಿರಾ?" ಕೇಳಿದಳು. "ಈ ಜನ್ಮದಲ್ಲಿ ಹಾಲು ಕುಡಿಸುವುದಿಲ್ಲ" ಎಂದುತ್ತರಿಸಿದಳು. ಆದರೂ ಒಂದೇ ಸಮನೆ ಆಳುತ್ತಿದ್ದ ಮಗುವಿನ ದನಿ ಅವಳ ತಾಯ್ತನವನ್ನು ಜಾಗೃತಿಗೊಳಿಸಿತು. ಮನಸು ತೊಳಲಾಟದಲ್ಲಿತ್ತು. ತಂದೆ ತಾಯಿಯ ಸಮಾಜಬಾಹಿರ ಕೃತ್ಯದಲ್ಲಿ ಮಗುವಿನ ಪಾಲೇನು ಜನ್ಮಕ್ಕೆ ಕಾರಣರಾದವರು ಕೆಸರು ಆದರೆ ಮಗು ಶುಭ್ರ ನಿರ್ಮಲ ಕಮಲದಂತೆ ಎಂದು ನಿರ್ಧರಿಸಿದ ಅವಳು ಮಾರನೇ ದಿನ ಆ ಮಗುವಿಗೆ ಹಾಲೂಡಿಸಲು ನಿರ್ಧರಿಸಿದಳು.

ಮೂರು ಗಂಟೆಯೊಳಗೆ

ಗೋಪು, ಪಾಪು ಅಕ್ಕ ತಂಗಿಯರ ಮಕ್ಕಳು. ಸ್ನೇಹಿತ ರಾಮುವಿನ ಮದುವೆಗೆ ಬಂದಿದ್ದರು. ಮದುವೆ ಮನೆಯಲ್ಲಿ ಮದುಮಗಳ ಸ್ನೇಹಿತೆ ಚಂಪಾಳ ಮೇಲೆ ಇಬ್ಬರ ದೃಷ್ಠಿ ಬಿದ್ದಿತ್ತು. ಒಬ್ಬರಿಗೊಬ್ಬರು ತಿಳಿಯದಂತೆ ಅವಳ ಬಗ್ಗೆ ತಿಳಿಯುವಂತೆ ಹೇಳಿದರು. ರಾಮು ಗೆಳೆಯರಿಗೆ "ಚಂಪಾ ಬಾಲವಿಧವೆ, ಅವಳ ತಂದೆ ತಾಯಿ ಮದುವೆ ಮಾಡುವುದಿಲ್ಲ, ಮುಂದೆ ಓದಿಸುವರು" ಎಂದನು. ಅದುವರೆವಿಗೂ ಕನಸು ಕಾಣುತ್ತಿದ್ದ ಗೋಪು ಈ ಮದುವೆ ಸಾಧ್ಯವಿಲ್ಲ ಎಂದನು‌. ಪಾಪು ಸಹ ಇದೇ ದಾರಿಯಲ್ಲಿ ನಡೆದನು.
ಇವರಿಬ್ಬರ ಮನಸ್ಸನ್ನು ತಿಳಿದ ರಾಮು ಗೆಳೆಯರಿಬ್ಬರನ್ನು "ಪ್ರೇಮವಂತೆ! ಪ್ರೇಮ! ಹೇಡಿಗಳು!" ಎಂದು ಮೂದಲಿಸಿದನು.

ಮಗಳ ಮನಸ್ಸು

ಹಣಕ್ಕಾಗಿ ಮಗಳು ಚಂದ್ರಳನ್ನು ವಯಸ್ಸಾದ ಶ್ರೀಮಂತನಿಗೆ ಮದುವೆ ಮಾಡಿಕೊಟ್ಟನು ಅಪ್ಪ ನರಸಪ್ಪ. ಮೊದಲಿನಿಂದಲೂ ಮಹತ್ವಾಕಾಂಕ್ಷಿ ಚಂದ್ರಳ ಆಸೆ, ಆಕಾಂಕ್ಷೆಗಳು ಮಣ್ಣು ಪಾಲಾಯಿತು. ತವರಿನ ಬಗ್ಗೆ ದ್ವೇಷ, ತಿರಸ್ಕಾರಗಳನ್ನು ಬೆಳೆಸಿಕೊಂಡು ಸಂಬಂಧವನ್ನೇ ಕಳಚಿಕೊಂಡಿದ್ದಳು. ಮಡದಿ ಮತ್ತು ಮಕ್ಕಳ ಕಾಯಿಲೆಗೆ ಚಿಕಿತ್ಸೆ ಹಣವಿಲ್ಲದ ಕಾರಣ ಹಣವನ್ನು ಕೇಳಲು ಅಳಿಯನ ಮನೆಗೆ ಬಂದನು. ಅಪ್ಪನನ್ನು ಕಂಡ ಚಂದ್ರ ಉದಾಸೀನದಿಂದ ನೋಡಿ "ಯಾವ ದಿನ ಹಣಕ್ಕಾಗಿ ನಿನ್ನ ಮಗಳನ್ನು ಮಾರಿದೆಯೋ ಅಂದೇ ನನ್ನ ನಿಮ್ಮ ಸಂಬಂಧ ಕಡಿದು ಹೋಯಿತು" ಎಂದಳು. "ನಾನು ನಿನ್ನ ತಾಯಿ ತಮ್ಮಂದರಿಗಾಗಿ ನಿನ್ನ ಬದುಕನ್ನು ಹಾಳು ಮಾಡಬೇಕಾಯಿತು. ಆ ನನ್ನ ಕೆಲಸದಿಂದ ದಿನವೂ ಪಶ್ಚಾತ್ತಾಪದಿಂದ ಬೆಂದು ಹೋಗುತ್ತಿದ್ದೇನೆ" ಎಂದ ಅಪ್ಪನ ಮಾತಿನಿಂದ ತಾಯಿ ಮತ್ತು ತಮ್ಮಂದಿರ ಕಾಯಿಲೆ ಬಗ್ಗೆ ಕೇಳಿದ ಅವಳ ಮನ ಅಳುತ್ತಿತ್ತು. ಅಪ್ಪನೊಂದಿಗೆ ಕಠೋರವಾಗಿ ವರ್ತಿಸಿದರೂ ತವರುಮನೆಯ ಸ್ಥಿತಿ ಕೇಳಿ ಮನಸ್ಸಿಗೆ ದುಃಖವುಂಟಾಯಿತು.  'ನನ್ನ ಮನಸ್ಸಿಗೆ ನೋವಾಗಿದೆ ನಿಜ ಆದರೂ ನನಗೆ ಊಟ ಬಟ್ಟೆ ಯಾವುದಕ್ಕೂ ಕೊರತೆಯಿಲ್ಲ. ನಾನೇಕೆ ಅಮ್ಮ ತಮ್ಮಂದರಿಗೆ ಸಹಾಯ ಮಾಡಬಾರದು?' ಯೋಚಿಸಿದ ಚಂದ್ರ ಊರಿಗೆ ಹಿಂದಿರುಗುತ್ತಿದ್ದ ಅಪ್ಪನಿಗೆ ಓಡಿ ಹೋಗಿ "ನನ್ನಲ್ಲಿ ಹಣವಿಲ್ಲ" ಎಂದು ತನ್ನ ಬಂಗಾರದ ಬಳೆಗಳನ್ನು ಕಳಚಿ ಕೊಟ್ಟಳು.

ಕೊನೆಯ ನಿರ್ಧಾರ

ಸುಂದರಿಯಾಗಿದ್ದ ಲಲಿತ ಗಂಡನಿಂದ ನಡತೆ ಸರಿಯಿಲ್ಲ ಎಂಬ ದೋಷಾರೋಪಣಿಯನ್ನು ಕೇಳಬೇಕಾಯಿತು. ತನ್ನ ತಪ್ಪಿಲ್ಲದೆ ಕ್ಷಮೆಯನ್ನು ಕೇಳಲು ಇಚ್ಛಸದ ಲಲಿತಾ ಗಂಡನ ಮನೆ ತೊರೆದು ಬಂದಳು. ತವರು ಮನೆಯಲ್ಲಿದ್ದು ಎಲ್ಲರ ಪ್ರಶ್ನೆಗಳನ್ನು ಎದುರಿಸುತ್ತಾ ವಿದ್ಯಾಭ್ಯಾಸ ಮುಂದುವರಿಸಿ  ಶಿಕ್ಷಕಿಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದಳು. ಹೀಗೆ ಒಂಟಿಯಾಗಿಯೇ ಇದ್ದ ಇಪ್ಪತ್ತು ವರ್ಷಗಳ ನಂತರ ಒಂದು ದಿನ ಪತಿ ವೆಂಕಟೇಶ ಲಲಿತಳ ಬಳಿ ಬಂದನು. "ಮನೆಗೆ ಬಾ" ಎಂದು ಕರೆದನು. ಮೊದಲು ವಿರೋಧಿಸಿದರಾದರೂ ಲಲಿತ "ಮುಂದೆ ನನ್ನವರು ಎನ್ನುವರು ಯಾರೂ ಇಲ್ಲದಿದ್ದರೆ ಜೀವನ ಕಷ್ಟ" ಯೋಚಿಸಿದ ಲಲಿತ ಸ್ವಲ್ಪ ಮೃದುವಾದಳು. ತನ್ನ ತಪ್ಪು ತಿಳಿದು ತಿದ್ದಿಕೊಂಡು ವಿಶ್ವಾಸ ತೋರಿಸುತ್ತಿರುವರು  ಎಂದು "ನಿಮ್ಮ ಎರಡನೇ ಪತ್ನಿ ಇದಕ್ಕೊಪ್ಪುವಳೇ?" ಕೇಳಿದಳು. "ನನ್ನ ಪತ್ನಿ ತೀರಿಹೋಗಿ ಎರಡು ತಿಂಗಳಾಯಿತು, ಅವಳ ಐದು ಮಕ್ಕಳಲ್ಲಿ ನಿನ್ನ ಬರುವಿಕೆಯನ್ನು ಯಾರೂ ವಿರೋಧಿಸುವುದಿಲ್ಲ" ಎಂದ ಪತಿಯ ಮಾತಿನಿಂದ ಮತ್ತೆ ಕೋಪಗೊಂಡ ಲಲಿತ ಪತಿಗೆ ಹೊರಹೋಗುವಂತೆ ತಿಳಿಸಿದಳು. ಮತ್ತೊಮ್ಮೆ ಯೋಚಿಸು ಎಂದ ಪತಿಯ ಮಾತಿಗೆ "ಇದೇ ನನ್ನ ಕೊನೆಯ ನಿರ್ಧಾರ " ಎಂದು ಬಾಗಿಲನ್ನು ಮುಚ್ಚಿದಳು.

ಹೀಗೆ ತ್ರಿವೇಣಿಯವರು ತಮ್ಮ ಕಥೆಗಳಲ್ಲಿ ಅಂದಿನ ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.

ವಿಜಯಲಕ್ಷ್ಮಿ  ಎಂ ಎಸ್  

ಅನುವಾದಿತ ಕವಿತೆ - ಮೊಳೆಯ ನೇರ ಹೊಡೆಯಿರಿ



(ಅನುವಾದ – Drive the Nail Aright ಎಂಬ ಕವನ)

ಮೊಳೆಯ ನೇರ ಹೊಡೆಯಿರಿ
ತಲೆಯ ಮೇಲೆ ಬಡಿಯಿರಿ
ಕೆಂಪಾದಾಗ ಕಬ್ಬಿಣ
ಜೋರಾಗಿ ಬಡಿಯಿರಿ.

ನಿಮಗೆ ಕೆಲಸವಿದ್ದರೆ
ಸ್ವ ಇಚ್ಛೆಯಿಂದ ಮಾಡಿರಿ
ತುದಿಯನ್ನು ಮುಟ್ಟಲು
ಬೆಟ್ಟವನ್ನು ಹತ್ತಿರಿ.


ಕೆಳಗಡೆಯೇ ನಿಂತು ನೀವು
ಆಕಾಶ ನೋಡಬೇಡಿರಿ
ಹತ್ತುವುದು ಸಾಧ್ಯವೇ
ಕೈಕಟ್ಟಿ ನೀವು ಕುಳಿತರೆ.

ಕೆಳಗೆ ನೀವು ಬಿದ್ದರೂ
ಎದೆಗುಂದದಿರಿ ಮಕ್ಕಳೆ
ಮರಳಿ ಯತ್ನ ಮಾಡಿರಿ
ಗೆಲುವು ಎಂದು ನಿಮ್ಮದೆ.

[ಅನುವಾದ - ಸುಧಾ ಜಿ ]





ವಿಜ್ಞಾನ ಕ್ಷೇತ್ರದ ತಾರೆಗಳು - ಚಾರ್ಲ್ಸ್ ಡಾರ್ವಿನ್




 
ಒಬ್ಬ ಹಿರಿಯ ವಿಜ್ಞಾನಿ ತನ್ನ ಮೇರುಕೃತಿಯ ರಚನೆಯಲ್ಲಿ ತೊಡಗಿದ್ದಾಗ ಇನ್ನೊಬ್ಬ ಹಿರಿಯ ವಿಜ್ಞಾನಿ ಆಲ್ಫ್ರೆಡ್ ರಸೆಲ್ ವಾಲೇಸ್ ಜೀವಿಗಳ ಹುಟ್ಟಿನ ಬಗ್ಗೆ ಸಂಶೋಧನೆ ನಡೆಸಿ ಪ್ರಬಂಧವೊಂದನ್ನು ಸಿದ್ಧಪಡಿಸಿದ್ದರು. ಅದನ್ನು ಈ ಹಿರಿಯ ವಿಜ್ಞಾನಿಗೆ ಕಳಿಸಿ “ಇದು ಸರಿಯಿದೆಯೇ? ಪ್ರಕಟಿಸಲು ಯೋಗ್ಯವಿದೆಯೇ?” ಎಂದು ಕೇಳಿದರು. ಈ ಲೇಖನವನ್ನು ಓದಿದ ಆ ಹಿರಿಯ ವಿಜ್ಞಾನಿ ಆಘಾತಕ್ಕೊಳಗಾದರು. ಏಕೆಂದರೆ ತಾವೂ ಸಹ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಅದೇ ರೀತಿಯ ತೀರ್ಮಾನಕ್ಕೆ ಬಂದಿದ್ದರು. ತಕ್ಷಣವೇ ಅವರಿಗೆ ಸಂದಿಗ್ಧವುಂಟಾಯಿತು. ಈಗ ಏನು ಮಾಡುವುದು? ತಾವೇ ಮೊದಲು ಇದನ್ನೇ ಬರೆದಿದ್ದರೆಂದು ಹೇಳುವುದೊ, ಬಿಡುವುದೊ? ಎಂಬುದು ತಿಳಿಯಲಿಲ್ಲ.
ಆದರೆ ವ್ಯಾಲೇಸ್ ಇವರ ಮೇಲೆ ನಂಬಿಕೆಯಿಟ್ಟು ಕಳಿಸಿದ್ದರು. ದ್ವಂದ್ವದಿಂದ ಹೊರಬಂದ ಹಿರಿಯ ವಿಜ್ಞಾನಿ ತಮ್ಮ ಹಿರಿತನವನ್ನು ಮೆರೆದರು. ತಮ್ಮ ಸಂಶೋಧನೆ ಪಕ್ಕಕ್ಕಿಟ್ಟು ಇದನ್ನು ಪ್ರಕಟಣೆಗೆ ಕಳಿಸಬೇಕೆಂದು ತೀರ್ಮಾನಿಸಿದರು. ತಮ್ಮ 20 ವರ್ಷಗಳ ಸತತ ಶ್ರಮ ಹಾಳಾಗುತ್ತದೆಯೆಂಬುದನ್ನೂ ಸಹ ಅಥವಾ ತಮಗೆ ಸಲ್ಲಬೇಕಾದ ಕೀರ್ತಿ ಇನ್ನೊಬ್ಬರಿಗೆ ಸಲ್ಲುತ್ತದೆ ಎಂದಾಗಲೂ ಸಹ ಧೃತಿಗೆಡದೆ ನಿರ್ಧಾರ ಕೈಗೊಂಡು ಮಾನವೀಯತೆಯನ್ನು ತೋರಿದ ಆ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್.
ಆದರೆ ನಂತರ ವಿಷಯ ತಿಳಿದ ವ್ಯಾಲೇಸ್ ರವರು ಹಿರಿತನದಲ್ಲಿ ತಾವು ಡಾರ್ವಿನ್ ರಿಗಿಂತ ಏನೂ ಕಡಿಮೆಯಿಲ್ಲ ಎಂದು ತೋರಿಸಿದರು. ಇಬ್ಬರು ವಿಜ್ಞಾನಿಗಳ ಹೆಸರಿನಲ್ಲಿಯೂ ಲೇಖನಗಳು ಪ್ರಕಟವಾದವು. ಇದರ ಜೊತೆಗೆ ವ್ಯಾಲೇಸ್ ರವರು, “ ನಾನೂ ಸಹ ಸಂಶೋಧನೆಯಲ್ಲಿ ತೊಡಗಿದ್ದೇನೆ ಆದರೆ ಡಾರ್ವಿನ್ ರವರ ಜೀವಿಗಳ ಉಗಮದಂತಹ ಕೃತಿಯನ್ನು ಬರೆಯಲು ನನಗೆ ಸಾಧ್ಯವಾಗುತ್ತಿರಲಿಲ್ಲ” ಎಂದರು.

ಜೀವವಿಕಾಸವಾದದ ಪಿತಾಮಹರೆನಿಸಿಕೊಂಡಿರುವ ಡಾರ್ವಿನ್ ಜನಿಸಿದ್ದು 1809ರ ಫೆಬ್ರವರಿ 12ರಂದು. ಇಂಗ್ಲೆಂಡಿನ ಶ್ರೂಸ್ ಬರಿ ಎಂಬಲ್ಲಿ. ತಂದೆ ಡಾ. ರಾಬರ್ಟ್ ಡಾರ್ವಿನ್, ತಾಯಿ ಸೂಸಾನಾ. ತಾಯಿ ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡಾಗ ಅವರನ್ನು ನೋಡಿಕೊಂಡಿದ್ದು ಅಕ್ಕ ಕೆರೋಲಿನ್. ಆರಂಭದಲ್ಲಿ ಅವರ ವಿದ್ಯಾಭ್ಯಾಸ ಮನೆಯಲ್ಲಿಯೇ, ಅಕ್ಕನೇ ಶಿಕ್ಷಕಿ. ಚಿಕ್ಕಂದಿನಿಂದಲೂ ಡಾರ್ವಿನ್ ರವರಿಗಿದ್ದ ಹವ್ಯಾಸವೆಂದರೆ ಕಪ್ಪೆಚಿಪ್ಪುಗಳು, ವಿವಿಧ ಖನಿಜಗಳು, ಶಿಲೆಗಳು, ಜೀರುಂಡೆಗಳು ಇತ್ಯಾದಿಗಳ ಸಂಗ್ರಹಣೆ.
ಶಿಕ್ಷಣದಲ್ಲಿ ಅವರಿಗೆ ಹೆಚ್ಚೇನೂ ಆಸಕ್ತಿ ಬೆಳೆಯಲಿಲ್ಲ. ತಂದೆಯ ಆಣತಿಯ ಮೇರೆಗೆ ವೈದ್ಯಕೀಯ ಪದವಿ ಪಡೆಯಲು ಎಡಿನ್ ಬರೊ ವಿದ್ಯಾಲಯಕ್ಕೆ ಸೇರಿದರು.. ಆದರೆ ಆಗಿನ ಚಿಕಿತ್ಸಾಕ್ರಮ ಕ್ರೂರವೆನಿಸುತ್ತಿತ್ತು. ರೋಗಿಗಳ ನೋವು, ಚೀರಾಟ ಇವರಲ್ಲಿ ಭಯ ಹುಟ್ಟಿಸಿತು. ಹಾಗಾಗಿ ಅದರಿಂದ ದೂರವಾದರು. 
ತಂದೆ ಪ್ರೌಢವಿದ್ಯೆ ಕಲಿಯಲು ಕೇಂಬ್ರಿಡ್ಜ್ ಗೆ ಕಳಿಸಿದರು. ವಿದ್ಯಾವಂತನಾದರೆ ಚರ್ಚ್ ಸೇರಿ ಉಪದೇಶಿಯಾಗಬಹುದೆಂಬುದು ತಂದೆಯ ಅಭಿಪ್ರಾಯವಾಗಿತ್ತು. ಆದರೆ ನಡೆದದ್ದೇ ಬೇರೆ. ಸಸ್ಯಶಾಸ್ತ್ರ, ಭೂಶಾಸ್ತ್ರ ಅವರ ಅಧ್ಯಯನದ ವಿಷಯಗಳಾದವು. ಪ್ರೊ. ಹೆನ್ಸ್ಲೊರವರಿಂದ ಆಕರ್ಷಿತರಾದ ಅವರು ಆ ವಿಷಯಗಳನ್ನು ಗಂಭೀರವಾಗಿ ಕಲಿತರು. ಹಂಬೋಲ್ಟ್ ರವರ “ಸ್ವಂತ ಕಥನ”ದಿಂದ ಪ್ರೇರೇಪಿತರಾದರು. ಪ್ರಾಕೃತಿಕ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು, ಸ್ವಲ್ಪವಾದರೂ ಕೊಡುಗೆ ನೀಡಬೇಕು ಎಂಬ ಆಶಯ ಬೆಳೆಸಿಕೊಂಡರು. 

ಬ್ರಿಟಿಷ್ ಸರ್ಕಾರ ದ. ಅಮೇರಿಕಾದ ತೀರಪ್ರದೇಶಗಳಲ್ಲಿನ ಸರ್ವೇ ಮಾಡಲು ನಿರ್ಧರಿಸಿತು. ಹಡಗಿನ ಹೆಸರು ಬೀಗಲ್. ಕ್ಯಾಪ್ಟನ್ - ಫಿಟ್ಸ್ ರಾಯ್. ಇವರಿಗೆ ಸಹಾಯಕನೊಬ್ಬನ ಅಗತ್ಯವಿತ್ತು. ಅವನಿಗೆ ಸಸ್ಯ, ಪ್ರಾಣಿ, ಭೂಶಾಸ್ತ್ರಗಳ ಅರಿವಿರಬೇಕಿತ್ತು. ಪ್ರೊ. ಹೆನ್ಸ್‍ಲೊ ಡಾರ್ವಿನ್‍ಗೆ ಇಷ್ಟವಾಗಬಹುದೆಂದು ಅವರ ಹೆಸರನ್ನು ಪ್ರತಿಪಾದಿಸಿದರು. ಡಾರ್ವಿನ್ ತಕ್ಷಣವೇ ಅಂಗೀಕರಿಸಿದರು. 
ಪ್ರೊ. ಹೆನ್ಸ್‍ಲೊ

ಬೀಗಲ್ ನೌಕಾಯಾತ್ರೆ ಆರಂಭವಾಗಿದ್ದು 1831ರ ನವೆಂಬರ್ 4ರಂದು. ಆಗಿನ್ನೂ ಡಾರ್ವಿನ್‍ರ ವಯಸ್ಸು 22. ಮುಂದೆ 5 ವರ್ಷಗಲಲ್ಲಿ ಅವರು ದ. ಅಮೇರಿಕಾದ ಪಾಟಗೋನಿಯ, ಚಿಲಿ, ಪೆರು, ಬ್ರೆಜಿಲ್, ಅರ್ಜೆಂಟಿನಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾಗಳ ವಿವಿಧ ಪ್ರದೇಶಗಳಿಗೆ, ದ್ವೀಪಗಳಿಗೆ ಭೇಟಿ ಕೊಟ್ಟರು. 
ಹಡಗಿನ ಪ್ರಯಾಣ ಬಹಳ ಕಷ್ಟಕರವಾಗಿತ್ತು. ಒಂದೆಡೆ ಕ್ಯಾಪ್ಟನ್ ಫಿಟ್ಸ್ರಾಯ್ ಒಳ್ಳೆಯವನಾದರೂ ಮುಂಗೋಪಿ, ಹಠದ ಸ್ವಭಾವದವನು. ಇನ್ನೊಂದೆಡೆ ಒರಟಾದ ನಾವಿಕರು. ಎಲ್ಲರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಅಭ್ಯಾಸವಿದ್ದ ಡಾರ್ವಿನ್ ರಿಗೆ ಕ್ಯಾಪ್ಟನ್ ಮತ್ತು ನಾವಿಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ.
ಡಾರ್ವಿನ್ ಗೆ ನೀಡಿದ್ದ ಜಾಗ ಬಹಳ ಚಿಕ್ಕದು. ಹಡಗಿನ ಹೊಯ್ದಾಟದಿಂದ ಡಾರ್ವಿನ್‍ರಿಗೆ ಆಗಾಗ ವಾಂತಿಯಾಗುತ್ತಿತ್ತು. ಇಷ್ಟೆಲ್ಲದರ ಮಧ್ಯೆಯೂ ಡಾರ್ವಿನ್ ಛಲದಿಂದ ತಮ್ಮ ಸಂಗ್ರಹಕಾರ್ಯ, ಬರಹಕಾರ್ಯವನ್ನು ಮುಂದುವರೆಸಿದರು. ಅಷ್ಟು ಸುದೀರ್ಘ ಯಾತ್ರೆಯಲ್ಲಿ ಅವರು ಎಲ್ಲೆಡೆಗಳಿಂದ ಶಿಲೆಗಳನ್ನು, ಸಸ್ಯಗಳನ್ನು, ಹೂಗಳನ್ನು, ವನ್ಯಮೃಗಗಳನ್ನು ವೀಕ್ಷಿಸಿ, ಸಾಧ್ಯವಾದದ್ದನ್ನೆಲ್ಲ ಸಂಗ್ರಹಿಸಿ, ಎಲ್ಲವುಗಳ ಬಗ್ಗೆ ಅಂದಂದೆ ಮಾಹಿತಿಯನ್ನು ಬರೆದಿಟ್ಟರು.
ಪ್ರವಾಸದಲ್ಲಿ ತಾವು ಸಂಗ್ರಹಿಸಿದವನ್ನೆಲ್ಲಾ ತನ್ನ ಗುರು ಪ್ರೊ.  ಹೆನ್ಸ್‍ಲೊರವರಿಗೆ ಕಳಿಸಿಕೊಡುತ್ತಿದರು. ಈ ಯಾತ್ರೆಯಲ್ಲಿಯೇ ಅವರು ಉತ್ತಮ ಭೂವಿಜ್ಞಾನಿಯಾದರು.
ಬ್ರೆಜಿಲ್, ಚಿಲಿ ದಾಟಿ ಗಲಾಪಗೋಸ್ ದ್ವೀಪಸ್ತೋಮಕ್ಕೆ ಬಂದಿಳಿದರು. ಅಲ್ಲಿ ಡಾರ್ವಿನ್‍ರು ಕಂಡ ಆಮೆಗಳು ಬೃಹದಾಕಾರದವಾಗಿದ್ದು ಒಂದೊಂದನ್ನು ಹೊತ್ತು ತರಲು 10 ಜನ ಬೇಕಿತ್ತು. ಈ ದ್ವೀಪಸಮೂಹಗಳಲ್ಲಿ ಅವರು ಕಂಡ ಇನ್ನೊಂದು ಸೋಜಿಗವೆಂದರೆ ಒಂದು ದ್ವೀಪದ ಜೀವಿಗಳು ಮತ್ತು ಇನ್ನೊಂದು ದ್ವೀಪದ ಜೀವಿಗಳಲ್ಲಿದ್ದ ಭಿನ್ನತೆಗಳು.

ಇಂಗ್ಲೆಂಡಿಗೆ ಹಿಂತಿರುಗುವಷ್ಟರಲ್ಲಿ ಪ್ರೊ. ಹೆನ್ಸ್‍ಲೊರವರ ಕಾರಣದಿಂದಾಗಿ ಡಾರ್ವಿನ್‍ರವರ ಟಿಪ್ಪಣಿಗಳು ಪ್ರಕಟವಾಗಿದ್ದು ಅವರು ಪ್ರಖ್ಯಾತರಾಗಿಬಿಟ್ಟರು. ಅವರು ತಮ್ಮೊಂದಿಗೆ 1283 ಪುಟಗಳಷ್ಟು ಮಾಹಿತಿಯನ್ನು ತಂದಿದ್ದರು. ಸಾವಿರಾರು ಸಸ್ಯ, ಪ್ರಾಣಿ ಮಾದರಿಗಳನ್ನು ತಂದಿದ್ದರು. 1529 ಹೊಸ ಜೀವಜಾತಿಗಳ ವಿವರ, 400 ಸುಲಿದು ಒಣಗಿಸಿದ ಪ್ರಾಣಿಗಳ ಚರ್ಮದ  ಮಾದರಿ, ಪ್ರಾಣಿಗಳ ಎಲುಬುಗಳ ಹಂದರಗಳೂ ಸಾಕಷ್ಟಿದ್ದವು.
ಬೀಗಲಿನ ಪ್ರಾಣಿ ವೃತ್ತಾಂತದ ಪುಸ್ತಕ ಪ್ರಕಟಣೆಗೆಂದು ಸರ್ಕಾರದಿಂದ 1000 ಪೌಂಡುಗಳ ಸಹಾಯ ಪಡೆದುಕೊಂಡರು. ಈಗಾಗಳೇ ಭೂವಿಜ್ಞಾನಿಯೆಂದು ಪ್ರಸಿದ್ಧರಾಗಿದ್ದ ಅವರಿಗೆ ಜಿಯಾಲಜಿಕಲ್ ಸೊಸೈಟಿಯ ‘ಫೆಲೊಶಿಪ್ ದೊರೆಯಿತು. 1873ರ ಜುಲೈ ತಿಂಗಳಲ್ಲಿ “ಜೀವಿಗಳ ಪರಿವರ್ತನೆ” ಪುಸ್ತಕ ಬರೆಯಲಾರಂಭಿಸಿದರು. ಅಷ್ಟರಲ್ಲಿ ಅವರಿಗೆ ಜೀವವೈವಿಧ್ಯತೆಗೆ ಕಾರಣ ಏನಿರಬಹುದು ಎಂಬುದರ ಸುಳಿವು ದೊರೆತಿತ್ತು. “ಜೀವಿಗಳ ಬೆಳವಣಿಗೆಯಲ್ಲಿ ದೈವದ ಕೈವಾಡವಿಲ್ಲ, ಬದಲಿಗೆ ಜೀವಿಗಳು ಬೆಳೆಯುತ್ತಾ, ಪರಿಸರಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿವೆ” ಎಂಬುದು ಅವರಿಗೆ ಅರ್ಥವಾಗಿತ್ತು. ಇದನ್ನವರು ಸಾಕ್ಷ್ಯಾಧಾರಗಳ ಸಮೇತ ಮಂಡಿಸಬೇಕಿತ್ತು. 
ಆಂಡಿಸ್ ಪರ್ವತ 
ಈ ಮಧ್ಯೆಯೇ ಅವರಿಗೆ ಯಾವುದೋ ಖಾಯಿಲೆ ಕಾಡತೊಡಗಿತು. ಹೊಟ್ಟೆನೋವು, ತಲೆನೋವು, ವಾಂತಿ, ಆಯಾಸ ಇತ್ಯಾದಿ. ಅವರ ಆರೋಗ್ಯ ಎಷ್ಟು ಕುಸಿಯಿತೆಂದರೆ 13000 ಅಡಿ ಎತ್ತರದ ಆಂಡೀಸ್ ಪರ್ವತವನ್ನು ಹತ್ತಿಬಂದಿದ್ದ ವ್ಯಕ್ತಿ ಅರ್ಧ ಮೈಲಿ ನಡೆದರೆ ಸುಸ್ತಾಗುತ್ತಿದ್ದರು. ಇದರ ನಡುವೆಯೇ ಅವರು ತಮ್ಮ ಗ್ರಂಥವನ್ನು ಬರೆದು ಮುಗಿಸಿದರು.

ಎಮ್ಮಾ
1839ರಲ್ಲಿ ಎಮ್ಮಾರವರು ಡಾರ್ವಿನ್‍ರ ಬಾಳಸಂಗಾತಿಯಾದರು. ಎಮ್ಮಾ ಡಾರ್ವಿನ್ ರ ಕೊನೆಘಳಿಗೆಯವರೆಗೂ ಅವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದೇ ಅಲ್ಲದೇ ಅವರ ಎಲ್ಲಾ ಕಾರ್ಯಗಳಲ್ಲಿ ಬೆಂಬಲವಾಗಿ ನಿಂತರ. ಎಮ್ಮಾ ಇಲ್ಲದಿದ್ದರೆ ತಮ್ಮ ಕೃತಿ ಪೂರ್ಣವಾಗುತ್ತಿತ್ತೊ ಇಲ್ಲವೊ ಎಂದು ಡಾರ್ವಿನ್ ರೇ ಹೇಳಿದ್ದಾರೆ.
ಡಾರ್ವಿನ್ ರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಅಷ್ಟೂ ಕೆಲಸದ ನಡುವೆಯೂ ಅವರು ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಮಕ್ಕಳ ಮೇಲೆ ಅವರು ವಿಜ್ಞಾನ ಕಲಿಯುವಂತೆ ಒತ್ತಡವೇರಲಿಲ್ಲ. ಮಕ್ಕಳಲ್ಲಿ ನಯ, ವಿನಯ, ಶಿಕ್ಷಣದ ಬಗ್ಗೆ ಒಲವನ್ನು ಮಾತ್ರ ಮೂಡಿಸಿದರು. ಸಾಮಾನ್ಯವಾಗಿ ಕೆಲಸದಲ್ಲಿ ಮಗ್ನರಾಗುವ ತಂದೆಯರಿಗೆ ಮಕ್ಕಳ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ, ಅದು ತಾಯಿಯ ಕರ್ತವ್ಯ ಎಂಬುದು ಎಲ್ಲರ ನಂಬಿಕೆ. ಆದರೆ ಡಾರ್ವಿನ್ ರವರು ಆ ಮಾತನ್ನು ಸುಳ್ಳಾಗಿಸಿ ಮಕ್ಕಳ ಬೆಳವಣಿಗೆಯಲ್ಲಿ ತಂದೆತಾಯಿ ಇಬ್ಬರ ಕರ್ತವ್ಯವೂ ಇದೆ ಎಂಬುದನ್ನು ತೋರಿಸಿಕೊಟ್ಟರು. ಅವರ ಮೂವರು ಮಕ್ಕಳು ವಿಜ್ಞಾನಿಗಳಾಗಿದ್ದೇ ಅಲ್ಲದೆ ರಾಯಲ್ ಸೊಸೈಟಿಯ ‘ಫೆಲೊ’ ಎನಿಸಿಕೊಂಡರು.

1859ರಲ್ಲಿ ಜೀವಿಗಳ ಉಗಮ ಪ್ರಕಟವಾಯಿತು. ಒಂದೇ ದಿನದಲ್ಲಿ ಅಚ್ಚು ಹಾಕಿಸಿದ 1250 ಪ್ರತಿಗಳೂ ಸಹ ಮಾರಾಟವಾದವು. ಮತ್ತೆ ಮತ್ತೆ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕ ಮುದ್ರಣವಾಗಿ ಮಾರಾಟವಾಯಿತು. ಅದು ಜರ್ಮನ್, ಪ್ರೆಂಚ್, ರಷ್ಯನ್ ಭಾಷೆಗಳಿಗೂ ಅನುವಾದಗೊಂಡಿತು. ಪುಸ್ತಕದ ಪರಿಣಾಮ ಅಗಾಧವಾಗಿತ್ತು. ಮಾನವನ ಚಿಂತನಾಶಕ್ತಿಗೆ ಹೊಸ ಉತ್ಸಾಹ ಮೂಡಿಸಿತು. ಸಾಮಾಜಿಕ ಚಿಂತನೆಯ ಮೇಲೂ ಪ್ರಭಾವ ಬೀರಿತು. ಪ್ರಚಾರದಲ್ಲಿದ್ದ ಸ್ವರ್ಗ, ನರಕ, ಪಾಪ, ಪುಣ್ಯ, ಪುನರ್ಜನ್ಮ, ಪ್ರಾಯಶ್ಚಿತ್ತ – ಎಲ್ಲಕ್ಕೂ ಕೊಡಲಿ ಪೆಟ್ಟನ್ನು ಹಾಕಿತು. ಪುರೋಹಿತಶಾಹಿಯ ಪ್ರಭಾವ ಕಡಿಮೆಯಾಗತೊಡಗಿತು. 
1863ರಲ್ಲಿ ಡಾರ್ವಿನ್ ರಿಗೆ ರಾಯಲ್ ಸೊಸೈಟಿ ತನ್ನ ಅತಿ ಶ್ರೇಷ್ಟ ಪ್ರಶಸ್ತಿಯಾದ ಕೋಪ್ಲೆ ಪದಕವನ್ನು ನೀಡಿತು. ಅದೇ ಸಮಯದಲ್ಲಿ ಹಲವಾರು ಕಡೇಗಳಿಂದ ತೀವ್ರ ಟೀಕೆಗಳೂ ಬಂದವು. ಡಾರ್ವಿನ್ ರು ಹೊಗಳಿದಾಗ ಉಬ್ಬಲಿಲ್ಲ, ತೆಗಳಿದಾಗ ಕುಗ್ಗಲಿಲ್ಲ. ತೆಗಳಿದವರ ಬಗ್ಗೆ ಕಟುವಾಗಿ ಮಾತನಾಡಲಿಲ್ಲ, ಆದರೆ ಉಪಕಾರ ಮಾಡಿದವರಿಗೆ ಮಾತ್ರ ತುಂಬುಹೃದಯದಿಂದ ಕೃತಜ್ಞತೆಯನ್ನು ಅರ್ಪಿಸಿದರು. 

ಗುಲಾಮಗಿರಿಯನ್ನು ಕಂಡ ಅವರು, “ಮಹಾ ಸತ್ವಶಾಲಿಯಾದ ದೇವರು ಇರುವುದೇ ನಿಜವಾದರೆ ದಿನನಿತ್ಯ ನಡೆಯುತ್ತಿರುವ ಇಂತಹ ಕೋಟಿಗಟ್ಟಲೆ ಅನ್ಯಾಯ ಕಂಡರೂ ಸುಮ್ಮನಿರುವುದೇಕೆ?” ಎಂದು ಪ್ರಶ್ನಿಸಿದರು. ತಮ್ಮ ವೈಜ್ಞಾನಿಕ ಚಿಂತನೆಯ ಕಾರಣದಿಂದಾಗಿ ಅವರು ದೇವರ ಅಸ್ತಿತ್ವದಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದರು. 
ಸಂಶೋಧನೆಯಲ್ಲಿ ತಾಳ್ಮೆ ಅಗತ್ಯವೆಂದು ತಮ್ಮ ದೀರ್ಘ ಕಾಲದ ಕೆಲಸದಿಂದ ತೋರಿಸಿಕೊಟ್ಟಿದ್ದಾರೆ. ಅವಿರತ ಕೆಲಸದ ನಡುವೆಯೂ ಸಾಕಷ್ಟು ಪತ್ರವ್ಯವಹಾರವನ್ನಿಟ್ಟುಕೊಂಡಿದ್ದರು. ಖ್ಯಾತಿ ಬಂದ ಮಾತ್ರಕ್ಕೆ ಎಲ್ಲರೂ ತಮ್ಮ ಮಾತನ್ನು ಒಪ್ಪಲೇ ಬೇಕಿಲ್ಲವೆಂದು ನಂಬುತ್ತಾ ಎಲ್ಲರ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದರು. ಸಾಹಿತ್ಯದ ಬಗ್ಗೆ ಆಸಕ್ತಿಯಿತ್ತು. ಸ್ನೇಹಮೂರ್ತಿಯಾಗಿದ್ದರು. ತಮ್ಮ 70ನೇ ವಯಸ್ಸಿನಲ್ಲಿ ತಾತ ಎರಾಸ್ ಮಸ್ ಡಾರ್ವಿನ್ ರ ಜೀವನಚರಿತ್ರೆ ಬರೆದರು.
1882ಅ ಜನವರಿಯಲ್ಲಿ ಹದಗೆಟ್ಟ ಆರೋಗ್ಯದಿಂದವರು ಚೇತರಿಸಿಕೊಳ್ಳಲೇ ಇಲ್ಲ. ಏಪ್ರಿಲ್ 19ರಂದು ತಮ್ಮ ಕೊನೆಯುಸಿರನ್ನೆಳೆದರು. ಧೀಮಂತ ವ್ಯಕ್ತಿಯೋರ್ವರ ಬಗ್ಗೆ ನಾವು ಓದಿದ ನಂತರ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಅವರಷ್ಟಲ್ಲದಿದ್ದರೂ, ಕನಿಷ್ಟ ಸಾಸಿವೆಕಾಳಿನಷ್ಟಾದರೂ ಸಮಾಜಕ್ಕೆ, ಸುತ್ತಮುತ್ತಲಿನವರಿಗೆ ಒಳ್ಳೆಯದನ್ನು ಮಾಡುವ ಮನೋಭಾವ ನಮ್ಮಲ್ಲಿ ಬೆಳೆಸಿಕೊಳ್ಳುವ ಮೂಲಕ ನಾವು ಆ ಮಹಾನ್ ವಿಜ್ಞಾನಿಗೆ ನಮ್ಮ ನಮನಗಳನ್ನು ಸಲ್ಲಿಸಬಹುದು.   
ಸುಧಾ ಜಿ  

ಅನುವಾದಿತ ಕಥೆ - “ಚಿಕ್ಕವರು ದೊಡ್ಡವರಿಗಿಂತ ವಿವೇಕಿಗಳು” - ಲಿಯೊ ಟಾಲ್‍ಸ್ಟಾಯ್


ಈಸ್ಟರ್‍ನ ಸಮಯವದು. ಕೈದೋಟಗಳಲ್ಲಿನ್ನೂ ಮಂಜು ಸುರಿಯುತಿತ್ತು. ಹಳ್ಳಿಯ ಬೀದಿಯಲ್ಲಿ ನೀರಿನ್ನೂ ಹರಿದುಹೋಗುತ್ತಿತ್ತು. ಬೇರೆ ಬೇರೆ ಮನೆಗಳ ಇಬ್ಬರು ಪುಟ್ಟ ಹುಡುಗಿಯರು ಆ ಚಿಕ್ಕ ದಾರಿಯಲ್ಲಿ ಭೇಟಿಯಾಗುತ್ತಿದ್ದರು. ಎರಡು ಫಾರ್ಮ್‍ಗಳ ನಡುವಿನ ಚಿಕ್ಕ ಹಾದಿಯಲ್ಲಿ, ತೋಟಗಳಿಂದ ಬಂದ ಗಲೀಜು ನೀರು ಅಲ್ಲಿ ಸೇರಿ ಒಂದು ದೊಡ್ಡ ಹೊಂಡವಾಗಿತ್ತು. ಒಬ್ಬ ಹುಡುಗಿ ಬಹಳ ಚಿಕ್ಕವಳು, ಇನ್ನೊಬ್ಬಳು ಅವಳಿಗಿಂತ ಸ್ವಲ್ಪ ದೊಡ್ಡವಳು. ಅವರ ತಾಯಂದಿರು ಅವರಿಬ್ಬರಿಗೂ ಹೊಸ ಬಟ್ಟೆಗಳನ್ನು ತೊಡಿಸಿದ್ದರು. ಚಿಕ್ಕವಳು ನೀಲಿ ಬಣ್ಣದ, ದೊಡ್ಡವಳು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಇಬ್ಬರೂ ತಲೆಯ ಸುತ್ತ  ಕೆಂಪು ಸ್ಕಾರ್ಕ್  ಧರಿಸಿದ್ದರು. ಚರ್ಚಿನಿಂದ ಆಗಷ್ಟೇ ಹೊರಬಂದ ಅವರು ಒಬ್ಬರಿಗೊಬ್ಬರು ತಮ್ಮ ಹೊಸ ಬಟ್ಟೆಯನ್ನು ತೋರಿಸಿಕೊಂಡು, ನಂತರ ಆಟವಾಡಲಾರಂಭಿಸಿದರು. ಕ್ರಮೇಣ ಅವರಿಗೆ ನೀರನ್ನು ಎರಚಾಡುವ ಮನಸ್ಸಾಯಿತು. 

ಚಿಕ್ಕವಳು ಹೊಂಡಕ್ಕೆ ಕಾಲಿಡಬೇಕೆನ್ನುವಷ್ಟರಲ್ಲಿ ದೊಡ್ಡವಳು ಅವಳನ್ನು ತಡೆದಳು. “ಮಾಲಾಶಾ, ಹಾಗೆ ಹೋಗಬೇಡ, ನಿನ್ನ ಅಮ್ಮನಿಗೆ ಕೋಪ ಬರುತ್ತದೆ. ನಾನು ನನ್ನ ಶೂ ಮತ್ತು ಉದ್ದದ ಕಾಲ್ಚೀಲಗಳನ್ನು ತೆಗೆಯುತ್ತೇನೆ, ನೀನೂ ತೆಗೆ”. ಹಾಗೆಯೇ ಮಾಡಿ, ಅವರಿಬ್ಬರೂ ತಮ್ಮ ಸ್ಕರ್ಟ್‍ಗಳನ್ನು ಮೊಳಕಾಲಿನವರೆಗೂ ಮೇಲಕ್ಕೆ ಎತ್ತಿಕೊಂಡು ಹೊಂಡದಲ್ಲಿ ನಡೆಯಲಾರಂಭಿಸಿದರು. 

ನೀರು ಮಾಲಾಶಾಳ ಪಾದಕ್ಕಿಂತ ಮೇಲೆ ಬಂದಾಗ ಅವಳು, “ಅಕುಲ್ಯಾ, ನನಗೆ ಭಯವಾಗುತ್ತಿದೆ, ಇಲ್ಲಿ ಆಳವಿದೆ”, ಎಂದಳು. “ಬಾ ಪರವಾಗಿಲ್ಲ, ಹೆದರಬೇಡ, ನೀರು ಅದಕ್ಕಿಂತ ಹೆಚ್ಚು ಆಳವೇನೂ ಇಲ್ಲ”. ಒಬ್ಬರ ಬಳಿ ಒಬ್ಬರು ಬಂದಾಗ “ಮಾಲಾಶಾ, ಹುಷಾರಾಗಿ ನಡೆ, ಎಗರಿಸಬೇಡ”, ಎಂದಳು ಅಕುಲ್ಯಾ. ಅಷ್ಟರಲ್ಲಿ ಮಾಲಾಶಾಳ ಹೆಜ್ಜೆ ಜೋರಾಗಿ ನೀರನ್ನು ಬಡಿದು ನೀರು ಅಕುಲ್ಯಾಳ ಬಟ್ಟೆಯ ಮೇಲೆ ಎಗರಿತು, ಅವಳ ಕಣ್ಣು, ಮೂಗಿಗೂ ಸಿಡಿಯಿತು. 

ಅಕುಲ್ಯಾ ತನ್ನ ಬಟ್ಟೆಯ ಮೇಲಿನ ಕಲೆಯನ್ನು ಕಂಡು ಕೋಪಗೊಂಡು ಮಾಲಾಶಾಳಿಗೆ ಹೊಡೆಯಲು ಹೋದಳು. ಮಾಲಾಶಾಳಿಗೆ ಹೆದರಿಕೆಯಾಯಿತು. ತಕ್ಷಣವೇ ಅವಳು ನೀರಿನಿಂದ ಹೊರಬಂದು ಮನೆಯತ್ತ ಓಡತೊಡಗಿದಳು. ಆಗಷ್ಟೇ ಅಕುಲ್ಯಾಳ ತಾಯಿ ಅಕಡೆ ಬಂದಳು. ಮಗಳ ಬಟ್ಟೆಯ ಮೇಲಿನ ಕಲೆಗಳನ್ನು ಕಂಡು ಕೋಪದಿಂದ, “ಏ, ಕೆಟ್ಟ ಹುಡುಗಿಯೇ, ಇಲ್ಲೇನು ಮಾಡುತ್ತಿದ್ದೀಯಾ?” ಕೇಳಿದಳು. “ಮಾಲಾಶಾ ಬೇಕಂತಲೇ ಮಾಡಿದಳು,” ಉತ್ತರಿಸಿದಳು ಅವಳು. 

ಇದನ್ನು ಕೇಳಿದ ತಕ್ಷಣ ಅಕುಲ್ಯಾಳ ತಾಯಿ ಮಾಲಾಶಾಳನ್ನು ಹಿಡಿದುಕೊಂಡು ಬೆನ್ನ ಮೇಲೆ ಹೊಡೆದಳು. ಮಾಲಾಶಾ ಇಡೀ ಬೀದಿಗೆ ಕೇಳಿಸುವಂತೆ ಅಳಲಾರಂಭಿಸಿದಳು. ಅವಳ ತಾಯಿ ಹೊರಬಂದು, “ನನ್ನ ಮಗಳನ್ನೇಕೆ ಹೊಡೆಯುತ್ತಿದ್ದೀಯಾ?” ಎಂದು ಜೋರು ಮಾಡಿದಳು. ತಕ್ಷಣವೇ ಅವರಿಬ್ಬರೂ ಜೋರಾಗಿ ಜಗಳವಾಡಲಾರಂಭಿಸಿದರು. ಮನೆಯೊಳಗಿಂದ ಪುರುಷರೂ ಸಹ ಹೊರಬಂದು ಜಗಳದಲ್ಲಿ ಸೇರಿದರು. ಸ್ವಲ್ಪಹೊತ್ತಿನಲ್ಲಿ ಬೀದಿಯಲ್ಲಿ ಜನಜಂಗುಳಿ ಸೇರಿತು. ಎಲ್ಲರೂ ಕಿರುಚುವವರೇ, ಯಾರೂ ಕೇಳುವವರಿರಲಿಲ್ಲ. ಅವರೆಲ್ಲಾ ಜಗಳ ಮುಂದುವರೆಸಿಕೊಂಡು ಹೋದರು.

ಜಗಳ ಹೊಡೆದಾಟದ ಮಟ್ಟಕ್ಕೆ ಹೋಗುವಷ್ಟರಲ್ಲಿ ಅಕುಲ್ಯಾಳ ಅಜ್ಜಿ ಅವರನ್ನು ಸಮಾಧಾನ ಪಡಿಸಲೆತ್ನಿಸಿದರು. “ನೀವು ಸ್ನೇಹಿತರು, ಹೀಗೆ ವರ್ತಿಸುವುದು ಸರಿಯೇ? ಅದೂ ಇಂತಹ ದಿನದಂದು. ಈಸ್ಟರ್ ಸಂತೋಷವಾಗಿರಬೇಕಾದ ಸಮಯ, ಜಗಳವಾಡುವ ಸಮಯವಲ್ಲ.” ಆದರೆ ಯಾರೂ ಅಜ್ಜಿಯ ಮಾತನ್ನು ಕೇಳಲು ಸಿದ್ಧರಿರಲಿಲ್ಲ. 

ಅವರೆಲ್ಲಾ ಹೀಗೆ ಕೂಗಾಡುತ್ತಿರುವಾಗಲೇ ಅಕುಲ್ಯಾ ತನ್ನ ಬಟ್ಟೆಯ ಮೇಲಿನ ಮಣ್ಣನ್ನು ಸ್ವಚ್ಛಗೊಳಿಸಿಕೊಂಡು ಪುನಃ ಆ ಹೊಂಡದ ಬಳಿ ಹೋಗಿದ್ದಳು. ಒಂದು ಚೂಪಾದ ಕಲ್ಲನ್ನೆತ್ತಿಕೊಂಡು ಆ ಹೊಂಡದ ಮುಂದಿನ ನೆಲವನ್ನು ಅಗೆಯತೊಡಗಿದಳು. ಮಾಲಾಶಾ ಅವಳನ್ನು ಸೇರಿಕೊಂಡು ಒಂದು ಸಣ್ಣ ಕಟ್ಟಿಗೆಯಿಂದ ಅಗೆಯಲು ಸಹಾಯ ಮಾಡಿದಳು. ದೊಡ್ಡವರೆಲ್ಲಾ ಜಗಳವಾಡುತ್ತಿದ್ದಂತೆಯೆ ನೀರು ಹರಿದು ಅವರತ್ತ ಬಂದಿತು. ಹುಡುಗಿಯರು ಆ ನೀರನ್ನೇ ಹಿಂಬಾಲಿಸಿಬಂದರು. 

ಮಾಲಾಶಾ ತನ್ನ ಕಡ್ಡಿಯನ್ನು ಅದರೊಳಗೆ ಹಾಕಿದಳು. “ಹಿಡಿದುಕೋ ಮಾಲಾಶಾ, ಹಿಡಿದುಕೋ” ಕೂಗಿದಳು ಅಕುಲ್ಯಾ. ಮಾಲಾಶಾ ಮಾತನಾಡಲಾಗದಷ್ಟು ನಗುತ್ತಿದ್ದಳು. ಕಡ್ಡಿಯು ಆ ನೀರಿನೊಂದಿಗೆ ಹರಿದುಹೋಗುತ್ತಿರುವುದನ್ನು ಕಂಡು ಆ ಹುಡುಗಿಯರಿಗೆ ಖುಷಿಯೋ ಖುಷಿ. ಅವರು ಆ ಗುಂಪಿನತ್ತ ಬಂದರು.
ಅವರನ್ನು ನೋಡಿ ಅಜ್ಜಿಯು, ದೊಡ್ಡವರ ಕಡೆ ತಿರುಗಿ, “ನಿಮಗೆ ನಾಚಿಕೆಯಾಗುವುದಿಲ್ಲವೇ? ಆ ಹುಡುಗಿಯರಿಗಾಗಿ ನೀವು ಜಗಳವಾಡುತ್ತಿದ್ದೀರಿ, ಆದರೆ ಅವರೇ ಅದನ್ನೆಲ್ಲಾ ಮರೆತು ಸಂತೋಷವಾಗಿ ಒಟ್ಟಿಗೆ ಆಟವಾಡುತ್ತಿದ್ದಾರೆ. ಪ್ರೀತಿಯ ಪುಟ್ಟ ಮಕ್ಕಳು, ಅವರು ನಿಮಗಿಂತ ವಿವೇಕಿಗಳು!” ಆ ದೊಡ್ಡವರೆಲ್ಲಾ ಆ ಮಕ್ಕಳನ್ನು ನೋಡಿ ನಾಚಿಕೆಪಟ್ಟರು. ತಮ್ಮ ಮೂರ್ಖತನಕ್ಕೆ ತಾವೇ ನಗುತ್ತಾ ಮನೆಯೊಳಗೆ ಹೋದರು.

[ಮೂಲ ಕಥೆ - ಲಿಯೊ ಟಾಲ್‍ಸ್ಟಾಯ್ 
ಅನುವಾದ - ಸುಧಾ ಜಿ ]

ಪ್ರೊ. ವಿಜಯಾ ದಬ್ಬೆಯವರಿಗೆ ನಮನಗಳು


23/02/2018 ರಂದು ನಮ್ಮನ್ನಗಲಿದ 
ಕರ್ನಾಟಕದ  ಮಹಿಳಾ ಹೋರಾಟಗಾರ್ತಿ, ಸ್ತ್ರೀವಾದಿ ಲೇಖಕಿ,  
ಪ್ರಗತಿಪರ ಚಿಂತಕಿ, ಖ್ಯಾತ ಸಾಹಿತಿ, 
ನೂರಾರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕನ್ನಡ ಪ್ರೊಫೆಸರ್ ಆದ 
ಡಾ. ವಿಜಯಾ ದಬ್ಬೆಯವರಿಗೆ ಗೌರವಪೂರ್ವಕ ನಮನಗಳು 



[ಇದು ಅವರ ಪ್ರಸಿದ್ಧ ಕವನ. 
ಮಹಿಳಾ ಹೋರಾಟಗಳಲ್ಲಿ, ಸಭೆಗಳಲ್ಲಿ, ಕಾಲೇಜುಗಳಲ್ಲಿ, ಕಾರ್ಯಾಗಾರಗಳಲ್ಲಿ,
ಸಾವಿರಾರು ಬಾರಿ ಹಾಡಲ್ಪಟ್ಟ 
ಈ ಕವನದಲ್ಲಿರುವಂತೆ ನಾವು ಬದುಕಲಾದರೆ 
ಅದು ನಾವು ಅವರಿಗಾಗಿ ನೀಡಬಹುದಾದ 
ನಿಜವಾದ ನಮನ]

ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ 
ಜೀವ ಕೊಡುವ ಜೀವವಿದು ಕಡಿಮೆ ಯಾರಿಗೆ ? 
ಕಡಿಮೆ ಯಾರಿಗೆ     ।।ತೂರಬೇಡಿ ಗಾಳಿಗೆ।।

ನಾಚಬೇಡಿ ಹೆಣ್ತನಕೆ 
ತಲೆ ಎತ್ತಿ ನಿಲ್ಲಿರಿ 
ನಾಚಬೇಕು ತುಳಿದವರು 
ಮನುಜಾತಿಗೆ ಸೇರಿದವರು  ।।ತೂರಬೇಡಿ ಗಾಳಿಗೆ।।

ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು 
ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ವ 
ಬೆಳಕಿಗೊಮ್ಮೆ ಈಚೆ ಬಾ ಕಂಡೀತು ಜೀವನ 
 ಕಂಡೀತು ಜೀವನ    ।।ತೂರಬೇಡಿ ಗಾಳಿಗೆ।।

ನಾನು ನೀನು ಅವಳು ಇವಳು 
ಹೆಣ್ಣಾಗಿ ನೊಂದವರು 
ಕೈಗೆ ಕೈ ಜೋಡಿಸೋಣ
ಹೊಸ ಜಗತ್ತು ನಮ್ಮದು  (೩)  ।।ತೂರಬೇಡಿ ಗಾಳಿಗೆ।।

  - ಪ್ರೊ. ವಿಜಯ ದಬ್ಬೆ 

ಕಥೆ - ವಾತ್ಸಲ್ಯದ ಕರೆ




“ಪಾಪಾ, ಪಾಪಾ.”
ಆ ಕರೆಯನ್ನು ಕೇಳಿ ಪುಸ್ತಕದಿಂದ ತಲೆ ಎತ್ತಿ ನೋಡಿದೆ. ದಿನಾ ಮನೆಯಿಂದ ಕೆಲಸಕ್ಕೆ ಹೋಗಲು ಒಂದು ಘಂಟೆ ಬಸ್ ಪ್ರಯಾಣ. ದಾರಿ ಸವೆಸುವುದಾದರೂ ಹೇಗೆ? ಪುಸ್ತಕ ಹಿಡಿದು ಕುಳಿತಿರುತ್ತಿದ್ದೆ. 
ಅದೊಂದು ದಿನ ಹಾಗೆಯೇ ಪುಸ್ತಕ ಓದುತ್ತಿರುವಾಗ, “ಪಾಪಾ, ಪಾಪಾ, ಬಾ”ದನಿ ಕೇಳಿಸಿತು. ಅಷ್ಟು ಆತ್ಮೀಯತೆಯ ಕರೆಯನ್ನು ನಾನೆಂದೂ ಕೇಳಿಸಿಕೊಂಡಿರಲಿಲ್ಲ. ಬಹುಶಃ ಸಿನಿಮಾದಲ್ಲಿ ನೋಡಿದ್ದೆನೇನೋ. 
ಆ ದನಿ ಕೇಳಿದ ತಕ್ಷಣ ತಲೆ ಎತ್ತಿ ನೋಡಿದೆ. 7-8 ವರ್ಷದ ಹುಡುಗನೊಬ್ಬ ತನ್ನ 3-4 ವರ್ಷದ ತಂಗಿಯನ್ನು ಬಸ್ಸಿನಿಂದ ಇಳಿಸಿಕೊಳ್ಳುತ್ತಿದ್ದ. ಮರುದಿನ ಸಹ ಅದೇ ಕರೆ. ಅದೇ ಹುಡುಗ. ತನ್ನ ವಯಸ್ಸಿಗೆ ದೊಡ್ಡವನೇ ಎಂಬಂತೆ ಕಾಣುತ್ತಿದ್ದ. ಶರ್ಟು ನಿಕ್ಕರ್ ತಂಬಾ ಎಣ್ಣೆಯ ಕರೆ. ಆತ ಯಾವುದೋ ಮೆಕಾನಿಕ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದನೇನೋ ಎಂಬಂತಿತ್ತು. ಮುಖದ ಮೇಲೆ ಅಮಾಯಕತೆ. ತಂಗಿಯ ಬಗ್ಗೆ ಕಾಳಜಿ ವಹಿಸಿ ಅವಳ ಕೈಹಿಡಿದು ಕೂತಿದ್ದ.
ಮರುದಿನ ಅದೇ ಕರೆಗಾಗಿ ಕಾಯುತ್ತಿದ್ದೆನೇನೋ ಎಂಬಂತೆ ಪುಸ್ತಕ ಹಿಡಿದು ಕೂತಿರಲಿಲ್ಲ. ಆದರೆ ಆ ಹುಡುಗ ಒಬ್ಬನೇ ಬಸ್ ಹತ್ತಿದ. ಹರಿದ ಮಾಸಿದ ಅಂಗಿಯನ್ನು ಹಾಕಿದ್ದರೂ ಮುಖದ ಮೇಲೆ ಒಂದು ರೀತಿಯ ಠೀವಿ ಇತ್ತು. 
ನನ್ನ ಪಕ್ಕದಲ್ಲಿನ ಸೀಟು ಖಾಲಿಯಿದ್ದುದ್ದರಿಂದ ನಾನೇ ಅವನನ್ನು ಬಂದು ಕುಳಿತುಕೊಳ್ಳಲು ಹೇಳಿದೆ. ಸಂಕೋಚದಿಂದಲೇ ಬಂದು ಕುಳಿತ. ನಾನೇ ಮಾತನಾಡಲು ಆರಂಭಿಸಿದೆ. ತಿಳಿದ ವಿಷಯವಿಷ್ಟು. ಆತನ ಹೆಸರು ರಾಜು. ಆತನ ತಂಗಿ ಸೀತಾ. ತಂದೆ ಕುಡಿದು ಕುಡಿದು ಸತ್ತಿದ್ದ. ತಾಯಿ ಅಲ್ಲಿ ಇಲ್ಲಿ ಕೆಲಸ ಮಾಡಿ ಅಲ್ಪಸ್ವಲ್ಪ ಸಂಪಾದಿಸುತ್ತಾಳೆ. ಇವನೂ ಮೂರನೆಯ ತರಗತಿಯವರೆಗೂ ಓದಿದ್ದಾನೆ. ಈಗ ಇವನೂ ಸಂಪಾದಿಸಲು ಹೋಗುತ್ತಿದ್ದಾನೆ. ಆದರೆ ತನ್ನ ತಂಗಿಯನ್ನು ಮಾತ್ರ ಚೆನ್ನಾಗಿ ಓದಿಸುತ್ತೇನೆ ಎಂದ. ನಮ್ಮ ಮನೆಯ ಹತ್ತಿರವೇ ಅವರ ಮನೆ. ತನ್ನ ಸ್ಟಾಪ್ ಬಂದಾಗ “ಬರ್ತೀನಿ ಮೇಡಮ್”ಎಂದವನೇ ಓಡಿದ.
ಹೀಗೆ ನಮ್ಮ ಪರಿಚಯ ಒಂದು ರೀತಿಯ ಸ್ನೇಹವಾಯಿತು. ಮೇಡಮ್ ಎನ್ನುತ್ತಿದ್ದವ ಅಕ್ಕ ಎನ್ನಲಾರಂಭಿಸಿದ. 
ಬಿಟಿಎಸ್ ಪ್ರಯಾಣದಿಂದ ಬೇಸತ್ತು ಹೊಸ ಲೂನಾ ತೆಗೆದುಕೊಂಡೆ. ಬಸ್ ಪ್ರಯಾಣ ನಿಂತುಹೋಯಿತು. ಆದರೆ ರಾಜು ಮಾತ್ರ ಆಗಾಗ ನೆನಪಿಗೆ ಬರುತ್ತಿದ್ದ.
ಒಂದು ದಿನ ಲೂನಾ ಕೈಕೊಟ್ಟಿತು. ‘ಏನು ಮಾಡೋದು’ ಎಂದು ಯೋಚಿಸುತ್ತಿದ್ದಾಗಲೇ ರಾಜು ನೆನಪು ಬಂದಿತು. ಆತನ ಬೀದಿಗೆ ಹೋಗಿ ಅಲ್ಲಿ ಕೇಳಿದಾಗ ಒಂದು ಗುಡಿಸಿಲನ್ನು ತೋರಿಸಿದರು. 
“ರಾಜು”ಕರೆದೆ. “ಬಂದೆ” ಎನ್ನುತ್ತಾ ಅವನು ತಿನ್ನುತ್ತಿದ್ದ ರೊಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಹೊರಬಂದ. 
ಅವನ ಹಿಂದೆ ಅವನ ತಂಗಿ. “ಏನಕ್ಕಾ ನೀವಿಲ್ಲಿ?” ಆಶ್ಚರ್ಯಚಕಿತನಾದ. ವಿಷಯವನ್ನು ಕೇಳಿ ಮನೆಗೆ ಬಂದು ಹತ್ತೇ ನಿಮಿಷದಲ್ಲಿ ಲೂನಾ ರಿಪೇರಿ ಮಾಡಿದ. ಅದಾದ ನಂತರ ಲೂನಾ ಸರ್ವೀಸ್, ರಿಪೇರಿ ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಿದ್ದ.
ಮತ್ತೆ ರಾಜು ಜೊತೆ ಭಾಂದವ್ಯ ಬೆಳೆಯಿತು. ಆ ಅಣ್ಣ ತಂಗಿಯರ ಸಂಬಂಧ ಕಂಡಾಗ ನಿಜಕ್ಕೂ ಸಂತಸವಾಗುತಿತ್ತು. ಎಷ್ಟೋ ಬಾರಿ ನನಗೆ ಅಂತಹ ಅಣ್ಣನಿಲ್ಲವೇ ಎನಿಸುತಿತ್ತು. “ಏನೇ ಬೇಕಾದರೂ ಬಾ” ಎಂದು ನಾನು ಹೇಳಿದ್ದರೂ ಆತ ಎಂದೂ ನನ್ನನ್ನು ಏನೂ ಕೇಳಿರಲಿಲ್ಲ. ಬಹಳ ಆತ್ಮಗೌರವವಿದ್ದ ಹುಡುಗ.
ಸ್ವಲ್ಪ ದಿನ ರಾಜು ಕಾಣಿಸಲಿಲ್ಲ. ನಾನು ನನ್ನ ಕೆಲಸದ ಗಡಿಬಿಡಿಯಲ್ಲಿ ಅವನಿಗೆ ಹೇಳಿಕಳಿಸಲಿಲ್ಲ. 2-3 ದಿನಗಳು ಕೆಲಸದ ಕಾರಣ ಹೊರ ಊರಿಗೆ ಹೋಗಬೇಕಾಗಿ ಬಂತು. 
ಬಂದ ತಕ್ಷಣ ಪಕ್ಕದ ಮನೆಯವರು ರಾಜು 2-3 ಸಾರಿ ಬಂದಿದ್ದನೆಂದು ಹೇಳಿದರು. ಬೀಗದ ಕೈ ಅಮ್ಮನಿಗೆ ಕೊಟ್ಟು ಅವರ ಮನೆಗೆ ಹೋದೆ. 
“ರಾಜು” ಎಂದು ಕೂಗಿಕೊಂಡೇ ಅವರ ಮನೆಯೊಳಗೆ ಹೋದೆ. ರಾಜುವನ್ನು ಗುರುತಿಸಲಾಗಲಿಲ್ಲ. ವರ್ಷಾನುಗಟ್ಟಲೆ ರೋಗದಿಂದ ನರಳುತ್ತಿದ್ದಾನೇನೋ ಎಂಬಂತಿತ್ತು ಅವನ ಮುಖ. ನನ್ನ ನೋಡಿದ ತಕ್ಷಣ ತಲೆ ಬಗ್ಗಿಸಿ ಅಳಲಾರಂಭಿಸಿದ. ನನಗೆ ಗಾಬರಿಯಾಯಿತು. 
‘ಏನಾಯಿತು’ ಎಂದು ಕೇಳಿದರೆ ಉತ್ತರಿಸದೆ ತಾಯಿ ಮಗ ಇಬ್ಬರೂ ಜೋರಾಗಿ ಅಳಲಾರಂಭಿಸಿದರು. ಅಲ್ಲಿಗೆ ಬಂದ ಪಕ್ಕದ ಮನೆಯಾಕೆ ಹೇಳಿದ್ದನ್ನು ಕೇಳಿ ಶಾಕ್‍ಗೆ ಒಳಗಾದೆ. ತಂಗಿಗೆ ಕಾಲರಾ ಆಗಿತ್ತಂತೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಇರಲಿಲ್ಲವಂತೆ ಹೊರಗಡೆ ಔಷಧಿ ಕೊಡಿಸಲು ಅವನ ಹತ್ತಿರ ಕಾಸಿರಲಿಲ್ಲವಂತೆ. ಎಲ್ಲೆಲ್ಲೂ ಯಾರ್ಯಾರನ್ನೊ ಕೇಳಿದನಂತೆ. ಅದಕ್ಕೆಂದೇ ಎಂದೂ ನನ್ನನ್ನು ಏನು ಕೇಳಿರದ ರಾಜು ಮನೆಯ ಹತ್ತಿರ ಬಂದಿದ್ದಂತೆ. ಆದರೆ ಕೊನೆಗೆ ಏನೂ ಮಾಡಲಾಗದೆ ಆ ಮಗು ಕಣ್ಣುಮುಚ್ಚಿತ್ತು.
‘ಅಯ್ಯೊ, ಈಗಲೇ ನಾನು ಊರು ಬಿಟ್ಟು ಹೋಗಬೇಕಿತ್ತೇ?’ ನನ್ನನ್ನು ನಾನೇ ಹಳಿದುಕೊಂಡೆ. 
ರಾಜುವಿಗೆ ಏನೆಂದು ಸಮಾಧಾನ ಮಾಡಲಿ? ನಗುವೇ ತುಂಬಿರುತ್ತಿದ್ದ ಆ ಎಳೆಯ ಕಂದನ ಮುಖವನ್ನು ಬಾಡುವಂತೆ ಮಾಡಿದ ಈ ಸಮಾಜಕ್ಕೆ ಆತನ ‘ಪಾಪಾ’ ಎಂಬ ವಾತ್ಸಲ್ಯದ ಕರೆಯ ಬೆಲೆ ಗೊತ್ತಾದೀತೇ? ಆ ಆಕ್ರಂದನದ ಹಿಂದಿನ ಗಾಢವಾದ ನೋವಿನ ಅರಿವಾದೀತೇ? 
ರಾಜು ಹತ್ತಿರ ಬಂದು ನನ್ನ ಕೈಹಿಡಿದು ಅಳಲಾರಂಭಿಸಿದ. ಅವನಿಗೆ ಏನೆಂದು ಸಮಾಧಾನ ಮಾಡಲಿ? ಕೇವಲ ಕೆಲವೇ ರೂಪಾಯಿಗಳ ಮದ್ದನ್ನು ಕೊಡದ ಸರ್ಕಾರದ ವಿರುದ್ಧ ಸಿಡಿದೇಳೆಂದೋ ಅಥವಾ ಇದು ನಿನ್ನ ಹಣೆಬರಹವೆಂದು ಸಹಿಸಿಬಿಡೆಂದೋ? ಅರಳವು ಮುನ್ನವೇ ಮೊಗ್ಗುಗಳನ್ನು ಬಾಡಿಸುತ್ತಿರುವ ಈ ಸಮಾಜಕ್ಕೆ ಆತನ ಕರೆ ಮುಟ್ಟದೇ ಹೋಗುತ್ತದೆಯೇ? ಆತನ ಶಾಪ ದಹಿಸದೇ ಹೋಗುತ್ತದೆಯೇ????
- ಸುಧಾ ಜಿ 

ಪುಸ್ತಕ ಪ್ರೀತಿ - ನಿರಕ್ಷರಿಯ ಆತ್ಮಕಥೆ






ಅವಿದ್ಯಾವಂತೆಯಾಗಿದ್ದರೂ ವಿವಾಹಾನಂತರ ಅಕ್ಷರ ಕಲಿತು ಬೇಬಿ ಹಾಲ್ದಾರ್ ರವರ ಆತ್ಮಕಥೆ ಆಲೋ-ಅಂಧೇರೆ (ಬೆಳಕು ಕತ್ತಲೆ) ಯನ್ನು ಓದಿ ತಮ್ಮ ಆತ್ಮಕಥೆಯನ್ನು ಹೆಸರು ಬದಲಾಯಿಸಿ ಬರೆದ ಸುಶೀಲ್ ರಾಯ್ ರವರ "ನಿರಕ್ಷರಿಯ ಆತ್ಮಕಥೆ" (ಏಕ್ ಅನ್ ಪಡ್ ಕೀ ಕಹಾನಿ) ಯನ್ನು ನಿಮ್ಮ ಮುಂದಿಡುವ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.

ಒಬ್ಬ ಅಣ್ಣ ಮತ್ತು ಇಬ್ಬರು ತಮ್ಮಂದಿರ ನಡುವೆ ಹುಟ್ಟಿದ ಊರ್ಮಿಳಾ ನೋಡಲು ಕಪ್ಪಾಗಿದ್ದಳು. ತಂದೆ ಓದು ಬರಹ ಬಲ್ಲವರಾಗಿದ್ದರೂ ಮಗಳನ್ನು ಓದಿಸದೆ ಮದುವೆ ಮಾಡಬೇಕೆಂದು ಯೋಚಿಸುತ್ತಿದ್ದರು. ಬಹುಶಃ  ಊರ್ಮಿಳಾಳ ಬಣ್ಣ ಇದಕೆ ಕಾರಣವೇನೋ.! ಹುಡುಗ ಇವಳನ್ನು ನೋಡದೆ ಹಿರಿಯರು ನಿಶ್ಚಯಿಸಿದ ಮದುವೆಗೆ ಒಪ್ಪಿಗೆಯನ್ನಿತ್ತ ಅವಿನಾಶ್. ಮದುವೆಯಂದು ಹುಡುಗಿಯನ್ನು ನೋಡಿ ನನಗೆ ತಕ್ಕವಳಲ್ಲ ಎಂದು ನೊಂದುಕೊಂಡನು. ಆದರೆ ಮದುವೆಯನ್ನು ನಿಲ್ಲಿಸಲಿಲ್ಲ. ಅಂದು ಆ ಮದುವೆಯೇನಾದರೂ ನಡೆಯದಿದ್ದರೆ ಇಂದು ಈ ಕಥೆ ನಮ್ಮ ಮುಂದೆ ಇರುತ್ತಿರಲಿಲ್ಲ.
ಮದುವೆಯಾಗಿ ಗಂಡನ ಮನೆಗೆ ಹೊರಟ ಊರ್ಮಿಳಾಳಿಗೆ ಮನದಲ್ಲಿ ತಳಮಳ ಪ್ರಾರಂಭವಾಯಿತು. ಇಷ್ಟವಿಲ್ಲದಿದ್ದರೂ ಮದುವೆಯಿಂದ ಗಂಡ ಮುಂದೆ ಹೇಗೋ? ಏನೋ? ಎನ್ನು ವಿಚಾರ ಮನದಲ್ಲಿ ತುಂಬಿತ್ತು. ತನ್ನ ಮನೆಗೆ ಬಂದ ಅವಿನಾಶ್ ಅಜ್ಜ, ಅಪ್ಪನ ಮೇಲೆ ಕೂಗಾಡಿದನು. "ವರದಕ್ಷಿಣೆಯಾಗಿ ಕೊಟ್ಟಿರುವ ವಸ್ತುಗಳನ್ನು ನಾನೇ ತಂದು ಕೊಡುತ್ತಿದ್ದೆ, ನಿಮ್ಮಿಂದ ನನ್ನ ಜೀವಮಾನೇ ಹಾಳಾಯಿತು, ಇಂತಹ ಹುಡುಗಿಯ ಜೊತೆ ಮದುವೆ ಮಾಡಿದ್ದೀರಾ ಮುಂದೇನಾಗುವುದೋ ನಿಮಗೆ ಬಿಟ್ಟಿದ್ದೀನಿ" ಎಂದು ಕೂಗಾಡಿದನು.
ಅಳುತ್ತಿದ್ದ ತಂಗಿಯನ್ನು ಅಣ್ಣ ಸಮಾಧಾನ ಮಾಡಿದನು. ಗಂಡನ ಮನೆಯಿಂದ ಬಂದ ಊರ್ಮಿಳಾ ತಾಯಿಯನ್ನು "ಯಾಕವ್ವಾ ಸುಂದರವಾದ ಹುಡುಗಿಯನ್ನಾಗಿ ನನ್ನನ್ನು ಹಡೆಯಲಿಲ್ಲಾ, ಈಗ ನೋಡು ಕುರೂಪಿ ಹುಡುಗಿಗೆ ಜನ್ಮ ಕೊಟ್ಟ ತಾಯಿ ಎಂಬ ಮಾತನ್ನು ನೀನು ಕೇಳಬೇಕಾಗಿದೆ, ಬದಲಾಗಿ ನಾನು ಹುಟ್ಟಿದ ಕೂಡಲೇ ನನ್ನನ್ನು ಯಾಕೆ ಸಾಯಿಸಲಿಲ್ಲ ಎಂದು ಕೇಳಿದಳು. "ನಿನ್ನನ್ನು ಎಷ್ಟು ಕಷ್ಟಪಟ್ಟು ಹಡೆದಿದ್ದೀನಿ ಅಂತ ನಿನ್ಗೆ ಗೊತ್ತಾ, ಈಗ ನನ್ನನ್ನು ಯಾಕೆ ಸಾಯಿಸಲಿಲ್ಲ ಎನ್ನುತ್ತಿರುವೆಯಲ್ಲಾ" ಎಂದು ಮಗಳನ್ನು ಕೇಳಿದಳು.
ಹೀಗೆ ತಾಯಿಯ ಮನೆಯಲ್ಲಿ ಕಾಲ ಕಳೆಯುತ್ತಿರಲು ಅವಿನಾಶ್ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮುಂದೆ ಓದುವುದಿಲ್ಲವೆಂದು ದೆಹಲಿಗೆ ಓಡಿ ಹೋಗಿರುವ ವಿಷಯ ಊರ್ಮಿಳಾಗೆ ತಿಳಿಯಿತು. ಅಲ್ಲದೆ ಗೌನ ( ಮದುವೆಯಾದ ಹುಡುಗಿ ಋತುಮತಿಯಾದ ನಂತರ ವಿಧಿಪೂರ್ವಕವಾಗಿ ಗಂಡನ ಮನೆಗೆ ಕರೆದು ಕೊಂಡು ಬರುವುದು) ಮಾಡಿಕೊಳ್ಳಲು ಒಪ್ಪದಿರುವ ಗಂಡ, ಮುಂದೆ ಏನೂ ತೋಚದೆ ಅಳುತ್ತಿದ್ದಳು ಊರ್ಮಿಳಾ.
ಐದು ವರ್ಷಗಳ ನಂತರ ಗೌನ ಮಾಡಿಕೊಳ್ಳಲು ಒಪ್ಪಿ ಊರ್ಮಿಳಾಳನ್ನು ಮನೆಗೆ ಕರೆದುಕೊಂಡು ಬಂದರು. ಎಲ್ಲರೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಗಂಡ ಕಲ್ಕತ್ತಾದಲ್ಲಿ ಅವಿನಾಶ್ ರಮೇಶ್ ಬಾಬು ಎಂಬುವವರ ಬಳಿ  ಕೆಲಸ ಮಾಡುತ್ತಿದ್ದು ವರ್ಷಕ್ಕೊಮ್ಮೆ ಬಂದು ಹೋಗುತ್ತಿದ್ದರೂ ಮಡದಿಯೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಎಲ್ಲರೂ ಅವಳನ್ನು ಮಕ್ಕಲಾಗಲಿಲ್ಲವೆಂದು ಕೇಳತೊಡಗಿದರು. ಜೊತೆಗೆ ಗಂಡನು  ಸಹ ಅವಳಿಗೆ ತಾನು ಎರಡನೇ ಮದುವೆಯಾಗುತ್ತೇನೆ "ನಿನಗೆ ಹತ್ತು ಸಾವಿರ ರೂಗಳು ಜೊತೆಗೆ ನನ್ನ ಜಮೀನನ್ನು ಕೊಡುತ್ತೇನೆ ನೀನು ಇನ್ನೊಂದು ಮದುವೆಯಾಗು" ಎನ್ನುತ್ತಿದ್ದನು. ಗಂಡನ ಈ ಮಾತನ್ನು ಒಪ್ಪದ ಊರ್ಮಿಳಾ "ನೀವು ಮದುವೆಯಾಗಿ, ನಾನು ನಿಮ್ಮ ಮನೆಕೆಲಸದವಳಾಗಿ ಇರುತ್ತೇನೆ" ಎಂದಳು. 
ಅವಿನಾಶ್ ಗೆ ರಮೇಶ್ ಬಾಬು ಬುದ್ಧಿ ಹೇಳಿ, "ಎರಡನೇ ಮದುವೆ ಏಕೆ?, ನಿನ್ನ ಹೆಂಡತಿಯಲ್ಲಿ ಯಾವ ದೋಷವಿದೆ? ಆಕೆಗೆ ಮಗುವಾಗುವುದೇ ಇಲ್ಲವೇ?  ಇಲ್ಲಿಗೆ ಕರೆದುಕೊಂಡು ಬಂದು ಡಾಕ್ಟರಿಗೆ ತೋರಿಸು" ಎಂದರು.
ಹಾಗೆಯೇ ಊರ್ಮಿಳಾಗೆ ಪತ್ರ ಬರೆದು ಅವಳಿಗೆ ಧೈರ್ಯ ತುಂಬಿದರು. ಆದರೆ ಓದು ಬರಹ ಬಾರದ ಊರ್ಮಿಳಾ ಪತ್ರವನ್ನು ಬೇರೆಯವರಿಂದ ಓದಿಸಬೇಕಾಗಿತ್ತು. ನಂತರ ಬಾಬುರವರು ಊರ್ಮೀಳಾಗೆ "ನೀನೇಕೆ ಓದು ಬರಹ ಕಲಿಯಬಾರದು?  ಕಲಿತರೆ ನೀನೇ ಪತ್ರ ಬರೆಯಬಹುದು" ಎಂದು ಓದುವಂತೆ ಪ್ರೋತ್ಸಾಹಿಸಿದರು.
ಧೈರ್ಯಗೊಂಡ ಊರ್ಮಿಳಾ ಪಕ್ಕದ ಮನೆಯ ಹುಡುಗನಿಗೆ ಇಪ್ಪತ್ತು ರೂಗಳನ್ನು ನೀಡಿ ಅಕ್ಷರ ಕಲಿಯಲು ಪ್ರಾರಂಭಿಸಿದಳು. ಜೊತೆಗೆ ತಮ್ಮನು ಸಹ ಹೇಳಿ ಕೊಡುತ್ತಿದ್ದನು.
ಈ ನಡುವೆ ಊರ್ಮಿಳಾ ಗರ್ಭಿಣಿಯಾದಳು. ಆದರೂ ಓದುವುದನ್ನು ನಿಲ್ಲಿಸದೆ ನಿಧಾನವಾಗಿ ಕಲಿಯುತ್ತಿದ್ದಳು. ನಂತರ ಮಗುವಾದ ಮೇಲೂ ತನ್ನೆಲ್ಲಾ ಕೆಲಸಗಳ ನಡುವೆಯೂ ತನ್ನ ಅಭ್ಯಾಸವನ್ನು ನಿಲ್ಲಿಸದೆ ಮುಂದುವರಿಸಿದ್ದಳು. ಹೀಗೆಯೇ ಓದಿ ಬಾಲಭಾರತಿ ಪುಸ್ತಕವನ್ನು ಓದಲು ಕಲಿತಳು. ಬಾಬುರವರಿಗೆ ತಾನೇ ಸ್ವತಃ ಕಾಗದ ಬರೆಯಲು ಪ್ರಾರಂಭಿಸಿದಳು. ಇದರಿಂದ ಗಂಡ ಅವಿನಾಶ್ ಮತ್ತು ಬಾಬು ಇಬ್ಬರೂ ಸಂತಸ ಪಟ್ಟರು. ಮಗನನ್ನು ಓದಿಸುವ ಸಲುವಾಗಿ ಅವಿನಾಶ್ ತನ್ನ ಬಳಿ ಇರಿಸಿಕೊಂಡನು. ಎರಡನೇ ಮಗುವಿಗೆ ತಾಯಿಯಾಗಿ ಮೂರು ವರ್ಷದ ನಂತರ ಊರ್ಮಿಳಾ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಕಲ್ಕತ್ತಾಕ್ಕೆ ಬಂದಳು.
ಓದು ಬರಹ ಬಾರದ ಊರ್ಮಿಳಾ ಹಳ್ಳಿಯಲ್ಲಿ ಒಂದು ರೀತಿ ಕಷ್ಟ ಪಟ್ಟರೆ ಕಲ್ಕತ್ತಾಕ್ಕೆ ಬಂದು ಮತ್ತೊಂದು ರೀತಿಯ ಕಷ್ಟಕ್ಕೆ ಸಿಲುಕಿದಳು. ಆದರೂ ಎದೆಗುಂದಲಿಲ್ಲ. ಒಮ್ಮೆ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಇವಳು ಭಾಗವಹಿಸಬೇಕಾಯಿತು. ಅಲ್ಲಿ ಎಲ್ಲರಿಗೂ ಇಂಗ್ಲಿಷ್ ನಲ್ಲಿ ಸಹಿ ಮಾಡಲು ಹೇಳಿದರು. ಇಂಗ್ಲಿಷ್ ಬಾರದ ಊರ್ಮಿಳಾ ನಾಚಿಕೆಯಿಂದಲೇ ಶಿಕ್ಷಕಿಯೊಬ್ಬರನ್ನು ಹಿಂದಿಯಲ್ಲಿ ಸಹಿ ಮಾಡಬಹುದೇ ಎಂದು ಕೇಳಿ ಹಿಂದಿಯಲ್ಲಿ ಸಹಿ ಮಾಡಿದಳು. ಈ ಘಟನೆ ಅವಳಿಗೆ ಬೇಸರವನ್ನುಂಟು ಮಾಡಿತು. ಮಕ್ಕಳು ತನ್ನಂತಾಗಬಾರದು ಎಂದು ಅವರ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಳು.
ಒಮ್ಮೆ ರಮೇಶ್ ಬಾಬುರವರೊಡನೆ ಮಾತನಾಡುತ್ತಾ "ನಾನೇನಾದರೂ ಓದಿದ್ದರೆ ನನ್ನ ಜೀವನದ ಘಟನೆಗಳನ್ನೆಲ್ಲಾ ಬರೆಯಬಹುದಿತ್ತು" ಎಂದಳು. "ಈಗಲೂ ನೆನಪಿದ್ದರೆ ಏಕೆ ಬರೆಯಬಾರದು" ಎಂದರು. "ನೀವು ಕರೆಕ್ಷನ್ ಮಾಡಿಕೊಟ್ಟರೆ ಬರೆಯುತ್ತೇನೆ" ಎಂದ ಊರ್ಮಿಳಾಗೆ ಬಾಬುರವರು ಬೇಬಿ ಹಾಲ್ದಾರ್ ರವರ "ಆಲೋ-ಅಂಧೇರೆ" ಪುಸ್ತಕವನ್ನು ಓದಲು ಕೊಟ್ಟು, "ನೀನು ಹಳ್ಳಿಯಲ್ಲಿ ಹೇಗೆ ಜೀವನ ನಡೆಸುತ್ತಿದ್ದೆ, ಈಗ ಕಲ್ಕತ್ತಾದ ಜೀವನ ಮತ್ತು ನೀನು ನಿನ್ನ ಬಗ್ಗೆ ಏನು ಯೋಚಿಸುತ್ತಿದ್ದೆ, ಎಲ್ಲವನ್ನೂ ಬರೆ. ಸತ್ಯವಾದ ಘಟನೆಗಳನ್ನು ಬರೆದರೆ ನಿನ್ನ ಪುಸ್ತಕವನ್ನು ಪ್ರಕಟಿಸಬಹುದು" ಎಂದರು.
ಹೀಗೆ ಹಳ್ಳಿಮಗಳೊಬ್ಬಳು ತನ್ನ ಜೀವನದ ಏರುಪೇರುಗಳನ್ನು ಬಹು ಸೊಗಸಾಗಿ ಬರೆದಿದ್ದಾರೆ. ಮಾತೃಭಾಷೆ ಬೇರೆಯಾದರೂ ಮದುವೆಯ ನಂತರ ಹಿಂದಿಯನ್ನು ಕಲಿತು ತಮ್ಮ ಆತ್ಮಕಥೆಯನ್ನು ಬರೆದ ಸುಶೀಲ್ ರಾಯ್ ಅಸಾಮಾನ್ಯರೇ ಸರಿ. ಕೇವಲ ಕಾಗುಣಿತ ತಪ್ಪುಗಳನ್ನು ಮಾತ್ರ ತಿದ್ದಿ, ಬೇರೆ ಯಾವುದೇ ಬದಲಾವಣೆಗಳಿಲ್ಲದೆ ಪ್ರಕಟಿಸಿದ ಪುಸ್ತಕವೆ "ಏಕ್ ಅನ್ ಪಡ್ ಕೀ ಕಹಾನಿ." ಅದೇ ರೀತಿ ಯಥಾವತ್ತಾಗಿ ಜಿ. ಕುಮಾರಪ್ಪನವರು ಕನ್ನಡಕ್ಕೆ ಅಚ್ಚುಕಟ್ಟಾಗಿ ಅನುವಾದಿಸಿದ್ದಾರೆ.

 - ವಿಜಯಲಕ್ಷ್ಮಿ ಎಂ ಎಸ್