ಆದರೆ ವ್ಯಾಲೇಸ್ ಇವರ ಮೇಲೆ ನಂಬಿಕೆಯಿಟ್ಟು ಕಳಿಸಿದ್ದರು. ದ್ವಂದ್ವದಿಂದ ಹೊರಬಂದ ಹಿರಿಯ ವಿಜ್ಞಾನಿ ತಮ್ಮ ಹಿರಿತನವನ್ನು ಮೆರೆದರು. ತಮ್ಮ ಸಂಶೋಧನೆ ಪಕ್ಕಕ್ಕಿಟ್ಟು ಇದನ್ನು ಪ್ರಕಟಣೆಗೆ ಕಳಿಸಬೇಕೆಂದು ತೀರ್ಮಾನಿಸಿದರು. ತಮ್ಮ 20 ವರ್ಷಗಳ ಸತತ ಶ್ರಮ ಹಾಳಾಗುತ್ತದೆಯೆಂಬುದನ್ನೂ ಸಹ ಅಥವಾ ತಮಗೆ ಸಲ್ಲಬೇಕಾದ ಕೀರ್ತಿ ಇನ್ನೊಬ್ಬರಿಗೆ ಸಲ್ಲುತ್ತದೆ ಎಂದಾಗಲೂ ಸಹ ಧೃತಿಗೆಡದೆ ನಿರ್ಧಾರ ಕೈಗೊಂಡು ಮಾನವೀಯತೆಯನ್ನು ತೋರಿದ ಆ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್.
ಆದರೆ ನಂತರ ವಿಷಯ ತಿಳಿದ ವ್ಯಾಲೇಸ್ ರವರು ಹಿರಿತನದಲ್ಲಿ ತಾವು ಡಾರ್ವಿನ್ ರಿಗಿಂತ ಏನೂ ಕಡಿಮೆಯಿಲ್ಲ ಎಂದು ತೋರಿಸಿದರು. ಇಬ್ಬರು ವಿಜ್ಞಾನಿಗಳ ಹೆಸರಿನಲ್ಲಿಯೂ ಲೇಖನಗಳು ಪ್ರಕಟವಾದವು. ಇದರ ಜೊತೆಗೆ ವ್ಯಾಲೇಸ್ ರವರು, “ ನಾನೂ ಸಹ ಸಂಶೋಧನೆಯಲ್ಲಿ ತೊಡಗಿದ್ದೇನೆ ಆದರೆ ಡಾರ್ವಿನ್ ರವರ ಜೀವಿಗಳ ಉಗಮದಂತಹ ಕೃತಿಯನ್ನು ಬರೆಯಲು ನನಗೆ ಸಾಧ್ಯವಾಗುತ್ತಿರಲಿಲ್ಲ” ಎಂದರು.
ಜೀವವಿಕಾಸವಾದದ ಪಿತಾಮಹರೆನಿಸಿಕೊಂಡಿರುವ ಡಾರ್ವಿನ್ ಜನಿಸಿದ್ದು 1809ರ ಫೆಬ್ರವರಿ 12ರಂದು. ಇಂಗ್ಲೆಂಡಿನ ಶ್ರೂಸ್ ಬರಿ ಎಂಬಲ್ಲಿ. ತಂದೆ ಡಾ. ರಾಬರ್ಟ್ ಡಾರ್ವಿನ್, ತಾಯಿ ಸೂಸಾನಾ. ತಾಯಿ ಚಿಕ್ಕವಯಸ್ಸಿನಲ್ಲಿಯೇ ತೀರಿಕೊಂಡಾಗ ಅವರನ್ನು ನೋಡಿಕೊಂಡಿದ್ದು ಅಕ್ಕ ಕೆರೋಲಿನ್. ಆರಂಭದಲ್ಲಿ ಅವರ ವಿದ್ಯಾಭ್ಯಾಸ ಮನೆಯಲ್ಲಿಯೇ, ಅಕ್ಕನೇ ಶಿಕ್ಷಕಿ. ಚಿಕ್ಕಂದಿನಿಂದಲೂ ಡಾರ್ವಿನ್ ರವರಿಗಿದ್ದ ಹವ್ಯಾಸವೆಂದರೆ ಕಪ್ಪೆಚಿಪ್ಪುಗಳು, ವಿವಿಧ ಖನಿಜಗಳು, ಶಿಲೆಗಳು, ಜೀರುಂಡೆಗಳು ಇತ್ಯಾದಿಗಳ ಸಂಗ್ರಹಣೆ.
ಶಿಕ್ಷಣದಲ್ಲಿ ಅವರಿಗೆ ಹೆಚ್ಚೇನೂ ಆಸಕ್ತಿ ಬೆಳೆಯಲಿಲ್ಲ. ತಂದೆಯ ಆಣತಿಯ ಮೇರೆಗೆ ವೈದ್ಯಕೀಯ ಪದವಿ ಪಡೆಯಲು ಎಡಿನ್ ಬರೊ ವಿದ್ಯಾಲಯಕ್ಕೆ ಸೇರಿದರು.. ಆದರೆ ಆಗಿನ ಚಿಕಿತ್ಸಾಕ್ರಮ ಕ್ರೂರವೆನಿಸುತ್ತಿತ್ತು. ರೋಗಿಗಳ ನೋವು, ಚೀರಾಟ ಇವರಲ್ಲಿ ಭಯ ಹುಟ್ಟಿಸಿತು. ಹಾಗಾಗಿ ಅದರಿಂದ ದೂರವಾದರು.
ಶಿಕ್ಷಣದಲ್ಲಿ ಅವರಿಗೆ ಹೆಚ್ಚೇನೂ ಆಸಕ್ತಿ ಬೆಳೆಯಲಿಲ್ಲ. ತಂದೆಯ ಆಣತಿಯ ಮೇರೆಗೆ ವೈದ್ಯಕೀಯ ಪದವಿ ಪಡೆಯಲು ಎಡಿನ್ ಬರೊ ವಿದ್ಯಾಲಯಕ್ಕೆ ಸೇರಿದರು.. ಆದರೆ ಆಗಿನ ಚಿಕಿತ್ಸಾಕ್ರಮ ಕ್ರೂರವೆನಿಸುತ್ತಿತ್ತು. ರೋಗಿಗಳ ನೋವು, ಚೀರಾಟ ಇವರಲ್ಲಿ ಭಯ ಹುಟ್ಟಿಸಿತು. ಹಾಗಾಗಿ ಅದರಿಂದ ದೂರವಾದರು.
ತಂದೆ ಪ್ರೌಢವಿದ್ಯೆ ಕಲಿಯಲು ಕೇಂಬ್ರಿಡ್ಜ್ ಗೆ ಕಳಿಸಿದರು. ವಿದ್ಯಾವಂತನಾದರೆ ಚರ್ಚ್ ಸೇರಿ ಉಪದೇಶಿಯಾಗಬಹುದೆಂಬುದು ತಂದೆಯ ಅಭಿಪ್ರಾಯವಾಗಿತ್ತು. ಆದರೆ ನಡೆದದ್ದೇ ಬೇರೆ. ಸಸ್ಯಶಾಸ್ತ್ರ, ಭೂಶಾಸ್ತ್ರ ಅವರ ಅಧ್ಯಯನದ ವಿಷಯಗಳಾದವು. ಪ್ರೊ. ಹೆನ್ಸ್ಲೊರವರಿಂದ ಆಕರ್ಷಿತರಾದ ಅವರು ಆ ವಿಷಯಗಳನ್ನು ಗಂಭೀರವಾಗಿ ಕಲಿತರು. ಹಂಬೋಲ್ಟ್ ರವರ “ಸ್ವಂತ ಕಥನ”ದಿಂದ ಪ್ರೇರೇಪಿತರಾದರು. ಪ್ರಾಕೃತಿಕ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು, ಸ್ವಲ್ಪವಾದರೂ ಕೊಡುಗೆ ನೀಡಬೇಕು ಎಂಬ ಆಶಯ ಬೆಳೆಸಿಕೊಂಡರು.
ಬ್ರಿಟಿಷ್ ಸರ್ಕಾರ ದ. ಅಮೇರಿಕಾದ ತೀರಪ್ರದೇಶಗಳಲ್ಲಿನ ಸರ್ವೇ ಮಾಡಲು ನಿರ್ಧರಿಸಿತು. ಹಡಗಿನ ಹೆಸರು ಬೀಗಲ್. ಕ್ಯಾಪ್ಟನ್ - ಫಿಟ್ಸ್ ರಾಯ್. ಇವರಿಗೆ ಸಹಾಯಕನೊಬ್ಬನ ಅಗತ್ಯವಿತ್ತು. ಅವನಿಗೆ ಸಸ್ಯ, ಪ್ರಾಣಿ, ಭೂಶಾಸ್ತ್ರಗಳ ಅರಿವಿರಬೇಕಿತ್ತು. ಪ್ರೊ. ಹೆನ್ಸ್‍ಲೊ ಡಾರ್ವಿನ್‍ಗೆ ಇಷ್ಟವಾಗಬಹುದೆಂದು ಅವರ ಹೆಸರನ್ನು ಪ್ರತಿಪಾದಿಸಿದರು. ಡಾರ್ವಿನ್ ತಕ್ಷಣವೇ ಅಂಗೀಕರಿಸಿದರು.
ಪ್ರೊ. ಹೆನ್ಸ್‍ಲೊ
ಬೀಗಲ್ ನೌಕಾಯಾತ್ರೆ ಆರಂಭವಾಗಿದ್ದು 1831ರ ನವೆಂಬರ್ 4ರಂದು. ಆಗಿನ್ನೂ ಡಾರ್ವಿನ್‍ರ ವಯಸ್ಸು 22. ಮುಂದೆ 5 ವರ್ಷಗಲಲ್ಲಿ ಅವರು ದ. ಅಮೇರಿಕಾದ ಪಾಟಗೋನಿಯ, ಚಿಲಿ, ಪೆರು, ಬ್ರೆಜಿಲ್, ಅರ್ಜೆಂಟಿನಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾಗಳ ವಿವಿಧ ಪ್ರದೇಶಗಳಿಗೆ, ದ್ವೀಪಗಳಿಗೆ ಭೇಟಿ ಕೊಟ್ಟರು.
ಹಡಗಿನ ಪ್ರಯಾಣ ಬಹಳ ಕಷ್ಟಕರವಾಗಿತ್ತು. ಒಂದೆಡೆ ಕ್ಯಾಪ್ಟನ್ ಫಿಟ್ಸ್ರಾಯ್ ಒಳ್ಳೆಯವನಾದರೂ ಮುಂಗೋಪಿ, ಹಠದ ಸ್ವಭಾವದವನು. ಇನ್ನೊಂದೆಡೆ ಒರಟಾದ ನಾವಿಕರು. ಎಲ್ಲರಲ್ಲಿಯೂ ಒಳ್ಳೆಯದನ್ನೇ ಹುಡುಕುವ ಅಭ್ಯಾಸವಿದ್ದ ಡಾರ್ವಿನ್ ರಿಗೆ ಕ್ಯಾಪ್ಟನ್ ಮತ್ತು ನಾವಿಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬಹಳ ಸಮಯ ಬೇಕಾಗಲಿಲ್ಲ.
ಡಾರ್ವಿನ್ ಗೆ ನೀಡಿದ್ದ ಜಾಗ ಬಹಳ ಚಿಕ್ಕದು. ಹಡಗಿನ ಹೊಯ್ದಾಟದಿಂದ ಡಾರ್ವಿನ್‍ರಿಗೆ ಆಗಾಗ ವಾಂತಿಯಾಗುತ್ತಿತ್ತು. ಇಷ್ಟೆಲ್ಲದರ ಮಧ್ಯೆಯೂ ಡಾರ್ವಿನ್ ಛಲದಿಂದ ತಮ್ಮ ಸಂಗ್ರಹಕಾರ್ಯ, ಬರಹಕಾರ್ಯವನ್ನು ಮುಂದುವರೆಸಿದರು. ಅಷ್ಟು ಸುದೀರ್ಘ ಯಾತ್ರೆಯಲ್ಲಿ ಅವರು ಎಲ್ಲೆಡೆಗಳಿಂದ ಶಿಲೆಗಳನ್ನು, ಸಸ್ಯಗಳನ್ನು, ಹೂಗಳನ್ನು, ವನ್ಯಮೃಗಗಳನ್ನು ವೀಕ್ಷಿಸಿ, ಸಾಧ್ಯವಾದದ್ದನ್ನೆಲ್ಲ ಸಂಗ್ರಹಿಸಿ, ಎಲ್ಲವುಗಳ ಬಗ್ಗೆ ಅಂದಂದೆ ಮಾಹಿತಿಯನ್ನು ಬರೆದಿಟ್ಟರು.
ಪ್ರವಾಸದಲ್ಲಿ ತಾವು ಸಂಗ್ರಹಿಸಿದವನ್ನೆಲ್ಲಾ ತನ್ನ ಗುರು ಪ್ರೊ. ಹೆನ್ಸ್‍ಲೊರವರಿಗೆ ಕಳಿಸಿಕೊಡುತ್ತಿದರು. ಈ ಯಾತ್ರೆಯಲ್ಲಿಯೇ ಅವರು ಉತ್ತಮ ಭೂವಿಜ್ಞಾನಿಯಾದರು.
ಬ್ರೆಜಿಲ್, ಚಿಲಿ ದಾಟಿ ಗಲಾಪಗೋಸ್ ದ್ವೀಪಸ್ತೋಮಕ್ಕೆ ಬಂದಿಳಿದರು. ಅಲ್ಲಿ ಡಾರ್ವಿನ್‍ರು ಕಂಡ ಆಮೆಗಳು ಬೃಹದಾಕಾರದವಾಗಿದ್ದು ಒಂದೊಂದನ್ನು ಹೊತ್ತು ತರಲು 10 ಜನ ಬೇಕಿತ್ತು. ಈ ದ್ವೀಪಸಮೂಹಗಳಲ್ಲಿ ಅವರು ಕಂಡ ಇನ್ನೊಂದು ಸೋಜಿಗವೆಂದರೆ ಒಂದು ದ್ವೀಪದ ಜೀವಿಗಳು ಮತ್ತು ಇನ್ನೊಂದು ದ್ವೀಪದ ಜೀವಿಗಳಲ್ಲಿದ್ದ ಭಿನ್ನತೆಗಳು.
ಇಂಗ್ಲೆಂಡಿಗೆ ಹಿಂತಿರುಗುವಷ್ಟರಲ್ಲಿ ಪ್ರೊ. ಹೆನ್ಸ್‍ಲೊರವರ ಕಾರಣದಿಂದಾಗಿ ಡಾರ್ವಿನ್‍ರವರ ಟಿಪ್ಪಣಿಗಳು ಪ್ರಕಟವಾಗಿದ್ದು ಅವರು ಪ್ರಖ್ಯಾತರಾಗಿಬಿಟ್ಟರು. ಅವರು ತಮ್ಮೊಂದಿಗೆ 1283 ಪುಟಗಳಷ್ಟು ಮಾಹಿತಿಯನ್ನು ತಂದಿದ್ದರು. ಸಾವಿರಾರು ಸಸ್ಯ, ಪ್ರಾಣಿ ಮಾದರಿಗಳನ್ನು ತಂದಿದ್ದರು. 1529 ಹೊಸ ಜೀವಜಾತಿಗಳ ವಿವರ, 400 ಸುಲಿದು ಒಣಗಿಸಿದ ಪ್ರಾಣಿಗಳ ಚರ್ಮದ ಮಾದರಿ, ಪ್ರಾಣಿಗಳ ಎಲುಬುಗಳ ಹಂದರಗಳೂ ಸಾಕಷ್ಟಿದ್ದವು.
ಬೀಗಲಿನ ಪ್ರಾಣಿ ವೃತ್ತಾಂತದ ಪುಸ್ತಕ ಪ್ರಕಟಣೆಗೆಂದು ಸರ್ಕಾರದಿಂದ 1000 ಪೌಂಡುಗಳ ಸಹಾಯ ಪಡೆದುಕೊಂಡರು. ಈಗಾಗಳೇ ಭೂವಿಜ್ಞಾನಿಯೆಂದು ಪ್ರಸಿದ್ಧರಾಗಿದ್ದ ಅವರಿಗೆ ಜಿಯಾಲಜಿಕಲ್ ಸೊಸೈಟಿಯ ‘ಫೆಲೊಶಿಪ್ ದೊರೆಯಿತು. 1873ರ ಜುಲೈ ತಿಂಗಳಲ್ಲಿ “ಜೀವಿಗಳ ಪರಿವರ್ತನೆ” ಪುಸ್ತಕ ಬರೆಯಲಾರಂಭಿಸಿದರು. ಅಷ್ಟರಲ್ಲಿ ಅವರಿಗೆ ಜೀವವೈವಿಧ್ಯತೆಗೆ ಕಾರಣ ಏನಿರಬಹುದು ಎಂಬುದರ ಸುಳಿವು ದೊರೆತಿತ್ತು. “ಜೀವಿಗಳ ಬೆಳವಣಿಗೆಯಲ್ಲಿ ದೈವದ ಕೈವಾಡವಿಲ್ಲ, ಬದಲಿಗೆ ಜೀವಿಗಳು ಬೆಳೆಯುತ್ತಾ, ಪರಿಸರಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿವೆ” ಎಂಬುದು ಅವರಿಗೆ ಅರ್ಥವಾಗಿತ್ತು. ಇದನ್ನವರು ಸಾಕ್ಷ್ಯಾಧಾರಗಳ ಸಮೇತ ಮಂಡಿಸಬೇಕಿತ್ತು.
ಆಂಡಿಸ್ ಪರ್ವತ
ಈ ಮಧ್ಯೆಯೇ ಅವರಿಗೆ ಯಾವುದೋ ಖಾಯಿಲೆ ಕಾಡತೊಡಗಿತು. ಹೊಟ್ಟೆನೋವು, ತಲೆನೋವು, ವಾಂತಿ, ಆಯಾಸ ಇತ್ಯಾದಿ. ಅವರ ಆರೋಗ್ಯ ಎಷ್ಟು ಕುಸಿಯಿತೆಂದರೆ 13000 ಅಡಿ ಎತ್ತರದ ಆಂಡೀಸ್ ಪರ್ವತವನ್ನು ಹತ್ತಿಬಂದಿದ್ದ ವ್ಯಕ್ತಿ ಅರ್ಧ ಮೈಲಿ ನಡೆದರೆ ಸುಸ್ತಾಗುತ್ತಿದ್ದರು. ಇದರ ನಡುವೆಯೇ ಅವರು ತಮ್ಮ ಗ್ರಂಥವನ್ನು ಬರೆದು ಮುಗಿಸಿದರು.
ಎಮ್ಮಾ
1839ರಲ್ಲಿ ಎಮ್ಮಾರವರು ಡಾರ್ವಿನ್‍ರ ಬಾಳಸಂಗಾತಿಯಾದರು. ಎಮ್ಮಾ ಡಾರ್ವಿನ್ ರ ಕೊನೆಘಳಿಗೆಯವರೆಗೂ ಅವರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದೇ ಅಲ್ಲದೇ ಅವರ ಎಲ್ಲಾ ಕಾರ್ಯಗಳಲ್ಲಿ ಬೆಂಬಲವಾಗಿ ನಿಂತರ. ಎಮ್ಮಾ ಇಲ್ಲದಿದ್ದರೆ ತಮ್ಮ ಕೃತಿ ಪೂರ್ಣವಾಗುತ್ತಿತ್ತೊ ಇಲ್ಲವೊ ಎಂದು ಡಾರ್ವಿನ್ ರೇ ಹೇಳಿದ್ದಾರೆ.
ಡಾರ್ವಿನ್ ರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಅಷ್ಟೂ ಕೆಲಸದ ನಡುವೆಯೂ ಅವರು ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಮಕ್ಕಳ ಮೇಲೆ ಅವರು ವಿಜ್ಞಾನ ಕಲಿಯುವಂತೆ ಒತ್ತಡವೇರಲಿಲ್ಲ. ಮಕ್ಕಳಲ್ಲಿ ನಯ, ವಿನಯ, ಶಿಕ್ಷಣದ ಬಗ್ಗೆ ಒಲವನ್ನು ಮಾತ್ರ ಮೂಡಿಸಿದರು. ಸಾಮಾನ್ಯವಾಗಿ ಕೆಲಸದಲ್ಲಿ ಮಗ್ನರಾಗುವ ತಂದೆಯರಿಗೆ ಮಕ್ಕಳ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ, ಅದು ತಾಯಿಯ ಕರ್ತವ್ಯ ಎಂಬುದು ಎಲ್ಲರ ನಂಬಿಕೆ. ಆದರೆ ಡಾರ್ವಿನ್ ರವರು ಆ ಮಾತನ್ನು ಸುಳ್ಳಾಗಿಸಿ ಮಕ್ಕಳ ಬೆಳವಣಿಗೆಯಲ್ಲಿ ತಂದೆತಾಯಿ ಇಬ್ಬರ ಕರ್ತವ್ಯವೂ ಇದೆ ಎಂಬುದನ್ನು ತೋರಿಸಿಕೊಟ್ಟರು. ಅವರ ಮೂವರು ಮಕ್ಕಳು ವಿಜ್ಞಾನಿಗಳಾಗಿದ್ದೇ ಅಲ್ಲದೆ ರಾಯಲ್ ಸೊಸೈಟಿಯ ‘ಫೆಲೊ’ ಎನಿಸಿಕೊಂಡರು.
1859ರಲ್ಲಿ ಜೀವಿಗಳ ಉಗಮ ಪ್ರಕಟವಾಯಿತು. ಒಂದೇ ದಿನದಲ್ಲಿ ಅಚ್ಚು ಹಾಕಿಸಿದ 1250 ಪ್ರತಿಗಳೂ ಸಹ ಮಾರಾಟವಾದವು. ಮತ್ತೆ ಮತ್ತೆ ಸಾವಿರಾರು ಸಂಖ್ಯೆಯಲ್ಲಿ ಪುಸ್ತಕ ಮುದ್ರಣವಾಗಿ ಮಾರಾಟವಾಯಿತು. ಅದು ಜರ್ಮನ್, ಪ್ರೆಂಚ್, ರಷ್ಯನ್ ಭಾಷೆಗಳಿಗೂ ಅನುವಾದಗೊಂಡಿತು. ಪುಸ್ತಕದ ಪರಿಣಾಮ ಅಗಾಧವಾಗಿತ್ತು. ಮಾನವನ ಚಿಂತನಾಶಕ್ತಿಗೆ ಹೊಸ ಉತ್ಸಾಹ ಮೂಡಿಸಿತು. ಸಾಮಾಜಿಕ ಚಿಂತನೆಯ ಮೇಲೂ ಪ್ರಭಾವ ಬೀರಿತು. ಪ್ರಚಾರದಲ್ಲಿದ್ದ ಸ್ವರ್ಗ, ನರಕ, ಪಾಪ, ಪುಣ್ಯ, ಪುನರ್ಜನ್ಮ, ಪ್ರಾಯಶ್ಚಿತ್ತ – ಎಲ್ಲಕ್ಕೂ ಕೊಡಲಿ ಪೆಟ್ಟನ್ನು ಹಾಕಿತು. ಪುರೋಹಿತಶಾಹಿಯ ಪ್ರಭಾವ ಕಡಿಮೆಯಾಗತೊಡಗಿತು.
1863ರಲ್ಲಿ ಡಾರ್ವಿನ್ ರಿಗೆ ರಾಯಲ್ ಸೊಸೈಟಿ ತನ್ನ ಅತಿ ಶ್ರೇಷ್ಟ ಪ್ರಶಸ್ತಿಯಾದ ಕೋಪ್ಲೆ ಪದಕವನ್ನು ನೀಡಿತು. ಅದೇ ಸಮಯದಲ್ಲಿ ಹಲವಾರು ಕಡೇಗಳಿಂದ ತೀವ್ರ ಟೀಕೆಗಳೂ ಬಂದವು. ಡಾರ್ವಿನ್ ರು ಹೊಗಳಿದಾಗ ಉಬ್ಬಲಿಲ್ಲ, ತೆಗಳಿದಾಗ ಕುಗ್ಗಲಿಲ್ಲ. ತೆಗಳಿದವರ ಬಗ್ಗೆ ಕಟುವಾಗಿ ಮಾತನಾಡಲಿಲ್ಲ, ಆದರೆ ಉಪಕಾರ ಮಾಡಿದವರಿಗೆ ಮಾತ್ರ ತುಂಬುಹೃದಯದಿಂದ ಕೃತಜ್ಞತೆಯನ್ನು ಅರ್ಪಿಸಿದರು.
ಗುಲಾಮಗಿರಿಯನ್ನು ಕಂಡ ಅವರು, “ಮಹಾ ಸತ್ವಶಾಲಿಯಾದ ದೇವರು ಇರುವುದೇ ನಿಜವಾದರೆ ದಿನನಿತ್ಯ ನಡೆಯುತ್ತಿರುವ ಇಂತಹ ಕೋಟಿಗಟ್ಟಲೆ ಅನ್ಯಾಯ ಕಂಡರೂ ಸುಮ್ಮನಿರುವುದೇಕೆ?” ಎಂದು ಪ್ರಶ್ನಿಸಿದರು. ತಮ್ಮ ವೈಜ್ಞಾನಿಕ ಚಿಂತನೆಯ ಕಾರಣದಿಂದಾಗಿ ಅವರು ದೇವರ ಅಸ್ತಿತ್ವದಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದರು.
ಸಂಶೋಧನೆಯಲ್ಲಿ ತಾಳ್ಮೆ ಅಗತ್ಯವೆಂದು ತಮ್ಮ ದೀರ್ಘ ಕಾಲದ ಕೆಲಸದಿಂದ ತೋರಿಸಿಕೊಟ್ಟಿದ್ದಾರೆ. ಅವಿರತ ಕೆಲಸದ ನಡುವೆಯೂ ಸಾಕಷ್ಟು ಪತ್ರವ್ಯವಹಾರವನ್ನಿಟ್ಟುಕೊಂಡಿದ್ದರು. ಖ್ಯಾತಿ ಬಂದ ಮಾತ್ರಕ್ಕೆ ಎಲ್ಲರೂ ತಮ್ಮ ಮಾತನ್ನು ಒಪ್ಪಲೇ ಬೇಕಿಲ್ಲವೆಂದು ನಂಬುತ್ತಾ ಎಲ್ಲರ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದರು. ಸಾಹಿತ್ಯದ ಬಗ್ಗೆ ಆಸಕ್ತಿಯಿತ್ತು. ಸ್ನೇಹಮೂರ್ತಿಯಾಗಿದ್ದರು. ತಮ್ಮ 70ನೇ ವಯಸ್ಸಿನಲ್ಲಿ ತಾತ ಎರಾಸ್ ಮಸ್ ಡಾರ್ವಿನ್ ರ ಜೀವನಚರಿತ್ರೆ ಬರೆದರು.
1882ಅ ಜನವರಿಯಲ್ಲಿ ಹದಗೆಟ್ಟ ಆರೋಗ್ಯದಿಂದವರು ಚೇತರಿಸಿಕೊಳ್ಳಲೇ ಇಲ್ಲ. ಏಪ್ರಿಲ್ 19ರಂದು ತಮ್ಮ ಕೊನೆಯುಸಿರನ್ನೆಳೆದರು. ಧೀಮಂತ ವ್ಯಕ್ತಿಯೋರ್ವರ ಬಗ್ಗೆ ನಾವು ಓದಿದ ನಂತರ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗುತ್ತದೆ. ಅವರಷ್ಟಲ್ಲದಿದ್ದರೂ, ಕನಿಷ್ಟ ಸಾಸಿವೆಕಾಳಿನಷ್ಟಾದರೂ ಸಮಾಜಕ್ಕೆ, ಸುತ್ತಮುತ್ತಲಿನವರಿಗೆ ಒಳ್ಳೆಯದನ್ನು ಮಾಡುವ ಮನೋಭಾವ ನಮ್ಮಲ್ಲಿ ಬೆಳೆಸಿಕೊಳ್ಳುವ ಮೂಲಕ ನಾವು ಆ ಮಹಾನ್ ವಿಜ್ಞಾನಿಗೆ ನಮ್ಮ ನಮನಗಳನ್ನು ಸಲ್ಲಿಸಬಹುದು.
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ