Pages

ಅನುವಾದಿತ ಕಥೆ - ಉಬ್ಬಿದ ಚೀಲ

 ಉಬ್ಬಿದ ಚೀಲ  – ಲಿಯೊ ಮೆಂಗ್

ಅಂದು ಮುಂಜಾನೆಯೇ ಮಕ್ಕಳೆಲ್ಲಾ ತರಾತುರಿಯಲ್ಲಿ ಶಾಲೆಯ ಕಡೆಗೆ ನಡೆದಿದ್ದರು. ಅಲ್ಲಿಂದ ಅವರೆಲ್ಲಾ ಹಳ್ಳಿಗೆ ಹೋಗಿ ಗೋಧಿಯನ್ನು ಕೊಯ್ಯುವುದರಲ್ಲಿ ಹಳ್ಳಿಗರಿಗೆ ಸಹಾಯ ಮಾಡುವವರಿದ್ದರು. ಅವರೆಲ್ಲರ ಬೆನ್ನುಗಳ ಮೇಲೆ ಅಗಲವಾದ ಅಂಚಿರುವ ಟೋಪಿಗಳು ನೇತಾಡುತ್ತಿದ್ದವು. ಅವರು ಬೇಸಿಗೆಯ ಬಿಸಿಲಿನಲ್ಲಿ ತುಂಬಾ ದೂರ ನಡೆಯಬೇಕಾದ್ದರಿಂದ ಅವರ ಚೀಲಗಳಲ್ಲಿ ಬರಿಯ ಊಟದ ಡಬ್ಬಿಗಳನ್ನು ಮಾತ್ರ ಇಟ್ಟಿದ್ದರು.
ಹುಡುಗರೆಲ್ಲ ಶಾಲೆಯ ಹತ್ತಿರ ಬರುವಷ್ಟರಲ್ಲಿ 6ನೇ ತರಗತಿಯ ವಾಂಗ್ ಹುವಾ ಮತ್ತು ಅವನ ಕೆಲವು ಸ್ನೇಹಿತರು ಏದುಸಿರು ಬಿಡುತ್ತಿದ್ದರು. ವಾಂಗ್ ಹುವಾನ ದುಂಡಗಿನ ಮುಖ ಗಾಳಿ ತುಂಬಿದ ಚೆಂಡಿನಂತಾಗಿತ್ತು. ಅವನ ಹೆಗಲಿನಲ್ಲಿದ್ದ ಚೀಲವೂ ಕೂಡ ದಪ್ಪಗೆ ಊದಿಕೊಂಡು, ಅದರಲ್ಲಿ ತುಂಬಾ ವಸ್ತುಗಳಿದ್ದವೆಂದು ಸಾರಿ ಹೇಳುವಂತಿತ್ತು.
“ವಾಂಗ್ ಹುವಾ ತನ್ನ ತರಗತಿಯವರಿಗೆಲ್ಲಾ ಹಂಚಲು ಗೊಂಬೆಗಳನ್ನು ತಂದಂತಿದೆ” ದಪ್ಪವಾಗಿ, ಭಾರವಾಗಿರುವ ಚೀಲವನ್ನು ನೋಡಿ ಸಿಯೊಮಿನ್ ಎಂಬ ಹುಡುಗ ನಗುತ್ತಾ ಹೇಳಿದ.
ಸೂರ್ಯ ನೆತ್ತಿಯ ಮೇಲೆ ಬರುವ ಹೊತ್ತಿಗೆ ಮಕ್ಕಳು ಹಳ್ಳಿಯ ದಾರಿ ಹಿಡಿದಿದ್ದರು. ಹುಲ್ಲಿನ ಟೋಪಿ ಹಾಕಿಕೊಂಡರೂ ಅವರ ಮೈಯೆಲ್ಲಾ ಬೆವೆತಿತ್ತು. ಭಾರವನ್ನು ಹೊತ್ತಿದ್ದ ವಾಂಗ್ ಹುವಾನಿಗೂ ಸೆಖೆಯಗುತ್ತಿತ್ತು. ಸಂಗಡಿಗರು ತಾವೂ ಸ್ವಲ್ಪ ದೂರದವರೆಗೂ ಚೀಲವನ್ನು ಹೊರುತ್ತೇವೆಂದರೂ ‘ಇದೇನೂ ಭಾರವಿಲ್ಲ’ ಎಂದು ಹೇಳಿ ವಾಂಗ್ ಹುವಾ ತಾನೇ ಹೊತ್ತು ನಡೆದನು.
ಹಲವು ಘಂಟೆಗಳ ಪ್ರಯಾಣದ ನಂತರ ಹಳ್ಳಿಯನ್ನು ತಲುಪಿದರು. ಅಲ್ಲಿ ಸ್ವಲ್ಪ ಕಾಲ ಗ್ರಾಮಸ್ಥರ ಮನೆಗಳಲ್ಲಿ ವಿಶ್ರಾಂತಿ ತೆಗೆದುಕೊಂಡು ನಂತರ ಕೆಲಸ ಪ್ರಾರಂಭಿಸುವುದೆಂದು ಶಿಕ್ಷಕರು ತೀರ್ಮಾನಿಸಿದರು. ಆದರೆ ಯಾರೂ ಒಂದು ಕಡೆ ಕೂರಲಿಲ್ಲ. ದಣಿದಿದ್ದರೂ, ಜನರ ಮನೆಗಳಿಗೆ ನೀರು ಸರಬರಾಜು ಮಾಡುವುದು; ಅಂಗಳ ಶುಚಿಗೊಳಿಸುವಂತಹ ಕೆಲಸಗಳಲ್ಲಿ ತೊಡಗಿದರು.
ವಾಂಗ್ ಹುವಾ ಮತ್ತವನ ಗುಂಪಿಗೆ ಹುವಾಂಗ್ ಎನ್ನುವ ವೃದ್ಧೆಯ ಮನೆಯನ್ನು ಗೊತ್ತುಮಾಡಲಾಗಿತ್ತು. ಅವನು ತನ್ನ ಚೀಲವನ್ನು ಕಟ್ಟೆಯ ಮೇಲಿಟ್ಟು, ಒಂದು ಉದ್ದನೆಯ ಕೋಲನ್ನು, ಒಂದೆರಡು ಬಕೆಟ್‍ಗಳನ್ನು ತೆಗೆದುಕೊಂಡು ಕೆಲವು ಹುಡುಗರೊಂದಿಗೆ ನೀರು ತುಂಬಿಸಿದನು. ಉಳಿದ ಹುಡುಗರು ಅಂಗಳ ಸ್ವಚ್ಛಗೊಳಿಸಿದರು. ಇದರಿಂದ ಅವರ ಕೆಲಸ ಬೇಗನೆ ಮುಗಿಯಿತು. ವೃದ್ಧೆಗೆ ತುಂಬಾ ಸಂತೋಷವಾಯಿತು. ಮನೆಯೊಳಗೆ ಬಂದು ನೀರು ಕುಡಿದು ಹೋಗಲು ಹೇಳಿದಳು. 
ಸಿಯೊಮಿನ್ ಮಾತ್ರ, ವಾಂಗ್ ಹುವಾನ ಊದಿದ ಚೀಲದ ರಹಸ್ಯ ತಿಳಿಯಲು ವೃದ್ಧೆಯ ಮನೆಗೆ ಬಂದನು. ವೃದ್ಧೆ ಏನೋ ಯೋಚಿಸುತ್ತಿರುವಂತೆ ನಿಂತಿದ್ದಳು. “ಅವರೆಲ್ಲಾ ಎಲ್ಲಿ ಹೋದರು, ಅಜ್ಜಿ?” ಸಿಯೊಮಿನ್ ಕೇಳಿದ. ಸರಿಯಾಗಿ ಕಿವಿ ಕೇಳದ ಅವಳು ಇವನೂ ಕೂಡ ವಾಂಗ್ ಹುವಾನ ಗುಂಪಿನವನೆಂದು ತಿಳಿದು, ಅವನ ಕೈಹಿಡಿದೆಳೆದು, “ಒಳಗೆ ಬಂದು ನೀರು ಕುಡಿದು ಹೋಗಿ ಎಂದು ಹೇಳಿದರೆ ಏಕೆ ಬರಲಿಲ್ಲ? ಎಷ್ಟೆಲ್ಲಾ ಕೆಲಸ ಮಾಡಿದ್ದೀರಿ!” ಎಂದು ಗದರಿದಳು. “ಈ ಬಿಸಿಲು ಕಾಲದಲ್ಲಿ ಹೀಗೆ ಬಿಡುವಿಲ್ಲದೆ ಕೆಲಸ ಮಾಡುವುದು ಒಳ್ಳೆಯದಲ್ಲ. ನಿಮ್ಮ ಹುರುಪನ್ನು ನೋಡುತ್ತಿದ್ದರೆ ಯುವ ಸೈನಿಕರ ನೆನಪಾಗುತ್ತಾರೆ. ನೀವು ಖಂಡಿತವಾಗಿಯೂ ಅಧ್ಯಕ್ಷ ಮಾವೋರಿಂದ ಶಿಕ್ಷಿತರಾದ ಭರವಸೆಯ ಯುವ ಜನಾಂಗ!” ಎಂದು ಸಂತೋಷಪಟ್ಟಳು.
ವೃದ್ಧೆಯ ಮಾತುಗಳು ಸಿಯೊಮಿನ್‍ಗೆ ಎಷ್ಟು ಹಿತವೆನಿಸಿದವೋ ಅಷ್ಟೇ ಇರುಸುಮುರುಸನ್ನು ಉಂಟುಮಾಡಿದವು. ಅವನು “ಇದು ನಮ್ಮ ಕರ್ತವ್ಯ” ಎಂದಷ್ಟೆ ಹೇಳಿ ಅಜ್ಜಿಯನ್ನು ಕೋಣೆಯ ಒಳಗೆ ಬಿಟ್ಟು ಹೊರಬಂದನು. ಗ್ರಾಮಸ್ಥರೆಲ್ಲ ವಿಶ್ರಮಿಸುತ್ತಿದ್ದರಿಂದ ಹಳ್ಳಿಯಲ್ಲಿ ಶಾಂತಿ ನೆಲೆಸಿತ್ತು.  ಗದ್ದೆಯಲ್ಲಿ ಗೋಧಿಯ ತೆನೆ ಮೆಲುಗಾಳಿಗೆ ಬಳುಕುತಿತ್ತು. ಸಿಯೊಮಿನ್ ವಾಂಗ್ ಹುವಾನಿಗಾಗಿ ಕಣ್ಣು ಹಾಯಿಸಿದಾಗ ಒಂದು ದೊಡ್ಡ ಮರದ ಬುಡದಲ್ಲಿ ಮಕ್ಕಳ ಗುಂಪು ಕಾಣಿಸಿತು. ಅವನು ಗದ್ದೆಯ ಮಧ್ಯದಿಂದ ಮರದ ಕಡೆಗೆ ನುಗ್ಗಿದ. ಮರದ ಹಿಂದಿನ ಬದುವಿನ ಮೇಲೆ ಕುಳಿತು ಏನು ನಡೆಯುತ್ತಿದೆ ಎಂದು ನೋಡತೊಡಗಿದ. 
ವಾಂಗ್ ಹುವಾ ಒಂದು ಹುಡುಗನ ಕೂದಲನ್ನು ಕತ್ತರಿಸುತ್ತಿದ್ದ. ಒಂದು ಬಿಳಿಯ ಬಟ್ಟೆ ಅವನ ಇಡೀ ದೇಹವನ್ನು ಮುಚ್ಚಿತ್ತು. ಎರಡು ಕೊಳೆಯಾದ ಪಾದಗಳು ಮಾತ್ರ ಬಟ್ಟೆಯಿಂದ ಹೊರಗೆ ಕಾಣುತ್ತ್ತಿದ್ದವು. ಪಕ್ಕದಲ್ಲೆ ಗೋಧಿಯ ತೆನೆಗಳಿಂದ ತುಂಬಿದ ಒಂದು ಬುಟ್ಟಿಯೂ, ವಾಂಗ್ ಹುವಾನ ಖಾಲಿ ಚೀಲವೂ ಕಾಣಿಸಿತು. ವಾಂಗ್ ಹುವಾ ಕ್ಷಣ ಹೊತ್ತು ಆ ಹುಡುಗನ ಕೂದಲನ್ನು ಗಮನಿಸಿ, ನಂತರ ಒಂದು ಕತ್ತರಿ ಮತ್ತು ಹಣಿಗೆ ಹಿಡಿದು ಕೆಲಸ ಪ್ರಾರಂಭಿಸಿದ. “ಸ್ವಲ್ಪ ತಲೆ ಬಗ್ಗಿಸು..... ಜಾಸ್ತಿಯಾಯಿತು...ಸ್ವಲ್ಪ ಮೇಲೆ..... ಆ ಸರಿಯಿದೆ....ಅಲುಗಾಡಬೇಡ” ಎನ್ನುತ್ತಿದ್ದ. ಆ ಹುಡುಗ “ನನ್ನ ಕೂದಲೇನೂ ತುಂಬಾ ಉದ್ದವಿಲ್ಲ” ಎಂದ. ಆದರೆ ಅದನ್ನು ಕೇಳದೆ ವಾಂಗ್ ಹುವಾ ಅವನ ಕೂದಲನ್ನು ಕತ್ತರಿಸತೊಡಗಿದ. 
ಸಿಯೊಮಿನ್ ಹಿಂದೆ ನಡೆದದ್ದನ್ನು ನೆನಪಿಸಿಕೊಂಡ. ಹಿಂದೊಮ್ಮೆ ಅವನು ವಾಂಗ್ ಹುವಾ ಕೂದಲು ಕತ್ತರಿಸುತ್ತಿದ್ದದ್ದನ್ನು ಕಂಡು “ಇದನ್ನು ಎಲ್ಲಿಂದ ಕಲಿತೆ?” ಎಂದು ಕೇಳಿದ್ದಕ್ಕೆ ವಾಂಗ್ ಹುವಾ ಪಕ್ಕದಲ್ಲೇ ಇದ್ದ “ಜನರಿಗೆ ಹೃತ್ಪೂರ್ವಕವಾಗಿ ಸೇವೆ ಮಾಡಿ” ಎನ್ನುವ ಬರಹ ತೋರಿಸಿದ್ದ. 
“ಸಧ್ಯದಲ್ಲೇ ನಮ್ಮ ಶಾಲೆಯಲ್ಲಿ ಒಂದು ಚಿಕ್ಕ ಕ್ಷೌರದ ಅಂಗಡಿ ತೆರೆಯುತ್ತೇವೆ. ಶಿಕ್ಷಕರು ನಮಗೆ ಕೂದಲು ಕತ್ತರಿಸುವುದನ್ನು ಕಲಿಯಲು ಹೇಳಿದ್ದಾರೆ. ಮಕ್ಕಳು ಶಾಲೆಯಲ್ಲೆ ಕ್ಷೌರ ಮಾಡಿಕೊಳ್ಳಬಹುದು” ಎಂದ ವಾಂಗ್ ಹುವಾ “ನಾವು ಲಿಟಲ್ ರೆಡ್ ಗಾರ್ಡ್ಸ್. (ಚಿಕ್ಕ ಕೆಂಪು ಸೈನಿಕರು) ಸೇವಾ ಮನೋಭಾವ ಹೊಂದಿದ್ದರೆ ಸಾಲದು; ಸೇವೆ ಮಾಡಲು ಕಲಿತಿರಬೇಕು. ಕ್ಷೌರ ನಾವು ಕಲಿಯಬಹುದಾದಂತಹ ಕಲೆ” ಎಂದಿದ್ದನು. 
ಎಲ್ಲರೂ ಒಮ್ಮೆಗೇ ನಗಲು ಶುರು ಮಾಡಿದ್ದರಿಂದ ಇವನ ಯೋಚನಾಲಹರಿ ಅಲ್ಲಿಗೇ ನಿಂತಿತು. ವಾಂಗ್ ಹುವಾ ಆ ಹುಡುಗನಿಗೆ ಕನ್ನಡಿ ತೋರಿಸಿದಾಗ ಹುಡುಗನಿಗೆ ನಾಚಿಕೆಯಾಗಿ ಕಣ್ಣು ಮುಚ್ಚಿದನು. ಆದ್ದರಿಂದ ಎಲ್ಲರೂ ನಗುತ್ತಿದ್ದರು.
“ಮುಂದಿನವರು ಯಾರು” ಎಂದು ವಾಂಗ್ ಹುವಾ ಕೇಳಿದಾಗ, “ನಾನು” ಎನ್ನುತ್ತಾ ಸಿಯೋಮಿನ್ ವಾಂಗ್ ಹುವಾನ ಬೆನ್ನಿಗೆ ಗುದ್ದಿದ.
“ನೀನಾ! ನನ್ನನ್ನು ಹೆದರಿಸಿಬಿಟ್ಟೆ” ಎನ್ನುತ್ತಾ ವಾಂಗ್ ಹುವಾ ತಿರುಗಿದ . 
“ನನಗೇಕೆ ನೀನು ಹೇಳಲಿಲ್ಲ? ನಾನು ಕೂದಲನ್ನು ಕತ್ತರಿಸಲಾರೆ ಎಂದುಕೊಂಡೆಯಾ?” ಸಿಯೋಮಿನ್ ದೂರಿದ.
“ನಾವು ನಮ್ಮ ಶಿಕ್ಷಕರಿಗೂ ತಿಳಿಸಲಿಲ್ಲ! ಇಂದಿನ ಮುಖ್ಯ ಕೆಲಸ ಗೋಧಿ ತೆನೆ ಕೊಯ್ಯುವುದರಲ್ಲಿ ಗ್ರಾಮಸ್ಥರಿಗೆ ನೆರವಾಗುವುದು. ಇದು ನಮ್ಮ ಗುಂಪಿನವರು ಬಿಡುವಿನ ಸಮಯದಲ್ಲಿ ಮಾಡುತ್ತೇವೆ ಅಷ್ಟೇ” ವಾಂಗ್ ಹುವಾ ಉತ್ತರಿಸಿದ.
“ಓ, ಹಾಗಾ!” ಸಿಯೋಮಿನ್ ತಲೆಕೆರೆದುಕೊಳ್ಳುತ್ತಾ, “ಏನೇ ಸಹಾಯ ಬೇಕಿದ್ದರೂ ನಾನು ಮಾಡುತ್ತೇನೆ.” ವಾಂಗ್ ಹುವಾ ಚೀಲವನ್ನು ತೆಗೆದ. ಅದರಲ್ಲಿ ಅವನಿಗೆ ಒಂದು ಸಣ್ಣ ಫಲಕ ಕಾಣಿಸಿತು. ಅದರಲ್ಲಿ “ಬಿಡುವಿನ ಸಮಯದಲ್ಲಿ ಕ್ಷೌರ ಸೇವೆ - ಬಡವರು, ಕೆಳ ಮಧ್ಯಮ ವರ್ಗದ ರೈತರಿಗಾಗಿ” ಎಂದಿತ್ತು.
“ಹಿರಿಯರಿಗೂ ಕ್ಷೌರ ಮಾಡುತ್ತೀರಾ?” ಸಿಯೋಮಿನ್ ಕೇಳಿದ .
“ಹೌದು, ಈ ಕಾಲದಲ್ಲಿ ರೈತರೆಲ್ಲಾ ಹಗಲುರಾತ್ರಿ ದುಡಿಯುತ್ತಾರೆ. ಅವರಿಗೆ ಕ್ಷೌರಕ್ಕೆ ಸಮಯ ಇರುವುದಿಲ್ಲ. ಆದ್ದರಿಂದ ನಾವು ವಿರಮಿಸುವುದನ್ನು ಕಡಿಮೆ ಮಾಡಿ, ಅವರ ಬಿಡುವಿನ ಸಮಯದಲ್ಲಿ ಅವರ ಗದ್ದೆಗಳಲ್ಲಿ ಕ್ಷೌರವನ್ನು ಒದಗಿಸಬಹುದು.” ಎಂದು ಉತ್ತರಿಸಿದ . 
 ಮಧ್ಯಹ್ನ ಗ್ರಾಮಸ್ಥರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಗದ್ದೆಗಳ ಕಡೆ ಹೋಗುವಾಗ, ದೊಡ್ಡಮರದ ಕೊಂಬೆಗೆ ನೇತುಹಾಕಿದ್ದ “ಬಿಡುವಿನ ಸಮಯದಲ್ಲಿ ಕ್ಷೌರ ಸೇವೆ - ಬಡವರು ಹಾಗು ಕೆಳ ಮಧ್ಯಮ ವರ್ಗದ ರೈತರಿಗಾಗಿ” ಎಂಬ ಫಲಕ ಕಾಣಿಸಿತು. ಪಕ್ಕದಲ್ಲೇ ಕೆಲವು ಮಕ್ಕಳು ಕ್ಷೌರ ಮಾಡಿಸಿಕೊಂಡು, ಖುಷಿಯಿಂದ ಚಿತ್ರಗಳಿರುವ ಪುಸ್ತಕಗಳನ್ನು ಓದುತ್ತಿದ್ದರು.
ಇದನ್ನು ಕಂಡ ಗ್ರಾಮಸ್ಥರು “ಅರೆ! ಇದು ಒಳ್ಳೆ ಉಪಾಯ. ಇವರು ನಿಜವಾಗಿಯೂ ಮಾವೋನಿಂದ ಶಿಕ್ಷಿತರಾದ “ಕೆಂಪುದಳದ ಪುಟಾಣಿ ರಕ್ಷಕರು!” ಎಂದು ಉದ್ಗಾರ ತೆಗೆದರು. 
“ಹೌದು. ಇವರು ನಮ್ಮ ಹಳ್ಳಿಗೆ ಗೋಧಿ ಕೊಯ್ಯುವುದರಲ್ಲಿ ಸಹಾಯ ಮಾಡಲು ಇಲ್ಲಿವರೆಗೆ ಬಂದಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಬಡ ಹಾಗೂ ಕೆಳಮಧ್ಯಮ ವರ್ಗದ ಜನರಿಗಾಗಿ ತಮ್ಮ ಬಿಡುವಿನಲ್ಲೂ ಕ್ಷೌರ ಮಾಡುತ್ತಿದ್ದಾರೆ” ಎಂದು ಹೊಗಳಿದನು ಇನ್ನೊಬ್ಬ.
 ಸಾಲಿನಲ್ಲಿ ಹೋಗುತ್ತಿರುವಾಗ ಹಳ್ಳಿಗರು ತಮ್ಮ ಸೇವೆಯನ್ನು ಹೊಗಳುತ್ತಿರುವುದನ್ನು ವಾಂಗ್ ಹುವಾ ಕೇಳಿದ. ಅವನಿಗೆ ಫಲಕ ಮತ್ತುತನ್ನ ಊದಿದ ಚೀಲವನ್ನು ನೋಡಿದಾಗ ತುಂಬಾ ಹೆಮ್ಮೆ ಎನಿಸಿತು. 
ಸಿಯೋಮಿನ್ ವಾಂಗ್ ಹುವಾನ ಕ್ಷೌರ ಸೇವೆಯ ಬಗ್ಗೆ ಶಿಕ್ಷಕರಿಗೆ ತಿಳಿಸಿದನು. ಶಿಕ್ಷಕರು ಸಾಲಿನಲ್ಲಿ ನಿಂತ ವಾಂಗ್ ಹುವಾನಿಗೆ ಗೋಧಿ ಕೊಯ್ಯದೆ ಕ್ಷೌರಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಹೇಳಿದರು. ಆದರೆ ವಾಂಗ್ ಹುವಾ “ಗದ್ದೆ ಕೆಲಸ ಬಿಟ್ಟು ಸಿದ್ಧತೆ ಮಾಡಿಕೊಳ್ಳುವಂತಹುದೇನೋ ಇಲ್ಲ, ಎಲ್ಲವೂ ಸಿದ್ಧವಾಗಿದೆ. ನಮ್ಮ ಮುಖ್ಯ ಕೆಲಸ ಗೋಧಿ ಕೊಯ್ಯುವುದು. ಅದರಿಂದ ದೂರ ಉಳಿಯುವುದು ನಮಗೆ ಇಷ್ಟವಿಲ್ಲ” ಎಂದನು.

ಯಾರೋ ಸೀಟಿ ಊದಿದರು. ವಾಂಗ್ ಹುವಾ ಹಾಗು ಉಳಿದವರೆಲ್ಲರೂ ತಮ್ಮ ತಮ್ಮ ಕುಡುಗೋಲನ್ನು ತೆಗೆದುಕೊಂಡು ಮಹಾಸಾಗರದಂತ್ತಿದ್ದ ಗೋಧಿಯ ಪೈರಿನತ್ತ ನುಗ್ಗಿದರು. 

ಇಂಗ್ಲಿಷ್ ಭಾಷೆಯಿಂದ ಅನುವಾದ – ಅಶ್ವಿನಿ. ವಿ 

ಕಾಮೆಂಟ್‌ಗಳಿಲ್ಲ: