Pages

ಕಥೆ - ಜ್ಞಾನೋದಯ

                               
ಬೀರಮ್ಮ ಹೊತ್ತಾರೆ ಎದ್ದು ಎಲ್ಲಾ ಕೆಲಸ ಮುಗಿಸಿ ಕೂಲಿಗೆ ಹೊರಟಳು. ನಿಂಗವ್ವ ಇನ್ನೂ ಹಟ್ಟಿಯ ಬಾಗಿಲನ್ನೇ ತೆರೆಯದಿರುವುದನ್ನು ಕಂಡು ಇವಳಿಗೇನಾಯಿತೆಂದು “ನಿಂಗಿ, ನಿಂಗಿ” ಎಂದು ಬಾಗಿಲನ್ನು ಕುಟ್ಟಿದಳು.
ಒಳಗೆ ಕೆಟ್ಟ ಕನಸಿನಿಂದ ನರಳುತ್ತಿದ್ದ ನಿಂಗವ್ವ ದಢಾರನೆ ಎದ್ದು ಕುಳಿತಳು. ವಾಸ್ತವಕ್ಕೆ ಬಂದ ತಕ್ಷಣ ‘ಇಷ್ಟೊತ್ತು ಕಂಡಿದ್ದು ಕನಸಾ?’ ಎಂದು ಸಮಾಧಾನಗೊಂಡಳು. ಎದ್ದು ಬಾಗಿಲನ್ನು ತೆರೆದಳು.
“ಯಾಕಮ್ಮಿ ಇನ್ನು ಬೆಳಗಾಗಿಲ್ವೆ ನಿಂಗೆ, ಇವತ್ತು ದೊಡ್ಡಮನೆಯವರ ಕಳ್ಳೆಕಾಯಿ ಬಿಡಿಸಕ್ಕೆ ಹೋಗ್ಬೇಕು. ಮರೆತು ಹೋಯ್ತಾ?” ಎಂದು ರಾಗ ತೆಗೆದಳು ಬೀರಮ್ಮ.
“ಇಲ್ಲ ಬೀರಮ್ಮ, ಯಾಕೋ ಚೆನ್ನಿ ಶ್ಯಾನೆ ಕನ್ಸಲ್ಲಿ ಬರ್ತಾವ್ಳೆ. ಪೇಟೇಲಿ ಕೂಸು ಏನ್ ಪಾಡು ಪಡ್ತಾವ್ಳೋ ಏನೋ. ಹೋಗಿ ನೋಡ್ಕಂಡು ಬತ್ತೀನಿ” ಕುಗ್ಗಿದ ದನಿಯಲ್ಲಿ ಹೇಳಿದಳು ನಿಂಗವ್ವ.
“ಏನಾರ ಹೇಳೆ, ನೀ ಬಲು ಕಟುಕಿ, ಇರಾ ಒಂದು ಮಗೀನಾ ಪ್ಯಾಟೀಗ್ ಕಳ್ಸಿ ಅದೇನ್ ಜೀವ್ನ ಮಾಡ್ತಿದ್ದೀ” ಎಂದು ಕಟಕಿಯಾಡಿ ಹೊರಟುಹೋದಳು. ಬೀರಮ್ಮನ ಮಾತು ನಿಂಗಿಗೆ ನೇರ ಎದೆಗೆ ಚುಚ್ಚಿದಂತಾಯಿತು. ಅವಳ ಕಣ್ಣಲ್ಲಿ ನೀರು ತನ್ನಂತಾನೇ ಚಿಮ್ಮಿತು. ಅಲ್ಲೇ ಬಾಗಿಲ ಬಳಿ ಕುಸಿದು ಕುಳಿತಳು.
ನಿಂಗವ್ವನ ಗಂಡ ತೀರಿಕೊಂಡು ಒಂದು ವರ್ಷವಾಗಿತ್ತು. 10 ವರ್ಷದ ಚೆನ್ನಮ್ಮ ನಿಂಗಮ್ಮನ ಮಗಳು. ತನ್ನ ಕೂಲಿಯಿಂದ ಬರುವ ಅಷ್ಟಿಷ್ಟು ಹಣದಿಂದ ಮಗಳನ್ನು ಓದಿಸಲಾಗುವುದಿಲ್ಲವೆಂದು, ದೂರದ ಸಂಬಂಧಿಕರೊಬ್ಬರ ಮನೆಗೆ ಕಳಿಸಿದ್ದಳು. ಶ್ರೀಮಂತರಾದ ಅವರು ‘ಚೆನ್ನಿಯನ್ನು ನಾವೇ ಸಾಕಿಕೊಳ್ಳುತ್ತೇವೆ, ಶಾಲೆಗೂ ಸೇರಿಸುತ್ತೇವೆ, ನಮ್ಮ ಮನೆಯಲ್ಲಿ ಚೆನ್ನಿ ಅಲ್ಪಸ್ವಲ್ಪ ಕೆಲಸ ಮಾಡಿಕೊಂಡಿದ್ದರೆ ಸಾಕು’ ಎಂದು ಹೇಳಿ ಕರೆದುಕೊಂಡು ಹೋಗಿದ್ದರು.
ಹಳ್ಳಿಯಲ್ಲೆ ಇದ್ದರೆ ಒಪ್ಪೊತ್ತು ಊಟ, ಹರಕಲು ಬಟ್ಟೆ, ಸುಡುಬಿಸಿಲಲ್ಲಿ ಕುರಿ ಕಾಯುವುದು ಅವಳ ಪಾಲಿಗೆ ಕಟ್ಟಿಟ್ಟ ಬುತ್ತಿ. ಅಲ್ಲಿಗೆ ಹೋದರೆ ಶಾಲೆಗೆ ಹೋಗಬಹುದು, ಹೊಟ್ಟೆ ತುಂಬ ಊಟ, ಹಾಕಿಕೊಳ್ಳಲು ಬಟ್ಟೆ ಸಿಗುತ್ತದೆ ಎಂಬ ಆಸೆಯಿಂದ ಮಗಳು ಹೋಗುವುದಿಲ್ಲವೆಂದರೂ ನಿಂಗಿ ಅವಳನ್ನು ಕಳಿಸಿದ್ದಳು. ಮಗಳ ಮೇಲಿನ ಮಮತೆಯನ್ನು ಬದಿಗೊತ್ತಿ, ಅವಳ ಬಾಳು ಚೆನ್ನಾಗಿರಲೆಂದು ಬಯಸಿ ಪೇಟೆಗೆ ಕಳಿಸಿ, ತಾನೊಬ್ಬಳೇ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದಳು.
ಮಗಳು ಅಲ್ಲಿ ಸುಖವಾಗಿ ತಿಂದುಂಡು ಶಾಲೆಗೆ ಹೋಗುತ್ತಿದ್ದಾಳಲ್ಲಾ ಎಂದು ನೆನೆಸಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡು, ನಿಂಗವ್ವ ಎದ್ದು ಹೊರಡಲು ತಯಾರಿ ನಡೆಸಿದಳು. ಚೆನ್ನಿಗೆ ಈರುಳ್ಳಿ ಹಾಕಿದ ರಾಗಿ ರೊಟ್ಟಿಯೆಂದರೆ ಪಂಚಪ್ರಾಣ. ಅದನ್ನೇ ಮಾಡಲು ಅಣಿಯಾದಳು. ಆದರೆ ಈರುಳ್ಳಿ ಇಲ್ಲವಲ್ಲ ಎಂದು ಚಡಪಡಿಸಿ, ಪಕ್ಕದ ಮನೆಯ ಅಮ್ಮಣ್ಣಿಯನ್ನು ಕೇಳಲು ಹೋದಳು.
ಅಮ್ಮಣ್ಣಿ ಮನೆ ಹೊರಗಡೆ ಕುಳಿತಿದ್ದಳು. ನಿಂಗವ್ವನನ್ನು ಕಂಡು ಮುಗುಳ್ನಕ್ಕು, ಏನೆಂದು ವಿಚಾರಿಸಿ ಈರುಳ್ಳಿ ತರಲೆಂದು ಒಳನಡೆದಳು. ಬಾಗಿಲಲ್ಲೇ ನಿಂತಿದ್ದ ನಿಂಗವ್ವ ಮನೆಯೊಳಗೆ ಬಗ್ಗಿ ನೋಡತೊಡಗಿದಳು. ಟಿ.ವಿ ನೋಡುತ್ತಿದ್ದ ಸುಬ್ಬಯ್ಯ ಶಾಸ್ತ್ರಿಗಳು ನಿಂಗವ್ವನನ್ನು ಕಂಡು ತಕ್ಷಣ ಬೇಸರದ ದನಿಯಲ್ಲಿ “ನೋಡು ನಿಂಗವ್ವ ಮಗೀಗೆ ಎಂಥಾ ಕೆಲಸ ಕೊಟ್ಟವ್ರೆ, ಪಾಪಿ ಜನಗಳು” ಎಂದರು.
ಏನೊಂದು ಅರ್ಥವಾಗದೆ ನಿಂಗವ್ವ “ಏನಾಗೈತೆ ಸಾಮಿ” ಎಂದಳು.
“ಮಗೂನ ಸಾಕ್ತೀವಿ ಕೊಡಿ ಎಂದು ಕರೆದುಕೊಂಡು ಹೋಗಿ, ಸರಿಯಾಗಿ ಊಟ ಹಾಕದೆ, ಕೆಲಸ ಮಾಡಿಸಿಕೊಂಡು, ಹೊಡೆದೂ, ಬಡಿದೂ ಕೊನೆಗೆ ಆಸ್ಪತ್ರೆಗೆ ತಗೊಂಡು ಹೋಗಿ ಹಾಕಿದ್ದಾರೆ. ಆ ಮಗೂ ಮತ್ತು ಅದರ ತಾಯಿಯ ಗೋಳು ನೋಡೋಕಾಗಲ್ಲ”.


ಟಿ.ವಿಯಲ್ಲಿ ತೋರಿಸುತ್ತಿದ್ದ ಆ ಮುಗುವಿನ ಮುಖ ಕಂಡು ನಿಂಗವ್ವನ ಕರುಳು ಚುರುಕ್ಕೆಂದಿತು. ತನ್ನ ಚೆನ್ನಿಯೇ ಅಲ್ಲಿ ಹಾಸಿಗೆಯ ಮೇಲೆ ಮಲಗಿದ್ದಾಳೆ ಎಂದು ಭಾವಿಸಿಕೊಂಡು ಹಾಗೆಯೇ ಕುಸಿದು ಬಿದ್ದಳು.
ಮುಖದ ಮೇಲೆ ಬಿದ್ದ ನೀರಿನಿಂದ ನಿಂಗವ್ವ ಕಣ್ಣುಬಿಟ್ಟಳು. ಅಮ್ಮಣ್ಣಿ ತಂದುಕೊಟ್ಟ ನೀರು ಕುಡಿದಳು. “ಯಾಕೆ ನಿಂಗವ್ವ ಮೈಯಲ್ಲಿ ಹುಷಾರಿಲ್ಲವಾ?” ಕೇಳಿದರು.
“ಇಲ್ಲಮ್ಮಣ್ಣಿ, ಬೆಳಗಿನಿಂದ ಏನೂ ತಿಂದಿಲ್ಲ, ಅದಕ್ಕೆ” ಎನ್ನುತ್ತಾ ಈರುಳ್ಳಿಯನ್ನೂ ಪಡೆಯದೆ ನೇರ ಊರ ಗೇಟಿಗೆ ಹೊರಟಳು. ‘ಇನ್ನು ಮುಂದೆ ಏನೇ ಆಗಲಿ ಚೆನ್ನಿ ನನ್ನ ಬಳಿಯೇ ಇರುವಳು. ಎಷ್ಟೇ ಕಷ್ಟ ಆದರೂ ಅವಳನ್ನು ಇಲ್ಲಿಯೇ ಶಾಲೆಗೆ ಹಾಕಿ ಓದಿಸಬೇಕು. ಯಾರ ಮನೆಯಲ್ಲಿಯೋ ನನ್ನ ಮಗಳು ಯಾಕೆ ಕಷ್ಟ ಪಡಬೇಕು’ ಎಂದುಕೊಂಡು ಅವಳನ್ನು ಕರೆದುಕೊಂಡು ಬರಲು ನಿರ್ಧರಿಸಿ ಪೇಟೆಯ ಬಸ್ ಹತ್ತಿದಳು.


    -   ಉಷಾಗಂಗೆ    

ಕಾಮೆಂಟ್‌ಗಳಿಲ್ಲ: