Pages

ಅನುವಾದಿತ ಕಥೆ - “ಚಿಕ್ಕವರು ದೊಡ್ಡವರಿಗಿಂತ ವಿವೇಕಿಗಳು” - ಲಿಯೊ ಟಾಲ್‍ಸ್ಟಾಯ್


ಈಸ್ಟರ್‍ನ ಸಮಯವದು. ಕೈದೋಟಗಳಲ್ಲಿನ್ನೂ ಮಂಜು ಸುರಿಯುತಿತ್ತು. ಹಳ್ಳಿಯ ಬೀದಿಯಲ್ಲಿ ನೀರಿನ್ನೂ ಹರಿದುಹೋಗುತ್ತಿತ್ತು. ಬೇರೆ ಬೇರೆ ಮನೆಗಳ ಇಬ್ಬರು ಪುಟ್ಟ ಹುಡುಗಿಯರು ಆ ಚಿಕ್ಕ ದಾರಿಯಲ್ಲಿ ಭೇಟಿಯಾಗುತ್ತಿದ್ದರು. ಎರಡು ಫಾರ್ಮ್‍ಗಳ ನಡುವಿನ ಚಿಕ್ಕ ಹಾದಿಯಲ್ಲಿ, ತೋಟಗಳಿಂದ ಬಂದ ಗಲೀಜು ನೀರು ಅಲ್ಲಿ ಸೇರಿ ಒಂದು ದೊಡ್ಡ ಹೊಂಡವಾಗಿತ್ತು. ಒಬ್ಬ ಹುಡುಗಿ ಬಹಳ ಚಿಕ್ಕವಳು, ಇನ್ನೊಬ್ಬಳು ಅವಳಿಗಿಂತ ಸ್ವಲ್ಪ ದೊಡ್ಡವಳು. ಅವರ ತಾಯಂದಿರು ಅವರಿಬ್ಬರಿಗೂ ಹೊಸ ಬಟ್ಟೆಗಳನ್ನು ತೊಡಿಸಿದ್ದರು. ಚಿಕ್ಕವಳು ನೀಲಿ ಬಣ್ಣದ, ದೊಡ್ಡವಳು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಇಬ್ಬರೂ ತಲೆಯ ಸುತ್ತ  ಕೆಂಪು ಸ್ಕಾರ್ಕ್  ಧರಿಸಿದ್ದರು. ಚರ್ಚಿನಿಂದ ಆಗಷ್ಟೇ ಹೊರಬಂದ ಅವರು ಒಬ್ಬರಿಗೊಬ್ಬರು ತಮ್ಮ ಹೊಸ ಬಟ್ಟೆಯನ್ನು ತೋರಿಸಿಕೊಂಡು, ನಂತರ ಆಟವಾಡಲಾರಂಭಿಸಿದರು. ಕ್ರಮೇಣ ಅವರಿಗೆ ನೀರನ್ನು ಎರಚಾಡುವ ಮನಸ್ಸಾಯಿತು. 

ಚಿಕ್ಕವಳು ಹೊಂಡಕ್ಕೆ ಕಾಲಿಡಬೇಕೆನ್ನುವಷ್ಟರಲ್ಲಿ ದೊಡ್ಡವಳು ಅವಳನ್ನು ತಡೆದಳು. “ಮಾಲಾಶಾ, ಹಾಗೆ ಹೋಗಬೇಡ, ನಿನ್ನ ಅಮ್ಮನಿಗೆ ಕೋಪ ಬರುತ್ತದೆ. ನಾನು ನನ್ನ ಶೂ ಮತ್ತು ಉದ್ದದ ಕಾಲ್ಚೀಲಗಳನ್ನು ತೆಗೆಯುತ್ತೇನೆ, ನೀನೂ ತೆಗೆ”. ಹಾಗೆಯೇ ಮಾಡಿ, ಅವರಿಬ್ಬರೂ ತಮ್ಮ ಸ್ಕರ್ಟ್‍ಗಳನ್ನು ಮೊಳಕಾಲಿನವರೆಗೂ ಮೇಲಕ್ಕೆ ಎತ್ತಿಕೊಂಡು ಹೊಂಡದಲ್ಲಿ ನಡೆಯಲಾರಂಭಿಸಿದರು. 

ನೀರು ಮಾಲಾಶಾಳ ಪಾದಕ್ಕಿಂತ ಮೇಲೆ ಬಂದಾಗ ಅವಳು, “ಅಕುಲ್ಯಾ, ನನಗೆ ಭಯವಾಗುತ್ತಿದೆ, ಇಲ್ಲಿ ಆಳವಿದೆ”, ಎಂದಳು. “ಬಾ ಪರವಾಗಿಲ್ಲ, ಹೆದರಬೇಡ, ನೀರು ಅದಕ್ಕಿಂತ ಹೆಚ್ಚು ಆಳವೇನೂ ಇಲ್ಲ”. ಒಬ್ಬರ ಬಳಿ ಒಬ್ಬರು ಬಂದಾಗ “ಮಾಲಾಶಾ, ಹುಷಾರಾಗಿ ನಡೆ, ಎಗರಿಸಬೇಡ”, ಎಂದಳು ಅಕುಲ್ಯಾ. ಅಷ್ಟರಲ್ಲಿ ಮಾಲಾಶಾಳ ಹೆಜ್ಜೆ ಜೋರಾಗಿ ನೀರನ್ನು ಬಡಿದು ನೀರು ಅಕುಲ್ಯಾಳ ಬಟ್ಟೆಯ ಮೇಲೆ ಎಗರಿತು, ಅವಳ ಕಣ್ಣು, ಮೂಗಿಗೂ ಸಿಡಿಯಿತು. 

ಅಕುಲ್ಯಾ ತನ್ನ ಬಟ್ಟೆಯ ಮೇಲಿನ ಕಲೆಯನ್ನು ಕಂಡು ಕೋಪಗೊಂಡು ಮಾಲಾಶಾಳಿಗೆ ಹೊಡೆಯಲು ಹೋದಳು. ಮಾಲಾಶಾಳಿಗೆ ಹೆದರಿಕೆಯಾಯಿತು. ತಕ್ಷಣವೇ ಅವಳು ನೀರಿನಿಂದ ಹೊರಬಂದು ಮನೆಯತ್ತ ಓಡತೊಡಗಿದಳು. ಆಗಷ್ಟೇ ಅಕುಲ್ಯಾಳ ತಾಯಿ ಅಕಡೆ ಬಂದಳು. ಮಗಳ ಬಟ್ಟೆಯ ಮೇಲಿನ ಕಲೆಗಳನ್ನು ಕಂಡು ಕೋಪದಿಂದ, “ಏ, ಕೆಟ್ಟ ಹುಡುಗಿಯೇ, ಇಲ್ಲೇನು ಮಾಡುತ್ತಿದ್ದೀಯಾ?” ಕೇಳಿದಳು. “ಮಾಲಾಶಾ ಬೇಕಂತಲೇ ಮಾಡಿದಳು,” ಉತ್ತರಿಸಿದಳು ಅವಳು. 

ಇದನ್ನು ಕೇಳಿದ ತಕ್ಷಣ ಅಕುಲ್ಯಾಳ ತಾಯಿ ಮಾಲಾಶಾಳನ್ನು ಹಿಡಿದುಕೊಂಡು ಬೆನ್ನ ಮೇಲೆ ಹೊಡೆದಳು. ಮಾಲಾಶಾ ಇಡೀ ಬೀದಿಗೆ ಕೇಳಿಸುವಂತೆ ಅಳಲಾರಂಭಿಸಿದಳು. ಅವಳ ತಾಯಿ ಹೊರಬಂದು, “ನನ್ನ ಮಗಳನ್ನೇಕೆ ಹೊಡೆಯುತ್ತಿದ್ದೀಯಾ?” ಎಂದು ಜೋರು ಮಾಡಿದಳು. ತಕ್ಷಣವೇ ಅವರಿಬ್ಬರೂ ಜೋರಾಗಿ ಜಗಳವಾಡಲಾರಂಭಿಸಿದರು. ಮನೆಯೊಳಗಿಂದ ಪುರುಷರೂ ಸಹ ಹೊರಬಂದು ಜಗಳದಲ್ಲಿ ಸೇರಿದರು. ಸ್ವಲ್ಪಹೊತ್ತಿನಲ್ಲಿ ಬೀದಿಯಲ್ಲಿ ಜನಜಂಗುಳಿ ಸೇರಿತು. ಎಲ್ಲರೂ ಕಿರುಚುವವರೇ, ಯಾರೂ ಕೇಳುವವರಿರಲಿಲ್ಲ. ಅವರೆಲ್ಲಾ ಜಗಳ ಮುಂದುವರೆಸಿಕೊಂಡು ಹೋದರು.

ಜಗಳ ಹೊಡೆದಾಟದ ಮಟ್ಟಕ್ಕೆ ಹೋಗುವಷ್ಟರಲ್ಲಿ ಅಕುಲ್ಯಾಳ ಅಜ್ಜಿ ಅವರನ್ನು ಸಮಾಧಾನ ಪಡಿಸಲೆತ್ನಿಸಿದರು. “ನೀವು ಸ್ನೇಹಿತರು, ಹೀಗೆ ವರ್ತಿಸುವುದು ಸರಿಯೇ? ಅದೂ ಇಂತಹ ದಿನದಂದು. ಈಸ್ಟರ್ ಸಂತೋಷವಾಗಿರಬೇಕಾದ ಸಮಯ, ಜಗಳವಾಡುವ ಸಮಯವಲ್ಲ.” ಆದರೆ ಯಾರೂ ಅಜ್ಜಿಯ ಮಾತನ್ನು ಕೇಳಲು ಸಿದ್ಧರಿರಲಿಲ್ಲ. 

ಅವರೆಲ್ಲಾ ಹೀಗೆ ಕೂಗಾಡುತ್ತಿರುವಾಗಲೇ ಅಕುಲ್ಯಾ ತನ್ನ ಬಟ್ಟೆಯ ಮೇಲಿನ ಮಣ್ಣನ್ನು ಸ್ವಚ್ಛಗೊಳಿಸಿಕೊಂಡು ಪುನಃ ಆ ಹೊಂಡದ ಬಳಿ ಹೋಗಿದ್ದಳು. ಒಂದು ಚೂಪಾದ ಕಲ್ಲನ್ನೆತ್ತಿಕೊಂಡು ಆ ಹೊಂಡದ ಮುಂದಿನ ನೆಲವನ್ನು ಅಗೆಯತೊಡಗಿದಳು. ಮಾಲಾಶಾ ಅವಳನ್ನು ಸೇರಿಕೊಂಡು ಒಂದು ಸಣ್ಣ ಕಟ್ಟಿಗೆಯಿಂದ ಅಗೆಯಲು ಸಹಾಯ ಮಾಡಿದಳು. ದೊಡ್ಡವರೆಲ್ಲಾ ಜಗಳವಾಡುತ್ತಿದ್ದಂತೆಯೆ ನೀರು ಹರಿದು ಅವರತ್ತ ಬಂದಿತು. ಹುಡುಗಿಯರು ಆ ನೀರನ್ನೇ ಹಿಂಬಾಲಿಸಿಬಂದರು. 

ಮಾಲಾಶಾ ತನ್ನ ಕಡ್ಡಿಯನ್ನು ಅದರೊಳಗೆ ಹಾಕಿದಳು. “ಹಿಡಿದುಕೋ ಮಾಲಾಶಾ, ಹಿಡಿದುಕೋ” ಕೂಗಿದಳು ಅಕುಲ್ಯಾ. ಮಾಲಾಶಾ ಮಾತನಾಡಲಾಗದಷ್ಟು ನಗುತ್ತಿದ್ದಳು. ಕಡ್ಡಿಯು ಆ ನೀರಿನೊಂದಿಗೆ ಹರಿದುಹೋಗುತ್ತಿರುವುದನ್ನು ಕಂಡು ಆ ಹುಡುಗಿಯರಿಗೆ ಖುಷಿಯೋ ಖುಷಿ. ಅವರು ಆ ಗುಂಪಿನತ್ತ ಬಂದರು.
ಅವರನ್ನು ನೋಡಿ ಅಜ್ಜಿಯು, ದೊಡ್ಡವರ ಕಡೆ ತಿರುಗಿ, “ನಿಮಗೆ ನಾಚಿಕೆಯಾಗುವುದಿಲ್ಲವೇ? ಆ ಹುಡುಗಿಯರಿಗಾಗಿ ನೀವು ಜಗಳವಾಡುತ್ತಿದ್ದೀರಿ, ಆದರೆ ಅವರೇ ಅದನ್ನೆಲ್ಲಾ ಮರೆತು ಸಂತೋಷವಾಗಿ ಒಟ್ಟಿಗೆ ಆಟವಾಡುತ್ತಿದ್ದಾರೆ. ಪ್ರೀತಿಯ ಪುಟ್ಟ ಮಕ್ಕಳು, ಅವರು ನಿಮಗಿಂತ ವಿವೇಕಿಗಳು!” ಆ ದೊಡ್ಡವರೆಲ್ಲಾ ಆ ಮಕ್ಕಳನ್ನು ನೋಡಿ ನಾಚಿಕೆಪಟ್ಟರು. ತಮ್ಮ ಮೂರ್ಖತನಕ್ಕೆ ತಾವೇ ನಗುತ್ತಾ ಮನೆಯೊಳಗೆ ಹೋದರು.

[ಮೂಲ ಕಥೆ - ಲಿಯೊ ಟಾಲ್‍ಸ್ಟಾಯ್ 
ಅನುವಾದ - ಸುಧಾ ಜಿ ]

ಕಾಮೆಂಟ್‌ಗಳಿಲ್ಲ: