Pages

ಕವನಗಳು

[ವಿಜಯಪುರದಲ್ಲಿ ಪುರುಷವಿಕೃತಿಗೆ ಬಲಿಯಾದ 
ದಾನಮ್ಮಳನ್ನು ನೆನೆದು ] 
ಕರುಳ ಕೂಗು
ಬಾಚಿ ಬೈತಲೆ ತೆಗೆದು
ಜಡೆಗಳೆರಡರ ನೆಯ್ದು
ನಿನ್ನ ಕಳುಹಿಸಿದ್ದೆ
ನನ್ನ ಪ್ರೇಮದ ಒಡಲು
ಯಾವುದೋ ರಣಹದ್ದು
ನಿನ್ನ ಸಾಯಿಸಿಹುದು!
ಇಂದೆನಗೆ ಘೋರ
ತಾಯ ಮಮತೆಗೆ ದ್ರೋಹ
ದಾನವತ್ವಕ್ಕೆ ಮತ್ತೆ ಎಣೆಯು ಉಂಟೆ!
'ಬಾನು ಬೇಗಂ'ಳ ಬೆಂಕಿ
ಆರಿಲ್ಲ ಇನ್ನೂ!
ದಾನಮ್ಮ! ನನ್ನಮ್ಮ ನೀನು ಬಲಿಯೇ?

ಸಜ್ಜೆ ರೊಟ್ಟಿಯ ಕೊಟ್ಟು
ಅಗಸೆ ಚಟ್ನಿಯ ನೀಡಿ
ನಗುವ ಕಾಣುವ ಬಯಕೆ ಕಾಡಿತ್ತು
ದಿನದ ಬೈಗಿನಲ್ಲಿ ನೀನು
ಮತ್ತೆ ಬರೀ ನೆನಪು ದಾನಮ್ಮ
ರಕ್ಕಸರಿಗೆ ದುಸ್ವಪ್ನವಾಗಿ ಬಾ
ಹೆತ್ತೊಡಲು ಇಂದು
ಬೆಂಕಿಯಲ್ಲಿ ಬೇಯುತಿರೆ
ಉಡಿಯ ಮತ್ತೊಮ್ಮೆ ತುಂಬು ಬಾ ಬೇಗ ಬಾ

- ಸಂದ್ಯಾ ಪಿ‌.ಎಸ್


ಮಾರ್ದನಿ ಆಗು
ನಿನ್ನ ಕೈತುತ್ತು ತಿಂದು
ನಲಿದು ಬದುಕುವ ಆಸೆ ಇತ್ತಮ್ಮ
ನನ್ನ ಸ್ವಪ್ನಗಳು ಮೊಳಕೆ ಒಡೆದು
ಚಿಗುರುವ- ಸಮಯ
ಮೃಗಗಳ ಕೈಗೆ ಸಿಲುಕಿತಮ್ಮ
ನಿನ್ನ ಒಡಲಿನ ಬೆಂಕಿ ಉರಿಯುತಿರೆ
ಕಾರಣ- ನನ್ನ ಸಾವೇ ಅಮ್ಮ.!
ನೀ ಕುಸಿಯದಿರು
ನನ್ನ ಅಕ್ಕನ ಅಮ್ಮನ
ಹಾಗೆ ನಿರ್ಭಯ ತೋರು
ನನ್ನ ಸೋದರಿ-ಸ್ನೇಹಿತೆಯರ
ರಕ್ಷಣ ಕವಚ- ನೀನಾಗಮ್ಮ
ಬರುವರೇನೊ- ಬರುವರು ಅಮ್ಮ
ನನ್ನ ಸೋದರ- ಸೋದರಿಯರು
ಬರುವರು.....
ಚಿಗುರುವ ಕನಸುಗಳ
ಹಿಂಬಾಲಿಸಿ ಹೊನಲಾಗಿ
ನಿಲ್ಲುವರೇನೋ -ತಾಳಮ್ಮ
ಬಂದರೆ ಅವರು ಸೇರಮ್ಮ
ಬರುತಾರವರು ನೀ ಜೊತೆಗೂಡಮ್ಮ
ನಿನ್ನ ಮಗಳ ಹಾಗೆ ಇರುವ
ಮಕ್ಕಳ ಒಡಲಾಗುವೆಯಾ?ಹೇಳಮ್ಮ
ದೇವತೆ ಎಂದು ಕೈ ಮುಗಿವರಮ್ಮ
ಕಾಣದ ಹಾಗೆ ಕೈ ಹಾಕಿ ಕೊಂದಿಹರಮ್ಮ..!!
ಆ ಕೈಗಳ ಮುರಿಯುವ
ಕತ್ತಿ ಯಾಗು ನೀ..!
ನನ್ನ ಸೋದರಿಯರ ಬಾಳಿಗೆ
ಬೆಳಕಾಗಿ ಬಾ ಅಮ್ಮ.

    ‌‌‌    ‌‌‌‌       - ಚಂದ್ರಕಲಾ


ನಾನೊಂದು ಹೆಣ್ಣು
ನಾನೊಂದು ಹೆಣ್ಣು
ಹಕ್ಕಿಯಂತೆ ಹಾರಬೇಕು
ಕೋಗಿಲೆಯಂತೆ ಹಾಡಬೇಕು
ಮೀನಿನಂತೆ ಈಜಬೇಕು
ಗಂಡು ಹುಡುಗರಂತೆ ಆಡಬೇಕು
ಆದರೆ ನಾನು ಹೆಣ್ಣು, ಅದೆಲ್ಲ ನಿಷಿದ್ಧ.
ನಾನೊಂದು ಹೆಣ್ಣು
ನನ್ನಕ್ಕ ತಂಗಿಯರ, ಹೆಣ್ಣು ಮಕ್ಕಳ ಅತ್ಯಾಚಾರವಾಗಿ
ಮಕ್ಕಳ ಕೊಲೆಯಾಗಿ
ನನ್ನ ಲೋಕವದು ಛಿದ್ರವಾಗುತಿರಲು, ನಾಶವಾಗುತಿರಲು
ನನ್ನ ಧ್ವನಿಯೆತ್ತಬೇಕು.
ಕೋಮು ದಳ್ಳುರಿಯೊಳಗೆ ನನ್ನ ಜನ ಬೆಂದರು,
ಕೆಳಜಾತಿಯವರೆಂದು ನನ್ನ ಜನರ ಕೊಂದರು
ನನ್ನ ಮನೆ ಉರಿಯುತ್ತಿದೆ ದ್ವೇಷದಾಗ್ನಿಯಲಿ
ನನ್ನೊಡಹುಟ್ಟಿದವರು ಸಾಯುತಿಹರು ಹಸಿವಿನಲಿ.
ಮತ್ತೆ,
ಹರಿದುದನು ಹೊಲಿದು ಹೊಸ ಜೀವನ ಕಟ್ಟಬೇಕು
ಹಿಂದುವೊ, ಮುಸ್ಲಿಮನೊ, ಸಿಖ್ಖನೊ, ಯಾರಾದರೇನಂತೆ
ನನ್ನವರಿಗೆ ನಾ ನೀಡಲಾರೆ ಸಹಾಯ ಹಸ್ತ,
ಅವರನ್ನು ಕೊಲ್ಲಬಹುದು, ನನ್ನ ಕಾಡಬಹುದು, ಅದುವೆ ಭಯ.
ಆದರೂ,
ಕರಾಳ ಕೃತ್ಯಗಳ ಖಂಡಿಸಿ ಧ್ವನಿಯೆತ್ತಬೇಕು
ನನ್ನ ಮೌನ ದೌರ್ಬಲ್ಯವಲ್ಲ
ನಾನೊಂದು ಹೆಣ್ಣು, ನಾನೊಂದು ಮಾನವ ಜೀವಿ,
ಅದಕೇ ನನ್ನ ಧ್ವನಿಯೆತ್ತಬೇಕು ಗಟ್ಟಿಯಾಗಿ.

- ಇಂಗ್ಲೀಷ್ ಮೂಲ: ಕೆ.ಎಸ್. ಗಿರಿಜಾ

- ಅನುವಾದ: ಎಸ್. ಎನ್. ಸ್ವಾಮಿ.


ಹೋದೆಯಾ ತಂಗಿ ಹೋದೆಯಾ
ನೀನಾದೆಯಾ ಕರ್ನಾಟಕದ ನಿರ್ಭಯಾ
ಮಾಸುವ ಮುನ್ನವೇ ಅ ನಿರ್ಭಯಾ
ಎಷ್ಟು ಕನಸ ಕಂಡಿದ್ದೇಯೋ ನೀನು
ಯಾವ ಕನಸುಗಳು ಗರಿ ಕಟ್ಟುತ್ತಿದ್ದವೋ
ನೀ ಹೋದೆಯಾ ಅವು ಈಡೇರುವ ಮುನ್ನ
ಅವ್ವ-ಅಪ್ಪನ ಮುದ್ದಿನ ಕೂಸು ನೀ
ಬಲಿಯಾದೆಯಾ ಕಾಮುಕರ ಕ್ರೌರ್ಯಕ್ಕೆ
ತೆರಳಿದೇಯಾ ಮರಳಿ ಬಾರದ ಲೋಕಕ್ಕೆ
ನಿನ್ನ ಕೊಂದವರು ಸಾಮಾನ್ಯರಲ್ಲಮ್ಮ
ಅವರುಗಳು ಬೊಬ್ಬಿಡುವರು
ಹೆಣ್ಣುಮಕ್ಕಳು ನಮ್ಮ ದೇವಿಯರು
ಅದುವೇ ಬರೀಯ ಮಾತುಗಳು
ಅವರು ಕಾಮುಕ ಮೃಗಗಳು
ಮತಿ ಇಲ್ಲದ ವಿಕೃತಕಾಮಿಗಳು
ಇನ್ನೊಂದೆಡೆ ನಡೆಯುತ್ತಿದೆ ರಾಜಕೀಯ
ಅವರು ಅಗಬೇಕಿದೆ ಜನಪ್ರಿಯ
ಹಾಗಾಗಿ ಕಣ್ಮುಚ್ಚುತ್ತಿದೆ ನ್ಯಾಯ
ಇಂತಹವರ ಢೋಂಗಿತನವನ್ನು ಬಯಲಿಗೆಳೆಯಲು
ನಕಲಿಗಳ ಬಣ್ಣ ಕಳಚಲು
ಜನರು ಸಿಡಿಯಬೇಕಾಗಿದೆ ಆಗಿ ಕಾಡತೂಸುಗಳು

-ಆಕಾಶ್ ಕುಮಾರ್ ಬಿ.ಎನ್

ಕಾಮೆಂಟ್‌ಗಳಿಲ್ಲ: