Pages

ಕಥೆ - ವಾತ್ಸಲ್ಯದ ಕರೆ




“ಪಾಪಾ, ಪಾಪಾ.”
ಆ ಕರೆಯನ್ನು ಕೇಳಿ ಪುಸ್ತಕದಿಂದ ತಲೆ ಎತ್ತಿ ನೋಡಿದೆ. ದಿನಾ ಮನೆಯಿಂದ ಕೆಲಸಕ್ಕೆ ಹೋಗಲು ಒಂದು ಘಂಟೆ ಬಸ್ ಪ್ರಯಾಣ. ದಾರಿ ಸವೆಸುವುದಾದರೂ ಹೇಗೆ? ಪುಸ್ತಕ ಹಿಡಿದು ಕುಳಿತಿರುತ್ತಿದ್ದೆ. 
ಅದೊಂದು ದಿನ ಹಾಗೆಯೇ ಪುಸ್ತಕ ಓದುತ್ತಿರುವಾಗ, “ಪಾಪಾ, ಪಾಪಾ, ಬಾ”ದನಿ ಕೇಳಿಸಿತು. ಅಷ್ಟು ಆತ್ಮೀಯತೆಯ ಕರೆಯನ್ನು ನಾನೆಂದೂ ಕೇಳಿಸಿಕೊಂಡಿರಲಿಲ್ಲ. ಬಹುಶಃ ಸಿನಿಮಾದಲ್ಲಿ ನೋಡಿದ್ದೆನೇನೋ. 
ಆ ದನಿ ಕೇಳಿದ ತಕ್ಷಣ ತಲೆ ಎತ್ತಿ ನೋಡಿದೆ. 7-8 ವರ್ಷದ ಹುಡುಗನೊಬ್ಬ ತನ್ನ 3-4 ವರ್ಷದ ತಂಗಿಯನ್ನು ಬಸ್ಸಿನಿಂದ ಇಳಿಸಿಕೊಳ್ಳುತ್ತಿದ್ದ. ಮರುದಿನ ಸಹ ಅದೇ ಕರೆ. ಅದೇ ಹುಡುಗ. ತನ್ನ ವಯಸ್ಸಿಗೆ ದೊಡ್ಡವನೇ ಎಂಬಂತೆ ಕಾಣುತ್ತಿದ್ದ. ಶರ್ಟು ನಿಕ್ಕರ್ ತಂಬಾ ಎಣ್ಣೆಯ ಕರೆ. ಆತ ಯಾವುದೋ ಮೆಕಾನಿಕ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದನೇನೋ ಎಂಬಂತಿತ್ತು. ಮುಖದ ಮೇಲೆ ಅಮಾಯಕತೆ. ತಂಗಿಯ ಬಗ್ಗೆ ಕಾಳಜಿ ವಹಿಸಿ ಅವಳ ಕೈಹಿಡಿದು ಕೂತಿದ್ದ.
ಮರುದಿನ ಅದೇ ಕರೆಗಾಗಿ ಕಾಯುತ್ತಿದ್ದೆನೇನೋ ಎಂಬಂತೆ ಪುಸ್ತಕ ಹಿಡಿದು ಕೂತಿರಲಿಲ್ಲ. ಆದರೆ ಆ ಹುಡುಗ ಒಬ್ಬನೇ ಬಸ್ ಹತ್ತಿದ. ಹರಿದ ಮಾಸಿದ ಅಂಗಿಯನ್ನು ಹಾಕಿದ್ದರೂ ಮುಖದ ಮೇಲೆ ಒಂದು ರೀತಿಯ ಠೀವಿ ಇತ್ತು. 
ನನ್ನ ಪಕ್ಕದಲ್ಲಿನ ಸೀಟು ಖಾಲಿಯಿದ್ದುದ್ದರಿಂದ ನಾನೇ ಅವನನ್ನು ಬಂದು ಕುಳಿತುಕೊಳ್ಳಲು ಹೇಳಿದೆ. ಸಂಕೋಚದಿಂದಲೇ ಬಂದು ಕುಳಿತ. ನಾನೇ ಮಾತನಾಡಲು ಆರಂಭಿಸಿದೆ. ತಿಳಿದ ವಿಷಯವಿಷ್ಟು. ಆತನ ಹೆಸರು ರಾಜು. ಆತನ ತಂಗಿ ಸೀತಾ. ತಂದೆ ಕುಡಿದು ಕುಡಿದು ಸತ್ತಿದ್ದ. ತಾಯಿ ಅಲ್ಲಿ ಇಲ್ಲಿ ಕೆಲಸ ಮಾಡಿ ಅಲ್ಪಸ್ವಲ್ಪ ಸಂಪಾದಿಸುತ್ತಾಳೆ. ಇವನೂ ಮೂರನೆಯ ತರಗತಿಯವರೆಗೂ ಓದಿದ್ದಾನೆ. ಈಗ ಇವನೂ ಸಂಪಾದಿಸಲು ಹೋಗುತ್ತಿದ್ದಾನೆ. ಆದರೆ ತನ್ನ ತಂಗಿಯನ್ನು ಮಾತ್ರ ಚೆನ್ನಾಗಿ ಓದಿಸುತ್ತೇನೆ ಎಂದ. ನಮ್ಮ ಮನೆಯ ಹತ್ತಿರವೇ ಅವರ ಮನೆ. ತನ್ನ ಸ್ಟಾಪ್ ಬಂದಾಗ “ಬರ್ತೀನಿ ಮೇಡಮ್”ಎಂದವನೇ ಓಡಿದ.
ಹೀಗೆ ನಮ್ಮ ಪರಿಚಯ ಒಂದು ರೀತಿಯ ಸ್ನೇಹವಾಯಿತು. ಮೇಡಮ್ ಎನ್ನುತ್ತಿದ್ದವ ಅಕ್ಕ ಎನ್ನಲಾರಂಭಿಸಿದ. 
ಬಿಟಿಎಸ್ ಪ್ರಯಾಣದಿಂದ ಬೇಸತ್ತು ಹೊಸ ಲೂನಾ ತೆಗೆದುಕೊಂಡೆ. ಬಸ್ ಪ್ರಯಾಣ ನಿಂತುಹೋಯಿತು. ಆದರೆ ರಾಜು ಮಾತ್ರ ಆಗಾಗ ನೆನಪಿಗೆ ಬರುತ್ತಿದ್ದ.
ಒಂದು ದಿನ ಲೂನಾ ಕೈಕೊಟ್ಟಿತು. ‘ಏನು ಮಾಡೋದು’ ಎಂದು ಯೋಚಿಸುತ್ತಿದ್ದಾಗಲೇ ರಾಜು ನೆನಪು ಬಂದಿತು. ಆತನ ಬೀದಿಗೆ ಹೋಗಿ ಅಲ್ಲಿ ಕೇಳಿದಾಗ ಒಂದು ಗುಡಿಸಿಲನ್ನು ತೋರಿಸಿದರು. 
“ರಾಜು”ಕರೆದೆ. “ಬಂದೆ” ಎನ್ನುತ್ತಾ ಅವನು ತಿನ್ನುತ್ತಿದ್ದ ರೊಟ್ಟಿಯನ್ನು ಕೈಯಲ್ಲಿ ಹಿಡಿದುಕೊಂಡೆ ಹೊರಬಂದ. 
ಅವನ ಹಿಂದೆ ಅವನ ತಂಗಿ. “ಏನಕ್ಕಾ ನೀವಿಲ್ಲಿ?” ಆಶ್ಚರ್ಯಚಕಿತನಾದ. ವಿಷಯವನ್ನು ಕೇಳಿ ಮನೆಗೆ ಬಂದು ಹತ್ತೇ ನಿಮಿಷದಲ್ಲಿ ಲೂನಾ ರಿಪೇರಿ ಮಾಡಿದ. ಅದಾದ ನಂತರ ಲೂನಾ ಸರ್ವೀಸ್, ರಿಪೇರಿ ಎಲ್ಲವನ್ನೂ ಅವನೇ ನೋಡಿಕೊಳ್ಳುತ್ತಿದ್ದ.
ಮತ್ತೆ ರಾಜು ಜೊತೆ ಭಾಂದವ್ಯ ಬೆಳೆಯಿತು. ಆ ಅಣ್ಣ ತಂಗಿಯರ ಸಂಬಂಧ ಕಂಡಾಗ ನಿಜಕ್ಕೂ ಸಂತಸವಾಗುತಿತ್ತು. ಎಷ್ಟೋ ಬಾರಿ ನನಗೆ ಅಂತಹ ಅಣ್ಣನಿಲ್ಲವೇ ಎನಿಸುತಿತ್ತು. “ಏನೇ ಬೇಕಾದರೂ ಬಾ” ಎಂದು ನಾನು ಹೇಳಿದ್ದರೂ ಆತ ಎಂದೂ ನನ್ನನ್ನು ಏನೂ ಕೇಳಿರಲಿಲ್ಲ. ಬಹಳ ಆತ್ಮಗೌರವವಿದ್ದ ಹುಡುಗ.
ಸ್ವಲ್ಪ ದಿನ ರಾಜು ಕಾಣಿಸಲಿಲ್ಲ. ನಾನು ನನ್ನ ಕೆಲಸದ ಗಡಿಬಿಡಿಯಲ್ಲಿ ಅವನಿಗೆ ಹೇಳಿಕಳಿಸಲಿಲ್ಲ. 2-3 ದಿನಗಳು ಕೆಲಸದ ಕಾರಣ ಹೊರ ಊರಿಗೆ ಹೋಗಬೇಕಾಗಿ ಬಂತು. 
ಬಂದ ತಕ್ಷಣ ಪಕ್ಕದ ಮನೆಯವರು ರಾಜು 2-3 ಸಾರಿ ಬಂದಿದ್ದನೆಂದು ಹೇಳಿದರು. ಬೀಗದ ಕೈ ಅಮ್ಮನಿಗೆ ಕೊಟ್ಟು ಅವರ ಮನೆಗೆ ಹೋದೆ. 
“ರಾಜು” ಎಂದು ಕೂಗಿಕೊಂಡೇ ಅವರ ಮನೆಯೊಳಗೆ ಹೋದೆ. ರಾಜುವನ್ನು ಗುರುತಿಸಲಾಗಲಿಲ್ಲ. ವರ್ಷಾನುಗಟ್ಟಲೆ ರೋಗದಿಂದ ನರಳುತ್ತಿದ್ದಾನೇನೋ ಎಂಬಂತಿತ್ತು ಅವನ ಮುಖ. ನನ್ನ ನೋಡಿದ ತಕ್ಷಣ ತಲೆ ಬಗ್ಗಿಸಿ ಅಳಲಾರಂಭಿಸಿದ. ನನಗೆ ಗಾಬರಿಯಾಯಿತು. 
‘ಏನಾಯಿತು’ ಎಂದು ಕೇಳಿದರೆ ಉತ್ತರಿಸದೆ ತಾಯಿ ಮಗ ಇಬ್ಬರೂ ಜೋರಾಗಿ ಅಳಲಾರಂಭಿಸಿದರು. ಅಲ್ಲಿಗೆ ಬಂದ ಪಕ್ಕದ ಮನೆಯಾಕೆ ಹೇಳಿದ್ದನ್ನು ಕೇಳಿ ಶಾಕ್‍ಗೆ ಒಳಗಾದೆ. ತಂಗಿಗೆ ಕಾಲರಾ ಆಗಿತ್ತಂತೆ. ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಇರಲಿಲ್ಲವಂತೆ ಹೊರಗಡೆ ಔಷಧಿ ಕೊಡಿಸಲು ಅವನ ಹತ್ತಿರ ಕಾಸಿರಲಿಲ್ಲವಂತೆ. ಎಲ್ಲೆಲ್ಲೂ ಯಾರ್ಯಾರನ್ನೊ ಕೇಳಿದನಂತೆ. ಅದಕ್ಕೆಂದೇ ಎಂದೂ ನನ್ನನ್ನು ಏನು ಕೇಳಿರದ ರಾಜು ಮನೆಯ ಹತ್ತಿರ ಬಂದಿದ್ದಂತೆ. ಆದರೆ ಕೊನೆಗೆ ಏನೂ ಮಾಡಲಾಗದೆ ಆ ಮಗು ಕಣ್ಣುಮುಚ್ಚಿತ್ತು.
‘ಅಯ್ಯೊ, ಈಗಲೇ ನಾನು ಊರು ಬಿಟ್ಟು ಹೋಗಬೇಕಿತ್ತೇ?’ ನನ್ನನ್ನು ನಾನೇ ಹಳಿದುಕೊಂಡೆ. 
ರಾಜುವಿಗೆ ಏನೆಂದು ಸಮಾಧಾನ ಮಾಡಲಿ? ನಗುವೇ ತುಂಬಿರುತ್ತಿದ್ದ ಆ ಎಳೆಯ ಕಂದನ ಮುಖವನ್ನು ಬಾಡುವಂತೆ ಮಾಡಿದ ಈ ಸಮಾಜಕ್ಕೆ ಆತನ ‘ಪಾಪಾ’ ಎಂಬ ವಾತ್ಸಲ್ಯದ ಕರೆಯ ಬೆಲೆ ಗೊತ್ತಾದೀತೇ? ಆ ಆಕ್ರಂದನದ ಹಿಂದಿನ ಗಾಢವಾದ ನೋವಿನ ಅರಿವಾದೀತೇ? 
ರಾಜು ಹತ್ತಿರ ಬಂದು ನನ್ನ ಕೈಹಿಡಿದು ಅಳಲಾರಂಭಿಸಿದ. ಅವನಿಗೆ ಏನೆಂದು ಸಮಾಧಾನ ಮಾಡಲಿ? ಕೇವಲ ಕೆಲವೇ ರೂಪಾಯಿಗಳ ಮದ್ದನ್ನು ಕೊಡದ ಸರ್ಕಾರದ ವಿರುದ್ಧ ಸಿಡಿದೇಳೆಂದೋ ಅಥವಾ ಇದು ನಿನ್ನ ಹಣೆಬರಹವೆಂದು ಸಹಿಸಿಬಿಡೆಂದೋ? ಅರಳವು ಮುನ್ನವೇ ಮೊಗ್ಗುಗಳನ್ನು ಬಾಡಿಸುತ್ತಿರುವ ಈ ಸಮಾಜಕ್ಕೆ ಆತನ ಕರೆ ಮುಟ್ಟದೇ ಹೋಗುತ್ತದೆಯೇ? ಆತನ ಶಾಪ ದಹಿಸದೇ ಹೋಗುತ್ತದೆಯೇ????
- ಸುಧಾ ಜಿ 

ಕಾಮೆಂಟ್‌ಗಳಿಲ್ಲ: