Pages

ವಿನೋದ: "ದೂರದ ಬೆಟ್ಟ ನುಣ್ಣಗೆ"



  ನನ್ನ ಗೆಳತಿಯೊಬ್ಬಳು ಕಂಪ್ಯೂಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವಳು. ಅದರಲ್ಲೊ ಎಲ್ಲರನ್ನು ಕತ್ತೆಯಂತೆ ದುಡಿಸಿಕೊಳ್ಳುವರು, ಒರಟಾಗಿ ಅಲ್ಲ, ನಯವಿನಯದಿಂದಲೆ. ಕಾರು, ಫೋನು ಇತ್ಯಾದಿ, ಇತ್ಯಾದಿ ಸೌಕರ್ಯಗಳನೆಲ್ಲಾ ಕೊಟ್ಟು. 
ಅವಳಿಗೆ ನಮ್ಮ ಮೇಲೆ, ಅಂದರೆ ಸರ್ಕಾರಿ ನೌಕರರ ಮೇಲೆ ಕಣ್ಣು. “ನಿನಗೇನು ಬಿಡಮ್ಮಾ, ಸರ್ಕಾರಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದೀಯಾ. 2-3 ಘಂಟೆ ಏನೊ ವದರಿ ಬಂದರೆ ಆಯಿತು. ಹೀಗ್ ಹೋಗಿ ಹಾಗ್ ಬಂದ್ಬಿಡ್ತೀಯಾ. ಸುಖಜೀವಿಗಳು. ನಾವ್ ನೋಡು ಹೇಗೆ ದುಡೀತೀವಿ?” ಎನ್ನುವಳು.
ಅವಳ ವಾದಕ್ಕೆ ಪ್ರತಿವಾದಿಸದೆ ಸುಮ್ಮನಿದ್ದರೂ ಅವಳು ಕೆಣಕುವಳು. ಕೊನೆಗೆ ನಾನು “ನೋಡು ದೂರದ ಬೆಟ್ಟ ನುಣ್ಣಗೆ. ನಿಮ್ಮ ಸಂಬಳ ಸವಲತ್ತುಗಳ ಕಾಲು ಭಾಗವೂ ನಮಗೆ ಬರೋಲ್ಲ. ಮತ್ಯಾಕೆ ಹೋಲಿಕೆ” ಎಂದರೆ ಅವಳು, “ನೀನು ಏನೇ ಹೇಳು ನಿಮ್ಮದು ಬಹಳ ಸಲೀಸಾದ ಕೆಲಸ. ರಿಸ್ಕ್ ಇಲ್ಲವೇ ಇಲ್ಲ. ನನಗೂ ಯಾವುದಾದರೂ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತೆ. ಈ ಕೆಲಸಕ್ಕೆ ಈಗಲೇ ರಾಜೀನಾಮೆ ಕೊಟ್ಬಿಡ್ತೀನಿ” ಎನ್ನುವಳು.
ಹೀಗೆ ವಾದ ಯಾವಾಗಲೂ ಮುಂದುವರೆಯುತ್ತಲೇ ಇರುತ್ತಿತ್ತು. ಕೊನೆಗೊಂದು ದಿನ ನನಗೆ ರೋಸಿ ಹೋಗಿ “ನಾಳೆ ಆಫೀಸಿಗೆ ರಜಾ ಹಾಕಿ ನನ್ ಜೊತೆ ಕಾಲೇಜಿಗೆ ಬಾ. ನಾವು ಎಷ್ಟು ಸುಖಜೀವಿಗಳು ಅನ್ನೋದನ್ನ ತೋರಿಸ್ತೀನಿ” ಎಂದೆ. 
“ನಾಳೆ ಆಗಲ್ಲ, ನಾಡಿದ್ದು ಶನಿವಾರ ಬರ್ತೀನಿ. ನೋಡು ನಿಮ್ಮ ತರಹ ನಾವು ರಜಾ ಹಾಕೋಕಾಗಲ್ಲ.” ಅದರಲ್ಲೂ ಕೊಂಕು. 
“ಸರಿ ತಾಯಿ, ನಾಡಿದ್ದೇ ಬಾ” ಉತ್ತರಿಸಿದೆ. 
ಅವಳ ಗಾಡಿಯಲ್ಲೇ ಕಾಲೇಜಿಗೆ ಹೊರಟೆವು. ನಾನು ಹಿಂದೆ ಕುಳಿತು ದಾರಿ ಸೂಚಿಸುತ್ತಿದ್ದೆ. “ಎಡಗಡೆ ತಿರುಗು” ಎಂದೆ. 
“ಯಾಕೆ ಪಾಳು ಬಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗ್ತಾ ಇದ್ದೀಯ?” ಗಾಬರಿಯಾಗಿ ಕೇಳಿದಳು. 
“ಅದೆ ನಮ್ಮ ಕಾಲೇಜು”ಎಂದೆ. ಹೌಹಾರಿದಳು.
ಒಳಗೆ ಹೋಗುತ್ತಲೇ, “ಪಾರ್ಕಿಂಗ್ ಯಾವ ಕಡೆ” ಪ್ರಶ್ನಿಸಿದಳು. “ಎಲ್ಲಿ ಬೇಕಾದರೂ ಪಾರ್ಕ್ ಮಾಡು. ನಮ್ಮಲ್ಲಿ ಇಡೀ ಕಾಲೇಜೆ ಪಾರ್ಕಿಂಗ್ ಜಾಗ. ಕಾಣಿಸ್ತಾ ಇಲ್ವಾ, ಎಲ್ಲಾ ಕಡೆ ನಿಲ್ಲಿಸಿರೋದು.” ನನ್ನ ಗೆಳತಿ ಗಾಡಿ ನಿಲ್ಲಿಸಿ ಒಮ್ಮೆ ಸುತ್ತಮುತ್ತ ನೋಡಿದಳು, ಹಾಗೆ ದಂಗಾಗಿ ನಿಂತಳು.
ಅವಳಿಗೆ ಕಂಡದ್ದು ಬಿದ್ದುಹೋಗುವಂತಿದ್ದ ಕಟ್ಟಡ, ಬಾಗಿಲುಕಿಟಕಿಗಳಿಲ್ಲದ ಕೊಠಡಿಗಳು, ಆವರಣದ ತುಂಬಾ ಕಸಕಡ್ಡಿ, ಪೇಪರ್ ಇತ್ಯಾದಿ. “ನಡಿ ಹೋಗೋಣ” ಅವಳ ಕೈ ಹಿಡಿದು ಕರೆದುಕೊಂಡು ಸ್ಟಾಫ್ ರೂಮಿಗೆ ಪ್ರವೇಶಿಸುತ್ತಿದ್ದಾಗಲೇ ಎಡವಿದಳು. ಅಷ್ಟು ಕತ್ತಲು. ಒಂದೆರೆಡು ನಿಮಿಷವಾದ ನಂತರವೇ ಅಲ್ಲಿ ಎಲ್ಲವೂ ಕಾಣಿಸುವುದು. “ಒಂದ್ನಿಮಿಷ ನೀನಿಲ್ಲಿ ಕುಳಿತಿರು, ಸೈನ್ ಹಾಕಿ ಬರುತ್ತೇನೆ.”
“ಫ್ಯಾನ್ ಹಾಕ್ತೀಯಾ, ಬಹಳ ಸೆಖೆ.”
ಸ್ವಿಚ್ ಒತ್ತಿದೆ. ಫ್ಯಾನ್ ತಿರುಗಿತು. ಅಂದ್ರೆ ಕರೆಂಟ್ ಇದೆ ಎಂದಾಯ್ತು. ಆದ್ರೆ ಗಾಳೀನೆ ಬರ್ಲಿಲ್ಲ. 
“ಇದೇನೆ?”ಕೇಳಿದಳು ಗೆಳತಿ. ಅಲ್ಲಿಯೇ ಕುಳಿತಿದ್ದ ನನ್ನ ಕೊಲೀಗ್ ತಮ್ಮ ಬ್ಯಾಗಿನಿಂದ ಬೀಸಣಿಗೆ ತೆಗೆದುಕೊಟ್ಟು “ತಗೊಳ್ಳಿ, ಗಾಳಿ ಬೀಸಿಕೊಳ್ಳಿ. ನಮ್ಮಲ್ಲಿ ಕೆಲವು ವಸ್ತುಗಳನ್ನು ಇಟ್ಟಿರುವುದು ಅಲಂಕಾರಕ್ಕಾಗಿ ಮಾತ್ರ” ಎಂದರು. ಅದಕ್ಕವಳು ನಕ್ಕು, “ಪರವಾಗಿಲ್ಲ ಬಿಡಿ” ಎಂದಳು.
ನಾನು ಸೈನ್ ಮಾಡಿ ಬರುವಷ್ಟರಲ್ಲಿ ಅವಳು ಹೊರಗೆ ನಿಂತಿದ್ದಳು. “ಥೂ, ಎಂಥಾ ದುರ್ವಾಸನೆ? ಅದು ಹೇಗೆ ಇಲ್ಲಿ ಕುಳಿತ್ಕೋತಿರೊ ನಾ ಕಾಣೆ.”
”ನಾನೇನು ಮಾತಾಡಲಿಲ್ಲ. ಅಷ್ಟರಲ್ಲಿ ಕ್ಲೀನ್ ಮಾಡುವ ನಿಂಗಿ ಕಾಣಿಸಿಕೊಂಡಳು. “ನಿಂಗಿ, ಸರಿಯಾಗಿ ನೀರು ಹಾಕಿ ತೊಳೆದು ಫಿನಾಯಿಲ್ ಹಾಕು.”ಹರಿಹಾಯ್ದಳು. “ನೀರನ್ನು ಎಲ್ಲಿಂದ ತರ್ಲವ್ವ? ಪ್ರಿನ್ಸಿಪಾಲ್‍ರಿಗೆ ಹೇಳಿ ಇಲ್ಲೇ ಒಂದು ನಲ್ಲಿ ಹಾಕ್ಸಿ ಬಿಡಿ.”
 ನನ್ನ ಗೆಳತಿಯತ್ತ ತಿರುಗಿ ನೋಡಿ “ಇವರದ್ದು ಐಎಎಸ್ ಗ್ರೇಡ್. ಈ ಕೆಲಸ ಇನ್ನೂ ಉತ್ತಮವಾಗಿರುತ್ತೆ,” ಎಂದೆ.
ಕ್ಲಾಸಿಗೆ ಹೊರಟೆ. “ನಾನೂ ಬರ್ತೀನಿ” ಅಂದಳು.
 “ಸರಿ ಬಾ” ಎಂದು ಅವರಿವರ ಬಳಿ ಚಾಕ್‍ಪೀಸ್ ಬೇಡಿ, ಪೂರ್ತಿ ಹರಿದು ಹೋಗಿರದ ಡಸ್ಟರ್ ಹಿಡಿದು, ತರಗತಿಯೊಳಗೆ ಪ್ರವೇಶಿಸಿದೆ. ಕ್ಲಾಸಿನಲ್ಲಿ ಹುಯಿಲೊ ಹುಯಿಲು. ಅದನ್ನು ನಿಲ್ಲಿಸಿ, ಅಟೆಂಡೆನ್ಸ್ ಹಾಕಲಾರಂಭಿಸಿದೆ. ನೂರಿಪ್ಪತ್ತು ಹುಡುಗರ ತರಗತಿಯದು. ಪಾಠ ಮಾಡಿ ಹೊರ ಬಂದಾಗ ನನಗಿಂತ ಹೆಚ್ಚಾಗಿ ನನ್ನ ಗೆಳತಿ ಸುಸ್ತೊ ಸುಸ್ತು. ಮೇಲೆ ಹಾಕಿದ್ದ ಜಿಂಕ್ ಶೀಟ್ ಕಾದು ಹೋಗಿತ್ತು. ಕೆಲವು ಕಡೆ ಶೀಟ್ ಒಡೆದು ಹೋಗಿದ್ದು, ಅದರ ಮೂಲಕ ಸೂರ್ಯ ತನ್ನ ಪ್ರತಾಪವನ್ನು ತೋರಿಸುತ್ತಿದ್ದ. ಗೋಡೆಗಳಲ್ಲೆಲ್ಲಾ ಬಿರುಕು. ಗಾಳಿ ಇಲ್ಲ, ಬೆಳಕಿಲ್ಲ, ಕಪ್ಪು ಹಲಗೆಯ ಮೇಲೆ ತೂತೋ ತೂತು. ಕಸ ಗುಡಿಸಿ ಅದೆಷ್ಟು ತಿಂಗಳುಗಳಾಗಿದ್ದವೋ! ಹುಳು ಹುಪ್ಪಟೆಗಳು ತಮ್ಮ ವಾಸ ಸ್ಥಾನವನ್ನು ಮಾಡಿಕೊಂಡಿದ್ದವು.
“ನೀನು ಬರೀತಿದ್ದದ್ದು ನನಗಂತೂ ಏನೂ ಕಾಣಿಸಲಿಲ್ಲ. ನಿನ್ನ ಸ್ಟೂಡೆಂಟ್ಸ್ ಅದು ಹೇಗೆ ಬರ್ಕೊಂಡ್ರೊ ನನಗಂತೂ ಗೊತ್ತಿಲ್ಲ. ಅದು ಹೇಗೆ 120 ಜನರ ಅಟೆಂಡೆನ್ಸ್ ಹಾಕ್ತೀಯೊ. ಬಹುಶಃ ನಿನಗೆ ಕುತ್ತಿಗೆ ನೋವು ಅದಕ್ಕೆ ಬಂದಿರಬೆಕು. ಗಂಟಲು ಜೋರಾಗೆ ಇದೆ. ಆದ್ರೆ ಹೀಗೆ ಕಿರುಚುತ್ತಾ ಇದ್ರೆ ನಾಲ್ಕೇ ವರ್ಷ ಬರೋದು. ಆ ಮಾನವ ಪ್ರಾಣಿಗಳನ್ನು, ಅದೇ ನಿನ್ನ ಆ ತಂಟೆಕೋರ ವಿದ್ಯಾರ್ಥಿಗಳನ್ನು ಅದು ಹೇಗೆ ಸುಧಾರಿಸ್ತೀಯೊ ನಾ ಕಾಣೆ. ಅಬ್ಬಾ ನಿಜಕ್ಕೂ ಸಾಹಸವೇ” ಉದ್ಗರಿಸಿದಳು. ನಸುನಕ್ಕೆ.
“ಲ್ಯಾಬ್ ನೋಡೋಣ ನಡೆ”ಎಂದಳು. ಬಾಟನಿ ಲ್ಯಾಬ್‍ನ ಬಳಿ ಹೋದಾಗ ಆ ಲೆಕ್ಚರರ್ ಹೊರಗಡೆಯೇ  ನಿಂತಿದ್ದರು. ನನ್ನ ಗೆಳತಿಯ ಇಚ್ಛೆಯನ್ನು ಅವರಿಗೆ ತಿಳಿಸಿದಾಗ, “ಇವತ್ತು ಬೇಡ ಮೇಡಮ್ ಬೇರೆ ದಿನ ಕರೆದುಕೊಂಡು ಬನ್ನಿ” ಎಂದರು. ‘ಸೋಮಾರಿಗಳು’ ಗೊಣಗಿದಳು ಸ್ನೇಹಿತೆ. “ಏನಾಯ್ತು?” ಕೇಳಿದೆ, “ಹಾವು ಸೇರ್ಕೊಂಡಿದೆ ಮೇಡಮ್. ಹಾವಾಡಿಗನಿಗೆ ಹೇಳಿ ಕಳ್ಸಿದ್ದೀವಿ. ಇನ್ನೂ ಬಂದಿಲ್ಲ. ಹಾಗಾಗಿ ನಾವೆಲ್ಲಾ ಹೊರಗೆ. ಪ್ರಾಣಿಶಾಸ್ತ್ರದ ಲ್ಯಾಬ್‍ಗೆ ಹೋಗೋದು ಬಿಟ್ಟು ಇಲ್ಲೇಕೆ ಬಂತೋ?” ಉತ್ತರ ಸಿಕ್ಕಿತು. 
ಕೆಮಿಸ್ಟ್ರಿ ಲ್ಯಾಬ್‍ನ ಹೊರಗಡೆಯೇ  ಮುಖ್ಯಸ್ಥರು ಸಿಕ್ಕರು. ಗೆಳತಿಯನ್ನು ಪರಿಚಯಿಸಿ ಬಂದ ವಿಷಯ ತಿಳಿಸಿದೆ. “ಅಯ್ಯೋ ಮೇಡಮ್ ನೆನ್ನೆ ಜೋರಾಗಿ ಮಳೆ ಬಂದ ಕಾರಣ ಒಂದೆಡೆ ಗೋಡೆ ಬಿರುಕು ಬಿಟ್ಟಿದೆ. ಇನ್ನೊಂದು ಕಡೆ ಛಾವಣಿ ಕುಸಿದಿದೆ. ಎಲ್ಲಿ ಶೀಟ್ ಬಿದ್ದೋಗುತ್ತೋ ಎಂದು ಹೆದರಿ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ ನಾವೂ ಇಲ್ಲಿಯೇ ನಿಂತಿದ್ದೇವೆ” ಎಂದರು. 
ಸರಿ, ಇನ್ನೇನು ಮಾಡುವುದು. ಪ್ರಾಣಿಶಾಸ್ತ್ರದ ಲ್ಯಾಬ್‍ಗೆ ಹೋದೆವು. ಧೂಳೊ ಧೂಳು. ಅಲ್ಲಿ ಕೆಲವು ಬಾಟಲಿಗಳು, ಕೆಲವು ಖಾಲಿ, ಕೆಲವುಗಳಲ್ಲಿ ಮಾತ್ರ ಪ್ರಾಣಿಗಳು. “ದುಡ್ಡೇ ರಿಲೀಸ್ ಮಾಡಲ್ಲ ಮೇಡಮ್, ಸ್ಪೆಸಿಮನ್ಸ್ ತಂದಿಡೋಕೆ ಆಗ್ತಾ ಇಲ್ಲ” ಅಂದರು ಆ ವಿಭಾಗದ ಮುಖ್ಯಸ್ಥರು.
ಹೊರಗೆ ಬಂದು “ಫಿಸಿಕ್ಸ್ ಲ್ಯಾಬ್ ಬಾಕಿ ಇದೆ” ಎಂದೆ. “ಬೇಡ ನಡಿಯೇ ಹೋಗೋಣ. ನಿಮ್ಮ ಪ್ರಿನ್ಸಿ ಪರಿಚಯ ಮಾಡಿಕೊಡು” ಎಂದಳು. 
ಬೇಡ ಎನ್ನುವ ಮನಸ್ಸಾದರೂ ಕರೆದುಕೊಂಡು ಹೊರಟೆ. ಛೇಂಬರ್ ಪ್ರವೇಶಿಸಿ ನಮಸ್ಕಾರ ಹೇಳುವಷ್ಟರಲ್ಲಿಯೇ “ಏನ್ ಮೇಡಮ್, ಕಾಲೇಜಿಗೆ ಇಷ್ಟೊತ್ತಿಗೆ ಬಂದರೆ ಹೇಗೆ? ಹೊತ್ತು ಗೊತ್ತು ಇಲ್ವಾ? ಮಕ್ಕಳ್ಗೆ ಪಾಠ ಹೋಗೊಲ್ವಾ?” ರೇಗಿದರು. 
ಸಹಿ ಮಾಡಲು ನಾನು ಬಂದಾಗಲೂ ಕಾಲೇಜಿಗೆ ಬರದೆ, ಕ್ಲಾಸ್ ತೆಗೆದುಕೊಳ್ಳದೆ, ನನ್ನ ಮೇಲೆ ರೇಗಾಡಿದ್ದು ನೋಡಿ ಸಿಟ್ಟು ಬಂದರೂ ಸಹಿಸಿ ನಗುತ್ತಾ, “ಆಗಲೇ ಬಂದು ಸಹಿ ಮಾಡಿ, ಕ್ಲಾಸ್ ಮುಗಿಸಿ ಬರ್ತಾ ಇದ್ದೀನಿ. ಇವಳು ನನ್ನ ಗೆಳತಿ ಪರಿಚಯಿಸೋಣ ಎಂದು ಬಂದೆ” ಉತ್ತರಿಸಿದೆ. 
ಕಾಟಾಚಾರಕ್ಕೆ ನಮಸ್ಕರಿಸಿ ನನ್ನತ್ತ ತಿರುಗಿ, “ಕ್ಲಾಸ್ ಇದೆಯೇನೊ ತಗೊ ಹೋಗಿ, ಹರಟೆ ಹೊಡೆಯುತ್ತಾ ಕೂರಬೇಡಿ” ಒರಟಾಗಿಯೇ ನುಡಿದರು. 
“ಏನೇ ಇವರು ಈ ತರಹ. ನೀನ್ ನೋಡಿದ್ರೆ ಹಗಲುರಾತ್ರಿ ಕಷ್ಟ ಪಡ್ತೀಯಾ, ಇವರು ಒಂದೇ ಮಾತಿನಲ್ಲಿ. . . . . ” ಪೂರ್ತಿ ಮುಗಿಸಲು ಬಿಡದೆ, “ಬಾ ಅವೆಲ್ಲಾ ಸರ್ವೇ ಸಾಮಾನ್ಯ” ಕರೆದುಕೊಂಡು ಲೈಬ್ರರಿಗೆ ಹೋದೆ. “ನೀನು ಹೊರಗಿರು 5 ನಿಮಿಷದಲ್ಲಿ ಬರುತ್ತೇನೆ” ಎಂದು ಅವಳನ್ನು ಸಾಗಹಾಕಿದೆ.
     ಹೊರಗಡೆ ಬಂದ ಮೇಲೆ “ಟೀ ಕುಡಿಯೋಣ್ವಾ” ಕೇಳಿದಳು. ಕ್ಯಾಂಟೀನ್‍ಗೆ ಹೋದೆವು. ಕ್ಯಾಂಟೀನ್ ನೋಡಿದವಳೆ ನನ್ನ ಕೈ ಹಿಡಿದು ದರದರ ಹೊರಗೆ ಎಳೆತಂದು, “ನೀರಿನಲ್ಲಿ ಹುಳುಗಳು ತೇಲ್ತಾ ಇವೆ, ಇಲ್ಲಿ ಟೀ ಕುಡೀತೀಯಾ? ಬದುಕಬೇಕು ಎಂದು ಆಸೆ ಇಲ್ವಾ? ನಡಿ ಬೇರೆ ಯಾವುದಾದರೂ ಹೋಟೆಲ್‍ಗೆ ಹೋಗೋಣ” ಎಂದಳು.
    ಹಿಂತಿರುಗಿ ಬಂದ ಮೇಲೆ, “ಇನ್ನೊಂದು ಕ್ಲಾಸಿದೆ ಬರ್ತೀಯಾ?” ಕೇಳಿದೆ. “ಬೇಡಮ್ಮಾ, ನಾನಿಲ್ಲೇ ಇರ್ತೀನಿ ಯಾವುದಾದರೂ ಪುಸ್ತಕ ಕೊಟ್ಟು ಹೋಗು.”
“ಸರಿ” ಎಂದು ಹೊರಟೆ. ನನ್ನ ಕ್ಲಾಸಿನಿಂದ ಸ್ಟಾಫ್ ರೂಮ್ ಕಾಣಿಸುತ್ತಿತ್ತು. 10 ನಿಮಿಷ ಆಗುವಷ್ಟರಲ್ಲಿ ನನ್ನ ಗೆಳತಿ ಹೊರಗೆ ಬಂದು ನಿಂತದ್ದು ಕಾಣಿಸಿತು. ‘ಅಯ್ಯೊ ಏನು ಮಾಡುವುದು’ ಎಂದುಕೊಳ್ಳುವಷ್ಟರಲ್ಲಿ ಇನ್ನಿಬ್ಬರು ಕೊಲೀಗ್ಸ್ ಹೊರಗೆ ಬಂದು ಅವಳೊಂದಿಗೆ ಮಾತನಾಡುವುದು ಕಾಣಿಸಿ ಸಮಾಧಾನವಾಯಿತು.
     ಹೊರಗೆ ಬಂದಿದ್ದಕ್ಕೆ ಅವಳು ನೀಡಿದ ಕಾರಣವಿಷ್ಟು. “ನೀನು ಹೋದ ಮೇಲೆ ಓದಲು ಪ್ರಯತ್ನಿಸಿದೆ. ಒಂದು ಕಡೆ ಧೂಳು, ಕತ್ತಲೆ, ದುರ್ವಾಸನೆ. ಅದಕ್ಕೂ ಮಿಗಿಲಾಗಿ ಆಹಾ! ನಿಮ್ಮ ಕೆಲವು ಮೇಷ್ಟ್ರುಗಳ ಮಾತೊ, ಆ ಶಿವನಿಗೇ ಪ್ರೀತಿ!  ಕನಿಷ್ಟ ಪಕ್ಷ ಹೆಣ್ಣು ಮಕ್ಕಳು ಇದ್ದಾರೆ ಅಂತಾದ್ರೂ ಅವರ ನಾಲಿಗೆ ಹಿಡಿತದಲ್ಲಿಟ್ಟುಕೊಂಡಿರಬೇಕಿತ್ತು. ಅದಕ್ಕೆ ಹೊರ ಬಂದೆ. ಸಧ್ಯ ಈ ಇಬ್ರು ಮೇಷ್ಟ್ರುಗಳು ಹೊರಗೆ ಬಂದು ನನ್ನ ಜೊತೆ ನಿಂತರು. ಹೇಗೆ ಸಹಿಸ್ತೀಯೋ ಇದೆಲ್ಲಾ?”
    “ಸರಿ, ನಡಿ ಹೊರಡೋಣ” ಎಂದು ಹೊರಡುವಷ್ಟರಲ್ಲಿ ಅಟೆಂಡರ್ ಬಂದು “ಮೇಡಮ್, ಪ್ರಿನ್ಸಿಪಾಲ್ ಕರೀತಿದ್ದಾರೆ” ಎಂದ. ವಾಪಸ್ಸು ಬಂದ ನಂತರ ಕೈಯಲ್ಲಿದ್ದ ಪೇಪರ್ ನೋಡಿ “ಏನು?” ಪ್ರಶ್ನಿಸಿದಳು. ಮಾತನಾಡದೆ ಮೆಮೊ ಅವಳ ಕೈಗಿತ್ತೆ.
     “ನಿಮ್ಮ ಧ್ವನಿ ವಿದ್ಯಾರ್ಥಿಗಳಿಗೆ ಕೇಳಿಸುತ್ತಿಲ್ಲ” ಎಂದು ಆಪಾದನೆ ಬಂದಿದೆ. ನೆನ್ನೆ ಕ್ಲಾಸ್ ಐದು ನಿಮಿಷ ಬೇಗ ಬಿಟ್ಟಿದ್ದೀರಿ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇಂದು ಹತ್ತು ನಿಮಿಷ ಕ್ಲಾಸ್ ತಡವಾಗಿ ಬಿಟ್ಟು ಇಕನಾಮಿಕ್ಸ್ ಮೇಷ್ಟ್ರಿಗೆ ತೊಂದರೆ ಮಾಡಿದ್ದೀರಿ. ಇದಕ್ಕೆಲ್ಲಾ 3 ದಿನಗಳೊಳಗೆ ಸಮಜಾಯಿಷಿ ನೀಡದಿದ್ದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.”- ಮೆಮೊ ಸಾರಾಂಶ.
ಶಾಕ್ ಹೊಡೆದಂತಾದಳು, ಗೆಳತಿ. “ಇವೆಲ್ಲಾ ಮಾಮೂಲಿನ ವಿಷಯಗಳು. ಗಾಬರಿಯಾಗಬೇಡ ನಡಿ” ಎಂದೆ.
  “ಒಳ್ಳೆ ತುಘಲಕ್ ದರ್ಬಾರಾಯ್ತಲ್ಲ” ಗೆಳತಿಯ ಉವಾಚ. ಮನೆ ತಲುಪುವವರೆಗೂ ಗೆಳತಿ ಮಾತನಾಡಲೇ ಇಲ್ಲ. ಮನೆ ತಲುಪಿದ ಮೇಲೆ ಸೋಫಾ ಮೇಲೆ ಕುಳಿತು, “ಆಂಟಿ, ಒಂದು ಲೋಟ ನೀರು” ಕೂಗಿದಳು. 
ನೀರು ತಂದುಕೊಟ್ಟ ಅಮ್ಮ, “ಹೇಗಿತ್ತಮ್ಮಾ ಕಾಲೇಜಿನ ಅನುಭವ?” ಕೇಳಿದರು. 
“ಅಯ್ಯೋ ಆಂಟಿ ಆ ಕಥೆ ಯಾಕೆ ಕೇಳ್ತೀರಾ? ಕೆಲಸಾನೆ ಮಾಡದೆ 10 ಲಕ್ಷ ಕೊಡ್ತೀನಿ ಅಂದ್ರು ಆ ಕೆಲಸ ಬೇಡಪ್ಪಾ.” 
ತನ್ನ ಕಿವಿ ಹಿಡಿದುಕೊಳ್ಳುತ್ತಾ ನನ್ನ ಕಡೆ ತಿರುಗಿ, “ಸಾರಿ” ಎಂದಳು. ನಾನು ಎಂದಿನ ಬಿನಾಕಾ ಸ್ಮೈಲ್ ನೀಡಿದೆ. 

-      ಸುಧಾ ಜಿ         

ಕವನ : "ಒಂದಿಷ್ಟು ಪ್ರಾರ್ಥನೆಗಳು"



ಮೋಡಗಳು ಕದಡಿ ಮಳೆ ಸುರಿಯಲಿ
ಬಿದ್ದ ಮಳೆ ಬದುಕನ್ನು ಬೀದಿಗಿಡದಿರಲಿ....!

ಅನ್ನದಾತ ಕುಣಿಕೆಗೆ ಕೊರಳೊಡ್ಡದಿರಲಿ.
ಮನೆಯಲ್ಲಿ ಮೂರೊತ್ತು ಒಲೆ ಉರಿಯಲಿ...!

ಹಸುಗೂಸು ಕಸದ ಬುಟ್ಟಿಯಲಿ ಅಳದಿರಲಿ..
ಹೆತ್ತವರು ವೃದ್ಧಾಶ್ರಮದ ವಿಳಾಸ ಕೇಳದಿರಲಿ...

ಹೂ ಮಾರುವ ಹುಡುಗಿ ಬೀದಿ ಹೆಣವಾಗದಿರಲಿ..
ಭಿಕಾರಿಗೂ ತುತ್ತು ಕೂಳು ಸಿಗಲಿ...!

ಅಷ್ಟೂ ಕನಸುಗಳ ಹೆಣ್ಣುಮಗಳು ಸುಟ್ಟುಹೋಗದಿರಲಿ..
ಯೋಧನಾಗಿದ್ದ ಹೆಂಡತಿ ವಿಧವೆಯಾಗದಿರಲಿ...!

ಭೂಗೋಳದಲ್ಲಿ ಯುದ್ಧಗಳು ಗಡಿಪಾರಾಗಲಿ...
ನಮ್ಮ ಕಣ್ಣಿನಲ್ಲಿಷ್ಟು ಹೃದಯದಲ್ಲಿಷ್ಟು ತೇವವಿರಲಿ...

ನದಿಗಳಿಗೂ ಎದೆ ಬೇನೆ ಕಾಡದಿರಲಿ
ಕಡಲ ತ್ಸುನಾಮಿಗೂ ಕರುಣೆ ಬರಲಿ...

ಮತ್ತೇನು ತಕರಾರುಗಳಿಲ್ಲ ಪ್ರಭುವೇ...
ನಮ್ಮ ಮೆದುಳಿಗಿಷ್ಟು ಹೃದಯದ ಭಾಷೆ ಬರಲಿ...!
         
                    ~~ ರಂಗಮ್ಮ ಹೊದೇಕಲ್

ಕಥೆ: "ಪುಟ್ಟಗಂಗಾ"


ಅಂದು ಆ ಹಳ್ಳಿ ಎಂದಿಗಿಂತಲೂ ಸುಂದರವಾಗಿ ಕಾಣುತ್ತಿತ್ತು. ಎಲ್ಲರಲ್ಲೂ ತುಂಬಾ ಸಡಗರವಿತ್ತು. ಮಕ್ಕಳ ಕೇಕೆಗಳು, ಚಿಲಿಪಿಲಿ ಸದ್ದುಗಳೆರಡೂ ಮಿಲನವಾಗಿ ಸುತ್ತಲಿನ ಆ ಬೆಟ್ಟಗಳ ಕೋಟೆಗಳಿಗೆ ಅಪ್ಪಳಿಸಿ ಪ್ರತಿಅಲೆ ಉಂಟಾಗುತ್ತಿತ್ತು. ಹೊತ್ತು ಮುಳುಗಿದ್ದರಿಂದ ಕಾರ್ಯಗಳು ಬೇಗ ಬೇಗ ಸಾಗುತ್ತಿತ್ತು. ನಾಳೆ ಆ ಊರಿಗೆ ಪ್ರಮುಖ ಅತಿಥಿಗಳು, ದೊಡ್ಡ ವ್ಯಕ್ತಿಗಳು ಬರುವರಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಎಂದಿನಂತೆ ಇತ್ತಾದರೂ ಈ ಬಾರಿಯ ಹಬ್ಬಕ್ಕೆ ವಿಶೇಷ ಕಳೆ ತಂದಿದ್ದು ಪುಟ್ಟಗಂಗಾ. 
ಗಂಗಾ ಹುಟ್ಟಿದ ಮರುಕ್ಷಣವೇ ಅವಳ ತಾಯಿ ತೀರಿಕೊಂಡಳು. ನಂತರ ಬಂದ ಮಲತಾಯಿ ಗಂಗಾಳನ್ನು ಮಗಳಂತೆ ಪ್ರೀತಿಸಲಿಲ್ಲ. ಮನೆಗೊಬ್ಬ ಕೆಲಸದ ಹುಡುಗಿಯಂತೆ ಕಂಡಳು. ತಂದೆಗೂ ಮಗಳ ಬಗ್ಗೆ ಅಂತಹ ಮಮಕಾರವೇನೂ ಇಲ್ಲದ್ದರಿಂದ ಏನೂ ಮಾತಾಡುತ್ತಿರಲಿಲ್ಲ. ಒಂದು ಸಂತಸದ ವಿಷಯವೆಂದರೆ ಎಲ್ಲರಿಗೂ ಸಹಾಯ ಮಾಡುತ್ತಿದ್ದ ಗಂಗಾ ಊರವರ ಕಣ್ಮಣಿಯಾಗಿದ್ದಳು. ತಾಯ್ತಂದೆಯರ ಪ್ರೀತಿ ಸಿಗದಿದ್ದರೂ  ತಾಯ್ನೆಲದ ಜನರ ಪ್ರೀತಿ ಅವಳಿಗೆ ದಕ್ಕಿತ್ತು.
ಒಮ್ಮೆ ಹಳ್ಳಿಯ ರೈತರೆಲ್ಲಾ ಆಲೆಮನೆಗಳನ್ನು ಅಣಿಗೊಳಿಸುವಲ್ಲಿ ತಲ್ಲೀನರಾಗಿದ್ದರು. ಮಕ್ಕಳಿಗೆಲ್ಲಾ ಕಬ್ಬಿನ ಹಾಲು ಮತ್ತು ಜೋಲಿ ಬೆಲ್ಲದ ಅಭಿಷೇಕ. ಅಂದು ಊರಿನ ಪಟೇಲರ ಮನೆಯ ಸರದಿ. ಮಕ್ಕಳು ಕೈಗೂ ಕಾಲಿಗೂ ಸಿಗುತ್ತಿದ್ದರು. ದಣಿದ ಎತ್ತುಗಳನ್ನು ಒಂದೆಡೆ ಕಟ್ಟಿ ನೀರಿಟ್ಟಿದ್ದರು. ಆ ಜೋಡಿ ಎತ್ತಿಗಳಲ್ಲಿ ಒಂದು ಮುಂಗೋಪಿ, ಅದರಲ್ಲೂ ಮಕ್ಕಳೆಂದರೆ  ಕೆರಳುತ್ತದೆ. ‘ಮಕ್ಕಳ ಮಾರಿ’  ಎಂದೇ ಅದನ್ನು ಗುರ್ತಿಸುತ್ತಿದ್ದರು. ಕೆಲಸದವ ಅದನ್ನು ಎಚ್ಚರ ತಪ್ಪಿ ಸಡಿಲವಾಗಿ ಕಟ್ಟಿದ್ದ. ಮಕ್ಕಳು ಅವುಗಳ ಬಳಿಯೇ ಆಡುತ್ತಿದ್ದರು. ಆ ಮಾರಿ ಅವರನ್ನು ನೋಡಿ ಹೂಂಕರಿಸತೊಡಗಿತು.ಬರಬರುತ್ತಾ, ಕೆರಳತೊಡಗಿತು.  ಮೈಮೇಲೆ ಏನೋ ಆವರಿಸಿದಂತೆ ಅದು ತನ್ನ ಹಗ್ಗವನ್ನು ಕಿತ್ತುಕೊಂಡಿತು. ಇದರಿಂದ ಮಕ್ಕಳು ಚೆಲ್ಲಾಪಿಲ್ಲಿಯಾದರು. ಆದರೆ ದಿಕ್ಕು ತೋಚದೆ ಪಟೇಲರ ಮೊಮ್ಮಗ ಗರಬಡಿದವನಂತಾದ. ತನ್ನತ್ತಲೇ ನುಗ್ಗಿ ಬಂದ ದೈತ್ಯ ಎತ್ತನ್ನು ನೋಡಿ ಕಣ್ಣು ಮುಚ್ಚಿ ಅಲ್ಲೇ ಕುಸಿದ. ಅಷ್ಟರಲ್ಲಿ ಹಾರಿ ಬಂದ ಗಂಗಾ ಅವನನ್ನು ಬಾಚಿ ದೂರಕ್ಕೆ ಎಸೆದಳು. ಮೈ ಮರೆತ ಮಾರಿಯು ಎದುರಿಗಿದ್ದ ಗಂಗಾಳನ್ನು ಎತ್ತಿ ತಿರುಗಿಸಿ ಬಿಸಾಡಿತು.
 ಕ್ಷಣಾರ್ಧದಲ್ಲಿ ನಡೆದ ಈ ದುರಂತವನ್ನು ಕಂಡ ಅಲ್ಲಿನ ಜನ ಚೀತ್ಕರಿಸಿದರು. ಬಾರುಕೋಲು ಹಿಡಿದು ಎತ್ತನ್ನು ನಿಯಂತ್ರಿಸತೊಡಗಿದರು. ಮುದುಡಿ ಬಿದ್ದಿದ್ದ ಗಂಗಾಳನ್ನು  ಎತ್ತಿಕೊಂಡು ಪರೀಕ್ಷಿಸಿದರು. ಕತ್ತು ರಕ್ತದಿಂದ ಮುಚ್ಚಿಹೋಗಿತ್ತು. ನಿಮಿಷಕ್ಕೂ ಮುಂಚೆ ನಮ್ಮ ನಡುವೆ ಬೆಲ್ಲ ಮೆಲ್ಲುತ್ತಾ ಓಡಾಡಿಕೊಂಡಿದ್ದ ಗಂಗಾ ಹೆಣವಾದಳೆಂದು ಗೋಳಾಡಿದರು. ಆದರೆ ಅದೃಷ್ಟವಶಾತ್ ಎತ್ತಿನ ಕೊಂಬು ಗಂಟಳೊಳಗೆ ಇಳಿಯದೆ ಗಲ್ಲದ ಮೂಳೆಯನ್ನು ಹಿಡಿದು ತಿರುಗಿಸಿತ್ತು. ಎಲ್ಲರೂ ಗಂಗಾಳನ್ನು ಎತ್ತಿಕೊಂಡು ಆಸ್ಪತ್ರೆಗೋಡಿದರು. ಸುದ್ದಿ ತಿಳಿದ ಪಟೇಲರು ಸನಿಹವಿದ್ದುಕೊಂಡೇ ಚಿಕಿತ್ಸೆ ಮಾಡಿಸಿದರು. ಗಂಗಾಳ ಸಮಯಸ್ಫೂರ್ತಿ, ಧೈರ್ಯಕ್ಕೆ ಗ್ರಾಮದವರೆಲ್ಲಾ ತಲೆತೂಗಿದರು. ಅವಳ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲೇಬೇಕೆಂದು ಪಟೇಲರು ಸ್ವಾತಂತ್ರ್ಯ ದಿನಾಚರಣೆಯಂದು ಗಂಗಾಳಿಗೆ ಸನ್ಮಾನದ ಕಾರ್ಯಕ್ರಮ ಏರ್ಪಡಿಸಿಯೇ ಬಿಟ್ಟರು. ಆಗಸ್ಟ್ 15 ರಂದು, ಬೆಳಿಗ್ಗೆ ನೆರೆದ ಜನರೆಲ್ಲರ ಮುಂದೆ ಗಂಗಾಳನ್ನು ಮನಸಾರೆ ಹೊಗಳಿ ಸನ್ಮಾನ ಮಾಡಿದರು. ಜೊತೆಗೆ ಪಟೇಲರ ಮಗ ತನ್ನ ಮಗನ ಜೊತೆಯೇ ಪಟ್ಟಣದಲ್ಲಿ ಗಂಗಾಳ ಉತ್ತಮ ಶಿಕ್ಷಣದ ಖರ್ಚುವೆಚ್ಚ ಭರಿಸುತ್ತೇನೆಂದು ವಾಗ್ದಾನ ಮಾಡಿದರು. ಜನರೆಲ್ಲಾ ಸಂತೋಷದಿಂದ ಹರ್ಷೋದ್ಘಾರ ಮಾಡಿದರು. 
-     ಉಷಾಗಂಗೆ     

ಲೇಖನ: "ಬಾಲ್ಯವಿವಾಹ"



“ಎಲ್ಲಿಯವರೆಗೆ ಜನರಲ್ಲಿ ಅಜ್ಞಾನ, ಮೌಢ್ಯತೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಮಕ್ಕಳಿಗೆ ಮಾರಕವಾಗಿರುವ ಮತ್ತು ಕಂಟಕವಾಗಿರುವ ಈ ಬಾಲ್ಯವಿವಾಹವನ್ನು ತಡೆಯಲಾಗುವುದಿಲ್ಲ.” ಪೋಷಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದಕ್ಕಾಗಿ ಹಾಗೂ ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವುದಕ್ಕೋಸ್ಕರ ಮಕ್ಕಳ ಭವಿಷ್ಯದೊಂದಿಗೆ ಆಟವಾಡಿ ಅವರ ಹಕ್ಕನ್ನೇ ಕಸಿದುಕೊಳ್ಳುತ್ತಿದ್ದಾರೆ. ಆಟವಾಡುವ ವಯಸ್ಸಿನಲ್ಲಿ ಅವರ ಕೊರಳಿಗೆ ಹಾರ ಹಾಕಿ ಅವರ ಶಿಕ್ಷಣ, ಆಸೆ, ಆಕಾಂಕ್ಷೆ, ಆರೋಗ್ಯ ಎಲ್ಲಕ್ಕೂ ಸಂಕೋಲೆ ಹಾಕುತ್ತಿದ್ದಾರೆ. ಕೂಸು ಹುಟ್ಟುವ ಮುಂಚೆ ಕುಲಾವಿ ಹಾಕುವಂತೆ ಮಗು ಅಮ್ಮನ ಗರ್ಭದಲ್ಲಿರುವಾಗಲೇ ಅದರ ಮದುವೆ ನಿಶ್ಚಯ ಮಾಡುವುದು ಎಷ್ಟು ವಿಪರ್ಯಾಸ. 
ಈ ಬಾಲ್ಯವಿವಾಹ ಪದ್ಧತಿ ಭಾರತದಲ್ಲಿ ಸ್ವಾತಂತ್ರ್ಯಪೂರ್ವದಿಂದಲೇ ಇತ್ತು. ಸ್ವಾತಂತ್ರ್ಯಾನಂತರದಲ್ಲಿಯೂ ಅದರ ಸಂಖ್ಯೆ ಕಡಿಮೆಯಾದರೂ ಇದು ಇನ್ನೂ ಹಲವಾರು ಭಾಗಗಳಲ್ಲಿ ಮುಂದುವರೆಯುತ್ತಿದೆ. ಭಾರತವಲ್ಲದೆ ಇತರೆ ಎಲ್ಲಾ ರಾಷ್ಟ್ರಗಳಲ್ಲೂ ಈ ಪದ್ಧತಿ ಇತ್ತು. ಯೂರೋಪ್‍ನಲ್ಲಿ ಈ ಪದ್ಧತಿಯನ್ನು ನಿರ್ಮೂಲನಗೊಳಿಸಲಾಗಿದೆ. ಆದರೆ ತೃತೀಯ ರಾಷ್ಟ್ರಗಳಲ್ಲಿ ಈಗಲೂ ವ್ಯಾಪಕವಾಗಿ ಕಂಡುಬರುತ್ತಿದೆ. 
ಈ ಪದ್ಧತಿಗೆ ನೂರಾರು ವರ್ಷಗಳ ಇತಿಹಾಸವಿದೆ. ಬಾಲ್ಯವಿವಾಹದಲ್ಲಿ ಎರಡು ರೀತಿಯಿವೆ. ಗಂಡು ಮತ್ತು ಹೆಣ್ಣು ಇಬ್ಬರೂ ಮಕ್ಕಳೇ ಆಗಿರುವುದು ಒಂದು ರೀತಿಯಾದರೆ, ಇನ್ನೊಂದರಲ್ಲಿ ಗಂಡು ವಯಸ್ಕನಾಗಿದ್ದು, ಹೆಣ್ಣುಮಕ್ಕಳ ವಯಸ್ಸು ಬಹಳ ಕಡಿಮೆ ಇರುತ್ತದೆ. 
ವೇದಗಳ ಕಾಲದಲ್ಲಿ ಅದರಲ್ಲೂ ಋಗ್ವೇದ ಕಾಲದಲ್ಲಿ “ವಿವಾಹದ ಸಮಯದಲ್ಲಿ ಹುಡುಗಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ಬೆಳವಣಿಗೆಯಾಗಿದ್ದಲ್ಲಿ ಮಾತ್ರ ವಿವಾಹಕ್ಕೆ ಯೋಗ್ಯಳು” ಎಂಬ ಉಲ್ಲೇಖವಿದೆ. ಆಗ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡುತ್ತಿದ್ದುದ್ದರಿಂದ ಅವರಿಗೆ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇತ್ತು ಎಂದು ತಿಳಿದುಬಂದಿದೆ. ಗೃಹಸೂತ್ರ ಮತ್ತು ಬೌಧಾಯನಗಳಲ್ಲೂ ಸಹ ಮದುವೆಯ ವಯಸ್ಸು ಎಂದರೆ ಪ್ರೌಢಾವಸ್ಥೆಯ ನಂತರವೇ ಎಂದು ತಿಳಿಸುತ್ತದೆ. 
6ನೇ ಶತಮಾನದ ನಂತರ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವುದನ್ನು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವುದನ್ನು ತಡೆಯಲಾಯಿತು. ನಂತರ ವಿವಾಹದ ವಯಸ್ಸೂ ಸಹ ಕಡಿಮೆಯಾಗತೊಡಗಿತು. ನಂತರ ಬಂದ ಯಾಜ್ಞವಲ್ಕ್ಯ ಸ್ಮೃತಿ ಮತ್ತು ಪರಾಶರ ಸ್ಮೃತಿ ಇವುಗಳಲ್ಲಿ ಹೆಣ್ಣು ಮಕ್ಕಳಿಗೆ 5 ವರ್ಷವಿರುವಾಗ ವಿವಾಹ ಮಾಡಬೇಕೆಂದು ಹೇಳಿತು. ಹಾಗೇ ಮನು ಸ್ಮೃತಿ, ಮಹಾಭಾರತ ಮತ್ತು ವಿಷ್ಣುಪುರಾಣಗಳಲ್ಲಿಯೂ ಸಹ ಹುಡುಗಿಯ ವಯಸ್ಸು ಹುಡಗನ ವಯಸ್ಸಿಗಿಂತ ಮೂರುಪಟ್ಟು ಕಡಿಮೆಯಿರಬೇಕು ಎಂದು ತಿಳಿಸಿತು. ಈ ಬಾಲ್ಯ ವಿವಾಹ ಪದ್ಧತಿ ಹಿಂದೂಗಳಲ್ಲಲ್ಲದೆ, ಮಹಮ್ಮದೀಯರು ಮತ್ತು ಪಾರ್ಸಿಗಳಲ್ಲೂ ಕಂಡುಬರುತ್ತಿತ್ತು. ಕೆಲವೊಮ್ಮೆ ಕ್ರೈಸ್ತರಲ್ಲಿಯೂ ಇದು ಕಂಡುಬಂದಿದೆ. 
ಈ ಪದ್ಧತಿ ಬೆಳೆಯಲು ಹಲವಾರು ಕಾರಣಗಳು ಕಂಡುಬರುತ್ತವೆ. 
ಧರ್ಮಸಂಹಿತೆಗಳ ಪ್ರಕಾರ ಹೆಣ್ಣುಮಕ್ಕಳು ರಜಸ್ವಲೆಯಾಗುವ ಮುನ್ನ ವಿವಾಹ ಮಾಡಬೇಕಿತ್ತು. ಇಲ್ಲದಿದ್ದರೆ ಅವಳು ಪ್ರತಿಯೊಂದು ಬಾರಿ ಮುಟ್ಟಾದಾಗಲೂ, ಒಂದು ಮಗುವನ್ನು ಹತ್ಯೆ ಮಾಡಿದ ದೋಷ ತಾಯ್ತಂದೆಯರದ್ದಾಗುತಿತ್ತು. ಇದು ಬ್ರಹ್ಮಹತ್ಯಾದೋಷವೆಂದು ಪರಿಗಣಿಸಲಾಗುತ್ತಿತ್ತು. ಆದ್ದರಿಂದ, ಇದರಿಂದ ಮುಕ್ತಿ ಪಡೆಯಲು ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುತ್ತಿದ್ದರು. 
ಇದರೊಂದಿಗೆ ಹಲವಾರು ಕಾರಣಗಳಿದ್ದವು. ಪೋಷಕರು ಬಡತನದ ಕಾರಣ ತಮ್ಮ ತುಂಬು ಕುಟುಂಬದಲ್ಲಿ ಮಕ್ಕಳಿಗೆ ಸರಿಯಾಗಿ ಆಹಾರವನ್ನು ಒದಗಿಸಲಾಗುತ್ತಿರಲಿಲ್ಲ. ಇದರಿಂದ ತಮ್ಮ ಮಕ್ಕಳ ವಿವಾಹವನ್ನು ಬೇಗನೆ ಮಾಡುತ್ತಿದ್ದರು. ಜೊತೆಗೆ, ತಿಳುವಳಿಕೆಯ ಕೊರತೆಯಿಂದ, ಈ ವಿವಾಹದಿಂದ ಯಾವ ರೀತಿಯ ದುಷ್ಪರಿಣಾಮವಾಗಬಹುದೆಂದು ಆಲೋಚಿಸದೆ ಮದುವೆಯನ್ನು ಮಾಡುತ್ತಿದ್ದರು. ಮೂರನೆಯದಾಗಿ, ವಧುದಕ್ಷಿಣೆ. ಅಂದರೆ ತಮ್ಮ ಸಂಸಾರ ನಿರ್ವಹಣೆಗೆ ಹೆಣ್ಣುಮಕ್ಕಳನ್ನು ಬೇರೆ ಶ್ರೀಮಂತರಿಗೆ ಕೊಟ್ಟು ಅವರಿಂದ ವಧುದಕ್ಷಿಣೆ ಪಡೆಯುತ್ತಿದ್ದರು. ನಾಲ್ಕನೆಯದಾಗಿ, ಹೊರಗಿನವರಿಂದ ಅಂದರೆ ಕೆಲವೊಮ್ಮೆ ಯುದ್ಧದ ಸಮಯದಲ್ಲಿ ಯೋಧರು ಹೆಣ್ಣುಮಕ್ಕಳನ್ನು ಸೆರೆಹಿಡಿದುಕೊಂಡು ಹೋಗುತ್ತಿದ್ದರು. ಇದರಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಬೇಗನೆ ವಿವಾಹ ಮಾಡುತ್ತಿದ್ದರು. ಐದನೆಯದಾಗಿ, ಶಾಶ್ವತವಾಗಿ ಮನೆಗೆಲಸಕ್ಕೆ ಅನುಕೂಲವಾಗಲು ಬೇಗ ಮದುವೆ ಮಾಡಿಕೊಳ್ಳುತ್ತಿದ್ದರು.
ಇದರ ದುಷ್ಪರಿಣಾಮಗಳು:
ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತದೆ. ಮದುವೆ ಎಂದರೆ ಏನು ಎಂದು ತಿಳಿಯದಿರುವಾಗಲೇ, ಅಂದರೆ ಆಟವಾಡುವ ವಯಸ್ಸಿನಲ್ಲಿಯೇ ಹಸೆಮಣೆಯೇರಿಸುವುದರಿಂದ ಅವರ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಬಹುದು. ಇದರಿಂದ ಅವರ ಬಾಲ್ಯದ ಆಟಪಾಠ, ನಲಿವು ಎಲ್ಲದರಿಂದ ವಂಚಿತರಾಗುತ್ತಾರೆ. ಅಲ್ಲದೆ, ವಯಸ್ಸಿಗನುಗುಣವಾದ ಆಸೆ ಆಕಾಂಕ್ಷೆಗಳು, ಸ್ನೇಹಿತರ ಜೊತೆಗಿನ ಒಡನಾಟ, ತಮ್ಮ ಸ್ವಂತಿಕೆ ಮುಂತಾದವುಗಳಿಂದ ವಂಚಿತರಾಗುತ್ತಾರೆ. 
ಮನಸ್ಸಿನ ಮೇಲೆ ಬೀರುವ ಪರಿಣಾಮ ಶರೀರದ ಆರೋಗ್ಯದ ಮೇಲೂ ತನ್ನ ಛಾಪನ್ನು ಮೂಡಿಸುತ್ತದೆ. ಚಿಕ್ಕ ವಯಸ್ಸಿಗೆ ಮದುವೆ ಮಾಡುವುದರಿಂದ ಅವರಲ್ಲಿ ತಿಳುವಳಿಕೆ ಕೊರತೆಯಿಂದ ಯಾವುದೇ ಕುಟುಂಬ ಯೋಜನೆಗಳನ್ನು ಅಳವಡಿಸಿಕೊಳ್ಳದೆ ಬೇಗನೆ ಗರ್ಭ ಧರಿಸಬಹುದು. ಅವರ ಶರೀರವೇ ಇನ್ನೂ ಸಮರ್ಪಕವಾಗಿ ಬೆಳೆಯದಿರುವಾಗ, ಅವರು ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯವೇ?
ಕೆಲವು ಬಾರಿ ಗರ್ಭಪಾತವಾಗಬಹುದು, ತಾಯಿ ಅಥವಾ ತಾಯಿ ಮಗು, ಇಲ್ಲವೇ ಮಗು ಮರಣಿಸಬಹುದು ಅಥವಾ ಹುಟ್ಟುತ್ತಲೇ ಅನಾರೋಗ್ಯಪೀಡಿತವಾಗಬಹುದು. ಇಂತಹ ಪ್ರಸಂಗಗಳು ಸರ್ವೇಸಾಮಾನ್ಯವಾಗಿ ಕಾಣಬರುತ್ತವೆ. ಇದರಿಂದ ಅವಳಲ್ಲಿ ಅಪೌಷ್ಟಿಕತೆ ಉಂಟಾಗುತ್ತದೆ, ಶರೀರ ಅನಾರೋಗ್ಯದ ಗೂಡಾಗಬಹುದು. ಇದು ಹೀಗೆ ಮುಂದುವರೆದು ಹೆಣ್ಣು ಹೆರಿಗೆಯ ಯಂತ್ರವಾಗುತ್ತಾಳೆ. ಮತ್ತು ಇದರಿಂದ ಶಿಶು ಮರಣದ ಪ್ರಮಾಣವೂ ಹೆಚ್ಚುತ್ತದೆ. 
ಬಾಲ್ಯವಿವಾಹವು ಶಿಕ್ಷಣದ ಮೇಲೂ ತನ್ನ ಪರಿಣಾಮ ಬೀರುತ್ತದೆ. ಅಂದರೆ, ವಿವಾಹದ ನಂತರ ಶಿಕ್ಷಣ ಅರ್ಧಕ್ಕೆ ನಿಂತಂತಾಗುತ್ತದೆ. ಶಿಕ್ಷಣದ ಅರಿವಿಲ್ಲದೆ ಹೊರಪ್ರಪಂಚದಲ್ಲಿ ವ್ಯವಹರಿಸುವುದು ತುಂಬಾ ಕಷ್ಟವಾಗುತ್ತದೆ. 
ಇಂತಹವರು ಸಮಾಜದಲ್ಲಿ ಬೇಗ ಮೋಸ ಹೋಗುತ್ತಾರೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಟ್ಟಲ್ಲಿ ಅವರು ಬಾಲ್ಯವಿವಾಹವನ್ನು ತಡೆಯಬಹುದು, ಮುಂದೆ ಹೊಗಿ ವಿದ್ಯಾವಂತರಾಗಿ ತಮ್ಮ ಕಾಲುಗಳ ಮೇಲೆ ತಾವು ನಿಲ್ಲಬಹುದು. ಈ ಪದ್ಧತಿಯ ಮತ್ತೊಂದು ಕೆಡುಕೆಂದರೆ ವಯಸ್ಸಿನ ಅಂತರ. ಇದರಿಂದ ಪತಿಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಮತ್ತು ಸಂಸಾರದಲ್ಲಿ ಹೆಣ್ಣುಮಕ್ಕಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 
ಮತ್ತೊಂದು ಸಮಸ್ಯೆ ಬಾಲವಿಧವೆ ಸಮಸ್ಯೆ. ವಯಸ್ಸಿನ ಅಂತರವಿರಬಹುದು, ಇನ್ನಾವುದೇ ಕಾರಣವಿರಬಹುದು, ಪತಿ ಬೇಗ ಮರಣಿಸಿದಲ್ಲಿ ಹೆಣ್ಣುಮಗಳು ವಿಧವೆಯಾಗುತ್ತಾಳೆ. ಇಂತಹವರು ಮುಂದೆ ಓದಲು ಕಷ್ಟ. ಅವರ ಸ್ಥಿತಿ ಬಹುತೇಕ ಬಾರಿ ತುಂಬಾ ಕೆಟ್ಟದ್ದಾಗಿರುತ್ತದೆ. ಹಲವು ದಶಕಗಳ ಸಂಶೋಧನೆಯ ಫಲವಾಗಿ ಭಾರತದಲ್ಲಿ ಈ ಪದ್ಧತಿಯಿಂದ ಜನನ ಪ್ರಮಾಣ ಹೆಚ್ಚುತ್ತಿದೆ. ಬಡತನದ ಸಮಸ್ಯೆ, ಅಪೌಷ್ಟಿಕತೆ, ಅನಕ್ಶರತೆ, ಶಿಶುಮರಣ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ. 
ಇಷ್ಟೆಲ್ಲಾ ಕೆಡಕುಗಳನ್ನೊಂದಿರುವ ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಆಗಿನಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಅದನ್ನು ಸಂಪೂರ್ಣವಾಗಿ ಹೊಗಲಾಡಿಸಲು ಸಾಧ್ಯವಾಗಿಲ್ಲ. ಕಾನೂನಿನ ಪ್ರಕಾರ ಹೆಣ್ಣುಮಕ್ಕಳ ವಯಸ್ಸು 18 ಹಾಗೂ ಗಂಡುಮಕ್ಕಳ ವಯಸ್ಸು 21 ಆಗಿದ್ದಲ್ಲಿ ವಿವಾಹಕ್ಕೆ ಅರ್ಹರು ಮತ್ತು ಇದನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಪಡಿಸಬಹುದು ಮತ್ತು ದಂಡಾರ್ಹ ಎಂದು ತಿಳಿಸಿದ್ದರೂ ಅದನ್ನು ಪಾಲಿಸದೆ ಮದುವೆ ಮಾಡುತ್ತಿದ್ದಾರೆ. 
ಸಾಮಾಜಿಕ ಸುಧಾರಣೆಗಾಗಿ ಸ್ಥಾಪನೆಗೊಂಡ ಬ್ರಹ್ಮಸಮಾಜ, ಆರ್ಯಸಮಾಜ ಇದರ ವಿರುದ್ಧ ಕೆಲಸವನ್ನು ಪ್ರಾರಂಭಿಸಿತು. 1880ರಲ್ಲಿ 500 ಸ್ತ್ರೀರೋಗ ತಜ್ಞರು ಲಿಖಿತ ಮನವಿಯನ್ನು ಆಗಿನ ವೈಸ್‍ರಾಯ್‍ಗೆ ನೀಡಿದ್ದರ ಪರಿಣಾಮ 14 ವರ್ಷದ ಕೆಳಗಿನ ಹೆಣ್ಣುಮಕ್ಕಳಿಗೆ ವಿವಾಹ ಮಾಡಬಾರದೆಂದು ಕಾನೂನನ್ನು ತರಲಾಯಿತು. 
1886ರಲ್ಲಿ ಮೀರತ್‍ನಲ್ಲಿ ಹಿಂದೂ ಬಾಲ್ಯವಿವಾಹದ ವಿರುದ್ಧ ಮೊದಲ ಮನವಿಯನ್ನು ಸರ್ಕಾರಕ್ಕೆ ನೀಡಿತು. ಅದು ಅಂಗೀಕೃತಗೊಂಡದ್ದು 1927ರಲ್ಲಿ. 1921ರ ಗಣತಿಯಿಂದ ಎಚ್ಚೆತ್ತ ಬ್ರಿಟಿಷ್ ಸರ್ಕಾರ 1929ರಲ್ಲಿ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯನ್ನು ಜಾರಿಗೊಳಿಸಿತು. ನಂತರ ಗಾಂಧೀಜಿಯವರ ಒತ್ತಾಯದಿಂದ ಹರ್ ಬಿಲಾಸ್ ಸಾರ್ದಾರವರು ಈ ಕಾಯ್ದೆಯನ್ನು ಪುನರ್ ಪರಿಶೀಲಿಸಿದರು. ಇದು ಮುಂದೆ “ಸಾರದ ಕಾಯಿದೆ” ಎಂದೇ ಹೆಸರಾಯಿತು. 
ನಂತರದ ದಿನಗಳಲ್ಲಿ ವಿವಾಹದ ವಯಸ್ಸನ್ನು ಹೆಚ್ಚಿಸಲಾಯಿತು. ಹೆಣ್ಣುಮಕ್ಕಳ ವಯಸ್ಸು 18 ಹಾಗೂ ಗಂಡುಮಕ್ಕಳ ವಯಸ್ಸು 21. ಹೀಗೆ ಸರ್ಕಾರ ಏನೆಲ್ಲ ಕಾನೂನುಗಳನ್ನು ತಂದರೂ ಅದರ ಕಣ್ತಪ್ಪಿಸಿ ಈ ವಿವಾಹಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಇದನ್ನು ತಡೆಯವಲ್ಲಿ ಮಕ್ಕಳ ಕಲ್ಯಾಣ ಕೇಂದ್ರಗಳು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿವೆ ಹಾಗೂ ಇಂದಿನ ದಿನಗಳಲ್ಲಿ ಜನನ ಪ್ರಮಾಣಪತ್ರವನ್ನು ದಾಖಲಿಸುವುದು ಕಡ್ಡಾಯವಾಗಿದೆ. 
ಶಿಕ್ಷಣದ ಹೆಚ್ಚಳ, ನಗರೀಕರಣ, ಸಾಮಾಜಿಕ ಮಾಧ್ಯಮಗಳ ಮೂಲಕ ದುಷ್ಪರಿಣಾಮವನ್ನು ತಿಳಿದುಕೊಳ್ಳುತ್ತಿರುವುದರಿಂದ ಬಾಲ್ಯವಿವಾಹದ ಪ್ರಮಾಣ ಕಡಿಮೆಯಾಗುತ್ತಿದೆ.
ಹೀಗೆ ಪೋಷಕರು ಮತ್ತು ನಾಗರೀಕರು ತಮ್ಮ ಸ್ವಇಚ್ಛೆಯಿಂದ, ಮಕ್ಕಳ ಭವಿಷ್ಯವನ್ನು ಕುಂಠಿತಗೊಳಿಸದೆ ಸರ್ಕಾರದ ಜೊತೆ ಕೈಜೋಡಿಸಿದರೆ ಈ ಬಾಲ್ಯ ವಿವಾಹ ಪದ್ಧತಿಯೆಂಬ ಸಾಮಾಜಿಕ ಪಿಡುಗನ್ನು ನಾಶಪಡಿಸುವುದರಲ್ಲಿ ಸಂಶಯವೇ ಇಲ್ಲ.                                       
                                               -     ವಿಜಯಲಕ್ಷ್ಮಿ ಎಂ ಎಸ್

ವ್ಯಕ್ತಿ ಪರಿಚಯ: "ಸಿಸ್ಟರ್ ನಿವೇದಿತಾ"


“ಮಾನವ ಕುಲಕ್ಕೆ ಮಾಡುವ ಸೇವೆಯೇ ನಿಜವಾದ ಸೇವೆ” ಎಂದು ದೃಢವಾಗಿ ನಂಬಿದ್ದ ಸಿಸ್ಟರ್ ನಿವೇದಿತಾ ಜನಿಸಿದ್ದು ಅಕ್ಟೋಬರ್ 28, 1867ರಲ್ಲಿ. ಐರ್ಲೆಂಡ್‍ನ ಮೇರಿ ಇಸಬೆಲ್ ಮತ್ತು ಸ್ಯಾಮ್ಯುಯೆಲ್ ರಿಚ್ಮಂಡ್ ನೊಬೆಲ್‍ರವರ ಮಗಳಾಗಿ ಜನಿಸಿದ ಮಾರ್ಗರೆಟ್ ಎಲಿಜಬೆತ್ ನೊಬೆಲ್, ತಮ್ಮ ತಂದೆಯಿಂದ ಜನಸೇವೆ ಮಾಡುವುದನ್ನು ಕಲಿತರು. ಅವರಿಗೆ ಸಂಗೀತ ಮತ್ತು ಕಲೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ತಮ್ಮ ಶಿಕ್ಷಣವನ್ನು ಮುಗಿಸಿದ ಅವರು, ಶಿಕ್ಷಕಿಯಾಗಿ ಕೆಲಸ ಮಾಡಲಾರಂಭಿಸಿದರು. ಒಂದು ದಶಕದ ಕಾಲ ಅದೇ ವೃತ್ತಿಯಲ್ಲಿ ಮುಂದುವರೆದರು. 
ಆರಂಭದಿಂದಲೂ ಉತ್ಸಾಹದ ಚಿಲುಮೆಯಾಗಿದ್ದ ಅವರು 8 ವರ್ಷವಿದ್ದಾಗಲಿಂದಲೇ ಧರ್ಮವೆಂದರೆ ಕೇವಲ ಕೆಲವು ಸಿದ್ಧಾಂತಗಳನ್ನು ನಂಬುವುದಲ್ಲ ಬದಲಿಗೆ ಜ್ಞಾನಸಾಕ್ಷಾತ್ಕಾರ ಮಾಡಿಸುವ ಅಮೂಲ್ಯ ಬೆಳಕು ಎಂದು ನಂಬಿದ್ದರು. 1895ರಲ್ಲಿ ಸ್ವಾಮಿ ವಿವೇಕಾನಂದರನ್ನು ಲಂಡನ್‍ನಲ್ಲಿ ಭೇಟಿ ಮಾಡಿದರು ಮತ್ತು ಅವರ ವ್ಯಕ್ತಿತ್ವಕ್ಕೆ ಮಾರುಹೋದರು. ನಿವೇದಿತಾರವರ ಸೇವಾ ಮನೋಭಾವವನ್ನು ಅರಿತ ವಿವೇಕಾನಂದರು ಅವರನ್ನು ಭಾರತಕ್ಕೆ ಆಹ್ವಾನಿಸಿದರು. 
ಅವರ ಕರೆಗೆ ಓಗೊಟ್ಟು ಸಿಸ್ಟರ್ ನಿವೇದಿತಾರವರು ಭಾರತಕ್ಕೆ ಜನಸೇವೆ ಮಾಡಲು ಮುಖ್ಯವಾಗಿ ಭಾರತೀಯ ಮಹಿಳೆಯರಿಗಾಗಿ ಕೆಲಸ ಮಾಡಲು ಬಂದರು. ಸೇವೆ ಮಾಡಲು ಹೊರಟ ಅವರಿಗೆ ದೇಶದ ಗಡಿ ಅಡ್ಡಬರಲಿಲ್ಲ. ವಿವೇಕಾನಂದರು ಅವರಿಗೆ ನಿವೇದಿತಾ ಎಂಬ ಹೆಸರನ್ನು ನೀಡಿದರು. ಭಾರತದಲ್ಲಿ ಎಲ್ಲರಿಗೂ ಸಿಸ್ಟರ್ ನಿವೇದಿತಾ ಎಂದೇ ಚಿರಪರಿಚಿತರಾದರು. 
ಅವರು ಎರಡು ಅಂಶಗಳನ್ನು ನಂಬಿದ್ದರು. ಒಂದು ವಿಶ್ವಕಲ್ಯಾಣಕ್ಕಾಗಿ ಶ್ರಮಿಸುವುದು. ಇನ್ನೊಂದು ಸತ್ಯಕ್ಕಾಗಿ ಹುಡುಕಾಟ. ಸರಳ ಜೀವನವನ್ನು ನಡೆಸುತ್ತಿದ್ದ ನಿವೇದಿತಾರವರು ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು. ಜೊತೆಗೆ ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ವಿವಿಧ ವರ್ಗ, ಜಾತಿಗಳಿಗೆ ಸೇರಿದ ಹೆಣ್ಣುಮಕ್ಕಳನ್ನು ಒಂದೆಡೆಗೆ ಸೇರಿಸಲಾರಂಭಿಸಿದರು. ಕ್ರಮೇಣವಾಗಿ ಅವರು ಭಾರತ ಸ್ವಾತಂತ್ರ್ಯ ಚಳುವಳಿಯಲ್ಲೂ ತೊಡಗಿದರು. ಅವರ ಬರಹಗಳ ಮೂಲಕ, ಭಾಷಣಗಳ ಮೂಲಕ, ಕಾರ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು. ತಮ್ಮ ಆರೋಗ್ಯವನ್ನು ಕಡೆಗಣಿಸಿ ಜನಸೇವಾಕಾರ್ಯದಲ್ಲಿ ಮಗ್ನರಾದ್ದರಿಂದ ಅವರ ಆರೋಗ್ಯ ಹದಗೆಟ್ಟಿತು. ಜೊತೆಗೆ ವಿವೇಕಾನಂದರ ಅಕಾಲಿಕ ಮರಣ ಸಹ ಅವರನ್ನು ಜರ್ಜರಿತರನ್ನಾಗಿಸಿತು. 1911ರಲ್ಲಿ ಅಕ್ಟೋಬರ್ 13ರಂದು ಅವರು ಮರಣಹೊಂದಿದರು
                                                               - ಶೀಬಾ

ಸಿನಿಮಾ ವಿಮರ್ಶೆ: "ಟೂ ಬ್ರದರ್ಸ್"


ಇದುವರೆಗೂ ನಮ್ಮ ಸಿನಿಮಾ ವಿಮರ್ಶೆಯಲ್ಲಿ ನೀವು ಕೇವಲ ಮನುಷ್ಯರಿಗೆ ಸಂಬಂಧಿಸಿದ ಸಿನಿಮಾಗಳ ಬಗ್ಗೆ ಓದಿದ್ದೀರಿ. ಆದರೆ ಈ ಬಾರಿಯ ಸಂಚಿಕೆಯ ವಿಶೇಷತೆ ಎಂದರೆ ಈ ಬಾರಿ ನಾವು ಪ್ರಾಣಿಗಳಿಗೆ ಸಂಬಂಧಿಸಿದ ಅದರಲ್ಲೂ ಒಂದು ಹುಲಿ ಕುಟುಂಬದ ಭಾವನಾತ್ಮಕ ಸ್ವರೂಪದ ಕಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.]


ಹಚ್ಚಹಸುರಿನ ಒಂದು ದಟ್ಟ ಅರಣ್ಯ, ಅದರ ನಡುವೆ ಸಮುದ್ರದ ನಡುವಿನ ದ್ವೀಪದಂತೆ ಒಂದು ಪಾಳು ಬಿದ್ದ ಪ್ರಾಚೀನ ಕಟ್ಟಡ. (ಇದನ್ನು ಅಪರ್ಣಿಕ ರೀಜನ್ ಎಂದು ಕರೆಯುತ್ತಾರೆ) ಇದೇ ಕಟ್ಟಡವೇ ಈ ಕಥೆಯ ಹುಲಿ ಕುಟುಂಬದ ವಾಸಸ್ಥಾನ.

ಆರಂಭದಲ್ಲಿ ನಾವು ಒಂದು ಗಂಡು ಮತ್ತು ಒಂದು ಹೆಣ್ಣು ಹುಲಿ ಪ್ರೇಮಾನುರಾಗದಿಂದ ಜೀವನ ನಡೆಸುತ್ತಿರುವುದನ್ನು ಕಂಡರೆ ಮತ್ತೊಂದೆಡೆ ಇಂತಹ ಪ್ರಾಣಿಗಳ ವಿವಿಧ ಭಾಗಗಳನ್ನು (ದಂತ, ಚರ್ಮ) ಮಾರಿ ಬದುಕುವ ಮಾನವನ ಅನೀತಿ ಜೀವನವನ್ನು ಕಾಣುತ್ತೇವೆ. ಈ ಹುಲಿ ದಂಪತಿಗಳ ಪ್ರೇಮದ ಪ್ರತಿರೂಪಗಳಾಗಿ ಎರಡು ಮರಿ ಹುಲಿಗಳು ಜನಿಸುತ್ತವೆ. ಅವು ಮುದ್ದುಮುದ್ದಾಗಿ ಪುಟ್ಟಪುಟ್ಟ ಹೆಜ್ಜೆ ಇಡುತ್ತಾ ತಮ್ಮ ತಾಯಿ, ತಂದೆಯೊಂದಿಗೆ ಕಾಡಿನಲ್ಲಿ ಆನಂದವಾಗಿರುತ್ತದೆ. ಇವು ಒಮ್ಮೆ ಆಡುತ್ತಾ ಮುಂಗುಸಿಯ ಬಿಲದ ಬಳಿ ಬರುತ್ತವೆ. ಮುಂದೆ ಬಂದ ಸಣ್ಣ ಮರಿಯನ್ನು ಕಂಡು ಮುಂಗುಸಿ ಅದರ ಮೇಲೆರಗುತ್ತದೆ. ಹೆದರಿದ ಮರಿ ಮರವೇರಿಬಿಡುತ್ತದೆ. ನಂತರ ಹಿಂದೆ ಬಂದ ಮತ್ತೊಂದು ಮರಿ ತನ್ನ ತಮ್ಮನ ಸ್ಥಿತಿಯನ್ನು ಕಂಡು ಮುಂಗುಸಿಯನ್ನು ಓಡಿಸಿ, ತನ್ನ ತಮ್ಮನನ್ನು ಕೆಳಗಿಳಿಸಿಕೊಳ್ಳುತ್ತದೆ. ಆಗ ಅವು ಒಂದನ್ನೊಂದು ಮುದ್ದಾಡಿಕೊಳ್ಳುವ ದೃಶ್ಯ ನಯನಮನೋಹರವಾಗಿದೆ. ಈ ಸನ್ನಿವೇಶ  ಅಣ್ಣ,ತಮ್ಮ , ಅಕ್ಕ ತಂಗಿ ಎಂಬ ಪ್ರೀತಿ, ವಾತ್ಸಲ್ಯ ಕೇವಲ ಮನುಷ್ಯರಲ್ಲಿ ಮಾತ್ರವಿರದೆ ಪ್ರಾಣಿಗಳಲ್ಲೂ ಇರುತ್ತದೆ ಎಂಬುದನ್ನು ನಮಗೆ ತಿಳಿಸುತ್ತದೆ.
ಇಂತಹ ಆನಂದಕರ ಕುಟುಂಬದಲ್ಲಿ ಬೇಟೆಗಾರ ವ್ಯಾಪರಸ್ಥರು ಬಿರುಗಾಳಿ ಎಬ್ಬಿಸುತ್ತಾರೆ. ಆ ಹುಲಿ ಕುಟುಂಬವಿದ್ದ ಹಳೇ ಕಟ್ಟಡದಲ್ಲಿನ ಬೆಲೆ ಬಾಳುವ ಪ್ರಾಚೀನ ಸ್ಮಾರಕಗಳಿಗಾಗಿ ಇವರು ಕಾಡಿಗೆ ಬರುತ್ತಾರೆ. ಇದನ್ನು ದೂರದಿಂದಲೇ ತಂದೆ ಹುಲಿ ನೋಡುತ್ತದೆ.
ಮಾರನೇ ದಿನ ಈ ವ್ಯಾಪಾರಸ್ಥರು ಸ್ಮಾರಕಗಳಿಗಾಗಿ ಕಟ್ಟಡ ಉರುಳಿಸಲು ಸಿಡಿಮದ್ದುಗಳನ್ನು ಸಿಡಿಸುತ್ತಾರೆ. ಇದರಿಂದುಂಟಾದ ಭಾರಿ ಶಬ್ದದಿಂದ ಮರಿಗಳು ಬೆಚ್ಚಿಬೀಳುತ್ತವೆ. ತಂದೆ ಹುಲಿ ಏನಾಗುತ್ತಿದೆ ಎಂದು ನೋಡಲು ಹೊರಬರುತ್ತದೆ. ಆದರೆ ಇದನ್ನು ಆ ವ್ಯಾಪಾರಿಗಳು ನೋಡಿಬಿಡುತ್ತಾರೆ. ತಕ್ಷಣ ಅದನ್ನು ಕೊಲ್ಲಲು ಓಡುತ್ತಾರೆ. ಇದನ್ನು ಕಂಡು ತಾಯಿ ಹುಲಿ ತನ್ನ ಮರಿಗಳನ್ನು ರಕ್ಷಿಸಲು ಒಂದು ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡುತ್ತದೆ. ಇತ್ತ ಈ ವ್ಯಾಪಾರಸ್ಥ ಬೇಟೆಗಾರರ ನಾಯಕ ಬೇಟೆಯಲ್ಲಿ ನಿಪುಣನಾಗಿದ್ದು ಇವನು ಕಟ್ಟಡದಲ್ಲಿದ್ದ ತಂದೆ ಹುಲಿಯನ್ನು ಕೊಂದು ಮತ್ತೊಂದು ಮರಿಯನ್ನು ತನ್ನೊಂದಿಗೆ ತೆಗೆದುಕೊಂಡು ಬರುತ್ತಾನೆ.
ಮುದ್ದಾದ ಮರಿಯನ್ನು ಕೊಲ್ಲದೆ ಮುದ್ದಿಸುತ್ತಾನೆ. ಹಾಲು ಕುಡಿಯುವ ಮರಿಯಾದ್ದರಿಂದ ಅದು ಅವನ ಬೆರಳನ್ನೆ ತನ್ನ ತಾಯಿಯ ಮೊಲೆ ಎಂದು ಚೀಪುತ್ತದೆ. ಆಗ ಆ ವ್ಯಾಪಾರಿ ತನ್ನ ಜೇಬಿನಿಂದ ಮಿಠಾಯಿ ಡಬ್ಬಿ ತೆಗೆದು ಅದರ ಬಾಯಿಗಿಡುತ್ತಾನೆ.
ಮಾರನೇ ದಿನ ಆ ವ್ಯಾಪಾರಿ ಅದನ್ನು ಒಂದು ಬುಡಕಟ್ಟು ಜನರ ಪ್ರದೇಶಕ್ಕೆ ತೆಗೆದುಕೊಂಡು ಬಂದು ಅಲ್ಲಿ ಕಟ್ಟಿಹಾಕುತ್ತಾನೆ. ಆಗ ಅಷ್ಟರಲ್ಲಿ ಅಲ್ಲಿಗೆ ಆ ಪ್ರದೇಶದ ಪೊಲಿಸರು ಪ್ರಾಚೀನ ಶಿಲೆಯನ್ನು ಕದ್ದ ಆರೋಪದ ಮೇಲೆ ಅವನನ್ನು ಬಂಧಿಸುತ್ತಾರೆ. ಮರಿ ಪುನಃ ಅನಾಥವಾಗುತ್ತದೆ. ಅಂದು ರಾತ್ರಿ ಅದು ತನ್ನ ತಾಯಿಗಾಗಿ ಗೋಳಿಡುತ್ತಿರುತ್ತದೆ. ಅದರ ಕೂಗನ್ನು ಆಲಿಸಿ ಅದನ್ನು ಕರೆದೊಯ್ಯಲು ತಾಯಿ ಹುಲಿ ಬರುತ್ತದೆ  ಹುಲಿಯ ಗರ್ಜನೆ ಕೇಳಿದ ಆ ಬುಡಕಟ್ಟು ಜನ ತಕ್ಷಣ ಪಂಜು ಹಿಡಿದು ಆದನ್ನು ಕೊಲ್ಲಲು ಸಿದ್ಧರಾಗುತ್ತಾರೆ. ಹೆದರಿದ ತಾಯಿಹುಲಿ ತನ್ನೊಂದಿಗಿದ್ದ ಮರಿಯನ್ನು ಕಚ್ಚಿಕೊಂಡು ಹಿಂದೆ ಹೊರಟುಬಿಡುತ್ತದೆ.
ಮರುದಿನವೇ ಆ ಬುಡಕಟ್ಟು ಜನಾಂಗದವರು ತಮ್ಮ ಬಳಿಯಿದ್ದ ಮರಿಯನ್ನು ಒಂದು ಸರ್ಕಸ್ ಕಂಪನಿಗೆ ಮಾರಿಬಿಡುತ್ತಾರೆ. ಅದನ್ನು ಗಾಡಿಯಲ್ಲಿ ಸಾಗಿಸುತ್ತಿರುವಾಗ ಪುನಃ ತಾಯಿ ಹುಲಿ ತನ್ನ ಮರಿಯನ್ನು ರಕ್ಷಿಸಿಕೊಳ್ಳಲು ಓಡಿ ಬರುತ್ತದೆ. ಇದನ್ನು ಕಂಡ ಮರಿಯ ಕೂಗು ಮುಗಿಲು ಮುಟ್ಟುತ್ತದೆ. ಆದರೆ ಗಾಡಿಯ ಚಾಲಕ ವೇಗವಾಗಿ ಗಾಡಿ ಚಲಾಯಿಸಿದ್ದರಿಂದ ತಾಯಿಯ ಈ  ಪ್ರಯತ್ನವೂ ವಿಫಲವಾಗುತ್ತದೆ. ಆಗ ತನ್ನ ಮರಿಯನ್ನು ರಕ್ಷಿಸಿಕೊಳ್ಳಲಾಗದ ಆ ತಾಯಿಯ ಅಸಹಾಯಕ ದುಃಖತಪ್ತ ಮುಖ ಕರಳನ್ನು ಹಿಂಡುವಂತೆ ಮಾಡುತ್ತದೆ. ಸರ್ಕಸ್ ಕಂಪನಿಗೆ ಬಂದ ಆ ಮರಿಗೆ ರಿಂಗ್ ಮಾಸ್ಟರ್ ‘ಕುಮಾಲ್’ ಎಂದು ಹೆಸರಿಡುತ್ತಾನೆ. ಅದನ್ನು ಚೆನ್ನಾಗಿ ಹೊಡೆದು ಒಂದು ಬೋನಿನೊಳಗೆ ಬಿಸಾಡುತ್ತಾನೆ. ಆಗ ಹೆದರಿದ ಕುಮಾಲ್‍ನ ಮುಖವನ್ನು ಕಂಡರೆ ಕಣ್ಣು ತುಂಬಿ ಬರುತ್ತದೆ . 
ಇತ್ತ ಬಂಧನದಲ್ಲಿದ್ದ ಆ ವ್ಯಾಪಾರಿ ಬೇಟೆಗಾರನನ್ನು ರಾಜನ ಕಡೆಯ ಒಬ್ಬ ಅಧಿಕಾರಿ ಬಂದು ಬಿಡಿಸುತ್ತಾನೆ. ಕಾರಣ ರಾಜನಿಗೆ ಬೇಟೆಯಾಡುವ ಬಯಕೆಯಾಗಿರುತ್ತದೆ. ಅದಕ್ಕೆ ಬೇಟೆಯಲ್ಲಿ ನಿಪುಣನಾದ ಇವನ ಸಹಾಯ ಪಡೆಯಲು.
ಈ ಕಡೆ ಕಾಡಿನಲ್ಲೇ ಉಳಿದಿದ್ದ ತಾಯಿ ಮತ್ತು ಸಣ್ಣ ಮರಿ ಕಾಡಿನಲ್ಲಿ ಬರುತ್ತಿರುವಾಗ ಬುಡಕಟ್ಟು ಜನರು ಅವನ್ನು ರಾಜನ ಬೇಟೆಗಾಗಿ ಖೆಡ್ಡಾದಲ್ಲಿ ಬೀಳಿಸುತ್ತಾರೆ. ಮಾರನೇ ದಿನ ರಾಜಪರಿವಾರ  ಹುಲಿಗಳ ಬೇಟೆಗಾಗಿ ಕಾಡಿಗೆ ಆನೆಗಳ ಮೇಲೇರಿ ಬರುತ್ತಾರೆ. ಆಗ ಖೆಡ್ದಾದಲ್ಲಿದ್ದ ತಾಯಿ, ಮರಿಯನ್ನು ರಾಜನ ಬೇಟೆಗಾಗಿ ಹೊರಬಿಡುತ್ತಾರೆ. ತಕ್ಷಣ ತಾಯಿಹುಲಿ ಮರಿಯನ್ನು ಬೇಟೆಯಿಂದ ರಕ್ಷಿಸಲು ಅದನ್ನು ಒಂದು ಬಂಡೆಯ ಕೆಳಗೆ ಅವಿತಿಟ್ಟು ತಾನೊಂದೆ ಓಡತೊಡಗುತ್ತದೆ. ರಾಜ ಗುರಿಯಿಟ್ಟು ತಾಯಿಹುಲಿಯನ್ನು ಗುಂಡಿನಿಂದ ಹೊಡೆದು ಬೀಳಿಸುತ್ತಾನೆ. ಇದನ್ನು ಕಂಡ ರಾಜಪರಿವಾರ ಹರ್ಷದಿಂದ ಹಿಗ್ಗುತ್ತದೆ. ಆದರೆ ವಾಸ್ತವವಾಗಿ ತಾಯಿ ಹುಲಿಯ ಕಿವಿಗೆ ಗುಂಡೇಟು ತಗುಲಿರುತ್ತದೆಯಷ್ಟೇ. ರಾಜ ಹುಲಿ ಕೊಂದ ಗರ್ವದಿಂದ ಅದರ ಬಳಿ ಫೋಟೊ ತೆಗೆಸಿಕೊಳ್ಳಲು ಅದರ ಮೇಲೆ ಕಾಲಿಡುತ್ತಾನೆ.  ತಕ್ಷಣ ಹುಲಿ ಚಂಗನೆ ಹಾರಿ ರಾಜನನ್ನು ನೆಲಕ್ಕುರುಲಿಸಿ ಕಾಡಿನೊಳಕ್ಕೆ ಓಡಿ ಹೋಗುತ್ತದೆ. ಒಂದು ಹೆಜ್ಜೆಯೂ ನೆಲದ ಮೇಲಿಡದ ರಾಜ ನೆಲಕ್ಕುರುಳುವ ಸನ್ನಿವೇಶ ನೋಡಲು ತುಂಬಾ ಹಾಸ್ಯಮಯವಾಗಿದೆ.
ಅಷ್ಟರಲ್ಲಿ ರಾಜಪರಿವಾರದೊಂದಿಗೆ ಬಂದಿದ್ದ ಅಧಿಕಾರಿಯ ನಾಯಿ ಇದ್ದಕ್ಕಿದ್ದಂತೆ ಒಂದು ಬಂಡೆಯ ಕೆಳಗೆ ನೋಡಿ, ಬೊಗಳಿ ಅಲ್ಲಿ ಮರಿ ಇರುವುದನ್ನು ತೋರಿಸಿಬಿಡುತ್ತದೆ. ಆಗ ಆ ಅಧಿಕಾರಿಯ 8 ವರ್ಷದ ಮಗ ಅದನ್ನು ಕಂಡು “ಹೆದರಬೇಡ, ನಾನು ರೌಲ್, ನಾನು ನಿನ್ನನ್ನು ಏನೂ ಮಾಡುವುದಿಲ್ಲ" ಎಂದು ಅದನ್ನು ಮೃದುವಾಗಿ ಎತ್ತಿಕೊಂಡು ತನ್ನೊಂದಿಗೆ ಮನೆಗೆ ಕರೆದೊಯ್ಯುತ್ತಾನೆ. ರೌಲ್ ಅದಕ್ಕೆ ‘ಸುಂಗ’ ಎಂದು ಹೆಸರಿಡುತ್ತಾನೆ. ರೌಲ್ ಅದನ್ನು ತನ್ನ ಗೆಳೆಯನಂತೆ ಮುದ್ದಾಗಿ ನೋಡಿಕೊಳ್ಳುತ್ತಾನೆ. ಈ ದೃಶ್ಯ ಒಂದು ಮಗುವಿಗೆ ಇರುವ ಪ್ರಾಣಿ ದಯೆ, ಅನುಕಂಪ, ಪ್ರೀತಿ, ದೊಡ್ಡವರಿಗೆ ಇಲ್ಲವಲ್ಲ ಎನಿಸುತ್ತದೆ. 
ಇತ್ತ ಸರ್ಕಸ್‍ನಲ್ಲಿ ಕುಮಾಲ್ ಕಾಡಿನ ವಾತಾವರಣದಿಂದ ಸರ್ಕಸ್‍ನ ಕ್ರೂರ ಬದುಕಿಗೆ ಹೊಂದಿಕೊಳ್ಳಲಾಗದೆ ತನ್ನ ಪರಿವಾರದ ನೆನಪಿನಲ್ಲಿ ಆಹಾರವೂ ಸೇವಿಸದೆ ಕೃಶವಾಗಿಬಿಟ್ಟಿರುತ್ತದೆ. ಆಗ ಅದರ ಪಕ್ಕದಲ್ಲೇ ಇದ್ದ ಒಂದು ಮುದಿ ಹುಲಿ ಅದರ ಸ್ಥಿತಿಯನ್ನು ನೋಡಲಾರದೆ ತನ್ನ ಬಾಲದ ಮೂಲಕ ಅದನ್ನು ಎಬ್ಬಿಸಿ, ಅದಕ್ಕೆ ಆಡುವ ಅವಕಾಶ ಮಾಡಿಕೊಡುತ್ತದೆ. ಕುಮಾಲ್ ಅದನ್ನು ತನ್ನ ಅಪ್ಪನ ಬಾಲವೆಂದು ತಿಳಿದು ಆಡುತ್ತದೆ. ಆದರೆ ದುರಂತವೆಂದರೆ ಕುಮಾಲ್‍ನಗಿದ್ದ ಈ ಮುದಿ ಆಸರೆಯೂ ಕೆಲಸಕ್ಕೆ ಬಾರದು ಎಂಬ ಒಂದೇ ಕಾರಣಕ್ಕೆ ಬಲಿಯಾಗಿ (ಚರ್ಮಕ್ಕಾಗಿ) ಹೋಗುತ್ತದೆ .
ಈ ಕಡೆ ಸುಂಗ ರೌಲ್ ಬಳಿ ಆನಂದವಾಗಿದ್ದಾನೆ ಎನ್ನುವಷ್ಟರಲ್ಲಿ ಒಂದು ಘಟನೆ ನಡೆಯುತ್ತದೆ. ಏನೆಂದರೆ ರೌಲ್ ಇಲ್ಲದೇ ಇದ್ದಾಗ ರೌಲ್‍ನ ನಾಯಿಗೂ ಸುಂಗನಿಗೂ ಜಗಳವಾಗಿ  ಸುಂಗ ಆಕಸ್ಮಿಕವಾಗಿ ಆ ನಾಯಿಯನ್ನು ಕೊಂದುಬಿಡುತ್ತದೆ. ಇದರಿಂದ ಹೆದರಿದ ರೌಲ್‍ನ ತಾಯಿ ಮುಂದೆ ತನ್ನ ಮಗನಿಗೂ ಇದೇ ಗತಿ ಬಂದರೆ ಎಂದುಕೊಂಡು ಸುಂಗನನ್ನು ರಾಜನ ಮನೆಗೆ ಕಳುಹಿಸಿಬಿಡುತ್ತಾಳೆ. ಸುಂಗನನ್ನು ಕಳುಹಿಸಬಾರದೆಂದು ರೌಲ್ ತುಂಬಾ ಅಳುತ್ತಾನೆ . 
ಇತ್ತ ಒಮ್ಮೆ ಆ ಬೇಟೆಗಾರ ವ್ಯಾಪಾರಿ ಸರ್ಕಸ್ ಕಂಪನಿಗೆ ಹುಲಿ ಚರ್ಮಕ್ಕಾಗಿ ಬರುತ್ತಾನೆ. ತಕ್ಷಣ ಕುಮಾಲ್ ಅವನನ್ನು ಗುರುತಿಸಿ ಬೋನಿನಿಂದ ತನ್ನ ಕೈಯನ್ನು ಹೊರಹಾಕಿ ಕೂಗುತ್ತದೆ. “ನನ್ನನ್ನೇಕೆ ಬಿಟ್ಟುಹೋದೆ? ಈ ಬೋನಿನಿಂದ ನನ್ನನ್ನು ಬಿಡಿಸು” ಎನ್ನುವಂತೆ ಮುಖಭಾವದಲ್ಲಿ ತೋರಿಸುತ್ತದೆ. ಆಶ್ಚರ್ಯದಿಂದ ಅದರ ಬಳಿಗೆ ಬಂದ ಆ ವ್ಯಾಪಾರಿ ಅದನ್ನು ಸವರಿ ತನ್ನ ಜೇಬಿನಿಂದ ಮಿಠಾಯಿ ಡಬ್ಬಿ ತೆಗೆದು ಅದರ ಬಾಯಿಗಿಟ್ಟು, ಅಲ್ಲಿಂದ ಹೊರಟು ಹೋಗುತ್ತಾನೆ.
ಈಗ ‘ಸುಂಗ’ ರಾಜನ ಮನೆಯಲ್ಲಿ, ‘ಕುಮಾಲ್’  ಸರ್ಕಸ್ ನಲ್ಲಿದ್ದಾರೆ. ಒಂದು ವರ್ಷದ ನಂತರ ಸುಂಗ ಮತ್ತು ಕುಮಾಲ್ ಇಬ್ಬರೂ ದೊಡ್ದವರಾಗಿರುತ್ತಾರೆ. ಸರ್ಕಸ್‍ನಲ್ಲಿ ಕುಮಾಲ್‍ನಿಗೆ ಬೆಂಕಿ ಹಚ್ಚಿದ ರಿಂಗ್‍ನೊಳಗೆ ಹಾರಲು ತರಬೇತಿ ನೀಡಲು ತುಂಬಾ ಹಿಂಸಿಸುತ್ತಿರುತ್ತಾರೆ. ಹೆದರಿ ಹಿಂದೆ ಸರಿಯುತ್ತಿದ್ದ ಕುಮಾಲ್‍ನನ್ನು ರಿಂಗ್ ಮಾಸ್ಟರ್ ಚೆನ್ನಾಗಿ ಹೊಡೆಯುತ್ತಾನೆ. ಅವನ ಹೊಡೆತಕ್ಕೆ ಹೆದರಿದ ಕುಮಾಲ್ ಕೊನೆಗೂ ಆ ಬೆಂಕಿಯ ರಿಂಗ್‍ನೊಳಗೆ ಹಾರುತ್ತಾನೆ. ಈ ದೃಶ್ಯ ಇವರಲ್ಲಿ  ನಿಜವಾದ ಕ್ರೂರ ಪ್ರಾಣಿ ಯಾರು? ಎಂಬ ದ್ವಂದ್ವತೆ ಉಂಟಾಗುವಂತೆ ಮಾಡುತ್ತದೆ.
ಇತ್ತ ಒಮ್ಮೆ ರಾಜ ಮನೋರಂಜನೆಗಾಗಿ ಹುಲಿ ಕಾಳಗ ಏರ್ಪಡಿಸುತ್ತಾನೆ. ಕಾಳಗಕ್ಕೆ ಆಕಸ್ಮಿಕವಾಗಿ ಕುಮಾಲ್, ಸುಂಗ ಆಯ್ಕೆಯಾಗಿರುತ್ತಾರೆ. ರಾಜನ ಬಳಿಯಿದ್ದ ಸುಂಗ ಬಲಿಷ್ಟನಾಗಿ, ವ್ಯಾಘ್ರನಾಗಿ ಬೆಳೆದಿರುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ ಕುಮಾಲ್, ಹೊಡೆತಗಳಿಂದ ಕೃಶನಾಗಿ, ಭಯಗ್ರಸ್ತನಾಗಿ ಬೆಳೆದಿರುತ್ತಾನೆ. 
ಕಾಳಗದ ದಿನ ಬರುತ್ತದೆ. ಸುಂಗ  ಘರ್ಜಿಸುತ್ತಾ ತನ್ನ ಎದುರಾಳಿಗಾಗಿ ಕಾಯುತ್ತಿರುತ್ತಾನೆ. ಸುಂಗನನ್ನು ಕಂಡ ಕೂಡಲೇ ರೌಲ್ “ಸುಂಗ" ಎಂದು ಕೂಗಿ ಅಮ್ಮ ಅವನು "ಸುಂಗ” ಎನ್ನುತ್ತಾನೆ. ಇತ್ತ ಕಾಳಗಕ್ಕೆ ಹೋಗಲು ಸಿದ್ಧನಿರದೆ ಹೆದರುತ್ತಿದ್ದ ಕುಮಾಲ್‍ನನ್ನು ಹೊಡೆಯುತ್ತಿರುವುದನ್ನು ಕಂಡ ಆ ಬೇಟೆಗಾರ ವ್ಯಾಪಾರಿ ಕುಮಾಲ್‍ನನ್ನು ಕಾಳಗಕ್ಕೆ ಕಳುಹಿಸಬೇಡಿ ಎಂದು ಮಾಲೀಕನಿಗೆ ಹೇಳುತ್ತಾನೆ. ಆದರೆ ಮಾಲೀಕ ಅವನ ಮಾತಿಗೆ ಬೆಲೆ ಕೊಡದೆ ಗದರಿಸಿ ಸುಂಗನನ್ನು ಕಾಳಗಕ್ಕೆ ತಳ್ಳುತ್ತಾನೆ. ಕಾಳಗ ಆರಂಭವಾಗಿ ಎರಡೂ ಸೆಣೆಸಾಡಲಾರಂಭಿಸುತ್ತವೆ. ಹೀಗೆ ಒಂದನ್ನೊಂದು ಬಡಿದುಕೊಳ್ಳುವಾಗ ಕುಮಾಲ್ ಕೆಳಗೆ ಬಿದ್ದು ಅದರ ಮೇಲೆ ಸುಂಗ ನಿಲ್ಲುತ್ತಾನೆ. ತಕ್ಷಣ ಎರಡೂ ಒಂದನ್ನೊಂದು ಒಂದು ನಿಮಿಷ ಹಾಗೆ ನೋಡಿಕೊಳ್ಳುತ್ತವೆ. ಆಗ ಕುಮಾಲ್‍ನ ಮನದಾಳದಿಂದ ಏನೋ ಒಂದು ನೆನಪು ಮಿಂಚುತ್ತದೆ. ಮುಂಗುಸಿಯ ಭಯಕ್ಕೆ ಮರವೇರಿ ಚೀರುತ್ತಿದ್ದ ತಮ್ಮನ ಮುಖ ಕಣ್ಣೆದುರಿಗೆ ಬರುತ್ತದೆ. ಎರಡೂ ಒಂದನ್ನೊಂದು ಗುರುತಿಸಿಕೊಳ್ಳುತ್ತವೆ. ಬಡಿದುಕೊಳ್ಳುತ್ತಿದ್ದ ಎರಡೂ ಈಗ ಒಂದನನ್ನು ಮುದ್ದಡಿಕೊಳ್ಳಲು ಆರಂಭಿಸುತ್ತವೆ. ಇದನ್ನು ಕಂಡ ಜನ ಆಶ್ಚರ್ಯಚಕಿತರಾಗಿ, ಅವು ಮುದ್ದಾಡಿಕೊಡರೆ ತಮಗೆ ಮನೋರಂಜನೆ ಸಿಗುವುದಿಲ್ಲವೆಂದು ಅವನ್ನು ಉದ್ರೇಕಿಸಲು ಕಲ್ಲುಗಳನ್ನು ಎಸೆಯುತ್ತಾರೆ. ಇದು ಮನುಷ್ಯನ ಕ್ರೂರತೆಯ ಪರಾಕಾಷ್ಟತೆ ಎಂದೇ ಹೇಳಬಹುದು. ಆಗ ಕೋಪಗೊಂಡ ಸರ್ಕಸ್ ಮಾಲೀಕ ಕೋಲಿನಿಂದ ಕುಮಾಲ್‍ನನ್ನು ತಿವಿಯುತ್ತಾನೆ. ತಮ್ಮನನ್ನು ಹೊಡೆಯುತ್ತಿದ್ದ ಮಾಲೀಕನ ಕೈಯನ್ನು ಸುಂಗ ಹಿಡಿದು ಕಚ್ಚುತ್ತಾನೆ. ಇದರಿಂದ ಅವನ್ನು ನಿಯಂತ್ರಿಸಲು ರಿಂಗ್ ಮಾಸ್ಟರ್ ಕಾಳಗದ ಬೋನಿನೊಳಗೆ ಬಾಗಿಲು ಹಾಕದೇ ಬರುತ್ತಾನೆ. ಆಗ ಕುಮಾಲ್ ಮನಸ್ಸು ಮಾಡಿದ್ದರೆ ಅವನನ್ನು ಕ್ಷಣಮಾತ್ರದಲ್ಲಿ ಕೊಂದುಬಿಡಬಹುದಿತ್ತು. ಆದರೆ ಅದು ಅವನನ್ನು ಗಾಯಗೊಳಿಸುತ್ತದೆಯಷ್ಟೇ. ಬಾಗಿಲು ತೆರೆದಿದ್ದನ್ನು ಕಂಡ ಎರಡೂ ತಮಗೆ ಮುಕ್ತಿ ದೊರೆತಿದೆ ಎಂಬಂತೆ ಹೊರ ಓಡುತ್ತವೆ. ಆಗಲೂ ಅವು ಅಲ್ಲಿದ್ದ ಜನರಿಗೆ ಏನೂ ಹಾನಿ ಮಾಡದೆ ತಮ್ಮ ಪಾಡಿಗೆ ಕಾಡಿನ ಕಡೆ ಓಡುತ್ತವೆ.
ತಮ್ಮ ಸ್ಥಳವನ್ನು ಕಂಡು ಆನಂದಗೊಳ್ಳುತ್ತವೆ. ಆದರೆ ಅಲ್ಲಿಗೂ ರಾಜನ ಕಡೆಯವರು ಅವನ್ನು ಕೊಲ್ಲಲು ಅದೇ ಬೇಟೆಗಾರ ವ್ಯಾಪಾರಿಯೊಂದಿಗೆ ಬರುತ್ತಾರೆ. ಈ ಬಾರಿ ಬೇಟೆಯಾಡುವ ಇಚ್ಛೆ ಇಲ್ಲದಿದ್ದರೂ ರಾಜನ ಭಯಕ್ಕೆ ವ್ಯಾಪಾರಿ ಬಂದಿರುತ್ತಾನೆ. ದೂರದಲ್ಲಿ ಸುಂಗ, ಕುಮಾಲ್‍ರನ್ನು ಕಂಡು ಅವುಗಳ ಸುತ್ತ ಬೆಂಕಿ ಹಚ್ಚುತ್ತಾರೆ. ಎರಡೂ ಬೆಂಕಿಯನ್ನು ಕಂಡು ಹೆದರುತ್ತವೆ. ಕುಮಾಲ್ ಸ್ವಲ್ಪ ಹೊತ್ತು ಬೆಂಕಿಯನ್ನೇ ನೋಡುತ್ತಾನೆ. ತಕ್ಷಣ ತಾನು ಸರ್ಕಸ್‍ನಲ್ಲಿ ಕಲಿತ ಬೆಂಕಿಯ ರಿಂಗ್‍ನಲ್ಲಿ ಹಾರುವ ವಿದ್ಯೆ ನೆನಪಿಗೆ ಬಂದು ಕುಮಾಲ್ ಚಂಗನೆ ಬೆಂಕಿಯನ್ನು ಹಾರಿಬಿಡುತ್ತಾನೆ. ಹಲವಾರು ಬಾರಿ ಹಾರಿ ತೋರಿಸಿ, ಹುರಿದುಂಬಿಸುತ್ತದೆ. ಸುಂಗ ಹಾರಲಾರದೇ ಅಸಹಾಯಕವಾಗಿ ಕೂಗುತ್ತದೆ. ಆಗ ಕುಮಾಲ್ ಸುಂಗನಿಗೆ ಧೈರ್ಯ ಹೇಳುತ್ತದೆ. ಸುಂಗ ತಾನೂ ಹಾರಿ ಹೋಗುತ್ತದೆ. ಇದನ್ನು ರಾಜನ ಕಡೆಯವರೆಲ್ಲಾ ಮೂಕ ಪ್ರೇಕ್ಷಕರಂತೆ ಬಾಯಿ ತೆರೆದು ನೋಡುತ್ತಿರುತ್ತಾರೆ. ಇದನ್ನು ಕಂಡು ವ್ಯಾಪಾರಿಗೆ ತುಂಬಾ ಆನಂದವಾಗುತ್ತದೆ. 
ಅಂದು ರಾತ್ರಿ ರಾಜನ ಕಡೆಯವರೆಲ್ಲಾ ಮಲಗಿರುವಾಗ, ತಂದೆಯ ಜೊತೆಗೆ ಬಂದಿದ್ದ ರೌಲ್ ಮತ್ತು ಆ ವ್ಯಾಪಾರಿ ಬೇಟೆಗಾರ ಇಬ್ಬರೂ ಮಾತನಾಡುತ್ತಿರುತ್ತಾರೆ. ಆಗ ರೌಲ್ ಅವನನ್ನು ಕುರಿತು “ನೀವೇಕೆ ಹುಲಿಗಳನ್ನು ಬೇಟೆಯಾಡುತ್ತೀರಿ? ಪಾಪ ಅವು ಮೂಕ ಪ್ರಾಣಿಗಳು, ಇದು ತಪ್ಪಲ್ಲವೇ?" ಎಂದು ಕೇಳುತ್ತಾನೆ. ಅದಕ್ಕೆ ಆ ಬೇಟೆಗಾರ ವ್ಯಾಪಾರಿ "ನೀನು ಹೇಳುವುದು ನಿಜ. ಆದರೆ ಅವನ್ನು ನಾನಲ್ಲದಿದ್ದರೆ ಇನ್ನಾರಾದರೂ ಕೊಲ್ಲುತ್ತಾರೆ. ಇದಾದ ನಂತರ ನಾನು ಬೇಟೆಯಾಡುವುದಿಲ್ಲ. ಇದೇ ಕೊನೆ” ಎನ್ನುತ್ತಾನೆ. 
ಮಾರನೆಯ ದಿನ ರೌಲ್ ಎದ್ದವನೇ ಸುಂಗನನ್ನು ನೋಡಲು ಕಾಡಿನ ಒಳಗೆ ಹೋಗುತ್ತಾನೆ. ಗಾಬರಿಗೊಂಡ ವ್ಯಾಪಾರಿ ಅವನನ್ನು ಹುಡುಕಲು ಬಂದೂಕು ಹಿಡಿದು ಹೋಗುತ್ತಾನೆ. ಕೊನೆಗೂ ಸುಂಗ ರೌಲ್‍ನ ಎದುರಿಗೆ ಬರುತ್ತಾನೆ. ಸುಂಗನನ್ನು ಕಂಡ ರೌಲ್ ಸಂತಸದಿಂದ ಅದರ ಬಳಿಗೆ ಸ್ವಲ್ಪವೂ ಭಯವಿಲ್ಲದೇ  ಹೋಗಿ ಅದಕ್ಕೆ ಮುತ್ತು ಕೊಟ್ಟು “ಸುಂಗ ನೀನು ಇಲ್ಲೇ ಇರು. ಇದೇ ನಿನಗೆ ಸುರಕ್ಷಿತವಾದ ಸ್ಥಳ” ಎನ್ನುತ್ತಾನೆ ಸುಂಗ ತಲೆ ಅಲ್ಲಾಡಿಸುತ್ತಾನೆ. ಇದನ್ನೇ ದೂರದಿಂದ ನೋಡುತ್ತಿದ್ದ ಬೇಟೆಗಾರ ವ್ಯಾಪಾರಿ ಬಂದೂಕು ಹಿಡಿದು ಮರೆಯಲ್ಲಿ ನಿಂತಿರುತ್ತಾನೆ. ಆಗ ಅವನ ಪಕ್ಕ ಕುಮಾಲ್ ಬಂದು ನಿಲ್ಲುತ್ತಾನೆ. ಗಾಬರಿಗೊಂಡು ಎದ್ದು ನಿಂತ ವ್ಯಾಪಾರಿ ಅದರ ಕಣ್ಣಿನಲ್ಲಿನ ಪ್ರೀತಿಯನ್ನು ಕಂಡು ಕೈಯಲ್ಲಿದ್ದ ಬಂದೂಕನ್ನು ಎಸೆಯುತ್ತಾನೆ. ಇದು ಸಾಂಕೇತಿಕವಾಗಿ ಆತ ಬೇಟೆಯಾಡುವುದನ್ನು ತ್ಯಜಿಸಿದ ಎಂದು ತೋರಿಸುತ್ತದೆ. ಆಗ ಕುಮಾಲ್ ಅವನ ಜೇಬನ್ನು ಮೂಸುತ್ತದೆ. ವ್ಯಾಪಾರಿಯು ಜೇಬಿನಿಂದ ಮಿಠಾಯಿ ಡಬ್ಬಿಯನ್ನು ತೆಗೆದು ಖಾಲಿ ಇರುವುದನ್ನು ನೋಡಿ, ಸುಂಗನ ಮುಖವನ್ನು ದುಖದಿಂದ ನೋಡಿ ಎರಡು ಬಾರಿ “ಸಾರಿ, ಸಾರಿ” ಎನ್ನುತ್ತಾನೆ. ಇಲ್ಲಿ ಒಂದು ಕುಮಾಲ್‍ನ ತಂದೆಯನ್ನು ಕೊಂದಿದ್ದಕ್ಕೆ, ಮತ್ತೊಂದು ಸಾರಿ ಮಿಠಾಯಿ ಇಲ್ಲದಿದ್ದಕ್ಕಾಗಿ" ಎಂದು ಹೇಳುತ್ತಾನೆ .
ರೌಲ್ ಮತ್ತು ವ್ಯಾಪಾರಿ ತಮ್ಮ ಗೆಳೆಯರಾದ, ಸುಂಗ, ಕುಮಾಲ್‍ರಿಗೆ ಕೊನೆಯ ವಿದಾಯ ಹೇಳಿ ಅಲ್ಲಿಂದ ಹೊರಡುತ್ತಾರೆ . ಸುಂಗ, ಕುಮಾಲ್ ತಮ್ಮ ಸ್ಥಳವಾದ ಹಳೇ ಕಟ್ಟಡದ ಬಳಿ ಬರುತ್ತಾರೆ. ಆಗ ಅವರ ಎದುರಿಗೆ ರಾಜನಿಂದ ತಪ್ಪಿಸಿಕೊಂಡು ಕಾಡಿನಲ್ಲೇ ಇದ್ದ ಅವರ ತಾಯಿ ಎದುರಾಗುತ್ತಾಳೆ. ಇದನ್ನು ಕಂಡ ಇಬ್ಬರೂ ಸಹೋದರರೂ ಆನಂದದಿಂದ ಅಮ್ಮನ ಬಳಿಗೆ ಓಡಿಹೋಗುತ್ತಾರೆ
ಈ ಕಥೆಯಿಂದ ನಮಗೆ ತಿಳಿಯುವುದೇನೆಂದರೆ ‘ಪ್ರಕೃತಿಯ ಶಿಶು’ ಎನ್ನಲಾಗುವ ಮಾನವ ಎಷ್ಟರ ಮಟ್ಟಿಗೆ ಅದನ್ನು ರಕ್ಷಿಸುತ್ತಿದ್ದಾನೆ ಎಂದು. ಹೆಸರಿಗೆ ಮಾತ್ರ ಕ್ರೂರ ಪ್ರಾಣಿಗಳು ಎನಿಸಿಕೊಳ್ಳುವ ಹುಲಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ಮಾತ್ರ ಹೋರಾಡಿರುವುದನ್ನು ನಾವು ಗಮನಿಸಬಹುದು. ಆದರೆ ಶ್ರೇಷ್ಠ ಪ್ರಾಣಿ ಎನಿಸಿಕೊಂಡಿರುವ ಮಾನವ ತನ್ನ ಸ್ವಾರ್ಥಕ್ಕಾಗಿ ಏನೂ ಅರಿಯದ ಆ ಹುಲಿಗಳ ಮುಗ್ಧ ಜೀವನಕ್ಕೆ ಮಣ್ಣು ಹಾಕಿ ಅವುಗಳಿಗೆ ನಾನಾ ಹಿಂಸೆ ನೀಡುತ್ತಾನೆ. ಅವುಗಳನ್ನು ಕೊಂದು ಅವುಗಳ ಚರ್ಮವನ್ನು ಸಹ ತನ್ನ ಐಷಾರಾಮಿ ಜೀವನಕ್ಕೆ  ಬಳಸುತ್ತಾನೆ. ಈ ಕಥೆಯಲ್ಲಿ ಎಲ್ಲೂ ಹುಲಿಗಳು ಮನುಷ್ಯರಿಗೆ ಹಾನಿ ಮಾಡುವುದಿಲ್ಲ. ಇದಕ್ಕೆ ಸಾಕ್ಷಿ ಕಾಳಗದ ಸಂದರ್ಭ. ಹಾಗಾಗಿ ಆಲೋಚನಾ ಶಕ್ತಿ ಇಲ್ಲದ ಪ್ರಾಣಿಗಳಿಗೇ ಅಷ್ಟು ದಯೆ ಇರಬೇಕಾದರೆ, ವಿವೇಚನಾ ಶಕ್ತಿ ಇರುವ ಮನುಷ್ಯ ಹೇಗೆ ವರ್ತಿಸಬೇಕು ಅಲ್ಲವೇ? ಇದರ ಬಗ್ಗೆ ಆಲೋಚಿಸುವ ಮನಸ್ಸು ನಿಜವಾಗಿಯೂ ನಿಮಗಿದ್ದರೆ ಇಂದೇ ‘ಟು ಬ್ರದರ್ಸ್’ ಸಿನಿಮಾದ ಸಿಡಿ ತಂದು ನೋಡಿ. ಇದರ ವಿವೇಚನೆ ನಿಮಗೇ ಬಿಟ್ಟಿದ್ದು.
- ರೂಪಶ್ರೀ ವಿ ಬಿ 

ಪುಸ್ತಕಪ್ರೀತಿ: "ರೂಪದರ್ಶಿ – ಕೆ ವಿ ಅಯ್ಯರ್"




ಅಮೇರಿಕಾದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ  'The face of iscariot' (ಜುದಾಸ್ ಇಸ್ಕ್ಯಾರಿಯೆಟ್ - ಕ್ರಿಸ್ತನನ್ನು ಮೋಸಮಾಡಿದ ಜುದಾಸನ ಪೂರ್ತಿ ಹೆಸರು) ಎಂಬ ಕಥೆಯ ಎಳೆಯೊಂದನ್ನು ತೆಗೆದುಕೊಂಡು ಕೆ ವಿ ಅಯ್ಯರ್‍ರವರು ರೂಪದರ್ಶಿ ಕಾದಂಬರಿಯನ್ನು ಬರೆದಿದ್ದಾರೆ.

ಫ್ಲೋರೆನ್ಸ್ ನಗರದಲ್ಲಿ ಕಟ್ಟಿಸಿದ್ದ ಚರ್ಚ್‍ನಲ್ಲಿ ಕ್ರಿಸ್ತನ ಜೀವನಚರಿತ್ರೆಯನ್ನು ಚಿತ್ರಿಸಬೇಕೆಂದು ಧರ್ಮದರ್ಶಿಗಳು ಮತ್ತಿತರರು ನಿರ್ಧರಿಸಿದರು. ಅದಕ್ಕಾಗಿ ಚಿತ್ರಕಲೆಯಲ್ಲಿ ಸಾರ್ವಭೌಮನಾಗಿದ್ದ ಮೈಕೆಲ್‍ನನ್ನು ಕೇಳಿದರು. ಅವನು ಒಪ್ಪಿ ಚಿತ್ರ ಬಿಡಿಸಲು ಪ್ರಾರಂಭಿಸಿದನು. ತುಂಬು ಗರ್ಭಿಣೆ ಮರಿಯಾಳ ಚಿತ್ರ, ಅವಳು ಕ್ರಿಸ್ತನನ್ನು ಹೆತ್ತದ್ದು, ಹೀಗೆ ಚಿತ್ರಗಳನ್ನು ಬಿಡಿಸಿದನು. ಆದರೆ, ಅವನಿಗೆ ಕ್ರಿಸ್ತನ ಬಾಲ್ಯದ ರೂಪವನ್ನು ಬಿಡಿಸಲಾಗಲಿಲ್ಲ. 
ಆ ರೀತಿಯಾದ ರೂಪದರ್ಶಿಯನ್ನು ವರ್ಷಗಳ ಕಾಲ ಎಲ್ಲಾ ಊರುಗಳಲ್ಲಿ ಹುಡುಕುತ್ತಾಪೀಸಾ ನಗರಕ್ಕೆ ಬಂದನು.  ಅವನ ಸ್ನೇಹಿತನ ಜೊತೆ ಒಂದು ಸಂಜೆ ಹೊರಗೆ ಹೋಗಿದ್ದಾಗ, ಅಲ್ಲಿ ಆಟವಾಡುತ್ತಿದ್ದ ಮಕ್ಕಳ ಗುಂಪಿನಲ್ಲಿ ಒಬ್ಬನನ್ನು ನೋಡಿದಾಕ್ಷಣ ಇವನೇ ನನಗೆ ರೂಪದರ್ಶಿಯಾಗಲು ಸೂಕ್ತವಾದ ಹುಡುಗಎಂದೆನಿಸಿ, ಅವನ ಅಜ್ಜಿಯ ಜೊತೆ ಮಾತನಾಡಿ, ಆ ಹುಡುಗನನ್ನು ಮತ್ತು ಅಜ್ಜಿಯನ್ನು ಫ್ಲೋರೆನ್ಸ್ ನಗರಕ್ಕೆ ಕರೆದುಕೊಂಡು ಹೋದನು. ಆ ಹುಡುಗನ ಹೆಸರು ಅರ್ನೆಸ್ಟೊ. ಅರ್ನೆಷ್ಟೊ ಮೈಕೆಲ್‍ನನ್ನು ಚಿಕ್ಕಪ್ಪ ಎಂದು ಕರೆಯಲಾರಂಭಿಸಿದನು. ಮೈಕೆಲ್ ಅರ್ನೆಸ್ಟೊನನ್ನು ರೂಪದರ್ಶಿಯನ್ನಾಗಿ ಮಾಡಿಕೊಂಡು ಬಾಲಯೇಸುವಿನ ಚಿತ್ರಗಳನ್ನು ಅದ್ಭುತವಾಗಿ ಬಿಡಿಸಿದನು.
ಎಲ್ಲಾ ಚಿತ್ರಗಳನ್ನು ಬಿಡಿಸಿಯಾದ ಮೇಲೆ ಬೇಕಾದಷ್ಟು ಹಣವನ್ನು ಅವನ ಅಜ್ಜಿಗೆ ನೀಡಿ, ಅರ್ನೆಸ್ಟೊ ಶಿಕ್ಷಣಕ್ಕೆ ಮತ್ತು ಅವರ ಜೀವನಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಟ್ಟನು. ಇಬ್ಬರೂ ಪೀಸಾ ನಗರಕ್ಕೆ ಹಿಂದಿರುಗಿದರು.
ನಂತರ ಮೈಕೆಲ್ ಯೇಸುವಿನ ಒಂದೊಂದು ಹಂತದ ಚಿತ್ರಗಳನ್ನು ಬಿಡಿಸುತ್ತಾ ಹೋದನು. ಒಂದು ಹಂತದಲ್ಲಿ, ಅವನಿಗೆ ಮತ್ತೆ ಮೊದಲಿನ ಸಮಸ್ಯೆ ಕಾಣಿಸಿಕೊಂಡಿತು. ಕ್ರಿಸ್ತನ ಆಪ್ತ ಶಿಷ್ಯನಾಗಿದ್ದು, ಆದರೆ ಹಣದಾಸೆಗೆ ಯೇಸುವನ್ನು ಶತ್ರುವಿಗೆ ಹಿಡಿದುಕೊಟ್ಟ ಜುದಾಸನ ಕ್ರೂರ ರೂಪವನ್ನು ಚಿತ್ರಿಸಲು ಆಗಲಿಲ್ಲ. ಪುನಃ ಒಬ್ಬ ರೂಪದರ್ಶಿಯ ಹುಡುಕಾಟ ಪ್ರಾರಂಭಿಸಿದನು. ಹೀಗೆ ಹುಡುಕುತ್ತಾ ವ್ಯಾಟಿಕನ್ ನಗರಕ್ಕೆ ಬಂದಾಗ ಅಲ್ಲಿನ ಪೋಪರು ಬ್ರಹ್ಮಾಂಡ ಸೃಷ್ಟಿ ಮತ್ತು ಇತರ ಚಿತ್ರಗಳನ್ನು ಬಿಡಿಸಿಕೊಡಬೇಕೆಂದು ಕೇಳಿದರು. ವಿಧಿಯಿಲ್ಲದೆ ಮೈಕೆಲ್ ಅದಕ್ಕೆ ಒಪ್ಪಿ, ಚಿತ್ರಗಳನ್ನೆಲ್ಲ ಮುಗಿಸುವಷ್ಟರಲ್ಲಿ ಅವನ ವಯಸ್ಸು 60 ದಾಟಿತ್ತು.
ಪುನಃ ಅವನು ಜುದಾಸನನ್ನು ಹುಡುಕುತ್ತಾ ಕರಾರ ನಗರಕ್ಕೆ ಬಂದನು. ಅಲ್ಲಿ ಅವನು ತನ್ನ ಗೆಳೆಯನ ಮಗಳಾದ ಲೀನಾಳ ಮನೆಗೆ ಬಂದನು. ಅವಳ ಗಂಡ ಟಾಯೆಟ್ ಕುಡುಕ ಮತ್ತು ದುರಾಚಾರಿಯಾಗಿದ್ದನು. ಅಲ್ಲಿ ಸ್ವಲ್ಪ ದಿನವಿದ್ದ ಮೈಕೆಲ್ ಎಂಪೆÇಲಿ ಎಂಬ ಗ್ರಾಮಕ್ಕೆ ತೆರಳಿದನು. ಅಲ್ಲಿ ಒಂದು ಹೆಂಡದ ಅಂಗಡಿಯ ಮುಂದೆ ಇದ್ದ ಆರೇಳು ಜನರಲ್ಲಿ ಒಬ್ಬ ವಿಕಾರ ರೂಪದವನಿದ್ದನು. ಅವನನ್ನು ನೋಡಿದ ಕ್ಷಣ ಇವನು ಜುದಾಸನ ರೂಪಕ್ಕೆ ಸರಿಹೊಂದುವನು ಎಂದೆನಿಸಿ, ಅವನನ್ನು ಹಣದ ಆಸೆ ತೋರಿಸಿಫ್ಲೋರೆನ್ಸ್ ಗೆ ಕರೆದುಕೊಂಡು ಬಂದನು. 
ಅವನನ್ನು ಎಲ್ಲರೂ ಗರಿಬಾಲ್ಡಿಯೆಂದು ಕರೆಯುತ್ತಿದ್ದರು. ಮೊದಲಿಗೆ ಗರಿಬಾಲ್ಡಿ ದೇವಾಲಯದೊಳಗೆ ಬರಲು ನಿರಾಕರಿಸಿದನು. ಅವನನ್ನು ದೇವಾಲಯಕ್ಕೆ ಕರೆತರಲು ಹೆಚ್ಚು ಹಣದ ಆಮಿಷವೊಡ್ಡಿದನು. ನಂತರ ಗರಿಬಾಲ್ಡಿಯನ್ನು ರೂಪದರ್ಶಿಯನ್ನಾಗಿಸಿ ಜುದಾಸನ ಚಿತ್ರ ಬರೆಯಲು ಪ್ರಾರಂಭಿಸಿದನು. 

ಗರಿಬಾಲ್ಡಿಯು ತನ್ನ ಎಡಭಾಗದಲ್ಲಿ ಬಿಡಿಸಿದ್ದ ಬಾಲಯೇಸುವಿನ ಚಿತ್ರಗಳನ್ನು ನೆಟ್ಟ ದೃಷ್ಟಿಯಿಂದ ನೋಡುತ್ತಿದ್ದವನು, ಇದ್ದಕ್ಕಿದ್ದ ಹಾಗೆ ವಿಚಿತ್ರ ದನಿಯಿಂದ ಕೂಗುತ್ತಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದನು. ಮೈಕೆಲನು ಅವನನ್ನು ಎಚ್ಚರಗೊಳಿಸಿ ದ್ರಾಕ್ಷಾರಸ ನೀಡಿದನು. ನಂತರ ಗರಿಬಾಲ್ಡಿ ಚಿಕ್ಕಪ್ಪ, ಚಿಕ್ಕಪ್ಪ ಎಂದು ಕೂಗಿದ. ಮೈಕೆಲನು ಚಕಿತನಾಗಿ ಯಾರು ನೀನು? ಎಂದಾಗ ಚಿಕ್ಕಪ್ಪ, ನಾನು ನಿನ್ನ ಅರ್ನೆಸ್ಟೊ ಎಂದನು. ಮುದ್ದಾಗಿದ್ದ ಅವನೆಲ್ಲಿ, ಕ್ರೂರರೂಪ ಹೊಂದಿರುವ ನೀನೆಲ್ಲಿ ಎಂದು ಮೈಕೆಲನು ಪ್ರಶ್ನಿಸಿದಾಗ ಅರ್ನೆಸ್ಟೊ ತನ್ನ ಹಿಂದಿನ ಕಥೆಯನ್ನು ಹೇಳತೊಡಗಿದನು.
ನೀನು ನಮಗೆ ಕೊಟ್ಟಿದ್ದ ಹಣವನ್ನು ನನ್ನ ಅಜ್ಜಿಯು ಸಾಹುಕಾರ ಜಿಯೋವನಿಯ ಬಳಿ ಕೊಟ್ಟಿದ್ದಳು. ಅಜ್ಜಿ ಇರುವಷ್ಟು ದಿನ ನನ್ನನ್ನು ಚೆನ್ನಾಗಿ ನೋಡಿಕೊಂಡಳು. ಅವಳು ತೀರಿಕೊಂಡ ನಂತರ ಜಿಯೋವನಿಯು ಅರ್ನೆಸ್ಟೊವಿನ ಜವಾಬ್ದಾರಿ ನನ್ನದೆಂದು ನನ್ನನ್ನು ಅವನ ಮನೆಗೆ ಕರೆದುಕೊಂಡು ಹೋದನು. ಆದರೆ ಅವನ ಹೆಂಡತಿ ಮತ್ತು ಮಕ್ಕಳಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಹೊಟ್ಟೆ ತುಂಬ ಊಟವಿರಲಿಲ್ಲ ಆದರೆ ಕೈತುಂಬ ಕೆಲಸ ಮಾಡಿಸುತ್ತಿದ್ದರು. ಎಷ್ಟೋ ಬಾರಿ ನನ್ನನ್ನು ಸಾಕಿದ ಲೀನಾ ತಾಯಿ ಮನೆಗೆ ಹೋಗೋಣವೆಂದುಕೊಂಡೆ. ಆದರೆ ಜಿಯೋವನಿ, ಅವರಿಗೆ ತೊಂದರೆ ಕೊಡುತ್ತಾನೆ ಎಂದು ಹೋಗಲಿಲ್ಲ. ಹೀಗಿರುವಾಗ ಒಂದು ದಿನ ಕಳ್ಳತನದ ಆಪಾದನೆ ಹೊರಿಸಿ, ಚೆನ್ನಾಗಿ ಹೊಡೆದು ಹೊರಹಾಕಿದರು. 
ನಾನು ಇನ್ನೊಂದು ತೋಟಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಂಡೆ. ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡಿ ಯಜಮಾನನಿಗೆ ಮೆಚ್ಚುಗೆಯಾಗಿದ್ದೆ. ವರ್ಷಗಳು ಕಳೆದಂತೆ ನಷ್ಟವಾಗಿ ಯಜಮಾನ ತೋಟ ಮಾರಿದ. ಮತ್ತೊಂದು ಊರಿಗೆ ಹೋದೆ. ಅಲ್ಲಿ 6 ವರ್ಷಗಳ ಕಾಲ ತೋಟದಲ್ಲಿ ಕೆಲಸ ಮಾಡಿಕೊಂಡು ಸುಖವಾಗಿದ್ದೆ. ಅಲ್ಲಿಯೂ ಮಾಲೀಕನ ತಮ್ಮನ ಮೋಸಕ್ಕೆ ಬಲಿಯಾಗಿ ಕೆಲಸ ಕಳೆದುಕೊಂಡು ಕರಾರ ನಗರಕ್ಕೆ ಹೋದೆ. ಆಗ ನನಗೆ 21 ವರ್ಷ. ಅಲ್ಲಿ ನಾನು ಟಾಯೆಟ್ ನಿಗೆ ಸೇರಿದ ಅಮೃತಶಿಲೆಯ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದೆ. ನಾನಿದ್ದ ಮನೆಯ ಮಾಲೀಕರು ನನ್ನ ನಡವಳಿಕೆ, ರೂಪವನ್ನು ಮೆಚ್ಚಿ ಅವರ ಮಗಳನ್ನು ಮದುವೆ ಮಾಡಬೇಕೆಂದುಕೊಂಡಿದ್ದರು. ಯುವೋನಾಳನ್ನು ನಾನು ಮೆಚ್ಚಿಕೊಂಡಿದ್ದೆ. ಇಬ್ಬರೂ ಪ್ರೀತಿಸಲಾರಂಭಿಸಿದೆವು.
ಅಂಗಡಿಗೆ ಬಂದ ಗಿರಾಕಿಯೊಬ್ಬ ನನ್ನನ್ನು ನೋಡಿ ನನ್ನ ತೈಲಚಿತ್ರ ಬಿಡಿಸಿ, ಅದಕ್ಕೆ ನಿದ್ರಿಸುತ್ತಿರುವ ಮನ್ಮಥ ಎಂದು ಹೆಸರಿಸಿದ. ನನ್ನ ರೂಪವೇ ನನಗೆ ಶತ್ರುವಾಯಿತು. ಒಂದು ದಿನ ಅಂಗಡಿಗೆ ಬಂದ ಟಾಯೆಟ್ ನ ಪತ್ನಿ ಲೀನಾತಾಯಿ ನನ್ನನ್ನು ಊಟಕ್ಕೆ ಕರೆದಳು. ಸಂಶಯಗೊಂಡ ಟಾಯೆಟ್ ನಾನು ಊಟ ಮುಗಿಸಿ ಅಂಗಡಿಗೆ ಬಂದ ಮೇಲೆ ಕೋಪಗೊಂಡು ಅಮೃತಶಿಲೆಯಿಂದ ನನ್ನ ಎಡಪಾರ್ಶ್ವಕ್ಕೆ ಹೊಡೆದನು. ನಾನು ಪ್ರಜ್ಞ್ಕೆ ತಪ್ಪಿದೆ. ತಿಂಗಳುಗಟ್ಟಲೆ ಹಾಸಿಗೆ ಹಿಡಿದೆ. ನನ್ನ ಮುಖ ಮಾಂಸದ ಮುದ್ದೆಯಾಗಿ ವಿಕೃತರೂಪವನ್ನು ಪಡೆದಿತ್ತು. ಹುಡುಕಿ ಬಂದ ಯುವೋನಾಳಿಗೆ ಮುಖ ತೋರಿಸದೆ ರಾತ್ರೋರಾತ್ರಿ ಊರನ್ನು ಬಿಟ್ಟು ಬೆಟ್ಟದ ಮೇಲೆ ಬಂದೆ. ಟಾಯೆಟ್ ನನ್ನು ಹೇಗೆ ಸಾಯಿಸಬೇಕೆಂದು ಯೋಚಿಸತೊಡಗಿದೆ. 
ಒಂದು ದಿನ ಕರಾರ ನಗರಕ್ಕೆ ಹೋದಾಗ, ಎಲ್ಲರೂ ಭಿಕ್ಷುಕನೆಂದುಕೊಂಡು ಕಾಸನ್ನು ಹಾಕಿದರು. ಸ್ವಲ್ಪ ದಿನಗಳಾದ ನಂತರ, ಒಂದು ದಿನ ಟಾಯೆಟ್ ನದಿಯ ಬಳಿ ಬರುತ್ತಿದ್ದಾಗ ಕತ್ತಿಯನ್ನು ಅವನ ಕುತ್ತಿಗೆಗೆ ಬೀಸಿದೆ. ಅವನು ನನ್ನನ್ನು ಒದ್ದ. ನಾನು ನದಿಯಲ್ಲಿ ಬಿದ್ದೆ. ಯಾರೋ ರಕ್ಷಿಸಿದರು. ಜ್ಞಾನ ಬಂದಾಗ ನಾನು ಯಾರು ಎಂಬುದು ಮರೆತುಹೋಗಿತ್ತು. ಕ್ರಮೇಣ ಅಲ್ಲಿದ್ದವರ ಜೊತೆ ಸೇರಿಕೊಂಡು ಭಿಕ್ಷೆ ಬೇಡುವುದು, ಕುಡಿಯುವುದು, ಕನ್ನ ಹಾಕುವುದು ಎಲ್ಲವನ್ನೂ ಕಲಿತೆ. ಎಲ್ಲರೂ ನನ್ನನ್ನು ಗರಿಬಾಲ್ಡಿ ಎಂದು ಕೂಗಲಾರಂಭಿಸಿದರು.
"ಚಿಕ್ಕಪ್ಪ ನನ್ನ ಈ ಸ್ಥಿತಿಗೆ ನೀನೇ ಕಾರಣ. ನಾವು ಬಡವರಾಗಿದ್ದೆವು, ಆದರೆ ಸಂತೋಷವಾಗಿದ್ದೆವು. ನೀನು ಬಂದ ಹಣದ ಆಮಿಷ ತೋರಿಸಿ ಬಾಲರೂಪದರ್ಶಿಯನ್ನಾಗಿಸಿದೆ. ಅಲ್ಲಿಂದಾಚೆ ನಡೆದದ್ದೆಲ್ಲ ಅನಾಹುತಗಳೇ. ಅಜ್ಜಿ ಹಣವನ್ನು ಸಾಹುಕಾರನಿಗೆ ಕೊಡದಿದ್ದರೆ, ಆ ಸಾಹುಕಾರ ಆ ಹಣದ ಆಸೆಗೆ ನನ್ನನ್ನು ವಂಚಿಸದಿದ್ದರೆ, ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಗರಿಬಾಲ್ಡಿಯಾಗಿ ಸುಖವಾಗಿದ್ದೆ. ಮತ್ತೆ ರೂಪದರ್ಶಿ ಬೇಕೆಂದು ನೀನು  ನನ್ನನ್ನು ಕರೆದುಕೊಂಡು ಬಂದೆ. ಈಗ ನನ್ನ ನೆನಪಿನಶಕ್ತಿ ಮರಳುವಂತೆ ಮಾಡಿದ್ದೀಯ. ನಾನು ಹೇಗೆ ಬದುಕಲಿ. ಅಜ್ಜಿ ಹೇಳುತ್ತಿದ್ದಳು ನೀನು ದೇವದೂತನಾಗಿ ಬಂದೆ ಎಂದು ಆದರೆ ನೀನು ನಮ್ಮ ಪಾಲಿನ ದುರ್ದೈವವಾಗಿ ಬಂದೆ." ದುಃಖತಪ್ತನಾಗಿ ಆವೇಶದಿಂದ ಮಾತನಾಡುತ್ತಿದ್ದ ಅರ್ನೆಸ್ಟೊ ಬಗ್ಗೆ ಮೈಕೆಲನಿಗೆ ಬಹಳ ವೇದನೆಯಾಯಿತು. ಅವನನ್ನು ಹೇಗೆ ಸಮಾಧಾನಿಸಿ, ಇವನ ಜೀವನವನ್ನು ಹೇಗೆ ಸರಿಪಡಿಸಲಿ ಎಂದು ಯೋಚಿಸಿದನು. 
ಅಲ್ಲದೆ ಲೀನಾಳ ಗಂಡ ಟಾಯೆಟ್ ನಿಗೆ ಆಗಿರುವ ಊನಕ್ಕೆ ಮೈಕೆಲ್ ಗೆ ಕಾರಣ ಗೊತ್ತಾಯಿತು. ಲೀನಾಳನ್ನು ಕಾಪಾಡಬೇಕು. ಲಿಸ್ಸಾ ತಾಯಿ ಮತ್ತು ನನ್ನೆಟ್ಟಿಯವರ ದರ್ಶನ ಮಾಡುವುದರಿಂದ ಬೆತ್ಲೆಹೇಮಿಗೆ ಹೋದಷ್ಟೇ ಪುಣ್ಯ ಎಂಬೆಲ್ಲ ಯೋಚನೆಗಳು ಮೈಕೆಲನ ಮನದಲ್ಲಿ ಮೂಡಿತು. ಅಷ್ಟರಲ್ಲಿ ಸಂಜೆಯಾಗಿ ಪ್ರಾರ್ಥನಾ ಸಮಯವಾದ್ದರಿಂದ ದೇವಾಲಯದ ಎಲ್ಲ ಘಂಟೆಗಳ ನಾದವು ಪ್ರತಿಧ್ವನಿಸತೊಡಗಿತು. ಈ ನಾದವು ಅರ್ನೆಸ್ಟೊವಿನ ಮೈಯಲ್ಲಿ ನಡುಕವನ್ನುಂಟುಮಾಡಿತು. ಅರ್ನೆಸ್ಟೊಗೆ ಕಥೆ ಮುಂದುವರೆಸಲಾಗಲಿಲ್ಲ. ಅವನ ಮುಖದಲ್ಲಿ ಕೋಪ, ಅಸಹನೆ ಕ್ಷಣಕ್ಷಣಕ್ಕೂ ಏರುತ್ತಿದ್ದುದ್ದನ್ನು ಮೈಕೆಲ್ ಗಮನಿಸಿದ.
ಅರ್ನೆಸ್ಟೊವಿನ ತಲೆಯಲ್ಲಿ ರಕ್ತ ಕುದಿಯತೊಡಗಿತು. ಕಣ್ಣು ಕೆಂಪಾಗಿ, ಚಕ್ರದಂತೆ ತಿರುಗಲಾರಂಭಿಸಿತು. ಅರ್ನೆಸ್ಟೊ ಪುನಃ ಗರಿಬಾಲ್ಡಿಯಾದನು. "ಅಯ್ಯಯ್ಯೊ, ಅಯ್ಯಯ್ಯೊ" ಎನ್ನುತ್ತಾ ಉಗುರುಗಳಿಂದ ಮುಖ ಪರಚಿಕೊಂಡು ಕೂದಲನ್ನು ಹಿಡಿಹಿಡಿಯಾಗಿ ಕಿತ್ತುಕೊಂಡ. ಕಣ್ಣುಗುಡ್ಡೆ ಕಳಚಿಬೀಳುವಂತೆ ಕಾಣಿಸುತ್ತಿತ್ತು. ಹೀಗೆ ಗರಿಬಾಲ್ಡಿಯು ವಿಕಾರವಾಗಿ ಆದನು ಮತ್ತು ಭಯಂಕರವಾಗಿ ಗರ್ಜಿಸಿದನು. ಮೈಕೆಲ್ ಗೆ ಇವನ ಅಟ್ಟಹಾಸ ಮತ್ತು ಭಯಂಕರ ರೂಪವನ್ನು ನೋಡಿ ನಡುಕ ಉಂಟಾಯಿತು. ಗರಿಬಾಲ್ಡಿಯು ತನ್ನ ನಾಲಿಗೆಯನ್ನು ಕಚ್ಚಿಕೊಂಡಿದ್ದರಿಂದ, ನಾಲಿಗೆ ಜೋತುಬಿದ್ದು ರಕ್ತ ಸೋರತೊಡಗಿತು. ಗರಿಬಾಲ್ಡಿಯು ಅಲ್ಲೇ ಇದ್ದ ದಪ್ಪ ಮರದ ಹಲಗೆಯಿಂದ ಮೈಕೆಲ್ ನನ್ನು ಕೊಲ್ಲಲ್ಲು ಬಂದ. ತಕ್ಷಣ ಮೈಕೆಲ್ ಪಕ್ಕಕ್ಕೆ ಸರಿದು, ನೀನು ಆರ್ನೆಸ್ಟೂ ಅಲ್ಲ, ಗರಿಬಾಲ್ಡಿಯೂ ಅಲ್ಲ, ನೀನು ಸೈತಾನ, ದೇವಾಲಯದಲ್ಲಿ ನಿನಗೆ ಪ್ರವೇಶವಿಲ್ಲ, ತೊಲಗು ಎಂದ. ಆಗ ಸೈತಾನರೂಪಿಯು ಅಟ್ಟಣೆಯನ್ನು ಪಾದದಿಂದ  ಅಪ್ಪಳಿಸಿದ, ಅದು ಮುರಿದುಬಿತ್ತು. ಜೊತೆಗೆ ಗರಿಬಾಲ್ಡಿಯು ನೆಲಕ್ಕೆ ಬಿದ್ದ. ತಲೆ ಒಡೆದು, ಮೆದುಳು ಹೊರಬಂದಿತು, ಮೈಕೆಲನು ಮೂಲೆಯ ಗೋಡೆಯನು ತಬ್ಬಿ ಹಿಡಿದಿದ್ದರಿಂದ ಉಳಿದುಕೊಂಡ. 
ಶಬ್ದ ಕೇಳಿ ದೇವಾಲಯದ ಪಾದ್ರಿಗಳು, ಪ್ರಾರ್ಥನೆಗೆ ಸೇರಿದ್ದ ಜನರೂ ಬಂದರು. ಗರಿಬಾಲ್ಡಿಯ ಶವವನ್ನು ನೋಡಿದರು. ಗರಿಬಾಲ್ಡಿ ಈಗ ಮತ್ತೆ ಅರ್ನೆಸ್ಟೊ ಆಗಿದ್ದನು. ಮುಖದಲ್ಲಿ ಕ್ರೌರ್ಯವಿರಲಿಲ್ಲ, ಶಾಂತಿಯಿತ್ತು. ಮೈಕೆಲ್ ಅಳತೊಡಗಿದನು. ತಂದೆಯೇ, ಬಹುನೊಂದ ಆತ್ಮವಿದು. ನಿನ್ನ ಬಳಿಗೆ ಬರುತ್ತಿದೆ. ಇದನ್ನು ಕರೆದುಕೊ, ನೀನೇ ಸಮಾಧಾನ ಪಡಿಸು ಎಂದು ಅತೀ ದೀನವಾಣಿಯಿಂದ ಪ್ರಾರ್ಥಿಸಿದ. ಮೈಕೆಲನು ಬಾಲಕ್ರಿಸ್ತನ ಚಿತ್ರದ ಕಡೆಗೆ ತೋರಿಸಿ, ಅವನೇ ಇವನು. ಇದರ ಕಥೆಯನ್ನು ಇನ್ನೊಂದು ದಿನ ತಿಳಿಸುತ್ತೇನೆ. ಈಗ ಕೇಳಬೇಡಿ ಎಂದ. ಅರ್ನೆಸ್ಟೊವನ್ನು ಸಮಾಧಿ ಮಾಡಲಾಯಿತು. ವೃದ್ಧ ಮೈಕೆಲ್ ದುಃಖದಲ್ಲಿಯೇ ದೇವಾಲಯದ ಉಳಿದ ಚಿತ್ರಗಳನ್ನು ಬರೆದು ಪೂರೈಸಿದ. ನಂತರ ತನ್ನ ಮಗ ಅರ್ನೆಸ್ಟೊನ ನೆನಪಿಗಾಗಿ ಅವನ ಸಮಾಧಿಯ ಮೇಲೆ ಸ್ವಚ್ಛವಾದ ಅಮೃತಶಿಲೆಯಿಂದ ಅಮೋಘವಾದ ಸ್ಮಾರಕವನ್ನು ನಿರ್ಮಿಸಿದ. ಆಗ ಅವನ ಮನಸ್ಸಿಗೆ ಶಾಂತಿಸಮಾಧಾನ ದೊರೆತವು.

ರೂಪದರ್ಶಿಯಾದ ಅರ್ನೆಸ್ಟೊ ಪಾತ್ರವನ್ನು ನಾವು ಗಮನಿಸಿದಾಗ ಪರಿಸ್ಥಿತಿ ಮತ್ತು ಸಂದರ್ಭಗಳು ಮನುಷ್ಯನನ್ನು ಉನ್ನತ ಸ್ಥಿತಿಗೆ ಕರೆದೊಯ್ಯಬಲ್ಲದು, ಹಾಗೆಯೇ ಅಧೋಗತಿಗೂ ನೂಕಬಲ್ಲದು ಎಂಬುದು ತಿಳಿಯುತ್ತದೆ. ಮನುಷ್ಯ ಪರಿಸ್ಥಿತಿಗೆ ಗೊಂಬೆಯಾಗಿ ಸಿಲುಕಿದರೆ, ವಿವೇಕವನ್ನು ಬಳಸದಿದ್ದರೆ, ಸೇಡಿನ ಕಿಚ್ಚನ್ನು ಮನದಲ್ಲಿಟ್ಟುಕೊಂಡರೆ ಅವನ ಬಾಳು ಏನಾಗಬಹುದೆಂಬುದನ್ನು ಅಯ್ಯರ್ ರವರು ಬಹಳ ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಅರ್ನೆಸ್ಟೊ ಎಷ್ಟು ಸುಂದರವಾಗಿದ್ದನೋ, ಅವನ ಗುಣವೂ ಅಷ್ಟೇ ಒಳ್ಳೆಯದಾಗಿತ್ತು. ಸಹೃದಯತೆಯನ್ನು ಹೊಂದಿದ್ದ ಅರ್ನೆಸ್ಟೊ ಸಂದರ್ಭಕ್ಕೆ ಸಿಲುಕಿ ಗರಿಬಾಲ್ಡಿಯಾದನು. ಒಂದು ಕಡೆ ಅವನು ಹೇಳುವ ಮಾತು ಎಂತಹವರನ್ನೂ ದುಃಖಕ್ಕೀಡು ಮಾಡುತ್ತದೆ. "ನನ್ನಲ್ಲಿರುವ ಆತ್ಮವು ಸತ್ತು ನಾಶವಾಗಿದೆ, ಈಗ ದೇಹ ಮಾತ್ರ ಇರುವುದು. ಅದರಲ್ಲಿ ಸೈತಾನನಿದ್ದಾನೆ. ನನ್ನ ಮನಸ್ಸು ಮತ್ತು ಶರೀರ ಅಸಹ್ಯಗೊಂಡಿದೆ. ನಾನು ಈ ರೀತಿ ಬದುಕಲಾರೆ" ಎಂದು ಗೋಳಾಡುವಾಗ ಅರ್ನೆಸ್ಟೊವಿನ ವ್ಯಕ್ತಿತ್ವವು ನಮ್ಮ ಕಣ್ಣು ಮುಂದೆ ಬಂದು ನಿಲ್ಲುತ್ತದೆ. ಅಯ್ಯರ್ ರವರ ಇಡೀ ಕಾದಂಬರಿಯ ರಚನೆ ತುಂಬಾ ಸೊಗಸಾಗಿದ್ದು ಓದಿಸಿಕೊಂಡು ಹೋಗುತ್ತದೆ, ನಮ್ಮನ್ನು ನೋವಿಗೀಡುಮಾಡುತ್ತದೆ, ಬೇಸರ ತರಿಸುತ್ತದೆ, ಕಣ್ಣು ತುಂಬಿ ಬರುತ್ತದೆ, ಆದರೆ ನಮ್ಮನ್ನು ಚಿಂತನೆಗೆ ಒಳಪಡಿಸುತ್ತದೆ.
-        ಗೀತಾ  ವಿ            


ಪ್ರಸ್ತುತ - ಆಟೋರಿಕ್ಷ, ಖಡಕ್ ಚಹಾ ಮತ್ತು 5 ರೂಪಾಯಿ.... ಇದು ಕಲಬುರ್ಗಿ lifestyle !!


ರಾಜ್ಯವಷ್ಟೇ ಯಾಕೆ, ಇಡೀ ದೇಶ ಸುತ್ತಾಡಿ ಬನ್ನಿ. ಮನಸೋ ಇಚ್ಛೆ ಕಂಡಿದ್ದಕ್ಕೆಲ್ಲ ಖರ್ಚು ಮಾಡಿ. ಆದರೆ 5 ರೂಪಾಯಿ ಮೌಲ್ಯ ತಿಳಿಯಬೇಕಿದ್ದರೆ, ಕಲಬುರ್ಗಿ ಸುತ್ತಮುತ್ತ ರೌಂಡ್ ಹಾಕಿ. ದೇಶದ ಇತರ ಪ್ರದೇಶಗಳಿಗೆ ಹೋಲಿಸಿದರೆ, ಈ ಭಾಗದ ಜನರಿಗೆ 5 ರೂಪಾಯಿ ಜೊತೆಗಿನ ನಂಟು ತುಸು ಜಾಸ್ತಿಯೇ ಇದೆ. ಇಲ್ಲಿನ ಸಮೀಪದ ಕೆಲ ಸ್ಥಳಗಳಿಗೆ ನಿರಾತಂಕವಾಗಿ ಆಟೋದಲ್ಲಿ ಹೋಗಬೇಕಿದ್ದರೆ ಅಥವಾ ಖಡಕ್ ಚಹಾ ಕುಡಿದು refresh  ಆಗಬೇಕಿದ್ದರೆ, 5 ರೂಪಾಯಿ ಸಾಕು. 
ಹಾಗಂಥ ಅವು ಅಂತಿಂಥ ಆಟೋಗಳು ಅಲ್ಲ. ಆಟೋ ಚಾಲಕರ ಪಕ್ಕದಲ್ಲೇ ಕೂರಬಹುದು. ಚಾಲಕರಿಗೆ ಇನ್ನಷ್ಟು ದುಡಿಯುವ ಮನಸ್ಸು ಮತ್ತು ಪ್ರಯಾಣಿಕರ ಮೇಲೆ ಪ್ರೀತಿಯಿದ್ದಲ್ಲಿ, ತಮ್ಮ ಅಕ್ಕಪಕ್ಕ ಕೂರಿಸಿಕೊಳ್ಳುತ್ತಾರೆ. ಅಂದ್ರೆ, ಒಂದು ಸೀಟು, ಮೂರು ಸವಾರಿ!
ಕೊಂಚ ಅವಸರ, ದಾಢಸಿ ಅಥವಾ ಸಾಹಸಿ ಜನರಿದ್ದರೆ, ಇನ್ನೂ ಒಂದು ಹೆಜ್ಜೆ ಮುಂದೆ. ಅವರು ಚಾಲಕರ ಸೀಟಿನ ಎರಡೂ ಬದಿಯಲ್ಲಿರುವ ಪುಟಾಣಿ ಕಬ್ಬಿಣದ ಕಟ್ಟೆ ಮೇಲೆ ಕೂರುತ್ತಾರೆ. ಇದರರ್ಥ ಚಾಲಕರ ಪುಟ್ಟ ಕ್ಯಾಬಿನ್ ನಲ್ಲಿ ಐದು ಮಂದಿ ಪಯಣ. ಕಾಲೇಜ್ ಹುಡುಗರಿಗಂತೂ ಹುಡುಗಿಯರಿಗೆ impress ಮಾಡಲು ಹೀರೋಯಿಸಂ. ಮಧ್ಯವಯಸ್ಕರಾದರೆ, ಸುರಕ್ಷಿತವಾಗಿ ತಲುಪಿದರೆ ಸಾಕು ಎಂಬ ಗಾಂಭೀರ್ಯ.
ಇನ್ನೂ ಆಸಕ್ತಿಮಯ ವಿಷಯವೆಂದರೆ, ಕೆಲ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿಯೂ ಇದೆ. ಅವರು ಕೆಲವೊಮ್ಮೆ 3 ಅಥವಾ 4 ರೂಪಾಯಿ ಕೊಟ್ಟು ಹೊರಟು ಬಿಡುತ್ತಾರೆ. ಇಷ್ಟಕ್ಕೆಲ್ಲ, ಯಾಕೆ ರಗಳೆ ಮಾಡೋದು ಅಂತ ಅವರ ಬಗ್ಗೆ ಒಂಚೂರು ಕೆಟ್ಟದ್ದು ಸಹ ಮಾತನಾಡದೇ ಹೊಸ ಪ್ರಯಾಣಿಕರನ್ನು ಹುಡುಕುತ್ತ ಚಾಲಕರು ಹೊರಡುತ್ತಾರೆ. 'ಜಿಂದಗಿ ಯಹಿ ಖತಂ ನಹೀ ಹೋತಿ, ಸಫರ್ ಮೇ ಔರ್ ಭಿ ಲೋಗ್ ಮಿಲೇಂಗೆ' ಎಂಬ ಆಶಾಭಾವ ಅವರದ್ದು. (ಜೀವನ ಇಲ್ಲಿಗೇ ನಿಲ್ಲುವುದಿಲ್ಲ, ದಾರಿಯಲ್ಲಿ ಇನ್ನೂ ಜನ ಸಿಗುತ್ತಾರೆ)
ಹೋಟೆಲ್ ಹೊರತುಪಡಿಸಿ ಇಲ್ಲಿ ಯಾವುದೆ ಮೂಲೆಯಲ್ಲಿ ಕೂತು ಅಥವಾ ನಿಂತು ಚಹಾ ಕುಡಿದರೆ, ಖರ್ಚಾಗೋದು 5 ರೂಪಾಯಿ ಮಾತ್ರ. ಅದಕ್ಕೆಂದೇ ಇಲ್ಲಿ ಣeಚಿ ಠಿoiಟಿಣ ಗಳಿವೆ. (ಟೀ ಮಾರುವ ಸ್ಥಳಗಳು) ಗಾಣಗಾಪುರ, ಕಲ್ಯಾಣ ಕರ್ನಾಟಕ ಮತ್ತು ಬೇರೆ ಬೇರೆ ಹೆಸರಿನ ಈ ಟೀ ಪಾಯಂಟ್ಗಳಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ 10.30ರವರೆಗೆ ಚಹಾ ಸಿಗುತ್ತದೆ. ರೈಲು ನಿಲ್ದಾಣ ಬದಿಯಿದ್ದರಂತೂ 24 ಗಂಟೆ ಚಹಾ ಕುಡಿಯಬಹುದು. ತಿಂಡಿಯೂ ತಿನ್ನಬಹುದು. the railway station never ಸ್ಲೀಪ್ಸ್ here (ಇಲ್ಲಿ ರೈಲುನಿಲ್ದಾಣ ಮಲಗುವುದೇ ಇಲ್ಲ) ಅಲ್ಲಲ್ಲಿ 10 ರಿಂದ 15 ರೂಪಾಯಿಯೊಳಗೆ ತಿಂಡಿ ಸಿಗುತ್ತದೆ. ಜೇಬಿನಲ್ಲಿ ಒಂದಿಷ್ಟು 10 ರೂಪಾಯಿ ನೋಟು, 5 ರೂಪಾಯಿ ನಾಣ್ಯವಿದ್ದರೆ ಸಾಕು. ತಿಂಡಿ ತಿಂದು, ಚಹಾ ಕುಡಿದು, ಬಯಸಿದ ಸ್ಥಳದತ್ತ ಆಟೋದಲ್ಲೂ ಪ್ರಯಾಣಿಸಬಹುದು.
ಇದು ಕಲಬುರ್ಗಿ ದೇಶಿ ಲೈಫ್ ಸ್ಟೈಲಿನ ಪುಟ್ಟ ಪರಿಚಯ. ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಇನ್ನಷ್ಟು ಸಂಗತಿಗಳನ್ನು ಹೆಕ್ಕಿ ಅರಿಯಬೇಕಿದೆ. ಇಲ್ಲಿಯದ್ದೇ ಭಾಷೆಯಲ್ಲಿ ಹೇಳಬೇಕೆಂದರೆ, 'ಗುಲಬರ್ಗಾ ಮೇ ಹಮಾರೆ ಸಂಗ್ ಜರಾ ಜೀ ಕೆ ತೋ ದೇಖೋ'... (ಗುಲ್ಬರ್ಗಾದಲ್ಲಿ ನಮ್ಮ ಜೊತೆ ಸ್ವಲ್ಪ ಬದುಕಿ ನೋಡಿ)
                                                                              -    ವಿಸ್ಮಯ್

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ - 2

(ಕಳೆದ ಸಂಚಿಕೆಯಿಂದ ಮುಂದುವರೆದಿದೆ)


  ಸುಖದೇವ್‍ರೊಂದಿಗೆ ಸ್ನೇಹ 
ಅದೇ ಸಮಯದಲ್ಲಿ ಭಗತ್ ಸಹಪಾಠಿ ಸುಖದೇವ್‍ರನ್ನು ಭೇಟಿಯಾದರು. ಭೇಟಿಯಾದ ಮೊದಲ ದಿನದಿಂದಲೇ ಬೆಳೆದ ಸ್ನೇಹ ಗಾಢವಾಗುತ್ತಾ ಹೋಯಿತು. ಕೊನೆಗೆ ಇಬ್ಬರೂ ಒಂದೇ ದಿನ ದೇಶಕ್ಕಾಗಿ ಹುತಾತ್ಮರಾದರು. ಭಗತ್‍ಸಿಂಗ್ ಸುಖದೇವ್ ಇಬ್ಬರೂ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ, ಕ್ರಾಂತಿಕಾರಿ ಸ್ಫೂರ್ತಿ ದೇಶದಲ್ಲಿ ಇಲ್ಲದ ಬಗ್ಗೆ ಚರ್ಚಿಸುತ್ತಿದ್ದರು. ದ್ವಾರಕಾದಾಸ್ ಗ್ರಂಥಾಲಯದಿಂದ ಇಟಲಿ, ರಷ್ಯಾ, ಐರ್ಲೆಂಡ್, ಚೀನಾ ಮುಂತಾದ ದೇಶಗಳ ಕ್ರಾಂತಿಕಾರಿ ಚಳುವಳಿಗಳ ಬಗ್ಗೆ ಪುಸ್ತಕಗಳನ್ನು ತಂದು ಓದುತ್ತಿದ್ದರು ಮತ್ತು ಆ ಬಗ್ಗೆ ಚರ್ಚಿಸುತ್ತಿದ್ದರು. ಸಂಗೀತ, ಕಲೆ ಮುಂತಾದವುಗಳ ಬಗ್ಗೆಯೂ ಆಸಕ್ತಿ ವಹಿಸಿದ್ದರು. ಹೀಗೆಯೇ ಅವರ ಸ್ನೇಹ ಬಲವಾಯಿತು. ಭಗತ್‍ರ ಹಸನ್ಮುಖ ಸ್ವಭಾವ ಮತ್ತು ಹಾಸ್ಯಪ್ರಜ್ಞೆ ಸುಖದೇವ್‍ರಿಗೆ ಮಾತ್ರವಲ್ಲದೆ ಅವರೆಲ್ಲ ಸ್ನೇಹಿತರಿಗೂ ಅಚ್ಚುಮೆಚ್ಚಿನದಾಗಿತ್ತು.

ಜಲಿಯನ್‍ವಾಲಾಬಾಗ್ ನರಮೇಧ
1919ರಲ್ಲಿ ದೇಶದಾದ್ಯಂತ ರೌಲತ್ ಕಾಯಿದೆಯನ್ನು ವಿರೋಧಿಸಿ ಚಳುವಳಿ ನಡೆಯುತ್ತಿತ್ತು. ಏಪ್ರಿಲ್ 13ರಂದು ಪಂಜಾಬಿನ ಅಮೃತಸರದ ಜಲಿಯನ್‍ವಾಲಾಬಾಗಿನಲ್ಲಿ ಸಹಸ್ರಾರು ಹಿಂದೂ, ಮುಸ್ಲಿಂ, ಸಿಖ್ಖರು, ಸ್ತ್ರೀಪುರುಷರೆನ್ನದೆ, ಆಬಾಲವೃದ್ಧರಾಗಿ ಅಲ್ಲಿ ಸಭೆ ಸೇರಿದ್ದರು. ಭಾಷಣ ಆರಂಭವಾಗುತ್ತಿದ್ದ ಸ್ವಲ್ಪ ಹೊತ್ತಿಗೆ ಅಲ್ಲಿಗೆ ಆಗಮಿಸಿದ್ದ ಜನರಲ್ ಡಯರ್ ಇದ್ದಕ್ಕಿದ್ದಂತೆ ಜನರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ. ಆ ಜಾಗ ಚೌಕಾಕಾರವಾಗಿದ್ದು, ನಾಲ್ಕೂ ಕಡೆಗಳಲ್ಲಿ ಎತ್ತರವಾದ ಗೋಡೆಗಳಿದ್ದವು. ಕೇವಲ ಒಂದೇ ಒಂದು ಗೇಟ್ ಇತ್ತು. ಗೇಟಿನಲ್ಲಿ ಡಯರ್ ತನ್ನ ಟ್ಯಾಂಕ್ ನಿಲ್ಲಿಸಿದ್ದ. ಅವನಲ್ಲಿದ್ದ ಗುಂಡುಗಳು ಮುಗಿಯುವವರೆಗೂ ಗುಂಡಿನ ಮಳೆಗೆರೆದ. ನೂರಾರು ಜನ ಮೃತಪಟ್ಟರು ಮತ್ತು ಸಾವಿರಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡರು. 


ಈ ಘಟನೆಯಿಂದ ಇಡೀ ದೇಶ ದಿಗ್ಭ್ರಮೆಗೊಳಗಾಯಿತು. ಬ್ರಿಟಿಷ್ ಸರ್ಕಾರ ಅವನ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಪಂಜಾಬಿನಲ್ಲಿ ತೀವ್ರವಾದ ದಮನಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಟ್ಟಿತು. ಸೇನಾ ಆಡಳಿತದ ಹಿಡಿತಕ್ಕೆ ಬಂದ ಪಂಜಾಬ್ ಅತ್ಯಂತ ಹೇಯ ಅಪಮಾನಕ್ಕೆ ಒಳಗಾಯಿತು. ವಿದ್ಯಾರ್ಥಿಗಳು, ಶಿಕ್ಷಕರು 16 ಮೈಲಿ ದೂರ ನಡೆದುಕೊಂಡು ಹಾಜರಾತಿ ಒಪ್ಪಿಸಿ ಬರಬೇಕಿತ್ತು. ಕೆಲವೆಡೆಗಳಲ್ಲಿ ನಡೆಯುವ ಹಾಗಿರಲಿಲ್ಲ, ತೆವಳಿಕೊಂಡು ಹೋಗಬೇಕಿತ್ತು. ಜನರನ್ನು ಪಂಜರಗಳಲ್ಲಿ ಬಂಧಿಸಿ ಬೀದಿ ಬೀದಿಗಳಲ್ಲಿ ಪ್ರದರ್ಶನಕ್ಕಿಡಲಾಯಿತು. ಸಾವಿರಾರು ಜನರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ಹಂಟರ್ ಆಯೋಗ ಡಯರ್ ತಪ್ಪಿತಸ್ಥನಲ್ಲವೆಂದು ಘೋಷಿಸಿತು, ಬ್ರಿಟನ್ನಿನಲ್ಲಿ ಈ ‘ನರಹಂತಕ’ನಿಗೆ ಸನ್ಮಾನ ಮಾಡಿ ಹಣ ನೀಡಲಾಯಿತು. ಆದರೆ ಅವನದೇ ತಾಯ್ನಾಡಿನಲ್ಲಿ ತನ್ನ ತಪ್ಪಿಗೆ ಭಾರತ ರಾಷ್ಟ್ರಪ್ರೇಮಿ ಯುವಕ ಉಧಮ್ ಸಿಂಗ್‍ನಿಂದ ಶಿಕ್ಷೆಗೆ ಒಳಗಾಗಿ ಸತ್ತದ್ದು ಇತಿಹಾಸ. 

ಅಸಹಕಾರ ಚಳುವಳಿ
1920ರ ನವೆಂಬರ್‍ನಲ್ಲಿ ಕಾಂಗ್ರೆಸ್‍ನ ನಾಯಕತ್ವ ವಹಿಸಿದ್ದ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆ ನೀಡಿದರು. ಭಾರತದ ವಿವಿಧ ಭಾಗಗಳ ಕ್ರಾಂತಿಕಾರಿ ಗುಂಪುಗಳು ಈ ಹೋರಾಟದಲ್ಲಿ ಭಾಗಿಯಾಗಲು ತೀರ್ಮಾನಿಸಿದವು. ಇಡೀ ದೇಶ ಒಂದಾಗಿ ಬ್ರಿಟಿಷರ ಮೇಲೆ ಒತ್ತಡ ಹೇರಿದರೆ ಸ್ವಾತಂತ್ರ್ಯ ಸಿಗಬಹುದೆಂಬ ಮಹಾನ್ ಆಕಾಂಕ್ಷೆಯಿಂದ ತಮ್ಮ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಅಸಹಕಾರ ಚಳುವಳಿಗೆ ಧುಮುಕಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು, ಲಾಯರ್‍ಗಳು ತಮ್ಮ ವೃತ್ತಿಯನ್ನು, ಸರ್ಕಾರಿ ನೌಕರರು ತಮ್ಮ ನೌಕರಿಗಳನ್ನು ಬಿಟ್ಟರು. ದೇಶದಾದ್ಯಂತ ಜನತೆ ಚಳುವಳಿಯಲ್ಲಿ ಭಾಗವಹಿಸಿತು. ಬಾಲಕ ಭಗತ್ ಸಿಂಗ್ ಸಹ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಚಳುವಳಿಯಲ್ಲಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಬೆಂಕಿಗೆ ಹಾಕಲಾಯಿತು. 30,000ಕ್ಕೂ ಅಧಿಕ ಜನರನ್ನು ಬಂಧಿಸಲಾಯಿತು. ಜನತೆ ಬ್ರಿಟಿಷರಿಂದ ಲಾಠಿ ಏಟು, ಬೂಟಿನ ಏಟುಗಳನ್ನು ತಿಂದರು. ಆದರೆ ಜನತೆ ಹೋರಾಟದಿಂದ ಹಿಂದಕ್ಕೆ ಜಗ್ಗಲಿಲ್ಲ. ಬ್ರಿಟಿಷರ ವಿರುದ್ಧ ಭಾರತೀಯರು ಸಾರಿದ ಅತ್ಯಂತ ದೊಡ್ಡ ಅಹಿಂಸಾತ್ಮಕ ಹೋರಾಟವದು. 

                                         ಚೌರಿಚೌರ ಘಟನೆ


1921ರ ಫೆಬ್ರವರಿ 12ರಂದು ಉತ್ತರ ಪ್ರದೇಶದ ಚೌರಿಚೌರಾ ಎಂಬಲ್ಲಿ ಪ್ರತಿಭಟನಾಕಾರರು ಶಾಂತರೀತಿಯಲ್ಲಿ ಮೆರವಣಿಗೆ ಮಾಡುತ್ತಿದ್ದರು. ಪ್ರತಿಭಟನಾ ಮೆರವಣಿಗೆ ಸ್ಥಳೀಯ ಪೊಲೀಸ್ ಠಾಣೆಯ ಮುಂದೆ ಸಾಗುತ್ತಿದ್ದಾಗ, ಪೊಲೀಸರು ಇವರನ್ನು ಅಪಹಾಸ್ಯ ಮಾಡಿದರು. ಆದರೂ ಜನತೆ ಶಾಂತವಾಗಿ ಮುನ್ನಡೆಯುತ್ತಿದ್ದರು. ಪೊಲೀಸರು ಮೆರವಣಿಗೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಆದರೆ ಪ್ರತಿಭಟನಾಕಾರರು ದೃಢವಾಗಿ, ಶಾಂತರಾಗಿ ಚದುರದೆ ಅಲ್ಲಿಯೇ ನಿಂತರು. ಪೊಲೀಸರು ತಮ್ಮಲ್ಲಿ ಮದ್ದುಗುಂಡುಗಳು ಖಾಲಿಯಾಗುವವರೆಗೂ ಜನರ ಮೇಲೆ ಗುಂಡು ಹಾರಿಸಿದರು. ಮೂವರು ಸ್ಥಳದಲ್ಲಿಯೇ ಸತ್ತರು ಮತ್ತು ಬಹಳಷ್ಟು ಜನ ತೀವ್ರವಾಗಿ ಗಾಯಗೊಂಡರು ಇದರಿಂದ ಉದ್ವಿಗ್ನತೆಗೆ ಒಳಗಾದ ಜನ ಪೊಲೀಸ್ ಠಾಣೆಗೆ ಬೆಂಕಿ ಇಟ್ಟರು ಮತ್ತು 21 ಪೊಲೀಸರು ಸತ್ತು ಹೋದರು. 


ಈ ಘಟನೆಯಾದ ತಕ್ಷಣವೇ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡರು. ಹಿರಿಯ ನಾಯಕರಾದ ಮೋತಿಲಾಲ್ ನೆಹರು, ಚಿತ್ತರಂಜನ್ ದಾಸ್ ಮುಂತಾದ ಹಿರಿಯ ನಾಯಕರು ಎಷ್ಟೇ ಮನವಿ ಮಾಡಿಕೊಂಡರೂ ಗಾಂಧೀಜಿಯವರು ಜಗ್ಗಲಿಲ್ಲ. ಇಡೀ ದೇಶ ದಿಗ್ಭ್ರಾಂತವಾಯಿತು. ತಮ್ಮ ಚಟುವಟಿಕೆಗಳನ್ನು ಪಕ್ಕಕ್ಕಿಟ್ಟು ಈ ಹೋರಾಟದಲ್ಲಿ ತೊಡಗಿದ್ದ ಕ್ರಾಂತಿಕಾರಿಗಳು ಆಘಾತಕ್ಕೊಳಗಾದರು. ಚೌರಿಚೌರಾ ಘಟನೆಗೆ ಸಂಬಂಧಿಸಿದಂತೆ 276 ಜನರನ್ನು ಬಂಧಿಸಲಾಯಿತು. 19 ಜನರನ್ನು ಗಲ್ಲಿಗೇರಿಸಲಾಯಿತು ಮತ್ತು ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇದರ ಬಗ್ಗೆ ಗಾಂಧೀಜಿಯವರು ಚಕಾರವೆತ್ತಲಿಲ್ಲ. ಬ್ರಿಟಿಷರನ್ನು ಖಂಡಿಸಲಿಲ್ಲ. 

ಮೋತಿಲಾಲ್ ನೆಹರೂ 









                                             ಚಿತ್ತರಂಜನ್ ದಾಸ್ 

ಭಗತ್‍ಸಿಂಗ್‍ರ ಮೇಲಿನ ಪರಿಣಾಮ
ಇದರಿಂದ ಭಗತ್‍ಸಿಂಗ್ ಗಾಂಧೀಜಿ ಮತ್ತು ಕಾಂಗ್ರೆಸ್ ಬಗ್ಗೆ ತೀವ್ರ ಅಸಮಾಧಾನಗೊಂಡರು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಭಗತ್‍ರು ಆ 14ರ ಎಳೆಯ ವಯಸ್ಸಿನಲ್ಲಿಯೇ ತೀರ್ಮಾನಿಸಿದರು. ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಸಾಮಾನ್ಯ ಜನರನ್ನೂ ತೊಡಗಿಸಿದರು ಎಂಬ ಕಾರಣಕ್ಕಾಗಿ ಭಗತ್‍ಸಿಂಗ್ ಅವರನ್ನು ಗೌರವಿಸಿದರೂ ಅವರ ಮಾರ್ಗವನ್ನು ತಿರಸ್ಕರಿಸಿದರು. ಬಿಳಿಯರು ನಿಶ್ಯಸ್ತ್ರರಾದ ಭಾರತೀಯರ ಮೇಲೆ ಆಕ್ರಮಣ ಮಾಡುವುದು, ಅವರ ಮೇಲೆ ಲಾಠಿಚಾರ್ಜ್, ಗೋಲಿಬಾರ್ ಮಾಡುವುದು, ಅಮಾನವೀಯವಾಗಿ ಹೊಡೆಯುವುದು, ಅದರ ಬದಲಿಗೆ ಭಾರತೀಯರು ಮೂಕರಾಗಿ ಪ್ರದರ್ಶನ ಮಾಡುವುದು, ಕೇವಲ ಘೋಷಣೆಗಳನ್ನು ಕೂಗುವುದು ಅವರಿಗೆ ಸರಿಕಾಣಲಿಲ್ಲ. 

ತಿಲಕ್‍ರವರ “ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ. ಭಿಕ್ಷೆ ಮನವಿಗಳಿಂದ ಸ್ವಾತಂತ್ರ್ಯ ಸಿಗುವುದಿಲ್ಲ, ಅದನ್ನು ಬಲವಂತವಾಗಿ ಪಡೆಯಬೇಕು,” ಎಂಬ ಸಿದ್ಧಾಂತವೇ ಸರಿ ಎಂಬ ತೀರ್ಮಾನಕ್ಕೆ ಬಂದರು. ಬ್ರಿಟಿಷರು ತಲ್ಲಣಗೊಂಡು ಮಂಡಿಯೂರಿ ನಿಲ್ಲಬೇಕಾದ ಪರಿಸ್ಥಿತಿಯಲ್ಲಿದ್ದಾಗ ಗಾಂಧೀಜಿಯವರು ಹೋರಾಟವನ್ನು ಹಿಂತೆಗೆದುಕೊಂಡು ಜನತೆಯ ಹೋರಾಟದ ಸ್ಪೂರ್ತಿಗೆ ತಣ್ಣೀರೆರೆಚಿದ್ದು ಭಗತ್‍ಸಿಂಗ್‍ರಿಗೆ ಸರಿಕಾಣಲಿಲ್ಲ. ಅವರ ಪ್ರಕಾರ, ‘ಶಕ್ತಿಯನ್ನು ಆಕ್ರಮಣಕಾರಿಯಾಗಿ ಬಳಸಿದರೆ ಅದು ಹಿಂಸೆ, ಆದರೆ ನ್ಯಾಯಯುತವಾದ ಕಾರಣಕ್ಕಾಗಿ ಅಂದರೆ ಒಂದು ದೇಶ ಸ್ವಾತಂತ್ರ್ಯ ಪಡೆಯಲು ತನ್ನ ಆಕ್ರಮಣಕಾರರ ಮೇಲೆ ಶಕ್ತಿ ಬಳಸಿದರೆ ಅದು ನೈತಿಕವಾಗಿ ಸರಿಯಾದದ್ದು!’

ವಿವಾಹವಾಗಲು ಕಾಲವಲ್ಲ
ಈ ಮಧ್ಯೆಯೇ ಮನೆಯಲ್ಲಿ ಅವರಿಗೆ ವಿವಾಹ ಮಾಡಲು ತಯಾರಿ ನಡೆಸಲಾಯಿತು. ಅಜ್ಜಿಯ ಒತ್ತಡ ಹೆಚ್ಚಾಯಿತು. ಭಗತ್ ನೇರವಾಗಿಯೇ  ವಿವಾಹವಾಗಲು ನಿರಾಕರಿಸಿದರು. “ಇದು ಮದುವೆಗೆ ಸಮಯವಲ್ಲ, ನನ್ನ ಸರ್ವಸ್ವವನ್ನೂ ದೇಶಕ್ಕೇ ಅರ್ಪಿಸಬೇಕೆಂದು ತೀರ್ಮಾನಿಸಿದ್ದೇನೆ. ನೀನೂ, ಚಿಕ್ಕಪ್ಪಂದಿರು ಇದಕ್ಕಾಗಿಯೇ ಹೋರಾಡಿದ್ದೀರಿ. ನಾನೂ ನಿಮ್ಮ ದಾರಿಯನ್ನೇ ಅನುಸರಿಸುತ್ತೇನೆ,” ಎಂದು ತಂದೆಗೆ ಎಷ್ಟು ಹೇಳಿದರೂ, ತಂದೆಯಾಗಲಿ, ಮನೆಯ ಇತರರಾಗಲಿ  ಕೇಳಲಿಲ್ಲ. ತಮ್ಮ ಚಿಕ್ಕಮ್ಮನ ನೋವನ್ನು ಕಂಡಿದ್ದ ಭಗತ್‍ಸಿಂಗ್ ಬಹುಶಃ ಇನ್ನೊಬ್ಬ ಹೆಣ್ಣು ಮಗಳ ಕಣ್ಣೀರನ್ನು ನೋಡಲು ಸಿದ್ದರಿರಲಿಲ್ಲವೇನೊ! ಒತ್ತಾಯ ತೀವ್ರವಾದಾಗ ಭಗತ್‍ಸಿಂಗ್ ಮನೆಯಿಂದ ಯಾರಿಗೂ ಹೇಳದೆ ಹೊರನಡೆದು ಕಾನ್ಪುರ ಸೇರಿದರು. ಅವರು ಮನೆಯಿಂದ ಹೊರ ಬಂದ ಮೇಲೆ ಅವರನ್ನು ಹುಡುಕಾಡಲು ಮನೆಯವರು ಪ್ರಯತ್ನಿಸಿದರು. ಭಗತ್‍ಸಿಂಗ್‍ರವರು ಅವರಿಗೆ ಒಂದು ಪತ್ರ ಬರೆದರು, “ಅಪ್ಪಾ, ನೀವು ಕೇವಲ ಅಜ್ಜಿಯ ಭಾವನೆಗಳಿಗೆ ಗಮನವೀಯುತ್ತಿರುವಿರಿ. ಆದರೆ 33 ಕೋಟಿ ಜನತೆಯ ತಾಯಿಯಾದ ಭಾರತಮಾತೆ ಎಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾಳೆ ಎಂಬುದನ್ನು ಸ್ವಲ್ಪ ಆಲೋಚಿಸಿ. ಅವಳ ತೊಂದರೆಗಳನ್ನು ನಿವಾರಿಸಲು ನಾವು ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ. ನಿಮಗೆ ನೆನಪಿರಬಹುದು, ಅಜ್ಜಾ ನನ್ನನ್ನು ದೇಶಸೇವೆಗೆಂದೇ ಮೀಸಲಾಗಿಟ್ಟರು. ಆ ಪ್ರತಿಜ್ಞೆಯನ್ನೇ ನಾನೀಗ ಪೂರೈಸುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ.” ಇದು ನಡೆದದ್ದು 1923ರಲ್ಲಿ. ಭಗತ್‍ಸಿಂಗ್‍ರಿಗೆ ಆಗ ಕೇವಲ 16 ವರ್ಷಗಳು. ಮದುವೆಯ ಪ್ರಯತ್ನ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ ನಂತರವೇ ಅಂದರೆ 1925ರಲ್ಲಿ ಭಗತ್ ತಮ್ಮ ಕುಟುಂಬದವರನ್ನು ಭೇಟಿಯಾದದ್ದು. 

ಪತ್ರಕರ್ತರಾಗಿ ಭಗತ್
ಕಾನ್ಪುರದಲ್ಲಿ “ಪ್ರತಾಪ್” ಪತ್ರಿಕೆ ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರಾದ ಗಣೇಶ್ ಶಂಕರ್ ವಿದ್ಯಾರ್ಥಿಯವರನ್ನು ಭೇಟಿ ಮಾಡಿದರು. “ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಧುಮುಕುವುದೆಂದರೆ ಜೀವದ ಮೇಲೆ ಆಸೆ ತೊರೆದಂತೆ,” ವಿದ್ಯಾರ್ಥಿಯವರು ಹೇಳಿದರು. “ದೇಶಕ್ಕಾಗಿ ಮಾಡಲು ಇಲ್ಲವೇ ಮಡಿಯಲು ಕಂಕಣಬದ್ಧನಾಗಿಯೇ ಇಲ್ಲಿಗೆ ಬಂದಿದ್ದೇನೆ,” ಉತ್ತರಿಸಿದರು ಭಗತ್. “ಸ್ವಾತಂತ್ರ್ಯಯೋಧ ಯಾವುದೇ ಆಮಿಷಕ್ಕೆ ಸಿಲುಕಬಾರದು,” ಎಚ್ಚರಿಸಿದರು. “ಖಂಡಿತವಾಗಿಯೂ ಇಲ್ಲ. ಯೋಧನಾಗಿ ನಿಮ್ಮ ಮಾರ್ಗದರ್ಶನದಲ್ಲಿ ನಡೆಯಲು ಇಚ್ಛಿಸುತ್ತೇನೆ,” ಅವರ ಪಾದ ಮುಟ್ಟಿ ಪ್ರಮಾಣ ಮಾಡಿದರು ಭಗತ್. ಈ ಯುವಕನ ಛಲವನ್ನು ಕಂಡ ವಿದ್ಯಾರ್ಥಿಯವರು ತಮ್ಮ ಪತ್ರಿಕೆಯಲ್ಲಿಯೇ ಪತ್ರಕರ್ತನಾಗಿ ಕೆಲಸ ಕೊಟ್ಟರು. ಅಲ್ಲಿಯೇ ಅವರು ಬಟುಕೇಶ್ವರ್ ದತ್‍ರನ್ನು ಭೇಟಿ ಮಾಡಿದ್ದು. 



‘ಪ್ರತಾಪ್’ ಪತ್ರಿಕೆಯ ವರದಿಗಾರನಾಗಿ ಭಗತ್ ಮೊದಲು ವರದಿ ಮಾಡಿದ್ದು ದೆಹಲಿಯಲ್ಲಿ ನಡೆದ ಹಿಂದೂ-ಮುಸ್ಲಿಂ ಕೋಮು ಗಲಭೆಯ ಬಗ್ಗೆ. ಅಲ್ಲಿನ ಪರಿಸ್ಥಿತಿ ನೋಡಿ ಅವರು ತಲ್ಲಣಗೊಂಡರು. ಅನಾದಿ ಕಾಲದಿಂದಲೂ ಒಟ್ಟಿಗೆ ಬದುಕುತ್ತಿದ್ದ ಜನತೆ ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಿದ್ದುದನ್ನು ಕಂಡು ಚಿಂತಾಕ್ರಾಂತರಾದರು. ಬಹುಶಃ ಈ ಘಟನೆ ಅವರಲ್ಲಿ ಈಗಾಗಲೇ ಇದ್ದ ಕೋಮುವಾದಿ-ವಿರೋಧಿ ಭಾವನೆಯನ್ನು ತೀವ್ರಗೊಳಿಸಿತ್ತು ಮತ್ತು ಧರ್ಮನಿರಪೇಕ್ಷತಾ ಭಾವನೆಯನ್ನು ಅಂದರೆ ಧರ್ಮವನ್ನು ರಾಜಕೀಯದೊಂದಿಗೆ ಬೆರಸಬಾರದು, ಧರ್ಮ ವ್ಯಕ್ತಿಗತ ನಂಬಿಕೆಯಾಗಬೇಕು ಎಂಬುದನ್ನು ಸದೃಢಗೊಳಿಸಿತು. ನಂತರ ಅವರು ತಮ್ಮಂತಹ ಯುವಕರನ್ನು ಸೇರಿಸಿ 1925ರ
ಏಪ್ರಿಲ್ ನಲ್ಲಿ ಸಂಘಟಿಸಿದ “ನೌಜವಾನ್ ಭಾರತ್ ಸಭಾ” (ನವ ಯುವಕರ ಭಾರತ ಸಭೆ) ಯಾವುದೇ ಜಾತಿ, ಮತ, ಧರ್ಮಕ್ಕೆ ಮಾನ್ಯತೆ ನೀಡಲಿಲ್ಲ. ಎಲ್ಲರೂ ಒಂದು ಎನ್ನುವ ಭಾವನೆಗೆ ಮಹತ್ವ ನೀಡಿತು. ಅವರೆಲ್ಲಾ ಒಟ್ಟಿಗಿದ್ದರು. ಒಟ್ಟಿಗೆ ಅಡಿಗೆ ಮಾಡಿ, ಊಟ ಮಾಡುತ್ತಿದ್ದರು - ಜಾತಿ ಧರ್ಮಗಳ ಬೇಧವಿಲ್ಲದೆ.
(ಮುಂದುವರೆಯುತ್ತದೆ)

  -       ಸುಧಾ ಜಿ