Pages

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್


(ಈ ಸಂಚಿಕೆಯಿಂದ ನಾವು ಭಗತ್ ಸಿಂಗ್ ರವರ ಜೀವನಕಥಾನಕವನ್ನು 
ಸೀರಿಯಲ್ ಆಗಿ ನೀಡುತ್ತಿದ್ದೇವೆ.)

ಶಹೀದ್ಎ-ಅಜûಮ್ ಭಗತ್‍ಸಿಂಗ್


ಮುನ್ನುಡಿ

ನಮ್ಮ ದೇಶ 1947ರವರೆಗೆ ಬ್ರಿಟಿಷರ ದಾಸ್ಯದಲ್ಲಿತ್ತು. 1947ರ ಆಗಸ್ಟ್ 14ರ ಮಧ್ಯರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಬ್ರಿಟಿಷರು ಈ ದೇಶ ಬಿಟ್ಟು ಹೋದರು. ಬಹಳಷ್ಟು ಪುಸ್ತಕಗಳಲ್ಲಿ ಬರೆದಿರುವಂತೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಕೇವಲ ಅಹಿಂಸೆ ಮತ್ತು ಸತ್ಯಾಗ್ರಹದಿಂದಲ್ಲ. ಈ ದೇಶದ ವಿಮೋಚನೆಗಾಗಿ ಲಕ್ಷಾಂತರ ಜನ ರಕ್ತ ಸುರಿಸಿದ್ದಾರೆ. ಬ್ರಿಟಿಷರಿಂದ ಅಪಮಾನಗೊಂಡಿದ್ದಾರೆ, ಅಮಾನವೀಯ ಹಾಗೂ ಬರ್ಬರ ಹಿಂಸೆ ಅನುಭವಿಸಿದ್ದಾರೆ. ಬಂಧು-ಬಾಂಧವರಿಂದ ದೂರವಿದ್ದು, ಹತ್ತಾರು ವರ್ಷಗಳ ಕಾಲ ಜೈಲಿನಲ್ಲಿದ್ದು, ಗಡಿಪಾರು ಶಿಕ್ಷೆ ಅನುಭವಿಸಿದ್ದಾರೆ. ಸುಖವಾಗಿ ಜೀವನ ನಡೆಸುವುದನ್ನು ಬಿಟ್ಟು ಕ್ರಾಂತಿಕಾರಿ ಹೋರಾಟಕ್ಕೆ ಧುಮುಕಿ, ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು, ಉದ್ಯೋಗಿಗಳು ತಮ್ಮ ಕೆಲಸವನ್ನು ತೊರೆದಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಗಲ್ಗಂಬಕ್ಕೆ ಮುತ್ತಿಟ್ಟು, ನೇಣಿನ ಕುಣಿಕೆಗೆ ತಮ್ಮ ತಲೆಗಳನ್ನೊಡ್ಡಿದ್ದಾರೆ. ಸ್ತ್ರೀಯರೂ ಸಹ ಪೋಲಿಸರ ಅತ್ಯಾಚಾರ, ಅವಮಾನ, ಕಾರಾಗೃಹ ಶಿಕ್ಷೆ ಎಲ್ಲವನ್ನೂ ಎದುರಿಸಿದ್ದಾರೆ. ಸ್ವಾತಂತ್ರ್ಯ ನಮಗೆ ದೊರೆತಿರುವುದು ತಮ್ಮ ಮುಂದಿನ ಪೀಳಿಗೆಯವರು ಸ್ವತಂತ್ರರಾಗಿ, ಸುಖವಾಗಿ ಬಾಳಲೆಂದು ಬಯಸಿದ ಇಂತಹ ಲಕ್ಷಾಂತರ ಜನರ ತ್ಯಾಗ-ಬಲಿದಾನಗಳಿಂದ.
1770ರಲ್ಲಿ ಬಂಗಾಳದ ನವಾಬ ಮೀರ್ ಕಾಸಿಂನಿಂದ ಆರಂಭವಾದ ಬ್ರಿಟಿಷ್ ವಿರುದ್ಧದ ಹೋರಾಟ, ಹಲವಾರು ರೈತ-ಬುಡಕಟ್ಟು ಜನಾಂಗಗಳ ದಂಗೆಗಳಾಗಿ ಬೆಳೆದು, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಾಯಿತು. ನಂತರ ವಿವಿಧ ಸಂಘಟನೆಗಳಡಿ, ಪಕ್ಷಗಳಡಿ ಚಳುವಳಿಯಾಗಿ ಬೆಳೆದು ಇಡೀ ದೇಶವನ್ನು ಆವರಿಸಿತು. ಬಂಗಾಳ ವಿಭಜನೆಯ ವಿರುದ್ಧದ ಚಳುವಳಿ, ಅಸಹಕಾರ ಚಳುವಳಿ, ಕಾನೂನುಭಂಗ ಚಳುವಳಿಗಳಾಗಿ ರೂಪುಗೊಂಡಿತು. ಇದಕ್ಕೆ ಜೊತೆಯಾಗಿ ದೇಶದಾದ್ಯಂತ ಬೆಳೆದ ಕ್ರಾಂತಿಕಾರಿಗಳ ಹೋರಾಟ ಬ್ರಿಟಿಷರ ಗುಂಡಿಗೆಗಳನ್ನು ನಡುಗಿಸಿತು. ಕಾರ್ಮಿಕರ, ರೈತರ, ವಿದ್ಯಾರ್ಥಿ-ಯುವಜನರ ಮುಷ್ಕರಗಳಾಗಿ ಬೆಳೆದು, ಕ್ವಿಟ್ ಇಂಡಿಯಾ ಚಳುವಳಿಯಾಗಿ ರೂಪುಗೊಂಡಿತು. ಭಾರತೀಯರ ಸೈನ್ಯ ಐಎನ್ಎ ಹೋರಾಟವಾಗಿ, ಬ್ರಿಟಿಷ್ ಸೈನ್ಯದಲ್ಲಿಯೂ ಭಾರತೀಯ ಸೈನಿಕರ ಬಂಡಾಯವಾಗಿ, ಅಂತಿಮವಾಗಿ, ನಮಗೆ ಸ್ವಾತಂತ್ರ್ಯ ದೊರೆಯಿತು. ಹಾಗಾಗಿ ನಮ್ಮ ಸ್ವಾತಂತ್ರ್ಯ ಸುಮಾರು 175 ವರ್ಷಗಳ ಹೋರಾಟದ ಪ್ರತಿಫಲವಾಗಿದೆ.

ಈ ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಲು ಹೋರಾಡಿದ ಅಸಂಖ್ಯಾತ ಯೋಧರಲ್ಲಿ ಭಗತ್‍ಸಿಂಗ್ ಅಸಾಮಾನ್ಯ ಕ್ರಾಂತಿಕಾರಿಗಳು. ಭಗತ್‍ಸಿಂಗ್ ಈ ದೇಶ ಮಾತ್ರವಲ್ಲ, ಇಡೀ ಜಗತ್ತು ಕಂಡ ಅಪ್ರತಿಮ ಕ್ರಾಂತಿಕಾರಿಗಳಲ್ಲೊಬ್ಬರು. ಅವರು ತಮ್ಮ ತ್ಯಾಗ ಮತ್ತು ಬಲಿದಾನದಿಂದಾಗಿ, ಅದಕ್ಕೂ ಮಿಗಿಲಾಗಿ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಸಿಕೊಂಡ ಉನ್ನತ ವೈಚಾರಿಕ ಮಟ್ಟದಿಂದಾಗಿ, ಸಂಘಟನೆಯನ್ನು ಕಟ್ಟಿದ ರೀತಿಯಿಂದಾಗಿ, ಜನತೆಯಲ್ಲಿ ಹೋರಾಟದ ಉತ್ಸಾಹವನ್ನು ತುಂಬಿದ ರೀತಿಯಿಂದಾಗಿ, ಕ್ರಾಂತಿಕಾರಿಗಳು ಭಯೋತ್ಪಾದಕರಲ್ಲ, ಬದಲಿಗೆ ಅಸೀಮ ದೇಶಪ್ರೇಮಿಗಳೆಂದು ಜಗತ್ತಿಗೆ ಸಾರಿದ ಅವರ ವೈಖರಿಯಿಂದಾಗಿ, ಅವರು ನಮ್ಮ ನಡುವೆ ಇಲ್ಲದಿದ್ದರೂ, ಸದಾ ಕಾಲ ಧ್ರುವತಾರೆಯಾಗಿ ಮಿನುಗುತ್ತಿರುತ್ತಾರೆ. ನಮ್ಮ ಜಡತೆಯನ್ನು ಹೊಡೆದೋಡಿಸಿ ನಮ್ಮಲ್ಲಿ ನಿರಂತರ ಚೈತನ್ಯವನ್ನು ತುಂಬುವ ಸ್ಫೂರ್ತಿಯ ಸೆಲೆಯಾಗಿ ನಿಲ್ಲುತ್ತಾರೆ.

ಬೆಳೆಯುವ ಪೈರು ಮೊಳಕೆಯಲ್ಲಿ
ದೃಶ್ಯ - 1
ಅದೊಂದು ಹಳ್ಳಿಯ ಮನೆ. ಓರ್ವ ಯುವತಿ ಅಳುತಿದ್ದಾಳೆ. ಅಲ್ಲಿಗೆ ಬಂದ ಬಾಲಕ ಆ ಯುವತಿಯ ತೊಡೆಯನ್ನೇರಿ, ಕಣ್ಣೊರೆಸುತ್ತಾ “ಅಳಬೇಡ ಚಿಕ್ಕಮ್ಮಾ, ನಾನು ಚಿಕ್ಕಪ್ಪನನ್ನು ಕರೆತರುತ್ತೇನೆ. ಈ ಬ್ರಿಟಿಷರನ್ನು ಇಲ್ಲಿಂದ ಓಡಿಸಿ ಚಿಕ್ಕಪ್ಪನನ್ನು ನಿನ್ನ ಬಳಿಗೆ ಕರೆತರುತ್ತೇನೆ. ಅಳಬೇಡ ಚಿಕ್ಕಮ್ಮಾ,” ಎನ್ನುತ್ತಾನೆ. ಬಾಲಕನ ಮುಗ್ಧತೆಯನ್ನು ಕಂಡು ಆಕೆ ಕಣ್ಣೊರೆಸಿಕೊಂಡು ನಗುತ್ತಾಳೆ.

ದೃಶ್ಯ-2
ಶಾಲೆಯಿಂದ ಬಂದ ತಕ್ಷಣವೇ ಆ ಬಾಲಕ ತನ್ನ ಹೊಲಕ್ಕೆ ಹೋಗುತ್ತಾನೆ. ಅಲ್ಲಿ ಕಡ್ಡಿಗಳನ್ನು ನೆಡುತ್ತಿದ್ದಾನೆ. “ಏನು ಮಾಡುತ್ತಿದ್ದೀಯಪ್ಪಾ,” ಎಂದು ತಂದೆಯ ಸ್ನೇಹಿತರು ಕೇಳಿದರೆ, “ಬಂದೂಕುಗಳನ್ನು ಕೊಡುವ ಮರ ಬೆಳೆಸುತ್ತಿದ್ದೇನೆ,” ಎನ್ನುತ್ತಾನೆ. “ನಿನಗೇಕಯ್ಯಾ ಬಂದೂಕುಗಳು,” ಪ್ರಶ್ನಿಸುತ್ತಾರೆ. “ಬ್ರಿಟಿಷರನ್ನು ಓಡಿಸಲು ಬಂದೂಕು ಬೇಡವೇ?” ಮರು ಪ್ರಶ್ನಿಸುತ್ತಾನೆ ಆ ಬಾಲಕ. ಪ್ರಶ್ನಿಸುತ್ತಿದ್ದವರು ಅವಾಕ್ಕಾಗಿ ನಿಲ್ಲುತ್ತಾರೆ.

ದೃಶ್ಯ-3
ಆ ಬಾಲಕ ಅಂದು ಮನೆಗೆ ತಡವಾಗಿ ಬರುತ್ತಾನೆ. ‘ಊಟ ಮಾಡು ಬಾ’ ಎಂದರೆ ‘ಒಲ್ಲೆ’ ಎನ್ನುತ್ತಾನೆ. ತಂಗಿಯನ್ನು ಕರೆದು ತನ್ನ ಚೀಲದಿಂದ ಒಂದು ಡಬ್ಬಿಯನ್ನು ತೆಗೆದು ತೋರಿಸುತ್ತಾನೆ. ಅದರಲ್ಲಿ ಕೆಂಪಾದ ಮಣ್ಣಿರುತ್ತದೆ. “ಏನಣ್ಣಾ, ಇದು,” ಕೇಳಿದಳು ತಂಗಿ. “ಇದು ನಮ್ಮ ಜನರ ರಕ್ತದಿಂದ ತೋಯ್ದ ಮಣ್ಣು. ಜಲಿಯನ್‍ವಾಲಾಬಾಗ್‍ನಲ್ಲಿ ಬ್ರಿಟಿಷ್ ಅಧಿಕಾರಿಯ ಗುಂಡುಗಳಿಗೆ ಸಿಕ್ಕು ಸತ್ತ ನಮ್ಮ ಜನರ ರಕ್ತ ಬಿದ್ದಂತಹ ಮಣ್ಣು. ನಾನಲ್ಲಿಗೆ ಹೋಗಿದ್ದೆ. ಇದನ್ನು ಕಣ್ಣಿಗೊತ್ತಿಕೊ,” ಎಂದೆನ್ನುತ್ತಾ ತಾನೂ ಸಹ ಭಕ್ತಿಭಾವದಿಂದ ಕಣ್ಣಿಗೊತ್ತಿಕೊಳ್ಳುತ್ತಾನೆ.

ಈ ಮೂರು ದೃಶ್ಯಗಳಲ್ಲಿ ನಮಗೆ ಕಾಣಿಸಿದ ಬಾಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ, ತನ್ನ 24ನೇ ವಯಸ್ಸಿನಲ್ಲಿಯೇ ನಗುನಗುತ್ತಾ ಪ್ರಾಣಾರ್ಪಣೆ ಮಾಡಿದ. ಆತನೇ ಭಾರತ ಕಂಡ ಅದ್ವಿತೀಯ ಕ್ರಾಂತಿಕಾರಿ ‘ಭಗತ್‍ಸಿಂಗ್’. 

ದೇಶಪ್ರೇಮಿ ಕುಟುಂಬ  

ಆತನ ಕುಟುಂಬ ದೇಶಭಕ್ತರ ಕುಟುಂಬ. ಅಜ್ಜ ಅರ್ಜುನ್‍ಸಿಂಗ್ ದೇಶಭಕ್ತರಾಗಿದ್ದರು. ಅಂದು ಭಾರತದಲ್ಲಿದ್ದ ಏಕೈಕ ಭಾರತೀಯ ಪಕ್ಷ ಕಾಂಗ್ರೆಸ್‍ಗೆ ಬಹಿರಂಗವಾಗಿಯೇ ಧನ ಸಹಾಯ ಮಾಡುತ್ತಿದ್ದರು. ಸಮಾಜ ಸುಧಾರಕರಾಗಿ ಅವರು ಸುತ್ತಮುತ್ತಲಿನ ಹಳ್ಳಿಯಲ್ಲಿ ಪ್ರಸಿದ್ಧರಾಗಿದ್ದರು. ತಮ್ಮ ಹಳ್ಳಿಯಲ್ಲಿ ಎರಡು ಬಾವಿ, ಒಂದು ಗುರುದ್ವಾರ ಹಾಗೂ ಎರಡು ಪ್ರವಾಸಿ ಮಂದಿರಗಳನ್ನು ಕಟ್ಟಿಸಿದ್ದರು. ತಮ್ಮ ಮಕ್ಕಳನ್ನಷ್ಟೇ ಅಲ್ಲದೆ ಮೊಮ್ಮಕ್ಕಳಲ್ಲೂ ದೇಶಭಕ್ತಿಯನ್ನು ಬೆಳೆಸಿದ್ದರು. ಮೊಮ್ಮಗ ಭಗತ್‍ಸಿಂಗ್‍ನ ‘ಪವಿತ್ರ ದಾರ ತೊಡಿಸುವ’ ಸಂದರ್ಭದಲ್ಲಿ, “ಈತನನ್ನು ದೇಶ ಸೇವೆಗೆ ಮುಡಿಪಾಗಿಟ್ಟಿದ್ದೇನೆ,” ಎಂದು ಘೋಷಿಸಿದ್ದರು. ಅವರ ಧೀರತೆ, ನಿರ್ಭಯತೆ, ದೇಶಭಕ್ತಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಮೇಲೆ ಪ್ರಭಾವ ಬೀರಿತ್ತು.

ತಂದೆ ಕಿಶನ್‍ಸಿಂಗ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. 1898ರಲ್ಲಿ ಕ್ಷಾಮ ಬಂದಾಗ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರಿಗೆ ನೆರವು ನೀಡಿದ್ದರು. 1900ರಲ್ಲಿ ಲಾಲಾ ಲಜಪತ್‍ರಾಯ್ ಮತ್ತು ಅವರು ಒಟ್ಟಿಗೆ ಸೇರಿ ಅನಾಥಾಲಯವನ್ನು ಸ್ಥಾಪಿಸಿದ್ದರು. ಆರ್ಯ ಸಮಾಜದಲ್ಲಿ ಸದಸ್ಯರಾಗಿದ್ದರು. ಅವರು ಸ್ವಾತಂತ್ರ್ಯ ಸಂಗ್ರಾಮದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದರು. ಭಗತ್‍ಸಿಂಗ್ ಹುಟ್ಟಿದಾಗ ಅವರು ಜೈಲಿನಿಂದ ಬಿಡುಗಡೆಯಾಗಿ ಹೊರಬಂದರು. ನಂತರದ ದಿನಗಳಲ್ಲಿ ಕಾಂಗ್ರೆಸ್‍ನ ಬೆಂಬಲಿಗರಾಗಿದ್ದರು. ಚಿಕ್ಕಪ್ಪಂದಿರಾದ ಸರ್ದಾರ್ ಅಜಿತ್‍ಸಿಂಗ್ ಮತ್ತು ಸ್ವರಣ್‍ಸಿಂಗ್ ಸಹ ಬ್ರಿಟಿಷರನ್ನೆದುರಿಸಿ ಜೈಲು ಶಿಕ್ಷೆ ಅನುಭವಿಸಿದ್ದರು. ಬಂಗಾಳದ ವಿಭಜನೆಯ ವಿರುದ್ಧ ಲಾಲಾ ಲಜಪತ್‍ರಾಯ್ರೊಡಗೂಡಿ ಪ್ರತಿಭಟನೆಗಳನ್ನು ಸಂಘಟಿಸಿದ್ದರು. ಭಗತ್‍ಸಿಂಗ್ ಹುಟ್ಟಿದಾಗ ಕಿಶನ್‍ಸಿಂಗ್ ಮತ್ತು ಅವರಿಬ್ಬರ ಬಿಡುಗಡೆಯಾಯಿತೆಂಬ ಸುದ್ದಿ ಬಂದ ಕಾರಣದಿಂದಲೇ ಅವರಿಗೆ ಭಗನ್‍ವಾಲಾ (ಅದೃಷ್ಟವಂತ) ಎಂದು ಹೆಸರಿಟ್ಟದ್ದು. ಆದರೆ ಪುನಃ ಅವರಿಬ್ಬರೂ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳಿಂದಾಗಿ ಜೈಲು ಸೇರಿದ್ದರು. ಸ್ವರಣ್‍ಸಿಂಗ್‍ರವರು ಜೈಲಿನಲ್ಲಿದ್ದಾಗ ಅತೀವ ದುಡಿತದಿಂದಾಗಿ ಕ್ಷಯಕ್ಕೆ ತುತ್ತಾಗಿ 1910ರಲ್ಲಿ ಕೇವಲ 23ನೇ ವಯಸ್ಸಿನಲ್ಲಿ ಮರಣ ಹೊಂದಿದರು.

ಭಗತ್‍ಸಿಂಗ್ ಮೇಲೆ ಅತ್ಯಂತ ಪ್ರಭಾವ ಬೀರಿದ ಅಜಿತ್‍ಸಿಂಗ್ ಮೊದಲು ಉಪಾಧ್ಯಾಯರಾಗಿದ್ದರು. 1907ರಲ್ಲಿ ಬ್ರಿಟಿಷರ ವಿರುದ್ಧ ರೈತರು ಮತ್ತು ಸೈನಿಕರು ಬಂಡಾಯ ಏಳುವಂತೆ ಮಾಡಲು ಪ್ರೇರೇಪಿಸಿದರು. “ಪೇಶ್ವಾ” ಪತ್ರಿಕೆಯನ್ನು ಆರಂಭಿಸಿ ಅದರ ಮೂಲಕ ಜನರಲ್ಲಿ ದೇಶಪ್ರೇಮ ಬೆಳೆಯುವಂತೆ ಮಾಡಲೆತ್ನಿಸುತ್ತಿದ್ದರು. ಅವರು ಇತರರ ಜೊತೆ ಸೇರಿ “ಭಾರತ ಮಾತಾ ಸಭಾ” ಎಂಬ ಕ್ರಾಂತಿಕಾರಿ ಸಂಘಟನೆಯನ್ನು ಸ್ಥಾಪಿಸಿದ್ದರು. ಅವರ ಮೇಲೆ 22 ಮೊಕದ್ದಮೆಗಳನ್ನು ಬ್ರಿಟಿಷ್ ಸರ್ಕಾರ ಹೂಡಿತ್ತು. ಆದ್ದರಿಂದ 1907ರಲ್ಲಿ ಬಿಡುಗಡೆಯಾದ ತಕ್ಷಣ ಇನ್ನಾವುದೊ ಮೊಕದ್ದಮೆಯಲ್ಲಿ ಅವರನ್ನು ಬಂಧಿಸುವ ಸುದ್ದಿ ತಿಳಿದದ್ದರಿಂದ, ಅವರು ಇರಾನಿಗೆ, ಅಲ್ಲಿಂದ ಜರ್ಮನಿಗೆ, ನಂತರ ಬ್ರೆಜಿಲ್‍ಗೆ ತೆರಳಿದರು. ಹೊರ ದೇಶದಲ್ಲಿದ್ದೂ ಅಲ್ಲಿದ್ದ ಭಾರತೀಯರನ್ನು ಹೋರಾಟಕ್ಕೆ ಸಜ್ಜುಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದ್ದರು. 1945ರಲ್ಲಿ ಜರ್ಮನಿಯಲ್ಲಿದ್ದ ಅವರನ್ನು ಬ್ರಿಟಿಷರು ಬಂಧಿಸಿ ಭಾರತಕ್ಕೆ ಕರೆತಂದರು, ತೀವ್ರ ಅನಾರೋಗ್ಯದಿಂದ 1947ರಲ್ಲಿ ಮೃತರಾದರು. 

ತಾಯಿ ವಿದ್ಯಾವತಿ ದೇವಿಯೂ ಸಹ ಈ ಹೋರಾಟದಲ್ಲಿ ಹಿಂದಿರಲಿಲ್ಲ. ತಮ್ಮ ಕುಟುಂಬದ ಸದಸ್ಯರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಭಗತ್‍ಸಿಂಗ್‍ರವರ ದೇಶಭಕ್ತಿ ಪ್ರಜ್ವಲಿಸುವಲ್ಲಿ ಅವರ ಪಾತ್ರ ಅಪಾರ. ಭಗತ್ ಮತ್ತು ಅವರ ತಂದೆಯ ನಡುವೆ ಭಗತ್‍ರ ಕ್ರಾಂತಿಕಾರಿ ಚಟುವಟಿಕೆಯ ಬಗ್ಗೆ ಘರ್ಷಣೆ ಬಂದಾಗ, ಭಗತ್‍ರಿಗೆ ಬೆಂಬಲವಾಗಿ ನಿಂತು, ಕಿಶನ್‍ಸಿಂಗ್‍ರನ್ನು ಸಮಾಧಾನ ಪಡಿಸುತ್ತಿದ್ದರು. ಅವರನ್ನು ಗಲ್ಲಿಗೇರಿಸುವ ಮುನ್ನ ಭೇಟಿಯಾದಾಗ ಭಗತ್‍ಸಿಂಗ್‍ರಿಗೆ ಈ ರೀತಿ ಹೇಳಿದರಂತೆ, “ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ ಶ್ರೇಷ್ಠ ಸಾವೆಂದರೆ ಜಗತ್ತು ಅದನ್ನು ನೆನಪಿಸಿಕೊಳ್ಳುವಂತಹುದು. ಗಲ್ಲಿಗೇರುವಾಗ ನೀನು ನಗುನಗುತ್ತಾ “ಇಂಕ್ವಿಲಾಬ್ ಜಿಂದಾಬಾದ್” (ಕ್ರಾಂತಿ ಚಿರಾಯುವಾಗಲಿ) ಎಂದು ಘೋಷಿಸಬೇಕು. ಸಾಯುವ ಮುನ್ನ ನಿನ್ನ ತೂಕ ಈಗಿರುವುದಕ್ಕಿಂತ ಹೆಚ್ಚಾಗಿರಬೇಕು.” ಓರ್ವ ಧೀರ, ಉದಾತ್ತ ಮಾತೆ ಮಾತ್ರ ಹೀಗೆ ಹೇಳಲು ಸಾಧ್ಯ ಅಲ್ಲವೆ?

ಭಾವುಕ ಜೀವಿ
ಪಂಜಾಬಿನ ಬಂಗಾ ಎಂಬ ಹಳ್ಳಿಯಲ್ಲಿ ನೆಲೆಸಿದ್ದ ಇಂತಹ ಕುಟುಂಬದಲ್ಲಿ ಭಗತ್‍ಸಿಂಗ್ 1907ರ ಸೆಪ್ಟೆಂಬರ್ 27ರಂದು ಜನಿಸಿದರು. ಅವರಿಗೆ ಇಬ್ಬರು ತಮ್ಮಂದಿರು, ಮೂವರು ತಂಗಿಯರಿದ್ದರು. ಒಟ್ಟು ಕುಟುಂಬದಲ್ಲಿ ಬೆಳೆದ ಭಗತ್‍ಸಿಂಗ್ ಬಹಳ ಭಾವುಕ ಜೀವಿಯಾಗಿ ಬೆಳೆದರು. ಅವರು ನಿಸರ್ಗಪ್ರಿಯರಾಗಿದ್ದರು. ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಅವರ ಗ್ರಹಣಶಕ್ತಿ, ಸ್ಮರಣಶಕ್ತಿ ತೀಕ್ಷ್ಣವಾಗಿತ್ತು. ಅವರು ಸಾಹಸಿಯಾಗಿದ್ದರು, ನಿರ್ಭೀತಿಯಿಂದ ತಮಗನಿಸಿದ್ದನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಸತ್ಯವಾದದ್ದನ್ನು ಹೇಳಲು ಅವರು ಎಂದೂ ಹಿಂಜರಿಯುತ್ತಿರಲಿಲ್ಲ. ಚಿಕ್ಕಂದಿನಿಂದಲೂ ಇತರರ ಕಷ್ಟಗಳಿಗೆ ಸ್ಪಂದಿಸುವುದನ್ನು ಕಲಿತರು. ಊರಿನಲ್ಲಿ ಕ್ಷಾಮ ಬಂದಾಗ ಕುಟುಂಬದವರೊಂದಿಗೆ ಸೇರಿ ಜನರಿಗೆ ಆಹಾರ, ವಸತಿ ಏರ್ಪಡಿಸುವುದರಲ್ಲಿ ಭಾಗಿಯಾಗುತ್ತಿದ್ದರು.

ಪುಟ್ಟ ಮನಸ್ಸಿನಲ್ಲಿ ದೊಡ್ಡ ವಿಚಾರ 
ಅವರ ಮನೆ ಒಂದು ರೀತಿಯಲ್ಲಿ ಕ್ರಾಂತಿಕಾರಿಗಳ ಚಟುವಟಿಕೆಗಳ ತಾಣವಾಗಿತ್ತು. ತಂದೆಯ ಮತ್ತು ಚಿಕ್ಕಪ್ಪನ ಸ್ನೇಹಿತರನ್ನು ಬಹು ಹತ್ತಿರದಿಂದ ನೋಡಿದ್ದರು. ಅವರ ಚರ್ಚೆಗಳನ್ನು ಕೇಳಿ ತಮ್ಮ ಪುಟ್ಟ ಮನಸ್ಸಿನಲ್ಲಿಯೇ  ಬ್ರಿಟಿಷರ ವಿರುದ್ಧ ಆಕ್ರೋಶವನ್ನು ಬೆಳೆಸಿಕೊಂಡರು. ತಮ್ಮ ಚಿಕ್ಕಪ್ಪನ ಮೇಲೆ ಬ್ರಿಟಿಷರು ಮಾಡಿದ್ದ ಗಾಯಗಳ ಗುರುತುಗಳನ್ನು ಕಣ್ಣಾರೆ ಕಂಡಿದ್ದರು. ಅವರ ಚಿಕ್ಕಪ್ಪ ನೀಡಿದ್ದ ಅವರೇ ಬರೆದ ಪುಸ್ತಕ “ಮುಹಿಬ್-ಎ-ವತನ್” (ದೇಶಭಕ್ತರು) ಬಹಳ ಜೋಪಾನವಾಗಿ ಇಟ್ಟುಕೊಂಡಿದ್ದರು. ತಮ್ಮ ಚಿಕ್ಕಮ್ಮನಂತೆ ಬಹಳಷ್ಟು ಹೆಣ್ಣುಮಕ್ಕಳ ನೋವಿಗೆ ಕಾರಣ ಬ್ರಿಟಿಷರು ಎಂಬುದನ್ನು ತಿಳಿದುಕೊಂಡಿದ್ದರು. ತಮ್ಮ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರ ಸಂಕಟಗಳಿಗೆ ಕಾರಣ ಬ್ರಿಟಿಷರು ಎಂಬುದನ್ನು ಅರಿತಿದ್ದರು.

ಬಾಲಕ ಭಗತ್ ಮೇಲೆ ಪ್ರಭಾವ ಬೀರಿದ ಇನ್ನಿತರ ವ್ಯಕ್ತಿಗಳೆಂದರೆ, ಕರ್ತಾರ್‍ಸಿಂಗ್ ಸರಭಾ ಮತ್ತು ಮದನ್‍ಲಾಲ್ ಧಿಂಗ್ರಾ. ಘದರ್ ಚಳುವಳಿಯ ನಾಯಕರಲ್ಲೊಬ್ಬರಾದ ಸರಭಾರವರು ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು. 1916ರಲ್ಲಿ ಇವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಇನ್ನೋರ್ವ ವ್ಯಕ್ತಿ ಧಿಂಗ್ರಾ ಬ್ರಿಟಿಷರ ನೆಲದಲ್ಲಿಯೇ ಭಾರತೀಯರನ್ನು ಅಪಮಾನ ಮಾಡುತ್ತಿದ್ದ ಕರ್ನಲ್ ವಿಲ್ಲಿಯನ್ನು ಲಂಡನ್ನಿನಲ್ಲಿಯೇ ಕೊಂದು 1909ರಲ್ಲಿ ಗಲ್ಲಿಗೇರಿದ್ದರು. ಸಾಯುವಾಗ ಅವರು ಹೇಳಿದ ಮಾತುಗಳು ಭಗತ್‍ರ ಮನದಲ್ಲಿ ಅಚ್ಚಳಿಯದೆ ಉಳಿದಿತ್ತು. “ವಿದೇಶಿ ಮದ್ದು ಗುಂಡುಗಳಿಂದ ತುಳಿತಕ್ಕೆ ಸಿಕ್ಕಿರುವ ಒಂದು ರಾಷ್ಟ್ರ ಸದಾ ಯುದ್ಧದ ವಾತಾವರಣದಲ್ಲೇ ಇರುತ್ತದೆ. ನಿರಾಯುಧರಾದ ಒಂದು ಜನಾಂಗದವರು ನೇರವಾದ ಯುದ್ಧದಲ್ಲಿ ತೊಡಗುವುದು ಅಶಕ್ಯ; ಆದ್ದರಿಂದಲೇ ನಾನು ಅನಿರೀಕ್ಷಿತವಾಗಿ ಗುಂಡು ಹಾರಿಸಬೇಕಾಗಿ ಬಂತು. . . . .  ಸಂಪತ್ತಿನಲ್ಲಿ ಮತ್ತು ಪ್ರತಿಭೆಯಲ್ಲಿ ನಾನೊಬ್ಬ ಬಡವ. ನನ್ನಂತಹ ಮಗ ತನ್ನ ತಾಯಿಗೆ ತನ್ನ ರಕ್ತವೊಂದನ್ನುಳಿದು ಬೇರೇನು ಕೊಡಲು ಶಕ್ತ? ಆದ್ದರಿಂದಲೇ ಅವಳಿಗೆ ನಾನು ನನ್ನ ರಕ್ತವನ್ನು ಸಮರ್ಪಿಸುತ್ತಿದ್ದೇನೆ.” 

ವಿದ್ಯಾರ್ಥಿ ಭಗತ್‍ರ ಮೇಲೆ ಶಿಕ್ಷಕರ ಪ್ರಭಾವ
ಭಗತ್ 5ನೇ ತರಗತಿಯವರೆಗೆ ಹಳ್ಳಿಯಲ್ಲಿ ಓದಿದರು. ಭಗತ್‍ರ ಅಣ್ಣ ಜಗತ್ ಖಾಯಿಲೆಯಿಂದ ತೀರಿಕೊಂಡಾಗ ಕುಟುಂಬ ಆಘಾತಕ್ಕೊಳಗಾಯಿತು. ಆದ್ದರಿಂದ ಅವರ ಕುಟುಂಬ ಹಳ್ಳಿಯಿಂದ ಲಾಹೋರಿನ ನೆಹ್ರಾನ್‍ಕೋಟ್‍ಗೆ ತಮ್ಮ ವಾಸ್ತವ್ಯವನ್ನು  ಬದಲಿಸಿತು. ಆಗ ಭಗತ್‍ರನ್ನು ಅವರ ತಂದೆ ಎಲ್ಲಾ ಸಿಖ್ಖರಂತೆ, ಸಿಖ್ಖರ ಶಾಲೆಯಾದ ಖಲ್ಸಾ ಶಾಲೆಗೆ ಸೇರಿಸಲಿಲ್ಲ. ಏಕೆಂದರೆ ಖಲ್ಸಾ ಶಾಲೆಯ ಅಧಿಕಾರಿಗಳು ಬ್ರಿಟಿಷರ ಬಗ್ಗೆ ರಾಜಭಕ್ತಿಯನ್ನು ಹೊಂದಿದ್ದರು. ಭಗತ್‍ರನ್ನು ಅಲ್ಲಿ ಸೇರಿಸಿದರೆ ಅದೇ ಗುಲಾಮಿ ಭಾವನೆ ಬೆಳೆಯಬಹುದೆಂಬ ಕಾರಣದಿಂದ ಡಿ.ಎ.ವಿ ಶಾಲೆಗೆ ಸೇರಿಸಿದರು.  ಭಗತ್ 9ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಆಟವಾಡುವ ವಯಸ್ಸಿನಲ್ಲಿಯೇ ಅವರು ಸ್ವಾತಂತ್ರ್ಯದ ಬಗ್ಗೆ ತೀವ್ರವಾಗಿ ಯೋಚಿಸುತ್ತಿದ್ದರು ಎಂಬುದನ್ನು ಹೇಳಬೇಕಿಲ್ಲವಷ್ಟೆ. ಜೊತೆಗೆ ಕಾಂಗ್ರೆಸ್ ಅಸಹಕಾರ ಚಳುವಳಿಗೆ ಕರೆ ನೀಡಿದಾಗ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ತೊರೆಯುವಂತೆ ಕೇಳಿಕೊಂಡಿತು. ಅದಕ್ಕೆ ಓಗೊಟ್ಟ ಸಾವಿರಾರು ವಿದ್ಯಾರ್ಥಿಗಳಂತೆ ಭಗತ್ ಸಹ ನ್ಯಾಷನಲ್ ಕಾಲೇಜನ್ನು ಸೇರಿದರು. ಆ ಕಾಲೇಜನ್ನು ಲಾಲಾಜಿಯವರು ಮತ್ತು ಭಾಯಿ ಪರಮಾನಂದರಂತಹ ರಾಷ್ಟ್ರ ಭಕ್ತರು ಯುವಕರಲ್ಲಿ ದೇಶಪ್ರೇಮವನ್ನು ಬೆಳೆಸಲು ಆರಂಭಿಸಿದ್ದರು. ಡಿ.ಎ.ವಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಭಗತ್, ಕಾಲೇಜಿಗೆ ಸೇರುವ ಮುನ್ನ ಅಲ್ಲಿನ ಅರ್ಹತಾ ಪರೀಕ್ಷೆಯನ್ನು ಪಾಸು ಮಾಡಿದ್ದರೆಂದರೆ ಅವರೆಷ್ಟು ತೀಕ್ಷ್ಣಮತಿ ಮತ್ತು ಪ್ರತಿಭಾಶಾಲಿಗಳಾಗಿದ್ದರೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಅಲ್ಲಿ ಪ್ರಾಂಶುಪಾಲರಾಗಿದ್ದ ಛಬಿಲ್‍ದಾಸ್ ಮತ್ತು ರಿಜಿಸ್ಟ್ರಾರ್ ಆಗಿದ್ದ ಭೀಮ್‍ಸೇನ್ ಸಾಚಾರ್ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ತುಂಬಲು ಯತ್ನಿಸುತ್ತಿದ್ದರು. ಭಗತ್‍ರಲ್ಲಿ ಬ್ರಿಟಿಷರ ವಿರೋಧಿ ಭಾವನೆಯನ್ನು ಗಟ್ಟಿಗೊಳಿಸುವಲ್ಲಿ, ಕ್ರಾಂತಿಕಾರಕ ವಿಚಾರಗಳನ್ನು ತುಂಬುವಲ್ಲಿ ಮುಖ್ಯ ಪಾತ್ರ ವಹಿಸಿದವರು ಪ್ರೊಫೆಸರ್ ಜಯಚಂದ್ ವಿದ್ಯಾಲಂಕಾರ್‍ರವರು. ವಿದ್ಯಾರ್ಥಿ ದೆಸೆಯಿಂದಲೂ ಭಗತ್‍ರಿಗೆ ವಿಷಯಗಳನ್ನು ತಿಳಿದುಕೊಳ್ಳುವ ಆಸೆಯಿತ್ತು. ಭಗತ್‍ರನ್ನು ಆ ಸಮಯದಲ್ಲಿ ನೋಡಿದ್ದವರು ಅವರ ಬಗ್ಗೆ ವಿವರಿಸಿದ್ದು ಹೀಗೆ: ಆತ ತನ್ನ ಬಟ್ಟೆಬರೆಯ ಬಗ್ಗೆ ಎಂದೂ ಗಮನ ಹರಿಸಿರಲಿಲ್ಲ. ಯಾವಾಗ ನೋಡಿದರೂ ಹೊರೆಹೊರೆ ಪುಸ್ತಕಗಳನ್ನು ಕಂಕುಳಲ್ಲಿ ಇಟ್ಟುಕೊಂಡಿರುತ್ತಿದ್ದರು. ಕೆಲವೊಮ್ಮೆ ಹರಿದ ಜೇಬಿನಲ್ಲಿಯೂ ಯಾವುದಾದರೂ ಪುಸ್ತಕ ಇಟ್ಟುಕೊಂಡಿರುತ್ತಿದ್ದರು.ಬಾಲ್ಯದಿಂದಲೂ ಓದಬೇಕು, ಜ್ಞಾನ ಸಂಪಾದಿಸಬೇಕು ಬ್ರಿಟಿಷರನ್ನು ಭಾರತದಿಂದ ಹೊಡೆದೋಡಿಸಲು ದಾರಿ ಹುಡುಕಬೇಕು, ದೇಶದಲ್ಲಿ ಹಸಿವು, ಬಡತನ, ನಿರುದ್ಯೋಗ, ಸಂಕಷ್ಟಗಳನ್ನು ನಿವಾರಣೆ ಮಾಡಲು ಮಾರ್ಗಗಳನ್ನು ಅನ್ವೇಷಿಸಬೇಕು ಎಂಬ ಆಕಾಂಕ್ಷೆಗಳನ್ನು ಹೊಂದಿದ್ದರು. 

     -    ಸುಧಾ ಜಿ
(ಮುಂದುವರೆಯುತ್ತದೆ)

ಕಾಮೆಂಟ್‌ಗಳಿಲ್ಲ: