Pages

ವಿನೋದ: "ದೂರದ ಬೆಟ್ಟ ನುಣ್ಣಗೆ"



  ನನ್ನ ಗೆಳತಿಯೊಬ್ಬಳು ಕಂಪ್ಯೂಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವಳು. ಅದರಲ್ಲೊ ಎಲ್ಲರನ್ನು ಕತ್ತೆಯಂತೆ ದುಡಿಸಿಕೊಳ್ಳುವರು, ಒರಟಾಗಿ ಅಲ್ಲ, ನಯವಿನಯದಿಂದಲೆ. ಕಾರು, ಫೋನು ಇತ್ಯಾದಿ, ಇತ್ಯಾದಿ ಸೌಕರ್ಯಗಳನೆಲ್ಲಾ ಕೊಟ್ಟು. 
ಅವಳಿಗೆ ನಮ್ಮ ಮೇಲೆ, ಅಂದರೆ ಸರ್ಕಾರಿ ನೌಕರರ ಮೇಲೆ ಕಣ್ಣು. “ನಿನಗೇನು ಬಿಡಮ್ಮಾ, ಸರ್ಕಾರಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದೀಯಾ. 2-3 ಘಂಟೆ ಏನೊ ವದರಿ ಬಂದರೆ ಆಯಿತು. ಹೀಗ್ ಹೋಗಿ ಹಾಗ್ ಬಂದ್ಬಿಡ್ತೀಯಾ. ಸುಖಜೀವಿಗಳು. ನಾವ್ ನೋಡು ಹೇಗೆ ದುಡೀತೀವಿ?” ಎನ್ನುವಳು.
ಅವಳ ವಾದಕ್ಕೆ ಪ್ರತಿವಾದಿಸದೆ ಸುಮ್ಮನಿದ್ದರೂ ಅವಳು ಕೆಣಕುವಳು. ಕೊನೆಗೆ ನಾನು “ನೋಡು ದೂರದ ಬೆಟ್ಟ ನುಣ್ಣಗೆ. ನಿಮ್ಮ ಸಂಬಳ ಸವಲತ್ತುಗಳ ಕಾಲು ಭಾಗವೂ ನಮಗೆ ಬರೋಲ್ಲ. ಮತ್ಯಾಕೆ ಹೋಲಿಕೆ” ಎಂದರೆ ಅವಳು, “ನೀನು ಏನೇ ಹೇಳು ನಿಮ್ಮದು ಬಹಳ ಸಲೀಸಾದ ಕೆಲಸ. ರಿಸ್ಕ್ ಇಲ್ಲವೇ ಇಲ್ಲ. ನನಗೂ ಯಾವುದಾದರೂ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಸಿಕ್ಕಿದರೆ ಎಷ್ಟು ಚೆನ್ನಾಗಿರುತ್ತೆ. ಈ ಕೆಲಸಕ್ಕೆ ಈಗಲೇ ರಾಜೀನಾಮೆ ಕೊಟ್ಬಿಡ್ತೀನಿ” ಎನ್ನುವಳು.
ಹೀಗೆ ವಾದ ಯಾವಾಗಲೂ ಮುಂದುವರೆಯುತ್ತಲೇ ಇರುತ್ತಿತ್ತು. ಕೊನೆಗೊಂದು ದಿನ ನನಗೆ ರೋಸಿ ಹೋಗಿ “ನಾಳೆ ಆಫೀಸಿಗೆ ರಜಾ ಹಾಕಿ ನನ್ ಜೊತೆ ಕಾಲೇಜಿಗೆ ಬಾ. ನಾವು ಎಷ್ಟು ಸುಖಜೀವಿಗಳು ಅನ್ನೋದನ್ನ ತೋರಿಸ್ತೀನಿ” ಎಂದೆ. 
“ನಾಳೆ ಆಗಲ್ಲ, ನಾಡಿದ್ದು ಶನಿವಾರ ಬರ್ತೀನಿ. ನೋಡು ನಿಮ್ಮ ತರಹ ನಾವು ರಜಾ ಹಾಕೋಕಾಗಲ್ಲ.” ಅದರಲ್ಲೂ ಕೊಂಕು. 
“ಸರಿ ತಾಯಿ, ನಾಡಿದ್ದೇ ಬಾ” ಉತ್ತರಿಸಿದೆ. 
ಅವಳ ಗಾಡಿಯಲ್ಲೇ ಕಾಲೇಜಿಗೆ ಹೊರಟೆವು. ನಾನು ಹಿಂದೆ ಕುಳಿತು ದಾರಿ ಸೂಚಿಸುತ್ತಿದ್ದೆ. “ಎಡಗಡೆ ತಿರುಗು” ಎಂದೆ. 
“ಯಾಕೆ ಪಾಳು ಬಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗ್ತಾ ಇದ್ದೀಯ?” ಗಾಬರಿಯಾಗಿ ಕೇಳಿದಳು. 
“ಅದೆ ನಮ್ಮ ಕಾಲೇಜು”ಎಂದೆ. ಹೌಹಾರಿದಳು.
ಒಳಗೆ ಹೋಗುತ್ತಲೇ, “ಪಾರ್ಕಿಂಗ್ ಯಾವ ಕಡೆ” ಪ್ರಶ್ನಿಸಿದಳು. “ಎಲ್ಲಿ ಬೇಕಾದರೂ ಪಾರ್ಕ್ ಮಾಡು. ನಮ್ಮಲ್ಲಿ ಇಡೀ ಕಾಲೇಜೆ ಪಾರ್ಕಿಂಗ್ ಜಾಗ. ಕಾಣಿಸ್ತಾ ಇಲ್ವಾ, ಎಲ್ಲಾ ಕಡೆ ನಿಲ್ಲಿಸಿರೋದು.” ನನ್ನ ಗೆಳತಿ ಗಾಡಿ ನಿಲ್ಲಿಸಿ ಒಮ್ಮೆ ಸುತ್ತಮುತ್ತ ನೋಡಿದಳು, ಹಾಗೆ ದಂಗಾಗಿ ನಿಂತಳು.
ಅವಳಿಗೆ ಕಂಡದ್ದು ಬಿದ್ದುಹೋಗುವಂತಿದ್ದ ಕಟ್ಟಡ, ಬಾಗಿಲುಕಿಟಕಿಗಳಿಲ್ಲದ ಕೊಠಡಿಗಳು, ಆವರಣದ ತುಂಬಾ ಕಸಕಡ್ಡಿ, ಪೇಪರ್ ಇತ್ಯಾದಿ. “ನಡಿ ಹೋಗೋಣ” ಅವಳ ಕೈ ಹಿಡಿದು ಕರೆದುಕೊಂಡು ಸ್ಟಾಫ್ ರೂಮಿಗೆ ಪ್ರವೇಶಿಸುತ್ತಿದ್ದಾಗಲೇ ಎಡವಿದಳು. ಅಷ್ಟು ಕತ್ತಲು. ಒಂದೆರೆಡು ನಿಮಿಷವಾದ ನಂತರವೇ ಅಲ್ಲಿ ಎಲ್ಲವೂ ಕಾಣಿಸುವುದು. “ಒಂದ್ನಿಮಿಷ ನೀನಿಲ್ಲಿ ಕುಳಿತಿರು, ಸೈನ್ ಹಾಕಿ ಬರುತ್ತೇನೆ.”
“ಫ್ಯಾನ್ ಹಾಕ್ತೀಯಾ, ಬಹಳ ಸೆಖೆ.”
ಸ್ವಿಚ್ ಒತ್ತಿದೆ. ಫ್ಯಾನ್ ತಿರುಗಿತು. ಅಂದ್ರೆ ಕರೆಂಟ್ ಇದೆ ಎಂದಾಯ್ತು. ಆದ್ರೆ ಗಾಳೀನೆ ಬರ್ಲಿಲ್ಲ. 
“ಇದೇನೆ?”ಕೇಳಿದಳು ಗೆಳತಿ. ಅಲ್ಲಿಯೇ ಕುಳಿತಿದ್ದ ನನ್ನ ಕೊಲೀಗ್ ತಮ್ಮ ಬ್ಯಾಗಿನಿಂದ ಬೀಸಣಿಗೆ ತೆಗೆದುಕೊಟ್ಟು “ತಗೊಳ್ಳಿ, ಗಾಳಿ ಬೀಸಿಕೊಳ್ಳಿ. ನಮ್ಮಲ್ಲಿ ಕೆಲವು ವಸ್ತುಗಳನ್ನು ಇಟ್ಟಿರುವುದು ಅಲಂಕಾರಕ್ಕಾಗಿ ಮಾತ್ರ” ಎಂದರು. ಅದಕ್ಕವಳು ನಕ್ಕು, “ಪರವಾಗಿಲ್ಲ ಬಿಡಿ” ಎಂದಳು.
ನಾನು ಸೈನ್ ಮಾಡಿ ಬರುವಷ್ಟರಲ್ಲಿ ಅವಳು ಹೊರಗೆ ನಿಂತಿದ್ದಳು. “ಥೂ, ಎಂಥಾ ದುರ್ವಾಸನೆ? ಅದು ಹೇಗೆ ಇಲ್ಲಿ ಕುಳಿತ್ಕೋತಿರೊ ನಾ ಕಾಣೆ.”
”ನಾನೇನು ಮಾತಾಡಲಿಲ್ಲ. ಅಷ್ಟರಲ್ಲಿ ಕ್ಲೀನ್ ಮಾಡುವ ನಿಂಗಿ ಕಾಣಿಸಿಕೊಂಡಳು. “ನಿಂಗಿ, ಸರಿಯಾಗಿ ನೀರು ಹಾಕಿ ತೊಳೆದು ಫಿನಾಯಿಲ್ ಹಾಕು.”ಹರಿಹಾಯ್ದಳು. “ನೀರನ್ನು ಎಲ್ಲಿಂದ ತರ್ಲವ್ವ? ಪ್ರಿನ್ಸಿಪಾಲ್‍ರಿಗೆ ಹೇಳಿ ಇಲ್ಲೇ ಒಂದು ನಲ್ಲಿ ಹಾಕ್ಸಿ ಬಿಡಿ.”
 ನನ್ನ ಗೆಳತಿಯತ್ತ ತಿರುಗಿ ನೋಡಿ “ಇವರದ್ದು ಐಎಎಸ್ ಗ್ರೇಡ್. ಈ ಕೆಲಸ ಇನ್ನೂ ಉತ್ತಮವಾಗಿರುತ್ತೆ,” ಎಂದೆ.
ಕ್ಲಾಸಿಗೆ ಹೊರಟೆ. “ನಾನೂ ಬರ್ತೀನಿ” ಅಂದಳು.
 “ಸರಿ ಬಾ” ಎಂದು ಅವರಿವರ ಬಳಿ ಚಾಕ್‍ಪೀಸ್ ಬೇಡಿ, ಪೂರ್ತಿ ಹರಿದು ಹೋಗಿರದ ಡಸ್ಟರ್ ಹಿಡಿದು, ತರಗತಿಯೊಳಗೆ ಪ್ರವೇಶಿಸಿದೆ. ಕ್ಲಾಸಿನಲ್ಲಿ ಹುಯಿಲೊ ಹುಯಿಲು. ಅದನ್ನು ನಿಲ್ಲಿಸಿ, ಅಟೆಂಡೆನ್ಸ್ ಹಾಕಲಾರಂಭಿಸಿದೆ. ನೂರಿಪ್ಪತ್ತು ಹುಡುಗರ ತರಗತಿಯದು. ಪಾಠ ಮಾಡಿ ಹೊರ ಬಂದಾಗ ನನಗಿಂತ ಹೆಚ್ಚಾಗಿ ನನ್ನ ಗೆಳತಿ ಸುಸ್ತೊ ಸುಸ್ತು. ಮೇಲೆ ಹಾಕಿದ್ದ ಜಿಂಕ್ ಶೀಟ್ ಕಾದು ಹೋಗಿತ್ತು. ಕೆಲವು ಕಡೆ ಶೀಟ್ ಒಡೆದು ಹೋಗಿದ್ದು, ಅದರ ಮೂಲಕ ಸೂರ್ಯ ತನ್ನ ಪ್ರತಾಪವನ್ನು ತೋರಿಸುತ್ತಿದ್ದ. ಗೋಡೆಗಳಲ್ಲೆಲ್ಲಾ ಬಿರುಕು. ಗಾಳಿ ಇಲ್ಲ, ಬೆಳಕಿಲ್ಲ, ಕಪ್ಪು ಹಲಗೆಯ ಮೇಲೆ ತೂತೋ ತೂತು. ಕಸ ಗುಡಿಸಿ ಅದೆಷ್ಟು ತಿಂಗಳುಗಳಾಗಿದ್ದವೋ! ಹುಳು ಹುಪ್ಪಟೆಗಳು ತಮ್ಮ ವಾಸ ಸ್ಥಾನವನ್ನು ಮಾಡಿಕೊಂಡಿದ್ದವು.
“ನೀನು ಬರೀತಿದ್ದದ್ದು ನನಗಂತೂ ಏನೂ ಕಾಣಿಸಲಿಲ್ಲ. ನಿನ್ನ ಸ್ಟೂಡೆಂಟ್ಸ್ ಅದು ಹೇಗೆ ಬರ್ಕೊಂಡ್ರೊ ನನಗಂತೂ ಗೊತ್ತಿಲ್ಲ. ಅದು ಹೇಗೆ 120 ಜನರ ಅಟೆಂಡೆನ್ಸ್ ಹಾಕ್ತೀಯೊ. ಬಹುಶಃ ನಿನಗೆ ಕುತ್ತಿಗೆ ನೋವು ಅದಕ್ಕೆ ಬಂದಿರಬೆಕು. ಗಂಟಲು ಜೋರಾಗೆ ಇದೆ. ಆದ್ರೆ ಹೀಗೆ ಕಿರುಚುತ್ತಾ ಇದ್ರೆ ನಾಲ್ಕೇ ವರ್ಷ ಬರೋದು. ಆ ಮಾನವ ಪ್ರಾಣಿಗಳನ್ನು, ಅದೇ ನಿನ್ನ ಆ ತಂಟೆಕೋರ ವಿದ್ಯಾರ್ಥಿಗಳನ್ನು ಅದು ಹೇಗೆ ಸುಧಾರಿಸ್ತೀಯೊ ನಾ ಕಾಣೆ. ಅಬ್ಬಾ ನಿಜಕ್ಕೂ ಸಾಹಸವೇ” ಉದ್ಗರಿಸಿದಳು. ನಸುನಕ್ಕೆ.
“ಲ್ಯಾಬ್ ನೋಡೋಣ ನಡೆ”ಎಂದಳು. ಬಾಟನಿ ಲ್ಯಾಬ್‍ನ ಬಳಿ ಹೋದಾಗ ಆ ಲೆಕ್ಚರರ್ ಹೊರಗಡೆಯೇ  ನಿಂತಿದ್ದರು. ನನ್ನ ಗೆಳತಿಯ ಇಚ್ಛೆಯನ್ನು ಅವರಿಗೆ ತಿಳಿಸಿದಾಗ, “ಇವತ್ತು ಬೇಡ ಮೇಡಮ್ ಬೇರೆ ದಿನ ಕರೆದುಕೊಂಡು ಬನ್ನಿ” ಎಂದರು. ‘ಸೋಮಾರಿಗಳು’ ಗೊಣಗಿದಳು ಸ್ನೇಹಿತೆ. “ಏನಾಯ್ತು?” ಕೇಳಿದೆ, “ಹಾವು ಸೇರ್ಕೊಂಡಿದೆ ಮೇಡಮ್. ಹಾವಾಡಿಗನಿಗೆ ಹೇಳಿ ಕಳ್ಸಿದ್ದೀವಿ. ಇನ್ನೂ ಬಂದಿಲ್ಲ. ಹಾಗಾಗಿ ನಾವೆಲ್ಲಾ ಹೊರಗೆ. ಪ್ರಾಣಿಶಾಸ್ತ್ರದ ಲ್ಯಾಬ್‍ಗೆ ಹೋಗೋದು ಬಿಟ್ಟು ಇಲ್ಲೇಕೆ ಬಂತೋ?” ಉತ್ತರ ಸಿಕ್ಕಿತು. 
ಕೆಮಿಸ್ಟ್ರಿ ಲ್ಯಾಬ್‍ನ ಹೊರಗಡೆಯೇ  ಮುಖ್ಯಸ್ಥರು ಸಿಕ್ಕರು. ಗೆಳತಿಯನ್ನು ಪರಿಚಯಿಸಿ ಬಂದ ವಿಷಯ ತಿಳಿಸಿದೆ. “ಅಯ್ಯೋ ಮೇಡಮ್ ನೆನ್ನೆ ಜೋರಾಗಿ ಮಳೆ ಬಂದ ಕಾರಣ ಒಂದೆಡೆ ಗೋಡೆ ಬಿರುಕು ಬಿಟ್ಟಿದೆ. ಇನ್ನೊಂದು ಕಡೆ ಛಾವಣಿ ಕುಸಿದಿದೆ. ಎಲ್ಲಿ ಶೀಟ್ ಬಿದ್ದೋಗುತ್ತೋ ಎಂದು ಹೆದರಿ ವಿದ್ಯಾರ್ಥಿಗಳನ್ನು ಹೊರಗೆ ಕಳಿಸಿ ನಾವೂ ಇಲ್ಲಿಯೇ ನಿಂತಿದ್ದೇವೆ” ಎಂದರು. 
ಸರಿ, ಇನ್ನೇನು ಮಾಡುವುದು. ಪ್ರಾಣಿಶಾಸ್ತ್ರದ ಲ್ಯಾಬ್‍ಗೆ ಹೋದೆವು. ಧೂಳೊ ಧೂಳು. ಅಲ್ಲಿ ಕೆಲವು ಬಾಟಲಿಗಳು, ಕೆಲವು ಖಾಲಿ, ಕೆಲವುಗಳಲ್ಲಿ ಮಾತ್ರ ಪ್ರಾಣಿಗಳು. “ದುಡ್ಡೇ ರಿಲೀಸ್ ಮಾಡಲ್ಲ ಮೇಡಮ್, ಸ್ಪೆಸಿಮನ್ಸ್ ತಂದಿಡೋಕೆ ಆಗ್ತಾ ಇಲ್ಲ” ಅಂದರು ಆ ವಿಭಾಗದ ಮುಖ್ಯಸ್ಥರು.
ಹೊರಗೆ ಬಂದು “ಫಿಸಿಕ್ಸ್ ಲ್ಯಾಬ್ ಬಾಕಿ ಇದೆ” ಎಂದೆ. “ಬೇಡ ನಡಿಯೇ ಹೋಗೋಣ. ನಿಮ್ಮ ಪ್ರಿನ್ಸಿ ಪರಿಚಯ ಮಾಡಿಕೊಡು” ಎಂದಳು. 
ಬೇಡ ಎನ್ನುವ ಮನಸ್ಸಾದರೂ ಕರೆದುಕೊಂಡು ಹೊರಟೆ. ಛೇಂಬರ್ ಪ್ರವೇಶಿಸಿ ನಮಸ್ಕಾರ ಹೇಳುವಷ್ಟರಲ್ಲಿಯೇ “ಏನ್ ಮೇಡಮ್, ಕಾಲೇಜಿಗೆ ಇಷ್ಟೊತ್ತಿಗೆ ಬಂದರೆ ಹೇಗೆ? ಹೊತ್ತು ಗೊತ್ತು ಇಲ್ವಾ? ಮಕ್ಕಳ್ಗೆ ಪಾಠ ಹೋಗೊಲ್ವಾ?” ರೇಗಿದರು. 
ಸಹಿ ಮಾಡಲು ನಾನು ಬಂದಾಗಲೂ ಕಾಲೇಜಿಗೆ ಬರದೆ, ಕ್ಲಾಸ್ ತೆಗೆದುಕೊಳ್ಳದೆ, ನನ್ನ ಮೇಲೆ ರೇಗಾಡಿದ್ದು ನೋಡಿ ಸಿಟ್ಟು ಬಂದರೂ ಸಹಿಸಿ ನಗುತ್ತಾ, “ಆಗಲೇ ಬಂದು ಸಹಿ ಮಾಡಿ, ಕ್ಲಾಸ್ ಮುಗಿಸಿ ಬರ್ತಾ ಇದ್ದೀನಿ. ಇವಳು ನನ್ನ ಗೆಳತಿ ಪರಿಚಯಿಸೋಣ ಎಂದು ಬಂದೆ” ಉತ್ತರಿಸಿದೆ. 
ಕಾಟಾಚಾರಕ್ಕೆ ನಮಸ್ಕರಿಸಿ ನನ್ನತ್ತ ತಿರುಗಿ, “ಕ್ಲಾಸ್ ಇದೆಯೇನೊ ತಗೊ ಹೋಗಿ, ಹರಟೆ ಹೊಡೆಯುತ್ತಾ ಕೂರಬೇಡಿ” ಒರಟಾಗಿಯೇ ನುಡಿದರು. 
“ಏನೇ ಇವರು ಈ ತರಹ. ನೀನ್ ನೋಡಿದ್ರೆ ಹಗಲುರಾತ್ರಿ ಕಷ್ಟ ಪಡ್ತೀಯಾ, ಇವರು ಒಂದೇ ಮಾತಿನಲ್ಲಿ. . . . . ” ಪೂರ್ತಿ ಮುಗಿಸಲು ಬಿಡದೆ, “ಬಾ ಅವೆಲ್ಲಾ ಸರ್ವೇ ಸಾಮಾನ್ಯ” ಕರೆದುಕೊಂಡು ಲೈಬ್ರರಿಗೆ ಹೋದೆ. “ನೀನು ಹೊರಗಿರು 5 ನಿಮಿಷದಲ್ಲಿ ಬರುತ್ತೇನೆ” ಎಂದು ಅವಳನ್ನು ಸಾಗಹಾಕಿದೆ.
     ಹೊರಗಡೆ ಬಂದ ಮೇಲೆ “ಟೀ ಕುಡಿಯೋಣ್ವಾ” ಕೇಳಿದಳು. ಕ್ಯಾಂಟೀನ್‍ಗೆ ಹೋದೆವು. ಕ್ಯಾಂಟೀನ್ ನೋಡಿದವಳೆ ನನ್ನ ಕೈ ಹಿಡಿದು ದರದರ ಹೊರಗೆ ಎಳೆತಂದು, “ನೀರಿನಲ್ಲಿ ಹುಳುಗಳು ತೇಲ್ತಾ ಇವೆ, ಇಲ್ಲಿ ಟೀ ಕುಡೀತೀಯಾ? ಬದುಕಬೇಕು ಎಂದು ಆಸೆ ಇಲ್ವಾ? ನಡಿ ಬೇರೆ ಯಾವುದಾದರೂ ಹೋಟೆಲ್‍ಗೆ ಹೋಗೋಣ” ಎಂದಳು.
    ಹಿಂತಿರುಗಿ ಬಂದ ಮೇಲೆ, “ಇನ್ನೊಂದು ಕ್ಲಾಸಿದೆ ಬರ್ತೀಯಾ?” ಕೇಳಿದೆ. “ಬೇಡಮ್ಮಾ, ನಾನಿಲ್ಲೇ ಇರ್ತೀನಿ ಯಾವುದಾದರೂ ಪುಸ್ತಕ ಕೊಟ್ಟು ಹೋಗು.”
“ಸರಿ” ಎಂದು ಹೊರಟೆ. ನನ್ನ ಕ್ಲಾಸಿನಿಂದ ಸ್ಟಾಫ್ ರೂಮ್ ಕಾಣಿಸುತ್ತಿತ್ತು. 10 ನಿಮಿಷ ಆಗುವಷ್ಟರಲ್ಲಿ ನನ್ನ ಗೆಳತಿ ಹೊರಗೆ ಬಂದು ನಿಂತದ್ದು ಕಾಣಿಸಿತು. ‘ಅಯ್ಯೊ ಏನು ಮಾಡುವುದು’ ಎಂದುಕೊಳ್ಳುವಷ್ಟರಲ್ಲಿ ಇನ್ನಿಬ್ಬರು ಕೊಲೀಗ್ಸ್ ಹೊರಗೆ ಬಂದು ಅವಳೊಂದಿಗೆ ಮಾತನಾಡುವುದು ಕಾಣಿಸಿ ಸಮಾಧಾನವಾಯಿತು.
     ಹೊರಗೆ ಬಂದಿದ್ದಕ್ಕೆ ಅವಳು ನೀಡಿದ ಕಾರಣವಿಷ್ಟು. “ನೀನು ಹೋದ ಮೇಲೆ ಓದಲು ಪ್ರಯತ್ನಿಸಿದೆ. ಒಂದು ಕಡೆ ಧೂಳು, ಕತ್ತಲೆ, ದುರ್ವಾಸನೆ. ಅದಕ್ಕೂ ಮಿಗಿಲಾಗಿ ಆಹಾ! ನಿಮ್ಮ ಕೆಲವು ಮೇಷ್ಟ್ರುಗಳ ಮಾತೊ, ಆ ಶಿವನಿಗೇ ಪ್ರೀತಿ!  ಕನಿಷ್ಟ ಪಕ್ಷ ಹೆಣ್ಣು ಮಕ್ಕಳು ಇದ್ದಾರೆ ಅಂತಾದ್ರೂ ಅವರ ನಾಲಿಗೆ ಹಿಡಿತದಲ್ಲಿಟ್ಟುಕೊಂಡಿರಬೇಕಿತ್ತು. ಅದಕ್ಕೆ ಹೊರ ಬಂದೆ. ಸಧ್ಯ ಈ ಇಬ್ರು ಮೇಷ್ಟ್ರುಗಳು ಹೊರಗೆ ಬಂದು ನನ್ನ ಜೊತೆ ನಿಂತರು. ಹೇಗೆ ಸಹಿಸ್ತೀಯೋ ಇದೆಲ್ಲಾ?”
    “ಸರಿ, ನಡಿ ಹೊರಡೋಣ” ಎಂದು ಹೊರಡುವಷ್ಟರಲ್ಲಿ ಅಟೆಂಡರ್ ಬಂದು “ಮೇಡಮ್, ಪ್ರಿನ್ಸಿಪಾಲ್ ಕರೀತಿದ್ದಾರೆ” ಎಂದ. ವಾಪಸ್ಸು ಬಂದ ನಂತರ ಕೈಯಲ್ಲಿದ್ದ ಪೇಪರ್ ನೋಡಿ “ಏನು?” ಪ್ರಶ್ನಿಸಿದಳು. ಮಾತನಾಡದೆ ಮೆಮೊ ಅವಳ ಕೈಗಿತ್ತೆ.
     “ನಿಮ್ಮ ಧ್ವನಿ ವಿದ್ಯಾರ್ಥಿಗಳಿಗೆ ಕೇಳಿಸುತ್ತಿಲ್ಲ” ಎಂದು ಆಪಾದನೆ ಬಂದಿದೆ. ನೆನ್ನೆ ಕ್ಲಾಸ್ ಐದು ನಿಮಿಷ ಬೇಗ ಬಿಟ್ಟಿದ್ದೀರಿ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇಂದು ಹತ್ತು ನಿಮಿಷ ಕ್ಲಾಸ್ ತಡವಾಗಿ ಬಿಟ್ಟು ಇಕನಾಮಿಕ್ಸ್ ಮೇಷ್ಟ್ರಿಗೆ ತೊಂದರೆ ಮಾಡಿದ್ದೀರಿ. ಇದಕ್ಕೆಲ್ಲಾ 3 ದಿನಗಳೊಳಗೆ ಸಮಜಾಯಿಷಿ ನೀಡದಿದ್ದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.”- ಮೆಮೊ ಸಾರಾಂಶ.
ಶಾಕ್ ಹೊಡೆದಂತಾದಳು, ಗೆಳತಿ. “ಇವೆಲ್ಲಾ ಮಾಮೂಲಿನ ವಿಷಯಗಳು. ಗಾಬರಿಯಾಗಬೇಡ ನಡಿ” ಎಂದೆ.
  “ಒಳ್ಳೆ ತುಘಲಕ್ ದರ್ಬಾರಾಯ್ತಲ್ಲ” ಗೆಳತಿಯ ಉವಾಚ. ಮನೆ ತಲುಪುವವರೆಗೂ ಗೆಳತಿ ಮಾತನಾಡಲೇ ಇಲ್ಲ. ಮನೆ ತಲುಪಿದ ಮೇಲೆ ಸೋಫಾ ಮೇಲೆ ಕುಳಿತು, “ಆಂಟಿ, ಒಂದು ಲೋಟ ನೀರು” ಕೂಗಿದಳು. 
ನೀರು ತಂದುಕೊಟ್ಟ ಅಮ್ಮ, “ಹೇಗಿತ್ತಮ್ಮಾ ಕಾಲೇಜಿನ ಅನುಭವ?” ಕೇಳಿದರು. 
“ಅಯ್ಯೋ ಆಂಟಿ ಆ ಕಥೆ ಯಾಕೆ ಕೇಳ್ತೀರಾ? ಕೆಲಸಾನೆ ಮಾಡದೆ 10 ಲಕ್ಷ ಕೊಡ್ತೀನಿ ಅಂದ್ರು ಆ ಕೆಲಸ ಬೇಡಪ್ಪಾ.” 
ತನ್ನ ಕಿವಿ ಹಿಡಿದುಕೊಳ್ಳುತ್ತಾ ನನ್ನ ಕಡೆ ತಿರುಗಿ, “ಸಾರಿ” ಎಂದಳು. ನಾನು ಎಂದಿನ ಬಿನಾಕಾ ಸ್ಮೈಲ್ ನೀಡಿದೆ. 

-      ಸುಧಾ ಜಿ         

1 ಕಾಮೆಂಟ್‌:

Rajiv Magal ಹೇಳಿದರು...

ಮೇಡಮ್ ಅವರ ಸ್ನೇಹಿತರಿಗಾದ ಅನುಭವ ಸೊಗಸಾಗಿದೆ! ಹಾಳು ಬಿದ್ದ ಜಾಗದ ಭೇಟಿಯಿ೦ದ ಆರ೦ಭವಾದ ಅನುಭವ ಕೊನೆಯವರೆಗೂ ನೇತ್ಯರ್ಥಕವಾಗಿ ಕೂಡಿದ್ದು ಅತಿರೇಕವೇನೋ ಅನಿಸಿದೆ! ಇ೦ತಹ ಸನ್ನಿವೇಶದಲ್ಲಿ ನೌಕರಿ ಮಾದುವ ಅಧ್ಯಾಪಕರು ಹಾಗು ಇ೦ದು ಪ್ರಜಾಪ್ರಭುತ್ವದ ನೆರಳಿನಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳು ಕಣ್ಮುಚ್ಚಿ ಕುಳಿತಿರುವದನ್ನು ನ೦ಬಲು ಅಸಾಧ್ಯವೇ! ಇ೦ತಹ ಅಧೋಗತಿಯಲ್ಲಿ ವ್ಯಾಸ೦ಗ ಮಾಡುತ್ತಿರುವ, ನೌಕರಿ ಮಾಡುತ್ತಿರುವ ಜನಾ೦ಗದ ಕಷ್ಟ-ಕಾರ್ಪಣ್ಯಗಳ ವಿವರಣೆಯ ಕಥೆ ಸೊಗಸಾಗಿದೆ! ಒಟ್ಟಿನಲ್ಲಿ ಎಲ್ಲದರಲ್ಲಿಯೂ Negative - ಜ್ಕೀರ್ಣಿಸಿಕೊಳ್ಳುವುದು ಕೊ೦ಚ ಕಠಿಣವೇ!