Pages

ಶಾಲಾ ಡೈರಿ - 1


ಅಂದು ಶನಿವಾರ. ಅನಿರೀಕ್ಷಿತವಾಗಿ ಎದುರಾದ ಸಮಸ್ಯೆಯೊಂದರಿಂದ ಅರ್ಧ ಗಂಟೆ ಶಾಲೆಗೆ ತಡವಾಗಿ ಹೋದೆ. ತಾಲ್ಲೂಕಿಗೆ ಹೊಸದಾಗಿ ಬಂದ ಬಿ.ಇ.ಓ ರವರು ಅಂದೇ ಕಾಯುತ್ತ ಕುಳಿತಿದ್ದರು. ಆ ದುರ್ವಿಧಿಗೆ ಶಪಿಸುತ್ತ ತರಗತಿಯೊಳಗೆ ಹೋದೆ. ನಿರೀಕ್ಷಿಸಿದಂತೆ ಅಧಿಕಾರಿಯ ದರ್ಪದ ಕೋಪದ ಮುಖಮುದ್ರೆ ದರ್ಶನವಾಯಿತು. ಮಕ್ಕಳ ಮುಂದೆ ಇರಿಸುಮುರುಸಾಯಿತು. ಆಗಲೇ ದನಿ ಹೊರಟಿತು "ಯಾಕ್ರಿ ಇಷ್ಟು ಲೇಟು...ಮಕ್ಕಳು ಬಂದು ನಿಮಗೆ ಕಾಯಬೇಕಾ" ಎಂದರು. ನಿಂತ ನೆಲ ಕುಸಿದಂತೆ ಭಾಸವಾಯಿತು. ನಾ ದಂಡಿಸುವ ಮಕ್ಕಳ ಮುಂದೆ ಅವರು ನನ್ನನ್ನು ದಂಡಿಸಿದುದು ಅರಗಿಸಿಕೊಳ್ಳಲಾಗಲಿಲ್ಲ. ಕಾರಣವನ್ನು ಕೇಳದೆ ದಿಢೀರೆಂದು ಆ ರೀತಿ ಪ್ರಶ್ನಿಸಿದ್ದು ಮನಕ್ಕೆ ಘಾಸಿಯಾಯಿತು. ನಂತರ ತಡವಾಗಿ ಬಂದದಕ್ಕೆ ಕ್ಷಮೆ ಕೇಳಿದೆ. ರೂಢಿಯಂತೆ ತಪಾಸಣೆ ಶುರುಮಾಡಿದರು, ಮಕ್ಕಳ ಕಲಿಕೆ ಪರೀಕ್ಷಿಸಿದರು. ಮಕ್ಕಳ ಉತ್ತರಗಳನ್ನು ಕೇಳಿ ಖುಷಿಯಾದರು. ಮಧ್ಯದಲ್ಲಿ ನಾನು ಅವರಿಗೆ ಟೀ ಬಿಸ್ಕತ್ ನೀಡಲು ಅಡುಗೆ ಮನೆಗೆ ಹೋದೆ. ಹಿಂದಿರುಗಿ ಬಂದಾಗ ಅವರ ಮುಖಭಾವ ಬದಲಾಗಿತ್ತು. ಟೀ ಕುಡಿದು ಹೊರಗೆ ಬಂದಾಗ ನಗುಮುಖದಿಂದ  ಇದ್ದದ್ದನ್ನು ಕಂಡು ನಾನು ತಡವಾಗಿ ಬಂದುದಕ್ಕೆ ಹೆಣ್ಣುಮಕ್ಕಳ ಸಮಸ್ಯೆ ಕಾರಣವೆಂದು  ಹೇಳಿದೆ. ಆಗ ಆ ಅಧಿಕಾರಿ “ನನ್ನ ವರ್ತನೆಗೆ ಬೇಜಾರು ಮಾಡಿಕೊಳ್ಳಬೇಡಮ್ಮ. ನೀನು ಉತ್ತಮ ಶಿಕ್ಷಕಿ ಎಂದು ನಿನ್ನ ಮಕ್ಕಳು ಸಾಬೀತುಮಾಡಿದ್ದಾರೆ. ಯಾವುದೋ ಕೆಲಸದ ಒತ್ತಡಗಳಿಂದ ನಿನ್ನ ಮೇಲೆ ಕೋಪಿಸಿಕೊಂಡೆ” ಎಂದರು. ಇದು ನಡೆದದ್ದು ತರಗತಿ ಹೊರಗೆ. “
ಪುನಃ ತರಗತಿಯೊಳಗೆ ಹೋಗಲು, ಮಕ್ಕಳನ್ನು ಎದುರಿಸಲು ಧೈರ್ಯ ಸಾಲದಿದ್ದರೂ ಹೋದೆ. “ಬಿಇಓ ಬಂದು ಎಷ್ಟೊತ್ತಾಯಿತು ಕಣ್ರೋ!” ಎಂದೆ. ಅವರ ಕಣ್ಣುಗಳು ಎಂದಿನಂತೆ ನನ್ನ ಪ್ರೀತಿ ಗೌರವದಿಂದಲೇ ಕಂಡವು ...ಸಮಾಧಾನವಾಯಿತು. “ಸ್ವಲ್ಪ ಹೊತ್ತಾಗಿತ್ತು ಅಷ್ಟೆ ಮಿಸ್. ನಿಮ್ ಮಿಸ್ ಯಾವಾಗಲೂ ಲೇಟು ಬರ್ತಾರ ಅಂತ ಕೇಳಿದ್ರು ಮಿಸ್... ಇಲ್ಲ ಸರ್ ಬೇಗನೆ ಬರ್ತಾರೆ, ಇವತ್ತೇ ಯಾಕೋ ಲೇಟು ಅಂತ ಹೇಳಿದ್ವಿ ಮಿಸ್. ಏನೊ ಕೆಲಸ ಬಿದ್ದಿರುತ್ತೆ ಅಲ್ವ ಮಿಸ್ .. ಜೊತೆಗೆ ನಮ್ಮೂರಿಗೆ ಬಸ್ಸಿಲ್ಲ.  ಈ ಬಿಇಓ ಇವತ್ತೇ ಬರಬೇಕಾ?” ಅಂತ ಕೋಪ ತೋರಿಸಿದರು. ಆ ಪುಟ್ಟ ಮಕ್ಕಳು ನಾ ತಡವಾಗಿ ಬಂದಿದ್ದನ್ನು ತಪ್ಪೆಂದೇ ಭಾವಿಸಿರಲಿಲ್ಲ. ನಾನು ಎಷ್ಟೋ ಬಾರಿ ಮಕ್ಕಳನ್ನು ತಡವಾಗಿ ಬಂದಿದಕ್ಕೆ ದಂಡಿಸಿದ್ದೆ. (ಕಾರಣ ಕೇಳಿ ಸಕಾರಣವಿದ್ದರೆ ಕ್ಷಮಿಸುತ್ತಿದ್ದೆ, ಬೇಜವಾಬ್ದಾರಿತನಕ್ಕೆ ದಂಡಿಸಿದ್ದೆ) ಈಗ ಅವರು ಕಾರಣ ಕೇಳದೆಯೇ ನನ್ನನ್ನು ಕ್ಷಮಿಸಿದ್ದರು. ನಾನು ಅವರ ಶಿಕ್ಷಕಿ ಎಂದು ಆ ಮುದ್ದು ಮಕ್ಕಳು ನನ್ನನ್ನು ವಿಮರ್ಶೆಗೆ ಒಳಪಡಿಸಲಿಲ್ಲ. ಅವರ ಮಿಸ್ಸು ಏನು ಮಾಡಿದರೂ ಅದು ಸರಿ ಇರುತ್ತದೆ. ಅದಕ್ಕೆ ಸರಿಯಾದ ಕಾರಣವಿರುತ್ತದೆ ಎಂದು ಗಾಢವಾಗಿ ನಂಬಿದ್ದವು ಆ ಪುಟಾಣಿ ಮಕ್ಕಳು...ಆ ನಂಬಿಕೆಯನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಅಂದೇ ನಿರ್ಧರಿಸಿದೆ.
                                                       –   ಉಷಾಗಂಗೆ

ಕಾಮೆಂಟ್‌ಗಳಿಲ್ಲ: