“ಮಾನವ ಕುಲಕ್ಕೆ ಮಾಡುವ ಸೇವೆಯೇ ನಿಜವಾದ ಸೇವೆ” ಎಂದು ದೃಢವಾಗಿ ನಂಬಿದ್ದ ಸಿಸ್ಟರ್ ನಿವೇದಿತಾ ಜನಿಸಿದ್ದು ಅಕ್ಟೋಬರ್ 28, 1867ರಲ್ಲಿ. ಐರ್ಲೆಂಡ್‍ನ ಮೇರಿ ಇಸಬೆಲ್ ಮತ್ತು ಸ್ಯಾಮ್ಯುಯೆಲ್ ರಿಚ್ಮಂಡ್ ನೊಬೆಲ್‍ರವರ ಮಗಳಾಗಿ ಜನಿಸಿದ ಮಾರ್ಗರೆಟ್ ಎಲಿಜಬೆತ್ ನೊಬೆಲ್, ತಮ್ಮ ತಂದೆಯಿಂದ ಜನಸೇವೆ ಮಾಡುವುದನ್ನು ಕಲಿತರು. ಅವರಿಗೆ ಸಂಗೀತ ಮತ್ತು ಕಲೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ತಮ್ಮ ಶಿಕ್ಷಣವನ್ನು ಮುಗಿಸಿದ ಅವರು, ಶಿಕ್ಷಕಿಯಾಗಿ ಕೆಲಸ ಮಾಡಲಾರಂಭಿಸಿದರು. ಒಂದು ದಶಕದ ಕಾಲ ಅದೇ ವೃತ್ತಿಯಲ್ಲಿ ಮುಂದುವರೆದರು.
ಆರಂಭದಿಂದಲೂ ಉತ್ಸಾಹದ ಚಿಲುಮೆಯಾಗಿದ್ದ ಅವರು 8 ವರ್ಷವಿದ್ದಾಗಲಿಂದಲೇ ಧರ್ಮವೆಂದರೆ ಕೇವಲ ಕೆಲವು ಸಿದ್ಧಾಂತಗಳನ್ನು ನಂಬುವುದಲ್ಲ ಬದಲಿಗೆ ಜ್ಞಾನಸಾಕ್ಷಾತ್ಕಾರ ಮಾಡಿಸುವ ಅಮೂಲ್ಯ ಬೆಳಕು ಎಂದು ನಂಬಿದ್ದರು. 1895ರಲ್ಲಿ ಸ್ವಾಮಿ ವಿವೇಕಾನಂದರನ್ನು ಲಂಡನ್‍ನಲ್ಲಿ ಭೇಟಿ ಮಾಡಿದರು ಮತ್ತು ಅವರ ವ್ಯಕ್ತಿತ್ವಕ್ಕೆ ಮಾರುಹೋದರು. ನಿವೇದಿತಾರವರ ಸೇವಾ ಮನೋಭಾವವನ್ನು ಅರಿತ ವಿವೇಕಾನಂದರು ಅವರನ್ನು ಭಾರತಕ್ಕೆ ಆಹ್ವಾನಿಸಿದರು.
ಅವರ ಕರೆಗೆ ಓಗೊಟ್ಟು ಸಿಸ್ಟರ್ ನಿವೇದಿತಾರವರು ಭಾರತಕ್ಕೆ ಜನಸೇವೆ ಮಾಡಲು ಮುಖ್ಯವಾಗಿ ಭಾರತೀಯ ಮಹಿಳೆಯರಿಗಾಗಿ ಕೆಲಸ ಮಾಡಲು ಬಂದರು. ಸೇವೆ ಮಾಡಲು ಹೊರಟ ಅವರಿಗೆ ದೇಶದ ಗಡಿ ಅಡ್ಡಬರಲಿಲ್ಲ. ವಿವೇಕಾನಂದರು ಅವರಿಗೆ ನಿವೇದಿತಾ ಎಂಬ ಹೆಸರನ್ನು ನೀಡಿದರು. ಭಾರತದಲ್ಲಿ ಎಲ್ಲರಿಗೂ ಸಿಸ್ಟರ್ ನಿವೇದಿತಾ ಎಂದೇ ಚಿರಪರಿಚಿತರಾದರು.
ಅವರು ಎರಡು ಅಂಶಗಳನ್ನು ನಂಬಿದ್ದರು. ಒಂದು ವಿಶ್ವಕಲ್ಯಾಣಕ್ಕಾಗಿ ಶ್ರಮಿಸುವುದು. ಇನ್ನೊಂದು ಸತ್ಯಕ್ಕಾಗಿ ಹುಡುಕಾಟ. ಸರಳ ಜೀವನವನ್ನು ನಡೆಸುತ್ತಿದ್ದ ನಿವೇದಿತಾರವರು ಹೆಣ್ಣುಮಕ್ಕಳಿಗಾಗಿ ಶಾಲೆ ಆರಂಭಿಸಿದರು. ಜೊತೆಗೆ ಮಹಿಳೆಯರ ಅಭಿವೃದ್ಧಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ವಿವಿಧ ವರ್ಗ, ಜಾತಿಗಳಿಗೆ ಸೇರಿದ ಹೆಣ್ಣುಮಕ್ಕಳನ್ನು ಒಂದೆಡೆಗೆ ಸೇರಿಸಲಾರಂಭಿಸಿದರು. ಕ್ರಮೇಣವಾಗಿ ಅವರು ಭಾರತ ಸ್ವಾತಂತ್ರ್ಯ ಚಳುವಳಿಯಲ್ಲೂ ತೊಡಗಿದರು. ಅವರ ಬರಹಗಳ ಮೂಲಕ, ಭಾಷಣಗಳ ಮೂಲಕ, ಕಾರ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು. ತಮ್ಮ ಆರೋಗ್ಯವನ್ನು ಕಡೆಗಣಿಸಿ ಜನಸೇವಾಕಾರ್ಯದಲ್ಲಿ ಮಗ್ನರಾದ್ದರಿಂದ ಅವರ ಆರೋಗ್ಯ ಹದಗೆಟ್ಟಿತು. ಜೊತೆಗೆ ವಿವೇಕಾನಂದರ ಅಕಾಲಿಕ ಮರಣ ಸಹ ಅವರನ್ನು ಜರ್ಜರಿತರನ್ನಾಗಿಸಿತು. 1911ರಲ್ಲಿ ಅಕ್ಟೋಬರ್ 13ರಂದು ಅವರು ಮರಣಹೊಂದಿದರು
- ಶೀಬಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ