Pages

ಲೇಖನ: "ಬಾಲ್ಯವಿವಾಹ"



“ಎಲ್ಲಿಯವರೆಗೆ ಜನರಲ್ಲಿ ಅಜ್ಞಾನ, ಮೌಢ್ಯತೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಮಕ್ಕಳಿಗೆ ಮಾರಕವಾಗಿರುವ ಮತ್ತು ಕಂಟಕವಾಗಿರುವ ಈ ಬಾಲ್ಯವಿವಾಹವನ್ನು ತಡೆಯಲಾಗುವುದಿಲ್ಲ.” ಪೋಷಕರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದಕ್ಕಾಗಿ ಹಾಗೂ ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವುದಕ್ಕೋಸ್ಕರ ಮಕ್ಕಳ ಭವಿಷ್ಯದೊಂದಿಗೆ ಆಟವಾಡಿ ಅವರ ಹಕ್ಕನ್ನೇ ಕಸಿದುಕೊಳ್ಳುತ್ತಿದ್ದಾರೆ. ಆಟವಾಡುವ ವಯಸ್ಸಿನಲ್ಲಿ ಅವರ ಕೊರಳಿಗೆ ಹಾರ ಹಾಕಿ ಅವರ ಶಿಕ್ಷಣ, ಆಸೆ, ಆಕಾಂಕ್ಷೆ, ಆರೋಗ್ಯ ಎಲ್ಲಕ್ಕೂ ಸಂಕೋಲೆ ಹಾಕುತ್ತಿದ್ದಾರೆ. ಕೂಸು ಹುಟ್ಟುವ ಮುಂಚೆ ಕುಲಾವಿ ಹಾಕುವಂತೆ ಮಗು ಅಮ್ಮನ ಗರ್ಭದಲ್ಲಿರುವಾಗಲೇ ಅದರ ಮದುವೆ ನಿಶ್ಚಯ ಮಾಡುವುದು ಎಷ್ಟು ವಿಪರ್ಯಾಸ. 
ಈ ಬಾಲ್ಯವಿವಾಹ ಪದ್ಧತಿ ಭಾರತದಲ್ಲಿ ಸ್ವಾತಂತ್ರ್ಯಪೂರ್ವದಿಂದಲೇ ಇತ್ತು. ಸ್ವಾತಂತ್ರ್ಯಾನಂತರದಲ್ಲಿಯೂ ಅದರ ಸಂಖ್ಯೆ ಕಡಿಮೆಯಾದರೂ ಇದು ಇನ್ನೂ ಹಲವಾರು ಭಾಗಗಳಲ್ಲಿ ಮುಂದುವರೆಯುತ್ತಿದೆ. ಭಾರತವಲ್ಲದೆ ಇತರೆ ಎಲ್ಲಾ ರಾಷ್ಟ್ರಗಳಲ್ಲೂ ಈ ಪದ್ಧತಿ ಇತ್ತು. ಯೂರೋಪ್‍ನಲ್ಲಿ ಈ ಪದ್ಧತಿಯನ್ನು ನಿರ್ಮೂಲನಗೊಳಿಸಲಾಗಿದೆ. ಆದರೆ ತೃತೀಯ ರಾಷ್ಟ್ರಗಳಲ್ಲಿ ಈಗಲೂ ವ್ಯಾಪಕವಾಗಿ ಕಂಡುಬರುತ್ತಿದೆ. 
ಈ ಪದ್ಧತಿಗೆ ನೂರಾರು ವರ್ಷಗಳ ಇತಿಹಾಸವಿದೆ. ಬಾಲ್ಯವಿವಾಹದಲ್ಲಿ ಎರಡು ರೀತಿಯಿವೆ. ಗಂಡು ಮತ್ತು ಹೆಣ್ಣು ಇಬ್ಬರೂ ಮಕ್ಕಳೇ ಆಗಿರುವುದು ಒಂದು ರೀತಿಯಾದರೆ, ಇನ್ನೊಂದರಲ್ಲಿ ಗಂಡು ವಯಸ್ಕನಾಗಿದ್ದು, ಹೆಣ್ಣುಮಕ್ಕಳ ವಯಸ್ಸು ಬಹಳ ಕಡಿಮೆ ಇರುತ್ತದೆ. 
ವೇದಗಳ ಕಾಲದಲ್ಲಿ ಅದರಲ್ಲೂ ಋಗ್ವೇದ ಕಾಲದಲ್ಲಿ “ವಿವಾಹದ ಸಮಯದಲ್ಲಿ ಹುಡುಗಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಂಪೂರ್ಣವಾಗಿ ಬೆಳವಣಿಗೆಯಾಗಿದ್ದಲ್ಲಿ ಮಾತ್ರ ವಿವಾಹಕ್ಕೆ ಯೋಗ್ಯಳು” ಎಂಬ ಉಲ್ಲೇಖವಿದೆ. ಆಗ ಹೆಣ್ಣುಮಕ್ಕಳಿಗೂ ಶಿಕ್ಷಣ ಕೊಡುತ್ತಿದ್ದುದ್ದರಿಂದ ಅವರಿಗೆ ತಮ್ಮ ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇತ್ತು ಎಂದು ತಿಳಿದುಬಂದಿದೆ. ಗೃಹಸೂತ್ರ ಮತ್ತು ಬೌಧಾಯನಗಳಲ್ಲೂ ಸಹ ಮದುವೆಯ ವಯಸ್ಸು ಎಂದರೆ ಪ್ರೌಢಾವಸ್ಥೆಯ ನಂತರವೇ ಎಂದು ತಿಳಿಸುತ್ತದೆ. 
6ನೇ ಶತಮಾನದ ನಂತರ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವುದನ್ನು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುವುದನ್ನು ತಡೆಯಲಾಯಿತು. ನಂತರ ವಿವಾಹದ ವಯಸ್ಸೂ ಸಹ ಕಡಿಮೆಯಾಗತೊಡಗಿತು. ನಂತರ ಬಂದ ಯಾಜ್ಞವಲ್ಕ್ಯ ಸ್ಮೃತಿ ಮತ್ತು ಪರಾಶರ ಸ್ಮೃತಿ ಇವುಗಳಲ್ಲಿ ಹೆಣ್ಣು ಮಕ್ಕಳಿಗೆ 5 ವರ್ಷವಿರುವಾಗ ವಿವಾಹ ಮಾಡಬೇಕೆಂದು ಹೇಳಿತು. ಹಾಗೇ ಮನು ಸ್ಮೃತಿ, ಮಹಾಭಾರತ ಮತ್ತು ವಿಷ್ಣುಪುರಾಣಗಳಲ್ಲಿಯೂ ಸಹ ಹುಡುಗಿಯ ವಯಸ್ಸು ಹುಡಗನ ವಯಸ್ಸಿಗಿಂತ ಮೂರುಪಟ್ಟು ಕಡಿಮೆಯಿರಬೇಕು ಎಂದು ತಿಳಿಸಿತು. ಈ ಬಾಲ್ಯ ವಿವಾಹ ಪದ್ಧತಿ ಹಿಂದೂಗಳಲ್ಲಲ್ಲದೆ, ಮಹಮ್ಮದೀಯರು ಮತ್ತು ಪಾರ್ಸಿಗಳಲ್ಲೂ ಕಂಡುಬರುತ್ತಿತ್ತು. ಕೆಲವೊಮ್ಮೆ ಕ್ರೈಸ್ತರಲ್ಲಿಯೂ ಇದು ಕಂಡುಬಂದಿದೆ. 
ಈ ಪದ್ಧತಿ ಬೆಳೆಯಲು ಹಲವಾರು ಕಾರಣಗಳು ಕಂಡುಬರುತ್ತವೆ. 
ಧರ್ಮಸಂಹಿತೆಗಳ ಪ್ರಕಾರ ಹೆಣ್ಣುಮಕ್ಕಳು ರಜಸ್ವಲೆಯಾಗುವ ಮುನ್ನ ವಿವಾಹ ಮಾಡಬೇಕಿತ್ತು. ಇಲ್ಲದಿದ್ದರೆ ಅವಳು ಪ್ರತಿಯೊಂದು ಬಾರಿ ಮುಟ್ಟಾದಾಗಲೂ, ಒಂದು ಮಗುವನ್ನು ಹತ್ಯೆ ಮಾಡಿದ ದೋಷ ತಾಯ್ತಂದೆಯರದ್ದಾಗುತಿತ್ತು. ಇದು ಬ್ರಹ್ಮಹತ್ಯಾದೋಷವೆಂದು ಪರಿಗಣಿಸಲಾಗುತ್ತಿತ್ತು. ಆದ್ದರಿಂದ, ಇದರಿಂದ ಮುಕ್ತಿ ಪಡೆಯಲು ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡುತ್ತಿದ್ದರು. 
ಇದರೊಂದಿಗೆ ಹಲವಾರು ಕಾರಣಗಳಿದ್ದವು. ಪೋಷಕರು ಬಡತನದ ಕಾರಣ ತಮ್ಮ ತುಂಬು ಕುಟುಂಬದಲ್ಲಿ ಮಕ್ಕಳಿಗೆ ಸರಿಯಾಗಿ ಆಹಾರವನ್ನು ಒದಗಿಸಲಾಗುತ್ತಿರಲಿಲ್ಲ. ಇದರಿಂದ ತಮ್ಮ ಮಕ್ಕಳ ವಿವಾಹವನ್ನು ಬೇಗನೆ ಮಾಡುತ್ತಿದ್ದರು. ಜೊತೆಗೆ, ತಿಳುವಳಿಕೆಯ ಕೊರತೆಯಿಂದ, ಈ ವಿವಾಹದಿಂದ ಯಾವ ರೀತಿಯ ದುಷ್ಪರಿಣಾಮವಾಗಬಹುದೆಂದು ಆಲೋಚಿಸದೆ ಮದುವೆಯನ್ನು ಮಾಡುತ್ತಿದ್ದರು. ಮೂರನೆಯದಾಗಿ, ವಧುದಕ್ಷಿಣೆ. ಅಂದರೆ ತಮ್ಮ ಸಂಸಾರ ನಿರ್ವಹಣೆಗೆ ಹೆಣ್ಣುಮಕ್ಕಳನ್ನು ಬೇರೆ ಶ್ರೀಮಂತರಿಗೆ ಕೊಟ್ಟು ಅವರಿಂದ ವಧುದಕ್ಷಿಣೆ ಪಡೆಯುತ್ತಿದ್ದರು. ನಾಲ್ಕನೆಯದಾಗಿ, ಹೊರಗಿನವರಿಂದ ಅಂದರೆ ಕೆಲವೊಮ್ಮೆ ಯುದ್ಧದ ಸಮಯದಲ್ಲಿ ಯೋಧರು ಹೆಣ್ಣುಮಕ್ಕಳನ್ನು ಸೆರೆಹಿಡಿದುಕೊಂಡು ಹೋಗುತ್ತಿದ್ದರು. ಇದರಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಬೇಗನೆ ವಿವಾಹ ಮಾಡುತ್ತಿದ್ದರು. ಐದನೆಯದಾಗಿ, ಶಾಶ್ವತವಾಗಿ ಮನೆಗೆಲಸಕ್ಕೆ ಅನುಕೂಲವಾಗಲು ಬೇಗ ಮದುವೆ ಮಾಡಿಕೊಳ್ಳುತ್ತಿದ್ದರು.
ಇದರ ದುಷ್ಪರಿಣಾಮಗಳು:
ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತದೆ. ಮದುವೆ ಎಂದರೆ ಏನು ಎಂದು ತಿಳಿಯದಿರುವಾಗಲೇ, ಅಂದರೆ ಆಟವಾಡುವ ವಯಸ್ಸಿನಲ್ಲಿಯೇ ಹಸೆಮಣೆಯೇರಿಸುವುದರಿಂದ ಅವರ ಮನಸ್ಸಿನ ಮೇಲೆ ಎಂತಹ ಪರಿಣಾಮ ಬೀರಬಹುದು. ಇದರಿಂದ ಅವರ ಬಾಲ್ಯದ ಆಟಪಾಠ, ನಲಿವು ಎಲ್ಲದರಿಂದ ವಂಚಿತರಾಗುತ್ತಾರೆ. ಅಲ್ಲದೆ, ವಯಸ್ಸಿಗನುಗುಣವಾದ ಆಸೆ ಆಕಾಂಕ್ಷೆಗಳು, ಸ್ನೇಹಿತರ ಜೊತೆಗಿನ ಒಡನಾಟ, ತಮ್ಮ ಸ್ವಂತಿಕೆ ಮುಂತಾದವುಗಳಿಂದ ವಂಚಿತರಾಗುತ್ತಾರೆ. 
ಮನಸ್ಸಿನ ಮೇಲೆ ಬೀರುವ ಪರಿಣಾಮ ಶರೀರದ ಆರೋಗ್ಯದ ಮೇಲೂ ತನ್ನ ಛಾಪನ್ನು ಮೂಡಿಸುತ್ತದೆ. ಚಿಕ್ಕ ವಯಸ್ಸಿಗೆ ಮದುವೆ ಮಾಡುವುದರಿಂದ ಅವರಲ್ಲಿ ತಿಳುವಳಿಕೆ ಕೊರತೆಯಿಂದ ಯಾವುದೇ ಕುಟುಂಬ ಯೋಜನೆಗಳನ್ನು ಅಳವಡಿಸಿಕೊಳ್ಳದೆ ಬೇಗನೆ ಗರ್ಭ ಧರಿಸಬಹುದು. ಅವರ ಶರೀರವೇ ಇನ್ನೂ ಸಮರ್ಪಕವಾಗಿ ಬೆಳೆಯದಿರುವಾಗ, ಅವರು ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯವೇ?
ಕೆಲವು ಬಾರಿ ಗರ್ಭಪಾತವಾಗಬಹುದು, ತಾಯಿ ಅಥವಾ ತಾಯಿ ಮಗು, ಇಲ್ಲವೇ ಮಗು ಮರಣಿಸಬಹುದು ಅಥವಾ ಹುಟ್ಟುತ್ತಲೇ ಅನಾರೋಗ್ಯಪೀಡಿತವಾಗಬಹುದು. ಇಂತಹ ಪ್ರಸಂಗಗಳು ಸರ್ವೇಸಾಮಾನ್ಯವಾಗಿ ಕಾಣಬರುತ್ತವೆ. ಇದರಿಂದ ಅವಳಲ್ಲಿ ಅಪೌಷ್ಟಿಕತೆ ಉಂಟಾಗುತ್ತದೆ, ಶರೀರ ಅನಾರೋಗ್ಯದ ಗೂಡಾಗಬಹುದು. ಇದು ಹೀಗೆ ಮುಂದುವರೆದು ಹೆಣ್ಣು ಹೆರಿಗೆಯ ಯಂತ್ರವಾಗುತ್ತಾಳೆ. ಮತ್ತು ಇದರಿಂದ ಶಿಶು ಮರಣದ ಪ್ರಮಾಣವೂ ಹೆಚ್ಚುತ್ತದೆ. 
ಬಾಲ್ಯವಿವಾಹವು ಶಿಕ್ಷಣದ ಮೇಲೂ ತನ್ನ ಪರಿಣಾಮ ಬೀರುತ್ತದೆ. ಅಂದರೆ, ವಿವಾಹದ ನಂತರ ಶಿಕ್ಷಣ ಅರ್ಧಕ್ಕೆ ನಿಂತಂತಾಗುತ್ತದೆ. ಶಿಕ್ಷಣದ ಅರಿವಿಲ್ಲದೆ ಹೊರಪ್ರಪಂಚದಲ್ಲಿ ವ್ಯವಹರಿಸುವುದು ತುಂಬಾ ಕಷ್ಟವಾಗುತ್ತದೆ. 
ಇಂತಹವರು ಸಮಾಜದಲ್ಲಿ ಬೇಗ ಮೋಸ ಹೋಗುತ್ತಾರೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣ ಕೊಟ್ಟಲ್ಲಿ ಅವರು ಬಾಲ್ಯವಿವಾಹವನ್ನು ತಡೆಯಬಹುದು, ಮುಂದೆ ಹೊಗಿ ವಿದ್ಯಾವಂತರಾಗಿ ತಮ್ಮ ಕಾಲುಗಳ ಮೇಲೆ ತಾವು ನಿಲ್ಲಬಹುದು. ಈ ಪದ್ಧತಿಯ ಮತ್ತೊಂದು ಕೆಡುಕೆಂದರೆ ವಯಸ್ಸಿನ ಅಂತರ. ಇದರಿಂದ ಪತಿಪತ್ನಿಯರಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು. ಮತ್ತು ಸಂಸಾರದಲ್ಲಿ ಹೆಣ್ಣುಮಕ್ಕಳು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 
ಮತ್ತೊಂದು ಸಮಸ್ಯೆ ಬಾಲವಿಧವೆ ಸಮಸ್ಯೆ. ವಯಸ್ಸಿನ ಅಂತರವಿರಬಹುದು, ಇನ್ನಾವುದೇ ಕಾರಣವಿರಬಹುದು, ಪತಿ ಬೇಗ ಮರಣಿಸಿದಲ್ಲಿ ಹೆಣ್ಣುಮಗಳು ವಿಧವೆಯಾಗುತ್ತಾಳೆ. ಇಂತಹವರು ಮುಂದೆ ಓದಲು ಕಷ್ಟ. ಅವರ ಸ್ಥಿತಿ ಬಹುತೇಕ ಬಾರಿ ತುಂಬಾ ಕೆಟ್ಟದ್ದಾಗಿರುತ್ತದೆ. ಹಲವು ದಶಕಗಳ ಸಂಶೋಧನೆಯ ಫಲವಾಗಿ ಭಾರತದಲ್ಲಿ ಈ ಪದ್ಧತಿಯಿಂದ ಜನನ ಪ್ರಮಾಣ ಹೆಚ್ಚುತ್ತಿದೆ. ಬಡತನದ ಸಮಸ್ಯೆ, ಅಪೌಷ್ಟಿಕತೆ, ಅನಕ್ಶರತೆ, ಶಿಶುಮರಣ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ. 
ಇಷ್ಟೆಲ್ಲಾ ಕೆಡಕುಗಳನ್ನೊಂದಿರುವ ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಆಗಿನಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಅದನ್ನು ಸಂಪೂರ್ಣವಾಗಿ ಹೊಗಲಾಡಿಸಲು ಸಾಧ್ಯವಾಗಿಲ್ಲ. ಕಾನೂನಿನ ಪ್ರಕಾರ ಹೆಣ್ಣುಮಕ್ಕಳ ವಯಸ್ಸು 18 ಹಾಗೂ ಗಂಡುಮಕ್ಕಳ ವಯಸ್ಸು 21 ಆಗಿದ್ದಲ್ಲಿ ವಿವಾಹಕ್ಕೆ ಅರ್ಹರು ಮತ್ತು ಇದನ್ನು ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಪಡಿಸಬಹುದು ಮತ್ತು ದಂಡಾರ್ಹ ಎಂದು ತಿಳಿಸಿದ್ದರೂ ಅದನ್ನು ಪಾಲಿಸದೆ ಮದುವೆ ಮಾಡುತ್ತಿದ್ದಾರೆ. 
ಸಾಮಾಜಿಕ ಸುಧಾರಣೆಗಾಗಿ ಸ್ಥಾಪನೆಗೊಂಡ ಬ್ರಹ್ಮಸಮಾಜ, ಆರ್ಯಸಮಾಜ ಇದರ ವಿರುದ್ಧ ಕೆಲಸವನ್ನು ಪ್ರಾರಂಭಿಸಿತು. 1880ರಲ್ಲಿ 500 ಸ್ತ್ರೀರೋಗ ತಜ್ಞರು ಲಿಖಿತ ಮನವಿಯನ್ನು ಆಗಿನ ವೈಸ್‍ರಾಯ್‍ಗೆ ನೀಡಿದ್ದರ ಪರಿಣಾಮ 14 ವರ್ಷದ ಕೆಳಗಿನ ಹೆಣ್ಣುಮಕ್ಕಳಿಗೆ ವಿವಾಹ ಮಾಡಬಾರದೆಂದು ಕಾನೂನನ್ನು ತರಲಾಯಿತು. 
1886ರಲ್ಲಿ ಮೀರತ್‍ನಲ್ಲಿ ಹಿಂದೂ ಬಾಲ್ಯವಿವಾಹದ ವಿರುದ್ಧ ಮೊದಲ ಮನವಿಯನ್ನು ಸರ್ಕಾರಕ್ಕೆ ನೀಡಿತು. ಅದು ಅಂಗೀಕೃತಗೊಂಡದ್ದು 1927ರಲ್ಲಿ. 1921ರ ಗಣತಿಯಿಂದ ಎಚ್ಚೆತ್ತ ಬ್ರಿಟಿಷ್ ಸರ್ಕಾರ 1929ರಲ್ಲಿ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯನ್ನು ಜಾರಿಗೊಳಿಸಿತು. ನಂತರ ಗಾಂಧೀಜಿಯವರ ಒತ್ತಾಯದಿಂದ ಹರ್ ಬಿಲಾಸ್ ಸಾರ್ದಾರವರು ಈ ಕಾಯ್ದೆಯನ್ನು ಪುನರ್ ಪರಿಶೀಲಿಸಿದರು. ಇದು ಮುಂದೆ “ಸಾರದ ಕಾಯಿದೆ” ಎಂದೇ ಹೆಸರಾಯಿತು. 
ನಂತರದ ದಿನಗಳಲ್ಲಿ ವಿವಾಹದ ವಯಸ್ಸನ್ನು ಹೆಚ್ಚಿಸಲಾಯಿತು. ಹೆಣ್ಣುಮಕ್ಕಳ ವಯಸ್ಸು 18 ಹಾಗೂ ಗಂಡುಮಕ್ಕಳ ವಯಸ್ಸು 21. ಹೀಗೆ ಸರ್ಕಾರ ಏನೆಲ್ಲ ಕಾನೂನುಗಳನ್ನು ತಂದರೂ ಅದರ ಕಣ್ತಪ್ಪಿಸಿ ಈ ವಿವಾಹಗಳು ನಡೆಯುತ್ತಲೇ ಇವೆ. ಇತ್ತೀಚೆಗೆ ಇದನ್ನು ತಡೆಯವಲ್ಲಿ ಮಕ್ಕಳ ಕಲ್ಯಾಣ ಕೇಂದ್ರಗಳು ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿವೆ ಹಾಗೂ ಇಂದಿನ ದಿನಗಳಲ್ಲಿ ಜನನ ಪ್ರಮಾಣಪತ್ರವನ್ನು ದಾಖಲಿಸುವುದು ಕಡ್ಡಾಯವಾಗಿದೆ. 
ಶಿಕ್ಷಣದ ಹೆಚ್ಚಳ, ನಗರೀಕರಣ, ಸಾಮಾಜಿಕ ಮಾಧ್ಯಮಗಳ ಮೂಲಕ ದುಷ್ಪರಿಣಾಮವನ್ನು ತಿಳಿದುಕೊಳ್ಳುತ್ತಿರುವುದರಿಂದ ಬಾಲ್ಯವಿವಾಹದ ಪ್ರಮಾಣ ಕಡಿಮೆಯಾಗುತ್ತಿದೆ.
ಹೀಗೆ ಪೋಷಕರು ಮತ್ತು ನಾಗರೀಕರು ತಮ್ಮ ಸ್ವಇಚ್ಛೆಯಿಂದ, ಮಕ್ಕಳ ಭವಿಷ್ಯವನ್ನು ಕುಂಠಿತಗೊಳಿಸದೆ ಸರ್ಕಾರದ ಜೊತೆ ಕೈಜೋಡಿಸಿದರೆ ಈ ಬಾಲ್ಯ ವಿವಾಹ ಪದ್ಧತಿಯೆಂಬ ಸಾಮಾಜಿಕ ಪಿಡುಗನ್ನು ನಾಶಪಡಿಸುವುದರಲ್ಲಿ ಸಂಶಯವೇ ಇಲ್ಲ.                                       
                                               -     ವಿಜಯಲಕ್ಷ್ಮಿ ಎಂ ಎಸ್

ಕಾಮೆಂಟ್‌ಗಳಿಲ್ಲ: