Pages

ಕಥೆ: "ಪುಟ್ಟಗಂಗಾ"


ಅಂದು ಆ ಹಳ್ಳಿ ಎಂದಿಗಿಂತಲೂ ಸುಂದರವಾಗಿ ಕಾಣುತ್ತಿತ್ತು. ಎಲ್ಲರಲ್ಲೂ ತುಂಬಾ ಸಡಗರವಿತ್ತು. ಮಕ್ಕಳ ಕೇಕೆಗಳು, ಚಿಲಿಪಿಲಿ ಸದ್ದುಗಳೆರಡೂ ಮಿಲನವಾಗಿ ಸುತ್ತಲಿನ ಆ ಬೆಟ್ಟಗಳ ಕೋಟೆಗಳಿಗೆ ಅಪ್ಪಳಿಸಿ ಪ್ರತಿಅಲೆ ಉಂಟಾಗುತ್ತಿತ್ತು. ಹೊತ್ತು ಮುಳುಗಿದ್ದರಿಂದ ಕಾರ್ಯಗಳು ಬೇಗ ಬೇಗ ಸಾಗುತ್ತಿತ್ತು. ನಾಳೆ ಆ ಊರಿಗೆ ಪ್ರಮುಖ ಅತಿಥಿಗಳು, ದೊಡ್ಡ ವ್ಯಕ್ತಿಗಳು ಬರುವರಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಎಂದಿನಂತೆ ಇತ್ತಾದರೂ ಈ ಬಾರಿಯ ಹಬ್ಬಕ್ಕೆ ವಿಶೇಷ ಕಳೆ ತಂದಿದ್ದು ಪುಟ್ಟಗಂಗಾ. 
ಗಂಗಾ ಹುಟ್ಟಿದ ಮರುಕ್ಷಣವೇ ಅವಳ ತಾಯಿ ತೀರಿಕೊಂಡಳು. ನಂತರ ಬಂದ ಮಲತಾಯಿ ಗಂಗಾಳನ್ನು ಮಗಳಂತೆ ಪ್ರೀತಿಸಲಿಲ್ಲ. ಮನೆಗೊಬ್ಬ ಕೆಲಸದ ಹುಡುಗಿಯಂತೆ ಕಂಡಳು. ತಂದೆಗೂ ಮಗಳ ಬಗ್ಗೆ ಅಂತಹ ಮಮಕಾರವೇನೂ ಇಲ್ಲದ್ದರಿಂದ ಏನೂ ಮಾತಾಡುತ್ತಿರಲಿಲ್ಲ. ಒಂದು ಸಂತಸದ ವಿಷಯವೆಂದರೆ ಎಲ್ಲರಿಗೂ ಸಹಾಯ ಮಾಡುತ್ತಿದ್ದ ಗಂಗಾ ಊರವರ ಕಣ್ಮಣಿಯಾಗಿದ್ದಳು. ತಾಯ್ತಂದೆಯರ ಪ್ರೀತಿ ಸಿಗದಿದ್ದರೂ  ತಾಯ್ನೆಲದ ಜನರ ಪ್ರೀತಿ ಅವಳಿಗೆ ದಕ್ಕಿತ್ತು.
ಒಮ್ಮೆ ಹಳ್ಳಿಯ ರೈತರೆಲ್ಲಾ ಆಲೆಮನೆಗಳನ್ನು ಅಣಿಗೊಳಿಸುವಲ್ಲಿ ತಲ್ಲೀನರಾಗಿದ್ದರು. ಮಕ್ಕಳಿಗೆಲ್ಲಾ ಕಬ್ಬಿನ ಹಾಲು ಮತ್ತು ಜೋಲಿ ಬೆಲ್ಲದ ಅಭಿಷೇಕ. ಅಂದು ಊರಿನ ಪಟೇಲರ ಮನೆಯ ಸರದಿ. ಮಕ್ಕಳು ಕೈಗೂ ಕಾಲಿಗೂ ಸಿಗುತ್ತಿದ್ದರು. ದಣಿದ ಎತ್ತುಗಳನ್ನು ಒಂದೆಡೆ ಕಟ್ಟಿ ನೀರಿಟ್ಟಿದ್ದರು. ಆ ಜೋಡಿ ಎತ್ತಿಗಳಲ್ಲಿ ಒಂದು ಮುಂಗೋಪಿ, ಅದರಲ್ಲೂ ಮಕ್ಕಳೆಂದರೆ  ಕೆರಳುತ್ತದೆ. ‘ಮಕ್ಕಳ ಮಾರಿ’  ಎಂದೇ ಅದನ್ನು ಗುರ್ತಿಸುತ್ತಿದ್ದರು. ಕೆಲಸದವ ಅದನ್ನು ಎಚ್ಚರ ತಪ್ಪಿ ಸಡಿಲವಾಗಿ ಕಟ್ಟಿದ್ದ. ಮಕ್ಕಳು ಅವುಗಳ ಬಳಿಯೇ ಆಡುತ್ತಿದ್ದರು. ಆ ಮಾರಿ ಅವರನ್ನು ನೋಡಿ ಹೂಂಕರಿಸತೊಡಗಿತು.ಬರಬರುತ್ತಾ, ಕೆರಳತೊಡಗಿತು.  ಮೈಮೇಲೆ ಏನೋ ಆವರಿಸಿದಂತೆ ಅದು ತನ್ನ ಹಗ್ಗವನ್ನು ಕಿತ್ತುಕೊಂಡಿತು. ಇದರಿಂದ ಮಕ್ಕಳು ಚೆಲ್ಲಾಪಿಲ್ಲಿಯಾದರು. ಆದರೆ ದಿಕ್ಕು ತೋಚದೆ ಪಟೇಲರ ಮೊಮ್ಮಗ ಗರಬಡಿದವನಂತಾದ. ತನ್ನತ್ತಲೇ ನುಗ್ಗಿ ಬಂದ ದೈತ್ಯ ಎತ್ತನ್ನು ನೋಡಿ ಕಣ್ಣು ಮುಚ್ಚಿ ಅಲ್ಲೇ ಕುಸಿದ. ಅಷ್ಟರಲ್ಲಿ ಹಾರಿ ಬಂದ ಗಂಗಾ ಅವನನ್ನು ಬಾಚಿ ದೂರಕ್ಕೆ ಎಸೆದಳು. ಮೈ ಮರೆತ ಮಾರಿಯು ಎದುರಿಗಿದ್ದ ಗಂಗಾಳನ್ನು ಎತ್ತಿ ತಿರುಗಿಸಿ ಬಿಸಾಡಿತು.
 ಕ್ಷಣಾರ್ಧದಲ್ಲಿ ನಡೆದ ಈ ದುರಂತವನ್ನು ಕಂಡ ಅಲ್ಲಿನ ಜನ ಚೀತ್ಕರಿಸಿದರು. ಬಾರುಕೋಲು ಹಿಡಿದು ಎತ್ತನ್ನು ನಿಯಂತ್ರಿಸತೊಡಗಿದರು. ಮುದುಡಿ ಬಿದ್ದಿದ್ದ ಗಂಗಾಳನ್ನು  ಎತ್ತಿಕೊಂಡು ಪರೀಕ್ಷಿಸಿದರು. ಕತ್ತು ರಕ್ತದಿಂದ ಮುಚ್ಚಿಹೋಗಿತ್ತು. ನಿಮಿಷಕ್ಕೂ ಮುಂಚೆ ನಮ್ಮ ನಡುವೆ ಬೆಲ್ಲ ಮೆಲ್ಲುತ್ತಾ ಓಡಾಡಿಕೊಂಡಿದ್ದ ಗಂಗಾ ಹೆಣವಾದಳೆಂದು ಗೋಳಾಡಿದರು. ಆದರೆ ಅದೃಷ್ಟವಶಾತ್ ಎತ್ತಿನ ಕೊಂಬು ಗಂಟಳೊಳಗೆ ಇಳಿಯದೆ ಗಲ್ಲದ ಮೂಳೆಯನ್ನು ಹಿಡಿದು ತಿರುಗಿಸಿತ್ತು. ಎಲ್ಲರೂ ಗಂಗಾಳನ್ನು ಎತ್ತಿಕೊಂಡು ಆಸ್ಪತ್ರೆಗೋಡಿದರು. ಸುದ್ದಿ ತಿಳಿದ ಪಟೇಲರು ಸನಿಹವಿದ್ದುಕೊಂಡೇ ಚಿಕಿತ್ಸೆ ಮಾಡಿಸಿದರು. ಗಂಗಾಳ ಸಮಯಸ್ಫೂರ್ತಿ, ಧೈರ್ಯಕ್ಕೆ ಗ್ರಾಮದವರೆಲ್ಲಾ ತಲೆತೂಗಿದರು. ಅವಳ ಉಪಕಾರಕ್ಕೆ ಪ್ರತ್ಯುಪಕಾರ ಮಾಡಲೇಬೇಕೆಂದು ಪಟೇಲರು ಸ್ವಾತಂತ್ರ್ಯ ದಿನಾಚರಣೆಯಂದು ಗಂಗಾಳಿಗೆ ಸನ್ಮಾನದ ಕಾರ್ಯಕ್ರಮ ಏರ್ಪಡಿಸಿಯೇ ಬಿಟ್ಟರು. ಆಗಸ್ಟ್ 15 ರಂದು, ಬೆಳಿಗ್ಗೆ ನೆರೆದ ಜನರೆಲ್ಲರ ಮುಂದೆ ಗಂಗಾಳನ್ನು ಮನಸಾರೆ ಹೊಗಳಿ ಸನ್ಮಾನ ಮಾಡಿದರು. ಜೊತೆಗೆ ಪಟೇಲರ ಮಗ ತನ್ನ ಮಗನ ಜೊತೆಯೇ ಪಟ್ಟಣದಲ್ಲಿ ಗಂಗಾಳ ಉತ್ತಮ ಶಿಕ್ಷಣದ ಖರ್ಚುವೆಚ್ಚ ಭರಿಸುತ್ತೇನೆಂದು ವಾಗ್ದಾನ ಮಾಡಿದರು. ಜನರೆಲ್ಲಾ ಸಂತೋಷದಿಂದ ಹರ್ಷೋದ್ಘಾರ ಮಾಡಿದರು. 
-     ಉಷಾಗಂಗೆ     

1 ಕಾಮೆಂಟ್‌:

Rajiv Magal ಹೇಳಿದರು...

ಉತ್ತಮವಾದ ಬರಹ.
ಹಾಯೋನೊಬ್ಬ ಇದ್ದರೆ, ಕಾಯೋನೊಬ್ಬ ಇರ್ತಾನೆ ಎ೦ಬುದಕ್ಕೆ ಉತ್ತಮ ನಿದರ್ಶನ.
ಈ ಘಟನೆಯ ಬಗ್ಗೆ ಮಲತಾಯಿತನ್ನು ಬಿಡಿ, ಹೆತ್ತ ತ೦ದೆಯ ಪ್ರತಿಕ್ರಿಯೆಯ ಬಗ್ಗೆ ಒ೦ದೆರಡು ಸಾಲುಗಳು ಇದ್ದಿದ್ದರೆ? ಅ೦ಬುದು ನನ್ನ ಅನಿಸಿಕೆ.