Pages

ಸ್ವಾತಂತ್ರ್ಯ ಸಂಗ್ರಾಮ : "ರಾಮ್ ಪ್ರಸಾದ್ ಬಿಸ್ಮಿಲ್"



ರಾಮ್ ಪ್ರಸಾದ್ ಬಿಸ್ಮಿಲ್ ಎಂದಾಕ್ಷಣ ಒಬ್ಬ ದೇಶಪ್ರೇಮಿ, ಕ್ರಾಂತಿಕಾರಿ ಅಷ್ಟೇ ಅಲ್ಲ ಉತ್ತಮ ಕವಿ, ಮತ್ತು ಅಶ್ಫಾಕುಲ್ಲಾಖಾನ್ ಜೊತೆಗಿನ ಅಪೂರ್ವ ಗೆಳೆತನ - ಇವಿಷ್ಟು ಅಂಶಗಳು ಕಣ್ಣ್ಮುಂದೆ ಹಾದುಹೋಗುತ್ತವೆ. ಜನ್ಮದಾತರನ್ನೂ ತೊರೆದು ಜನ್ಮಭೂಮಿಗಾಗಿ ಪರಿಪತಪಿಸಿದ, ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವುದು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿ ಗಲ್ಲಿನ ಮಾಲೆಯನ್ನು ಕೊರಳಿಗೇರಿಸಿದ ಇವರನ್ನು ನೆನೆದು ನಮಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುವೆ. ಉತ್ತರಪ್ರದೇಶನ ಶಹಜದ್ ಪುರದಲ್ಲಿ ಮುರಳಿಧರ ಮತ್ತು ಮೂಲಮತಿಯರ ಮಗನಾಗಿ ಜನನ. ತಂದೆಯವರ ಶಿಕ್ಷಣಾಸಕ್ತಿಯಿಂದ ಹಿಂದಿ ಉರ್ದು ಬಂಗಾಳಿ ಮತ್ತು ಇಂಗ್ಲೀಷ್ ಕಲಿಕೆ. ತಾಯಿಯ ಸಧೃಢ ವ್ಯಕ್ತಿತ್ವದಿಂದ ಪ್ರಭಾವಿತ. ತಮ್ಮ ಆತ್ಮ ಚರಿತ್ರೆಯಲ್ಲಿ ತಾಯಿಯ ಕುರಿತು ಹೀಗೆ ಬರೆಯುತ್ತಾರೆ: "ನಮ್ಮ ವಂಶದಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ಕೊಲ್ಲುತ್ತಿದ್ದರಂತೆ. ಮೊದಲ ಬಾರಿಗೆ ನನ್ನ ತಾಯಿ ಅದನ್ನು ವಿರೋಧಿಸಿ, ತಂಗಿಯರನ್ನು ಪೋಷಿಸಿ ಶಿಕ್ಷಣವನ್ನು ಕೊಡಿಸಿದರಂತೆ." ಮಗನ ಎಲ್ಲಾ ಕಾರ್ಯಗಳಿಗೆ ತಾಯಿಯ ಪ್ರೋತ್ಸಾಹವಿತ್ತು. ಆರ್ಯಸಮಾಜದ ಗಾಢ ಪ್ರಭಾವದಿಂದ ಇವರ ಗಮನ ದೇಶ ಸೇವೆ ಕಡೆ ಹೊರಳಿ ಕ್ರಾಂತಿಕಾರಿ ಜೀವನಾರಂಭವಾಯಿತು. ಸಂಧಾನಾತೀತ ಪಂಥದ ಪ್ರಮುಖ ನಾಯಕರಲ್ಲೊಬ್ಬರಾದರು. 'ರಾಮ್, ಆಗ್ಯತ್, ಮತ್ತು ಬಿಸ್ಮಿಲ್ ಎಂಬ ಹೆಸರಿನಲ್ಲಿ ದೇಶಭಕ್ತಿಯ ಕೃತಿಗಳ ರಚನೆ... ಹೀಗೆ 'ಬಿಸ್ಮಿಲ್ ರಾಮ್ ಪ್ರಸಾದ್ ರಿಗೆ ಸೇರಿಕೊಂಡಿತು. ಆಂಗ್ಲ ಪುಸ್ತಕ (Catherine -Swadhinata ki Devi) ಬಂಗಾಲಿ(Bolshevikon ki kaartoot and Yogic sadhan) ಕೃತಿಗಳ ಅನುವಾದ ಮಾಡಿದರು. Deshavasiyonke nam sandesh (ದೇಶವಾಸಿಗಳಿಗೊಂದು ಸಂದೇಶ) ಎಂಬ ಕರಪತ್ರವನ್ನು, ಹಲವು ದೇಶಭಕ್ತಿಗೀತೆಗಳನ್ನು ಮನ್ ಕೀ ಲಹರಿ (Man ki lahari) ಕ್ರಾಂತಿ ಗೀತಾಂಜಲಿ (kranti Geetanjali) ಇತ್ಯಾದಿ ರಚಿಸಿದ್ದಾರೆ. ಅಲ್ಲದೆ ಪ್ರಸಿದ್ಧ ಸರ್ಫರೋಷಿ ಕೀ ತಮನ್ನಾ ಅಭಿ ಹಮಾರೆ ದಿಲ್ ಮೇ ಹೈ ( ತ್ಯಾಗ ಮಾಡವು ಆಸೆ ನಮ್ಮ ಮನದಲ್ಲೀಗ ಇದೆ ) ಗೀತೆಯನ್ನು ರಚಿಸಿದರು. ಇದು ಎಲ್ಲಾ ಕ್ರಾಂತಿಕಾರಿಗಳ ಬಾಯಲ್ಲಿ ನಲಿಯತೊಡಗಿತು. ತಾವು ಹಸಿವಿಂದ ಕಂಗಾಲಾಗಿದ್ದರೂ, ನಿದ್ದೆ ವಿಶ್ರಾಂತಿ ಇರದೆ ಬಳಲಿದ್ದರೂ ತಮ್ಮನ್ನೇ ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರು. ಕ್ರಾಂತಿಕಾರಿ ಚಟುವಟಿಕೆಗಳಿಗೆ ಹಣದ ಕೊರತೆ ಉಂಟಾದಾಗ 1918ರಲ್ಲಿ ಮಣಿಪುರಿಯಲ್ಲಿ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿದರು. ನಂತರ ಅಜ್ಞಾತವಾಸದಲ್ಲೂ ದೇಶಸಾಹಿತ್ಯ ರಚನೆಯಲ್ಲಿ, ಯುವಜನರನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರತರಾದರು. 1923 ರಲ್ಲಿ ಹಿಂದೂಸ್ಥಾನ್ ರಿಪಬ್ಲಿಕನ್ ಸೋಷಿಯಲಿಸ್ಟ್(HRA) ರಚಿಸಲು ಕಾರಣರಾದರು ಮತ್ತು ಅದರ ಸಂವಿಧಾನ ರೂಪಿಸಿದರು. 1925 ರಲ್ಲಿ ಲಕ್ನೊ ಸಮೀಪ ಕಾಕೋರಿಯಲ್ಲಿ ರೈಲನ್ನು ಅಡ್ಡಗಟ್ಟಿ ಸರ್ಕಾರದ ಸಂಪತ್ತನ್ನು ಲೂಟಿ ಮಾಡಿದರು. ಇದನ್ನು ಬ್ರಿಟಿಷ್ ಪೊಲೀಸ್ ಕಾಕೋರಿ ಷಡ್ಯಂತ್ರವೆಂದು ಕರೆದು ಕ್ರಾಂತಿಕಾರಿಗಳ ಬಂಧಿಸಲು ನಿದ್ದೆಗೆಡಿಸಸಿಕೊಂಡು ಅಲೆಯಿತು. 1928 ರಲ್ಲಿ HSRA ರಚನೆಯಾಯಿತು. ರಾಮ್ ಪ್ರಸಾದ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದ ಕ್ರಾಂತಿಕಾರಿ ಸದಸ್ಯರಿಂದ ರೂಪ ಪಡೆದು ತನ್ನ ಚಟುವಟಿಗಳನ್ನು ಆರಂಭಿಸಿತು. ಆದರೆ ಒಂದು ದುರ್ದಿನ ಬ್ರಿಟಿಷ್ ಸರ್ಕಾರವು ರಾಮ್ ಪ್ರಸಾದರು ತಮ್ಮ ನಿವಾಸದಲಿರುವಾಗ ಮುಂಜಾನೆ ಹೊತ್ತಲ್ಲಿ ಸಂಚುಹೂಡಿ ಹುಲಿಯನ್ನು ಬಲೆಯಲ್ಲಿ ಹಿಡಿವಂತೆ ಬಂಧಿಸಿಬಿಟ್ಟಿತು ಮತ್ತು ಯಾವುದೇ ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸದೆ ಗಲ್ಲಿಗೇರಿಸಿಯೇಬಿಟ್ಟಿತು. ಸಾಯುವ ಮುಂಚೆ ತಾವೆ ಬರೆದ ತಮ್ಮ ಆತ್ಮಚರಿತ್ರೆಯನ್ನು ಗುಪ್ತವಾಗಿ ಮನೆಯವರಿಗೆ ಒಪ್ಪಿಸಿದ್ದರು. ಅದು ಒಬ್ಬ ನಿಜದೇಶಭಕ್ತನು ಸಾರ್ಥಕ ಜೀವನ ನಡೆಸಿದುದರ ಕುರಿತ ಉತ್ತಮ ದಾಖಲೆಯಾಗಿದೆ. ಕೊನೆಯದಾಗಿ ಸ್ಮರಿಸಲೇಬೇಕಾದ ವಿಷಯ ರಾಮ್ ಪ್ರಸಾದ್ ಮತ್ತು ಅಶ್ಫಾಕುಲ್ಲಾಖಾನ್ ರ ಸ್ನೇಹ. ಕಟ್ಟಾ ಆರ್ಯಸಮಾಜದ ಅನುಯಾಯಿಯಾದ ಇವರು ಒಬ್ಬ ಮುಸ್ಲಿಂ ಧರ್ಮೀಯನಾದ ಅಶ್ಫಾಕುಲ್ಲಾಖಾನ್ ಆಪ್ತಗೆಳೆಯರಾಗಿದ್ದರು. ಮೊದಮೊದಲು ದೂರವೇ ಇರುತ್ತಿದ್ದ ಇವರು ಅಶ್ಪಾಕುಲ್ಲಾಖಾನ್ ತೋರುತ್ತಿದ್ದ ಅಪಾರ ಗೌರವ ಪ್ರೀತಿಗೆ ಕೊನೆಗೂ ಸೋಲುವಂತಾಯಿತು. ಗೆಳೆಯನಿಗಾಗಿ ಕ್ರಾಂತಿಕಾರಿ ಜೀವನ ಸ್ವೀಕರಿಸಿದ ಅಶ್ಫಾಕುಲ್ಲಾಖಾನ್ ರ ದೇಶಪ್ರೇಮವೂ ಅಜರಾಮರವಾಯಿತು. ಈ ಇಬ್ಬರ ಗೆಳೆಯರ ರೋಚಕ ಜೀವನವು ಒಟ್ಟಿಗೆ ಅಂತ್ಯವಾಯಿತು. 1927 ಡಿಸೆಂಬರ್ 19 ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾಖಾನ್ , ರಾಜೇಂದ್ರನಾಥ ಲಾಹಿರಿ ರೋಶನ್ ಸಿಂಗ್ ರನ್ನು ಕಾಕೋರಿ ಷಡ್ಯಂತ್ರದ ಕೇಸಿನಲ್ಲಿ ಗಲ್ಲಿಗೇರಿಸಲಾಯಿತು. ಸ್ವಾತಂತ್ರ್ಯ ಹೋರಾಟದ ಶಕ್ತಿಗಳನ್ನು ತಣ್ಣಗಾಗಿಸಲಾಯಿತು. ಆದರೆ ಅವರಿಂದ ಸ್ಫೂರ್ತಿ ಪಡೆದ ಸಾವಿರಾರು ಕ್ರಾಂತಿಕಾರಿಗಳು ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಧುಮುಕಿದರು.

- ಉಷಾಗಂಗೆ.ವಿ