Pages

ಪುಟ್ಕಥೆಗಳು

ಪುಟ್ಕಥೆ - 1
"ಹಾ...ನೋಟಾ ಬಟನ್ ಒತ್ತಿದಿರಾ?" ಆಶ್ಚರ್ಯದಿಂದ ಕೇಳಿದಳು ಪತ್ರಕರ್ತೆ.
"ಹೌದು ಮಗಾ, ಇನ್ನೇನು ಮಾಡಲಿ? ಇಷ್ಟು ವರ್ಷಗಳಿಂದ ಒಂದು ಪಕ್ಷವಲ್ಲ ಒಂದು ಪಕ್ಷ ನಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಕಾದಿದ್ದೆ, ಇನ್ನು ಕಾಯುವ ತಾಳ್ಮೆಯಿಲ್ಲ, ಇವರಲ್ಲಿ ಯಾರೂ ಯೋಗ್ಯರಲ್ಲ" ಉತ್ತರಿಸಿದರು ೯೦ ವರ್ಷದ ಅಜ್ಜಿ!!

ಪುಟ್ಕಥೆ - 2
"ಸಂಪಾದನೆ ಮಾಡಿದ್ದನ್ನೆಲ್ಲಾ ಹೀಗೆ ಬೇರೆಯವರಿಗೆ ಖರ್ಚು ಮಾಡುತ್ತಾ ಹೋದರೆ ಉಳಿಯುವುದು ಏನು?" ಕೇಳಿದಳು ಗೆಳತಿ.
"ಅಗಾಧ ಪ್ರೀತಿ..... ಬದುಕಿಗಷ್ಟು ಸಾಲದೇ?!" ಕೇಳಿದಳೀಕೆ.

 ಪುಟ್ಕಥೆ - 3
"ಸೈಕಲ್ ತಗೊಂಡು ಬಾ ಅಂದ್ರೆ ಕುಡಿದು ಬಂದು ಬಿದ್ದವ್ನೆ" ಮಗ ತಿರಸ್ಕಾರದಿಂದ ನುಡಿದ. 
ಅದನ್ನು ಕೇಳಿ ಸೈಕಲ್ ಗಾಗಿ ಇಡೀ ದಿನ ಊಟವಿಲ್ಲದೆ ದುಡಿದು, ಹಣ ಸಾಕಾಗಲಿಲ್ಲವೆಂದು ರಕ್ತ ನೀಡಿ, ಅಂಗಡಿಯಲ್ಲಿ ಆರ್ಡರ್ ಕೊಟ್ಟು ಬಂದು ನಿತ್ರಾಣವಾಗಿ ಕುಸಿದು ಬಿದ್ದಿದ್ದ ತಂದೆಯ ಜೀವ ವಿಷಾದದ ನಗೆ ಬೀರಿತು!!
ಪುಟ್ಕಥೆ - 4
"ಈ ರಾಜಕೀಯ ಎಷ್ಟು ಹೊಲಸು, ಛೀ, ಏನು ಈ ಅಧಿಕಾರಕ್ಕಾಗಿ ಕಚ್ಚಾಟ?" ತಂದೆ ಗೊಣಗುತ್ತಿದ್ದ.
"ಈ ಬುದ್ಧಿ ಕಾಸು ತಗೊಂಡು ಓಟು ಹಾಕುವ ಮುನ್ನ ಇರಬೇಕಿತ್ತು" ಮಗಳು ಹೇಳಿದಳು!!
ಪುಟ್ಕಥೆ - 5
"ಅವರಿಗ್ಯಾಕೆ ಹಣ ಕೊಡ್ತೀರಾ" ಕೇಳಿದರಾಕೆ.
"ಇನ್ನೇನು ಮಾಡುವುದು ಮೇಡಮ್, ಪಾಪ ಅನಿಸುತ್ತೆ. ಈ ತೃತೀಯಲಿಂಗಿಗಳನ್ನು ಯಾರು ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ, ಅವರಿಗೆ ಇನ್ನೇನು ದಾರಿ ಇದೆ. ಸೆಕ್ಸ್ ವರ್ಕರ್ಸ್ ಆಗಿ ಕೆಲಸ ಮಾಡುವುದಕ್ಕಿಂತ ಭಿಕ್ಷೆ ಬೇಡುವುದು ವಾಸಿ ಬಿಡಿ" ಉತ್ತರಿಸಿದನಾತ.
"ನಾನು ಅದೇ ಸಮುದಾಯಕ್ಕೆ ಸೇರಿದವಳೇ" ಉತ್ತರಿಸಿದರಾಕೆ.
ತನ್ನ ಕಾಲೇಜಿನ ಕಾರ್ಯಕ್ರಮಕ್ಕೆ ಆಕೆಯನ್ನು ಮುಖ್ಯ ಅತಿಥಿಯಾಗಿ  ಕರೆದೊಯ್ಯುತ್ತಿದ್ದಾತ ಶಾಕ್ ಗೆ ಒಳಗಾದ!!

ಪುಟ್ಕಥೆ - 6
ಅವಳ ಬಗ್ಗೆ ಶಾಲೆಯಿಂದ ಮನೆಗೆ ದಿನಾಲೂ ಒಂದು ದೂರು.  ಮುಖ್ಯೋಪಾಧ್ಯಾಯರಿಂದ ತಂದೆಗೆ ಕರೆ. ಯಾರ ಮಾತನ್ನೂ ಕೇಳದ ಅವಳು ಅಂದು ಬದಲಾಗಿಬಿಟ್ಟಳು, ಅದಾದ ನಂತರ ಶಿಕ್ಷಕರ ಕಣ್ಮಣಿಯಾದಳು.‌
ಇಷ್ಟಕ್ಕೆಲ್ಲಾ ಕಾರಣವಾದದ್ದು ಅವಳ ತಂದೆಯ ಬೈಗುಳವಲ್ಲ,......... ಕಣ್ಣೀರು!!
ಪುಟ್ಕಥೆ - 7
ಯಾವ ಕೈಯನ್ನವಳು ಅಂದು ಹಿಡಿದಿದ್ದಳೊ ಆ ಕೈಯ ಗುರುತು ಇಂದವಳ ಕೆನ್ನೆಯ ಮೇಲಿತ್ತು.
ಯಾವ ಮಡಿಲನ್ನವಳು ಅಂದು ಧಿಕ್ಕರಿಸಿ ಹೋಗಿದ್ದಳೊ ಅದವಳಿಗೆ ಇಂದು ಆಶ್ರಯ ನೀಡಿತ್ತು!
ಪುಟ್ಕಥೆ - 8
ಸ್ನೇಹಿತೆ ಹೊಸ ಊರಿಗೆ ಓದಲು ಹೋದಾಗ ಇವಳಿಗೆ ಆತಂಕವಾಗಿತ್ತು, ತನ್ನನ್ನು ಮರೆತುಬಿಟ್ಟು ಹೊಸ ಸ್ನೇಹಿತರನ್ನು ಹುಡುಕಿಕೊಳ್ಳುತ್ತಾಳೆಂದು. ರಜೆಗೆ ಬಂದಾಗ ಇಬ್ಬರು ಗೆಳತಿಯರೊಂದಿಗೆ ಬಂದಾಗ ಇವಳಿಗದು ಖಚಿತವಾಯಿತು.
ಆದರೆ ಎರಡೇ ದಿನಗಳಲ್ಲಿ ಅವಳ ಅನುಮಾನ ದೂರವಾಯಿತು, ಆ ಹೊಸ ಗೆಳತಿಯರು ಇವಳೆಡೆಗೆ ತಮ್ಮ ಸ್ನೇಹಹಸ್ತ ಚಾಚಿದಾಗ!!
   
ಪುಟ್ಕಥೆ - 9
"ಅಕ್ಕ ಇನ್ನೂ ಎಷ್ಟು ದಿನ ಅಂತಾ ದುಡೀತೀಯ, ನನ್ನ ಜೊತೆ ಬಂದಿರು" ೮೦ ವರ್ಷದ ಅಕ್ಕನನ್ನು ೭೦ ವರ್ಷದ ತಂಗಿ ಕರೆದಳು.
"ಕೈಯಲ್ಲಿ ಕಸುವಿರುವಾಗ ಕೈಕಟ್ಟಿ ಕೂರಬಾರದಮ್ಮ, ಕೈಲಾಗಾದಾಗ ನಿನ್ನ ಹತ್ತಿರವೇ ಬರುವೆ."
ಇಬ್ಬರ ಸಂಭಾಷಣೆ ಕೇಳಿ ೧ ಘಂಟೆ ಕೆಲಸ ಮಾಡಿದರೆ ೨ ಘಂಟೆ ಸುಧಾರಿಸಿಕೊಳ್ಳುವ ೨೦ ವರ್ಷದ ನಾನು ಬೆಬ್ಬೆರಗಾದೆ!!

ಪುಟ್ಕಥೆ - 10
"ಮೇಡಮ್ ನೀವು ಯಾಕೆ ಕ್ಲಾಸಿಗೆ ಬನ್ನಿ, ದಿನಾ ಓದಿ ಎನ್ನುತ್ತಿದ್ದಿರಿ ಅಂತ ಈಗ ಅರ್ಥ ಆಯ್ತು. ಪದವಿ ಪರೀಕ್ಷೆಗೆ ಕಂಠಪಾಠ ಮಾಡಿ ಪಾಸಾಗಿದ್ದು, ಉದ್ಯೋಗಕ್ಕಾಗಿನ ಯಾವ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯೋಗವಾಗ್ತಿಲ್ಲ. ಮತ್ತೆ ಮೊದಲಿನಿಂದ ಓದಬೇಕಾಗಿದೆ!" ಅಳಲು ತೋಡಿಕೊಂಡ ವಿದ್ಯಾರ್ಥಿ.

- ಸುಧಾ ಜಿ 



ಪುಸ್ತಕ ಪ್ರೀತಿ - ತ್ರಿವೇಣಿಯವರ ಕಥಾಸಂಗ್ರಹ ಎರಡು ಮನಸು

 ಸೇರದ ದಾರಿ

ಘಂಟೆ ಎರಡು ದಾಟಿದರೂ ಊಟ ಮಾಡದೆ ಗಂಡನ ದಾರಿ ಕಾಯುತ್ತಾ ಕುಳಿತ್ತಿದ್ದಳು ಕಮಲ. "ಅವರೇನು ಹೋಟೆಲಿನಲ್ಲಿ ತಿಂದಿರುತ್ತಾರೆ. ಮನೆಗೆ ಊಟಕ್ಕೆ ಬಂದರೆ ಬರುತ್ತಾರೆ ಇಲ್ಲದಿದ್ದರೆ ಇಲ್ಲ. ಅಪ್ಪ ಬದಲಾಗಿದ್ದಾರೆ. ಇಂತವರಿಗಾಗಿ ನೀನು ಊಟ ಮಾಡದೆ ಕಾಯುತ್ತಿರುವೆಯಾ?" ಮಗನ ಕೋಪದ ಮಾತುಗಳನ್ನು ಒಪ್ಪದ ಕಮಲ ಕಾಯುತ್ತಾ ಕುಳಿತಳು. 
ಆತ ಬಂದವನೇ ಯಾವುದನ್ನು ಗಮನಿಸದೆ ತನ್ನಷ್ಟಕ್ಕೇ ತಾನೇ ಹೋಗಿ ಮಲಗಿದನು. ಎರಡು ವರ್ಷಗಳಿಂದಲೂ ಹೀಗೆ ಯಾವಾಗಲೋ ಮನೆಗೆ ಬರುವುದು. ಮನೆಗೆ ಬೇಕಾದ ಸಾಮಾನುಗಳನ್ನು ಸರಿಯಾಗಿ ತಂದು ಕೊಡುತ್ತಿರಲಿಲ್ಲ. ಗೆಳತಿಯರಿಂದ ಸಾಲ ಪಡೆದುಕೊಂಡು, ನಂತರ ಅವರ ನಡವಳಿಕೆಯಿಂದ ಕಮಲಳಿಗೆ ಒಮ್ಮೊಮ್ಮೆ ಬೇಸರವಾಗುತ್ತಿತ್ತು. 
ಒಮ್ಮೆ ಬಾಲ್ಯದ ಗೆಳತಿ ಸಾವಿತ್ರಿ ಮನೆಗೆ ಬಂದು ಗಂಡನ ಬಗ್ಗೆ ಹೇಳಿದಳು. ಮೊದಲೇ ಅಲ್ಪ ಸ್ವಲ್ಪ ಮಾತು ಕಿವಿ ಮೇಲೆ ಬಿದ್ದರೂ ಕಮಲ ತಲೆ ಕೆಡಿಸಿಕೊಂಡಿರಲಿಲ್ಲ. ಗೆಳತಿಯ ಮಾತು ಕೇಳಿದಾಗಲೂ ಸಹ ನಂಬಲಿಲ್ಲ. ಆದರೆ ಗೆಳತಿಯ ಮನೆಗೆ ಹೋಗಿ ತಾನೇ ಗಂಡ ಬೇರೆ ಹುಡುಗಿ ಜೊತೆ ವಾಕಿಂಗ್ ಹೋಗುವುದನ್ನು ನೋಡಿದಳು. ಮನೆಗೆ ಬಂದು ಗಂಡನನ್ನು ಪ್ರಶ್ನಿಸಿದಳು. 
"ನನ್ನ ಇಷ್ಟದ ಹಾಗೇ ನಡೆಯುವೆ, ಏಕೆಂದರೆ ನಾನು ದುಡಿಯುವವನು" ಎಂದನು. 
"ಗಂಡ ನಡೆದ ಹಾದಿಯಲಿ ನಡೆಯಬೇಕಾದದ್ದು ಗೃಹಿಣಿ ಧರ್ಮ. ನಾನೂ ನಿಮ್ಮ ದಾರಿಯಲ್ಲಿ  ನಡೆಯುವೆ" ಎಂದ ಅವಳ ಮಾತಿಗೆ "ನನ್ನದೇನೂ ಅಭ್ಯಂತರವಿಲ್ಲ" ಎಂದನು. ಅಂದಿನಿಂದ ಅವನನ್ನು ತಿದ್ದುವ ಪ್ರಯತ್ನ ಮಾಡಲಿಲ್ಲ ಕಮಲ. ಮಗ ವಿಷಮಶೀತಜ್ವರದಿಂದ ಮಲಗಿದಾಗಲೂ ಸಹ ಗಮನಿಸದಂತಿದ್ದನು. 

ಬೆಳೆದ ಮಗ ಡಿಗ್ರಿ ಮುಗಿಸಿ ಕೆಲಸಕ್ಕೆ  ಸೇರಿದ ನಂತರ ತಾಯಿಯನ್ನು "ಈ ನರಕದಿಂದ ಹೊರ ಹೋಗೋಣ" ಎಂದನು. ವಯಸ್ಸಿನ ಪರಿಣಾಮ ಗಂಡ ಶಕ್ತಿಗುಂದಿದ್ದನು. ಮಗನೊಡನೆ ಹೊರಟ ಮಡದಿಯನ್ನು "ಈ ಸ್ಥಿತಿಯಲ್ಲಿ ಬಿಟ್ಟು ಹೋಗುವೆಯಾ?" ಕೇಳಿದನು. 
"ನಿನ್ನ ಸ್ಥಿತಿಗೆ ಕಾರಣ ನಾನಲ್ಲ ನೀನೇ, ಮಾಡಿದ್ದನ್ನು ಅನುಭವಿಸಬೇಕಲ್ಲವೇ? ಹೆಂಗಸಿಗೂ ಆತ್ಮ ಎನ್ನುವುದಿದೆ ಅವಳೂ ತನ್ನ ಆತ್ಮವನ್ನು ಗೌರವಿಸುತ್ತಾಳೆ. ಬೇಕಾದಾಗ ಉಪಯೋಗಿಸಿ ಬೇಡವಾದಾಗ ಬಿಸಾಡುವುದಕ್ಕೆ ನಾವೇನೂ ಹಳೆಯ ಅಂಗಿಗಳಲ್ಲ. ಹಿಂದೆ ನೀನೇ ಹೇಳಿದಂತೆ ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ" ಎಂದಳು.
ಮಗ "ಇಬ್ಬರಲ್ಲಿ ಒಬ್ಬರನ್ನು ಆರಿಸಿಕೋ" ಎಂದನು. "ಕೃತಜ್ಞತೆಯಿಲ್ಲದ ಆತ ಎಂದೋ ನಂಬಿಕೆ ಕಳೆದುಕೊಂಡಿದ್ದಾನೆ" ಎನ್ನುತ್ತಾ ಮಗನ ಜೊತೆ ನಡೆದಳು.
"ಪತಿಯೇ ದೈವ, ಅವರು ಏನೂ ಮಾಡಿದರೂ ಸರಿ " ಎಂದು ನಡೆಯುತ್ತಿದ್ದ ಕಮಲ ಎಚ್ಚೆತ್ತು ತಪ್ಪು  ಮಾಡಿದಾಗ ಅವನನ್ನು ಧಿಕ್ಕರಿಸಿ ಮಗನೊಂದಿಗೆ ನಡೆದದ್ದು, ಅವಿದ್ಯಾವಂತರಾದರೂ ಆತ್ಮಾಭಿಮಾನವಿರುತ್ತದೆ ಎನ್ನುವುದು ಎಷ್ಟೋ ಮಹಿಳೆಯರಿಗೆ ದಾರಿದೀಪವಾಗುತ್ತದೆ. ಈ ಕಥೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದೆ.

ಎಂಟು ಗಂಟೆ
ಶ್ರೀನಿವಾಸಯ್ಯ ಮತ್ತು ಜಾನಕಮ್ಮನವರಿಗೆ ಹೇಮ, ರೋಹಿಣಿ ಮತ್ತು ಶೇಖರ್ ಮೂವರು ಮಕ್ಕಳು. ರೋಹಿಣಿ ಒಂಬತ್ತನೆಯ ತರಗತಿಯಲ್ಲಿ ಓದುತ್ತಿದ್ದಳು. ಒಮ್ಮೆ ರೋಹಿಣಿಯನ್ನು ಬಿಟ್ಟು ಉಳಿದವರೆಲ್ಲರೂ ಕೇರಂ ಆಡವಾಡುತ್ತಿದ್ದರು. ರೋಹಿಣಿ ಓದುತ್ತಿದ್ದಳಾದರೂ ಮನಸ್ಸೆಲ್ಲಾ ಆಟದ ಮೇಲಿತ್ತು. ಓದಿದ್ದು ಅರ್ಥವಾಗುತ್ತಿರಲಿಲ್ಲ. ರೋಹಿಣಿ ಓದುವುದನ್ನು ಬಿಟ್ಟು ಅವಳೂ ತನ್ನ ರೂಂನಿಂದ ಅವರೆಲ್ಲ ಇದ್ದೆಡೆಗೆ ಹೋಗಲು ಎದ್ದಳು. ಆದರೆ ಸಮಯದಲ್ಲಿ ಗಡಿಯಾರ ಎಂಟು ಗಂಟೆ ಬಾರಿಸಲು ಪ್ರಾರಂಭಿಸಿತು. ಎದ್ದು ನಿಂತವಳೇ ತಕ್ಷಣ "ಅಮ್ಮಾ" ಎಂದು ಕೂಗಿಕೊಂಡು ಕೆಳಗೆ ಬಿದ್ದಳು.
ಎಲ್ಲರೂ ಗಾಬರಿಯಿಂದ ಓಡಿ ಬಂದರು. ಅಣ್ಣ ಡಾಕ್ಟರ್ ನ್ನು ಕರೆದುಕೊಂಡು ಬಂದನು. ವೈದ್ಯರು ನರಗಳ ದುರ್ಬಲತೆ ಎಂದು ಔಷಧವನ್ನು ಕೊಟ್ಟರು. ಆದರೆ ಅದೇ ರೀತಿ ಪುನರಾವರ್ತನೆಯಾಗಲು ತಂದೆ ತಾಯಿಗಳಿಗೆ ಆತಂಕ ಶುರುವಾಯಿತು. ತಾಯಿ ಗಂಡನಿಗೆ ಕಾಣದಂತೆ ಮಗಳನ್ನು ದೇವಸ್ಥಾನಕ್ಕೆ ಹೋಗಿ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ.
ಅದೇ ಸಮಯಕ್ಕೆ ಶ್ರೀನಿವಾಸಯ್ಯನವರ ಗೆಳೆಯ ವಿದೇಶದಿಂದ ಬಂದರು. ಇವರು ಅಲ್ಲಿ ಮನಃಶಾಸ್ತ್ರದ ಬಗ್ಗೆ  ಹೆಚ್ಚಿನ ವಿದ್ಯಾಭ್ಯಾಸ ಮಾಡಿಬಂದಿದ್ದರು. ಗೆಳೆಯನ ಮಗಳ ಸಮಸ್ಯೆಯನ್ನು ತಿಳಿದು "ಚಿಂತಿಸಬೇಡ ಇದು ದೈಹಿಕ ಸಮಸ್ಯೆಯಲ್ಲ ಮನಸ್ಸಿಗೆ ಸಂಬಂಧಿಸಿದ್ದು ನಾನು ಸರಿಪಡಿಸುವೆ" ಎಂದು ಧೈರ್ಯ ತುಂಬಿದರು. ನಂತರ ರೋಹಿಣಿಯನ್ನು ಹಿಪ್ನಾಟಿಸಂಗೆ ಒಳಪಡಿಸಿದರು. ಬಾಲ್ಯದಲ್ಲಿ ಅಜ್ಜಿಯ ಮರಣ ಅವಳ ಸುಪ್ತಮನದಲ್ಲಿ ಉಳಿದುಬಿಟ್ಟಿತ್ತು.  ಎಲ್ಲವನ್ನೂ ಮನಸ್ಸಿನಿಂದ ಹೊರ ಹಾಕಿದ್ದರಿಂದ ಮನಸ್ಸು ಹಗುರವಾಗಿ ರೋಹಿಣಿ ಗುಣಮುಖಳಾದಳು.

ಸಲಹೆ
ತಾನು ತಾಯಿಯಾಗುವ ವಿಷಯ ತಿಳಿದ ಮೇಲೆ ಯಾವಾಗಲೂ ಉಲ್ಲಾಸದಿಂದಿರುತ್ತಿದ್ದ ರೇವತಿ ಭಯದಿಂದ ಕಂಪಿಸಿದಳು. ಕಾರಣ ಅವಳ ಅಕ್ಕ ಅವಳ ಇಂತಹ ಸಮಯದಲ್ಲಿ  ಜೀವವನ್ನೇ ಕಳೆದುಕೊಂಡಿದ್ದಳು. ಮನೆಗೆ ಬಂದ ಪತಿಗೆ ತಾನು ತಾಯಿಯಾಗುತ್ತಿರುವ ವಿಷಯವನ್ನು ತಿಳಿಸಿದಳು. "ಮಹಿಳೆಯರಿಗೆ ಇದೊಂದು ಗಂಡಾಂತರ ಗಂಡನಿಂದ ಬರುವ ಅಂತ್ಯ" ಎಂದಳು. ಇದರಿಂದ ಪತಿ ಶ್ರೀಧರ ನೊಂದುಕೊಂಡರು ರೇವತಿ ಸುಮ್ಮನಾಗಲಿಲ್ಲ.
"ಇದೇ ನನ್ನ ಕೊನೆ" ಎಂದೆಲ್ಲ ಹೇಳುತ್ತಾ ದುಃಖಿಸುತ್ತಿದ್ದಳು. ಪತಿ ಎಷ್ಟೇ ಸಮಾಧಾನ ಮಾಡದರೂ ಇವಳ ವರ್ತನೆ ಬದಲಾಗಲಿಲ್ಲ. ಸಾಲದೆಂಬಂತೆ ಗೆಳತಿಯ ತಾಯಿ ಪ್ರಸವದ ಬಗ್ಗೆ ತಪ್ಪು ಕಲ್ಪನೆಗಳ ಮಾತುಗಳನ್ನಾಡಿದರು. ಇದು ಅವಳನ್ನು ಇನ್ನೂ ಭಯಪಡುವಂತೆ ಮಾಡಿತು.
ಕಾಕತಾಳೀಯವೆಂಬಂತೆ "ಸುಮಂಗಲಿ" ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ 'ಅಗ್ನಿಪರೀಕ್ಷೆ' ಕಥೆಯೂ ಇವಳ ಮೇಲೆ ಪ್ರಭಾವ ಬೀರುತ್ತಿತ್ತು. ಅದರಲ್ಲಿ ಆಶಾ ಗರ್ಭಿಣಿಯಾಗಿದ್ದು ಹಲವು ನೋವುಗಳಿಂದ ಬಳಲುತ್ತಿದ್ದಳು. ಓದಿದ ರೇವತಿಯೂ  ತನಗೂ ಸಹ ಅದೇ ನೋವುಗಳಿವೆ ಎಂದು ಹೇಳುತ್ತಿದ್ದಳು. ಕೊನೆಗೆ ದಾರಿ ಕಾಣದ ಶ್ರೀಧರ ಕಥೆಗಾರನ ಬಳಿಗೆ ಹೋಗಿ ತನ್ನ ಮಡದಿಯ ಸಮಸ್ಯೆಯನ್ನು ತಿಳಿಸಿದನು. ಕತೆಗಾರ ಕಥೆಯನ್ನು ದುಃಖಾಂತ ಮಾಡಿದರೆ ಜನಪ್ರಿಯವಾಗುತ್ತಿತ್ತು, ಆದರೆ ಒಂದು ಜೀವದ ಅಳಿವು ಉಳಿವಿನ ಪ್ರಶ್ನೆ ಎಂದು ಯೋಚಿಸಿ ಸುಖಾಂತ ಮಾಡಿದನು. ಕಥೆಯನ್ನು ಓದಿದ ನಂತರ ರೇವತಿ ಮುದ್ದಾದ ಮಗುವಿಗೆ ಜನ್ಮ ನೀಡಿದಳು.
   
ಮೇಲಿನ ಎರಡೂ  ಕಥೆಗಳು ಮನಸ್ಸಿಗೆ ಸಂಬಂಧ ಪಟ್ಟಿವೆ. ಅಂದು ಮನಸ್ಸಿಗೆ ಏನೇ ಕಾಯಿಲೆ ಬಂದರೂ ಮೌಢ್ಯತೆಗೆ ಒಳಗಾಗಿ ವೈದ್ಯರ ಬಳಿಗೆ ಹೋಗುತ್ತಿರಲಿಲ್ಲ. ಆದ್ದರಿಂದ ಯಾವುದೇ ಸಮಸ್ಯೆ ಬಂದರೂ ವೈದ್ಯರ ಬಳಿ ಹೋಗಿ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.

ಬಿಳಿಯ ಕಾಗೆ
ಪ್ರೀತಿಯ ಸುಳಿಗೆ ಸಿಲುಕಿದ್ದ ಸುಧಾ ಅವನನ್ನು ಮರೆಯಲಾಗದೆ ಚಡಪಡಿಸುತ್ತಿದ್ದಳು. ಅದುವರೆವಿಗೂ ಎಲ್ಲವೂ ಸರಿಯಾಗಿತ್ತು. ಯಾವಾಗ ಮದುವೆ ಬಗ್ಗೆ ಕೇಳಿದಳೋ ಆಗ ಅರ್ಥವಾಯಿತು ಅವನ ಮನಸ್ಸು ಸುಧಾಳಿಗೆ. ತಾನು ಹಂಸವೆಂದು, ಪ್ರೀತಿಸಿದವನು ಕಾಗೆಯೆಂದು.
"ಮದುವೆಯಾದರೆ ನಾವು ಒಬ್ಬರನೊಬ್ಬರು ಪ್ರೀತಿಸಲು ಆಗುವುದಿಲ್ಲ. ಪ್ರೇಮಿಗಳು ಗಂಡ ಹೆಂಡಿರಾಗಬಹುದು. ಆದರೆ ಗಂಡ ಹೆಂಡತಿ ಪ್ರೇಮಿಗಳಾಗಲು ಸಾಧ್ಯವಿಲ್ಲ, ನಾವು ಕೊನೆಯವರೆವಿಗೂ ಹೀಗೆ ಇರೋಣ" ಎಂದನು.
"ನನ್ನ ಗತಿ?" ಎಂದ ಸುಧಾಳ ಪ್ರಶ್ನೆಗೆ "ನಿನಗೆ ಯಾರಲ್ಲಿ ಪ್ರೀತಿಯಿಲ್ಲವೋ ಅವನನ್ನು ಮದುವೆಯಾಗು" ಎಂದ ಅವನ ಮಾತಿನಿಂದ ಅವಳ ಹೃದಯ ಒಡೆದಂತಾಯಿತು.
ನೊಂದ ಅವಳಿಗೆ ತಂದೆತಾಯಿಗಳ ಮುಂದೆ ನಗುವಿನ ಮುಖವಾಡ ಧರಿಸಿ ನಾಟಕವಾಡಲು ಸಾಧ್ಯವಾಗಲಿಲ್ಲ . ಕೊನೆಗೆ ಕಾಗದ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು.
ಆದರೆ "ಸುಧಾ ನಮ್ಮ ಮನೆಯ ಬೆಳಕು, ಲಕ್ಷ್ಮಿ" ಎಂಬ ಅಮ್ಮನ ಮಾತು, "ಸುಧಾ ದಿಟ್ಟೆ , ಇವಳೊಬ್ಬಳಿದ್ದರೆ ಹತ್ತು ಜನ ಗಂಡು ಮಕ್ಕಳಿದ್ದಂತೆ" ಎನ್ನುವ ಅಪ್ಪನ ಮಾತುಗಳು ಅವಳನ್ನು ಎಚ್ಚರಿಸಿತು.
ಎಚ್ಚೆತ್ತ ಅವಳು ನಾಚಿಕೆ ಪಡುತ್ತಾ "ಯಾರೋ ಹೃದಯವಿಲ್ಲದವನಿಗೆ ನನ್ನ ಪ್ರಾಣವನ್ನೇಕೆ ತ್ಯಾಗ ಮಾಡಲಿ, ಈ ಸೋಲೇ ನನ್ನ ಗೆಲುವಿನ ಸೋಪಾನವಾಗಬಾರದೇಕೆ" ಎಂದು  ತನ್ನ ನಿರ್ಧಾರವನ್ನು ಬದಲಿಸಿದಳು.
ಪ್ರೀತಿ ಎಂಬ ಆಕರ್ಷಣೆಗೆ ಬಲಿಯಾಗಿ ತಪ್ಪು ಹೆಜ್ಜೆ  ಇಟ್ಟು ತಮ್ಮ ಜೀವವನ್ನು ಕೊನೆಗೊಳಿಸಿಕೊಳ್ಳುವ ಯುವಜನತೆಗೆ ಈ ಕಥೆ ಒಂದು ಪಾಠದಂತಿದೆ.

ಆಕರ್ಷಣೆ
ವಸಂತಿ ಏನೂ ಮಾಡಿದರೂ ಗಂಡ ಗೋಪಾಲನ ನಿರುತ್ಸಾಹವನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಎಲ್ಲದರಲ್ಲೂ ನಿರಾಸಕ್ತಿ.  ಹೀಗಿರಬೇಕಾದರೆ ಗೋಪಾಲನ ಸ್ನೇಹಿತ ಸುಬ್ಬು ಇವರ ಮನೆಗೆ ಬಂದನು. ವಾಚಾಳಿಯಾದ ಇವನು ಬಹು ಬೇಗ ವಸಂತಿಯ ತಮ್ಮನ ಸ್ಥಾನ ಗಳಿಸಿದನು.
ಬ್ರಹ್ಮಚಾರಿಯಾದ ಇವನಿಗೆ ವಸಂತಿಯ ಅಡುಗೆ ಇಷ್ಟವಾಗಿ ವಾರಕ್ಕೊಮ್ಮೆ ಬರುತ್ತಿದ್ದನು. ಕ್ರಮೇಣ ವಸಂತಿಯ ಜೊತೆ ಕೇರಂ, ಚದುರಂಗ, ಇಸ್ಪೀಟು  ಆಟಗಳನ್ನು ಆಡುತ್ತಿದ್ದನು. ಇದನ್ನೆಲ್ಲಾ ನೋಡಿದ ವಸಂತಿ ಮನದಲ್ಲೇ "ಸುಬ್ಬು ಮದುವೆಯಾದರೆ ಎಷ್ಟು ಚೆನ್ನಾಗಿ ಸಂಸಾರ ಮಾಡುವನು" ಎಂದು ಊಹಿಸಿಕೊಳ್ಳುತ್ತಿದ್ದಳು. ಸುಬ್ಬುವಿಗೆ ಬೇರೆಡೆಗೆ ವರ್ಗವಾದಾಗ ವಸಂತಿ ತುಂಬಾ ಬೇಸರಗೊಂಡಳು.
ಸ್ವಲ್ಪ ಕಾಲದ ನಂತರ ಅವನಿಗೆ ಮತ್ತೆ ಇದೇ ಊರಿಗೆ ವರ್ಗವಾಯಿತು. ಮದುವೆಯಾಗಿದ್ದ ಸುಬ್ಬು ಒಂದು ಮಗುವಿನ ತಂದೆಯಾಗಿದ್ದನು. ವಸಂತಿ ಮತ್ತು ಗೋಪಾಲ ಇಬ್ಬರೂ ಸುಬ್ಬುವಿನ ಮನೆಗೆ ಬಂದರು. ಎಂದಿನಂತೆ ಸುಬ್ಬು ಒಂದೇ ಸಮನೆ ಮಾತನಾಡಲಾರಂಭಿಸಿದನು.
ಮಡದಿ ಅಳುತ್ತಿದ್ದ ಮಗುವನ್ನು ಸಮಾಧಾನಿಸಲೂ ಆಗದೆ ಅತಿಥಿಗಳನ್ನು ಉಪಚರಿಸಲೂ ಆಗದೆ ಇರುವುದನ್ನು ನೋಡಿಯೂ ಸಹಾಯ ಮಾಡಲು ಹೋಗಲಿಲ್ಲ ಸುಬ್ಬು.
ಸುಬ್ಬುವಿನ ಮಡದಿ "ನನಗೆ ಇವರು ಇಷ್ಟು  ಮಾತನಾಡುತ್ತಾರೆ" ಎಂದು ತಿಳಿದಿರಲಿಲ್ಲ ಎನ್ನುವುದನ್ನು ಕೇಳಿ ವಸಂತಿ ಆಶ್ಚರ್ಯಗೊಂಡಳು. ಮನೆಗೆ ಬಂದ ವಸಂತಿ ನಾಟಕವನ್ನು ಓದುತ್ತಿದ್ದಳು. ಅದರಲ್ಲಿದ್ದ "ಗಂಡಿಗೆ ಹೆಣ್ಣಿನ ಆಕರ್ಷಣೆ ಮದುವೆಯಾಗುವವರೆಗೆ ಮಾತ್ರವಂತೆ, ಆದರೆ ಹೆಣ್ಣು ಜಾತಿಯ ಮೇಲಿನ ಆಕರ್ಷಣೆ ಹೋಗುವುದಿಲ್ಲವಂತೆ. ಕೈ ಹಿಡಿದ ಹೆಂಡತಿಯಲ್ಲಿ ಮಾತ್ರ ಸೆಳೆತವಿರುವುದಿಲ್ಲವಂತೆ" ಎನ್ನುವ ವಾಕ್ಯ ಅವಳ ಗಮನ ಸೆಳೆಯಿತು. ಇದನ್ನು ಗಂಡನಿಗೆ ಹೇಳಿದಳು ಆದರೆ ಆತನಾಗಲೇ ನಿದ್ದೆಲೋಕಕ್ಕೆ ಜಾರಿದ್ದನು.
ಹೀಗೆ "ಮನೆಗೆ ಮಾರಿ ಪರರಿಗೆ ಉಪಕಾರಿ" ಎಂಬಂತೆ ಮನೆಯಲ್ಲಿ ಮಡದಿ ಮಕ್ಕಳನ್ನು ಗಮನಿಸದೆ ಪರರಿಗೆ ಸಹಾಯ ಮಾಡುವ ಗುಣ ಹಲವರಲ್ಲಿರುತ್ತದೆ. ಇದರಿಂದ ಅವರು ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಆದರೆ ಇದರ ಅರಿವು ಅವರಿಗಿರುವುದಿಲ್ಲ.

ಅವನ ತಾಯಿ
ಮದುವೆಯಾಗಿ ಇಪ್ಪತ್ತು ವರ್ಷಗಳ ನಂತರ ಅವರ ಬಾಳಿನಲ್ಲಿ ಬೆಳಕಾಗಿ ಬಂದ ಮಗ. ಹಲವಾರು ಹರಕೆಗಳ ಫಲ ಎಂಬಂತೆ ಜನಿಸಿದ ಮಗನನ್ನು ಕಂಡರೆ ತಾಯಿ ರಾಜಮ್ಮನಿಗೆ ಎಲ್ಲಿಲ್ಲದ ಪ್ರೀತಿ. ತಾನು ಅವರಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರೂ ಮಗನನ್ನು ರಾಜನಂತೆ ಬೆಳೆಸುತ್ತಿದ್ದಳು.
ತಾಯಿಯ ಪ್ರೀತಿಯಲ್ಲಿ ಬೆಳೆದ ಮಗ ಎಲ್ಲಾ ತರಗತಿಯಲ್ಲೂ ಪ್ರಥಮ ಸ್ಥಾನ ಪಡೆಯುತ್ತಿದ್ದನು. ಎಂ ಎಸ್.ಸಿ ಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಾಗ ದೂರವಾಗಿದ್ದ ನೆಂಟರೆಲ್ಲಾ ಹತ್ತಿರಕ್ಕೆ ಬರತೊಡಗಿದರು. ಸಾಹುಕಾರರು ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಮುಂದೆ ಬಂದರು.
ಸ್ಕಾಲರ್ ಶಿಪ್ ನಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುತ್ತೇನೆ ಮದುವೆಯಾಗುವುದಿಲ್ಲ ಎಂದನು. ವಿದೇಶಕ್ಕೆ ಹೋದ ಮಗ ಪ್ರಾರಂಭದಲ್ಲಿ ಕಾಗದ ಬರೆಯುತ್ತಿದ್ದನು. ಕಾಲಕ್ರಮೇಣ ಅದು ಕಡಿಮೆಯಾಗತೊಡಗಿತು.
ಮಗನ ಬರುವಿಕೆಯನ್ನು ಕಾಯುತ್ತಿದ್ದ ರಾಜಮ್ಮನಿಗೆ ಮಗ ಇನ್ನು ಎರಡು ವರ್ಷ ಬರುವುದಿಲ್ಲವೆಂದಾಗ ಬೇಸರವಾಯಿತು. ನೊಂದ ತಾಯಿ ಹಾಸಿಗೆ ಹಿಡಿದರು. ಪತಿಯ ಆರೈಕೆಯಿಂದ ಚೇತರಿಸಿಕೊಂಡರು.
ಮಗ ಮದುವೆಯಾಗಿರುವನೆಂದು ಇತರರ ಮಾತುಗಳನ್ನು ಕೇಳಿದರೂ ತಂದೆ ತಾಯಿಗಳು ಮಗನ ಮೇಲಿನ ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ಕೊನೆಗೆ ಮಗನೇ ತಾನು ಮದುವೆಯಾಗಿದ್ದೇನೆ ಹಾಗೂ ಇಲ್ಲಿಯೇ ನೆಲೆಸುತ್ತೇನೆ ಎಂದಾಗ ತಾಯಿ ಹುಚ್ಚಿಯಂತಾದರು.
ವೈದ್ಯರ ನೆರವಿನಿಂದ ಅವರ ಉದ್ವೇಗ ಕಡಿಮೆಯಾಗಿ ಚೇತರಿಸಿಕೊಂಡರು. ಹನ್ನೆರಡು ವರ್ಷಗಳ ನಂತರ ವಿದೇಶಿ ಪತ್ನಿಗೆ ತಾಯ್ನಾಡನ್ನು ತೋರಿಸುವ ಸಲುವಾಗಿ ಸ್ವದೇಶಕ್ಕೆ ಬಂದನು. ಅಲ್ಲಿನ ಸಪ್ಪೆ ಆಹಾರಕ್ಕೆ ಹೊಂದಿಕೊಂಡಿದ್ದ ಅವನಿಗೆ ತಾಯಿಯು ಪ್ರೀತಿಯಿಂದ ಮಾಡಿದ ಅಡುಗೆ ರುಚಿಸಲಿಲ್ಲ.
ತಾನು ತಂದಿದ್ದ ಕಾಣಿಕೆಗಳನ್ನು ಕೊಡಲು ಬಂದಾಗ ತಾಯಿ ನಿರಾಕರಿಸಿದಳು. ಕೊನೆಗೆ "ನಮಗೋಸ್ಕರ ರಜೆಯನ್ನು ಕಳೆದುಕೊಳ್ಳಬೇಡ" ಎಂದ ಅಮ್ಮನ ಮಾತಿನಿಂದ ಮಗ ಅವಾಕ್ಕಾದನು.
ಮಗ ಸೊಸೆ ವಿದೇಶಕ್ಕೆ ಹೋದ ನಂತರ ಪತಿಯೊಂದಿಗೆ "ನಾನು ಸಾವಿರ ಹರಕೆ ಕಟ್ಟಿ ಮಗನನ್ನು ಪಡೆದೆ. ಆದರೆ ಈಗ ಅನಿಸುತ್ತಿದೆ ನಾನು ಕೊನೆಯವರೆಗೂ ಬಂಜೆಯಾಗಿಯೇ ಉಳಿದಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಹೇಳಿದರು.
ಮಡದಿಯ ಮಾತನ್ನು ಕೇಳಿದ "ಮಕ್ಕಳಿಲ್ಲದೆ ಮೋಕ್ಷವಿಲ್ಲ ಎನ್ನುತ್ತಿದ್ದವಳು ಇವಳೇನಾ" ಎಂದು ಆಶ್ಚರ್ಯದಿಂದ ನೋಡಿದರು ಸೋಮಯ್ಯ.
ಸತ್ತ ಮನುಷ್ಯರ ಬಗ್ಗೆ  ಮಾತನಾಡಿದರೆ ಏನು ಪ್ರಯೋಜನ ಎನ್ನುವ ಆ ತಾಯಿಯ  ಮನಸ್ಸಿನ ನೋವನ್ನು ಮನ ಮುಟ್ಟುವಂತೆ ಬರೆದಿದ್ದಾರೆ.
ಹೀಗೆ ತ್ರಿವೇಣಿಯವರು ತಮ್ಮ ಬದುಕಿದ ಅಲ್ಪಾವಧಿಯಲ್ಲಿಯೇ ಹಲವಾರು ಕಾದಂಬರಿಗಳು, ಸಣ್ಣ ಕಥೆಗಳನ್ನು ಬಹಳ ಚೆನ್ನಾಗಿ ಬರೆದಿದ್ದಾರೆ. ಮಾನಸಿಕ ಕಾಯಿಲೆಗಳ ಬಗ್ಗೆ ತಪ್ಪು ಕಲ್ಪನೆಗಳಿದ್ದ ಸಮಯದಲ್ಲಿ ಅದನ್ನು  ಹೋಗಲಾಡಿಸುವ ಪ್ರಯತ್ನಗಳನ್ನು ಮಾಡಿದ್ದಾರೆ.
 - ವಿಜಯಲಕ್ಷ್ಮಿ  ಎಂ ಎಸ್   

ಅನುಭವ - ಅವಳು...!!?



ಒಂದು ವಾರದಿಂದ ಆಕೆ ಫೋನಿಸುತ್ತಲೇ ಇದ್ದಾಳೆ! ನನಗೂ ಗೊತ್ತು, ಆಕೆ ನನ್ನೊಂದಿಗೆ ಏನೋ ಹೇಳುವುದಿದೆ. ಆದರೆ ನನಗೇಕೊ ಕೇಳುವ ವ್ಯವಧಾನ ಇಲ್ಲವಾಯ್ತ!?
 ಗೊತ್ತು,ಇಲ್ಲಿ ಪ್ರತಿ ಬದುಕಿಗೂ ಅದರದ್ದೇ  ನೋವಿದೆ. ನೋವಿಲ್ಲದ ಜೀವವಿಲ್ಲ, ಮತ್ತು ಪ್ರತಿ ನೋವೂ ತನಗೆರಡು ಕಿವಿಗಳನ್ನು ಬೇಡುತ್ತದೆ. ಹಂಚಿಕೊಂಡ ಮಾತ್ರಕ್ಕೆ ಯಾವುದೂ ತೀರುವುದಿಲ್ಲವಾದರೂ ಹಂಚಿಕೊಳ್ಳುತ್ತಲೇ ಚೂರು ಹಗೂರಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಆಕೆಯ ನೋವು ನನಗೂ ಗೊತ್ತು. ಅಮ್ಮನಿಲ್ಲ, ಬದುಕು ನೆಟ್ಟಗಿಲ್ಲ, ಹೇಗಿದ್ದಿ? ಎನ್ನುವ ಬಂಧು-ಬಳಗವಿಲ್ಲ! ಮುಗ್ಧತೆಯನ್ನೇ ಉಸಿರಾಡುವ ಅವಳಿಗೆ ಗೆಳತಿಯರೂ ಇಲ್ಲ! 
ಆದರೂ ಕೇಳಿಸಿಕೊಳ್ಳುವವರಿಗೂ ಅವರದೇ ಒತ್ತಡಗಳು..ಅವರದೇ ಯಾತನೆಗಳು..
ನಾನು ಟೀಚರ್ ಆದರೂ ಅವಳಿಗೆ ನಾನು ಪಕ್ಕಾ ಗೆಳತಿಯೇ.ಅವಳ ಕರೆ ತಿರಸ್ಕರಿಸಿದ ಗಿಲ್ಟ್ ಕಾಡತೊಡಗಿತು...ನಾನೇ ಫೋನಿಸಿ ಹೇಳು ಮಗಾ..ಅಂದೆ. 
ಯಾಕೋ ಸಂಕಟವಾಯಿತು ಟೀಚರ್, ಸುಮ್ಮನೆ ಅಳಬೇಕೆನಿಸಿತು. ಯಾರದೋ ವಾಟ್ಸಾಪಿನಲ್ಲಿ ನಿಮ್ಮ ಫೋಟೋ ನೋಡಿದೆ ಟೀಚರ್.. ಮತ್ತೆ ಅದೆಲ್ಲ ಮಾಮೂಲಿ ಟೀಚರ್, ಯಾವಾಗಾದರೂ ಮಾತಾಡುತ್ತೇನೆ ಅಂದಳು.
ನೋವುಗಳಲ್ಲೇ ಬದುಕು ಅರಳಬೇಕು..ಅಮ್ಮ ಇಲ್ಲ ಅಂತಿದ್ದೆ. ಈಗ ನೀನೇ ಅಮ್ಮನಾಗಿದ್ದಿ. ನಾಳೆ ಬದುಕು ಮತ್ತೂ ಬದಲಾಗುತ್ತೆ. ಬೀ ಬೋಲ್ಡ್..ಪ್ರೀತಿ ಯಾವತ್ತೂ ಇರುತ್ತೆ ಅಂದೆ.
ಅವಳಿಗೆಷ್ಟು ಸಮಾಧಾನವಾಯಿತೋ ಗೊತ್ತಿಲ್ಲ. ಆದರೆ ನನ್ನ ದುಃಖ ದೊಡ್ಡದು ಮಾಡಿಕೊಂಡು ವಾರಗಟ್ಟಲೆ ಅವಳ ಕರೆಯನ್ನು ತಿರಸ್ಕರಿಸಿದ ಗಿಲ್ಟನ್ನು ಕಳೆದುಕೊಂಡೆ!
- ರಂಗಮ್ಮ ಹೊದೇಕಲ್

ಕವನ - ಮೈತ್ರಿ ಮಾರ್ಗಕ್ಕೆ ಕಾದಿದ್ದೇವೆ


ತಲೆಮಾರುಗಳ ತಮದ
ಸಂಘರ್ಷಗಳಲ್ಲಿ
ಬೆಳಕೂ ಬೆಂಕಿಯಾಗಿದೆ ಗುರುವೇ...
ನಿಶ್ಯಬ್ದವೆಂಬುದೂ ಸದ್ದೇ ಆಗಿ
ಮಾತುಗಳೆಲ್ಲ ಮುಳ್ಳಾಗಿವೆ
ಸಣ್ಣ ಸಣ್ಣ ತಾವಿನಲ್ಲೂ ಗೋಡೆ ಬೆಳೆದು
ಬರವನ್ನೇ ಬೆಳೆಯುತ್ತಿವೆ!

ಕಾರುಣ್ಯ ನುಡಿದವರ
ಕೊಲೆಗಳಾಗುವ ನೆಲದಲ್ಲಿ
ನೀನು ಹಚ್ಚಿ ಹೋದ ಹಣತೆ
ಉಸಿರ ಬೇಡುತ್ತಿದೆ!

ಕ್ರೌರ್ಯ ಕಾರುಣ್ಯವಾಗಿ
ಪ್ರೀತಿ ಎಲ್ಲರ ಹಾಡಾಗಿ
ಬುದ್ಧ ಬೆಳಕು ಎದೆ ತುಂಬುವ
ಕರುಣಾ ಮೈತ್ರಿ ಮಾರ್ಗಕ್ಕೆ
ಕಾದಿದ್ದೇವೆ !

ಅನುವಾದಿತ ಕವಿತೆ - ನಿರಂಕುಶಾಧಿಕಾರಿಗೆ ಗೋರಿಬರಹ


ಪಕ್ಕಾ ಇರಬೇಕೆಲ್ಲವೂ ಅವನಿಗೆ; ಅದರದೇ ತುಡಿತ 
ಅವನು ಕಟ್ಟಿದ ಕವಿತೆ, ತಿಳಿಯುವುದು ಬಲು ಸುಲಭ
ತನ್ನ ಮುಂಗೈಯಂತೆ ತಿಳಿದಿಹನು ಮನುಷ್ಯನ ದಡ್ಡತನ
ಅವನಿಗೋ ಸೈನ್ಯ , ತುಕಡಿಗಳಲ್ಲಿ ಮಹಾ ಆಸಕ್ತಿ 
ಅವನು ನಕ್ಕರೆ, ಮಹನೀಯ ಸೆನೆಟರು ನಗುವರು
ಅವನು ಅತ್ತರೆ ಬೀದಿಯಲ್ಲಿ ಮಕ್ಕಳು ಸಾಯುವರು. 
- ಡಬ್ಲ್ಯೂ.ಎಚ್. ಆಡೆನ್
ಅನುವಾದ : ಎಸ್.ಎನ್.ಸ್ವಾಮಿ

ಅನುವಾದಿತ ಕವಿತೆ - ಅಪೂರ್ವ ಹೆಣ್ಣು

ಸುಂದರಿಯರಿ
ಗೆಲ್ಲರಿಗೊಂದಚ್ಚರಿ
ನಾ ಏಕೆ ಎಲ್ಲರ 
ಕಾಡುವೆನೆಂದು, 
ಅಂತ ಸೊಬಗು 
ನನ್ನಲಿ ಎನಿದೆಯೆಂದು?
ನಾನೋ ಚಲುವೆಯೊ
ಮಾದಕದರಸಿಯೋ ಅಲ್ಲ..
ಎಂದಾಗ.......... 
ತೋಳುಗಳೊಮ್ಮೆ
ನಿತಂಬಗಳೊಮ್ಮೆ
ಬೀಸುಗಾಲಿನ ಹೆಜ್ಜೆಗಳ
ಕೊಂಕುನಗುವಿನ ತುಟಿಗಳ
ಕಡೆಗೊಮ್ಮೆ ನೋಡುತ್ತಾರೆ.
ಸಾಧಾರಣದಲ್ಲಿನ
ತುಂಬು ಹೆಣ್ಣತನವನ್ನು
ನಾ ಯುವತಿಯಷ್ಟೆ.  

ನಿನ್ನಷ್ಟೆ ಸರಳವಾಗಿ
ಒಳಬಂದ ಕೋಣಿಯೊಳು
ಕಂಡಾಗ ನನ್ನ, 
ಅವನು
ಮಂಡಿಯೂರುತ್ತಾನೆ.
ಕಂಪಿಸುತ್ತಾನೆ.
ಮಧುವ ಹೀರುವ ದುಂಬಿ
ಬಾಗಿ ಕುಸುಮವ ಕೇಳಿದಂತೆ
ನನ್ನಾತ್ಮದ ಸಂಧಿಯ
ಬಿಚ್ಚಿತೋರಿದರು
ಅವ ಮೂಸುವುದಿಲ್ಲ.
ಆಘ್ರಾಣಿಸುವುದು ಇಲ್ಲ.
ಕಾಣುವುದು ಇಲ್ಲ.
ನಾ ಏನೆಂದು?
ಸುಡುವ ಕಾಮನೆಯ 
ಕಂಗಳಲಿ
ಬಯಕೆಯುಕ್ಕಿಸುವ ನಗುವಿನ ಹೊಳಪಿನಲಿ
ಹೊರಳುತ್ತಾನೆ
ಪಾದದ ಅಡಿಗಳಲಿ.
ನಾ ಯುವತಿಯಷ್ಟೆ.

ಅವರಿಗೆಲ್ಲ ಒಂದಚ್ಚರಿ
ತಾವು ಕಂಡಿದ್ದೇನು?
ಬಯಸಿದ್ದೇನು?
ಪಡೆದಿದ್ದೇನು?
ನಾ ಹೇಳುತ್ತಲಿದ್ದೆ.......
ಬಳುಕಿದಂತ ಬೆನ್ನ ಹುರಿ
ಬೆಳಗಿನಂತ ನಗು
ಉಸಿರನ ಏರಿಳಿತದ 
ಮೊಲೆಗಳ ನಡುವೆ
ನಿನಗೆ ಹೊಳೆದಿಷ್ಟೆ
ನಾ ಹೆಣ್ಣೆಂದಷ್ಟೆ

ನನ್ನ ಬಿಗುಮಾನದ ನಡಿಗೆ
ನಿಮ್ಮೊಳಗೊಂದು
ಹೆಮ್ಮೆಯ ಪುಳಕಗಳ ಬಿಚ್ಚುತ್ತದೆ.
ನನ್ನ ಬಿಚ್ಚುಗೂದಲಿನ
ವೈಯಾರದಲಿ
ಮೃದು ಪಾದದ
ಹಿಮ್ಮಡಿಯ ಓಲಾಟದಲಿ
ಗುಟುರುಗಳಿಲ್ಲದೆ ಹೊರಟಾಗ
ನಿಮಗನಿಸುತ್ತದೆ ನಾ 
ಅದ್ಭುತ ಹೆಣ್ಣೆಂದು.
ಮೂಲ - ಮಯಾ ಆಂಜೆಲೋ 
ಅನುವಾದ - ಸವಿತಾ ರವಿಶಂಕರ್

ಲೇಖನ - ಹೆಣ್ಣುಮಕ್ಕಳ ಮುಂದಿರುವ ಸವಾಲುಗಳು



ನಮ್ಮ ವೈವಾಹಿಕ ರೀತಿನೀತಿಗಳಲ್ಲಿ ಪರಸ್ಪರ ಇಷ್ಟಪಟ್ಟು ಅವರ ಕಷ್ಟ ಸುಖಗಳನ್ನು ಹಂಚಿಕೊಂಡು ಅವರೇ ನಿರ್ಧಾರ ತೆಗೆದುಕೊಂಡು ಮದುವೆಯಾಗುವ ಪದ್ದತಿ ಇನ್ನೂ ಬಂದಿಲ್ಲ. ಈಗಲೂ ಹುಡುಗಿಯ ಅಂದ ಚಂದವೇ ಮಾತಿನ ವಸ್ತು. ಆ ಕೂಸು ತುಂಬಾ ಚಂದ ಇದ್ದಡೆ!! ಇಬ್ಬರೂ ಇಂಜಿನಿಯರಿಂಗ್, ಮೆಡಿಕಲ್ ಓದಿ  ಅಥವಾ  ಉನ್ನತ ವಿದ್ಯಾಭ್ಯಾಸ ಹೊಂದಿ ಕೆಲಸದಲ್ಲಿದ್ದರೂ ಮಾತಿನ ವರಸೆ ಬದಲಾಗಿಲ್ಲ! ಇದು ಕೇವಲ ಧಾಟಿ ಅಲ್ಲ!! ದೃಷ್ಟಿ ಕೋನ! 
ಹೆಣ್ಣು ಎಂದರೆ ಅಂದ, ಚಂದ ಮದುವೆಗೆ ಸಿದ್ಧಳಾದವಳು; ಆಕೆಯ ವರನಾಗುವವನನ್ನು ಮೆಚ್ಚಿಸಿ ಆತನ ಬೇಕು ಬೇಡಗಳನ್ನು ಪರಿಗಣಿಸಬೇಕಾದವಳು; ಅಷ್ಟೇ ಅಲ್ಲದೆ ಆತನ ಸುಖ ಸೌಖ್ಯವೇ ಆಕೆಯ ಉಸಿರು. ನಂತರದ ಪೀಳಿಗೆಯ ಸೃಷ್ಟಿಕರ್ತಳು, ಅದರಲ್ಲೂ ಕುಲದೀಪಕನನ್ನು ಹಡೆಯಬೇಕಾದವಳು. ಇದೇ ಪರಂಪರೆ ಕಳೆದ ಸಾವಿರಾರು ವರ್ಷಗಳದ್ದು! ಇದರಲ್ಲಿ ಸ್ವಲ್ಪ ಲೋಪವಾದರೂ ಅದೊಂದು ವಿಚಿತ್ರ! 
ಬಾಲ್ಯದಿಂದ ಆಕೆಯ ವೈವಾಹಿಕ ಅವಧಿಯವರೆಗೆ, ಈ ಆಧುನಿಕ ಯುಗದಲ್ಲೂ ಅಷ್ಟರಮಟ್ಟಿಗೆ ಸ್ವತಂತ್ರವಾಗಿರುವ ಆಕೆಯ ಬದುಕು ನಂತರ ರಿಮೋಟ್ ಕಂಟ್ರೋಲ್‌ ಗೊಳಪಟ್ಟಂತೆ! ಆಕೆಯ ಪತಿರಾಯನ ಆಸೆ, ಆಕಾಂಕ್ಷೆಗೆ ತಕ್ಕಂತೆ ಅವಳ ಅಭಿರುಚಿಯೂ ಬದಲಾಗಬೇಕು. ಉದ್ಯೋಗ ಮುಗಿಸಿ ಬಂದ ರಾಯನನ್ನು ನೋಡಿಕೊಂಡು ತನ್ನ ಮಗುವಿನ ಜೊತೆಗೆ ಈತನೂ ದೊಡ್ಡ ಮಗು ಎಂಬುದಾಗಿ ಮಮಕಾರ ಮಾಡುತ್ತಾ ದೊಡ್ಡ ತಾಯ್ತನದ ಮೆರುಗಲ್ಲಿ ಲೋಕಕ್ಕೆಲ್ಲಾ ಮಿರುಗುತ್ತಾ, ಕೊರಗುವ ಆಧುನಿಕ ಮಹಿಳೆಯರು ಅದೆಷ್ಟೋ!! ತಮ್ಮ ವಿದ್ಯಾಭ್ಯಾಸ, ವೃತ್ತಿಪರತೆ, ವ್ಯಕ್ತಿತ್ವವನ್ನು ಬದಿಗೊತ್ತಿ ಗಾಜಿನರಮನೆಯಲ್ಲಿ ಬದುಕುವ ವಿದ್ಯಾವಂತ, ಯುವತಾಯಂದಿರ ಬದುಕೇನೂ ತುಂಬಾ ಬದಲಾವಣೆಯನ್ನು ಹೊಂದಿಲ್ಲ!
ಹಾಗಾದರೆ ಬದಲಾವಣೆಗೊಳಪಡುವುದು ಬೇಕಾಗಿಲ್ಲವೇ?! ಆಧುನಿಕ ಯಂತ್ರ ಸಾಮಗ್ರಿಗಳು ಅಡುಗೆ ಇನ್ನಿತರ ಗೃಹ ಕೃತ್ಯಗಳನ್ನು ಸುಲಭಗೊಳಿಸಿರಬಹುದು! ಕನಿಷ್ಠ ಎರಡು ಗಂಟೆಗಳಲ್ಲಿ ಮನೆಯ ಸಂಪೂರ್ಣ ಕೆಲಸ ಮಾಡಿ ಮುಗಿಸಬಲ್ಲರು. ಆದರೆ ಅವಳ ಉತ್ಪಾದನಾ ಕ್ಷೇತ್ರ ಬದಲಾಗಬೇಕಲ್ಲವೇ? ಅವಳ ಸರ್ವಸ್ವವೂ ಕುಟುಂಬಕ್ಕೆ ಮೀಸಲಾಗಿಡಬೇಕೇ? ಅವಳು ಕಲಿತ ವಿದ್ಯೆ, ಅಭಿರುಚಿಯನ್ನು ಹೊಂದಿ ಸಾಮಾಜಿಕ ಪಾಲ್ಗೊಳ್ಳುವಿಕೆ, ತೊಡಗುವಿಕೆಗೆ ಅವಕಾಶ ಎಲ್ಲಿಯದು? ಇಲ್ಲಿ ಕಾಣುವುದು ಬೆರಳೆಣಿಕೆಯ ಮಂದಿ. ಅದೇ ಹಳೆಯ ಚೌಕಟ್ಟಿನ ದೃಷ್ಟಿಕೋನವನ್ನು ಮೆಟ್ಟಿ ನಿಲ್ಲಲು ಹೆಣ್ಣುಮಕ್ಕಳು ಮುಂಬರಬೇಕು, ಸವಾಲುಗಳನ್ನು ಸ್ವೀಕರಿಸಬೇಕು.
- ಸಂಧ್ಯಾ  ಪಿ ಎಸ್

ಕವನ - ಕನಸುಗಳು


ಹಚ್ಚಹಸಿರು!
ತಾಜಾತನದ
ತುಷಾರ ಬಿಂದು!
ಬೆವರಹನಿ
ಒಡೆದರೂ
ಮಾಗಿ ಫಲ ಕೊಡಲು
ಶ್ರಮಶಕ್ತಿ ಬೇಕು
ಹಗಲು ಕನಸು ಹಾಗಲ್ಲ!
ನೈಜ ಕನಸುಗಳಲ್ಲ!
ಮರಳುಗಾಡಿನ 
ಬಿಸಿಲ್ಗುದುರೆಗಳು!
ಬೆಂಬತ್ತಿ ಹೋದಾಗ
ಹಲ್ಕಿಸಿದು ನಕ್ಕಾವು!!
ಕಾಪಿಟ್ಟು,ಗುರಿಮುಟ್ಟಿ
ನೆಲೆಯೊಂದು ಕಂಡಾಗ
ಅಲ್ಲಿರುವುದು
ನನಸಾದ ಕನಸು!

- ಸಂಧ್ಯಾ ಪಿ ಯಸ್

ಕವನ - ಮಾತೆಯ ಮನ



ನೀ ಮನೆಗೆ ಬಂದಾಗ
ಅದೆಂತಹ ಸಂಭ್ರಮವಿತ್ತು
ಮನೆಯ ತುಂಬ ನಗುವಿತ್ತು
ಮನದ ತುಂಬ ಖುಷಿಯಿತ್ತು
ಸುಖಗಳ ಹೇಳುವಾಗ ಸಂತಸವಿತ್ತು
ಕಷ್ಟಗಳ ಹಂಚಿಕೊಳುವಾಗ ನೆಮ್ಮದಿಯಿತ್ತು
ತುತ್ತು ತಿನಿಸುವಾಗ ತಂಪಿತ್ತು
ಮುದ್ದು ಮಾಡುವಾಗ ಮನಸೋತಿತ್ತು
ದೀರ್ಘಕಾಲದ ಮಾತು ಮನವ ತುಂಬಿತ್ತು
ಎರಡು ದಿನ ನಿಮಿಷದಂತೆ ಕಳೆದಿತ್ತು

ನೀ ಹೋದ ಮೇಲೆ
ಮನೆ ತುಂಬ ಮೌನವಿದೆ
ಮನದಿ ದುಮ್ಮಾನವಿದೆ
ನಗು ಕಳೆದು ಹೋಗಿದೆ
ಕಣ್ಣೀರು ಸುರಿಯುತಿದೆ
ನೋವು ಮಡುಗಟ್ಟಿದೆ
ನಗು ಮರೆಯಾಗಿದೆ
ಒಂಟಿತನ ಕಾಡುತಿದೆ
ಕಂದ ನೀ ಬೇಕೆನಿಸಿದೆ

ಸಂತಸದ ಕಾಯುವಿಕೆಯಲಿ
ಬದುಕ ಸಾಗಿಸಬೇಕು
ನಗುವಿನ ನಿರೀಕ್ಷೆಯಲಿ
ಬಾಳ ನಡೆಸಬೇಕು
ನೀ ಬರುವಿ ಯಾವಾಗ
ಕಾಯುತಿದೆ ಮನವೀಗ??
       - ಸುಧಾ ಜಿ

ಚುಟಕಗಳು

ಚುನಾವಣೆ
ಬಂದಿದೆ ಎಂದಿನಂತೆ ಚುನಾವಣೆ
ಸಿಗಬೇಕೆಂದು ತಮಗೆ ಮನ್ನಣೆ 
ನಡೆಸುವರು ತಮ್ಮ ತಮ್ಮಲ್ಲೇ ಸಂಚು ಚಿತಾವಣೆ
ಮಾಡಲು ಮತಗಳ ಆಕರ್ಷಣೆ
ಎಲ್ಲೆಲ್ಲಿಂದಲೋ ಮಾಡುವರು ಹಣ ಸಂಗ್ರಹಣೆ
ಇನ್ನಲ್ಲೋ ಆಗುವುದು ಅದರ ಚಲಾವಣೆ
ಯಾರೇ ಗೆದ್ದು ಬಂದರೂ ಬದಲಾಗದು ಜನತೆಯ ಬವಣೆ 
ಇದಕ್ಯಾರು ಆಗುವರು ಹೊಣೆ??

ಅಮ್ಮ 
ಅಮ್ಮಾ ಎಂಬ ಕಂದನ ಕರೆ
ಮಾಡುವುದು ಎಲ್ಲರ ಮನಸೂರೆ
ಹರಿಸುತ ಮಮತೆ ವಾತ್ಸಲ್ಯದ ಹೊಳೆ
ಕೊಡುವಳವಳು ಕಂದನಿಗೆ ಸುಂದರ ನಾಳೆ
ಬೆಳೆಸುವಳು ಕಂದನ ತುತ್ತು ಮುತ್ತು ಕೊಡುತ
ಮನದ ತನ್ನೆಲ್ಲಾ ನೋವುಗಳ ಮರೆಯುತ
ಕಲಿಸುವಳವಳು ಕಂದಂಗೆ ಸಂಸ್ಕೃತಿ
ತಿದ್ದಿ ಬೆಳಸುವವಳು ಕಂದನ ಮತಿ
ಅದಕ್ಕಾಗಿ ಆಶಿಸುವುದಿಲ್ಲ ಅವಳು ಬಿರುದು ಸನ್ಮಾನ
ಇದೋ ಮಾತೆ ನಿನಗೆ ನನ್ನಯ ನಮನ
      - ವಿಜಯಲಕ್ಷ್ಮಿ ಎಂ ಎಸ್ 

ಕವನ - ದೇವ ಕಾಪಾಡಲಿಲ್ಲವೇಕೆ



ಅಮ್ಮ ನೀ ಹೇಳಿದ ಧರ್ಮವನು ನಂಬಿದೆ
ದೇವರನು ಪೂಜಿಸಿದೆ
ನನ್ನ ಗೆಳತಿಯೂ ನನ್ನಂತೆ 
ಅವಳ ಧರ್ಮವನು ನಂಬಿದಳು
ಅವಳ ದೇವರನು ಪೂಜಿಸಿದಳು
ಮತ್ತೇಕೆ ದೇವರು ನನಗೀ ಕಷ್ಟ ಕೊಟ್ಟ
ಅವಳನ್ನು ನನ್ನಿಂದೇಕೆ ಕಿತ್ತುಕೊಂಡುಬಿಟ್ಟ
ನೋವಿನಲಿ ನರಳಿದರು, 
ಅರಚಿದರು ಕಿರುಚಿದರು
ಅವಳ ದೇವರೇಕೆ ಅವಳನ್ನು ರಕ್ಷಿಸಲಿಲ್ಲ
ಅವಳ ಧರ್ಮವೇಕೆ ನೆರವಿಗೆ ಬರಲಿಲ್ಲ
ತನ್ನಾಲಯದೊಳಗೆ ಅತ್ಯಾಚಾರ ನಡೆದರೂ
ಮೌನವಾಗಿದ್ದುಬಿಟ್ಟನೇಕೆ ನಮ್ಮ ದೇವರು
ನಾವಿಬ್ಬರೂ ಬೆಳಗೆದ್ದು ದೇವರಿಗೆ ನಮಿಸಿ, 
ಉಪವಾಸವಿದ್ದು ಪೂಜಿಸಿ
ಧರ್ಮಗ್ರಂಥಗಳನೋದಿದೆವು
ದೇವರನು ದಿನವೂ ಸ್ಮರಿಸಿದೆವು
ಮತ್ತೇಕೆ ದೇವರಿಗೆ ಬರಲಿಲ್ಲ ಕರುಣೆ
ಆದನೇಕೆ ಅವ ನಿಷ್ಕರುಣಿ
ಬೇರೆಲ್ಲೊ ನಡೆಯಲಿಲ್ಲವಲ್ಲ ಅತ್ಯಾಚಾರ
ಅವನ ಮನೆಯಲ್ಲಿಯೇ ನಡೆಯಿತಲ್ಲ ಅನಾಚಾರ
ಆದರೂ ನಮ್ಮ ದೇವರು ಕೈಕಟ್ಟಿ ಕೂತನೇಕೆ
ನಾಲ್ಕು ದಿನವೂ ಅವಳ ಕೂಗು ಕೇಳಲಿಲ್ಲವೇಕೆ
ಇನ್ನೊಂದು ಧರ್ಮದ ಹೆಣ್ಣುಮಗಳೆಂದೇ
ಅತ್ಯಾಚಾರಿಗಳು ತನ್ನ ಧರ್ಮದವರೆಂದೇ
ಅವಳ ದೇವರೂ ಕಾಪಾಡಲಿಲ್ಲವಲ್ಲ
ಅವನೂ ಸಹ ಕಣ್ಮುಚ್ಚಿ ಕೂತನಲ್ಲ
ಮತ್ತೇಕೆ ನಾ ಪೂಜಿಸಲಿ ಅಮ್ಮ
ಕಷ್ಟಕ್ಕಾಗದ ದೇವರ ವಂದಿಸಲೇಕಮ್ಮ
ಕಷ್ಟಗಳಲಿ ಪೊರೆವನೆಂದು, 
ಗಂಡಾಂತರದಿಂ ಪಾರುಮಾಡುವನೆಂದು
ನೀನು, ಅವಳಮ್ಮ ಹೇಳಿದ್ದೇ ಹೇಳಿದ್ದು
ಮುಂದೊಂದು ದಿನ ನನಗೀ ಗತಿ ಬಂದರೂ
ರಕ್ಷಿಸಲು ಬರುವುದಿಲ್ಲ ಯಾವ ದೇವರೂ

ನಮ್ಮ ಟೀಚರ್ ಹೇಳುವಂತೆ
ದಾರಿಯ ತೋರಿಸಿರುವಂತೆ
ನಾವೇ ಸಂಘಟಿತರಾಗಬೇಕು
ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು
ಗೀತಾ, ಸಕೀನಾ, ಬಬೀತಾರೆಲ್ಲ ಒಟ್ಟಾಗಬೇಕು
ನನ್ನ ಜೊತೆ ಗೆಳತಿಗಾಗಿ ಕಣ್ಣೀರಿಟ್ಟ
ಶ್ಯಾಮ, ಸಲೀಮ ಜೋಸೆಫ್ ರ  ಜೊತೆಗೂಡಿ
ದಿಟ್ಟತನದಿ ನಾವು ಹೋರಾಡಬೇಕು
ಧರ್ಮದ ಹೆಸರಿನಲಿ ನಮ್ಮನೊಡೆಯುತಿರುವ
ಎಲ್ಲರನು ನಾವು ಒದ್ದೋಡಿಸಬೇಕು
ಈ ನೆಲವ ಅತ್ಯಾಚಾರಿಗಳಿಂದ ಮುಕ್ತಗೊಳಿಸಬೇಕು
ಬಿದ್ದಿರುವ ರಕ್ತವನೆಲ್ಲ ಒರೆಸಿ ಸ್ವಚ್ಛಗೊಳಿಸಬೇಕು
ನನ್ನಂತಹ, ಅಸೀಫಾಳಂತಹ ಹೆಣ್ಣುಮಕ್ಕಳು
ನಿರ್ಭಯದಿ ಮತ್ತೊಮ್ಮೆ ನಲಿಯುವಂತಾಗಬೇಕು

- ಸುಧಾ ಜಿ 

ಅನುವಾದಿತ ಕವಿತೆ - ಮಾತುಕತೆ



ನಿಲ್ಲದಿರಲಿ ಮಾತುಕತೆ
ಮಾತಿನಿಂದ ಮಾತಿಗೆ ನಡೆಯುತಿರಲಿ ಕತೆ ||
ನಡೆಯುತಿರಲಿ ಮಾತುಕತೆ ಹಗಲು ರಾತ್ರಿ
ನಮ್ಮತ್ತ ನಗು ಬೀರುವ, ತಾರೆಗಳು ತುಂಬಿದ ರಾತ್ರಿ ಸಾಗುತಿರಲಿ||

ಮಾತುಗಳಲಿ ಕೊಂಚ ಬೈಗುಳವಿದ್ದರೆ ಇರಲಿ ಬಿಡು
ವಿಷದ ಬಟ್ಟಲು ತುಳುಕುತ್ತಿದ್ದರೆ ತುಳುಕಲಿ ಬಿಡು
ವ್ಯಂಗ್ಯವಾಡರಲಿ ಕಣ್ಣು, ಗಂಟಿಕ್ಕದಿರಲಿ ಹುಬ್ಬು.
ಏನಾದರಾಗಲಿ, ಹೃದಯ ಮಿಡಿಯುತಿರಲಿ.
ಬೇಸರವು ಬಂಧಿಸದಿರಲಿ ಮಾತನ್ನು ಸಂಕೋಲೆಯಲಿ
ಯಾರೊ ಕೊಲೆಗಾರ ನಮ್ಮ ಮಾತನ್ನು ಮುಗಿಸದಿರಲಿ ||

ಬೆಳಗಾಗುವ ಮುನ್ನ ಮೂಡುವುದು ಭರವಸೆ;
ಪ್ರೀತಿ ಹುಟ್ಟುವುದು, ಮೈ ನಡುಗುವುದು
ತುಟಿ ಅದುರುವುದು, ಹೃದಯ ಬಡಿಯುವುದು,
ಕಣ್ಣು ಕೆಳಗಾಗುವುದು; ತುಟಿ ಮೇಲಿನ ಮುತ್ತಿನಂತೆ
ಮೌನ ಸವಿಯಾಗುವುದು, ಹೂವರಳುವ ದನಿ ಮಾತ್ರ ಕೇಳುವುದು||

ಆಗಬೇಕಿಲ್ಲ ಮಾತುಕತೆ, ದನಿಯೂ ಬೇಕಿಲ್ಲ
ದ್ವೇಷ ಕರಗುವುದು, ಪ್ರೀತಿ ಮನೆ ಮಾಡುವುದು.
ಕರದಲ್ಲಿ ಕರವಿಡು, ಜಗವೆಲ್ಲಾ ಜೊತೆಯಾಗುವುದು.
ದುಃಖದ ಬರಡು ದಾರಿಯನು ದಾಟಿ ಬರುವೆವು
ನಾವು ರಕ್ತದ ನದಿಯನು ಹಾದು ಹೋಗುವೆವು ||

ನಿಲ್ಲದಿರಲಿ ಮಾತುಕತೆ
ಮಾತಿನಿಂದ ಮಾತಿಗೆ ನಡೆಯುತಿರಲಿ ಕತೆ ||
ನಡೆಯುತಿರಲಿ ಮಾತುಕತೆ ಹಗಲು ರಾತ್ರಿ
ನಮ್ಮತ್ತ ನಗು ಬೀರುವ, ತಾರೆಗಳು ತುಂಬಿದ ರಾತ್ರಿ ಸಾಗುತಿರಲಿ||


- ಎಸ್.ಎನ್.ಸ್ವಾಮಿ
ಮೂಲ: ಸರ್ದರ್ ಜಫ್ರಿ

ಕಥೆ - ಉಳಿವು



ಬಸ್ ವೇಗವಾಗಿ ಚಲಿಸುತ್ತಿತ್ತು. ದಾರಿಯಲ್ಲಿ ಹೆಚ್ಚು ವಾಹನಸಂಚಾರವಿರಲಿಲ್ಲ. ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ಹಳ್ಳಿಗಳು, ಜನರು ಕಂಡುಬರುತ್ತಿದ್ದರು. ಇದ್ದಕ್ಕಿದ್ದಂತೆ ಗರ್... ಎಂದು ನಿಂತಿತು ಬಸ್. ಯಾರೋ ‘ಅಯ್ಯೋ’ ಎಂದು ಅರಚಿದಂತೆ ಕೇಳಿಸಿತು ಎಲ್ಲರಿಗೂ. ಬಸ್‍ನಲ್ಲಿದ್ದವರೂ ಜತೆಗೂಡಿದರು. ಮಲಗಿಕೊಂಡಿದ್ದವರಿಗೆ ಸುಮಾರು ಜನರಿಗೆ ಪೆಟ್ಟಾಗಿತ್ತು. ಕಣ್ಣುಜ್ಜಿಕೊಂಡು ‘ಏನಾಯಿತು... ಏನಾಯಿತು...’ ಎಂದು ಕೇಳಲಾರಂಭಿಸಿದರು ಒಬ್ಬರಿನ್ನೊಬ್ಬರನ್ನು. 
ಡ್ರೈವರ್ ಗಾಡಿ ನಿಲ್ಲಿಸಿ ಕೆಳಗಿಳಿದ. ಏನಾಯಿತೆಂದು ನೋಡಲು ಹೋಗಿರಬಹುದೆಂದುಕೊಂಡ ಜನ ತಾವು ಇಳಿಯತೊಡಗಿದರು. ಆದರೆ ಡ್ರೈವರ್ ಓಡಿ ಹೋಗುತ್ತಿದ್ದದ್ದು ಕಂಡು ಪ್ರಯಾಣಿಕರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು. 
ಇಳಿದವರು ಕೆಳಗೆ ಕಂಡ ದೃಶ್ಯವನ್ನು ಕಂಡು ಶಾಕ್‍ಗೆ ಒಳಗಾದರು. ಸುಮಾರು 10-11 ವರ್ಷದ ಹುಡುಗನಿರಬಹುದು. ಬಸ್‍ನ ಹಿಂದಿನ ಭಾಗ ಅವನಿಗೆ ಹೊಡೆದಿತ್ತು. ಅವನ ಸೈಕಲ್ ಅಪ್ಪಚ್ಚಿಯಾಗಿತ್ತು. ಆ ಹುಡುಗನಿಗೆ ಪ್ರಜ್ಞೆ ಇರಲಿಲ್ಲ. ತಲೆಯಿಂದ ರಕ್ತ ಧಾರಾಕಾರವಾಗಿ ಸೋರುತ್ತಿತ್ತು. ಪ್ರಾಣವಿತ್ತೋ ಇಲ್ಲವೊ? ಅದು ಯಾರಿಗೂ ಗೊತ್ತೂ ಇರಲಿಲ್ಲ. ಯಾರೂ ಅದನ್ನು ಪರೀಕ್ಷಿಸುವ ಗೋಜಿಗೂ ಹೋಗಲಿಲ್ಲ. ಆದರೆ ಎಲ್ಲರೂ ಗುಂಪುಕಟ್ಟಿ ಮಾತನಾಡಲು ತೊಡಗಿದರು. 
ಆಕ್ಸಿಡೆಂಟ್ ಕಂಡವರು ಅದು ಡ್ರೈವರ್‍ನದೇ ತಪ್ಪೆಂದು ದೂರಿದರು. ‘ಹುಡುಗ ಪಾಪ ರಸ್ತೆಯ ಒಂದು ಕೊನೆಯಲ್ಲಿ ಹೋಗುತ್ತಿದ್ದ. ಬಸ್ ಡ್ರೈವರ್‍ದೇ ಸಂಪೂರ್ಣ ತಪ್ಪು. ಓವರ್‍ಟೇಕ್ ಮಾಡೋದಕ್ಕೆ ಹೋದ. ಎದುರಿಗೊಂದು ಲಾರಿ ಬಂತು. ತಾನು ತಪ್ಪಿಸಿಕೊಳ್ಳಲು ಹೋಗಿ ಪಾಪ ಈ ಹುಡುಗನ ಮೇಲೆ ಬಿಟ್ಟುಬಿಟ್ಟ. ಯಾರ ಮಗನೋ ಏನೋ. ಪಾಪ ಅವನ ತಂದೆ- ತಾಯಿಗಳಿಗೆ ಎಷ್ಟು ನೋವು.’ 
ಇನ್ನೊಬ್ಬ “ಅವನು ನಮ್ಮೂರ ಹುಡುಗಾನೇ. ದಿನಾ ನೋಡಿ, 3 ಮೈಲಿ ಸೈಕಲ್ ತುಳ್ಕೊಂಡು ಶಾಲೆಗೆ ಹೋಗ್ತಿದ್ದ. ಒಳ್ಳೆ ಬುದ್ಧಿವಂತ. ಆದ್ರೆ ಏನ್ಮಾಡೋಕೆ ಆಗುತ್ತೆ. ಎಲ್ಲಾ ವಿಧಿಲೀಲೆ” ಎಂದ. 
ಹೀಗೆ ಕೆಲವರ ಪ್ರಕಾರ ಅದು ಹಣೆಬರಹ, ಕರ್ಮ ಇತ್ಯಾದಿ. ಇನ್ನೂ ಕೆಲವರ ಪ್ರಕಾರ ಡ್ರೈವರ್‍ನ ಬೇಜವಾಬ್ದಾರಿತನ. ಅದನ್ನೇ ಆಧಾರವಾಗಿಟ್ಟುಕೊಂಡು ತಾವು ನೋಡಿದ ಇನ್ನಿತರ ಅಕ್ಸಿಡೆಂಟ್‍ಗಳ ಬಗ್ಗೆ ಚರ್ಚೆ ಆರಂಭಿಸಿದರು. 
ಕೆಲವರಂತೂ ಇದ್ಯಾವುದೂ ತಮಗೆ ಸಂಬಂಧವಿಲ್ಲದಂತೆ ಇದ್ದರು. ಒಂದಷ್ಟು ಜನ ಡ್ರೈವರ್‍ಗೆ ಶಾಪ ಹಾಕುತ್ತಾ ಬೇರೆ ವಾಹನವನ್ನಿಡಿದು ತಮ್ಮ ಸ್ಥಳಗಳನ್ನು ಸೇರುವ ಪ್ರಯತ್ನ ನಡೆಸಿದರು. ಆ ಜಾಗ ಒಂದು ರೀತಿಯಲ್ಲಿ ಯಾತ್ರಾಸ್ಥಳವಾಗಿಬಿಟ್ಟಿತು. ಹಾದಿಯಲ್ಲಿ ಹೋಗುವ ಪ್ರತಿ ವಾಹನದವರೂ ನಿಲ್ಲಿಸಿ ನೋಡಿ ನಂತರ ಮುಂದೆ ಹೋಗುತ್ತಿದ್ದರು. ಆದರೆ ಯಾರೂ ಆ ಬಾಲಕನನ್ನು ಉಳಿಸಬಹುದೇ ಎಂದು ಆಲೋಚಿಸಲಿಲ್ಲ. ಜನರ ಮಾತುಕತೆ ಅರ್ಧ ಘಂಟೆಯಾದರೂ ಬ್ರೇಕಿಲ್ಲದೆ ಮುಂದುವರೆಯುತ್ತಲೇ ಇತ್ತು. 
ಆಗ ಅಲ್ಲಿಗೊಂದು ಮೆಟಡೋರ್ ಬಂದು ನಿಂತಿತು. ತರಕಾರಿ ಲೋಡ್ ಇದ್ದ ಗಾಡಿ. ಆ ಡ್ರೈವರ್ ಸುಮಾರು 19-20 ವರ್ಷದ ಯುವಕ ಇಳಿದುಬಂದ. ಆಕ್ಸಿಡೆಂಟ್ ನೋಡಿ “ಜೀವ ಇದೆಯಾ” ಎಂದು ಅಕ್ಕಪಕ್ಕದಲ್ಲಿದ್ದವರನ್ನು ಕೇಳಿದ. “ಗೊತ್ತಿಲ್ಲ” ಎಂಬ ಉತ್ತರ ಬಂತು. ತಕ್ಷಣ ತಾನೇ ಪರೀಕ್ಷಿಸಲು ಹೋದ. 
ಎಲ್ಲರೂ ‘ಹೊ’ ಎಂದು ಏಕಕಾಲಕ್ಕೆ ಅರಚಿದರು. “ಬೇಡಪ್ಪಾ, ನಿನಗ್ಯಾಕೆ ಬೇಕು ಈ ಉಸಾಬರಿ, ಆಮೇಲೆ ಕೋರ್ಟ್, ಸ್ಟೇಶನ್ ಅಲೆಯಬೇಕಾಗುತ್ತೆ. ಸುಮ್ನೆ ನಿನ್ನ ದಾರಿ ಹಿಡ್ಕೊಂಡು ಹೋಗು” ಎಂದರು. 
ಪ್ರತಿಯೊಬ್ಬರೂ ಉಪದೇಶಿಸುವವರೆ. ಆ ಯುವಕ ಏನೊಂದೂ ಮಾತನಾಡದೆ ಹುಡುಗನ ಬಳಿ ಹೋಗಿ ನೋಡಿದ. ಜೀವ ಇದೆ ಎಂದು ಗೊತ್ತಾಗುತ್ತಿದ್ದಂತೆಯೇ ತಾನೊಬ್ಬನೇ ಯಾರ ನೆರವನ್ನೂ ಕೇಳದೆ ಆ ಹುಡುಗನನ್ನು ಎತ್ತಿಕೊಂಡು ಹೋಗಿ ತನ್ನ ಮೆಟಾಡೋರ್‍ನಲ್ಲಿ ಮಲಗಿಸಿದ. 
ಜನರನ್ನೆಲ್ಲಾ ಮೂಕವಿಸ್ಮಿತರನ್ನಾಗಿ ಮಾಡಿ ನಗರದ ಕಡೆಗೆ ವೇಗವಾಗಿ ಹೊರಟೇಬಿಟ್ಟ. ಆ ಹುಡುಗ ಬದುಕಿದನೊ ಇಲ್ಲವೊ ತಿಳಿಯದು. ಬದುಕಿದ್ದರೆ ಆ ಯುವಕ ಒಂದು ಜೀವವನ್ನು ಉಳಿಸಿದಂತಾಯಿತು. ಇಲ್ಲದಿದ್ದರೂ ಸಹ ಮನುಷ್ಯನಲ್ಲಿರಬೇಕಾದ ಮಾನವೀಯತೆಯನ್ನು ಪ್ರತಿಬಿಂಬಿಸಿದಂತಾಯಿತು ಅಲ್ಲವೆ? 
- ಸುಧಾ ಜಿ

ಅನುವಾದಿತ ಕಥೆ - ಅಮ್ಮ




ಈ ಕಥೆಯನ್ನು - ಈ ಉದಾತ್ತ ಸಾವಿನ ಕಥೆಯನ್ನು ಬರೆದಿರುವುದು ಕಣ್ಣಿರನ್ನು ತರಲಲ್ಲ, ನಿರಾಶೆಯನ್ನು ಸೃಷ್ಟಿಸಲಲ್ಲ್ಲ ಅಥವಾ ಶಾಪವನ್ನು ಹಾಕಲಿ ಎಂದೂ ಅಲ್ಲ. ಏಕೆಂದರೆ ಆ ಶಾಪಗಳನ್ನು ಈಗಾಗಲೇ ಇಡೀ ಜಗತ್ತೇ ಹಾಕಿಬಿಟ್ಟಿದೆ. ಈ ಕಥೆ ನಮ್ಮ ಜನತೆಯ ಧೀರೋದಾತ್ತತೆಯನ್ನು ನೆನಪಿಸಲು, ಪ್ರೀತಿಯ ಹೆಸರಿನಲ್ಲಿ.
ಈಗ ನಾವು ಒಬ್ಬಾಕೆಯ ಬಗ್ಗೆ, ಓರ್ವ ತಾಯಿ ‘ಮರಿಯಾ ಸ್ಟೊಯಾನ್’ ಬಗ್ಗೆ ಓದೋಣ.
ಹೊತ್ತಿ ಉರಿಯುತ್ತಿರುವ ಹಳ್ಳಿಯ ಮಧ್ಯದಲ್ಲಿ ಹೆಣಗಳನ್ನು ದಾಟಿ ಓಡುತ್ತಿರುವ ಅವನಾರು? ಓಡುತ್ತಾ ಓಡುತ್ತಾ ಹೃದಯವೇ ಕಿತ್ತು ಬರುವಂತೆ ಗೋಳಾಡುತ್ತಿರುವ ಅವನಾರು?
ಆತ ವ್ಯಾಸಿಲ್, ಮರಿಯಾ ಸ್ಟೊಯಾನ್‍ಳ ಮಗ. ತನ್ನ ಪಡೆಯೊಂದಿಗೆ ಶತ್ರುಗಳನ್ನು ಅಟ್ಟಿಸಿಕೊಂಡು ಬಂದ ವ್ಯಾಸಿಲ್ ತನ್ನ ತಾಯಿಯನ್ನು ಭೇಟಿಯಾಗಲು ತನ್ನ ಸಬ್‍ಮೆಷಿನ್‍ಗನ್ ಹಾಗೂ ಕೈಬಾಂಬ್‍ಗಳೊಂದಿಗೇ ಬಂದಿದ್ದ.
ಸುದೀರ್ಘ ಯುದ್ಧದಲ್ಲಿ ಬೆವರಿನಿಂದ ತೋಯ್ದ ವ್ಯಾಸಿಲ್ ಆತಂಕದಿಂದ ಓಡುತ್ತಿದ್ದಾನೆ. ಓರ್ವ ಸ್ಕೌಟ್‍ನಾಗಿ ತಾನು ಹುಟ್ಟಿದ ನಾಡಿಗಾಗಿ ಧೀರತೆಯಿಂದ ಹೋರಾಡಿದ್ದಾನೆ. ಹಿಂದೆ ವೈರಿಗಳೊಂದಿಗೆ ಸೇರಿದ್ದ ತನ್ನ ಚಿಕ್ಕಪ್ಪನ ಮನೆಯನ್ನೇ ತನ್ನ ಗ್ರೆನೇಡ್‍ನಿಂದ ಛಿದ್ರಗೊಳಿಸಿ ಆ ತುಂಡುಗಳು ಆಕಾಶದೆತ್ತರಕ್ಕೆ ಚಿಮ್ಮುವಂತೆ ಮಾಡಿದ್ದ. ಸೈನಿಕರು ಶತ್ರುಗಳನ್ನು ಹೊಡೆದಟ್ಟಿದ್ದಾರೆ. ವ್ಯಾಸಿಲ್ ಇಡೀ ಹಳ್ಳಿಯನ್ನು ಸುತ್ತುತ್ತಾನೆ. ಒಮ್ಮೆ ಹಳ್ಳಿಯಾಗಿದ್ದ ಪ್ರದೇಶದಲ್ಲಿ ಇಂದು ಕರಕಲಾಗಿರುವ ತೋಟಗಳು, ಮುರಿದುಬಿದ್ದಿರುವ ಸಾಮಾನುಗಳು, ಬಾಂಬ್‍ಗಳಿಂದ ಉಂಟಾದ ಹಳ್ಳಕೊಳ್ಳಗಳು, ರಕ್ತಮಯವಾಗಿ ಕೆಸರಲ್ಲಿ ಬಿದ್ದಿರುವ ಬಹಳಷ್ಟು ಶತ್ರುಗಳ ಹೆಣಗಳು.
“ಅಮ್ಮಾ, ನೀನೆಲ್ಲಿದ್ದೀಯಾ? ನಾನು ವ್ಯಾಸಿಲ್. ನಾನು ಬದುಕಿದ್ದೇನೆ. ಇವಾನ್ ಇನ್ನಿಲ್ಲ. ಆದರೆ ನಾನು ಬದುಕಿದ್ದೇನೆ. ನಾನವರನ್ನು ಕೊಂದೆ, ಅಮ್ಮಾ, ಇನ್ನೂರು ಜನ ಶತ್ರುಗಳನ್ನು....... ಅಮ್ಮಾ, ಎಲ್ಲಿದ್ದೀಯಾ?”
ವ್ಯಾಸಿಲ್ ಅಂಗಳದ ಒಳಗೆ ಓಡಿದ. ಇಲ್ಲಿ, ಇಲ್ಲೇ ಅಂಗಳ ಇತ್ತು.
“ಅಮ್ಮಾ ನನ್ನ ಪ್ರೀತಿಯ ಅಮ್ಮ, ಎಲ್ಲಿದ್ದೀಯಾ? ನೀನೇಕೆ ಒಂದು ಬಾರಿ ನನ್ನನ್ನು ನೋಡಬಾರದು? ನಿನ್ನ ಶಾಂತ ದನಿ ಏಕೆ ಕೇಳಿಬರುತ್ತಿಲ್ಲ. ಎಲ್ಲಿದ್ದೀಯಾ, ಅಮ್ಮಾ, ನನ್ನ ಬೆಳ್ಗೂದಲ ಆತ್ಮೀಯ ಅಮ್ಮಾ.”
ಆತ ತನ್ನ ಮನೆಯ ಹತ್ತಿರ ಬಂದು ನಿಂತ. ಆದರೆ ಅಲ್ಲೀಗ ಮನೆಯಿರಲಿಲ್ಲ. ವ್ಯಾಸಿಲ್ ಅಂಗಳದತ್ತ ತಿರುಗಿದ. ಅಲ್ಲಿ ಅಂಗಳ ಇರಲಿಲ್ಲ. ನಂತರ ತೋಟದತ್ತ ದೃಷ್ಟಿ ಹಾಯಿಸಿದ ಅಲ್ಲಿ ತೋಟವಿರಲಿಲ್ಲ. ಅಲ್ಲಿ ಒಂದೇ ಒಂದು ಹಳೆಯ ಸೀಬೆ ಮರವಿತ್ತು. ಆ ಮರದಿಂದ ತೂಗಾಡುತ್ತಿದ್ದಳು – ಅವನ ತಾಯಿ.
ಮೂಕವಾಗಿಸುವಂತಹ ಭಯಾನಕ ದೃಶ್ಯ, ಮರೆಯಲಾಗದ ಸಂಕಟ.
***
ಅವಳು ಬದುಕಿದ್ದಾಗ ಆ ಪುಟ್ಟ ಮನೆ ಸುಸ್ಥಿತಿಯಲ್ಲಿ ಹಳ್ಳಿಯ ಮೂಲೆಯೊಂದರಲ್ಲಿತ್ತು. ಒಂದು ದಿನ ಮಧ್ಯರಾತ್ರಿಯಲ್ಲಿ ಭೀಕರ ಹಿಮಪಾತವಾಗುತ್ತಿದ್ದಾಗ ಯಾರೋ ಬಾಗಿಲು ತಟ್ಟಿದರು. “ಯಾರು?”
“ನಮ್ಮನ್ನು ಒಳಗೆ ಬರಲು ಬಿಡಿ. ನಾವು ಸಾಯುತ್ತಿದ್ದೇವೆ.”
“ಏನಾಗಿದೆ? ಯಾರು ನೀವು? ಎಲ್ಲಿಂದ ಬಂದಿರುವಿರಿ?”
“ನಾವು ರಷ್ಯನ್ನರು. ವಿಮಾನ ಚಾಲಕರು! ನಮ್ಮನ್ನವರು ಗುಂಡು ಹಾರಿಸಿ ಕೆಳಗಿಳಿಸಿದರು”.
“ಅಯ್ಯೋ ದೇವರೇ, ಬೇಗ ಒಳಗೆ ಬನ್ನಿ. ನಾನು ಬಾಗಿಲನ್ನು ಮುಚ್ಚುವೆ. ಯಾರೂ ನಿಮ್ಮನ್ನು ನೋಡಲಿಲ್ಲವಷ್ಟೆ? ಈ ಸ್ಥಳದಲ್ಲಿ ಎಲ್ಲೆಡೆ ಜರ್ಮನ್ನರೇ ತುಂಬಿದ್ದಾರೆ”.
ಒಬ್ಬರನ್ನೊಬ್ಬರಿಗೆ ಆತುಕೊಂಡು ಇಬ್ಬರು ಅಂಗ ಊನವಾದವರು ಮನೆಯೊಳಗೆ ಬಂದರು. ಬಂದೊಡನೆಯೇ ಕುಸಿದುಬಿದ್ದರು. ತಕ್ಷಣವೇ ಪ್ರಜ್ಞೆದಪ್ಪಿದರು. ಅದಾದ ಮೇಲೆ ಮೂವತ್ತಾರು ಘಂಟೆಗಳ ಕಾಲ ನಿದ್ರಿಸಿದರು. ಅವರು ಮುಕ್ಕಾಲುಪಾಲು ಸತ್ತರೆಂದೆ ಆಕೆ ಭಾವಿಸಿದಳು.
ಆಕೆ ಅವರ ಪಾದಗಳನ್ನು ಬಿಸಿನೀರಿನಿಂದ ತೊಳೆದಳು. ಮನೆಯನ್ನೆಲ್ಲಾ ಬೆಚ್ಚಗಿರಿಸಿದಳು. ಅವರ ಊಟವನ್ನು ಮೂರು ಬಾರಿ ಬಿಸಿ ಮಾಡಿದಳು. ಆದರವರು ನಿದ್ರಿಸುತ್ತಲೇ ಇದ್ದರು. ಆ ರಾತ್ರಿಗಳಲ್ಲಿ ಆಕೆ ತನ್ನ ಮಕ್ಕಳಾದ ಇವಾನ್, ವ್ಯಾಸಿಲ್‍ರ ಬಗ್ಗೆ ಚಿಂತಿಸುತ್ತಾ ಅಳುತ್ತಲೇ ಇದ್ದಳು. ಅವರಿಗೆ ಊಟ ಹಾಕುವವರು ಯಾರು? ಇಂತಹ ಕಷ್ಟದ ಸಮಯದಲ್ಲಿ ಅವರಿಗೆ ಆಶ್ರಯ ನೀಡುವರಾರು? ಅವರೆಲ್ಲಿದ್ದಾರೋ? ಬಹುಶಃ ಯಾವುದೋ ಹೊಲದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಅಥವಾ ಜರ್ಮನ್ನರ ಯುದ್ಧ ಬಂಧಿಗಳ ಕ್ಯಾಂಪ್‍ನಲ್ಲಿ ನೇಣುಗಂಬದಿಂದ ತೂಗಾಡುತ್ತಿರಬಹುದು. ಕಾಗೆಗಳು ಅವರ ಹೆಪ್ಪುಗಟ್ಟಿದ ಕಂಗಳನ್ನು ಕುಕ್ಕುತ್ತಿರಬಹುದು. ಅವರು ಇನ್ನೆಂದಿಗೂ ಅವಳನ್ನು ನೋಡರು, ಅವಳನ್ನು ಏನೂ ಕೇಳರು, ಯಾವುದಕ್ಕೂ ಅಳರು....... ಎಲ್ಲೆಡೆಯೂ ಸಾಕಷ್ಟು ಸಾವುನೋವಿದೆ.
ಸ್ಟೀಫನ್ ಶೆನಿಟ್‍ಸಿನ್ ಮತ್ತು ಕೊಸ್ಟ್ಯಾ ರ್ಯಾಬೊವ್ ಇಬ್ಬರೂ ಯೂರಲ್ಸ್‍ನವರು. ಆಕ್ರಮಣಕಾರಿ ಹಿಟ್ಲರ್‍ನ ಸೈನ್ಯದೊಂದಿಗೆ ಪ್ರಾಣವನ್ನು ಲೆಕ್ಕಿಸದೆ ಧೀರೋದಾತ್ತವಾಗಿ ಹೋರಾಡುತ್ತಿದ್ದ ರಷ್ಯನ್ ಯುವಜನತೆಯ ಭಾಗ ಅವರು. ಕ್ಷೌರವಿಲ್ಲದೆ, ಚಳಿಮಳೆಗಾಳಿಗೆ ಸಿಲುಕಿ, ಜೀವನದ ಕಹಿ ಅನುಭವಗಳಿಂದ ಘಾಸಿಗೊಂಡಿದ್ದ ಅವರು ತಮ್ಮ ನಿದ್ರೆಯಲ್ಲಿ ಏದುಸಿರು ಬಿಡುತ್ತಾ ನರಳಿದರು. ಅವರ ಕನಸುಗಳಲ್ಲಿಯೂ ಯುದ್ಧ ಅವರ ಹೃದಯಗಳನ್ನು ಕಾಡಿತ್ತು,
ಅವರು ಯೂರಲ್ಸ್‍ನ ಸರಳ ಹುಡುಗರಾಗಿದ್ದರು. ತಕ್ಕಮಟ್ಟಿಗೆ ಶಿಕ್ಷಣ ಪಡೆದು ಕಷ್ಟಪಟ್ಟು ದುಡಿಯುವ ಕೊಮ್‍ಸೊಮಲ್ (ಕಿರಿಯ ಕಮ್ಯೂನಿಸ್ಟರು) ಸದಸ್ಯರಾಗಿದ್ದರು. ಒಳ್ಳೆಯ ಕಾರ್ಮಿಕ ಮನೆತನಗಳಿಂದ ಬಂದಿದ್ದರು. ಅವರಿಗೇನೂ ಯುದ್ಧ ಮಾಡಬೇಕೆಂಬ ಇಚ್ಛೆಯಿರಲಿಲ್ಲ. ಆದರೆ ರಷ್ಯನ್ ಪರಂಪರೆಗೆ ಅನುಗುಣವಾಗಿ ಅವರದನ್ನು ತಿರಸ್ಕರಿಸಲಿಲ್ಲ, ಗೊಣಗಾಡಲಿಲ್ಲ. ತಾವಾಗಿಯೇ ಯುದ್ಧಕ್ಕೆ ತೆರಳಿದರು, ಆದಷ್ಟು ಬೇಗ ಶತ್ರುಗಳನ್ನು ಎದುರಿಸಿ ಅವರನ್ನು ಮುಗಿಸಲು, ಸಬ್ ಮೆರೀನರ್‍ಗಳೋ ಅಥವಾ ಸ್ನೈಪರ್‍ಗಳಾಗುವಷ್ಟೆ ಸುಲಭವಾಗಿ ಪೈಲಟ್‍ಗಳಾದರು.
“ಕೆಲವು ಕಾಲ ಆ ಫ್ಯಾಸಿಸ್ಟರ ಮೇಲೆ ದಾಳಿ ಮಾಡಿದೆವು ಅಮ್ಮಾ. ನಂತರ ನಮ್ಮನ್ನು ಶಿಕ್ಷಣ ನೀಡುವ ಕೆಲಸಕ್ಕೆ ವರ್ಗಾಯಿಸಿದರು. ಅದೇನೂ ನಮಗೆ ಅಷ್ಟು ಇಷ್ಟವಾಗಲಿಲ್ಲ. ಆದರೂ ಆಜ್ಞೆ ಎಂದರೆ ಆಜ್ಞೆ ಅಲ್ಲವೇ?”
“ಅದೆಂತಹ ಕೆಲಸ”. ಅವಳ ಮನೆಯಲ್ಲಿ ಒಂದು ದಿನ ಸಂಜೆ ಮೆಲುದನಿಯಲ್ಲಿ ಮಾತನಾಡುತ್ತಿದ್ದಾಗ ಮರಿಯಾ ಸ್ಟೊಯಾನ್ ಕೇಳಿದಳು. ನಾವು ಉಕ್ರೇನ್‍ನ ಮೇಲೆ ಕರಪತ್ರಗಳನ್ನು ಹಾಕಿದೆವು. ನಮ್ಮ ಜನರಿಗೆ ಯುದ್ಧದ ಬಗ್ಗೆ ಸತ್ಯ ತಿಳಿಯಲೆಂದು” ಹೇಳಿದ ಸ್ಟೀಫನ್. “ಓಹೋ, ಅದು ನೀವೇಯೋ........ ನೀವು ಮಹಾನ್ ಕೆಲಸ ಮಾಡುತ್ತಿದ್ದೀರಿ. ನನ್ನ ಮಕ್ಕಳೇ”, ನಿಟ್ಟುಸಿರಿಟ್ಟು ಹೇಳಿದಳು. “ಬಾಂಬ್ ಏನು ಮಹಾ, ಬಂಧಿಗಳಾಗಿದ್ದಾಗ ಒಳ್ಳೆಯ ಸುದ್ದಿಗೆ ಹೋಲಿಸಿದರೆ? ಎಲ್ಲೆಡೆ ಅಜ್ಞಾನ ಇರುವಾಗ ಜನರ ತಲೆಯೊಳಗೆ ದುಷ್ಟ ಫ್ಯಾಸಿಸ್ಟ್ ಪ್ರಚಾರವನ್ನೇ ತುಂಬಿದರು. ಆ ಸ್ಥಿತಿ ಬದುಕಲು ಯೋಗ್ಯವೇ? ಪ್ರಪಂಚವೇ ಕೊನೆಗೊಂಡಿದೆ ಎನಿಸಿತ್ತು”.
ಆಕ್ರಮಿತ ಪ್ರದೇಶದಲ್ಲಿ ಸರಳ ಮಾತೃ ಹೃದಯದಿಂದ ಹೊರಬಂದ ಈ ಪದಗಳನ್ನು ಕೇಳಿ ಸ್ಟೀಫನ್ ಮತ್ತು ಕೊಸ್ಟ್ಯಾಗೆ ಮೊಟ್ಟಮೊದಲ ಬಾರಿಗೆ ತಮಗೆ ಎಂತಹ ಮಹಾನ್ ಕಾರ್ಯ ಕೊಡಲ್ಪಟ್ಟಿತ್ತು ಎಂಬುದರ ಅರಿವಾಯಿತು.
ಸಾಕಷ್ಟು ಪೀಠೋಪಕರಣಗಳಿಂದ ಸಜ್ಜಾಗಿರದ ಆ ಹಳೆಯ ಪುಟ್ಟಮನೆಯ ಸಂಜೆಬೆಳಕಿನಲ್ಲಿ, ಹೂಳಿಡುತ್ತಾ ಹತ್ತಿರವಾಗುತ್ತಿದ್ದ ರಣಾಂಗಣದಲ್ಲಿ, ಹಿಮಪಾತದಲ್ಲಿ, ಅವರು ಜನ ಯಾವ ರೀತಿ ಆ ಕರಪತ್ರದಲ್ಲಿದ್ದನ್ನು ಕೈಬರಹದಲ್ಲಿ ಪ್ರತಿಗಳನ್ನು ಮಾಡಿದರು, ಯಾವ ರೀತಿ ಪ್ರತಿ ಅಕ್ಷರವನ್ನೂ ಬಾಯಿಪಾಠ ಮಾಡಿಕೊಂಡು ಹಳ್ಳಿಯಿಂದ ಹಳ್ಳಿಗೆ ತಲುಪಿಸಿದರು; ಜನರಲ್ಲಿ ಆಶೆಯ ಪುನರಂಕುರವಾದದ್ದು ಹೇಗೆ ಎಂಬುದನ್ನು ಕೇಳಿಸಿಕೊಂಡರು. ಸತ್ಯದ ಮಾತುಗಳು ಕತ್ತಲಲ್ಲಿ ಹೇಗೆ ಬೆಳಕನ್ನು ನೀಡಿದವು ಎಂಬುದನ್ನು ತಿಳಿದುಕೊಂಡರು. ಸಾವಿರಾರು ಜನ ಸ್ವಾತಂತ್ರ್ಯದಿಂದ ವಂಚಿತರಾದವರು, ಆಶಾಹೀನರು, ಮೋಸಕ್ಕೆ ಒಳಗಾದವರು. ಸುಳ್ಳಿನ ಮಧ್ಯೆ ಸಿಲುಕಿಕೊಂಡವರು ಆತುರದಿಂದ ತಪ್ಪು ಹೆಜ್ಜೆ ಇಡುವುದನ್ನು ಆ ಕರಪತ್ರಗಳು ತಪ್ಪಿಸಿದ್ದವು.
ಸ್ಟೀಫನ್ ಮತ್ತು ಕೋಸ್ಟ್ಯಾ ಬಹಳ ಹೊತ್ತು ಆ ಮಾತುಗಳನ್ನೇ ಮೆಲುಕುಹಾಕುತ್ತಾ ಕುಳಿತರು. ನಂತರ ಅವರು ತಮ್ಮನ್ನು ರಾತ್ರಿಯಲ್ಲಿ ಕಾಡಿನಲ್ಲಿ ಯಾವ ರೀತಿ ಹೊಡೆದುರುಳಿಸಿದರು. ತಾವು ಯಾವ ರೀತಿ ತಪ್ಪಿಸಿಕೊಂಡೆವು, ಆ ಸಮಯದಲ್ಲೇ ಯಾವ ರೀತಿ ಕೈಕಾಲುಗಳನ್ನು ಮುರಿದುಕೊಂಡು ಕಾಡುಮೇಡುಗಳನ್ನಲೆದು ಉತ್ತರದೆಡೆಗೆ ಬಂದೆವು, ಯಾವ ರೀತಿ ಜರ್ಮನ್‍ರಿಂದ ತಪ್ಪಿಸಿಕೊಂಡು ಹಳ್ಳಕೊಳ್ಳ, ಗುಡ್ಡಗಳನ್ನು ಹಾದು ಬಂದೆವು ಎಂಬುದನ್ನು ಅವಳಿಗೆ ವಿವರಿಸಿದರು. ಇದನ್ನೆಲ್ಲಾ ಹೇಳುತ್ತಲೇ ಅವರು ತಮ್ಮ ಅಸಾಮಾನ್ಯ ಶಕ್ತಿಯ, ಬಗ್ಗೆ ಜೀವಿಸುವ ಇಚ್ಛೆಯ ಬಗ್ಗೆ ಆಶ್ಚರ್ಯಪಟ್ಟರು.
“ಅದು ಎಲ್ಲಾಯಿತು, ನನ್ನ ಕಂದಮ್ಮಗಳೇ?” ಆಕೆ ಭಾವೋದ್ವೇಗದಿಂದ ಅವರ ಕೈಗಳನ್ನು ಹಿಡಿದು ಕೇಳಿದಳು. “ಬಹಳ ದೂರ. 500 ಕಿ. ಮಿ ಆಚೆ”.
“ಯಾವಾಗ?” “ಒಂದು ತಿಂಗಳ ಹಿಂದೆ. ಮೂಳೆಗಳು ಈಗಾಗಲೇ ಒಂದುಗೂಡಿವೆ,” ತಮ್ಮ ಗಾಯದ ಕಲೆ ಹಾಗೂ ಕೈಕಾಲುಗಳನ್ನು ತೋರಿಸುತ್ತಾ ಹೇಳಿದರು. “ದೇವರೇ, ಏನಿದು........... ”
“ಓಹ್! ಅದೇನೂ ಅಲ್ಲ, ಈ ಮೂಳೆಗಳ ಮೇಲೆ ಚರ್ಮ ಬೆಳೆಯುತ್ತದೆ. ಎಲ್ಲವನ್ನೂ ಸಹಿಸಬಲ್ಲ ಜನ ನಾವು. ನಮಗೀಗ ಬೇಕಾಗಿರುವುದು ಸ್ವಲ್ಪ ವಿಶ್ರಾಂತಿ, ಶಕ್ತಿಯನ್ನು ಪುನಃ ಪಡೆಯಲು. ನಂತರ ನಾವು ಮತ್ತೆ ಯುದ್ಧರಂಗಕ್ಕೆ ತೆರಳುತ್ತೇವೆ. ಮಂಜಿನ ಕೆಳಗಡೆ ತೆವಳಿಯಾದರು ಸರಿ”, ಅದಮ್ಯ ಶಕ್ತಿಯ ಯುವಕರು ವಯಸ್ಸಾದ ಮರಿಯಾಳನ್ನು ಸಂತೈಸಿದರು.
“ಈಗ ನಿಮಗೆ ನಾನೇನು ಮಾಡಲಿ. ನನ್ನ ಮಕ್ಕಳೂ ನಿಮ್ಮಂತೆಯೇ ಇದ್ದಾರೆ.”
ಎರಡು ವಾರಗಳ ಕಾಲ ಮರಿಯಾ ತನ್ನ ಅತಿಥಿಗಳನ್ನು ಬಚ್ಚಿಟ್ಟಳು. ಮನೆಯ ಬಗ್ಗೆ ಗಮನವಿಟ್ಟಳು. ಅವರಿಗೆ ಉಣಬಡಿಸಿದಳು. ಮನೆಯಲ್ಲೆ ಎಲ್ಲವೂ ಮುಗಿದುಹೋದಾಗ ಹಳ್ಳಿಯಲ್ಲಿ ಎಲ್ಲರ ಬಳಿ ಸಹಾಯ ಕೇಳಿದಳು. ಎಲ್ಲವನ್ನೂ ಅಲ್ಲ, ಕೇವಲ ಹಾಲು ಮತ್ತು ಬ್ರೆಡ್ ಮಾತ್ರ. ಯಾರೂ ಅವಳ ಬೇಡಿಕೆಯನ್ನು ತಿರಸ್ಕರಿಸಲಿಲ್ಲ, ಯಾರೂ ಏನನ್ನೂ ಪ್ರಶ್ನಿಸಲಿಲ್ಲ, ಸಂದೇಹ ಪಡಲು ಸಾಕಷ್ಟು ಕಾರಣಗಳಿದ್ದರೂ ಸಹ. ಸ್ಟೊಯಾನ್ ತನಗಾಗಿ ಎಂದೂ ಆ ರೀತಿ ಇನ್ನೊಬ್ಬರ ಮುಂದೆ ಕೈ ಚಾಚುವವಳಲ್ಲ.
ಆದರೆ ಮರಿಯಾ ಆ ಯುವಕರನ್ನು ಉಳಿಸಿಕೊಳ್ಳುವಲ್ಲಿ ಸಫಲಳಾಗಲಿಲ್ಲ. ಒಂದು ದಿನ ಬೆಳಗ್ಗೆ ಗನ್‍ಟ್ರಕ್‍ಗಳ ಸದ್ದಿನೊಂದಿಗೆ ಹಳ್ಳಿ ಎಚ್ಚರಗೊಂಡಿತು. ಹೊಡೆತ ತಿಂದ ಜರ್ಮನ್ ಪಡೆ ವಿಶ್ರಾಂತಿ ಪಡೆಯಲು ಆಗಮಿಸಿತ್ತು. ಆತುರದಿಂದ ಮರಿಯಾ ಮನೆಯಿಂದ ಹೊರಗೆ ಹೋದವಳು ತಕ್ಷಣವೇ ಒಳಬಂದಳು. “ಅವರು ಬರುತ್ತಿದ್ದಾರೆ”.
ಜರ್ಮನ್ನರು ಹೊಸಿಲಿನ ಬಳಿಯೇ ಕಾಣಿಸಿಕೊಂಡರು. ಆ ಯುವಕರನ್ನು ನೋಡಿ ಕೇಳಿದರು, “ಯಾರವರು?” “ನನ್ನ ಮಕ್ಕಳು”.
“ನೀನು ಸುಳ್ಳು ಹೇಳುತ್ತಿದ್ದೀಯಾ!” “ಇಲ್ಲ, ಖಂಡಿತ ಇಲ್ಲ. ಅವರು ನನ್ನ ಮಕ್ಕಳೇ. ಆಣೆ ಮಾಡಿ ಹೇಳುತ್ತೇನೆ!” “ಅವರನ್ನು ಮುಟ್ಟಬೇಡಿ. ಅವರಿಗೆ ಹುಷಾರಿಲ್ಲ. ಅವರು ಹೆಳವರು...... ದೇವರೇ!”
“ನಿಲ್ಲಿ! ನಿನ್ನ ತಾಯಿಯೇ?” “ಹೌದು, ನನ್ನ ತಾಯಿಯೇ”, ಉತ್ತರಿಸಿದ ರ್ಯಾಬೊವ್.
“ಸುಳ್ಳು ಹೇಳುತ್ತಿದ್ದಿ, ಕಮಿಸ್ಸಾರ್!” ಗರ್ಜಿಸಿದ ಆ ಜರ್ಮನ್, ತನ್ನ ಬಂದೂಕು ಎತ್ತಿಕೊಂಡು. ತಾಯಿ ಆ ಯುವಕರ ಮುಂದೆ ನಿಂತಳು. ತನ್ನ ದೇಹದಿಂದ ಅವರನ್ನು ರಕ್ಷಿಸುವಂತೆ.
“ಇಲ್ಲ, ನೀನು ಹಾಗೆ ಮಾಡಲು ಸಾಧ್ಯವಿಲ್ಲ! ನನ್ನನ್ನು ಹೊಡೆಯಿರಿ....... ನಾನು ನಿಮಗೆ ಅವರನ್ನು ಕೊಡಲಾರೆ. ಮೃಗಗಳೇ! ಅವರನ್ನು ಮುಟ್ಟಬೇಡ. ನೀನು ಓರ್ವ ಮಾನವ ತಾಯಿಗೆ ಹುಟ್ಟಿರುವೆ, ಹೆಣ್ಣುತೋಳಕ್ಕಲ್ಲ, ಅಲ್ಲವೇ?” ಸ್ಟೊಯಾನ್ ಅರಚಿದಳು.
“ನೀನೇಕೆ ಅವರನ್ನು ಅಡಗಿಸಿಟ್ಟೆ?”
“ನನಗೆ ಭಯವಾಯಿತು. ನೀವು ಇಷ್ಟೊಂದು ಭಯಾನಕರು! ಪ್ರಪಂಚದಲ್ಲಿ ನಿಮ್ಮಷ್ಟು ಭಯಾನಕರು ಇನ್ನಾರೂ ಇಲ್ಲ!”
“ಹಾ.... ಹಾ..... ಹಾ......! ಹೌದೇ? ಅದೊಂದು ಸರಿಯಾದ ಮಾತು ಹೇಳಿದೆ ಮುದಿಗೊಡ್ಡೆ. ನಮಗಿಂತ ಭಯಾನಕ ಇನ್ನಾರೂ ಇಲ್ಲ, ಇರಲೂ ಬಾರದು!” ಆ ಜರ್ಮನ್ ಅಟ್ಟಹಾಸಗೈದ.
ಎರಡು ಘಂಟೆಗಳ ನಂತರ ನಾಜಿಗಳು ಇಡೀ ಹಳ್ಳಿಯ ಜನರನ್ನು ಚೌಕದಲ್ಲಿ ಸೇರಿಸಿದರು. ಸ್ಟೀಫನ್ ಮತ್ತು ಕೋಸ್ಟ್ಯಾರನ್ನು ಅವರೆದುರಿಗೆ ನಿಲ್ಲಿಸಲಾಯಿತು. ಅವರು ಜನರತ್ತ ನೋಡಿದರು, ಅಲ್ಲಿ ಒಂದಾದರೂ ಪರಿಚಿತ ಮುಖವಿರಲಿಲ್ಲ.
“ಗುಡ್ ಬೈ ಯೂರಲ್ಸ್”, ಸ್ಟೀಫನ್ ತನ್ನ ಗೆಳೆಯನತ್ತ ನೋಡುತ್ತಾ ಪಿಸುಗುಟ್ಟಿದ. “ಗುಡ್ ಬೈ”.
“ಜನರೇ, ಅವರು ನನ್ನ ವ್ಯಾಸಿಲ್ ಮತ್ತು ಇವಾನ್ ಅಲ್ಲವೇ! ಅವರ ಗುರುತು ಸಿಗಲಿಲ್ಲವೇ!” ಸ್ಟೊಯಾನ್ ಕೂಗಿದಳು. “ಅವರಿಗೆ ಹೇಳಿ, ಇವರು ನನ್ನವರೆಂದು! ಜನರೇ!” ತನ್ನ ಹಳ್ಳಿಯವರಿಗೆ ಮನವಿ ಮಾಡಿಕೊಂಡಳು.
ಜನ ಅವಳ ಮಾತಿಗೆ ಹೌದೆಂಬಂತೆ ತಲೆಯಾಡಿಸಿದರು. ಮುಂದಾಗುವುದನ್ನು ಊಹಿಸಿ ಅತ್ತರು. ಹಳ್ಳಿಯ ಮುಖ್ಯಸ್ಥ ಹಾಗೂ ಸ್ಥಳೀಯ ಪೋಲೀಸ್ ಸಹ ಇದನ್ನು ನಿರಾಕರಿಸುವ ಧೈರ್ಯ ಮಾಡಲಿಲ್ಲ.
ದೇಶಪ್ರೇಮಿ ಜನರಿಂದ ಕೊಲ್ಲಲ್ಪಟ್ಟ ಪೋಲೀಸ್ ಮುಖ್ಯಸ್ಥನ ಮಡದಿ ಪಲಸ್ಕಾ ಮಾತ್ರ ಮೌನವಾಗಿದ್ದಳು.
“ಪಲಸ್ಕಾ, ಅವರಿಗೆ ಹೇಳು ಇವರು ನನ್ನ ಮಕ್ಕಳೆಂದು. ಇಲ್ಲದಿದ್ದರೆ ನೀನು ಈ ಪ್ರಪಂಚದಲ್ಲಿ, ಇನ್ನೊಂದು ಜಗತ್ತಿನಲ್ಲಿ ಸಹ ಖಂಡನೆಗೆ ಒಳಗಾಗುತ್ತೀಯಾ” ಮರಿಯಾ ಪಿಸುಗುಟ್ಟಿದಳು, “ದೇವರು ನಿನ್ನನ್ನು ಕೇಳುತ್ತಾನೆ; ದೇವರು ನಿನ್ನನ್ನು ಪ್ರಶ್ನಿಸುತ್ತಾನೆ, ಪಲಸ್ಕಾ.”
“ಮೇಡಮ್ ಪಲಸ್ಕಾ, ಇವರು ಅವಳ ಮಕ್ಕಳೇ?” ಕಮಾಂಡೆಂಟ್ ಕೇಳಿದ.
ಪ್ರತಿಯೊಬ್ಬರೂ ಮಾತನಾಡುವುದನ್ನು ನಿಲ್ಲಿಸಿದರು. ತಮ್ಮ ದೃಷ್ಟಿಯನ್ನು ಅವಳತ್ತ ತಿರುಗಿಸಿದರು. ರುದ್ರಮೌನ ಆವರಿಸಿತು. ಕಮಾಂಡೆಂಟ್ ಮುಖ ಕೆಂಪಾಯಿತು. ಆತನ ದಪ್ಪ ಕುತ್ತಿಗೆ ಹಾವಿನಂತೆ ಉಬ್ಬಲಾರಂಭಿಸಿತು. ಆತ ಇದೇನೋ ಸಂಚೆಂದು ಅರ್ಥಮಾಡಿಕೊಂಡ.
“ಅವರು ಇವಳ ಮಕ್ಕಳೇ” ಹೇಳಿದಳು ಪಲಸ್ಕಾ ಅವನತಮುಖಿಯಾಗಿ.
“ನಿಮ್ಮ ಅಡ್ಡಹೆಸರು ಏನು?” ಪೈಲಟ್‍ಗಳನ್ನು ಕೇಳಿದ ಜರ್ಮನ್.
“ಓಹ್!” ಸ್ಟೊಯಾನ್ ನರಳಿದಳು, ಹೃದಯಕ್ಕೆ ಗಾಯವಾದಂತೆ. ಅವಳು ಅವರಿಗೆ ತನ್ನ ಅಡ್ಡ ಹೆಸರು ಹೇಳಿರಲಿಲ್ಲ. ಅವರೂ ಸಹ ಅದನ್ನು ಕೇಳಿರಲಿಲ್ಲ.
ಜರ್ಮನ್ ಅಕ್ರೋಶದಿಂದ ತನ್ನೆಲ್ಲಾ ಬಲದೊಂದಿಗೆ ಅವಳ ಕೆನ್ನೆಗೆ ಹೊಡೆದ. ಏನಾದರೂ ಸದ್ದು ಹೊರಬರುವ ಮುನ್ನವೇ ಅವಳು ತರಗೆಲೆಯ ತರಹ ನೆಲಕ್ಕೆ ಕುಸಿದಳು.
ತಲೆಗೆ ಬಿದ್ದ ಏಟಿನಿಂದ ಕೆಳಗೆ ಬಿದ್ದಿದ್ದ ಅವಳಿಗೆ ತಕ್ಷಣವೇ ಏಳಲಾಗಲಿಲ್ಲ. ಕನಸಿನಲ್ಲೇನೋ ಎಂಬಂತೆ ಅವಳಿಗೆ ಸ್ಟೀಫನ್ ಮತ್ತು ಕೋಸ್ಟ್ಯಾ “ವಿದಾಯ ಅಮ್ಮಾ, ಧನ್ಯವಾದಗಳು! ನೀನು ಜೊತೆಯಲ್ಲಿರುವುದರಿಂದ ಸಾಯುವುದು ಅಷ್ಟೇನೂ ಭಯಾನಕವಲ್ಲ!” ಎಂದಂತೆ ಕೇಳಿಸಿತು.
ಬಂದೂಕಿನಿಂದ ಗುಂಡುಗಳು ಹಾರಿದವು. ಅವರಿಬ್ಬರೂ ಮಂಜಿನ ಮೇಲೆ ಬಿದ್ದರು, ಒಬ್ಬರನ್ನೊಬ್ಬರು ಅಪ್ಪಿಕೊಂಡು. ಅವಳನ್ನು ಹಿಡಿದೆತ್ತಲಾಯಿತು. ಅವಳನ್ನು ಹಿಡಿದುಕೊಂಡು ಹೊಡೆಯುತ್ತಾ ಅಲ್ಲಿಂದ ಎಳೆದೊಯ್ಯಲಾಯಿತು. ಜರ್ಮನ್ನರು ಅವಳ ಮನೆಯನ್ನು ಗ್ರೆನೇಡ್‍ನಿಂದ ಸ್ಫೋಟಿಸಿದರು. ಅವಳನ್ನು ಸೀಬೆಮರದತ್ತ ಎಳೆದೊಯ್ದರು. ಅವಳ ಕಣ್ಣು ಮಂಜಾಯಿತು.
“ನನ್ನನ್ನು ನೇಣು ಹಾಕಬೇಡಿ. ನನ್ನನ್ನು ಅವಮಾನಕ್ಕೆ ಗುರಿ ಮಾಡಬೇಡಿ. ವಯಸ್ಸಾದವಳನ್ನು ಹೇಗೆ ನೇಣುಹಾಕುವಿರಿ........ ಒಂದು ಗುಂಡು ಹೊಡೆಯಿರಿ, ಒಂದೇ ಒಂದು. ನಿಮ್ಮನ್ನು ಬೇಡಿಕೊಳ್ಳುವೆ. ನಿಮ್ಮನ್ನು ..........” ಆದರವರು ಅವಳ ಮೊರೆ ಕೇಳಲಿಲ್ಲ. ಆದ್ದರಿಂದ ಅವಳೇ ವೇಗವಾಗಿ ಹತ್ತಿ, ತಾನೇ ಕೊರಳಿಗೆ ಉರುಳನ್ನು ಹಾಕಿಕೊಂಡಳು. “ನನ್ನನ್ನು ಮುಟ್ಟಬೇಡಿ, ನೀವು ಕೊಳಕು ಜನ ನೀವು ನನ್ನ ಕುತ್ತಿಗೆಯನ್ನು ಮುಟ್ಟಬೇಡಿ.......ನನ್ನ ಮಕ್ಕಳೇ........” ಮರುಕ್ಷಣ ಗಾಳಿಯಲ್ಲಿ ತೂಗಾಡತೊಡಗಿದಳು.
*****
ಬಹಳ ಕಾಲ ವ್ಯಾಸಿಲ್ ಆ ಮರದ ಕೆಳಗೆ ಮಂಜಿನಲ್ಲಿಯೇ ಬಿದ್ದುಕೊಂಡಿದ್ದ. ಅವನ ಆಕ್ರಂದನ, ಚೀತ್ಕಾರ ಕೇಳಲು ಅಲ್ಲಿ ಯಾರೂ ಇರಲಿಲ್ಲ.
ಕತ್ತಲಿನಲ್ಲಿ ಚಳಿ ಆತನ ಹೃದಯವನ್ನು ಮರಗಟ್ಟಿಸಿತು. ಬೆಳಗಾಗುವುದನ್ನು ಸೂಚಿಸಲು ಜನರ ಚಟುವಟಿಕೆ, ಸದ್ದು ಆರಂಭವಾಯಿತು. ವ್ಯಾಸಿಲ್ ಶಾಂತನಾದನು. ಬಹಳ ಸುಸ್ತಾಗಿ ನಿದ್ದೆ ಮಾಡಿ ಎದ್ದವನಂತೆ, ಭೂಮಿಯ ಮಡಿಲಿನಿಂದ ಮೇಲೆದ್ದು ಆತ ತನ್ನ ತಾಯಿಯ ತಣ್ನಗಿನ ಕೈಗೆ ಮುತ್ತಿಟ್ಟ.
“ವಿದಾಯ ಅಮ್ಮ......... ನಿನ್ನೆಲ್ಲಾ ಒಳ್ಳೆಯತನ, ಮೃದು ಭಾವ, ನೀನೇನು ನನಗೆ ಕೊಟ್ಟೆಯೋ ಅದೆಲ್ಲವನ್ನೂ ನಿನ್ನೊಂದಿಗೆ ಬಿಟ್ಟು ಹೋಗುತ್ತಿರುವೆ.”
ಆತ ಮನೆಯ ಅವಶೇಷದ ಹತ್ತಿರ ಹೋಗಿ ಒಂದು ಹಿಡಿಯಷ್ಟು ಬೂದಿಯನ್ನು ಎತ್ತಿ ತನ್ನ ಕರ್ಚೀಫ್ನಲ್ಲಿ ಸುತ್ತಿಕೊಂಡ. “ಇದನ್ನು ನನ್ನೊಂದಿಗೆ ಒಯ್ಯುವೆ, ಅಮ್ಮಾ. ನನ್ನ ಕೈಕಾಲುಗಳು, ಹೃದಯ ಎಂದಿಗೂ ಸೋಲದಿರಲೆಂದು ಇದನ್ನು ಒಯ್ಯುತ್ತಿರುವೆ.”
ಕೆಂಪು ಸೈನ್ಯದ ಪಡೆಗಳು ಪಶ್ಚಿಮದತ್ತ ಹೊರಟವು. “ಪ್ರೈವೇಟ್ ಸ್ಟೊಯಾನ್!” “ಬಂದೆ”.
“ಅಲ್ಲಿ ತೂಗಾಡುತ್ತಿರುವ ಸ್ತ್ರೀ ಯಾರು?” “ನನ್ನ ತಾಯಿ!” “ನಿನ್ನ ತಾಯಿಯೇ?” “ನನ್ನ ತಾಯಿ, ಸ್ನೇಹಿತರೇ, ನನ್ನ ಪ್ರೀತಿಯ ತಾಯಿ.......”
“ಸೈನಿಕರೇ, ನಿಲ್ಲಿ! ಕ್ಯಾಪ್‍ಗಳನ್ನು ತೆಗೆಯಿರಿ! ಮುನ್ನಡೆಯಿರಿ!”
ಸೈನಿಕರು ತಮ್ಮ ಕ್ಯಾಪ್‍ಗಳನ್ನು ತೆಗೆದು ಗೌರವ ಸಲ್ಲಿಸುತ್ತಾ, ಆಕೆಯನ್ನು ದಾಟಿ ಮುನ್ನಡೆದರು. ಸಮರದ ಹಾದಿಯಲ್ಲಿ ಮಾತೃತ್ವಕ್ಕೆ ತಮ್ಮ ನಮನವನ್ನು ಸೂಚಿಸಿದರು. ಬಂದೂಕುಗಳು ಗರ್ಜಿಸಿದವು. ಸೂರ್ಯ ಎಲ್ಲೆಡೆ ಮಂಜಿಗೆ ಕೆಂಪು ಬಣ್ಣ ನೀಡಿದ್ದ.
ಬದುಕಿರುವ ಯಾರು ತಾನೆ ಅಥವಾ ಇನ್ನು ಮುಂದೆ ಬರಲಿರುವ ಯಾರು ತಾನೆ, ತನಗಾಗಿಯಲ್ಲದೆ ತನ್ನ ಮಕ್ಕಳಿಗಾಗಿ ಕ್ಷಮೆ ಬೇಡಿದ ತಾಯಿ ಮರಿಯಾ ಸ್ಟೊಯಾನ್‍ಳ ಮಾಸಲಾರದ ಸೌಂದರ್ಯಕ್ಕೆ ಗೌರವದಿಂದ ನಮಿಸಲಾರರು? ಅಲ್ಲಿ ನೋಡಿ, ಆಕೆ ಮಂಜುಗಟ್ಟಿದ ಭೂಮಿಯ ಮೇಲೆ ತೂಗಾಡುತ್ತಿದ್ದಾಳೆ. ಅವಳ ಪುಟ್ಟ ಮತ್ತು ಮೃದು ಕೈಗಳು, ಉದ್ದನೆ, ಸುಂದರ ತುದಿಗಳುಳ್ಳ ಆ ಚಟುವಟಿಕೆಯ ಕೈಗಳು, ಅಷ್ಟೊಂದು ಧಾನ್ಯ ಬೆಳೆದ, ಇಷ್ಟೊಂದು ಬಟ್ಟೆ ನೇಯ್ದ ಆ ಕೈಗಳು, ಅಂಗೈ ಕಾಣಿಸುವಂತೆ ತೆರೆದಿದೆ.
“ನನ್ನಲ್ಲಿ ಇನ್ನೇನೂ ಉಳಿದಿಲ್ಲ, ನನ್ನ ಮಕ್ಕಳೇ. ನಿಮಗೆ ನಾನೆಲ್ಲವನ್ನೂ - ಸಂತೋಷ, ಭವಿಷ್ಯತ್ – ಎಲ್ಲವನ್ನೂ ನೀಡಿದ್ದೇನೆ”.
ಆಕೆಯ ಸಣ್ಣ ಆಕಾರ ಚಳಿಗಾಳಿಯಲ್ಲಿ ಹಾರಿಹೋಗುವಂತಿದೆ. ಬೆಳ್ಳಗಿನ ಕೂದಲುಳ್ಳ ಆಕೆಯ ತಲೆ ಒಂದು ಪಕ್ಕಕ್ಕೆ ತಿರುಗಿ ಆಗಮಿಸುತ್ತಿರುವ ವಸಂತದ ಮೋಡಗಳನ್ನು ಮುಟ್ಟುವಂತಿದೆ.
ಜಯವಾಗಲಿ ನಿನಗೆ, ತಾಯಿ ಮರಿಯಾ, ನಿನ್ನ ಸೌಂದರ್ಯಕ್ಕೆ. ಮನಸ್ಸಾಕ್ಷಿ ಇರುವವರೆಲ್ಲರೂ ನಿನ್ನ ಈ ಅಪ್ರತಿಮ ಸೌಂದರ್ಯಕ್ಕೆ ತಲೆಬಾಗುತ್ತಾರೆ, ನಮ್ಮ ಪ್ರೀತಿಯ ಸ್ಲಾವಿಕ್ ಮಾತೆಯೇ, ಪ್ರೀತಿಯ ಉಕ್ರೇನಿನ ಮಹಿಳೆಯೇ .

ಮೂಲ ಕೃತಿ - ಅಲೆಕ್ಸಾಂಡರ್ ಡಾವ್ ಜೇಂಕೋ  
ಅನುವಾದ - ಸುಧಾ ಜಿ 

ಕವನ - ಮಳೆ



ಅಬ್ಬ ! ಈ ಸಿಡಿಲು ಗುಡುಗುಗಳ ದನಿಯಿದುವೆ ಕೇಳಿ
ಒಡಲಿಂದ ಬಡಿಬಡಿದು ಮೋಡವನೆ ಸೀಳಿ
ದೂರ ದೂರದಿಂ ಹಾರಾಡಿ ಮೊರೆಯಿಡುತ
ಸಾರುವುದು ಮೊದಲಾಗಿ ಮಳೆಗರೆಯುತ||   1

ಓಡೋಡಿ ಬರುತಿರುವ ಕಪ್ಪನೆಯ ಮೋಡ
ಗೂಡಿನಲಿ ಕುಳಿತಿಹುದು ಗುಬ್ಬಚ್ಚಿ ನೋಡ 
ಗಾಳ ಹಾಕದೆ ನೊಣಕೆ ಬಾಯ್ಬಿಡದೆ
ನೆನೆನೆದು ದುಃಖಪಡುತಲಿಹ ಜೇಡ||  2

ಅಬ್ಬರಿಸಿ ಬರುತಲಿಹ ಗಾಳಿಯನು ನೋಡ
ಬೆಬ್ಬರಿಸಿ ಓಡುತಿಹ ಧೂಳಿನಲಿ ಮೋಡ
ನಾಡು ನಾಡಿಂದ ಹರಿದಾಡಿ ಬಾಗುತಿಹ
ಬೆಳೆಮರವು ಸ್ವಾಗತವ ನೀಡುವುದು ನೋಡ||  3

ಮೇಲೆ ಮೇಲಿಂದ ಬೀಳುತಿಹ ಮಳೆಯು
ಮೂಲೆ ಮೂಲೆಗಳಿಂದ ಕೇಳುತಿಹ ಗಾಳಿ
ಛಳಿಯ ಮೈನಡುಕದಲಿ ಒದರದಿಹ ಗೂಳಿ
ಹಳಿಯುವುದು ಬಯಸುವುದು ಮೇಲಾದ ಬಿಸಿಲು||   4

ದಿನದಿನಕೆ ಬಿಡದಿಹುದು ಹಿಡಿದಿಹುದು ಮಳೆಯು
ಎಂದಿಗಿದು ಮುಕ್ತಾಯಗೊಳುವುದೊ ಛಳಿಯು
ಮುದುರಿ ಕುಳಿತಿಹ ಜನಕೆ ಹುಮ್ಮಸವ ತರಲಿ
ಚದುರಿ ಜಡತೆಯು ಮನಕೆ ಮುದವು ಬರಲಿ ….  5
- ಗಂಗಾಧರಯ್ಯ ಜಿ

ವ್ಯಕ್ತಿ ಪರಿಚಯ - ದೇವಾಂಗನಾ ಶಾಸ್ತ್ರೀ



"
ದೇವಾಂಗನಾ ಶಾಸ್ತ್ರೀ " ಹೆಸರನ್ನು ಕೇಳಿರುವವರು ಬಹಳ ವಿರಳ. ಇವರು 1925 , ಮಾರ್ಚ್ 31ರಂದು ಗೋಕರ್ಣದಲ್ಲಿ ಜನಿಸಿದರು. ತಂದೆ ಗಣೇಶ್ ರಾವ್ ಹೊಸಮನೆ ಶಾಸ್ತ್ರಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಜೊತೆಗೆ ಸಂಸ್ಕೃತ ವಿದ್ವಾಂಸರಾಗಿದ್ದರು. ತಾಯಿ ಶಾರದಾಬಾಯಿ ಮೃದು ಸ್ವಭಾವದವರಾಗಿದ್ದರು. ಇವರ ಬಾಲ್ಯದ ಹೆಸರು ಟೀಕಾಂಬರಿ. ಆದರೆ ಎಲ್ಲರೂ  ಪ್ರೀತಿಯಿಂದ ದೇವೂ ದೇವಕ್ಕ ಎಂದು ಕರೆಯುತ್ತಿದ್ದರು. 
ತಂದೆ ತಾಯಿಯವರ ಸಾತ್ವಿಕ ಗುಣ ಮಕ್ಕಳಲ್ಲೂ ಕಾಣುತ್ತಿತ್ತು. ಅಣ್ಣಂದಿರು ವೈದ್ಯನ್ಯಾಯವಾದಿಗಳಾಗಿದ್ದರು. ಸುಶಿಕ್ಷಿತ ಕುಟುಂಬದಲ್ಲಿ ಬೆಳೆದ ದೇವಾಂಗನಾರವರು ಓದಿನಲ್ಲಿ ಸಹಜವಾಗಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಆದರೆ ತಂದೆಯ ವರ್ಗಾವಣೆಯ ಕಾರಣ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಇವರು ಮುಲ್ಕಿಯವರೆಗೆ ಅಂದರೆ ಇಂದಿನ ಏಳನೇ ತರಗತಿಯವರೆಗೆ ಓದಿದ್ದರೂ ಇವರ ಜ್ಞಾನ ಸಂಪತ್ತು ಅಪಾರವಾದದ್ದು.
ವಿವಾಹದ ವಿಷಯದಲ್ಲಿ ಇವರು ಕ್ರಾಂತಿಯನ್ನೇ ಮಾಡಿದರು, ಅಂದರೆ ಸಾಮಾನ್ಯವಾಗಿ ಬಾಲ್ಯವಿವಾಹ ನಡೆಯುತ್ತಿದ್ದ ಸಮಯದಲ್ಲಿ ದೇವಾಂಗನೆಯವರು ತಮ್ಮಿಚ್ಛೆಯಂತೆ ಇಪ್ಪತ್ತನೆಯ ವಯಸ್ಸಿನಲ್ಲಿ  ಮದುವೆಯಾದರು. ತಂದೆಯ ಮುದ್ದಿನ ಮಗಳಾಗಿದ್ದರಿಂದ ತಂದೆಯ ಪ್ರೋತ್ಸಾಹವೂ ಇತ್ತು. 1946 ರಲ್ಲಿ ಪಡಿತರ ವಿತರಣಾಧಿಕಾರಿ ವೆಂಕಟರಮಣ ಕೂರ್ಸೆಯವರೊಂದಿಗೆ ವಿವಾಹವಾದರು. ಇವರ ಒಬ್ಬಳೇ ಮಗಳು ಉಷಾ ಕೃಷಿ ವಿಜ್ಞಾನಿ ಡಾ.ಎಸ್ ವಿ ಹೆಗಡೆಯವರನ್ನು ಮದುವೆಯಾಗಿದ್ದಾರೆ. ಉಷಾರವರು ತಮ್ಮ ಮಾವನಿಂದ ಬಳುವಳಿಯಾಗಿ ಬಂದ ತಮ್ಮ ಅಮ್ಮನ ಬರವಣಿಗೆಯ ಹಸ್ತಪ್ರತಿಗಳನ್ನು ಜೋಪಾನವಾಗಿಟ್ಟಿದ್ದು ಮುಂದೆ ಪ್ರಕಟಿಸಲು ನೆರವಾದರು.
ಬಾಲ್ಯದಿಂದಲೂ ಓದುವುದೆಂದರೆ ದೇವಾಂಗನೆಗೆ ಅಚ್ಚುಮೆಚ್ಚು. ಅಕ್ಕ ದೇವಸ್ಥಾನದಲ್ಲಿನ ಭಜನೆಗೆ ಹೋಗಲು ಕರೆದರೆ ಬರಲು ನಿರಾಕರಿಸಿ ಓದಲು ಕೂರುತ್ತಿದ್ದರಂತೆ. ಉತ್ತಮ ಓದುಗರು ಜೊತೆಗೆ ಒಳ್ಳೆ ವಿಮರ್ಶಕರು ಕೂಡ. ವಿ.ಕೃ. ಗೋಕಾಕ್ಕಾರಂತ, ಬೇಂದ್ರೆ, ಅ.ನ.ಕೃಕಡಂಗೋಡ್ಲು ಶಂಕರ ಭಟ್ಟ ಮೊದಲಾದವರ ಕೃತಿಗಳನ್ನು ಓದಿ ವಿಮರ್ಶೆ ಮಾಡುತ್ತಿದ್ದರು. ಓದುತ್ತಾ ಓದುತ್ತಾ ತಾವೇ ಬರೆಯಲು ಪ್ರಾರಂಭಿಸಿದರು. 
ಸಣ್ಣ ಸಣ್ಣ ಕಥೆಗಳನ್ನು ಬರೆದರು.  ಆಗಿನ ಸಮಕಾಲೀನ ಲೇಖಕರಾದ ಕೊಡಗಿನ ಗೌರಮ್ಮ, ತ್ರಿವೇಣಿಯವರಂತೆ ಇವರೂ ಸಹ ಸ್ತ್ರೀ ಜೀವನದ ವಿಷಯಗಳನ್ನೇ ತಮ್ಮ  ಬರವಣಿಗೆಯ ವಸ್ತುವಾಗಿ ತೆಗೆದುಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಮಹಿಳೆಯರ ಬವಣೆಗಳನ್ನು ಅಂದರೆ ಬಾಲ್ಯವಿವಾಹವಿಧವೆಯರ ದುಃಸ್ಥಿತಿ,  ಅಸಮ ವಯೋಮಾನ ವಿವಾಹ ಇವುಗಳನ್ನೇ ಕುರಿತು ಬರೆಯುತ್ತಿದ್ದರು. ತಾವು ಬರೆಯುತ್ತಿದ್ದ ಕಥೆಗಳ ಬಗ್ಗೆ  ಸಂಸ್ಕೃತ ವಿದ್ವಾಂಸ ವಿಘ್ನೇಶ್ವರ ಪಂಡಿತರ ಸಲಹೆಯನ್ನು ಪಡೆಯುತ್ತಿದ್ದರು. ಇವರು ಡಾ ಕೆ. ಜಿ ಶಾಸ್ತ್ರೀ ಗೌರೀಶರ ಕಾಯ್ಕಿಣಿ ಇವರುಗಳೊಂದಿಗೆ ಸಾಹಿತ್ಯ ಚರ್ಚೆಯನ್ನು ಮಾಡುತ್ತಿದ್ದರು.  
ವಿಘ್ನೇಶ್ವರ ಪಂಡಿತರು ಹಲವರೊಂದಿಗೆ ಸೇರಿ " ನೂಪುರ" ಎಂಬ ಕೈಬರಹದ ಪತ್ರಿಕೆಯನ್ನು ನಡೆಸುತ್ತಿದ್ದರು. ಈ ಪತ್ರಿಕೆಯಲ್ಲಿ ದೇವಾಂಗನೆಯವರು ಬರೆಯುತ್ತಿದ್ದರು. ಅಂದಿನ ಪ್ರಸಿದ್ಧ ಪತ್ರಿಕೆ "ಜಯಂತಿ ಪತ್ರಿಕೆ" ಯಲ್ಲಿ ಇವರ ಕಥೆಗಳು ಪ್ರಕಟವಾಗುತ್ತಿದ್ದವು. ಜಯಂತಿ ಪತ್ರಿಕೆಯು ನಡೆಸಿದ ಕಥಾಸ್ಪರ್ಧೆಯಲ್ಲಿ ಇವರ "ವೇಣೀ ಸಂಹಾರ" ಕ್ಕೆ ಪ್ರಥಮ ಬಹುಮಾನ ಪಡೆದಿತ್ತು. ಇವರು ಹಾರೆಗೋಲುಪುಣ್ಯದಫಲನಾಲ್ಕು ನೂರುವರದಕ್ಷಿಣೆಆಣೆಪಾವಲಿಅಡಕತ್ತರಿಬಯಲಾಟ ಎಂಬ ಸಣ್ಣ ಕಥೆಗಳನ್ನು ಬರೆದಿದ್ದಾರೆ.
ಇದಲ್ಲದೆ ಎಂ. ಜಿ ಶೆಟ್ಟಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ "ಸಹಚರ"   ಕಾರಂತರ "ವಸಂತ, ಚಿಕ್ಕ ನಾಗರಿಕ" ಮೊದಲಾದ ಹಲವು ಪತ್ರಿಕೆಗಳ ಪರಿಚಯವೂ ಇವರಿಗಿತ್ತು. ಬರೆಯುವುದರ ಜೊತೆಗೆ ಇವರಿಗೆ ಕಲೆಯಲ್ಲೂ  ಆಸಕ್ತಿಯಿತ್ತು. ಗೋಕರ್ಣದ "ಸಾಹಿತ್ಯ ಸೇವಕ ಸಂಘ" ದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ರಂಗೋಲಿ ಹಾಕುವುದು, ಕಸೂತಿ, ಚಿಪ್ಪುಗಳ ಮೇಲೆ ಅಲಂಕಾರ ಮಾಡುವುದು ಇವರಿಗೆ ಪ್ರಿಯವಾದ ಕೆಲಸವಾಗಿತ್ತು. ಇವರ ರಂಗೋಲಿಯನ್ನು ನೋಡಿದ ಜಯಚಾಮರಾಜೇಂದ್ರ ಒಡೆಯರ್ 1948 ರಲ್ಲಿ ಬೆಳ್ಳಿ ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಿದ್ದರು.
ಆಕರ್ಷಕ ವ್ಯಕ್ತಿತ್ವದ ಇವರು ಯಾವಾಗಲೂ ಚಟುವಟಿಕೆಯಿಂದಿರುತ್ತಿದ್ದರು. ಅಡುಗೆ ಮಾಡಿ ಬಡಿಸುವುದು ಇವರಿಗೆ ಬಲು ಪ್ರೀತಿ." ನೀವೆಲ್ಲಾ ಅಡುಗೆ ಮನೆಯಲ್ಲೇ ಇರಿ ಹೊರಗೆ ಬರಬೇಡಿ " ಎಂದು ತಮಾಷೆ ಮಾಡುತ್ತಲೇ, ಹೆಣ್ಣಿನ ಶೋಷಣೆಯ ಮೂಲ ಅಡಿಗೆಮನೆ ಎಂದು ಹೇಳುತ್ತಿದ್ದರು. ತಮ್ಮ ಮನಸ್ಸಿಗೆ  ಬಂದಂತದ್ದನ್ನು ಮಾಡುವ ದಿಟ್ಟೆಯಾಗಿದ್ದರು. ಇವರು ಸಣ್ಣ ಪುಟ್ಟ ಸಮಾರಂಭಗಳಲ್ಲಿ ಸ್ತ್ರೀ ಜಾಗೃತ ಭಾಷಣಗಳನ್ನು ಮಾಡುತ್ತಿದ್ದರು.
ಇಂತಹ ಅಪರೂಪ ವ್ಯಕ್ತಿತ್ವದ ದೇವಾಂಗನೆಯವರು ಗರ್ಭಪಾತ ಮಾಡಿಸಿಕೊಳ್ಳಲು ನಾಟಿ ಔಷಧಿಯನ್ನು ತೆಗೆದುಕೊಂಡು ಅತಿಯಾದ ರಕ್ತಸ್ರಾವದಿಂದ 1951 ರಲ್ಲಿ  ದುರಂತ ಸಾವಿಗೀಡಾದರು. ಇದ್ದ ಅಲ್ಪಾವಧಿಯಲ್ಲಿಯೇ ಸ್ತ್ರೀಪರ ಲೇಖಕಿಯಾಗಿ ಗುರುತಿಸಲ್ಪಟ್ಟಿದ್ದರು ದೇವಾಂಗನೆಯವರು.

ವಿಜಯಲಕ್ಷ್ಮಿ  ಎಂ ಎಸ್