ಅಬ್ಬ ! ಈ ಸಿಡಿಲು ಗುಡುಗುಗಳ ದನಿಯಿದುವೆ ಕೇಳಿ
ಒಡಲಿಂದ ಬಡಿಬಡಿದು ಮೋಡವನೆ ಸೀಳಿ
ದೂರ ದೂರದಿಂ ಹಾರಾಡಿ ಮೊರೆಯಿಡುತ
ಸಾರುವುದು ಮೊದಲಾಗಿ ಮಳೆಗರೆಯುತ|| 1
ಓಡೋಡಿ ಬರುತಿರುವ ಕಪ್ಪನೆಯ ಮೋಡ
ಗೂಡಿನಲಿ ಕುಳಿತಿಹುದು ಗುಬ್ಬಚ್ಚಿ ನೋಡ
ಗಾಳ ಹಾಕದೆ ನೊಣಕೆ ಬಾಯ್ಬಿಡದೆ
ನೆನೆನೆದು ದುಃಖಪಡುತಲಿಹ ಜೇಡ|| 2
ಅಬ್ಬರಿಸಿ ಬರುತಲಿಹ ಗಾಳಿಯನು ನೋಡ
ಬೆಬ್ಬರಿಸಿ ಓಡುತಿಹ ಧೂಳಿನಲಿ ಮೋಡ
ನಾಡು ನಾಡಿಂದ ಹರಿದಾಡಿ ಬಾಗುತಿಹ
ಬೆಳೆಮರವು ಸ್ವಾಗತವ ನೀಡುವುದು ನೋಡ|| 3
ಮೇಲೆ ಮೇಲಿಂದ ಬೀಳುತಿಹ ಮಳೆಯು
ಮೂಲೆ ಮೂಲೆಗಳಿಂದ ಕೇಳುತಿಹ ಗಾಳಿ
ಛಳಿಯ ಮೈನಡುಕದಲಿ ಒದರದಿಹ ಗೂಳಿ
ಹಳಿಯುವುದು ಬಯಸುವುದು ಮೇಲಾದ ಬಿಸಿಲು|| 4
ದಿನದಿನಕೆ ಬಿಡದಿಹುದು ಹಿಡಿದಿಹುದು ಮಳೆಯು
ಎಂದಿಗಿದು ಮುಕ್ತಾಯಗೊಳುವುದೊ ಛಳಿಯು
ಮುದುರಿ ಕುಳಿತಿಹ ಜನಕೆ ಹುಮ್ಮಸವ ತರಲಿ
ಚದುರಿ ಜಡತೆಯು ಮನಕೆ ಮುದವು ಬರಲಿ …. 5
- ಗಂಗಾಧರಯ್ಯ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ