"ದೇವಾಂಗನಾ ಶಾಸ್ತ್ರೀ " ಹೆಸರನ್ನು ಕೇಳಿರುವವರು ಬಹಳ ವಿರಳ. ಇವರು 1925 , ಮಾರ್ಚ್ 31ರಂದು ಗೋಕರ್ಣದಲ್ಲಿ ಜನಿಸಿದರು. ತಂದೆ ಗಣೇಶ್ ರಾವ್ ಹೊಸಮನೆ ಶಾಸ್ತ್ರಿ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಜೊತೆಗೆ ಸಂಸ್ಕೃತ ವಿದ್ವಾಂಸರಾಗಿದ್ದರು. ತಾಯಿ ಶಾರದಾಬಾಯಿ ಮೃದು ಸ್ವಭಾವದವರಾಗಿದ್ದರು. ಇವರ ಬಾಲ್ಯದ ಹೆಸರು ಟೀಕಾಂಬರಿ. ಆದರೆ ಎಲ್ಲರೂ ಪ್ರೀತಿಯಿಂದ ದೇವೂ ದೇವಕ್ಕ ಎಂದು ಕರೆಯುತ್ತಿದ್ದರು.
ತಂದೆ ತಾಯಿಯವರ ಸಾತ್ವಿಕ ಗುಣ ಮಕ್ಕಳಲ್ಲೂ ಕಾಣುತ್ತಿತ್ತು. ಅಣ್ಣಂದಿರು ವೈದ್ಯ, ನ್ಯಾಯವಾದಿಗಳಾಗಿದ್ದರು. ಸುಶಿಕ್ಷಿತ ಕುಟುಂಬದಲ್ಲಿ ಬೆಳೆದ ದೇವಾಂಗನಾರವರು ಓದಿನಲ್ಲಿ ಸಹಜವಾಗಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಆದರೆ ತಂದೆಯ ವರ್ಗಾವಣೆಯ ಕಾರಣ ಹೆಚ್ಚು ಓದಲು ಸಾಧ್ಯವಾಗಲಿಲ್ಲ. ಇವರು ಮುಲ್ಕಿಯವರೆಗೆ ಅಂದರೆ ಇಂದಿನ ಏಳನೇ ತರಗತಿಯವರೆಗೆ ಓದಿದ್ದರೂ ಇವರ ಜ್ಞಾನ ಸಂಪತ್ತು ಅಪಾರವಾದದ್ದು.
ವಿವಾಹದ ವಿಷಯದಲ್ಲಿ ಇವರು ಕ್ರಾಂತಿಯನ್ನೇ ಮಾಡಿದರು, ಅಂದರೆ ಸಾಮಾನ್ಯವಾಗಿ ಬಾಲ್ಯವಿವಾಹ ನಡೆಯುತ್ತಿದ್ದ ಸಮಯದಲ್ಲಿ ದೇವಾಂಗನೆಯವರು ತಮ್ಮಿಚ್ಛೆಯಂತೆ ಇಪ್ಪತ್ತನೆಯ ವಯಸ್ಸಿನಲ್ಲಿ ಮದುವೆಯಾದರು. ತಂದೆಯ ಮುದ್ದಿನ ಮಗಳಾಗಿದ್ದರಿಂದ ತಂದೆಯ ಪ್ರೋತ್ಸಾಹವೂ ಇತ್ತು. 1946 ರಲ್ಲಿ ಪಡಿತರ ವಿತರಣಾಧಿಕಾರಿ ವೆಂಕಟರಮಣ ಕೂರ್ಸೆಯವರೊಂದಿಗೆ ವಿವಾಹವಾದರು. ಇವರ ಒಬ್ಬಳೇ ಮಗಳು ಉಷಾ ಕೃಷಿ ವಿಜ್ಞಾನಿ ಡಾ.ಎಸ್ ವಿ ಹೆಗಡೆಯವರನ್ನು ಮದುವೆಯಾಗಿದ್ದಾರೆ. ಉಷಾರವರು ತಮ್ಮ ಮಾವನಿಂದ ಬಳುವಳಿಯಾಗಿ ಬಂದ ತಮ್ಮ ಅಮ್ಮನ ಬರವಣಿಗೆಯ ಹಸ್ತಪ್ರತಿಗಳನ್ನು ಜೋಪಾನವಾಗಿಟ್ಟಿದ್ದು ಮುಂದೆ ಪ್ರಕಟಿಸಲು ನೆರವಾದರು.
ಬಾಲ್ಯದಿಂದಲೂ ಓದುವುದೆಂದರೆ ದೇವಾಂಗನೆಗೆ ಅಚ್ಚುಮೆಚ್ಚು. ಅಕ್ಕ ದೇವಸ್ಥಾನದಲ್ಲಿನ ಭಜನೆಗೆ ಹೋಗಲು ಕರೆದರೆ ಬರಲು ನಿರಾಕರಿಸಿ ಓದಲು ಕೂರುತ್ತಿದ್ದರಂತೆ. ಉತ್ತಮ ಓದುಗರು ಜೊತೆಗೆ ಒಳ್ಳೆ ವಿಮರ್ಶಕರು ಕೂಡ. ವಿ.ಕೃ. ಗೋಕಾಕ್, ಕಾರಂತ, ಬೇಂದ್ರೆ, ಅ.ನ.ಕೃ, ಕಡಂಗೋಡ್ಲು ಶಂಕರ ಭಟ್ಟ ಮೊದಲಾದವರ ಕೃತಿಗಳನ್ನು ಓದಿ ವಿಮರ್ಶೆ ಮಾಡುತ್ತಿದ್ದರು. ಓದುತ್ತಾ ಓದುತ್ತಾ ತಾವೇ ಬರೆಯಲು ಪ್ರಾರಂಭಿಸಿದರು.
ಸಣ್ಣ ಸಣ್ಣ ಕಥೆಗಳನ್ನು ಬರೆದರು. ಆಗಿನ ಸಮಕಾಲೀನ ಲೇಖಕರಾದ ಕೊಡಗಿನ ಗೌರಮ್ಮ, ತ್ರಿವೇಣಿಯವರಂತೆ ಇವರೂ ಸಹ ಸ್ತ್ರೀ ಜೀವನದ ವಿಷಯಗಳನ್ನೇ ತಮ್ಮ ಬರವಣಿಗೆಯ ವಸ್ತುವಾಗಿ ತೆಗೆದುಕೊಳ್ಳುತ್ತಿದ್ದರು. ಸುತ್ತಮುತ್ತಲಿನ ಮಹಿಳೆಯರ ಬವಣೆಗಳನ್ನು ಅಂದರೆ ಬಾಲ್ಯವಿವಾಹ, ವಿಧವೆಯರ ದುಃಸ್ಥಿತಿ, ಅಸಮ ವಯೋಮಾನ ವಿವಾಹ ಇವುಗಳನ್ನೇ ಕುರಿತು ಬರೆಯುತ್ತಿದ್ದರು. ತಾವು ಬರೆಯುತ್ತಿದ್ದ ಕಥೆಗಳ ಬಗ್ಗೆ ಸಂಸ್ಕೃತ ವಿದ್ವಾಂಸ ವಿಘ್ನೇಶ್ವರ ಪಂಡಿತರ ಸಲಹೆಯನ್ನು ಪಡೆಯುತ್ತಿದ್ದರು. ಇವರು ಡಾ ಕೆ. ಜಿ ಶಾಸ್ತ್ರೀ ಗೌರೀಶರ ಕಾಯ್ಕಿಣಿ ಇವರುಗಳೊಂದಿಗೆ ಸಾಹಿತ್ಯ ಚರ್ಚೆಯನ್ನು ಮಾಡುತ್ತಿದ್ದರು.
ವಿಘ್ನೇಶ್ವರ ಪಂಡಿತರು ಹಲವರೊಂದಿಗೆ ಸೇರಿ " ನೂಪುರ" ಎಂಬ ಕೈಬರಹದ ಪತ್ರಿಕೆಯನ್ನು ನಡೆಸುತ್ತಿದ್ದರು. ಈ ಪತ್ರಿಕೆಯಲ್ಲಿ ದೇವಾಂಗನೆಯವರು ಬರೆಯುತ್ತಿದ್ದರು. ಅಂದಿನ ಪ್ರಸಿದ್ಧ ಪತ್ರಿಕೆ "ಜಯಂತಿ ಪತ್ರಿಕೆ" ಯಲ್ಲಿ ಇವರ ಕಥೆಗಳು ಪ್ರಕಟವಾಗುತ್ತಿದ್ದವು. ಜಯಂತಿ ಪತ್ರಿಕೆಯು ನಡೆಸಿದ ಕಥಾಸ್ಪರ್ಧೆಯಲ್ಲಿ ಇವರ "ವೇಣೀ ಸಂಹಾರ" ಕ್ಕೆ ಪ್ರಥಮ ಬಹುಮಾನ ಪಡೆದಿತ್ತು. ಇವರು ಹಾರೆಗೋಲು, ಪುಣ್ಯದಫಲ, ನಾಲ್ಕು ನೂರು, ವರದಕ್ಷಿಣೆ, ಆಣೆಪಾವಲಿ, ಅಡಕತ್ತರಿ, ಬಯಲಾಟ ಎಂಬ ಸಣ್ಣ ಕಥೆಗಳನ್ನು ಬರೆದಿದ್ದಾರೆ.
ಇದಲ್ಲದೆ ಎಂ. ಜಿ ಶೆಟ್ಟಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ "ಸಹಚರ" ಕಾರಂತರ "ವಸಂತ, ಚಿಕ್ಕ ನಾಗರಿಕ" ಮೊದಲಾದ ಹಲವು ಪತ್ರಿಕೆಗಳ ಪರಿಚಯವೂ ಇವರಿಗಿತ್ತು. ಬರೆಯುವುದರ ಜೊತೆಗೆ ಇವರಿಗೆ ಕಲೆಯಲ್ಲೂ ಆಸಕ್ತಿಯಿತ್ತು. ಗೋಕರ್ಣದ "ಸಾಹಿತ್ಯ ಸೇವಕ ಸಂಘ" ದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ರಂಗೋಲಿ ಹಾಕುವುದು, ಕಸೂತಿ, ಚಿಪ್ಪುಗಳ ಮೇಲೆ ಅಲಂಕಾರ ಮಾಡುವುದು ಇವರಿಗೆ ಪ್ರಿಯವಾದ ಕೆಲಸವಾಗಿತ್ತು. ಇವರ ರಂಗೋಲಿಯನ್ನು ನೋಡಿದ ಜಯಚಾಮರಾಜೇಂದ್ರ ಒಡೆಯರ್ 1948 ರಲ್ಲಿ ಬೆಳ್ಳಿ ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಿದ್ದರು.
ಆಕರ್ಷಕ ವ್ಯಕ್ತಿತ್ವದ ಇವರು ಯಾವಾಗಲೂ ಚಟುವಟಿಕೆಯಿಂದಿರುತ್ತಿದ್ದರು. ಅಡುಗೆ ಮಾಡಿ ಬಡಿಸುವುದು ಇವರಿಗೆ ಬಲು ಪ್ರೀತಿ." ನೀವೆಲ್ಲಾ ಅಡುಗೆ ಮನೆಯಲ್ಲೇ ಇರಿ ಹೊರಗೆ ಬರಬೇಡಿ " ಎಂದು ತಮಾಷೆ ಮಾಡುತ್ತಲೇ, ಹೆಣ್ಣಿನ ಶೋಷಣೆಯ ಮೂಲ ಅಡಿಗೆಮನೆ ಎಂದು ಹೇಳುತ್ತಿದ್ದರು. ತಮ್ಮ ಮನಸ್ಸಿಗೆ ಬಂದಂತದ್ದನ್ನು ಮಾಡುವ ದಿಟ್ಟೆಯಾಗಿದ್ದರು. ಇವರು ಸಣ್ಣ ಪುಟ್ಟ ಸಮಾರಂಭಗಳಲ್ಲಿ ಸ್ತ್ರೀ ಜಾಗೃತ ಭಾಷಣಗಳನ್ನು ಮಾಡುತ್ತಿದ್ದರು.
ಇಂತಹ ಅಪರೂಪ ವ್ಯಕ್ತಿತ್ವದ ದೇವಾಂಗನೆಯವರು ಗರ್ಭಪಾತ ಮಾಡಿಸಿಕೊಳ್ಳಲು ನಾಟಿ ಔಷಧಿಯನ್ನು ತೆಗೆದುಕೊಂಡು ಅತಿಯಾದ ರಕ್ತಸ್ರಾವದಿಂದ 1951 ರಲ್ಲಿ ದುರಂತ ಸಾವಿಗೀಡಾದರು. ಇದ್ದ ಅಲ್ಪಾವಧಿಯಲ್ಲಿಯೇ ಸ್ತ್ರೀಪರ ಲೇಖಕಿಯಾಗಿ ಗುರುತಿಸಲ್ಪಟ್ಟಿದ್ದರು ದೇವಾಂಗನೆಯವರು.
- ವಿಜಯಲಕ್ಷ್ಮಿ ಎಂ ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ