ಒಂದು ವಾರದಿಂದ ಆಕೆ ಫೋನಿಸುತ್ತಲೇ ಇದ್ದಾಳೆ! ನನಗೂ ಗೊತ್ತು, ಆಕೆ ನನ್ನೊಂದಿಗೆ ಏನೋ ಹೇಳುವುದಿದೆ. ಆದರೆ ನನಗೇಕೊ ಕೇಳುವ ವ್ಯವಧಾನ ಇಲ್ಲವಾಯ್ತ!?
ಗೊತ್ತು,ಇಲ್ಲಿ ಪ್ರತಿ ಬದುಕಿಗೂ ಅದರದ್ದೇ ನೋವಿದೆ. ನೋವಿಲ್ಲದ ಜೀವವಿಲ್ಲ, ಮತ್ತು ಪ್ರತಿ ನೋವೂ ತನಗೆರಡು ಕಿವಿಗಳನ್ನು ಬೇಡುತ್ತದೆ. ಹಂಚಿಕೊಂಡ ಮಾತ್ರಕ್ಕೆ ಯಾವುದೂ ತೀರುವುದಿಲ್ಲವಾದರೂ ಹಂಚಿಕೊಳ್ಳುತ್ತಲೇ ಚೂರು ಹಗೂರಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಆಕೆಯ ನೋವು ನನಗೂ ಗೊತ್ತು. ಅಮ್ಮನಿಲ್ಲ, ಬದುಕು ನೆಟ್ಟಗಿಲ್ಲ, ಹೇಗಿದ್ದಿ? ಎನ್ನುವ ಬಂಧು-ಬಳಗವಿಲ್ಲ! ಮುಗ್ಧತೆಯನ್ನೇ ಉಸಿರಾಡುವ ಅವಳಿಗೆ ಗೆಳತಿಯರೂ ಇಲ್ಲ!
ಆದರೂ ಕೇಳಿಸಿಕೊಳ್ಳುವವರಿಗೂ ಅವರದೇ ಒತ್ತಡಗಳು..ಅವರದೇ ಯಾತನೆಗಳು..
ನಾನು ಟೀಚರ್ ಆದರೂ ಅವಳಿಗೆ ನಾನು ಪಕ್ಕಾ ಗೆಳತಿಯೇ.ಅವಳ ಕರೆ ತಿರಸ್ಕರಿಸಿದ ಗಿಲ್ಟ್ ಕಾಡತೊಡಗಿತು...ನಾನೇ ಫೋನಿಸಿ ಹೇಳು ಮಗಾ..ಅಂದೆ.
ಯಾಕೋ ಸಂಕಟವಾಯಿತು ಟೀಚರ್, ಸುಮ್ಮನೆ ಅಳಬೇಕೆನಿಸಿತು. ಯಾರದೋ ವಾಟ್ಸಾಪಿನಲ್ಲಿ ನಿಮ್ಮ ಫೋಟೋ ನೋಡಿದೆ ಟೀಚರ್.. ಮತ್ತೆ ಅದೆಲ್ಲ ಮಾಮೂಲಿ ಟೀಚರ್, ಯಾವಾಗಾದರೂ ಮಾತಾಡುತ್ತೇನೆ ಅಂದಳು.
ನೋವುಗಳಲ್ಲೇ ಬದುಕು ಅರಳಬೇಕು..ಅಮ್ಮ ಇಲ್ಲ ಅಂತಿದ್ದೆ. ಈಗ ನೀನೇ ಅಮ್ಮನಾಗಿದ್ದಿ. ನಾಳೆ ಬದುಕು ಮತ್ತೂ ಬದಲಾಗುತ್ತೆ. ಬೀ ಬೋಲ್ಡ್..ಪ್ರೀತಿ ಯಾವತ್ತೂ ಇರುತ್ತೆ ಅಂದೆ.
ಅವಳಿಗೆಷ್ಟು ಸಮಾಧಾನವಾಯಿತೋ ಗೊತ್ತಿಲ್ಲ. ಆದರೆ ನನ್ನ ದುಃಖ ದೊಡ್ಡದು ಮಾಡಿಕೊಂಡು ವಾರಗಟ್ಟಲೆ ಅವಳ ಕರೆಯನ್ನು ತಿರಸ್ಕರಿಸಿದ ಗಿಲ್ಟನ್ನು ಕಳೆದುಕೊಂಡೆ!
- ರಂಗಮ್ಮ ಹೊದೇಕಲ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ