Pages

ಅನುವಾದಿತ ನಾಟಕ - ದಿವ್ಯ ಚೇತನ ವಿದ್ಯಾಸಾಗರ್


ಪಾತ್ರವರ್ಗ
ಈಶ್ವರಚಂದ್ರ ಬಂದೋಪಾಧ್ಯಾಯ 
ಠಾಕೂರ್ ದಾದ್ ಬಂದೋಪಾಧ್ಯಾಯ - ವಿದ್ಯಾಸಾಗರ್ ರವರ ತಂದೆ
ದೀನಬಂಧು ಬಂದೋಪಾಧ್ಯಾಯ ವಿದ್ಯಾಸಾಗರ್ ರವರ ಸೋದರರು
ಶಂಭುಚಂದ್ರ ಬಂದೋಪಾಧ್ಯಾಯ ವಿದ್ಯಾಸಾಗರ್ ರವರ ಸೋದರರು
ನಾರಾಯಣ ಬಂದೋಪಾಧ್ಯಾಯ ವಿದ್ಯಾಸಾಗರ್ ರವರ ಮಗ
ಡಾ|| ದುರ್ಗಾಚರಣ ಬಂದೋಪಾಧ್ಯಾಯ – ವಿದ್ಯಾಸಾಗರ್ ರವರ ಸ್ನೇಹಿತರು
ರಾಜಕೃಷ್ಣ ಬಂದೋಪಾಧ್ಯಾಯ - ವಿದ್ಯಾಸಾಗರ್ ರವರ ಸ್ನೇಹಿತರು
ಮದನಮೋಹನ ತರ್ಕಾಲಂಕಾರ - ವಿದ್ಯಾಸಾಗರ್ ರವರ ಸ್ನೇಹಿತರು 
ಶ್ರೀಶ್ ಚಂದ್ರ ವಿದ್ಯಾರತ್ನ - ವಿದ್ಯಾಸಾಗರ್ ರವರ ಸ್ನೇಹಿತರು
ತಾರಾನಾಥ್ ತರ್ಕವಾಚಸ್ಪತಿ ವಿದ್ಯಾಸಾಗರ್ ರವರ ಗುರುಗಳು
ಶಂಭುಚಂದ್ರ ವಾಚಸ್ಪತಿ ವಿದ್ಯಾಸಾಗರ್ ರವರ ಗುರುಗಳು
ಪ್ರೇಮಚಂದ್ ತರ್ಕವಾಗೀಶ್ ವಿದ್ಯಾಸಾಗರ್ ರವರ ಗುರುಗಳು
ರೆವರೆಂಡ್ ಕೃಷ್ಣಮೋಹನ ಬಂದೋಪಾಧ್ಯಾಯ – ಯಂಗ್ ಬೆಂಗಾಲ್ ಗುಂಪಿನ ಮುಖ್ಯ ಸದಸ್ಯರು 
    ಮತ್ತು ವಿದ್ಯಾಸಾಗರ್ ರವರ ಆಪ್ತ ಸ್ನೇಹಿತರು
ರಾಮ್ ಗೋಪಾಲ್ ಘೋಷ್ - ಯಂಗ್ ಬೆಂಗಾಲ್ ಗುಂಪಿನ ಮುಖ್ಯ ಸದಸ್ಯರು 
    ಮತ್ತು ವಿದ್ಯಾಸಾಗರ್ ರವರ ಆಪ್ತ ಸ್ನೇಹಿತರು
ರಸಿಕ ಕೃಷ್ಣ ಮಲ್ಲಿಕ್ - ಯಂಗ್ ಬೆಂಗಾಲ್ ಗುಂಪಿನ ಮುಖ್ಯ ಸದಸ್ಯರು 
  ಮತ್ತು ವಿದ್ಯಾಸಾಗರ್ ರವರ ಆಪ್ತ ಸ್ನೇಹಿತರು
ರಾಧಾನಾಥ್ ಶಿಕ್‍ದಾರ್ - ಯಂಗ್ ಬೆಂಗಾಲ್ ಗುಂಪಿನ ಮುಖ್ಯ ಸದಸ್ಯರು 
    ಮತ್ತು ವಿದ್ಯಾಸಾಗರ್ ರವರ ಆಪ್ತ ಸ್ನೇಹಿತರು
ರಾಮತನು ಲಾಹಿರಿ - ಯಂಗ್ ಬೆಂಗಾಲ್ ಗುಂಪಿನ ಮುಖ್ಯ ಸದಸ್ಯರು 
    ಮತ್ತು ವಿದ್ಯಾಸಾಗರ್ ರವರ ಆಪ್ತ ಸ್ನೇಹಿತರು
ಕಾಲಿಪ್ರಸನ್ನ ಸಿಂಗ್ - ಯಂಗ್ ಬೆಂಗಾಲ್ ಗುಂಪಿನ ಮುಖ್ಯ ಸದಸ್ಯರು 
    ಮತ್ತು ವಿದ್ಯಾಸಾಗರ್ ರವರ ಆಪ್ತ ಸ್ನೇಹಿತರು
ಭೂದೇವ ಚಂದ್ರ ಮುಖ್ಯೋಪಾಧ್ಯಾಯ - ಗೌರವಾನ್ವಿತ ವ್ಯಕ್ತಿಗಳು
ರಾಧಾಕಾಂತ್ ದೇವ್ - ಪ್ರಖ್ಯಾತ ವ್ಯಕ್ತಿಗಳು
ಮಿಸ್ಟರ್ ಮಾರ್ಷಲ್ - ಪೋರ್ಟ್ ವಿಲಿಯಂ ಕಾಲೇಜಿನ ಅಧ್ಯಾಪಕರು
ಮೋತಿಲಾಲ್ - ವಿದ್ಯಾಸಾಗರ್ ರವರ ಹಳ್ಳಿಯಿಂದ ಬಂದ ವ್ಯಕ್ತಿ
ಮದನ್ ಲಾಲ್ - ಕಲ್ನಾದ ನಿವಾಸಿ
ಜಾನಕೀಜೀವನ್ - ಕಲ್ನಾದ ನಿವಾಸಿ
ಹರಿಹರ - ರಾಧಾಕಾಂತ್ ದೇವ್ ರವರ ಪಂಡಿತರು
ವಿದ್ಯಾವಾಗೀಶ್ - ರಾಧಾಕಾಂತ್ ದೇವ್ ರವರ ಪಂಡಿತರು
ನ್ಯಾಯರತ್ನ - ರಾಧಾಕಾಂತ್ ದೇವ್ ರವರ ಪಂಡಿತರು
ಚೂಡಾಮಣಿ - ರಾಧಾಕಾಂತ್ ದೇವ್ ರವರ ಪಂಡಿತರು
ಶ್ರೀರಾಮ್         - ವಿದ್ಯಾಸಾಗರ್ ರವರ ಸೇವಕ
ಭಗವತೀದೇವಿ - ವಿದ್ಯಾಸಾಗರ್ ರವರ ತಾಯಿ
ದೀನಮಯಿ ದೇವಿ - ವಿದ್ಯಾಸಾಗರ್ ರವರ ಪತ್ನಿ
ಸುರೋ - ವಿದ್ಯಾಸಾಗರ್ ರವರ ಬಾಲ್ಯಗೆಳತಿ
ತಾರಾನಾಥ್
ಇಬ್ಬರು ಬಾಲವಿಧವೆಯರು
ಓರ್ವ ವೇಶ್ಯೆ
ಶಂಭುಚಂದ್ರ ವಾಚಸ್ಪತಿಯವರ ಪುಟ್ಟ ಹೆಂಡತಿ

ಮೊದಲ ಅಂಕ
ದೃಶ್ಯ 1

ಸ್ಥಳ - ಬಿರ್ಸಿಂಗಾದ ವಿದ್ಯಾಸಾಗರ್ ರವರ ಮಲಗುವ ಕೋಣೆ; ರಾತ್ರಿಯಾಗಿದೆ. ದೀಪವೊಂದು ಉರಿಯುತ್ತಿದೆ. ದೀಪದ ಪಕ್ಕ ಕುಳಿತುಕ್ರಿ ವಿದ್ಯಾಸಾಗರ್‍ರವರ ಪತ್ನಿ ಪಾನ್ ಮಾಡುತ್ತಿದ್ದಾರೆ. ಗೋಡೆಯ ಪಕ್ಕದಲ್ಲಿ ಮಂಚವೊಂದನ್ನು ಹಾಕಲಾಗಿದೆ. ಅದರ ಪಕ್ಕದಲ್ಲಿರುವ ಕಿಟಕಿಯನ್ನು ಮುಚ್ಚಲಾಗಿದೆ. ಮಂಚದ ಒಂದು ಕೊನೆಯಲ್ಲಿ ಸಣ್ಣ ಟೇಬಲ್ ಇದೆ. ಅದರ ಮುಂದೊಂದು ಕುರ್ಚಿ. ಟೇಬಲ್ ಮೇಲೆ ಸುಂದರವಾದೊಂದು ಟೇಬಲ್ ಲ್ಯಾಂಪ್ ಅನ್ನು ಇಡಲಾಗಿದೆ. ಒಂದು ಭಾಗದಲ್ಲಿರುವ ಅಲ್ಮೆರಾದಲ್ಲಿ ಪುಸ್ತಕಗಳನ್ನು ಜೋಡಿಸಿಡಲಾಗಿದೆ. ವಿದ್ಯಾಸಾಗರ್ ಒಳಗೆ ಬರುತ್ತಾರೆ. ಅವರ ಕೈಯಲ್ಲಿ ಕೆಲವು ಬಿಳಿಹಾಳೆಗಳು ಮತ್ತು ಮಸಿಕುಡಿಕೆಯಿದೆ. ಪೆನ್ನೊಂದು ಮಸಿಕುಡಿಕೆಯಲ್ಲಿದೆ. ಅವರು ಅದನ್ನೆಲ್ಲಾ ಟೇಬಲ್ ಮೇಲೆ ಇಡುತ್ತಾರೆ. ದೀನಮಯಿ ತಲೆಯೆತ್ತಿ ಅವರನ್ನು ನೋಡಿ, ಅವರಿಗೆ ಅಡಿಕೆ ಎಲೆಯನ್ನು ನೀಡುತ್ತಾರೆ.
ವಿದ್ಯಾಸಾಗರ್ – (ಪಾನ್ ಅನ್ನು ತಮ್ಮ ಬಾಯಿತಲ್ಲಿಟ್ಟು) ನಿವಾರಣ್ ಎಷ್ಟು ದಿನದಿಂದ ಖಾಯಿಲೆ ಮಲಗಿದ್ದಾರೆ?
ದೀನಮಯಿ – ಒಂದು ತಿಂಗಳಿಂದ.
ವಿದ್ಯಾಸಾಗರ್ – ಓ! ಬಡಪಾಯಿ. ಕೆಲವು ದಿನಗಳ ಹಿಂದಷ್ಟೇ ಆತನ ಮದುವೆಯಾಯಿತು. ಚಿಕ್ಕ ವಯಸ್ಸಿನ ಮಡದಿಯಿದ್ದಾಳೆ.
ದೀನಮಯಿ - ನೀವಿನ್ನೂ ಅಲ್ಲಿಗೆ ಹೋಗಲಿಲ್ಲವೆ? ಊಟವಾದ ತಕ್ಷಣ ನೀವಲ್ಲಿಗೆ ಹೋಗುವಿರೆಂದು ನಾನು ಭಾವಿಸಿದ್ದೆ.
ವಿದ್ಯಾಸಾಗರ್ – ಅಮ್ಮ ನನ್ನನ್ನು ಅಲ್ಲಿಗೆ ಹೋಗಲು ಬಿಡಲಿಲ್ಲ. ನೀನು ತುಂಬಾ ದೂರದಿಂದ ಬಂzರುವೆ. ನಾನೇ ಹೋಗುವೆ ಎಂದು ಹೇಳಿ ಅವರೇ ಅಲ್ಲಿಗೆ ಹೋದರು.
ದೀನಮಯಿ - ನೀವು ಬಹಳ ದಿನಗಳ ನಂತರ ಬಂದಿರುವಿರಿ!
ವಿದ್ಯಾಸಾಗರ್ - ಹೌದು, ಈ ಬಾರಿ ಬಹಳ ದಿನಗಳ ನಂತರ ಬಂದಿರುವೆನಲ್ಲವೇ (ವಿದ್ಯಾಸಾಗರ್ ದೀನಮಯಿಯಿಂದ ಪಾನನ್ನು ತೆಗೆದುಕೊಳ್ಳುತ್ತಾ ಅವರನ್ನು ನೋಡುವರು) ಈ ನಡುವೆ ನನಗೆ ಸಮಯವೇ ಸಿಗುವುದಿಲ್ಲ. (ದೀನಮಯಿ ತಲೆಯೆತ್ತುವುದಿಲ್ಲ) ನಾನು ತಂದ ಹೊಸ ಲ್ಯಾಂಪ್ ಎಲ್ಲಿ? ಅದನ್ನೇಕೆ ಹಚ್ಚಿಸಿಲ್ಲ?
ದೀನಮಯಿ - ನನಗದನ್ನು ಹಚ್ಚಲು ಬರುವುದಿಲ್ಲ. ಅದರೊಳಗೆ ಎಣ್ಣೆ ಹಾಕಿ ಇಟ್ಟಿದ್ದೇನೆ
ವಿದ್ಯಾಸಾಗರ್ – ಅದರಲ್ಲಿ ತಿಳಿದುಕೊಳ್ಳಲು ಏನಿದೆ? ಬೆಂಕಿಕಡ್ಡಿಯಿಂದ ಹಚ್ಚಬೇಕಷ್ಟೇ. ಎಲ್ಲಿ, ಒಂದು ಬೆಂಕಿಕಡ್ಡಿ ಕೊಡು. ನಾನೇ ಹಚ್ಚುವೆ.
ದೀನಮಯಿ – (ಕುಳಿತಲ್ಲಿಂದ ಎದ್ದು ಬೆಂಕಿಕಡ್ಡಿಯನ್ನು ಕೊಡುವರು. ವಿದ್ಯಾಸಾಗರ್ ದೀಪವನ್ನು ಬೆಳಗಿಸುವರು. ದೀನಮಯಿ ಹಾಸಿಗೆಯ ಮೇಲೆ ಕುಳಿತುಕೊಳ್ಳುವರು) ನೀವು ಈಗ ಓದುವಿರಾ?
ವಿದ್ಯಾಸಾಗರ್ - ಸ್ವಲ್ಪ ಬರೆಯಬೇಕೆಂದುಕೊಂಡಿದ್ದೇನೆ. ಶಂಭುವಿನಿಂದ ಹಾಳೆಗಳನ್ನು, ಮಸಿಯನ್ನು ತಂದಿರುವೆ. ಬರುವಾಗ, ಸೀತೆಯ ವನವಾಸದ ಬಗ್ಗೆ ಪುಸ್ತಕ ಬರೆದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಬೇರೆಯ ವಿಷಯಗಳಲ್ಲಿ ಮುಳುಗುವ ಮುನ್ನ ಬರೆಯಲು ಆರಂಭಿಸಬೇಕೆಂದುಕೊಂಡೆ. ‘ಉತ್ತರರಾಮಚರಿತ’ ಇಲ್ಲಿದೆಯೀ ಅಥವಾ ಕಲ್ಕತ್ತಾದಲ್ಲಿದೆಯೋ ತಿಳಿಯದು. ಹುಡುಕಿ ನೋಡುವೆ (ಅಲ್ಮೆರಾದಲ್ಲಿ ಹುಡುಕುವರು) ಓ! ಇಲ್ಲಿದೆ! (ಒರೆಸಿ) ನೀನೇಕೆ ನನ್ನ ಪುಸ್ತಕಗಳ ಮೇಲಿನ ಧೂಳನ್ನು ಒರೆಸುವುದಿಲ್ಲ?
ದೀನಮಯಿ - ನಿಮ್ಮ ಪುಸ್ತಕಗಳ ಬಳಿ ಹೋಗಲು ನನಗೆ ಭಯ.
(ಚೇರಿನ ಮೇಲೆ ಕುಳಿತು, ದೀಪದ ಉರಿಯನ್ನು ಸ್ವಲ್ಪ ಕಡಿಮೆಮಾಡಿ, ‘ಉತ್ತರರಾಮಚರಿತ’ ಪುಸ್ತಕವನ್ನು ತಿರುವಿಹಾಕುತ್ತಾ, ಒಂದೆಡೆ ಗಾಢವಾಗಿ ಓದುತ್ತಾರೆ. ದೀನಮಯಿ ಕುಳಿತಲ್ಲೇ ಕುಳಿತಿದ್ದಾರೆ. ಸ್ವಲ್ಪ ಸಮಯ ಕಳೆಯುತ್ತದೆ)
ದೀನಮಯಿ – ಈ ನಡುವೆ ಹುಡುಗಿಯರು ಸಹ ಓದು ಕಲಿಯುತ್ತಿದ್ದಾರಲ್ಲವೇ?
ವಿದ್ಯಾಸಾಗರ್- (ಪುಸ್ತಕದಿಂದ ತಲೆಯನ್ನು ಮೇಲೆತ್ತಿ) ಏನು ಹೇಳುತ್ತಿದ್ದೆ?
ದೀನಮಯಿ – ಏನಿಲ್ಲ, ಈ ನಡುವೆ ಹುಡುಗಿಯರು ಸಹ ಓದುತ್ತಿದ್ದಾರಲ್ಲವೇ?
ವಿದ್ಯಾಸಾಗರ್ - ಹೌದು. ನಾನು ಎಲ್ಲಾ ಹಳ್ಳಿಗಳಲ್ಲೂ ಸ್ತ್ರೀ ಶಾಲೆಯನ್ನು ಆರಂಭಿಸಲಿರುವೆ, ನೋಡುತ್ತಿರು.
ದೀನಮಯಿ - ಹಾ! ನಾನು ಚಿಕ್ಕವಳಿದ್ದಾಗ – ವಿದ್ಯಾಸಾಗರ್ ರವರು ನಮಗಾಗಿ ಶಾಲೆಯನ್ನು ತೆರೆದಿದ್ದರೆ, ನಾನೂ ಸಹ ಕಲಿಯಬಹುದಿತ್ತು.
ವಿದ್ಯಾಸಾಗರ್ – ಈಗಲೂ ನೀನು ಕಲಿಯಬಹುದು.
ದೀನಮಯಿ – ಈಗದು ಸಾಧ್ಯವಿಲ್ಲ.
ವಿದ್ಯಾಸಾಗರ್ - ಹಾಗಾದರೆ ಆಗಲೂ ಅದು ಸಾಧ್ಯವಾಗುತ್ತಿರಲಿಲ್ಲ.
[‘ಉತ್ತರಚರಿತಮಾನಸ’ವನ್ನು ಮುಚ್ಚಿಟ್ಟು, ಹಾಳೆಗಳನ್ನು ತೆಗೆದುಕೊಂಡು ಬರೆಯಲಾರಂಭಿಸುತ್ತಾರೆ. ಸ್ವಲ್ಪ ಸಮಯ ಬರೆದ ನಂತರ]
ದೀನಮಯಿ – ಇರಲಿ, ನೀವು ಯಾವ ಪುಸ್ತಕ ಬರೆಯುತ್ತೇನೆ ಎಂದು ಹೇಳಿದಿರಿ?
ವಿದ್ಯಾಸಾಗರ್ - ಸೀತೆಯ ವನವಾಸ.
ದೀನಮಯಿ - ನಿಮಗೆ, ಸೀತೆಯ ನೋವು ಅರ್ಥವಾಗುತ್ತದೆಯೇ?
[ವಿದ್ಯಾಸಾಗರ್ ಬರೆಯುವುದನ್ನು ಬಿಟ್ಟು ತಲೆಯೆತ್ತುವರು]
ವಿದ್ಯಾಸಾಗರ್ – [ಆಶ್ಚರ್ಯಚಕಿತರಾಗಿ] ಅಂದರೆ?
ದೀನಮಯಿ – [ನಗುತ್ತಾ] ಏನಿಲ್ಲ. ಬರೆಯುವುದನ್ನು ಮುಂದುವರೆಸಿ.
[ವಿದ್ಯಾಸಾಗರ್ ರವರ ಮುಖದ ಮೇಲೆ ಮುಗುಳ್ನಗು ಕಾಣಿಸಿಕೊಳ್ಳುತ್ತದೆ. ಆದರೆ ಮಾತನ್ನು ಮುಂದುವರೆಸದೆ ಬರೆಯಲು ಆರಂಭಿಸುತ್ತಾರೆ]
ದೀನಮಯಿ – ಚಂಚಲ ನಿಜಕ್ಕೂ ಅದೃಷ್ಟಶಾಲಿ.
ವಿದ್ಯಾಸಾಗರ್ – (ಬರೆಯುತ್ತಲೇ) ಯಾರೀ ಚಂಚಲ?
ದೀನಮಯಿ - ದೀನು ಭಟ್ಟಾಚಾರ್ಯರ ಪತ್ನಿ.
ವಿದ್ಯಾಸಾಗರ್ – ಆಕೆಯೇನು ಬಹಳ ಸುಂದರವಾಗಿದ್ದಾರೆಯೇ?
ದೀನಮಯಿ – ಆಕೆ ಸುಂದರಳಲ್ಲದಿದ್ದರೂ, ಅದೃಷ್ಟ ಚೆನ್ನಾಗಿದೆ. ಆಕೆಯ ಪತಿ ಪ್ರಸಿದ್ಧ ವಿದ್ಯಾಸಾಗರರಲ್ಲ.
ವಿದ್ಯಾಸಾಗರ್ – [ತಲೆಯನ್ನು ಮೇಲೆತ್ತದೆ] ಏಕೆ? ವಿದ್ಯಾಸಾಗರ್ ಮಾಡಿದ ಅಪರಾಧವಾದರೂ ಏನು?
[ದೀನಮಯಿ ತುಂಟತನದಿಂದ ಮುಗುಳ್ನಗುವರು]
ವಿದ್ಯಾಸಾಗರ್ - ಸರಿ, ಸರಿ. ನಿನ್ನೆಲ್ಲಾ ಅಸ್ತ್ರಗಳು ತಮ್ಮ ಗುರಿಯನ್ನು ಮುಟ್ಟಿವೆ. ಈಗ ದಯಮಾಡಿ ನನಗೆ ಬರೆಯಲು ಬಿಡುವೆಯಾ? [ಬರೆಯಲು ಆರಂಭಿಸುವರು]
ದೀನಮಯಿ – [ಒತ್ತಾಯಪೂರ್ವಕವಾಗಿ] ಬಹಳ ಸಮಯವಾಗಿದೆ. ಇನ್ನು ಮಲಗಿ. 
ವಿದ್ಯಾಸಾಗರ್ – ಇನ್ನು ಸ್ವಲ್ಪ ಇದೆ.
ದೀನಮಯಿ – ಇಲ್ಲ. ಈಗಿನ್ನು ಎದ್ದೇಳಿ.
ವಿದ್ಯಾಸಾಗರ್ – ಇನ್ನೇನು ಆಯಿತು. [ಬರೆಯುವುದನ್ನು ಮುಗಿಸಿ ಪೆನ್ನನ್ನು ಕೆಳಗೆ ಹಾಕುವರು]
ದೀನಮಯಿ - ನೀವೇಕೆ ಇನ್ನೂ ಮೇಲೇಳುತ್ತಿಲ್ಲ?
ವಿದ್ಯಾಸಾಗರ್ - ಸ್ವಲ್ಪ ಇರು. ಓದಬೇಕಾಗಿದೆ [ಓದಲಾರಂಭಿಸುವರು] ಇಲ್ಲ. ಇದು ಸಾಧ್ಯವಿಲ್ಲ. ಯಾರಾದರೂ ನಿನ್ನ ಕಿವಿಯ ಹತ್ತಿರ ನಿಂತು ಗಲಾಟೆ ಮಾಡುತ್ತಿದ್ದರೆ ಓದಲು ಅಥವಾ ಬರೆಯಲು ಸಾಧ್ಯವೇ? [ಕಣ್ಣುಮಿಟುಕಿಸಿ ದೀನಮಯಿಯತ್ತ ತುಂಟನಗುವಿನೊಂದಿಗೆ ನೋಡುವರು] ದೀನಮಯಿ ಎಂಬ ಹೆಸರು ನಿನಗೆ ಸೂಕ್ತವಾಗಿಲ್ಲ. 
ದೀನಮಯಿ – ಏಕೆ? 
ವಿದ್ಯಾಸಾಗರ್ - ನಿನ್ನೆಲ್ಲಾ ಕೋಪವನ್ನು ನೀನು ರಾತ್ರಿಯಲ್ಲೇ ತೋರಿಸುವೆ.
ದೀನಮಯಿ - ಹೌದು. ನನ್ನ ಬಗ್ಗೆ ಎಲ್ಲವೂ ಕೆಟ್ಟದೇ. ನಮ್ಮ ಮದುವೆಯಲ್ಲಿ ನೀವು ಇಷ್ಟಪಟ್ಟ ಆ ಸುಂದರ ಹುಡುಗಿಯನ್ನೇ ಮದುವೆಯಾಗಬೇಕಿತ್ತು.
ವಿದ್ಯಾಸಾಗರ್ – ಏಕೆ? ನೀನು ಸಹ ಸಾಕಷ್ಟು ಸುಂದರಳೇ.
ದೀನಮಯಿ - ನಾನೇ? ನಾನು ಧೂಳಿನಂತೆ.
ವಿದ್ಯಾಸಾಗರ್ - ನೀನು ಧೂಳಾದರೂ ಅತ್ಯಮೂಲ್ಯ ಧೂಳು.
ದೀನಮಯಿ – ಆಹಾ! ಈಗ ಎದ್ದೇಳಿ . ಸಾಕಷ್ಟು ಹೊತ್ತಾಗಿದೆ. 
ವಿದ್ಯಾಸಾಗರ್ – ಆ ಕಿಟಕಿಯನ್ನು ತೆಗೆ. ಬಹಳ ಸೆಕೆಯಾಗುತ್ತಿದೆ. [ದೀನಮಯಿ ಎದ್ದು ಕಿಟಕಿಯನ್ನು ತೆರೆಯುವರು. ವಿದ್ಯಾಸಾಗರ್ ದೀಪವನ್ನು ಆರಿಸಲು ಮುಂದಾಗುತ್ತಿರುವಾಗ ರಾತ್ರಿಯ ಮೌನವನ್ನು ಸೀಳಿಕೊಂಡು ಬಂದ ಆಕ್ರಂದನ ಕೇಳಿಸುತ್ತದೆ.] ಏನದು? ನಿವಾರಣ್ ಮೃತಪಟ್ಟಿರಬಹುದೇ?
ದೀನಮಯಿ - ಹಾಗೆಯೇ ಕಾಣಿಸುತ್ತದೆ. ಹಾ! ಆತನ ಚಿಕ್ಕ ವಯಸ್ಸಿನ ಮಡದಿ ಈಗ ವಿಧವೆಯಾಗುವಳು.
ವಿದ್ಯಾಸಾಗರ್ - ನಾನೀಗಲೇ ಹೋಗುವೆ [ತ್ವರಿತವಾಗಿ ಹೋಗುವರು. ದೀನಮಯಿ ಕಿಟಕಿಯ ಮುಂದೆ ಸ್ತಬ್ಧವಾಗಿ ನಿಲ್ಲುವರು]

(ಮುಂದುವರೆಯುತ್ತದೆ )
[ಮೂಲ - ಬಂಗಾಳಿಯಿಂದ ]
ಅನುವಾದ -  ಸುಧಾ ಜಿ 

1 ಕಾಮೆಂಟ್‌:

murthi i r ಹೇಳಿದರು...

ದಯವಿಟ್ಟು ದೇವಂಗನಾ ರವರ ಕಥೆಗಳ ಪುಸ್ತಕ ತಿಳಿಸಿ ಒಂದು ಪ್ರತಿ ಬೇಕಾಗಿರುತ್ತದೆ. ಮೇಡಂ