Pages

ಅನುವಾದಿತ ಕಥೆ - ಅಮ್ಮ




ಈ ಕಥೆಯನ್ನು - ಈ ಉದಾತ್ತ ಸಾವಿನ ಕಥೆಯನ್ನು ಬರೆದಿರುವುದು ಕಣ್ಣಿರನ್ನು ತರಲಲ್ಲ, ನಿರಾಶೆಯನ್ನು ಸೃಷ್ಟಿಸಲಲ್ಲ್ಲ ಅಥವಾ ಶಾಪವನ್ನು ಹಾಕಲಿ ಎಂದೂ ಅಲ್ಲ. ಏಕೆಂದರೆ ಆ ಶಾಪಗಳನ್ನು ಈಗಾಗಲೇ ಇಡೀ ಜಗತ್ತೇ ಹಾಕಿಬಿಟ್ಟಿದೆ. ಈ ಕಥೆ ನಮ್ಮ ಜನತೆಯ ಧೀರೋದಾತ್ತತೆಯನ್ನು ನೆನಪಿಸಲು, ಪ್ರೀತಿಯ ಹೆಸರಿನಲ್ಲಿ.
ಈಗ ನಾವು ಒಬ್ಬಾಕೆಯ ಬಗ್ಗೆ, ಓರ್ವ ತಾಯಿ ‘ಮರಿಯಾ ಸ್ಟೊಯಾನ್’ ಬಗ್ಗೆ ಓದೋಣ.
ಹೊತ್ತಿ ಉರಿಯುತ್ತಿರುವ ಹಳ್ಳಿಯ ಮಧ್ಯದಲ್ಲಿ ಹೆಣಗಳನ್ನು ದಾಟಿ ಓಡುತ್ತಿರುವ ಅವನಾರು? ಓಡುತ್ತಾ ಓಡುತ್ತಾ ಹೃದಯವೇ ಕಿತ್ತು ಬರುವಂತೆ ಗೋಳಾಡುತ್ತಿರುವ ಅವನಾರು?
ಆತ ವ್ಯಾಸಿಲ್, ಮರಿಯಾ ಸ್ಟೊಯಾನ್‍ಳ ಮಗ. ತನ್ನ ಪಡೆಯೊಂದಿಗೆ ಶತ್ರುಗಳನ್ನು ಅಟ್ಟಿಸಿಕೊಂಡು ಬಂದ ವ್ಯಾಸಿಲ್ ತನ್ನ ತಾಯಿಯನ್ನು ಭೇಟಿಯಾಗಲು ತನ್ನ ಸಬ್‍ಮೆಷಿನ್‍ಗನ್ ಹಾಗೂ ಕೈಬಾಂಬ್‍ಗಳೊಂದಿಗೇ ಬಂದಿದ್ದ.
ಸುದೀರ್ಘ ಯುದ್ಧದಲ್ಲಿ ಬೆವರಿನಿಂದ ತೋಯ್ದ ವ್ಯಾಸಿಲ್ ಆತಂಕದಿಂದ ಓಡುತ್ತಿದ್ದಾನೆ. ಓರ್ವ ಸ್ಕೌಟ್‍ನಾಗಿ ತಾನು ಹುಟ್ಟಿದ ನಾಡಿಗಾಗಿ ಧೀರತೆಯಿಂದ ಹೋರಾಡಿದ್ದಾನೆ. ಹಿಂದೆ ವೈರಿಗಳೊಂದಿಗೆ ಸೇರಿದ್ದ ತನ್ನ ಚಿಕ್ಕಪ್ಪನ ಮನೆಯನ್ನೇ ತನ್ನ ಗ್ರೆನೇಡ್‍ನಿಂದ ಛಿದ್ರಗೊಳಿಸಿ ಆ ತುಂಡುಗಳು ಆಕಾಶದೆತ್ತರಕ್ಕೆ ಚಿಮ್ಮುವಂತೆ ಮಾಡಿದ್ದ. ಸೈನಿಕರು ಶತ್ರುಗಳನ್ನು ಹೊಡೆದಟ್ಟಿದ್ದಾರೆ. ವ್ಯಾಸಿಲ್ ಇಡೀ ಹಳ್ಳಿಯನ್ನು ಸುತ್ತುತ್ತಾನೆ. ಒಮ್ಮೆ ಹಳ್ಳಿಯಾಗಿದ್ದ ಪ್ರದೇಶದಲ್ಲಿ ಇಂದು ಕರಕಲಾಗಿರುವ ತೋಟಗಳು, ಮುರಿದುಬಿದ್ದಿರುವ ಸಾಮಾನುಗಳು, ಬಾಂಬ್‍ಗಳಿಂದ ಉಂಟಾದ ಹಳ್ಳಕೊಳ್ಳಗಳು, ರಕ್ತಮಯವಾಗಿ ಕೆಸರಲ್ಲಿ ಬಿದ್ದಿರುವ ಬಹಳಷ್ಟು ಶತ್ರುಗಳ ಹೆಣಗಳು.
“ಅಮ್ಮಾ, ನೀನೆಲ್ಲಿದ್ದೀಯಾ? ನಾನು ವ್ಯಾಸಿಲ್. ನಾನು ಬದುಕಿದ್ದೇನೆ. ಇವಾನ್ ಇನ್ನಿಲ್ಲ. ಆದರೆ ನಾನು ಬದುಕಿದ್ದೇನೆ. ನಾನವರನ್ನು ಕೊಂದೆ, ಅಮ್ಮಾ, ಇನ್ನೂರು ಜನ ಶತ್ರುಗಳನ್ನು....... ಅಮ್ಮಾ, ಎಲ್ಲಿದ್ದೀಯಾ?”
ವ್ಯಾಸಿಲ್ ಅಂಗಳದ ಒಳಗೆ ಓಡಿದ. ಇಲ್ಲಿ, ಇಲ್ಲೇ ಅಂಗಳ ಇತ್ತು.
“ಅಮ್ಮಾ ನನ್ನ ಪ್ರೀತಿಯ ಅಮ್ಮ, ಎಲ್ಲಿದ್ದೀಯಾ? ನೀನೇಕೆ ಒಂದು ಬಾರಿ ನನ್ನನ್ನು ನೋಡಬಾರದು? ನಿನ್ನ ಶಾಂತ ದನಿ ಏಕೆ ಕೇಳಿಬರುತ್ತಿಲ್ಲ. ಎಲ್ಲಿದ್ದೀಯಾ, ಅಮ್ಮಾ, ನನ್ನ ಬೆಳ್ಗೂದಲ ಆತ್ಮೀಯ ಅಮ್ಮಾ.”
ಆತ ತನ್ನ ಮನೆಯ ಹತ್ತಿರ ಬಂದು ನಿಂತ. ಆದರೆ ಅಲ್ಲೀಗ ಮನೆಯಿರಲಿಲ್ಲ. ವ್ಯಾಸಿಲ್ ಅಂಗಳದತ್ತ ತಿರುಗಿದ. ಅಲ್ಲಿ ಅಂಗಳ ಇರಲಿಲ್ಲ. ನಂತರ ತೋಟದತ್ತ ದೃಷ್ಟಿ ಹಾಯಿಸಿದ ಅಲ್ಲಿ ತೋಟವಿರಲಿಲ್ಲ. ಅಲ್ಲಿ ಒಂದೇ ಒಂದು ಹಳೆಯ ಸೀಬೆ ಮರವಿತ್ತು. ಆ ಮರದಿಂದ ತೂಗಾಡುತ್ತಿದ್ದಳು – ಅವನ ತಾಯಿ.
ಮೂಕವಾಗಿಸುವಂತಹ ಭಯಾನಕ ದೃಶ್ಯ, ಮರೆಯಲಾಗದ ಸಂಕಟ.
***
ಅವಳು ಬದುಕಿದ್ದಾಗ ಆ ಪುಟ್ಟ ಮನೆ ಸುಸ್ಥಿತಿಯಲ್ಲಿ ಹಳ್ಳಿಯ ಮೂಲೆಯೊಂದರಲ್ಲಿತ್ತು. ಒಂದು ದಿನ ಮಧ್ಯರಾತ್ರಿಯಲ್ಲಿ ಭೀಕರ ಹಿಮಪಾತವಾಗುತ್ತಿದ್ದಾಗ ಯಾರೋ ಬಾಗಿಲು ತಟ್ಟಿದರು. “ಯಾರು?”
“ನಮ್ಮನ್ನು ಒಳಗೆ ಬರಲು ಬಿಡಿ. ನಾವು ಸಾಯುತ್ತಿದ್ದೇವೆ.”
“ಏನಾಗಿದೆ? ಯಾರು ನೀವು? ಎಲ್ಲಿಂದ ಬಂದಿರುವಿರಿ?”
“ನಾವು ರಷ್ಯನ್ನರು. ವಿಮಾನ ಚಾಲಕರು! ನಮ್ಮನ್ನವರು ಗುಂಡು ಹಾರಿಸಿ ಕೆಳಗಿಳಿಸಿದರು”.
“ಅಯ್ಯೋ ದೇವರೇ, ಬೇಗ ಒಳಗೆ ಬನ್ನಿ. ನಾನು ಬಾಗಿಲನ್ನು ಮುಚ್ಚುವೆ. ಯಾರೂ ನಿಮ್ಮನ್ನು ನೋಡಲಿಲ್ಲವಷ್ಟೆ? ಈ ಸ್ಥಳದಲ್ಲಿ ಎಲ್ಲೆಡೆ ಜರ್ಮನ್ನರೇ ತುಂಬಿದ್ದಾರೆ”.
ಒಬ್ಬರನ್ನೊಬ್ಬರಿಗೆ ಆತುಕೊಂಡು ಇಬ್ಬರು ಅಂಗ ಊನವಾದವರು ಮನೆಯೊಳಗೆ ಬಂದರು. ಬಂದೊಡನೆಯೇ ಕುಸಿದುಬಿದ್ದರು. ತಕ್ಷಣವೇ ಪ್ರಜ್ಞೆದಪ್ಪಿದರು. ಅದಾದ ಮೇಲೆ ಮೂವತ್ತಾರು ಘಂಟೆಗಳ ಕಾಲ ನಿದ್ರಿಸಿದರು. ಅವರು ಮುಕ್ಕಾಲುಪಾಲು ಸತ್ತರೆಂದೆ ಆಕೆ ಭಾವಿಸಿದಳು.
ಆಕೆ ಅವರ ಪಾದಗಳನ್ನು ಬಿಸಿನೀರಿನಿಂದ ತೊಳೆದಳು. ಮನೆಯನ್ನೆಲ್ಲಾ ಬೆಚ್ಚಗಿರಿಸಿದಳು. ಅವರ ಊಟವನ್ನು ಮೂರು ಬಾರಿ ಬಿಸಿ ಮಾಡಿದಳು. ಆದರವರು ನಿದ್ರಿಸುತ್ತಲೇ ಇದ್ದರು. ಆ ರಾತ್ರಿಗಳಲ್ಲಿ ಆಕೆ ತನ್ನ ಮಕ್ಕಳಾದ ಇವಾನ್, ವ್ಯಾಸಿಲ್‍ರ ಬಗ್ಗೆ ಚಿಂತಿಸುತ್ತಾ ಅಳುತ್ತಲೇ ಇದ್ದಳು. ಅವರಿಗೆ ಊಟ ಹಾಕುವವರು ಯಾರು? ಇಂತಹ ಕಷ್ಟದ ಸಮಯದಲ್ಲಿ ಅವರಿಗೆ ಆಶ್ರಯ ನೀಡುವರಾರು? ಅವರೆಲ್ಲಿದ್ದಾರೋ? ಬಹುಶಃ ಯಾವುದೋ ಹೊಲದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರಬಹುದು ಅಥವಾ ಜರ್ಮನ್ನರ ಯುದ್ಧ ಬಂಧಿಗಳ ಕ್ಯಾಂಪ್‍ನಲ್ಲಿ ನೇಣುಗಂಬದಿಂದ ತೂಗಾಡುತ್ತಿರಬಹುದು. ಕಾಗೆಗಳು ಅವರ ಹೆಪ್ಪುಗಟ್ಟಿದ ಕಂಗಳನ್ನು ಕುಕ್ಕುತ್ತಿರಬಹುದು. ಅವರು ಇನ್ನೆಂದಿಗೂ ಅವಳನ್ನು ನೋಡರು, ಅವಳನ್ನು ಏನೂ ಕೇಳರು, ಯಾವುದಕ್ಕೂ ಅಳರು....... ಎಲ್ಲೆಡೆಯೂ ಸಾಕಷ್ಟು ಸಾವುನೋವಿದೆ.
ಸ್ಟೀಫನ್ ಶೆನಿಟ್‍ಸಿನ್ ಮತ್ತು ಕೊಸ್ಟ್ಯಾ ರ್ಯಾಬೊವ್ ಇಬ್ಬರೂ ಯೂರಲ್ಸ್‍ನವರು. ಆಕ್ರಮಣಕಾರಿ ಹಿಟ್ಲರ್‍ನ ಸೈನ್ಯದೊಂದಿಗೆ ಪ್ರಾಣವನ್ನು ಲೆಕ್ಕಿಸದೆ ಧೀರೋದಾತ್ತವಾಗಿ ಹೋರಾಡುತ್ತಿದ್ದ ರಷ್ಯನ್ ಯುವಜನತೆಯ ಭಾಗ ಅವರು. ಕ್ಷೌರವಿಲ್ಲದೆ, ಚಳಿಮಳೆಗಾಳಿಗೆ ಸಿಲುಕಿ, ಜೀವನದ ಕಹಿ ಅನುಭವಗಳಿಂದ ಘಾಸಿಗೊಂಡಿದ್ದ ಅವರು ತಮ್ಮ ನಿದ್ರೆಯಲ್ಲಿ ಏದುಸಿರು ಬಿಡುತ್ತಾ ನರಳಿದರು. ಅವರ ಕನಸುಗಳಲ್ಲಿಯೂ ಯುದ್ಧ ಅವರ ಹೃದಯಗಳನ್ನು ಕಾಡಿತ್ತು,
ಅವರು ಯೂರಲ್ಸ್‍ನ ಸರಳ ಹುಡುಗರಾಗಿದ್ದರು. ತಕ್ಕಮಟ್ಟಿಗೆ ಶಿಕ್ಷಣ ಪಡೆದು ಕಷ್ಟಪಟ್ಟು ದುಡಿಯುವ ಕೊಮ್‍ಸೊಮಲ್ (ಕಿರಿಯ ಕಮ್ಯೂನಿಸ್ಟರು) ಸದಸ್ಯರಾಗಿದ್ದರು. ಒಳ್ಳೆಯ ಕಾರ್ಮಿಕ ಮನೆತನಗಳಿಂದ ಬಂದಿದ್ದರು. ಅವರಿಗೇನೂ ಯುದ್ಧ ಮಾಡಬೇಕೆಂಬ ಇಚ್ಛೆಯಿರಲಿಲ್ಲ. ಆದರೆ ರಷ್ಯನ್ ಪರಂಪರೆಗೆ ಅನುಗುಣವಾಗಿ ಅವರದನ್ನು ತಿರಸ್ಕರಿಸಲಿಲ್ಲ, ಗೊಣಗಾಡಲಿಲ್ಲ. ತಾವಾಗಿಯೇ ಯುದ್ಧಕ್ಕೆ ತೆರಳಿದರು, ಆದಷ್ಟು ಬೇಗ ಶತ್ರುಗಳನ್ನು ಎದುರಿಸಿ ಅವರನ್ನು ಮುಗಿಸಲು, ಸಬ್ ಮೆರೀನರ್‍ಗಳೋ ಅಥವಾ ಸ್ನೈಪರ್‍ಗಳಾಗುವಷ್ಟೆ ಸುಲಭವಾಗಿ ಪೈಲಟ್‍ಗಳಾದರು.
“ಕೆಲವು ಕಾಲ ಆ ಫ್ಯಾಸಿಸ್ಟರ ಮೇಲೆ ದಾಳಿ ಮಾಡಿದೆವು ಅಮ್ಮಾ. ನಂತರ ನಮ್ಮನ್ನು ಶಿಕ್ಷಣ ನೀಡುವ ಕೆಲಸಕ್ಕೆ ವರ್ಗಾಯಿಸಿದರು. ಅದೇನೂ ನಮಗೆ ಅಷ್ಟು ಇಷ್ಟವಾಗಲಿಲ್ಲ. ಆದರೂ ಆಜ್ಞೆ ಎಂದರೆ ಆಜ್ಞೆ ಅಲ್ಲವೇ?”
“ಅದೆಂತಹ ಕೆಲಸ”. ಅವಳ ಮನೆಯಲ್ಲಿ ಒಂದು ದಿನ ಸಂಜೆ ಮೆಲುದನಿಯಲ್ಲಿ ಮಾತನಾಡುತ್ತಿದ್ದಾಗ ಮರಿಯಾ ಸ್ಟೊಯಾನ್ ಕೇಳಿದಳು. ನಾವು ಉಕ್ರೇನ್‍ನ ಮೇಲೆ ಕರಪತ್ರಗಳನ್ನು ಹಾಕಿದೆವು. ನಮ್ಮ ಜನರಿಗೆ ಯುದ್ಧದ ಬಗ್ಗೆ ಸತ್ಯ ತಿಳಿಯಲೆಂದು” ಹೇಳಿದ ಸ್ಟೀಫನ್. “ಓಹೋ, ಅದು ನೀವೇಯೋ........ ನೀವು ಮಹಾನ್ ಕೆಲಸ ಮಾಡುತ್ತಿದ್ದೀರಿ. ನನ್ನ ಮಕ್ಕಳೇ”, ನಿಟ್ಟುಸಿರಿಟ್ಟು ಹೇಳಿದಳು. “ಬಾಂಬ್ ಏನು ಮಹಾ, ಬಂಧಿಗಳಾಗಿದ್ದಾಗ ಒಳ್ಳೆಯ ಸುದ್ದಿಗೆ ಹೋಲಿಸಿದರೆ? ಎಲ್ಲೆಡೆ ಅಜ್ಞಾನ ಇರುವಾಗ ಜನರ ತಲೆಯೊಳಗೆ ದುಷ್ಟ ಫ್ಯಾಸಿಸ್ಟ್ ಪ್ರಚಾರವನ್ನೇ ತುಂಬಿದರು. ಆ ಸ್ಥಿತಿ ಬದುಕಲು ಯೋಗ್ಯವೇ? ಪ್ರಪಂಚವೇ ಕೊನೆಗೊಂಡಿದೆ ಎನಿಸಿತ್ತು”.
ಆಕ್ರಮಿತ ಪ್ರದೇಶದಲ್ಲಿ ಸರಳ ಮಾತೃ ಹೃದಯದಿಂದ ಹೊರಬಂದ ಈ ಪದಗಳನ್ನು ಕೇಳಿ ಸ್ಟೀಫನ್ ಮತ್ತು ಕೊಸ್ಟ್ಯಾಗೆ ಮೊಟ್ಟಮೊದಲ ಬಾರಿಗೆ ತಮಗೆ ಎಂತಹ ಮಹಾನ್ ಕಾರ್ಯ ಕೊಡಲ್ಪಟ್ಟಿತ್ತು ಎಂಬುದರ ಅರಿವಾಯಿತು.
ಸಾಕಷ್ಟು ಪೀಠೋಪಕರಣಗಳಿಂದ ಸಜ್ಜಾಗಿರದ ಆ ಹಳೆಯ ಪುಟ್ಟಮನೆಯ ಸಂಜೆಬೆಳಕಿನಲ್ಲಿ, ಹೂಳಿಡುತ್ತಾ ಹತ್ತಿರವಾಗುತ್ತಿದ್ದ ರಣಾಂಗಣದಲ್ಲಿ, ಹಿಮಪಾತದಲ್ಲಿ, ಅವರು ಜನ ಯಾವ ರೀತಿ ಆ ಕರಪತ್ರದಲ್ಲಿದ್ದನ್ನು ಕೈಬರಹದಲ್ಲಿ ಪ್ರತಿಗಳನ್ನು ಮಾಡಿದರು, ಯಾವ ರೀತಿ ಪ್ರತಿ ಅಕ್ಷರವನ್ನೂ ಬಾಯಿಪಾಠ ಮಾಡಿಕೊಂಡು ಹಳ್ಳಿಯಿಂದ ಹಳ್ಳಿಗೆ ತಲುಪಿಸಿದರು; ಜನರಲ್ಲಿ ಆಶೆಯ ಪುನರಂಕುರವಾದದ್ದು ಹೇಗೆ ಎಂಬುದನ್ನು ಕೇಳಿಸಿಕೊಂಡರು. ಸತ್ಯದ ಮಾತುಗಳು ಕತ್ತಲಲ್ಲಿ ಹೇಗೆ ಬೆಳಕನ್ನು ನೀಡಿದವು ಎಂಬುದನ್ನು ತಿಳಿದುಕೊಂಡರು. ಸಾವಿರಾರು ಜನ ಸ್ವಾತಂತ್ರ್ಯದಿಂದ ವಂಚಿತರಾದವರು, ಆಶಾಹೀನರು, ಮೋಸಕ್ಕೆ ಒಳಗಾದವರು. ಸುಳ್ಳಿನ ಮಧ್ಯೆ ಸಿಲುಕಿಕೊಂಡವರು ಆತುರದಿಂದ ತಪ್ಪು ಹೆಜ್ಜೆ ಇಡುವುದನ್ನು ಆ ಕರಪತ್ರಗಳು ತಪ್ಪಿಸಿದ್ದವು.
ಸ್ಟೀಫನ್ ಮತ್ತು ಕೋಸ್ಟ್ಯಾ ಬಹಳ ಹೊತ್ತು ಆ ಮಾತುಗಳನ್ನೇ ಮೆಲುಕುಹಾಕುತ್ತಾ ಕುಳಿತರು. ನಂತರ ಅವರು ತಮ್ಮನ್ನು ರಾತ್ರಿಯಲ್ಲಿ ಕಾಡಿನಲ್ಲಿ ಯಾವ ರೀತಿ ಹೊಡೆದುರುಳಿಸಿದರು. ತಾವು ಯಾವ ರೀತಿ ತಪ್ಪಿಸಿಕೊಂಡೆವು, ಆ ಸಮಯದಲ್ಲೇ ಯಾವ ರೀತಿ ಕೈಕಾಲುಗಳನ್ನು ಮುರಿದುಕೊಂಡು ಕಾಡುಮೇಡುಗಳನ್ನಲೆದು ಉತ್ತರದೆಡೆಗೆ ಬಂದೆವು, ಯಾವ ರೀತಿ ಜರ್ಮನ್‍ರಿಂದ ತಪ್ಪಿಸಿಕೊಂಡು ಹಳ್ಳಕೊಳ್ಳ, ಗುಡ್ಡಗಳನ್ನು ಹಾದು ಬಂದೆವು ಎಂಬುದನ್ನು ಅವಳಿಗೆ ವಿವರಿಸಿದರು. ಇದನ್ನೆಲ್ಲಾ ಹೇಳುತ್ತಲೇ ಅವರು ತಮ್ಮ ಅಸಾಮಾನ್ಯ ಶಕ್ತಿಯ, ಬಗ್ಗೆ ಜೀವಿಸುವ ಇಚ್ಛೆಯ ಬಗ್ಗೆ ಆಶ್ಚರ್ಯಪಟ್ಟರು.
“ಅದು ಎಲ್ಲಾಯಿತು, ನನ್ನ ಕಂದಮ್ಮಗಳೇ?” ಆಕೆ ಭಾವೋದ್ವೇಗದಿಂದ ಅವರ ಕೈಗಳನ್ನು ಹಿಡಿದು ಕೇಳಿದಳು. “ಬಹಳ ದೂರ. 500 ಕಿ. ಮಿ ಆಚೆ”.
“ಯಾವಾಗ?” “ಒಂದು ತಿಂಗಳ ಹಿಂದೆ. ಮೂಳೆಗಳು ಈಗಾಗಲೇ ಒಂದುಗೂಡಿವೆ,” ತಮ್ಮ ಗಾಯದ ಕಲೆ ಹಾಗೂ ಕೈಕಾಲುಗಳನ್ನು ತೋರಿಸುತ್ತಾ ಹೇಳಿದರು. “ದೇವರೇ, ಏನಿದು........... ”
“ಓಹ್! ಅದೇನೂ ಅಲ್ಲ, ಈ ಮೂಳೆಗಳ ಮೇಲೆ ಚರ್ಮ ಬೆಳೆಯುತ್ತದೆ. ಎಲ್ಲವನ್ನೂ ಸಹಿಸಬಲ್ಲ ಜನ ನಾವು. ನಮಗೀಗ ಬೇಕಾಗಿರುವುದು ಸ್ವಲ್ಪ ವಿಶ್ರಾಂತಿ, ಶಕ್ತಿಯನ್ನು ಪುನಃ ಪಡೆಯಲು. ನಂತರ ನಾವು ಮತ್ತೆ ಯುದ್ಧರಂಗಕ್ಕೆ ತೆರಳುತ್ತೇವೆ. ಮಂಜಿನ ಕೆಳಗಡೆ ತೆವಳಿಯಾದರು ಸರಿ”, ಅದಮ್ಯ ಶಕ್ತಿಯ ಯುವಕರು ವಯಸ್ಸಾದ ಮರಿಯಾಳನ್ನು ಸಂತೈಸಿದರು.
“ಈಗ ನಿಮಗೆ ನಾನೇನು ಮಾಡಲಿ. ನನ್ನ ಮಕ್ಕಳೂ ನಿಮ್ಮಂತೆಯೇ ಇದ್ದಾರೆ.”
ಎರಡು ವಾರಗಳ ಕಾಲ ಮರಿಯಾ ತನ್ನ ಅತಿಥಿಗಳನ್ನು ಬಚ್ಚಿಟ್ಟಳು. ಮನೆಯ ಬಗ್ಗೆ ಗಮನವಿಟ್ಟಳು. ಅವರಿಗೆ ಉಣಬಡಿಸಿದಳು. ಮನೆಯಲ್ಲೆ ಎಲ್ಲವೂ ಮುಗಿದುಹೋದಾಗ ಹಳ್ಳಿಯಲ್ಲಿ ಎಲ್ಲರ ಬಳಿ ಸಹಾಯ ಕೇಳಿದಳು. ಎಲ್ಲವನ್ನೂ ಅಲ್ಲ, ಕೇವಲ ಹಾಲು ಮತ್ತು ಬ್ರೆಡ್ ಮಾತ್ರ. ಯಾರೂ ಅವಳ ಬೇಡಿಕೆಯನ್ನು ತಿರಸ್ಕರಿಸಲಿಲ್ಲ, ಯಾರೂ ಏನನ್ನೂ ಪ್ರಶ್ನಿಸಲಿಲ್ಲ, ಸಂದೇಹ ಪಡಲು ಸಾಕಷ್ಟು ಕಾರಣಗಳಿದ್ದರೂ ಸಹ. ಸ್ಟೊಯಾನ್ ತನಗಾಗಿ ಎಂದೂ ಆ ರೀತಿ ಇನ್ನೊಬ್ಬರ ಮುಂದೆ ಕೈ ಚಾಚುವವಳಲ್ಲ.
ಆದರೆ ಮರಿಯಾ ಆ ಯುವಕರನ್ನು ಉಳಿಸಿಕೊಳ್ಳುವಲ್ಲಿ ಸಫಲಳಾಗಲಿಲ್ಲ. ಒಂದು ದಿನ ಬೆಳಗ್ಗೆ ಗನ್‍ಟ್ರಕ್‍ಗಳ ಸದ್ದಿನೊಂದಿಗೆ ಹಳ್ಳಿ ಎಚ್ಚರಗೊಂಡಿತು. ಹೊಡೆತ ತಿಂದ ಜರ್ಮನ್ ಪಡೆ ವಿಶ್ರಾಂತಿ ಪಡೆಯಲು ಆಗಮಿಸಿತ್ತು. ಆತುರದಿಂದ ಮರಿಯಾ ಮನೆಯಿಂದ ಹೊರಗೆ ಹೋದವಳು ತಕ್ಷಣವೇ ಒಳಬಂದಳು. “ಅವರು ಬರುತ್ತಿದ್ದಾರೆ”.
ಜರ್ಮನ್ನರು ಹೊಸಿಲಿನ ಬಳಿಯೇ ಕಾಣಿಸಿಕೊಂಡರು. ಆ ಯುವಕರನ್ನು ನೋಡಿ ಕೇಳಿದರು, “ಯಾರವರು?” “ನನ್ನ ಮಕ್ಕಳು”.
“ನೀನು ಸುಳ್ಳು ಹೇಳುತ್ತಿದ್ದೀಯಾ!” “ಇಲ್ಲ, ಖಂಡಿತ ಇಲ್ಲ. ಅವರು ನನ್ನ ಮಕ್ಕಳೇ. ಆಣೆ ಮಾಡಿ ಹೇಳುತ್ತೇನೆ!” “ಅವರನ್ನು ಮುಟ್ಟಬೇಡಿ. ಅವರಿಗೆ ಹುಷಾರಿಲ್ಲ. ಅವರು ಹೆಳವರು...... ದೇವರೇ!”
“ನಿಲ್ಲಿ! ನಿನ್ನ ತಾಯಿಯೇ?” “ಹೌದು, ನನ್ನ ತಾಯಿಯೇ”, ಉತ್ತರಿಸಿದ ರ್ಯಾಬೊವ್.
“ಸುಳ್ಳು ಹೇಳುತ್ತಿದ್ದಿ, ಕಮಿಸ್ಸಾರ್!” ಗರ್ಜಿಸಿದ ಆ ಜರ್ಮನ್, ತನ್ನ ಬಂದೂಕು ಎತ್ತಿಕೊಂಡು. ತಾಯಿ ಆ ಯುವಕರ ಮುಂದೆ ನಿಂತಳು. ತನ್ನ ದೇಹದಿಂದ ಅವರನ್ನು ರಕ್ಷಿಸುವಂತೆ.
“ಇಲ್ಲ, ನೀನು ಹಾಗೆ ಮಾಡಲು ಸಾಧ್ಯವಿಲ್ಲ! ನನ್ನನ್ನು ಹೊಡೆಯಿರಿ....... ನಾನು ನಿಮಗೆ ಅವರನ್ನು ಕೊಡಲಾರೆ. ಮೃಗಗಳೇ! ಅವರನ್ನು ಮುಟ್ಟಬೇಡ. ನೀನು ಓರ್ವ ಮಾನವ ತಾಯಿಗೆ ಹುಟ್ಟಿರುವೆ, ಹೆಣ್ಣುತೋಳಕ್ಕಲ್ಲ, ಅಲ್ಲವೇ?” ಸ್ಟೊಯಾನ್ ಅರಚಿದಳು.
“ನೀನೇಕೆ ಅವರನ್ನು ಅಡಗಿಸಿಟ್ಟೆ?”
“ನನಗೆ ಭಯವಾಯಿತು. ನೀವು ಇಷ್ಟೊಂದು ಭಯಾನಕರು! ಪ್ರಪಂಚದಲ್ಲಿ ನಿಮ್ಮಷ್ಟು ಭಯಾನಕರು ಇನ್ನಾರೂ ಇಲ್ಲ!”
“ಹಾ.... ಹಾ..... ಹಾ......! ಹೌದೇ? ಅದೊಂದು ಸರಿಯಾದ ಮಾತು ಹೇಳಿದೆ ಮುದಿಗೊಡ್ಡೆ. ನಮಗಿಂತ ಭಯಾನಕ ಇನ್ನಾರೂ ಇಲ್ಲ, ಇರಲೂ ಬಾರದು!” ಆ ಜರ್ಮನ್ ಅಟ್ಟಹಾಸಗೈದ.
ಎರಡು ಘಂಟೆಗಳ ನಂತರ ನಾಜಿಗಳು ಇಡೀ ಹಳ್ಳಿಯ ಜನರನ್ನು ಚೌಕದಲ್ಲಿ ಸೇರಿಸಿದರು. ಸ್ಟೀಫನ್ ಮತ್ತು ಕೋಸ್ಟ್ಯಾರನ್ನು ಅವರೆದುರಿಗೆ ನಿಲ್ಲಿಸಲಾಯಿತು. ಅವರು ಜನರತ್ತ ನೋಡಿದರು, ಅಲ್ಲಿ ಒಂದಾದರೂ ಪರಿಚಿತ ಮುಖವಿರಲಿಲ್ಲ.
“ಗುಡ್ ಬೈ ಯೂರಲ್ಸ್”, ಸ್ಟೀಫನ್ ತನ್ನ ಗೆಳೆಯನತ್ತ ನೋಡುತ್ತಾ ಪಿಸುಗುಟ್ಟಿದ. “ಗುಡ್ ಬೈ”.
“ಜನರೇ, ಅವರು ನನ್ನ ವ್ಯಾಸಿಲ್ ಮತ್ತು ಇವಾನ್ ಅಲ್ಲವೇ! ಅವರ ಗುರುತು ಸಿಗಲಿಲ್ಲವೇ!” ಸ್ಟೊಯಾನ್ ಕೂಗಿದಳು. “ಅವರಿಗೆ ಹೇಳಿ, ಇವರು ನನ್ನವರೆಂದು! ಜನರೇ!” ತನ್ನ ಹಳ್ಳಿಯವರಿಗೆ ಮನವಿ ಮಾಡಿಕೊಂಡಳು.
ಜನ ಅವಳ ಮಾತಿಗೆ ಹೌದೆಂಬಂತೆ ತಲೆಯಾಡಿಸಿದರು. ಮುಂದಾಗುವುದನ್ನು ಊಹಿಸಿ ಅತ್ತರು. ಹಳ್ಳಿಯ ಮುಖ್ಯಸ್ಥ ಹಾಗೂ ಸ್ಥಳೀಯ ಪೋಲೀಸ್ ಸಹ ಇದನ್ನು ನಿರಾಕರಿಸುವ ಧೈರ್ಯ ಮಾಡಲಿಲ್ಲ.
ದೇಶಪ್ರೇಮಿ ಜನರಿಂದ ಕೊಲ್ಲಲ್ಪಟ್ಟ ಪೋಲೀಸ್ ಮುಖ್ಯಸ್ಥನ ಮಡದಿ ಪಲಸ್ಕಾ ಮಾತ್ರ ಮೌನವಾಗಿದ್ದಳು.
“ಪಲಸ್ಕಾ, ಅವರಿಗೆ ಹೇಳು ಇವರು ನನ್ನ ಮಕ್ಕಳೆಂದು. ಇಲ್ಲದಿದ್ದರೆ ನೀನು ಈ ಪ್ರಪಂಚದಲ್ಲಿ, ಇನ್ನೊಂದು ಜಗತ್ತಿನಲ್ಲಿ ಸಹ ಖಂಡನೆಗೆ ಒಳಗಾಗುತ್ತೀಯಾ” ಮರಿಯಾ ಪಿಸುಗುಟ್ಟಿದಳು, “ದೇವರು ನಿನ್ನನ್ನು ಕೇಳುತ್ತಾನೆ; ದೇವರು ನಿನ್ನನ್ನು ಪ್ರಶ್ನಿಸುತ್ತಾನೆ, ಪಲಸ್ಕಾ.”
“ಮೇಡಮ್ ಪಲಸ್ಕಾ, ಇವರು ಅವಳ ಮಕ್ಕಳೇ?” ಕಮಾಂಡೆಂಟ್ ಕೇಳಿದ.
ಪ್ರತಿಯೊಬ್ಬರೂ ಮಾತನಾಡುವುದನ್ನು ನಿಲ್ಲಿಸಿದರು. ತಮ್ಮ ದೃಷ್ಟಿಯನ್ನು ಅವಳತ್ತ ತಿರುಗಿಸಿದರು. ರುದ್ರಮೌನ ಆವರಿಸಿತು. ಕಮಾಂಡೆಂಟ್ ಮುಖ ಕೆಂಪಾಯಿತು. ಆತನ ದಪ್ಪ ಕುತ್ತಿಗೆ ಹಾವಿನಂತೆ ಉಬ್ಬಲಾರಂಭಿಸಿತು. ಆತ ಇದೇನೋ ಸಂಚೆಂದು ಅರ್ಥಮಾಡಿಕೊಂಡ.
“ಅವರು ಇವಳ ಮಕ್ಕಳೇ” ಹೇಳಿದಳು ಪಲಸ್ಕಾ ಅವನತಮುಖಿಯಾಗಿ.
“ನಿಮ್ಮ ಅಡ್ಡಹೆಸರು ಏನು?” ಪೈಲಟ್‍ಗಳನ್ನು ಕೇಳಿದ ಜರ್ಮನ್.
“ಓಹ್!” ಸ್ಟೊಯಾನ್ ನರಳಿದಳು, ಹೃದಯಕ್ಕೆ ಗಾಯವಾದಂತೆ. ಅವಳು ಅವರಿಗೆ ತನ್ನ ಅಡ್ಡ ಹೆಸರು ಹೇಳಿರಲಿಲ್ಲ. ಅವರೂ ಸಹ ಅದನ್ನು ಕೇಳಿರಲಿಲ್ಲ.
ಜರ್ಮನ್ ಅಕ್ರೋಶದಿಂದ ತನ್ನೆಲ್ಲಾ ಬಲದೊಂದಿಗೆ ಅವಳ ಕೆನ್ನೆಗೆ ಹೊಡೆದ. ಏನಾದರೂ ಸದ್ದು ಹೊರಬರುವ ಮುನ್ನವೇ ಅವಳು ತರಗೆಲೆಯ ತರಹ ನೆಲಕ್ಕೆ ಕುಸಿದಳು.
ತಲೆಗೆ ಬಿದ್ದ ಏಟಿನಿಂದ ಕೆಳಗೆ ಬಿದ್ದಿದ್ದ ಅವಳಿಗೆ ತಕ್ಷಣವೇ ಏಳಲಾಗಲಿಲ್ಲ. ಕನಸಿನಲ್ಲೇನೋ ಎಂಬಂತೆ ಅವಳಿಗೆ ಸ್ಟೀಫನ್ ಮತ್ತು ಕೋಸ್ಟ್ಯಾ “ವಿದಾಯ ಅಮ್ಮಾ, ಧನ್ಯವಾದಗಳು! ನೀನು ಜೊತೆಯಲ್ಲಿರುವುದರಿಂದ ಸಾಯುವುದು ಅಷ್ಟೇನೂ ಭಯಾನಕವಲ್ಲ!” ಎಂದಂತೆ ಕೇಳಿಸಿತು.
ಬಂದೂಕಿನಿಂದ ಗುಂಡುಗಳು ಹಾರಿದವು. ಅವರಿಬ್ಬರೂ ಮಂಜಿನ ಮೇಲೆ ಬಿದ್ದರು, ಒಬ್ಬರನ್ನೊಬ್ಬರು ಅಪ್ಪಿಕೊಂಡು. ಅವಳನ್ನು ಹಿಡಿದೆತ್ತಲಾಯಿತು. ಅವಳನ್ನು ಹಿಡಿದುಕೊಂಡು ಹೊಡೆಯುತ್ತಾ ಅಲ್ಲಿಂದ ಎಳೆದೊಯ್ಯಲಾಯಿತು. ಜರ್ಮನ್ನರು ಅವಳ ಮನೆಯನ್ನು ಗ್ರೆನೇಡ್‍ನಿಂದ ಸ್ಫೋಟಿಸಿದರು. ಅವಳನ್ನು ಸೀಬೆಮರದತ್ತ ಎಳೆದೊಯ್ದರು. ಅವಳ ಕಣ್ಣು ಮಂಜಾಯಿತು.
“ನನ್ನನ್ನು ನೇಣು ಹಾಕಬೇಡಿ. ನನ್ನನ್ನು ಅವಮಾನಕ್ಕೆ ಗುರಿ ಮಾಡಬೇಡಿ. ವಯಸ್ಸಾದವಳನ್ನು ಹೇಗೆ ನೇಣುಹಾಕುವಿರಿ........ ಒಂದು ಗುಂಡು ಹೊಡೆಯಿರಿ, ಒಂದೇ ಒಂದು. ನಿಮ್ಮನ್ನು ಬೇಡಿಕೊಳ್ಳುವೆ. ನಿಮ್ಮನ್ನು ..........” ಆದರವರು ಅವಳ ಮೊರೆ ಕೇಳಲಿಲ್ಲ. ಆದ್ದರಿಂದ ಅವಳೇ ವೇಗವಾಗಿ ಹತ್ತಿ, ತಾನೇ ಕೊರಳಿಗೆ ಉರುಳನ್ನು ಹಾಕಿಕೊಂಡಳು. “ನನ್ನನ್ನು ಮುಟ್ಟಬೇಡಿ, ನೀವು ಕೊಳಕು ಜನ ನೀವು ನನ್ನ ಕುತ್ತಿಗೆಯನ್ನು ಮುಟ್ಟಬೇಡಿ.......ನನ್ನ ಮಕ್ಕಳೇ........” ಮರುಕ್ಷಣ ಗಾಳಿಯಲ್ಲಿ ತೂಗಾಡತೊಡಗಿದಳು.
*****
ಬಹಳ ಕಾಲ ವ್ಯಾಸಿಲ್ ಆ ಮರದ ಕೆಳಗೆ ಮಂಜಿನಲ್ಲಿಯೇ ಬಿದ್ದುಕೊಂಡಿದ್ದ. ಅವನ ಆಕ್ರಂದನ, ಚೀತ್ಕಾರ ಕೇಳಲು ಅಲ್ಲಿ ಯಾರೂ ಇರಲಿಲ್ಲ.
ಕತ್ತಲಿನಲ್ಲಿ ಚಳಿ ಆತನ ಹೃದಯವನ್ನು ಮರಗಟ್ಟಿಸಿತು. ಬೆಳಗಾಗುವುದನ್ನು ಸೂಚಿಸಲು ಜನರ ಚಟುವಟಿಕೆ, ಸದ್ದು ಆರಂಭವಾಯಿತು. ವ್ಯಾಸಿಲ್ ಶಾಂತನಾದನು. ಬಹಳ ಸುಸ್ತಾಗಿ ನಿದ್ದೆ ಮಾಡಿ ಎದ್ದವನಂತೆ, ಭೂಮಿಯ ಮಡಿಲಿನಿಂದ ಮೇಲೆದ್ದು ಆತ ತನ್ನ ತಾಯಿಯ ತಣ್ನಗಿನ ಕೈಗೆ ಮುತ್ತಿಟ್ಟ.
“ವಿದಾಯ ಅಮ್ಮ......... ನಿನ್ನೆಲ್ಲಾ ಒಳ್ಳೆಯತನ, ಮೃದು ಭಾವ, ನೀನೇನು ನನಗೆ ಕೊಟ್ಟೆಯೋ ಅದೆಲ್ಲವನ್ನೂ ನಿನ್ನೊಂದಿಗೆ ಬಿಟ್ಟು ಹೋಗುತ್ತಿರುವೆ.”
ಆತ ಮನೆಯ ಅವಶೇಷದ ಹತ್ತಿರ ಹೋಗಿ ಒಂದು ಹಿಡಿಯಷ್ಟು ಬೂದಿಯನ್ನು ಎತ್ತಿ ತನ್ನ ಕರ್ಚೀಫ್ನಲ್ಲಿ ಸುತ್ತಿಕೊಂಡ. “ಇದನ್ನು ನನ್ನೊಂದಿಗೆ ಒಯ್ಯುವೆ, ಅಮ್ಮಾ. ನನ್ನ ಕೈಕಾಲುಗಳು, ಹೃದಯ ಎಂದಿಗೂ ಸೋಲದಿರಲೆಂದು ಇದನ್ನು ಒಯ್ಯುತ್ತಿರುವೆ.”
ಕೆಂಪು ಸೈನ್ಯದ ಪಡೆಗಳು ಪಶ್ಚಿಮದತ್ತ ಹೊರಟವು. “ಪ್ರೈವೇಟ್ ಸ್ಟೊಯಾನ್!” “ಬಂದೆ”.
“ಅಲ್ಲಿ ತೂಗಾಡುತ್ತಿರುವ ಸ್ತ್ರೀ ಯಾರು?” “ನನ್ನ ತಾಯಿ!” “ನಿನ್ನ ತಾಯಿಯೇ?” “ನನ್ನ ತಾಯಿ, ಸ್ನೇಹಿತರೇ, ನನ್ನ ಪ್ರೀತಿಯ ತಾಯಿ.......”
“ಸೈನಿಕರೇ, ನಿಲ್ಲಿ! ಕ್ಯಾಪ್‍ಗಳನ್ನು ತೆಗೆಯಿರಿ! ಮುನ್ನಡೆಯಿರಿ!”
ಸೈನಿಕರು ತಮ್ಮ ಕ್ಯಾಪ್‍ಗಳನ್ನು ತೆಗೆದು ಗೌರವ ಸಲ್ಲಿಸುತ್ತಾ, ಆಕೆಯನ್ನು ದಾಟಿ ಮುನ್ನಡೆದರು. ಸಮರದ ಹಾದಿಯಲ್ಲಿ ಮಾತೃತ್ವಕ್ಕೆ ತಮ್ಮ ನಮನವನ್ನು ಸೂಚಿಸಿದರು. ಬಂದೂಕುಗಳು ಗರ್ಜಿಸಿದವು. ಸೂರ್ಯ ಎಲ್ಲೆಡೆ ಮಂಜಿಗೆ ಕೆಂಪು ಬಣ್ಣ ನೀಡಿದ್ದ.
ಬದುಕಿರುವ ಯಾರು ತಾನೆ ಅಥವಾ ಇನ್ನು ಮುಂದೆ ಬರಲಿರುವ ಯಾರು ತಾನೆ, ತನಗಾಗಿಯಲ್ಲದೆ ತನ್ನ ಮಕ್ಕಳಿಗಾಗಿ ಕ್ಷಮೆ ಬೇಡಿದ ತಾಯಿ ಮರಿಯಾ ಸ್ಟೊಯಾನ್‍ಳ ಮಾಸಲಾರದ ಸೌಂದರ್ಯಕ್ಕೆ ಗೌರವದಿಂದ ನಮಿಸಲಾರರು? ಅಲ್ಲಿ ನೋಡಿ, ಆಕೆ ಮಂಜುಗಟ್ಟಿದ ಭೂಮಿಯ ಮೇಲೆ ತೂಗಾಡುತ್ತಿದ್ದಾಳೆ. ಅವಳ ಪುಟ್ಟ ಮತ್ತು ಮೃದು ಕೈಗಳು, ಉದ್ದನೆ, ಸುಂದರ ತುದಿಗಳುಳ್ಳ ಆ ಚಟುವಟಿಕೆಯ ಕೈಗಳು, ಅಷ್ಟೊಂದು ಧಾನ್ಯ ಬೆಳೆದ, ಇಷ್ಟೊಂದು ಬಟ್ಟೆ ನೇಯ್ದ ಆ ಕೈಗಳು, ಅಂಗೈ ಕಾಣಿಸುವಂತೆ ತೆರೆದಿದೆ.
“ನನ್ನಲ್ಲಿ ಇನ್ನೇನೂ ಉಳಿದಿಲ್ಲ, ನನ್ನ ಮಕ್ಕಳೇ. ನಿಮಗೆ ನಾನೆಲ್ಲವನ್ನೂ - ಸಂತೋಷ, ಭವಿಷ್ಯತ್ – ಎಲ್ಲವನ್ನೂ ನೀಡಿದ್ದೇನೆ”.
ಆಕೆಯ ಸಣ್ಣ ಆಕಾರ ಚಳಿಗಾಳಿಯಲ್ಲಿ ಹಾರಿಹೋಗುವಂತಿದೆ. ಬೆಳ್ಳಗಿನ ಕೂದಲುಳ್ಳ ಆಕೆಯ ತಲೆ ಒಂದು ಪಕ್ಕಕ್ಕೆ ತಿರುಗಿ ಆಗಮಿಸುತ್ತಿರುವ ವಸಂತದ ಮೋಡಗಳನ್ನು ಮುಟ್ಟುವಂತಿದೆ.
ಜಯವಾಗಲಿ ನಿನಗೆ, ತಾಯಿ ಮರಿಯಾ, ನಿನ್ನ ಸೌಂದರ್ಯಕ್ಕೆ. ಮನಸ್ಸಾಕ್ಷಿ ಇರುವವರೆಲ್ಲರೂ ನಿನ್ನ ಈ ಅಪ್ರತಿಮ ಸೌಂದರ್ಯಕ್ಕೆ ತಲೆಬಾಗುತ್ತಾರೆ, ನಮ್ಮ ಪ್ರೀತಿಯ ಸ್ಲಾವಿಕ್ ಮಾತೆಯೇ, ಪ್ರೀತಿಯ ಉಕ್ರೇನಿನ ಮಹಿಳೆಯೇ .

ಮೂಲ ಕೃತಿ - ಅಲೆಕ್ಸಾಂಡರ್ ಡಾವ್ ಜೇಂಕೋ  
ಅನುವಾದ - ಸುಧಾ ಜಿ 

ಕಾಮೆಂಟ್‌ಗಳಿಲ್ಲ: