ಬಸ್ ವೇಗವಾಗಿ ಚಲಿಸುತ್ತಿತ್ತು. ದಾರಿಯಲ್ಲಿ ಹೆಚ್ಚು ವಾಹನಸಂಚಾರವಿರಲಿಲ್ಲ. ಮಾರ್ಗಮಧ್ಯದಲ್ಲಿ ಅಲ್ಲಲ್ಲಿ ಹಳ್ಳಿಗಳು, ಜನರು ಕಂಡುಬರುತ್ತಿದ್ದರು. ಇದ್ದಕ್ಕಿದ್ದಂತೆ ಗರ್... ಎಂದು ನಿಂತಿತು ಬಸ್. ಯಾರೋ ‘ಅಯ್ಯೋ’ ಎಂದು ಅರಚಿದಂತೆ ಕೇಳಿಸಿತು ಎಲ್ಲರಿಗೂ. ಬಸ್‍ನಲ್ಲಿದ್ದವರೂ ಜತೆಗೂಡಿದರು. ಮಲಗಿಕೊಂಡಿದ್ದವರಿಗೆ ಸುಮಾರು ಜನರಿಗೆ ಪೆಟ್ಟಾಗಿತ್ತು. ಕಣ್ಣುಜ್ಜಿಕೊಂಡು ‘ಏನಾಯಿತು... ಏನಾಯಿತು...’ ಎಂದು ಕೇಳಲಾರಂಭಿಸಿದರು ಒಬ್ಬರಿನ್ನೊಬ್ಬರನ್ನು.
ಡ್ರೈವರ್ ಗಾಡಿ ನಿಲ್ಲಿಸಿ ಕೆಳಗಿಳಿದ. ಏನಾಯಿತೆಂದು ನೋಡಲು ಹೋಗಿರಬಹುದೆಂದುಕೊಂಡ ಜನ ತಾವು ಇಳಿಯತೊಡಗಿದರು. ಆದರೆ ಡ್ರೈವರ್ ಓಡಿ ಹೋಗುತ್ತಿದ್ದದ್ದು ಕಂಡು ಪ್ರಯಾಣಿಕರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಯಿತು.
ಇಳಿದವರು ಕೆಳಗೆ ಕಂಡ ದೃಶ್ಯವನ್ನು ಕಂಡು ಶಾಕ್‍ಗೆ ಒಳಗಾದರು. ಸುಮಾರು 10-11 ವರ್ಷದ ಹುಡುಗನಿರಬಹುದು. ಬಸ್‍ನ ಹಿಂದಿನ ಭಾಗ ಅವನಿಗೆ ಹೊಡೆದಿತ್ತು. ಅವನ ಸೈಕಲ್ ಅಪ್ಪಚ್ಚಿಯಾಗಿತ್ತು. ಆ ಹುಡುಗನಿಗೆ ಪ್ರಜ್ಞೆ ಇರಲಿಲ್ಲ. ತಲೆಯಿಂದ ರಕ್ತ ಧಾರಾಕಾರವಾಗಿ ಸೋರುತ್ತಿತ್ತು. ಪ್ರಾಣವಿತ್ತೋ ಇಲ್ಲವೊ? ಅದು ಯಾರಿಗೂ ಗೊತ್ತೂ ಇರಲಿಲ್ಲ. ಯಾರೂ ಅದನ್ನು ಪರೀಕ್ಷಿಸುವ ಗೋಜಿಗೂ ಹೋಗಲಿಲ್ಲ. ಆದರೆ ಎಲ್ಲರೂ ಗುಂಪುಕಟ್ಟಿ ಮಾತನಾಡಲು ತೊಡಗಿದರು.
ಆಕ್ಸಿಡೆಂಟ್ ಕಂಡವರು ಅದು ಡ್ರೈವರ್‍ನದೇ ತಪ್ಪೆಂದು ದೂರಿದರು. ‘ಹುಡುಗ ಪಾಪ ರಸ್ತೆಯ ಒಂದು ಕೊನೆಯಲ್ಲಿ ಹೋಗುತ್ತಿದ್ದ. ಬಸ್ ಡ್ರೈವರ್‍ದೇ ಸಂಪೂರ್ಣ ತಪ್ಪು. ಓವರ್‍ಟೇಕ್ ಮಾಡೋದಕ್ಕೆ ಹೋದ. ಎದುರಿಗೊಂದು ಲಾರಿ ಬಂತು. ತಾನು ತಪ್ಪಿಸಿಕೊಳ್ಳಲು ಹೋಗಿ ಪಾಪ ಈ ಹುಡುಗನ ಮೇಲೆ ಬಿಟ್ಟುಬಿಟ್ಟ. ಯಾರ ಮಗನೋ ಏನೋ. ಪಾಪ ಅವನ ತಂದೆ- ತಾಯಿಗಳಿಗೆ ಎಷ್ಟು ನೋವು.’
ಇನ್ನೊಬ್ಬ “ಅವನು ನಮ್ಮೂರ ಹುಡುಗಾನೇ. ದಿನಾ ನೋಡಿ, 3 ಮೈಲಿ ಸೈಕಲ್ ತುಳ್ಕೊಂಡು ಶಾಲೆಗೆ ಹೋಗ್ತಿದ್ದ. ಒಳ್ಳೆ ಬುದ್ಧಿವಂತ. ಆದ್ರೆ ಏನ್ಮಾಡೋಕೆ ಆಗುತ್ತೆ. ಎಲ್ಲಾ ವಿಧಿಲೀಲೆ” ಎಂದ.
ಹೀಗೆ ಕೆಲವರ ಪ್ರಕಾರ ಅದು ಹಣೆಬರಹ, ಕರ್ಮ ಇತ್ಯಾದಿ. ಇನ್ನೂ ಕೆಲವರ ಪ್ರಕಾರ ಡ್ರೈವರ್‍ನ ಬೇಜವಾಬ್ದಾರಿತನ. ಅದನ್ನೇ ಆಧಾರವಾಗಿಟ್ಟುಕೊಂಡು ತಾವು ನೋಡಿದ ಇನ್ನಿತರ ಅಕ್ಸಿಡೆಂಟ್‍ಗಳ ಬಗ್ಗೆ ಚರ್ಚೆ ಆರಂಭಿಸಿದರು.
ಕೆಲವರಂತೂ ಇದ್ಯಾವುದೂ ತಮಗೆ ಸಂಬಂಧವಿಲ್ಲದಂತೆ ಇದ್ದರು. ಒಂದಷ್ಟು ಜನ ಡ್ರೈವರ್‍ಗೆ ಶಾಪ ಹಾಕುತ್ತಾ ಬೇರೆ ವಾಹನವನ್ನಿಡಿದು ತಮ್ಮ ಸ್ಥಳಗಳನ್ನು ಸೇರುವ ಪ್ರಯತ್ನ ನಡೆಸಿದರು. ಆ ಜಾಗ ಒಂದು ರೀತಿಯಲ್ಲಿ ಯಾತ್ರಾಸ್ಥಳವಾಗಿಬಿಟ್ಟಿತು. ಹಾದಿಯಲ್ಲಿ ಹೋಗುವ ಪ್ರತಿ ವಾಹನದವರೂ ನಿಲ್ಲಿಸಿ ನೋಡಿ ನಂತರ ಮುಂದೆ ಹೋಗುತ್ತಿದ್ದರು. ಆದರೆ ಯಾರೂ ಆ ಬಾಲಕನನ್ನು ಉಳಿಸಬಹುದೇ ಎಂದು ಆಲೋಚಿಸಲಿಲ್ಲ. ಜನರ ಮಾತುಕತೆ ಅರ್ಧ ಘಂಟೆಯಾದರೂ ಬ್ರೇಕಿಲ್ಲದೆ ಮುಂದುವರೆಯುತ್ತಲೇ ಇತ್ತು.
ಆಗ ಅಲ್ಲಿಗೊಂದು ಮೆಟಡೋರ್ ಬಂದು ನಿಂತಿತು. ತರಕಾರಿ ಲೋಡ್ ಇದ್ದ ಗಾಡಿ. ಆ ಡ್ರೈವರ್ ಸುಮಾರು 19-20 ವರ್ಷದ ಯುವಕ ಇಳಿದುಬಂದ. ಆಕ್ಸಿಡೆಂಟ್ ನೋಡಿ “ಜೀವ ಇದೆಯಾ” ಎಂದು ಅಕ್ಕಪಕ್ಕದಲ್ಲಿದ್ದವರನ್ನು ಕೇಳಿದ. “ಗೊತ್ತಿಲ್ಲ” ಎಂಬ ಉತ್ತರ ಬಂತು. ತಕ್ಷಣ ತಾನೇ ಪರೀಕ್ಷಿಸಲು ಹೋದ.
ಎಲ್ಲರೂ ‘ಹೊ’ ಎಂದು ಏಕಕಾಲಕ್ಕೆ ಅರಚಿದರು. “ಬೇಡಪ್ಪಾ, ನಿನಗ್ಯಾಕೆ ಬೇಕು ಈ ಉಸಾಬರಿ, ಆಮೇಲೆ ಕೋರ್ಟ್, ಸ್ಟೇಶನ್ ಅಲೆಯಬೇಕಾಗುತ್ತೆ. ಸುಮ್ನೆ ನಿನ್ನ ದಾರಿ ಹಿಡ್ಕೊಂಡು ಹೋಗು” ಎಂದರು.
ಪ್ರತಿಯೊಬ್ಬರೂ ಉಪದೇಶಿಸುವವರೆ. ಆ ಯುವಕ ಏನೊಂದೂ ಮಾತನಾಡದೆ ಹುಡುಗನ ಬಳಿ ಹೋಗಿ ನೋಡಿದ. ಜೀವ ಇದೆ ಎಂದು ಗೊತ್ತಾಗುತ್ತಿದ್ದಂತೆಯೇ ತಾನೊಬ್ಬನೇ ಯಾರ ನೆರವನ್ನೂ ಕೇಳದೆ ಆ ಹುಡುಗನನ್ನು ಎತ್ತಿಕೊಂಡು ಹೋಗಿ ತನ್ನ ಮೆಟಾಡೋರ್‍ನಲ್ಲಿ ಮಲಗಿಸಿದ.
ಜನರನ್ನೆಲ್ಲಾ ಮೂಕವಿಸ್ಮಿತರನ್ನಾಗಿ ಮಾಡಿ ನಗರದ ಕಡೆಗೆ ವೇಗವಾಗಿ ಹೊರಟೇಬಿಟ್ಟ. ಆ ಹುಡುಗ ಬದುಕಿದನೊ ಇಲ್ಲವೊ ತಿಳಿಯದು. ಬದುಕಿದ್ದರೆ ಆ ಯುವಕ ಒಂದು ಜೀವವನ್ನು ಉಳಿಸಿದಂತಾಯಿತು. ಇಲ್ಲದಿದ್ದರೂ ಸಹ ಮನುಷ್ಯನಲ್ಲಿರಬೇಕಾದ ಮಾನವೀಯತೆಯನ್ನು ಪ್ರತಿಬಿಂಬಿಸಿದಂತಾಯಿತು ಅಲ್ಲವೆ?
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ