Pages

ಕವನ - ವಿವೇಕಾನಂದರಿಗೊಂದು ಪ್ರಶ್ನೆ

ಜನವರಿ ೧೨, ಸ್ವಾಮಿ ವಿವೇಕಾನಂದರ ಜನ್ಮದಿನ. ಅದರ ಅಂಗವಾಗಿ ಈ ಕವನ. 
ಅವರಿಗೆ ನಮ್ಮ ಬಳಪ ತಂಡದ ನಮನಗಳು 


ಅರಿತುಕೊಂಡಿರುವೆವೆ 
ನಿಮ್ಮ ಮನದ ಮಾತನ್ನು
ನಿಜವಾಗಿ ನಾವು?
ಆಚರಿಸುತ್ತಿರುವೆವೆ
ನಿಮ್ಮ ಜಯಂತಿಯನ್ನು
ಸರಿಯಾಗಿ ನಾವು?

ಯುವಜನತೆಗೆ ಸಾರಿದಿರಿ
ಉಕ್ಕಿನ ನರಗಳು
ಕಬ್ಬಿಣದ ಸ್ನಾಯುಗಳು
ನಿಮ್ಮದಾಗಲೆಂದು
ಅದಕಾಗಿಯೇ ಹೋಗಿರಿ
ಫುಟ್ ಬಾಲ್ ಮೈದಾನಕೆಂದು.

ಬ್ರಿಟಿಷರ ದೌರ್ಜನ್ಯಗಳ
ಮೆಟ್ಟಿನಿಲ್ಲಬಹುದೆಂದು
ಪರಾಧೀನತೆಯಿಂದ
ಮುಕ್ತರಾಗಬಹುದೆಂದು
ರೂಪಿಸಿದಿರಿ ನೂರಾರು
ಕ್ರಾಂತಿಕಾರಿಗಳ ನೀವಂದು.

ರಾರಾಜಿಸುತ್ತಿವೆ ಎಲ್ಲೆಡೆ
ನಿಮ್ಮ ಫೋಟೊಗಳಿಂದು
ಬಟ್ಟೆ, ಕಾರ್ ಗಳ ಮೇಲೆ
ಹಾಕಿಕೊಂಡು ಯುವಕರಿಂದು
ದೇಹಶಕ್ತಿ ನಶಿಸಿಕೊಂಡು
ಹೋಗುತಿಹರು ಬಾರ್ ಗೆಂದು.

ನೀವಂದು ಧಿಕ್ಕರಿಸಿದಿರಿ
ಹಸಿದ ಹೊಟ್ಟೆಗೆ ಅನ್ನ
ನೀಡದ ಧರ್ಮ ಬೇಡೆಂದು.
ಧರ್ಮಸಂಕೇತವಾಗಿಸಿ
ನಿಮ್ಮನ್ನು, ಆಟವಾಡುತಿಹರು
ರಾಜಕಾರಣಿಗಳು ಇಂದು.

ಅಂದು ನೀವ್ ಸಾರಿದಿರಿ
ಎಲ್ಲ ಧರ್ಮಗಳ ತಿರುಳು
ಮಾನವತೆಯ ಉದ್ಧಾರ
ಧರ್ಮಗಳ ನಡುವೆ
ಹೊಡೆದಾಟ ಬೇಡೆಂದು
ಜನರ ಐಕ್ಯತೆಗಾಗಿ
ದುಡಿದಿರಿ ನೀವಂದು.

ಮಾಡುತ್ತ ನಿಮ್ಮದೇ
ನಾಮಸ್ಮರಣೆಯನು
ಜನಗಳ ವಿಂಗಡಿಸುತಿಹರು
ಕೋಮುಗಳಾಗಿ ಇಂದು.
ಉದ್ರೇಕಿಸುತಿಹರು
ಬಡಿದಾಡಿಕೊಳಿರೆಂದು.

ನಿಮ್ಮ ನೆನಪಿನಲಿಂದು
ಎಲ್ಲೆಲ್ಲೂ ಫೋಟೋಗಳು
ಹಾರಗಳ ಹಾಕಿ
ಭಾಷಣದಲಿ ಮುಳುಗಿ
ದೇಶದ ಜನತೆಯ
ಹಾದಿ ತಪ್ಪಿಸುತಿಹರಿಂದು.

ದೇಶದೆಲ್ಲೆಡೆ ತುಂಬಿದೆ
ನೂರಾರು ಸಮಸ್ಯೆಗಳು
ಕೋಮುಗಲಭೆ, ಜಾತೀಯತೆ
ನಿರುದ್ಯೋಗ, ಅನಕ್ಷರತೆ,
ದೌರ್ಜನ್ಯ, ಬಡತನ
ಸ್ತ್ರೀಯರಿಗೆ ಅಪಮಾನ.

ಇದೇ ಏನು ನೀವು
ಕನಸು ಕಂಡ ಭಾರತ?
ಇಂತಹ ದೇಶಕೇನು
ಶ್ರಮಿಸಿದಿರಿ ಸಂತತ?
ಇದಕ್ಕಾಗಿಯೇ ಏನು
ದುಡಿದಿರಿ ಅನವರತ?

- ಸುಧಾ ಜಿ

ಕವನ: "ಅಗಲಿಕೆ"


ನಡೆದರವರು ನನ್ನಿಂದ ದೂರ
ಮೊದಲ ಬಾರಿಯಲ್ಲವದು
ಆದರೆ ಮೊದಲ ರೀತಿಯದು
ಹೊಸ ಹಂತವಿದು
ನಿರಾಕರಿಸಲಾಗದ್ದು
ಆದರೆ ಹೊಂದಿಕೊಳ್ಳಬೇಕಾದದ್ದು.

ಸಾಗಿದರವರು ದೂರ
ಹೃದಯದಿಂದಲ್ಲ
ಆದರೆ ಕೈಗೆಟುಕುವಾಚೆಗೆ.
ಆಕೆಯ ಹೃದಯ ಭಾರವಾಗಿತ್ತು
ಆತನ ಕಾಳಜಿ ಹೆಚ್ಚಿತ್ತು
ಆಕೆಯ ಕಣ್ತುಂಬಿತ್ತು
ಆತನನ್ನು ಚಿಂತೆ ತಿನ್ನುತ್ತಿತ್ತು (ಪೀಡಿಸುತ್ತಿತ್ತು)
ಆಕೆಯ ಭಾವನೆಯಲಿ ಬೇನೆಯಿತ್ತು
ಆತನ ಕ್ಷೋಭೆ ಮರೆಯಲಿತ್ತು
ನಡೆದಿದ್ದರವರು ತಮ್ಮ ದಿಕ್ಕಿನಲಿ ಒಟ್ಟಾಗಿ ದೂರ
ನನ್ನನ್ನು ಒಂಟಿಯಾಗಿ ನನ್ನ ದಿಶೆಗೆ ಬಿಟ್ಟು

ಸಮಯವದೆಷ್ಟು ಬೇಗ ಸರಿದಿದೆ
ಕಾಲವದೆಷ್ಟು ಬೇಗ ಕಳೆದಿದೆ
ಸಂದರ್ಭಗಳೆಷ್ಟು ಬೇಗ ಬದಲಾಗಿವೆ
ಕ್ಷಣಗಳೆಷ್ಟು ತ್ವರಿತವಾಗಿ  ನೆನಪುಗಳಾಗಿವೆ
ನೆನಪಿಸಿಕೊಳ್ಳುತ್ತಾ
ನೋಡುತ್ತಾ ನಿಂತೆ ನಾ -
ನನ್ನಾತ್ಮ ಮುಂದೆ ನಡೆಯುತ್ತಿತ್ತು
ನನ್ ಹೃದಯ ತಲೆಬಾಗಿ ಸಾಗುತ್ತಿತ್ತು
ಆ ಕ್ಷಣ ದೃಷ್ಟಿ ಮಂಜಾಯಿತು
ಆದರೆ ಕರ್ತವ್ಯದ ನೆನಪಾಯಿತು
ಜೀವನ ಹೀಗೇ ಸಾಗುತ್ತಿರುತ್ತದೆ
ಈ ಘಳಿಗೆಯೂ ಸರಿದುಹೋಗುತ್ತದೆ!!
  
(ನಿಲೀನಾ 
ಥಾಮಸ್ರವರ ಇಂಗ್ಲಿಷ್ ಕವಿತೆ - Separation - ಇದರ ಅನುವಾದ - ಸುಧಾ ಜಿ)

SEPARATION
Walk away did they
Though not the first time
But the first kind.
New was this phase
Though not avoidable
But adaptable.
Far did they move
Though not by hearts
But by reach.


Her heart heavier 
His concerns higher 
Her eyes filling
His thoughts bothering 
Her feelings aching 
His emotions hiding
Wend did they, their way together
Leaving mine to me lone

Remembering
How time passed so soon 
How age aged so early
How things changed so quickly
How moments turned memories so swiftly 
Stand did I watching

My soul walking front
And my heart walking bent 
Though blur did my vision 
But realize did my mission 
That LIFE GOES ON
And so with this moment too!

--------Nileena Thomas

ಕವನ: "ಬಾಳು: ಆಕಸ್ಮಿಕಗಳ ಒಟ್ಟು ಮೊತ್ತ!"

ಚಿತ್ರ ಕೃಪೆ: ಮಂಜುನಾಥ್ ಎ  ಎನ್

"If our heart were large enough to love life in all its detail, we could see that every instant is at once a giver and a plunderer."  - Gaston Bachelard


ನಾವು ಗ್ರಹಿಸಿದಂತೆ ನಮ್ ನಾವಿಕರು.
ತೇಲಿ ಹೊರಟ ಹಡಗಿನಂತೆ ನಮ್ ಬಾಳು.
ಎಲ್ಲಿ ಕಾದಿಹವೋ ಯಾರೂ ತಿಳಿಯರು
ಸುಳಿ ಗಾಳಿ ಮಳೆ ಪ್ರಚಂಡ ಪ್ರಪಾತಗಳು.

ಅನಿಶ್ಚಿತತೆಯೇ ಮೈವೆತ್ತಿ ಹರಡಿದಂತೆ ಕಡಲು
ನಿಶ್ಚಿತ ಆ ವೈಶಾಲ್ಯವ ಒಳಗೊಂಡ ದಡಗಳು.
ಯಾವ ವಯಸ್ಸಿನಲ್ಲಿ ಏನೋ ಯಾರೂ ಅರಿಯೆವು
ವಯಸ್ಸಂತೂ ಕಡು ಖಚಿತ ಕಾಲನ ಬೇಡಿಗಳು.

ಸೀಮಿತ ಅನುಭವಗಳು, ಎಷ್ಟೆಷ್ಟೋ ಭ್ರಮೆಗಳು,
ಸರಿ-ತಪ್ಪು ಎಂಬ ನಿಖರ ನಿರ್ದಿಷ್ಟ ಪರಿಕಲ್ಪನೆಗಳು.
ಅನುಭವ ಕಲಿಸುವ ಪಾಠಗಳು, ಬಾಳ ಪೆಟ್ಟುಗಳು,
ದೇಶ-ಕಾಲ-ಸಂಸ್ಕೃತಿ-ಸಮಾಜಗಳ ಸಾಪೇಕ್ಷ ಸತ್ಯಗಳು.

ಮನ ತೆರೆದಷ್ಟೂ ತೆರೆದುಕೊಳ್ಳುವ ಬ್ರಹ್ಮಾಂಡ ನಾಟಕವು
ಅಚ್ಚರಿ-ಆತಂಕ-ಆನಂದ ಬಂದು ಅಪ್ಪಳಿಸುವ ಅಲೆಗಳು.
ಸಂದಿಗ್ಧತೆ-ಸಂಭವನೀಯತೆಗಳ ನಡುವೆ ಈ ಪಯಣವು,
ಎಷ್ಟು ಆಕಸ್ಮಿಕಗಳ ಒಟ್ಟು ಮೊತ್ತವೋ ನಮ್ ಬಾಳು!

- ಎ ಎನ್ ಮಂಜುನಾಥ್

ವಿನೋದ - ದುಡ್ಡು


(ಚಲಂರವರ ಡಬ್ಬು ಕಥೆಯ ಅನುವಾದ)


ಹುಡುಗ: ಅಪ್ಪ ನಾವು ಕಾರು ಕೊಂಡುಕೊಳ್ಳಬಾರದಾ?
ಅಪ್ಪ: ಕಾರು ಎಷ್ಟು ಬೆಲೆ ಗೊತ್ತಾ? ಹತ್ತು ಸಾವಿರ ರೂಪಾಯಿ.
ಹುಡುಗ: ನಮ್ಮ ಹತ್ತಿರ ಹತ್ತು ಸಾವಿರ ರೂಪಾಯಿಗಳು ಇಲ್ಲವಾ?
ಅಪ್ಪ: ಇಲ್ಲ, ಎಲ್ಲಿಂದ ಬರುತ್ತೆ?
ಹುಡುಗ: ಕಾರು ಕೊಂಡುಕೊಳ್ಳುವವರಿಗೆ ಎಲ್ಲಿಂದ ಬರುತ್ತೆ?
ಅಪ್ಪ: ಅವರು ಸಂಪಾದಿಸಿಕೊಳ್ಳುತ್ತಾರೆ.
ಹುಡುಗ: ನೀನೇಕೆ ಸಂಪಾದಿಸಬಾರದು?
ಅಪ್ಪ: ನನಗೆ ಆಗೋಲ್ಲ.
ಹುಡುಗ: ಆಗದಿದ್ದರೆ ಕಲಿತುಕೊಳ್ಳಬಾರದಾ?
ಅಪ್ಪ: ಹೇಗೆ?
ಹುಡುಗ: ಮತ್ತೆ ಆಗದಿದ್ದನ್ನೆಲ್ಲಾ ನನಗೆ ಕಲಿತುಕೊ ಅಂತೀಯಾ?
ಅಪ್ಪ: ಇದು ಕಲಿತುಕೊಂಡರೆ ಬರುವುದಲ್ಲ.
ಹುಡುಗ: ಅವರಿಗೆ ಹೇಗೆ ಬಂತು?
ಅಪ್ಪ: ಅವರಿಗೆ ಬುದ್ಧಿ ಇದೆ.
ಹುಡುಗ: ನಿನಗೇಕೆ ಇಲ್ಲ?
ಅಪ್ಪ: ದೇವರು ಕೊಡಲಿಲ್ಲ.
ಹುಡುಗ: ಯಾಕೆ ಕೊಡಲಿಲ್ಲ?
ಅಪ್ಪ: ಏನೋ.
ಹುಡುಗ: ನನಗೆ ದೇವರು ಲೆಕ್ಕದಲ್ಲಿ ಬುದ್ಧಿ ಕೊಡಲಿಲ್ಲ. ಮಾರ್ಕು ಕಡಿಮೆ ಬಂದರೆ ಹೊಡೆಯುತ್ತೀಯಲ್ಲಾ?
ಅಪ್ಪ: ಬರಲಿ ಅಂತಾ.
ಹುಡುಗ: ನಿನ್ನನ್ನು ಹೊಡೆಯುವವರಿದ್ದರೆ ನಿನಗೂ ದುಡ್ಡು ಮಾಡಿಕೊಳ್ಳೋ ಬುದ್ಧಿ ಬರುತ್ತೇನೋ? ನಿನಗೆಷ್ಟು ಸಂಬಳ?
ಅಪ್ಪ: 320 ರೂಪಾಯಿಗಳು.
ಹುಡುಗ: ಯಾರು ಕೊಡ್ತಾರೆ.
ಅಪ್ಪ: ಕಂಪನಿಯವರು.
ಹುಡುಗ: ಅಷ್ಟೆ ಯಾಕೆ ಕೊಡ್ತಾರೆ. ಜಾಸ್ತಿ ಕೊಡಲ್ವಾ?
ಅಪ್ಪ: ನಾನು ಮಾಡುವ ಕೆಲಸ ಅಷ್ಟೆ.
ಹುಡುಗ: ಜಾಸ್ತಿ ಸಂಬಳ ಬರುವ ಕೆಲಸ ಇಲ್ಲವಾ?
ಅಪ್ಪ: ಇದ್ದಾವೆ.
ಹುಡುಗ: ಅದನ್ನು ನಿನಗೆ ಯಾಕೆ ಕೊಡುವುದಿಲ್ಲ. ನಿನಗೆ ಕೈಲಾಗುವುದಿಲ್ಲವಾ?
ಅಪ್ಪ: ಆಗುತ್ತೆ, ಆದರೆ ಕೊಡೋಲ್ಲ.
ಹುಡುಗ: ಅವರಿಗೆ ಯಾಕೆ ಕೊಟ್ಟರು?
ಅಪ್ಪ: ಅವರಿಗೆ ಅನುಭವ ಬುದ್ಧಿ ಜಾಸ್ತಿ ಅಂದುಕೊಳ್ತಾರೆ.
ಹುಡುಗ: ಯಾಕಂದುಕೊಳ್ತಾರೆ?
ಅಪ್ಪ: ನನಗೇನು ಗೊತ್ತು?
ಹುಡುಗ: ಅವರನ್ನು ಕೇಳಬಾರದಾ?
ಅಪ್ಪ: ಕೇಳಿದರೂ ಲಾಭವಿಲ್ಲ.
ಹುಡುಗ: ಯಾರು ಯಾವಾಗ ಮಾತನಾಡಿದರೂ ದುಡ್ಡಿಲ್ಲ, ದುಡ್ಡಿಲ್ಲ ಅಂತಾರೆ. ಎಲ್ಲಿಂದ ಬರುತ್ತೆ ದುಡ್ಡು?
ಅಪ್ಪ: ಕಷ್ಟಪಟ್ಟು ಕೆಲಸ ಮಾಡಿದರೆ ಬರುತ್ತೆ.
ಹುಡುಗ: ನೀನು ಕಷ್ಟಪಟ್ಟು ಕೆಲಸ ಮಾಡುವುದಿಲ್ಲವಾ?
ಅಪ್ಪ: ಮಾಡ್ತೀನಿ.
ಹುಡುಗ: ಮತ್ತೆ ನಿನಗೆ ಬರುವುದಿಲ್ಲವಲ್ಲ? ಇನ್ನೂ ಕಷ್ಟಪಡು ಬರುತ್ತೆ.
ಅಪ್ಪ: ಇನ್ನು ನನ್ನ ಕೈಲಾಗೋಲ್ಲ, ಲಾಭವೂ ಇಲ್ಲ.
ಹುಡುಗ: ದೊಡ್ಡವರಿಗೆ ಉಪಯೋಗವಿಲ್ಲ, ಆದರೆ ಚಿಕ್ಕವರಿಗೆ ಮಾತ್ರ ಕಷ್ಟಪಡು ಅಂತಾ ಹೊಡೀತೀರಾ?
ಅಪ್ಪ: ಹೌದು, ಚಿಕ್ಕವರಿಗೆ ತಾಳ್ಮೆ ಜಾಸ್ತಿ.
ಹುಡುಗ: ಎಲ್ಲಿಂದ ಬರುತ್ತೆ ದುಡ್ಡು?
ಅಪ್ಪ: ಸರ್ಕಾರ ತಯಾರು ಮಾಡುತ್ತೆ.
ಹುಡುಗ: ಎಲ್ಲರಿಗೆ ಸರಿ ಹೋಗುವಷ್ಟು ಹೆಚ್ಚಾಗಿ ತಯಾರು ಮಾಡಲು ಸಾಧ್ಯವಿಲ್ಲವಾ?
ಅಪ್ಪ: ಎಲ್ಲರಿಗೂ ಸಾಕಾಗುವುದಿಲ್ಲ.
ಹುಡುಗ: ಹೇಗೆ ತಯಾರು ಮಾಡ್ತಾರೆ? ದುಡ್ಡು ಅಂದ್ರೆ ರೂಪಾಯಿ ತಾನೆ?
ಅಪ್ಪ: ನೋಟುಗಳನ್ನು ಅಚ್ಚು ಹಾಕುತ್ತಾರೆ.
ಹುಡುಗ: ಇನ್ನೂ ನೋಟುಗಳನ್ನು ಅಚ್ಚು ಹಾಕಬಾರದಾ?
ಅಪ್ಪ: ಬೇಕಾದಷ್ಟು ಹೋಡೀತಾನೆ ಇದ್ದಾರೆ. 
ಹುಡುಗ: ಯಾರಿಗೆ ಬೇಕು?
ಅಪ್ಪ: ಸರ್ಕಾರಕ್ಕೆ.
ಹುಡುಗ: ಅವರಿಗೆ ಅವರು ಅಚ್ಚು ಹೊಡೆಸಿಕೊಂಡ್ರೆ ನಮಗೇ ಹೇಗೆ ಬರುತ್ತೆ?
ಅಪ್ಪ: ಸರ್ಕಾರ ಕೆಲಸ ಮಾಡುವವರಿಗೆ ಕೊಡ್ತಾರೆ. ಅವರು ಅವರ ಕೆಳಗಿನ ಕೆಲಸದವರಿಗೆ ಕೊಡ್ತಾರೆ.
ಹುಡುಗ: ಎಲ್ಲರಿಗೂ ಬೇಕಾಗುವಷ್ಟು ಕೊಡಬಾರದಾ? ನಮಗೆ ಕಾರು ಕೊಳ್ಳಲು ಹತ್ತು ಸಾವಿರ ಅಚ್ಚು ಹಾಕಿಸಿ ಕೊಡಬಾರದಾ? ಕೆಲವರ ಅವರನ್ನು ಕೇಳಿ ತೆಗೆದುಕೊಂಡು ಕಾರು ಕೊಂಡುಕೊಳ್ಳುತ್ತಾರೆ. ನಿನಗೆ ಅವರನ್ನು ಕೇಳಲು ಆಗದು. ನಿನ್ನ ಮುಖ ನೋಡಿದ್ರೆ ಅವರು ಕೊಡುವುದಿಲ್ಲ.
ಅಪ್ಪ: ಅದೇನು?
ಹುಡುಗ: ಅಮ್ಮ ಹೇಳಿದ್ಳಲ್ಲಾ, ಅಪ್ಪನ ಮುಖ ನೋಡಿದ್ರೆ ಯಾರಿಗೂ ಏನೂ ಕೊಡುವ ಮನಸ್ಸಾಗುವುದಿಲ್ಲ. ಸರ್ಕಾರ ಅಂದ್ರೆ ಯಾರು?
ಅಪ್ಪ: ಕೆಲವರು ಶ್ರೀಮಂತರು.
ಹುಡುಗ: ಅವರು ಹೇಗೆ ಶ್ರೀಮಂತರಾದರು.
ಅಪ್ಪ: ಜನರ ವಿಶ್ವಾಸದ ಮೂಲಕ.
ಹುಡುಗ: ನಿನ್ನ ಮೇಲೆ ಬರಬಾರದಾ ವಿಶ್ವಾಸ? ನೀನು ತರೆಸಿಕೊ. ಆಗ ನೀನು ಜಾಸ್ತಿ ನೋಟುಗಳನ್ನು ಅಚ್ಚು ಹಾಕಿಸಿಕೊಂಡು ನಿನಗೊಂದು ಕಾರು, ನನಗೊಂದು ಕಾರು, ಅಮ್ಮನಿಗೊಂದು ಕಾರು ಕೊಂಡುಕೊಳ್ಳಬಹುದು. ಹೌದು. ಎಲ್ಲಾ ಅವರೆ ತೆಗೆದುಕೊಂಡು ಬಿಟ್ರೆ ಬಡವರಿಗೆ ಏನು ಮಿಗುತ್ತೆ? ಜನ ಅವರನ್ನು ನಂಬಿದ್ದಕ್ಕಾಗಿ ಅವರಿಗೆ ಕಾರು, ಬಂಗಲೆ. ಅವರನ್ನು ನಂಬಿ ಅವರನ್ನು ಮೇಲೆ ತಂದ ಬೀದಿಯವರಿಗೆ ಮಾತ್ರ ತಿಂಡಿ ಕೂಡಾ ಇಲ್ಲ.
ಅಪ್ಪ: ಅದಕ್ಕಿಂತ ಇನ್ನೇನು ಮಾಡ್ತಾರೆ?
ಹುಡುಗ: ಯಾಕೆ ಸುಮ್ಮನಿರ್ತಾರೆ? ಹೊಡೆಯುವುದಿಲ್ಲವೆ?
ಅಪ್ಪ: ಹೊಡೆದರೆ ಸರ್ಕಾರ ಸುಮ್ಮನಿರುವುದಿಲ್ಲ.
ಹುಡುಗ: ಇರದಿದ್ದರೆ…
ಅಪ್ಪ: ಈ ಆಡಳಿತ ಎಲ್ಲಾ ಯಾರು ನೋಡಿಕೊಳ್ತಾರೆ?
ಹುಡುಗ: ದುಡ್ಡೆಲ್ಲಾ ತಮಗೆ ತೆಗೆದುಕೊಳ್ಳದೆ ಆಳುವವರಿರುವುದಿಲ್ಲವಾ?
ಅಪ್ಪ:  ಇರುವುದಿಲ್ಲ.
ಹುಡುಗ:  ನೀನೂ ಅಷ್ಟೇನಾ?
ಅಪ್ಪ: ಈಗಲೇ ಅಲ್ವಾ ನಾಲ್ಕು ಕಾರು ಕೊಂಡುಕೊ ಅಂದೆ?
ಹುಡುಗ: ಹೌದು, ನಮ್ಮ ಸರ್ಕಾರ ಬಂದ್ರೆ. ಆದ್ರೂ ದುಡ್ಡು ಅನವಶ್ಯವಾಗಿ. . . . 
ಅಪ್ಪ: ಅವರು ಒಪ್ಪಿಕೊಳ್ಳುವುದಿಲ್ಲ. ಅವರು ಒಪ್ಪಿಕೊಂಡರೂ ಅವರ ಕೈಯಲ್ಲಿ ಆಗುವುದಿಲ್ಲ.
ಹುಡುಗ: ಅವರಿಗೆ ಹೇಗೆ ಆಗುತ್ತೆ? ಇವರಿಗೂ ಕಲಿಸಬಾರದಾ?
ಅಪ್ಪ: ಜನರಿಗೆ ಅವರ ಮೇಲೆ ವಿಶ್ವಾಸ ಬರುವುದಿಲ್ಲ.
ಹುಡುಗ: ದುಡ್ಡೆಲ್ಲಾ ಬಚ್ಚಿಟ್ಟುಕೊಳ್ಳುವವರನ್ನು ಬಿಟ್ಟರೆ ಜನರಿಗೆ ಬೇರೆಯವರ ಮೇಲೆ ವಿಶ್ವಾಸ ಬರುವುದಿಲ್ಲವಾ? ಒಂದು ವೇಳೆ ದುಡ್ಡು ಬಚ್ಚಿಟ್ಟುಕೊಂಡು ಅವರಿಗೆ ಸರ್ಕಾರದ ಕೆಲಸ ಮಾಡುವುದು ಸಾಧ್ಯವಿಲ್ಲವೇನೋ? ಹೋಗಲಿ ಅವರು ತೆಗೆದುಕೊಳ್ಳುವಷ್ಟು ತೆಗೆದುಕೊಂಡು ಇನ್ನಷ್ಟು ನೋಟುಗಳನ್ನು ಅಚ್ಚು ಹಾಕಿ ಎಲ್ಲರಿಗೂ ಕೊಡಬಾರದಾ? ಆಗ ಎಲ್ಲರಿಗೂ ತಿಂಡಿ, ಕಾರು ಇರುತ್ತಲ್ವಾ?
ಅಪ್ಪ: ಎಲ್ಲರಿಗೂನೂ? ಹಾಗೆ ಒಪ್ಪಿಕೊಳ್ಳುವುದಿಲ್ಲ.
ಹುಡುಗ: ಯಾಕೆ?
ಅಪ್ಪ: ಹಾಗೆ ಒಪ್ಪಿಕೊಂಡರೆ ಎಲ್ಲರಿಗೂ ಇರುತ್ತೆ. ಇನ್ನು ಶ್ರೀಮಂತರ ಹೆಚ್ಚುಗಾರಿಕೆ ಏನು?
ಹುಡುಗ: ಅದಕ್ಕೆ ಅಂತಾ ಹೆಚ್ಚು ಜನರನ್ನು ಬಡವರನ್ನಾಗಿ ಇಡ್ತಾರ?
ಅಪ್ಪ: ಅಂದ್ರೆ ನಿನ್ನ ಬಟ್ಟೆ, ನಿನ್ನ ಗೊಂಬೆಗಳೂ, ಪುಸ್ತಕಗಳು ನಮ್ಮ ಕೆಲಸದ ಹುಡುಗನ ಜೊತೆ ಹಂಚಿಕೊಳ್ತೀಯಾ? ಏನು ಗೊತ್ತಗುತ್ತಾ?
ಹುಡುಗ: ಊ…… ಹಂಚಿಕೊಳ್ಳುವುದಿಲ್ಲ. ಆದರೆ ಎಲ್ಲರಿಗೂ ಮೊದಲಿನಿಂದಲೇ ಸಮಾನವಾಗಿ ಇದ್ರೆ ನನ್ಗೆ ಬೇಕು ಅಂತಾ, ನನಗೆ ಇರ್ಬೇಕು ಅಂತ ಬಚ್ಚಿಟ್ಟುಕೊಳ್ಳೋಲ್ಲ.
ಅಪ್ಪ: ಅವರೂ ಅಷ್ಟೆ. ಸಾಧ್ಯವಾದ್ರೆ ಬಚ್ಚಿಟ್ಟುಕೊಳ್ತಾರೆ, ಇಲ್ಲದಿದ್ದರೆ ವಿಧಿ ಇಲ್ಲದೆ ಹಂಚಿಕೊಳ್ತಾರೆ.
ಹುಡುಗ: ಹೋಗಲಿ, ಎಲ್ಲಾ ಕಡಿಮೆ ಬೆಲೆಗೆ ಮಾಡಬಾರದಾ? ಎಲ್ಲದಕ್ಕೂ ಬೆಲೆ ಹೆಚ್ಚಿಸುವುದು ಯಾಕೆ? ಯಾರು ಆ ಕೆಲಸ ಮಾಡುವುದು, ಸರ್ಕಾರಾನಾ? 
ಅಪ್ಪ: ಸರ್ಕಾರ ಅಲ್ಲ. ಅದೇ ಜಾಸ್ತಿ ಆಗುತ್ತೆ. ಆ ವಸ್ತು ಕಡಿಮೆಯಾಗಿ, ಕೇಳುವವರು ಜಾಸ್ತಿಯಾದೆ. . . .
ಹುಡುಗ: ಮೊನ್ನೆ ನಮ್ಮ ಕ್ಲಾಸಿನಲ್ಲಿ ರಾಮರಾಜು ಇಲ್ವಾ, ರಾಜಯ್ಯನ ಮಗ, ಅವನು ಪುಸ್ತಕ ಕೊಂಡುಕೊಳ್ಳಲಿಲ್ಲ. ಟೀಚರ್ ಕೇಳಿದ್ರೆ ದುಡ್ಡಿಲ್ಲ ಅಂದ. ಟೀಚರ್ ಅವನನ್ನು ಹೊಡೆದರು. ಅವನು ಹೇಗೆ ಅತ್ತಾ ಗೊತ್ತಾ? ರಾತ್ರಿ ಊಟ ಮಾಡುವುದಿಲ್ಲವಂತೆ. ಹೋಗಲಿ ಅವರಿಗಾದ್ರೂ ದುಡ್ಡು ಕೊಡಬಾರದೆ?
ಅಪ್ಪ: ಅಂತವರಿಗೆ ನಾವು ದುಡ್ಡು ಹಂಚಿದರೆ ನಿನಗೆಲ್ಲಿ ಇರುತ್ತದೆ? ನಿನಗೆ ತುಪ್ಪ, ಮೊಸರು ಇರುವುದಿಲ್ಲ . . . . 
ಹುಡುಗ: ಅವರಿಗೇನು? ಅವರು ಎಷ್ಟು ಬೇಕಾದರೂ ನೋಟುಗಳನ್ನು ಅಚ್ಚು ಹಾಕಬಹುದಲ್ಲವೇ.
ಅಪ್ಪ: ಸುಮ್ಮನೆ ನಿನಗೆ ಅರ್ಥವಾಗಲಿ ಎಂದು ಆ ರೀತಿ ಹೇಳಿದೆ. ಅವರು ಆ ರೀತಿ ಮಾಡಲು ಅವಕಾಶವಿಲ್ಲ. ಅವರಿಗೂ ಸಂಬಳವೇ.
ಹುಡುಗ: ಯಾರು ಕೊಡುತ್ತಾರೆ?
ಅಪ್ಪ: ಅವರಿಗೆ ಅವರೇ ನೋಟುಗಳನ್ನು ಹೆಚ್ಚು ಹೆಚ್ಚು ಅಚ್ಚು ಹಾಕಿದರೆ ಹಣ ಅಗ್ಗವಾಗಿ ವಸ್ತುಗಳ ಬೆಲೆ ಈಗಲಿಗಿಂತ ಹೆಚ್ಚಾಗುತ್ತದೆ. 
ಹುಡುಗ: ಈ ಹಣ ಎನ್ನುವುದೇ ಇಲ್ಲದಿದ್ದರೆ ಚೆನ್ನಾಗಿರುತ್ತಲ್ಲಾ?
ಅಪ್ಪ: ಹೇಗೆ ಕೊಂಡುಕೊಳ್ಳುತ್ತೀಯಾ? ಯಾವುದರಿಂದ?
ಹುಡುಗ: ಯಾಕೆ ಕೊಂಡುಕೊಳ್ಳಬೇಕು? ಯಾರಿಗೆ ಏನು ಬೇಕೊ ಅದನ್ನು ಸರ್ಕಾರ ಕೊಟ್ಟರಾಯಿತು.
ಅಪ್ಪ: ನಿನಗೆ ತುಪ್ಪ ಅಗತ್ಯವಿಲ್ಲವಾ? ಕಾಫಿ ಬ್ರೆಡ್, ಮಾಂಸ ಕೂಡ ಬೇಡವೆಂದರೆ ಒಪ್ಪಿಕೊಳ್ಳುತ್ತೀಯ?
ಹುಡುಗ: ಓ, ಎಲ್ಲರಿಗೂ ಸುಖವಾಗಿ ಇರಲು ಕೊಟ್ಟರೆ ನಾನು ಒಪ್ಪಿಕೊಳ್ಳುತ್ತೇನೆ.
ಅಪ್ಪ: ಆದರೆ, ಕೆಲವರು ಆ ರೀತಿ ಒಪ್ಪಿಕೊಳ್ಳುವುದಿಲ್ಲ.
ಹುಡುಗ: ಒಪ್ಪಿಕೊಳ್ಳದಿದ್ದವರಿಗೆ ಒದ್ದರೆ ಸರಿ.
ಅಪ್ಪ: ಕಮ್ಯುನಿಸ್ಟ್ ಆಗಿ ಹೋಗುತ್ತಿದ್ದೀಯಲ್ಲ.
ಹುಡುಗ: ಅಂದರೆ?
ಅಪ್ಪ: ನಿನ್ನ ರೀತಿ ಮಾತನಾಡುವವನು ಎಂದರ್ಥ
ಹುಡುಗ: ಅದೇ ಒಳ್ಳೆಯದು. ಈಗ ಬಹಳಷ್ಟು ಅನ್ಯಾಯ ವಾಗುತ್ತಿದೆ. ನೀನು ಕಮ್ಯುನಿಸ್ಟ್ ಆಗಿ ಬಿಡು. 
ಅಪ್ಪ: ಅವರು ದೇವರಿಲ್ಲ ಎನ್ನುತ್ತಾರೆ.
ಹುಡುಗ: ಅಂದರೆ ಏನು? ದೇವರಿಗೇನಾದರೂ ತೊಂದರೆನಾ? ಏನು ಇಲ್ಲ. ಅಷ್ಟು ಬೇಕೆಂದರೆ ದೇವರು ಎಲ್ಲರಿಗೂ ಬೇಕಾಗುವುದನ್ನು ಏರ್ಪಾಡು ಮಾಡಬಹುದಲ್ಲವೇ?
ಅಪ್ಪ: ಏನೋ, ನನಗದೆಲ್ಲ ಗೊತ್ತಿಲ್ಲ, ಹೋಗೋ!!!!!


-   ಸುಧಾ ಜಿ      

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ - 5

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)


(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ) 


ಕಲ್ಕತ್ತಾದಲ್ಲಿ ಭಗತ್
ಕಲ್ಕತ್ತಾದ ಸ್ಟೇಷನ್ನಿನಲ್ಲಿ ಇಳಿದಾಗ ಅಲ್ಲಿ ದುರ್ಗಾದೇವಿಯವರ ಪತಿ ಕ್ರಾಂತಿಕಾರಿ ಭಗವತೀಚರಣ್ ವೋರಾ ಕಾಯುತ್ತಿದ್ದರು. ಆಲಿಪುರದ ತಮ್ಮ ಸ್ನೇಹಿತ ಚಜ್ಜೂರಾಮ್‍ರವರ ಮನೆಯಲ್ಲಿ ಭಗತ್‍ಸಿಂಗ್‍ರು ಇರುವ ವ್ಯವಸ್ಥೆ ಮಾಡಿದರು. ಚಜ್ಜೂರಾಮ್ ಮತ್ತು ಆತನ ಪತ್ನಿ ಲಕ್ಷ್ಮೀದೇವಿ ಭಗತ್‍ಸಿಂಗ್‍ರವರ ಅಭಿಮಾನಿಯಾಗಿದ್ದರು. 
ಭಗತ್‍ಸಿಂಗ್‍ರು ಕಲ್ಕತ್ತಾದಲ್ಲಿ ‘ಹರಿ’ ಆದರು. ಬಂಗಾಳಿಗಳಂತೆ ವೇಷ ಧರಿಸಿದರು. ಬಂಗಾಳದಲ್ಲಿ ವ್ಯಕ್ತಿಯಿಂದ ಎಳೆಯಲ್ಪಡುವ ರಿಕ್ಷಾ ಗಾಡಿಗಳನ್ನು ಕಂಡು ವ್ಯಥೆ ಪಟ್ಟರು. ಅಲ್ಲಿ ನಡೆಯುತ್ತಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಅಧಿವೇಶನಕ್ಕೆ ಹೋದರು. ಆದರೆ ಕಾಂಗ್ರೆಸ್ಸಿಗರಿನ್ನೂ ‘ಸಂಪೂರ್ಣ ಸ್ವಾತಂತ್ರ್ಯ’ದ ಘೋಷಣೆಯನ್ನೆತ್ತದೆ ಡೊಮಿನಿಯನ್ ಸ್ಟೇಟಸ್ ಬಗ್ಗೆ ಚರ್ಚಿಸುತ್ತಿರುವುದನ್ನು ಕಂಡು ಬೇಸತ್ತು ಹೊರಬಂದರು. ಕಾಂಗ್ರೆಸ್ ಇನ್ನೂ ಶ್ರೀಮಂತ ವರ್ಗದ ಹಿಡಿತದಲ್ಲಿದ್ದುದನ್ನು ಕಂಡು ವಿಷಾದಿಸಿದರು. ಮಿಲಿಯಾಂತರ ಕಾರ್ಮಿಕರು, ರೈತರಿಗೆ ಕಾಂಗ್ರೆಸ್‍ನಲ್ಲಿ ಸ್ಥಾನವೇ ಇರಲಿಲ್ಲ. ಕಾಂಗ್ರೆಸ್‍ಗೆ ತನ್ನ ಸಂಘಟನೆಯನ್ನು ಬುಡಮಟ್ಟದಿಂದ ಕಟ್ಟುವುದು ಬೇಕಿರಲಿಲ್ಲವೆಂದು, ಏಕೆಂದರೆ ಅದು ಕ್ರಾಂತಿಯ ಬಗೆಗಿನ ಭೀತಿಯನ್ನು ಹೋಂದಿದೆ, ಎಂದು ಭಗತ್‍ಸಿಂಗ್ ಅಭಿಪ್ರಾಯ ಪಟ್ಟಿದ್ದರು. 

ಅದೇ ಸಮಯದಲ್ಲಿ ಕಲ್ಕತ್ತಾದಲ್ಲಿ ಅಖಿಲ ಭಾರತ ಶ್ರಮಿಕ ಮತ್ತು ರೈತರ ಸಮ್ಮೇಳನ ನಡೆಯುತ್ತಿತ್ತು. ‘ಕೀರ್ತಿ’ ಪತ್ರಿಕೆಯ ಸಂಪಾದಕರಾದ ಜೋಶ್‍ರವರನ್ನು ಭೇಟಿ ಮಾಡಿ ಆ ಬಗ್ಗೆ ತಿಳಿದುಕೊಂಡರು ಭಗತ್. “ಶ್ರಮಿಕರನ್ನು, ರೈತರನ್ನು ಸಂಘಟಿಸುವ ಕೆಲಸ ನೀವು ಮಾಡಿ. ಬ್ರಿಟಿಷರ ಆಳ್ವಿಕೆಯನ್ನು ಒಡೆಯುವ ಕೆಲಸ ನಾವು ಮಾಡುತ್ತೇವೆ. ಈ ರೀತಿಯ ಕಾರ್ಯ ವಿಭಜನೆಯಿಂದ ಭವಿಷ್ಯವನ್ನು ನಾವು ರೂಪಿಸೋಣ,” ಎಂದರು. 

ಕಲ್ಕತ್ತಾದ ಕ್ರಾಂತಿಕಾರಿಗಳಲ್ಲಿ ಉತ್ಸಾಹದ ಅಲೆ
ಜತಿನ್ ದಾಸ್ 

ಕಲ್ಕತ್ತಾದಲ್ಲಿರುವಾಗ ಅವರು ಪ್ರಫುಲ್ಲ ಗಂಗೂಲಿ, ಜ್ಯೋತಿಷ್ ಘೋಷ್, ತ್ರೈಲೋಕ್ಯನಾಥ ಚಕ್ರವರ್ತಿ ಮತ್ತು ಜತೀಂದ್ರನಾಥ ದಾಸ್, ಜತೀಂದ್ರನಾಥ ಬ್ಯಾನರ್ಜಿಯವರನ್ನು ಭೇಟಿ ಮಾಡಿದರು. ಚಕ್ರವರ್ತಿಯವರು ಭಗತ್‍ಸಿಂಗ್‍ರಿಗೆ 5000 ಯುವಜನರ ಸ್ವಯಂ ಸೇವಕರ ಪಡೆಯನ್ನು ಕಟ್ಟಲು ಹೇಳಿದರು, ಯಾವುದೇ ಜಾತಿ, ಮತ ಧರ್ಮಗಳ ಬೇಧ-ಭಾವವಿಲ್ಲದೆ. ಭಗತ್‍ಸಿಂಗ್‍ರ ಕ್ರಾಂತಿಕಾರಿ ಉತ್ಸಾಹವನ್ನು ಕಂಡು ಅಲ್ಲಿನ ಕ್ರಾಂತಿಕಾರಿಗಳಲ್ಲಿ ಅಚ್ಚರಿ ಮೂಡಿತು. ಆದರೆ ಭಗತ್‍ಸಿಂಗ್‍ರ ವಿಧಾನಗಳ ಬಗ್ಗೆ ಅವರಿಗೆ ಒಪ್ಪಿಗೆಯಿರಲಿಲ್ಲ. ಆ ಬಗ್ಗೆ ಚರ್ಚಿಸುತ್ತಾ ಭಗತ್‍ಸಿಂಗ್‍ರವರು “ಇದೊಂದು ಸಾಧನವೇ ಹೊರತು ಅಂತ್ಯವಲ್ಲ. ಇದು ಯುವಜನತೆಯನ್ನು ಬಡಿದೆಬ್ಬಿಸುವ ಸಾಧನ”, ಎಂಬುದಾಗಿ ಅವರ ಮನವೊಲಿಸಿದರು. ಅವರಿಗೆ ಬಾಂಬುಗಳ ತಯಾರಿಯ ಬಗ್ಗೆ ತಿಳಿಯಬೇಕಿತ್ತು. ಮೊದಲಿಗೆ ಚಕ್ರವರ್ತಿಯವರು ಹಿಂಜರಿದರೂ, ನಂತರ ಅದಕ್ಕೆ ಅಂಗೀಕರಿಸಿ ಅವರಿಗೆ ಬಂದೂಕು ಮತ್ತು ಗುಂಡುಗಳನ್ನು ನೀಡಿದರು. ಭಗತ್‍ಸಿಂಗ್‍ರು ಅಲ್ಲಿ ಬಾಂಬುಗಳನ್ನು ತಯಾರಿ ಮಾಡುವ ಕೆಲಸದಲ್ಲಿ ತೊಡಗಿದ್ದೇ ಅಲ್ಲದೆ, ಅಲ್ಲಿ ಒಂದು ಪುಟ್ಟ ಪ್ರಯೋಗ ಶಾಲೆ ಸ್ಥಾಪಿಸಿದರು. ಜತಿನ್‍ದಾಸ್‍ರ ಮನವೊಲಿಸಿ ಭಗತ್‍ಸಿಂಗ್ ಅವರನ್ನು ತಮ್ಮೊಂದಿಗೆ ಕರೆತಂದರು. ಆತ ಬಾಂಬ್ ತಯಾರಿ ಮಾಡುವಲ್ಲಿ ಪರಿಣಿತರಾಗಿದ್ದರು.

ಭಗತ್‍ಸಿಂಗ್‍ರ ಕಲ್ಕತ್ತಾ ಭೇಟಿ ಅಲ್ಲಿನ ಕ್ರಾಂತಿಕಾರಿಗಳಲ್ಲಿ ಉತ್ಸಾಹದ ಅಲೆಯನ್ನು ಪುನಃ ಚಿಮ್ಮಿಸಿತು. ಮತ್ತೊಮ್ಮೆ ಭಾರತದಲ್ಲಿ ಸಾಮಾಜಿಕ-ರಾಜಕೀಯ ಬದಲಾವಣೆಗಳನ್ನೂ ತರುವ ಬಗ್ಗೆ ಚರ್ಚೆಗಳು ತೀವ್ರಗೊಂಡವು. ರಷ್ಯಾದ ಕ್ರಾಂತಿಯ ಪ್ರಭಾವ ದಟ್ಟವಾಗತೊಡಗಿತು., “ಪ್ರಜಾಪ್ರಭುತ್ವ ರಾಜಕೀಯ ಮತ್ತು ಕಾನೂನಾತ್ಮಕ ಸಮಾನತೆಯ ವ್ಯವಸ್ಥೆ. ಆದರೆ ವಾಸ್ತವವಾಗಿ ರಾಜಕೀಯದಲ್ಲಾಗಲೀ, ಕಾನೂನಿನಲ್ಲಾಗಲೀ ಆರ್ಥಿಕ ಅಸಮಾನತೆಗಳ ಕಾರಣದಿಂದಾಗಿ ಸಮಾನತೆ ಇರಲು ಸಾಧ್ಯವಿಲ್ಲ. ಅಧಿಕಾರ ಬಂಡವಾಳಶಾಹಿ ವರ್ಗದ ಹಿಡಿತದಲ್ಲಿರುವವರೆಗೂ; ಕಾನೂನು, ಶಿಕ್ಷಣ, ಕೈಗಾರಿಕೆ, ಭೂಮಿ ಅವರ ನಿಯಂತ್ರಣದಲ್ಲಿರುವವರೆಗೂ ಜನಸಾಮಾನ್ಯರಿಗೆ, ಕಾರ್ಮಿಕರು, ರೈತರು, ಬಡಜನತೆಗೆ, ಯಾವುದೇ ರೀತಿಯಾದ ಸ್ವಾತಂತ್ರ್ಯ-ಸಮಾನತೆ ಇರುವುದಿಲ್ಲ. ಆದ್ದರಿಂದಲೇ ಬ್ರಿಟಿಷರನ್ನು ಹೊಡೆದೋಡಿಸುವುದಷ್ಟೇ ಅಲ್ಲದೆ ಕಾರ್ಮಿಕ-ರೈತ-ಬಡಜನತೆಯನ್ನು ತೊಡಗಿಸಿಕೊಂಡು ಕ್ರಾಂತಿ ಮಾಡುವ ಮೂಲಕ ಜನತೆಯ ಪ್ರಜಾಪ್ರಭುತ್ವವನ್ನು ಅಂದರೆ ಸಮಾಜವಾದವನ್ನು ಸ್ಥಾಪಿಸಬೇಕು” ಎಂಬುದು ಬಂಗಾಳಿ ಕ್ರಾಂತಿಕಾರಿಗಳ ಉದ್ದೇಶವಾಗಿತ್ತು. ಇದೇ ನಂಬಿಕೆಯನ್ನು ಭಗತ್‍ಸಿಂಗ್ ಸಹ ಹೊಂದಿದ್ದರು.
ಆಗ್ರಾದಲ್ಲಿ ಚಟುವಟಿಕೆ
ಕಲ್ಕತ್ತದಿಂದ ಹೊರಟ ಭಗತ್‍ಸಿಂಗ್‍ರು ಆಗ್ರಾ ತಲುಪಿದರು. ನಂತರದ ದಿನಗಳಲ್ಲಿ ಇದೇ ಕ್ರಾಂತಿಕಾರಿ ಚಟುವಟಿಕೆಗಳ ತಾಣವಾಯಿತು. ಭಗತ್‍ಸಿಂಗ್ ಮತ್ತವರ ಇಬ್ಬರು ಸಂಗಾತಿಗಳು ಆಗ್ರಾದ ಹಿಂಗ್ ಕೀ ಮಂಡಿ ಎಂಬಲ್ಲಿ ಎರಡು ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡರು. ಹತ್ತಿರವಿದ್ದ ಝಾನ್ಸಿ ಕಾಡು ಬಾಂಬ್ ಪರೀಕ್ಷೆಗೆ ಸೂಕ್ತವಾಗಿತ್ತು. ಪಂಜಾಬಿನಿಂದ ತಪ್ಪಿಸಿಕೊಂಡು ಬಂದ ಎಲ್ಲಾ ಕ್ರಾಂತಿಕಾರಿಗಳು ಪುನಃ ಇಲ್ಲಿ ಒಟ್ಟುಗೂಡಿದರು. ಬಂಗಾಳದಿಂದ ಜತಿನ್ ದಾಸ್, ಲಲಿತ್ ಮುಖರ್ಜಿ ಇವರನ್ನು ಸೇರಿಸಿಕೊಂಡರು.

ಅಲ್ಲಿ ಅವರು ಬಹಳ ಕಷ್ಟಕರವಾದ ದಿನಗಳನ್ನು ಕಳೆದರು. ಅವರಲ್ಲಿ ಮಲಗಲು ಸಾಕಷ್ಟು ಚಾಪೆ-ಹೊದಿಕೆಗಳಿರಲಿಲ್ಲ, ಅಡುಗೆ ಮಾಡಲು ಸಾಕಷ್ಟು ಪಾತ್ರೆಗಳಿರಲಿಲ್ಲ, ತಿನ್ನಲು ಸಾಕಷ್ಟು ಆಹಾರವಿರಲಿಲ್ಲ. ಎಷ್ಟೋ ದಿನಗಳು ಒಪ್ಪತ್ತಿನ ಊಟ ಮಾಡುತ್ತಿದ್ದರು ಅಥವಾ ಕೆಲವೊಮ್ಮೆ ನೀರನ್ನು ಕುಡಿದು ಮಲಗುತ್ತಿದ್ದರು. ಇವರೆಲ್ಲಾ ಶ್ರೀಮಂತ ಕುಟುಂಬಗಳಿಂದ ಬಂದವರಲ್ಲವಾದರೂ, ಅವರ ಮನೆಗಳಲ್ಲಿ ಊಟಕ್ಕೆ ಬಡತನವೇನೂ ಇರಲಿಲ್ಲ. ಆದರೆ ಬ್ರಿಟಿಷರ ದಾಸ್ಯದಲ್ಲಿದ್ದ ದೇಶವನ್ನು ಮುಕ್ತಿಗೊಳಿಸಲು, ಜನತೆಯ ಬಡತನ-ಸಂಕಷ್ಟಗಳನ್ನು ಅಳಿಸಲು, ಅವರು ಇಂತಹ ಕಷ್ಟ-ಕಾರ್ಪಣ್ಯಗಳನ್ನು ನಗುನಗುತ್ತಲೇ ಸಹಿಸಿದರು. ಅವರಲ್ಲಿ ಜಾತಿ, ಧರ್ಮಗಳ ಬೇಧವಿರಲಿಲ್ಲ. ಎಲ್ಲರೂ ಒಟ್ಟಿಗೆ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ, ದೇಶದ ಸ್ವಾತಂತ್ರ್ಯದ ಕನಸನ್ನು ಕಾಣುತ್ತಾ, ಬದುಕಿದ್ದರು. ಅವಶ್ಯಕತೆ ಬಂದಾಗ ಜೀವವನ್ನೂ ಸಹ ನಗುನಗುತ್ತಲೇ ತ್ಯಾಗ ಮಾಡುವ ಸಂಕಲ್ಪವನ್ನು ಹೊಂದಿದ್ದರು. ತಮ್ಮ ಮನೆ-ಮಠಗಳನ್ನು, ಬಂಧು-ಬಾಂಧವರನ್ನು, ಆತ್ಮೀಯರನ್ನೆಲ್ಲಾ ತೊರೆದು ಬಂದಿದ್ದರು. ಕೀರ್ತಿಗಾಗಿ, ಅಧಿಕಾರಕ್ಕಾಗಿ ಅಲ್ಲ, ಬದಲಿಗೆ ಒಂದು ಉನ್ನತ ಧ್ಯೇಯಕ್ಕಾಗಿ. 
ಚಂದ್ರಶೇಖರ್ ಆಜಾದ್ 

ಆಜಾದ್‍ರವರು ಪಕ್ಷದ ಹಣಕಾಸಿನ ಬಗ್ಗೆ ನೋಡಿಕೊಳ್ಳುತ್ತಿದ್ದರು.  ಅವರು ಮೋತಿಲಾಲ್ ನೆಹರೂ, ಪುರುಷೋತ್ತಮ ದಾಸ್ ಟಂಡನ್ ಮುಂತಾದ ಪ್ರಮುಖ ವ್ಯಕ್ತಿಗಳಿಂದಲೂ ಸಹಾಯ ಪಡೆಯುತ್ತಿದ್ದರು. ಕೆಲವು ಭಾರತೀಯ ಅಧಿಕಾರಿಗಳೂ ಸಹ ಗುಪ್ತವಾಗಿ ಹಣ ಸಹಾಯ ಮಾಡುತ್ತಿದ್ದರು. ಆದರೆ ಬಹುತೇಕ ಹಣ ಸಂಘಟನೆಯ ವಿವಿಧ ಕಾರ್ಯಗಳಿಗೇ ಖರ್ಚಾಗುತ್ತಿತ್ತು. ಹಾಗಾಗಿ ಬಹಳಷ್ಟು ಸಾರಿ ಕ್ರಾಂತಿಕಾರಿಗಳು ಉಪವಾಸವಿರಬೇಕಾಗುತಿತ್ತು. ವಿವಿಧ ಪ್ರಾಂತ್ಯಗಳಿಂದ ಕ್ರಾಂತಿಕಾರಿಗಳು ಆಗ್ರಾಕ್ಕೆ ಬಂದು ಬಾಂಬ್ ತಯಾರಿ, ಗುಂಡು ಹಾರಿಸುವಿಕೆಯಲ್ಲಿ ತರಬೇತಿ ಪಡೆದು ಹೋಗುತ್ತಿದ್ದರು. ಕೆಲವೆಡೆಗಳಲ್ಲಿ ತಾವೇ ಪ್ರಯೋಗ ಶಾಲೆಗಳನ್ನು ತೆರೆದರು. 

ಕ್ರಾಂತಿ ಎಂದರೇನು?
ಕ್ರಾಂತಿಯ ಬಗ್ಗೆ ಅವರಿಗಿದ್ದ ಅಭಿಪ್ರಾಯ- ‘ಕ್ರಾಂತಿ ಎಂದರೆ ಸಮಾಜದ ಮೂಲಭೂತ ಬದಲಾವಣೆ. ಅಂದರೆ, ಅದು ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಸಂಪೂರ್ಣ ನಾಶವಾಗಿರುತ್ತದೆ. ಪ್ರತಿ ಪೀಳಿಗೆ ತಾವು ಬದುಕಿದಂತಹ ಸಾಮಾಜಿಕ ಸಂಸ್ಥೆಗಳು ಸ್ಥಿರವೆಂಬ ಸಹಜ ಭ್ರಮೆಯಲ್ಲಿದ್ದವು. ಆದರೂ ಅಸಂಖ್ಯಾತ ವರ್ಷಗಳಿಂದ ಸಾಮಾಜಿಕ ಸಂಸ್ಥೆಗಳು ಬದಲಾಗುತ್ತಲೇ ಇವೆ. ಆದ್ದರಿಂದ, ಈಗಿರುವ ವ್ಯವಸ್ಥೆಯೂ ಸಹ ಬದಲಾಗಲೇಬೇಕು. ಬ್ರಿಟಿಷರ ಹಿಡಿತದಲ್ಲಿರುವ ಭಾರತ ಸ್ವತಂತ್ರಗೊಳ್ಳಬೇಕು. ಆದರೆ, ಜಮೀನುದಾರರ ಮತ್ತು ಕೈಗಾರಿಕೋದ್ಯಮಿಗಳ ಹಿಡಿತಕ್ಕೆ ಸಿಲುಕದೆ, ಕಾರ್ಮಿಕರು-ರೈತರು-ದುಡಿಯುವ ಜನತೆ ಅಧಿಕಾರ ವಹಿಸಿಕೊಳ್ಳುವಂತಾಗಬೇಕು.”

ಘದರ್ ಪಕ್ಷ ಇವರಿಗೆ ಒಂದು ಮಾರ್ಗದರ್ಶಕವಾಗಿತ್ತು. ಏಕೆಂದರೆ ಆ ಪಕ್ಷ ಮಾತ್ರ ಭಾರತದಲ್ಲಿ ವಿದೇಶಿಯರನ್ನು ಹೊಡೆದೋಡಿಸುವುದು ಮಾತ್ರವಲ್ಲದೆ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ರಿಪಬ್ಲಿಕನ್ (ಗಣತಂತ್ರ) ವ್ಯವಸ್ಥೆಯಾಗಿ ಬದಲಿಸಬೇಕೆಂದು ಘೋಷಿಸಿತ್ತು. ಅವರು ಜಾತಿ-ಧರ್ಮಗಳನ್ನು ದೂರವಿಟ್ಟಿದ್ದರು ಮತ್ತು ಧರ್ಮನಿರಪೇಕ್ಷತೆಯಲ್ಲಿ ನಂಬಿಕೆಯನ್ನಿಟ್ಟಿದ್ದರು. ಶಕ್ತಿ ಪ್ರಯೋಗ ಅವಶ್ಯಕ ಎಂದು ಭಾವಿಸಿದ್ದರು. ಅವರೂ ಸಹ ಕ್ರಾಂತಿಯಲ್ಲಿ ಸಾವು ಅನಿವಾರ್ಯ ಎಂದು ನಂಬಿದ್ದರು.

ಈ ಬಗ್ಗೆ ನಿರಂತರವಾಗಿ ಕ್ರಾಂತಿಕಾರಿಗಳ ನಡುವೆ ಚರ್ಚೆ ನಡೆಯುತ್ತಲೇ ಇರುತ್ತಿತ್ತು. ಎಷ್ಟೋ ಬಾರಿ ಅವರಿಗೆ ತಾವು ಮನೆ ಬಿಟ್ಟು ಬಂದ ಧ್ಯೇಯಕ್ಕೆ ಎಷ್ಟು ಹತ್ತಿರವಾಗಿದ್ದೇವೆ? ತಮ್ಮ ಪ್ರಯತ್ನದಿಂದ ಕ್ರಾಂತಿ ಹತ್ತಿರವಾಗುತ್ತಿದೆ0iÉುೀ? ಎನ್ನುವ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ ಅವರಿಗೆ ಒಂದಂತೂ ಖಚಿತವಾಗಿ ತಿಳಿದಿತ್ತು. ‘ಯಾವುದೇ ರಾಷ್ಟ್ರದ ಅವನತಿಗೆ ಕಾರಣ ವಿದೇಶಿ ಆಳ್ವಿಕೆ. ಯಾವುದೇ ದೇಶ ತನ್ನ ಶೋಷಕರ ಮೇಲೆ ಸಿಡಿದೆದ್ದಾಗ ಆರಂಭದಲ್ಲಿ ಸೋಲಾಗುವುದು ಸಹಜ. ಅದರ ಹೋರಾಟದ ಗತಿಯಲ್ಲಿ ಕೆಲವು ಸುಧಾರಣೆಗಳನ್ನು ಪಡೆದುಕೊಳ್ಳಬಹುದು. ಆದರೆ ಅಂತಿಮ ಹಂತದಲ್ಲಿ ಮಾತ್ರ ಅಂದರೆ, ರಾಷ್ಟ್ರದ ಎಲ್ಲಾ ಶಕ್ತಿಯನ್ನು, ಸಂಪನ್ಮೂಲಗಳನ್ನು ಸಂಘಟಿಸಿದಾಗ ಮಾತ್ರ ವಿದೇಶಿ ಸರ್ಕಾರವನ್ನು ನುಚ್ಚುನೂರು ಮಾಡುವಂತಹ ಅಂತಿಮ ಹೊಡೆತವನ್ನು ನೀಡಲು ಸಾಧ್ಯ.’ ಹಾಗಾಗಿ, ತಮ್ಮ ತುಂಬುಮನಸ್ಸಿನಿಂದ ಕ್ರಾಂತಿಯನ್ನು ಸಂಘಟಿಸುವ ಕೆಲಸದಲ್ಲಿ ನಿರತರಾಗಿದ್ದರು.

ಬ್ರಿಟಿಷರ ದಮನಕಾರಿ ಕಾಯಿದೆಗಳು
ಸ್ಯಾಂಡರ್ಸ್‍ನ ಕೊಲೆಯ ನಂತರ ಆರಂಭದಲ್ಲಿ ಬ್ರಿಟಿಷರು ಭಯಭೀತರಾಗಿದ್ದರು. ತಮ್ಮ ಕುಟುಂಬಗಳನ್ನು ವಾಪಸ್ ಇಂಗ್ಲೆಂಡಿಗೆ ಕಳಿಸಿದ್ದರು. ಆದರೆ ಅದೇನೂ ಅಷ್ಟು ದೊಡ್ಡ ಪೆಟ್ಟಾಗಿ ಕಾಣಲಿಲ್ಲ. ತಮ್ಮ ದಮನಕಾರಿ ಧೋರಣೆಯಿಂದ ಅದನ್ನೂ ತಡೆಗಟ್ಟಬಹುದೆಂದು ಬ್ರಿಟಿಷರು ಭಾವಿಸಿದರು. ಕಾಂಗ್ರೆಸ್‍ನ ಬಗ್ಗೆ ಅವರಿಗೆ ಯಾವುದೇ ಭಯವಿರಲಿಲ್ಲ ಆದ್ದರಿಂದ ಬ್ರಿಟಿಷರು ಕ್ರಾಂತಿಕಾರಿಗಳನ್ನು ದಮನಗೊಳಿಸಲು ಮತ್ತು ಎಲ್ಲೆಡೆ ಬೆಳೆಯುತ್ತಿದ್ದ ಕಾರ್ಮಿಕ ಚಳುವಳಿಗಳನ್ನು ಹತ್ತಿಕ್ಕಲು ಎರಡು ಮಸೂದೆಗಳನ್ನು ಜಾರಿಗೊಳಿಸಬೇಕೆಂದು ನಿರ್ಧರಿಸಿದರು. ಮೊದಲನೆಯದು-ಸಾರ್ವಜನಿಕ ರಕ್ಷಣಾ ಮಸೂದೆ-ಕ್ರಾಂತಿಕಾರಿಗಳನ್ನು ಹತ್ತಿಕ್ಕಲು. ಈ ಕಾಯಿದೆಯ ಪ್ರಕಾರ ಯಾರನ್ನು ಬೇಕಾದರೂ ವಿಚಾರಣೆಯಿಲ್ಲದೆ ಬಂಧನದಲ್ಲಿರಿಸಬಹುದಿತ್ತು. ಎರಡನೆಯದು-ಕಾರ್ಮಿಕರ ವಿವಾದಗಳ ಮಸೂದೆ- ಕಾರ್ಮಿಕರು ಮುಷ್ಕರಗಳನ್ನು ಸಂಘಟಿಸದಂತೆ ತಡೆಹಿಡಿಯಲು. ಈಗಾಗಲೆ ಕಾರ್ಮಿಕರ ಮುಷ್ಕರಗಳಿಂದ ಮಿಲ್ ಮಾಲೀಕರು ಕಾರ್ಮಿಕರ ವೇತನವನ್ನು ಹೆಚ್ಚಳಗೊಳಿಸಬೇಕಾಗಿತ್ತು. ಅಸೆಂಬ್ಲಿಯಲ್ಲಿ ಇದನ್ನು ಅನುಮೋದಿಸುವುದು ಬಹಳ ಸುಲಭ ಎಂದು ಬ್ರಿಟಿಷ್ ಸರ್ಕಾರಕ್ಕೆ ತಿಳಿದಿತ್ತು. ಕ್ರಾಂತಿಕಾರಿಗಳೂ ಸಹ ಅಸೆಂಬ್ಲಿ ನಿರುಪಯುಕ್ತ ಸಂಸ್ಥೆ ಎಂದು ಭಾವಿಸಿದ್ದರು. ಅದು ಭಾರತೀಯರ ಅಸಹಾಯಕತೆ ಮತ್ತು ಬ್ರಿಟಿಷರ ನಿರಂಕುಶತೆಯ ಪ್ರತೀಕವಾಗಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು. 

‘ಕಾಯಿದೆಗಳಿಗೆ ಹೆದರುವವರು ನಾವಲ್ಲ’
ಗಲ್ಗಂಬಕ್ಕೇ ಹೆದರದ ಕ್ರಾಂತಿಕಾರಿಗಳು ಈ ಕಾಯಿದೆಗಳಿಗೆ ಹೆದರುವುದುಂಟೇ? ಅದನ್ನು ಬ್ರಿಟಿಷರಿಗೆ ಮನದಟ್ಟು ಮಾಡಿಸುವ ರೀತಿಯ ಬಗ್ಗೆ ಚರ್ಚೆ ನಡೆಯಿತು.  ಜೊತೆಗೆ, ತಮ್ಮ ಚಟುವಟಿಕೆಗಳು ಗುಪ್ತವಾಗಿ ನಡೆಯುತ್ತಿದ್ದು, ಈ ಮಸೂದೆಗಳು ಜಾರಿಗೊಂಡರೆ ಆ ಕೆಲಸಗಳು ಇನ್ನಷ್ಟು ಕಷ್ಟಕರವಾಗುತ್ತದೆ, ಆಗ ಜನತೆಗೆ ತಮ್ಮ ಸಂದೇಶವನ್ನು ತಲುಪಿಸುವುದು ಇನ್ನಷ್ಟು ದುಸ್ತರವಾಗುತ್ತದೆ. ಹಾಗಾಗಿ ಈ ಮಸೂದೆಗಳನ್ನು ವಿರೋಧಿಸಬೇಕೆಂಬುದು ಕ್ರಾಂತಿಕಾರಿಗಳ ನಿಲುವಾಗಿತ್ತು. ಅಸೆಂಬ್ಲಿಯಲ್ಲಿ ಅದನ್ನು ಮಂಡಿಸಿ, ಜಾರಿಗೊಳಿಸಿ ಕ್ರಾಂತಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಲು ಬ್ರಿಟಿಷ್ ಸರ್ಕಾರ ಉದ್ದೇಶಿಸಿರುವುದರಿಂದ, ಅಲ್ಲಿ ಏಕೆ ಪ್ರತಿಭಟನೆಯನ್ನು ಮಾಡಬಾರದು ಎಂಬ ವಿಚಾರ ಕ್ರಾಂತಿಕಾರಿಗಳಲ್ಲಿ ಮೂಡಿತು. ಆದರೆ ಹೇಗೆ? ಇನ್ನೊಬ್ಬ ಅಧಿಕಾರಿಯನ್ನು ಕೊಲ್ಲುವುದೇ? ಬೇಡವೆಂಬ ಒಮ್ಮತ ಅಭಿಪ್ರಾಯ ಮೂಡಿಬಂತು.

ಅಸೆಂಬ್ಲಿಯ ಹೊರಗಡೆ ಯಾವುದೇ ರೀತಿಯ ಪ್ರತಿಭಟನೆ ನಡೆದರೂ ಅವರ ಬಂಧನ ಖಚಿತ. ಹಾಗಿದ್ದಲ್ಲಿ ಅಸೆಂಬ್ಲಿಯನ್ನೇ ಏಕೆ ತಮ್ಮ ಸಂದೇಶದ ಹರಡುವಿಕೆಗೆ ಬಳಸಬಾರದು ಎಂಬ ಪ್ರಶ್ನೆ ಬಂತು. ತಮ್ಮ ಅಸ್ತಿತ್ವವನ್ನು ದಾಖಲಿಸಿ ಅಲ್ಲಿ ಪ್ರತಿಭಟನೆ ಮಾಡಲು ಶಾಂತಿ ವಿಧಾನವನ್ನು ಬಳಸುವುದು ಅವಶ್ಯಕ ಎನಿಸಿತು. ಕ್ರಾಂತಿಕಾರಿಗಳೆಂದರೆ ‘ಕೊಲೆಗಡುಕರ ಗುಂಪಲ್ಲ’, ಬದಲಿಗೆ ಒಂದು ಧ್ಯೇಯಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಬಂಧನ, ಜೈಲು, ಪೋಲೀಸ್ ದೌರ್ಜನ್ಯ, ಕೊನೆಗೆ ಗಲ್ಲು ಶಿಕ್ಷೆಯನ್ನೂ ಸಹ ಎದುರಿಸಲು ಸಿದ್ಧರಿರುವ ಧೀರರು ಎಂದು ಸಾಬೀತುಪಡಿಸಬೇಕಿತ್ತು. 

ದಮನಕಾರಿ ಮಸೂದೆಗಳ ವಿರುದ್ಧ ಪ್ರತಿಭಟಿಸಬೇಕು. ಜೊತೆಗೆ, ಅಸೆಂಬ್ಲಿ ಸದಸ್ಯರ ಮುಖ್ಯವಾಗಿ ಭಾರತೀಯ ಸದಸ್ಯರ ಕಣ್ಣು, ಕಿವಿಗಳನ್ನು ತೆರೆಸಬೇಕು. ಅದಕ್ಕಾಗಿ ಇಬ್ಬರು ಕ್ರಾಂತಿಕಾರಿಗಳು ಸಾರ್ವಜನಿಕ ಗ್ಯಾಲರಿಯಿಂದ ಟ್ರೆಶರಿ ಬೆಂಚ್‍ಗಳ ಮೇಲೆ ಯಾರಿಗೂ ಗಾಯವಾದಂತಹ ಸ್ಥಳವನ್ನು ನೋಡಿಕೊಂಡು-ಬಾಂಬ್‍ಗಳನ್ನು ಎಸೆಯಬೇಕೆಂದು ತೀರ್ಮಾನಿಸಲಾಯಿತು. ಈ ಸ್ಫೋಟದಿಂದ ಇಡೀ ದೇಶದ ಜನತೆಯಲ್ಲಿ ಚರ್ಚೆ ಆರಂಭವಾಗುತ್ತದೆ – ಈ ಯುವಜನರು ಏತಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು ಎಂದು. ಬ್ರಿಟಿಷರ ಅಮಾನವೀಯ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿಗಳು ಎಲ್ಲಾ ರೀತಿಯ ಅಪಾಯಗಳನ್ನು ಎದುರಿಸಲು ಸಿದ್ಧರು ಎಂಬುದು ಆಗ ಜನತೆಗೆ ಅರಿವಾಗುತ್ತದೆ. ಜೊತೆಗೆ, ನ್ಯಾಯಾಲಯದಲ್ಲಿ ಕ್ರಾಂತಿಕಾರಿಗಳು ತಮ್ಮ ಕಾರ್ಯಗಳ ಬಗ್ಗೆ ಜನತೆಗೆ ಮನದಟ್ಟು ಮಾಡಿಕೊಡಬೇಕೆಂದು ನಿರ್ಧರಿಸಲಾಯಿತು. ಈ ಕಾರ್ಯವನ್ನು ಮಾಡಲು ಬಟುಕೇಶ್ವರ ದತ್ ಹಾಗೂ ರಾಮ್‍ಶರಣ್‍ದಾಸ್‍ರನ್ನು ನೇಮಿಸಲಾಯಿತು. 


--ಸುಧಾ ಜಿ



ಅನುವಾದ - ನನಗೆ ಪತ್ನಿ ಏಕೆ ಬೇಕು? – ಜೂಡಿ ಬ್ರಾಡಿ


(ಮೊದಲಿಗೆ ಈ ಲೇಖನ 1972ರಲ್ಲಿ ಮಿಸ್ ಮ್ಯಾಗಜೈನ್ ನಲ್ಲಿ ಪ್ರಕಟವಾಯಿತು ಮತ್ತು 1990ರಲ್ಲಿ ಅದೇ ಪತ್ರಿಕೆಯಲ್ಲಿ ಮರುಮುದ್ರಣಗೊಂಡಿತು)
ನಾನು ಪತ್ನಿಯರುಎನ್ನುವ ಜನರ ವರ್ಗೀಕರಣದ ಗುಂಪಿಗೆ ಸೇರುತ್ತೇನೆ. ನಾನೊಬ್ಬ ಪತ್ನಿ, ಹಾಗೆಯೇ ನಾನೊಬ್ಬ ತಾಯಿ ಸಹ. ಇತ್ತೀಚೆಗಷ್ಟೇ ನನ್ನ ಗೆಳೆಯನೊಬ್ಬ ವಿಚ್ಛೇದನವನ್ನು ಪಡೆದುಕೊಂಡ. ಅವನಿಗೆ ಮೊದಲ ಪತ್ನಿಯಿಂದ ಒಂದು ಮಗುವಿದೆ. ಈಗ ಇನ್ನೊಬ್ಬ ಪತ್ನಿಗಾಗಿ ಹುಡುಕಾಟ ನಡೆಸಿದ್ದಾನೆ. ಒಂದು ದಿನ ಬಟ್ಟೆ ಇಸ್ತ್ರಿ ಮಾಡುತ್ತಾ ಅವನ ಬಗ್ಗೆ ಆಲೋಚಿಸುತ್ತಿದ್ದಾಗ ನನಗೂ ಒಬ್ಬ ಪತ್ನಿ ಬೇಕೆನಿಸಿತು.
ನನಗೇಕೆ ಪತ್ನಿ ಬೇಕು?
ನನಗೀಗ ಕಾಲೇಜಿಗೆ ಹೋಗಿ ಓದಿಕೊಂಡು ಆರ್ಥಿಕವಾಗಿ ಸ್ವತಂತ್ರವಾಗಿ, ನನ್ನನ್ನು, ಅವಶ್ಯವಿದ್ದರೆ ನನ್ನ ಮೇಲೆ ಅವಲಂಬಿತರಾಗಿರುವವರನ್ನು ನೋಡಿಕೊಳ್ಳಬೇಕೆನಿಸಿದೆ. ಅವಳು ಕೆಲಸ ಮಾಡುತ್ತಾ, ನನ್ನನ್ನು ಕಾಲೇಜಿಗೆ ಕಳಿಸಲು ನನಗೆ ಪತ್ನಿ ಬೇಕು.
ನಾನು ಕಾಲೇಜಿನಲ್ಲಿರಬೇಕಾದರೆ ನನ್ನ ಮಕ್ಕಳನ್ನು ನೋಡಿಕೊಳ್ಳಲು ನನಗೆ ಒಬ್ಬ ಪತ್ನಿ ಬೇಕು. ಮಕ್ಕಳ ವೈದ್ಯರ, ದಂತವೈದ್ಯರ ಅಪಾಯಿಂಟ್ಮೆಂಟ್, ನನ್ನದನ್ನೂ ಸಹ ನೆನಪಿಟ್ಟುಕೊಳ್ಳಲು, ನನಗೆ ಪತ್ನಿ ಬೇಕು.
ನನ್ನ ಮಕ್ಕಳು ಸರಿಯಾಗಿ ತಿನ್ನುವುದನ್ನು ಖಚಿತ ಪಡಿಸಿಕೊಳ್ಳಲು, ಸ್ವಚ್ಛವಾಗಿಡಲು ನನಗೆ ಒಬ್ಬ ಪತ್ನಿ ಬೇಕು. ನನ್ನ ಮಕ್ಕಳ ಬಟ್ಟೆಗಳನ್ನು ಸ್ವಚ್ಛಗೊಳಿಸುವ, ಅವುಗಳನ್ನು ರಿಪೇರಿ ಮಾಡುವ ಪತ್ನಿ ಬೇಕು. ಒಬ್ಬ ಒಳ್ಳೆಯ ಪಾಲಕಿಯಾಗಿರುವ, ಅವರನ್ನು ಶಾಲೆಗೆ ಕಳಿಸಲು ರೆಡಿ ಮಾಡುವ, ಅವರಿಗೆ ಸ್ನೇಹಿತರ ಜೊತೆ ಸಾಕಷ್ಟು ಸಾಮಾಜಿಕ ಜೀವನ ಸಿಗುವಂತೆ ಮಾಡುವ, ಪಾರ್ಕ್, ಮೃಗಾಲಯ ಇತ್ಯಾದಿಗಳಿಗೆ ಕರೆದೊಯ್ಯುವ ಪತ್ನಿ ಬೇಕು. ಮಕ್ಕಳು ಹುಷಾರಿಲ್ಲದಿದ್ದಾಗ ನೋಡಿಕೊಳ್ಳಲು, ಮಕ್ಕಳಿಗೆ ಅವಶ್ಯಕತೆ ಇದ್ದಾಗ ವಿಶೇಷ ಕಾಳಜಿ ವಹಿಸಲು ಪತ್ನಿ ಬೇಕು, ಏಕೆಂದರೆ ನಾನು ನನ್ನ ಕಾಲೇಜಿನ ತರಗತಿಗಳನ್ನು ಬಿಡಲಾಗುವುದಿಲ್ಲ.
ನನ್ನ ಪತ್ನಿ ಕೆಲಸದ ನಡುವೆ ಸಮಯವನ್ನು ಮಾಡಿಕೊಳ್ಳಬೇಕು ಆದರೆ ಕೆಲಸವನ್ನು ಕಳೆದುಕೊಳ್ಳಬಾರದು. ಇದರಿಂದ ನನ್ನ ಪತ್ನಿಯ ಆದಾಯದಲ್ಲಿ ಆಗಾಗ ಸ್ವಲ್ಪ ಕಡಿತವಾಗಬಹುದು, ಆದರೆ ಅದನ್ನು ನಾನು ಸಹಿಸಿಕೊಳ್ಳಬಲ್ಲೆ. ನನ್ನ ಪತ್ನಿ ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ನೋಡಿಕೊಳ್ಳುವವರಿಗೆ ಸಂಬಳ ನೀಡುತ್ತಾಳೆ ಎಂದು ಬೇರೆಯಾಗಿ ಏನೂ ಹೇಳಬೇಕಿಲ್ಲ.
ನನ್ನ ವೈಯಕ್ತಿಕ ಅವಶ್ಯಕತೆಗಳ ಬಗ್ಗೆ ಕಾಳಜಿ ವಹಿಸಲು ಪತ್ನಿ ಬೇಕು. ನನ್ನ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪತ್ನಿ ಬೇಕು. ನನ್ನ ಮಕ್ಕಳು ಮತ್ತು ನಾನು ಆಯ್ಕೆ ಮಾಡಿದ ನಂತರ ಆಯ್ಕೆ ಮಾಡಿಕೊಳ್ಳುವ ಪತ್ನಿ ಬೇಕು. ನನ್ನ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡಿ, ರಿಪೇರಿ ಮಾಡಿ, ಅವಶ್ಯಕತೆ ಇದ್ದರೆ ಬದಲಾಯಿಸಿಡಲು ಪತ್ನಿ ಬೇಕು. ನನಗೆ ಬೇಕೆನಿಸಿದಾಗ ವಸ್ತುಗಳು ಸಿಗುವಂತೆ ನನ್ನೆಲ್ಲ ವಸ್ತುಗಳನ್ನು ಸರಿಯಾದ ಜಾಗದಲ್ಲಿಡಲು ನನಗೆ ಪತ್ನಿ ಬೇಕು. ನನಗೆ ಅಡಿಗೆ ಮಾಡಿಡಲು ಪತ್ನಿ ಬೇಕು, ಅವಳು ಉತ್ತಮ ಅಡಿಗೆಯವಳಾಗಿರಬೇಕು. ಪ್ರತಿದಿನದ ಊಟದ ಪ್ಲಾನ್ ಮಾಡಿ ಅವಶ್ಯಕತೆಯಾದ ಸಾಮಾನುಗಳನ್ನು ಕೊಂಡು ತಂದು, ಅಡುಗೆ ಮಾಡಿ, ಖುಷಿಯಿಂದ ನಮಗೆ ಬಡಿಸಲು ಮತ್ತು ನಂತರ ನಾನು ಓದಿಕೊಳ್ಳುವಾಗ ಎಲ್ಲವನ್ನೂ ಸ್ವಚ್ಛಗೊಳಿಸಲು ನನಗೆ ಪತ್ನಿ ಬೇಕು.
ನಾನು ಹುಷಾರಿಲ್ಲದೆ ಇದ್ದಾಗ ನನ್ನನ್ನು ನೋಡಿಕೊಳ್ಳಲು, ನನ್ನ ನೋವಿಗೆ ಮತ್ತು ಕಾಲೇಜಿನ ಸಮಯದ ನಷ್ಟಕ್ಕೆ ಮರುಕ ವ್ಯಕ್ತಪಡಿಸಲು ಪತ್ನಿ ಬೇಕು.
ನಮ್ಮ ಕುಟುಂಬ ರಜೆಗೆ ಹೊರಗಡೆ ಹೋಗುವಾಗ ನನ್ನ ಮತ್ತು ನನ್ನ ಮಕ್ಕಳ ಕಾಳಜಿ ವಹಿಸಲು ನನ್ನ ಪತ್ನಿ ನನ್ನೊಂದಿಗೆ ಬರಬೇಕು.
ನನ್ನ ಪತ್ನಿ, ಪತ್ನಿಯರ ಕರ್ತವ್ಯದ ಬಗ್ಗೆ ಅನುಪಯುಕ್ತ ದೂರುಗಳನ್ನು ಹೇಳುತ್ತಾ ನನಗೆ ತೊಂದರೆ ಕೊಡಬಾರದು. ಆದರೆ ನಾನು ನನ್ನ ಪತ್ನಿಗೆ ನನ್ನ ಓದಿನಲ್ಲಿ ಕಷ್ಟಕರ ವಿಚಾರವನ್ನು ವಿವರಿಸಬೇಕೆಂದೆನಿಸಿದಾಗ ಅವಳು ಅದನ್ನು ಕೇಳಿಸಿಕೊಳ್ಳಬೇಕು.
ನನ್ನೆಲ್ಲ ಪೇಪರ್ ಗಳನ್ನು ಟೈಪ್ ಮಾಡಿ ಕೊಡಲು ನನಗೆ ಪತ್ನಿ ಬೇಕು.
ನನ್ನ ಎಲ್ಲಾ ಸಾಮಾಜಿಕ ಸಂಬಂಧಗಳನ್ನು ನೋಡಿಕೊಳ್ಳಲು ನನಗೆ ಪತ್ನಿ ಬೇಕು. ನನ್ನ ಗೆಳೆಯರು ನಮ್ಮಿಬ್ಬರನ್ನು ಆಹ್ವಾನಿಸಿದಾಗ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಿಕೊಡಲು ನನಗೆ ಪತ್ನಿ ಬೇಕು. ನನ್ನ ಕಾಲೇಜಿನ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬರಬೇಕೆನಿಸಿದಾಗ, ಮನೆಯನ್ನು ನೀಟಾಗಿ ಇಟ್ಟು, ವಿಶೇಷ ಭೋಜನ ತಯಾರಿಸಿ, ನನಗೆ ಮತ್ತು ನನ್ನ ಸ್ನೇಹಿತರಿಗೆ ಬಡಿಸಲು ನನಗೆ ಪತ್ನಿ ಬೇಕು; ನಾನು ಮತ್ತು ನನ್ನ ಸ್ನೇಹಿತರು ನಮಗೆ ಆಸಕ್ತಿ ಎನಿಸಿದ ವಿಚಾರಗಳನ್ನು ಮಾತನಾಡುವಾಗ ಮಧ್ಯೆ ಮಾತನಾಡಬಾರದು. ನನ್ನ ಮಕ್ಕಳು ನಮಗೆ ತೊಂದರೆ ಕೊಡದಂತೆ ಅತಿಥಿಗಳು ಬರುವ ಮುನ್ನವೇ ಮಕ್ಕಳಿಗೆ ತಿನ್ನಿಸಿ ಮಲಗಿಸಲು ನನಗೆ ಪತ್ನಿ ಬೇಕು. ನನ್ನ ಅತಿಥಿಗಳ ಎಲ್ಲ ಸೌಕರ್ಯ ನೋಡಿಕೊಳ್ಳಲು, ಅವರಿಗೆ ಆಶ್ ಟ್ರೇ ಒದಗಿಸಲು, ಊಟಕ್ಕೆ ಮುಂಚೆ ಸೂಪ್ ನೀಡಲು, ಊಟ ಬಡಿಸಲು, ಅವರ ವೈನ್ ಗ್ಲಾಸ್ ಗಳನ್ನು ಮತ್ತೆ ಮತ್ತೆ ತುಂಬಲು, ಅವರು ಇಚ್ಛಿಸುವ ರೀತಿಯಲ್ಲಿ ಕಾಫಿû ನೀಡಲು ನನಗೆ ಪತ್ನಿ ಬೇಕು.
ಕೆಲವೊಮ್ಮೆ ಅವಳಿಗೆ ಇಡೀ ರಾತ್ರಿ ನಾನೊಬ್ಬನೇ ಇರಲು ಬಯಸುತ್ತೇನೆ ಎಂದು ಅರ್ಥವಾಗಬೇಕು. ನನ್ನ ಲೈಂಗಿಕ ಅವಶ್ಯಕತೆಗಳ ಬಗ್ಗೆ ಸೂಕ್ಷ್ಮವಾಗಿರುವ ಪತ್ನಿ ಬೇಕು. ನನಗೆ ಬೇಕೆನಿಸಿದಾಗ ನನ್ನನ್ನು ತೀವ್ರವಾಗಿ ಪ್ರೀತಿಸಬೇಕು, ನನಗೆ ತೃಪ್ತಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತಹ ಪತ್ನಿ ಬೇಕು. ಆದರೆ ನನಗೆ ಇಷ್ಟವಿಲ್ಲದಾಗ ಲೈಂಗಿಕ ಗಮನದ ಬೇಡಿಕೆಯನ್ನಿಡಬಾರದು.
ಜನನ ನಿಯಂತ್ರಣದ ಸಂಪೂರ್ಣ ಜವಾಬ್ದಾರಿಯನ್ನು ಹೊರುವಂತಹ ಪತ್ನಿ ಬೇಕು, ಏಕೆಂದರೆ ನನಗೆ ಇನ್ನು ಹೆಚ್ಚು ಮಕ್ಕಳು ಬೇಕಿಲ್ಲ.
ನನ್ನ ಜೊತೆ ನಿಷ್ಠೆಯಿಂದಿರುವ ಪತ್ನಿ ಬೇಕು ಏಕೆಂದರೆ ನನ್ನ ಬೌದ್ಧಿಕ ಜೀವನವನ್ನು ಈ ಅಸೂಯೆಗಳೊಂದಿಗೆ ಹಾಳುಮಾಡಿಕೊಳ್ಳಲು ನನಗಿಷ್ಟವಿಲ್ಲ. ನನ್ನ ಲೈಂಗಿಕ ಅಗತ್ಯತೆಗಳು ನನ್ನನ್ನು ದೃಢವಾಗಿ ಏಕಪತ್ನಿತ್ವಕ್ಕೆ ಬದ್ಧನಾಗಿರದಂತೆ ಮಾಡಬಲ್ಲದು ಎಂಬುದನ್ನು ನನ್ನ ಪತ್ನಿ ಅರ್ಥಮಾಡಿಕೊಳ್ಳುವಂತಿರಬೇಕು. ಜನರೊಂದಿಗೆ ಸಂಪರ್ಕವನ್ನು ಬೆಳಸಿಕೊಳ್ಳಲು ಅವಕಾಶ ನೀಡಬೇಕು.
ನನ್ನ ಪತ್ನಿಗಿಂತ ಹೆಚ್ಚು ಸೂಕ್ತವಾದ ವ್ಯಕ್ತಿ ದೊರೆತರೆ, ನನ್ನ ಪ್ರಸಕ್ತ ಪತ್ನಿಯನ್ನು ಬಿಟ್ಟು ಇನ್ನೊಂದು ಮದುವೆಯಾಗುವ ಸ್ವಾತಂತ್ರ್ಯವಿರಬೇಕು. ಸಹಜವಾಗಿ, ನಾನು ಹೊಸ ಜೀವನ ಬಯಸುತ್ತೇನೆ; ಆದ್ದರಿಂದ ನನ್ನ ಪತ್ನಿ ಮಕ್ಕಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡು ನನ್ನನ್ನು ಸ್ವತಂತ್ರನಾಗಿ ಬಿಡಬೇಕು.
ಕಾಲೇಜನ್ನು ಮುಗಿಸಿ ಉದ್ಯೋಗ ತೆಗೆದುಕೊಂಡಾಗ, ನನ್ನ ಪತ್ನಿ ಕೆಲಸವನ್ನು ಬಿಟ್ಟು ಮನೆಯಲ್ಲಿ ಉಳಿಯಬೇಕು; ಇನ್ನೂ ಹೆಚ್ಚು ಪರಿಪೂರ್ಣವಾಗಿ ಪತ್ನಿಯ ಜವಾಬ್ದಾರಿಗಳನ್ನು ನಿರ್ವಹಿಸಬೇಕು.
ಓಹ್ ದೇವರೇ! ಯಾರಿಗೆ ಬೇಡ ಪತ್ನಿ!!!!

ಅನುವಾದ - ಸುಧಾ ಜಿ

ಕಥೆ - ಕ್ಲೈಮ್ಯಾಕ್ಸ್


     ಚಿಕ್ಕ ವಯಸ್ಸಲ್ಲಿ ಹೊಟ್ಟೆ ತುಂಬಬೇಕು ಎಂಬ ಒಂದೆ ಒಂದು ಆಸೇನೆ ಇದ್ದದ್ದು. ಸ್ಕೂಲಿಗೆ ಹೋಗುವಾಗಲೂ ಕ್ಲಾಸ್ ಎಷ್ಟೊತ್ತಿಗೆ ಮುಗಿಯುತ್ತೆ ಎಂದು ಕಾಯುತ್ತ ಇದ್ದೆ...ಮನೆಯಲ್ಲಿ ಏನು ಮಾಡಿರುತ್ತಾರೊ...ಹೊಟ್ಟೆ ತುಂಬುವುದೊ ಎನ್ನುವ  ಪ್ರಶ್ನೆ ಬಿಟ್ಟರೆ ಏನು ಪಾಠ ಮಾಡಿದ್ದು ಅನ್ನೋದು ಮನಸ್ಸಿಗೆ ಆಳವಾಗಿ ಯಾವತ್ತು ಹೋಗಿರಲಿಲ್ಲ. ಸ್ವಲ್ಪ ಮುಂದಿನ ಕ್ಲಾಸ್ಗೆ ಬಂದ ಮೇಲೆ ಫ್ರೆಂಡ್ಸ್ ಜೊತೆ ಇಟ್ಟಿದ್ದ ಫ್ರೆಂಡ್ಸ್ಶಿಪ್ ಯಾವತ್ತು ಆಳವಾಗಿ ಮನಸ್ಸಲ್ಲಿ ಉಳಿದಿಲ್ಲ...ಅದಕ್ಕೆ ಕಾರಣ ಮನೆಯಲ್ಲಿ ಏನು ಇವತ್ತು ಎನ್ನುವ ಸ್ಥಿತಿ ಇತ್ತು. ಹೊಟ್ಟೆಗೆ ಏನಿದೆ ಎನ್ನುವುದಿಕ್ಕಿಂತ ಜಗಳ ಏನಿರುತ್ತೊ ಎನ್ನುವ ಆತಂಕ ಇದ್ದಿದ್ದು. ಕುಡಿದು ಬರುವ ಅಪ್ಪನಿಗೆ ಮನೆಯಲ್ಲಿ ಜಗಳಕ್ಕೆ ಏನೊ ಒಂದು ಕಾರಣ ಬೇಕಿರಲಿಲ್ಲ...ಬದಲು, ಏನೊ ಒಂದು ಕಾರಣ ಅವರೆ ಕಂಡುಹಿಡಿಯುತ್ತಿದ್ದರು. ನನ್ನ ವಯಸ್ಸಿನ ಮಕ್ಕಳೆಲ್ಲರು ಜೊತೆಯಾಗಿ ಸಂಜೆ ಸಮಯ ಆಟವಾಡುವಾಗಲೆಲ್ಲ ನಾನು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೆ. 
  ಎಷ್ಟೋ  ಸಲ ಸೀಮೆಎಣ್ಣೆ ದೀಪ ಸೀಮೆಎಣ್ಣೆ ಇಲ್ಲದೆ ಉರಿಯದೆ ಇರುವುದಕ್ಕಿಂತ ಹೆಚ್ಚು ಅಪ್ಪ ಅನ್ನೊನು ದೀಪ ಉರಿಯುವುದಕ್ಕೆ ಬಿಡದೆ ಇರುವುದಕ್ಕೆ...ಕ್ಲಾಸ್ಸಲ್ಲಿ ಹೋಂವರ್ಕ್ ಮಾಡದೆ ಹೊರಗಡೆ ನಿಲ್ಲುವಾಗಲೆಲ್ಲ...ಮನಸ್ಸಲ್ಲಿ ಎಲ್ಲ ಅನುಕೂಲವಿದ್ದರು ಬರೆಯದೆ ಬಂದ ಮಕ್ಕಳನ್ನು ನೋಡಿ ನಾನು ಸಮಾಧಾನಗೊಂಡೆ. ಆಗಲು ಅಪ್ಪನೆ ಎಲ್ಲಾದಕ್ಕೂ ಕಾರಣವೆಂದು ಮನಸ್ಸಿಗೆ ಬಂದಿಲ್ಲ. ಇನ್ನು ದೊಡ್ಡವಳಾದ ಮೇಲೆ ಕಾಲೇಜಿಗೆ ಸೇರಿದ ಮೇಲೆ ಮನೆಯಲ್ಲಿ ಕರೆಂಟ್ ಬಂದಾಗ ನನ್ನ ಖುಷಿ ಅಷ್ಟಿಷ್ಟಲ್ಲ ...ಮತ್ತೇನು ಮಾಡಲಾಗದಂತಾಗಿ ನಾನು ರೂಮಿನಲ್ಲಿ ಉರಿಯುವ ಬಲ್ಬನ್ನೆ ನೋಡುತ್ತಾ ನಾನು ಎಷ್ಟೋ  ಸಮಯ ಕುಳಿತ್ತಿರುತ್ತಿದ್ದೆ. ಥಾಮಸ್ ಎಡಿಸನ್ಗೂ  ಇಷ್ಟು ಖುಷಿ ಆಗಿತ್ತೊ ಇಲ್ವೋ ...?

       ಅಲ್ಲಿಂದ ನನ್ನ ಭಾವನೆಗಳು ಶುರು ಎಂದು ಗೊತ್ತಿಲ್ಲ....ಹತ್ತನೇ ಕ್ಲಾಸ್ಸಲ್ಲಿ 

ಫಿಸಿಕಲ್ ಟ್ರೈನಿಂಗ್ ಗೆ ಬಂದ ಸರ್ ಅನ್ನು ನೋಡಿ ಅನ್ನಿಸಿತು...ಅಟ್ ಲೀಸ್ಟ್ ದೊಡ್ಡವಳಾದ ಮೇಲೆ ಈ ಥರ ಒಂದು ಕೆಲಸ ಸಿಕ್ಕಬೇಕು ...PT ಇರುವಾಗ ಮಾತ್ರ ಮಕ್ಕಳಿಗೆ ಟ್ರೈನ್ನಿಂಗ್ ಸಾಕಲ್ವ ಎಂದು. PUC ಗೆ ಸೇರಿದ ಮೇಲೆ ಗ್ಯಾಲರಿ ಕ್ಲಾಸಲ್ಲಿ ಪಾಠ ಕೇಳುವಾಗ ಫಸ್ಟ್ ಟೈಂ ಅನ್ನಿಸಿತು...ಹೀಗೆ ಒಬ್ಬ ಲೆಕ್ಚರರ್ ಆಗಬೇಕು. ಗೌರವದಿಂದ ಮಕ್ಕಳಿಗೆ ಪಾಠ ಹೇಳಿಕೊಡುವ ಒಬ್ಬ ಒಳ್ಳೆಯ ಲೆಕ್ಚರರ್ ಆಗಬೇಕು. ಆಮೇಲೆ PUC ಮುಗಿಸಿ ಡಿಗ್ರಿಗೆ ಸೇರಿಕೊಂಡೆ. ಅದರ ಮಧ್ಯೆ  ಕಾಲೇಜಿನಲ್ಲಿ ಟ್ಯಾಲೆಂಟೆಡ್ ಸ್ಪೋರ್ಟ್ಸ್ ಅಥ್ಲೆಟಿಕ್ಸ್  ನ್ನು ಇಂಟರ್ ವ್ಯೂವ್ ಮಾಡುವುದಕ್ಕೆ ಬಂದ  ಜರ್ನಲಿಸ್ಟ್  ನೋಡಿದಲ್ಲೆ ಮೆಚ್ಚಿಕೊಂಡೆ, ಆದರೆ ಹೀಗೆ ಒಬ್ಬ ಜರ್ನಲಿಸ್ಟ್  ಆಗಬೇಕು ಎಂದು ಆಸೆ ಪಟ್ಟೆ. ಅದನ್ನು ದಾಟಿ ಒಬ್ಬ ಲಾಯರ್ ಆಗುವುದಕ್ಕು ಮನಸ್ಸಿನಲ್ಲಿ ಸಿದ್ಧ ಗೊಂಡೆ. ಏಕೆಂದರೆ ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಕೆಟ್ಟದಾಗಿ ಮಾತನಾಡುವ ಲೆಕ್ಚರರ್
 ಗೆ ಒಂದು ಪಾಠ ಕಲಿಸೋಕೆ ನ್ಯಾಯಾಲಯವೆ ಸರಿ ..ಅದಕ್ಕೆ ಒಬ್ಬ ಒಳ್ಳೆಯ ಲಾಯರ್ ಆಗಬೇಕು ಎಂದು ನಿರ್ಧರಿಸಿದೆ. ಬಸ್ಸಿನಲ್ಲಿ ಸೀಟಿಲ್ಲದೆ ನಿಲ್ಲುವಾಗಲೆಲ್ಲ ಕಿರಿಕಿರಿ ಮಾಡುವ ಯುವಕರನ್ನು ಹೆದರಿಸಲು ಒಬ್ಬ ಕರಾಟೆ ಮಾಸ್ಟರ್ ಆಗಬೇಕು ಎಂಬ ಭಾವನೆಯು ಹುಟ್ಟಿತು. ಬಸ್ಸಿನಲ್ಲಿ ಡೋರ್ ಹತ್ತಿರ  ನಿಲ್ಲುವ ಕಂಡಕ್ಟರ್................. ಅವನ ಹಿಂಸೆ ತಡೆಯಲು ಆಗದೆ ಇರುವಾಗ ಒಬ್ಬ ಪೋಲೀಸ್ ಇನ್ಸ್ ಪೆಕ್ಟರ್ ಆಗಲೇಬೇಕು...  ಆಮೇಲೆ ಅವನನ್ನು ಹಿಡಿದು ಚೆನ್ನಾಗಿ ಏಟು ಕೊಡಬೇಕು ಎನ್ನುವ ಆಸೆ ಇತ್ತು. ಮನೆಯಲ್ಲಿ ಅಷ್ಟು  ಕಷ್ಟ ಪಡುವ ಅಮ್ಮನ ಪಾತ್ರ ಮಾತ್ರ ನಾನು ಯಾವತ್ತು ಆಗಬೇಕು ಅನಿಸಲಿಲ್ಲ....ಆ ಪಾತ್ರ ಯಾರು ಕೊಟ್ಟರು ಬೇಡ ಎನ್ನುವ ಧೈರ್ಯವಾದರೂ ಇರಬೇಕು ಎಂದು ಮಾತ್ರ ಅಂದುಕೊಂಡೆ.
     ಆದರೆ ಕೊನೆಗೆ ಎಲ್ಲಾ ಆಸೆಗಳಿಗೂ ಸೇರಿ ಒಂದು ಮಾರ್ಗವನ್ನು ನಮ್ಮ ಅಪ್ಪ, ಅಮ್ಮ ಕಂಡರು...ಮದುವೆ ಆದಮೇಲೆ ಗೊತ್ತಾಯಿತು. ಲೆಕ್ಚರರ್ ಪಾಠ ಮಾಡಿದ್ದನ್ನು ಸರಿಯಾಗಿ ಗಮನಿಸಿ ಮುಂದೆ ಓದಿದ್ದರೆ ನಾನು ಆ ಸ್ಥಾನ  ಪಡೆಯಬಹುದಿತ್ತು. ಆದರೆ ನಾನು ಅವರು ಮಾಡಿದ ಪಾಠ ಕೇಳದೆ ಅವರ ಸ್ಟೈಲ್ ಮಾತ್ರ ಗಮನಿಸಿದ್ದು. ಲಾಯರ್ ಆಗಲು ನಿಯಮ ಕಲಿಯಲು ಟ್ರೈ ಮಾಡದೆ ನಿಯಮ ಸುಮ್ಮನೆ ಕೇಳುತ್ತ ಕುಳಿತುಬಿಟ್ಟೆ. ಸ್ಪೋರ್ಟ್ಸ್ ಸ್ಟಾರ್ ಆಗಲು exercise ಬೇಕು ಎನ್ನುವಾಗ..ಹೊಟ್ಟೆ  ಹಸಿಯುವಾಗ ಏನು ಮಾಡುವುದು ಎನ್ನುವುದೆ ಯೋಚನೆ ಮಾಡಿದೆ. ಪೋಲೀಸ್  ಆಗಿ ಒದೆಯಲು ಆಸೆ ಪಟ್ಟ ನನಗೆ ಕುಡಿದು ಬಂದು ಜಗಳ ಆಡುವ ಅಪ್ಪನಿಗೆ ಒಂದು ಬದಲು ಮಾತು ಹೇಳಲು ಆಗಿರಲಿಲ್ಲ. ಜರ್ನಲಿಸ್ಟ್ ಎನ್ನುವ ಆಸೆ ಈಗಲು ಮನಸ್ಸಿನಲ್ಲಿದೆ...ಮನಸ್ಸಿನಲ್ಲಿ ಪ್ರಶ್ನೆಗೆ ಉತ್ತರ ನಾನೆ ಮಾಡುತ್ತ ಇದ್ದೇನೆ. 
      ಮಗುವೊಂದು ಆದ ಮೇಲೆ ನಾನು ಏನು ಆಗಬೇಕು ಎಂಬ ಭಾವನೆ ಇತ್ತೋ ಅದೆಲ್ಲ ಆಗೋಕೆ ಆಯ್ತು. ಮಗುವಿಗೆ ಒಬ್ಬ ಒಳ್ಳೆ ಟೀಚರ್ ಆದೆ, ಅವಳು ತಪ್ಪು ಮಾಡಿದಾಗ ಒಳ್ಳೆ ನಿಯಮ ಹೇಳಿ ಲಾಯರ್ ಆದೆ, ಶಿಕ್ಷೆ ಕೊಡಬೇಕಾದ ಸಮಯದಲ್ಲಿ ಒಬ್ಬ ಒಳ್ಳೆ ಪೋಲೀಸ್ ಆದೆ, ಅವಳ ಜೊತೆ ವಾದ ಪ್ರತಿವಾದಗಳಲ್ಲಿ ಒಬ್ಬ ಜರ್ನಲಿಸ್ಟ್ ಆದೆ..ಅವಳ ಜೊತೆ ಆಟವಾಡುವಾಗಲೆಲ್ಲ ಒಬ್ಬ ಸ್ಪೋರ್ಟ್ ಸ್ಟಾರ್ ಥರ ತೋರಿಸಿದೆ. ಏನೆಲ್ಲ ಆಗಬೇಕು ಎಂದು ಅಂದುಕೊಂಡೆ ಮಗಳ ಮನಸ್ಸಿನ ಒಂದೆ ಒಂದು ತೀರ್ಮಾನದಲ್ಲಿ ಎಷ್ಡು ಸುಲಭವಾಗಿ ನಮ್ಮ ತಂದೆ ತಾಯಿ  ಮಾರ್ಗ ಕಂಡು ಹಿಡಿದಿದ್ದರು..ಮದುವೆ..! ಆಹಾ! ಎಂತ ಒಂದು ಮಾರ್ಗ ಅಲ್ವ?
   ಜೀವನದಲ್ಲಿ ದೇವರು ಆದರೆ ಏನೆಲ್ಲಾ ರೂಪಗಳಿತ್ತು. ಅಯ್ಯಪ್ಪ,..ಕಾಳಿ.. ಮುರುಗ..ಲಕ್ಷ್ಮಿ..ಜೀಸಸ್...ಎಲ್ಲವನ್ನು ನಾನು ಪರಿಪಾಲಿಸಿದೆ ಎಂದು ಹೇಳಿದರೆ ತಪ್ಪಾಗುತ್ತದೆ...ಎಲ್ಲವನ್ನು ನನ್ನ ಕೈಯಲ್ಲಿ ಪರಿಪಾಲಿಸಿಕೊಂಡರು ನಮ್ಮ ಅಪ್ಪ ಅಮ್ಮ. ಈಗ ನನಗೆ ಗೊತ್ತಾಯಿತು ಇದೆಲ್ಲಾ ಎಲ್ಲಾ ದೇವರು, ದೇವರು ಎನ್ನುವ ಪದಕ್ಕೇನೆ ತುಂಬಾ ಅರ್ಥಗಳಿವೆ, ಬರಿ ಕಲ್ಲಲ್ಲಿ..ಮಣ್ಣಲ್ಲಿ..ಮರದಲ್ಲಿ ಮಾಡಿರುವ ಗೊಂಬೆಗಳಲ್ಲ ದೇವರು.


     ನಮ್ಮ ಮನಸ್ಸಿಗೆ ತುಂಬಾ ಬೇಜಾರಾಗಿದ್ದಾಗ ಒಬ್ಬ ಒಳ್ಳೆಯ ಸ್ನೇಹಿತರು ನಮಗೆ ವಿಷಯಗಳನ್ನು ತಾಳ್ಮೆಯಿಂದ ಕೇಳಿ ಅದಕ್ಕೆ ಒಂದು ಪರಿಹಾರ ಕೊಟ್ಟು ನಮ್ಮ ಮನಸಿಗೆ  ಶಾಂತಿಯನ್ನು ಕೊಡುತಾರಲ್ವ...ಅವರೆ  ದೇವರು. ಆ ಮನಸ್ಸೆ ದೇವರಗುಡಿ. ಹೊಟ್ಟೆ  ಹಸಿಯುತ್ತಿರುವ ಒಬ್ಬರಿಗೆ ಒಂದೊತ್ತು ಊಟ ಹಾಕುವ ಒಬ್ಬರು...ಒಂದು ಮಗುವಿಗೆ ಓದುವುದು ಇಷ್ಟವಿದೆ..ಓದಿಸಲು ಕಷ್ಟ ಎಂದು ಹೇಳುವ ಕುಟುಂಬಕ್ಕೆ ಸಹಾಯ ಮಾಡುವರು....ಸಮಾಜದಲ್ಲಿ ಕೆಟ್ಟದ್ದನ್ನು ಹೋಗಲಾಡಿಸಲು ಜನರನ್ನು ಕಷ್ಟಪಟ್ಟು ಸೇರಿಸಿ ಹೋರಾಟ ಮಾಡಿ ಪರಿಹಾರ  ಕಾಣುವವರು, ಒಬ್ಬ  ಹುಡುಗಿಗೆ ಮದುವೆ ಮಾಡಿಕೊಳ್ಳಲು  ಧನಸಹಾಯ ಮಾಡುವರು... ಅನಾರೋಗ್ಯಕ್ಕೆ ದುಡ್ಡಿಲ್ಲದೆ ಚಿಕಿತ್ಸೆ ಮಾಡಿಸಿಕೊಳ್ಳಲಾಗದೆ ಇರುವವರಿಗೆ ಸಹಾಯ ಮಾಡಿ ಅವರ ಜೀವನ ಕಾಪಾಡಿದವರು...ಫೀಸ್ ಕೊಡಲು.ಯುನಿಫಾಮ್ ಹೊಲಿಸಲು..ಪುಸ್ತಕ  ತೆಗೆದುಕೊಳ್ಳುಲು..ಒಂದೊತ್ತು ಊಟ ಹಾಕುವವರು..ರೋಡಿನಲ್ಲಿ ಬಿದ್ದಿರುವ  ಭಿಕ್ಷುಕನನ್ನು ಒಂದು ಆಶ್ರಮಕ್ಕೆ  ಸೇರಿಸುವರು... ಇವರೆಲ್ಲರಲ್ಲೂ ನಾನು ದೇವರನ್ನು ಕಂಡೆ. ಇಂತಹ ದೇವರಾಗಿ ನನ್ನ ಮಗಳು ಬೆಳೆಯಲಿ ಎಂಬುದು ಈಗಿನ ನನ್ನ ಆಸೆ...
     ಏನು ಆಗೋದಿಕ್ಕೆ ಆಗಿಲ್ಲ, ಅದರೂ ನನ್ನ ಜೀವನ ಇಷ್ಡರಲ್ಲೇ ಬಂತು. ಇನ್ನು ಮುಂದೆ ವಿಶಾಲವಾಗಿದೆ ದಾರಿ ....ಆಸೆಗಳು ಇನ್ನು ಬಿಟ್ಟಿಲ್ಲ....ಅಪ್ಪ ಅಮ್ಮನ ಬಳಿ ಏನೆಂದು ಗೊತ್ತಾಗದೆ ನೋಡಿಕೊಳ್ಳಲು ಆಗದೆ ದಾರಿಯಲ್ಲಿ ಎಲ್ಲಾ ಅವರಿಗೆ ಎಂದು ನೋಡಿಕೊಳ್ಳುವ ವೃದ್ಧಾಶ್ರಮದಲ್ಲಿ ... ಒಬ್ಬ ಮಗಳಾಗಿ ... ಒಬ್ಬ ತ್ಯಾಗಿಯಾಗಿ... ಅವರಿಗೆಲ್ಲಾ ಸೇವೆ ಮಾಡಬೇಕು ಎಂದು ನನ್ನ ಕೊನೆ ಆಸೆ. ಇದಕ್ಕಾದರು ನನ್ನ ಮನಸ್ಸನ್ನು ಧೈರ್ಯವಾಗಿರಬೇಕು ಎಂದು ನನ್ನ ಅನಿಸಿಕೆ. ಇನ್ನು ಇದನ್ನು ಸಾಧಿಸಲು  ನನಗೆ ಆಗಿಲ್ಲ ಅಂದರೆ ನೀವೆ ಹೇಳಿ ಯಾವ ರೀತಿಯಲ್ಲಿ ಈ  ಕಥೆಯನ್ನು ಮುಗಿಸಲಿ...ಒಬ್ಬ ಡೈರೆಕ್ಟರ್  ಆಗಿ ಒಂದು ಕಥೆ ಬರೆಯಲು ಕುಳಿತ್ತಿದ್ದ ನನಗೆ ನನ್ನ ಸಿನಿಮಕ್ಕೆ ಕ್ಲೈಮ್ಯಾಕ್ಸ್ ಏನಾಗಿರಬೇಕೆಂದು ವೀಕ್ಷಕರಿಗೆ ಕೊಟ್ಟಿರುತ್ತೇನೆ. ನೀವೆ ತೀರ್ಮಾನ ಮಾಡಿ...ಆಸೆಗಳಿಗೆ ಕೊನೆಯೆಲ್ಲಿದೆ...ಯಾವುದು ಆಗದೆ ಟ್ರ್ಯಾಜಿಡಿನಾ... ಇಲ್ಲಾ...ಮೊಮ್ಮಕ್ಕಳನ್ನು ನೋಡುತ್ತಿರುವ ಅಜ್ಜಿಯಾಗಿ ಕಾಮಿಡಿನೊ...ಅದು ಅಲ್ಲದೆ ಒಂದು ಅವಾರ್ಡ್ ಮೂವಿ ಥರ . . ಇನ್ನು ಯಾರಿಗೂ ಈ ಮನಸು ಗೊತ್ತಾಗದೆ............ಆ ಥರ ಒಂದು ಕ್ಲೈಮ್ಯಾಕ್ಸ್ ಕೊಡುವುದಾ? ಪ್ರೇಕ್ಷಕರಾದ ನಿಮಗೆ ಬಿಟ್ಟಿದ್ದೀನಿ...

- ಶೀಬಾ        


ಕಲ್ಪನೆ -


{ಚಿತ್ರವನ್ನು ನೋಡಿ ಕಲ್ಪನೆಯನ್ನು ಹರಿಬಿಟ್ಟಿದ್ದಾರೆ)
ಏನೂ ಇಲ್ಲ ಖಾಲಿಕೈ

           ಏನೂ ಇಲ್ಲ!  ದಿನಾ ಮುಸುರೆ ತೊಳೆಯೋ ಹೊತ್ತಿಗೆ ಮೂಗ್ಜೀವುಗ್ಳು ಮುಂದೆ ಬಂದ್ ನಿಂತ್ಕತವೆ ಏನ್ ಕೊಡ್ಲಿ ನಂಗೆ ಇಲ್ದಂಗಾಗೈತೆ. ಮಳೆ ಓಗಿ ಮುಗಿಲ್ಸೇರ್ತು ಗಂಗಮ್ಮೋಗಿ ಪಾತಾಳ ಸೇರವ್ಳೆ ನಾವೇನ್ತಿನ್ನಾದು ಮೂಗ್ಜೀವುಗಳ್ಗೇನು ಕೊಡಾದು.

ಮದ್ವೆ ಆಗಿ ನಾನೀ ಊರ್ಗ್ಬಂದಾಗ ಜಯಮಂಗ್ಳಿ ನದಿ ಜೀವ ನದಿ,ಬರ್ತಾ ಬರ್ತಾ ಮಳೇನೇ ಇಲ್ದಂಗಾಯ್ತು,ನದಿ ಒಣಗೋಯ್ತು ಈಗ ನೀರೂ ಇಲ್ಲ. ಮಳ್ಳೂ ಇಲ್ಲ,ಜಾಲಿ ವನ ಆಗೈತೆ.

             
ನದಿ ಹರಿಯವಾಗ ನಮ್ಮಡ್ಲೆಲ್ಲ ಬಂಗಾರದ ವನ ಆಗಿದ್ವು ಈಗೆಲ್ಲ ಬೆಂಗಾಡಾಗೈತೆ,

ನೀರ್ಕಮ್ಮೀ ಆಯ್ತೂಂತ ಬೋರ್ ಆಕ್ಸಿದ್ವಿ ಎಲ್ಡು ದಿನ ಬಂದು ನಿಂತೋದ್ವು, 

        ಸಾಲ ಆಯ್ತು ,ಅದನ್ನ ತೀರ್ಸಕೆ ಹುಡುಗ್ರು ಬೆಂಗಳೂರಗೆ  ಗರ್ಮೆಂಟ್ಸ್ ಓಗ್ತಾವೆ, ಸಣ್ಣ ಸಣ್ಣ ಕೂಲಿ ಕೆಲ್ಸ ಮಾಡ್ಕಂಡು ಇಲ್ಲೇ ಇದೀನಿ. 


ಬೆಳಿಗ್ಗೆ ಒಂದು ಮುದ್ದೆ ಮಾಡ್ಕಂಡು ಉಂಡು ಮುಸುರೆ ತೊಳಿಯೋವೊತ್ಗೆ  ಮೂಗ್ಜೀವುಗ್ಳು ಬಂದ್ ನಿಂತಕತಾವೆ ಏನು ಕೊಡ್ಲಿ ,ಕಳ್ಳು ಚುರುಕ್ ಅಂತೈತೆ.

    -    ವರದರಾಜು ಬ್ಯಾಲ್ಯ 


ಎಲ್ಲಿ ನಮ್ ತುತ್ತು
ಅಯ್ಯೋ ಅಮ್ಮ
ಎಲ್ಲಿ ನಮ್ ತುತ್ತು
ಖಾಲಿಪಾತ್ರೆ ತೊಳೆಯತ್ತಿರುವೆ ನೀ
ನಮ್ ಹೊಟ್ಟೆಗೆ ಇನ್ನೇನಿದೆ
ನಿನ್ ದಯೆ ಎಲ್ಲಿ ಅಮ್ಮ?
ಅಯ್ಯೋ ಕೊಟ್ಟು, ಪುಟ್ಟಿ, ನನ್ ಕುಟ್ಟಿ
ಎಲ್ಲಿದೆ ತುತ್ತು
ಏನೂ ಇಲ್ಲ ಈ ಅಮ್ಮನಿಗೂ
ಮನೆಯಲ್ಲಿ ನೆಂಟರು ಜಾಸ್ತಿ ಎಂದು
ನಂಗೂ ಕೊಟ್ಟಿಲ್ಲ ಒಂತುತ್ತೂ
ಬೇಸರವ್ಯಾಕೆ ನನ್ ಮಕ್ಕಳಾ
ಈ ಹಸಿವು ನಮಗೇನೂ ಹೊಸದಾ?
ಕುಡಿಯೋಣ ಇವತ್ತು ಬರೀ ನೀರು
ಕಣ್ಣೀರಿಗಿಂತ ಅದು ತಾನೇ ಒಳ್ಳೇದು
ಕಾಣುವ ನಾವೂ ಒಂದು ಹೊಸ ಕನಸು
ಒಂದೊತ್ತಿನ ಭರ್ಜರಿ ಊಟ!
   - ಶೀಬಾ

ಅನುವಾದ-ಪರಿಚಯ: "ಶತ್ರು (ಫೆಲಿಕ್ಸ್ ಗ್ರೀನ್) ಅಧ್ಯಾಯ - I "

(ಈ ಲೇಖನದ ಉದ್ದೇಶವಿರುವುದು ಇಂಗ್ಲಿಷ್ನಲ್ಲಿರುವ ಅದ್ಭುತವಾದ ಪುಸ್ತಕಗಳ ಕೆಲವು ಭಾಗಗಳ ಅನುವಾದವನ್ನು ಹಾಕುವುದರ ಮೂಲಕ ಆ ಪುಸ್ತಕವನ್ನು ಓದಲು, ಅನುವಾದಿಸಲು ಆಸಕ್ತಿ ಮೂಡಿಸುವುದು)

ಶತ್ರು (ಫೆಲಿಕ್ಸ್ ಗ್ರೀನ್ ರವರ "ದಿ ಎನಿಮಿ" ಪುಸ್ತಕದ ಅನುವಾದ) 
("The Enemy" by Felix Greene) 

ಅಧ್ಯಾಯ - I 

ದೇವರೇ ರಾಜನನ್ನು ರಕ್ಷಿಸು 

ಮುಂಚೆ ಬ್ರಿಟಿಷ್ ಶಾಲೆಗಳಲ್ಲಿ , ನನ್ನ ಬಾಲ್ಯದಲ್ಲಿಯೂ ಸಹ, ಪ್ರತಿ ತರಗತಿಯಲ್ಲಿ ಗೋಡೆಯ ಮೇಲೆ ಒಂದು ದೊಡ್ಡ ವಿಶ್ವಭೂಪಟವನ್ನು ತೂಗುಹಾಕುವುದು ಒಂದು ಸಂಪ್ರದಾಯವಾಗಿತ್ತು. ಕೆಂಪು ಹೆಚ್ಚು ಕಾಣಿಸುತ್ತಿದ್ದ ಬಣ್ಣ. ಇದು ರಷ್ಯಾ ಕ್ರಾಂತಿಗೆ ಮುಂಚೆ. ಆಗಿನ್ನೂ ಕೆಂಪನ್ನು ಕಮ್ಯೂನಿಸ್ಟರು ತಮ್ಮದಾಗಿಸಿಕೊಂಡಿರಲಿಲ್ಲ. ಭಾರತ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಆಫ್ರಿಕಾ ಖಂಡದ ಬೃಹತ್ ಪ್ರದೇಶಗಳು - ಕೈರೋನಿಂದ ಕೇಪ್ ಆಫ್ ಗುಡ್ ಹೋಪ್ ವರೆಗೆ; ಸಮಾವ್, ಬಮಾ೯, ಮಲಯಾ, ಹಾಂಗ್ ಕಾಂಗ್, ವೆಸ್ಟ್ ಇಂಡೀಸ್ , ಸಿಲೋನ್ - ಎಲ್ಲವನ್ನೂ ಕೆಂಪು ಬಣ್ಣದಲ್ಲಿ ಗುರುತಿಸಲಾಗಿತ್ತು. ಮತ್ತು ಪ್ರತಿಯೊಂದು ಸಮುದ್ರದಲ್ಲಿ ನೂರಾರು ದ್ವೀಪಗಳು, ಬಂದರುಗಳ ಕೆಂಪಾಗಿದ್ದವು. ಈ ಭೂಪಟಗಳಲ್ಲಿ ಬ್ರಿಟಿಷ್ ಯುವಕರ ಕಲಿಕೆಗಾಗಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತಾರವನ್ನು ತೋರಿಸಲಾಗಿತ್ತು. ಭೂಮಿಯ 1/4 ಭಾಗ, 1/5 ಭಾಗದಷ್ಟು ಜನತೆ ನಮ್ಮದೇ ಆದ ಪುಟ್ಟ ದ್ವೀಪದ ನಿಯಂತ್ರಣದಲ್ಲಿತ್ತು. ಅದು ನಮಗೆ ನಾವು ಬಹಳ ಮೇಲ್ಮಟ್ಟದವರು ಎಂಬ ಭಾವನೆ ಮೂಡಿಸುತ್ತಿತ್ತು. ಈ ವಿಶಾಲವಾದ ಜನ ಸಮೂಹ ,ಎಲ್ಲಾ ಜನಾಂಗ ಮತ್ತು ವರ್ಣದವರು ಅವರ ಇಚ್ಛೆಯ ಪ್ರಕಾರವೆ ನಮ್ಮಡಿಯಲ್ಲಿ ಇದ್ದಾರೆ ಎಂದು ನಾವು ಭಾವಿಸಿದ್ದೆವು. ಇನ್ಯಾರ ಅಡಿಯಲ್ಲಿ ಅವರಿರಲು ಸಾಧ್ಯವೆಂದು ಭಾವಿಸಿದ್ದೆವು. ನಾವು ಬ್ರಿಟಿಷರು ನ್ಯಾಯಯುತರು, ನಮ್ಮ ಆಳ್ವಿಕೆ ದಯೆಯಿಂದ ಕೂಡಿದೆ, ಸಾಮ್ರಾಜ್ಯವನ್ನು ನಿರ್ವಹಿಸಲು ನಾವು ಕಳುಹಿಸಿದ ಯುವಕರು ಕಷ್ಟಜೀವಿಗಳು, ಕಡಿಮೆ ಹಣದಲ್ಲಿ ಬದುಕುತ್ತಿದ್ದರು, ಭ್ರಷ್ಟರಾಗದವರು, ಸ್ವಸಾಮರ್ಥ್ಯವುಳ್ಳವರು; ನಾವು ಆ ಹಿಂದುಳಿದ ಜನರಿಗೆ ಒಳ್ಳೆಯ ಸರ್ಕಾರವೆಂದರೆ ಏನೆಂಬುದನ್ನು ತೋರಿಸುತ್ತಿಲ್ಲವೆ? . ಅವರನ್ನು ಅನಂತವಾದ ಕ್ರಿಶ್ಚಿಯನ್ ನಾಗರಿಕತೆಯತ್ತ ಮುನ್ನಡೆಸುತ್ತಲ್ಲವೆ ? ಅವರಿಗೆ ಮಕ್ಕಳ ಬಗ್ಗೆ. ದೇವರ ತಾಳ್ಮೆಯ ಬಗ್ಗೆ ಕಲಿಸುತ್ತಿಲ್ಲವೆ? ಯುವಕರು ಪ್ಯಾಂಟ್ ಗಳನ್ನು ಧರಿಸಬೇಕೆಂದು ಮತ್ತು ಯುವತಿಯರು ತಮ್ಮ ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳಬೇಕೆಂಬದನ್ನು ದೇವರ ಯೋಜನೆಯ ಭಾಗವೆಂದು ಕಲಿಸಿಲ್ಲವೆ? ಉದಾರತೆಯಿಂದ ನಾವು ಅವರಿಗೆ ಶಾಲೆಯನ್ನು ತೆಗೆದು ಇಂಗ್ಲಿಷ್ ನ್ನು ಕಲಿಸುತ್ತಿಲ್ಲವೆ ಮತ್ತು ಶೇಕ್ಸ್‌ಪಿಯರ್ ನ್ನು ಓದುತ್ತ ತಮ್ಮ ಮನಸ್ಸುಗಳನ್ನು ವಿಶಾಲಗೊಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲವೆ? ಅವರ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಕಟ್ಟಸಿಕೊಟ್ಟಿಲ್ಲವೆ? ಉತ್ತಮ ಬೆಳೆಗಳನ್ನು ಬೆಳೆಯುವುದು ಹೇಗೆಂದು ಅವರು ಕಲಿತುಕೊಳ್ಳಲೆಂದು ಕೃಷಿ ಕಾಲೇಜುಗಳನ್ನು ತೆರೆದಿದ್ದೇವೆ. ಅವರು ನಮ್ಮನ್ನು ಗೌರವಿಸುತ್ತಾರೆ ಎನ್ನುವುದರಲ್ಲಿ ಆಶ್ಚರ್ಯವೇನಿಲ್ಲ ಎಂದುಕೊಳ್ಳುತ್ತಿದ್ದೆವು. ಈ ಭೂಪಟಗಳನ್ನು ನೋಡುತ್ತ, ವಿಶ್ವದಾದ್ಯಂತ ಹರಡಿರುವ ಎಲ್ಲ ಜನ ನಮ್ಮ ಧ್ವಜಕ್ಕೆ ವಂದಿಸುತ್ತಾರೆ ಮತ್ತು 'ದೇವರೆ ನಮ್ಮ ರಾಜನನ್ನು ರಕ್ಷಿಸು' ಎಂದು ಹಾಡುತ್ತಾರೆ, ಎಂಬುದನ್ನು ಯೋಚಿಸುತ್ತ ಪುಳಕಗೊಳ್ಳುತ್ತಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ ಈ ಶ್ಲಾಘನೀಯ ವ್ಯವಸ್ಥೆ ಅನಂತವಾಗಿ ಮುಂದುವರಿಯುವುದು ಅನಿವಾರ್ಯ, ಏಕೆಂದರೆ ನಾವು ಬ್ರಿಟಿಷರು ಇತರರಿಗಿಂತ ಬುದ್ಧಿವಂತರು, ಸಾಮ್ರಾಜ್ಯವನ್ನು ನಡೆಸಲು ಯತ್ನಿಸಿ ಸೋತಂತಹ ರೋಮನ್ನರು ಮತ್ತು ಸ್ಪೇನಿಯಾರ್ಡ್ ಗಳಿಗಿಂತ ಹೆಚ್ಚು ಮಾನವೀಯತೆ ಉಳ್ಳವರು. ಜೊತೆಗೆ ನಾವು ವಿಶ್ವದ ಅತ್ಯಂತ ಶ್ರೀಮಂತ ಜನ, ಅತಿ ಬಲಿಷ್ಠವಾದ ಸೈನ್ಯವುಳ್ಳವರು. ಆದ್ದರಿಂದ ಎಲ್ಲಾ ಕಾಲಕ್ಕೂ ನಮ್ಮ ಸಾಮ್ರಾಜ್ಯ ಹೀಗೆಯೆ ಮುಂದುವರಿಯುತ್ತದೆ. ಇವೆಲ್ಲವೂ ನಮ್ಮ ಯುವ ಮನಸ್ಸುಗಳಲ್ಲಿ ಮತ್ತು ಬಹುತೇಕ ಬ್ರಿಟಿಷ್ ಜನತೆಯಲ್ಲಿ ಇದ್ದಂತಹ ಮುಗ್ಧವಾದ ವಿಶ್ವದ ಚಿತ್ರವಾಗಿತ್ತು. ಯಾರೂ ಸಹ ಶೋಷಣೆ, ದೋಚುವಿಕೆ ಅಥವಾ ಒತ್ತಾಯದ ಶ್ರಮ ಎಂಬ ಪದಗಳನ್ನು ಹೇಳಲಿಲ್ಲ. ನಾವು ಆಳುತ್ತಿದ್ದ ಜನತೆಗೆ ಕೊಟ್ಟಿದ್ದಕ್ಕೆಲ್ಲ ಅವರು ಹಣ ಪಾವತಿ ಮಾಡಿದರೆಂದು ಶಾಲೆಗಳಲ್ಲಿ ಯಾರು ಹೇಳಲಿಲ್ಲ. ನಾವು ಹೆಮ್ಮೆ ಪಡುತ್ತಿದ್ದ ವೈದ್ಯಕೀಯ ಸೇವೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನತೆಗೆ ಒಬ್ಬರೆ ಒಬ್ಬ ವೈದ್ಯರನ್ನ ನೀಡಿದ್ದೆವು. (ನೈಜಿರಿಯಾದಲ್ಲಿ ಮೂವತ್ತು ಸಾವಿರ ಜನರಿಗೆ ಒಬ್ಬ ವೈದ್ಯರು) ಸುಧಾರಿತ ಕೃಷಿ ವಿಧಾನದಲ್ಲಿ ಹೆಚ್ಚಾದಂತಹ ಲಾಭಗಳು, ಜಮೀನುದಾರರಿಗೆ ಉಪಯೋಗವಾಯಿತೆ ಹೊರತು ಅಲ್ಲಿದ್ದವರಿಗಲ್ಲ. ಆಫ್ರಿಕಾದ ವಜ್ರದ ಗಣಿಗಳಲ್ಲಿ ಅಥವಾ ಭಾರತದ ಹತ್ತಿ ಹೊಲಗಳಲ್ಲಿ ದುಡಿಯುವ ಪರಿಸ್ಥಿತಿ ಹೇಗಿತ್ತೆಂಬುದನ್ನು ಯಾರು ನಮಗೆ ಹೇಳಲಿಲ್ಲ. ಅಲ್ಲಿನ ಶಿಶುಮರಣದ ಸಂಖ್ಯೆ ಅಥವಾ ಜೀವಿತಾವಧಿಯ ಬಗ್ಗೆ ಯಾರೂ ಮಾತನಾಡಲಿಲ್ಲ. ಸಾಮ್ರಾಜ್ಯವನ್ನು ನಡೆಸಲು ಅವಶ್ಯವಾದ ವೆಚ್ಚ ಮತ್ತು ಅದಕ್ಕೆ ಬೇಕಾಗುವ ಅಪಾರವಾದ ಶ್ರಮ ಇದರ ಬಗ್ಗೆ ಸಾಕಷ್ಟು ಕೇಳಿದ್ದೆವು ( ನಾವು ಅದನ್ನು ' ಬಿಳಿ ಮನುಷ್ಯನ ಹೊರೆ' ಎಂದು ಕರೆದೆವು) ಆದರೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದ ಬಜೆಟ್ ವೆಚ್ಚಕ್ಕಿಂತ ಹೆಚ್ಚಾಗಿ ಮಿಲಿಯಾಂತರ ಪೌಂಡ್ ಗಳು ಪ್ರತಿ ವರ್ಷ ಬಡ್ಡಿ ಮತ್ತು ಲಾಭದ ರೂಪದಲ್ಲಿ ಬ್ರಿಟಿಷ್ ಬಂಡವಾಳಿಗರಿಗೆ ವಾಪಸ್ಸು ಬರುತ್ತಿದ್ದದ್ದರ ಬಗ್ಗೆ ನಾವು ಒಂದೂ ಪದವನ್ನು ಕೇಳಿರಲಿಲ್ಲ; ಅಥವಾ ಹೂಡಿಕೆಗೆ ನೆರವಾದ ಬ್ಯಾಂಕರ್ ಗಳಿಗೆ ದೊರೆತ ಮಿಲಿಯನ್ ಗಳಾಗಲಿ ಅಥವ ವಿಮೆ ಮತ್ತು ಶಿಪ್ಪಿಂಗ್ ಕಂಪನಿಗಳಿಗೆ ದೊರೆತ ಮಿಲಿಯನ್ ಗಳ ಬಗ್ಗೆಯಾಗಲಿ ಅಥವಾ ವಸಾಹತಿನ ಹಣದಿಂದ ಬ್ರಿಟಿಷರಿಗೆ ಕೊಟ್ಟ ಸಂಬಳಗಳು ಮತ್ತು ಪಿಂಚಣಿಗಳ ಬಗ್ಗೆಯಾಗಲಿ ಒಂದು ಪದವನ್ನೂ ನಾವು ಕೇಳಿರಲಿಲ್ಲ.ಸಾಮ್ರಾಜ್ಯದ ಬಹುತೇಕ ವೆಚ್ಚವನ್ನು ವಸಾಹತಿನ ಜನತೆ ತಾವೆ ಕೊಡುತ್ತಿದ್ದರೆಂದು ಯಾರು ನಮಗೆ ವಿವರಿಸಲಿಲ್ಲ. ಅವರಿಗೆ ಕೊಟ್ಟಂತಹ ಸೇವೆಗಳಿಗೆ ಬ್ರಿಟಿಷ್ ಜನತೆ ತಮ್ಮ ತೆರಿಗೆಯಿಂದೇನು ಕೊಡಲಿಲ್ಲ.ಆದರೆ ಅಲ್ಲಿಂದ ದೊರೆಯುತ್ತಿದ್ದ ಅಸಾಧಾರಣವಾದ ಹಣಕಾಸಿನ ಲಾಭವನ್ನು ಕೈಬೆರಳೆನಿಸುವಷ್ಟು ವ್ಯಕ್ತಿಗಳು ಪಡೆಯುತ್ತಿದ್ದರು. ಸಾಮ್ರಾಜ್ಯವನ್ನು ನಡೆಸುವ ವ್ಯಕ್ತಿ ಗಳು ದಕ್ಷರಾಗಿರಬಾರದು ಮತ್ತು ಅವರು ತಮ್ಮನ್ನು ತಾವೆ ಹೆಚ್ಚು ಪ್ರಶ್ನೆಗಳನ್ನು ಕೇಳಿಕೊಳ್ಳಬಾರದು. ವಾಸ್ತವತೆಗಳಿಂದ ಅವರಲ್ಲಿ ದೂರವಿರುವ ಸಮರ್ಥನೀಯ ವಾಕ್ಚಾತುರ್ಯವಿರಬೇಕು.ಮಾನವತೆಗೆ ಒಳಿತನ್ನು ಮಾಡುತ್ತಿದ್ದೇವೆ ಎಂಬ ನಂಬಿಕೆಯಿರಬೇಕು. ಆದರೆ ಯಾವ ಸಮರ್ಥನೆಗಳು ಬೇಡದಿರುವಾಗ ಅದರ ಬಗ್ಗೆ ಚಿಂತಿಸುವುದೇಕೆ? ಪದಗಳು ಮತ್ತು ವಿಚಾರಗಳು ಮಧ್ಯಪ್ರವೇಶಿಸಿ ಗೊಂದಲವನ್ನುಂಟು ಮಾಡುತ್ತವೆ. ಅಲ್ಲಿ ಆ ಭೂಪಟಗಳು ಪದಗಳಿಗಿಂತ ವಾಸ್ತವವಾದುದು. ಬ್ರಿಟಿಷ್ ಸಾಮ್ರಾಜ್ಯ ಗಿಬ್ರಾಲ್ಟರ್ ನಂತೆ ಘನವಾಗಿತ್ತು, ಶಾಶ್ವತವಾಗಿತ್ತು ಈಗ ಬ್ರಿಟಿಷ್ ತರಗತಿಗಳಲ್ಲಿ ಈ ಭೂಪಟಗಳಿಲ್ಲ ಸಾಮ್ರಾಜ್ಯದ ಹಳೆಯ ವಿಧಾನಗಳು ಬದಲಾಗಿವೆ ಬ್ರಿಟಿಷ್ ಆಳುವ ವರ್ಗದ ಇಂತಹ ನಿಯಂತ್ರಣ ಹೆಚ್ಚು ಪರೋಕ್ಷವಾಗಿದೆ ಮತ್ತು ಕಡಿಮೆ ಕಾಣಿಸುತ್ತದೆ ಹೊಸದೊಂದು ಸಾಮ್ರಾಜ್ಯ - ಅಮೇರಿಕನ್ ಸಾಮ್ರಾಜ್ಯ - ಬ್ರಿಟಿಷ್ ಸಾಮ್ರಾಜ್ಯದ ಬದಲಿಗೆ ಮುಂಚೂಣಿಯಲ್ಲಿರುವ ಸಾಮ್ರಾಜ್ಯಶಾಹಿ ಶಕ್ತಿಯಾಗಿದೆ. ತನ್ನ ಅಧಿಕಾರವನ್ನು ವಿಭಿನ್ನ ರೀತಿಯ ರಚನೆಯ ಮೂಲಕ ಚಲಾಯಿಸುತ್ತ, ಅದೆ ಉದ್ದೇಶಕ್ಕಾಗಿ ಶ್ರಮಿಸುತ್ತ, ಅಮೆರಿಕ ಸಾಮ್ರಾಜ್ಯ ಇಂದು ಜಗತ್ತನ್ನು ನಡೆಸುತ್ತಿದೆ. ಬ್ರಿಟಿಷ್ ಸಾಮ್ರಾಜ್ಯಕ್ಕಿಂತ ಮಿಲಿಟರಿಯುಕ್ತವಾಗಿ ಮತ್ತು ಕೈಗಾರಿಕಾವಾಗಿ ಹೆಚ್ಚು ಬಲಿಷ್ಟವಾದರೂ ಹೊಸ ಸಾಮ್ರಾಜ್ಯದ ಮುಂದೆ ಹೆಚ್ಚು ಸವಾಲಿದೆ, ಹೆಚ್ಚಿನ ಅನಿಶ್ಚಿತತೆಯಿದೆ ಮತ್ತು ಹೆಚ್ಚು ಕಾಲ ಉಳಿಯುವ ಸಾಧ್ಯತೆಯಿಲ್ಲ. ಆದರೆ ವಿಶ್ವದಲ್ಲಿನ ಸರ್ವೋಚ್ಛ ಸ್ಥಾನವನ್ನು ಬ್ರಿಟನ್ನಿನಿಂದ ಅಮೆರಿಕಾಗೆ ಕಿತ್ತುಕೊಳ್ಳಲು ಅವಕಾಶ ನೀಡಿದಂತಹ ಅಂಶಗಳನ್ನು ಪರಿಶೀಲಿಸಿವ ಮುನ್ನ, ಒಂದು ಸಣ್ಣ ದ್ವೀಪದ ಜನತೆ ಎಷ್ಟೊಂದು ಜನರನ್ನು ತಮ್ಮಿಚ್ಛೆಗೆ ಅಧೀನರಾಗಿಸಿ ಕೊಂಡದ್ದು ಹೇಗೆ ಎಂಬುದನ್ನು ನೆನಪಿಸಿಕೊಳ್ಳುವುದು ಉಪಯುಕ್ತ. ಇತಿಹಾಸ ಪುನರಾವರ್ತಿಸುವುದಿಲ್ಲ ಎಂದು ಹೇಳುತ್ತಾರೆ. ಬಹುಶಃ ಹೌದೇನೋ; ಆದರೆ ಇತಿಹಾಸದ ಅಧ್ಯಯನ ನಮಗೆ ಪ್ರಸಕ್ತ ಪರಿಸ್ಥಿತಿಯನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಸಹಾಯಕವಾಗುತ್ತದೆ.