ಜನವರಿ ೧೨, ಸ್ವಾಮಿ ವಿವೇಕಾನಂದರ ಜನ್ಮದಿನ. ಅದರ ಅಂಗವಾಗಿ ಈ ಕವನ.
ಅವರಿಗೆ ನಮ್ಮ ಬಳಪ ತಂಡದ ನಮನಗಳು
ಅರಿತುಕೊಂಡಿರುವೆವೆ
ನಿಮ್ಮ ಮನದ ಮಾತನ್ನು
ನಿಜವಾಗಿ ನಾವು?
ಆಚರಿಸುತ್ತಿರುವೆವೆ
ನಿಮ್ಮ ಜಯಂತಿಯನ್ನು
ಸರಿಯಾಗಿ ನಾವು?
ಯುವಜನತೆಗೆ ಸಾರಿದಿರಿ
ಉಕ್ಕಿನ ನರಗಳು
ಕಬ್ಬಿಣದ ಸ್ನಾಯುಗಳು
ನಿಮ್ಮದಾಗಲೆಂದು
ಅದಕಾಗಿಯೇ ಹೋಗಿರಿ
ಫುಟ್ ಬಾಲ್ ಮೈದಾನಕೆಂದು.
ಬ್ರಿಟಿಷರ ದೌರ್ಜನ್ಯಗಳ
ಮೆಟ್ಟಿನಿಲ್ಲಬಹುದೆಂದು
ಪರಾಧೀನತೆಯಿಂದ
ಮುಕ್ತರಾಗಬಹುದೆಂದು
ರೂಪಿಸಿದಿರಿ ನೂರಾರು
ಕ್ರಾಂತಿಕಾರಿಗಳ ನೀವಂದು.
ರಾರಾಜಿಸುತ್ತಿವೆ ಎಲ್ಲೆಡೆ
ನಿಮ್ಮ ಫೋಟೊಗಳಿಂದು
ಬಟ್ಟೆ, ಕಾರ್ ಗಳ ಮೇಲೆ
ಹಾಕಿಕೊಂಡು ಯುವಕರಿಂದು
ದೇಹಶಕ್ತಿ ನಶಿಸಿಕೊಂಡು
ಹೋಗುತಿಹರು ಬಾರ್ ಗೆಂದು.
ನೀವಂದು ಧಿಕ್ಕರಿಸಿದಿರಿ
ಹಸಿದ ಹೊಟ್ಟೆಗೆ ಅನ್ನ
ನೀಡದ ಧರ್ಮ ಬೇಡೆಂದು.
ಧರ್ಮಸಂಕೇತವಾಗಿಸಿ
ನಿಮ್ಮನ್ನು, ಆಟವಾಡುತಿಹರು
ರಾಜಕಾರಣಿಗಳು ಇಂದು.
ಅಂದು ನೀವ್ ಸಾರಿದಿರಿ
ಎಲ್ಲ ಧರ್ಮಗಳ ತಿರುಳು
ಮಾನವತೆಯ ಉದ್ಧಾರ
ಧರ್ಮಗಳ ನಡುವೆ
ಹೊಡೆದಾಟ ಬೇಡೆಂದು
ಜನರ ಐಕ್ಯತೆಗಾಗಿ
ದುಡಿದಿರಿ ನೀವಂದು.
ಮಾಡುತ್ತ ನಿಮ್ಮದೇ
ನಾಮಸ್ಮರಣೆಯನು
ಜನಗಳ ವಿಂಗಡಿಸುತಿಹರು
ಕೋಮುಗಳಾಗಿ ಇಂದು.
ಉದ್ರೇಕಿಸುತಿಹರು
ಬಡಿದಾಡಿಕೊಳಿರೆಂದು.
ನಿಮ್ಮ ನೆನಪಿನಲಿಂದು
ಎಲ್ಲೆಲ್ಲೂ ಫೋಟೋಗಳು
ಹಾರಗಳ ಹಾಕಿ
ಭಾಷಣದಲಿ ಮುಳುಗಿ
ದೇಶದ ಜನತೆಯ
ಹಾದಿ ತಪ್ಪಿಸುತಿಹರಿಂದು.
ದೇಶದೆಲ್ಲೆಡೆ ತುಂಬಿದೆ
ನೂರಾರು ಸಮಸ್ಯೆಗಳು
ಕೋಮುಗಲಭೆ, ಜಾತೀಯತೆ
ನಿರುದ್ಯೋಗ, ಅನಕ್ಷರತೆ,
ದೌರ್ಜನ್ಯ, ಬಡತನ
ಸ್ತ್ರೀಯರಿಗೆ ಅಪಮಾನ.
ಇದೇ ಏನು ನೀವು
ಕನಸು ಕಂಡ ಭಾರತ?
ಇಂತಹ ದೇಶಕೇನು
ಶ್ರಮಿಸಿದಿರಿ ಸಂತತ?
ಇದಕ್ಕಾಗಿಯೇ ಏನು
ದುಡಿದಿರಿ ಅನವರತ?
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ