Pages

ಕವನ: "ಬಾಳು: ಆಕಸ್ಮಿಕಗಳ ಒಟ್ಟು ಮೊತ್ತ!"

ಚಿತ್ರ ಕೃಪೆ: ಮಂಜುನಾಥ್ ಎ  ಎನ್

"If our heart were large enough to love life in all its detail, we could see that every instant is at once a giver and a plunderer."  - Gaston Bachelard


ನಾವು ಗ್ರಹಿಸಿದಂತೆ ನಮ್ ನಾವಿಕರು.
ತೇಲಿ ಹೊರಟ ಹಡಗಿನಂತೆ ನಮ್ ಬಾಳು.
ಎಲ್ಲಿ ಕಾದಿಹವೋ ಯಾರೂ ತಿಳಿಯರು
ಸುಳಿ ಗಾಳಿ ಮಳೆ ಪ್ರಚಂಡ ಪ್ರಪಾತಗಳು.

ಅನಿಶ್ಚಿತತೆಯೇ ಮೈವೆತ್ತಿ ಹರಡಿದಂತೆ ಕಡಲು
ನಿಶ್ಚಿತ ಆ ವೈಶಾಲ್ಯವ ಒಳಗೊಂಡ ದಡಗಳು.
ಯಾವ ವಯಸ್ಸಿನಲ್ಲಿ ಏನೋ ಯಾರೂ ಅರಿಯೆವು
ವಯಸ್ಸಂತೂ ಕಡು ಖಚಿತ ಕಾಲನ ಬೇಡಿಗಳು.

ಸೀಮಿತ ಅನುಭವಗಳು, ಎಷ್ಟೆಷ್ಟೋ ಭ್ರಮೆಗಳು,
ಸರಿ-ತಪ್ಪು ಎಂಬ ನಿಖರ ನಿರ್ದಿಷ್ಟ ಪರಿಕಲ್ಪನೆಗಳು.
ಅನುಭವ ಕಲಿಸುವ ಪಾಠಗಳು, ಬಾಳ ಪೆಟ್ಟುಗಳು,
ದೇಶ-ಕಾಲ-ಸಂಸ್ಕೃತಿ-ಸಮಾಜಗಳ ಸಾಪೇಕ್ಷ ಸತ್ಯಗಳು.

ಮನ ತೆರೆದಷ್ಟೂ ತೆರೆದುಕೊಳ್ಳುವ ಬ್ರಹ್ಮಾಂಡ ನಾಟಕವು
ಅಚ್ಚರಿ-ಆತಂಕ-ಆನಂದ ಬಂದು ಅಪ್ಪಳಿಸುವ ಅಲೆಗಳು.
ಸಂದಿಗ್ಧತೆ-ಸಂಭವನೀಯತೆಗಳ ನಡುವೆ ಈ ಪಯಣವು,
ಎಷ್ಟು ಆಕಸ್ಮಿಕಗಳ ಒಟ್ಟು ಮೊತ್ತವೋ ನಮ್ ಬಾಳು!

- ಎ ಎನ್ ಮಂಜುನಾಥ್

ಕಾಮೆಂಟ್‌ಗಳಿಲ್ಲ: