Pages

ಕಥೆ - ಕ್ಲೈಮ್ಯಾಕ್ಸ್


     ಚಿಕ್ಕ ವಯಸ್ಸಲ್ಲಿ ಹೊಟ್ಟೆ ತುಂಬಬೇಕು ಎಂಬ ಒಂದೆ ಒಂದು ಆಸೇನೆ ಇದ್ದದ್ದು. ಸ್ಕೂಲಿಗೆ ಹೋಗುವಾಗಲೂ ಕ್ಲಾಸ್ ಎಷ್ಟೊತ್ತಿಗೆ ಮುಗಿಯುತ್ತೆ ಎಂದು ಕಾಯುತ್ತ ಇದ್ದೆ...ಮನೆಯಲ್ಲಿ ಏನು ಮಾಡಿರುತ್ತಾರೊ...ಹೊಟ್ಟೆ ತುಂಬುವುದೊ ಎನ್ನುವ  ಪ್ರಶ್ನೆ ಬಿಟ್ಟರೆ ಏನು ಪಾಠ ಮಾಡಿದ್ದು ಅನ್ನೋದು ಮನಸ್ಸಿಗೆ ಆಳವಾಗಿ ಯಾವತ್ತು ಹೋಗಿರಲಿಲ್ಲ. ಸ್ವಲ್ಪ ಮುಂದಿನ ಕ್ಲಾಸ್ಗೆ ಬಂದ ಮೇಲೆ ಫ್ರೆಂಡ್ಸ್ ಜೊತೆ ಇಟ್ಟಿದ್ದ ಫ್ರೆಂಡ್ಸ್ಶಿಪ್ ಯಾವತ್ತು ಆಳವಾಗಿ ಮನಸ್ಸಲ್ಲಿ ಉಳಿದಿಲ್ಲ...ಅದಕ್ಕೆ ಕಾರಣ ಮನೆಯಲ್ಲಿ ಏನು ಇವತ್ತು ಎನ್ನುವ ಸ್ಥಿತಿ ಇತ್ತು. ಹೊಟ್ಟೆಗೆ ಏನಿದೆ ಎನ್ನುವುದಿಕ್ಕಿಂತ ಜಗಳ ಏನಿರುತ್ತೊ ಎನ್ನುವ ಆತಂಕ ಇದ್ದಿದ್ದು. ಕುಡಿದು ಬರುವ ಅಪ್ಪನಿಗೆ ಮನೆಯಲ್ಲಿ ಜಗಳಕ್ಕೆ ಏನೊ ಒಂದು ಕಾರಣ ಬೇಕಿರಲಿಲ್ಲ...ಬದಲು, ಏನೊ ಒಂದು ಕಾರಣ ಅವರೆ ಕಂಡುಹಿಡಿಯುತ್ತಿದ್ದರು. ನನ್ನ ವಯಸ್ಸಿನ ಮಕ್ಕಳೆಲ್ಲರು ಜೊತೆಯಾಗಿ ಸಂಜೆ ಸಮಯ ಆಟವಾಡುವಾಗಲೆಲ್ಲ ನಾನು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದೆ. 
  ಎಷ್ಟೋ  ಸಲ ಸೀಮೆಎಣ್ಣೆ ದೀಪ ಸೀಮೆಎಣ್ಣೆ ಇಲ್ಲದೆ ಉರಿಯದೆ ಇರುವುದಕ್ಕಿಂತ ಹೆಚ್ಚು ಅಪ್ಪ ಅನ್ನೊನು ದೀಪ ಉರಿಯುವುದಕ್ಕೆ ಬಿಡದೆ ಇರುವುದಕ್ಕೆ...ಕ್ಲಾಸ್ಸಲ್ಲಿ ಹೋಂವರ್ಕ್ ಮಾಡದೆ ಹೊರಗಡೆ ನಿಲ್ಲುವಾಗಲೆಲ್ಲ...ಮನಸ್ಸಲ್ಲಿ ಎಲ್ಲ ಅನುಕೂಲವಿದ್ದರು ಬರೆಯದೆ ಬಂದ ಮಕ್ಕಳನ್ನು ನೋಡಿ ನಾನು ಸಮಾಧಾನಗೊಂಡೆ. ಆಗಲು ಅಪ್ಪನೆ ಎಲ್ಲಾದಕ್ಕೂ ಕಾರಣವೆಂದು ಮನಸ್ಸಿಗೆ ಬಂದಿಲ್ಲ. ಇನ್ನು ದೊಡ್ಡವಳಾದ ಮೇಲೆ ಕಾಲೇಜಿಗೆ ಸೇರಿದ ಮೇಲೆ ಮನೆಯಲ್ಲಿ ಕರೆಂಟ್ ಬಂದಾಗ ನನ್ನ ಖುಷಿ ಅಷ್ಟಿಷ್ಟಲ್ಲ ...ಮತ್ತೇನು ಮಾಡಲಾಗದಂತಾಗಿ ನಾನು ರೂಮಿನಲ್ಲಿ ಉರಿಯುವ ಬಲ್ಬನ್ನೆ ನೋಡುತ್ತಾ ನಾನು ಎಷ್ಟೋ  ಸಮಯ ಕುಳಿತ್ತಿರುತ್ತಿದ್ದೆ. ಥಾಮಸ್ ಎಡಿಸನ್ಗೂ  ಇಷ್ಟು ಖುಷಿ ಆಗಿತ್ತೊ ಇಲ್ವೋ ...?

       ಅಲ್ಲಿಂದ ನನ್ನ ಭಾವನೆಗಳು ಶುರು ಎಂದು ಗೊತ್ತಿಲ್ಲ....ಹತ್ತನೇ ಕ್ಲಾಸ್ಸಲ್ಲಿ 

ಫಿಸಿಕಲ್ ಟ್ರೈನಿಂಗ್ ಗೆ ಬಂದ ಸರ್ ಅನ್ನು ನೋಡಿ ಅನ್ನಿಸಿತು...ಅಟ್ ಲೀಸ್ಟ್ ದೊಡ್ಡವಳಾದ ಮೇಲೆ ಈ ಥರ ಒಂದು ಕೆಲಸ ಸಿಕ್ಕಬೇಕು ...PT ಇರುವಾಗ ಮಾತ್ರ ಮಕ್ಕಳಿಗೆ ಟ್ರೈನ್ನಿಂಗ್ ಸಾಕಲ್ವ ಎಂದು. PUC ಗೆ ಸೇರಿದ ಮೇಲೆ ಗ್ಯಾಲರಿ ಕ್ಲಾಸಲ್ಲಿ ಪಾಠ ಕೇಳುವಾಗ ಫಸ್ಟ್ ಟೈಂ ಅನ್ನಿಸಿತು...ಹೀಗೆ ಒಬ್ಬ ಲೆಕ್ಚರರ್ ಆಗಬೇಕು. ಗೌರವದಿಂದ ಮಕ್ಕಳಿಗೆ ಪಾಠ ಹೇಳಿಕೊಡುವ ಒಬ್ಬ ಒಳ್ಳೆಯ ಲೆಕ್ಚರರ್ ಆಗಬೇಕು. ಆಮೇಲೆ PUC ಮುಗಿಸಿ ಡಿಗ್ರಿಗೆ ಸೇರಿಕೊಂಡೆ. ಅದರ ಮಧ್ಯೆ  ಕಾಲೇಜಿನಲ್ಲಿ ಟ್ಯಾಲೆಂಟೆಡ್ ಸ್ಪೋರ್ಟ್ಸ್ ಅಥ್ಲೆಟಿಕ್ಸ್  ನ್ನು ಇಂಟರ್ ವ್ಯೂವ್ ಮಾಡುವುದಕ್ಕೆ ಬಂದ  ಜರ್ನಲಿಸ್ಟ್  ನೋಡಿದಲ್ಲೆ ಮೆಚ್ಚಿಕೊಂಡೆ, ಆದರೆ ಹೀಗೆ ಒಬ್ಬ ಜರ್ನಲಿಸ್ಟ್  ಆಗಬೇಕು ಎಂದು ಆಸೆ ಪಟ್ಟೆ. ಅದನ್ನು ದಾಟಿ ಒಬ್ಬ ಲಾಯರ್ ಆಗುವುದಕ್ಕು ಮನಸ್ಸಿನಲ್ಲಿ ಸಿದ್ಧ ಗೊಂಡೆ. ಏಕೆಂದರೆ ಕೆಮಿಸ್ಟ್ರಿ ಲ್ಯಾಬ್ ನಲ್ಲಿ ಕೆಟ್ಟದಾಗಿ ಮಾತನಾಡುವ ಲೆಕ್ಚರರ್
 ಗೆ ಒಂದು ಪಾಠ ಕಲಿಸೋಕೆ ನ್ಯಾಯಾಲಯವೆ ಸರಿ ..ಅದಕ್ಕೆ ಒಬ್ಬ ಒಳ್ಳೆಯ ಲಾಯರ್ ಆಗಬೇಕು ಎಂದು ನಿರ್ಧರಿಸಿದೆ. ಬಸ್ಸಿನಲ್ಲಿ ಸೀಟಿಲ್ಲದೆ ನಿಲ್ಲುವಾಗಲೆಲ್ಲ ಕಿರಿಕಿರಿ ಮಾಡುವ ಯುವಕರನ್ನು ಹೆದರಿಸಲು ಒಬ್ಬ ಕರಾಟೆ ಮಾಸ್ಟರ್ ಆಗಬೇಕು ಎಂಬ ಭಾವನೆಯು ಹುಟ್ಟಿತು. ಬಸ್ಸಿನಲ್ಲಿ ಡೋರ್ ಹತ್ತಿರ  ನಿಲ್ಲುವ ಕಂಡಕ್ಟರ್................. ಅವನ ಹಿಂಸೆ ತಡೆಯಲು ಆಗದೆ ಇರುವಾಗ ಒಬ್ಬ ಪೋಲೀಸ್ ಇನ್ಸ್ ಪೆಕ್ಟರ್ ಆಗಲೇಬೇಕು...  ಆಮೇಲೆ ಅವನನ್ನು ಹಿಡಿದು ಚೆನ್ನಾಗಿ ಏಟು ಕೊಡಬೇಕು ಎನ್ನುವ ಆಸೆ ಇತ್ತು. ಮನೆಯಲ್ಲಿ ಅಷ್ಟು  ಕಷ್ಟ ಪಡುವ ಅಮ್ಮನ ಪಾತ್ರ ಮಾತ್ರ ನಾನು ಯಾವತ್ತು ಆಗಬೇಕು ಅನಿಸಲಿಲ್ಲ....ಆ ಪಾತ್ರ ಯಾರು ಕೊಟ್ಟರು ಬೇಡ ಎನ್ನುವ ಧೈರ್ಯವಾದರೂ ಇರಬೇಕು ಎಂದು ಮಾತ್ರ ಅಂದುಕೊಂಡೆ.
     ಆದರೆ ಕೊನೆಗೆ ಎಲ್ಲಾ ಆಸೆಗಳಿಗೂ ಸೇರಿ ಒಂದು ಮಾರ್ಗವನ್ನು ನಮ್ಮ ಅಪ್ಪ, ಅಮ್ಮ ಕಂಡರು...ಮದುವೆ ಆದಮೇಲೆ ಗೊತ್ತಾಯಿತು. ಲೆಕ್ಚರರ್ ಪಾಠ ಮಾಡಿದ್ದನ್ನು ಸರಿಯಾಗಿ ಗಮನಿಸಿ ಮುಂದೆ ಓದಿದ್ದರೆ ನಾನು ಆ ಸ್ಥಾನ  ಪಡೆಯಬಹುದಿತ್ತು. ಆದರೆ ನಾನು ಅವರು ಮಾಡಿದ ಪಾಠ ಕೇಳದೆ ಅವರ ಸ್ಟೈಲ್ ಮಾತ್ರ ಗಮನಿಸಿದ್ದು. ಲಾಯರ್ ಆಗಲು ನಿಯಮ ಕಲಿಯಲು ಟ್ರೈ ಮಾಡದೆ ನಿಯಮ ಸುಮ್ಮನೆ ಕೇಳುತ್ತ ಕುಳಿತುಬಿಟ್ಟೆ. ಸ್ಪೋರ್ಟ್ಸ್ ಸ್ಟಾರ್ ಆಗಲು exercise ಬೇಕು ಎನ್ನುವಾಗ..ಹೊಟ್ಟೆ  ಹಸಿಯುವಾಗ ಏನು ಮಾಡುವುದು ಎನ್ನುವುದೆ ಯೋಚನೆ ಮಾಡಿದೆ. ಪೋಲೀಸ್  ಆಗಿ ಒದೆಯಲು ಆಸೆ ಪಟ್ಟ ನನಗೆ ಕುಡಿದು ಬಂದು ಜಗಳ ಆಡುವ ಅಪ್ಪನಿಗೆ ಒಂದು ಬದಲು ಮಾತು ಹೇಳಲು ಆಗಿರಲಿಲ್ಲ. ಜರ್ನಲಿಸ್ಟ್ ಎನ್ನುವ ಆಸೆ ಈಗಲು ಮನಸ್ಸಿನಲ್ಲಿದೆ...ಮನಸ್ಸಿನಲ್ಲಿ ಪ್ರಶ್ನೆಗೆ ಉತ್ತರ ನಾನೆ ಮಾಡುತ್ತ ಇದ್ದೇನೆ. 
      ಮಗುವೊಂದು ಆದ ಮೇಲೆ ನಾನು ಏನು ಆಗಬೇಕು ಎಂಬ ಭಾವನೆ ಇತ್ತೋ ಅದೆಲ್ಲ ಆಗೋಕೆ ಆಯ್ತು. ಮಗುವಿಗೆ ಒಬ್ಬ ಒಳ್ಳೆ ಟೀಚರ್ ಆದೆ, ಅವಳು ತಪ್ಪು ಮಾಡಿದಾಗ ಒಳ್ಳೆ ನಿಯಮ ಹೇಳಿ ಲಾಯರ್ ಆದೆ, ಶಿಕ್ಷೆ ಕೊಡಬೇಕಾದ ಸಮಯದಲ್ಲಿ ಒಬ್ಬ ಒಳ್ಳೆ ಪೋಲೀಸ್ ಆದೆ, ಅವಳ ಜೊತೆ ವಾದ ಪ್ರತಿವಾದಗಳಲ್ಲಿ ಒಬ್ಬ ಜರ್ನಲಿಸ್ಟ್ ಆದೆ..ಅವಳ ಜೊತೆ ಆಟವಾಡುವಾಗಲೆಲ್ಲ ಒಬ್ಬ ಸ್ಪೋರ್ಟ್ ಸ್ಟಾರ್ ಥರ ತೋರಿಸಿದೆ. ಏನೆಲ್ಲ ಆಗಬೇಕು ಎಂದು ಅಂದುಕೊಂಡೆ ಮಗಳ ಮನಸ್ಸಿನ ಒಂದೆ ಒಂದು ತೀರ್ಮಾನದಲ್ಲಿ ಎಷ್ಡು ಸುಲಭವಾಗಿ ನಮ್ಮ ತಂದೆ ತಾಯಿ  ಮಾರ್ಗ ಕಂಡು ಹಿಡಿದಿದ್ದರು..ಮದುವೆ..! ಆಹಾ! ಎಂತ ಒಂದು ಮಾರ್ಗ ಅಲ್ವ?
   ಜೀವನದಲ್ಲಿ ದೇವರು ಆದರೆ ಏನೆಲ್ಲಾ ರೂಪಗಳಿತ್ತು. ಅಯ್ಯಪ್ಪ,..ಕಾಳಿ.. ಮುರುಗ..ಲಕ್ಷ್ಮಿ..ಜೀಸಸ್...ಎಲ್ಲವನ್ನು ನಾನು ಪರಿಪಾಲಿಸಿದೆ ಎಂದು ಹೇಳಿದರೆ ತಪ್ಪಾಗುತ್ತದೆ...ಎಲ್ಲವನ್ನು ನನ್ನ ಕೈಯಲ್ಲಿ ಪರಿಪಾಲಿಸಿಕೊಂಡರು ನಮ್ಮ ಅಪ್ಪ ಅಮ್ಮ. ಈಗ ನನಗೆ ಗೊತ್ತಾಯಿತು ಇದೆಲ್ಲಾ ಎಲ್ಲಾ ದೇವರು, ದೇವರು ಎನ್ನುವ ಪದಕ್ಕೇನೆ ತುಂಬಾ ಅರ್ಥಗಳಿವೆ, ಬರಿ ಕಲ್ಲಲ್ಲಿ..ಮಣ್ಣಲ್ಲಿ..ಮರದಲ್ಲಿ ಮಾಡಿರುವ ಗೊಂಬೆಗಳಲ್ಲ ದೇವರು.


     ನಮ್ಮ ಮನಸ್ಸಿಗೆ ತುಂಬಾ ಬೇಜಾರಾಗಿದ್ದಾಗ ಒಬ್ಬ ಒಳ್ಳೆಯ ಸ್ನೇಹಿತರು ನಮಗೆ ವಿಷಯಗಳನ್ನು ತಾಳ್ಮೆಯಿಂದ ಕೇಳಿ ಅದಕ್ಕೆ ಒಂದು ಪರಿಹಾರ ಕೊಟ್ಟು ನಮ್ಮ ಮನಸಿಗೆ  ಶಾಂತಿಯನ್ನು ಕೊಡುತಾರಲ್ವ...ಅವರೆ  ದೇವರು. ಆ ಮನಸ್ಸೆ ದೇವರಗುಡಿ. ಹೊಟ್ಟೆ  ಹಸಿಯುತ್ತಿರುವ ಒಬ್ಬರಿಗೆ ಒಂದೊತ್ತು ಊಟ ಹಾಕುವ ಒಬ್ಬರು...ಒಂದು ಮಗುವಿಗೆ ಓದುವುದು ಇಷ್ಟವಿದೆ..ಓದಿಸಲು ಕಷ್ಟ ಎಂದು ಹೇಳುವ ಕುಟುಂಬಕ್ಕೆ ಸಹಾಯ ಮಾಡುವರು....ಸಮಾಜದಲ್ಲಿ ಕೆಟ್ಟದ್ದನ್ನು ಹೋಗಲಾಡಿಸಲು ಜನರನ್ನು ಕಷ್ಟಪಟ್ಟು ಸೇರಿಸಿ ಹೋರಾಟ ಮಾಡಿ ಪರಿಹಾರ  ಕಾಣುವವರು, ಒಬ್ಬ  ಹುಡುಗಿಗೆ ಮದುವೆ ಮಾಡಿಕೊಳ್ಳಲು  ಧನಸಹಾಯ ಮಾಡುವರು... ಅನಾರೋಗ್ಯಕ್ಕೆ ದುಡ್ಡಿಲ್ಲದೆ ಚಿಕಿತ್ಸೆ ಮಾಡಿಸಿಕೊಳ್ಳಲಾಗದೆ ಇರುವವರಿಗೆ ಸಹಾಯ ಮಾಡಿ ಅವರ ಜೀವನ ಕಾಪಾಡಿದವರು...ಫೀಸ್ ಕೊಡಲು.ಯುನಿಫಾಮ್ ಹೊಲಿಸಲು..ಪುಸ್ತಕ  ತೆಗೆದುಕೊಳ್ಳುಲು..ಒಂದೊತ್ತು ಊಟ ಹಾಕುವವರು..ರೋಡಿನಲ್ಲಿ ಬಿದ್ದಿರುವ  ಭಿಕ್ಷುಕನನ್ನು ಒಂದು ಆಶ್ರಮಕ್ಕೆ  ಸೇರಿಸುವರು... ಇವರೆಲ್ಲರಲ್ಲೂ ನಾನು ದೇವರನ್ನು ಕಂಡೆ. ಇಂತಹ ದೇವರಾಗಿ ನನ್ನ ಮಗಳು ಬೆಳೆಯಲಿ ಎಂಬುದು ಈಗಿನ ನನ್ನ ಆಸೆ...
     ಏನು ಆಗೋದಿಕ್ಕೆ ಆಗಿಲ್ಲ, ಅದರೂ ನನ್ನ ಜೀವನ ಇಷ್ಡರಲ್ಲೇ ಬಂತು. ಇನ್ನು ಮುಂದೆ ವಿಶಾಲವಾಗಿದೆ ದಾರಿ ....ಆಸೆಗಳು ಇನ್ನು ಬಿಟ್ಟಿಲ್ಲ....ಅಪ್ಪ ಅಮ್ಮನ ಬಳಿ ಏನೆಂದು ಗೊತ್ತಾಗದೆ ನೋಡಿಕೊಳ್ಳಲು ಆಗದೆ ದಾರಿಯಲ್ಲಿ ಎಲ್ಲಾ ಅವರಿಗೆ ಎಂದು ನೋಡಿಕೊಳ್ಳುವ ವೃದ್ಧಾಶ್ರಮದಲ್ಲಿ ... ಒಬ್ಬ ಮಗಳಾಗಿ ... ಒಬ್ಬ ತ್ಯಾಗಿಯಾಗಿ... ಅವರಿಗೆಲ್ಲಾ ಸೇವೆ ಮಾಡಬೇಕು ಎಂದು ನನ್ನ ಕೊನೆ ಆಸೆ. ಇದಕ್ಕಾದರು ನನ್ನ ಮನಸ್ಸನ್ನು ಧೈರ್ಯವಾಗಿರಬೇಕು ಎಂದು ನನ್ನ ಅನಿಸಿಕೆ. ಇನ್ನು ಇದನ್ನು ಸಾಧಿಸಲು  ನನಗೆ ಆಗಿಲ್ಲ ಅಂದರೆ ನೀವೆ ಹೇಳಿ ಯಾವ ರೀತಿಯಲ್ಲಿ ಈ  ಕಥೆಯನ್ನು ಮುಗಿಸಲಿ...ಒಬ್ಬ ಡೈರೆಕ್ಟರ್  ಆಗಿ ಒಂದು ಕಥೆ ಬರೆಯಲು ಕುಳಿತ್ತಿದ್ದ ನನಗೆ ನನ್ನ ಸಿನಿಮಕ್ಕೆ ಕ್ಲೈಮ್ಯಾಕ್ಸ್ ಏನಾಗಿರಬೇಕೆಂದು ವೀಕ್ಷಕರಿಗೆ ಕೊಟ್ಟಿರುತ್ತೇನೆ. ನೀವೆ ತೀರ್ಮಾನ ಮಾಡಿ...ಆಸೆಗಳಿಗೆ ಕೊನೆಯೆಲ್ಲಿದೆ...ಯಾವುದು ಆಗದೆ ಟ್ರ್ಯಾಜಿಡಿನಾ... ಇಲ್ಲಾ...ಮೊಮ್ಮಕ್ಕಳನ್ನು ನೋಡುತ್ತಿರುವ ಅಜ್ಜಿಯಾಗಿ ಕಾಮಿಡಿನೊ...ಅದು ಅಲ್ಲದೆ ಒಂದು ಅವಾರ್ಡ್ ಮೂವಿ ಥರ . . ಇನ್ನು ಯಾರಿಗೂ ಈ ಮನಸು ಗೊತ್ತಾಗದೆ............ಆ ಥರ ಒಂದು ಕ್ಲೈಮ್ಯಾಕ್ಸ್ ಕೊಡುವುದಾ? ಪ್ರೇಕ್ಷಕರಾದ ನಿಮಗೆ ಬಿಟ್ಟಿದ್ದೀನಿ...

- ಶೀಬಾ        


ಕಾಮೆಂಟ್‌ಗಳಿಲ್ಲ: