Pages

ಅನುವಾದ-ಪರಿಚಯ: "ಶತ್ರು (ಫೆಲಿಕ್ಸ್ ಗ್ರೀನ್) ಅಧ್ಯಾಯ - I "

(ಈ ಲೇಖನದ ಉದ್ದೇಶವಿರುವುದು ಇಂಗ್ಲಿಷ್ನಲ್ಲಿರುವ ಅದ್ಭುತವಾದ ಪುಸ್ತಕಗಳ ಕೆಲವು ಭಾಗಗಳ ಅನುವಾದವನ್ನು ಹಾಕುವುದರ ಮೂಲಕ ಆ ಪುಸ್ತಕವನ್ನು ಓದಲು, ಅನುವಾದಿಸಲು ಆಸಕ್ತಿ ಮೂಡಿಸುವುದು)

ಶತ್ರು (ಫೆಲಿಕ್ಸ್ ಗ್ರೀನ್ ರವರ "ದಿ ಎನಿಮಿ" ಪುಸ್ತಕದ ಅನುವಾದ) 
("The Enemy" by Felix Greene) 

ಅಧ್ಯಾಯ - I 

ದೇವರೇ ರಾಜನನ್ನು ರಕ್ಷಿಸು 

ಮುಂಚೆ ಬ್ರಿಟಿಷ್ ಶಾಲೆಗಳಲ್ಲಿ , ನನ್ನ ಬಾಲ್ಯದಲ್ಲಿಯೂ ಸಹ, ಪ್ರತಿ ತರಗತಿಯಲ್ಲಿ ಗೋಡೆಯ ಮೇಲೆ ಒಂದು ದೊಡ್ಡ ವಿಶ್ವಭೂಪಟವನ್ನು ತೂಗುಹಾಕುವುದು ಒಂದು ಸಂಪ್ರದಾಯವಾಗಿತ್ತು. ಕೆಂಪು ಹೆಚ್ಚು ಕಾಣಿಸುತ್ತಿದ್ದ ಬಣ್ಣ. ಇದು ರಷ್ಯಾ ಕ್ರಾಂತಿಗೆ ಮುಂಚೆ. ಆಗಿನ್ನೂ ಕೆಂಪನ್ನು ಕಮ್ಯೂನಿಸ್ಟರು ತಮ್ಮದಾಗಿಸಿಕೊಂಡಿರಲಿಲ್ಲ. ಭಾರತ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಆಫ್ರಿಕಾ ಖಂಡದ ಬೃಹತ್ ಪ್ರದೇಶಗಳು - ಕೈರೋನಿಂದ ಕೇಪ್ ಆಫ್ ಗುಡ್ ಹೋಪ್ ವರೆಗೆ; ಸಮಾವ್, ಬಮಾ೯, ಮಲಯಾ, ಹಾಂಗ್ ಕಾಂಗ್, ವೆಸ್ಟ್ ಇಂಡೀಸ್ , ಸಿಲೋನ್ - ಎಲ್ಲವನ್ನೂ ಕೆಂಪು ಬಣ್ಣದಲ್ಲಿ ಗುರುತಿಸಲಾಗಿತ್ತು. ಮತ್ತು ಪ್ರತಿಯೊಂದು ಸಮುದ್ರದಲ್ಲಿ ನೂರಾರು ದ್ವೀಪಗಳು, ಬಂದರುಗಳ ಕೆಂಪಾಗಿದ್ದವು. ಈ ಭೂಪಟಗಳಲ್ಲಿ ಬ್ರಿಟಿಷ್ ಯುವಕರ ಕಲಿಕೆಗಾಗಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತಾರವನ್ನು ತೋರಿಸಲಾಗಿತ್ತು. ಭೂಮಿಯ 1/4 ಭಾಗ, 1/5 ಭಾಗದಷ್ಟು ಜನತೆ ನಮ್ಮದೇ ಆದ ಪುಟ್ಟ ದ್ವೀಪದ ನಿಯಂತ್ರಣದಲ್ಲಿತ್ತು. ಅದು ನಮಗೆ ನಾವು ಬಹಳ ಮೇಲ್ಮಟ್ಟದವರು ಎಂಬ ಭಾವನೆ ಮೂಡಿಸುತ್ತಿತ್ತು. ಈ ವಿಶಾಲವಾದ ಜನ ಸಮೂಹ ,ಎಲ್ಲಾ ಜನಾಂಗ ಮತ್ತು ವರ್ಣದವರು ಅವರ ಇಚ್ಛೆಯ ಪ್ರಕಾರವೆ ನಮ್ಮಡಿಯಲ್ಲಿ ಇದ್ದಾರೆ ಎಂದು ನಾವು ಭಾವಿಸಿದ್ದೆವು. ಇನ್ಯಾರ ಅಡಿಯಲ್ಲಿ ಅವರಿರಲು ಸಾಧ್ಯವೆಂದು ಭಾವಿಸಿದ್ದೆವು. ನಾವು ಬ್ರಿಟಿಷರು ನ್ಯಾಯಯುತರು, ನಮ್ಮ ಆಳ್ವಿಕೆ ದಯೆಯಿಂದ ಕೂಡಿದೆ, ಸಾಮ್ರಾಜ್ಯವನ್ನು ನಿರ್ವಹಿಸಲು ನಾವು ಕಳುಹಿಸಿದ ಯುವಕರು ಕಷ್ಟಜೀವಿಗಳು, ಕಡಿಮೆ ಹಣದಲ್ಲಿ ಬದುಕುತ್ತಿದ್ದರು, ಭ್ರಷ್ಟರಾಗದವರು, ಸ್ವಸಾಮರ್ಥ್ಯವುಳ್ಳವರು; ನಾವು ಆ ಹಿಂದುಳಿದ ಜನರಿಗೆ ಒಳ್ಳೆಯ ಸರ್ಕಾರವೆಂದರೆ ಏನೆಂಬುದನ್ನು ತೋರಿಸುತ್ತಿಲ್ಲವೆ? . ಅವರನ್ನು ಅನಂತವಾದ ಕ್ರಿಶ್ಚಿಯನ್ ನಾಗರಿಕತೆಯತ್ತ ಮುನ್ನಡೆಸುತ್ತಲ್ಲವೆ ? ಅವರಿಗೆ ಮಕ್ಕಳ ಬಗ್ಗೆ. ದೇವರ ತಾಳ್ಮೆಯ ಬಗ್ಗೆ ಕಲಿಸುತ್ತಿಲ್ಲವೆ? ಯುವಕರು ಪ್ಯಾಂಟ್ ಗಳನ್ನು ಧರಿಸಬೇಕೆಂದು ಮತ್ತು ಯುವತಿಯರು ತಮ್ಮ ದೇಹದ ಮೇಲ್ಭಾಗವನ್ನು ಮುಚ್ಚಿಕೊಳ್ಳಬೇಕೆಂಬದನ್ನು ದೇವರ ಯೋಜನೆಯ ಭಾಗವೆಂದು ಕಲಿಸಿಲ್ಲವೆ? ಉದಾರತೆಯಿಂದ ನಾವು ಅವರಿಗೆ ಶಾಲೆಯನ್ನು ತೆಗೆದು ಇಂಗ್ಲಿಷ್ ನ್ನು ಕಲಿಸುತ್ತಿಲ್ಲವೆ ಮತ್ತು ಶೇಕ್ಸ್‌ಪಿಯರ್ ನ್ನು ಓದುತ್ತ ತಮ್ಮ ಮನಸ್ಸುಗಳನ್ನು ವಿಶಾಲಗೊಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲವೆ? ಅವರ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ಕಟ್ಟಸಿಕೊಟ್ಟಿಲ್ಲವೆ? ಉತ್ತಮ ಬೆಳೆಗಳನ್ನು ಬೆಳೆಯುವುದು ಹೇಗೆಂದು ಅವರು ಕಲಿತುಕೊಳ್ಳಲೆಂದು ಕೃಷಿ ಕಾಲೇಜುಗಳನ್ನು ತೆರೆದಿದ್ದೇವೆ. ಅವರು ನಮ್ಮನ್ನು ಗೌರವಿಸುತ್ತಾರೆ ಎನ್ನುವುದರಲ್ಲಿ ಆಶ್ಚರ್ಯವೇನಿಲ್ಲ ಎಂದುಕೊಳ್ಳುತ್ತಿದ್ದೆವು. ಈ ಭೂಪಟಗಳನ್ನು ನೋಡುತ್ತ, ವಿಶ್ವದಾದ್ಯಂತ ಹರಡಿರುವ ಎಲ್ಲ ಜನ ನಮ್ಮ ಧ್ವಜಕ್ಕೆ ವಂದಿಸುತ್ತಾರೆ ಮತ್ತು 'ದೇವರೆ ನಮ್ಮ ರಾಜನನ್ನು ರಕ್ಷಿಸು' ಎಂದು ಹಾಡುತ್ತಾರೆ, ಎಂಬುದನ್ನು ಯೋಚಿಸುತ್ತ ಪುಳಕಗೊಳ್ಳುತ್ತಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ ಈ ಶ್ಲಾಘನೀಯ ವ್ಯವಸ್ಥೆ ಅನಂತವಾಗಿ ಮುಂದುವರಿಯುವುದು ಅನಿವಾರ್ಯ, ಏಕೆಂದರೆ ನಾವು ಬ್ರಿಟಿಷರು ಇತರರಿಗಿಂತ ಬುದ್ಧಿವಂತರು, ಸಾಮ್ರಾಜ್ಯವನ್ನು ನಡೆಸಲು ಯತ್ನಿಸಿ ಸೋತಂತಹ ರೋಮನ್ನರು ಮತ್ತು ಸ್ಪೇನಿಯಾರ್ಡ್ ಗಳಿಗಿಂತ ಹೆಚ್ಚು ಮಾನವೀಯತೆ ಉಳ್ಳವರು. ಜೊತೆಗೆ ನಾವು ವಿಶ್ವದ ಅತ್ಯಂತ ಶ್ರೀಮಂತ ಜನ, ಅತಿ ಬಲಿಷ್ಠವಾದ ಸೈನ್ಯವುಳ್ಳವರು. ಆದ್ದರಿಂದ ಎಲ್ಲಾ ಕಾಲಕ್ಕೂ ನಮ್ಮ ಸಾಮ್ರಾಜ್ಯ ಹೀಗೆಯೆ ಮುಂದುವರಿಯುತ್ತದೆ. ಇವೆಲ್ಲವೂ ನಮ್ಮ ಯುವ ಮನಸ್ಸುಗಳಲ್ಲಿ ಮತ್ತು ಬಹುತೇಕ ಬ್ರಿಟಿಷ್ ಜನತೆಯಲ್ಲಿ ಇದ್ದಂತಹ ಮುಗ್ಧವಾದ ವಿಶ್ವದ ಚಿತ್ರವಾಗಿತ್ತು. ಯಾರೂ ಸಹ ಶೋಷಣೆ, ದೋಚುವಿಕೆ ಅಥವಾ ಒತ್ತಾಯದ ಶ್ರಮ ಎಂಬ ಪದಗಳನ್ನು ಹೇಳಲಿಲ್ಲ. ನಾವು ಆಳುತ್ತಿದ್ದ ಜನತೆಗೆ ಕೊಟ್ಟಿದ್ದಕ್ಕೆಲ್ಲ ಅವರು ಹಣ ಪಾವತಿ ಮಾಡಿದರೆಂದು ಶಾಲೆಗಳಲ್ಲಿ ಯಾರು ಹೇಳಲಿಲ್ಲ. ನಾವು ಹೆಮ್ಮೆ ಪಡುತ್ತಿದ್ದ ವೈದ್ಯಕೀಯ ಸೇವೆಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನತೆಗೆ ಒಬ್ಬರೆ ಒಬ್ಬ ವೈದ್ಯರನ್ನ ನೀಡಿದ್ದೆವು. (ನೈಜಿರಿಯಾದಲ್ಲಿ ಮೂವತ್ತು ಸಾವಿರ ಜನರಿಗೆ ಒಬ್ಬ ವೈದ್ಯರು) ಸುಧಾರಿತ ಕೃಷಿ ವಿಧಾನದಲ್ಲಿ ಹೆಚ್ಚಾದಂತಹ ಲಾಭಗಳು, ಜಮೀನುದಾರರಿಗೆ ಉಪಯೋಗವಾಯಿತೆ ಹೊರತು ಅಲ್ಲಿದ್ದವರಿಗಲ್ಲ. ಆಫ್ರಿಕಾದ ವಜ್ರದ ಗಣಿಗಳಲ್ಲಿ ಅಥವಾ ಭಾರತದ ಹತ್ತಿ ಹೊಲಗಳಲ್ಲಿ ದುಡಿಯುವ ಪರಿಸ್ಥಿತಿ ಹೇಗಿತ್ತೆಂಬುದನ್ನು ಯಾರು ನಮಗೆ ಹೇಳಲಿಲ್ಲ. ಅಲ್ಲಿನ ಶಿಶುಮರಣದ ಸಂಖ್ಯೆ ಅಥವಾ ಜೀವಿತಾವಧಿಯ ಬಗ್ಗೆ ಯಾರೂ ಮಾತನಾಡಲಿಲ್ಲ. ಸಾಮ್ರಾಜ್ಯವನ್ನು ನಡೆಸಲು ಅವಶ್ಯವಾದ ವೆಚ್ಚ ಮತ್ತು ಅದಕ್ಕೆ ಬೇಕಾಗುವ ಅಪಾರವಾದ ಶ್ರಮ ಇದರ ಬಗ್ಗೆ ಸಾಕಷ್ಟು ಕೇಳಿದ್ದೆವು ( ನಾವು ಅದನ್ನು ' ಬಿಳಿ ಮನುಷ್ಯನ ಹೊರೆ' ಎಂದು ಕರೆದೆವು) ಆದರೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದ ಬಜೆಟ್ ವೆಚ್ಚಕ್ಕಿಂತ ಹೆಚ್ಚಾಗಿ ಮಿಲಿಯಾಂತರ ಪೌಂಡ್ ಗಳು ಪ್ರತಿ ವರ್ಷ ಬಡ್ಡಿ ಮತ್ತು ಲಾಭದ ರೂಪದಲ್ಲಿ ಬ್ರಿಟಿಷ್ ಬಂಡವಾಳಿಗರಿಗೆ ವಾಪಸ್ಸು ಬರುತ್ತಿದ್ದದ್ದರ ಬಗ್ಗೆ ನಾವು ಒಂದೂ ಪದವನ್ನು ಕೇಳಿರಲಿಲ್ಲ; ಅಥವಾ ಹೂಡಿಕೆಗೆ ನೆರವಾದ ಬ್ಯಾಂಕರ್ ಗಳಿಗೆ ದೊರೆತ ಮಿಲಿಯನ್ ಗಳಾಗಲಿ ಅಥವ ವಿಮೆ ಮತ್ತು ಶಿಪ್ಪಿಂಗ್ ಕಂಪನಿಗಳಿಗೆ ದೊರೆತ ಮಿಲಿಯನ್ ಗಳ ಬಗ್ಗೆಯಾಗಲಿ ಅಥವಾ ವಸಾಹತಿನ ಹಣದಿಂದ ಬ್ರಿಟಿಷರಿಗೆ ಕೊಟ್ಟ ಸಂಬಳಗಳು ಮತ್ತು ಪಿಂಚಣಿಗಳ ಬಗ್ಗೆಯಾಗಲಿ ಒಂದು ಪದವನ್ನೂ ನಾವು ಕೇಳಿರಲಿಲ್ಲ.ಸಾಮ್ರಾಜ್ಯದ ಬಹುತೇಕ ವೆಚ್ಚವನ್ನು ವಸಾಹತಿನ ಜನತೆ ತಾವೆ ಕೊಡುತ್ತಿದ್ದರೆಂದು ಯಾರು ನಮಗೆ ವಿವರಿಸಲಿಲ್ಲ. ಅವರಿಗೆ ಕೊಟ್ಟಂತಹ ಸೇವೆಗಳಿಗೆ ಬ್ರಿಟಿಷ್ ಜನತೆ ತಮ್ಮ ತೆರಿಗೆಯಿಂದೇನು ಕೊಡಲಿಲ್ಲ.ಆದರೆ ಅಲ್ಲಿಂದ ದೊರೆಯುತ್ತಿದ್ದ ಅಸಾಧಾರಣವಾದ ಹಣಕಾಸಿನ ಲಾಭವನ್ನು ಕೈಬೆರಳೆನಿಸುವಷ್ಟು ವ್ಯಕ್ತಿಗಳು ಪಡೆಯುತ್ತಿದ್ದರು. ಸಾಮ್ರಾಜ್ಯವನ್ನು ನಡೆಸುವ ವ್ಯಕ್ತಿ ಗಳು ದಕ್ಷರಾಗಿರಬಾರದು ಮತ್ತು ಅವರು ತಮ್ಮನ್ನು ತಾವೆ ಹೆಚ್ಚು ಪ್ರಶ್ನೆಗಳನ್ನು ಕೇಳಿಕೊಳ್ಳಬಾರದು. ವಾಸ್ತವತೆಗಳಿಂದ ಅವರಲ್ಲಿ ದೂರವಿರುವ ಸಮರ್ಥನೀಯ ವಾಕ್ಚಾತುರ್ಯವಿರಬೇಕು.ಮಾನವತೆಗೆ ಒಳಿತನ್ನು ಮಾಡುತ್ತಿದ್ದೇವೆ ಎಂಬ ನಂಬಿಕೆಯಿರಬೇಕು. ಆದರೆ ಯಾವ ಸಮರ್ಥನೆಗಳು ಬೇಡದಿರುವಾಗ ಅದರ ಬಗ್ಗೆ ಚಿಂತಿಸುವುದೇಕೆ? ಪದಗಳು ಮತ್ತು ವಿಚಾರಗಳು ಮಧ್ಯಪ್ರವೇಶಿಸಿ ಗೊಂದಲವನ್ನುಂಟು ಮಾಡುತ್ತವೆ. ಅಲ್ಲಿ ಆ ಭೂಪಟಗಳು ಪದಗಳಿಗಿಂತ ವಾಸ್ತವವಾದುದು. ಬ್ರಿಟಿಷ್ ಸಾಮ್ರಾಜ್ಯ ಗಿಬ್ರಾಲ್ಟರ್ ನಂತೆ ಘನವಾಗಿತ್ತು, ಶಾಶ್ವತವಾಗಿತ್ತು ಈಗ ಬ್ರಿಟಿಷ್ ತರಗತಿಗಳಲ್ಲಿ ಈ ಭೂಪಟಗಳಿಲ್ಲ ಸಾಮ್ರಾಜ್ಯದ ಹಳೆಯ ವಿಧಾನಗಳು ಬದಲಾಗಿವೆ ಬ್ರಿಟಿಷ್ ಆಳುವ ವರ್ಗದ ಇಂತಹ ನಿಯಂತ್ರಣ ಹೆಚ್ಚು ಪರೋಕ್ಷವಾಗಿದೆ ಮತ್ತು ಕಡಿಮೆ ಕಾಣಿಸುತ್ತದೆ ಹೊಸದೊಂದು ಸಾಮ್ರಾಜ್ಯ - ಅಮೇರಿಕನ್ ಸಾಮ್ರಾಜ್ಯ - ಬ್ರಿಟಿಷ್ ಸಾಮ್ರಾಜ್ಯದ ಬದಲಿಗೆ ಮುಂಚೂಣಿಯಲ್ಲಿರುವ ಸಾಮ್ರಾಜ್ಯಶಾಹಿ ಶಕ್ತಿಯಾಗಿದೆ. ತನ್ನ ಅಧಿಕಾರವನ್ನು ವಿಭಿನ್ನ ರೀತಿಯ ರಚನೆಯ ಮೂಲಕ ಚಲಾಯಿಸುತ್ತ, ಅದೆ ಉದ್ದೇಶಕ್ಕಾಗಿ ಶ್ರಮಿಸುತ್ತ, ಅಮೆರಿಕ ಸಾಮ್ರಾಜ್ಯ ಇಂದು ಜಗತ್ತನ್ನು ನಡೆಸುತ್ತಿದೆ. ಬ್ರಿಟಿಷ್ ಸಾಮ್ರಾಜ್ಯಕ್ಕಿಂತ ಮಿಲಿಟರಿಯುಕ್ತವಾಗಿ ಮತ್ತು ಕೈಗಾರಿಕಾವಾಗಿ ಹೆಚ್ಚು ಬಲಿಷ್ಟವಾದರೂ ಹೊಸ ಸಾಮ್ರಾಜ್ಯದ ಮುಂದೆ ಹೆಚ್ಚು ಸವಾಲಿದೆ, ಹೆಚ್ಚಿನ ಅನಿಶ್ಚಿತತೆಯಿದೆ ಮತ್ತು ಹೆಚ್ಚು ಕಾಲ ಉಳಿಯುವ ಸಾಧ್ಯತೆಯಿಲ್ಲ. ಆದರೆ ವಿಶ್ವದಲ್ಲಿನ ಸರ್ವೋಚ್ಛ ಸ್ಥಾನವನ್ನು ಬ್ರಿಟನ್ನಿನಿಂದ ಅಮೆರಿಕಾಗೆ ಕಿತ್ತುಕೊಳ್ಳಲು ಅವಕಾಶ ನೀಡಿದಂತಹ ಅಂಶಗಳನ್ನು ಪರಿಶೀಲಿಸಿವ ಮುನ್ನ, ಒಂದು ಸಣ್ಣ ದ್ವೀಪದ ಜನತೆ ಎಷ್ಟೊಂದು ಜನರನ್ನು ತಮ್ಮಿಚ್ಛೆಗೆ ಅಧೀನರಾಗಿಸಿ ಕೊಂಡದ್ದು ಹೇಗೆ ಎಂಬುದನ್ನು ನೆನಪಿಸಿಕೊಳ್ಳುವುದು ಉಪಯುಕ್ತ. ಇತಿಹಾಸ ಪುನರಾವರ್ತಿಸುವುದಿಲ್ಲ ಎಂದು ಹೇಳುತ್ತಾರೆ. ಬಹುಶಃ ಹೌದೇನೋ; ಆದರೆ ಇತಿಹಾಸದ ಅಧ್ಯಯನ ನಮಗೆ ಪ್ರಸಕ್ತ ಪರಿಸ್ಥಿತಿಯನ್ನು ಹೆಚ್ಚು ಸ್ಪಷ್ಟವಾಗಿ ನೋಡಲು ಸಹಾಯಕವಾಗುತ್ತದೆ.

ಕಾಮೆಂಟ್‌ಗಳಿಲ್ಲ: