Pages

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ - 5

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ)


(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ) 


ಕಲ್ಕತ್ತಾದಲ್ಲಿ ಭಗತ್
ಕಲ್ಕತ್ತಾದ ಸ್ಟೇಷನ್ನಿನಲ್ಲಿ ಇಳಿದಾಗ ಅಲ್ಲಿ ದುರ್ಗಾದೇವಿಯವರ ಪತಿ ಕ್ರಾಂತಿಕಾರಿ ಭಗವತೀಚರಣ್ ವೋರಾ ಕಾಯುತ್ತಿದ್ದರು. ಆಲಿಪುರದ ತಮ್ಮ ಸ್ನೇಹಿತ ಚಜ್ಜೂರಾಮ್‍ರವರ ಮನೆಯಲ್ಲಿ ಭಗತ್‍ಸಿಂಗ್‍ರು ಇರುವ ವ್ಯವಸ್ಥೆ ಮಾಡಿದರು. ಚಜ್ಜೂರಾಮ್ ಮತ್ತು ಆತನ ಪತ್ನಿ ಲಕ್ಷ್ಮೀದೇವಿ ಭಗತ್‍ಸಿಂಗ್‍ರವರ ಅಭಿಮಾನಿಯಾಗಿದ್ದರು. 
ಭಗತ್‍ಸಿಂಗ್‍ರು ಕಲ್ಕತ್ತಾದಲ್ಲಿ ‘ಹರಿ’ ಆದರು. ಬಂಗಾಳಿಗಳಂತೆ ವೇಷ ಧರಿಸಿದರು. ಬಂಗಾಳದಲ್ಲಿ ವ್ಯಕ್ತಿಯಿಂದ ಎಳೆಯಲ್ಪಡುವ ರಿಕ್ಷಾ ಗಾಡಿಗಳನ್ನು ಕಂಡು ವ್ಯಥೆ ಪಟ್ಟರು. ಅಲ್ಲಿ ನಡೆಯುತ್ತಿದ್ದ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಅಧಿವೇಶನಕ್ಕೆ ಹೋದರು. ಆದರೆ ಕಾಂಗ್ರೆಸ್ಸಿಗರಿನ್ನೂ ‘ಸಂಪೂರ್ಣ ಸ್ವಾತಂತ್ರ್ಯ’ದ ಘೋಷಣೆಯನ್ನೆತ್ತದೆ ಡೊಮಿನಿಯನ್ ಸ್ಟೇಟಸ್ ಬಗ್ಗೆ ಚರ್ಚಿಸುತ್ತಿರುವುದನ್ನು ಕಂಡು ಬೇಸತ್ತು ಹೊರಬಂದರು. ಕಾಂಗ್ರೆಸ್ ಇನ್ನೂ ಶ್ರೀಮಂತ ವರ್ಗದ ಹಿಡಿತದಲ್ಲಿದ್ದುದನ್ನು ಕಂಡು ವಿಷಾದಿಸಿದರು. ಮಿಲಿಯಾಂತರ ಕಾರ್ಮಿಕರು, ರೈತರಿಗೆ ಕಾಂಗ್ರೆಸ್‍ನಲ್ಲಿ ಸ್ಥಾನವೇ ಇರಲಿಲ್ಲ. ಕಾಂಗ್ರೆಸ್‍ಗೆ ತನ್ನ ಸಂಘಟನೆಯನ್ನು ಬುಡಮಟ್ಟದಿಂದ ಕಟ್ಟುವುದು ಬೇಕಿರಲಿಲ್ಲವೆಂದು, ಏಕೆಂದರೆ ಅದು ಕ್ರಾಂತಿಯ ಬಗೆಗಿನ ಭೀತಿಯನ್ನು ಹೋಂದಿದೆ, ಎಂದು ಭಗತ್‍ಸಿಂಗ್ ಅಭಿಪ್ರಾಯ ಪಟ್ಟಿದ್ದರು. 

ಅದೇ ಸಮಯದಲ್ಲಿ ಕಲ್ಕತ್ತಾದಲ್ಲಿ ಅಖಿಲ ಭಾರತ ಶ್ರಮಿಕ ಮತ್ತು ರೈತರ ಸಮ್ಮೇಳನ ನಡೆಯುತ್ತಿತ್ತು. ‘ಕೀರ್ತಿ’ ಪತ್ರಿಕೆಯ ಸಂಪಾದಕರಾದ ಜೋಶ್‍ರವರನ್ನು ಭೇಟಿ ಮಾಡಿ ಆ ಬಗ್ಗೆ ತಿಳಿದುಕೊಂಡರು ಭಗತ್. “ಶ್ರಮಿಕರನ್ನು, ರೈತರನ್ನು ಸಂಘಟಿಸುವ ಕೆಲಸ ನೀವು ಮಾಡಿ. ಬ್ರಿಟಿಷರ ಆಳ್ವಿಕೆಯನ್ನು ಒಡೆಯುವ ಕೆಲಸ ನಾವು ಮಾಡುತ್ತೇವೆ. ಈ ರೀತಿಯ ಕಾರ್ಯ ವಿಭಜನೆಯಿಂದ ಭವಿಷ್ಯವನ್ನು ನಾವು ರೂಪಿಸೋಣ,” ಎಂದರು. 

ಕಲ್ಕತ್ತಾದ ಕ್ರಾಂತಿಕಾರಿಗಳಲ್ಲಿ ಉತ್ಸಾಹದ ಅಲೆ
ಜತಿನ್ ದಾಸ್ 

ಕಲ್ಕತ್ತಾದಲ್ಲಿರುವಾಗ ಅವರು ಪ್ರಫುಲ್ಲ ಗಂಗೂಲಿ, ಜ್ಯೋತಿಷ್ ಘೋಷ್, ತ್ರೈಲೋಕ್ಯನಾಥ ಚಕ್ರವರ್ತಿ ಮತ್ತು ಜತೀಂದ್ರನಾಥ ದಾಸ್, ಜತೀಂದ್ರನಾಥ ಬ್ಯಾನರ್ಜಿಯವರನ್ನು ಭೇಟಿ ಮಾಡಿದರು. ಚಕ್ರವರ್ತಿಯವರು ಭಗತ್‍ಸಿಂಗ್‍ರಿಗೆ 5000 ಯುವಜನರ ಸ್ವಯಂ ಸೇವಕರ ಪಡೆಯನ್ನು ಕಟ್ಟಲು ಹೇಳಿದರು, ಯಾವುದೇ ಜಾತಿ, ಮತ ಧರ್ಮಗಳ ಬೇಧ-ಭಾವವಿಲ್ಲದೆ. ಭಗತ್‍ಸಿಂಗ್‍ರ ಕ್ರಾಂತಿಕಾರಿ ಉತ್ಸಾಹವನ್ನು ಕಂಡು ಅಲ್ಲಿನ ಕ್ರಾಂತಿಕಾರಿಗಳಲ್ಲಿ ಅಚ್ಚರಿ ಮೂಡಿತು. ಆದರೆ ಭಗತ್‍ಸಿಂಗ್‍ರ ವಿಧಾನಗಳ ಬಗ್ಗೆ ಅವರಿಗೆ ಒಪ್ಪಿಗೆಯಿರಲಿಲ್ಲ. ಆ ಬಗ್ಗೆ ಚರ್ಚಿಸುತ್ತಾ ಭಗತ್‍ಸಿಂಗ್‍ರವರು “ಇದೊಂದು ಸಾಧನವೇ ಹೊರತು ಅಂತ್ಯವಲ್ಲ. ಇದು ಯುವಜನತೆಯನ್ನು ಬಡಿದೆಬ್ಬಿಸುವ ಸಾಧನ”, ಎಂಬುದಾಗಿ ಅವರ ಮನವೊಲಿಸಿದರು. ಅವರಿಗೆ ಬಾಂಬುಗಳ ತಯಾರಿಯ ಬಗ್ಗೆ ತಿಳಿಯಬೇಕಿತ್ತು. ಮೊದಲಿಗೆ ಚಕ್ರವರ್ತಿಯವರು ಹಿಂಜರಿದರೂ, ನಂತರ ಅದಕ್ಕೆ ಅಂಗೀಕರಿಸಿ ಅವರಿಗೆ ಬಂದೂಕು ಮತ್ತು ಗುಂಡುಗಳನ್ನು ನೀಡಿದರು. ಭಗತ್‍ಸಿಂಗ್‍ರು ಅಲ್ಲಿ ಬಾಂಬುಗಳನ್ನು ತಯಾರಿ ಮಾಡುವ ಕೆಲಸದಲ್ಲಿ ತೊಡಗಿದ್ದೇ ಅಲ್ಲದೆ, ಅಲ್ಲಿ ಒಂದು ಪುಟ್ಟ ಪ್ರಯೋಗ ಶಾಲೆ ಸ್ಥಾಪಿಸಿದರು. ಜತಿನ್‍ದಾಸ್‍ರ ಮನವೊಲಿಸಿ ಭಗತ್‍ಸಿಂಗ್ ಅವರನ್ನು ತಮ್ಮೊಂದಿಗೆ ಕರೆತಂದರು. ಆತ ಬಾಂಬ್ ತಯಾರಿ ಮಾಡುವಲ್ಲಿ ಪರಿಣಿತರಾಗಿದ್ದರು.

ಭಗತ್‍ಸಿಂಗ್‍ರ ಕಲ್ಕತ್ತಾ ಭೇಟಿ ಅಲ್ಲಿನ ಕ್ರಾಂತಿಕಾರಿಗಳಲ್ಲಿ ಉತ್ಸಾಹದ ಅಲೆಯನ್ನು ಪುನಃ ಚಿಮ್ಮಿಸಿತು. ಮತ್ತೊಮ್ಮೆ ಭಾರತದಲ್ಲಿ ಸಾಮಾಜಿಕ-ರಾಜಕೀಯ ಬದಲಾವಣೆಗಳನ್ನೂ ತರುವ ಬಗ್ಗೆ ಚರ್ಚೆಗಳು ತೀವ್ರಗೊಂಡವು. ರಷ್ಯಾದ ಕ್ರಾಂತಿಯ ಪ್ರಭಾವ ದಟ್ಟವಾಗತೊಡಗಿತು., “ಪ್ರಜಾಪ್ರಭುತ್ವ ರಾಜಕೀಯ ಮತ್ತು ಕಾನೂನಾತ್ಮಕ ಸಮಾನತೆಯ ವ್ಯವಸ್ಥೆ. ಆದರೆ ವಾಸ್ತವವಾಗಿ ರಾಜಕೀಯದಲ್ಲಾಗಲೀ, ಕಾನೂನಿನಲ್ಲಾಗಲೀ ಆರ್ಥಿಕ ಅಸಮಾನತೆಗಳ ಕಾರಣದಿಂದಾಗಿ ಸಮಾನತೆ ಇರಲು ಸಾಧ್ಯವಿಲ್ಲ. ಅಧಿಕಾರ ಬಂಡವಾಳಶಾಹಿ ವರ್ಗದ ಹಿಡಿತದಲ್ಲಿರುವವರೆಗೂ; ಕಾನೂನು, ಶಿಕ್ಷಣ, ಕೈಗಾರಿಕೆ, ಭೂಮಿ ಅವರ ನಿಯಂತ್ರಣದಲ್ಲಿರುವವರೆಗೂ ಜನಸಾಮಾನ್ಯರಿಗೆ, ಕಾರ್ಮಿಕರು, ರೈತರು, ಬಡಜನತೆಗೆ, ಯಾವುದೇ ರೀತಿಯಾದ ಸ್ವಾತಂತ್ರ್ಯ-ಸಮಾನತೆ ಇರುವುದಿಲ್ಲ. ಆದ್ದರಿಂದಲೇ ಬ್ರಿಟಿಷರನ್ನು ಹೊಡೆದೋಡಿಸುವುದಷ್ಟೇ ಅಲ್ಲದೆ ಕಾರ್ಮಿಕ-ರೈತ-ಬಡಜನತೆಯನ್ನು ತೊಡಗಿಸಿಕೊಂಡು ಕ್ರಾಂತಿ ಮಾಡುವ ಮೂಲಕ ಜನತೆಯ ಪ್ರಜಾಪ್ರಭುತ್ವವನ್ನು ಅಂದರೆ ಸಮಾಜವಾದವನ್ನು ಸ್ಥಾಪಿಸಬೇಕು” ಎಂಬುದು ಬಂಗಾಳಿ ಕ್ರಾಂತಿಕಾರಿಗಳ ಉದ್ದೇಶವಾಗಿತ್ತು. ಇದೇ ನಂಬಿಕೆಯನ್ನು ಭಗತ್‍ಸಿಂಗ್ ಸಹ ಹೊಂದಿದ್ದರು.
ಆಗ್ರಾದಲ್ಲಿ ಚಟುವಟಿಕೆ
ಕಲ್ಕತ್ತದಿಂದ ಹೊರಟ ಭಗತ್‍ಸಿಂಗ್‍ರು ಆಗ್ರಾ ತಲುಪಿದರು. ನಂತರದ ದಿನಗಳಲ್ಲಿ ಇದೇ ಕ್ರಾಂತಿಕಾರಿ ಚಟುವಟಿಕೆಗಳ ತಾಣವಾಯಿತು. ಭಗತ್‍ಸಿಂಗ್ ಮತ್ತವರ ಇಬ್ಬರು ಸಂಗಾತಿಗಳು ಆಗ್ರಾದ ಹಿಂಗ್ ಕೀ ಮಂಡಿ ಎಂಬಲ್ಲಿ ಎರಡು ಮನೆಗಳನ್ನು ಬಾಡಿಗೆಗೆ ತೆಗೆದುಕೊಂಡರು. ಹತ್ತಿರವಿದ್ದ ಝಾನ್ಸಿ ಕಾಡು ಬಾಂಬ್ ಪರೀಕ್ಷೆಗೆ ಸೂಕ್ತವಾಗಿತ್ತು. ಪಂಜಾಬಿನಿಂದ ತಪ್ಪಿಸಿಕೊಂಡು ಬಂದ ಎಲ್ಲಾ ಕ್ರಾಂತಿಕಾರಿಗಳು ಪುನಃ ಇಲ್ಲಿ ಒಟ್ಟುಗೂಡಿದರು. ಬಂಗಾಳದಿಂದ ಜತಿನ್ ದಾಸ್, ಲಲಿತ್ ಮುಖರ್ಜಿ ಇವರನ್ನು ಸೇರಿಸಿಕೊಂಡರು.

ಅಲ್ಲಿ ಅವರು ಬಹಳ ಕಷ್ಟಕರವಾದ ದಿನಗಳನ್ನು ಕಳೆದರು. ಅವರಲ್ಲಿ ಮಲಗಲು ಸಾಕಷ್ಟು ಚಾಪೆ-ಹೊದಿಕೆಗಳಿರಲಿಲ್ಲ, ಅಡುಗೆ ಮಾಡಲು ಸಾಕಷ್ಟು ಪಾತ್ರೆಗಳಿರಲಿಲ್ಲ, ತಿನ್ನಲು ಸಾಕಷ್ಟು ಆಹಾರವಿರಲಿಲ್ಲ. ಎಷ್ಟೋ ದಿನಗಳು ಒಪ್ಪತ್ತಿನ ಊಟ ಮಾಡುತ್ತಿದ್ದರು ಅಥವಾ ಕೆಲವೊಮ್ಮೆ ನೀರನ್ನು ಕುಡಿದು ಮಲಗುತ್ತಿದ್ದರು. ಇವರೆಲ್ಲಾ ಶ್ರೀಮಂತ ಕುಟುಂಬಗಳಿಂದ ಬಂದವರಲ್ಲವಾದರೂ, ಅವರ ಮನೆಗಳಲ್ಲಿ ಊಟಕ್ಕೆ ಬಡತನವೇನೂ ಇರಲಿಲ್ಲ. ಆದರೆ ಬ್ರಿಟಿಷರ ದಾಸ್ಯದಲ್ಲಿದ್ದ ದೇಶವನ್ನು ಮುಕ್ತಿಗೊಳಿಸಲು, ಜನತೆಯ ಬಡತನ-ಸಂಕಷ್ಟಗಳನ್ನು ಅಳಿಸಲು, ಅವರು ಇಂತಹ ಕಷ್ಟ-ಕಾರ್ಪಣ್ಯಗಳನ್ನು ನಗುನಗುತ್ತಲೇ ಸಹಿಸಿದರು. ಅವರಲ್ಲಿ ಜಾತಿ, ಧರ್ಮಗಳ ಬೇಧವಿರಲಿಲ್ಲ. ಎಲ್ಲರೂ ಒಟ್ಟಿಗೆ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ, ದೇಶದ ಸ್ವಾತಂತ್ರ್ಯದ ಕನಸನ್ನು ಕಾಣುತ್ತಾ, ಬದುಕಿದ್ದರು. ಅವಶ್ಯಕತೆ ಬಂದಾಗ ಜೀವವನ್ನೂ ಸಹ ನಗುನಗುತ್ತಲೇ ತ್ಯಾಗ ಮಾಡುವ ಸಂಕಲ್ಪವನ್ನು ಹೊಂದಿದ್ದರು. ತಮ್ಮ ಮನೆ-ಮಠಗಳನ್ನು, ಬಂಧು-ಬಾಂಧವರನ್ನು, ಆತ್ಮೀಯರನ್ನೆಲ್ಲಾ ತೊರೆದು ಬಂದಿದ್ದರು. ಕೀರ್ತಿಗಾಗಿ, ಅಧಿಕಾರಕ್ಕಾಗಿ ಅಲ್ಲ, ಬದಲಿಗೆ ಒಂದು ಉನ್ನತ ಧ್ಯೇಯಕ್ಕಾಗಿ. 
ಚಂದ್ರಶೇಖರ್ ಆಜಾದ್ 

ಆಜಾದ್‍ರವರು ಪಕ್ಷದ ಹಣಕಾಸಿನ ಬಗ್ಗೆ ನೋಡಿಕೊಳ್ಳುತ್ತಿದ್ದರು.  ಅವರು ಮೋತಿಲಾಲ್ ನೆಹರೂ, ಪುರುಷೋತ್ತಮ ದಾಸ್ ಟಂಡನ್ ಮುಂತಾದ ಪ್ರಮುಖ ವ್ಯಕ್ತಿಗಳಿಂದಲೂ ಸಹಾಯ ಪಡೆಯುತ್ತಿದ್ದರು. ಕೆಲವು ಭಾರತೀಯ ಅಧಿಕಾರಿಗಳೂ ಸಹ ಗುಪ್ತವಾಗಿ ಹಣ ಸಹಾಯ ಮಾಡುತ್ತಿದ್ದರು. ಆದರೆ ಬಹುತೇಕ ಹಣ ಸಂಘಟನೆಯ ವಿವಿಧ ಕಾರ್ಯಗಳಿಗೇ ಖರ್ಚಾಗುತ್ತಿತ್ತು. ಹಾಗಾಗಿ ಬಹಳಷ್ಟು ಸಾರಿ ಕ್ರಾಂತಿಕಾರಿಗಳು ಉಪವಾಸವಿರಬೇಕಾಗುತಿತ್ತು. ವಿವಿಧ ಪ್ರಾಂತ್ಯಗಳಿಂದ ಕ್ರಾಂತಿಕಾರಿಗಳು ಆಗ್ರಾಕ್ಕೆ ಬಂದು ಬಾಂಬ್ ತಯಾರಿ, ಗುಂಡು ಹಾರಿಸುವಿಕೆಯಲ್ಲಿ ತರಬೇತಿ ಪಡೆದು ಹೋಗುತ್ತಿದ್ದರು. ಕೆಲವೆಡೆಗಳಲ್ಲಿ ತಾವೇ ಪ್ರಯೋಗ ಶಾಲೆಗಳನ್ನು ತೆರೆದರು. 

ಕ್ರಾಂತಿ ಎಂದರೇನು?
ಕ್ರಾಂತಿಯ ಬಗ್ಗೆ ಅವರಿಗಿದ್ದ ಅಭಿಪ್ರಾಯ- ‘ಕ್ರಾಂತಿ ಎಂದರೆ ಸಮಾಜದ ಮೂಲಭೂತ ಬದಲಾವಣೆ. ಅಂದರೆ, ಅದು ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಸಂಪೂರ್ಣ ನಾಶವಾಗಿರುತ್ತದೆ. ಪ್ರತಿ ಪೀಳಿಗೆ ತಾವು ಬದುಕಿದಂತಹ ಸಾಮಾಜಿಕ ಸಂಸ್ಥೆಗಳು ಸ್ಥಿರವೆಂಬ ಸಹಜ ಭ್ರಮೆಯಲ್ಲಿದ್ದವು. ಆದರೂ ಅಸಂಖ್ಯಾತ ವರ್ಷಗಳಿಂದ ಸಾಮಾಜಿಕ ಸಂಸ್ಥೆಗಳು ಬದಲಾಗುತ್ತಲೇ ಇವೆ. ಆದ್ದರಿಂದ, ಈಗಿರುವ ವ್ಯವಸ್ಥೆಯೂ ಸಹ ಬದಲಾಗಲೇಬೇಕು. ಬ್ರಿಟಿಷರ ಹಿಡಿತದಲ್ಲಿರುವ ಭಾರತ ಸ್ವತಂತ್ರಗೊಳ್ಳಬೇಕು. ಆದರೆ, ಜಮೀನುದಾರರ ಮತ್ತು ಕೈಗಾರಿಕೋದ್ಯಮಿಗಳ ಹಿಡಿತಕ್ಕೆ ಸಿಲುಕದೆ, ಕಾರ್ಮಿಕರು-ರೈತರು-ದುಡಿಯುವ ಜನತೆ ಅಧಿಕಾರ ವಹಿಸಿಕೊಳ್ಳುವಂತಾಗಬೇಕು.”

ಘದರ್ ಪಕ್ಷ ಇವರಿಗೆ ಒಂದು ಮಾರ್ಗದರ್ಶಕವಾಗಿತ್ತು. ಏಕೆಂದರೆ ಆ ಪಕ್ಷ ಮಾತ್ರ ಭಾರತದಲ್ಲಿ ವಿದೇಶಿಯರನ್ನು ಹೊಡೆದೋಡಿಸುವುದು ಮಾತ್ರವಲ್ಲದೆ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ರಿಪಬ್ಲಿಕನ್ (ಗಣತಂತ್ರ) ವ್ಯವಸ್ಥೆಯಾಗಿ ಬದಲಿಸಬೇಕೆಂದು ಘೋಷಿಸಿತ್ತು. ಅವರು ಜಾತಿ-ಧರ್ಮಗಳನ್ನು ದೂರವಿಟ್ಟಿದ್ದರು ಮತ್ತು ಧರ್ಮನಿರಪೇಕ್ಷತೆಯಲ್ಲಿ ನಂಬಿಕೆಯನ್ನಿಟ್ಟಿದ್ದರು. ಶಕ್ತಿ ಪ್ರಯೋಗ ಅವಶ್ಯಕ ಎಂದು ಭಾವಿಸಿದ್ದರು. ಅವರೂ ಸಹ ಕ್ರಾಂತಿಯಲ್ಲಿ ಸಾವು ಅನಿವಾರ್ಯ ಎಂದು ನಂಬಿದ್ದರು.

ಈ ಬಗ್ಗೆ ನಿರಂತರವಾಗಿ ಕ್ರಾಂತಿಕಾರಿಗಳ ನಡುವೆ ಚರ್ಚೆ ನಡೆಯುತ್ತಲೇ ಇರುತ್ತಿತ್ತು. ಎಷ್ಟೋ ಬಾರಿ ಅವರಿಗೆ ತಾವು ಮನೆ ಬಿಟ್ಟು ಬಂದ ಧ್ಯೇಯಕ್ಕೆ ಎಷ್ಟು ಹತ್ತಿರವಾಗಿದ್ದೇವೆ? ತಮ್ಮ ಪ್ರಯತ್ನದಿಂದ ಕ್ರಾಂತಿ ಹತ್ತಿರವಾಗುತ್ತಿದೆ0iÉುೀ? ಎನ್ನುವ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ ಅವರಿಗೆ ಒಂದಂತೂ ಖಚಿತವಾಗಿ ತಿಳಿದಿತ್ತು. ‘ಯಾವುದೇ ರಾಷ್ಟ್ರದ ಅವನತಿಗೆ ಕಾರಣ ವಿದೇಶಿ ಆಳ್ವಿಕೆ. ಯಾವುದೇ ದೇಶ ತನ್ನ ಶೋಷಕರ ಮೇಲೆ ಸಿಡಿದೆದ್ದಾಗ ಆರಂಭದಲ್ಲಿ ಸೋಲಾಗುವುದು ಸಹಜ. ಅದರ ಹೋರಾಟದ ಗತಿಯಲ್ಲಿ ಕೆಲವು ಸುಧಾರಣೆಗಳನ್ನು ಪಡೆದುಕೊಳ್ಳಬಹುದು. ಆದರೆ ಅಂತಿಮ ಹಂತದಲ್ಲಿ ಮಾತ್ರ ಅಂದರೆ, ರಾಷ್ಟ್ರದ ಎಲ್ಲಾ ಶಕ್ತಿಯನ್ನು, ಸಂಪನ್ಮೂಲಗಳನ್ನು ಸಂಘಟಿಸಿದಾಗ ಮಾತ್ರ ವಿದೇಶಿ ಸರ್ಕಾರವನ್ನು ನುಚ್ಚುನೂರು ಮಾಡುವಂತಹ ಅಂತಿಮ ಹೊಡೆತವನ್ನು ನೀಡಲು ಸಾಧ್ಯ.’ ಹಾಗಾಗಿ, ತಮ್ಮ ತುಂಬುಮನಸ್ಸಿನಿಂದ ಕ್ರಾಂತಿಯನ್ನು ಸಂಘಟಿಸುವ ಕೆಲಸದಲ್ಲಿ ನಿರತರಾಗಿದ್ದರು.

ಬ್ರಿಟಿಷರ ದಮನಕಾರಿ ಕಾಯಿದೆಗಳು
ಸ್ಯಾಂಡರ್ಸ್‍ನ ಕೊಲೆಯ ನಂತರ ಆರಂಭದಲ್ಲಿ ಬ್ರಿಟಿಷರು ಭಯಭೀತರಾಗಿದ್ದರು. ತಮ್ಮ ಕುಟುಂಬಗಳನ್ನು ವಾಪಸ್ ಇಂಗ್ಲೆಂಡಿಗೆ ಕಳಿಸಿದ್ದರು. ಆದರೆ ಅದೇನೂ ಅಷ್ಟು ದೊಡ್ಡ ಪೆಟ್ಟಾಗಿ ಕಾಣಲಿಲ್ಲ. ತಮ್ಮ ದಮನಕಾರಿ ಧೋರಣೆಯಿಂದ ಅದನ್ನೂ ತಡೆಗಟ್ಟಬಹುದೆಂದು ಬ್ರಿಟಿಷರು ಭಾವಿಸಿದರು. ಕಾಂಗ್ರೆಸ್‍ನ ಬಗ್ಗೆ ಅವರಿಗೆ ಯಾವುದೇ ಭಯವಿರಲಿಲ್ಲ ಆದ್ದರಿಂದ ಬ್ರಿಟಿಷರು ಕ್ರಾಂತಿಕಾರಿಗಳನ್ನು ದಮನಗೊಳಿಸಲು ಮತ್ತು ಎಲ್ಲೆಡೆ ಬೆಳೆಯುತ್ತಿದ್ದ ಕಾರ್ಮಿಕ ಚಳುವಳಿಗಳನ್ನು ಹತ್ತಿಕ್ಕಲು ಎರಡು ಮಸೂದೆಗಳನ್ನು ಜಾರಿಗೊಳಿಸಬೇಕೆಂದು ನಿರ್ಧರಿಸಿದರು. ಮೊದಲನೆಯದು-ಸಾರ್ವಜನಿಕ ರಕ್ಷಣಾ ಮಸೂದೆ-ಕ್ರಾಂತಿಕಾರಿಗಳನ್ನು ಹತ್ತಿಕ್ಕಲು. ಈ ಕಾಯಿದೆಯ ಪ್ರಕಾರ ಯಾರನ್ನು ಬೇಕಾದರೂ ವಿಚಾರಣೆಯಿಲ್ಲದೆ ಬಂಧನದಲ್ಲಿರಿಸಬಹುದಿತ್ತು. ಎರಡನೆಯದು-ಕಾರ್ಮಿಕರ ವಿವಾದಗಳ ಮಸೂದೆ- ಕಾರ್ಮಿಕರು ಮುಷ್ಕರಗಳನ್ನು ಸಂಘಟಿಸದಂತೆ ತಡೆಹಿಡಿಯಲು. ಈಗಾಗಲೆ ಕಾರ್ಮಿಕರ ಮುಷ್ಕರಗಳಿಂದ ಮಿಲ್ ಮಾಲೀಕರು ಕಾರ್ಮಿಕರ ವೇತನವನ್ನು ಹೆಚ್ಚಳಗೊಳಿಸಬೇಕಾಗಿತ್ತು. ಅಸೆಂಬ್ಲಿಯಲ್ಲಿ ಇದನ್ನು ಅನುಮೋದಿಸುವುದು ಬಹಳ ಸುಲಭ ಎಂದು ಬ್ರಿಟಿಷ್ ಸರ್ಕಾರಕ್ಕೆ ತಿಳಿದಿತ್ತು. ಕ್ರಾಂತಿಕಾರಿಗಳೂ ಸಹ ಅಸೆಂಬ್ಲಿ ನಿರುಪಯುಕ್ತ ಸಂಸ್ಥೆ ಎಂದು ಭಾವಿಸಿದ್ದರು. ಅದು ಭಾರತೀಯರ ಅಸಹಾಯಕತೆ ಮತ್ತು ಬ್ರಿಟಿಷರ ನಿರಂಕುಶತೆಯ ಪ್ರತೀಕವಾಗಿತ್ತು ಎಂಬುದು ಅವರ ಅಭಿಪ್ರಾಯವಾಗಿತ್ತು. 

‘ಕಾಯಿದೆಗಳಿಗೆ ಹೆದರುವವರು ನಾವಲ್ಲ’
ಗಲ್ಗಂಬಕ್ಕೇ ಹೆದರದ ಕ್ರಾಂತಿಕಾರಿಗಳು ಈ ಕಾಯಿದೆಗಳಿಗೆ ಹೆದರುವುದುಂಟೇ? ಅದನ್ನು ಬ್ರಿಟಿಷರಿಗೆ ಮನದಟ್ಟು ಮಾಡಿಸುವ ರೀತಿಯ ಬಗ್ಗೆ ಚರ್ಚೆ ನಡೆಯಿತು.  ಜೊತೆಗೆ, ತಮ್ಮ ಚಟುವಟಿಕೆಗಳು ಗುಪ್ತವಾಗಿ ನಡೆಯುತ್ತಿದ್ದು, ಈ ಮಸೂದೆಗಳು ಜಾರಿಗೊಂಡರೆ ಆ ಕೆಲಸಗಳು ಇನ್ನಷ್ಟು ಕಷ್ಟಕರವಾಗುತ್ತದೆ, ಆಗ ಜನತೆಗೆ ತಮ್ಮ ಸಂದೇಶವನ್ನು ತಲುಪಿಸುವುದು ಇನ್ನಷ್ಟು ದುಸ್ತರವಾಗುತ್ತದೆ. ಹಾಗಾಗಿ ಈ ಮಸೂದೆಗಳನ್ನು ವಿರೋಧಿಸಬೇಕೆಂಬುದು ಕ್ರಾಂತಿಕಾರಿಗಳ ನಿಲುವಾಗಿತ್ತು. ಅಸೆಂಬ್ಲಿಯಲ್ಲಿ ಅದನ್ನು ಮಂಡಿಸಿ, ಜಾರಿಗೊಳಿಸಿ ಕ್ರಾಂತಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಲು ಬ್ರಿಟಿಷ್ ಸರ್ಕಾರ ಉದ್ದೇಶಿಸಿರುವುದರಿಂದ, ಅಲ್ಲಿ ಏಕೆ ಪ್ರತಿಭಟನೆಯನ್ನು ಮಾಡಬಾರದು ಎಂಬ ವಿಚಾರ ಕ್ರಾಂತಿಕಾರಿಗಳಲ್ಲಿ ಮೂಡಿತು. ಆದರೆ ಹೇಗೆ? ಇನ್ನೊಬ್ಬ ಅಧಿಕಾರಿಯನ್ನು ಕೊಲ್ಲುವುದೇ? ಬೇಡವೆಂಬ ಒಮ್ಮತ ಅಭಿಪ್ರಾಯ ಮೂಡಿಬಂತು.

ಅಸೆಂಬ್ಲಿಯ ಹೊರಗಡೆ ಯಾವುದೇ ರೀತಿಯ ಪ್ರತಿಭಟನೆ ನಡೆದರೂ ಅವರ ಬಂಧನ ಖಚಿತ. ಹಾಗಿದ್ದಲ್ಲಿ ಅಸೆಂಬ್ಲಿಯನ್ನೇ ಏಕೆ ತಮ್ಮ ಸಂದೇಶದ ಹರಡುವಿಕೆಗೆ ಬಳಸಬಾರದು ಎಂಬ ಪ್ರಶ್ನೆ ಬಂತು. ತಮ್ಮ ಅಸ್ತಿತ್ವವನ್ನು ದಾಖಲಿಸಿ ಅಲ್ಲಿ ಪ್ರತಿಭಟನೆ ಮಾಡಲು ಶಾಂತಿ ವಿಧಾನವನ್ನು ಬಳಸುವುದು ಅವಶ್ಯಕ ಎನಿಸಿತು. ಕ್ರಾಂತಿಕಾರಿಗಳೆಂದರೆ ‘ಕೊಲೆಗಡುಕರ ಗುಂಪಲ್ಲ’, ಬದಲಿಗೆ ಒಂದು ಧ್ಯೇಯಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಬಂಧನ, ಜೈಲು, ಪೋಲೀಸ್ ದೌರ್ಜನ್ಯ, ಕೊನೆಗೆ ಗಲ್ಲು ಶಿಕ್ಷೆಯನ್ನೂ ಸಹ ಎದುರಿಸಲು ಸಿದ್ಧರಿರುವ ಧೀರರು ಎಂದು ಸಾಬೀತುಪಡಿಸಬೇಕಿತ್ತು. 

ದಮನಕಾರಿ ಮಸೂದೆಗಳ ವಿರುದ್ಧ ಪ್ರತಿಭಟಿಸಬೇಕು. ಜೊತೆಗೆ, ಅಸೆಂಬ್ಲಿ ಸದಸ್ಯರ ಮುಖ್ಯವಾಗಿ ಭಾರತೀಯ ಸದಸ್ಯರ ಕಣ್ಣು, ಕಿವಿಗಳನ್ನು ತೆರೆಸಬೇಕು. ಅದಕ್ಕಾಗಿ ಇಬ್ಬರು ಕ್ರಾಂತಿಕಾರಿಗಳು ಸಾರ್ವಜನಿಕ ಗ್ಯಾಲರಿಯಿಂದ ಟ್ರೆಶರಿ ಬೆಂಚ್‍ಗಳ ಮೇಲೆ ಯಾರಿಗೂ ಗಾಯವಾದಂತಹ ಸ್ಥಳವನ್ನು ನೋಡಿಕೊಂಡು-ಬಾಂಬ್‍ಗಳನ್ನು ಎಸೆಯಬೇಕೆಂದು ತೀರ್ಮಾನಿಸಲಾಯಿತು. ಈ ಸ್ಫೋಟದಿಂದ ಇಡೀ ದೇಶದ ಜನತೆಯಲ್ಲಿ ಚರ್ಚೆ ಆರಂಭವಾಗುತ್ತದೆ – ಈ ಯುವಜನರು ಏತಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು ಎಂದು. ಬ್ರಿಟಿಷರ ಅಮಾನವೀಯ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿಗಳು ಎಲ್ಲಾ ರೀತಿಯ ಅಪಾಯಗಳನ್ನು ಎದುರಿಸಲು ಸಿದ್ಧರು ಎಂಬುದು ಆಗ ಜನತೆಗೆ ಅರಿವಾಗುತ್ತದೆ. ಜೊತೆಗೆ, ನ್ಯಾಯಾಲಯದಲ್ಲಿ ಕ್ರಾಂತಿಕಾರಿಗಳು ತಮ್ಮ ಕಾರ್ಯಗಳ ಬಗ್ಗೆ ಜನತೆಗೆ ಮನದಟ್ಟು ಮಾಡಿಕೊಡಬೇಕೆಂದು ನಿರ್ಧರಿಸಲಾಯಿತು. ಈ ಕಾರ್ಯವನ್ನು ಮಾಡಲು ಬಟುಕೇಶ್ವರ ದತ್ ಹಾಗೂ ರಾಮ್‍ಶರಣ್‍ದಾಸ್‍ರನ್ನು ನೇಮಿಸಲಾಯಿತು. 


--ಸುಧಾ ಜಿ



ಕಾಮೆಂಟ್‌ಗಳಿಲ್ಲ: