Pages

ಅನುವಾದ - ನನಗೆ ಪತ್ನಿ ಏಕೆ ಬೇಕು? – ಜೂಡಿ ಬ್ರಾಡಿ


(ಮೊದಲಿಗೆ ಈ ಲೇಖನ 1972ರಲ್ಲಿ ಮಿಸ್ ಮ್ಯಾಗಜೈನ್ ನಲ್ಲಿ ಪ್ರಕಟವಾಯಿತು ಮತ್ತು 1990ರಲ್ಲಿ ಅದೇ ಪತ್ರಿಕೆಯಲ್ಲಿ ಮರುಮುದ್ರಣಗೊಂಡಿತು)
ನಾನು ಪತ್ನಿಯರುಎನ್ನುವ ಜನರ ವರ್ಗೀಕರಣದ ಗುಂಪಿಗೆ ಸೇರುತ್ತೇನೆ. ನಾನೊಬ್ಬ ಪತ್ನಿ, ಹಾಗೆಯೇ ನಾನೊಬ್ಬ ತಾಯಿ ಸಹ. ಇತ್ತೀಚೆಗಷ್ಟೇ ನನ್ನ ಗೆಳೆಯನೊಬ್ಬ ವಿಚ್ಛೇದನವನ್ನು ಪಡೆದುಕೊಂಡ. ಅವನಿಗೆ ಮೊದಲ ಪತ್ನಿಯಿಂದ ಒಂದು ಮಗುವಿದೆ. ಈಗ ಇನ್ನೊಬ್ಬ ಪತ್ನಿಗಾಗಿ ಹುಡುಕಾಟ ನಡೆಸಿದ್ದಾನೆ. ಒಂದು ದಿನ ಬಟ್ಟೆ ಇಸ್ತ್ರಿ ಮಾಡುತ್ತಾ ಅವನ ಬಗ್ಗೆ ಆಲೋಚಿಸುತ್ತಿದ್ದಾಗ ನನಗೂ ಒಬ್ಬ ಪತ್ನಿ ಬೇಕೆನಿಸಿತು.
ನನಗೇಕೆ ಪತ್ನಿ ಬೇಕು?
ನನಗೀಗ ಕಾಲೇಜಿಗೆ ಹೋಗಿ ಓದಿಕೊಂಡು ಆರ್ಥಿಕವಾಗಿ ಸ್ವತಂತ್ರವಾಗಿ, ನನ್ನನ್ನು, ಅವಶ್ಯವಿದ್ದರೆ ನನ್ನ ಮೇಲೆ ಅವಲಂಬಿತರಾಗಿರುವವರನ್ನು ನೋಡಿಕೊಳ್ಳಬೇಕೆನಿಸಿದೆ. ಅವಳು ಕೆಲಸ ಮಾಡುತ್ತಾ, ನನ್ನನ್ನು ಕಾಲೇಜಿಗೆ ಕಳಿಸಲು ನನಗೆ ಪತ್ನಿ ಬೇಕು.
ನಾನು ಕಾಲೇಜಿನಲ್ಲಿರಬೇಕಾದರೆ ನನ್ನ ಮಕ್ಕಳನ್ನು ನೋಡಿಕೊಳ್ಳಲು ನನಗೆ ಒಬ್ಬ ಪತ್ನಿ ಬೇಕು. ಮಕ್ಕಳ ವೈದ್ಯರ, ದಂತವೈದ್ಯರ ಅಪಾಯಿಂಟ್ಮೆಂಟ್, ನನ್ನದನ್ನೂ ಸಹ ನೆನಪಿಟ್ಟುಕೊಳ್ಳಲು, ನನಗೆ ಪತ್ನಿ ಬೇಕು.
ನನ್ನ ಮಕ್ಕಳು ಸರಿಯಾಗಿ ತಿನ್ನುವುದನ್ನು ಖಚಿತ ಪಡಿಸಿಕೊಳ್ಳಲು, ಸ್ವಚ್ಛವಾಗಿಡಲು ನನಗೆ ಒಬ್ಬ ಪತ್ನಿ ಬೇಕು. ನನ್ನ ಮಕ್ಕಳ ಬಟ್ಟೆಗಳನ್ನು ಸ್ವಚ್ಛಗೊಳಿಸುವ, ಅವುಗಳನ್ನು ರಿಪೇರಿ ಮಾಡುವ ಪತ್ನಿ ಬೇಕು. ಒಬ್ಬ ಒಳ್ಳೆಯ ಪಾಲಕಿಯಾಗಿರುವ, ಅವರನ್ನು ಶಾಲೆಗೆ ಕಳಿಸಲು ರೆಡಿ ಮಾಡುವ, ಅವರಿಗೆ ಸ್ನೇಹಿತರ ಜೊತೆ ಸಾಕಷ್ಟು ಸಾಮಾಜಿಕ ಜೀವನ ಸಿಗುವಂತೆ ಮಾಡುವ, ಪಾರ್ಕ್, ಮೃಗಾಲಯ ಇತ್ಯಾದಿಗಳಿಗೆ ಕರೆದೊಯ್ಯುವ ಪತ್ನಿ ಬೇಕು. ಮಕ್ಕಳು ಹುಷಾರಿಲ್ಲದಿದ್ದಾಗ ನೋಡಿಕೊಳ್ಳಲು, ಮಕ್ಕಳಿಗೆ ಅವಶ್ಯಕತೆ ಇದ್ದಾಗ ವಿಶೇಷ ಕಾಳಜಿ ವಹಿಸಲು ಪತ್ನಿ ಬೇಕು, ಏಕೆಂದರೆ ನಾನು ನನ್ನ ಕಾಲೇಜಿನ ತರಗತಿಗಳನ್ನು ಬಿಡಲಾಗುವುದಿಲ್ಲ.
ನನ್ನ ಪತ್ನಿ ಕೆಲಸದ ನಡುವೆ ಸಮಯವನ್ನು ಮಾಡಿಕೊಳ್ಳಬೇಕು ಆದರೆ ಕೆಲಸವನ್ನು ಕಳೆದುಕೊಳ್ಳಬಾರದು. ಇದರಿಂದ ನನ್ನ ಪತ್ನಿಯ ಆದಾಯದಲ್ಲಿ ಆಗಾಗ ಸ್ವಲ್ಪ ಕಡಿತವಾಗಬಹುದು, ಆದರೆ ಅದನ್ನು ನಾನು ಸಹಿಸಿಕೊಳ್ಳಬಲ್ಲೆ. ನನ್ನ ಪತ್ನಿ ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ನೋಡಿಕೊಳ್ಳುವವರಿಗೆ ಸಂಬಳ ನೀಡುತ್ತಾಳೆ ಎಂದು ಬೇರೆಯಾಗಿ ಏನೂ ಹೇಳಬೇಕಿಲ್ಲ.
ನನ್ನ ವೈಯಕ್ತಿಕ ಅವಶ್ಯಕತೆಗಳ ಬಗ್ಗೆ ಕಾಳಜಿ ವಹಿಸಲು ಪತ್ನಿ ಬೇಕು. ನನ್ನ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪತ್ನಿ ಬೇಕು. ನನ್ನ ಮಕ್ಕಳು ಮತ್ತು ನಾನು ಆಯ್ಕೆ ಮಾಡಿದ ನಂತರ ಆಯ್ಕೆ ಮಾಡಿಕೊಳ್ಳುವ ಪತ್ನಿ ಬೇಕು. ನನ್ನ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡಿ, ರಿಪೇರಿ ಮಾಡಿ, ಅವಶ್ಯಕತೆ ಇದ್ದರೆ ಬದಲಾಯಿಸಿಡಲು ಪತ್ನಿ ಬೇಕು. ನನಗೆ ಬೇಕೆನಿಸಿದಾಗ ವಸ್ತುಗಳು ಸಿಗುವಂತೆ ನನ್ನೆಲ್ಲ ವಸ್ತುಗಳನ್ನು ಸರಿಯಾದ ಜಾಗದಲ್ಲಿಡಲು ನನಗೆ ಪತ್ನಿ ಬೇಕು. ನನಗೆ ಅಡಿಗೆ ಮಾಡಿಡಲು ಪತ್ನಿ ಬೇಕು, ಅವಳು ಉತ್ತಮ ಅಡಿಗೆಯವಳಾಗಿರಬೇಕು. ಪ್ರತಿದಿನದ ಊಟದ ಪ್ಲಾನ್ ಮಾಡಿ ಅವಶ್ಯಕತೆಯಾದ ಸಾಮಾನುಗಳನ್ನು ಕೊಂಡು ತಂದು, ಅಡುಗೆ ಮಾಡಿ, ಖುಷಿಯಿಂದ ನಮಗೆ ಬಡಿಸಲು ಮತ್ತು ನಂತರ ನಾನು ಓದಿಕೊಳ್ಳುವಾಗ ಎಲ್ಲವನ್ನೂ ಸ್ವಚ್ಛಗೊಳಿಸಲು ನನಗೆ ಪತ್ನಿ ಬೇಕು.
ನಾನು ಹುಷಾರಿಲ್ಲದೆ ಇದ್ದಾಗ ನನ್ನನ್ನು ನೋಡಿಕೊಳ್ಳಲು, ನನ್ನ ನೋವಿಗೆ ಮತ್ತು ಕಾಲೇಜಿನ ಸಮಯದ ನಷ್ಟಕ್ಕೆ ಮರುಕ ವ್ಯಕ್ತಪಡಿಸಲು ಪತ್ನಿ ಬೇಕು.
ನಮ್ಮ ಕುಟುಂಬ ರಜೆಗೆ ಹೊರಗಡೆ ಹೋಗುವಾಗ ನನ್ನ ಮತ್ತು ನನ್ನ ಮಕ್ಕಳ ಕಾಳಜಿ ವಹಿಸಲು ನನ್ನ ಪತ್ನಿ ನನ್ನೊಂದಿಗೆ ಬರಬೇಕು.
ನನ್ನ ಪತ್ನಿ, ಪತ್ನಿಯರ ಕರ್ತವ್ಯದ ಬಗ್ಗೆ ಅನುಪಯುಕ್ತ ದೂರುಗಳನ್ನು ಹೇಳುತ್ತಾ ನನಗೆ ತೊಂದರೆ ಕೊಡಬಾರದು. ಆದರೆ ನಾನು ನನ್ನ ಪತ್ನಿಗೆ ನನ್ನ ಓದಿನಲ್ಲಿ ಕಷ್ಟಕರ ವಿಚಾರವನ್ನು ವಿವರಿಸಬೇಕೆಂದೆನಿಸಿದಾಗ ಅವಳು ಅದನ್ನು ಕೇಳಿಸಿಕೊಳ್ಳಬೇಕು.
ನನ್ನೆಲ್ಲ ಪೇಪರ್ ಗಳನ್ನು ಟೈಪ್ ಮಾಡಿ ಕೊಡಲು ನನಗೆ ಪತ್ನಿ ಬೇಕು.
ನನ್ನ ಎಲ್ಲಾ ಸಾಮಾಜಿಕ ಸಂಬಂಧಗಳನ್ನು ನೋಡಿಕೊಳ್ಳಲು ನನಗೆ ಪತ್ನಿ ಬೇಕು. ನನ್ನ ಗೆಳೆಯರು ನಮ್ಮಿಬ್ಬರನ್ನು ಆಹ್ವಾನಿಸಿದಾಗ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯಾರಿಗಾದರೂ ವಹಿಸಿಕೊಡಲು ನನಗೆ ಪತ್ನಿ ಬೇಕು. ನನ್ನ ಕಾಲೇಜಿನ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬರಬೇಕೆನಿಸಿದಾಗ, ಮನೆಯನ್ನು ನೀಟಾಗಿ ಇಟ್ಟು, ವಿಶೇಷ ಭೋಜನ ತಯಾರಿಸಿ, ನನಗೆ ಮತ್ತು ನನ್ನ ಸ್ನೇಹಿತರಿಗೆ ಬಡಿಸಲು ನನಗೆ ಪತ್ನಿ ಬೇಕು; ನಾನು ಮತ್ತು ನನ್ನ ಸ್ನೇಹಿತರು ನಮಗೆ ಆಸಕ್ತಿ ಎನಿಸಿದ ವಿಚಾರಗಳನ್ನು ಮಾತನಾಡುವಾಗ ಮಧ್ಯೆ ಮಾತನಾಡಬಾರದು. ನನ್ನ ಮಕ್ಕಳು ನಮಗೆ ತೊಂದರೆ ಕೊಡದಂತೆ ಅತಿಥಿಗಳು ಬರುವ ಮುನ್ನವೇ ಮಕ್ಕಳಿಗೆ ತಿನ್ನಿಸಿ ಮಲಗಿಸಲು ನನಗೆ ಪತ್ನಿ ಬೇಕು. ನನ್ನ ಅತಿಥಿಗಳ ಎಲ್ಲ ಸೌಕರ್ಯ ನೋಡಿಕೊಳ್ಳಲು, ಅವರಿಗೆ ಆಶ್ ಟ್ರೇ ಒದಗಿಸಲು, ಊಟಕ್ಕೆ ಮುಂಚೆ ಸೂಪ್ ನೀಡಲು, ಊಟ ಬಡಿಸಲು, ಅವರ ವೈನ್ ಗ್ಲಾಸ್ ಗಳನ್ನು ಮತ್ತೆ ಮತ್ತೆ ತುಂಬಲು, ಅವರು ಇಚ್ಛಿಸುವ ರೀತಿಯಲ್ಲಿ ಕಾಫಿû ನೀಡಲು ನನಗೆ ಪತ್ನಿ ಬೇಕು.
ಕೆಲವೊಮ್ಮೆ ಅವಳಿಗೆ ಇಡೀ ರಾತ್ರಿ ನಾನೊಬ್ಬನೇ ಇರಲು ಬಯಸುತ್ತೇನೆ ಎಂದು ಅರ್ಥವಾಗಬೇಕು. ನನ್ನ ಲೈಂಗಿಕ ಅವಶ್ಯಕತೆಗಳ ಬಗ್ಗೆ ಸೂಕ್ಷ್ಮವಾಗಿರುವ ಪತ್ನಿ ಬೇಕು. ನನಗೆ ಬೇಕೆನಿಸಿದಾಗ ನನ್ನನ್ನು ತೀವ್ರವಾಗಿ ಪ್ರೀತಿಸಬೇಕು, ನನಗೆ ತೃಪ್ತಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತಹ ಪತ್ನಿ ಬೇಕು. ಆದರೆ ನನಗೆ ಇಷ್ಟವಿಲ್ಲದಾಗ ಲೈಂಗಿಕ ಗಮನದ ಬೇಡಿಕೆಯನ್ನಿಡಬಾರದು.
ಜನನ ನಿಯಂತ್ರಣದ ಸಂಪೂರ್ಣ ಜವಾಬ್ದಾರಿಯನ್ನು ಹೊರುವಂತಹ ಪತ್ನಿ ಬೇಕು, ಏಕೆಂದರೆ ನನಗೆ ಇನ್ನು ಹೆಚ್ಚು ಮಕ್ಕಳು ಬೇಕಿಲ್ಲ.
ನನ್ನ ಜೊತೆ ನಿಷ್ಠೆಯಿಂದಿರುವ ಪತ್ನಿ ಬೇಕು ಏಕೆಂದರೆ ನನ್ನ ಬೌದ್ಧಿಕ ಜೀವನವನ್ನು ಈ ಅಸೂಯೆಗಳೊಂದಿಗೆ ಹಾಳುಮಾಡಿಕೊಳ್ಳಲು ನನಗಿಷ್ಟವಿಲ್ಲ. ನನ್ನ ಲೈಂಗಿಕ ಅಗತ್ಯತೆಗಳು ನನ್ನನ್ನು ದೃಢವಾಗಿ ಏಕಪತ್ನಿತ್ವಕ್ಕೆ ಬದ್ಧನಾಗಿರದಂತೆ ಮಾಡಬಲ್ಲದು ಎಂಬುದನ್ನು ನನ್ನ ಪತ್ನಿ ಅರ್ಥಮಾಡಿಕೊಳ್ಳುವಂತಿರಬೇಕು. ಜನರೊಂದಿಗೆ ಸಂಪರ್ಕವನ್ನು ಬೆಳಸಿಕೊಳ್ಳಲು ಅವಕಾಶ ನೀಡಬೇಕು.
ನನ್ನ ಪತ್ನಿಗಿಂತ ಹೆಚ್ಚು ಸೂಕ್ತವಾದ ವ್ಯಕ್ತಿ ದೊರೆತರೆ, ನನ್ನ ಪ್ರಸಕ್ತ ಪತ್ನಿಯನ್ನು ಬಿಟ್ಟು ಇನ್ನೊಂದು ಮದುವೆಯಾಗುವ ಸ್ವಾತಂತ್ರ್ಯವಿರಬೇಕು. ಸಹಜವಾಗಿ, ನಾನು ಹೊಸ ಜೀವನ ಬಯಸುತ್ತೇನೆ; ಆದ್ದರಿಂದ ನನ್ನ ಪತ್ನಿ ಮಕ್ಕಳ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡು ನನ್ನನ್ನು ಸ್ವತಂತ್ರನಾಗಿ ಬಿಡಬೇಕು.
ಕಾಲೇಜನ್ನು ಮುಗಿಸಿ ಉದ್ಯೋಗ ತೆಗೆದುಕೊಂಡಾಗ, ನನ್ನ ಪತ್ನಿ ಕೆಲಸವನ್ನು ಬಿಟ್ಟು ಮನೆಯಲ್ಲಿ ಉಳಿಯಬೇಕು; ಇನ್ನೂ ಹೆಚ್ಚು ಪರಿಪೂರ್ಣವಾಗಿ ಪತ್ನಿಯ ಜವಾಬ್ದಾರಿಗಳನ್ನು ನಿರ್ವಹಿಸಬೇಕು.
ಓಹ್ ದೇವರೇ! ಯಾರಿಗೆ ಬೇಡ ಪತ್ನಿ!!!!

ಅನುವಾದ - ಸುಧಾ ಜಿ

2 ಕಾಮೆಂಟ್‌ಗಳು:

Rajiv Magal ಹೇಳಿದರು...

Not very interesting concept; just for the heck of it!

Sudha Neela ಹೇಳಿದರು...

Only a person who can understand and realise women's position, can appreciate this article