Pages

ಪುಟಾಣಿ ಕಥೆಗಳು


ಪುಟಾಣಿ ಕಥೆ - ೧
ಮಹನೀಯರೊಬ್ಬರು" ಜಾತಿ ಮತ್ತು ಧರ್ಮದ " ಬಗ್ಗೆ ವೇದಿಕೆಯಲ್ಲಿ ಭಾಷಣ ಮಾಡಿ ಮನೆಗೆ ಬಂದಾಗ, ರಿಜಿಸ್ಟ್ರಾರ್ ಮದುವೆ ಮಾಡಿಕೊಂಡು, ಮಡದಿಯನ್ನು ಕರೆದುಕೊಂಡು ಬಂದ ಮಗನನ್ನು ಕೇಳಿದರು, "ಹುಡುಗಿ ನಮ್ಮವಳೇ??!!"


ಪುಟಾಣಿ ಕಥೆ - ೨
ಮನೆಗೆಲಸ ಮಾಡಿ ಸುಸ್ತಾಗಿ ಫ್ಯಾನ್ ಕೆಳಗೆ ಕಣ್ಮುಚ್ಚಿ ಕುಳಿತ್ತಿದ್ದ ಸೊಸೆಗೆ, ಅತ್ತೆ ಚಹಾ ತಂದು ಕೊಟ್ಟಾಗ ಅಚ್ಚರಿಗೊಂಡವಳಿಗೆ ಅತ್ತೆ ಹೇಳಿದರು "ಸೊಸೆ ಮಗಳಾಗಬಹುದು, ಅತ್ತೆ ಅಮ್ಮನಾಗಬಾರದೆ?"

ಪುಟಾಣಿ ಕಥೆ - ೩
ಮಗನನ್ನು ಚೆನ್ನಾಗಿ ಓದಿ, ಉನ್ನತ ಹುದ್ದೆಗೆ ಸೇರು ಎಂದು ಹೇಳಿದ ಅಪ್ಪನಿಗೆ, "ಯಾಕಪ್ಪ ನಾನು ನಿನ್ನಂತೆ, ಭೂತಾಯಿ ಸೇವೆ ಮಾಡಬಾರದ?!" ಎಂದ ಮಗ.

ಪುಟಾಣಿ ಕಥೆ-೪
ಮೊದಲನೆಯ ದಿನ ಕೆಲಸಕ್ಕೆ ಹೋಗಿ ಬಂದ ಮಗನಿಗೆ ಜ್ಯೂಸ್ ಕೊಡುತ್ತ, "ಸಾಕಾಯಿತ ಮಗನೆ?" ಎಂದ ಅಮ್ಮನಿಗೆ ಮಗ ನಗುತ್ತಾ ಹೇಳಿದ "ಬೆಳಿಗ್ಗೆಯಿಂದ ರಾತ್ರಿಯವರೆಗೂ ನೀ ಮಾಡುವ ಕೆಲಸದ ಮುಂದೆ ಇದು ಏನೂ ಇಲ್ಲ??!!"

ಪುಟಾಣಿ ಕಥೆ- ೫
ಶಾಲೆಯಿಂದ ತಡವಾಗಿ ಬಂದ ಮಗನಿಗೆ ಏಕೆ ತಡವಾಯಿತೆಂದು ಆತಂಕದಿಂದ ಕೇಳಿದಳು ಅಮ್ಮ. ನೀನೆ ಹೇಳಿದ್ದೆಯಲ್ಲಮ್ಮ "ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂದು, ಅಜ್ಜಿಯೊಬ್ಬರನ್ನು ರಸ್ತೆ ದಾಟಿಸಿ ಬಂದೆನಮ್ಮ" ಎಂದ ನಗುತ್ತ ಮಗ

ಪುಟಾಣಿ ಕಥೆ-೬
"ಸ್ನೇಹಿತರ ದಿನಾಚರಣೆ"ಯನ್ನು ಆಚರಿಸಿದ ಗೆಳೆಯರಿಬ್ಬರು, ಮನೆಗೆ ಹಿಂದಿರುಗುವಾಗ "ಬಸ್ ಟಿಕೇಟ್" ತೆಗೆದುಕೊಳ್ಳುವ ವಿಷಯಕ್ಕಾಗಿ ಜಗಳವಾಡಿಕೊಂಡು ಮಾತು ಬಿಟ್ಟರು.

ಪುಟಾಣಿ ಕಥೆ-೭
ತರಗತಿಯಲ್ಲಿ "ತರಲೆ ವಿದ್ಯಾರ್ಥಿಗಳು" ಎಂದೆ ಹೆಸರಾಗಿದ್ದ ಎಲ್ಲರು ಪರೀಕ್ಷೆಯಲ್ಲಿ ಪ್ರಥಮದರ್ಜೆಯಲ್ಲಿ ತೇರ್ಗಡೆಯಾದರು. ಮೇಷ್ಟ್ರು ಅವರನ್ನು ಏನ್ರಪ್ಪ "ಎಲ್ಲರು ಫಸ್ಟ್‌ಕ್ಲಾಸ್!!" ಎಂದಾಗ, "ತರಲೆ ಮಾಡುವರೆಲ್ಲ ಓದಲ್ವಾ!!" ಸರ್ ಎಂದ ಅವರಲೊಬ್ಬ.

ಪುಟಾಣಿ ಕಥೆ-೮
ಹುಷಾರಿಲ್ಲದ ಅಕ್ಕನನ್ನು ನೋಡಿಕೊಳ್ಳುತ್ತಿದ್ದ ತಂಗಿಯನ್ನು ಕೇಳಿದಳು ಅಕ್ಕ, "ಕಷ್ಟವಾಗುತ್ತಿದೆಯಲ್ಲವೆ?" "ನೀನು ಕಷ್ಟವೆಂದು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ ನಾನೆಲ್ಲಿರುತ್ತಿದ್ದೆ?" ಕೇಳಿದಳು ತಂಗಿ.

ಪುಟಾಣಿ ಕಥೆ--೯
ಆಶ್ರಮವೊಂದರಲ್ಲಿ ಗುರುಗಳು "ಹಣ, ಹೊನ್ನು ಎಲ್ಲಾ ಮಾಯೆ" ಎಂದು ಪ್ರವಚನ ನೀಡುತ್ತಿದ್ದರು. "ಕಾಣಿಕೆ ನೀಡಿದವರಿಗೆ ವಿಶೇಷ ಆಶೀರ್ವಾದ" ಎಂಬ ಬೋರ್ಡ್ ಏಕೆ? ಕೇಳಿದ ಭಕ್ತರಲೊಬ್ಬ.!!
 

ಪುಟಾಣಿ ಕಥೆ- ೧೦
ಕಾರ್ಯಕ್ರಮದ ಭಾಷಣವೊಂದರಲ್ಲಿ "ಹೆಸರಿನಲ್ಲೇನಿದೆ, ಎಲೆ ಮರೆಯ ಕಾಯಿಯಂತಿರಬೇಕು" ಎನ್ನುತ್ತಿದ್ದವರು, ವಂದನಾರ್ಪಣೆಯಲ್ಲಿ ತಮ್ಮ ಹೆಸರನ್ನು ಹೇಳಲಿಲ್ಲವೆಂದು ಕೋಪಿಸಿಕೊಂಡರು!!

ಪುಟಾಣಿ ಕಥೆ-೧೧
ತನ್ನನ್ನೆ ಹಿಂಬಾಲಿಸಿ ಬರುತ್ತಿದ್ದವನನ್ನು ನೋಡಿ ಕೋಪಗೊಂಡು ರೇಗಬೇಕು ಎನ್ನುವಷ್ಟರಲ್ಲಿ, ಅವನ ಕಣ್ಣೀರು ಕಂಡು ಅಚ್ಚರಿಗೊಂಡವಳಿಗೆ, "ಗತಿಸಿದ ನನ್ನ ಅಕ್ಕನನ್ನು ನಿಮ್ಮಲ್ಲಿ ಕಂಡೆ" ಎಂದು ಕಣ್ಣೊರೆ ಕೊಂಡನವನು.

ಪುಟಾಣಿ ಕಥೆ -೧೨
ಮದುವೆಗು ಮೊದಲು ತನ್ನನ್ನು "ನೀನೊಂದು ಮುದ್ದು ಗೊಂಬೆ" ಎನ್ನುತ್ತಿದ್ದ. ನಂತರ ತಿಳಿಯಿತು ಅವಳಿಗೆ ನಿಜವಾಗಿಯೂ ತಾನೊಂದು "ಷೋಕೇಸ್ ಗೊಂಬೆಯೆಂದು!!"

ಪುಟಾಣಿ ಕಥೆ-೧೩
"ಮಾತು ಬೆಳ್ಳಿ, ಮೌನ ಬಂಗಾರ" ಎಂಬಂತೆ ಕಡಿಮೆ ಮಾತನಾಡುತ್ತಿದ್ದಳು ಅವಳು. ಒಮ್ಮೆ "ಕಿವುಡು ಮತ್ತು ಮೂಗ ಮಕ್ಕಳ ಶಾಲೆ" ಗೆ ಹೋಗಿ ಮಕ್ಕಳನ್ನು ನೋಡಿದಾಗಲೆ ಅವಳಿಗೆ ತಿಳಿದದ್ದು ಮಾತು ಎಷ್ಟು ಮುಖ್ಯ ಎಂದು!!

ಪುಟಾಣಿ ಕಥೆ-೧೪
ಪದಕದೊಂದಿಗೆ ಬಂದ ಮಗಳು "ನಾನೆ ಶಾಲೆಗೆ ಮೊದಲಿಗಳಮ್ಮ" ಎಂದು ಖುಷಿಯಿಂದ ಹೇಳಿದಳು. ನನ್ನ "ಪುತ್ರವ್ಯಾಮೋಹವನ್ನು ಬಿಡಿಸಿ ಕಣ್ಣು ತೆರೆಸಿದೆ ಕಂದ " ಎಂದು ನುಡಿದಳು ಮಗಳನ್ನು ಅಪ್ಪಿ ಅಮ್ಮ!!"


ಪುಟಾಣಿ ಕಥೆ-೧೫
"ಇನ್ನು ಮಗುವಾಗಿಲ್ಲ" ಎಂದು ಯಾವಾಗಲು ಚುಚ್ಚು ಮಾತನಾಡುತ್ತಿದ್ದಳು ಅತ್ತೆ. "ಮಗನನ್ನು ಹಡೆದ ನೀವು ನೆಮ್ಮದಿಯಿಂದ ಇರುವಿರಾ ಅತ್ತೆ??" ಎಂದು ತನ್ನ ಕುಡುಕ ಗಂಡನನ್ನು ನೆನೆಯುತ್ತಾ ಕೇಳಿದಳು ಸೊಸೆ.

--- ವಿಜಯಲಕ್ಷ್ಮಿ ಎಂ ಎಸ್






ಕಾಮೆಂಟ್‌ಗಳಿಲ್ಲ: