ಇಂದು ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ತಾವು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಡುತ್ತಿದ್ದಾರೆ. ಏಕೆಂದರೆ ಇಂದು ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ಆದರೆ 19ನೇ ಶತಮಾನದಲ್ಲಿ, ಹೆಣ್ಣೆಂದರೆ ನಾಲ್ಕು ಗೋಡೆಗಳ ಮಧ್ಯೆ ಕೊಳೆಯಬೇಕೆನ್ನುವ ಕಾಲದಲ್ಲಿ, ಚಿಕ್ಕ ವಯಸ್ಸಿಗೆ ಮದುವೆಯಾಗಿ, ಮುದಿಗಂಡ ತೀರಿಕೊಂಡ ನಂತರ ತಲೆ ಬೋಳಿಸಿಕೊಂಡು, ಆಡುವ ವಯಸ್ಸಿನಲ್ಲಿ ರುಚಿ, ರಂಜನೆ, ಅಲಂಕಾರ, ವಿಹಾರ, ನಗು ಎಲ್ಲ ಮರೆತು ಮೂಲೆಯಲ್ಲಿ ಕೂರುತ್ತಿದ್ದ ಕಾಲದಲ್ಲಿ, ವಿಧವೆಯರು ಪುರುಷರ ವಿಕೃತಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ, ಬೀದಿಯಲ್ಲಿ ನಡೆದರೆ ಅಪವಿತ್ರವಾಗುವುದೆಂದು ಅಸ್ಪೃಶ್ಯರೆನಿಸಿಕೊಂಡ ಮಹಿಳೆಯರು ತಮ್ಮ ಸೊಂಟಕ್ಕೆ ಮರದ ಕೊಂಬೆಗಳನ್ನು ಕಟ್ಟಿಕೊಂಡು ನಡೆಯುತ್ತಿದ್ದ ಕಾಲದಲ್ಲಿ, ಅದನ್ನೆಲ್ಲಾ ಮೀರಿ, ಓದಿ, ವಿದ್ಯಾವಂತರಾಗಿ, ಮೊದಲ ಬಾರಿಗೆ ಶಾಲೆ ತೆರೆದು, ಶಿಕ್ಷಕಿಯಾಗಿ ಕೆಲಸಮಾಡಿದ ಸಾವಿತ್ರಿಭಾಯಿ ಫುಲೆಯವರ ಸಾಧನೆ ಮಹೋನ್ನತವಾದದ್ದು.
ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ನೈಗಮ್ ಎಂಬ ಗ್ರಾಮದಲ್ಲಿ 1831ರ ಜನವರಿ 3ರಂದು ರೈತರ ಕುಟುಂಬವೊಂದರಲ್ಲಿ ಅವರು ಜನಿಸಿದರು. 9ನೇ ವಯಸ್ಸಿನಲ್ಲಿ ಜ್ಯೋತಿಭಾ ಫುಲೆಯವರೊಂದಿಗೆ ಇವರ ವಿವಾಹವಾಯಿತು. ನಂತರದ ದಿನಗಳಲ್ಲಿ ಸ್ತ್ರೀಯರ ಏಳಿಗೆಗಾಗಿ ಹೋರಾಡಲಾರಂಭಿಸಿದ ಫುಲೆಯವರೇ ತಮ್ಮ ಪತ್ನಿಗೆ ಶಿಕ್ಷಣ ನೀಡಿದರು. ಅವರ ಪ್ರೇರಣೆಯಿಂದಲೇ ಸಾವಿತ್ರಿಭಾಯಿಯವರು ಭಾರತದಲ್ಲಿಯೇ ಪ್ರಥಮ ಬಾರಿಗೆ ಹೆಣ್ಣುಮಕ್ಕಳಿಗಾಗಿ ಶಾಲೆ ತೆರೆದರು. ಅತ್ತೆಮಾವಂದಿರ, ಸಮಾಜದ ವಿರೋಧದ ನಡುವೆಯೇ ಅವರು ತಮ್ಮ ಪತಿಯೊಂದಿಗೆ ಹೆಣ್ಣುಮಕ್ಕಳ ರಕ್ಷಣೆಗೆ ಸಜ್ಜಾದರು.
ಅವರು ಆರಂಭಿಸಿದ ಹೆಣ್ಣುಮಕ್ಕಳ ಶಾಲೆಯಲ್ಲಿ ಎಲ್ಲರಿಗೂ ಮುಕ್ತವಾದ ಆಹ್ವಾನವಿತ್ತು – ಯಾವುದೇ ಜಾತಿಭೇದವಿರಲಿಲ್ಲ. ಸಾವಿತ್ರಿಭಾಯಿಯವರು ಶಿಕ್ಷಣ ಹೇಳಿಕೊಡುತ್ತಿದ್ದರು ಎಂಬ ಕಾರಣಕ್ಕಾಗಿಯೇ ಸ್ತ್ರೀಶಿಕ್ಷಣ ವಿರೋಧಿಗಳು ಅವರು ದಾರಿಯಲ್ಲಿ ಹೋಗುವಾಗ ಮೊಟ್ಟೆ, ಸಗಣಿ ಇತ್ಯಾದಿ ಎಸೆಯುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಅವರಿಗೆ ಬೆನ್ನುಲುಬಾಗಿ ನಿಂತದ್ದು ಅವರ ಪತಿ, ಸಮಾಜ ಸುಧಾರಕರು ಆದ, ಜನರಿಂದ ಆ ಕಾರಣಕ್ಕೆ ಪ್ರಪ್ರಥಮವಾಗಿ ಭಾರತದಲ್ಲಿ ಮಹಾತ್ಮ ಎಂಬ ಬಿರುದನ್ನು ಪಡೆದಿದ್ದ ಜ್ಯೋತಿಭಾ ಫುಲೆಯವರು.
ತಮ್ಮ ಪತ್ನಿಗೆ ಅವರು 2 ಸೀರೆಯನ್ನು ಕೊಟ್ಟರು. ಸಾವಿತ್ರಿಭಾಯಿ ಫುಲೆಯವರು ಹೋಗುವಾಗ ಒಂದು ಸೀರೆಯನ್ನು ಉಟ್ಟು ಹೋಗುತ್ತಿದ್ದರು. ಶಾಲೆಗೆ ಹೋದ ತಕ್ಷಣ ಆ ಗಲೀಜು ಸೀರೆಯನ್ನು ತೆಗೆದು ಬೇರೊಂದನ್ನು ಉಟ್ಟು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಒಂದು ದಿನ ಯಾರೋ ಒಬ್ಬ ಅವರ ಮೈಮುಟ್ಟಲು ಬಂದಾಗ ಅವರು ಅವನ ಕೆನ್ನೆಗೆ ಬಾರಿಸಿದರು. ಅಂದಿನಿಂದ ಈ ಕಾಟಗಳೆಲ್ಲವೂ ನಿಂತುಹೋದವು.
ತಮ್ಮ ಪತ್ನಿಗೆ ಅವರು 2 ಸೀರೆಯನ್ನು ಕೊಟ್ಟರು. ಸಾವಿತ್ರಿಭಾಯಿ ಫುಲೆಯವರು ಹೋಗುವಾಗ ಒಂದು ಸೀರೆಯನ್ನು ಉಟ್ಟು ಹೋಗುತ್ತಿದ್ದರು. ಶಾಲೆಗೆ ಹೋದ ತಕ್ಷಣ ಆ ಗಲೀಜು ಸೀರೆಯನ್ನು ತೆಗೆದು ಬೇರೊಂದನ್ನು ಉಟ್ಟು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಒಂದು ದಿನ ಯಾರೋ ಒಬ್ಬ ಅವರ ಮೈಮುಟ್ಟಲು ಬಂದಾಗ ಅವರು ಅವನ ಕೆನ್ನೆಗೆ ಬಾರಿಸಿದರು. ಅಂದಿನಿಂದ ಈ ಕಾಟಗಳೆಲ್ಲವೂ ನಿಂತುಹೋದವು.
ಹೆಣ್ಣುಮಕ್ಕಳಿಗೆ ಶಿಕ್ಷಣವಲ್ಲದೆ, ಅನ್ಯಾಯಕ್ಕೊಳಗಾದ ಸ್ತ್ರೀಯರಿಗಾಗಿ ಹೆರಿಗೆಮನೆ ಆರಂಭಿಸಿದರು ಜೊತೆಗೆ ‘ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಸ್ಥಾಪಿಸಿದರು. ವಿಧವಾ ಮಹಿಳೆಯರಿಗೆ ತಲೆ ಬೋಳಿಸಬಾರದೆಂದು ಹಜಾಮರ ವಿರುದ್ಧ ಹೋರಾಟ ನಡೆಸಿದರು. ತಮ್ಮ ಪತಿಯ ಮರಣಾನಂತರ ಅವರು ಸ್ಥಾಪಿಸಿದ್ದ ‘ಸತ್ಯ ಶೋಧಕ ಸಮಾಜ’ವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. 1897ರಲ್ಲಿ ಪ್ಲೇಗ್ ಮಾರಿ ವ್ಯಾಪಿಸಿದಾಗ ರೋಗಿಗಳ ಶುಶ್ರೂಷೆಗೆ ಮುಂದಾದ ಅವರು ಅದೇ ಪ್ಲೇಗಿಗೆ ಮಾರ್ಚ್ 10ರಂದು ಬಲಿಯಾದರು.
- ಉಷಾಗಂಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ