Pages

ಅನುವಾದ - ಕರ್ತವ್ಯ


(ಎ. ಇಜ್ ಬೆಕ್ ರವರ ರಷ್ಯಾದ ಕಥೆ 'ಡ್ಯೂಟಿ' ಇಂಗ್ಲಿಷ್ ನಿಂದ ಅನುವಾದಿತ)
ಯುದ್ಧ ಆರಂಭವಾಗುತ್ತಿದ್ದಂತೆ ತಮರಾ ಕಾಲ್‍ನಿನಾ ಯುದ್ಧರಂಗದಲ್ಲಿ ನರ್ಸ್ ಆಗಿ ಸೇರಿಕೊಂಡಳು. ಆಗವಳಿಗೆ ಕೇವಲ 17 ವರ್ಷ. ಆದರೆ ಅವಳು ತುಂಬಾ ಧೈರ್ಯದಿಂದ ರಣರಂಗಕ್ಕೆ ತೆರಳಿದಳು. ಗುಂಡಿನ ಅಥವಾ ಶೆಲ್‍ನ ಶಬ್ಧವನ್ನು ಕಡೆಗಣಿಸಿ ಶಾಂತವಾಗಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನಿಡುತ್ತಿದ್ದಳು. ಅವಳು ಅವರ ಜ್ವರಪೀಡಿತ ಹಣೆಯ ವೇಲೆ ಕೈಯಿಟ್ಟಾಗ ಅದು ಆ ಸೈನಿಕರಿಗೆ ತಮ್ಮ ಪ್ರೀತಿಪಾತ್ರ ಸೋದರಿಯ ಸ್ಪರ್ಶವೆನಿಸುತ್ತಿತ್ತು.
ಒಂದು ದಿನ ಗುಂಡಿನ ತೀವ್ರ ಚಕಮಕಿ ನಡೆದ ನಂತರ ತವರಾಗೆ ಮೋಟಾರ್ ಆಂಬುಲೆನ್ಸ್‍ನಲ್ಲಿ ಗಾಯಗೊಂಡ ಸೈನಿಕರನ್ನು ಹಾಗೂ ಕಮಾಂಡರ್‍ಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ನೀಡಾಲಾಯಿತು. ಮಾರ್ಗ ಮಧ್ಯದಲ್ಲಿ ಅವರು ಏಳು ಶತ್ರು ವಿಮಾನಗಳನ್ನು ಎದುರಿಸಿದರು. ಕಾರಿನ ಮೇಲೆ ರೆಡ್‍ಕ್ರಾಸ್ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆ ಕಾರಣಕ್ಕಾಗಿಯೇ ಬಹುಶಃ ಫ್ಯಾಸಿಸ್ಟರು ಅದನ್ನು ಹಾಗೂ ಅದರಲ್ಲಿದ್ದ ಗಾಯಾಳುಗಳನ್ನು ನಾಶಮಾಡಬೇಕೆಂದು ನಿರ್ಧರಿಸಿದರು. ಎಲ್ಲಾ ಏಳು ವಿಮಾನಗಳು ಕೆಳಗಿಳಿದು, ಹಿಂದಕ್ಕೆ, ಮುಂದಕ್ಕೆ ಹಾರಾಡುತ್ತಾ ಕಾರಿನ ಮೇಲೆ iಟಿಛಿeಟಿಜiಚಿಡಿಥಿ ಗುಂಡುಗಳ ಸುರಿಮಳೆ ಸುರಿಸಿದವು. 
ಮೊದಲ ಬಾರಿ ಆಕ್ರಮಣ ಎರಗಿದಾಗ ತಮರಾ ಆ ಭಯಾನಕತೆಗೆ ಗರಬಡಿದವಳಂತೆ ಕಾರಿನ ಮೂಲೆಯಲ್ಲಿ ಮುದುಡಿ ಕುಳಿತಳು. ಗಾಯಾಳುಗಳು ನರಳಾಡಿದರು. ಅವಳು ಅವರ ಬ್ಯಾಂಡೇಜ್ ಅನ್ನು ಸರಿಪಡಿಸಿದಳು, ತನ್ನ ಪ್ಲಾಸ್ಕಿನಿಂದ ಅವರಿಗೆ ನೀರುಣಿಸಿದಳು ಮತ್ತು  ಅವರಿಗೆ ಸಾಂತ್ವನ ನಿಡುವಲ್ಲಿ ಯಶಸ್ವಿಯಾದಳು. ನಂತರ ಇನ್ನೊಂದು ಬಾರಿ ಭೀಕರ ಅಸ್ತ್ರಗಳ ಆಕ್ರಮಣ ಬಂದಿತು, ಕಾರ್ ಹತ್ತಿ ಉರಿಯಲಾರಂಭಿಸಿತು. ಕಾಡಿನ ಮಧ್ಯದಲ್ಲಿ ಅದು ಉರಿಯುತ್ತ ನಿಂತು ಹೋಯಿತು. ಗಾಯಾಳುಗಳು ಭಯಪೀಡಿತರಾದರು. ತಮ್ಮ ಬರ್ತ್‍ಗಳಿಂದ ಕೆಳಗೆ ಜಿಗಿದರು. ಹಾಗೆ ಮಾಡುವಾಗ ತಮ್ಮ ಬ್ಯಾಂಡೇಜ್‍ಗಳನ್ನು ಹರಿದುಕೊಂಡರು.  ಉಸಿರುಗಟ್ಟಿ ಉಸಿರಿಗಾಗಿ ಕಷ್ಟಪಟ್ಟರು. ಒಂದು ಕ್ಷಣ, ಒಂದೇ ಒಂದು ಕ್ಷಣ ಆ ಹುಡುಗಿ ತನ್ನ ಸ್ಥಿತಪ್ರಜ್ಞತೆಯನ್ನು ಕಳೆದುಕೊಂಡಳು. ಉರಿಯುವ ಕಾರಿನಿಂದ ಹೊರಕ್ಕೆ ಎಗರಿ ಆ ಭಯಾನಕತೆಯಿಂದ ತಪ್ಪಿಸಿಕೊಳ್ಳಲು ಕಾಡಿನೊಳಗೋಡಿದಳು.
ಆದರೆ ಮರುಕ್ಷಣವೇ ತನ್ನನ್ನು ತಾನೇ ಸಂಭಾಳಿಸಿಕೊಂಡಳು. ಅವಳ ಮನಸ್ಸಾಕ್ಷಿ ಮಾತನಾಡಿತು – “ಎಲ್ಲಿಗೆ ಹೋಗುತ್ತಿದ್ದೀಯಾ? ಯುವ ಕಮ್ಯೂನಿಸ್ಟ್ ದಳದವಳೇ! ಸ್ವಯಂ ಸೇವಕಿ! ಯಾರನ್ನು ನಿನ್ನ ವಶಕ್ಕೆ ಒಪ್ಪಿಸಿತ್ತೋ ಅವರನ್ನು ಮರೆತು, ಈ ಗಾಯಾಳುಗಳನ್ನು ಅವರ ವಿಧಿಗೆ ನೂಕಿ ಓಡಿಹೋಗುತ್ತಿದ್ದೀಯಾ? ಇದಾದ ನಂತರ ಮತ್ತೆ ಜನರಿಗೆ ಯಾವ ರೀತಿ ಮಖ ತೋರಿಸುತ್ತೀಯಾ?”
ಕಾರಿಗೆ ತ್ವರಿತವಾಗಿ ಹಿಂತಿರುಗಿದಳು. ಸಣ್ಣಗೆ ಅಶಕ್ತಿಯಿಂದಿದ್ದ ಅವಳೇ ಒಂದು ಮಗು, ಆದರು ಆ ಗಾಯಾಳುಗಳನ್ನು ರಸ್ತೆಗೆ ಎಳೆಯಲಾರಂಭಿಸಿದಳು. ಚಾಲಕ ಅವಳ ಸಹಾಯಕ್ಕೆ ಬಂದ. ಆದರೆ ಆ ದಯಾಹೀನ ಕ್ರೂರಿ ಶತ್ರು ಯಂತ್ರಗಳು ಹಿಂತಿರುಗಿ ಉರಿಯುವ ಕಾರಿನ ಮೇಲೆ ಮತ್ತೆ ಗುಂಡಿನ ಸುರಿಮಳೆ ಸುರಿಸಿದರು. ಚಾಲಕನಿಗೆ ಏಟು ಬಿದ್ದು ಆತ ಮಾರ್ಗ ಮಧ್ಯೆ ಸತ್ತುಬಿದ್ದ.
ಈಗ ತಮರಾ ಕಾಡಿನಲ್ಲಿ ಒಂಟಿಯಾಗಿದ್ದಳು. ಹದಿನೈದು ಗಾಯಾಳುಗಳನ್ನೊಳಗೊಂಡ ಉರಿಯುವ ಕಾರಿನ ಸಮೇತ. ಹದಿನೈದು ಬಾರಿ ಅವಳು ಜ್ವಾಲೆಯೊಳಗೆ ನುಗ್ಗಿ ಅಸ್ಸಹಾಯಕ ದೇಹಗಳನ್ನು ರಸ್ತೆ ಬದಿಯ ಹಳ್ಳದೊಳಗೆ ಎಳೆದಳು. ಪ್ರತಿ ಬಾರಿಯೂ ಒಂದು ಕ್ಷಣ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು – ಉರಿಯುತ್ತಿದ್ದ ತನ್ನ ಬಟ್ಟೆಗಳಿಂದ ಬೆಂಕಿಯನ್ನು ಆರಿಸಿಕೊಂಡು ಸ್ವಚ್ಛ ಗಾಳಿಯನ್ನೊಮ್ಮೆ ಒಳಗೆ ಎಳೆದುಕೊಂಡು ಮತ್ತೆ ಬೆಂಕಿಗೆ ಹಾರಲು.
ಇದು ಅಸಾಧ್ಯವೆನಿಸುತ್ತದೆ, ಅತಿ ಮಾನವ ಎನಿಸುತ್ತದೆ. ಆದರೆ ಇದು ಸತ್ಯ; ವಾಸ್ತವವಾಗಿ ನಡೆದದ್ದು. ಈ ಕ್ಷೀಣ ಹುಡುಗಿ ಜ್ವಾಲೆಯನ್ನು ವಶಪಡಿಸಿಕೊಂಡಳು. ಏಳು ಫ್ಯಾಸಿಸ್ಟ್ ರಣಹದ್ದುಗಳನ್ನು ಎದುರಿಸಿ ಸಾವನ್ನೂ ಸಹ ಗೆದ್ದಳು.
ಗಾಯಾಳುಗಳಲ್ಲಿ ಕೆಲವರು ಎಚ್ಚರ ತಪ್ಪಿದರು. ಇತರರು ತಮ್ಮ ಕಣ್ತೆರೆದರು, ಆಶ್ಚರ್ಯದಿಂದ ಸುತ್ತಲೂ ನೋಡಿದರು. ನಂತರ ಕೃತಜ್ಞತೆಯಿಂದ ಮತ್ತು ಮೆಚ್ಚುಗೆಯಿಂದ ತಮ್ಮ ಪುಟ್ಟ ರಕ್ಷಕಿಯನ್ನು ದಿಟ್ಟಿಸಿದರು.
“ಕಾಳಜಿ ಪಡಬೇಕಾದದ್ದೇನೂ ಇಲ್ಲ, ನನ್ನ ಆತ್ಮೀಯರೇ”, ಆಕೆ ಕಷ್ಟದಿಂದ ತನ್ನ ಒಡೆದ, ದಪ್ಪಗೊಂಡ ತುಟಿಯ ಮೂಲಕ ಅವರಿಗೆ ಹೇಳಿದಳು. “ಏನೂ ಚಿಂತೆಯಿಲ್ಲ, ಎಲ್ಲವೂ ಕಳೆಯುತ್ತದೆ. ನಾನು ನಿಮ್ಮನ್ನು ಬಿಡುವುದಿಲ್ಲ, ನಿಮ್ಮನ್ನೆಂದಿಗೂ ಬಿಡುವುದಿಲ್ಲ”. ಅವಳ ಕಂಗಳು, ಅವಳ ದೊಡ್ಡ ಆಳವಾದ ಕಂಗಳು ಸಸ್ನೇಹ ಮುಗುಳ್ನಗುವನ್ನು ಹೊರಸೂಸುತ್ತಿದ್ದವು.
ಎಲ್ಲಾ ಹದಿನೈದು ಮಂದಿಯನ್ನು ರಸ್ತೆ ಬದಿಗೆ ತರುವಷ್ಟರಲ್ಲಿ ಆ ಕಾರು ಬೂದಿಯ ಗುಡ್ಡೆಯಾಗಿ ಮಾರ್ಪಾಡಾಗಿತ್ತು. ಬೆಂಕಿ ಹತ್ತಿದ ತನ್ನ ಬಟ್ಟೆಗಳನ್ನು ಹರಿಯುತ್ತಾ ಸುಟ್ಟಗಾಯಗಳಿಂದ ಉಂಟಾದ ನೋವನ್ನು ಕಡೆಗಣಿಸಿ ಅವಳು ಓಡಿದಳು, ಬಡಬಡಿಸುತ್ತಾ ಆಸ್ಪತ್ರೆಯವರೆಗೆ; ಅಲ್ಲಿ ತಲುಪಿ ಏದುಸಿರಿನ ದನಿಯಲ್ಲೇ ಎಲ್ಲವನ್ನೂ ವಿವರಿಸಿ ಪ್ರಜ್ಞಾಶೂನ್ಯಳಾಗಿ ನೆಲಕ್ಕೊರಗಿದಳು.

ಆ ಹದಿನೈದು ಜನರನ್ನು ಉಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಹಳಷ್ಟು ಜನರಿಗೆ, ತಮ್ಮ ಜೀವ ಉಳಿಸಿದ ಯಾವ ಧೀರ ಹುಡುಗಿಗೆ ಚಿರಋಣಿಯಾಗಬೇಕಿತ್ತೋ ಅವಳ ಹೆಸರನ್ನು ಸಹ ತಿಳಿದುಕೊಳ್ಳಲಾಗಲಿಲ್ಲ. ಅವಳ ಹೆಸರು  ತಮರಾ ಕಾಲ್‍ನಿನಾ. ನೀನು, ಓದುಗ, ಈ ಹೆಸರನ್ನೆಂದಿಗೂ ಮರೆಯುವುದಿಲ್ಲ ಅಲ್ಲವೇ?
ಅವಳ ಗಾಯಗಳು ಮುಕ್ಕಾಲುಪಾಲು ಅವಳನ್ನು ಬಲಿ ತೆಗೆದುಕೊಳ್ಳುತ್ತವೇನೋ ಎಂಬಂತಿದ್ದವು. ಮರಣಾಸನ್ನ ಸ್ಥಿತಿಯಲ್ಲಿ ಅವಳನ್ನು ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಅವಳನ್ನು ಸಾವಿನ ದವಡೆಯಿಂದ ಹೊರಗೆಳೆದರು. ಅವಳು ಬದುಕುಳಿದಳು, ಅವಳುಳಿಸಿದ ಗಾಯಾಳುಗಳಂತೆ!
ಈ ಮಹಾನ್ ದೇಶಪ್ರೇಮಿ ಯುದ್ಧದ ನೆನಪಿನಲ್ಲಿ, ದೇಶದ ಪ್ರಸಿದ್ಧ ಶಿಲ್ಪಿಗಳು, ಸ್ಮಾರಕಗಳನ್ನು ಕಡೆಯುವಾಗ, ಪುಟ್ಟ ತಮರಾಳ ಶಿಲ್ಪವನ್ನೂ ಸಹ ಕಡೆಯುತ್ತಾರೆ. ಇಡೀ ನಾಡಿನಲ್ಲಿ ಪ್ರಸಿದ್ಧವಾಗಿರುವ ಗ್ಯಾಸ್‍ಟೆಲ್ಲೋ, ಮಾಮೆಡೊವ್, ಮುಂತಾದ ಧೀರ ವಿಮಾನ ಚಾಲಕರ, ಟ್ಯಾಂಕ್‍ಮೆನ್‍ಗಳ, ರೈಫೆಲ್‍ಮೆನ್‍ಗಳ ಪಕ್ಕದಲ್ಲಿ ಅವಳೂ ನಿಲ್ಲುತ್ತಾಳೆ.
ಉತ್ತರ-ಪಶ್ಚಿಮ ಫ್ರಂಟ್ ನ ಮಿಲಿಟರಿ ಕೌನ್ಸಿಲ್‍ನ ಆಜ್ಞೆಯ ಮೇರೆಗೆ ತಮರಾಗೆ “ಆರ್ಡರ್ ಆಫ್ ಲೆನಿನ್” ಪದಕವನ್ನು ನೀಡಲಾಯಿತು.
          - ಸುಧಾ ಜಿ

ಕಾಮೆಂಟ್‌ಗಳಿಲ್ಲ: