Pages

ಸ್ತ್ರೀದನಿ - ಹೆಣ್ಣು ಹೆಣ್ಣೆಂದೇತಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು


Image result for female foeticide
ದಿನಾಂಕ 22.04.2015ರಂದು “Times of India” ಪತ್ರಿಕೆಯಲ್ಲಿ “ದೇಶದ ನಾಲ್ಕು ಕೋಟಿ ಯುವಕರು ವಧುಗಳಿಲ್ಲದೆ ಅವಿವಾಹಿತರಾಗಿಯೇ ಉಳಿಯುವಂಥ ಅನಿವಾರ್ಯತೆ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಸುದ್ಧಿಯು ನಿಜಕ್ಕೂ ಅಘಾತಕಾರಿಯಷ್ಟೇ ಅಲ್ಲದೆ ನಮ್ಮ ಸಮಾಜಕ್ಕೆ ಒಂದು ಎಚ್ಚರಿಕೆಯ ಗಂಟೆಯನ್ನು ಸೂಚಿಸಿದೆ. 
1970ರ ಈಚೆಗೆ ನಮ್ಮ ಸಮಾಜದಲ್ಲಿ ಅವ್ಯಾಹತವಾಗಿ ನಡೆದು ಬರುತ್ತಿರುವ ಸ್ತ್ರೀ ಭ್ರೂಣ ಹತ್ಯೆ ಮತ್ತು ಶಿಶು ಹತ್ಯೆಗಳಿಗೆ ಕನ್ನಡಿಯಂತಿದೆ ಇಂದಿನ ಪರಿಸ್ಥಿತಿ. ಪಂಜಾಂಬ್, ದೆಹಲಿ, ಹರಿಯಾಣ, ತಮಿಳುನಾಡು, ಆಂಧ್ರ, ಕರ್ನಾಟಕದಾದ್ಯಂತ ಹಾಗೂ ದೇಶದ ನಾನಾಭಾಗಗಳಲ್ಲಿ ಕಂಡುಬಂದ ಈ ಭ್ರೂಣ ಹತ್ಯೆಗಳು ಇಂದು ಅನುಪಾತದಲ್ಲಿ (1000 ಗಂಡು ಮಕ್ಕಳಿಗೆ ಸರಿಸಮಾನವಾದ ಹೆಣ್ಣು ಮಕ್ಕಳಿರಬೇಕು) ಬಾರಿ ಅಂತರವನ್ನು ತಂದಿದ್ದು. ಈ ವರದಿಯೇ  ಹೇಳುವಂತೆ 20ರ ವಯೋಮಾನದಲ್ಲಿರುವ 5.63 ಕೋಟಿ ಗಂಡು ಮಕ್ಕಳಿಗೆ ಕೇವಲ 2.07 ಕೋಟಿ ಹೆಣ್ಣು ಮಕ್ಕಳಿರುವರು ಅಂದರೆ ಉಳಿದ 3.55 ಕೋಟಿ ಹೆಣ್ಣು ಮಕ್ಕಳು ಕಾಣೆಯಾಗಿರುವರು (ಎಲ್ಲಿ?) ಹಾಗೆಯೇ 30ರ ಆಸುಪಾಸಿನಲ್ಲಿರುವ 70.01 ಲಕ್ಷ ಗಂಡುಮಕ್ಕಳಿಗೆ  ಕೇವಲ 22.1 ಲಕ್ಷ ಹೆಣ್ಣುಮಕ್ಕಳಿದ್ದಾರೆ. ಉಳಿದಂತೆ ಇಲ್ಲಿಯೂ 47.91 ಲಕ್ಷ ಹೆಣ್ಣುಮಕ್ಕಳ ಅಭಾವ. 40ರ ಅಂಚಿನಲ್ಲಿರುವ 16.92 ಲಕ್ಷ ಗಂಡುಮಕ್ಕಳಿಗೆ ಕೇವಲ 8.67 ಲಕ್ಷ ಹೆಣ್ಣುಮಕ್ಕಳಿರುವರು. ಅಂದರೆ ಇಲ್ಲಿಯೂ 8.25 ಲಕ್ಷ ಹೆಣ್ಣುಮಕ್ಕಳು ಕಾಣೆಯಾಗಿರುವರು. ಇದಲ್ಲದೆ ದೇಶದ ರಾಷ್ಟ್ರೀಯ ಸರಾಸರಿ ಅನುಪಾತವೂ 908ಕ್ಕೆ ಇಳಿದಿರುವುದು ಹೆಣ್ಣುಮಕ್ಕಳು ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. (1000 ಗಂಡುಮಕ್ಕಳಿಗೆ ಕೇವಲ 908 ಹೆಣ್ಣುಮಕ್ಕಳು). 
ಕಾರಣ ಏನು? ಪಿತೃ ಪ್ರಧಾನ ಮೌಲ್ಯಗಳು ಬಲು ಗಾಡವಾಗಿ ಬೇರೂರಿರುವ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳೆಂದರೆ ತಾತ್ಸರ, ಭಾರ ಹಾಗೂ ಅನಗತ್ಯ ಖರ್ಚು ಎಂಬ ಭಾವನೆಯಿದೆ. ಇದರ ಜೊತೆಗೆ ಮದುವೆಯ ಸಂದರ್ಭದಲ್ಲಿ ಬಾರಿ ಮೊತ್ತದ ವರದಕ್ಷಿಣೆಯನ್ನು ನೀಡಬೇಕೆಂಬುದು ತಂದೆ ತಾಯಿಗಿರುವ ತಲೆನೋವು. ಆದ್ದರಿಂದಲೇ ಕೋಟಿ ಕರ್ಚು ಮಾಡುವುದಕ್ಕಿಂತ ರೂ 500/- ಖರ್ಚು ಮಾಡಿ ಭ್ರೂಣವನ್ನೇ ತೆಗಿಸಿದರಾಯಿತಲ್ಲವೇ. ಈ ಮನೋಭಾವನೆಗೆ ತಕ್ಕಂತೆ ಸಮಾಜದಲ್ಲಿ ಇದನ್ನು ಪ್ರೋತ್ಸಾಹಿಸುವ ವ್ಯವಸ್ಥೆಗೇನು ಕಡಿಮೆಯಿಲ್ಲ. ಹೆಣ್ಣು ಮಕ್ಕಳೇ ಬೇಡವೆಂದ ಸಮಾಜ ಇಂದು ಈ ಅಸಹಜ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಆದ್ದರಿಂದಲೇ ಇಂದು ಕೇಂದ್ರ ಸರ್ಕಾರವೂ ‘ಬೇಟಿ ಬಚಾವೋ’ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಆದರೆ ಇದು ಕೇವಲ ಕಡತಗಳಲ್ಲಿ ಹುದುಗಿ ಹೋಗಬಾರದು. 
1994ರಲ್ಲಿ ಇದರ ತೀವ್ರತೆಯನ್ನು ಅರಿತ ಅಂದಿನ ಸರ್ಕಾರ PCPNDT (Pre-natal Diagnostic Techniques Prevention Act)  ಎನ್ನುವುದನ್ನು ಜಾರಿಗೊಳಿಸಿ  ‘ಲಿಂಗ ಪತ್ತೆ’ ಕಾನೂನಿನ ವಿರುದ್ಧ ಎಂದು ಸಾರಿತು. ತಾಯಿ ಮತ್ತು ಮಗುವಿನ ಆರೋಗ್ಯ ದೃಷ್ಠಿಯಿಂದ (ಮಗು ಬುದ್ದಿಮಾಂದ್ಯವಾದಾಗ ಅಥವಾ ಅಸಹಜ ಬೆಳವಣಿಗೆಯನ್ನು ಹೊಂದಿದಾಗ ಮಾತ್ರ) ಭ್ರೂಣ ಪತ್ತೆ ಮಾಡಿ ಅದನ್ನು ತೆಗೆಸಬಹುದೇ ವಿನಃ ಲಿಂಗ ಪತ್ತೆಗಾಗಿ ಅಲ್ಲ ಎಂದು ಕಾಯ್ದೆಯನ್ನು ರಚಿಸಿತು. ಆದರೂ ಲಿಂಗ ಪತ್ತೆ ಮಾಡುವ 
   ದಂದೆಯೂ  ಮುಂದುವರಿಯುತ್ತಲೇ ಇದೆ. ಎಲ್ಲೆಡೆಯು ಇಂಥಹ  Scanning  ಕೇಂದ್ರಗಳು  ಹುಟ್ಟಿಕೊಂಡು ಲಕ್ಷಾಂತರ ದುಡ್ಡು ವಸೂಲಿ ಮಾಡುತ್ತಿವೆ. ಒಂದು ಕೇಂದ್ರದಲ್ಲಿಯಂತೂ “Invest Rs 500/- and save lakhs” 
ಎನ್ನುವ board ಇತ್ತು. ಇಂತಹ ಕೇಂದ್ರಗಳು ಬೆಳೆದಿರುವ ಕಾರಣ ಕೋಟಿ ಕೋಟಿ ಹೆಣ್ಣುಮಕ್ಕಳು ಕಾಣೆಯಾಗಿರುವರು. 
ಯಾವುದೇ ಒಂದು ಸ್ವಾಸ್ಥ್ಯ ಸಮಾಜ ಉಳಿಯಬೇಕಾದರೆ, ಬೆಳೆಯಬೇಕಾದರೆ ಅಲ್ಲಿ ಸ್ತ್ರೀ ಪುರುಷರಿಬ್ಬರೂ ಸಮನಾಗಿ ಬಾಳಿ ಬದುಕಬೇಕಿದೆ. ಆದರೆ ಇಂದು ಈ ಅಸಹಜ ವಾತಾವರಣ ಸೃಷ್ಠಿಯಾಗಿರುವುದು ನಿಜಕ್ಕೂ ಖಂಡನೀಯ. ಇದಕ್ಕೆ ಈ ಸಮಾಜವೇ ಹೊಣೆ ಹೊರಬೇಕು. 
ಇಂದು ಹೆಣ್ಣು ಸಹ ಗಂಡಿಗಿಂತ ಯಾವ ಕ್ಷೇತ್ರದಲ್ಲಿ ಕಡಿಮೆಯಿರುವಳು, ಎಲ್ಲಾ ರಂಗಗಳಲ್ಲಿ ತನ್ನ ಛಾಪನ್ನು ಮೂಡಿಸುತ್ತಾ, ತಾಯಿಯಾಗಿ, ಸ್ನೇಹಿತೆಯಾಗಿ, ಹೆಂಡತಿಯಾಗಿ, ಅಕ್ಕ-ತಂಗಿಯಾಗಿ ಎಲ್ಲವನ್ನು ನಿಭಾಯಿಸುವುದರ ಜೊತೆಗೆ ವೃದ್ದಾಪ್ಯದಲ್ಲಿರುವ ತಂದೆ-ತಾಯಿಯರ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲವೇ? ಸತ್ತ ಮೇಲೆ ಸಿಗುವ ಮುಕ್ತಿಗಿಂತ ಬದುಕಿರುವಾಗ ನೆಮ್ಮದಿಯಾಗಿರುವುದು ಮುಖ್ಯವಲ್ಲವೇ? ಹಾಗಿದ್ದಮೇಲೆ ಏಕೆ ಈ ತಾತ್ಸರ, ಅಗೌರವ, ತಾರತಮ್ಯ. ‘ಹೆಣ್ಣಲ್ಲವೆ ಎಮ್ಮ ಪೊರೆದಿಹಳು’ ಎನ್ನುವುದು ಈ ಮಂದಿಗೇಕೆ ತಿಳಿಯಲೊಲ್ಲದು. 
-----    ಗಿರಿಜಾ ಕೆ.ಎಸ್. 

ಕಾಮೆಂಟ್‌ಗಳಿಲ್ಲ: