'ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ..' ಅನ್ನುವ ವಾಣಿ ಕ್ಲೀಷೆ ಎನಿಸಿಕೊಳ್ಳಬಹುದಾದ ಈ ಹೊತ್ತಿಗೂ ಗುರು ಕಾರುಣ್ಯದ ಬೆಳಕಷ್ಟೇ ಹಾದಿಯನ್ನು ಬೆಳಗಿಸುವುದನ್ನು ಅಲ್ಲಗಳೆಯಲಾಗದು.
ಇವತ್ತಿನ ಗುರು, ಶಿಷ್ಯರ ವಿಶ್ಲೇಷಣೆಯಾಚೆಗೂ ಅವತ್ತಿನ ನಮ್ಮ ಮೇಷ್ಟ್ರು, ಮೇಡಂ..ನೆನಪಾದರೂ ಸಾಕು ಹೃದಯದ ತುಂಬಾ ಅದೇನೋ ದಿವ್ಯತೆಯ ಭಾವ!ಮೇಷ್ಟ್ರು, ಮೇಡಂ..ಅನ್ನುವ ಶಬ್ದಗಳೇ ಅದೆಷ್ಟು ಗೌರವ ಸ್ಪುರಿಸುವಂತವು! ಬಾಸುಂಡೆ ಬರುವಂತೆ ಹೊಡೆದರೂ, ಹಿಗ್ಗಾ ಮಗ್ಗಾ ಬೈದಿದ್ದರೂ..ಊಹ್ಞುಂ! ಅವರನ್ನು ಮನಸ್ಸು ತಣ್ಣಗೆ ನೆನೆಯುತ್ತದೆ! ವಿನೀತವಾಗಿ ಬಾಗುತ್ತದೆ!
ಹೈಸ್ಕೂಲಿನ ಆ ದಿನಗಳಲ್ಲಿ ನಮ್ಮವು ಬರಿಗಾಲ ನಡಿಗೆಗಳು! (ಮೂರ್ನಾಲ್ಕು ಮೈಲಿ ದೂರ!) ಹರಳೆಣ್ಣೆ ಹಚ್ಚಿ ,ಬಾಚಿ ಟೇಪಿನಿಂದ ಕಟ್ಟಿಕೊಂಡ ಜಡೆಗಳು, ಸೋಪು, ಕ್ರೀಮು ಅಷ್ಟಾಗಿ ಇರದ ಮುಖಗಳು! ಕಾಟನ್ ಬಟ್ಟೆಯ ಚೂರುಗಳನ್ನು ಜೋಡಿಸಿ ಹೊಲೆದ ಬ್ಯಾಗು! ಪುಸ್ತಕಗಳ ಜೊತೆ ಅಕ್ಕಿ, ಬೆಲ್ಲ, ಕೊಬ್ಬರಿ ಚೂರು, ಉಪ್ಪು, ಹುಣಸೇ ಕಾಯಿ, ನೆಲ್ಲಿಕಾಯಿ, ನೇರಳೆ, ಸೀಬೆ ಹಣ್ಣುಗಳು....
ಸಹಪಾಠಿಗಳ ಜೊತೆಗೂ ಅಂತರ ಇರುವ ಈ ದಿನಗಳಂತಲ್ಲ..ಸಂಗಡಿಗರು ಬೆನ್ನಿಗೇ ಬಿದ್ದ ಅಣ್ತಮ್ಮಗಳ ಹಾಗೆ..ಜೊತೆಯ ನಡಿಗೆ..ಅಳು-ನಗುಗಳ ವಿನಿಮಯ! ಮೇಷ್ಟ್ರು ಅಂದರೆ ತಾನಾಗಿಯೇ ನುಗ್ಗಿ ಬರುತ್ತಿದ್ದ ಗೌರವದ ದಿನಗಳು!
ನಿನ್ನೆ unknown ನಂಬರಿನಿಂದ ಮೂರ್ನಾಲ್ಕು ಸಲ ಬಂದ ಕರೆಯನ್ನು ಸ್ವೀಕರಿಸದೇ ಹೋದೆ..ಮತ್ತೆ ಫೋನು ರಿಂಗಣಿಸಿ ಹಲೋ ..ಅಂದರೆ,' ಏನ್ರಿ ಇನ್ನೂ ಮಲ್ಗಿದ್ದೀರಾ!? ಪ್ರಶ್ನೆ. ಹತ್ತಾದ್ರು ಮಲ್ಗಿರಕಾಯ್ತದ, ಯಾರು ತಾವು?ಅಂದೆ. ನಾನ್ರೀ. ಎಸ್.ಎನ್ ಅಂದ್ರು! ಅರೇ, ಸಾರ್, ಕ್ಷಮಿಸಿ, ತಮ್ಮ ನಂಬರ್ ಇರಲಿಲ್ಲ ನನ್ಕಡೆ, ಸಾರಿ ಸಾರಿ ಸರ್..ಅನ್ನುತ್ತಲೇ ಇದ್ದೆ!
ಎಸ್.ಎನ್ ಹೈಸ್ಕೂಲ್ ದಿನಗಳ ಚಿತ್ರಕಲಾ ಶಿಕ್ಷಕರಾಗಿದ್ದರು.
ನೆನಪಿದ್ಯೇನಮ್ಮ ಅಂದ್ರು. ಹೇಗ್ ಮರೆಯೋದು ಸರ್..' ಇವತ್ತು ನಾನೇನಿದ್ದೇನೋ ಅದರ ಹಿಂದೆ ಬ್ಯಾತ ಸ.ಪ್ರೌಢಶಾಲೆ ಇದೆ! ಒಮ್ಮೆ ಆಫೀಸ್ ರೂಮಿಗೇ ಕರೆದು,' ನಿನ್ನಿಂದ ಯಾವತ್ತೂ ಆಶಿಸ್ತಿನ ವರ್ತನೆ ನಿರೀಕ್ಷಿಸುವುದಿಲ್ಲ ಅಂದ H M ಗೋವಿಂದರಾಜು ಸರ್, ' ಕನ್ನಡ ನೋಟ್ಸ್ ಬರಿ ಅಂತ ನಾನು ಕೇಳದ ಮತ್ತು ಬರೆಯದ ಏಕೈಕ ವಿದ್ಯಾರ್ಥಿನಿ ನೀನೇ ನೋಡು..ಅನ್ನುತ್ತಿದ್ದ, ನನ್ನೊಳಗಿನ ಕನ್ನಡವನ್ನು ಬೆಳೆಸಿದ ಕನ್ನಡ ಮೇಷ್ಟ್ರು MLG ಸರ್, 'ರಾಮಕೃಷ್ಣ ಪರಮಹಂಸರ ಜೀವನ ಸಂಪುಟಗಳನ್ನು ಓದಿಸಿ, ನಾನು ವಿಚಿತ್ರವಾಗಿ ಮಾತನಾಡಲು ಶುರುಮಾಡಿದೆ ಅನ್ನುವ ಕಾರಣಕ್ಕೆ ಇತರೆ ಕಥೆ, ಕಾದಂಬರಿ ಓದಲು ಹಚ್ಚಿ, ಎಷ್ಟು ಸಾಧ್ಯವೋ ಅಷ್ಟೂ ಈ ಗ್ರಂಥಾಲಯದ ಪುಸ್ತಕಗಳನ್ನು ಬಳಸಿಕೋ' ಅನ್ನುತ್ತಿದ್ದ ಚನ್ನಪ್ಪ ಮೇಷ್ಟ್ರು, 'ನೋಡಿದು,ಪ್ರಬುದ್ಧ ಕರ್ನಾಟಕ ಪತ್ರಿಕೆ, ಇದು ಪ್ರಜಾಮತ, ಇದು ತರಂಗ...ಇಂತಹವನ್ನು ಓದುವ ಅಭ್ಯಾಸ ಮಾಡ್ಕೊ. ಬರ್ದದ್ದನ್ನು ಕೊಡು, ಪೋಸ್ಟ್ ಮಾಡೋದು ನಂಗಿರ್ಲಿ ಅಂತಿದ್ದ ಗಣಿತ ಮೇಷ್ಟ್ರು ಷಡಕ್ಷರಿ ಸರ್. ಹತ್ತನೇ ತರಗತಿ ಓದೋವಾಗ ಬಂದಿದ್ದ ಎಪ್ಪತೈದು ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆಯಲು ಬಂದ ಅಣ್ಣನನ್ನು ಸಮಾಜ ಪಾಠ ಮಾಡೋ ಡಿವಿವಿ ಸರ್ ಕೇಳಿದ್ರು - ಮನೇಲಿ ಓದ್ತಾಳ? ಪರ್ವಾಗಿಲ್ಲ ಸರ್, ನಮ್ಗಾಗದ್ದು ಇವಳಾದ್ರು ಮಾಡ್ಬೇಕೂಂತ ಆಸೆ ಅಂದ ಕಿರಿಯಣ್ಣ. ಈ ವರ್ಷದ ಇವಳ ಪುಸ್ತಕ, ನೋಟ್ಸ್ ನಂಗಿರ್ಲಿ, ಮನೇಲಿ ಗಮನಿಸಿ ಸಾಕು ಅಂದ ಆ ಸರ್ ಹೇಳಿದಂತೆ ನಡ್ಕೊಂಡ್ರು! ಇಡೀ ಸ್ಕೂಲಿಗೊಬ್ರೇ ಮೇಡಂ..ಭಾರತಿ ಮೇಡಂ..ನಾವು ಸುತ್ತುವರಿದರೆ ಮೇಡಂ ಕಾಣುತ್ತಲೇ ಇರಲಿಲ್ಲ!!ಜೀವಶಾಸ್ತ್ರ ಪಾಠ ಮಾಡುತ್ತ ಜೀವಕೋಶ ಹಿಗ್ಗಿಸಿದವರು..ಭಾವಕೋಶವನ್ನೂ ತುಂಬಿದವರು..ಅವರ ಸೀರೆಯ ಸೆರಗು ಬೆರಳಿಗೆ ತಾಕಿದರೂ ಸಾಕು..ಓಹ್...ಪುಳಕ..ಪುಳಕ..ನನ್ನ ಕಣ್ಣಿನೊಳಗೆ ಕನಸಿನ ಬೆಳಕ ಹೊತ್ತಿಸಿದ ಕೀರ್ತಿ ಅವರಿಗೆ! (ನಿಮ್ಮಂತೆ ಮೇಡಂ ಆಗ್ತೀನಿ ಅಂದಿದ್ದೆ!!) ನಾನೂ H S R ನೀನೂ H S R! ಏನೋ ಆಗ್ತೀಯ..ಆಗು ಅಂದಿದ್ದ ಇಂಗ್ಲೀಷ್ ಸರ್...
ಡ್ರಾಯಿಂಗ್ ಇಷ್ಟವಿಲ್ಲದ ನಂಗೆ ಪೆನ್ಸಿಲ್ ಕೊಟ್ಟು, ಹಾಳೆ ಕೊಟ್ಟು ಬರಿ ಬರಿ ಅಂತಿದ್ದವ್ರೇ ಈ ಎಸ್ ಎನ್ ಸರ್! ಅಕ್ಷರ ಅಷ್ಟು ಚನ್ನಾಗಿದೆ ಚಿತ್ರ ಯಾಕ್ ಬರೆಯಲ್ಲ ಅಂತ ಬೈದೂ ಆಯ್ತು.!! ಊಹ್ಞುಂ..ಚಿತ್ರ ಬರಲೇ ಇಲ್ಲ...ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಗೆ ನನ್ನ ಹೆಸರು ಕೊಟ್ಟ ಈ ಮೇಷ್ಟ್ರು, 'ಚಿತ್ರ ಆಗಲ್ವಲ್ಲ, ನಡಿ ಪ್ರಬಂಧ ಬರೀಂತ ಕರ್ಕೊಂಡು ಹೋದ್ರು..ತುಮಕೂರಿನ ಜೂನಿಯರ್ ಕಾಲೇಜನ್ನು ನೋಡಿದ್ದೇ ಅವಾಗ..! ಧೈರ್ಯ ವಾಗಿ ಬರಿ, ಎಲ್ಲರಿಗಿಂತ ಚನ್ನಾಗ್ ಬರೀತೀನಿ ಅಂದ್ಕೊ..ಅಂತ ಹುರಿದುಂಬಿಸಿ, ಸ್ಪರ್ಧೆ ಮುಗಿದ ಮೇಲೆ ಪಕ್ಕದ ಯಾವುದೋ ಛತ್ರದಲ್ಲಿನ ಸಮಾರಂಭಕ್ಕೆ ಕರ್ಕೊಂಡು ಹೋಗಿ, ಹೊಟ್ಟೆತುಂಬ 'ಪುಳಿಯೋಗರೆ' ಕೊಡಿಸಿದವರು! (ಅದೇ ಫಸ್ಟ್.. ಪುಳಿಯೋಗರೆ ನೋಡಿದ್ದು, ತಿಂದದ್ದು) ಸಂಜೆ ತುಮಕೂರಿಂದ ವಾಪಾಸ್ ಕರ್ಕೊಂಡು ಬಂದು ಬಸ್ ಸ್ಟ್ಯಾಂಡಿನಿಂದ ಮೂರ್ನಾಲ್ಕು ಮೈಲು ದೂರವಿದ್ದ ಊರಿಗೆ ತಮ್ಮ ಸೈಕಲ್ನಲ್ಲಿ ಕರ್ಕೊಂಡು ಬಂದು, ಮುದ್ದೆ ಇದ್ದರೆ ಊಟ ಕೊಡೀಂತ ಕೇಳಿ ಊಟ ಮಾಡಿದವರು! ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಬಂದಾಗ ನನಗಿಂತ ಹೆಚ್ಚು ಹಿಗ್ಗಿದವರು ಅವರೇ! ಆ ಹಣದಲ್ಲಿ ಕೊಂಡ ಅಲಾರಂ ಗೋಡೆ ಗಡಿಯಾರ ಈಗಲೂ ಇದೆ!
ಚಿತ್ರ ಬಿಡಿಸಲು ಕಲಿಸಲು ಹೋಗಿ ಸೋತ ಈ ಮೇಷ್ಟ್ರೇ ನನ್ನ ಕವಿತೆಗಳಿಗೆ ಚಿತ್ರ ಬರೆಯುವಂತಾದರು!
ಎಲ್ಲ ಚುಟುಕಾಗಿ ನೆನಪಿಸ್ತ "ಹೇಳಿ ಸರ್...ಹೇಗೆ ಮರೆಯಬಹುದು" ಅಂದೆ..ನಮ್ಮ ಕರ್ತವ್ಯ ಕಣಮ್ಮ..ನೆನಪಿಗೆ ಕಣ್ಣು ಒದ್ದೆಯಾಗುತ್ತವೆ..ನಿನ್ನ ಚಟುವಟಿಕೆಗಳನ್ನು ಪತ್ರಿಕೆಗಳಲ್ಲಿ ಕಂಡಾಗೆಲ್ಲ ಹೆಮ್ಮೆ ಎನಿಸುತ್ತದೆ...ನಿಮ್ಮಗಳ ನಂತರ ಅಂತಹ ಶಿಷ್ಯರೇ ಸಿಗಲಿಲ್ಲಮ್ಮ ಅಂದರು! ಆ ನಿರೀಕ್ಷೆಯೇ ತಪ್ಪು ಸರ್..ಬದಲಾಗಿದೆ ಎಲ್ಲ ..ಅಂದೆ. ಮುಂದಿನ ಜೂನ್ ಹೊತ್ತಿಗೆ ನಿವೃತ್ತನಾಗುವ ನನಗೆ ನೀವೆಲ್ಲ ನೆನಪಾದಿರಿ, ನಿನ್ನ ನಂಬರ್ ಹೇಗಾದರೂ ಸಿಗತ್ತೆ, ನಿನ್ನ ವ್ಯಾಪ್ತಿಯ ಗೆಳೆಯರ ನಂಬರ್ ಕೊಡಮ್ಮ, ಮಾತನಾಡಿಸಬೇಕು ಅಂದರು.
ಈ ಮೇಷ್ಟ್ರು, ಮೇಡಂ ಗಳು ಕೊಟ್ಟದ್ದನ್ನೇ ನಾನೂ ನನ್ನ ಮಕ್ಕಳಿಗೂ ದಾಟಿಸುವ ಪ್ರಯತ್ನ ಮಾಡುತ್ತಿದ್ದೇನೆ! ಅನ್ನ, ಯೂನಿಫಾರಂ, ಹಾಲು, ಶೂಷ್, ಮಾತ್ರೆ .....ಎಷ್ಟೊಂದು ಚಟುವಟಿಕೆಗಳು...ಯೋಜನೆಗಳು. .ಪಠ್ಯದಷ್ಟೇ ಪಠ್ಯೇತರವೂ... ಹೊಡೆಯುವುದಿರಲಿ ಕಣ್ಣಲ್ಲೂ ಗದರಿಸದ ಕಾಲದಲ್ಲೂ ನಮ್ಮ ಮಕ್ಕಳೇಕೆ ಕನಸಿನ ಬೆನ್ನತ್ತುವುದಿಲ್ಲ!?
~ ರಂಗಮ್ಮ ಹೊದೇಕಲ್ ~
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ