Pages

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ – 6

(ಹಿಂದಿನ ಸಂಚಿಕೆಯಿಂದ ಮುಂದುವರೆದಿದೆ) 



ಭಗತ್‍ಸಿಂಗ್‍ರ ಬಲಿದಾನದ ಆಕಾಂಕ್ಷೆ

ಈ ಕಾರ್ಯಕ್ಕೆ ತಾವೇ ಹೋಗಬೇಕೆಂದು ಭಗತ್ ವಾದ ಮಾಡಿದರು. ಏಕೆಂದರೆ, ಕೋರ್ಟ್‍ನ ಕಟಕಟೆಯಲ್ಲಿ ನಿಂತು ತಮ್ಮ ಪಕ್ಷದ ವಿಚಾರಗಳ ಬಗ್ಗೆ ಸವಿಸ್ತಾರವಾಗಿ, ಸುಸ್ಪಷ್ಟವಾಗಿ ಮಂಡಿಸಬಹುದೆಂದು ಅವರ ಭಾವನೆ. ಅವರಿಗೆ ಹಿಂದಿ, ಉರ್ದು, ಪಂಜಾಬಿ ಮತ್ತು ಇಂಗ್ಲಿಷ್ ಭಾಷೆಗಳ ಅರಿವಿತ್ತು. ಅವರು ಆಳವಾಗಿ ಅಧ್ಯಯನ ಮಾಡಿದ್ದರಿಂದ ವಿಚಾರಗಳ ಬಗ್ಗೆ ಸ್ಪಷ್ಟತೆ ಇತ್ತು. ಆದರೆ ಪಕ್ಷದ ಇತರರು, ಮುಖ್ಯವಾಗಿ ಆಜಾದ್ ಇದಕ್ಕೆ ತಯಾರಿರಲ್ಲಿಲ್ಲ. ಈಗಾಗಲೇ ಪೊಲೀಸರು ಸ್ಯಾಂಡರ್ಸ್ ಕೊಲೆಯಲ್ಲಿ ಇವರನ್ನು ಹುಡುಕುತ್ತಿರುವುದರಿಂದ ಈಗ ಸಿಕ್ಕಿ ಬಿದ್ದರೆ ಗಲ್ಲುಶಿಕ್ಷೆ ಖಚಿತವೆಂಬುದು ಅವರ ಅಭಿಪ್ರಾಯವಾಗಿತ್ತು. ಬಾಂಬ್ ಸ್ಫೋಟದ ನಂತರ ತಪ್ಪಿಸಿಕೊಂಡು ಬರಲು ಒಪ್ಪಿಕೊಂಡರೆ ಕಳಿಸಿಕೊಡಬಹುದೆಂದು ಹೇಳಿದರು. ಆದರೆ ಭಗತ್‍ಸಿಂಗ್ ಅದಕ್ಕೆ ಸಿದ್ಧರಿರಲಿಲ್ಲ.  “ಈಗ ಬ್ರಿಟಿಷರೊಂದಿಗೆ ವಾದ ಮಾಡುವ ಸಮಯ ಬಂದಿದೆ. ಜನತೆಯ ಪ್ರಜ್ಞೆಯನ್ನು ಎಚ್ಚರಿಸುವ ಘಳಿಗೆ ಬಂದಿದೆ. ಆಳ್ವಿಕರನ್ನು ಧಿಕ್ಕರಿಸುವ ಘಟ್ಟ ಬಂದಿದೆ. ನ್ಯಾಯಾಲಯವನ್ನು ಬಳಸಿಕೊಂಡು ಕ್ರಾಂತಿಕಾರಿ ದೇಶಪ್ರೇಮಿ ವಿಚಾರಗಳನ್ನು ಪ್ರಚಾರ ಮಾಡುವ, ಆ ಮೂಲಕ ರಾಷ್ಟಪ್ರೇಮವನ್ನು ಜಾಗೃತಗೊಳಿಸುವ ಕಾಲ ಬಂದಿದೆ” ಎಂದರು. ತಮ್ಮ ಸಿದ್ಧಾಂತದ, ವಿಚಾರಗಳ ಅತ್ಯುತ್ತಮ ಪ್ರತಿಪಾದಕ ತಾನು ಎಂದು ಹೇಳಲು ಪ್ರಯತ್ನಿಸಿದರು. ಆದರೆ ಆಜಾದ್ ಖಚಿತವಾಗಿ ನಿರಾಕರಿಸಿದರು. 
ಆದರೆ ಸುಖದೇವ್ ಆಗ್ರಾಗೆ ತಲುಪಿದಾಗ ಈ ವಿಚಾರ ಕೇಳಿ ವ್ಯಥೆ ಪಟ್ಟರು. “ನಮ್ಮನ್ನು ಕೊಲೆಗಡುಕರೆಂದು ಬ್ರಿಟಿಷರು ಚಿತ್ರಿಸಿದ್ದಾರೆ. ಇಡೀ ದೇಶಕ್ಕೆ, ಇಡೀ ಪ್ರಪಂಚಕ್ಕೆ ಕ್ರಾಂತಿಯ ಬಗ್ಗೆ ನಮಗಿರುವ ನಂಬಿಕೆಯ ಬಗ್ಗೆ ತಿಳಿಯಬೇಕು. ನಾವು ಕೊಲೆಗಡುಕರಲ್ಲ, ಉಗ್ರಗಾಮಿಗಳಲ್ಲ, ನಾವು ಸ್ವಾತಂತ್ರ್ಯ ಯೋಧರು, ಸ್ವಾತಂತ್ರ್ಯಕ್ಕಾಗಿ ಎಂತಹ ಬಲಿದಾನಕ್ಕೂ ಸಿದ್ಧರು, ಎಂಬುದನ್ನು ಎಲ್ಲರೂ ಅರಿಯಬೇಕು. ಈ ಕೆಲಸ ಮಾಡಲು ಅತ್ಯಂತ ಯೋಗ್ಯ ವ್ಯಕ್ತಿ ಎಂದರೆ ಭಗತ್‍ಸಿಂಗ್” ಎಂದರು. ರಾಮ್‍ಶರಣ್‍ದಾಸ್‍ರ ಬದಲಿಗೆ ತಮ್ಮನ್ನು ನೇಮಿಸುವಂತೆ ಎಲ್ಲರ ಮನವೊಲಿಸಿದರು ಭಗತ್‍ಸಿಂಗ್. ಇದಾದ ನಂತರ ಆಜಾದ್‍ರಿಗೆ ಭಗತ್‍ಸಿಂಗ್‍ರ ದಿನಗಳು ಕೈಬೆರಳೆಣಿಕೆಯಷ್ಟು ಎಂಬುದು ಖಚಿತವಾಗಿಬಿಟ್ಟಿತು. ಮತ್ತೆಂದೂ ಭಗತ್‍ಸಿಂಗ್‍ರನ್ನು ಸ್ವತಂತ್ರ ವ್ಯಕ್ತಿಯನ್ನಾಗಿ ಕಾಣುವುದಿಲ್ಲವೆಂಬುದು ಅರ್ಥವಾಯಿತು. ಆದರೂ ಅವರ ಈ ತ್ಯಾಗ ಭಾರತದಲ್ಲಿ ಕ್ರಾಂತಿಗೆ ಭದ್ರ ಬುನಾದಿಯನ್ನು ಹಾಕಬಲ್ಲದು ಎಂಬುದು ಅವರ ನಂಬಿಕೆಯಾಗಿತ್ತು. ಹಾಗಾಗಿ ಎಷ್ಟೇ ನೋವಿದ್ದರೂ, ಪಕ್ಷದ ನಾಯಕನಾಗಿ ಈ ಕಾರ್ಯಕ್ಕೆ ಒಪ್ಪಿಗೆ ನೀಡಿದರು.

ಕಿವುಡರಿಗೆ ಕೇಳಿಸಲು ಜೋರು ದನಿ

1929ರ ಏಪ್ರಿಲ್ 8ರಂದು ವೈಸ್‍ರಾಯ್ ಇರ್ವಿನ್ ಎರಡೂ ಮಸೂದೆಗಳನ್ನು ಮಂಡಿಸಲು ತೀರ್ಮಾನಿಸಿದರು. ಏಪ್ರಿಲ್ 6ರಂದೇ ಭಗತ್‍ಸಿಂಗ್ ಮತ್ತು ಬಟುಕೇಶ್ವರ ದತ್‍ರವರು ಕೇಂದ್ರೀಯ ಶಾಸನ ಸಭೆಯ (ಅಸೆಂಬ್ಲಿ)  ಒಳಗೆ ಹೋಗಿ ನೋಡಿಕೊಂಡು ಬಂದಿದ್ದರು. ಏಕೆಂದರೆ ಬಾಂಬುಗಳನ್ನು ಯಾರೂ ಇಲ್ಲದ ಕಡೆ ಮತ್ತು ಯಾರಿಗೂ ಹಾನಿಯಾಗದ ರೀತಿಯಲ್ಲಿ ಹಾಕಬೇಕೆಂಬುದು ಅವರ ಉದ್ದೇಶವಾಗಿತ್ತು. 
ಏಪ್ರಿಲ್ 8ರ ಬೆಳಿಗ್ಗೆ ಭಗತ್ ಮತ್ತು ದತ್ ಇಬ್ಬರೂ ಹಸನ್ಮುಖರಾಗಿ ಮನೆಯಿಂದ ಹೊರಟಾಗ ಇತರ ಸಂಗಾತಿಗಳು ನೋವಿನಿಂದಲೇ ಇವರನ್ನು ಬೀಳ್ಕೊಟ್ಟರು. ಸಾವಿನ ದವಡೆಗೆ ಹೋಗುತ್ತಿದ್ದೇವೆಂದು ಅವರಿಬ್ಬರಿಗೆ ತಿಳಿದಿದ್ದರೂ ಅವರಲ್ಲಿ ಕಿಂಚಿತ್ತಾದರೂ ಭಯವಿರಲಿಲ್ಲ. ದೇಶಕ್ಕಾಗಿ ಬಲಿದಾನವಾಗಲು ಹೋಗುತ್ತಿದ್ದೇವೆಂಬ ಹೆಮ್ಮೆ ಸ್ಪಷ್ಟವಾಗಿ ಕಾಣುತಿತ್ತು. ಅವರು ಬೆಳಿಗ್ಗೆ 11 ಘಂಟೆಗೆ ವೀಕ್ಷಕರ ಗ್ಯಾಲರಿಯಲ್ಲಿ, ಮೊದಲೇ ನಿರ್ಧರಿಸಿದ್ದ ಜಾಗದಲ್ಲಿ ಬಂದು ಕುಳಿತರು. ಸದನದಲ್ಲಿ ಚರ್ಚೆ ಆರಂಭವಾಯಿತು. ಕೆಲವು ಸದಸ್ಯರು ಬ್ರಿಟಿಷರ ಏಜೆಂಟರಂತೆ ಮಸೂದೆಗಳನ್ನು ಜಾರಿಗೊಳಿಸಲೇಬೇಕೆಂದು ಆಗ್ರಹಿಸುತ್ತಿದ್ದುದನ್ನು ಕಂಡು ಇಬ್ಬರೂ ನಕ್ಕರು.

ಭಗತ್‍ಸಿಂಗ್‍ರಿಗೆ ಅವರ ಬಾಂಬುಗಳು ಮಸೂದೆಗಳು ಜಾರಿಯಾಗುವುದನ್ನು ತಡೆಯುವುದಿಲ್ಲ ಎಂದು ಖಚಿತವಾಗಿತ್ತು. ಏಕೆಂದರೆ ಅಸೆಂಬ್ಲಿಯಲ್ಲಿ ಅವು ಅಂಗೀಕೃತವಾಗದಿದ್ದರೂ ವೈಸ್‍ರಾಯ್ ತನಗಿದ್ದ ಅಸಾಮಾನ್ಯ ಅಧಿಕಾರವನ್ನು ಬಳಸಿ ಅವುಗಳನ್ನು ಜಾರಿಗೊಳಿಸಬಹುದಿತ್ತು. (ನಂತರದ ದಿನಗಳಲ್ಲಿ ಆ ಮಸೂದೆಗಳು ಜಾರಿಗೆ ಬಂದದ್ದು ಹಾಗೆ). “ಕಿವುಡರಿಗೆ ಕೇಳಿಸಲು ದೊಡ್ಡ ಶಬ್ದವಾಗಬೇಕು.” ಎಂದು ಸಾರಿದ ಫ್ರೆಂಚ್ ಕ್ರಾಂತಿಕಾರಿಯೊಬ್ಬರ ಮಾತಿನಂತೆ ಕಿವುಡು ಬ್ರಿಟಿಷ್ ಸರ್ಕಾರಕ್ಕೆ ಬಾಂಬ್ ಸ್ಫೋಟದ ಮೂಲಕ ಜನತೆಯ ಅಭಿಪ್ರಾಯವನ್ನು ಕೇಳಿಸುವುದು ಅವರ ಪ್ರಯತ್ನವಾಗಿತ್ತು.

ಮೊದಲ ಮಸೂದೆ – ಕಾರ್ಮಿಕರ ವಿರೋಧಿ ಮಸೂದೆ ಸದನದಲ್ಲಿ ಅಂಗೀಕೃತವಾಯಿತು. ಸಾರ್ವಜನಿಕ ರಕ್ಷಣಾ ಮಸೂದೆಗೆ ಅಧ್ಯಕ್ಷರಾದ ವಿಠ್ಠಲ್‍ಬಾಯಿ ಪಟೇಲ್‍ರವರು ಇನ್ನೂ ತಮ್ಮ ರೂಲಿಂಗ್ ನೀಡಿರಲಿಲ್ಲ. ಭಗತ್‍ರಿಗೆ ಅದೇ ಸರಿಯಾದ ಸಮಯ ಎನಿಸಿತು. ಒಂದು ಬಾಂಬನ್ನು ಜಾಗರೂಕತೆಯಿಂದ ಯಾರೂ ಕುಳಿತಿಲ್ಲದ ಕಡೆ ಒಗೆದರು. ಅದರ ಸ್ಫೋಟಕ್ಕೆ ಇಡೀ ಸದನ ಬೆಚ್ಚಿಬಿದ್ದಿತು. ಆಗ ದತ್ ಇನ್ನೊಂದು ಬಾಂಬನ್ನು ಒಗೆದರು. ಅಲ್ಲಿದ್ದ ಜನ ಭಯದಿಂದ ಹೊರಗೋಡಿದರು.



ಬಾಂಬ್‍ಗಳು ಭಾರಿ ಶಬ್ದವನ್ನು ಮಾಡಿದರೂ ಅವು ಯಾರಿಗೂ ಹೆಚ್ಚು ಹಾನಿಯನ್ನು ಮಾಡಲಿಲ್ಲ. ಹತ್ತಿರದಲ್ಲಿದ್ದ ಕೆಲವು ಬೆಂಚುಗಳು ಮುರಿದುಬಿದ್ದು, ಅವುಗಳ ಚೂರುಗಳು ನಾಲ್ಕೈದು ಜನರಿಗೆ ತಗುಲಿದ್ದವು. ಇಡೀ ಸದನ ಹೊಗೆಯಿಂದ ತುಂಬಿತ್ತು. ಭಗತ್ ಮತ್ತು ದತ್ ಇಬ್ಬರೂ ಆ ಗೊಂದಲದಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಅವರಿಬ್ಬರೂ ಹಾಗೆ ಮಾಡದೆ ಅಚಲವಾಗಿ ನಿಂತು “ಇಂಕ್ವಿಲಾಬ್ ಜಿಂದಾಬಾದ್”, “ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ದಿಕ್ಕಾರ”, ಎಂದು ಘೋಷಿಸಲಾರಂಭಿಸಿದರು. ತಮ್ಮ ಕೈಯಲ್ಲಿದ್ದ ಕರಪತ್ರಗಳನ್ನು ಸದನದಲ್ಲಿ ಎಲ್ಲೆಡೆ ತೂರಿದರು. ಹಿಂತಿರುಗಿ ಬಂದ ಸದಸ್ಯರು ಕರಪತ್ರವನ್ನು ಕೈಗೆ ಎತ್ತಿಕೊಂಡು, ಓದಲಾರಂಭಿಸಿದರು.

ಕರಪತ್ರದ ಸಾರಾಂಶ

“ಈ ಸಭೆಯನ್ನು ಭಾರತದ ಪಾರ್ಲಿಮೆಂಟ್ ಎಂದು ಕರೆಯುವುದೇ ನಾಚಿಕೆಗೇಡಿನ ಪ್ರಸಂಗ.  ಸರ್ಕಾರವು ಹೊಸ ದಮನಕಾರಿ ಕ್ರಮಗಳನ್ನು ನಮ್ಮ ಮೇಲೆ ಹೇರುತ್ತಿದೆ. ಸಾರ್ವಜನಿಕ ರಕ್ಷಣಾ ಕಾಯಿದೆ ಮತ್ತು ಕಾರ್ಮಿಕ ವಿವಾದಗಳ ಕಾಯಿದೆಗಳು ಅಂತಹವು. ಮುಂದಿನ ಅಧಿವೇಶನದಲ್ಲಿ ಪತ್ರಿಕಾ ಸ್ವಾತಂತ್ರ್ಯಹರಣದ ಕಾಯಿದೆಯನ್ನು ಮಂಡಿಸಲಾಗುತ್ತದೆ. ಕಾರ್ಮಿಕ ನಾಯಕರ ದಸ್ತಗಿರಿಯ ಅವಿವೇಕತನವನ್ನೂ ನಾವು ನೋಡಿದ್ದೇವೆ. ಈ ನಾಯಕರಾದರೋ ಬಹಿರಂಗವಾಗಿ ಕೆಲಸ ಮಾಡುತ್ತಿದ್ದಂತಹವರು. ಅವಮಾನಕರ ಪ್ರಹಸನಗಳು ಇನ್ನಾದರೂ ಕೊನೆಗೊಳ್ಳಲಿ ಎಂಬುದು ಇದರ ಹಿಂದಿನ ಆಶಯ. ಪರದೇಶಿ ಅಧಿಕಾರದ ಗುಂಗಿನಲ್ಲಿರುವ ಶೋಷಕರು ತಮ್ಮ ಮನಬಂದಂತೆ ನಡೆದುಕೊಳ್ಳಲಿ. ಆದರೆ ಹೀಗೆ ಮಾಡುವ ಅವರನ್ನು ಬೆತ್ತಲೆಯಾಗಿಸಿ ಸಾರ್ವಜನಿಕರ ಕಣ್ಣಿನೆದುರು ನಿಲ್ಲಿಸಬೇಕಾದ್ದು ಅಗತ್ಯವಾಗಿದೆ. 
“ಜನರ ಪ್ರತಿನಿಧಿಗಳು ತಮ್ಮ ತಮ್ಮ ಚುನಾವಣಾ ಕ್ಷೇತ್ರಗಳಿಗೆ ಹಿಂದಿರುಗಿ, ಬರಲಿರುವ ಕ್ರಾಂತಿಗೆ ಜನರನ್ನು ಸನ್ನದ್ಧಗೊಳಿಸಲಿ; ಮತ್ತು ಸರ್ಕಾರವು ಇದನ್ನು ತಿಳಿಯಲಿ: ಸಾರ್ವಜನಿಕ ರಕ್ಷಣಾ ಕಾಯಿದೆ, ಕಾರ್ಮಿಕ ವಿವಾದಗಳ ಕಾಯಿದೆ, ಲಾಲಾಲಜಪತ್‍ರಾಯ್ ಅವರ ಹೇಯವಾದ ಹತ್ಯೆ, ಇತ್ಯಾದಿಗಳ ವಿರುದ್ಧ ಅಸಹಾಯಕ ಭಾರತ ಜನಸಮುದಾಯದ ಪರವಾಗಿ ಪ್ರತಿಭಟನೆಯನ್ನು ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ನಾವು ಒತ್ತಿ ಒತ್ತಿ ಹೇಳುತ್ತೇವೆ. ದೊಡ್ಡ ದೊಡ್ಡ ಸಾಮ್ರಾಜ್ಯಗಳು ಉರುಳಿಹೋದವು. ಆದರೆ ಭಾವನೆಗಳು ಚಿರನೂತನವಾಗಿ ಉಳಿದಿವೆ. . . ಮಾನವಜೀವಕ್ಕೆ ನಾವು ಅತ್ಯಂತ ಹೆಚ್ಚಿನ ಮಹತ್ವ ನೀಡುತ್ತೇವೆ, ಭವ್ಯ ಭವಿಷ್ಯದ ಕನಸನ್ನು ಕಾಣುತ್ತೇವೆ. ಆ ಭವಿಷ್ಯದಲ್ಲಿ ಮಾನವ ಸಂಪೂರ್ಣ ಶಾಂತಿ ಮತ್ತು ಸ್ವಾತಂತ್ರ್ಯಗಳನ್ನು ಅನುಭವಿಸುತ್ತಾನೆ. ಇಂತಹ ನಂಬಿಕೆಯುಳ್ಳ ನಾವು ಮಾನವನ ರಕ್ತ ಹರಿಸಬೇಕಾಗಿ ಬಂದುದಕ್ಕೆ ವ್ಯಥೆ ಪಡುತ್ತೇವೆ. ಆದರೆ ಸರ್ವರಿಗೂ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟು ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯವನ್ನಾಗಿಸುವ ಮಹಾನ್ ಕ್ರಾಂತಿಯ ಬಲಿಪೀಠದಲ್ಲಿ ಇದು ಅನಿವಾರ್ಯವಾಗಿದೆ. ಕ್ರಾಂತಿ ಚಿರಾಯುವಾಗಲಿ.” ಈ ಕರಪತ್ರ ಬ್ರಿಟಿಷರಿಗೆ ವಿರುದ್ಧವಾಗಿದ್ದರಿಂದ ತಕ್ಷಣವೇ ಎಲ್ಲವನ್ನು ಪೊಲೀಸರು ವಶಪಡಿಸಿಕೊಂಡರು. ಆದರೆ “ದಿ ಹಿಂದುಸ್ಥಾನ್ ಟೈಮ್ಸ್”ನ ವರದಿಗಾರನೊಬ್ಬ ಒಂದು ಕರಪತ್ರವನ್ನು ಸಂಪಾದಿಸಿ ಪತ್ರಿಕೆಯಲ್ಲಿ ಪ್ರಕಟಿಸಿದ.

ಧೀರರ ಬಂಧನ

ಘೋಷಣೆಗಳನ್ನು ಕೂಗುತ್ತಲೇ ಇದ್ದ ಆ ಇಬ್ಬರು ಯುವಕರನ್ನು ಬಂಧಿಸಲು ಪೊಲೀಸರು ಭಯದಿಂದ ಮುಂದೆ ಬರಲಿಲ್ಲ. ಆದರೆ ಅವರಿಬ್ಬರು ತಾವೇ ಸ್ವತಃ ಬಂಧನಕ್ಕೊಳಗಾದರು. ಈ ಘಟನೆಯಿಂದ ಬ್ರಿಟಿಷ್ ಸರ್ಕಾರ ಬೆಚ್ಚಿಬಿದ್ದಿತು. ಸ್ಯಾಂಡರ್ಸ್ ಕೊಲೆಯ ಆಘಾತದಿಂದಲೇ ಬಹುಶಃ ಸರ್ಕಾರವಿನ್ನೂ ಚೇತರಿಸಿಕೊಂಡಿರಲಿಲ್ಲ! ಇಡೀ ದೇಶ ಈ ಯುವಕರ ಸಾಹಸವನ್ನು ಕಂಡು ಹೆಮ್ಮೆ ಪಟ್ಟತು. ‘ಸಿಂಹದ ಗುಹೆಯಲ್ಲಿಯೇ ಅದರ ಹುಟ್ಟಡಗಿಸುವುದು’ ಎಂಬಂತೆ ಬ್ರಿಟಿಷರ ಸದನದಲ್ಲಿಯೇ ಬಾಂಬನ್ನು ಸ್ಫೋಟಿಸಿದ್ದು, ಜನತೆಗೆ ಮೆಚ್ಚುಗೆಯೆನಿಸಿತು. ಜನತೆ, ಮುಖ್ಯವಾಗಿ ಯುವಜನತೆ ಭಗತ್ ಮತ್ತು ದತ್‍ರ ಅಭಿಮಾನಿಗಳಾದರು. 



ವಿಚಾರಣೆಯ ನಾಟಕ

ಇಬ್ಬರ ಮೇಲೆಯೂ ಐ.ಪಿ.ಸಿ 307ನೆಯ ವಿಧಿಯ ಪ್ರಕಾರ ಹತ್ಯಾ ಪ್ರಯತ್ನದ ಆರೋಪವನ್ನು ಹೊರಿಸಲಾಯಿತು. 1929ರ ಮೇ 7ರಂದು ವಿಚಾರಣೆ ಆರಂಭವಾಯಿತು. ಬ್ರಿಟಿಷ್ ಜಡ್ಜ್ ಪಿ.ಬಿ ಪೂಲ್ ಮ್ಯಾಜಿಸ್ಟ್ರೇಟ್ ಆಗಿದ್ದರು. ಇಬ್ಬರನ್ನು ಕೋರ್ಟಿಗೆ ಹಾಜರುಪಡಿಸುತ್ತಿದ್ದಂತೆಯೇ ಇಬ್ಬರೂ “ಇಂಕ್ವಿಲಾಬ್ ಜಿಂದಾಬಾದ್”, “ಸಾಮ್ರಾಜ್ಯವಾದ ಮುರ್ದಾಬಾದ್” ಎಂದು ಘೋಷಿಸಿದರು. ಮ್ಯಾಜಿಸ್ಟ್ರೇಟ್ ಅವರಿಗೆ ಕೋಳವನ್ನು ಹಾಕಲು ಆದೇಶಿಸಿದರು. ಅಲ್ಲಿದ್ದ ಜನ ಆಶ್ಚರ್ಯಚಕಿತರಾದರು. ಕೋರ್ಟಿನಲ್ಲಿ ಕೋಳವನ್ನು ಹಾಕಬಾರದು ಎಂಬ ಸಾಮಾನ್ಯ ನಿಯಮವನ್ನು ಸಹ ಬ್ರಿಟಿಷ್ ಸರ್ಕಾರ ಉಲ್ಲಂಘಿಸುತ್ತದೆ ಎನ್ನುವುದಾದರೆ, ವಿಚಾರಣೆ ನಿಜಕ್ಕೂ ಸರಿಯಾಗಿ ನಡೆಯುತ್ತದೆಯೇ ಎಂಬ ಸಂದೇಹ ಎಲ್ಲರಲ್ಲೂ ಮೂಡಿತು. ಬ್ರಿಟಿಷ್ ಪೊಲೀಸರು ಹನ್ನೊಂದು ಜನ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ್ದರು. ಭಗತ್ ಮತ್ತು ದತ್ ಇಬ್ಬರೂ ಅಂದು ಯಾವುದೇ ಹೇಳಿಕೆಯನ್ನೂ ನೀಡಲಿಲ್ಲ. ಆದರೆ “ಸದನದಲ್ಲಿ ನಾವು ಗುಂಡು ಹಾರಿಸಲಿಲ್ಲ” ಎಂದು ಹೇಳಿದರು.

ನ್ಯಾಯಾಲಯದಲ್ಲಿ ಹೇಳಿಕೆ- ‘ರಕ್ಷಣಾ ಮಸೂದೆಗಳು ಭಾರತದ ಸ್ವಾತಂತ್ರ್ಯದ ಜ್ವಾಲೆಯನ್ನು ಆರಿಸಿಯಾವೆ?’
ಜೂನ್‍ನಲ್ಲಿ ಸೆಷನ್ಸ್ ಕೋರ್ಟಿನಲ್ಲಿ ಜಡ್ಜ್ ಲಿಯೋನಾರ್ಡ್ ಮಿಡ್ಲ್‍ಟನ್ ಮುಂದೆ ವಿಚಾರಣೆ ಆರಂಭವಾಯಿತು. ಈ ಹಂತದಲ್ಲಿ ಹೇಳಿಕೆ ನೀಡಲು ಸರಿಯಾದ ಸಮಯವೆನಿಸಿ ಭಗತ್‍ಸಿಂಗ್‍ರು ತಾವು ಬಾಂಬುಗಳನ್ನು ಹಾಕಲು ಕಾರಣಗಳನ್ನು ವಿವರಿಸಿ ಹೇಳಿಕೆಗಳನ್ನು ನೀಡಿದರು. ಅದರ ಸಂಕ್ಷಿಪ್ತ ರೂಪ ಇಲ್ಲಿದೆ- “ಇಂಗ್ಲೆಂಡ್‍ನ್ನು ಅದರ ಕನಸಿನಿಂದ ಎಚ್ಚರಿಸುವುದು ಅವಶ್ಯವಿತ್ತು. ತಮ್ಮ ಹೃದಯಾಂತರಾಳದ ನೋವನ್ನು ವ್ಯಕ್ತಪಡಿಸಲು ಬೇರಾವುದೇ ಮಾರ್ಗವಿಲ್ಲದ ಜನರ ಪರವಾಗಿ ನಾವು ನಮ್ಮ ಪ್ರತಿಭಟನೆಯನ್ನು ಸೂಚಿಸಲು ಈ ಸದನದಲ್ಲಿ ಬಾಂಬ್ ಹಾಕಿದ್ದೇವೆ. ಕಿವುಡರಿಗೆ ಕೇಳಿಸುವಂತೆ ಮಾಡುವುದು ಮತ್ತು ಮಾತು ಕೇಳದಿದ್ದವರಿಗೆ ಸೂಕ್ತವಾದ ಸಮಯದಲ್ಲಿ ಎಚ್ಚರ ನೀಡುವುದು ನಮ್ಮ ಉದ್ದೇಶವಾಗಿತ್ತು. 
ಸರ್ಕಾರವು ಹೊಸ ಹೊಸ ದಮನಕಾರಿ ನೀತಿಗಳನ್ನು ನಮ್ಮ ಮೇಲೆ ಹೇರುತ್ತಿದೆ. ಸಾರ್ವಜನಿಕ ರಕ್ಷಣಾ ಕಾಯಿದೆ, ಕಾರ್ಮಿಕ ವಿವಾದಗಳ ಕಾಯಿದೆ, ಲಾಲಾಲಜಪತ್ ರಾಯ್ರವರ ಹೇಯವಾದ ಹತ್ಯೆ ಇತ್ಯಾದಿಗಳ ವಿರುದ್ಧ ಅಸಹಾಯಕ ಭಾರತ ಜನ ಸಮುದಾಯದ ಪರವಾಗಿ ಪ್ರತಿಭಟನೆಯನ್ನು ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ ನಾವು ಒತ್ತಿ ಒತ್ತಿ ಹೇಳುತ್ತೇವೆ - ಹಲವು ವ್ಯಕ್ತಿಗಳನ್ನು ನೀವು ಸಾಯಿಸಬಹುದು ಆದರೆ ಅವರ ಭಾವನೆಗಳನ್ನು ನೀವು ಸಾಯಿಸಲಾರಿರಿ.. . . .
ನಾವು ಮಾನವ ಕುಲವನ್ನು ಪ್ರೀತಿಸುವಲ್ಲಿ ಯಾರಿಗೇನೂ ಕಡಿಮೆಯಿಲ್ಲ. ನಮಗೆ ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ದ್ವೇಷವಿಲ್ಲ ಬದಲಿಗೆ ಮಾನವ ಜೀವ ಪವಿತ್ರವಾದದ್ದೆಂದು ಭಾವಿಸುತ್ತೇವೆ. ನಮ್ಮ ಈ ಹೋರಾಟ ಗುರು ಗೋವಿಂದ್ ಸಿಂಗ್, ಕೆಮಲ್ ಪಾಷ, ವಾಷಿಂಗ್ಟನ್, ಗ್ಯಾರಿಬಾಲ್ಡಿ ಮತ್ತು ಲೆನಿನ್‍ರ ವಿಚಾರಗಳಿಂದ ಸ್ಪೂರ್ತಿ ಪಡೆದಿದೆ. ವಿದೇಶಿ ಸರ್ಕಾರ ಮತ್ತು ಭಾರತದ ಸಾರ್ವಜನಿಕ ನಾಯಕರು ಈ ಚಳುವಳಿಗೆ ಕಣ್ಮುಚ್ಚಿ ಕುಳಿತಿದ್ದಾರೆಂದು ಅವರಿಗೆ ಎಚ್ಚರಿಕೆ ನೀಡಬೇಕಾಗಿರುವುದು ನಮ್ಮ ಕರ್ತವ್ಯವೆಂದು ಭಾವಿಸಿದ್ದೇವೆ. . . . . .



ಗುರು ಗೋವಿಂದ ಸಿಂಗ್ 

 ಕೆಮಲ್ ಪಾಷಾ 

ಜಾರ್ಜ್ ವಾಷಿಂಗ್ಟನ್ 

ಗ್ಯಾರಿಬಾಲ್ಡಿ 

ಲೆನಿನ್ 

ಮಾನವ ಜೀವ ಎಲ್ಲಕ್ಕಿಂತ ಅಮೂಲ್ಯ ಎಂದು ಪುನರುಚ್ಛರಿಸುತ್ತಿದ್ದೇವೆ. ಇತರರಿಗೆ ಹಾನಿ ಮಾಡುವ ಬದಲು ಮನುಕುಲದ ಸೇವೆಯಲ್ಲಿ ನಮ್ಮ ಜೀವವನ್ನು ಬಲಿ ಕೊಡಲು ಇಚ್ಛಿಸುತ್ತೇವೆ. ನಾವು ಒಂದು ಇತಿಹಾಸದ ಪಾಠವನ್ನು ಒತ್ತಿ ಹೇಳಬೇಕೆಂದು ಇಚ್ಛಿಸಿದೆವು. ಕರಾಳ ಶಾಸನಗಳಿಂದ ದುರ್ಗಮವಾದ ಜೈಲುಗಳಿಂದ ಫ್ರಾನ್ಸಿನ ಕ್ರಾಂತಿಕಾರಿ ಚಳುವಳಿಯನ್ನು ತುಳಿಯಲು ಸಾಧ್ಯವಾಗಲಿಲ್ಲ. ನೇಣುಗಂಬಗಳು ಮತ್ತು ಸೈಬೀರಿಯಾದ ಗಣಿಗಳಲ್ಲಿನ ಕಠಿಣ ಸಜೆಗಳಿಂದ ರಷ್ಯಾದ ಕ್ರಾಂತಿಯನ್ನು ಅಡಗಿಸಲಾಗಲಿಲ್ಲ. ಸುಗ್ರೀವಾಜ್ಞೆಗಳು, ರಕ್ಷಣಾ ಮಸೂದೆಗಳು ಭಾರತದ ಸ್ವಾತಂತ್ರ್ಯದ ಜ್ವಾಲೆಯನ್ನು ಆರಿಸಿಯಾವೆ? ಪಿತೂರಿ ಮೊಕದ್ದಮೆಗಳನ್ನು ಹುಡುಕಿ ತೆಗೆಯುವುದರಿಂದ, ಹುಟ್ಟುಹಾಕುವುದರಿಂದ ಅಥವಾ ಮಹೋನ್ನತ ಆದರ್ಶವನ್ನು ಆಕಾಂಕ್ಷಿಸುತ್ತಿರುವ ಎಲ್ಲ ಯುವಕರನ್ನು ಸೆರೆಮನೆಗೆ ತಳ್ಳುವುದರಿಂದ ಕ್ರಾಂತಿಯ ಮುನ್ನಡೆಯನ್ನು ತಡೆಯಲಾಗುವುದಿಲ್ಲ.”  

ಈ ಹೇಳಿಕೆ ಭಗತ್‍ಸಿಂಗ್‍ರ ಕ್ರಾಂತಿಕಾರಿ ಪರಿಪಕ್ವತೆಯನ್ನು, ಅಗಾಧವಾದ ದೇಶಪ್ರೇಮವನ್ನು, ಜನತೆಯ ಬಗೆಗಿನ ಅಪಾರವಾದ ಕಾಳಜಿಯನ್ನು, ಮಾನವ ಜೀವನದ ಬಗೆಗಿನ ಗಾಢವಾದ ಪ್ರೀತಿಯನ್ನು, ಎಲ್ಲಕ್ಕೂ ಮಿಗಿಲಾಗಿ ಸ್ವಾತಂತ್ರ್ಯಕ್ಕಾಗಿ ಜೀವನವನ್ನರ್ಪಿಸಲು ಅವರ ಬಲಿದಾನದ ಉತ್ಸಾಹವನ್ನು ಎತ್ತಿ ತೋರಿಸುತ್ತದೆ.

(ಮುಂದುವರೆಯುತ್ತದೆ)
--ಸುಧಾ ಜಿ

ಕಾಮೆಂಟ್‌ಗಳಿಲ್ಲ: